ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 60
ಸಾರ
ರಣದಲ್ಲಿ ತನ್ನ ಮಗನ ವಧೆಯಾದುದನ್ನು ಕೃಷ್ಣನು ಬಿಟ್ಟಿರುವುದನ್ನು ನೋಡಿದ ಸುಭದ್ರೆಯು ಅಭಿಮನ್ಯುವಿನ ವಧೆಯ ಕುರಿತು ಹೇಳಬೇಕೆಂದು ಕೇಳಲು, ಶೋಕಪೀಡಿತನಾದ ವಸುದೇವನೂ ಅದರ ಕುರಿತು ಕೃಷ್ಣನಲ್ಲಿ ಕೇಳಿದುದು (1-14). ಆಗ ಕೃಷ್ಣನು ವಸುದೇವನಿಗೆ ಅಭಿಮನ್ಯುವಿನ ವಧೆಯ ಕುರಿತು ಮತ್ತು ಕುಂತಿಯು ಸುಭದ್ರೆ-ಉತ್ತರೆಯರನ್ನು ಸಂತವಿಸಿದುದನ್ನು ಹೇಳಿದುದು (15-41).
14060001 ವೈಶಂಪಾಯನ ಉವಾಚ
14060001a ಕಥಯನ್ನೇವ ತು ತದಾ ವಾಸುದೇವಃ ಪ್ರತಾಪವಾನ್।
14060001c ಮಹಾಭಾರತಯುದ್ಧಂ ತತ್ಕಥಾಂತೇ ಪಿತುರಗ್ರತಃ।।
14060002a ಅಭಿಮನ್ಯೋರ್ವಧಂ ವೀರಃ ಸೋಽತ್ಯಕ್ರಾಮತ ಭಾರತ।
14060002c ಅಪ್ರಿಯಂ ವಸುದೇವಸ್ಯ ಮಾ ಭೂದಿತಿ ಮಹಾಮನಾಃ।।
14060003a ಮಾ ದೌಹಿತ್ರವಧಂ ಶ್ರುತ್ವಾ ವಸುದೇವೋ ಮಹಾತ್ಯಯಮ್।
14060003c ದುಃಖಶೋಕಾಭಿಸಂತಪ್ತೋ ಭವೇದಿತಿ ಮಹಾಮತಿಃ।।
ವೈಶಂಪಾಯನನು ಹೇಳಿದನು: “ಭಾರತ! ತಂದೆಗೆ ಮಹಾಭಾರತಯುದ್ಧದ ಕಥೆಯನ್ನು ಹೇಳುತ್ತಿರುವಾಗ ಪ್ರತಾಪವಾನ್ ವಾಸುದೇವ ಕೃಷ್ಣನು ವೀರ ಅಭಿಮನ್ಯುವಿನ ವಧೆಯನ್ನು ಬಿಟ್ಟು ಹೇಳಿದ್ದನು. ಅಪ್ರಿಯವಾದುದನ್ನು ವಸುದೇವನಿಗೆ ಹೇಳಬಾರದು ಮತ್ತು ಮೊಮ್ಮಗನ ವಧೆಯ ಕುರಿತು ಕೇಳಿ ವಸುದೇವನು ಮಹಾ ದುಃಖ-ಶೋಕಗಳಿಂದ ಸಂತಪ್ತನಾಗುತ್ತಾನೆಂದು ಆ ಮಹಾಮನಸ್ವಿ ಮಹಾಮತಿಯು ಹೀಗೆ ಮಾಡಿದ್ದನು.
14060004a ಸುಭದ್ರಾ ತು ತಮುತ್ಕ್ರಾಂತಮಾತ್ಮಜಸ್ಯ ವಧಂ ರಣೇ।
14060004c ಆಚಕ್ಷ್ವ ಕೃಷ್ಣ ಸೌಭದ್ರವಧಮಿತ್ಯಪತದ್ಭುವಿ।।
ರಣದಲ್ಲಿ ತನ್ನ ಮಗನ ವಧೆಯಾದುದನ್ನು ಕೃಷ್ಣನು ಬಿಟ್ಟಿರುವುದನ್ನು ನೋಡಿದ ಸುಭದ್ರೆಯು “ಕೃಷ್ಣ! ಸೌಭದ್ರನ ವಧೆಯಕುರಿತು ಹೇಳು!” ಎಂದು ಹೇಳುತ್ತಿದ್ದಂತೆಯೇ ಮೂರ್ಛಿತಳಾಗಿ ನೆಲದ ಮೇಲೆ ಬಿದ್ದಳು.
14060005a ತಾಮಪಶ್ಯನ್ನಿಪತಿತಾಂ ವಸುದೇವಃ ಕ್ಷಿತೌ ತದಾ।
14060005c ದೃಷ್ಟ್ವೈವ ಚ ಪಪಾತೋರ್ವ್ಯಾಂ ಸೋಽಪಿ ದುಃಖೇನ ಮೂರ್ಚಿತಃ।।
ಅವಳು ಭೂಮಿಯ ಮೇಲೆ ಬಿದ್ದುದನ್ನು ನೋಡಿದ ವಸುದೇವನೂ ಕೂಡ ದುಃಖದಿಂದ ಮೂರ್ಛಿತನಾಗಿ ಭೂಮಿಯ ಮೇಲೆ ಬಿದ್ದನು.
14060006a ತತಃ ಸ ದೌಹಿತ್ರವಧಾದ್ದುಃಖಶೋಕಸಮನ್ವಿತಃ।
14060006c ವಸುದೇವೋ ಮಹಾರಾಜ ಕೃಷ್ಣಂ ವಾಕ್ಯಮಥಾಬ್ರವೀತ್।।
ಮಹಾರಾಜ! ಆಗ ಮೊಮ್ಮಗನ ವಧೆಯ ಕುರಿತು ಕೇಳಿ ದುಃಖಶೋಕಸಮನ್ವಿತನಾದ ವಸುದೇವನು ಕೃಷ್ಣನಿಗೆ ಇಂತೆಂದನು:
14060007a ನನು ತ್ವಂ ಪುಂಡರೀಕಾಕ್ಷ ಸತ್ಯವಾಗ್ಭುವಿ ವಿಶ್ರುತಃ।
14060007c ಯದ್ದೌಹಿತ್ರವಧಂ ಮೇಽದ್ಯ ನ ಖ್ಯಾಪಯಸಿ ಶತ್ರುಹನ್।।
“ಪುಂಡರೀಕಾಕ್ಷ! ನೀನು ಸತ್ಯವಾದಿಯೆಂದು ಭುವಿಯಲ್ಲಿ ವಿಶ್ರುತನಾಗಿರುವೆ ತಾನೇ? ಶತ್ರುಹನ್! ಆದರೂ ಇಂದು ನೀನು ಮೊಮ್ಮಗನ ವಧೆಯಕುರಿತು ನನಗೆ ಹೇಳಲಿಲ್ಲವಲ್ಲ?
14060008a ತದ್ಭಾಗಿನೇಯನಿಧನಂ ತತ್ತ್ವೇನಾಚಕ್ಷ್ವ ಮೇ ವಿಭೋ।
14060008c ಸದೃಶಾಕ್ಷಸ್ತವ ಕಥಂ ಶತ್ರುಭಿರ್ನಿಹತೋ ರಣೇ।।
ವಿಭೋ! ನಿನ್ನ ಸೋದರಳಿಯನ ಮರಣದ ಕುರಿತು ನಡೆದಂತೆ ನನಗೆ ಹೇಳು. ನಿನ್ನಂಥಹುದೇ ಕಣ್ಣುಗಳಿದ್ದ ಅವನನ್ನು ಶತ್ರುಗಳು ಹೇಗೆ ರಣದಲ್ಲಿ ಸಂಹರಿಸಿದರು?
14060009a ದುರ್ಮರಂ ಬತ ವಾರ್ಷ್ಣೇಯ ಕಾಲೇಽಪ್ರಾಪ್ತೇ ನೃಭಿಃ ಸದಾ।
14060009c ಯತ್ರ ಮೇ ಹೃದಯಂ ದುಃಖಾಚ್ಚತಧಾ ನ ವಿದೀರ್ಯತೇ।।
ವಾರ್ಷ್ಣೇಯ! ಕಾಲಪ್ರಾಪ್ತವಾಗದೇ ಮರಣಹೊಂದುವುದು ನರರಿಗೆ ಬಹಳ ಕಷ್ಟವಾದುದು. ದುಃಖದಿಂದ ನನ್ನ ಹೃದಯವು ನೂರು ಚೂರುಗಳಾಗಿ ಒಡೆಯುತ್ತಿಲ್ಲವಲ್ಲ!
14060010a ಕಿಮಬ್ರವೀತ್ತ್ವಾ ಸಂಗ್ರಾಮೇ ಸುಭದ್ರಾಂ ಮಾತರಂ ಪ್ರತಿ।
14060010c ಮಾಂ ಚಾಪಿ ಪುಂಡರೀಕಾಕ್ಷ ಚಪಲಾಕ್ಷಃ ಪ್ರಿಯೋ ಮಮ।।
ಪುಂಡರೀಕಾಕ್ಷ! ನನಗೆ ಪ್ರಿಯನಾಗಿದ್ದ ಆ ಚಪಲಾಕ್ಷನು ಸಂಗ್ರಾಮದಲ್ಲಿ ನಿನಗೆ ಏನು ಹೇಳಿದನು? ತಾಯಿ ಸುಭದ್ರೆ ಮತ್ತು ನನ್ನ ಕುರಿತು ಏನಾದರೂ ಹೇಳಿದನೇ?
14060011a ಆಹವಂ ಪೃಷ್ಠತಃ ಕೃತ್ವಾ ಕಚ್ಚಿನ್ನ ನಿಹತಃ ಪರೈಃ।
14060011c ಕಚ್ಚಿನ್ಮುಖಂ ನ ಗೋವಿಂದ ತೇನಾಜೌ ವಿಕೃತಂ ಕೃತಮ್।।
ಯುದ್ಧಕ್ಕೆ ಬೆನ್ನುಹಾಕಿ ಹೋಗುತ್ತಿರುವಾಗ ಶತ್ರುಗಳು ಅವನನ್ನು ಸಂಹರಿಸಲಿಲ್ಲ ತಾನೇ? ಗೋವಿಂದ! ಆಗ ಅವನ ಮುಖವು ಭಯದಿಂದ ವಿಕಾರಗೊಳ್ಳಲಿಲ್ಲ ತಾನೇ?
14060012a ಸ ಹಿ ಕೃಷ್ಣ ಮಹಾತೇಜಾಃ ಶ್ಲಾಘನ್ನಿವ ಮಮಾಗ್ರತಃ।
14060012c ಬಾಲಭಾವೇನ ವಿಜಯಮಾತ್ಮನೋಽಕಥಯತ್ಪ್ರಭುಃ।।
ಕೃಷ್ಣ! ಆ ಮಹಾತೇಜಸ್ವೀ ಪ್ರಭುವು ಹುಡುಗತನದಿಂದ ನನ್ನ ಎದಿರು ತನ್ನ ವಿಜಯಗಳನ್ನು ತಾನೇ ಹೊಗಳಿಕೊಳ್ಳುತ್ತಿದ್ದನು.
14060013a ಕಚ್ಚಿನ್ನ ವಿಕೃತೋ ಬಾಲೋ ದ್ರೋಣಕರ್ಣಕೃಪಾದಿಭಿಃ।
14060013c ಧರಣ್ಯಾಂ ನಿಹತಃ ಶೇತೇ ತನ್ಮಮಾಚಕ್ಷ್ವ ಕೇಶವ।।
ಕೇಶವ! ಆ ಬಾಲಕನು ದ್ರೋಣ-ಕರ್ಣ-ಕೃಪಾದಿಗಳ ವಂಚನೆಯಿಂದ ಹತನಾಗಿ ಧರಣಿಯ ಮೇಲೆ ಮಲಗಲಿಲ್ಲ ತಾನೇ? ಅದರ ಕುರಿತು ನನಗೆ ಹೇಳು!
14060014a ಸ ಹಿ ದ್ರೋಣಂ ಚ ಭೀಷ್ಮಂ ಚ ಕರ್ಣಂ ಚ ರಥಿನಾಂ ವರಮ್।
14060014c ಸ್ಪರ್ಧತೇ ಸ್ಮ ರಣೇ ನಿತ್ಯಂ ದುಹಿತುಃ ಪುತ್ರಕೋ ಮಮ।।
ನನ್ನ ಆ ಮೊಮ್ಮಗನು ನಿತ್ಯವೂ ರಣದಲ್ಲಿ ದ್ರೋಣ, ಭೀಷ್ಮ, ರಥಿಗಳಲ್ಲಿ ಶ್ರೇಷ್ಠ ಕರ್ಣ ಇವರೊಡನೆ ಸ್ಪರ್ಧಿಸುತ್ತಲೇ ಇದ್ದನು.”
14060015a ಏವಂವಿಧಂ ಬಹು ತದಾ ವಿಲಪಂತಂ ಸುದುಃಖಿತಮ್।
14060015c ಪಿತರಂ ದುಃಖಿತತರೋ ಗೋವಿಂದೋ ವಾಕ್ಯಮಬ್ರವೀತ್।।
ಹೀಗೆ ಅತ್ಯಂತ ದುಃಖಿತನಾಗಿ ವಿಲಪಿಸುತ್ತಿದ್ದ ತಂದೆಗೆ ಇನ್ನೂ ಹೆಚ್ಚು ದುಃಖದಲ್ಲಿದ್ದ ಗೋವಿಂದನು ಈ ಮಾತುಗಳನ್ನಾಡಿದನು:
14060016a ನ ತೇನ ವಿಕೃತಂ ವಕ್ತ್ರಂ ಕೃತಂ ಸಂಗ್ರಾಮಮೂರ್ಧನಿ।
14060016c ನ ಪೃಷ್ಠತಃ ಕೃತಶ್ಚಾಪಿ ಸಂಗ್ರಾಮಸ್ತೇನ ದುಸ್ತರಃ।।
“ಸಂಗ್ರಾಮದ ಎದಿರು ಯುದ್ಧಮಾಡುತ್ತಿದ್ದ ಅಭಿಮನ್ಯುವು ಯಾವಾಗಲೂ ತನ್ನ ಮುಖವನ್ನು ಭಯದಿಂದ ವಿಕಾರಗೊಳಿಸಲಿಲ್ಲ. ದುಸ್ತರ ಸಂಗ್ರಾಮದಿಂದ ಅವನು ಎಂದೂ ಬೆನ್ನುಹಾಕಲಿಲ್ಲ.
14060017a ನಿಹತ್ಯ ಪೃಥಿವೀಪಾಲಾನ್ಸಹಸ್ರಶತಸಂಘಶಃ।
14060017c ಖೇದಿತೋ ದ್ರೋಣಕರ್ಣಾಭ್ಯಾಂ ದೌಃಶಾಸನಿವಶಂ ಗತಃ।।
ಅವನು ಲಕ್ಷಗಟ್ಟಲೆ ಪೃಥ್ವೀಪಾಲರನ್ನು ಸಂಹರಿಸಿ, ದ್ರೋಣ-ಕರ್ಣರಿಂದ ದುಃಖಿತನಾಗಿ ಅಂತ್ಯದಲ್ಲಿ ದುಃಶಾಸನನ ಮಗನಿಂದ ಹತನಾದನು.
14060018a ಏಕೋ ಹ್ಯೇಕೇನ ಸತತಂ ಯುಧ್ಯಮಾನೋ ಯದಿ ಪ್ರಭೋ।
14060018c ನ ಸ ಶಕ್ಯೇತ ಸಂಗ್ರಾಮೇ ನಿಹಂತುಮಪಿ ವಜ್ರಿಣಾ।।
ಪ್ರಭೋ! ಒಬ್ಬನು ಓರ್ವ ಇನ್ನೊಬ್ಬನೊಡನೆಯೇ ಯುದ್ಧಮಾಡುತ್ತಿದ್ದರೆ ಸಂಗ್ರಾಮದಲ್ಲಿ ಅವನನ್ನು ವಜ್ರಿ ಇಂದ್ರನಿಗೂ ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ.
14060019a ಸಮಾಹೂತೇ ತು ಸಂಗ್ರಾಮೇ ಪಾರ್ಥೇ ಸಂಶಪ್ತಕೈಸ್ತದಾ।
14060019c ಪರ್ಯವಾರ್ಯತ ಸಂಕ್ರುದ್ಧೈಃ ಸ ದ್ರೋಣಾದಿಭಿರಾಹವೇ।।
ಸಂಶಪ್ತಕರು ಪಾರ್ಥನನ್ನು ಸಂಗ್ರಾಮಕ್ಕೆ ಆಹ್ವಾನಿಸಿದ್ದಾಗ ಸಂಕ್ರುದ್ಧ ದ್ರೋಣಾದಿಗಳು ಯುದ್ಧದಲ್ಲಿ ಅಭಿಮನ್ಯುವನ್ನು ಸುತ್ತುವರೆದಿದ್ದರು.
14060020a ತತಃ ಶತ್ರುಕ್ಷಯಂ ಕೃತ್ವಾ ಸುಮಹಾಂತಂ ರಣೇ ಪಿತುಃ।
14060020c ದೌಹಿತ್ರಸ್ತವ ವಾರ್ಷ್ಣೇಯ ದೌಃಶಾಸನಿವಶಂ ಗತಃ।।
ತಂದೇ! ಆಗ ರಣದಲ್ಲಿ ಮಹಾಶತ್ರುಕ್ಷಯವನ್ನುಂಟುಮಾಡಿ ನಿನ್ನ ಮಗಳ ಮಗ ವಾರ್ಷ್ಣೇಯನು ದುಃಶಾಸನನ ಮಗನಿಂದ ಹತನಾದನು.
14060021a ನೂನಂ ಚ ಸ ಗತಃ ಸ್ವರ್ಗಂ ಜಹಿ ಶೋಕಂ ಮಹಾಮತೇ।
14060021c ನ ಹಿ ವ್ಯಸನಮಾಸಾದ್ಯ ಸೀದಂತೇ ಸನ್ನರಾಃ ಕ್ವ ಚಿತ್।।
ಮಹಾಮತೇ! ಅವನು ನಿಶ್ಚಯವಾಗಿಯೂ ಸ್ವರ್ಗಕ್ಕೇ ಹೋಗಿರಬೇಕು. ಶೋಕವನ್ನು ತೊರೆ! ಉತ್ತಮ ಪುರುಷರು ಎಂದೂ ವ್ಯಸನ ಹೊಂದಿ ಕುಸಿಯುವುದಿಲ್ಲ!
14060022a ದ್ರೋಣಕರ್ಣಪ್ರಭೃತಯೋ ಯೇನ ಪ್ರತಿಸಮಾಸಿತಾಃ।
14060022c ರಣೇ ಮಹೇಂದ್ರಪ್ರತಿಮಾಃ ಸ ಕಥಂ ನಾಪ್ನುಯಾದ್ದಿವಮ್।।
ರಣದಲ್ಲಿ ಮಹೇಂದ್ರನಂತಿದ್ದ ದ್ರೋಣ-ಕರ್ಣಾದಿಗಳು ಯಾರನ್ನು ಎದುರಿಸಿ ಯುದ್ಧಮಾಡಿದರೋ ಅವನು ಹೇಗೆ ತಾನೇ ಸ್ವರ್ಗವನ್ನು ಪಡೆದಿರಲಿಕ್ಕಿಲ್ಲ?
14060023a ಸ ಶೋಕಂ ಜಹಿ ದುರ್ಧರ್ಷ ಮಾ ಚ ಮನ್ಯುವಶಂ ಗಮಃ।
14060023c ಶಸ್ತ್ರಪೂತಾಂ ಹಿ ಸ ಗತಿಂ ಗತಃ ಪರಪುರಂಜಯಃ।।
ದುರ್ಧರ್ಷ! ಶೋಕವನ್ನು ಬಿಡು! ಕೋಪಕ್ಕೆ ವಶನಾಗಬೇಡ! ಆ ಪರಪುರಂಜಯ ಅಭಿಮನ್ಯುವು ಶಸ್ತ್ರಗಳಿಂದ ಪವಿತ್ರರಾದವರು ಹೋಗುವ ಮಾರ್ಗದಲ್ಲಿಯೇ ಹೋಗಿದ್ದಾನೆ.
14060024a ತಸ್ಮಿಂಸ್ತು ನಿಹತೇ ವೀರೇ ಸುಭದ್ರೇಯಂ ಸ್ವಸಾ ಮಮ।
14060024c ದುಃಖಾರ್ತಾಥೋ ಪೃಥಾಂ ಪ್ರಾಪ್ಯ ಕುರರೀವ ನನಾದ ಹ।।
ಆ ವೀರ ಸುಭದ್ರೇಯನು ಹತನಾಗಲು ದುಃಖಾರ್ತಳಾದ ನನ್ನ ತಂಗಿ ಸುಭದ್ರೆಯು ಪೃಥಾ ಕುಂತಿಯ ಬಳಿಸಾರಿ ಕುರರಿಯಂತೆ ರೋದಿಸಿದ್ದಳು.
14060025a ದ್ರೌಪದೀಂ ಚ ಸಮಾಸಾದ್ಯ ಪರ್ಯಪೃಚ್ಚತ ದುಃಖಿತಾ।
14060025c ಆರ್ಯೇ ಕ್ವ ದಾರಕಾಃ ಸರ್ವೇ ದ್ರಷ್ಟುಮಿಚ್ಚಾಮಿ ತಾನಹಮ್।।
ದ್ರೌಪದಿಯನ್ನೂ ಸಂಧಿಸಿ ದುಃಖಿತಳಾದ ಅವಳು “ಆರ್ಯೇ! ಎಲ್ಲ ಮಕ್ಕಳೂ ಎಲ್ಲಿದ್ದಾರೆ? ಅವರನ್ನು ನೋಡ ಬಯಸುತ್ತೇನೆ!” ಎಂದು ಕೇಳಿದ್ದಳು.
14060026a ಅಸ್ಯಾಸ್ತು ವಚನಂ ಶ್ರುತ್ವಾ ಸರ್ವಾಸ್ತಾಃ ಕುರುಯೋಷಿತಃ।
14060026c ಭುಜಾಭ್ಯಾಂ ಪರಿಗೃಹ್ಯೈನಾಂ ಚುಕ್ರುಶುಃ ಪರಮಾರ್ತವತ್।।
ಅವಳ ಮಾತನ್ನು ಕೇಳಿ ಆ ಎಲ್ಲ ಕುರುಸ್ತ್ರೀಯರೂ ಅವಳ ಭುಜಗಳನ್ನು ಹಿಡಿದು ಪರಮ ಆರ್ತರಾಗಿ ಅಳುತ್ತಿದ್ದರು.
14060027a ಉತ್ತರಾಂ ಚಾಬ್ರವೀದ್ಭದ್ರಾ ಭದ್ರೇ ಭರ್ತಾ ಕ್ವ ತೇ ಗತಃ।
14060027c ಕ್ಷಿಪ್ರಮಾಗಮನಂ ಮಹ್ಯಂ ತಸ್ಮೈ ತ್ವಂ ವೇದಯಸ್ವ ಹ।।
ಸುಭದ್ರೆಯು ಉತ್ತರೆಯನ್ನು ಕುರಿತು ಹೀಗೆ ಹೇಳಿದ್ದಳು: “ಭದ್ರೇ! ನಿನ್ನ ಪತಿಯು ಎಲ್ಲಿಗೆ ಹೋಗಿರುವನು? ಅವನ ಆಗಮನವನ್ನು ಬೇಗನೇ ನನಗೆ ಬಂದು ಹೇಳಬೇಕು!
14060028a ನನು ನಾಮ ಸ ವೈರಾಟಿ ಶ್ರುತ್ವಾ ಮಮ ಗಿರಂ ಪುರಾ।
14060028c ಭವನಾನ್ನಿಷ್ಪತತ್ಯಾಶು ಕಸ್ಮಾನ್ನಾಭ್ಯೇತಿ ತೇ ಪತಿಃ।।
ವೈರಾಟೀ! ಹಿಂದೆ ನನ್ನ ಧ್ವನಿಯನು ಕೇಳುತ್ತಲೇ ತನ್ನ ಭವನದಿಂದ ಹೊರಬರುತ್ತಿದ್ದ ನಿನ್ನ ಪತಿಯು ಇಂದೇಕೆ ಹೊರಬರುತ್ತಿಲ್ಲ?
14060029a ಅಭಿಮನ್ಯೋ ಕುಶಲಿನೋ ಮಾತುಲಾಸ್ತೇ ಮಹಾರಥಾಃ।
14060029c ಕುಶಲಂ ಚಾಬ್ರುವನ್ಸರ್ವೇ ತ್ವಾಂ ಯುಯುತ್ಸುಮಿಹಾಗತಮ್।।
ಅಭಿಮನ್ಯೋ! ಮಹಾರಥರಾದ ನಿನ್ನ ಸೋದರ ಮಾವಂದಿರು ಕುಶಲರಾಗಿದ್ದಾರೆ. ಅವರು ಯುದ್ಧಕ್ಕೆಂದು ಆಗಮಿಸಿರುವ ನಿನ್ನ ಕುಶಲವನ್ನು ಕೇಳುತ್ತಿದ್ದಾರೆ.
14060030a ಆಚಕ್ಷ್ವ ಮೇಽದ್ಯ ಸಂಗ್ರಾಮಂ ಯಥಾಪೂರ್ವಮರಿಂದಮ।
14060030c ಕಸ್ಮಾದೇವ ವಿಲಪತೀಂ ನಾದ್ಯೇಹ ಪ್ರತಿಭಾಷಸೇ।।
ಅರಿಂದಮ! ಹಿಂದಿನಂತೆ ಇಂದೂ ಕೂಡ ಸಂಗ್ರಾಮದ ಕುರಿತು ವರದಿಮಾಡು. ವಿಲಪಿಸುತ್ತಿರುವ ನನಗೇಕೆ ಇಂದು ನೀನು ಉತ್ತರಿಸುತ್ತಿಲ್ಲ?”
14060031a ಏವಮಾದಿ ತು ವಾರ್ಷ್ಣೇಯ್ಯಾಸ್ತದಸ್ಯಾಃ ಪರಿದೇವಿತಮ್।
14060031c ಶ್ರುತ್ವಾ ಪೃಥಾ ಸುದುಃಖಾರ್ತಾ ಶನೈರ್ವಾಕ್ಯಮಥಾಬ್ರವೀತ್।।
ಇದೇ ಮುಂತಾಗಿ ವಿಲಪಿಸುತ್ತಿದ್ದ ವಾರ್ಷ್ಣೇಯಿಯನ್ನು ಕೇಳಿ ದುಃಖಾರ್ತಳಾಗಿದ್ದ ಪೃಥೆಯು ಅವಳಿಗೆ ಮೆಲ್ಲನೇ ಈ ಮಾತುಗಳನ್ನಾಡಿದ್ದಳು:
14060032a ಸುಭದ್ರೇ ವಾಸುದೇವೇನ ತಥಾ ಸಾತ್ಯಕಿನಾ ರಣೇ।
14060032c ಪಿತ್ರಾ ಚ ಪಾಲಿತೋ ಬಾಲಃ ಸ ಹತಃ ಕಾಲಧರ್ಮಣಾ।।
“ಸುಭದ್ರೇ! ರಣದಲ್ಲಿ ವಾಸುದೇವ, ಸಾತ್ಯಕಿ ಮತ್ತು ತಂದೆ ಅರ್ಜುನರಿಂದ ಪಾಲಿತನಾಗಿದ್ದ ಈ ಬಾಲಕನು ಕಾಲಧರ್ಮಾನುಸಾರವಾಗಿ ಹತನಾಗಿದ್ದಾನೆ.
14060033a ಈದೃಶೋ ಮರ್ತ್ಯಧರ್ಮೋಽಯಂ ಮಾ ಶುಚೋ ಯದುನಂದಿನಿ।
14060033c ಪುತ್ರೋ ಹಿ ತವ ದುರ್ಧರ್ಷಃ ಸಂಪ್ರಾಪ್ತಃ ಪರಮಾಂ ಗತಿಮ್।।
ಯದುನಂದಿನಿ! ಮನುಷ್ಯಧರ್ಮವೇ ಈ ರೀತಿಯಿರುವಾಗ ಅದಕ್ಕೆ ನೀನು ಶೋಕಿಸಬೇಡ! ದುರ್ಧರ್ಷನಾಗಿದ್ದ ನಿನ್ನ ಪುತ್ರನು ಪರಮ ಗತಿಯನ್ನೇ ಪಡೆದಿದ್ದಾನೆ.
14060034a ಕುಲೇ ಮಹತಿ ಜಾತಾಸಿ ಕ್ಷತ್ರಿಯಾಣಾಂ ಮಹಾತ್ಮನಾಮ್।
14060034c ಮಾ ಶುಚಶ್ಚಪಲಾಕ್ಷಂ ತ್ವಂ ಪುಂಡರೀಕನಿಭೇಕ್ಷಣೇ।।
ಮಹಾತ್ಮ ಕ್ಷತ್ರಿಯರ ಮಹಾಕುಲದಲ್ಲಿ ಜನಿಸಿರುವೆ. ಕಮಲದ ದಳದಂಥಹ ಕಣ್ಣುಗಳುಳ್ಳ ನೀನು ಆ ಚಪಲಾಕ್ಷನ ಕುರಿತು ಶೋಕಿಸಬೇಡ!
14060035a ಉತ್ತರಾಂ ತ್ವಮವೇಕ್ಷಸ್ವ ಗರ್ಭಿಣೀಂ ಮಾ ಶುಚಃ ಶುಭೇ।
14060035c ಪುತ್ರಮೇಷಾ ಹಿ ತಸ್ಯಾಶು ಜನಯಿಷ್ಯತಿ ಭಾಮಿನೀ।।
ಶುಭೇ! ಗರ್ಭಿಣಿಯಾಗಿರುವ ಉತ್ತರೆಯನ್ನಾದರೂ ನೋಡಿ ಶೋಕಿಸುವುದನ್ನು ನಿಲ್ಲಿಸು! ಭಾಮಿನೀ! ಅವನ ಮಗನಿಗೇ ಇವಳು ಜನ್ಮನೀಡುವವಳಿದ್ದಾಳೆ!”
14060036a ಏವಮಾಶ್ವಾಸಯಿತ್ವೈನಾಂ ಕುಂತೀ ಯದುಕುಲೋದ್ವಹ।
14060036c ವಿಹಾಯ ಶೋಕಂ ದುರ್ಧರ್ಷಂ ಶ್ರಾದ್ಧಮಸ್ಯ ಹ್ಯಕಲ್ಪಯತ್।।
ಯದುಕುಲೋದ್ವಹ! ಕುಂತಿಯು ಹೀಗೆ ಸುಭದ್ರೆಯನ್ನು ಸಂತೈಸಿ ಸಹಿಸಲಸಾಧ್ಯ ಶೋಕವನ್ನು ತೊರೆದು ಅವನ ಶ್ರಾದ್ಧಕ್ಕೆ ಸಿದ್ಧತೆಗಳನ್ನು ಮಾಡಿದ್ದಳು.
14060037a ಸಮನುಜ್ಞಾಪ್ಯ ಧರ್ಮಜ್ಞಾ ರಾಜಾನಂ ಭೀಮಮೇವ ಚ।
14060037c ಯಮೌ ಯಮೋಪಮೌ ಚೈವ ದದೌ ದಾನಾನ್ಯನೇಕಶಃ।।
ಅವಳು ಧರ್ಮಜ್ಞ ರಾಜ, ಭೀಮಸೇನ ಮತ್ತು ಯಮೋಪಮರಾದ ಯಮಳರ ಒಪ್ಪಿಗೆಯಂತೆ ಅನೇಕ ದಾನಗಳನ್ನು ನೀಡಿದಳು.
14060038a ತತಃ ಪ್ರದಾಯ ಬಹ್ವೀರ್ಗಾ ಬ್ರಾಹ್ಮಣೇಭ್ಯೋ ಯದೂದ್ವಹ।
14060038c ಸಮಹೃಷ್ಯತ ವಾರ್ಷ್ಣೇಯೀ ವೈರಾಟೀಂ ಚಾಬ್ರವೀದಿದಮ್।।
ಯದೂದ್ವಹ! ಬ್ರಾಹ್ಮಣರಿಗೆ ಅನೇಕ ಗೋವುಗಳನ್ನು ದಾನವಾಗಿತ್ತು ಸಮಾಧಾನಮಾಡಿಕೊಂಡ ವಾರ್ಷ್ಣೇಯಿ ಕುಂತಿಯು ವೈರಾಟೀ ಉತ್ತರೆಗೆ ಹೇಳಿದಳು:
14060039a ವೈರಾಟಿ ನೇಹ ಸಂತಾಪಸ್ತ್ವಯಾ ಕಾರ್ಯೋ ಯಶಸ್ವಿನಿ।
14060039c ಭರ್ತಾರಂ ಪ್ರತಿ ಸುಶ್ರೋಣಿ ಗರ್ಭಸ್ಥಂ ರಕ್ಷ ಮೇ ಶಿಶುಮ್।।
“ವೈರಾಟೀ! ಯಶಸ್ವಿನೀ! ಸುಶ್ರೋಣೀ! ಪತಿಯ ಕುರಿತು ಸಂತಾಪಪಡುವ ಕಾರ್ಯ ನಿನ್ನದಲ್ಲ! ನೀನು ಗರ್ಭದಲ್ಲಿರುವ ಶಿಶುವನ್ನು ರಕ್ಷಿಸಿಕೊಳ್ಳಬೇಕು!”
14060040a ಏವಮುಕ್ತ್ವಾ ತತಃ ಕುಂತೀ ವಿರರಾಮ ಮಹಾದ್ಯುತೇ।
14060040c ತಾಮನುಜ್ಞಾಪ್ಯ ಚೈವೇಮಾಂ ಸುಭದ್ರಾಂ ಸಮುಪಾನಯಮ್।।
ಮಹಾದ್ಯುತೇ! ಹೀಗೆ ಹೇಳಿ ಕುಂತಿಯು ಸುಮ್ಮನಾದಳು. ಆಗ ನಾನು ಅವಳ ಅನುಮತಿಯನ್ನು ಪಡೆದು ಸುಭದ್ರೆಯನ್ನು ಇಲ್ಲಿಗೆ ಕರೆದುಕೊಂಡು ಬಂದೆನು.
14060041a ಏವಂ ಸ ನಿಧನಂ ಪ್ರಾಪ್ತೋ ದೌಹಿತ್ರಸ್ತವ ಮಾಧವ।
14060041c ಸಂತಾಪಂ ಜಹಿ ದುರ್ಧರ್ಷ ಮಾ ಚ ಶೋಕೇ ಮನಃ ಕೃಥಾಃ।।
ಮಾಧವ! ಹೀಗೆ ನಿನ್ನ ಮಗಳ ಮಗನು ನಿಧನಹೊಂದಿದನು. ದುರ್ಧರ್ಷ! ಸಂತಾಪವನ್ನು ತೊರೆ ಮತ್ತು ನಿನ್ನ ಮನಸ್ಸನ್ನು ಶೋಕಕ್ಕೊಳಗಾಗಿಸಬೇಡ!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ವಸುದೇವಸಾಂತ್ವನೇ ಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ವಸುದೇವಸಾಂತ್ವನ ಎನ್ನುವ ಅರವತ್ತನೇ ಅಧ್ಯಾಯವು.