058: ಕೃಷ್ಣಸ್ಯದ್ವಾರಕಾಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 58

ಸಾರ

ದ್ವಾರವತಿಯಲ್ಲಿ ರೈವತಕ ಉತ್ಸವದ ವರ್ಣನೆ (1-14). ನೇರವಾಗಿ ಅಲ್ಲಿಗೆ ಬಂದ ಕೃಷ್ಣನು ತಂದೆ ವಸುದೇವನನ್ನು ಸಂದರ್ಶಿಸಿದುದು (15-20).

14058001 ಜನಮೇಜಯ ಉವಾಚ
14058001a ಉತ್ತಂಕಾಯ ವರಂ ದತ್ತ್ವಾ ಗೋವಿಂದೋ ದ್ವಿಜಸತ್ತಮ।
14058001c ಅತ ಊರ್ಧ್ವಂ ಮಹಾಬಾಹುಃ ಕಿಂ ಚಕಾರ ಮಹಾಯಶಾಃ।।

ಜನಮೇಜಯನು ಹೇಳಿದನು: “ದ್ವಿಜಸತ್ತಮ! ಉತ್ತಂಕನಿಗೆ ವರವನ್ನಿತ್ತ ನಂತರ ಮಹಾಬಾಹು ಮಹಾಯಶಸ್ವಿ ಗೋವಿಂದನು ಏನು ಮಾಡಿದನು?”

14058002 ವೈಶಂಪಾಯನ ಉವಾಚ
14058002a ದತ್ತ್ವಾ ವರಮುತ್ತಂಕಾಯ ಪ್ರಾಯಾತ್ಸಾತ್ಯಕಿನಾ ಸಹ।
14058002c ದ್ವಾರಕಾಮೇವ ಗೋವಿಂದಃ ಶೀಘ್ರವೇಗೈರ್ಮಹಾಹಯೈಃ।।

ವೈಶಂಪಾಯನನು ಹೇಳಿದನು: “ಉತ್ತಂಕನಿಗೆ ವರವನ್ನಿತ್ತು ಸಾತ್ಯಕಿಯೊಡನೆ ಮಹಾಹಯಗಳ ಶೀಘ್ರ ವೇಗದೊಂದಿಗೆ ಗೋವಿಂದನು ದ್ವಾರಕೆಗೆ ಹೋದನು.

14058003a ಸರಾಂಸಿ ಚ ನದೀಶ್ಚೈವ ವನಾನಿ ವಿವಿಧಾನಿ ಚ।
14058003c ಅತಿಕ್ರಮ್ಯ ಸಸಾದಾಥ ರಮ್ಯಾಂ ದ್ವಾರವತೀಂ ಪುರೀಮ್।।

ವಿವಿಧ ಸರೋವರಗಳನ್ನೂ, ನದಿಗಳನ್ನೂ ಮತ್ತು ವನಗಳನ್ನೂ ದಾಟಿ ಅವನು ರಮ್ಯ ದ್ವಾರವತೀ ಪುರವನ್ನು ತಲುಪಿದನು.

14058004a ವರ್ತಮಾನೇ ಮಹಾರಾಜ ಮಹೇ ರೈವತಕಸ್ಯ ಚ।
14058004c ಉಪಾಯಾತ್ಪುಂಡರೀಕಾಕ್ಷೋ ಯುಯುಧಾನಾನುಗಸ್ತದಾ।।

ಮಹಾರಾಜ! ರೈವತಕ ಗಿರಿಯಲ್ಲಿ ನಡೆಯುತ್ತಿದ್ದ ಮಹಾ ಉತ್ಸವಕ್ಕೆ ಪುಂಡರೀಕಾಕ್ಷನು ಯುಯುಧಾನ ಸಾತ್ಯಕಿಯೊಡನೆ ನೇರವಾಗಿ ಹೋದನು.

14058005a ಅಲಂಕೃತಸ್ತು ಸ ಗಿರಿರ್ನಾನಾರೂಪವಿಚಿತ್ರಿತೈಃ।
14058005c ಬಭೌ ರುಕ್ಮಮಯೈಃ ಕಾಶೈಃ ಸರ್ವತಃ ಪುರುಷರ್ಷಭ।।

ಪುರುಷರ್ಷಭ! ಆ ಗಿರಿಯಾದರೋ ನಾನಾ ರೂಪ-ಬಣ್ಣಗಳಿಂದ, ಸುವರ್ಣದಿಂದ ಮಾಡಿದ್ದ ಡೇರೆಗಳಿಂದ ಎಲ್ಲೆಲ್ಲೂ ಅಲಂಕೃತವಾಗಿತ್ತು.

14058006a ಕಾಂಚನಸ್ರಗ್ಭಿರಗ್ರ್ಯಾಭಿಃ ಸುಮನೋಭಿಸ್ತಥೈವ ಚ।
14058006c ವಾಸೋಭಿಶ್ಚ ಮಹಾಶೈಲಃ ಕಲ್ಪವೃಕ್ಷೈಶ್ಚ ಸರ್ವಶಃ।।

ಶ್ರೇಷ್ಠವೂ ಸುಮನೋಹರವೂ ಆದ ಸುವರ್ಣ ಹಾರಗಳಿಂದಲೂ, ವಸ್ತ್ರಗಳಿಂದಲೂ ಆ ಮಹಾಶೈಲವು ಅಲಂಕೃತಗೊಂಡಿತ್ತು. ಸುತ್ತಲೂ ಕಲ್ಪವೃಕ್ಷಗಳಿದ್ದವು.

14058007a ದೀಪವೃಕ್ಷೈಶ್ಚ ಸೌವರ್ಣೈರಭೀಕ್ಷ್ಣಮುಪಶೋಭಿತಃ।
14058007c ಗುಹಾನಿರ್ಝರದೇಶೇಷು ದಿವಾಭೂತೋ ಬಭೂವ ಹ।।

ಸುವರ್ಣಮಯ ದೀಪವೃಕ್ಷಗಳಿಂದ ಆ ಪರ್ವತದ ಗುಹೆ-ಚಿಲುಮೆಗಳ ಪ್ರದೇಶಗಳಲ್ಲಿ ಸದಾ ಹಗಲಾಗಿರುವಂತೆಯೇ ಕಾಣುತ್ತಿತ್ತು.

14058008a ಪತಾಕಾಭಿರ್ವಿಚಿತ್ರಾಭಿಃ ಸಘಂಟಾಭಿಃ ಸಮಂತತಃ।
14058008c ಪುಂಭಿಃ ಸ್ತ್ರೀಭಿಶ್ಚ ಸಂಘುಷ್ಟಃ ಪ್ರಗೀತ ಇವ ಚಾಭವತ್।
14058008e ಅತೀವ ಪ್ರೇಕ್ಷಣೀಯೋಽಭೂನ್ಮೇರುರ್ಮುನಿಗಣೈರಿವ।।

ಸುತ್ತಲೂ ಹಾರಾಡುತ್ತಿದ್ದ ಘಂಟೆಗಳಿಂದ ಕೂಡಿದ ಪತಾಕೆಗಳಿಂದಲೂ ಮತ್ತು ಸ್ತ್ರೀ-ಪುರುಷರ ಗುಂಪುಮಾತುಗಳಿಂದಲೂ ಸಂಗೀತಮಯವಾಗಿದ್ದ ಆ ಪರ್ವತವು ಮುನಿಗಣಗಳಿಂದ ಕಂಗೊಳಿಸುವ ಮೇರು ಪರ್ವತದಂತೆ ಪ್ರೇಕ್ಷಣೀಯವಾಗಿತ್ತು.

14058009a ಮತ್ತಾನಾಂ ಹೃಷ್ಟರೂಪಾಣಾಂ ಸ್ತ್ರೀಣಾಂ ಪುಂಸಾಂ ಚ ಭಾರತ।
14058009c ಗಾಯತಾಂ ಪರ್ವತೇಂದ್ರಸ್ಯ ದಿವಸ್ಪೃಗಿವ ನಿಸ್ವನಃ।।

ಭಾರತ! ಆ ಪರ್ವತೇಂದ್ರನ ಮೇಲೆ ಸಂತಸದಿಂದ ಮತ್ತೇರಿದ ಸ್ತ್ರೀ-ಪುರುಷರ ಗಾಯನಗಳು ಆಕಾಶವನ್ನು ತಟ್ಟುತ್ತಿರುವವೋ ಎಂಬಂತೆ ಕೇಳಿಬರುತ್ತಿತ್ತು.

14058010a ಪ್ರಮತ್ತಮತ್ತಸಂಮತ್ತಕ್ಷ್ವೇಡಿತೋತ್ಕೃಷ್ಟಸಂಕುಲಾ।
14058010c ತಥಾ ಕಿಲಕಿಲಾಶಬ್ದೈರ್ಭೂರಭೂತ್ಸುಮನೋಹರಾ।।

ಪ್ರಮತ್ತ, ಮತ್ತ ಮತ್ತು ಸಮ್ಮತ್ತ ಗುಂಪುಗಳ ಕಿಲ-ಕಿಲ ಶಬ್ಧಗಳಿಂದ ಆ ಪರ್ವತವು ಸುಮನೋಹರವಾಗಿತ್ತು.

14058011a ವಿಪಣಾಪಣವಾನ್ರಮ್ಯೋ ಭಕ್ಷ್ಯಭೋಜ್ಯವಿಹಾರವಾನ್।
14058011c ವಸ್ತ್ರಮಾಲ್ಯೋತ್ಕರಯುತೋ ವೀಣಾವೇಣುಮೃದಂಗವಾನ್।।

ಅದು ಅಂಗಡಿ-ಮಾರುಕಟ್ಟೆಗಳಿಂದಲೂ, ರಮ್ಯವಾದ ಭಕ್ಷ-ಭೋಜ್ಯ ವಿಹಾರಗಳಿಂದಲೂ, ವಸ್ತ್ರ-ಮಾಲೆಗಳ ರಾಶಿಗಳಿಂದಲೂ, ವೇಣು-ಮೃದಂಗ ವಾದಿಗಳಿಂದಲೂ ತುಂಬಿಹೋಗಿತ್ತು.

14058012a ಸುರಾಮೈರೇಯಮಿಶ್ರೇಣ ಭಕ್ಷ್ಯಭೋಜ್ಯೇನ ಚೈವ ಹ।
14058012c ದೀನಾಂಧಕೃಪಣಾದಿಭ್ಯೋ ದೀಯಮಾನೇನ ಚಾನಿಶಮ್।
14058012e ಬಭೌ ಪರಮಕಲ್ಯಾಣೋ ಮಹಸ್ತಸ್ಯ ಮಹಾಗಿರೇಃ।।

ಸುರಾ-ಮೈರೇಯ ಮಿಶ್ರಿತ ಭಕ್ಷ್ಯ-ಭೋಜ್ಯಗಳನ್ನು ದೀನ-ಅಂಧ-ಕೃಪಣರಿಗೆ ನಿರಂತರವಾಗಿ ನೀಡುತ್ತಿದ್ದ ಆ ಮಹಾಗಿರಿಯ ಮಹೋತ್ಸವು ಪರಮಕಲ್ಯಾಣಯುಕ್ತವಾಗಿತ್ತು.

14058013a ಪುಣ್ಯಾವಸಥವಾನ್ವೀರ ಪುಣ್ಯಕೃದ್ಭಿರ್ನಿಷೇವಿತಃ।
14058013c ವಿಹಾರೋ ವೃಷ್ಣಿವೀರಾಣಾಂ ಮಹೇ ರೈವತಕಸ್ಯ ಹ।
14058013e ಸ ನಗೋ ವೇಶ್ಮಸಂಕೀರ್ಣೋ ದೇವಲೋಕ ಇವಾಬಭೌ।।

ವೀರ! ಅಲ್ಲಿ ಪುಣ್ಯಕರ್ಮಿಗಳು ವಾಸಿಸಲು ಪುಣ್ಯ ಶಿಬಿರಗಳಿದ್ದವು. ಆ ರೈವತಕದ ಮಹೋತ್ಸವದಲ್ಲಿ ವೃಷ್ಣಿವೀರರ ವಿಹಾರಕ್ಕಾಗಿ ನಿರ್ಮಿಸಿದ್ದ ಆ ಭವನ-ಸಂಕೀರ್ಣಗಳಿಂದ ಅದು ದೇವಲೋಕದಂತೆಯೇ ಕಂಗೊಳಿಸುತ್ತಿತ್ತು.

14058014a ತದಾ ಚ ಕೃಷ್ಣಸಾಂನಿಧ್ಯಮಾಸಾದ್ಯ ಭರತರ್ಷಭ।
14058014c ಶಕ್ರಸದ್ಮಪ್ರತೀಕಾಶೋ ಬಭೂವ ಸ ಹಿ ಶೈಲರಾಟ್।।

ಭರತರ್ಷಭ! ಆಗ ಕೃಷ್ಣನ ಸಾನ್ನಿಧ್ಯವನ್ನು ಪಡೆದ ಆ ಶೈಲರಾಜನು ಇಂದ್ರನ ಅರಮನೆಯಂತೆಯೇ ಕಂಗೊಳಿಸಿದನು.

14058015a ತತಃ ಸಂಪೂಜ್ಯಮಾನಃ ಸ ವಿವೇಶ ಭವನಂ ಶುಭಮ್।
14058015c ಗೋವಿಂದಃ ಸಾತ್ಯಕಿಶ್ಚೈವ ಜಗಾಮ ಭವನಂ ಸ್ವಕಮ್।।

ಆಗ ಪೂಜಿಸಲ್ಪಟ್ಟು ಗೋವಿಂದನು ಶುಭ ಭವನವನ್ನು ಪ್ರವೇಶಿಸಿದನು. ಸಾತ್ಯಕಿಯೂ ಕೂಡ ತನ್ನ ಭವನವನ್ನು ಪ್ರವೇಶಿಸಿದನು.

14058016a ವಿವೇಶ ಚ ಸ ಹೃಷ್ಟಾತ್ಮಾ ಚಿರಕಾಲಪ್ರವಾಸಕಃ।
14058016c ಕೃತ್ವಾ ನಸುಕರಂ ಕರ್ಮ ದಾನವೇಷ್ವಿವ ವಾಸವಃ।।

ದಾನವರನ್ನು ಸಂಹರಿಸಿದ ಇಂದ್ರನಂತೆ ದುಷ್ಕರ ಕರ್ಮವನ್ನು ಮಾಡಿ ದೀರ್ಘ ಪ್ರವಾಸದ ನಂತರ ಹಿಂದಿರುಗಿದ ಕೃಷ್ಣನು ಹೃಷ್ಟಾತ್ಮನಾಗಿ ತನ್ನ ಭವನವನ್ನು ಪ್ರವೇಶಿಸಿದನು.

14058017a ಉಪಯಾತಂ ತು ವಾರ್ಷ್ಣೇಯಂ ಭೋಜವೃಷ್ಣ್ಯಂಧಕಾಸ್ತದಾ।
14058017c ಅಭ್ಯಗಚ್ಚನ್ಮಹಾತ್ಮಾನಂ ದೇವಾ ಇವ ಶತಕ್ರತುಮ್।।

ದೇವತೆಗಳು ಶತಕ್ರತು ಇಂದ್ರನನ್ನು ಹೇಗೋ ಹಾಗೆ ಭೋಜ-ವೃಷ್ಣಿ-ಅಂಧಕರು ಮುಂದೆಹೋಗಿ ಮಹಾತ್ಮ ವಾರ್ಷ್ಣೇಯನನ್ನು ಸ್ವಾಗತಿಸಿದರು.

14058018a ಸ ತಾನಭ್ಯರ್ಚ್ಯ ಮೇಧಾವೀ ಪೃಷ್ಟ್ವಾ ಚ ಕುಶಲಂ ತದಾ।
14058018c ಅಭ್ಯವಾದಯತ ಪ್ರೀತಃ ಪಿತರಂ ಮಾತರಂ ತಥಾ।।

ಅವರನ್ನೂ ಗೌರವಿಸಿ, ಅವರ ಕುಶಲಗಳನ್ನು ಕೇಳಿ ಮೇಧಾವೀ ಕೃಷ್ಣನು ಪ್ರೀತನಾಗಿ ತನ್ನ ತಂದೆ-ತಾಯಂದಿರನ್ನು ಅಭಿವಾದಿಸಿದನು.

14058019a ತಾಭ್ಯಾಂ ಚ ಸಂಪರಿಷ್ವಕ್ತಃ ಸಾಂತ್ವಿತಶ್ಚ ಮಹಾಭುಜಃ।
14058019c ಉಪೋಪವಿಷ್ಟಸ್ತೈಃ ಸರ್ವೈರ್ವೃಷ್ಣಿಭಿಃ ಪರಿವಾರಿತಃ।।

ಅವರಿಬ್ಬರೂ ಅವನನ್ನು ತಬ್ಬಿಕೊಂಡು ಸಂತೈಸಿದರು. ಅವರೊಂದಿಗೆ ಕುಳಿತುಕೊಂಡ ಮಹಾಭುಜ ಕೃಷ್ಣನ ಸುತ್ತಲೂ ಸರ್ವ ವೃರ್ಷ್ಣಿಗಳೂ ಕುಳಿತುಕೊಂಡರು.

14058020a ಸ ವಿಶ್ರಾಂತೋ ಮಹಾತೇಜಾಃ ಕೃತಪಾದಾವಸೇಚನಃ।
14058020c ಕಥಯಾಮಾಸ ತಂ ಕೃಷ್ಣಃ ಪೃಷ್ಟಃ ಪಿತ್ರಾ ಮಹಾಹವಮ್।।

ಕೈಕಾಲುಗಳನ್ನು ತೊಳೆದುಕೊಂಡು ವಿಶ್ರಾಂತಿಪಡೆದ ಕೃಷ್ಣನು ತಂದೆಯ ಪ್ರಶ್ನೆಗೆ ಮಹಾಯುದ್ಧದ ಕುರಿತು ಹೇಳತೊಡಗಿದನು.

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಕೃಷ್ಣಸ್ಯದ್ವಾರಕಾಪ್ರವೇಶೇ ಅಷ್ಟಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಕೃಷ್ಣಸ್ಯದ್ವಾರಕಾಪ್ರವೇಶ ಎನ್ನುವ ಐವತ್ತೆಂಟನೇ ಅಧ್ಯಾಯವು.