057: ಉತ್ತಂಕೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 57

ಸಾರ

ಸೌದಾಸನಿಂದ ಕುರುಹಿನ ಮಾತನ್ನು ಮದವಂತಿಗೆ ಹೇಳಿ ಅವಳಿಂದ ಉತ್ತಂಕನು ಕುಂಡಲಗಳನ್ನು ಪಡೆದುದು (1-3). ತನ್ನಲ್ಲಿ ಸೌಹಾರ್ದತೆಯಿಂದ ಮಾತನಾಡಿದ ಉತ್ತಂಕನಿಗೆ ಪುನಃ ನೀನು ನನ್ನಲ್ಲಿಗೆ ಬರುವುದು ನಿನಗೆ ಕ್ಷೇಮಕರವಲ್ಲ ಎಂದು ಕಳುಹಿಸಿದುದು (4-16). ಉತ್ತಂಕನು ಕುಂಡಲಗಳನ್ನು ತೆಗೆದುಕೊಂಡು ಪ್ರಯಾಣಿಸುತ್ತಿರುವಾಗ ನಾಗನಿಂದ ಅವುಗಳ ಅಪಹರಣ (17-23). ಭೂಮಿಯನ್ನು ಅಗೆಯಲು ಪ್ರಯತ್ನಿಸುತ್ತಿದ್ದ ಉತ್ತಂಕನಿಗೆ ಇಂದ್ರನ ಸಹಾಯ (24-33). ಪಾತಾಳಲೋಕಕ್ಕೆ ಹೋದ ಉತ್ತಂಕನಿಗೆ ಅಗ್ನಿಯ ಸಹಾಯದಿಂದ ಕುಂಡಲಗಳು ಪುನಃ ದೊರಕಿದುದು (34-53). ಅವನು ಕುಂಡಲಗಳನ್ನು ಗುರುಪತ್ನಿಗೆ ನೀಡಿದುದು (54-56).

14057001 ವೈಶಂಪಾಯನ ಉವಾಚ
14057001a ಸ ಮಿತ್ರಸಹಮಾಸಾದ್ಯ ತ್ವಭಿಜ್ಞಾನಮಯಾಚತ।
14057001c ತಸ್ಮೈ ದದಾವಭಿಜ್ಞಾನಂ ಸ ಚೇಕ್ಷ್ವಾಕುವರಸ್ತದಾ।।

ವೈಶಂಪಾಯನನು ಹೇಳಿದನು: “ಉತ್ತಂಕನು ಮಿತ್ರಸಹ ಸೌದಾಸನ ಬಳಿಹೋಗಿ ಗುರುತನ್ನು ಕೇಳಿದನು. ಆ ಇಕ್ಷ್ವಾಕುಕುವರನು ಅವನಿಗೆ ಗುರುತೊಂದನ್ನು ಕೊಟ್ಟನು.

14057002 ಸೌದಾಸ ಉವಾಚ
14057002a ನ ಚೈವೈಷಾ ಗತಿಃ ಕ್ಷೇಮ್ಯಾ ನ ಚಾನ್ಯಾ ವಿದ್ಯತೇ ಗತಿಃ।
14057002c ಏತನ್ಮೇ ಮತಮಾಜ್ಞಾಯ ಪ್ರಯಚ್ಚ ಮಣಿಕುಂಡಲೇ।।

ಸೌದಾಸನು ಹೇಳಿದನು: “ನನ್ನ ಈ ಗತಿಯು ಕ್ಷೇಮಕರವಾದುದೇನೂ ಅಲ್ಲ. ಆದರೂ ಬೇರೆ ಯಾವ ಗತಿಯನ್ನೂ ಕಾಣೆ. ಈ ನನ್ನ ಅಭಿಪ್ರಾಯವನ್ನು ತಿಳಿದುಕೊಂಡು ಮಣಿಕುಂಡಲಗಳನ್ನು ಕೊಡು!””

14057003 ವೈಶಂಪಾಯನ ಉವಾಚ
14057003a ಇತ್ಯುಕ್ತಸ್ತಾಮುತ್ತಂಕಸ್ತು ಭರ್ತುರ್ವಾಕ್ಯಮಥಾಬ್ರವೀತ್।
14057003c ಶ್ರುತ್ವಾ ಚ ಸಾ ತತಃ ಪ್ರಾದಾತ್ತಸ್ಮೈ ತೇ ಮಣಿಕುಂಡಲೇ।।

ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ಉತ್ತಂಕನು ಪತಿಯ ವಾಕ್ಯವನ್ನು ಮದಯಂತಿಗೆ ಹೇಳಿದನು. ಅದನ್ನು ಕೇಳುತ್ತಲೇ ಅವಳು ಅವನಿಗೆ ಮಣಿಕುಂಡಲಗಳನ್ನು ಕೊಟ್ಟಳು.

14057004a ಅವಾಪ್ಯ ಕುಂಡಲೇ ತೇ ತು ರಾಜಾನಂ ಪುನರಬ್ರವೀತ್।
14057004c ಕಿಮೇತದ್ಗುಹ್ಯವಚನಂ ಶ್ರೋತುಮಿಚ್ಚಾಮಿ ಪಾರ್ಥಿವ।।

ಆ ಕುಂಡಲಗಳನ್ನು ಪಡೆದುಕೊಂಡು ಉತ್ತಂಕನು ರಾಜ ಸೌದಾಸನಲ್ಲಿಗೆ ಹೋಗಿ ಪುನಃ ಅವನಿಗೆ ಕೇಳಿದನು: “ಪಾರ್ಥಿವ! ನಿನ್ನ ಆ ಗೂಢವಚನದ ಅರ್ಥವೇನೆಂದು ಕೇಳ ಬಯಸುತ್ತೇನೆ!”

14057005 ಸೌದಾಸ ಉವಾಚ
14057005a ಪ್ರಜಾ ನಿಸರ್ಗಾದ್ವಿಪ್ರಾನ್ವೈ ಕ್ಷತ್ರಿಯಾಃ ಪೂಜಯಂತಿ ಹ।
14057005c ವಿಪ್ರೇಭ್ಯಶ್ಚಾಪಿ ಬಹವೋ ದೋಷಾಃ ಪ್ರಾದುರ್ಭವಂತಿ ನಃ।।

ಸೌದಾಸನು ಹೇಳಿದನು: “ಸೃಷ್ಟಿಯ ಪ್ರಾರಂಭದಿಂದಲೂ ಕ್ಷತ್ರಿಯರು ವಿಪ್ರರನ್ನು ಪೂಜಿಸುತ್ತಾ ಬಂದಿದ್ದಾರೆ. ಆದರೂ ವಿಪ್ರರು ನಮ್ಮಲ್ಲಿ ಅನೇಕ ದೋಷಗಳನ್ನು ಹುಟ್ಟಿಸುತ್ತಾರೆ.

14057006a ಸೋಽಹಂ ದ್ವಿಜೇಭ್ಯಃ ಪ್ರಣತೋ ವಿಪ್ರಾದ್ದೋಷಮವಾಪ್ತವಾನ್।
14057006c ಗತಿಮನ್ಯಾಂ ನ ಪಶ್ಯಾಮಿ ಮದಯಂತೀಸಹಾಯವಾನ್।
14057006e ಸ್ವರ್ಗದ್ವಾರಸ್ಯ ಗಮನೇ ಸ್ಥಾನೇ ಚೇಹ ದ್ವಿಜೋತ್ತಮ।।

ನಾನೂ ಕೂಡ ದ್ವಿಜರನ್ನು ಪೂಜಿಸುತ್ತಿದ್ದೆನು. ಆದರೆ ವಿಪ್ರನಿಂದಲೇ ಈ ದೋಷವನ್ನು ಪಡೆದುಕೊಂಡಿದ್ದೇನೆ. ಮದಯಂತಿಯನ್ನು ಬಿಟ್ಟು ಬೇರೆ ಯಾವ ಸಹಾಯಕರನ್ನೂ ನಾನು ಕಾಣುತ್ತಿಲ್ಲ. ದ್ವಿಜೋತ್ತಮ! ಈ ಪರಿಸ್ಥಿತಿಯಲ್ಲಿ ಸ್ವರ್ಗದ್ವಾರಕ್ಕೆ ಹೋಗಲು ದಾನವೊಂದೇ ಮಾರ್ಗವಲ್ಲವೇ?

14057007a ನ ಹಿ ರಾಜ್ಞಾ ವಿಶೇಷೇಣ ವಿರುದ್ಧೇನ ದ್ವಿಜಾತಿಭಿಃ।
14057007c ಶಕ್ಯಂ ನೃಲೋಕೇ ಸಂಸ್ಥಾತುಂ ಪ್ರೇತ್ಯ ವಾ ಸುಖಮೇಧಿತುಮ್।।

ದ್ವಿಜಾತಿಯವರಿಗೆ ವಿರುದ್ಧವಾಗಿದ್ದವನು, ಅದರಲ್ಲೂ ವಿಶೇಷವಾಗಿ ರಾಜನು, ಈ ನರಲೋಕದಲ್ಲಿಯೂ ಅಥವಾ ಮರಣದ ನಂತರವೂ ಸುಖದಿಂದಿರಲು ಶಕ್ಯವಿಲ್ಲ.

14057008a ತದಿಷ್ಟೇ ತೇ ಮಯೈವೈತೇ ದತ್ತೇ ಸ್ವೇ ಮಣಿಕುಂಡಲೇ।
14057008c ಯಃ ಕೃತಸ್ತೇಽದ್ಯ ಸಮಯಃ ಸಫಲಂ ತಂ ಕುರುಷ್ವ ಮೇ।।

ನಿನಗಿಷ್ಟವಾಗಿರುವ ಈ ಮಣಿಕುಂಡಲಗಳನ್ನು ಕೊಟ್ಟಿದ್ದೇನೆ. ಇಂದು ನೀನು ಮಾಡಬೇಕಾದುದನ್ನು ಮಾಡಿ ಒಪ್ಪಂದವನ್ನು ಸಫಲಗೊಳಿಸು!”

14057009 ಉತ್ತಂಕ ಉವಾಚ
14057009a ರಾಜಂಸ್ತಥೇಹ ಕರ್ತಾಸ್ಮಿ ಪುನರೇಷ್ಯಾಮಿ ತೇ ವಶಮ್।
14057009c ಪ್ರಶ್ನಂ ತು ಕಂ ಚಿತ್ಪ್ರಷ್ಟುಂ ತ್ವಾಂ ವ್ಯವಸಿಷ್ಯೇ ಪರಂತಪ।।

ಉತ್ತಂಕನು ಹೇಳಿದನು: “ರಾಜನ್! ಹಾಗೆಯೇ ಮಾಡುತ್ತೇನೆ. ಪುನಃ ನಿನ್ನ ವಶದಲ್ಲಿ ಬರುತ್ತೇನೆ. ಪರಂತಪ! ನಿನ್ನಲ್ಲಿ ಯಾವುದೋ ಒಂದು ಪ್ರಶ್ನೆಯನ್ನು ಕೇಳುವುದೂ ಬಾಕಿಯಿದೆ.”

14057010 ಸೌದಾಸ ಉವಾಚ
14057010a ಬ್ರೂಹಿ ವಿಪ್ರ ಯಥಾಕಾಮಂ ಪ್ರತಿವಕ್ತಾಸ್ಮಿ ತೇ ವಚಃ।
14057010c ಚೇತ್ತಾಸ್ಮಿ ಸಂಶಯಂ ತೇಽದ್ಯ ನ ಮೇಽತ್ರಾಸ್ತಿ ವಿಚಾರಣಾ।।

ಸೌದಾಸನು ಹೇಳಿದನು: “ವಿಪ್ರ! ನಿನ್ನ ಅಪೇಕ್ಷೆಯಂತೆ ಕೇಳು. ಅದಕ್ಕೆ ಉತ್ತರಿಸುತ್ತೇನೆ. ನಿನ್ನ ಸಂಶಯವನ್ನು ನಿವಾರಿಸುತ್ತೇನೆ. ಅದರ ಕುರಿತು ವಿಚಾರಿಸಬೇಕಾಗಿಲ್ಲ!”

14057011 ಉತ್ತಂಕ ಉವಾಚ
14057011a ಪ್ರಾಹುರ್ವಾಕ್ಸಂಗತಂ ಮಿತ್ರಂ ಧರ್ಮನೈಪುಣ್ಯದರ್ಶಿನಃ।
14057011c ಮಿತ್ರೇಷು ಯಶ್ಚ ವಿಷಮಃ ಸ್ತೇನ ಇತ್ಯೇವ ತಂ ವಿದುಃ।।

ಉತ್ತಂಕನು ಹೇಳಿದನು: “ಧರ್ಮನೈಪುಣ್ಯವನ್ನು ಕಂಡವರು ಮಾತಿನಲ್ಲಿ ಸಂಯಮವಿರುವವನನ್ನು ಮಿತ್ರನೆಂದೂ ಮಿತ್ರನಿಗೆ ಪ್ರತಿಕೂಲವಾಗಿ ನಡೆದುಕೊಳ್ಳುವವನನ್ನು ಕಳ್ಳನೆಂದೂ ಹೇಳುತ್ತಾರೆ.

14057012a ಸ ಭವಾನ್ಮಿತ್ರತಾಮದ್ಯ ಸಂಪ್ರಾಪ್ತೋ ಮಮ ಪಾರ್ಥಿವ।
14057012c ಸ ಮೇ ಬುದ್ಧಿಂ ಪ್ರಯಚ್ಚಸ್ವ ಸಮಾಂ ಬುದ್ಧಿಮತಾಂ ವರ।।

ಪಾರ್ಥಿವ! ಇಂದು ನೀನು ನನ್ನೊಡನೆ ಮಿತ್ರತ್ವವನ್ನು ಹೊಂದಿರುವೆ. ಬುದ್ಧಿವಂತರಲ್ಲಿ ಶ್ರೇಷ್ಠನೇ! ಆದುದರಿಂದ ನೀನು ನನಗೆ ಉತ್ತಮ ಬುದ್ಧಿಯನ್ನು ನೀಡು.

14057013a ಅವಾಪ್ತಾರ್ಥೋಽಹಮದ್ಯೇಹ ಭವಾಂಶ್ಚ ಪುರುಷಾದಕಃ।
14057013c ಭವತ್ಸಕಾಶಮಾಗಂತುಂ ಕ್ಷಮಂ ಮಮ ನ ವೇತಿ ವಾ।।

ನನ್ನ ಒಂದು ಉದ್ದೇಶದಿಂದ ಇಂದು ನಾನು ನಿನ್ನ ಬಳಿ ಬಂದಿದ್ದೇನೆ. ನರಭಕ್ಷಕನಾಗಿರುವ ನಿನ್ನ ಬಳಿ ಪುನಃ ಬರುವುದು ನನಗೆ ಕ್ಷೇಮಕರವಾದುದೇ ಅಥವಾ ಅಲ್ಲವೇ ಎನ್ನುವುದನ್ನು ಹೇಳು!”

14057014 ಸೌದಾಸ ಉವಾಚ
14057014a ಕ್ಷಮಂ ಚೇದಿಹ ವಕ್ತವ್ಯಂ ಮಯಾ ದ್ವಿಜವರೋತ್ತಮ।
14057014c ಮತ್ಸಮೀಪಂ ದ್ವಿಜಶ್ರೇಷ್ಠ ನಾಗಂತವ್ಯಂ ಕಥಂ ಚನ।।

ಸೌದಾಸನು ಹೇಳಿದನು: “ದ್ವಿಜವರೋತ್ತಮ! ದ್ವಿಜಶ್ರೇಷ್ಠ! ಈ ವಿಷಯದಲ್ಲಿ ಉಚಿತವಾದುದನ್ನೇ ಹೇಳಬೇಕೆಂದಾದರೆ ಯಾವ ಕಾರಣಕ್ಕೂ ನೀನು ಪುನಃ ನನ್ನ ಬಳಿ ಬರಬಾರದು ಎಂದೇ ಹೇಳುತ್ತೇನೆ.

14057015a ಏವಂ ತವ ಪ್ರಪಶ್ಯಾಮಿ ಶ್ರೇಯೋ ಭೃಗುಕುಲೋದ್ವಹ।
14057015c ಆಗಚ್ಚತೋ ಹಿ ತೇ ವಿಪ್ರ ಭವೇನ್ಮೃತ್ಯುರಸಂಶಯಮ್।।

ಭೃಗುಕುಲೋದ್ವಹ! ಹೀಗೆ ಮಾಡುವುದರಲ್ಲಿಯೇ ನಿನ್ನ ಶ್ರೇಯಸ್ಸನ್ನು ಕಾಣುತ್ತೇನೆ. ವಿಪ್ರ! ಪುನಃ ನೀನು ಇಲ್ಲಿಗೆ ಬಂದರೆ ಸಾಯುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.””

14057016 ವೈಶಂಪಾಯನ ಉವಾಚ
14057016a ಇತ್ಯುಕ್ತಃ ಸ ತದಾ ರಾಜ್ಞಾ ಕ್ಷಮಂ ಬುದ್ಧಿಮತಾ ಹಿತಮ್।
14057016c ಸಮನುಜ್ಞಾಪ್ಯ ರಾಜಾನಮಹಲ್ಯಾಂ ಪ್ರತಿ ಜಗ್ಮಿವಾನ್।।

ವೈಶಂಪಾಯನನು ಹೇಳಿದನು: “ರಾಜನಿಂದ ಹೀಗೆ ಹಿತಕರವಾದ ಬುದ್ಧಿಮಾತನ್ನು ಕೇಳಿ ರಾಜನಿಂದ ಅನುಜ್ಞೆಯನ್ನು ಪಡೆದು ಉತ್ತಂಕನು ಅಹಲ್ಯೆಯ ಬಳಿ ಹೊರಟನು.

14057017a ಗೃಹೀತ್ವಾ ಕುಂಡಲೇ ದಿವ್ಯೇ ಗುರುಪತ್ನ್ಯಾಃ ಪ್ರಿಯಂಕರಃ।
14057017c ಜವೇನ ಮಹತಾ ಪ್ರಾಯಾದ್ಗೌತಮಸ್ಯಾಶ್ರಮಂ ಪ್ರತಿ।।

ಗುರುಪತ್ನಿಗೆ ಪ್ರಿಯಕರವಾಗಿದ್ದ ಆ ದಿವ್ಯ ಕುಂಡಲಗಳನ್ನು ಹಿಡಿದುಕೊಂಡು ಅವನು ಮಹಾ ವೇಗದಿಂದ ಗೌತಮನ ಆಶ್ರಮದ ಕಡೆ ಪ್ರಯಾಣಿಸಿದನು.

14057018a ಯಥಾ ತಯೋ ರಕ್ಷಣಂ ಚ ಮದಯಂತ್ಯಾಭಿಭಾಷಿತಮ್।
14057018c ತಥಾ ತೇ ಕುಂಡಲೇ ಬದ್ಧ್ವಾ ತಥಾ ಕೃಷ್ಣಾಜಿನೇಽನಯತ್।।

ಅವುಗಳ ರಕ್ಷಣೆಯನ್ನು ಹೇಗೆ ಮಾಡಬೇಕೆಂದು ಮದಯಂತಿಯು ಹೇಳಿದ್ದಳೋ ಹಾಗೆಯೇ ಕುಂಡಲಗಳನ್ನು ಕೃಷ್ಣಾಜಿನದಲ್ಲಿ ಕಟ್ಟಿ ಕೊಂಡೊಯ್ದನು.

14057019a ಸ ಕಸ್ಮಿಂಶ್ಚಿತ್ಕ್ಷುಧಾವಿಷ್ಟಃ ಫಲಭಾರಸಮನ್ವಿತಮ್।
14057019c ಬಿಲ್ವಂ ದದರ್ಶ ಕಸ್ಮಿಂಶ್ಚಿದಾರುರೋಹ ಕ್ಷುಧಾನ್ವಿತಃ।।

ಹಸಿವಿನಿಂದ ಬಳಲಿದ ಅವನು ಹಣ್ಣುಗಳ ಭಾರಗಳಿಂದ ಕೂಡಿದ್ದ ಯಾವುದೋ ಒಂದು ಬಿಲ್ವವೃಕ್ಷವನ್ನು ಕಂಡನು. ಹಸಿದಿದ್ದ ಅವನು ಆ ಮರವನ್ನು ಹತ್ತಿದನು.

14057020a ಶಾಖಾಸ್ವಾಸಜ್ಯ ತಸ್ಯೈವ ಕೃಷ್ಣಾಜಿನಮರಿಂದಮ।
14057020c ಯಸ್ಮಿಂಸ್ತೇ ಕುಂಡಲೇ ಬದ್ಧೇ ತದಾ ದ್ವಿಜವರೇಣ ವೈ।।

ಅರಿಂದಮ! ಆ ಮರದ ರೆಂಬೆಗೇ ದ್ವಿಜವರನು ಕುಂಡಲಗಳನ್ನು ಕಟ್ಟಿದ್ದ ಕೃಷ್ಣಾಜಿನವನ್ನೂ ಕಟ್ಟಿದನು.

14057021a ವಿಶೀರ್ಣಬಂಧನೇ ತಸ್ಮಿನ್ಗತೇ ಕೃಷ್ಣಾಜಿನೇ ಮಹೀಮ್।
14057021c ಅಪಶ್ಯದ್ಭುಜಗಃ ಕಶ್ಚಿತ್ತೇ ತತ್ರ ಮಣಿಕುಂಡಲೇ।।

ಸಡಿಲಾಗಿ ಕಟ್ಟಿದ್ದ ಆ ಕೃಷ್ಣಾಜಿನವು ನೆಲದ ಮೇಲೆ ಬಿದ್ದಿತು. ಆಗ ಆ ಮಣಿಕುಂಡಲಗಳನ್ನು ಸರ್ಪವೊಂದು ನೋಡಿತು.

14057022a ಐರಾವತಕುಲೋತ್ಪನ್ನಃ ಶೀಘ್ರೋ ಭೂತ್ವಾ ತದಾ ಸ ವೈ।
14057022c ವಿದಶ್ಯಾಸ್ಯೇನ ವಲ್ಮೀಕಂ ವಿವೇಶಾಥ ಸ ಕುಂಡಲೇ।।

ಐರಾವತಕುಲೋತ್ಪನ್ನ ಆ ಸರ್ಪವು ಶೀಘ್ರದಲ್ಲಿಯೇ ಆ ಕುಂಡಲಗಳನ್ನು ತನ್ನ ಹಲ್ಲುಗಳಿಂದ ಕಚ್ಚಿಕೊಂಡು ಹುತ್ತದ ಬಿಲವನ್ನು ಹೊಕ್ಕಿತು.

14057023a ಹ್ರಿಯಮಾಣೇ ತು ದೃಷ್ಟ್ವಾ ಸ ಕುಂಡಲೇ ಭುಜಗೇನ ಹ।
14057023c ಪಪಾತ ವೃಕ್ಷಾತ್ಸೋದ್ವೇಗೋ ದುಃಖಾತ್ಪರಮಕೋಪನಃ।।

ಆ ಸರ್ಪವು ಕುಂಡಲಗಳನ್ನು ಅಪಹರಿಸಿಕೊಂಡು ಹೋಗುತ್ತಿರುವುದನ್ನು ಕಂಡು ಪರಮ ಕುಪಿತನಾದ ಉತ್ತಂಕನು ದುಃಖ-ಉದ್ವೇಗಗಳೊಂದಿಗೆ ಆ ಮರದಿಂದ ಕೆಳಕ್ಕೆ ಹಾರಿದನು.

14057024a ಸ ದಂಡಕಾಷ್ಠಮಾದಾಯ ವಲ್ಮೀಕಮಖನತ್ತದಾ।
14057024c ಕ್ರೋಧಾಮರ್ಷಾಭಿತಪ್ತಾಂಗಸ್ತತೋ ವೈ ದ್ವಿಜಪುಂಗವಃ।।

ಕ್ರೋಧ-ರೋಷಗಳಿಂದ ಅಂಗಗಳು ಉರಿಯುತ್ತಿದ್ದ ಆ ದ್ವಿಜಪುಂಗವನು ಒಂದು ಮರದ ಕೋಲನ್ನು ತೆಗೆದುಕೊಂಡು ಹುತ್ತವನ್ನು ಅಗೆಯ ತೊಡಗಿದನು.

14057025a ತಸ್ಯ ವೇಗಮಸಹ್ಯಂ ತಮಸಹಂತೀ ವಸುಂಧರಾ।
14057025c ದಂಡಕಾಷ್ಠಾಭಿನುನ್ನಾಂಗೀ ಚಚಾಲ ಭೃಶಮಾತುರಾ।।

ಸಹಿಸಲಸಾಧ್ಯವಾದ ಅವನ ವೇಗವನ್ನು ಸಹಿಸಲಾರದೇ ವಸುಂಧರೆಯು ಮರದ ಕೋಲಿನಿಂದ ಗಾಯಗೊಂಡು ಅತ್ಯಂತ ಆತುರಳಾಗಿ ನಡುಗಿದಳು.

14057026a ತತಃ ಖನತ ಏವಾಥ ವಿಪ್ರರ್ಷೇರ್ಧರಣೀತಲಮ್।
14057026c ನಾಗಲೋಕಸ್ಯ ಪಂಥಾನಂ ಕರ್ತುಕಾಮಸ್ಯ ನಿಶ್ಚಯಾತ್।।
14057027a ರಥೇನ ಹರಿಯುಕ್ತೇನ ತಂ ದೇಶಮುಪಜಗ್ಮಿವಾನ್।
14057027c ವಜ್ರಪಾಣಿರ್ಮಹಾತೇಜಾ ದದರ್ಶ ಚ ದ್ವಿಜೋತ್ತಮಮ್।।

ಹೀಗೆ ಆ ವಿಪ್ರರ್ಷಿಯು ನಾಗಲೋಕಕ್ಕೆ ದಾರಿಯನ್ನು ಮಾಡುವ ನಿಶ್ಚಯದಿಂದ ಭೂಮಿಯನ್ನು ಅಗೆಯುತ್ತಿರುವಾಗ ಕುದುರೆಗಳನ್ನು ಕಟ್ಟಿದ ರಥದಲ್ಲಿ ಮಹಾತೇಜಸ್ವಿ ವಜ್ರಪಾಣಿ ಇಂದ್ರನು ಆ ಪ್ರದೇಶಕ್ಕೆ ಬಂದು ದ್ವಿಜೋತ್ತಮನನ್ನು ಕಂಡನು.

14057028a ಸ ತು ತಂ ಬ್ರಾಹ್ಮಣೋ ಭೂತ್ವಾ ತಸ್ಯ ದುಃಖೇನ ದುಃಖಿತಃ।
14057028c ಉತ್ತಂಕಮಬ್ರವೀತ್ತಾತ ನೈತಚ್ಚಕ್ಯಂ ತ್ವಯೇತಿ ವೈ।।

ಅವನ ದುಃಖದಿಂದ ದುಃಖಿತನಾದ ಬ್ರಾಹ್ಮಣನ ವೇಷವನ್ನು ಧರಿಸಿ ಅವನು ಉತ್ತಂಕನಿಗೆ ಹೇಳಿದನು: “ಮಗೂ! ನಿನಗೆ ಇದನ್ನು ಮಾಡಿಮುಗಿಸಲು ಶಕ್ಯವಿಲ್ಲ!

14057029a ಇತೋ ಹಿ ನಾಗಲೋಕೋ ವೈ ಯೋಜನಾನಿ ಸಹಸ್ರಶಃ।
14057029c ನ ದಂಡಕಾಷ್ಠಸಾಧ್ಯಂ ಚ ಮನ್ಯೇ ಕಾರ್ಯಮಿದಂ ತವ।।

ಇಲ್ಲಿಂದ ನಾಗಲೋಕವು ಸಹಸ್ರಾರು ಯೋಜನ ದೂರದಲ್ಲಿದೆ. ಈ ಮರದ ಕೋಲಿನಿಂದ ಆ ಕೆಲಸವನ್ನು ಮಾಡಬಲ್ಲೆ ಎಂದು ನನಗನ್ನಿಸುವುದಿಲ್ಲ!”

14057030 ಉತ್ತಂಕ ಉವಾಚ 14057030a ನಾಗಲೋಕೇ ಯದಿ ಬ್ರಹ್ಮನ್ನ ಶಕ್ಯೇ ಕುಂಡಲೇ ಮಯಾ।
14057030c ಪ್ರಾಪ್ತುಂ ಪ್ರಾಣಾನ್ವಿಮೋಕ್ಷ್ಯಾಮಿ ಪಶ್ಯತಸ್ತೇ ದ್ವಿಜೋತ್ತಮ।।

ಉತ್ತಂಕನು ಹೇಳಿದನು: “ಬ್ರಹ್ಮನ್! ದ್ವಿಜೋತ್ತಮ! ನಾಗಲೋಕದಿಂದ ಕುಂಡಲಗಳನ್ನು ಪಡೆಯಲು ನನಗೆ ಸಾಧ್ಯವಾಗದಿದ್ದರೆ ನೀನು ನೋಡುತ್ತಿದ್ದಂತೆಯೇ ನನ್ನ ಪ್ರಾಣಗಳನ್ನು ತೊರೆಯುತ್ತೇನೆ!”

14057031a ಯದಾ ಸ ನಾಶಕತ್ತಸ್ಯ ನಿಶ್ಚಯಂ ಕರ್ತುಮನ್ಯಥಾ।
14057031c ವಜ್ರಪಾಣಿಸ್ತದಾ ದಂಡಂ ವಜ್ರಾಸ್ತ್ರೇಣ ಯುಯೋಜ ಹ।।

ಅವನ ನಿಶ್ಚಯವನ್ನು ಬದಲಾಯಿಸಲು ಸಾಧ್ಯವಾಗದಿದ್ದಾಗ ವಜ್ರಪಾಣಿಯು ಆ ಕೋಲಿಗೆ ವಜ್ರಾಸ್ತ್ರವನ್ನು ಸೇರಿಸಿದನು.

14057032a ತತೋ ವಜ್ರಪ್ರಹಾರೈಸ್ತೈರ್ದಾರ್ಯಮಾಣಾ ವಸುಂಧರಾ।
14057032c ನಾಗಲೋಕಸ್ಯ ಪಂಥಾನಮಕರೋಜ್ಜನಮೇಜಯ।।

ಜನಮೇಜಯ! ವಜ್ರಪ್ರಹಾರದಿಂದ ಭೂಮಿಯನ್ನು ಅಗೆದು ಅವನು ನಾಗಲೋಕಕ್ಕೆ ದಾರಿಯನ್ನು ಮಾಡಿದನು.

14057033a ಸ ತೇನ ಮಾರ್ಗೇಣ ತದಾ ನಾಗಲೋಕಂ ವಿವೇಶ ಹ।
14057033c ದದರ್ಶ ನಾಗಲೋಕಂ ಚ ಯೋಜನಾನಿ ಸಹಸ್ರಶಃ।।

ಅವನು ಆ ಮಾರ್ಗದಿಂದ ನಾಗಲೋಕವನ್ನು ಪ್ರವೇಶಿಸಿದನು. ಸಹಸ್ರಾರು ಯೋಜನಗಳ ನಾಗಲೋಕವನ್ನು ಕಂಡನು.

14057034a ಪ್ರಾಕಾರನಿಚಯೈರ್ದಿವ್ಯೈರ್ಮಣಿಮುಕ್ತಾಭ್ಯಲಂಕೃತೈಃ।
14057034c ಉಪಪನ್ನಂ ಮಹಾಭಾಗ ಶಾತಕುಂಭಮಯೈಸ್ತಥಾ।।
14057035a ವಾಪೀಃ ಸ್ಫಟಿಕಸೋಪಾನಾ ನದೀಶ್ಚ ವಿಮಲೋದಕಾಃ।
14057035c ದದರ್ಶ ವೃಕ್ಷಾಂಶ್ಚ ಬಹೂನ್ನಾನಾದ್ವಿಜಗಣಾಯುತಾನ್।।

ಮಹಾಭಾಗ! ಅಲ್ಲಿ ದಿವ್ಯ ಮಣಿ-ಮುತ್ತುಗಳಿಂದ ಅಲಂಕೃತವಾದ ಚಿನ್ನದ ಪ್ರಾಕಾರಗಳನ್ನೂ, ಸ್ಪಟಿಕ ಸೋಪಾನಗಳ ಬಾವಿಗಳನ್ನೂ, ಶುದ್ಧನೀರಿನ ನದಿಗಳನ್ನೂ, ಅನೇಕ ಪಕ್ಷಿಸಂಕುಲಗಳಿಂದ ಕೂಡಿದ್ದ ವೃಕ್ಷಗಳನ್ನೂ ನೋಡಿದನು.

14057036a ತಸ್ಯ ಲೋಕಸ್ಯ ಚ ದ್ವಾರಂ ದದರ್ಶ ಸ ಭೃಗೂದ್ವಹಃ।
14057036c ಪಂಚಯೋಜನವಿಸ್ತಾರಮಾಯತಂ ಶತಯೋಜನಮ್।।

ಆ ಭೃಗೂದ್ವಹನು ಐದು ಯೋಜನ ವಿಸ್ತಾರದ ಮತ್ತು ನೂರು ಯೋಜನ ಉದ್ದವಾಗಿಯೂ ಇದ್ದ ನಾಗಲೋಕದ ದ್ವಾರವನ್ನು ನೋಡಿದನು.

14057037a ನಾಗಲೋಕಮುತ್ತಂಕಸ್ತು ಪ್ರೇಕ್ಷ್ಯ ದೀನೋಽಭವತ್ತದಾ।
14057037c ನಿರಾಶಶ್ಚಾಭವತ್ತಾತ ಕುಂಡಲಾಹರಣೇ ಪುನಃ।।

ಮಗೂ! ಆ ನಾಗಲೋಕವನ್ನು ನೋಡಿ ಉತ್ತಂಕನು ದೀನನಾದನು. ಕುಂಡಲಗಳನ್ನು ಪುನಃ ಪಡೆಯುವುದರ ಕುರಿತು ನಿರಾಶನಾದನು.

14057038a ತತ್ರ ಪ್ರೋವಾಚ ತುರಗಸ್ತಂ ಕೃಷ್ಣಶ್ವೇತವಾಲಧಿಃ।
14057038c ತಾಮ್ರಾಸ್ಯನೇತ್ರಃ ಕೌರವ್ಯ ಪ್ರಜ್ವಲನ್ನಿವ ತೇಜಸಾ।।

ಅಲ್ಲಿ ಒಂದು ಕಪ್ಪು-ಬಿಳಿ ಕೂದಲುಗಳಿದ್ದ ಬಾಲದ, ಕೆಂಪಾದ ಮುಖ-ಕಣ್ಣುಗಳ, ತೇಜಸ್ಸಿನಿಂದ ಪ್ರಜ್ಚಲಿಸುತ್ತಿದ್ದ ಕುದುರೆಯು ಅವನಿಗೆ ಹೇಳಿತು:

14057039a ಧಮಸ್ವಾಪಾನಮೇತನ್ಮೇ ತತಸ್ತ್ವಂ ವಿಪ್ರ ಲಲ್ಪ್ಸ್ಯಸೇ।
14057039c ಐರಾವತಸುತೇನೇಹ ತವಾನೀತೇ ಹಿ ಕುಂಡಲೇ।।

“ವಿಪ್ರ! ನನ್ನ ಅಪಾನಸ್ಥಾನವನ್ನು ಗಟ್ಟಿಯಾಗಿ ಊದು. ಅಗ ನೀನು ಐರಾವತಸುತನು ತೆಗೆದುಕೊಂಡು ಹೋದ ಕುಂಡಲಗಳನ್ನು ಪಡೆಯುತ್ತೀಯೆ.

14057040a ಮಾ ಜುಗುಪ್ಸಾಂ ಕೃಥಾಃ ಪುತ್ರ ತ್ವಮತ್ರಾರ್ಥೇ ಕಥಂ ಚನ।
14057040c ತ್ವಯೈತದ್ಧಿ ಸಮಾಚೀರ್ಣಂ ಗೌತಮಸ್ಯಾಶ್ರಮೇ ತದಾ।।

ಪುತ್ರ! ಇದನ್ನು ಮಾಡುವುದರಲ್ಲಿ ಯಾವುದೇ ರೀತಿಯ ಜಿಗುಪ್ಸೆಯನ್ನೂ ತಾಳಬೇಡ. ಗೌತಮನ ಆಶ್ರಮದಲ್ಲಿದ್ದಾಗ ನೀನು ಹೀಗೆ ಮಾಡಿದ್ದೆ ಎನ್ನುವುದನ್ನು ನೆನಪಿಸಿಕೋ!”

14057041 ಉತ್ತಂಕ ಉವಾಚ
14057041a ಕಥಂ ಭವಂತಂ ಜಾನೀಯಾಮುಪಾಧ್ಯಾಯಾಶ್ರಮಂ ಪ್ರತಿ।
14057041c ಯನ್ಮಯಾ ಚೀರ್ಣಪೂರ್ವಂ ಚ ಶ್ರೋತುಮಿಚ್ಚಾಮಿ ತದ್ಧ್ಯಹಮ್।।

ಉತ್ತಂಕನು ಹೇಳಿದನು: “ಉಪಾಧ್ಯಾಯನ ಆಶ್ರಮದಲ್ಲಿದ್ದಾಗ ಹಿಂದೆ ನಾನು ಹೀಗೆ ಊದಿದ್ದೆನು ಎನ್ನುವುದು ನಿನಗೆ ಹೇಗೆ ತಿಳಿಯಿತು? ಅದನ್ನು ಕೇಳಲು ಬಯಸುತ್ತೇನೆ.”

14057042 ಅಶ್ವ ಉವಾಚ 14057042a ಗುರೋರ್ಗುರುಂ ಮಾಂ ಜಾನೀಹಿ ಜ್ವಲಿತಂ ಜಾತವೇದಸಮ್।
14057042c ತ್ವಯಾ ಹ್ಯಹಂ ಸದಾ ವತ್ಸ ಗುರೋರರ್ಥೇಽಭಿಪೂಜಿತಃ।।

ಕುದುರೆಯು ಹೇಳಿತು: “ವತ್ಸ! ನಿನ್ನ ಗುರುವಿಗೂ ಗುರುವಾದ ಪ್ರಜ್ವಲಿಸುವ ಜಾತವೇದಸನೆಂದು ನನ್ನನ್ನು ತಿಳಿ. ಸದಾ ನೀನು ನನ್ನನ್ನು ಗುರುವಿನ ಸಲುವಾಗಿ ಪೂಜಿಸುತ್ತಿದ್ದೆ.

14057043a ಸತತಂ ಪೂಜಿತೋ ವಿಪ್ರ ಶುಚಿನಾ ಭೃಗುನಂದನ।
14057043c ತಸ್ಮಾಚ್ಚ್ರೇಯೋ ವಿಧಾಸ್ಯಾಮಿ ತವೈವಂ ಕುರು ಮಾ ಚಿರಮ್।।

ವಿಪ್ರ! ಭೃಗುನಂದನ! ಶುಚಿಯಾಗಿದ್ದು ಸತತವೂ ನನ್ನನ್ನು ಪೂಜಿಸುತ್ತಿದ್ದ ನಿನಗೆ ಶ್ರೇಯಸ್ಸನ್ನುಂಟುಮಾಡುತ್ತೇನೆ. ತಡಮಾಡದೇ ನಾನು ಹೇಳಿದ ಹಾಗೆ ಮಾಡು!”

14057044a ಇತ್ಯುಕ್ತಃ ಸ ತಥಾಕಾರ್ಷೀದುತ್ತಂಕಶ್ಚಿತ್ರಭಾನುನಾ।
14057044c ಘೃತಾರ್ಚಿಃ ಪ್ರೀತಿಮಾಂಶ್ಚಾಪಿ ಪ್ರಜಜ್ವಾಲ ದಿಧಕ್ಷಯಾ।।

ಹೀಗೆ ಹೇಳಲು ಉತ್ತಂಕನು ಚಿತ್ರಭಾನುವು ಬಯಸಿದಂತೆಯೇ ಮಾಡಿದನು. ಆಗ ಪ್ರೀತನಾದ ಘೃತಾರ್ಚಿಯು ನಾಗಲೋಕವನ್ನು ಸುಡಲು ಉರಿದು ಪ್ರಜ್ಚಲಿಸಿದನು.

14057045a ತತೋಽಸ್ಯ ರೋಮಕೂಪೇಭ್ಯೋ ಧ್ಮಾಯಮಾನಸ್ಯ ಭಾರತ।
14057045c ಘನಃ ಪ್ರಾದುರಭೂದ್ಧೂಮೋ ನಾಗಲೋಕಭಯಾವಹಃ।।

ಭಾರತ! ಅವನು ಊದುತ್ತಿದ್ದಂತೆಯೇ ಕುದುರೆಯ ರೋಮಕೂಪಗಳಿಂದ ದಟ್ಟವಾದ ಹೊಗೆಯು ಹೊರಹೊಮ್ಮಿ, ನಾಗಲೋಕಕ್ಕೇ ಭಯವನ್ನುಂಟುಮಾಡಿತು.

14057046a ತೇನ ಧೂಮೇನ ಸಹಸಾ ವರ್ಧಮಾನೇನ ಭಾರತ।
14057046c ನಾಗಲೋಕೇ ಮಹಾರಾಜ ನ ಪ್ರಜ್ಞಾಯತ ಕಿಂ ಚನ।।

ಭಾರತ! ಮಹಾರಾಜ! ಕ್ಷಣ-ಕ್ಷಣಕ್ಕೂ ಹೆಚ್ಚಾಗುತ್ತಿದ್ದ ಆ ಹೊಗೆಯಿಂದ ನಾಗಲೋಕದಲ್ಲಿ ಏನೂ ಕಾಣದಂತಾಯಿತು.

14057047a ಹಾಹಾಕೃತಮಭೂತ್ಸರ್ವಮೈರಾವತನಿವೇಶನಮ್।
14057047c ವಾಸುಕಿಪ್ರಮುಖಾನಾಂ ಚ ನಾಗಾನಾಂ ಜನಮೇಜಯ।।

ಜನಮೇಜಯ! ಐರಾವತನ ಅರಮನೆಯಲ್ಲಿದ್ದ ವಾಸುಕಿಯೇ ಮೊದಲಾದ ನಾಗಗಳೆಲ್ಲರಲ್ಲಿ ಹಾಹಾಕಾರವುಂಟಾಯಿತು.

14057048a ನ ಪ್ರಕಾಶಂತ ವೇಶ್ಮಾನಿ ಧೂಮರುದ್ಧಾನಿ ಭಾರತ।
14057048c ನೀಹಾರಸಂವೃತಾನೀವ ವನಾನಿ ಗಿರಯಸ್ತಥಾ।।

ಭಾರತ! ಹೊಗೆಯಿಂದ ಆವೃತವಾದ ಅರಮನೆಗಳು ಮಂಜಿನಿಂದ ಮುಚ್ಚಲ್ಪಟ್ಟ ವನ-ಗಿರಿಗಳಂತೆ ಕಳಾಹೀನವಾದವು.

14057049a ತೇ ಧೂಮರಕ್ತನಯನಾ ವಹ್ನಿತೇಜೋಭಿತಾಪಿತಾಃ।
14057049c ಆಜಗ್ಮುರ್ನಿಶ್ಚಯಂ ಜ್ಞಾತುಂ ಭಾರ್ಗವಸ್ಯಾತಿತೇಜಸಃ।।

ಹೊಗೆತುಂಬಿ ಕೆಂಪಾಗಿದ್ದ ಕಣ್ಣುಗಳ ಮತ್ತು ಬೆಂಕಿಯ ಬಿಸಿಯಿಂದ ಪರಿತಪಿಸುತ್ತಿದ್ದ ಅವರು ಅತಿತೇಜಸ್ವಿ ಭಾರ್ಗವನ ನಿಶ್ಚಯವೇನೆಂದು ತಿಳಿಯಲು ಅವನ ಬಳಿ ಬಂದರು.

14057050a ಶ್ರುತ್ವಾ ಚ ನಿಶ್ಚಯಂ ತಸ್ಯ ಮಹರ್ಷೇಸ್ತಿಗ್ಮತೇಜಸಃ।
14057050c ಸಂಭ್ರಾಂತಮನಸಃ ಸರ್ವೇ ಪೂಜಾಂ ಚಕ್ರುರ್ಯಥಾವಿಧಿ।।

ಆ ಉಗ್ರ ತೇಜಸ್ವೀ ಮಹರ್ಷಿಯ ನಿಶ್ಚಯವನ್ನು ಕೇಳಿ ಸಂಭ್ರಾಂತಮನಸ್ಕರಾದ ಅವರೆಲ್ಲರೂ ಅವನನ್ನು ಯಥಾವಿಧಿಯಾಗಿ ಪೂಜಿಸಿದರು.

14057051a ಸರ್ವೇ ಪ್ರಾಂಜಲಯೋ ನಾಗಾ ವೃದ್ಧಬಾಲಪುರೋಗಮಾಃ।
14057051c ಶಿರೋಭಿಃ ಪ್ರಣಿಪತ್ಯೋಚುಃ ಪ್ರಸೀದ ಭಗವನ್ನಿತಿ।।

“ಭಗವನ್! ಕರುಣಿಸು!” ಎಂದು ವೃದ್ಧ-ಬಾಲರಿಂದ ಹಿಡಿದು ಎಲ್ಲ ನಾಗಗಳೂ ಕೈಮುಗಿದು ತಲೆಬಾಗಿ ಕೇಳಿಕೊಂಡವು.

14057052a ಪ್ರಸಾದ್ಯ ಬ್ರಾಹ್ಮಣಂ ತೇ ತು ಪಾದ್ಯಮರ್ಘ್ಯಂ ನಿವೇದ್ಯ ಚ।
14057052c ಪ್ರಾಯಚ್ಚನ್ಕುಂಡಲೇ ದಿವ್ಯೇ ಪನ್ನಗಾಃ ಪರಮಾರ್ಚಿತೇ।।

ಪಾದ್ಯ-ಅರ್ಘ್ಯ-ನೈವೇದ್ಯಗಳಿಂದ ಬ್ರಾಹ್ಮಣನನ್ನು ತೃಪ್ತಿಗೊಳಿಸಿ ಪನ್ನಗಗಳು ಆ ಪರಮಾರ್ಚಿತ ದಿವ್ಯ ಕುಂಡಲಗಳನ್ನು ಅವನಿಗೆ ಒಪ್ಪಿಸಿದವು.

14057053a ತತಃ ಸಂಪೂಜಿತೋ ನಾಗೈಸ್ತತ್ರೋತ್ತಂಕಃ ಪ್ರತಾಪವಾನ್।
14057053c ಅಗ್ನಿಂ ಪ್ರದಕ್ಷಿಣಂ ಕೃತ್ವಾ ಜಗಾಮ ಗುರುಸದ್ಮ ತತ್।।

ನಾಗಗಳಿಂದ ಪೂಜಿತನಾದ ಪ್ರತಾಪವಾನ್ ಉತ್ತಂಕನು ಅಗ್ನಿಗೆ ಪ್ರದಕ್ಷಿಣೆ ಮಾಡಿ ಗುರುಗೃಹಕ್ಕೆ ಹೋದನು.

14057054a ಸ ಗತ್ವಾ ತ್ವರಿತೋ ರಾಜನ್ಗೌತಮಸ್ಯ ನಿವೇಶನಮ್।
14057054c ಪ್ರಾಯಚ್ಚತ್ಕುಂಡಲೇ ದಿವ್ಯೇ ಗುರುಪತ್ನ್ಯೈ ತದಾನಘ।।

ರಾಜನ್! ಅನಘ! ತ್ವರೆಮಾಡಿ ಗೌತಮನ ಆಶ್ರಮಕ್ಕೆ ಹೋಗಿ ಅವನು ಆ ದಿವ್ಯ ಕುಂಡಲಗಳನ್ನು ಗುರುಪತ್ನಿಗೆ ನೀಡಿದನು.

14057055a ಏವಂ ಮಹಾತ್ಮನಾ ತೇನ ತ್ರೀಽಲ್ಲೋಕಾನ್ಜನಮೇಜಯ।
14057055c ಪರಿಕ್ರಮ್ಯಾಹೃತೇ ದಿವ್ಯೇ ತತಸ್ತೇ ಮಣಿಕುಂಡಲೇ।।

ಜನಮೇಜಯ! ಹೀಗೆ ಆ ಮಹಾತ್ಮನು ಮೂರುಲೋಕಗಳನ್ನೂ ಸಂಚರಿಸಿ ದಿವ್ಯ ಮಣಿಕುಂಡಲಗಳನ್ನು ತಂದನು.

14057056a ಏವಂಪ್ರಭಾವಃ ಸ ಮುನಿರುತ್ತಂಕೋ ಭರತರ್ಷಭ।
14057056c ಪರೇಣ ತಪಸಾ ಯುಕ್ತೋ ಯನ್ಮಾಂ ತ್ವಂ ಪರಿಪೃಚ್ಚಸಿ।।

ಭರತರ್ಷಭ! ನೀನು ಕೇಳಿದ ಆ ಪರಮ ತಪಸ್ಸಿನಿಂದ ಯುಕ್ತನಾಗಿದ್ದ ಉತ್ತಂಕನು ಇಷ್ಟು ಪ್ರಭಾವಶಾಲಿಯಾಗಿದ್ದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತಂಕೋಪಾಖ್ಯಾನೇ ಸಪ್ತಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತಂಕೋಪಾಖ್ಯಾನ ಎನ್ನುವ ಐವತ್ತೇಳನೇ ಅಧ್ಯಾಯವು.