ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 56
ಸಾರ
ಗುರುದಕ್ಷಿಣೆಯನ್ನು ಕೊಟ್ಟು ಹಿಂದಿರುಗಿ ಬರುತ್ತೇನೆಂದು ಸೌದಾಸನಿಗೆ ಹೇಳಿ ಉತ್ತಂಕನು ಸೌದಾಸನ ಪತ್ನಿ ಮದಯಂತಿಯ ಬಳಿ ಹೋದುದು (1-18). ಮದಯಂತಿಯು ಕುಂಡಲಗಳ ಮಹಾತ್ಮೆಯನ್ನು ವರ್ಣಿಸಿ, ಸೌದಾಸನಿಂದ ಏನಾದರೂ ಕುರುಹನ್ನು ತಾ ಎಂದು ಉತ್ತಂಕನಿಗೆ ಹೇಳಿದುದು (19-28).
14056001 ವೈಶಂಪಾಯನ ಉವಾಚ
14056001a ಸ ತಂ ದೃಷ್ಟ್ವಾ ತಥಾಭೂತಂ ರಾಜಾನಂ ಘೋರದರ್ಶನಮ್।
14056001c ದೀರ್ಘಶ್ಮಶ್ರುಧರಂ ನೄಣಾಂ ಶೋಣಿತೇನ ಸಮುಕ್ಷಿತಮ್।।
14056002a ಚಕಾರ ನ ವ್ಯಥಾಂ ವಿಪ್ರೋ ರಾಜಾ ತ್ವೇನಮಥಾಬ್ರವೀತ್।
14056002c ಪ್ರತ್ಯುತ್ಥಾಯ ಮಹಾತೇಜಾ ಭಯಕರ್ತಾ ಯಮೋಪಮಃ।।
ವೈಶಂಪಾಯನನು ಹೇಳಿದನು: “ಮಹಾಭಯಂಕರನಾಗಿ ಕಾಣುತ್ತಿದ್ದ, ದೀರ್ಘವಾದ ಗಡ್ಡ-ಮೀಸೆಗಳನ್ನು ಬೆಳೆಸಿದ್ದ, ಮನುಷ್ಯರ ರಕ್ತದಿಂದ ತೋಯ್ದುಯೋಗಿದ್ದ ಆ ರಾಜನನ್ನು ಕಂಡು ವಿಪ್ರ ಉತ್ತಂಕನು ವ್ಯಥೆಪಡಲಿಲ್ಲ. ಯಮನಂತೆ ಭಯಂಕರನಾಗಿದ್ದ ರಾಜನು ಮಹಾತೇಜಸ್ವಿ ಉತ್ತಂಕನ ಎದಿರುಬಂದು ಹೀಗೆ ಹೇಳಿದನು:
14056003a ದಿಷ್ಟ್ಯಾ ತ್ವಮಸಿ ಕಲ್ಯಾಣ ಷಷ್ಠೇ ಕಾಲೇ ಮಮಾಂತಿಕಮ್।
14056003c ಭಕ್ಷಂ ಮೃಗಯಮಾಣಸ್ಯ ಸಂಪ್ರಾಪ್ತೋ ದ್ವಿಜಸತ್ತಮ।।
“ಕಲ್ಯಾಣ! ದ್ವಿಜಸತ್ತಮ! ದಿನದ ಆರನೆಯ ಭಾಗದಲ್ಲಿ ಸೌಭಾಗ್ಯವಶದಿಂದಲೇ ನೀನು ನನ್ನ ಬಳಿ ಬಂದಿದ್ದೀಯೆ! ನಾನು ಆಹಾರವನ್ನು ಹುಡುಕುತ್ತಿರುವಾಗಲೇ ನೀನು ನನಗೆ ದೊರಕಿರುವೆ!”
14056004 ಉತ್ತಂಕ ಉವಾಚ
14056004a ರಾಜನ್ಗುರ್ವರ್ಥಿನಂ ವಿದ್ಧಿ ಚರಂತಂ ಮಾಮಿಹಾಗತಮ್।
14056004c ನ ಚ ಗುರ್ವರ್ಥಮುದ್ಯುಕ್ತಂ ಹಿಂಸ್ಯಮಾಹುರ್ಮನೀಷಿಣಃ।।
ಉತ್ತಂಕನು ಹೇಳಿದನು: “ರಾಜನ್! ಗುರುದಕ್ಷಿಣೆಗಾಗಿ ತಿರುಗಾಡುತ್ತಾ ನಾನು ಇಲ್ಲಿಗೆ ಬಂದಿರುವೆನೆಂದು ತಿಳಿ! ಗುರುದಕ್ಷಿಣೆಯನ್ನು ಸಂಗ್ರಹಿಸಲು ತೊಡಗಿರುವವರನ್ನು ಹಿಂಸಿಸಬಾರದು ಎಂದು ತಿಳಿದವರು ಹೇಳುತ್ತಾರೆ!”
14056005 ರಾಜೋವಾಚ
14056005a ಷಷ್ಠೇ ಕಾಲೇ ಮಮಾಹಾರೋ ವಿಹಿತೋ ದ್ವಿಜಸತ್ತಮ।
14056005c ನ ಚ ಶಕ್ಯಃ ಸಮುತ್ಸ್ರಷ್ಟುಂ ಕ್ಷುಧಿತೇನ ಮಯಾದ್ಯ ವೈ।।
ರಾಜನು ಹೇಳಿದನು: “ದ್ವಿಜಸತ್ತಮ! ದಿನದ ಆರನೆಯ ಪ್ರಹರದಲ್ಲಿ ನನಗೆ ಆಹಾರವು ವಿಹಿತವಾಗಿದೆ. ಇಂದು ನನ್ನ ಹಸಿವೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ!”
14056006 ಉತ್ತಂಕ ಉವಾಚ
14056006a ಏವಮಸ್ತು ಮಹಾರಾಜ ಸಮಯಃ ಕ್ರಿಯತಾಂ ತು ಮೇ।
14056006c ಗುರ್ವರ್ಥಮಭಿನಿರ್ವರ್ತ್ಯ ಪುನರೇಷ್ಯಾಮಿ ತೇ ವಶಮ್।।
ಉತ್ತಂಕನು ಹೇಳಿದನು: “ಮಹಾರಾಜ! ಹಾಗಿದ್ದರೆ ನಾವಿಬ್ಬರೂ ಒಂದು ಒಪ್ಪಂದವನ್ನು ಮಾಡಿಕೊಳ್ಳೋಣ! ಗುರುದಕ್ಷಿಣೆಯನ್ನು ಕೊಟ್ಟು ಪುನಃ ನಿನ್ನ ವಶದಲ್ಲಿ ಬರುತ್ತೇನೆ.
14056007a ಸಂಶ್ರುತಶ್ಚ ಮಯಾ ಯೋಽರ್ಥೋ ಗುರವೇ ರಾಜಸತ್ತಮ।
14056007c ತ್ವದಧೀನಃ ಸ ರಾಜೇಂದ್ರ ತಂ ತ್ವಾ ಭಿಕ್ಷೇ ನರೇಶ್ವರ।।
ರಾಜಸತ್ತಮ! ನರೇಶ್ವರ! ಗುರುದಕ್ಷಿಣೆಯಾಗಿ ಏನನ್ನು ತರುವೆನೆಂದು ಹೇಳಿಕೊಂಡಿದ್ದೆನೋ ಅದು ನಿನ್ನ ಅಧೀನದಲ್ಲಿಯೇ ಇದೆ. ರಾಜೇಂದ್ರ! ಅದನ್ನು ನನಗೆ ಭಿಕ್ಷೆಯಾಗಿ ನೀಡು!
14056008a ದದಾಸಿ ವಿಪ್ರಮುಖ್ಯೇಭ್ಯಸ್ತ್ವಂ ಹಿ ರತ್ನಾನಿ ಸರ್ವಶಃ।
14056008c ದಾತಾ ತ್ವಂ ಚ ನರವ್ಯಾಘ್ರ ಪಾತ್ರಭೂತಃ ಕ್ಷಿತಾವಿಹ।
14056008e ಪಾತ್ರಂ ಪ್ರತಿಗ್ರಹೇ ಚಾಪಿ ವಿದ್ಧಿ ಮಾಂ ನೃಪಸತ್ತಮ।।
ನೀನು ವಿಪ್ರಮುಖ್ಯರಿಗೆ ಎಲ್ಲ ರತ್ನಗಳನ್ನೂ ದಾನಮಾಡಿರುವೆ! ನರವ್ಯಾಘ್ರ! ನೀನೊಬ್ಬ ದಾನಿಯೆಂದು ಭೂಮಿಯಲ್ಲಿ ಖ್ಯಾತನಾಗಿರುವೆ. ನೃಪಸತ್ತಮ! ನಾನೂ ಕೂಡ ದಾನಕ್ಕೆ ಪಾತ್ರನೆಂದು ತಿಳಿದುಕೋ!
14056009a ಉಪಾಕೃತ್ಯ ಗುರೋರರ್ಥಂ ತ್ವದಾಯತ್ತಮರಿಂದಮ।
14056009c ಸಮಯೇನೇಹ ರಾಜೇಂದ್ರ ಪುನರೇಷ್ಯಾಮಿ ತೇ ವಶಮ್।।
ಅರಿಂದಮ! ರಾಜೇಂದ್ರ! ನಿನ್ನಲ್ಲಿರುವ ಗುರುದಕ್ಷಿಣೆಯನ್ನು ಕೊಟ್ಟು ಒಪ್ಪಂದದಂತೆ ಪುನಃ ನಿನ್ನ ವಶದಲ್ಲಿ ಬರುತ್ತೇನೆ!
14056010a ಸತ್ಯಂ ತೇ ಪ್ರತಿಜಾನಾಮಿ ನಾತ್ರ ಮಿಥ್ಯಾಸ್ತಿ ಕಿಂ ಚನ।
14056010c ಅನೃತಂ ನೋಕ್ತಪೂರ್ವಂ ಮೇ ಸ್ವೈರೇಷ್ವಪಿ ಕುತೋಽನ್ಯಥಾ।।
ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಇದರಲ್ಲಿ ಸ್ವಲ್ಪವೂ ಸುಳ್ಳಿಲ್ಲ. ವಿನೋದಕ್ಕಾಗಿಯೂ ನಾನು ಈ ಹಿಂದೆ ಸುಳ್ಳನ್ನು ಹೇಳಿಲ್ಲ. ಈಗ ಹೇಗೆ ಅನ್ಯಥಾ ನಡೆದುಕೊಳ್ಳುತ್ತೇನೆ?”
14056011 ಸೌದಾಸ ಉವಾಚ
14056011a ಯದಿ ಮತ್ತಸ್ತ್ವದಾಯತ್ತೋ ಗುರ್ವರ್ಥಃ ಕೃತ ಏವ ಸಃ।
14056011c ಯದಿ ಚಾಸ್ಮಿ ಪ್ರತಿಗ್ರಾಹ್ಯಃ ಸಾಂಪ್ರತಂ ತದ್ಬ್ರವೀಹಿ ಮೇ।।
ಸೌದಾಸನು ಹೇಳಿದನು: “ಗುರುದಕ್ಷಿಣೆಗಾಗಿ ಬೇಕಾಗಿದ್ದುದು ನನ್ನ ಸ್ವತ್ತೇ ಆಗಿದ್ದರೆ ಅದು ನಿನಗೆ ದೊರಕಿದಂತೆಯೇ ಎಂದು ತಿಳಿ. ಆದರೆ ಈಗ ನಾನು ದಾನನೀಡಲು ಅರ್ಹನಾಗಿದ್ದೇನೆಯೇ ಎನ್ನುವುದನ್ನು ಮೊದಲು ಹೇಳು!”
14056012 ಉತ್ತಂಕ ಉವಾಚ
14056012a ಪ್ರತಿಗ್ರಾಹ್ಯೋ ಮತೋ ಮೇ ತ್ವಂ ಸದೈವ ಪುರುಷರ್ಷಭ।
14056012c ಸೋಽಹಂ ತ್ವಾಮನುಸಂಪ್ರಾಪ್ತೋ ಭಿಕ್ಷಿತುಂ ಮಣಿಕುಂಡಲೇ।।
ಉತ್ತಂಕನು ಹೇಳಿದನು: “ಪುರುಷರ್ಷಭ! ನೀನು ಸದೈವ ದಾನಿಯೆಂದು ಎನಿಸಿಕೊಳ್ಳಲು ಯೋಗ್ಯನಾಗಿದ್ದೀಯೆ ಎಂದು ನನಗನ್ನಿಸುತ್ತದೆ. ಅದಕ್ಕಾಗಿಯೇ ನಾನು ಆ ಮಣಿಕುಂಡಲಗಳನ್ನು ಯಾಚಿಸಲು ನಿನ್ನ ಬಳಿ ಬಂದಿದ್ದೇನೆ.”
14056013 ಸೌದಾಸ ಉವಾಚ
14056013a ಪತ್ನ್ಯಾಸ್ತೇ ಮಮ ವಿಪ್ರರ್ಷೇ ರುಚಿರೇ ಮಣಿಕುಂಡಲೇ।
14056013c ವರಯಾರ್ಥಂ ತ್ವಮನ್ಯಂ ವೈ ತಂ ತೇ ದಾಸ್ಯಾಮಿ ಸುವ್ರತ।।
ಸೌದಾಸನು ಹೇಳಿದನು: “ವಿಪ್ರರ್ಷೇ! ಸುವ್ರತ! ಆ ಮಣಿಕುಂಡಲಗಳು ನನ್ನ ಪತ್ನಿಯಲ್ಲಿಯೇ ಸುಂದರವಾಗಿ ಕಾಣುತ್ತಿವೆ. ನೀನು ವರವಾಗಿ ಬೇರೆ ಏನನ್ನಾದರೂ ಕೇಳು. ಕೊಡುತ್ತೇನೆ!”
14056014 ಉತ್ತಂಕ ಉವಾಚ
14056014a ಅಲಂ ತೇ ವ್ಯಪದೇಶೇನ ಪ್ರಮಾಣಂ ಯದಿ ತೇ ವಯಮ್।
14056014c ಪ್ರಯಚ್ಚ ಕುಂಡಲೇ ಮೇ ತ್ವಂ ಸತ್ಯವಾಗ್ಭವ ಪಾರ್ಥಿವ।।
ಉತ್ತಂಕನು ಹೇಳಿದನು: “ಪಾರ್ಥಿವ! ನೆಪಗಳನ್ನು ಸಾಕುಮಾಡು! ನನ್ನ ಮೇಲೆ ನಿನಗೆ ನಂಬಿಕೆಯಿದ್ದರೆ ನಾನು ಕೇಳುವ ಕುಂಡಲಗಳನ್ನು ನನಗಿತ್ತು ಸತ್ಯವಾದಿಯಾಗು!””
14056015 ವೈಶಂಪಾಯನ ಉವಾಚ
14056015a ಇತ್ಯುಕ್ತಸ್ತ್ವಬ್ರವೀದ್ರಾಜಾ ತಮುತ್ತಂಕಂ ಪುನರ್ವಚಃ।
14056015c ಗಚ್ಚ ಮದ್ವಚನಾದ್ದೇವೀಂ ಬ್ರೂಹಿ ದೇಹೀತಿ ಸತ್ತಮ।।
ವೈಶಂಪಾಯನನು ಹೇಳಿದನು: “ಇದನ್ನು ಕೇಳಿ ರಾಜನು ಪುನಃ ಉತ್ತಂಕನಿಗೆ ಹೇಳಿದನು: “ಸತ್ತಮ! ಹೋಗು! ನನ್ನ ವಚನದಂತೆ ಹೋಗಿ ದೇವಿಗೆ ಕೊಡು ಎಂದು ಹೇಳು.
14056016a ಸೈವಮುಕ್ತಾ ತ್ವಯಾ ನೂನಂ ಮದ್ವಾಕ್ಯೇನ ಶುಚಿಸ್ಮಿತಾ।
14056016c ಪ್ರದಾಸ್ಯತಿ ದ್ವಿಜಶ್ರೇಷ್ಠ ಕುಂಡಲೇ ತೇ ನ ಸಂಶಯಃ।।
ದ್ವಿಜಶ್ರೇಷ್ಠ! ನೀನು ಹಾಗೆ ಹೇಳಿದರೆ ನನ್ನ ಮಾತಿನಂತೆ ಆ ಶುಚಿಸ್ಮಿತೆಯು ನಿನಗೆ ಕುಂಡಲಗಳನ್ನು ಕೊಡುವಳು. ಅದರಲ್ಲಿ ಸಂಶಯವಿಲ್ಲ!”
14056017 ಉತ್ತಂಕ ಉವಾಚ
14056017a ಕ್ವ ಪತ್ನೀ ಭವತಃ ಶಕ್ಯಾ ಮಯಾ ದ್ರಷ್ಟುಂ ನರೇಶ್ವರ।
14056017c ಸ್ವಯಂ ವಾಪಿ ಭವಾನ್ಪತ್ನೀಂ ಕಿಮರ್ಥಂ ನೋಪಸರ್ಪತಿ।।
ಉತ್ತಂಕನು ಹೇಳಿದನು: “ನರೇಶ್ವರ! ನಿನ್ನ ಪತ್ನಿಯನ್ನು ನಾನು ಎಲ್ಲಿ ನೋಡಲು ಸಾಧ್ಯ? ಸ್ವಯಂ ನೀನೇ ನಿನ್ನ ಪತ್ನಿಯ ಬಳಿ ಏಕೆ ಹೋಗುವುದಿಲ್ಲ?”
14056018 ಸೌದಾಸ ಉವಾಚ
14056018a ದ್ರಕ್ಷ್ಯತೇ ತಾಂ ಭವಾನದ್ಯ ಕಸ್ಮಿಂಶ್ಚಿದ್ವನನಿರ್ಝರೇ।
14056018c ಷಷ್ಠೇ ಕಾಲೇ ನ ಹಿ ಮಯಾ ಸಾ ಶಕ್ಯಾ ದ್ರಷ್ಟುಮದ್ಯ ವೈ।।
ಸೌದಾಸನು ಹೇಳಿದನು: “ನೀನು ಇಂದು ಅವಳನ್ನು ವನದಲ್ಲಿ ಒಂದು ಚಿಲುಮೆಯ ಬಳಿ ನೋಡಬಲ್ಲೆ. ದಿನದ ಆರನೆಯ ಘಳಿಗೆಯಾದುದರಿಂದ ಈಗ ನಾನು ಅವಳನ್ನು ನೋಡಲು ಶಕ್ಯವಿಲ್ಲ.”
14056019a ಉತ್ತಂಕಸ್ತು ತಥೋಕ್ತಃ ಸ ಜಗಾಮ ಭರತರ್ಷಭ।
14056019c ಮದಯಂತೀಂ ಚ ದೃಷ್ಟ್ವಾ ಸೋಽಜ್ಞಾಪಯತ್ಸ್ವಂ ಪ್ರಯೋಜನಮ್।।
ಭರತರ್ಷಭ! ಉತ್ತಂಕನಾದರೋ ಹಾಗೆಯೇ ಆಗಲೆಂದು ಹೇಳಿ ಹೋದನು. ಮದಯಂತಿಯನ್ನು ನೋಡಿ ಅವಳಿಗೆ ತನ್ನ ಆಗಮನದ ಕಾರಣವನ್ನು ತಿಳಿಸಿದನು.
14056020a ಸೌದಾಸವಚನಂ ಶ್ರುತ್ವಾ ತತಃ ಸಾ ಪೃಥುಲೋಚನಾ।
14056020c ಪ್ರತ್ಯುವಾಚ ಮಹಾಬುದ್ಧಿಮುತ್ತಂಕಂ ಜನಮೇಜಯ।।
ಜನಮೇಜಯ! ಸೌದಾಸನ ವಚನವನ್ನು ಕೇಳಿ ಆ ಪೃಥುಲೋಚನೆಯು ಮಹಾಬುದ್ಧಿ ಉತ್ತಂಕನಿಗೆ ಉತ್ತರಿಸಿದಳು:
14056021a ಏವಮೇತನ್ಮಹಾಬ್ರಹ್ಮನ್ನಾನೃತಂ ವದಸೇಽನಘ।
14056021c ಅಭಿಜ್ಞಾನಂ ತು ಕಿಂ ಚಿತ್ತ್ವಂ ಸಮಾನೇತುಮಿಹಾರ್ಹಸಿ।।
“ಮಹಾಬ್ರಹ್ಮನ್! ನೀನು ಹೇಳಿದಂತೆಯೇ ಆಗಲಿ! ಅನಘ! ನೀನು ಸುಳ್ಳನ್ನಾಡುತ್ತಿಲ್ಲ. ಆದರೂ ಅವನಿಂದ ಏನಾದರೂ ಒಂದು ಗುರುತನ್ನು ತರಬೇಕು!
14056022a ಇಮೇ ಹಿ ದಿವ್ಯೇ ಮಣಿಕುಂಡಲೇ ಮೇ ದೇವಾಶ್ಚ ಯಕ್ಷಾಶ್ಚ ಮಹೋರಗಾಶ್ಚ।
14056022c ತೈಸ್ತೈರುಪಾಯೈಃ ಪರಿಹರ್ತುಕಾಮಾಶ್ ಚಿದ್ರೇಷು ನಿತ್ಯಂ ಪರಿತರ್ಕಯಂತಿ।।
ಈ ನನ್ನ ದಿವ್ಯ ಮಣಿಕುಂಡಲಗಳನ್ನು ಅಪಹರಿಸಲು ಬಯಸಿ ದೇವತೆಗಳು, ಯಕ್ಷರು, ಮತ್ತು ಮಹಾ ಉರಗರು ಪ್ರಯತ್ನಿಸುತ್ತಲೇ ಇರುತ್ತಾರೆ. ನಿತ್ಯವೂ ನನ್ನಲ್ಲಿ ದೋಷವನ್ನು ಕಂಡುಹಿಡಿಯುವುದರಲ್ಲಿ ನಿರತರಾಗಿರುತ್ತಾರೆ.
14056023a ನಿಕ್ಷಿಪ್ತಮೇತದ್ಭುವಿ ಪನ್ನಗಾಸ್ತು ರತ್ನಂ ಸಮಾಸಾದ್ಯ ಪರಾಮೃಷೇಯುಃ।
14056023c ಯಕ್ಷಾಸ್ತಥೋಚ್ಚಿಷ್ಟಧೃತಂ ಸುರಾಶ್ಚ ನಿದ್ರಾವಶಂ ತ್ವಾ ಪರಿಧರ್ಷಯೇಯುಃ।।
ಈ ರತ್ನವನ್ನು ಭೂಮಿಯ ಮೇಲೆ ಇಟ್ಟುಬಿಟ್ಟರೆ ಪನ್ನಗಗಳು ಇವನ್ನು ಅಪಹರಿಸಿಬಿಡುತ್ತವೆ. ಅಶುಚಿಯಾಗಿ ಇವುಗಳನ್ನು ಧರಿಸಿದರೆ ಅಥವಾ ಇವನ್ನು ಧರಿಸಿ ನಿದ್ರೆಮಾಡಿದರೆ ದೇವತೆಗಳೂ ಯಕ್ಷರೂ ಬಲಾತ್ಕಾರವಾಗಿ ಇವನ್ನು ಎತ್ತಿಕೊಂಡು ಹೋಗುತ್ತಾರೆ.
14056024a ಚಿದ್ರೇಷ್ವೇತೇಷು ಹಿ ಸದಾ ಹ್ಯಧೃಷ್ಯೇಷು ದ್ವಿಜರ್ಷಭ।
14056024c ದೇವರಾಕ್ಷಸನಾಗಾನಾಮಪ್ರಮತ್ತೇನ ಧಾರ್ಯತೇ।।
ದ್ವಿಜರ್ಷಭ! ಈ ದೋಷಗಳಾದರೆ ಇವುಗಳನ್ನು ಸದಾ ದೇವ-ರಾಕ್ಷಸ-ನಾಗರು ಅಪಹರಿಸಿಕೊಂಡು ಹೋಗುತ್ತಾರೆ. ಆದುದರಿಂದ ಇದನ್ನು ಜಾಗರೂಕತೆಯಿಂದ ಧರಿಸಿಕೊಂಡಿರಬೇಕಾಗುತ್ತದೆ.
14056025a ಸ್ಯಂದೇತೇ ಹಿ ದಿವಾ ರುಕ್ಮಂ ರಾತ್ರೌ ಚ ದ್ವಿಜಸತ್ತಮ।
14056025c ನಕ್ತಂ ನಕ್ಷತ್ರತಾರಾಣಾಂ ಪ್ರಭಾಮಾಕ್ಷಿಪ್ಯ ವರ್ತತೇ।।
ದ್ವಿಜಸತ್ತಮ! ಇವು ಹಗಲು-ರಾತ್ರಿ ಚಿನ್ನವನ್ನು ಸುರಿಸುತ್ತವೆ. ರಾತ್ರಿ ಇವು ನಕ್ಷತ್ರ-ತಾರೆಗಳ ಪ್ರಭೆಯನ್ನೂ ಮುಸುಕುಗೊಳಿಸುತ್ತವೆ.
14056026a ಏತೇ ಹ್ಯಾಮುಚ್ಯ ಭಗವನ್ ಕ್ಷುತ್ಪಿಪಾಸಾಭಯಂ ಕುತಃ।
14056026c ವಿಷಾಗ್ನಿಶ್ವಾಪದೇಭ್ಯಶ್ಚ ಭಯಂ ಜಾತು ನ ವಿದ್ಯತೇ।।
ಭಗವನ್! ಇವುಗಳನ್ನು ಧರಿಸಿದವರಿಗೆ ಹಸಿವು-ಬಾಯಾರಿಕೆಗಳು ಎಲ್ಲಿಂದ? ಇದನ್ನು ಧರಿಸಿದವರಿಗೆ ವಿಷ-ಅಗ್ನಿ-ಕ್ರೂರ ಮೃಗಗಳಿಂದ ಭಯವೇ ಇರುವುದಿಲ್ಲ.
14056027a ಹ್ರಸ್ವೇನ ಚೈತೇ ಆಮುಕ್ತೇ ಭವತೋ ಹ್ರಸ್ವಕೇ ತದಾ।
14056027c ಅನುರೂಪೇಣ ಚಾಮುಕ್ತೇ ತತ್ಪ್ರಮಾಣೇ ಹಿ ಜಾಯತಃ।।
ಸಣ್ಣ ದೇಹದವರು ಇದನ್ನು ಧರಿಸಿದರೆ ಇದು ಸಣ್ಣದಾಗುತ್ತದೆ. ದೇಹದ ಗಾತ್ರಕ್ಕೆ ಅನುಗುಣವಾಗಿ ಈ ಕುಂಡಲಗಳು ಹಿಗ್ಗುತ್ತವೆ ಅಥವಾ ಕುಗ್ಗುತ್ತವೆ.
14056028a ಏವಂವಿಧೇ ಮಮೈತೇ ವೈ ಕುಂಡಲೇ ಪರಮಾರ್ಚಿತೇ।
14056028c ತ್ರಿಷು ಲೋಕೇಷು ವಿಖ್ಯಾತೇ ತದಭಿಜ್ಞಾನಮಾನಯ।।
ಮೂರು ಲೋಕಗಳಲ್ಲಿಯೂ ವಿಖ್ಯಾತವಾಗಿರುವ ಮತ್ತು ನನ್ನಿಂದ ಪರಮ ಪೂಜೆಗೊಂಡಿರುವ ಈ ಕುಂಡಲಗಳು ಈ ರೀತಿ ಇವೆ. ಈಗ ನೀನು ಸೌದಾಸನಿಂದ ಏನಾದರೂ ಗುರುತನ್ನು ತೆಗೆದುಕೊಂಡು ಬಾ!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತಂಕೋಪಾಖ್ಯಾನೇ ಷಟ್ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತಂಕೋಪಾಖ್ಯಾನ ಎನ್ನುವ ಐವತ್ತಾರನೇ ಅಧ್ಯಾಯವು.