ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 55
ಸಾರ
ಉತ್ತಂಕನು ಗುರುಶುಶ್ರೂಷೆಯಿಂದ ಪಡೆದುಕೊಂಡಿದ್ದ ತಪಃಶಕ್ತಿಯ ವರ್ಣನೆ (1-13). ಉತ್ತಂಕನ ಗುರುಪತ್ನಿ ಅಹಲ್ಯೆಯು ಗುರುದಕ್ಷಿಣೆಯಾಗಿ ಸೌದಾಸನ ಪತ್ನಿಯಲ್ಲಿರುವ ದಿವ್ಯ ಕುಂಡಲಗಳನ್ನು ಕೇಳಿದುದು (14-29). ಉತ್ತಂಕನು ವನದಲ್ಲಿದ್ದ ನರಭಕ್ಷಕ ಸೌದಾಸನನ್ನು ನೋಡಿದುದು (30-35).
14055001 ಜನಮೇಜಯ ಉವಾಚ
14055001a ಉತ್ತಂಕಃ ಕೇನ ತಪಸಾ ಸಂಯುಕ್ತಃ ಸುಮಹಾತಪಾಃ।
14055001c ಯಃ ಶಾಪಂ ದಾತುಕಾಮೋಽಭೂದ್ವಿಷ್ಣವೇ ಪ್ರಭವಿಷ್ಣವೇ।।
ಜನಮೇಜಯನು ಹೇಳಿದನು: “ಎಲ್ಲವುಗಳ ಉತ್ಪತ್ತಿಗೇ ಕಾರಣನಾದ ವಿಷ್ಣುವಿಗೇ ಶಾಪವನ್ನು ಕೊಡಲು ಬಯಸಿದ್ದ ಆ ಮಹಾತಪಸ್ವೀ ಉತ್ತಂಕನು ಯಾವ ತಪಸ್ಸಿನ ಶಕ್ತಿಯನ್ನು ಹೊಂದಿದ್ದನು?”
14055002 ವೈಶಂಪಾಯನ ಉವಾಚ
14055002a ಉತ್ತಂಕೋ ಮಹತಾ ಯುಕ್ತಸ್ತಪಸಾ ಜನಮೇಜಯ।
14055002c ಗುರುಭಕ್ತಃ ಸ ತೇಜಸ್ವೀ ನಾನ್ಯಂ ಕಂ ಚಿದಪೂಜಯತ್।।
ವೈಶಂಪಾಯನನು ಹೇಳಿದನು: “ಜನಮೇಜಯ! ಉತ್ತಂಕನು ಮಹಾ ತಪಃಶಕ್ತಿಯುಳ್ಳವನಾಗಿದ್ದನು. ಗುರುಭಕ್ತನಾಗಿದ್ದ ಆ ತೇಜಸ್ವಿಯು ಅನ್ಯ ಯಾರನ್ನೂ ಎಂದೂ ಪೂಜಿಸುತ್ತಿರಲಿಲ್ಲ.
14055003a ಸರ್ವೇಷಾಮೃಷಿಪುತ್ರಾಣಾಮೇಷ ಚಾಸೀನ್ಮನೋರಥಃ।
14055003c ಔತ್ತಂಕೀಂ ಗುರುವೃತ್ತಿಂ ವೈ ಪ್ರಾಪ್ನುಯಾಮಿತಿ ಭಾರತ।।
ಭಾರತ! ಎಲ್ಲ ಋಷಿಪುತ್ರರ ಮನೋರಥವೂ ಉತ್ತಂಕನಿಗಿದ್ದಂಥಹ ಗುರುಭಕ್ತಿಯನ್ನು ಪಡೆಯಬೇಕು ಎಂಬುದಾಗಿತ್ತು.
14055004a ಗೌತಮಸ್ಯ ತು ಶಿಷ್ಯಾಣಾಂ ಬಹೂನಾಂ ಜನಮೇಜಯ।
14055004c ಉತ್ತಂಕೇಽಭ್ಯಧಿಕಾ ಪ್ರೀತಿಃ ಸ್ನೇಹಶ್ಚೈವಾಭವತ್ತದಾ।।
ಗೌತಮನಿಗೆ ಅನೇಕ ಶಿಷ್ಯರಿದ್ದರು. ಆದರೂ ಉತ್ತಂಕನ ಮೇಲೆ ಅವನಿಗೆ ಅಧಿಕ ಪ್ರೀತಿ-ಸ್ನೇಹಗಳಿದ್ದವು.
14055005a ಸ ತಸ್ಯ ದಮಶೌಚಾಭ್ಯಾಂ ವಿಕ್ರಾಂತೇನ ಚ ಕರ್ಮಣಾ।
14055005c ಸಮ್ಯಕ್ಚೈವೋಪಚಾರೇಣ ಗೌತಮಃ ಪ್ರೀತಿಮಾನಭೂತ್।।
ಅವನು ದಮ, ಶೌಚ, ವಿಕ್ರಮ ಕರ್ಮಗಳು ಮತ್ತು ಉತ್ತಮ ಉಪಚಾರಗಳಿಂದ ಗೌತಮನಿಗೆ ಪ್ರೀತಿಪಾತ್ರನಾಗಿದ್ದನು.
14055006a ಅಥ ಶಿಷ್ಯಸಹಸ್ರಾಣಿ ಸಮನುಜ್ಞಾಯ ಗೌತಮಃ।
14055006c ಉತ್ತಂಕಂ ಪರಯಾ ಪ್ರೀತ್ಯಾ ನಾಭ್ಯನುಜ್ಞಾತುಮೈಚ್ಚತ।।
ಗೌತಮನು ತನ್ನ ಸಹಸ್ರಾರು ಶಿಷ್ಯರಿಗೆ ಹೋಗಲು ಅನುಮತಿಯನ್ನಿತ್ತನು. ಆದರೆ ಪರಮಪ್ರೀತಿಯ ಕಾರಣದಿಂದ ಉತ್ತಂಕನಿಗೆ ಹೋಗಲು ಅನುಮತಿಯನ್ನು ನೀಡಲು ಬಯಸಲಿಲ್ಲ.
14055007a ತಂ ಕ್ರಮೇಣ ಜರಾ ತಾತ ಪ್ರತಿಪೇದೇ ಮಹಾಮುನಿಮ್।
14055007c ನ ಚಾನ್ವಬುಧ್ಯತ ತದಾ ಸ ಮುನಿರ್ಗುರುವತ್ಸಲಃ।।
ಮಗೂ! ಕ್ರಮೇಣ ಮಹಾಮುನಿ ಉತ್ತಂಕನು ಮುಪ್ಪಾದನು. ಗುರುವತ್ಸಲನಾಗಿದ್ದ ಅವನಿಗೆ ತಾನು ಮುಪ್ಪಾಗಿದ್ದುದರ ಅರಿವೆಯೂ ಉಂಟಾಗಿರಲಿಲ್ಲ.
14055008a ತತಃ ಕದಾ ಚಿದ್ರಾಜೇಂದ್ರ ಕಾಷ್ಠಾನ್ಯಾನಯಿತುಂ ಯಯೌ।
14055008c ಉತ್ತಂಕಃ ಕಾಷ್ಠಭಾರಂ ಚ ಮಹಾಂತಂ ಸಮುಪಾನಯತ್।।
ರಾಜೇಂದ್ರ! ಹೀಗಿರಲು ಒಮ್ಮೆ ಉತ್ತಂಕನು ಕಟ್ಟಿಗೆಯನ್ನು ತರಲು ಹೋದನು. ಅವನು ಕಟ್ಟಿಗೆಯ ದೊಡ್ಡ ಹೊರೆಯನ್ನು ಸಂಗ್ರಹಿಸಿದನು.
14055009a ಸ ತು ಭಾರಾಭಿಭೂತಾತ್ಮಾ ಕಾಷ್ಠಭಾರಮರಿಂದಮ।
14055009c ನಿಷ್ಪಿಪೇಷ ಕ್ಷಿತೌ ರಾಜನ್ಪರಿಶ್ರಾಂತೋ ಬುಭುಕ್ಷಿತಃ।।
ರಾಜನ್! ಅರಿಂದಮ! ಕಟ್ಟಿಗೆಯ ಭಾರದಿಂದ ಅವನು ಬಳಲಿದನು. ಆಗ ಅವನು ಹೊತ್ತಿದ್ದ ಕಟ್ಟಿಗೆಯ ಹೊರೆಯನ್ನು ಕೆಳಗಿಳಿಸಲು ಪ್ರಯತ್ನಿಸಿದನು.
14055010a ತಸ್ಯ ಕಾಷ್ಠೇ ವಿಲಗ್ನಾಭೂಜ್ಜಟಾ ರೂಪ್ಯಸಮಪ್ರಭಾ।
14055010c ತತಃ ಕಾಷ್ಠೈಃ ಸಹ ತದಾ ಪಪಾತ ಧರಣೀತಲೇ।।
ಬೆಳ್ಳಿಯಂತೆ ಹೊಳೆಯುತ್ತಿದ್ದ ಅವನ ಜಟೆಯು ಕಟ್ಟಿಗೆಯ ಹೊರೆಯಲ್ಲಿ ಸಿಲುಕಿಕೊಂಡಿದ್ದುದರಿಂದ ಆಗ ಅವನು ಕಟ್ಟಿಗೆಯ ಹೊರೆಯೊಂದಿಗೆ ನೆಲದ ಮೇಲೆ ಬಿದ್ದನು.
14055011a ತತಃ ಸ ಭಾರನಿಷ್ಪಿಷ್ಟಃ ಕ್ಷುಧಾವಿಷ್ಟಶ್ಚ ಭಾರ್ಗವಃ।
14055011c ದೃಷ್ಟ್ವಾ ತಾಂ ವಯಸೋಽವಸ್ಥಾಂ ರುರೋದಾರ್ತಸ್ವರಂ ತದಾ।।
ಕಟ್ಟಿಗೆಯ ಹೊರೆಯ ಭಾರದಿಂದ ಜಜ್ಜಿಹೋಗಿದ್ದ ಮತ್ತು ಹಸಿವೆಯಿಂದ ಬಳಲಿದ್ದ ಆ ಭಾರ್ಗವನು ತನ್ನ ಮುಪ್ಪಿನ ಅವಸ್ಥೆಯನ್ನು ಕಂಡು ಆರ್ತಸ್ವರದಲ್ಲಿ ರೋದಿಸಿದನು.
14055012a ತತೋ ಗುರುಸುತಾ ತಸ್ಯ ಪದ್ಮಪತ್ರನಿಭೇಕ್ಷಣಾ।
14055012c ಜಗ್ರಾಹಾಶ್ರೂಣಿ ಸುಶ್ರೋಣೀ ಕರೇಣ ಪೃಥುಲೋಚನಾ।
14055012e ಪಿತುರ್ನಿಯೋಗಾದ್ಧರ್ಮಜ್ಞಾ ಶಿರಸಾವನತಾ ತದಾ।।
ಆಗ ತಂದೆಯ ಆಜ್ಞೆಯಂತೆ ಪದ್ಮಪತ್ರದಂತೆ ವಿಶಾಲ ಮುಖವಿದ್ದ, ವಿಶಾಲ ಕಣ್ಣುಗಳಿದ್ದ, ಗುರು ಗೌತಮನ ಮಗಳು ಧರ್ಮಜ್ಞೆ ಸುಶ್ರೋಣಿಯು ತಲೆಯನ್ನು ತಗ್ಗಿಸಿ ತನ್ನ ಕೈಗಳಿಂದ ಉತ್ತಂಕನ ಕಣ್ಣೀರನ್ನು ಹಿಡಿದಳು.
14055013a ತಸ್ಯಾ ನಿಪೇತತುರ್ದಗ್ಧೌ ಕರೌ ತೈರಶ್ರುಬಿಂದುಭಿಃ।
14055013c ನ ಹಿ ತಾನಶ್ರುಪಾತಾನ್ವೈ ಶಕ್ತಾ ಧಾರಯಿತುಂ ಮಹೀ।।
ಉತ್ತಂಕನ ಕಣ್ಣೀರಿನ ಹನಿಗಳಿಂದ ಅವಳ ಕೈಗಳು ಸುಟ್ಟು ಕೆಳಕ್ಕೆ ಬಿದ್ದವು. ಹಾಗೆ ಕೆಳಗೆ ಬಿದ್ದ ಕಣ್ಣೀರನ್ನು ಭೂಮಿಯೂ ಕೂಡ ತಡೆದುಕೊಳ್ಳಲು ಶಕ್ತಳಾಗಲಿಲ್ಲ.
14055014a ಗೌತಮಸ್ತ್ವಬ್ರವೀದ್ವಿಪ್ರಮುತ್ತಂಕಂ ಪ್ರೀತಮಾನಸಃ।
14055014c ಕಸ್ಮಾತ್ತಾತ ತವಾದ್ಯೇಹ ಶೋಕೋತ್ತರಮಿದಂ ಮನಃ।
14055014e ಸ ಸ್ವೈರಂ ಬ್ರೂಹಿ ವಿಪ್ರರ್ಷೇ ಶ್ರೋತುಮಿಚ್ಚಾಮಿ ತೇ ವಚಃ।।
ಆಗ ಪ್ರೀತಮಾನಸನಾದ ಗೌತಮನು ಉತ್ತಂಕನಿಗೆ ಹೇಳಿದನು: “ಮಗೂ! ಇಂದು ನಿನ್ನ ಮನಸ್ಸೇಕೆ ಶೋಕದಿಂದ ವ್ಯಾಕುಲಗೊಂಡಿದೆ? ವಿಪ್ರರ್ಷೇ! ಬೇಗ ಹೇಳು! ನಿನ್ನ ಮಾತನ್ನು ಕೇಳಲು ಬಯಸುತ್ತೇನೆ!”
14055015 ಉತ್ತಂಕ ಉವಾಚ
14055015a ಭವದ್ಗತೇನ ಮನಸಾ ಭವತ್ಪ್ರಿಯಚಿಕೀರ್ಷಯಾ।
14055015c ಭವದ್ಭಕ್ತಿಗತೇನೇಹ ಭವದ್ಭಾವಾನುಗೇನ ಚ।।
ಉತ್ತಂಕನು ಹೇಳಿದನು: “ನಿಮಗೆ ಪ್ರಿಯವನ್ನುಂಟುಮಾಡಲು ಬಯಸಿ ನಿಮ್ಮಲ್ಲಿಯೇ ಮನಸ್ಸನ್ನಿಟ್ಟು ನಿಮ್ಮಮೇಲಿನ ಭಕ್ತಿಯಿಂದಾಗಿ ನಿಮ್ಮನ್ನೇ ಅನುಸರಿಸುತ್ತಾ ಬಂದಿದ್ದೇನೆ.
14055016a ಜರೇಯಂ ನಾವಬುದ್ಧಾ ಮೇ ನಾಭಿಜ್ಞಾತಂ ಸುಖಂ ಚ ಮೇ।
14055016c ಶತವರ್ಷೋಷಿತಂ ಹಿ ತ್ವಂ ನ ಮಾಮಭ್ಯನುಜಾನಥಾಃ।।
ನನಗೆ ಮುಪ್ಪಾಗಿದುದರ ಅರಿವೆಯೂ ನನಗಾಗಲಿಲ್ಲ. ನಾನು ಸುಖವನ್ನೇ ಅನುಭವಿಸಿಲ್ಲ. ನಿಮ್ಮೊಡನೆ ನೂರು ವರ್ಷಗಳನ್ನು ಕಳೆದರೂ ಹೋಗಲು ನನಗೆ ನಿಮ್ಮಿಂದ ಅನುಮತಿಯು ದೊರಕಲಿಲ್ಲ.
14055017a ಭವತಾ ಹ್ಯಭ್ಯನುಜ್ಞಾತಾಃ ಶಿಷ್ಯಾಃ ಪ್ರತ್ಯವರಾ ಮಯಾ।
14055017c ಉಪಪನ್ನಾ ದ್ವಿಜಶ್ರೇಷ್ಠ ಶತಶೋಽಥ ಸಹಸ್ರಶಃ।।
ದ್ವಿಜಶ್ರೇಷ್ಠ! ನನ್ನ ನಂತರ ಬಂದಿದ್ದ ನಿಮ್ಮ ನೂರಾರು ಸಹಸ್ರಾರು ಶಿಷ್ಯರಿಗೆ ಹೋಗಲು ನೀವು ಅನುಮತಿಯನ್ನು ನೀಡಿದ್ದೀರಿ.”
14055018 ಗೌತಮ ಉವಾಚ
14055018a ತ್ವತ್ಪ್ರೀತಿಯುಕ್ತೇನ ಮಯಾ ಗುರುಶುಶ್ರೂಷಯಾ ತವ।
14055018c ವ್ಯತಿಕ್ರಾಮನ್ಮಹಾನ್ಕಾಲೋ ನಾವಬುದ್ಧೋ ದ್ವಿಜರ್ಷಭ।।
ಗೌತಮನು ಹೇಳಿದನು: “ದ್ವಿಜರ್ಷಭ! ಪ್ರೀತಿಯುಕ್ತವಾದ ನಿನ್ನ ಗುರುಶುಶ್ರೂಷೆಯಿಂದ ನನಗೆ ದೀರ್ಘ ಕಾಲವು ಕಳೆದದ್ದೇ ತಿಳಿಯಲಿಲ್ಲ!
14055019a ಕಿಂ ತ್ವದ್ಯ ಯದಿ ತೇ ಶ್ರದ್ಧಾ ಗಮನಂ ಪ್ರತಿ ಭಾರ್ಗವ।
14055019c ಅನುಜ್ಞಾಂ ಗೃಹ್ಯ ಮತ್ತಸ್ತ್ವಂ ಗೃಹಾನ್ಗಚ್ಚಸ್ವ ಮಾ ಚಿರಮ್।।
ಭಾರ್ಗವ! ಒಂದುವೇಳೆ ನಿನಗೆ ಹೋಗುವ ಶ್ರದ್ಧೆಯಿದ್ದರೆ ನನ್ನ ಅನುಜ್ಞೆಯನ್ನು ಪಡೆದು ತಡಮಾಡದೇ ನಿನ್ನ ಮನೆಗೆ ಹೋಗು!”
14055020 ಉತ್ತಂಕ ಉವಾಚ
14055020a ಗುರ್ವರ್ಥಂ ಕಂ ಪ್ರಯಚ್ಚಾಮಿ ಬ್ರೂಹಿ ತ್ವಂ ದ್ವಿಜಸತ್ತಮ।
14055020c ತಮುಪಾಕೃತ್ಯ ಗಚ್ಚೇಯಮನುಜ್ಞಾತಸ್ತ್ವಯಾ ವಿಭೋ।।
ಉತ್ತಂಕನು ಹೇಳಿದನು: “ದ್ವಿಜಸತ್ತಮ! ವಿಭೋ! ಗುರುವಿಗಾಗಿ ನಾನು ಏನು ಮಾಡಬೇಕೆಂದು ಹೇಳಿ. ಅದನ್ನು ಮಾಡಿ ನಿಮ್ಮ ಅನುಜ್ಞೆಯಂತೆ ಹೋಗುತ್ತೇನೆ.”
14055021 ಗೌತಮ ಉವಾಚ
14055021a ದಕ್ಷಿಣಾ ಪರಿತೋಷೋ ವೈ ಗುರೂಣಾಂ ಸದ್ಭಿರುಚ್ಯತೇ।
14055021c ತವ ಹ್ಯಾಚರತೋ ಬ್ರಹ್ಮಂಸ್ತುಷ್ಟೋಽಹಂ ವೈ ನ ಸಂಶಯಃ।।
ಗೌತಮನು ಹೇಳಿದನು: “ಬ್ರಾಹ್ಮಣ! ಗುರುಸೇವೆಯೇ ಗುರುವಿಗೆ ನೀಡುವ ದಕ್ಷಿಣೆಯೆಂದು ಸತ್ಪುರುಷರು ಹೇಳುತ್ತಾರೆ. ನಿನ್ನ ಆಚರಣೆಯಿಂದ ನಾನು ಸಂತುಷ್ಟನಾಗಿದ್ದೇನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
14055022a ಇತ್ಥಂ ಚ ಪರಿತುಷ್ಟಂ ಮಾಂ ವಿಜಾನೀಹಿ ಭೃಗೂದ್ವಹ।
14055022c ಯುವಾ ಷೋಡಶವರ್ಷೋ ಹಿ ಯದದ್ಯ ಭವಿತಾ ಭವಾನ್।।
ಭೃಗೂದ್ವಹ! ಈಗಾಗಲೇ ನೀನು ನನ್ನನ್ನು ಸಂತುಷ್ಟಿಗೊಳಿಸಿದ್ದೀಯೆ ಎಂದು ತಿಳಿದುಕೋ! ನೀನು ಇಂದು ಹದಿನಾರು ವರ್ಷದ ಯುವಕನಾಗುವೆ!
14055023a ದದಾಮಿ ಪತ್ನೀಂ ಕನ್ಯಾಂ ಚ ಸ್ವಾಂ ತೇ ದುಹಿತರಂ ದ್ವಿಜ।
14055023c ಏತಾಮೃತೇ ಹಿ ನಾನ್ಯಾ ವೈ ತ್ವತ್ತೇಜೋಽರ್ಹತಿ ಸೇವಿತುಮ್।।
ದ್ವಿಜ! ನನ್ನ ಪುತ್ರಿ ಕನ್ಯೆಯನ್ನು ನಿನಗೆ ಪತ್ನಿಯನ್ನಾಗಿ ಕೊಡುತ್ತೇನೆ. ಅವಳ ಹೊರತು ಬೇರೆ ಯಾರೂ ತೇಜೋನ್ವಿತನಾದ ನಿನ್ನ ಸೇವೆಗೈಯಲಾರರು.”
14055024a ತತಸ್ತಾಂ ಪ್ರತಿಜಗ್ರಾಹ ಯುವಾ ಭೂತ್ವಾ ಯಶಸ್ವಿನೀಮ್।
14055024c ಗುರುಣಾ ಚಾಭ್ಯನುಜ್ಞಾತೋ ಗುರುಪತ್ನೀಮಥಾಬ್ರವೀತ್।।
ಅನಂತರ ಅವನು ಯುವಕನಾಗಿ ಯಶಸ್ವಿನೀ ಗುರುಪುತ್ರಿಯನ್ನು ಸ್ವೀಕರಿಸಿದನು. ಗುರುವಿನಿಂದ ಅಪ್ಪಣೆಪಡೆದು ಅವನು ಗುರುಪತ್ನಿಯಲ್ಲಿ ಹೀಗೆ ಕೇಳಿದನು:
14055025a ಕಿಂ ಭವತ್ಯೈ ಪ್ರಯಚ್ಚಾಮಿ ಗುರ್ವರ್ಥಂ ವಿನಿಯುಂಕ್ಷ್ವ ಮಾಮ್।
14055025c ಪ್ರಿಯಂ ಹಿ ತವ ಕಾಂಕ್ಷಾಮಿ ಪ್ರಾಣೈರಪಿ ಧನೈರಪಿ।।
“ಗುರುದಕ್ಷಿಣೆಯಾಗಿ ನಿಮಗೆ ಏನನ್ನು ತರಲಿ? ನನಗೆ ಅಪ್ಪಣೆ ಕೊಡಿ. ಪ್ರಾಣದಿಂದಲಾದರೂ ಧನಗಳಿಂದಲಾದರೂ ನಿಮಗೆ ಪ್ರಿಯವಾದುದನ್ನು ಮಾಡಲು ಬಯಸುತ್ತೇನೆ.
14055026a ಯದ್ದುರ್ಲಭಂ ಹಿ ಲೋಕೇಽಸ್ಮಿನ್ರತ್ನಮತ್ಯದ್ಭುತಂ ಭವೇತ್।
14055026c ತದಾನಯೇಯಂ ತಪಸಾ ನ ಹಿ ಮೇಽತ್ರಾಸ್ತಿ ಸಂಶಯಃ।।
ಈ ಲೋಕದಲ್ಲಿ ದುರ್ಲಭವೂ ಅದ್ಭುತವೂ ಆದ ರತ್ನವಿದ್ದರೆ ಅದನ್ನೂ ನನ್ನ ತಪಸ್ಸಿನ ಪ್ರಭಾವದಿಂದ ತಂದುಕೊಡುತ್ತೇನೆ. ಅದರಲ್ಲಿ ಸಂಶಯವಿಲ್ಲದಿರಲಿ!”
14055027 ಅಹಲ್ಯೋವಾಚ
14055027a ಪರಿತುಷ್ಟಾಸ್ಮಿ ತೇ ಪುತ್ರ ನಿತ್ಯಂ ಭಗವತಾ ಸಹ।
14055027c ಪರ್ಯಾಪ್ತಯೇ ತದ್ಭದ್ರಂ ತೇ ಗಚ್ಚ ತಾತ ಯಥೇಚ್ಚಕಮ್।।
ಅಹಲ್ಯೆಯು ಹೇಳಿದಳು: “ಪುತ್ರ! ನಿತ್ಯವೂ ನಿನ್ನ ಸೇವೆಯಿಂದ ನಾನು ಪರಿತುಷ್ಟಳಾಗಿದ್ದೇನೆ. ಇದೇ ಸಾಕು. ಮಗೂ! ನಿನಗೆ ಮಂಗಳವಾಗಲಿ! ಇಷ್ಟವಿದ್ದಲ್ಲಿಗೆ ಹೋಗು!””
14055028 ವೈಶಂಪಾಯನ ಉವಾಚ
14055028a ಉತ್ತಂಕಸ್ತು ಮಹಾರಾಜ ಪುನರೇವಾಬ್ರವೀದ್ವಚಃ।
14055028c ಆಜ್ಞಾಪಯಸ್ವ ಮಾಂ ಮಾತಃ ಕರ್ತವ್ಯಂ ಹಿ ಪ್ರಿಯಂ ತವ।।
ವೈಶಂಪಾಯನನು ಹೇಳಿದನು: “ಮಹಾರಾಜ! ಉತ್ತಂಕನಾದರೋ “ಮಾತೇ! ನಿಮಗೆ ಪ್ರಿಯವಾದ ಏನನ್ನು ಮಾಡಲಿ ಆಜ್ಞಾಪಿಸಿ!” ಎಂದು ಪುನಃ ಕೇಳಿಕೊಂಡನು.
14055029 ಅಹಲ್ಯೋವಾಚ
14055029a ಸೌದಾಸಪತ್ನ್ಯಾ ವಿದಿತೇ ದಿವ್ಯೇ ವೈ ಮಣಿಕುಂಡಲೇ।
14055029c ತೇ ಸಮಾನಯ ಭದ್ರಂ ತೇ ಗುರ್ವರ್ಥಃ ಸುಕೃತೋ ಭವೇತ್।।
ಅಹಲ್ಯೆಯು ಹೇಳಿದಳು: “ಸೌದಾಸನ ಪತ್ನಿಯು ದಿವ್ಯವಾದ ಮಣಿಕುಂಡಲಗಳನ್ನು ಪಡೆದಿದ್ದಾಳೆ ಎಂದು ತಿಳಿದಿದೆ. ಅವುಗಳನ್ನು ತಾ! ಗುರುದಕ್ಷಿಣೆಯಾಗಿ ಇದೇ ಸಾಕಾಗುತ್ತದೆ. ನಿನಗೆ ಮಂಗಳವಾಗಲಿ!”
14055030a ಸ ತಥೇತಿ ಪ್ರತಿಶ್ರುತ್ಯ ಜಗಾಮ ಜನಮೇಜಯ।
14055030c ಗುರುಪತ್ನೀಪ್ರಿಯಾರ್ಥಂ ವೈ ತೇ ಸಮಾನಯಿತುಂ ತದಾ।।
ಜನಮೇಜಯ! ಹಾಗೆಯೇ ಆಗಲೆಂದು ಹೇಳಿ ಅವನು ಗುರುಪತ್ನಿಗಾಗಿ ಅವುಗಳನ್ನು ತರಲು ಹೋದನು.
14055031a ಸ ಜಗಾಮ ತತಃ ಶೀಘ್ರಮುತ್ತಂಕೋ ಬ್ರಾಹ್ಮಣರ್ಷಭಃ।
14055031c ಸೌದಾಸಂ ಪುರುಷಾದಂ ವೈ ಭಿಕ್ಷಿತುಂ ಮಣಿಕುಂಡಲೇ।।
ಅನಂತರ ಆ ಬ್ರಾಹ್ಮಣರ್ಷಭ ಉತ್ತಂಕನು ನರಭಕ್ಷಕನಾಗಿದ್ದ ಸೌದಾಸನಲ್ಲಿ ಮಣಿಕುಂಡಲಗಳ ಭಿಕ್ಷೆಯನ್ನು ಕೇಳಲು ಶೀಘ್ರವಾಗಿ ಹೋದನು.
14055032a ಗೌತಮಸ್ತ್ವಬ್ರವೀತ್ಪತ್ನೀಮುತ್ತಂಕೋ ನಾದ್ಯ ದೃಶ್ಯತೇ।
14055032c ಇತಿ ಪೃಷ್ಟಾ ತಮಾಚಷ್ಟ ಕುಂಡಲಾರ್ಥಂ ಗತಂ ತು ವೈ।।
ಗೌತಮನು “ಇಂದು ಉತ್ತಂಕನು ಕಾಣುತ್ತಿಲ್ಲವಲ್ಲ!” ಎಂದು ಪತ್ನಿಯಲ್ಲಿ ಕೇಳಿದನು. ಅದಕ್ಕೆ ಅವಳು “ಕುಂಡಲಗಳನ್ನು ತರಲು ಹೋಗಿದ್ದಾನೆ” ಎಂದು ಹೇಳಿದಳು.
14055033a ತತಃ ಪ್ರೋವಾಚ ಪತ್ನೀಂ ಸ ನ ತೇ ಸಮ್ಯಗಿದಂ ಕೃತಮ್।
14055033c ಶಪ್ತಃ ಸ ಪಾರ್ಥಿವೋ ನೂನಂ ಬ್ರಾಹ್ಮಣಂ ತಂ ವಧಿಷ್ಯತಿ।।
ಆಗ ಅವನು ಪತ್ನಿಗೆ ಹೇಳಿದನು: “ನೀನು ಮಾಡಿದುದು ಒಳ್ಳೆಯದಾಗಲಿಲ್ಲ. ಆ ರಾಜನು ಶಾಪಗ್ರಸ್ತನಾಗಿದ್ದಾನೆ. ಅವನು ಬ್ರಾಹ್ಮಣನನ್ನು ವಧಿಸುತ್ತಾನೆ!”
14055034 ಅಹಲ್ಯೋವಾಚ
14055034a ಅಜಾನಂತ್ಯಾ ನಿಯುಕ್ತಃ ಸ ಭಗವನ್ಬ್ರಾಹ್ಮಣೋಽದ್ಯ ಮೇ।
14055034c ಭವತ್ಪ್ರಸಾದಾನ್ನ ಭಯಂ ಕಿಂ ಚಿತ್ತಸ್ಯ ಭವಿಷ್ಯತಿ।।
ಅಹಲ್ಯೆಯು ಹೇಳಿದಳು: “ಭಗವನ್! ತಿಳಿಯದೇ ಇಂದು ನಾನು ಆ ಬ್ರಾಹ್ಮಣನನ್ನು ಕಳುಹಿಸಿಬಿಟ್ಟೆ! ಆದರೆ ನಿಮ್ಮ ಅನುಗ್ರಹವಿರುವಾಗ ಅವನಿಗೆ ಏನೂ ಆಗುವುದಿಲ್ಲ.”
14055035a ಇತ್ಯುಕ್ತಃ ಪ್ರಾಹ ತಾಂ ಪತ್ನೀಮೇವಮಸ್ತ್ವಿತಿ ಗೌತಮಃ।
14055035c ಉತ್ತಂಕೋಽಪಿ ವನೇ ಶೂನ್ಯೇ ರಾಜಾನಂ ತಂ ದದರ್ಶ ಹ।।
ಇದಕ್ಕೆ ಗೌತಮನು ತನ್ನ ಪತ್ನಿಗೆ “ಅದು ಹಾಗೆಯೇ ಆಗಲಿ!” ಎಂದು ಹೇಳಿದನು. ಉತ್ತಂಕನಾದರೋ ಶೂನ್ಯ ವನದಲ್ಲಿ ರಾಜ ಸೌದಾಸನನ್ನು ಕಂಡನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತಂಕೋಪಾಖ್ಯಾನೇ ಕುಂಡಲಾಹರಣೇ ಪಂಚಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತಂಕೋಪಾಖ್ಯಾನೇ ಕುಂಡಲಾಹರಣ ಎನ್ನುವ ಐವತ್ತೈದನೇ ಅಧ್ಯಾಯವು.