ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 54
ಸಾರ
ಕೃಷ್ಣನು ಉತ್ತಂಕನಿಗೆ ಹಿಂದೆ ಅರ್ಜುನನಿಗೆ ತೋರಿಸಿದ್ದ ತನ್ನ ಶಾಶ್ವತ ವೈಷ್ಣವೀ ರೂಪವನ್ನು ತೋರಿಸಿದುದು, ಉತ್ತಂಕನಿಂದ ಕೃಷ್ಣಸ್ತುತಿ (1-8). ಉತ್ತಂಕನಿಗೆ “ಮರುಭೂಮಿಯಲ್ಲಿ ನಿನಗೆ ನೀರು ಬೇಕೆಂದಾಗಲೆಲ್ಲಾ ನನ್ನನ್ನು ಸ್ಮರಿಸು!” ಎಂದು ಹೇಳಿ ಕೃಷ್ಣನು ದ್ವಾರಕೆಗೆ ತೆರಳಿದುದು (9-13). ಒಮ್ಮೆ ಮಾತಂಗನಿಂದ ನೀರನ್ನು ಸ್ವೀಕರಿಸದೇ ಇದ್ದ ಉತ್ತಂಕನಿಗೆ ಕೃಷ್ಣನು ಮಾಂತಂಗ ವೇಷದಲ್ಲಿದ್ದ ಇಂದ್ರನು ಅವನಿಗೆ ಅಮೃತವನ್ನು ನೀಡಲು ಬಂದಿದ್ದನು ಎಂದು ಹೇಳಿ ಅವನಿಗೆ ಮರುಭೂಮಿಯಲ್ಲಿಯೂ ಮಳೆಸುರಿಸುವ ವರವನ್ನು ನೀಡಿದುದು (14-35).
14054001 ಉತ್ತಂಕ ಉವಾಚ
14054001a ಅಭಿಜಾನಾಮಿ ಜಗತಃ ಕರ್ತಾರಂ ತ್ವಾಂ ಜನಾರ್ದನ।
14054001c ನೂನಂ ಭವತ್ಪ್ರಸಾದೋಽಯಮಿತಿ ಮೇ ನಾಸ್ತಿ ಸಂಶಯಃ।।
ಉತ್ತಂಕನು ಹೇಳಿದನು: “ಜನಾರ್ದನ! ನೀನೇ ಈ ಜಗತ್ತಿನ ಕರ್ತಾರನೆಂದು ತಿಳಿದುಕೊಂಡಿದ್ದೇನೆ. ಈ ಆಧ್ಯಾತ್ಮತತ್ತ್ವವು ನಿನ್ನ ಪ್ರಸಾದದಿಂದಲೇ ನನಗೆ ದೊರೆಯಿತು ಎನ್ನುವುದರಲ್ಲಿ ಸಂಶಯವಿಲ್ಲ.
14054002a ಚಿತ್ತಂ ಚ ಸುಪ್ರಸನ್ನಂ ಮೇ ತ್ವದ್ಭಾವಗತಮಚ್ಯುತ।
14054002c ವಿನಿವೃತ್ತಶ್ಚ ಮೇ ಕೋಪ ಇತಿ ವಿದ್ಧಿ ಪರಂತಪ।।
ಅಚ್ಯುತ! ನಿನ್ನಮೇಲಿನ ಭಕ್ತಿಯಿಂದ ನನ್ನ ಚಿತ್ತವು ಪ್ರಸನ್ನವಾಗಿದೆ. ಪರಂತಪ! ನನ್ನ ಕೋಪವೂ ಹೊರಟುಹೋಯಿತೆಂದು ತಿಳಿ.
14054003a ಯದಿ ತ್ವನುಗ್ರಹಂ ಕಂ ಚಿತ್ತ್ವತ್ತೋಽರ್ಹೋಽಹಂ ಜನಾರ್ದನ।
14054003c ದ್ರಷ್ಟುಮಿಚ್ಚಾಮಿ ತೇ ರೂಪಮೈಶ್ವರಂ ತನ್ನಿದರ್ಶಯ।।
ನಿನ್ನ ಅನುಗ್ರಹಕ್ಕೆ ನಾನು ಸ್ವಲ್ಪವಾದರೂ ಅರ್ಹನಾಗಿದ್ದರೆ ಜನಾರ್ದನ! ನಿನ್ನ ಈಶ್ವರೀ ರೂಪವನ್ನು ನೋಡಲು ಬಯಸುತ್ತೇನೆ. ಅದನ್ನು ತೋರಿಸು!””
14054004 ವೈಶಂಪಾಯನ ಉವಾಚ
14054004a ತತಃ ಸ ತಸ್ಮೈ ಪ್ರೀತಾತ್ಮಾ ದರ್ಶಯಾಮಾಸ ತದ್ವಪುಃ।
14054004c ಶಾಶ್ವತಂ ವೈಷ್ಣವಂ ಧೀಮಾನ್ದದೃಶೇ ಯದ್ಧನಂಜಯಃ।।
ವೈಶಂಪಾಯನನು ಹೇಳಿದನು: “ಆಗ ಧೀಮಾನ್ ಕೃಷ್ಣನು ಪ್ರೀತಾತ್ಮನಾಗಿ ಧನಂಜಯನಿಗೆ ತೋರಿಸಿದ್ದ ಶಾಶ್ವತ ವೈಷ್ಣವೀ ರೂಪವನ್ನು ಉತ್ತಂಕನಿಗೂ ತೋರಿಸಿದನು.
14054005a ಸ ದದರ್ಶ ಮಹಾತ್ಮಾನಂ ವಿಶ್ವರೂಪಂ ಮಹಾಭುಜಮ್।
14054005c ವಿಸ್ಮಯಂ ಚ ಯಯೌ ವಿಪ್ರಸ್ತದ್ದೃಷ್ಟ್ವಾ ರೂಪಮೈಶ್ವರಮ್।।
ವಿಪ್ರನು ಆ ಮಹಾತ್ಮ ವಿಶ್ವರೂಪ ಮಹಾಭುಜನನ್ನು ನೋಡಿದನು. ಅವನ ಈಶ್ವರೀಯ ರೂಪವನ್ನು ನೋಡಿ ವಿಸ್ಮಿತನಾದನು.
14054006 ಉತ್ತಂಕ ಉವಾಚ
14054006a ವಿಶ್ವಕರ್ಮನ್ನಮಸ್ತೇಽಸ್ತು ಯಸ್ಯ ತೇ ರೂಪಮೀದೃಶಮ್।
14054006c ಪದ್ಭ್ಯಾಂ ತೇ ಪೃಥಿವೀ ವ್ಯಾಪ್ತಾ ಶಿರಸಾ ಚಾವೃತಂ ನಭಃ।।
ಉತ್ತಂಕನು ಹೇಳಿದನು: “ವಿಶ್ವಕರ್ಮನ್! ಈ ರೂಪವಿರುವ ನಿನಗೆ ನಮಸ್ಕಾರಗಳು. ನಿನ್ನ ಪಾದಗಳು ಭೂಮಿಯನ್ನು ವ್ಯಾಪಿಸಿವೆ ಮತ್ತು ಶಿರಸ್ಸು ನಭವನ್ನು ಆವರಿಸಿದೆ!
14054007a ದ್ಯಾವಾಪೃಥಿವ್ಯೋರ್ಯನ್ಮಧ್ಯಂ ಜಠರೇಣ ತದಾವೃತಮ್।
14054007c ಭುಜಾಭ್ಯಾಮಾವೃತಾಶ್ಚಾಶಾಸ್ತ್ವಮಿದಂ ಸರ್ವಮಚ್ಯುತ।।
ಆಕಾಶ-ಪೃಥ್ವಿಗಳ ನಡುವಿನ ಭಾಗವು ನಿನ್ನ ಜಠರಿಂದಲೇ ವ್ಯಾಪ್ತವಾಗಿದೆ. ಅಚ್ಯುತ! ನಿನ್ನ ಎರಡು ಭುಜಗಳಿಂದ ದಿಕ್ಕುಗಳೆಲ್ಲವೂ ವ್ಯಾಪ್ತವಾಗಿವೆ. ಹೀಗೆ ಎಲ್ಲವನ್ನೂ ನೀನೇ ಆವರಿಸಿರುವೆ!
14054008a ಸಂಹರಸ್ವ ಪುನರ್ದೇವ ರೂಪಮಕ್ಷಯ್ಯಮುತ್ತಮಮ್।
14054008c ಪುನಸ್ತ್ವಾಂ ಸ್ವೇನ ರೂಪೇಣ ದ್ರಷ್ಟುಮಿಚ್ಚಾಮಿ ಶಾಶ್ವತಮ್।।
ದೇವ! ನಿನ್ನ ಈ ಅಕ್ಷಯ ಅನುತ್ತಮ ರೂಪವನ್ನು ಪುನಃ ಹಿಂದೆ ತೆಗೆದುಕೋ! ಪುನಃ ನಿನ್ನ ಅದೇ ಶಾಶ್ವತ ರೂಪದಿಂದ ನೋಡಲು ಬಯಸುತ್ತೇನೆ.””
14054009 ವೈಶಂಪಾಯನ ಉವಾಚ
14054009a ತಮುವಾಚ ಪ್ರಸನ್ನಾತ್ಮಾ ಗೋವಿಂದೋ ಜನಮೇಜಯ।
14054009c ವರಂ ವೃಣೀಷ್ವೇತಿ ತದಾ ತಮುತ್ತಂಕೋಽಬ್ರವೀದಿದಮ್।।
ವೈಶಂಪಾಯನನು ಹೇಳಿದನು: “ಜನಮೇಜಯ! ಪ್ರಸನ್ನನಾದ ಗೋವಿಂದನು ಅವನಿಗೆ “ವರವನ್ನು ಕೇಳಿಕೋ!” ಎಂದು ಹೇಳಿದನು. ಆಗ ಉತ್ತಂಕನು ಹೇಳಿದನು:
14054010a ಪರ್ಯಾಪ್ತ ಏಷ ಏವಾದ್ಯ ವರಸ್ತ್ವತ್ತೋ ಮಹಾದ್ಯುತೇ।
14054010c ಯತ್ತೇ ರೂಪಮಿದಂ ಕೃಷ್ಣ ಪಶ್ಯಾಮಿ ಪ್ರಭವಾಪ್ಯಯಮ್।।
“ಮಹಾದ್ಯುತೇ! ಕೃಷ್ಣ! ನಿನ್ನ ಈ ವಿಶ್ವರೂಪವನ್ನೇನು ನಾನು ಕಾಣುತ್ತಿರುವೆನೋ ಅದೇ ಇಂದು ನೀನು ನನಗೆ ನೀಡಿರುವ ವರ!”
14054011a ತಮಬ್ರವೀತ್ಪುನಃ ಕೃಷ್ಣೋ ಮಾ ತ್ವಮತ್ರ ವಿಚಾರಯ।
14054011c ಅವಶ್ಯಮೇತತ್ಕರ್ತವ್ಯಮಮೋಘಂ ದರ್ಶನಂ ಮಮ।।
ಕೃಷ್ಣನು ಪುನಃ ಅವನಿಗೆ “ನನ್ನ ಈ ವಿಶ್ವರೂಪ ದರ್ಶನವು ಅಮೋಘವಾದುದು. ಆದುದರಿಂದ ನೀನು ಅವಶ್ಯವಾಗಿ ವರವನ್ನು ಕೇಳಿಕೋ! ಅದರಲ್ಲಿ ವಿಚಾರಿಸಬೇಡ!” ಎಂದನು.
14054012 ಉತ್ತಂಕ ಉವಾಚ
14054012a ಅವಶ್ಯಕರಣೀಯಂ ವೈ ಯದ್ಯೇತನ್ಮನ್ಯಸೇ ವಿಭೋ।
14054012c ತೋಯಮಿಚ್ಚಾಮಿ ಯತ್ರೇಷ್ಟಂ ಮರುಷ್ವೇತದ್ಧಿ ದುರ್ಲಭಮ್।।
ಉತ್ತಂಕನು ಹೇಳಿದನು: “ವಿಭೋ! ನಾನು ಅವಶ್ಯವಾದುದನ್ನು ಮಾಡಲೇಬೇಕೆಂದು ನಿನ್ನ ಅಭಿಪ್ರಾಯವಾದರೆ ಇಷ್ಟವಾದಲ್ಲಿ ನೀರು ದೊರಕುವಂತೆ ಬಯಸುತ್ತೇನೆ. ಈ ಮರುಭೂಮಿಯಲ್ಲಿ ನೀರು ದುರ್ಲಭವಾಗಿದೆ.””
14054013 ವೈಶಂಪಾಯನ ಉವಾಚ
14054013a ತತಃ ಸಂಹೃತ್ಯ ತತ್ತೇಜಃ ಪ್ರೋವಾಚೋತ್ತಂಕಮೀಶ್ವರಃ।
14054013c ಏಷ್ಟವ್ಯೇ ಸತಿ ಚಿಂತ್ಯೋಽಹಮಿತ್ಯುಕ್ತ್ವಾ ದ್ವಾರಕಾಂ ಯಯೌ।।
ವೈಶಂಪಾಯನನು ಹೇಳಿದನು: “ಅನಂತರ ಈಶ್ವರ ಕೃಷ್ಣನು ತನ್ನ ತೇಜಸ್ಸನ್ನು ಹಿಂದೆತೆಗೆದುಕೊಂಡು “ನಿನಗೆ ನೀರು ಬೇಕಾದಾಗಲೆಲ್ಲಾ ನನ್ನನ್ನು ಸ್ಮರಿಸು!” ಎಂದು ಹೇಳಿ ದ್ವಾರಕೆಗೆ ತೆರಳಿದನು.
14054014a ತತಃ ಕದಾ ಚಿದ್ಭಗವಾನುತ್ತಂಕಸ್ತೋಯಕಾಂಕ್ಷಯಾ।
14054014c ತೃಷಿತಃ ಪರಿಚಕ್ರಾಮ ಮರೌ ಸಸ್ಮಾರ ಚಾಚ್ಯುತಮ್।।
ಬಳಿಕ ಒಮ್ಮೆ ಭಗವಾನ್ ಉತ್ತಂಕನು ಅತ್ಯಂತ ಬಾಯಾರಿದವನಾಗಿ ಮರುಭೂಮಿಯಲ್ಲಿ ನೀರನ್ನು ಬಯಸಿ ಅಚ್ಯುತನನ್ನು ಸ್ಮರಿಸುತ್ತಾ ನೀರಿಗಾಗಿ ಹುಡುಕಾಡಿದನು.
14054015a ತತೋ ದಿಗ್ವಾಸಸಂ ಧೀಮಾನ್ಮಾತಂಗಂ ಮಲಪಂಕಿನಮ್।
14054015c ಅಪಶ್ಯತ ಮರೌ ತಸ್ಮಿನ್ಶ್ವಯೂಥಪರಿವಾರಿತಮ್।।
ಆಗ ಮರುಭೂಮಿಯಲ್ಲಿ ಅವನು ದಿಗಂಬರನೂ ಕೊಳಕಿನಿಂದ ಕೂಡಿದವನೂ ನಾಯಿಗಳಿಂದ ಪರಿವೃತನೂ ಆಗಿದ್ದ ಮಾತಂಗನೊಬ್ಬನನ್ನು ಕಂಡನು.
14054016a ಭೀಷಣಂ ಬದ್ಧನಿಸ್ತ್ರಿಂಶಂ ಬಾಣಕಾರ್ಮುಕಧಾರಿಣಮ್।
14054016c ತಸ್ಯಾಧಃ ಸ್ರೋತಸೋಽಪಶ್ಯದ್ವಾರಿ ಭೂರಿ ದ್ವಿಜೋತ್ತಮಃ।।
ಖಡ್ಗವನ್ನು ಬಿಗಿದು, ಬಾಣ-ಬಿಲ್ಲುಗಳನ್ನು ಹಿಡಿದು ಭೀಷಣನಾಗಿದ್ದ ಅವನ ಬಳಿ ನೀರುತುಂಬಿ ಸುರಿಯುತ್ತಿರುವುದನ್ನು ಆ ದ್ವಿಜೋತ್ತಮನು ಕಂಡನು.
14054017a ಸ್ಮರನ್ನೇವ ಚ ತಂ ಪ್ರಾಹ ಮಾತಂಗಃ ಪ್ರಹಸನ್ನಿವ।
14054017c ಏಹ್ಯುತ್ತಂಕ ಪ್ರತೀಚ್ಚಸ್ವ ಮತ್ತೋ ವಾರಿ ಭೃಗೂದ್ವಹ।
14054017e ಕೃಪಾ ಹಿ ಮೇ ಸುಮಹತೀ ತ್ವಾಂ ದೃಷ್ಟ್ವಾ ತೃಟ್ಸಮಾಹತಮ್।।
ಕೃಷ್ಣನನ್ನು ಸ್ಮರಿಸುತ್ತಿದ್ದಂತೆಯೇ ಆ ಮಾತಂಗನು ನಗುತ್ತಿರುವನೋ ಎನ್ನುವಂತೆ ಉತ್ತಂಕನಿಗೆ ಹೇಳಿದನು: “ಭೃಗೂದ್ವಹ! ಉತ್ತಂಕ! ಇತ್ತ ಬಾ! ನನ್ನ ಈ ನೀರನ್ನು ತೆಗೆದುಕೋ! ಬಾಯಾರಿಕೆಯಿಂದ ಬಳಲಿರುವ ನಿನ್ನನ್ನು ನೋಡಿ ನನಗೆ ಅತ್ಯಂತ ಕನಿಕರವುಂಟಾಗಿದೆ!”
14054018a ಇತ್ಯುಕ್ತಸ್ತೇನ ಸ ಮುನಿಸ್ತತ್ತೋಯಂ ನಾಭ್ಯನಂದತ।
14054018c ಚಿಕ್ಷೇಪ ಚ ಸ ತಂ ಧೀಮಾನ್ವಾಗ್ಭಿರುಗ್ರಾಭಿರಚ್ಯುತಮ್।।
ಅವನು ಹೀಗೆ ಹೇಳಲು ಮುನಿಯು ಆ ನೀರನ್ನು ಸ್ವೀಕರಿಸಲಿಲ್ಲ. ಆ ಧೀಮಾನನು ಅಚ್ಯುತನ ಮಾತುಗಳನ್ನು ಉಗ್ರವಾಗಿ ನಿಂದಿಸಿದನು.
14054019a ಪುನಃ ಪುನಶ್ಚ ಮಾತಂಗಃ ಪಿಬಸ್ವೇತಿ ತಮಬ್ರವೀತ್।
14054019c ನ ಚಾಪಿಬತ್ಸ ಸಕ್ರೋಧಃ ಕ್ಷುಭಿತೇನಾಂತರಾತ್ಮನಾ।।
ಮಾತಂಗನು ಅವನಿಗೆ ಪುನಃ ಪುನಃ ನೀರನ್ನು ಕುಡಿ ಎಂದು ಹೇಳಿದನು. ಆದರೆ ಅವನು ಕ್ರೋಧದಿಂದಾಗಿ ಮತ್ತು ತನ್ನೊಳಗೇ ಕ್ಷೋಭೆಗೊಂಡವನಾಗಿ ನೀರನ್ನು ಕುಡಿಯಲಿಲ್ಲ.
14054020a ಸ ತಥಾ ನಿಶ್ಚಯಾತ್ತೇನ ಪ್ರತ್ಯಾಖ್ಯಾತೋ ಮಹಾತ್ಮನಾ।
14054020c ಶ್ವಭಿಃ ಸಹ ಮಹಾರಾಜ ತತ್ರೈವಾಂತರಧೀಯತ।।
ಮಹಾರಾಜ! ಆ ಮಹಾತ್ಮನು ತನ್ನ ನಿಶ್ಚಯವನ್ನು ತಿಳಿಸಿದ ನಂತರ ನಾಯಿಗಳೊಂದಿಗೆ ಆ ಮಾತಂಗನು ಅಲ್ಲಿಯೇ ಅಂತರ್ಧಾನನಾದನು.
14054021a ಉತ್ತಂಕಸ್ತಂ ತಥಾ ದೃಷ್ಟ್ವಾ ತತೋ ವ್ರೀಡಿತಮಾನಸಃ।
14054021c ಮೇನೇ ಪ್ರಲಬ್ಧಮಾತ್ಮಾನಂ ಕೃಷ್ಣೇನಾಮಿತ್ರಘಾತಿನಾ।।
ಅವನು ಹಾಗೆ ಅಂತರ್ಧಾನನಾದುದನ್ನು ನೋಡಿ ಉತ್ತಂಕನು ಅಮಿತ್ರಘಾತಿ ಕೃಷ್ಣನಿಂದ ತಾನು ಮೋಸಹೋದೆನೆಂದು ನಾಚಿಕೊಂಡನು.
14054022a ಅಥ ತೇನೈವ ಮಾರ್ಗೇಣ ಶಂಖಚಕ್ರಗದಾಧರಃ।
14054022c ಆಜಗಾಮ ಮಹಾಬಾಹುರುತ್ತಂಕಶ್ಚೈನಮಬ್ರವೀತ್।।
ಆಗ ಅದೇ ಮಾರ್ಗದಿಂದ ಶಂಕಚಕ್ರಗದಾಧರನು ಬಂದನು. ಮಹಾಬಾಹು ಉತ್ತಂಕನು ಅವನಿಗೆ ಹೀಗೆ ಹೇಳಿದನು:
14054023a ನ ಯುಕ್ತಂ ತಾದೃಶಂ ದಾತುಂ ತ್ವಯಾ ಪುರುಷಸತ್ತಮ।
14054023c ಸಲಿಲಂ ವಿಪ್ರಮುಖ್ಯೇಭ್ಯೋ ಮಾತಂಗಸ್ರೋತಸಾ ವಿಭೋ।।
“ಪುರುಷಸತ್ತಮ! ವಿಭೋ! ಹಾಗೆ ವಿಪ್ರಮುಖ್ಯನಿಗೆ ಮಾತಂಗನ ಮೂಲಕ ನೀರನ್ನು ಕೊಡುವಂತೆ ಮಾಡಿದುದು ನಿನಗೆ ಯುಕ್ತವಲ್ಲ!”
14054024a ಇತ್ಯುಕ್ತವಚನಂ ಧೀಮಾನ್ಮಹಾಬುದ್ಧಿರ್ಜನಾರ್ದನಃ।
14054024c ಉತ್ತಂಕಂ ಶ್ಲಕ್ಷ್ಣಯಾ ವಾಚಾ ಸಾಂತ್ವಯನ್ನಿದಮಬ್ರವೀತ್।।
ಇದನ್ನು ಕೇಳಿದ ಧೀಮಾನ್ ಮಹಾಬುದ್ಧಿವಂತ ಜನಾರ್ದನನು ಉತ್ತಂಕನನ್ನು ಸಂತವಿಸುತ್ತಾ ಮಧುರವಾದ ಈ ಮಾತನ್ನಾಡಿದನು:
14054025a ಯಾದೃಶೇನೇಹ ರೂಪೇಣ ಯೋಗ್ಯಂ ದಾತುಂ ವೃತೇನ ವೈ।
14054025c ತಾದೃಶಂ ಖಲು ಮೇ ದತ್ತಂ ತ್ವಂ ತು ತನ್ನಾವಬುಧ್ಯಸೇ।।
“ನಿನಗೆ ಯಾವರೂಪದಲ್ಲಿ ನೀರನ್ನು ಕೊಡುವುದು ಉಚಿತವಾಗಿತ್ತೋ ಅದೇ ರೂಪವನ್ನು ಧರಿಸಿ ಅವನು ನಿನಗೆ ನೀರನ್ನು ಕುಡಿಯಲು ಕೊಟ್ಟಿರುವನು. ಆದರೆ ನೀನು ಆ ರಹಸ್ಯವನ್ನು ತಿಳಿದುಕೊಳ್ಳಲಿಲ್ಲ.
14054026a ಮಯಾ ತ್ವದರ್ಥಮುಕ್ತೋ ಹಿ ವಜ್ರಪಾಣಿಃ ಪುರಂದರಃ।
14054026c ಉತ್ತಂಕಾಯಾಮೃತಂ ದೇಹಿ ತೋಯರೂಪಮಿತಿ ಪ್ರಭುಃ।।
ನಿನಗೋಸ್ಕರವಾಗಿ ನಾನು ವಜ್ರಪಾಣಿ ಪ್ರಭು ಪುರಂದರನಲ್ಲಿ ಉತ್ತಂಕನಿಗೆ ನೀರಿನ ರೂಪದಲ್ಲಿ ಅಮೃತವನ್ನು ಕೊಡು ಎಂದು ಹೇಳಿದ್ದೆನು.
14054027a ಸ ಮಾಮುವಾಚ ದೇವೇಂದ್ರೋ ನ ಮರ್ತ್ಯೋಽಮರ್ತ್ಯತಾಂ ವ್ರಜೇತ್।
14054027c ಅನ್ಯಮಸ್ಮೈ ವರಂ ದೇಹೀತ್ಯಸಕೃದ್ಭೃಗುನಂದನ।।
ಭೃಗುನಂದನ! ಆಗ ದೇವೇಂದ್ರನು “ಮನುಷ್ಯರಿಗೆ ಅಮರ್ತ್ಯರಾಗುವಂಥಹ ಅಮೃತವನ್ನು ಕೊಡಬಾರದು. ಅವನಿಗೆ ಬೇರೆ ಏನಾದರೂ ವರವನ್ನು ಕೊಡು!” ಎಂದು ನನಗೆ ಹೇಳಿದ್ದನು.
14054028a ಅಮೃತಂ ದೇಯಮಿತ್ಯೇವ ಮಯೋಕ್ತಃ ಸ ಶಚೀಪತಿಃ।
14054028c ಸ ಮಾಂ ಪ್ರಸಾದ್ಯ ದೇವೇಂದ್ರಃ ಪುನರೇವೇದಮಬ್ರವೀತ್।।
“ಅಮೃತವನ್ನೇ ಕೊಡಬೇಕು!” ಎಂದು ನಾನು ಹೇಳಲು ಶಚೀಪತಿ ದೇವೇಂದ್ರನು ನನ್ನನ್ನು ಪ್ರಸನ್ನಗೊಳಿಸಲು ಪುನಃ ಇದನ್ನು ಹೇಳಿದನು:
14054029a ಯದಿ ದೇಯಮವಶ್ಯಂ ವೈ ಮಾತಂಗೋಽಹಂ ಮಹಾದ್ಯುತೇ।
14054029c ಭೂತ್ವಾಮೃತಂ ಪ್ರದಾಸ್ಯಾಮಿ ಭಾರ್ಗವಾಯ ಮಹಾತ್ಮನೇ।।
“ಮಹಾದ್ಯುತೇ! ಒಂದುವೇಳೆ ಅವನಿಗೆ ಅಮೃತವನ್ನೇ ಅವಶ್ಯವಾಗಿ ಕೊಡಬೇಕಾದರೆ ನಾನು ಮಾತಂಗನಾಗಿ ಮಹಾತ್ಮ ಭಾರ್ಗವನಿಗೆ ಕೊಡುತ್ತೇನೆ.
14054030a ಯದ್ಯೇವಂ ಪ್ರತಿಗೃಹ್ಣಾತಿ ಭಾರ್ಗವೋಽಮೃತಮದ್ಯ ವೈ।
14054030c ಪ್ರದಾತುಮೇಷ ಗಚ್ಚಾಮಿ ಭಾರ್ಗವಾಯಾಮೃತಂ ಪ್ರಭೋ।
14054030e ಪ್ರತ್ಯಾಖ್ಯಾತಸ್ತ್ವಹಂ ತೇನ ನ ದದ್ಯಾಮಿತಿ ಭಾರ್ಗವ।।
ಪ್ರಭೋ! ಒಂದು ವೇಳೆ ಆ ಭಾರ್ಗವನು ಇಂದು ನನ್ನಿಂದ ಹೀಗೆ ಅಮೃತವನ್ನು ಸ್ವೀಕರಿಸುತ್ತಾನಾದರೆ ಭಾರ್ಗವನಿಗೆ ಅಮೃತವನ್ನು ನೀಡಲು ಹೋಗುತ್ತೇನೆ. ಭಾರ್ಗವನು ಅದನ್ನು ತಿರಸ್ಕರಿಸಿದರೆ ನಾನು ಅವನಿಗೆ ಅದನ್ನು ಕೊಡುವುದಿಲ್ಲ!”
14054031a ಸ ತಥಾ ಸಮಯಂ ಕೃತ್ವಾ ತೇನ ರೂಪೇಣ ವಾಸವಃ।
14054031c ಉಪಸ್ಥಿತಸ್ತ್ವಯಾ ಚಾಪಿ ಪ್ರತ್ಯಾಖ್ಯಾತೋಽಮೃತಂ ದದತ್।
14054031e ಚಂಡಾಲರೂಪೀ ಭಗವಾನ್ಸುಮಹಾಂಸ್ತೇ ವ್ಯತಿಕ್ರಮಃ।।
ಹೀಗೆ ನನ್ನೊಡನೆ ಒಪ್ಪಂದವನ್ನು ಮಾಡಿಕೊಂಡು ವಾಸವನು ಆ ರೂಪದಿಂದ ನಿನಗೆ ಅಮೃತವನ್ನು ಕೊಡಲು ಬಂದಾಗ ನೀನು ಅದನ್ನು ತಿರಸ್ಕರಿಸಿದೆ. ಚಂಡಾಲರೂಪದಲ್ಲಿದ್ದ ಭಗವಂತನಿಗೆ ನೀನು ಮಹಾ ಅಪರಾಧವನ್ನೆಸಗಿರುವೆ!
14054032a ಯತ್ತು ಶಕ್ಯಂ ಮಯಾ ಕರ್ತುಂ ಭೂಯ ಏವ ತವೇಪ್ಸಿತಮ್।
14054032c ತೋಯೇಪ್ಸಾಂ ತವ ದುರ್ಧರ್ಷ ಕರಿಷ್ಯೇ ಸಫಲಾಮಹಮ್।।
ಆದರೂ ನಿನ್ನ ಬಯಕೆಯಂತೆ ನನ್ನಿಂದ ಏನು ಮಾಡಲು ಸಾಧ್ಯವೋ ಅದನ್ನು ಮಾಡುತ್ತೇನೆ. ದುರ್ಧರ್ಷ! ನಿನ್ನ ಈ ನೀರಿನ ಬಯಕೆಯನ್ನು ಸಫಲಗೊಳಿಸುತ್ತೇನೆ.
14054033a ಯೇಷ್ವಹಃಸು ತವ ಬ್ರಹ್ಮನ್ಸಲಿಲೇಚ್ಚಾ ಭವಿಷ್ಯತಿ।
14054033c ತದಾ ಮರೌ ಭವಿಷ್ಯಂತಿ ಜಲಪೂರ್ಣಾಃ ಪಯೋಧರಾಃ।।
ಬ್ರಹ್ಮನ್! ನಿನಗೆ ಯಾವಾಗಲೆಲ್ಲ ನೀರಿನ ಬಯಕೆಯಾಗುತ್ತದೆಯೋ ಆಗ ಈ ಮರುಭೂಮಿಯಲ್ಲಿ ಮಳೆತುಂಬಿದ ಮೋಡಗಳು ಕವಿಯುತ್ತವೆ.
14054034a ರಸವಚ್ಚ ಪ್ರದಾಸ್ಯಂತಿ ತೇ ತೋಯಂ ಭೃಗುನಂದನ।
14054034c ಉತ್ತಂಕಮೇಘಾ ಇತ್ಯುಕ್ತಾಃ ಖ್ಯಾತಿಂ ಯಾಸ್ಯಂತಿ ಚಾಪಿ ತೇ।।
ಭೃಗುನಂದನ! ಅವು ರಸವತ್ತಾದ ಮಳೆಯನ್ನು ಸುರಿಸುತ್ತವೆ. ಆ ಮೋಡಗಳು ಉತ್ತಂಕಮೇಘಗಳೆಂದೇ ಖ್ಯಾತಿಹೊಂದುತ್ತವೆ!”
14054035a ಇತ್ಯುಕ್ತಃ ಪ್ರೀತಿಮಾನ್ವಿಪ್ರಃ ಕೃಷ್ಣೇನ ಸ ಬಭೂವ ಹ।
14054035c ಅದ್ಯಾಪ್ಯುತ್ತಂಕಮೇಘಾಶ್ಚ ಮರೌ ವರ್ಷಂತಿ ಭಾರತ।।
ಭಾರತ! ಕೃಷ್ಣನು ಹೀಗೆ ಹೇಳಲು ವಿಪ್ರನು ಸಂತೋಷಗೊಂಡನು. ಇಂದೂ ಕೂಡ ಮರುಭೂಮಿಯಲ್ಲಿ ಆ ಉತ್ತಂಕಮೇಘಗಳು ಮಳೆಗರೆಯುತ್ತವೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತಂಕೋಪಾಖ್ಯಾನೇ ಚತುಷ್ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತಂಕೋಪಾಖ್ಯಾನ ಎನ್ನುವ ಐವತ್ನಾಲ್ಕನೇ ಅಧ್ಯಾಯವು.