052: ಉತ್ತಂಕೋಪಾಖ್ಯಾನೇ ಕೃಷ್ಣೋತ್ತಂಕಸಮಾಗಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 52

ಸಾರ

ಮಾರ್ಗದಲ್ಲಿ ದೊರಕಿದ ಮುನಿ ಉತ್ತಂಕನು ಕುರು-ಪಾಂಡವರ ನಡುವೆ ಸಂಧಿಯು ಯಶಸ್ವಿಯಾಯಿತೇ ಎಂದು ಕೃಷ್ಣನಲ್ಲಿ ಕೇಳುವುದು (1-14). ಕೃಷ್ಣನು ಯುದ್ಧದಲ್ಲಿ ಸರ್ವ ಧಾರ್ತರಾಷ್ಟ್ರರೂ ನಾಶವಾದುದನ್ನು ಹೇಳಲು ಉತ್ತಂಕನು ಅವನಿಗೆ ಶಾಪವನ್ನು ಕೊಡಲು ಮುಂದಾದುದು (15-26).

14052001 ವೈಶಂಪಾಯನ ಉವಾಚ
14052001a ತಥಾ ಪ್ರಯಾಂತಂ ವಾರ್ಷ್ಣೇಯಂ ದ್ವಾರಕಾಂ ಭರತರ್ಷಭಾಃ।
14052001c ಪರಿಷ್ವಜ್ಯ ನ್ಯವರ್ತಂತ ಸಾನುಯಾತ್ರಾಃ ಪರಂತಪಾಃ।।

ವೈಶಂಪಾಯನನು ಹೇಳಿದನು: “ಹೀಗೆ ವಾರ್ಷ್ಣೇಯನು ದ್ವಾರಕೆಗೆ ಹೊರಡುವಾಗ ಪರಂತಪ ಭರತರ್ಷಭರು ಅವನನ್ನು ಗಾಢವಾಗಿ ಆಲಂಗಿಸಿ ಬೀಳ್ಕೊಟ್ಟು ಸೇವಕರೊಡನೆ ಹಿಂದಿರುಗಿದರು.

14052002a ಪುನಃ ಪುನಶ್ಚ ವಾರ್ಷ್ಣೇಯಂ ಪರ್ಯಷ್ವಜತ ಫಲ್ಗುನಃ।
14052002c ಆ ಚಕ್ಷುರ್ವಿಷಯಾಚ್ಚೈನಂ ದದರ್ಶ ಚ ಪುನಃ ಪುನಃ।।

ಫಲ್ಗುನನು ವಾರ್ಷ್ಣೇಯನನ್ನು ಪುನಃ ಪುನಃ ತಬ್ಬಿಕೊಂಡನು. ಅವನು ಕಾಣುವವರೆಗೆ ಪುನಃ ಪುನಃ ಅವನ ಕಡೆ ನೋಡುತ್ತಲೇ ಇದ್ದನು.

14052003a ಕೃಚ್ಚ್ರೇಣೈವ ಚ ತಾಂ ಪಾರ್ಥೋ ಗೋವಿಂದೇ ವಿನಿವೇಶಿತಾಮ್।
14052003c ಸಂಜಹಾರ ತದಾ ದೃಷ್ಟಿಂ ಕೃಷ್ಣಶ್ಚಾಪ್ಯಪರಾಜಿತಃ।।

ಗೋವಿಂದನನ್ನೇ ನೋಡುತ್ತಿದ್ದ ಪಾರ್ಥನು ಅವನು ಕಾಣದಂತಾದಾಗ ಕಷ್ಟದಿಂದಲೇ ತನ್ನ ದೃಷ್ಟಿಯನ್ನು ಹಿಂದೆ ತೆಗೆದುಕೊಂಡನು. ಅಪರಾಜಿತ ಕೃಷ್ಣನೂ ಕೂಡ ಹಾಗೆಯೇ ಮಾಡಿದನು.

14052004a ತಸ್ಯ ಪ್ರಯಾಣೇ ಯಾನ್ಯಾಸನ್ನಿಮಿತ್ತಾನಿ ಮಹಾತ್ಮನಃ।
14052004c ಬಹೂನ್ಯದ್ಭುತರೂಪಾಣಿ ತಾನಿ ಮೇ ಗದತಃ ಶೃಣು।।

ಆ ಮಹಾತ್ಮನು ಪ್ರಯಾಣಿಸುವಾಗ ಅನೇಕ ಅದ್ಭುತ ನಿಮಿತ್ತಗಳು ಕಂಡುಬಂದವು. ಅವುಗಳ ಕುರಿತು ಹೇಳುತ್ತೇನೆ. ಕೇಳು.

14052005a ವಾಯುರ್ವೇಗೇನ ಮಹತಾ ರಥಸ್ಯ ಪುರತೋ ವವೌ।
14052005c ಕುರ್ವನ್ನಿಃಶರ್ಕರಂ ಮಾರ್ಗಂ ವಿರಜಸ್ಕಮಕಂಟಕಮ್।।

ಭಿರುಗಾಳಿಯು ವೇಗದಿಂದ ರಥದ ಮುಂದೆ ಬೀಸಿ ಮಾರ್ಗದಲ್ಲಿ ಕಲ್ಲು, ಧೂಳು ಮತ್ತು ಮುಳ್ಳುಗಳು ಇರದಂತೆ ಮಾಡಿತು.

14052006a ವವರ್ಷ ವಾಸವಶ್ಚಾಪಿ ತೋಯಂ ಶುಚಿ ಸುಗಂಧಿ ಚ।
14052006c ದಿವ್ಯಾನಿ ಚೈವ ಪುಷ್ಪಾಣಿ ಪುರತಃ ಶಾರ್ಙ್ರಧನ್ವನಃ।।

ಇಂದ್ರನೂ ಕೂಡ ಶಾಂಙ್ರಧನ್ವಿಯ ಎದಿರು ಶುಭ್ರವೂ ಸುಗಂಧಯುಕ್ತವೂ ಆದ ಮಳೆಯನ್ನೂ ದಿವ್ಯ ಪುಷ್ಪಗಳನ್ನೂ ಸುರಿಸಿದನು.

14052007a ಸ ಪ್ರಯಾತೋ ಮಹಾಬಾಹುಃ ಸಮೇಷು ಮರುಧನ್ವಸು।
14052007c ದದರ್ಶಾಥ ಮುನಿಶ್ರೇಷ್ಠಮುತ್ತಂಕಮಮಿತೌಜಸಮ್।।

ಆ ಮಹಾಬಾಹುವು ಸಮಪ್ರದೇಶಗಳಲ್ಲಿ ಮತ್ತು ಮರುಭೂಮಿಗಳಲ್ಲಿ ಪ್ರಯಾಣಿಸುತ್ತಿದ್ದಾಗ ಅಲ್ಲಿ ಅಮಿತೌಜಸ ಮುನಿಶ್ರೇಷ್ಠ ಉತ್ತಂಕನನ್ನು ಕಂಡನು.

14052008a ಸ ತಂ ಸಂಪೂಜ್ಯ ತೇಜಸ್ವೀ ಮುನಿಂ ಪೃಥುಲಲೋಚನಃ।
14052008c ಪೂಜಿತಸ್ತೇನ ಚ ತದಾ ಪರ್ಯಪೃಚ್ಚದನಾಮಯಮ್।।

ವಿಶಾಲಾಕ್ಷನು ಆ ತೇಜಸ್ವೀ ಮುನಿಯನ್ನು ಪೂಜಿಸಿದನು. ಅವನಿಂದ ಪ್ರತಿಪೂಜೆಯನ್ನು ಪಡೆದು ಕೃಷ್ಣನು ಅವನ ಯೋಗಕ್ಷೇಮವನ್ನು ವಿಚಾರಿಸಿದನು.

14052009a ಸ ಪೃಷ್ಟಃ ಕುಶಲಂ ತೇನ ಸಂಪೂಜ್ಯ ಮಧುಸೂದನಮ್।
14052009c ಉತ್ತಂಕೋ ಬ್ರಾಹ್ಮಣಶ್ರೇಷ್ಠಸ್ತತಃ ಪಪ್ರಚ್ಚ ಮಾಧವಮ್।।

ಕುಶಲ ಪ್ರಶ್ನೆಯನ್ನು ಕೇಳಿದ ಮಧುಸೂದನನನ್ನು ಪೂಜಿಸಿ ಬ್ರಾಹ್ಮಣಶ್ರೇಷ್ಠ ಉತ್ತಂಕನು ಮಾಧವನನ್ನು ಪ್ರಶ್ನಿಸಿದನು:

14052010a ಕಚ್ಚಿಚ್ಚೌರೇ ತ್ವಯಾ ಗತ್ವಾ ಕುರುಪಾಂಡವಸದ್ಮ ತತ್।
14052010c ಕೃತಂ ಸೌಭ್ರಾತ್ರಮಚಲಂ ತನ್ಮೇ ವ್ಯಾಖ್ಯಾತುಮರ್ಹಸಿ।।

“ಶೌರೇ! ನೀನು ಕುರು-ಪಾಂಡವರ ಸದನಗಳಿಗೆ ಹೋಗಿ ಎರಡೂ ಪಂಗಡಗಳಲ್ಲಿ ಉತ್ತಮ ಭ್ರಾತೃಭಾವವನ್ನು ಉಂಟುಮಾಡಿಸಿ ಬಂದೆಯಾ? ಅದರ ಕುರಿತು ನೀನು ನನಗೆ ಹೇಳಬೇಕು.

14052011a ಅಭಿಸಂಧಾಯ ತಾನ್ವೀರಾನುಪಾವೃತ್ತೋಽಸಿ ಕೇಶವ।
14052011c ಸಂಬಂಧಿನಃ ಸುದಯಿತಾನ್ಸತತಂ ವೃಷ್ಣಿಪುಂಗವ।।

ಕೇಶವ! ವೃಷ್ಣಿಪುಂಗವ! ಸತತವೂ ನಿನ್ನ ಸಂಬಂಧಿಗಳೂ ಪ್ರೀತಿಪಾತ್ರರೂ ಆದ ಆ ವೀರರ ನಡುವೆ ಸಂಧಿಯನ್ನು ನಡೆಸಿಕೊಟ್ಟು ಬಂದೆಯಾ?

14052012a ಕಚ್ಚಿತ್ಪಾಂಡುಸುತಾಃ ಪಂಚ ಧೃತರಾಷ್ಟ್ರಸ್ಯ ಚಾತ್ಮಜಾಃ।
14052012c ಲೋಕೇಷು ವಿಹರಿಷ್ಯಂತಿ ತ್ವಯಾ ಸಹ ಪರಂತಪ।।

ಪರಂತಪ! ಐವರು ಪಾಂಡುಸುತರು ಮತ್ತು ಧೃತರಾಷ್ಟ್ರನ ಮಕ್ಕಳು ನಿನ್ನೊಡನೆ ಲೋಕಗಳಲ್ಲಿ ವಿಹರಿಸುತ್ತಿದ್ದಾರೆ ತಾನೇ?

14052013a ಸ್ವರಾಷ್ಟ್ರೇಷು ಚ ರಾಜಾನಃ ಕಚ್ಚಿತ್ಪ್ರಾಪ್ಸ್ಯಂತಿ ವೈ ಸುಖಮ್।
14052013c ಕೌರವೇಷು ಪ್ರಶಾಂತೇಷು ತ್ವಯಾ ನಾಥೇನ ಮಾಧವ।।

ಮಾಧವ! ನಾಥನಾದ ನೀನು ಕೌರವರಲ್ಲಿ ಶಾಂತಿಯನ್ನು ಏರ್ಪಡಿಸಿದ ನಂತರ ರಾಜರು ತಮ್ಮ ತಮ್ಮ ರಾಷ್ಟ್ರಗಳಲ್ಲಿ ಸುಖದಿಂದ ಇರುವರು ತಾನೇ?

14052014a ಯಾ ಮೇ ಸಂಭಾವನಾ ತಾತ ತ್ವಯಿ ನಿತ್ಯಮವರ್ತತ।
14052014c ಅಪಿ ಸಾ ಸಫಲಾ ಕೃಷ್ಣ ಕೃತಾ ತೇ ಭರತಾನ್ಪ್ರತಿ।।

ಕೃಷ್ಣ! ಮಗೂ! ನೀನು ಹಾಗೆಯೇ ಮಾಡುತ್ತೀಯೆ ಎಂದು ನನಗೆ ಸಂಪೂರ್ಣವಾದ ಭರವಸೆಯಿದ್ದಿತು. ಏಕೆಂದರೆ ಭಾರತರ ಪ್ರತಿ ನಿನಗಿರುವ ಪ್ರೀತಿಯಿಂದಾಗಿ ಸಂಧಿಯು ಸಫಲವಾಗಲೇ ಬೇಕಿತ್ತು!”

14052015 ವಾಸುದೇವ ಉವಾಚ
14052015a ಕೃತೋ ಯತ್ನೋ ಮಯಾ ಬ್ರಹ್ಮನ್ಸೌಭ್ರಾತ್ರೇ ಕೌರವಾನ್ಪ್ರತಿ।
14052015c ನ ಚಾಶಕ್ಯಂತ ಸಂಧಾತುಂ ತೇಽಧರ್ಮರುಚಯೋ ಮಯಾ।।

ವಾಸುದೇವನು ಹೇಳಿದನು: “ಬ್ರಹ್ಮನ್! ಕೌರವರಲ್ಲಿ ಪರಸ್ಪರ ಸೌಭ್ರಾತೃತ್ವವನ್ನುಂಟುಮಾಡಲು ನಾನು ಪ್ರಯತ್ನಿಸಿದೆ. ಆದರೆ ಅಧರ್ಮದಲ್ಲಿಯೇ ಆಸಕ್ತರಾದ ಅವರು ಸಂಧಿಮಾಡಿಕೊಳ್ಳುವಂತೆ ಮಾಡಲು ನನಗೆ ಶಕ್ಯವಾಗಲಿಲ್ಲ.

14052016a ತತಸ್ತೇ ನಿಧನಂ ಪ್ರಾಪ್ತಾಃ ಸರ್ವೇ ಸಸುತಬಾಂಧವಾಃ।
14052016c ನ ದಿಷ್ಟಮಭ್ಯತಿಕ್ರಾಂತುಂ ಶಕ್ಯಂ ಬುದ್ಧ್ಯಾ ಬಲೇನ ವಾ।
14052016e ಮಹರ್ಷೇ ವಿದಿತಂ ನೂನಂ ಸರ್ವಮೇತತ್ತವಾನಘ।।

ಅನಂತರ ಅವರೆಲ್ಲರೂ ಮಕ್ಕಳು-ಬಾಂಧವರೊಂದಿಗೆ ನಿಧನಹೊಂದಿದರು. ಬುದ್ಧಿ ಅಥವಾ ಬಲಗಳಿಂದ ದೈವವನ್ನು ಅತಿಕ್ರಮಿಸಲು ಶಕ್ಯವಿಲ್ಲ. ಮಹರ್ಷೇ! ಅನಘ! ಇವೆಲ್ಲವೂ ನಿನಗೆ ತಿಳಿದಿದ್ದೇ ಆಗಿವೆ!

14052017a ತೇಽತ್ಯಕ್ರಾಮನ್ಮತಿಂ ಮಹ್ಯಂ ಭೀಷ್ಮಸ್ಯ ವಿದುರಸ್ಯ ಚ।
14052017c ತತೋ ಯಮಕ್ಷಯಂ ಜಗ್ಮುಃ ಸಮಾಸಾದ್ಯೇತರೇತರಮ್।।

ಮಹಾಮತಿ ಭೀಷ್ಮ ಮತ್ತು ವಿದುರರ ಸಲಹೆಗಳನ್ನು ಅತಿಕ್ರಮಿಸಿ ಅವರು ಪರಸ್ಪರರರೊಡನೆ ಹೋರಾಡಿ ಯಮಕ್ಷಯಕ್ಕೆ ಹೋದರು.

14052018a ಪಂಚ ವೈ ಪಾಂಡವಾಃ ಶಿಷ್ಟಾ ಹತಮಿತ್ರಾ ಹತಾತ್ಮಜಾಃ।
14052018c ಧಾರ್ತರಾಷ್ಟ್ರಾಶ್ಚ ನಿಹತಾಃ ಸರ್ವೇ ಸಸುತಬಾಂಧವಾಃ।।

ಮಕ್ಕಳನ್ನೂ ಮಿತ್ರರನ್ನು ಕಳೆದುಕೊಂಡ ಐವರು ಪಾಂಡವರು ಮಾತ್ರ ಉಳಿದುಕೊಂಡಿದ್ದಾರೆ. ಧಾರ್ತರಾಷ್ಟ್ರರೆಲ್ಲರೂ ಮಕ್ಕಳು-ಬಾಂಧವರೊಡನೆ ಹತರಾಗಿದ್ದಾರೆ.”

14052019a ಇತ್ಯುಕ್ತವಚನೇ ಕೃಷ್ಣೇ ಭೃಶಂ ಕ್ರೋಧಸಮನ್ವಿತಃ।
14052019c ಉತ್ತಂಕಃ ಪ್ರತ್ಯುವಾಚೈನಂ ರೋಷಾದುತ್ಫಾಲ್ಯ ಲೋಚನೇ।।

ಕೃಷ್ಣನು ಹೀಗೆ ಹೇಳಲು ಉತ್ತಂಕನು ಅತ್ಯಂತ ಕ್ರೋಧಸಮನ್ವಿತನಾದನು. ರೋಷದಿಂದ ಕಣ್ಣುಗಳನ್ನು ಅರಳಿಸಿಕೊಂಡು ಅವನು ಈ ಮಾತುಗಳನ್ನಾಡಿದನು:

14052020a ಯಸ್ಮಾಚ್ಚಕ್ತೇನ ತೇ ಕೃಷ್ಣ ನ ತ್ರಾತಾಃ ಕುರುಪಾಂಡವಾಃ।
14052020c ಸಂಬಂಧಿನಃ ಪ್ರಿಯಾಸ್ತಸ್ಮಾಚ್ಚಪ್ಸ್ಯೇಽಹಂ ತ್ವಾಮಸಂಶಯಮ್।।

“ಕೃಷ್ಣ! ಶಕ್ತನಾಗಿದ್ದರೂ ಸಂಬಂಧಿಗಳೂ ಪ್ರಿಯರೂ ಆಗಿದ್ದ ಕುರು-ಪಾಂಡವರನ್ನು ನೀನು ರಕ್ಷಿಸಲಿಲ್ಲ. ಆದುದರಿಂದ ನಿನ್ನನ್ನೀಗ ಶಪಿಸುತ್ತೇನೆ. ಇದರಲ್ಲಿ ಸಂಶಯವೇ ಇಲ್ಲ!

14052021a ನ ಚ ತೇ ಪ್ರಸಭಂ ಯಸ್ಮಾತ್ತೇ ನಿಗೃಹ್ಯ ನಿವರ್ತಿತಾಃ।
14052021c ತಸ್ಮಾನ್ಮನ್ಯುಪರೀತಸ್ತ್ವಾಂ ಶಪ್ಸ್ಯಾಮಿ ಮಧುಸೂದನ।।

ಮಧುಸೂದನ! ಬಲವನ್ನು ಪ್ರಯೋಗಿಸಿಯಾದರೂ ನೀನು ಅವರನ್ನು ತಡೆಯಬಹುದಾಗಿತ್ತು. ವಿನಾಶದಿಂದ ಪಾರುಮಾಡಬಹುದಾಗಿತ್ತು. ಆದರೆ ನೀನು ಹಾಗೆ ಮಾಡಲಿಲ್ಲ. ಇದರಿಂದ ಕುಪಿತನಾಗಿ ನಾನು ನಿನ್ನನ್ನು ಶಪಿಸುತ್ತೇನೆ.

14052022a ತ್ವಯಾ ಹಿ ಶಕ್ತೇನ ಸತಾ ಮಿಥ್ಯಾಚಾರೇಣ ಮಾಧವ।
14052022c ಉಪಚೀರ್ಣಾಃ ಕುರುಶ್ರೇಷ್ಠಾ ಯಸ್ತ್ವೇತಾನ್ಸಮುಪೇಕ್ಷಥಾಃ।।

ಮಾಧವ! ತಡೆಯಲು ಶಕ್ತನಾಗಿದ್ದರೂ ನೀನು ಪರಸ್ಪರರನ್ನು ನಾಶಗೊಳಿಸಿದ ಕುರುಶ್ರೇಷ್ಠರನ್ನು ಮಿಥ್ಯಾಚಾರದಿಂದ ಉಪೇಕ್ಷಿಸಿದೆ!”

14052023 ವಾಸುದೇವ ಉವಾಚ
14052023a ಶೃಣು ಮೇ ವಿಸ್ತರೇಣೇದಂ ಯದ್ವಕ್ಷ್ಯೇ ಭೃಗುನಂದನ।
14052023c ಗೃಹಾಣಾನುನಯಂ ಚಾಪಿ ತಪಸ್ವೀ ಹ್ಯಸಿ ಭಾರ್ಗವ।।

ವಾಸುದೇವನು ಹೇಳಿದನು: “ಭೃಗುನಂದನ! ಭಾರ್ಗವ! ನೀನು ತಪಸ್ವಿಯಾಗಿರುವೆ! ಕೋಪಗೊಳ್ಳಬೇಡ! ನಾನು ಹೇಳುವುದನ್ನು ಸಮಗ್ರವಾಗಿ ಕೇಳಿ ನನ್ನ ಪ್ರಾರ್ಥನೆಯನ್ನು ಅಂಗೀಕರಿಸು.

14052024a ಶ್ರುತ್ವಾ ತ್ವಮೇತದಧ್ಯಾತ್ಮಂ ಮುಂಚೇಥಾಃ ಶಾಪಮದ್ಯ ವೈ।
14052024c ನ ಚ ಮಾಂ ತಪಸಾಲ್ಪೇನ ಶಕ್ತೋಽಭಿಭವಿತುಂ ಪುಮಾನ್।।

ನನ್ನಿಂದ ಆಧ್ಯಾತ್ಮತತ್ತ್ವವನ್ನು ಕೇಳಿದನಂತರ ನೀನು ನನಗೆ ಶಾಪವನ್ನು ಕೊಡಬಹುದು. ಅಲ್ಪ ತಪಸ್ಸಿನಿಂದ ಯಾವ ಪುರುಷನೂ ನನ್ನನ್ನು ತಿರಸ್ಕರಿಸಲಾರನು.

14052025a ನ ಚ ತೇ ತಪಸೋ ನಾಶಮಿಚ್ಚಾಮಿ ಜಪತಾಂ ವರ।
14052025c ತಪಸ್ತೇ ಸುಮಹದ್ದೀಪ್ತಂ ಗುರವಶ್ಚಾಪಿ ತೋಷಿತಾಃ।।

ಜಪಿಗಳಲ್ಲಿ ಶ್ರೇಷ್ಠನೇ! ನಿನ್ನ ತಪಸ್ಸು ನಾಶವಾಗುವುದನ್ನು ನಾನು ಬಯಸುವುದಿಲ್ಲ. ಗುರುವನ್ನು ತೃಪ್ತಿಗೊಳಿಸುರುವ ನಿನ್ನ ತಪಸ್ಸು ಮಹಾ ದೀಪ್ತವಾದುದು.

14052026a ಕೌಮಾರಂ ಬ್ರಹ್ಮಚರ್ಯಂ ತೇ ಜಾನಾಮಿ ದ್ವಿಜಸತ್ತಮ।
14052026c ದುಃಖಾರ್ಜಿತಸ್ಯ ತಪಸಸ್ತಸ್ಮಾನ್ನೇಚ್ಚಾಮಿ ತೇ ವ್ಯಯಮ್।।

ದ್ವಿಜಸತ್ತಮ! ಬಾಲ್ಯದಿಂದಲೇ ನೀನು ಬ್ರಹ್ಮಚರ್ಯವನ್ನು ಪಾಲಿಸುತ್ತಿರುವೆ ಎಂದು ತಿಳಿದಿದ್ದೇನೆ. ಆದುದರಿಂದ ಕಷ್ಟದಿಂದ ಸಂಪಾದಿಸಿದ ನಿನ್ನ ಈ ತಪಸ್ಸನ್ನು ವ್ಯಯಗೊಳಿಸಲು ನಾನು ಇಷ್ಟಪಡುವುದಿಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತಂಕೋಪಾಖ್ಯಾನೇ ಕೃಷ್ಣೋತ್ತಂಕಸಮಾಗಮೇ ದ್ವಿಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತಂಕೋಪಾಖ್ಯಾನೇ ಕೃಷ್ಣೋತ್ತಂಕಸಮಾಗಮ ಎನ್ನುವ ಐವತ್ತೆರಡನೇ ಅಧ್ಯಾಯವು.