050: ಅನುಗೀತಾಯಾಂ ಗುರುಶಿಷ್ಯಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 50

ಸಾರ

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (1-48). “ಇದನ್ನೇ ನಾನು ಯುದ್ಧದ ಸಮಯದಲ್ಲಿ ನಿನಗೆ ಹೇಳಿದ್ದೆ!” ಎಂದು ಹೇಳಿ ಕೃಷ್ಣನು ಅರ್ಜುನನೊಡನೆ ಹಸ್ತಿನಾಪುರಕ್ಕೆ ಹೊರಟಿದುದು (49-51).

14050001 ಬ್ರಹ್ಮೋವಾಚ
14050001a ಭೂತಾನಾಮಥ ಪಂಚಾನಾಂ ಯಥೈಷಾಮೀಶ್ವರಂ ಮನಃ।
14050001c ನಿಯಮೇ ಚ ವಿಸರ್ಗೇ ಚ ಭೂತಾತ್ಮಾ ಮನ ಏವ ಚ।।

ಬ್ರಹ್ಮನು ಹೇಳಿದನು: “ಮನಸ್ಸು ಪಂಚಭೂತಗಳ ಈಶ್ವರವು ಹೇಗೋ ಹಾಗೆ ಸೃಷ್ಟಿ ಮತ್ತು ನಿಯಮಗಳಲ್ಲಿ ಪಂಚಭೂತಗಳ ಆತ್ಮವೂ ಮನಸ್ಸೇ ಆಗಿರುತ್ತದೆ.

14050002a ಅಧಿಷ್ಠಾತಾ ಮನೋ ನಿತ್ಯಂ ಭೂತಾನಾಂ ಮಹತಾಂ ತಥಾ।
14050002c ಬುದ್ಧಿರೈಶ್ವರ್ಯಮಾಚಷ್ಟೇ ಕ್ಷೇತ್ರಜ್ಞಃ ಸರ್ವ ಉಚ್ಯತೇ।।

ಪಂಚ ಮಹಾಭೂತಗಳ ನಿತ್ಯ ಆಶ್ರಯವೂ ಮನಸ್ಸೇ ಆಗಿದೆ. ಬುದ್ಧಿಯನ್ನು ಐಶ್ವರ್ಯವೆಂದೂ, ಇವೆಲ್ಲವನ್ನೂ ಕ್ಷೇತ್ರಜ್ಞನೆಂದೂ ಹೇಳುತ್ತಾರೆ.

14050003a ಇಂದ್ರಿಯಾಣಿ ಮನೋ ಯುಂಕ್ತೇ ಸದಶ್ವಾನಿವ ಸಾರಥಿಃ।
14050003c ಇಂದ್ರಿಯಾಣಿ ಮನೋ ಬುದ್ಧಿಂ ಕ್ಷೇತ್ರಜ್ಞೋ ಯುಂಜತೇ ಸದಾ।।

ನಿಪುಣ ಸಾರಥಿಯು ಪಳಗಿದ ಕುದುರೆಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವಂತೆ ಮನಸ್ಸು ಎಲ್ಲ ಇಂದ್ರಿಯಗಳನ್ನೂ ತನ್ನ ಹತೋಟಿಯಲ್ಲಿಟ್ಟುಕೊಂಡಿರುತ್ತದೆ. ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳು ಸದಾ ಕ್ಷೇತ್ರಜ್ಞನನ್ನು ಸೇರಿಕೊಂಡಿರುತ್ತವೆ.

14050004a ಮಹಾಭೂತಸಮಾಯುಕ್ತಂ ಬುದ್ಧಿಸಂಯಮನಂ ರಥಮ್।
14050004c ತಮಾರುಹ್ಯ ಸ ಭೂತಾತ್ಮಾ ಸಮಂತಾತ್ಪರಿಧಾವತಿ।।

ಮಹಾಭೂತಗಳನ್ನು ಕಟ್ಟಿದ, ಬುದ್ಧಿಯ ನಿಯಂತ್ರಣದಲ್ಲಿರುವ ರಥವನ್ನೇರಿ ಭೂತಾತ್ಮನು ಎಲ್ಲಕಡೆ ತಿರುಗುತ್ತಿರುತ್ತಾನೆ.

14050005a ಇಂದ್ರಿಯಗ್ರಾಮಸಂಯುಕ್ತೋ ಮನಃಸಾರಥಿರೇವ ಚ।
14050005c ಬುದ್ಧಿಸಂಯಮನೋ ನಿತ್ಯಂ ಮಹಾನ್ಬ್ರಹ್ಮಮಯೋ ರಥಃ।।

ಇಂದ್ರಿಯಗ್ರಾಮಗಳನ್ನು ಕಟ್ಟಿರುವ, ಮನಸ್ಸೇ ಸಾರಥಿಯಾಗಿರುವ, ಬುದ್ಧಿಯೇ ಚಾವಟಿಯಾಗಿರುವ ಈ ದೇಹವು ನಿತ್ಯವೂ ಮಹಾ ಬ್ರಹ್ಮಮಯ ರಥವು.

14050006a ಏವಂ ಯೋ ವೇತ್ತಿ ವಿದ್ವಾನ್ವೈ ಸದಾ ಬ್ರಹ್ಮಮಯಂ ರಥಮ್।
14050006c ಸ ಧೀರಃ ಸರ್ವಲೋಕೇಷು ನ ಮೋಹಮಧಿಗಚ್ಚತಿ।।

ಈ ಬ್ರಹ್ಮಮಯ ರಥವನ್ನು ಸದಾ ತಿಳಿದುಕೊಂಡಿರುವವನೇ ಧೀರ. ಅವನು ಸರ್ವಲೋಕಗಳಲ್ಲಿಯೂ ಮೋಹಿತನಾಗುವುದಿಲ್ಲ.

14050007a ಅವ್ಯಕ್ತಾದಿ ವಿಶೇಷಾಂತಂ ತ್ರಸಸ್ಥಾವರಸಂಕುಲಮ್।
14050007c ಚಂದ್ರಸೂರ್ಯಪ್ರಭಾಲೋಕಂ ಗ್ರಹನಕ್ಷತ್ರಮಂಡಿತಮ್।।
14050008a ನದೀಪರ್ವತಜಾಲೈಶ್ಚ ಸರ್ವತಃ ಪರಿಭೂಷಿತಮ್।
14050008c ವಿವಿಧಾಭಿಸ್ತಥಾದ್ಭಿಶ್ಚ ಸತತಂ ಸಮಲಂಕೃತಮ್।।
14050009a ಆಜೀವಃ ಸರ್ವಭೂತಾನಾಂ ಸರ್ವಪ್ರಾಣಭೃತಾಂ ಗತಿಃ।
14050009c ಏತದ್ಬ್ರಹ್ಮವನಂ ನಿತ್ಯಂ ಯಸ್ಮಿಂಶ್ಚರತಿ ಕ್ಷೇತ್ರವಿತ್।।

ಈ ಜಗತ್ತು ಒಂದು ಬ್ರಹ್ಮವನವು. ಅವ್ಯಕ್ತ ಪ್ರಕೃತಿಯೇ ಇದರ ಆದಿಯು. ವಿಶೇಷವೇ ಅಂತ್ಯವು. ಸ್ಥಾವರ ಸಂಕುಲಗಳು ಈ ವನದಲ್ಲಿ ತುಂಬಿಕೊಂಡಿವೆ. ಚಂದ್ರ-ಸೂರ್ಯರೇ ಇದಕ್ಕೆ ಬೆಳಕು ನೀಡುತ್ತಾರೆ. ಗ್ರಹ-ನಕ್ಷತ್ರ ಮಂಡಲಗಳು ಇದರ ಅಲಂಕಾರ. ನದೀ-ಪರ್ವತಜಾಲಗಳಿಂದ ಎಲ್ಲಕಡೆಗಳಲ್ಲಿ ವಿಭೂಷಿತಗೊಂಡಿದೆ. ವಿವಿಧ ತೀರ್ಥಗಳಿಂದ ಸತತವೂ ಸಮಲಂಕೃತಗೊಂಡಿದೆ. ಸರ್ವಭೂತಗಳ ಜೀವದಾಯಕವೂ ಸರ್ವಪ್ರಾಣಗಳ ಸದ್ಗತಿಪ್ರದವೂ ಆಗಿದೆ. ಈ ಬ್ರಹ್ಮವನದಲ್ಲಿ ನಿತ್ಯವೂ ಕ್ಷೇತ್ರಜ್ಞನು ಸಂಚರಿಸುತ್ತಿರುತ್ತಾನೆ.

14050010a ಲೋಕೇಽಸ್ಮಿನ್ಯಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ।
14050010c ತಾನ್ಯೇವಾಗ್ರೇ ಪ್ರಲೀಯಂತೇ ಪಶ್ಚಾದ್ಭೂತಕೃತಾ ಗುಣಾಃ।
14050010e ಗುಣೇಭ್ಯಃ ಪಂಚಭೂತಾನಿ ಏಷ ಭೂತಸಮುಚ್ಚ್ರಯಃ।।

ಪ್ರಳಯದಲ್ಲಿ ಈ ಲೋಕದಲ್ಲಿರುವ ಸ್ಥಾವರ-ಚರಗಳೆಲ್ಲವೂ ಮೊದಲು ಪಂಚಮಹಾಭೂತಗಳ ಗುಣಗಳಲ್ಲಿ ಲೀನವಾಗುತ್ತವೆ. ಅನಂತರ ಗುಣಗಳು ಪಂಚಭೂತಗಳಲ್ಲಿಯೂ, ಪಂಚಭೂತಗಳು ಮೂಲ ಪ್ರಕೃತಿಯಲ್ಲಿಯೂ ಲೀನವಾಗುತ್ತವೆ.

14050011a ದೇವಾ ಮನುಷ್ಯಾ ಗಂಧರ್ವಾಃ ಪಿಶಾಚಾಸುರರಾಕ್ಷಸಾಃ।
14050011c ಸರ್ವೇ ಸ್ವಭಾವತಃ ಸೃಷ್ಟಾ ನ ಕ್ರಿಯಾಭ್ಯೋ ನ ಕಾರಣಾತ್।।

ದೇವತೆಗಳು, ಮನುಷ್ಯರು, ಗಂಧರ್ವರು, ಪಿಶಾಚ-ಅಸುರ-ರಾಕ್ಷಸರು ಎಲ್ಲರೂ ಸ್ವಭಾವತಃ ಸೃಷ್ಟಿಸಲ್ಪಟ್ಟರೇ ಹೊರತು ಯಾವುದೇ ಕ್ರಿಯೆ-ಕಾರಣಗಳಿಂದಾಗಿ ಅಲ್ಲ.

14050012a ಏತೇ ವಿಶ್ವಕೃತೋ ವಿಪ್ರಾ ಜಾಯಂತೇ ಹ ಪುನಃ ಪುನಃ।
14050012c ತೇಭ್ಯಃ ಪ್ರಸೂತಾಸ್ತೇಷ್ವೇವ ಮಹಾಭೂತೇಷು ಪಂಚಸು।
14050012e ಪ್ರಲೀಯಂತೇ ಯಥಾಕಾಲಮೂರ್ಮಯಃ ಸಾಗರೇ ಯಥಾ।।

ವಿಶ್ವವನ್ನು ಸೃಷ್ಟಿಸುವ ಮರೀಚಿ ಮೊದಲಾದ ವಿಪ್ರರು ಸಾಗರದ ಅಲೆಗಳಂತೆ ಪಂಚಮಹಾಭೂತಗಳಿಂದ ಪುನಃ ಪುನಃ ಹುಟ್ಟುತ್ತಿರುತ್ತಾರೆ. ಮತ್ತು ಯಥಾಕಾಲದಲ್ಲಿ ಪಂಚಭೂತಗಳಲ್ಲಿ ಪ್ರಲಯವಾಗುತ್ತಾರೆ ಕೂಡ.

14050013a ವಿಶ್ವಸೃಗ್ಭ್ಯಸ್ತು ಭೂತೇಭ್ಯೋ ಮಹಾಭೂತಾನಿ ಗಚ್ಚತಿ।
14050013c ಭೂತೇಭ್ಯಶ್ಚಾಪಿ ಪಂಚಭ್ಯೋ ಮುಕ್ತೋ ಗಚ್ಚೇತ್ಪ್ರಜಾಪತಿಮ್।।

ವಿಶ್ವವನ್ನು ಸೃಷ್ಟಿಸುವ ಭೂತಗಳು ಪಂಚಮಹಾಭೂತಗಳನ್ನು ಸೇರುತ್ತವೆ. ಪಂಚಮಹಾಭೂತಗಳೂ ಮುಕ್ತಗೊಂಡು ಪ್ರಜಾಪತಿಯನ್ನು ಸೇರುತ್ತವೆ.

14050014a ಪ್ರಜಾಪತಿರಿದಂ ಸರ್ವಂ ತಪಸೈವಾಸೃಜತ್ಪ್ರಭುಃ।
14050014c ತಥೈವ ವೇದಾನೃಷಯಸ್ತಪಸಾ ಪ್ರತಿಪೇದಿರೇ।।

ಇವೆಲ್ಲವನ್ನೂ ಪ್ರಭು ಪ್ರಜಾಪತಿಯು ತಪಸ್ಸಿನಿಂದಲೇ ಸೃಷ್ಟಿಸಿದನು. ಹಾಗೆಯೇ ಋಷಿಗಳೂ ಕೂಡ ತಪಸ್ಸನ್ನು ತಪಿಸಿಯೇ ಇದನ್ನು ತಿಳಿದುಕೊಂಡರು.

14050015a ತಪಸಶ್ಚಾನುಪೂರ್ವ್ಯೇಣ ಫಲಮೂಲಾಶಿನಸ್ತಥಾ।
14050015c ತ್ರೈಲೋಕ್ಯಂ ತಪಸಾ ಸಿದ್ಧಾಃ ಪಶ್ಯಂತೀಹ ಸಮಾಹಿತಾಃ।।

ಫಲಮೂಲಗಳನ್ನೇ ತಿಂದು ಜೀವಿಸುವ ಸಿದ್ಧರು ಸಮಾಹಿತರಾಗಿ ತಪಸ್ಸನ್ನು ಆಚರಿಸಿಯೇ ಮೂರೂ ಲೋಕಗಳನ್ನು ಮೊದಲಿನಿಂದ ಕಡೆಯವರೆಗೂ ಪ್ರತ್ಯಕ್ಷವಾಗಿ ಕಾಣುತ್ತಾರೆ.

14050016a ಓಷಧಾನ್ಯಗದಾದೀನೀ ನಾನಾವಿದ್ಯಾಶ್ಚ ಸರ್ವಶಃ।
14050016c ತಪಸೈವ ಪ್ರಸಿಧ್ಯಂತಿ ತಪೋಮೂಲಂ ಹಿ ಸಾಧನಮ್।।

ಔಷಧಿ ಮತ್ತು ಅನ್ಯ ಆರೋಗ್ಯಸಾಧಕಗಳೂ ಸಮಸ್ತವಾದ ನಾನಾ ವಿದ್ಯೆಗಳೂ ತಪಸ್ಸಿನಿಂದಲೇ ಸಿದ್ಧಿಗೊಳ್ಳುತ್ತವೆ. ಸಾಧನೆಯೇ ತಪಸ್ಸಿನ ಮೂಲ.

14050017a ಯದ್ದುರಾಪಂ ದುರಾಮ್ನಾಯಂ ದುರಾಧರ್ಷಂ ದುರನ್ವಯಮ್।
14050017c ತತ್ಸರ್ವಂ ತಪಸಾ ಸಾಧ್ಯಂ ತಪೋ ಹಿ ದುರತಿಕ್ರಮಮ್।।

ಹೊಂದಲು ಅಸಾಧ್ಯವಾಗಿರುವುದನ್ನು, ಅತಿಕಷ್ಟವಾಗಿರುವುದನ್ನು, ಎದುರಿಸಲು ಅಸಾಧ್ಯವಾದುದನ್ನು, ಯಾವುದರೊಂದಿಗೆ ಸಂಬಂಧವನ್ನು ಹೊಂದಲು ಕಷ್ಟಕರವಾಗಿರುವುದೋ ಅವೆಲ್ಲವನ್ನೂ ತಪಸ್ಸಿನಿಂದ ಸಾಧಿಸಿಕೊಳ್ಳಬಹುದು. ಏಕೆಂದರೆ ತಪಸ್ಸನ್ನು ಅತಿಕ್ರಮಿಸಲು ಸಾಧ್ಯವಿಲ್ಲ.

14050018a ಸುರಾಪೋ ಬ್ರಹ್ಮಹಾ ಸ್ತೇಯೀ ಭ್ರೂಣಹಾ ಗುರುತಲ್ಪಗಃ।
14050018c ತಪಸೈವ ಸುತಪ್ತೇನ ಮುಚ್ಯಂತೇ ಕಿಲ್ಬಿಷಾತ್ತತಃ।।

ಸುರೆಯನ್ನು ಕುಡಿದವನು, ಬ್ರಹ್ಮಹತ್ಯೆಯನ್ನು ಮಾಡಿದವನು, ಕಳ್ಳನು, ಭ್ರೂಣಹತ್ಯೆಯನ್ನು ಮಾಡಿದವನು ಮತ್ತು ಗುರುಪತ್ನಿಯೊಡನೆ ಸಮಾಗಮ ಮಾಡಿದವನು ಉತ್ತಮ ತಪಸ್ಸನ್ನು ತಪಿಸುವುದರಿಂದ ಪಾಪಗಳಿಂದ ಮುಕ್ತರಾಗುತ್ತಾರೆ.

14050019a ಮನುಷ್ಯಾಃ ಪಿತರೋ ದೇವಾಃ ಪಶವೋ ಮೃಗಪಕ್ಷಿಣಃ।
14050019c ಯಾನಿ ಚಾನ್ಯಾನಿ ಭೂತಾನಿ ತ್ರಸಾನಿ ಸ್ಥಾವರಾಣಿ ಚ।।
14050020a ತಪಃಪರಾಯಣಾ ನಿತ್ಯಂ ಸಿಧ್ಯಂತೇ ತಪಸಾ ಸದಾ।
14050020c ತಥೈವ ತಪಸಾ ದೇವಾ ಮಹಾಭಾಗಾ ದಿವಂ ಗತಾಃ।।

ಮನುಷ್ಯರು, ಪಿತೃಗಳು, ದೇವತೆಗಳು, ಪಶುಗಳು, ಮೃಗ-ಪಕ್ಷಿಗಳು ಮತ್ತು ಇರುವ ಅನ್ಯ ಸ್ಥಾವರ-ಜಂಗಮಗಳೂ ಕೂಡ ನಿತ್ಯವೂ ತಪಃಪರಾಯಣರಾಗಿದ್ದರೆ ತಪಸ್ಸಿನಿಂದಲೇ ಸಿದ್ಧಿಯನ್ನು ಪಡೆಯುತ್ತಾರೆ. ಮಹಾಭಾಗ ದೇವತೆಗಳೂ ಕೂಡ ತಪಸ್ಸಿನಿಂದಲೇ ಸ್ವರ್ಗಕ್ಕೆ ಹೋದರು.

14050021a ಆಶೀರ್ಯುಕ್ತಾನಿ ಕರ್ಮಾಣಿ ಕುರ್ವತೇ ಯೇ ತ್ವತಂದ್ರಿತಾಃ।
14050021c ಅಹಂಕಾರಸಮಾಯುಕ್ತಾಸ್ತೇ ಸಕಾಶೇ ಪ್ರಜಾಪತೇಃ।।

ಆಲಸ್ಯವಿಲ್ಲದೇ ಅಹಂಕಾರ ಸಮಾಯುಕ್ತರಾಗಿ ಕರ್ಮಗಳನ್ನು ಶ್ರದ್ಧೆಯಿಂದ ಮಾಡುವವರು ಪ್ರಜಾಪತಿಯ ಬಳಿ ಹೋಗುತ್ತಾರೆ.

14050022a ಧ್ಯಾನಯೋಗೇನ ಶುದ್ಧೇನ ನಿರ್ಮಮಾ ನಿರಹಂಕೃತಾಃ।
14050022c ಪ್ರಾಪ್ನುವಂತಿ ಮಹಾತ್ಮಾನೋ ಮಹಾಂತಂ ಲೋಕಮುತ್ತಮಮ್।।

ಶುದ್ಧವಾದ ಧ್ಯಾನಯೋಗದಿಂದ ಮಮಕಾರ-ಅಹಂಕಾರಗಳಿಲ್ಲದೇ ಮಹಾತ್ಮರು ಮಹಾಂತವಾದ ಉತ್ತಮ ಲೋಕಗಳನ್ನು ಪಡೆಯುತ್ತಾರೆ.

14050023a ಧ್ಯಾನಯೋಗಾದುಪಾಗಮ್ಯ ಪ್ರಸನ್ನಮತಯಃ ಸದಾ।
14050023c ಸುಖೋಪಚಯಮವ್ಯಕ್ತಂ ಪ್ರವಿಶಂತ್ಯಾತ್ಮವತ್ತಯಾ।।

ಧ್ಯಾನಯೋಗದಲ್ಲಿದ್ದುಕೊಂಡು ಸದಾ ಪ್ರಸನ್ನಮನಸ್ಕರಾಗಿರುವವರು ಸುಖದ ರಾಶಿಯಾಗಿರುವ ಅವ್ಯಕ್ತ ಪರಮಾತ್ಮನನ್ನು ಪ್ರವೇಶಿಸುತ್ತಾರೆ.

14050024a ಧ್ಯಾನಯೋಗಾದುಪಾಗಮ್ಯ ನಿರ್ಮಮಾ ನಿರಹಂಕೃತಾಃ।
14050024c ಅವ್ಯಕ್ತಂ ಪ್ರವಿಶಂತೀಹ ಮಹಾಂತಂ ಲೋಕಮುತ್ತಮಮ್।।

ಧ್ಯಾನಯೋಗದಲ್ಲಿದ್ದುಕೊಂಡು ಮಮಕಾರ-ಅಹಂಕಾರಗಳಿಲ್ಲದೇ ಕಾರ್ಯಮಾಡುವವರು ಅವ್ಯಕ್ತವೂ ಮಹಾಂತವೂ ಆದ ಉತ್ತಮ ಲೋಕವನ್ನು ಪ್ರವೇಶಿಸುತ್ತಾರೆ.

14050025a ಅವ್ಯಕ್ತಾದೇವ ಸಂಭೂತಃ ಸಮಯಜ್ಞೋ ಗತಃ ಪುನಃ।
14050025c ತಮೋರಜೋಭ್ಯಾಂ ನಿರ್ಮುಕ್ತಃ ಸತ್ತ್ವಮಾಸ್ಥಾಯ ಕೇವಲಮ್।।

ಪುನಃ ಅವ್ಯಕ್ತದಿಂದಲೇ ಹುಟ್ಟಿ ಕೇವಲ ಸತ್ಯಗುಣವನ್ನಾಶ್ರಯಿಸಿ ಸಮಯಜ್ಞನಾಗಿದ್ದುಕೊಂಡು ತಮ ಮತ್ತು ರಜೋಗುಣಗಳಿಂದ ನಿರ್ಮುಕ್ತನಾಗುತ್ತಾನೆ.

14050026a ವಿಮುಕ್ತಃ ಸರ್ವಪಾಪೇಭ್ಯಃ ಸರ್ವಂ ತ್ಯಜತಿ ನಿಷ್ಕಲಃ।
14050026c ಕ್ಷೇತ್ರಜ್ಞ ಇತಿ ತಂ ವಿದ್ಯಾದ್ಯಸ್ತಂ ವೇದ ಸ ವೇದವಿತ್।।

ಸರ್ವಪಾಪಗಳಿಂದ ವಿಮುಕ್ತನಾಗಿ ಸರ್ವ ವಿಕಾರಗಳನ್ನೂ ತ್ಯಜಿಸಿದವನನ್ನೇ ಕ್ಷೇತ್ರಜ್ಞನೆಂದು ತಿಳಿಯಬೇಕು. ಆ ಕ್ಷೇತ್ರಜ್ಞನನ್ನು ತಿಳಿದವನೇ ವೇದವಿದು ಎಂದು ತಿಳಿಯಬೇಕು.

14050027a ಚಿತ್ತಂ ಚಿತ್ತಾದುಪಾಗಮ್ಯ ಮುನಿರಾಸೀತ ಸಂಯತಃ।
14050027c ಯಚ್ಚಿತ್ತಸ್ತನ್ಮನಾ ಭೂತ್ವಾ ಗುಹ್ಯಮೇತತ್ಸನಾತನಮ್।।

ಮುನಿಯು ಚಿತ್ತವನ್ನು ಚಿತ್ತದಿಂದ ಪಡೆದುಕೊಂಡು ಅದರಲ್ಲಿಯೇ ಸಂಲಗ್ನನಾಗಿರುತ್ತಾನೆ. ಚಿತ್ತವು ಯಾವುದರಲ್ಲಿ ಇದೆಯೋ ಅದೇ ರೂಪವನ್ನು ಅದು ಪಡೆದುಕೊಳ್ಳುತ್ತದೆ. ಇದು ಸನಾತನ ರಹಸ್ಯವು.

14050028a ಅವ್ಯಕ್ತಾದಿ ವಿಶೇಷಾಂತಮವಿದ್ಯಾಲಕ್ಷಣಂ ಸ್ಮೃತಮ್।
14050028c ನಿಬೋಧತ ಯಥಾ ಹೀದಂ ಗುಣೈರ್ಲಕ್ಷಣಮಿತ್ಯುತ।।

ಅವ್ಯಕ್ತ ಪ್ರಕೃತಿಯಿಂದ ಹಿಡಿದು ಮಹಾಭೂತಾದಿ ಹದಿನಾರು ತತ್ತ್ವಗಳನ್ನೂ ಅವಿದ್ಯಾಲಕ್ಷಣವೆನ್ನುತ್ತಾರೆ. ಇವುಗಳಲ್ಲಿ ಗುಣಗಳು ಸೇರಿಕೊಂಡಿರುವುದರಿಂದಲೇ ಇವನ್ನು ಹಾಗೆ ಕರೆಯುತ್ತಾರೆಂದು ತಿಳಿಯಿರಿ.

14050029a ದ್ವ್ಯಕ್ಷರಸ್ತು ಭವೇನ್ಮೃತ್ಯುಸ್ತ್ರ್ಯಕ್ಷರಂ ಬ್ರಹ್ಮ ಶಾಶ್ವತಮ್।
14050029c ಮಮೇತಿ ಚ ಭವೇನ್ಮೃತ್ಯುರ್ನ ಮಮೇತಿ ಚ ಶಾಶ್ವತಮ್।।

ಎರಡು ಅಕ್ಷರಗಳು ಮೃತ್ಯುವಾಗುತ್ತವೆ. ಮೂರು ಅಕ್ಷರಗಳು ಶಾಶ್ವತ ಬ್ರಹ್ಮವಾಗುತ್ತದೆ. ’ಮಮ’ ಎನ್ನುವುದು ಮೃತ್ಯುವಾಗುತ್ತದೆ. ’ನ ಮಮ’ ಎನ್ನುವುದು ಶಾಶ್ವತವಾಗಿರುವುದು.

14050030a ಕರ್ಮ ಕೇ ಚಿತ್ಪ್ರಶಂಸಂತಿ ಮಂದಬುದ್ಧಿತರಾ ನರಾಃ।
14050030c ಯೇ ತು ಬುದ್ಧಾ ಮಹಾತ್ಮಾನೋ ನ ಪ್ರಶಂಸಂತಿ ಕರ್ಮ ತೇ।।

ಕೆಲವು ಮಂದಬುದ್ಧಿ ನರರು ಕಾಮ್ಯ ಕರ್ಮವನ್ನೇ ಪ್ರಶಂಸಿಸುತ್ತಾರೆ. ಆದರೆ ತಿಳಿದ ಮಹಾತ್ಮರು ಕಾಮ್ಯ ಕರ್ಮವನ್ನು ಪ್ರಶಂಸಿಸುವುದಿಲ್ಲ.

14050031a ಕರ್ಮಣಾ ಜಾಯತೇ ಜಂತುರ್ಮೂರ್ತಿಮಾನ್ ಷೋಡಶಾತ್ಮಕಃ।
14050031c ಪುರುಷಂ ಸೃಜತೇಽವಿದ್ಯಾ ಅಗ್ರಾಹ್ಯಮಮೃತಾಶಿನಮ್।।

ಕಾಮ್ಯ ಕರ್ಮದಿಂದ ಜಂತುವು ಹದಿನಾರು ವಿಕಾರಗಳಿಂದ ಕೂಡಿದ ಸ್ಥೂಲಶರೀರವನ್ನು ಧರಿಸಿ ಜನ್ಮತಾಳುತ್ತಾನೆ. ಅವಿದ್ಯೆಯು ಪುರುಷನನ್ನು ಸೃಷ್ಟಿಸುತ್ತದೆ. ಈ ಅವಿದ್ಯೆಯು ಅಮೃತಸೇವಿಗಳಾದ ದೇವತೆಗಳನ್ನು ಹಿಡಿಯುವುದಿಲ್ಲ.

14050032a ತಸ್ಮಾತ್ಕರ್ಮಸು ನಿಃಸ್ನೇಹಾ ಯೇ ಕೇ ಚಿತ್ಪಾರದರ್ಶಿನಃ।
14050032c ವಿದ್ಯಾಮಯೋಽಯಂ ಪುರುಷೋ ನ ತು ಕರ್ಮಮಯಃ ಸ್ಮೃತಃ।।

ಆದುದರಿಂದ ಕೆಲವು ಪಾರದರ್ಶಿಗಳು ಕರ್ಮಗಳಲ್ಲಿ ನಿಃಸ್ನೇಹಾಭಾವದಿಂದಿರುತ್ತಾರೆ. ಈ ಪುರುಷನು ವಿದ್ಯಾಮಯನೇ ಹೊರತು ಕರ್ಮಮಯನಲ್ಲ ಎಂದು ಹೇಳುತ್ತಾರೆ.

14050033a ಅಪೂರ್ವಮಮೃತಂ ನಿತ್ಯಂ ಯ ಏನಮವಿಚಾರಿಣಮ್।
14050033c ಯ ಏನಂ ವಿಂದತೇಽತ್ಮಾನಮಗ್ರಾಹ್ಯಮಮೃತಾಶಿನಮ್।
14050033e ಅಗ್ರಾಹ್ಯೋಽಮೃತೋ ಭವತಿ ಯ ಏಭಿಃ ಕಾರಣೈರ್ಧ್ರುವಃ।।

ಅನಾದಿಯೂ, ಅಮೃತನೂ, ನಿತ್ಯನೂ, ಅವಿಚಾರಿಣಿಯೂ ಆದ ಆತ್ಮವನ್ನು ಹಿಡಿದುಕೊಂಡವನು, ಈ ಕಾರಣಗಳಿಂದ ತಾನೂ ಕೂಡ ಇಂದ್ರಿಯಾತೀತನೂ, ಅಮೃತನೂ, ನಿತ್ಯನೂ ಆಗಿಬಿಡುತ್ತಾನೆ.

14050034a ಅಪೋಹ್ಯ ಸರ್ವಸಂಕಲ್ಪಾನ್ಸಂಯಮ್ಯಾತ್ಮಾನಮಾತ್ಮನಿ।
14050034c ಸ ತದ್ಬ್ರಹ್ಮ ಶುಭಂ ವೇತ್ತಿ ಯಸ್ಮಾದ್ಭೂಯೋ ನ ವಿದ್ಯತೇ।।

ಸರ್ವಸಂಕಲ್ಪಗಳನ್ನೂ ತೊರೆದು ಆತ್ಮನನ್ನು ಆತ್ಮನಲ್ಲಿಯೇ ತೊಡಗಿಸಿಕೊಂಡಿರುವವನು ಯಾವುದನ್ನು ತಿಳಿದರೆ ಬೇರೆ ಯಾವುದನ್ನೂ ತಿಳಿಯಬೇಕಾಗಿಲ್ಲವೋ ಆ ಶುಭ ಬ್ರಹ್ಮನನ್ನು ತಿಳಿದುಕೊಳ್ಳುತ್ತಾನೆ.

14050035a ಪ್ರಸಾದೇನೈವ ಸತ್ತ್ವಸ್ಯ ಪ್ರಸಾದಂ ಸಮವಾಪ್ನುಯಾತ್।
14050035c ಲಕ್ಷಣಂ ಹಿ ಪ್ರಸಾದಸ್ಯ ಯಥಾ ಸ್ಯಾತ್ಸ್ವಪ್ನದರ್ಶನಮ್।।

ಸತ್ತ್ವದ ಪ್ರಸನ್ನತೆಯಿಂದಲೇ ಪ್ರಸಾದವನ್ನು ಪಡೆಯುತ್ತಾನೆ. ಸ್ವಪ್ನದರ್ಶನದಂತೆ ಧ್ಯಾನಯೋಗದಲ್ಲಿರುವಾಗ ಆತ್ಮದರ್ಶನವಾಗುವುದೇ ಈ ಪ್ರಸಾದದ ಲಕ್ಷಣವು.

14050036a ಗತಿರೇಷಾ ತು ಮುಕ್ತಾನಾಂ ಯೇ ಜ್ಞಾನಪರಿನಿಷ್ಠಿತಾಃ।
14050036c ಪ್ರವೃತ್ತಯಶ್ಚ ಯಾಃ ಸರ್ವಾಃ ಪಶ್ಯಂತಿ ಪರಿಣಾಮಜಾಃ।।

ಜ್ಞಾನಪರಿನಿಷ್ಠರಾದ ಮುಕ್ತರ ಮಾರ್ಗವೇ ಇದು. ಸರ್ವ ಪ್ರವೃತ್ತಿಗಳಲ್ಲಿ ಅವರು ಪರಿಣಾಮಗಳು ಹುಟ್ಟುವುದನ್ನು ಕಾಣುತ್ತಾರೆ.

14050037a ಏಷಾ ಗತಿರಸಕ್ತಾನಾಮೇಷ ಧರ್ಮಃ ಸನಾತನಃ।
14050037c ಏಷಾ ಜ್ಞಾನವತಾಂ ಪ್ರಾಪ್ತಿರೇತದ್ವೃತ್ತಮನಿಂದಿತಮ್।।

ಇದೇ ಅಸಕ್ತರು ಹೋಗುವ ಮಾರ್ಗ. ಇದೇ ಸನಾತನ ಧರ್ಮ. ಇದು ಜ್ಞಾನವಂತರು ಹೊಂದುವ ಮಾರ್ಗ. ಇದು ಅನಿಂದಿತವಾದ ನಡತೆ.

14050038a ಸಮೇನ ಸರ್ವಭೂತೇಷು ನಿಃಸ್ಪೃಹೇಣ ನಿರಾಶಿಷಾ।
14050038c ಶಕ್ಯಾ ಗತಿರಿಯಂ ಗಂತುಂ ಸರ್ವತ್ರ ಸಮದರ್ಶಿನಾ।।

ಸರ್ವಭೂತಗಳಲ್ಲಿ ಸಮನಾಗಿದ್ದುಕೊಂಡು ನಿಃಸ್ಪೃಹನೂ, ಆಸೆಗಳಿಲ್ಲದವನೂ, ಸರ್ವತ್ರ ಸಮದರ್ಶಿನಿಯೂ ಆದವನು ಮಾತ್ರ ಈ ಗತಿಯನ್ನು ಪಡೆಯಲು ಶಕ್ಯ.

14050039a ಏತದ್ವಃ ಸರ್ವಮಾಖ್ಯಾತಂ ಮಯಾ ವಿಪ್ರರ್ಷಿಸತ್ತಮಾಃ।
14050039c ಏವಮಾಚರತ ಕ್ಷಿಪ್ರಂ ತತಃ ಸಿದ್ಧಿಮವಾಪ್ಸ್ಯಥ।।

ವಿಪ್ರರ್ಷಿಸತ್ತಮರೇ! ಇವೆಲ್ಲವನ್ನೂ ನಾನು ನಿಮಗೆ ಹೇಳಿದ್ದೇನೆ. ಕ್ಷಿಪ್ರವಾಗಿ ಇವನ್ನು ಆಚರಣೆಗೆ ತನ್ನಿ. ಆಗ ನಿಮಗೆ ಸಿದ್ಧಿಯು ದೊರೆಯುತ್ತದೆ.””

14050040 ಗುರುರುವಾಚ
14050040a ಇತ್ಯುಕ್ತಾಸ್ತೇ ತು ಮುನಯೋ ಬ್ರಹ್ಮಣಾ ಗುರುಣಾ ತಥಾ।
14050040c ಕೃತವಂತೋ ಮಹಾತ್ಮಾನಸ್ತತೋ ಲೋಕಾನವಾಪ್ನುವನ್।।

ಗುರುವು ಹೇಳಿದನು: “ಗುರು ಬ್ರಹ್ಮನು ಮುನಿಗಳಿಗೆ ಹೀಗೆ ಹೇಳಲು ಆ ಮಹಾತ್ಮರು ಅವನು ಹೇಳಿದಂತೆಯೇ ಮಾಡಿ ಉತ್ತಮ ಲೋಕಗಳನ್ನು ಪಡೆದರು.

14050041a ತ್ವಮಪ್ಯೇತನ್ಮಹಾಭಾಗ ಯಥೋಕ್ತಂ ಬ್ರಹ್ಮಣೋ ವಚಃ।
14050041c ಸಮ್ಯಗಾಚರ ಶುದ್ಧಾತ್ಮಂಸ್ತತಃ ಸಿದ್ಧಿಮವಾಪ್ಸ್ಯಸಿ।।

ಮಹಾಭಾಗ! ಶುದ್ಧಾತ್ಮನ್! ನಾನು ಹೇಳಿರುವ ಬ್ರಹ್ಮನ ವಚನವನ್ನು ಶ್ರದ್ಧೆಯಿಂದ ಆಚರಿಸು. ನಿನಗೆ ಸಿದ್ಧಿಯುಂಟಾಗುತ್ತದೆ.””

14050042 ವಾಸುದೇವ ಉವಾಚ 14050042a ಇತ್ಯುಕ್ತಃ ಸ ತದಾ ಶಿಷ್ಯೋ ಗುರುಣಾ ಧರ್ಮಮುತ್ತಮಮ್।
14050042c ಚಕಾರ ಸರ್ವಂ ಕೌಂತೇಯ ತತೋ ಮೋಕ್ಷಮವಾಪ್ತವಾನ್।।

ವಾಸುದೇವನು ಹೇಳಿದನು: “ಕೌಂತೇಯ! ಗುರುವು ಈ ಉತ್ತಮ ಧರ್ಮವನ್ನು ಶಿಷ್ಯನಿಗೆ ಹೇಳಲು, ಶಿಷ್ಯನು ಅವೆಲ್ಲವನ್ನೂ ಮಾಡಿ ಮೋಕ್ಷವನ್ನು ಪಡೆದನು.

14050043a ಕೃತಕೃತ್ಯಶ್ಚ ಸ ತದಾ ಶಿಷ್ಯಃ ಕುರುಕುಲೋದ್ವಹ।
14050043c ತತ್ಪದಂ ಸಮನುಪ್ರಾಪ್ತೋ ಯತ್ರ ಗತ್ವಾ ನ ಶೋಚತಿ।।

ಕುರುಕುಲೋದ್ವಹ! ಆ ಶಿಷ್ಯನು ಕೃತಕೃತ್ಯನಾಗಿ ಎಲ್ಲಿಗೆ ಹೋದರೆ ಯಾರೂ ಶೋಕಿಸಬೇಕಾಗಿಲ್ಲವೋ ಅಂತಹ ಬ್ರಹ್ಮಪದವನ್ನು ಪಡೆದನು.”

14050044 ಅರ್ಜುನ ಉವಾಚ
14050044a ಕೋ ನ್ವಸೌ ಬ್ರಾಹ್ಮಣಃ ಕೃಷ್ಣ ಕಶ್ಚ ಶಿಷ್ಯೋ ಜನಾರ್ದನ।
14050044c ಶ್ರೋತವ್ಯಂ ಚೇನ್ಮಯೈತದ್ವೈ ತತ್ತ್ವಮಾಚಕ್ಷ್ವ ಮೇ ವಿಭೋ।।

ಅರ್ಜುನನು ಹೇಳಿದನು: “ಕೃಷ್ಣ! ಜನಾರ್ದನ! ವಿಭೋ! ಆ ಬ್ರಾಹ್ಮಣನು ಯಾರಾಗಿದ್ದನು? ಅವನ ಶಿಷ್ಯನು ಯಾರಾಗಿದ್ದನು? ನಾನು ಕೇಳುವ ಈ ಪ್ರಶ್ನೆಗೆ ಉತ್ತರಿಸು!”

14050045 ವಾಸುದೇವ ಉವಾಚ
14050045a ಅಹಂ ಗುರುರ್ಮಹಾಬಾಹೋ ಮನಃ ಶಿಷ್ಯಂ ಚ ವಿದ್ಧಿ ಮೇ।
14050045c ತ್ವತ್ಪ್ರೀತ್ಯಾ ಗುಹ್ಯಮೇತಚ್ಚ ಕಥಿತಂ ಮೇ ಧನಂಜಯ।।

ವಾಸುದೇವನು ಹೇಳಿದನು: “ಧನಂಜಯ! ಮಹಾಬಾಹೋ! ನಾನೇ ಆ ಗುರುವು. ನನ್ನ ಮನಸ್ಸೇ ಆ ಶಿಷ್ಯ ಎಂದು ತಿಳಿ. ನಿನ್ನ ಮೇಲಿನ ಪ್ರೀತಿಯಿಂದ ಈ ರಹಸ್ಯವನ್ನು ನಿನಗೆ ಹೇಳಿದ್ದೇನೆ.

14050046a ಮಯಿ ಚೇದಸ್ತಿ ತೇ ಪ್ರೀತಿರ್ನಿತ್ಯಂ ಕುರುಕುಲೋದ್ವಹ।
14050046c ಅಧ್ಯಾತ್ಮಮೇತಚ್ಚ್ರುತ್ವಾ ತ್ವಂ ಸಮ್ಯಗಾಚರ ಸುವ್ರತ।।

ಕುರುಕುಲೋದ್ವಹ! ಸುವ್ರತ! ನಿನಗೆ ನನ್ನ ಮೇಲೆ ಪ್ರೀತಿಯಿರುವುದಾದರೆ ಕೇಳಿದ ಈ ಆಧ್ಯಾತ್ಮವಿದ್ಯೆಯನ್ನು ನಿತ್ಯವೂ ಚೆನ್ನಾಗಿ ಆಚರಿಸು!

14050047a ತತಸ್ತ್ವಂ ಸಮ್ಯಗಾಚೀರ್ಣೇ ಧರ್ಮೇಽಸ್ಮಿನ್ಕುರುನಂದನ।
14050047c ಸರ್ವಪಾಪವಿಶುದ್ಧಾತ್ಮಾ ಮೋಕ್ಷಂ ಪ್ರಾಪ್ಸ್ಯಸಿ ಕೇವಲಮ್।।

ಕುರುನಂದನ! ಈ ಧರ್ಮವನ್ನು ನೀನು ಉತ್ತಮವಾಗಿ ಆಚರಿಸಿದ್ದೇ ಆದರೆ ಸರ್ವಪಾಪಗಳಿಂದಲೂ ವಿಶುದ್ಧಾತ್ಮನಾಗಿ ಕೇವಲ ಮೋಕ್ಷವನ್ನು ಹೊಂದುತ್ತೀಯೆ.

14050048a ಪೂರ್ವಮಪ್ಯೇತದೇವೋಕ್ತಂ ಯುದ್ಧಕಾಲ ಉಪಸ್ಥಿತೇ।
14050048c ಮಯಾ ತವ ಮಹಾಬಾಹೋ ತಸ್ಮಾದತ್ರ ಮನಃ ಕುರು।।

ಮಹಾಬಾಹೋ! ಹಿಂದೆ ಯುದ್ಧಕಾಲವು ಬಂದಿದ್ದಾಗ ನಿನಗೆ ಇದನ್ನೇ ಉಪದೇಶಿಸಿದ್ದೆನು. ಆದುದರಿಂದ ಈಗಲಾದರೂ ಇದನ್ನು ಮನನ ಮಾಡಿಕೋ!

14050049a ಮಯಾ ತು ಭರತಶ್ರೇಷ್ಠ ಚಿರದೃಷ್ಟಃ ಪಿತಾ ವಿಭೋ।
14050049c ತಮಹಂ ದ್ರಷ್ಟುಮಿಚ್ಚಾಮಿ ಸಂಮತೇ ತವ ಫಲ್ಗುನ।।

ಭರತಶ್ರೇಷ್ಠ! ವಿಭೋ! ಫಲ್ಗುನ! ನನ್ನ ತಂದೆಯನ್ನು ನೋಡಿ ಬಹಳ ಸಮಯವಾಯಿತು. ನಿನ್ನ ಸಮ್ಮತಿಯಿದ್ದರೆ ನಾನು ಅವನನ್ನು ಕಾಣಲು ಬಯಸುತ್ತೇನೆ.””

14050050 ವೈಶಂಪಾಯನ ಉವಾಚ
14050050a ಇತ್ಯುಕ್ತವಚನಂ ಕೃಷ್ಣಂ ಪ್ರತ್ಯುವಾಚ ಧನಂಜಯಃ।
14050050c ಗಚ್ಚಾವೋ ನಗರಂ ಕೃಷ್ಣ ಗಜಸಾಹ್ವಯಮದ್ಯ ವೈ।।

ವೈಶಂಪಾಯನನು ಹೇಳಿದನು: “ಕೃಷ್ಣನು ಹೀಗೆ ಹೇಳಲು ಧನಂಜಯನು ಉತ್ತರಿಸಿದನು: “ಕೃಷ್ಣ! ಗಜಸಾಹ್ವಯ ನಗರಕ್ಕೆ ಇಂದೇ ಹೋಗೋಣ!

14050051a ಸಮೇತ್ಯ ತತ್ರ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಮ್।
14050051c ಸಮನುಜ್ಞಾಪ್ಯ ದುರ್ಧರ್ಷಂ ಸ್ವಾಂ ಪುರೀಂ ಯಾತುಮರ್ಹಸಿ।।

ಅಲ್ಲಿ ರಾಜಾ ಧರ್ಮಾತ್ಮ ಯುಧಿಷ್ಠಿರನನ್ನು ಸಂಧಿಸಿ, ಆ ದುರ್ಧರ್ಷನ ಅನುಜ್ಞೆಯನ್ನು ಪಡೆದು ನಿನ್ನ ಪುರಿಗೆ ನೀನು ಪ್ರಯಾಣಿಸಬಹುದು!””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ಐವತ್ತನೇ ಅಧ್ಯಾಯವು.