044: ಅನುಗೀತಾಯಾಂ ಗುರುಶಿಷ್ಯಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 44

ಸಾರ

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (1-21).

14044001 ಬ್ರಹ್ಮೋವಾಚ
14044001a ಯದಾದಿಮಧ್ಯಪರ್ಯಂತಂ ಗ್ರಹಣೋಪಾಯಮೇವ ಚ।
14044001c ನಾಮಲಕ್ಷಣಸಂಯುಕ್ತಂ ಸರ್ವಂ ವಕ್ಷ್ಯಾಮಿ ತತ್ತ್ವತಃ।।

ಬ್ರಹ್ಮನು ಹೇಳಿದನು: “ನಾನೀಗ ಎಲ್ಲವುಗಳ ನಾಮ-ಲಕ್ಷಣ ಸಂಯುತವಾದ ಆದಿ-ಮಧ್ಯ-ಅಂತ್ಯಗಳನ್ನು ಮತ್ತು ಅವುಗಳನ್ನು ಗ್ರಹಿಸುವ ಉಪಾಯಗಳನ್ನು ಇದ್ದಹಾಗೆ ಹೇಳುತ್ತೇನೆ.

14044002a ಅಹಃ ಪೂರ್ವಂ ತತೋ ರಾತ್ರಿರ್ಮಾಸಾಃ ಶುಕ್ಲಾದಯಃ ಸ್ಮೃತಾಃ।
14044002c ಶ್ರವಿಷ್ಠಾದೀನಿ ಋಕ್ಷಾಣಿ ಋತವಃ ಶಿಶಿರಾದಯಃ।।

ಮೊದಲು ರಾತ್ರಿ, ನಂತರ ಹಗಲು. ಮಾಸಗಳು ಶುಕ್ಲಪಕ್ಷದಿಂದ ಪ್ರಾರಂಭಿಸಿದವು. ಶ್ರವಣದಿಂದ ನಕ್ಷತ್ರಗಳು ಪ್ರಾರಂಭವಾದವು. ಶಿಶಿರದಿಂದ ಋತುಗಳು ಪ್ರಾರಂಭಿಸಿದವು ಎಂದು ನೆನಪಿನಲ್ಲಿವೆ.

14044003a ಭೂಮಿರಾದಿಸ್ತು ಗಂಧಾನಾಂ ರಸಾನಾಮಾಪ ಏವ ಚ।
14044003c ರೂಪಾಣಾಂ ಜ್ಯೋತಿರಾದಿಸ್ತು ಸ್ಪರ್ಶಾದಿರ್ವಾಯುರುಚ್ಯತೇ।
14044003e ಶಬ್ದಸ್ಯಾದಿಸ್ತಥಾಕಾಶಮೇಷ ಭೂತಕೃತೋ ಗುಣಃ।।

ಭೂಮಿಯು ಗಂಧಗಳ ಮತ್ತು ಆಪವು ರಸಗಳ ಆದಿ. ರೂಪಗಳ ಆದಿಯು ಜ್ಯೋತಿ ಮತ್ತು ಸ್ಪರ್ಶಗಳ ಆದಿಯು ವಾಯು ಎಂದು ಹೇಳುತ್ತಾರೆ. ಹಾಗೆಯೇ ಶಬ್ಧದ ಆದಿ ಆಕಾಶ. ಇವು ಪಂಚಭೂತಗಳು ಉಂಟುಮಾಡಿದ ಗುಣಗಳು.

14044004a ಅತಃ ಪರಂ ಪ್ರವಕ್ಷ್ಯಾಮಿ ಭೂತಾನಾಮಾದಿಮುತ್ತಮಮ್।
14044004c ಆದಿತ್ಯೋ ಜ್ಯೋತಿಷಾಮಾದಿರಗ್ನಿರ್ಭೂತಾದಿರಿಷ್ಯತೇ।।

ಇನ್ನು ಮುಂದೆ ಉತ್ತಮ ಭೂತಗಳಲ್ಲಿ ಮೊದಲನೆಯದು ಯಾವುವೆಂದು ಹೇಳುತ್ತೇನೆ. ಜ್ಯೋತಿಯಿರುವ ಸಮಸ್ತಕ್ಕೆ ಆದಿತ್ಯನು ಮೊದಲನೆಯವನು. ಭೂತಗಳಿಗೆಲ್ಲ ಅಗ್ನಿಯು ಆದಿಯೆಂದು ಹೇಳುತ್ತಾರೆ.

14044005a ಸಾವಿತ್ರೀ ಸರ್ವವಿದ್ಯಾನಾಂ ದೇವತಾನಾಂ ಪ್ರಜಾಪತಿಃ।
14044005c ಓಂಕಾರಃ ಸರ್ವವೇದಾನಾಂ ವಚಸಾಂ ಪ್ರಾಣ ಏವ ಚ।
14044005e ಯದ್ಯಸ್ಮಿನ್ನಿಯತಂ ಲೋಕೇ ಸರ್ವಂ ಸಾವಿತ್ರಮುಚ್ಯತೇ।।

ಸರ್ವವಿದ್ಯೆಗಳಿಗೂ ಸಾವಿತ್ರಿಯು ಆದಿ. ದೇವತೆಗಳಲ್ಲಿ ಮೊದಲನೆಯವನು ಪ್ರಜಾಪತಿ. ಸರ್ವವೇದಗಳಲ್ಲಿ ಓಂಕಾರವು ಆದಿ. ವಾಕ್ಕಿಗೆ ಪ್ರಾಣವು ಆದಿ. ಈ ಲೋಕದಲ್ಲಿ ನಿಯತ ವಾಕ್ಕುಗಳೆಲ್ಲವಕ್ಕೂ ಸಾವಿತ್ರಿಯೇ ಮೂಲವೆಂದು ಹೇಳುತ್ತಾರೆ.

14044006a ಗಾಯತ್ರೀ ಚಂದಸಾಮಾದಿಃ ಪಶೂನಾಮಜ ಉಚ್ಯತೇ।
14044006c ಗಾವಶ್ಚತುಷ್ಪದಾಮಾದಿರ್ಮನುಷ್ಯಾಣಾಂ ದ್ವಿಜಾತಯಃ।।

ಛಂದಸ್ಸುಗಳಲ್ಲಿ ಗಾಯತ್ರಿಯೇ ಮೊದಲನೆಯದು. ಪಶುಗಳಲ್ಲಿ ಮೊದಲಿನವನು ಅಜ ಎಂದು ಹೇಳುತ್ತಾರೆ. ಗೋವೇ ನಾಲ್ಕು ಕಾಲುಗಳುಳ್ಳ ಪ್ರಾಣಿಗಳಲ್ಲಿ ಮೊದಲನೆಯದು. ದ್ವಿಜಾತಿಯವರೇ ಮನುಷ್ಯರಲ್ಲಿ ಮೊದಲು ಹುಟ್ಟಿದವರು.

14044007a ಶ್ಯೇನಃ ಪತತ್ರಿಣಾಮಾದಿರ್ಯಜ್ಞಾನಾಂ ಹುತಮುತ್ತಮಮ್।
14044007c ಪರಿಸರ್ಪಿಣಾಂ ತು ಸರ್ವೇಷಾಂ ಜ್ಯೇಷ್ಠಃ ಸರ್ಪೋ ದ್ವಿಜೋತ್ತಮಾಃ।।

ದ್ವಿಜೋತ್ತಮರೇ! ಪಕ್ಷಿಗಳಲ್ಲಿ ಗಿಡುಗವು ಮೊದಲನೆಯದು. ಯಜ್ಞಗಳಲ್ಲಿ ಆಹುತಿಯು ಮೊದಲನೆಯದು. ಹರಿದಾಡುವ ಪ್ರಾಣಿಗಳೆಲ್ಲವುಗಳಲ್ಲಿ ಸರ್ಪವು ಹಿರಿಯದು.

14044008a ಕೃತಮಾದಿರ್ಯುಗಾನಾಂ ಚ ಸರ್ವೇಷಾಂ ನಾತ್ರ ಸಂಶಯಃ।
14044008c ಹಿರಣ್ಯಂ ಸರ್ವರತ್ನಾನಾಮೋಷಧೀನಾಂ ಯವಾಸ್ತಥಾ।।

ಸರ್ವ ಯುಗಗಳಲ್ಲಿ ಕೃತವು ಮೊದಲನೆಯದು ಎನ್ನುವುದರಲ್ಲಿ ಸಂಶಯವಿಲ್ಲ. ಸರ್ವರತ್ನಗಳಲ್ಲಿ ಹಿರಣ್ಯವು ಮೊದಲನೆಯದು ಮತ್ತು ಔಷಧಿಗಳಲ್ಲಿ ಗೋಧಿಯೇ ಮೊದಲನೆಯದು.

14044009a ಸರ್ವೇಷಾಂ ಭಕ್ಷ್ಯಭೋಜ್ಯಾನಾಮನ್ನಂ ಪರಮಮುಚ್ಯತೇ।
14044009c ದ್ರವಾಣಾಂ ಚೈವ ಸರ್ವೇಷಾಂ ಪೇಯಾನಾಮಾಪ ಉತ್ತಮಾಃ।।

ಸರ್ವ ಭಕ್ಷ್ಯಭೋಜ್ಯಗಳಲ್ಲಿ ಅನ್ನವೇ ಪರಮವೆಂದು ಹೇಳುತ್ತಾರೆ. ಎಲ್ಲ ದ್ರವಗಳಲ್ಲಿ ಮತ್ತು ಪಾನೀಯಗಳಲ್ಲಿ ನೀರೇ ಉತ್ತಮವು.

14044010a ಸ್ಥಾವರಾಣಾಂ ಚ ಭೂತಾನಾಂ ಸರ್ವೇಷಾಮವಿಶೇಷತಃ।
14044010c ಬ್ರಹ್ಮಕ್ಷೇತ್ರಂ ಸದಾ ಪುಣ್ಯಂ ಪ್ಲಕ್ಷಃ ಪ್ರಥಮಜಃ ಸ್ಮೃತಃ।।

ಸಮಸ್ತ ಸ್ಥಾವರಗಳಲ್ಲಿ ಪುಷ್ಕರಕ್ಷೇತ್ರವು ಸದಾ ಪುಣ್ಯಕರವಾದುದು. ಅಶ್ವತ್ಥವು ವೃಕ್ಷಗಳಲೆಲ್ಲಾ ಮೊದಲನೆಯದೆಂದು ಹೇಳುತ್ತಾರೆ.

14044011a ಅಹಂ ಪ್ರಜಾಪತೀನಾಂ ಚ ಸರ್ವೇಷಾಂ ನಾತ್ರ ಸಂಶಯಃ।
14044011c ಮಮ ವಿಷ್ಣುರಚಿಂತ್ಯಾತ್ಮಾ ಸ್ವಯಂಭೂರಿತಿ ಸ ಸ್ಮೃತಃ।।

ಸರ್ವ ಪ್ರಜಾಪತಿಗಳಲ್ಲಿ ನಾನೇ ಮೊದಲನೆಯವನು ಎನ್ನುವುದರಲ್ಲಿ ಸಂಶಯವಿಲ್ಲ. ನನಗಿಂತಲೂ ಮೊದಲನೆಯವನು ಅಚಿಂತ್ಯಾತ್ಮಾ ವಿಷ್ಣು. ಅವನನ್ನು ಸ್ವಯಂಭೂ ಎಂದು ಕರೆಯುತ್ತಾರೆ.

14044012a ಪರ್ವತಾನಾಂ ಮಹಾಮೇರುಃ ಸರ್ವೇಷಾಮಗ್ರಜಃ ಸ್ಮೃತಃ।
14044012c ದಿಶಾಂ ಚ ಪ್ರದಿಶಾಂ ಚೋರ್ಧ್ವಾ ದಿಗ್ಜಾತಾ ಪ್ರಥಮಂ ತಥಾ।। 1

ಪರ್ವತಗಳಿಗೆಲ್ಲಾ ಮಹಾಮೇರುವು ಮೊದಲನೆಯದೆಂದು ಹೇಳುತ್ತಾರೆ. ಹಾಗೆಯೇ ದಿಕ್ಕು ಉಪದಿಕ್ಕುಗಳಲ್ಲಿ ಪೂರ್ವವು ಮೊದಲನೆಯದು.

14044013a ತಥಾ ತ್ರಿಪಥಗಾ ಗಂಗಾ ನದೀನಾಮಗ್ರಜಾ ಸ್ಮೃತಾ।
14044013c ತಥಾ ಸರೋದಪಾನಾನಾಂ ಸರ್ವೇಷಾಂ ಸಾಗರೋಽಗ್ರಜಃ।।

ಹಾಗೆಯೇ ನದಿಗಳಲ್ಲಿ ತ್ರಿಪಥಗೆ ಗಂಗೆಯು ಅಗ್ರಜಳೆಂದು ಹೇಳುತ್ತಾರೆ. ಹಾಗೆಯೇ ಸರೋವರ-ಜಲಾಶಯಗಳೆಲ್ಲವುಗಳಲ್ಲಿ ಅಗ್ರಜವು ಸಾಗರ.

14044014a ದೇವದಾನವಭೂತಾನಾಂ ಪಿಶಾಚೋರಗರಕ್ಷಸಾಮ್।
14044014c ನರಕಿನ್ನರಯಕ್ಷಾಣಾಂ ಸರ್ವೇಷಾಮೀಶ್ವರಃ ಪ್ರಭುಃ।।

ದೇವ, ದಾನವ, ಭೂತ, ಪಿಶಾಚ, ಉರಗ, ರಾಕ್ಷಸ, ನರ, ಕಿನ್ನರ, ಯಕ್ಷರೆಲ್ಲರ ಪ್ರಭುವು ಈಶ್ವರನು.

14044015a ಆದಿರ್ವಿಶ್ವಸ್ಯ ಜಗತೋ ವಿಷ್ಣುರ್ಬ್ರಹ್ಮಮಯೋ ಮಹಾನ್।
14044015c ಭೂತಂ ಪರತರಂ ತಸ್ಮಾತ್ತ್ರೈಲೋಕ್ಯೇ ನೇಹ ವಿದ್ಯತೇ।।

ಬ್ರಹ್ಮಮಯನಾದ ಮಹಾನ್ ವಿಷ್ಣುವು ಈ ಜಗತ್ತು-ವಿಶ್ವದ ಆದಿಯು. ಅವನಿಗಿಂತಲೂ ಅಧಿಕರಾದವರು ಮೂರು ಲೋಕಗಳಲ್ಲಿ ಯಾರೂ ಇಲ್ಲ.

14044016a ಆಶ್ರಮಾಣಾಂ ಚ ಗಾರ್ಹಸ್ಥ್ಯಂ ಸರ್ವೇಷಾಂ ನಾತ್ರ ಸಂಶಯಃ।
14044016c ಲೋಕಾನಾಮಾದಿರವ್ಯಕ್ತಂ ಸರ್ವಸ್ಯಾಂತಸ್ತದೇವ ಚ।।

ಆಶ್ರಮಗಳಲೆಲ್ಲಾ ಗೃಹಸ್ಥಾಶ್ರಮವು ಅಧಿಕ ಎನ್ನುವುದರಲ್ಲಿ ಸಂಶಯವಿಲ್ಲ. ಸರ್ವ ಲೋಕಗಳ ಆದಿ ಮತ್ತು ಅಂತ್ಯವು ಅವ್ಯಕ್ತ ಪ್ರಕೃತಿ.

14044017a ಅಹಾನ್ಯಸ್ತಮಯಾಂತಾನಿ ಉದಯಾಂತಾ ಚ ಶರ್ವರೀ।
14044017c ಸುಖಸ್ಯಾಂತಃ ಸದಾ ದುಃಖಂ ದುಃಖಸ್ಯಾಂತಃ ಸದಾ ಸುಖಮ್।।

ಹಗಲಿಗೆ ಕತ್ತಲೆಯು ಕೊನೆ. ರಾತ್ರಿಗೆ ಉದಯವು ಕೊನೆ. ಸುಖವು ಸದಾ ದುಃಖದಲ್ಲಿ ಅಂತ್ಯಗೊಳ್ಳುತ್ತದೆ ಮತ್ತು ದುಃಖವು ಸದಾ ಸುಖದಲ್ಲಿ ಅಂತ್ಯಗೊಳ್ಳುತ್ತದೆ.

14044018a ಸರ್ವೇ ಕ್ಷಯಾಂತಾ ನಿಚಯಾಃ ಪತನಾಂತಾಃ ಸಮುಚ್ಚ್ರಯಾಃ।
14044018c ಸಂಯೋಗಾ ವಿಪ್ರಯೋಗಾಂತಾ ಮರಣಾಂತಂ ಹಿ ಜೀವಿತಮ್।।

ಸರ್ವ ಸಂಗ್ರಹಗಳೂ ನಾಶದಲ್ಲಿ ಕೊನೆಗೊಳ್ಳುತ್ತವೆ. ಉಚ್ಛ್ರಾಯಸ್ಥಿತಿಯು ಅಧಃಪತನದಲ್ಲಿ ಕೊನೆಗೊಳ್ಳುತ್ತದೆ. ಸಂಯೋಗವು ವಿಯೋಗದಲ್ಲಿ ಕೊನೆಗೊಳ್ಳುತ್ತದೆ. ಜೀವನವು ಮರಣದಲ್ಲಿ ಅಂತ್ಯಗೊಳ್ಳುತ್ತದೆ.

14044019a ಸರ್ವಂ ಕೃತಂ ವಿನಾಶಾಂತಂ ಜಾತಸ್ಯ ಮರಣಂ ಧ್ರುವಮ್।
14044019c ಅಶಾಶ್ವತಂ ಹಿ ಲೋಕೇಽಸ್ಮಿನ್ಸರ್ವಂ ಸ್ಥಾವರಜಂಗಮಮ್।।

ಮಾಡಿದುದೆಲ್ಲವೂ ವಿನಾಶದಲ್ಲಿ ಕೊನೆಗೊಳ್ಳುತ್ತವೆ. ಹುಟ್ಟಿದವನಿಗೆ ಮರಣವು ನಿಶ್ಚಿತ. ಈ ಲೋಕದಲ್ಲಿರುವ ಯಾವ ಸ್ಥಾವರ-ಜಂಗಮಗಳೂ ಶಾಶ್ವತವಾದವುಗಳಲ್ಲ.

14044020a ಇಷ್ಟಂ ದತ್ತಂ ತಪೋಽಧೀತಂ ವ್ರತಾನಿ ನಿಯಮಾಶ್ಚ ಯೇ।
14044020c ಸರ್ವಮೇತದ್ವಿನಾಶಾಂತಂ ಜ್ಞಾನಸ್ಯಾಂತೋ ನ ವಿದ್ಯತೇ।।

ಯಜ್ಞ, ದಾನ, ತಪಸ್ಸು, ಅಧ್ಯಯನ, ವ್ರತ, ನಿಯಮ ಇವೆಲ್ಲವೂ ಅಂತ್ಯದಲ್ಲಿ ವಿನಾಶಗೊಳ್ಳುತ್ತವೆ. ಆದರೆ ಜ್ಞಾನಕ್ಕೆ ಅಂತ್ಯವಿಲ್ಲ.

14044021a ತಸ್ಮಾಜ್ಞಾನೇನ ಶುದ್ಧೇನ ಪ್ರಸನ್ನಾತ್ಮಾ ಸಮಾಹಿತಃ।
14044021c ನಿರ್ಮಮೋ ನಿರಹಂಕಾರೋ ಮುಚ್ಯತೇ ಸರ್ವಪಾಪ್ಮಭಿಃ।।

ಆದುದರಿಂದ ಪ್ರಸನ್ನಾತ್ಮ ಸಮಾಹಿತನು ನಿರ್ಮಮನಾಗಿದ್ದುಕೊಂಡು ನಿರಹಂಕಾರನಾಗಿದ್ದುಕೊಂಡು ಶುದ್ಧ ಜ್ಞಾನದ ಮೂಲಕ ಸರ್ವಪಾಪಗಳಿಂದಲೂ ಮುಕ್ತನಾಗುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಚತುಶ್ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು.


  1. ದಿಶಾಂ ಪ್ರದಿಶಾಂ ಚೋರ್ಧ್ವಂ ದಿಕ್ಪೂರ್ವಾ ಪ್ರಥಮಾ ತಥಾ।। ಎಂಬ ಪಾಠಾಂತರವಿದೆ. ↩︎