ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 42
ಸಾರ
ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (1-62).
14042001 ಬ್ರಹ್ಮೋವಾಚ
14042001a ಅಹಂಕಾರಾತ್ಪ್ರಸೂತಾನಿ ಮಹಾಭೂತಾನಿ ಪಂಚ ವೈ।
14042001c ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್।।
ಬ್ರಹ್ಮನು ಹೇಳಿದನು: “ಅಹಂಕಾರದಿಂದಲೇ ಪೃಥ್ವಿ, ವಾಯು, ಆಕಾಶ, ಆಪ, ಮತ್ತು ಐದನೆಯದಾದ ಜ್ಯೋತಿ ಈ ಪಂಚಮಹಾಭೂತಗಳು ಹುಟ್ಟಿಕೊಂಡಿವೆ.
14042002a ತೇಷು ಭೂತಾನಿ ಮುಹ್ಯಂತೇ ಮಹಾಭೂತೇಷು ಪಂಚಸು।
14042002c ಶಬ್ದಸ್ಪರ್ಶನರೂಪೇಷು ರಸಗಂಧಕ್ರಿಯಾಸು ಚ।।
ಇವುಗಳಿಂದ ಹುಟ್ಟಿದ ಎಲ್ಲವೂ ಈ ಐದು ಮಹಾಭೂತಗಳ ಕ್ರಿಯೆಗಳಲ್ಲಿ – ಶಬ್ಧ, ಸ್ಪರ್ಶ, ರೂಪ, ರಸ ಮತ್ತು ಗಂಧಕ್ರಿಯೆಗಳಲ್ಲಿ – ಮುಳುಗಿರುತ್ತವೆ.
14042003a ಮಹಾಭೂತವಿನಾಶಾಂತೇ ಪ್ರಲಯೇ ಪ್ರತ್ಯುಪಸ್ಥಿತೇ।
14042003c ಸರ್ವಪ್ರಾಣಭೃತಾಂ ಧೀರಾ ಮಹದುತ್ಪದ್ಯತೇ ಭಯಮ್।।
ಮಹಾಭೂತಗಳು ವಿನಾಶವಾಗುವ ಪ್ರಲಯವು ಸಮೀಪವಾದಾಗ ಸರ್ವಪ್ರಾಣಭೃತರಿಗೂ ಮಹಾಭಯವುಂಟಾಗುತ್ತದೆ.
14042004a ಯದ್ಯಸ್ಮಾಜ್ಜಾಯತೇ ಭೂತಂ ತತ್ರ ತತ್ಪ್ರವಿಲೀಯತೇ।
14042004c ಲೀಯಂತೇ ಪ್ರತಿಲೋಮಾನಿ ಜಾಯಂತೇ ಚೋತ್ತರೋತ್ತರಮ್।।
ಯಾವ ಭೂತದಿಂದ ಯಾವುದು ಹುಟ್ಟಿತೋ ಅದರಲ್ಲಿಯೇ ಅದು ವಿಲೀನವಾಗುತ್ತದೆ. ಇವುಗಳು ಅನುಲೋಮಕ್ರಮದಿಂದ1 ಒಂದಾದಮೇಲೊಂದು ಹುಟ್ಟುತ್ತವೆ. ವಿಲೋಮಕ್ರಮದಿಂದ ತಮ್ಮ ತಮ್ಮ ಕಾರಣಗಳಲ್ಲಿ ಲಯವನ್ನು ಹೊಂದುತ್ತವೆ2.
14042005a ತತಃ ಪ್ರಲೀನೇ ಸರ್ವಸ್ಮಿನ್ಭೂತೇ ಸ್ಥಾವರಜಂಗಮೇ।
14042005c ಸ್ಮೃತಿಮಂತಸ್ತದಾ ಧೀರಾ ನ ಲೀಯಂತೇ ಕದಾ ಚನ।।
ಹೀಗೆ ಇರುವ ಸ್ಥಾವರ-ಜಂಗಮಗಳೆಲ್ಲವೂ ಲೀನವಾಗಿಹೋದರೂ ಸ್ಮೃತಿಮಂತರಾದ ಧೀರರು ಎಂದೂ ಲೀನರಾಗುವುದಿಲ್ಲ.
14042006a ಶಬ್ದಃ ಸ್ಪರ್ಶಸ್ತಥಾ ರೂಪಂ ರಸೋ ಗಂಧಶ್ಚ ಪಂಚಮಃ।
14042006c ಕ್ರಿಯಾಕಾರಣಯುಕ್ತಾಃ ಸ್ಯುರನಿತ್ಯಾ ಮೋಹಸಂಜ್ಞಿತಾಃ।।
ಶಬ್ಧ, ಸ್ಪರ್ಶ, ರೂಪ, ರಸ ಮತ್ತು ಐದನೆಯ ಗಂಧ ಈ ಕ್ರಿಯಾಕಾರಣಗಳು ಅನಿತ್ಯವಾದವುಗಳಾದುದರಿಂದ “ಮೋಹ” ಎಂದೂ ಕರೆಯಲ್ಪಟ್ಟಿವೆ.
14042007a ಲೋಭಪ್ರಜನಸಂಯುಕ್ತಾ ನಿರ್ವಿಶೇಷಾ ಹ್ಯಕಿಂಚನಾಃ।
14042007c ಮಾಂಸಶೋಣಿತಸಂಘಾತಾ ಅನ್ಯೋನ್ಯಸ್ಯೋಪಜೀವಿನಃ।।
14042008a ಬಹಿರಾತ್ಮಾನ ಇತ್ಯೇತೇ ದೀನಾಃ ಕೃಪಣವೃತ್ತಯಃ।
ಲೋಭ ಮತ್ತು ಸ್ತ್ರೀ-ಪುರುಷರ ಸಂಯೋಗದಿಂದ ಹುಟ್ಟಿರುವ ರಕ್ತ-ಮಾಂಸಗಳ ಸಮೂಹಗಳ ಶರೀರವು ಸ್ವಲ್ಪವೂ ವ್ಯತ್ಯಾಸವಿಲ್ಲದೇ ಸಮನಾಗಿರುತ್ತದೆ ಮತ್ತು ಅನ್ಯೋನ್ಯವನ್ನು ಅವಲಂಬಿಸಿ ಬೆಳೆಯುತ್ತದೆ. ಇದು ಆತ್ಮನ ಹೊರಗಡೆ ಬೆಳೆಯುತ್ತದೆ. ಆದುದರಿಂದ ಶರೀರದಲ್ಲಿರುವ ಈ ರಕ್ತ-ಮಾಂಸಗಳ ಸಮೂಹಗಳನ್ನು ದೀನರೆಂದೂ ಕೃಪಣಜೀವಿಗಳೆಂದೂ ಕರೆಯುತ್ತಾರೆ.
14042008c ಪ್ರಾಣಾಪಾನಾವುದಾನಶ್ಚ ಸಮಾನೋ ವ್ಯಾನ ಏವ ಚ।।
14042009a ಅಂತರಾತ್ಮೇತಿ ಚಾಪ್ಯೇತೇ ನಿಯತಾಃ ಪಂಚ ವಾಯವಃ।
14042009c ವಾಙ್ಮನೋಬುದ್ಧಿರಿತ್ಯೇಭಿಃ ಸಾರ್ಧಮಷ್ಟಾತ್ಮಕಂ ಜಗತ್।।
ಪ್ರಾಣ, ಅಪಾನ, ಉದಾನ, ಸಮಾನ ಮತ್ತು ವ್ಯಾನ ಈ ಪಂಚವಾಯುಗಳು ಅಂತರಾತ್ಮನಲ್ಲಿ ವಾಸಮಾಡಿಕೊಂಡಿರುತ್ತವೆ. ಮನಸ್ಸು, ಬುದ್ಧಿ, ಮತ್ತು ವಾಕ್ ಇವುಗಳೂ ಸೇರಿ ಈ ಜಗತ್ತು ಅಷ್ಟಾತ್ಮಕವಾಗಿದೆ.
14042010a ತ್ವಗ್ಘ್ರಾಣಶ್ರೋತ್ರಚಕ್ಷೂಂಷಿ ರಸನಂ ವಾಕ್ಚ ಸಂಯತಾ।
14042010c ವಿಶುದ್ಧಂ ಚ ಮನೋ ಯಸ್ಯ ಬುದ್ಧಿಶ್ಚಾವ್ಯಭಿಚಾರಿಣೀ।।
14042011a ಅಷ್ಟೌ ಯಸ್ಯಾಗ್ನಯೋ ಹ್ಯೇತೇ ನ ದಹಂತೇ ಮನಃ ಸದಾ।
14042011c ಸ ತದ್ಬ್ರಹ್ಮ ಶುಭಂ ಯಾತಿ ಯಸ್ಮಾದ್ಭೂಯೋ ನ ವಿದ್ಯತೇ।।
ಚರ್ಮ, ಮೂಗು, ಕಿವಿ, ಕಣ್ಣು, ನಾಲಿಗೆ ಮತ್ತು ಮಾತು – ಈ ಇಂದ್ರಿಯಗಳು ಯಾವನ ವಶದಲ್ಲಿರುತ್ತವೆಯೋ, ಯಾರ ಮನಸ್ಸು ವಿಶುದ್ಧವಾಗಿರುತ್ತದೆಯೋ, ಯಾರ ಬುದ್ಧಿಯು ವ್ಯಭಿಚಾರಿಯಾಗಿರುವುದಿಲ್ಲವೋ, ಯಾರ ಮನಸ್ಸನ್ನು ಎಂಟು ಅಗ್ನಿಗಳು3 ಸಂತಾಪಗೊಳಿಸುವುದಿಲ್ಲವೋ ಅಂಥವನು ಶುಭ ಬ್ರಹ್ಮನನ್ನು ಹೊಂದುತ್ತಾನೆ. ಬ್ರಹ್ಮಕ್ಕಿಂತಲೂ ಅಧಿಕವಾದುದು ಬೇರೆ ಯಾವುದೂ ಇಲ್ಲ.
14042012a ಏಕಾದಶ ಚ ಯಾನ್ಯಾಹುರಿಂದ್ರಿಯಾಣಿ ವಿಶೇಷತಃ।
14042012c ಅಹಂಕಾರಪ್ರಸೂತಾನಿ ತಾನಿ ವಕ್ಷ್ಯಾಮ್ಯಹಂ ದ್ವಿಜಾಃ।।
ದ್ವಿಜರೇ! ಅಹಂಕಾರದಿಂದ ಹುಟ್ಟಿದ ಹನ್ನೊಂದು ಇಂದ್ರಿಯಗಳ ವಿಶೇಷ ಲಕ್ಷಣಗಳನ್ನು ನಿಮಗೆ ಹೇಳುತ್ತೇನೆ.
14042013a ಶ್ರೋತ್ರಂ ತ್ವಕ್ಚಕ್ಷುಷೀ ಜಿಹ್ವಾ ನಾಸಿಕಾ ಚೈವ ಪಂಚಮೀ।
14042013c ಪಾದೌ ಪಾಯುರುಪಸ್ಥಂ ಚ ಹಸ್ತೌ ವಾಗ್ದಶಮೀ ಭವೇತ್।।
14042014a ಇಂದ್ರಿಯಗ್ರಾಮ ಇತ್ಯೇಷ ಮನ ಏಕಾದಶಂ ಭವೇತ್।
14042014c ಏತಂ ಗ್ರಾಮಂ ಜಯೇತ್ಪೂರ್ವಂ ತತೋ ಬ್ರಹ್ಮ ಪ್ರಕಾಶತೇ।।
ಕಿವಿ, ಚರ್ಮ, ಕಣ್ಣು, ನಾಲಿಗೆ, ಐದನೆಯದಾಗಿ ಮೂಗು, ಕಾಲುಗಳು, ಕೈಗಳು, ಗುದ, ಜನನೇಂದ್ರಿಯ ಮತ್ತು ಮಾತು ಈ ಹತ್ತು ಮತ್ತು ಹನ್ನೊಂದನೆಯದಾದ ಮನಸ್ಸು ಇವುಗಳನ್ನು ಇಂದ್ರಿಯಗ್ರಾಮಗಳೆಂದು ಹೇಳುತ್ತಾರೆ. ಮೊದಲು ಈ ಇಂದ್ರಿಯಗ್ರಾಮಗಳನ್ನು ಜಯಿಸಬೇಕು. ಅನಂತರ ಬ್ರಹ್ಮನ ಸಾಕ್ಷಾತ್ಕಾರವಾಗುತ್ತದೆ.
14042015a ಬುದ್ಧೀಂದ್ರಿಯಾಣಿ ಪಂಚಾಹುಃ ಪಂಚ ಕರ್ಮೇಂದ್ರಿಯಾಣಿ ಚ।
14042015c ಶ್ರೋತ್ರಾದೀನ್ಯಪಿ ಪಂಚಾಹುರ್ಬುದ್ಧಿಯುಕ್ತಾನಿ ತತ್ತ್ವತಃ।।
14042016a ಅವಿಶೇಷಾಣಿ ಚಾನ್ಯಾನಿ ಕರ್ಮಯುಕ್ತಾನಿ ತಾನಿ ತು।
14042016c ಉಭಯತ್ರ ಮನೋ ಜ್ಞೇಯಂ ಬುದ್ಧಿರ್ದ್ವಾದಶಮೀ ಭವೇತ್।।
ಈ ಹತ್ತು ಇಂದ್ರಿಯಗಳಲ್ಲಿ ಐದು ಜ್ಞಾನೇಂದ್ರಿಯಗಳು4 ಮತ್ತು ಐದು ಕರ್ಮೇಂದ್ರಿಯಗಳು5. ಶ್ರೋತ್ರಾದಿ ಜ್ಞಾನೇಂದ್ರಿಯಗಳು ಬುದ್ಧಿಗೆ ಜೋಡಿಸಿಕೊಂಡಿವೆ. ಉಳಿದ ಅನ್ಯ ಇಂದ್ರಿಯಗಳು ಕರ್ಮೇಂದ್ರಿಯಗಳು. ಈ ಎರಡರಲ್ಲೂ ಮನಸ್ಸು ಒಳಗೊಂಡಿದೆ. ಬುದ್ಧಿಯು ಹನ್ನೆರಡನೆಯ ಇಂದ್ರಿಯವೆನಿಸಿಕೊಳ್ಳುತ್ತದೆ.
14042017a ಇತ್ಯುಕ್ತಾನೀಂದ್ರಿಯಾಣೀಮಾನ್ಯೇಕಾದಶ ಮಯಾ ಕ್ರಮಾತ್।
14042017c ಮನ್ಯಂತೇ ಕೃತಮಿತ್ಯೇವ ವಿದಿತ್ವೈತಾನಿ ಪಂಡಿತಾಃ।।
ಹೀಗೆ ಕ್ರಮವಾಗಿ ಹನ್ನೊಂದು ಇಂದ್ರಿಯಗಳ ಕುರಿತು ಹೇಳಿದ್ದಾಯಿತು. ಇವುಗಳ ತತ್ತ್ವವನ್ನು ತಿಳಿದ ಪಂಡಿತರು ಕೃತಕೃತ್ಯರಾದೆವೆಂದು ಭಾವಿಸುತ್ತಾರೆ.
14042018a ತ್ರೀಣಿ ಸ್ಥಾನಾನಿ ಭೂತಾನಾಂ ಚತುರ್ಥಂ ನೋಪಪದ್ಯತೇ।
14042018c ಸ್ಥಲಮಾಪಸ್ತಥಾಕಾಶಂ ಜನ್ಮ ಚಾಪಿ ಚತುರ್ವಿಧಮ್।।
ಪ್ರಾಣಿಗಳು ವಾಸಮಾಡಲು ಇರುವ ಮೂರು ಸ್ಥಾನಗಳೆಂದರೆ – ಭೂಮಿ, ನೀರು ಮತ್ತು ಆಕಾಶ. ನಾಲ್ಕನೆಯ ಜಾಗವೇ ಇಲ್ಲ. ಪ್ರಾಣಿಗಳ ಜನ್ಮವು ನಾಲ್ಕು ವಿಧಗಳಲ್ಲಾಗುತ್ತವೆ.
14042019a ಅಂಡಜೋದ್ಭಿಜ್ಜಸಂಸ್ವೇದಜರಾಯುಜಮಥಾಪಿ ಚ।
14042019c ಚತುರ್ಧಾ ಜನ್ಮ ಇತ್ಯೇತದ್ಭೂತಗ್ರಾಮಸ್ಯ ಲಕ್ಷ್ಯತೇ।।
ಪ್ರಾಣಿಗಳಿಗೆ ಅಂಡಜ (ಮೊಟ್ಟೆಯಿಂದ ಹುಟ್ಟುವುದು), ಉದ್ಭಿಜ್ಜ (ನೆಲವನ್ನು ಸೀಳಿಕೊಂಡು ಹುಟ್ಟುವುದು), ಸ್ವೇದಜ (ಬೆವರಿನಿಂದ ಹುಟ್ಟುವುದು), ಜರಾಯುಜ (ಗರ್ಭಾಶಯದಿಂದ ಹುಟ್ಟುವುದು) ಎಂಬ ನಾಲ್ಕು ವಿಧದ ಜನ್ಮವಿದೆ. ಪ್ರಾಣಿಗಳಿಗೆ ಇವೇ ನಾಲ್ಕು ವಿಧದ ಜನ್ಮಗಳು ಕಂಡುಬರುತ್ತವೆ.
14042020a ಅಚರಾಣ್ಯಪಿ ಭೂತಾನಿ ಖೇಚರಾಣಿ ತಥೈವ ಚ।
14042020c ಅಂಡಜಾನಿ ವಿಜಾನೀಯಾತ್ಸರ್ವಾಂಶ್ಚೈವ ಸರೀಸೃಪಾನ್।।
ಕಾಲುಗಳಿಲ್ಲದ ಪ್ರಾಣಿಗಳು, ಪಕ್ಷಿಗಳು ಮತ್ತು ಎಲ್ಲ ಸರೀಸೃಪಗಳೂ ಅಂಡಜಗಳೆಂದು ತಿಳಿಯಬೇಕು.
14042021a ಸಂಸ್ವೇದಾಃ ಕೃಮಯಃ ಪ್ರೋಕ್ತಾ ಜಂತವಶ್ಚ ತಥಾವಿಧಾಃ।
14042021c ಜನ್ಮ ದ್ವಿತೀಯಮಿತ್ಯೇತಜ್ಜಘನ್ಯತರಮುಚ್ಯತೇ।।
ಕ್ರಿಮಿಗಳು ಮತ್ತು ಜಂತುಗಳನ್ನು ಸ್ವೇದಜಗಳೆಂದು ಹೇಳುತ್ತಾರೆ. ಕ್ರಿಮಿಜನ್ಮಕ್ಕಿಂತಲೂ ಜಂತುಜನ್ಮವು ಅತಿನೀಚವಾದುದು ಎಂದು ಹೇಳುತ್ತಾರೆ.
14042022a ಭಿತ್ತ್ವಾ ತು ಪೃಥಿವೀಂ ಯಾನಿ ಜಾಯಂತೇ ಕಾಲಪರ್ಯಯಾತ್।
14042022c ಉದ್ಭಿಜ್ಜಾನೀತಿ ತಾನ್ಯಾಹುರ್ಭೂತಾನಿ ದ್ವಿಜಸತ್ತಮಾಃ।।
ದ್ವಿಜಸತ್ತಮರೇ! ಕಾಲವುರುಳಿದಂತೆ ಭೂಮಿಯನ್ನು ಸೀಳಿ ಹುಟ್ಟುವ ಸಸ್ಯ ಭೂತಗಳನ್ನು ಉದ್ಭಿಜ್ಜಗಳೆಂದು ಹೇಳುತ್ತಾರೆ.
14042023a ದ್ವಿಪಾದಬಹುಪಾದಾನಿ ತಿರ್ಯಗ್ಗತಿಮತೀನಿ ಚ।
14042023c ಜರಾಯುಜಾನಿ ಭೂತಾನಿ ವಿತ್ತ ತಾನ್ಯಪಿ ಸತ್ತಮಾಃ।।
ಸತ್ತಮರೇ! ಎರಡು ಕಾಲಿನ, ಅನೇಕ ಕಾಲಿನ ಮತ್ತು ವಕ್ರನಡುಗೆಯುಳ್ಳ, ವಕ್ರ ಮತಿಯುಳ್ಳ ಪ್ರಾಣಿಗಳು ಜರಾಯುಜಗಳೆಂದು ತಿಳಿಯಬೇಕು.
14042024a ದ್ವಿವಿಧಾಪೀಹ ವಿಜ್ಞೇಯಾ ಬ್ರಹ್ಮಯೋನಿಃ ಸನಾತನಾ।
14042024c ತಪಃ ಕರ್ಮ ಚ ಯತ್ಪುಣ್ಯಮಿತ್ಯೇಷ ವಿದುಷಾಂ ನಯಃ।।
ಬ್ರಹ್ಮಯೋನಿಯಲ್ಲಿ ಹುಟ್ಟಲು ಸನಾತನವಾದ ಎರಡು ಕಾರಣಗಳೆಂದು ತಿಳಿಯಬೇಕು: ತಪಸ್ಸು ಮತ್ತು ಪುಣ್ಯ ಕರ್ಮಗಳು. ಇವೆರಡರಿಂದ ಬ್ರಾಹ್ಮಣತ್ವವು ಪ್ರಾಪ್ತವಾಗುತ್ತದೆ ಎಂದು ವಿದ್ವಾಂಸರ ನಿಶ್ಚಯ.
14042025a ದ್ವಿವಿಧಂ ಕರ್ಮ ವಿಜ್ಞೇಯಮಿಜ್ಯಾ ದಾನಂ ಚ ಯನ್ಮಖೇ। 6
14042025c ಜಾತಸ್ಯಾಧ್ಯಯನಂ ಪುಣ್ಯಮಿತಿ ವೃದ್ಧಾನುಶಾಸನಮ್।।
ಯಜ್ಞಗಳಲ್ಲಿ ಆಹುತಿ ಹಾಕುವುದು ಮತ್ತು ದಾನಗಳನ್ನು ನೀಡುವುದು ಈ ಎರಡೂ ವಿಧದ ಕರ್ಮಗಳು ಪುಣ್ಯಕರ್ಮಗಳೆಂದು ತಿಳಿಯಬೇಕು. ಅಧ್ಯಯನವೇ ಹುಟ್ಟಿದವನಿಗೆ ಪುಣ್ಯಕಾರ್ಯವೆಂದು ವೃದ್ಧರ ಉಪದೇಶ.
14042026a ಏತದ್ಯೋ ವೇದ ವಿಧಿವತ್ಸ ಮುಕ್ತಃ ಸ್ಯಾದ್ದ್ವಿಜರ್ಷಭಾಃ। 7
14042026c ವಿಮುಕ್ತಃ ಸರ್ವಪಾಪೇಭ್ಯ ಇತಿ ಚೈವ ನಿಬೋಧತ।।
ದ್ವಿಜರ್ಷಭರೇ! ಇದನ್ನು ವಿಧಿವತ್ತಾಗಿ ತಿಳಿದುಕೊಂಡವನು ಸರ್ವಪಾಪಗಳಿಂದ ವಿಮುಕ್ತನಾಗಿ ಮುಕ್ತನಾಗುತ್ತಾನೆ ಎಂದು ತಿಳಿಯಿರಿ.
14042027a ಆಕಾಶಂ ಪ್ರಥಮಂ ಭೂತಂ ಶ್ರೋತ್ರಮಧ್ಯಾತ್ಮಮುಚ್ಯತೇ।
14042027c ಅಧಿಭೂತಂ ತಥಾ ಶಬ್ದೋ ದಿಶಸ್ತತ್ರಾಧಿದೈವತಮ್।।
ಆಕಾಶವು ಮೊದಲನೆಯ ಭೂತ. ಶ್ರೋತೃವನ್ನು ಇದರ ಅಧ್ಯಾತ್ಮವೆಂದು ಹೇಳುತ್ತಾರೆ. ಹಾಗೆಯೇ ಶಬ್ಧವು ಇದರ ಅಧಿಭೂತ ಮತ್ತು ದಿಕ್ಕುಗಳು ಇದರ ಅಧಿದೈವತ.
14042028a ದ್ವಿತೀಯಂ ಮಾರುತೋ ಭೂತಂ ತ್ವಗಧ್ಯಾತ್ಮಂ ಚ ವಿಶ್ರುತಮ್।
14042028c ಸ್ಪ್ರಷ್ಟವ್ಯಮಧಿಭೂತಂ ಚ ವಿದ್ಯುತ್ತತ್ರಾಧಿದೈವತಮ್।।
ಮಾರುತವು ಎರಡನೆಯ ಭೂತ. ಚರ್ಮವು ಇದರ ಅಧ್ಯಾತ್ಮವೆಂದು ಕೇಳಿದ್ದೇವೆ. ಸ್ಪರ್ಶವು ಇದರ ಅಧಿಭೂತ ಮತ್ತು ವಿದ್ಯುತ್ತು ಇದರ ಅಧಿದೈವತ.
14042029a ತೃತೀಯಂ ಜ್ಯೋತಿರಿತ್ಯಾಹುಶ್ಚಕ್ಷುರಧ್ಯಾತ್ಮಮುಚ್ಯತೇ।
14042029c ಅಧಿಭೂತಂ ತತೋ ರೂಪಂ ಸೂರ್ಯಸ್ತತ್ರಾಧಿದೈವತಮ್।।
ಮೂರನೆಯದು ಜ್ಯೋತಿಯೆಂದು ಹೇಳುತ್ತಾರೆ. ಕಣ್ಣುಗಳು ಇದರ ಅಧ್ಯಾತ್ಮವೆಂದು ಹೇಳಲ್ಪಟ್ಟಿವೆ. ರೂಪವು ಇದರ ಅಧಿಭೂತ. ಸೂರ್ಯನು ಇದರ ಅಧಿದೈವತ.
14042030a ಚತುರ್ಥಮಾಪೋ ವಿಜ್ಞೇಯಂ ಜಿಹ್ವಾ ಚಾಧ್ಯಾತ್ಮಮಿಷ್ಯತೇ।
14042030c ಅಧಿಭೂತಂ ರಸಶ್ಚಾತ್ರ ಸೋಮಸ್ತತ್ರಾಧಿದೈವತಮ್।।
ನಾಲ್ಕನೆಯದು ನೀರು ಎಂದು ತಿಳಿಯಬೇಕು. ನಾಲಿಗೆಯು ಇದರ ಅಧ್ಯಾತ್ಮವೆನಿಸಿಕೊಳ್ಳುತ್ತದೆ. ರಸವು ಇದರ ಅಧಿಭೂತ. ಸೋಮನು ಇದರ ಅಧಿದೈವತ.
14042031a ಪೃಥಿವೀ ಪಂಚಮಂ ಭೂತಂ ಘ್ರಾಣಶ್ಚಾಧ್ಯಾತ್ಮಮಿಷ್ಯತೇ।
14042031c ಅಧಿಭೂತಂ ತಥಾ ಗಂಧೋ ವಾಯುಸ್ತತ್ರಾಧಿದೈವತಮ್।।
ಪೃಥ್ವಿಯು ಐದನೆಯ ಭೂತ. ಘ್ರಾಣವು ಇದರ ಅಧ್ಯಾತ್ಮ. ಗಂಧವು ಇದರ ಅಧಿಭೂತ ಮತ್ತು ವಾಯುವು ಇದರ ಅಧಿದೈವತ.
14042032a ಏಷ ಪಂಚಸು ಭೂತೇಷು ಚತುಷ್ಟಯವಿಧಿಃ ಸ್ಮೃತಃ। 8
14042032c ಅತಃ ಪರಂ ಪ್ರವಕ್ಷ್ಯಾಮಿ ಸರ್ವಂ ತ್ರಿವಿಧಮಿಂದ್ರಿಯಮ್।।
ಹೀಗೆ ಐದು ಭೂತಗಳಿಗೆ ನಾಲ್ಕು9 ವಿಧಿಗಳಿವೆ ಎಂದು ಹೇಳುತ್ತಾರೆ. ಇದರ ನಂತರ ನಾನು ಇಂದ್ರಿಯಗಳ ಮೂರು ವಿಧಿಗಳ ಕುರಿತು ಎಲ್ಲವನ್ನೂ ಹೇಳುತ್ತೇನೆ.
14042033a ಪಾದಾವಧ್ಯಾತ್ಮಮಿತ್ಯಾಹುರ್ಬ್ರಾಹ್ಮಣಾಸ್ತತ್ತ್ವದರ್ಶಿನಃ।
14042033c ಅಧಿಭೂತಂ ತು ಗಂತವ್ಯಂ ವಿಷ್ಣುಸ್ತತ್ರಾಧಿದೈವತಮ್।।
ತತ್ತ್ವದರ್ಶೀ ಬ್ರಾಹ್ಮಣರು ಪಾದಗಳನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಹೋಗಬೇಕಾದ ಸ್ಥಾನವೇ ಅಲ್ಲಿ ಅಧಿಭೂತ ಮತ್ತು ವಿಷ್ಣುವು ಅಧಿದೈವತ.
14042034a ಅವಾಗ್ಗತಿರಪಾನಶ್ಚ ಪಾಯುರಧ್ಯಾತ್ಮಮಿಷ್ಯತೇ।
14042034c ಅಧಿಭೂತಂ ವಿಸರ್ಗಶ್ಚ ಮಿತ್ರಸ್ತತ್ರಾಧಿದೈವತಮ್।।
ಕೆಳಮುಖವಾಗಿ ಸಂಚರಿಸುವ ಅಪಾನ ಮತ್ತು ಗುದವನ್ನು ಅಧ್ಯಾತ್ಮವೆನ್ನುತ್ತಾರೆ. ವಿಸರ್ಗವು ಅಧಿಭೂತ ಮತ್ತು ಮಿತ್ರನು ಇದರ ಅಧಿದೈವತ.
14042035a ಪ್ರಜನಃ ಸರ್ವಭೂತಾನಾಮುಪಸ್ಥೋಽಧ್ಯಾತ್ಮಮುಚ್ಯತೇ।
14042035c ಅಧಿಭೂತಂ ತಥಾ ಶುಕ್ರಂ ದೈವತಂ ಚ ಪ್ರಜಾಪತಿಃ।।
ಸರ್ವಭೂತಗಳ ಪ್ರಜನನಕ್ಕೆ ಕಾರಣವಾದ ಜನನೇಂದ್ರಿಯಗಳು ಅಧ್ಯಾತ್ಮವೆಂದು ಹೇಳುತ್ತಾರೆ. ವೀರ್ಯವು ಅದರ ಅಧಿಭೂತ ಮತ್ತು ಪ್ರಜಾಪತಿಯು ಅದರ ದೈವತ.
14042036a ಹಸ್ತಾವಧ್ಯಾತ್ಮಮಿತ್ಯಾಹುರಧ್ಯಾತ್ಮವಿದುಷೋ ಜನಾಃ।
14042036c ಅಧಿಭೂತಂ ತು ಕರ್ಮಾಣಿ ಶಕ್ರಸ್ತತ್ರಾಧಿದೈವತಮ್।।
ಅಧ್ಯಾತ್ಮವನ್ನು ತಿಳಿದ ಜನರು ಕೈಗಳನ್ನು ಅಧ್ಯಾತ್ಮವೆನ್ನುತ್ತಾರೆ. ಕರ್ಮಗಳು ಅದರ ಅಧಿಭೂತ ಮತ್ತು ಶಕ್ರನು ಅಧಿದೈವತ.
14042037a ವೈಶ್ವದೇವೀ ಮನಃಪೂರ್ವಾ ವಾಗಧ್ಯಾತ್ಮಮಿಹೋಚ್ಯತೇ।
14042037c ವಕ್ತವ್ಯಮಧಿಭೂತಂ ಚ ವಹ್ನಿಸ್ತತ್ರಾಧಿದೈವತಮ್।।
ಹಿಂದೆ ವೈಶ್ವದೇವಿಯೆನಿಸಿಕೊಂಡಿದ್ದ ವಾಕ್ಕನ್ನು ಅಧ್ಯಾತ್ಮವೆಂದು ಹೇಳುತ್ತಾರೆ. ಹೇಳಲ್ಪಡುವುದು ಇದರ ಅಧಿಭೂತ ಮತ್ತು ವಹ್ನಿಯು ಇದರ ಅಧಿದೈವತ.
14042038a ಅಧ್ಯಾತ್ಮಂ ಮನ ಇತ್ಯಾಹುಃ ಪಂಚಭೂತಾನುಚಾರಕಮ್।
14042038c ಅಧಿಭೂತಂ ಚ ಮಂತವ್ಯಂ ಚಂದ್ರಮಾಶ್ಚಾಧಿದೈವತಮ್।। 10
ಪಂಚಭೂತಗಳನ್ನು ಸಂಚಲಿಸುವ ಮನಸ್ಸನ್ನು ಅಧ್ಯಾತ್ಮವೆನ್ನುತ್ತಾರೆ. ಯೋಚಿಸುವುದೇ ಇದರ ಅಧಿಭೂತ ಮತ್ತು ಚಂದ್ರನು ಇದರ ಅಧಿದೈವತ.
1114042039a ಅಧ್ಯಾತ್ಮಂ ಬುದ್ಧಿರಿತ್ಯಾಹುಃ ಷಡಿಂದ್ರಿಯವಿಚಾರಿಣೀ।
14042039c ಅಧಿಭೂತಂ ತು ವಿಜ್ಞೇಯಂ ಬ್ರಹ್ಮಾ ತತ್ರಾಧಿದೈವತಮ್।।
ಆರು ಇಂದ್ರಿಯಗಳನ್ನೂ ತಿಳಿದಿರುವ ಬುದ್ಧಿಯನ್ನು ಅಧ್ಯಾತ್ಮವೆಂದು ಕರೆಯುತ್ತಾರೆ. ತಿಳಿಯಲ್ಪಡುವುದೇ ಅಧಿಭೂತ ಮತ್ತು ಬ್ರಹ್ಮನು ಇದರ ಅಧಿದೈವತ.
14042040a ಯಥಾವದಧ್ಯಾತ್ಮವಿಧಿರೇಷ ವಃ ಕೀರ್ತಿತೋ ಮಯಾ।
14042040c ಜ್ಞಾನಮಸ್ಯ ಹಿ ಧರ್ಮಜ್ಞಾಃ ಪ್ರಾಪ್ತಂ ಬುದ್ಧಿಮತಾಮಿಹ।।
ಹೀಗೆ ನಾನು ಅಧ್ಯಾತ್ಮವಿಧಿಗಳನ್ನು ನಿಮಗೆ ಹೇಳಿದ್ದೇನೆ. ಧರ್ಮಜ್ಞರೇ! ಬುದ್ಧಿಮತರಿಗೆ ಇದರ ಜ್ಞಾನವು ಪ್ರಾಪ್ತವಾಗುತ್ತದೆ.
14042041a ಇಂದ್ರಿಯಾಣೀಂದ್ರಿಯಾರ್ಥಾಶ್ಚ ಮಹಾಭೂತಾನಿ ಪಂಚ ಚ।
14042041c ಸರ್ವಾಣ್ಯೇತಾನಿ ಸಂಧಾಯ ಮನಸಾ ಸಂಪ್ರಧಾರಯೇತ್।।
ಇಂದ್ರಿಯಗಳನ್ನೂ, ಇಂದ್ರಿಯಾರ್ಥಗಳನ್ನೂ ಮತ್ತು ಪಂಚಮಹಾಭೂತಗಳನ್ನೂ ಎಲ್ಲವನ್ನೂ ಒಂದಾಗಿಸಿ ಮನಸ್ಸಿನಲ್ಲಿ ಚೆನ್ನಾಗಿ ಧಾರಣೆಮಾಡಿಕೊಳ್ಳಬೇಕು.
14042042a ಕ್ಷೀಣೇ ಮನಸಿ ಸರ್ವಸ್ಮಿನ್ನ ಜನ್ಮಸುಖಮಿಷ್ಯತೇ।
14042042c ಜ್ಞಾನಸಂಪನ್ನಸತ್ತ್ವಾನಾಂ ತತ್ಸುಖಂ ವಿದುಷಾಂ ಮತಮ್।।
ಇಂದ್ರಿಯಗಳೆಲ್ಲವೂ ಕ್ಷೀಣವಾದ ಮನಸ್ಸಿನಲ್ಲಿ ಜನ್ಮಸುಖವು ಉಂಟಾಗುವುದಿಲ್ಲ. ಮನಸ್ಸನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆ ತೆಗೆದುಕೊಂಡು ಜ್ಞಾನಸಂಪನ್ನ ಸಾತ್ವಿಕರು ಅನುಭವಿಸುವುದನ್ನೇ ಸುಖವೆಂದು ವಿದ್ವಾಂಸರ ಮತವಾಗಿದೆ.
14042043a ಅತಃ ಪರಂ ಪ್ರವಕ್ಷ್ಯಾಮಿ ಸೂಕ್ಷ್ಮಭಾವಕರೀಂ ಶಿವಾಮ್।
14042043c ನಿವೃತ್ತಿಂ ಸರ್ವಭೂತೇಷು ಮೃದುನಾ ದಾರುಣೇನ ವಾ।।
ಇನ್ನು ಮುಂದೆ ಸರ್ವಭೂತಗಳಲ್ಲಿಯೂ ಮೃದುವಾಗಿ ಅಥವಾ ದಾರುಣವಾಗಿರುವ ಸೂಕ್ಷ್ಮಭಾವವನ್ನುಂಟುಮಾಡುವ ಮಂಗಳಕರ ನಿವೃತ್ತಿಯ ಕುರಿತು ಹೇಳುತ್ತೇನೆ.
14042044a ಗುಣಾಗುಣಮನಾಸಂಗಮೇಕಚರ್ಯಮನಂತರಮ್।
14042044c ಏತದ್ಬ್ರಾಹ್ಮಣತೋ ವೃತ್ತಮಾಹುರೇಕಪದಂ ಸುಖಮ್।।
ಗುಣಗಳಿದ್ದರೂ ಗುಣಗಳಿಲ್ಲದವನಂತೆ ನಿರಹಂಕಾರನಾಗಿರುವುದು, ನಿಸ್ಸಂಗನಾಗಿರುವುದು, ಯಾವುದರಲ್ಲಿಯೂ ಭೇದಭಾವಗಳನ್ನು ತಾಳದೇ ಇರುವುದನ್ನು ಬ್ರಾಹ್ಮಣ ವರ್ತನೆಯೆಂದು ಹೇಳುತ್ತಾರೆ. ಇದು ಸುಖಕ್ಕೆ ಏಕಮಾತ್ರ ಮಾರ್ಗವಾಗಿದೆ.
14042045a ವಿದ್ವಾನ್ಕೂರ್ಮ ಇವಾಂಗಾನಿ ಕಾಮಾನ್ಸಂಹೃತ್ಯ ಸರ್ವಶಃ।
14042045c ವಿರಜಾಃ ಸರ್ವತೋ ಮುಕ್ತೋ ಯೋ ನರಃ ಸ ಸುಖೀ ಸದಾ।।
ಆಮೆಯು ತನ್ನ ಅವಯವಗಳನ್ನು ಬೆನ್ನುಚಿಪ್ಪಿನ ಒಳಕ್ಕೆ ಎಳೆದುಕೊಳ್ಳುವಂತೆ ಯಾವ ವಿದ್ವಾಂಸನು ಇಂದ್ರಿಯಕಾಮನೆಗಳೆಲ್ಲವನ್ನೂ ಹಿಂದಕ್ಕೆ ಸೆಳೆದುಕೊಂಡು ಸಂಕೋಚಗೊಳಿಸಿ ರಜೋಗುಣರಹಿತನಾಗಿರುವನೋ ಅವನು ಎಲ್ಲ ಪ್ರಕಾರದ ಬಂಧನಗಳಿಂದ ಮುಕ್ತನಾಗಿ ಸದಾ ಸುಖಿಯಾಗಿರುತ್ತಾನೆ.
14042046a ಕಾಮಾನಾತ್ಮನಿ ಸಂಯಮ್ಯ ಕ್ಷೀಣತೃಷ್ಣಃ ಸಮಾಹಿತಃ।
14042046c ಸರ್ವಭೂತಸುಹೃನ್ಮೈತ್ರೋ ಬ್ರಹ್ಮಭೂಯಂ ಸ ಗಚ್ಚತಿ।।
ಕಾಮನೆಗಳನ್ನು ಆತ್ಮನಲ್ಲಿ ಲೀನಗೊಳಿಸಿ ಆಶಾರಹಿತನಾಗಿ, ಸಮಾಹಿತನಾಗಿ ಸರ್ವಭೂತಗಳಿಗೂ ಸ್ನೇಹಿತನಾಗಿರುವವನು ಬ್ರಹ್ಮಸ್ಥಾನಕ್ಕೆ ಹೋಗುತ್ತಾನೆ.
14042047a ಇಂದ್ರಿಯಾಣಾಂ ನಿರೋಧೇನ ಸರ್ವೇಷಾಂ ವಿಷಯೈಷಿಣಾಮ್।
14042047c ಮುನೇರ್ಜನಪದತ್ಯಾಗಾದಧ್ಯಾತ್ಮಾಗ್ನಿಃ ಸಮಿಧ್ಯತೇ।।
ವಿಷಯಗಳನ್ನು ಬಯಸುವ ಎಲ್ಲ ಇಂದ್ರಿಯಗಳನ್ನೂ ಮನಸ್ಸಿನ ಮೂಲಕ ನಿರೋಧಿಸಿ ಜನಪದವನ್ನು ತ್ಯಜಿಸಿ ಏಕಾಂತದಲ್ಲಿರುವ ಮುನಿಯಲ್ಲಿ ಆಧ್ಯಾತ್ಮದ ಅಗ್ನಿಯು ಹೊತ್ತಿ ಉರಿಯುತ್ತದೆ.
14042048a ಯಥಾಗ್ನಿರಿಂಧನೈರಿದ್ಧೋ ಮಹಾಜ್ಯೋತಿಃ ಪ್ರಕಾಶತೇ।
14042048c ತಥೇಂದ್ರಿಯನಿರೋಧೇನ ಮಹಾನಾತ್ಮಾ ಪ್ರಕಾಶತೇ।।
ಕಟ್ಟಿಗೆಗಳಿಂದ ಉರಿಯಲ್ಪಟ್ಟ ಅಗ್ನಿಯು ಹೇಗೆ ಮಹಾಜ್ಯೋತಿಯಾಗಿ ಪ್ರಕಾಶಿಸುವುದೋ ಹಾಗೆ ಇಂದ್ರಿಯ ನಿರೋಧದಿಂದ12 ಮಹಾನ್ ಆತ್ಮವು ಪ್ರಕಾಶಿಸುತ್ತದೆ.
14042049a ಯದಾ ಪಶ್ಯತಿ ಭೂತಾನಿ ಪ್ರಸನ್ನಾತ್ಮಾತ್ಮನೋ ಹೃದಿ।
14042049c ಸ್ವಯಂಯೋನಿಸ್ತದಾ ಸೂಕ್ಷ್ಮಾತ್ಸೂಕ್ಷ್ಮಮಾಪ್ನೋತ್ಯನುತ್ತಮಮ್।।
ಪ್ರಸನ್ನಾತ್ಮನಾಗಿ ತನ್ನ ಹೃದಯದಲ್ಲಿರುವ ಸ್ವಯಂ ಜ್ಯೋತಿಯನ್ನು ಎಲ್ಲ ಭೂತಗಳಲ್ಲಿಯೂ ಯಾವಾಗ ಕಾಣುತ್ತಾನೋ ಆಗ ಅವನು ಸೂಕ್ಷ್ಮಕ್ಕೂ ಸೂಕ್ಷ್ಮನಾದ ಅನುತ್ತಮ ಪರಮಾತ್ಮನನ್ನು ಹೊಂದುತ್ತಾನೆ.
14042050a ಅಗ್ನೀ ರೂಪಂ ಪಯಃ ಸ್ರೋತೋ ವಾಯುಃ ಸ್ಪರ್ಶನಮೇವ ಚ।
14042050c ಮಹೀ ಪಂಕಧರಂ ಘೋರಮಾಕಾಶಂ ಶ್ರವಣಂ ತಥಾ।।
14042051a ರಾಗಶೋಕಸಮಾವಿಷ್ಟಂ ಪಂಚಸ್ರೋತಃಸಮಾವೃತಮ್।
14042051c ಪಂಚಭೂತಸಮಾಯುಕ್ತಂ ನವದ್ವಾರಂ ದ್ವಿದೈವತಮ್।।
14042052a ರಜಸ್ವಲಮಥಾದೃಶ್ಯಂ ತ್ರಿಗುಣಂ ಚ ತ್ರಿಧಾತುಕಮ್।
14042052c ಸಂಸರ್ಗಾಭಿರತಂ ಮೂಢಂ ಶರೀರಮಿತಿ ಧಾರಣಾ।।
ಅಗ್ನಿಯೇ ರೂಪವಾಗಿರುವ, ಆಪವೇ ಸ್ರೋತವಾಗಿರುವ, ವಾಯುವೇ ಸ್ಪರ್ಶವಾಗಿರುವ, ಪೃಥ್ವಿಯೇ ಘೋರ ಮಾಂಸಾಸ್ಥಿಗಳಾಗಿರುವ, ಆಕಾಶವೇ ಶ್ರವಣವಾಗಿರುವ, ರಾಗ-ಶೋಕ ಸಮಾವಿಷ್ಟವಾದ, ಪ್ರವಾಹರೂಪದ ಐದು ಇಂದ್ರಿಯಗಳಿಂದ ಸಮಾವೃತವಾಗಿರುವ, ಪಂಚಭೂತಗಳಿಂದ ಕೂಡಿರುವ, ನವದ್ವಾರಗಳನ್ನೂ ಎರಡು ಅಧಿದೇವತೆಗಳನ್ನೂ ಹೊಂದಿರುವ, ರಜೋಗುಣಮಯವಾದ, ವಿನಾಶಹೊಂದುವ, ಮೂರುಗುಣಗಳಿಂದ ಮತ್ತು ಮೂರು ಧಾತುಗಳಿಂದ ಕೂಡಿರುವ, ಹೊರಗಿನ ವಿಷಯಗಳೊಂದಿಗೆ ಸಂಸರ್ಗಹೊಂದುವುದರಲ್ಲಿಯೇ ಆಸಕ್ತಿಯನ್ನಿಟ್ಟುಕೊಂಡಿರುವ ಈ ಜಡ ವಸ್ತುವನ್ನು ಶರೀರವೆಂದು ಕರೆಯುತ್ತಾರೆ.
14042053a ದುಶ್ಚರಂ ಜೀವಲೋಕೇಽಸ್ಮಿನ್ಸತ್ತ್ವಂ ಪ್ರತಿ ಸಮಾಶ್ರಿತಮ್।
14042053c ಏತದೇವ ಹಿ ಲೋಕೇಽಸ್ಮಿನ್ಕಾಲಚಕ್ರಂ ಪ್ರವರ್ತತೇ।।
ಇವೇ ಸತ್ತ್ವಗಳನ್ನು ಆಶ್ರಯಿಸಿ ಈ ಶರೀರವು ಜೀವಲೋಕದಲ್ಲಿ ಕಷ್ಟಕರವಾಗಿ ಕಾಲಕಳೆಯುತ್ತದೆ. ಈ ರೀತಿ ಶರೀರವು ಲೋಕದಲ್ಲಿ ಕಾಲಚಕ್ರವನ್ನು ತಿರುಗಿಸುತ್ತಿರುತ್ತದೆ13.
14042054a ಏತನ್ಮಹಾರ್ಣವಂ ಘೋರಮಗಾಧಂ ಮೋಹಸಂಜ್ಞಿತಮ್।
14042054c ವಿಸೃಜೇತ್ಸಂಕ್ಷಿಪೇಚ್ಚೈವ ಬೋಧಯೇತ್ಸಾಮರಂ ಜಗತ್।।
ಮೋಹವೆಂದು ಕರೆಯಲ್ಪಡುವ ಈ ಕಾಲಚಕ್ರವು ಅಗಾಧವಾದ ಘೋರ ಮಹಾಸಮುದ್ರದಂತಿದೆ. ಇದು ಅಮರರೊಂದಿಗಿನ ಜಗತ್ತನ್ನು ಸೃಷ್ಟಿಸುತ್ತದೆ, ಸಂಕ್ಷಿಪ್ತಗೊಳಿಸುತ್ತದೆ ಮತ್ತು ಜಾಗೃತಗೊಳಿಸುತ್ತದೆ.
14042055a ಕಾಮಕ್ರೋಧೌ ಭಯಂ ಮೋಹಮಭಿದ್ರೋಹಮಥಾನೃತಮ್।
14042055c ಇಂದ್ರಿಯಾಣಾಂ ನಿರೋಧೇನ ಸ ತಾಂಸ್ತ್ಯಜತಿ ದುಸ್ತ್ಯಜಾನ್।।
ಇಂದ್ರಿಯಗಳನ್ನು ನಿರೋಧಿಸುವುದ ಮೂಲಕ ತ್ಯಜಿಸಲು ಕಷ್ಟಕರವಾಗಿರುವ ಕಾಮ-ಕ್ರೋಧಗಳು, ಭಯ, ಮೋಹ, ದ್ರೋಹ, ಅಸತ್ಯಗಳನ್ನು ತ್ಯಜಿಸಬಹುದು.
14042056a ಯಸ್ಯೈತೇ ನಿರ್ಜಿತಾ ಲೋಕೇ ತ್ರಿಗುಣಾಃ ಪಂಚ ಧಾತವಃ।
14042056c ವ್ಯೋಮ್ನಿ ತಸ್ಯ ಪರಂ ಸ್ಥಾನಮನಂತಮಥ ಲಕ್ಷ್ಯತೇ।।
ಈ ಲೋಕದಲ್ಲಿ ಯಾರು ತ್ರಿಗುಣಾತ್ಮಕವಾದ ಮತ್ತು ಪಂಚಧಾತುಗಳಿಂದ ಕೂಡಿರುವ ಶರೀರವನ್ನು ಗೆಲ್ಲುತ್ತಾನೋ ಅವನು ಎತ್ತರದಲ್ಲಿ ಅನಂತವಾದ ಪರಮಸ್ಥಾನವನ್ನು ಕಾಣುತ್ತಾನೆ.
14042057a ಕಾಮಕೂಲಾಮಪಾರಾಂತಾಂ ಮನಃಸ್ರೋತೋಭಯಾವಹಾಮ್।
14042057c ನದೀಂ ದುರ್ಗಹ್ರದಾಂ ತೀರ್ಣಃ ಕಾಮಕ್ರೋಧಾವುಭೌ ಜಯೇತ್।।
ಕಾಮವೆಂಬ ದೊಡ್ಡ ತೀರಗಳಿರುವ, ಭಯವನ್ನುಂಟುಮಾಡುವ ಮನಸ್ಸೆಂಬ ಪ್ರವಾಹವಿರುವ, ದಾಟಲಸಾದ್ಯವಾದ ನದಿಯನ್ನು ದಾಟಲು ಕಾಮ-ಕ್ರೋಧಗಳೆರಡನ್ನೂ ಜಯಿಸಬೇಕು.
14042058a ಸ ಸರ್ವದೋಷನಿರ್ಮುಕ್ತಸ್ತತಃ ಪಶ್ಯತಿ ಯತ್ಪರಮ್।
14042058c ಮನೋ ಮನಸಿ ಸಂಧಾಯ ಪಶ್ಯತ್ಯಾತ್ಮಾನಮಾತ್ಮನಿ।।
ಮನಸ್ಸನ್ನು ಮನಸ್ಸಿನಲ್ಲಿ ಸಂಧಾನಗೊಳಿಸಿ ಆತ್ಮನಲ್ಲಿ ಆತ್ಮನನ್ನು ಕಾಣುವವನು ಸರ್ವದೋಷಗಳಿಂದ ವಿಮುಕ್ತನಾಗಿ ಪರಮಾತ್ಮನನ್ನು ಕಾಣುತ್ತಾನೆ.
14042059a ಸರ್ವವಿತ್ಸರ್ವಭೂತೇಷು ವೀಕ್ಷತ್ಯಾತ್ಮಾನಮಾತ್ಮನಿ।
14042059c ಏಕಧಾ ಬಹುಧಾ ಚೈವ ವಿಕುರ್ವಾಣಸ್ತತಸ್ತತಃ।।
ಒಬ್ಬನೇ ಅನೇಕರೂಪಗಳಲ್ಲಿದ್ದುಕೊಂಡು ಅಲ್ಲಲ್ಲಿ ಎಲ್ಲವನ್ನೂ ಮಾಡುವವನಂತೆ ಸರ್ವಭೂತಗಳಲ್ಲಿಯೂ ತನ್ನ ಆತ್ಮವನ್ನು ಕಾಣುವವನೇ ಸರ್ವವಿದುವು.
14042060a ಧ್ರುವಂ ಪಶ್ಯತಿ ರೂಪಾಣಿ ದೀಪಾದ್ದೀಪಶತಂ ಯಥಾ।
14042060c ಸ ವೈ ವಿಷ್ಣುಶ್ಚ ಮಿತ್ರಶ್ಚ ವರುಣೋಽಗ್ನಿಃ ಪ್ರಜಾಪತಿಃ।।
ಒಂದೇ ದೀಪದಿಂದ ನೂರಾರು ದೀಪಗಳನ್ನು ಹೊತ್ತಿಸಲು ಸಾಧ್ಯವಾಗುವಂತೆ ಅದೊಂದೇ ವಿಷ್ಣು, ಮಿತ್ರ, ವರುಣ, ಅಗ್ನಿ ಮತ್ತು ಪ್ರಜಾಪತಿಗಳು.
14042061a ಸ ಹಿ ಧಾತಾ ವಿಧಾತಾ ಚ ಸ ಪ್ರಭುಃ ಸರ್ವತೋಮುಖಃ।
14042061c ಹೃದಯಂ ಸರ್ವಭೂತಾನಾಂ ಮಹಾನಾತ್ಮಾ ಪ್ರಕಾಶತೇ।।
ಅದೇ ಧಾತಾ, ವಿಧಾತ, ಮತ್ತು ಸರ್ವತೋಮುಖನಾಗಿರುವ ಪ್ರಭು. ಅದೇ ಮಹಾನ್ ಆತ್ಮವು ಸರ್ವಭೂತಗಳ ಹೃದಯಗಳನ್ನು ಪ್ರಕಾಶಿಸುತ್ತದೆ.
14042062a ತಂ ವಿಪ್ರಸಂಘಾಶ್ಚ ಸುರಾಸುರಾಶ್ಚ ಯಕ್ಷಾಃ ಪಿಶಾಚಾಃ ಪಿತರೋ ವಯಾಂಸಿ।
14042062c ರಕ್ಷೋಗಣಾ ಭೂತಗಣಾಶ್ಚ ಸರ್ವೇ ಮಹರ್ಷಯಶ್ಚೈವ ಸದಾ ಸ್ತುವಂತಿ।।
ಅದನ್ನೇ ವಿಪ್ರಸಂಘಗಳು, ಸುರಾಸುರರು, ಯಕ್ಷರು, ಪಿಶಾಚಿಗಳು, ಪಿತೃಗಳು, ವಸುಗಳು, ರಾಕ್ಷಸಗಣಗಳು, ಭೂತಗಣಗಳು ಮತ್ತು ಸರ್ವ ಮಹರ್ಷಿಗಳೂ ಸದಾ ಸ್ತುತಿಸುತ್ತಾರೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ದ್ವಿಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತೆರಡನೇ ಅಧ್ಯಾಯವು.
-
ಆಕಾಶಾದ್ವಾಯುಃ। ವಾಯೋರಗ್ನಿಃ। ಅಗ್ನೇರಾಪಃ। ಅದ್ಭ್ಯಃ ಪೃಥಿವೀ। ಹೀಗೆ ಆಕಾಶದಿಂದ ವಾಯುವೂ, ವಾಯುವಿನಿಂದ ಅಗ್ನಿಯೂ, ಅಗ್ನಿಯಿಂದ ನೀರೂ, ನೀರಿನಿಂದ ಭೂಮಿಯೂ ಹುಟ್ಟುತ್ತವೆ. ↩︎
-
ವಿಲೋಮಕ್ರಮದಿಂದ ಲೀನವಾಗುವುದೆಂದರೆ – ಪೃಥ್ವಿಯು ಜಲದಲ್ಲಿಯೂ, ಜಲವು ಅಗ್ನಿಯಲ್ಲಿಯೂ, ಅಗ್ನಿಯು ವಾಯುವಿನಲ್ಲಿಯೂ, ವಾಯುವು ಆಕಾಶದಲ್ಲಿಯೂ ಲೀನವಾಗುವುದು. ↩︎
-
ಚರ್ಮ, ಎರಡು ಕಣ್ಣುಗಳು, ಎರಡು ಕಿವಿಗಳು, ಮೂಗಿನ ಎರಡು ಹೊಳ್ಳೆಗಳು ಮತ್ತು ನಾಲಿಗೆ ಇವೇ ಎಂಟು ಅಗ್ನಿಗಳು. ↩︎
-
ಕಿವಿ, ಚರ್ಮ, ಕಣ್ಣು, ನಾಲಿಗೆ ಮತ್ತು ಮೂಗು – ಈ ಐದನ್ನು ಜ್ಞಾನೇಂದ್ರಿಯಗಳೆನ್ನುತ್ತಾರೆ. ↩︎
-
ಕಾಲುಗಳು, ಕೈಗಳು, ಗುದ, ಜನನೇಂದ್ರಿಯ ಮತ್ತು ಮಾತು – ಈ ಐದನ್ನು ಕರ್ಮೇಂದ್ರಿಯಗಳೆನ್ನುತ್ತಾರೆ. ↩︎
-
ವಿವಿಧಂ ಕರ್ಮ ವಿಜ್ಞೇಯಮಿಜ್ಯಾ ದಾನಂ ಚ ತನ್ಮಖೇ। ಎಂಬ ಪಾಠಾಂತರವಿದೆ. ↩︎
-
ಏತದ್ಯೋ ವೇತ್ತಿ ವಿಧಿವದ್ಯುಕ್ತಃ ಸ ಸ್ಯಾದ್ವಿಜರ್ಷಭಾ:। ಎಂಬ ಪಾಠಾಂತರವಿದೆ. ↩︎
-
ಏಷು ಪಂಚಸು ಭೂತೇಷು ತ್ರಿಷು ಯಶ್ಚ ವಿಧಿಃ ಸ್ಮೃತಃ। ಎಂಬ ಪಾಠಾಂತರವಿದೆ. ↩︎
-
ಹಿಂದಿನ ಶ್ಲೋಕಗಳಲ್ಲಿ ಅಧ್ಯಾತ್ಮ, ಅಧಿಭೂತ ಮತ್ತು ಅಧಿದೈವತಗಳೆಂಬ ಮೂರೇ ವಿಧಿಗಳನ್ನು ಹೇಳಿರುವುದರಿಂದ, ಪಾಠಾಂತರದಲ್ಲಿರುವ ಶ್ಲೋಕವೇ ಸರಿಯೆಂದು ತೋರುತ್ತದೆ. ↩︎
-
ಅಧಿಭೂತಂ ಚ ಸಂಕಲ್ಪಶ್ಚಂದ್ರಮಾಶ್ಚಾಧಿದೈವತಮ್। ಎಂಬ ಪಾಠಾಂತರವಿದೆ. ↩︎
-
ಇದರ ಮೊದಲು – ಅಹಂಕಾರಸ್ತಥಾಧ್ಯಾತ್ಮಂ ಸರ್ವಸಂಸಾರಕಾರಕಮ್। ಅಭಿಮಾನೋಽಧಿಭೂತಂ ಚ ರುದ್ರಸ್ತತ್ರಾಧಿದೈವತಮ್।। ಅರ್ಥಾತ್ ಸಕಲ ಸಂಸಾರ ಕಾರಕವಾದ ಅಹಂಕಾರವು ಅಧ್ಯಾತ್ಮ. ಅಭಿಮಾನವು ಅಧಿಭೂತ ಮತ್ತು ರುದ್ರನು ಅದರ ಅಧಿದೈವತ – ಎನ್ನುವ ಶ್ಲೋಕವಿದೆ (ಭಾರತದರ್ಶನ). ↩︎
-
ಇಂದ್ರಿಯಗಳನ್ನು ಮನಸ್ಸಿನ ಮೂಲಕ ಒಳಗೆ ಎಳೆದುಕೊಂಡು ಆತ್ಮಕ್ಕೆ ಇಂಧನವನ್ನಾಗಿ ಬಳಸುವುದರಿಂದ ಆತ್ಮನು ಪ್ರಕಾಶಿಸುತ್ತಾನೆ. ↩︎
-
ಶರೀರಕ್ಕೆ ಮಾತ್ರ ಕಾಲಚಕ್ರಕ್ಕನುಗುಣವಾದ ಪರಿವರ್ತನೆಗಳಾಗುತ್ತವೆ. ↩︎