ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 41
ಸಾರ
ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (1-5).
14041001 ಬ್ರಹ್ಮೋವಾಚ
14041001a ಯ ಉತ್ಪನ್ನೋ ಮಹಾನ್ಪೂರ್ವಮಹಂಕಾರಃ ಸ ಉಚ್ಯತೇ।
14041001c ಅಹಮಿತ್ಯೇವ ಸಂಭೂತೋ ದ್ವಿತೀಯಃ ಸರ್ಗ ಉಚ್ಯತೇ।।
ಬ್ರಹ್ಮನು ಹೇಳಿದನು: “ಮೊದಲು ಹುಟ್ಟಿದ ಮಹತ್ತತ್ತ್ವವನ್ನು ಅಹಂಕಾರವೆಂದೂ ಕರೆಯುತ್ತಾರೆ. ಅದು “ನಾನು” ಎಂದುಕೊಂಡೇ ಹುಟ್ಟಿದುದರಿಂದ ಅದನ್ನು ಎರಡನೆಯ ಸೃಷ್ಟಿಯೆಂದು ಹೇಳುತ್ತಾರೆ.
14041002a ಅಹಂಕಾರಶ್ಚ ಭೂತಾದಿರ್ವೈಕಾರಿಕ ಇತಿ ಸ್ಮೃತಃ।
14041002c ತೇಜಸಶ್ಚೇತನಾ ಧಾತುಃ ಪ್ರಜಾಸರ್ಗಃ ಪ್ರಜಾಪತಿಃ।।
ಅಹಂಕಾರವು ಪ್ರಾಣಿಗಳೇ ಮೊದಲಾದ ವಿಕಾರಗಳಿಗೆ ಕಾರಣವಾದುದರಿಂದ ಇದನ್ನು ವೈಕಾರಿಕ ಎಂದೂ ಕರೆಯುತ್ತಾರೆ. ಚೇತನ ಮತ್ತು ತೇಜಸ್ಸುಗಳುಳ್ಳ ಇದು ಪ್ರಜೆಗಳ ಸೃಷ್ಟಿಗೆ ಧಾತುರೂಪವಾದುದು. ಆದುದರಿಂದ ಇದನ್ನು ಪ್ರಜಾಪತಿ ಎಂದೂ ಕರೆಯುತ್ತಾರೆ.
14041003a ದೇವಾನಾಂ ಪ್ರಭವೋ ದೇವೋ ಮನಸಶ್ಚ ತ್ರಿಲೋಕಕೃತ್।
14041003c ಅಹಮಿತ್ಯೇವ ತತ್ಸರ್ವಮಭಿಮಂತಾ ಸ ಉಚ್ಯತೇ।।
ಈ ಅಹಂಕಾರವು ದೇವತೆಗಳ ಮತ್ತು ಮನಸ್ಸಿನ ಉತ್ಪತ್ತಿಸ್ಥಾನವಾಗಿರುವುದರಿಂದ ಇದನ್ನು ತ್ರಿಲೋಕಕೃತ್ ಎಂದೂ ಅಭಿಮಂತಾ ಎಂದೂ ಕರೆಯುತ್ತಾರೆ.
14041004a ಅಧ್ಯಾತ್ಮಜ್ಞಾನನಿತ್ಯಾನಾಂ ಮುನೀನಾಂ ಭಾವಿತಾತ್ಮನಾಮ್।
14041004c ಸ್ವಾಧ್ಯಾಯಕ್ರತುಸಿದ್ಧಾನಾಮೇಷ ಲೋಕಃ ಸನಾತನಃ।।
ನಿತ್ಯವೂ ಅಧ್ಯಾತ್ಮಜ್ಞಾನನಿರತರಾದ ಭಾವಿತಾತ್ಮ ಮುನಿಗಳ ಮತ್ತು ಸ್ವಾಧ್ಯಾಯ-ಕ್ರತುಗಳಲ್ಲಿ ನಿರತರಾದ ಸಿದ್ಧರಿಗೆ ಇದೇ ಸನಾತನ ಲೋಕವು ದೊರಕುವುದು.
14041005a ಅಹಂಕಾರೇಣಾಹರತೋ ಗುಣಾನಿಮಾನ್ ಭೂತಾದಿರೇವಂ ಸೃಜತೇ ಸ ಭೂತಕೃತ್।
14041005c ವೈಕಾರಿಕಃ ಸರ್ವಮಿದಂ ವಿಚೇಷ್ಟತೇ ಸ್ವತೇಜಸಾ ರಂಜಯತೇ ಜಗತ್ತಥಾ।।
ಸಮಸ್ತ ಭೂತಗಳಿಗೂ ಆದಿಯಾದ ಮತ್ತು ಎಲ್ಲವನ್ನೂ ಸೃಷ್ಟಿಸುವ ಅಹಂಕಾರಕ್ಕೆ ಆಧಾರಭೂತನಾದ ಜೀವಾತ್ಮನು ಅಹಂಕಾರದ ಮೂಲಕವೇ ಎಲ್ಲ ಗುಣಗಳನ್ನೂ ಸೃಷ್ಟಿಸುತ್ತಾನೆ ಮತ್ತು ಅವುಗಳನ್ನೇ ಉಪಭೋಗಿಸುತ್ತಾನೆ. ಜಗತ್ತಿನಲ್ಲಿ ನಡೆಯುವ ಎಲ್ಲ ಚೇಷ್ಟೆಗಳೂ ವಿಕಾರಕ್ಕೆ ಒಳಗಾಗಬಲ್ಲ ಅಹಂಕಾರದ ಸ್ವರೂಪಗಳೇ ಆಗಿವೆ. ಈ ಅಹಂಕಾರವೇ ತನ್ನ ಪ್ರಭಾವದಿಂದ ಜಗತ್ತೆಲ್ಲವನ್ನೂ ರಜೋಮಯವನ್ನಾಗಿ (ಭೋಗೇಚ್ಛುವಾಗಿ) ಮಾಡಿರುವುದು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಏಕಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತೊಂದನೇ ಅಧ್ಯಾಯವು.