ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 39
ಸಾರ
ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (1-24).
14039001 ಬ್ರಹ್ಮೋವಾಚ
14039001a ನೈವ ಶಕ್ಯಾ ಗುಣಾ ವಕ್ತುಂ ಪೃಥಕ್ತ್ವೇನೇಹ ಸರ್ವಶಃ।
14039001c ಅವಿಚ್ಛಿನ್ನಾನಿ ದೃಶ್ಯಂತೇ ರಜಃ ಸತ್ತ್ವಂ ತಮಸ್ತಥಾ।।
ಬ್ರಹ್ಮನು ಹೇಳಿದನು: “ಈ ಗುಣಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ನಿರೂಪಿಸುವುದು ಶಕ್ಯವಿಲ್ಲ. ಏಕೆಂದರೆ ರಜ-ಸತ್ತ್ವ-ತಮಗಳು ಬೇರೆಬೇರೆಯಾಗಿರದೇ ಅವಿಚ್ಛಿನ್ನವಾಗಿಯೇ ಕಾಣುತ್ತವೆ.
14039002a ಅನ್ಯೋನ್ಯಮನುಷಜ್ಜಂತೇ ಅನ್ಯೋನ್ಯಂ ಚಾನುಜೀವಿನಃ।
14039002c ಅನ್ಯೋನ್ಯಾಪಾಶ್ರಯಾಃ ಸರ್ವೇ ತಥಾನ್ಯೋನ್ಯಾನುವರ್ತಿನಃ।।
ಈ ಗುಣಗಳು ಅನ್ಯೋನ್ಯರನ್ನು ಸೇರಿಕೊಂಡೇ ಇರುತ್ತವೆ. ಅನ್ಯೋನ್ಯರನ್ನು ಅವಲಂಬಿಸಿಯೇ ಇರುತ್ತವೆ. ಅನ್ಯೋನ್ಯರನ್ನು ಆಶ್ರಯಿಸಿಕೊಂಡಿರುತ್ತವೆ. ಹಾಗೆಯೇ ಅನ್ಯೋನ್ಯರನ್ನು ಅನುಸರಿಸಿಕೊಂಡಿರುತ್ತವೆ.
14039003a ಯಾವತ್ಸತ್ತ್ವಂ ತಮಸ್ತಾವದ್ವರ್ತತೇ ನಾತ್ರ ಸಂಶಯಃ।
14039003c ಯಾವತ್ತಮಶ್ಚ ಸತ್ತ್ವಂ ಚ ರಜಸ್ತಾವದಿಹೋಚ್ಯತೇ।।
ಎಲ್ಲಿಯವರೆಗೆ ಸತ್ತ್ವಗುಣವಿರುತ್ತದೆಯೋ ಅಲ್ಲಿಯವರೆಗೆ ತಮೋಗುಣವೂ ಇರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಎಲ್ಲಿಯವರೆಗೆ ತಮೋಗುಣ-ಸತ್ವಗುಣಗಳಿರುತ್ತವೆಯೋ ಅಲ್ಲಿಯವರೆಗೆ ರಜೋಗುಣವೂ ಇದ್ದೇ ಇರುತ್ತದೆ.
14039004a ಸಂಹತ್ಯ ಕುರ್ವತೇ ಯಾತ್ರಾಂ ಸಹಿತಾಃ ಸಂಘಚಾರಿಣಃ।
14039004c ಸಂಘಾತವೃತ್ತಯೋ ಹ್ಯೇತೇ ವರ್ತಂತೇ ಹೇತ್ವಹೇತುಭಿಃ।।
ಇವು ಒಟ್ಟಿಗೇ ಸಂಘಚಾರಿಗಳಾಗಿ ಯಾತ್ರೆಮಾಡುತ್ತಿರುತ್ತವೆ. ಶರೀರಗಳಲ್ಲಿ ಇವು ಯಾವಾಗಲೂ ಪರಸ್ಪರ ಸೇರಿಕೊಂಡೇ ಇರುತ್ತವೆ.
14039005a ಉದ್ರೇಕವ್ಯತಿರೇಕಾಣಾಂ ತೇಷಾಮನ್ಯೋನ್ಯವರ್ತಿನಾಮ್।
14039005c ವರ್ತತೇ ತದ್ಯಥಾನ್ಯೂನಂ ವ್ಯತಿರಿಕ್ತಂ ಚ ಸರ್ವಶಃ।।
ಅನ್ಯೋನ್ಯರನ್ನು ಅನುಸರಿಸಿಕೊಂಡಿದ್ದರೂ ಅವುಗಳಲ್ಲಿ ಉದ್ರೇಕ-ಅತಿರೇಕಗಳುಂಟಾಗುತ್ತವೆ. ಕೆಲವು ಸಮಯಗಳಲ್ಲಿ ಒಂದು ಗುಣವು ಮತ್ತೊಂದು ಗುಣಕ್ಕಿಂತಲೂ ಹೆಚ್ಚಾಗಿರುವುದೂ ಕಮ್ಮಿಯಾಗಿರುವೂ ಕಂಡುಬರುತ್ತದೆ.
14039006a ವ್ಯತಿರಿಕ್ತಂ ತಮೋ ಯತ್ರ ತಿರ್ಯಗ್ಭಾವಗತಂ ಭವೇತ್।
14039006c ಅಲ್ಪಂ ತತ್ರ ರಜೋ ಜ್ಞೇಯಂ ಸತ್ತ್ವಂ ಚಾಲ್ಪತರಂ ತತಃ।।
ತಿರ್ಯಗ್ಯೋನಿಗಳಲ್ಲಿ (ಪಶು-ಪಕ್ಷಿಗಳಲ್ಲಿ) ತಮೋಗುಣವು ಅಧಿಕವಾಗಿಯೂ, ರಜೋಗುಣವು ಅಲ್ಪವಾಗಿಯೂ ಮತ್ತು ಸತ್ತ್ವಗುಣವು ಅತ್ಯಲ್ಪವಾಗಿಯೂ ಇರುತ್ತವೆ.
14039007a ಉದ್ರಿಕ್ತಂ ಚ ರಜೋ ಯತ್ರ ಮಧ್ಯಸ್ರೋತೋಗತಂ ಭವೇತ್।
14039007c ಅಲ್ಪಂ ತತ್ರ ತಮೋ ಜ್ಞೇಯಂ ಸತ್ತ್ವಂ ಚಾಲ್ಪತರಂ ತತಃ।।
ರಜೋಗುಣವು ಉದ್ರಿಕ್ತವಾದವರು ಮಧ್ಯಸ್ರೋತ1 ಗತಿಯಲ್ಲಿರುತ್ತಾರೆ. ಅವರಲ್ಲಿ ತಮೋಗುಣವು ಅಲ್ಪವಾಗಿಯೂ ಸತ್ತ್ವಗುಣವು ಅತ್ಯಲ್ಪವಾಗಿಯೂ ಇರುತ್ತವೆ.
14039008a ಉದ್ರಿಕ್ತಂ ಚ ಯದಾ ಸತ್ತ್ವಮೂರ್ಧ್ವಸ್ರೋತೋಗತಂ ಭವೇತ್।
14039008c ಅಲ್ಪಂ ತತ್ರ ರಜೋ ಜ್ಞೇಯಂ ತಮಶ್ಚಾಲ್ಪತರಂ ತತಃ।।
ಸತ್ತ್ವಗುಣವು ಉದ್ರಿಕ್ತವಾದವರು ಊರ್ಧ್ವಸ್ರೋತಗತಿಯಲ್ಲಿರುತ್ತಾರೆ. ಅವರಲ್ಲಿ ರಜೋಗುಣವು ಅಲ್ಪವಾಗಿಯೂ ತಮೋಗುಣವು ಅತ್ಯಲ್ಪವಾಗಿಯೂ ಇರುತ್ತವೆ.
14039009a ಸತ್ತ್ವಂ ವೈಕಾರಿಕಂ ಯೋನಿರಿಂದ್ರಿಯಾಣಾಂ ಪ್ರಕಾಶಿಕಾ।
14039009c ನ ಹಿ ಸತ್ತ್ವಾತ್ಪರೋ ಭಾವಃ ಕಶ್ಚಿದನ್ಯೋ ವಿಧೀಯತೇ।।
ಇಂದ್ರಿಯಗಳಿಗೆ ಕಾರಣೀಭೂತವಾದ ಸತ್ತ್ವಗುಣವು ಇಂದ್ರಿಯಗಳನ್ನು ಪ್ರಕಾಶಗೊಳಿಸುತ್ತದೆ. ಸತ್ತ್ವಗುಣಕ್ಕಿಂತಲೂ ಮಿಗಿಲಾದ ಬೇರೆ ಧರ್ಮವು ಇಲ್ಲ.
14039010a ಊರ್ಧ್ವಂ ಗಚ್ಚಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ।
14039010c ಜಘನ್ಯಗುಣಸಂಯುಕ್ತಾ ಯಾಂತ್ಯಧಸ್ತಾಮಸಾ ಜನಾಃ।।
ಸತ್ತ್ವಗುಣದಲ್ಲಿರುವವರು ಸ್ವರ್ಗಾದಿ ಉಚ್ಛಲೋಕಗಳಿಗೆ ಹೋಗುತ್ತಾರೆ. ರಾಜಸಗುಣವು ಹೆಚ್ಚಾಗಿರುವವರು ಮಧ್ಯಮವಾದ ಮನುಷ್ಯ ಲೋಕದಲ್ಲಿ ಹುಟ್ಟುತ್ತಿರುತ್ತಾರೆ. ಅನ್ಯವಾದ ತಾಮಸ ಗುಣಸಂಯುಕ್ತ ಜನರು ಅಧೋಗತಿಯನ್ನು ಹೊಂದುತ್ತಾರೆ.
14039011a ತಮಃ ಶೂದ್ರೇ ರಜಃ ಕ್ಷತ್ರೇ ಬ್ರಾಹ್ಮಣೇ ಸತ್ತ್ವಮುತ್ತಮಮ್।
14039011c ಇತ್ಯೇವಂ ತ್ರಿಷು ವರ್ಣೇಷು ವಿವರ್ತಂತೇ ಗುಣಾಸ್ತ್ರಯಃ।।
ಶೂದ್ರನಲ್ಲಿ ತಮೋಗುಣವೂ, ಕ್ಷತ್ರಿಯನಲ್ಲಿ ರಜೋಗುಣವೂ ಮತ್ತು ಬ್ರಾಹ್ಮಣನಲ್ಲಿ ಉತ್ತಮ ಸತ್ತ್ವಗುಣವೂ ಪ್ರಧಾನವಾಗಿರುತ್ತದೆ. ಹೀಗೆ ಈ ಮೂರು ವರ್ಣಗಳಲ್ಲಿ ಈ ಮೂರು ಗುಣಗಳು ವಿಶೇಷವಾಗಿರುತ್ತವೆ.
14039012a ದೂರಾದಪಿ ಹಿ ದೃಶ್ಯಂತೇ ಸಹಿತಾಃ ಸಂಘಚಾರಿಣಃ।
14039012c ತಮಃ ಸತ್ತ್ವಂ ರಜಶ್ಚೈವ ಪೃಥಕ್ತ್ವಂ ನಾನುಶುಶ್ರುಮ।।
ಈ ಮೂರುಗುಣಗಳೂ ಜೊತೆ-ಜೊತೆಯಲ್ಲಿ ಸಂಚರಿಸುತ್ತಾ ಪರಸ್ಪರರಲ್ಲಿ ಸೇರಿಕೊಂಡಿರುವುದನ್ನು ನಾವು ದೂರದಿಂದಲೇ ಕಾಣಬಹುದು. ಆದರೆ ಸತ್ತ್ವ-ರಜ-ತಮೋಗುಣಗಳು ಪ್ರತ್ಯೇಕ-ಪ್ರತ್ಯೇಕವಾಗಿರುವುದನ್ನು ನಾವು ಕೇಳಿಯೇ ಇಲ್ಲ.
14039013a ದೃಷ್ಟ್ವಾ ಚಾದಿತ್ಯಮುದ್ಯಂತಂ ಕುಚೋರಾಣಾಂ ಭಯಂ ಭವೇತ್।
14039013c ಅಧ್ವಗಾಃ ಪರಿತಪ್ಯೇರಂಸ್ತೃಷ್ಣಾರ್ತಾ ದುಃಖಭಾಗಿನಃ।।
ಸೂರ್ಯೋದಯವನ್ನು ನೋಡುತ್ತಿದ್ದಂತೆಯೇ ದುರಾಚಾರಿಗಳಿಗೆ ಭಯವಾಗುತ್ತದೆ. ಅಂಥಹ ದಾರಿಹೋಕರು ಬಾಯಾರಿಕೆಯಿಂದ ಪೀಡಿತರಾಗಿ ದುಃಖದಿಂದ ಪರಿತಪಿಸುತ್ತಾರೆ.
14039014a ಆದಿತ್ಯಃ ಸತ್ತ್ವಮುದ್ದಿಷ್ಟಂ ಕುಚೋರಾಸ್ತು ಯಥಾ ತಮಃ।
14039014c ಪರಿತಾಪೋಽಧ್ವಗಾನಾಂ ಚ ರಾಜಸೋ ಗುಣ ಉಚ್ಯತೇ।।
ಸೂರ್ಯೋದಯವೇ ಸತ್ತ್ವಗುಣದ ಆವಿರ್ಭಾವ. ದುರಾಚಾರಿಗಳ ಭಯವೇ ತಮೋಗುಣ. ದಾರಿಹೋಕರ ಪರಿತಾಪವೇ ರಾಜಸ ಗುಣ ಎಂದು ಹೇಳುತ್ತಾರೆ.
14039015a ಪ್ರಾಕಾಶ್ಯಂ ಸತ್ತ್ವಮಾದಿತ್ಯೇ ಸಂತಾಪೋ ರಾಜಸೋ ಗುಣಃ।
14039015c ಉಪಪ್ಲವಸ್ತು ವಿಜ್ಞೇಯಸ್ತಾಮಸಸ್ತಸ್ಯ ಪರ್ವಸು।।
ಸೂರ್ಯನ ಪ್ರಕಾಶವೇ ಸತ್ತ್ವಗುಣ. ಅವನಿಂದ ಉಂಟಾಗುವ ಸಂತಾಪವೇ ರಾಜಸ ಗುಣ. ಪರ್ವಕಾಲಗಳಲ್ಲಿ ಆಗುವ ಸೂರ್ಯನ ಗ್ರಹಣಗಳೇ ತಮ ಎಂದು ತಿಳಿಯಬೇಕು.
14039016a ಏವಂ ಜ್ಯೋತಿಃಷು ಸರ್ವೇಷು ವಿವರ್ತಂತೇ ಗುಣಾಸ್ತ್ರಯಃ।
14039016c ಪರ್ಯಾಯೇಣ ಚ ವರ್ತಂತೇ ತತ್ರ ತತ್ರ ತಥಾ ತಥಾ।।
ಹೀಗೆ ಎಲ್ಲ ಜ್ಯೋತಿಗಳಲ್ಲಿಯೂ ಈ ಮೂರು ಗುಣಗಳು ಅಲ್ಲಲ್ಲಿ ಒಂದಾದ ಮೇಲೆ ಮತ್ತೊಂದರಂತೆ ಪ್ರಕಟವಾಗುತ್ತಿರುತ್ತವೆ ಮತ್ತು ಲೀನವಾಗುತ್ತಿರುತ್ತವೆ.
14039017a ಸ್ಥಾವರೇಷು ಚ ಭೂತೇಷು ತಿರ್ಯಗ್ಭಾವಗತಂ ತಮಃ।
14039017c ರಾಜಸಾಸ್ತು ವಿವರ್ತಂತೇ ಸ್ನೇಹಭಾವಸ್ತು ಸಾತ್ತ್ವಿಕಃ।।
ಸ್ಥಾವರ ಮತ್ತು ಪ್ರಾಣಿಗಳಲ್ಲಿ ತಮೋಗುಣವು ಅಧಿಕವಾಗಿರುತ್ತದೆ. ಅವುಗಳಲ್ಲಿ ಆಗುವ ಪರಿವರ್ತನೆಗಳೇ ರಜೋ ಗುಣ. ಸ್ನೇಹಭಾವವೇ ಸಾತ್ತ್ವಿಕ ಗುಣ.
14039018a ಅಹಸ್ತ್ರಿಧಾ ತು ವಿಜ್ಞೇಯಂ ತ್ರಿಧಾ ರಾತ್ರಿರ್ವಿಧೀಯತೇ।
14039018c ಮಾಸಾರ್ಧಮಾಸವರ್ಷಾಣಿ ಋತವಃ ಸಂಧಯಸ್ತಥಾ।।
ಈ ಗುಣಗಳ ಪ್ರಭಾವದಿಂದಲೇ ಹಗಲು, ರಾತ್ರಿ, ಮಾಸ, ಪಕ್ಷ, ವರ್ಷ, ಋತು ಮತ್ತು ಸಂಧಿಗಳು ಮೂರು ಪ್ರಕಾರವಾಗಿರುತ್ತವೆ.
14039019a ತ್ರಿಧಾ ದಾನಾನಿ ದೀಯಂತೇ ತ್ರಿಧಾ ಯಜ್ಞಃ ಪ್ರವರ್ತತೇ।
14039019c ತ್ರಿಧಾ ಲೋಕಾಸ್ತ್ರಿಧಾ ವೇದಾಸ್ತ್ರಿಧಾ ವಿದ್ಯಾಸ್ತ್ರಿಧಾ ಗತಿಃ।।
ಗುಣಭೇದಗಳಿಗನುಗುಣವಾಗಿ ಕೊಡುವ ದಾನಗಳಲ್ಲಿ ಮೂರು ಪ್ರಕಾರಗಳಿವೆ. ಮೂರು ಪ್ರಕಾರದ ಯಜ್ಞಗಳಿವೆ, ಮೂರು ವಿಧದ ಲೋಕಗಳೂ, ಮೂರು ವಿಧದ ದೇವತೆಗಳೂ, ಮೂರು ವಿಧದ ವಿದ್ಯೆಗಳೂ ಮತ್ತು ಮೂರು ಪ್ರಕಾರದ ಮಾರ್ಗಗಳೂ ಇವೆ.
14039020a ಭೂತಂ ಭವ್ಯಂ ಭವಿಷ್ಯಚ್ಚ ಧರ್ಮೋಽರ್ಥಃ ಕಾಮ ಇತ್ಯಪಿ।
14039020c ಪ್ರಾಣಾಪಾನಾವುದಾನಶ್ಚಾಪ್ಯೇತ ಏವ ತ್ರಯೋ ಗುಣಾಃ।।
ಭೂತ-ಭವ್ಯ-ಭವಿಷ್ಯಗಳು, ಧರ್ಮ-ಅರ್ಥ-ಕಾಮಗಳೂ, ಪ್ರಾಣ-ಅಪಾನ-ಉದಾನಗಳೂ ತ್ರಿಗುಣಾತ್ಮಕವಾಗಿವೆ.
14039021a ಯತ್ಕಿಂ ಚಿದಿಹ ವೈ ಲೋಕೇ ಸರ್ವಮೇಷ್ವೇವ ತತ್ತ್ರಿಷು।
14039021c ತ್ರಯೋ ಗುಣಾಃ ಪ್ರವರ್ತಂತೇ ಅವ್ಯಕ್ತಾ ನಿತ್ಯಮೇವ ತು।
14039021e ಸತ್ತ್ವಂ ರಜಸ್ತಮಶ್ಚೈವ ಗುಣಸರ್ಗಃ ಸನಾತನಃ।।
ಈ ಲೋಕದಲ್ಲಿರುವ ಎಲ್ಲವೂ ಈ ಮೂರುಗುಣಗಳನ್ನು ಹೊಂದಿರುತ್ತವೆ. ಈ ಮೂರು ಗುಣಗಳು ಎಲ್ಲದರಲ್ಲಿಯೂ ಸದಾ ಅವ್ಯಕ್ತವಾಗಿ ಕಾರ್ಯಮಾಡುತ್ತಿರುತ್ತವೆ. ಸತ್ತ್ವ-ರಜ-ತಮೋಗುಣಗಳ ಸೃಷ್ಟಿಯು ಸನಾತನವಾದುದು.
14039022a ತಮೋಽವ್ಯಕ್ತಂ ಶಿವಂ ನಿತ್ಯಮಜಂ ಯೋನಿಃ ಸನಾತನಃ।
14039022c ಪ್ರಕೃತಿರ್ವಿಕಾರಃ ಪ್ರಲಯಃ ಪ್ರಧಾನಂ ಪ್ರಭವಾಪ್ಯಯೌ।।
14039023a ಅನುದ್ರಿಕ್ತಮನೂನಂ ಚ ಹ್ಯಕಂಪಮಚಲಂ ಧ್ರುವಮ್।
14039023c ಸದಸಚ್ಚೈವ ತತ್ಸರ್ವಮವ್ಯಕ್ತಂ ತ್ರಿಗುಣಂ ಸ್ಮೃತಮ್।
14039023e ಜ್ಞೇಯಾನಿ ನಾಮಧೇಯಾನಿ ನರೈರಧ್ಯಾತ್ಮಚಿಂತಕೈಃ।।
ಪ್ರಕೃತಿಗೆ ಇರುವ ಈ ನಾಮಧೇಯಗಳನ್ನು – ತಮ, ವ್ಯಕ್ತ, ನಿತ್ಯ, ಶಿವ, ಅಜ, ಯೋನಿ, ಸನಾತನ, ಪ್ರಕೃತಿ, ವಿಕಾರ, ಪ್ರಲಯ, ಪ್ರಧಾನ, ಪ್ರಭವ, ಅಪ್ಯಯ, ಅನುದ್ರಿಕ್ತ, ಅನೂನ, ಅಕಂಪ, ಅಚಲ, ಧ್ರುವ, ಸತ್, ಅಸತ್, ತ್ರಿಗುಣ ಮತ್ತು ಅವ್ಯಕ್ತ – ಆಧ್ಯಾತ್ಮ ಚಿಂತಕ ಮನುಷ್ಯರು ತಿಳಿದುಕೊಂಡಿರುತ್ತಾರೆ.
14039024a ಅವ್ಯಕ್ತನಾಮಾನಿ ಗುಣಾಂಶ್ಚ ತತ್ತ್ವತೋ ಯೋ ವೇದ ಸರ್ವಾಣಿ ಗತೀಶ್ಚ ಕೇವಲಾಃ।
14039024c ವಿಮುಕ್ತದೇಹಃ ಪ್ರವಿಭಾಗತತ್ತ್ವವಿತ್ ಸ ಮುಚ್ಯತೇ ಸರ್ವಗುಣೈರ್ನಿರಾಮಯಃ।।
ಅವ್ಯಕ್ತ ಪ್ರಕೃತಿಯ ಈ ಹೆಸರುಗಳು, ಗುಣಗಳು ಮತ್ತು ಗತಿಗಳನ್ನು ಎಲ್ಲವನ್ನೂ ತಿಳಿದುಕೊಂಡಿರುವ ಗುಣವಿಭಾಗ ತತ್ತ್ವಜ್ಞನು ಸರ್ವಗುಣಗಳಿಂದ ಮುಕ್ತನಾಗಿ ನಿರಾಮಯನಾಗಿ ದೇಹವನ್ನು ತ್ಯಜಿಸುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಏಕೋನಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.
-
ತಿರ್ಯಕ್ ಸ್ರೋತಸರು ಪಶುಗಳು; ಮಧ್ಯ ಸ್ರೋತಸರು ಮನುಷ್ಯರು ಮತ್ತು ಊರ್ದ್ವಸ್ರೋತಸರು ಯೋಗಿಗಳೆಂದು ಹೇಳುತ್ತಾರೆ. ತಿಂದ ಆಹಾರವು ಹೊಟ್ಟೆಯಲ್ಲಿ ಅಡ್ಡಡ್ಡವಾಗಿ (ತಿರ್ಯಗ್ಗತಿ) ಸಂಚರಿಸುವುದರಿಂದ ಪ್ರಾಣಿಗಳಿಗೆ ತಿರ್ಯಗ್ಯೋನಿಗಳೆಂದೂ, ಮಧ್ಯದಲ್ಲಿ ಸಂಚರಿಸುವುದರಿಂದ ಮನುಷ್ಯರಿಗೆ ಮಧ್ಯಸ್ರೋತಸರೆಂದೂ ಹೇಳುತ್ತಾರೆ. ಊರ್ಧ್ವಸ್ರೋತಸಃ = ಊರ್ಧ್ವಗತಂ ಸ್ರೋತಃ ರೇತಃ ಪ್ರವಾಹಃ ಯಸ್ಯ ಸಃ ಅರ್ಥಾತ್ ರೇತಸ್ಸಿನ ಪ್ರವಾಹವನ್ನು ಕೆಳಮುಖವಾಗಿ ಬಿಡದೇ ಮೇಲ್ಮುಖವಾಗಿ ತಡೆದು ನಿಲ್ಲಿಸುವ ಯೋಗಿಯು ಎಂದು ಅರ್ಥೈಸಿದ್ದಾರೆ. ↩︎