035: ಅನುಗೀತಾಯಾಂ ಗುರುಶಿಷ್ಯಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 35

ಸಾರ

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಹೇಳಿದುದು (1-40).

14035001 ಅರ್ಜುನ ಉವಾಚ।
14035001a ಬ್ರಹ್ಮ ಯತ್ಪರಮಂ ವೇದ್ಯಂ ತನ್ಮೇ ವ್ಯಾಖ್ಯಾತುಮರ್ಹಸಿ।
14035001c ಭವತೋ ಹಿ ಪ್ರಸಾದೇನ ಸೂಕ್ಷ್ಮೇ ಮೇ ರಮತೇ ಮತಿಃ।।

ಅರ್ಜುನನು ಹೇಳಿದನು: “ನಿನ್ನ ಅನುಗ್ರಹದಿಂದ ನನ್ನ ಬುದ್ಧಿಯು ಈಗ ಸೂಕ್ಷ್ಮ ವಿಷಯಗಳ ಕುರಿತು ಆಸಕ್ತವಾಗಿದೆ. ಪರಮವೇದ್ಯವಾದ ಬ್ರಹ್ಮದ ಕುರಿತು ನನಗೆ ಹೇಳಬೇಕು.”

14035002 ವಾಸುದೇವ ಉವಾಚ।
14035002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
14035002c ಸಂವಾದಂ ಮೋಕ್ಷಸಂಯುಕ್ತಂ ಶಿಷ್ಯಸ್ಯ ಗುರುಣಾ ಸಹ।।

ವಾಸುದೇವನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಈ ಮೋಕ್ಷವಿಷಯಕ ಗುರು-ಶಿಷ್ಯರ ಸಂವಾದವನ್ನು ಉದಾಹರಿಸುತ್ತಾರೆ.

14035003a ಕಶ್ಚಿದ್ಬ್ರಾಹ್ಮಣಮಾಸೀನಮಾಚಾರ್ಯಂ ಸಂಶಿತವ್ರತಮ್।
14035003c ಶಿಷ್ಯಃ ಪಪ್ರಚ್ಚ ಮೇಧಾವೀ ಕಿಂ ಸ್ವಿಚ್ಚ್ರೇಯಃ ಪರಂತಪ।।

ಪರಂತಪ! ಕುಳಿತಿದ್ದ ಸಂಶಿತವ್ರತ ಆಚಾರ್ಯ ಬ್ರಾಹ್ಮಣನೊಬ್ಬನನ್ನು ಅವನ ಮೇಧಾವೀ ಶಿಷ್ಯನು “ಶ್ರೇಯವಾದುದು ಏನು?” ಎಂದು ಪ್ರಶ್ನಿಸಿದನು.

14035004a ಭಗವಂತಂ ಪ್ರಪನ್ನೋಽಹಂ ನಿಃಶ್ರೇಯಸಪರಾಯಣಃ।
14035004c ಯಾಚೇ ತ್ವಾಂ ಶಿರಸಾ ವಿಪ್ರ ಯದ್ಬ್ರೂಯಾಂ ತದ್ವಿಚಕ್ಷ್ವ ಮೇ।।

“ನಿಃಶ್ರೇಯಸ ಪರಾಯಣನಾಗಿ ನಿಮಗೆ ಶರಣುಬಂದಿದ್ದೇನೆ. ಶಿರಸಾ ವಂದಿಸಿ ಬೇಡಿಕೊಳ್ಳುತ್ತಿದ್ದೇನೆ. ಶ್ರೇಯವಾದುದರ ಕುರಿತು ನನಗೆ ತಿಳಿಯಹೇಳಿ!”

14035005a ತಮೇವಂವಾದಿನಂ ಪಾರ್ಥ ಶಿಷ್ಯಂ ಗುರುರುವಾಚ ಹ।
14035005c ಕಥಯಸ್ವ ಪ್ರವಕ್ಷ್ಯಾಮಿ ಯತ್ರ ತೇ ಸಂಶಯೋ ದ್ವಿಜ।।

ಪಾರ್ಥ! ಹಾಗೆ ಹೇಳಿದ ಶಿಷ್ಯನಿಗೆ ಗುರುವು ಹೇಳಿದನು: “ದ್ವಿಜ! ನಿನ್ನ ಸಂಶಯವು ಎಲ್ಲಿದೆ ಹೇಳು. ಅದರ ಕುರಿತು ಹೇಳುತ್ತೇನೆ.”

14035006a ಇತ್ಯುಕ್ತಃ ಸ ಕುರುಶ್ರೇಷ್ಠ ಗುರುಣಾ ಗುರುವತ್ಸಲಃ।
14035006c ಪ್ರಾಂಜಲಿಃ ಪರಿಪಪ್ರಚ್ಚ ಯತ್ತಚ್ಚೃಣು ಮಹಾಮತೇ।।

ಮಹಾಮತೇ! ಕುರುಶ್ರೇಷ್ಠ! ಗುರುವು ಹೀಗೆ ಹೇಳಲು ಆ ಗುರುವತ್ಸಲನು ಕೈಮುಗಿದು ಏನನ್ನು ಕೇಳಿದನು ಎನ್ನುವುದನ್ನು ಕೇಳು.

14035007 ಶಿಷ್ಯ ಉವಾಚ
14035007a ಕುತಶ್ಚಾಹಂ ಕುತಶ್ಚ ತ್ವಂ ತತ್ಸತ್ಯಂ ಬ್ರೂಹಿ ಯತ್ಪರಮ್।
14035007c ಕುತೋ ಜಾತಾನಿ ಭೂತಾನಿ ಸ್ಥಾವರಾಣಿ ಚರಾಣಿ ಚ।।

ಶಿಷ್ಯನು ಹೇಳಿದನು: “ನಾನು ಎಲ್ಲಿಂದ ಬಂದಿರುವೆನು? ನೀವು ಎಲ್ಲಿಂದ ಬಂದಿರುವಿರಿ? ಈ ಸ್ಥಾವರ-ಚರ ಭೂತಗಳು ಎಲ್ಲಿಂದ ಹುಟ್ಟಿವೆ? ಇದನ್ನು ಯಥಾವತ್ತಾಗಿ ಹೇಳಿ.

14035008a ಕೇನ ಜೀವಂತಿ ಭೂತಾನಿ ತೇಷಾಮಾಯುಃ ಕಿಮಾತ್ಮಕಮ್।
14035008c ಕಿಂ ಸತ್ಯಂ ಕಿಂ ತಪೋ ವಿಪ್ರ ಕೇ ಗುಣಾಃ ಸದ್ಭಿರೀರಿತಾಃ।
14035008e ಕೇ ಪಂಥಾನಃ ಶಿವಾಃ ಸಂತಿ ಕಿಂ ಸುಖಂ ಕಿಂ ಚ ದುಷ್ಕೃತಮ್।।

ವಿಪ್ರ! ಭೂತಗಳು ಯಾವುದರಿಂದ ಜೀವಿಸುತ್ತವೆ? ಅವುಗಳ ಆಯುಗಳು ಎಷ್ಟು? ಸತ್ಯವೆಂದರೇನು? ತಪಸ್ಸೆಂದರೇನು? ಸತ್ಪುರುಷರು ಪ್ರಶಂಸಿಸುವ ಗುಣಗಳು ಯಾವುವು? ಮಂಗಳಕರ ಮಾರ್ಗಗಳು ಯಾವುವು? ಸುಖವೆಂದರೇನು? ಮತ್ತು ಪಾಪವೆಂದರೇನು?

14035009a ಏತಾನ್ಮೇ ಭಗವನ್ಪ್ರಶ್ನಾನ್ಯಾಥಾತಥ್ಯೇನ ಸತ್ತಮ।
14035009c ವಕ್ತುಮರ್ಹಸಿ ವಿಪ್ರರ್ಷೇ ಯಥಾವದಿಹ ತತ್ತ್ವತಃ।।

ಭಗವನ್! ಸತ್ತಮ! ಇವುಗಳು ನನ್ನ ಪ್ರಶ್ನೆಗಳು. ಇವುಗಳಿಗೆ ಯಥಾತಥ್ಯವಾದ ಉತ್ತರವನ್ನು ಹೇಳಬೇಕು.””

14035010 ವಾಸುದೇವ ಉವಾಚ
14035010a ತಸ್ಮೈ ಸಂಪ್ರತಿಪನ್ನಾಯ ಯಥಾವತ್ಪರಿಪೃಚ್ಚತೇ।
14035010c ಶಿಷ್ಯಾಯ ಗುಣಯುಕ್ತಾಯ ಶಾಂತಾಯ ಗುರುವರ್ತಿನೇ।
14035010e ಚಾಯಾಭೂತಾಯ ದಾಂತಾಯ ಯತಯೇ ಬ್ರಹ್ಮಚಾರಿಣೇ।।
14035011a ತಾನ್ಪ್ರಶ್ನಾನಬ್ರವೀತ್ಪಾರ್ಥ ಮೇಧಾವೀ ಸ ಧೃತವ್ರತಃ।
14035011c ಗುರುಃ ಕುರುಕುಲಶ್ರೇಷ್ಠ ಸಮ್ಯಕ್ಸರ್ವಾನರಿಂದಮ।।

ವಾಸುದೇವನು ಹೇಳಿದನು: “ಪಾರ್ಥ! ಕುರುಕುಲಶ್ರೇಷ್ಠ! ಅರಿಂದಮ! ಅತ್ಯಂತ ವಿನೀತನಾಗಿದ್ದ, ಶಾಂತಸ್ವಭಾವದವನಾಗಿದ್ದ, ಗುರುವನ್ನೇ ಅನುಸರಿಸಿ ನಡೆಯುತ್ತಿದ್ದ, ಜಿತೇಂದ್ರಿಯನಾಗಿದ್ದ, ಪ್ರಯತ್ನಶೀಲನಾದ ಮತ್ತು ಯಥೋಚಿತವಾದ ಪ್ರಶ್ನೆಗಳನ್ನೇ ಕೇಳಿದ ಆ ಗುಣಯುಕ್ತ ಶಿಷ್ಯನ ಆ ಪ್ರಶ್ನೆಗಳಿಗೆ ಮೇಧಾವೀ ಮತ್ತು ವ್ರತನಿಷ್ಠ ಗುರುವು ಸಮಂಜಸವಾದ ಉತ್ತರಗಳನ್ನು ಹೇಳಿದನು.

14035012a ಬ್ರಹ್ಮಪ್ರೋಕ್ತಮಿದಂ ಧರ್ಮಮೃಷಿಪ್ರವರಸೇವಿತಮ್।
14035012c ವೇದವಿದ್ಯಾಸಮಾವಾಪ್ಯಂ ತತ್ತ್ವಭೂತಾರ್ಥಭಾವನಮ್।।

“ವೇದವಿದ್ಯೆಯನ್ನು ಆಧರಿಸಿದ, ತತ್ತ್ವಭೂತಾರ್ಥಭಾವನೆಗಳುಳ್ಳ ಮತ್ತು ಋಷಿಶ್ರೇಷ್ಠರು ಆಶ್ರಯಿಸಿರುವ ಈ ಧರ್ಮವನ್ನು ಬ್ರಹ್ಮನೇ ಹೇಳಿದ್ದನು.

14035013a ಭೂತಭವ್ಯಭವಿಷ್ಯಾದಿಧರ್ಮಕಾಮಾರ್ಥನಿಶ್ಚಯಮ್।
14035013c ಸಿದ್ಧಸಂಘಪರಿಜ್ಞಾತಂ ಪುರಾಕಲ್ಪಂ ಸನಾತನಮ್।।
14035014a ಪ್ರವಕ್ಷ್ಯೇಽಹಂ ಮಹಾಪ್ರಾಜ್ಞ ಪದಮುತ್ತಮಮದ್ಯ ತೇ।
14035014c ಬುದ್ಧ್ವಾ ಯದಿಹ ಸಂಸಿದ್ಧಾ ಭವಂತೀಹ ಮನೀಷಿಣಃ।।

ಮಹಾಪ್ರಾಜ್ಞ! ಭೂತ-ಭವಿಷ್ಯ-ವರ್ತಮಾನಗಳಲ್ಲಿ ಧರ್ಮ-ಕಾಮ-ಅರ್ಥಗಳ ನಿಶ್ಚಯಕ್ಕೆ ಸಾಧಕವಾದ, ಸಿದ್ಧಸಂಘರು ಅರ್ಥಮಾಡಿಕೊಂಡ, ಉತ್ತಮ ಪದವನ್ನು ನೀಡುವ ಮತ್ತು ಹಿಂದಿನ ಕಲ್ಪದ ಸನಾತನ ವಿಷಯವನ್ನು ಇಂದು ನಾನು ಹೇಳುತ್ತೇನೆ. ಇದನ್ನರಿತುಕೊಂಡ ವಿದ್ವಾಂಸರು ಸಂಸಿದ್ಧರೇ ಆಗುತ್ತಾರೆ.

14035015a ಉಪಗಮ್ಯರ್ಷಯಃ ಪೂರ್ವಂ ಜಿಜ್ಞಾಸಂತಃ ಪರಸ್ಪರಮ್।
14035015c ಬೃಹಸ್ಪತಿಭರದ್ವಾಜೌ ಗೌತಮೋ ಭಾರ್ಗವಸ್ತಥಾ।।
14035016a ವಸಿಷ್ಠಃ ಕಾಶ್ಯಪಶ್ಚೈವ ವಿಶ್ವಾಮಿತ್ರೋಽತ್ರಿರೇವ ಚ।
14035016c ಮಾರ್ಗಾನ್ಸರ್ವಾನ್ಪರಿಕ್ರಮ್ಯ ಪರಿಶ್ರಾಂತಾಃ ಸ್ವಕರ್ಮಭಿಃ।।

ಹಿಂದೊಮ್ಮೆ ತಮ್ಮ ಕರ್ಮಗಳ ಮೂಲಕ ಸಮಸ್ತ ಮಾರ್ಗಗಳನ್ನೂ ಅತಿಕ್ರಮಿಸಿ ಬಹಳವಾಗಿ ಆಯಾಸಗೊಂಡಿದ್ದ ಬೃಹಸ್ಪತಿ, ಭರದ್ವಾಜ, ಗೌತಮ, ಭಾರ್ಗವ, ವಸಿಷ್ಠ, ಕಶ್ಯಪ, ವಿಶ್ವಾಮಿತ್ರ ಮತ್ತು ಅತ್ರಿ ಋಷಿಗಳು ಪರಸ್ಪರರಲ್ಲಿ ಜಿಜ್ಞಾಸೆಮಾಡುತ್ತಿದ್ದರು.

14035017a ಋಷಿಮಾಂಗಿರಸಂ ವೃದ್ಧಂ ಪುರಸ್ಕೃತ್ಯ ತು ತೇ ದ್ವಿಜಾಃ।
14035017c ದದೃಶುರ್ಬ್ರಹ್ಮಭವನೇ ಬ್ರಹ್ಮಾಣಂ ವೀತಕಲ್ಮಷಮ್।।

ಆ ದ್ವಿಜರು ವೃದ್ಧ ಋಷಿ ಆಂಗಿರಸನನ್ನು ಮುಂದೆಮಾಡಿಕೊಂಡು ಪಾಪರಹಿತನಾದ ಬ್ರಹ್ಮನನ್ನು ಕಾಣಲು ಬ್ರಹ್ಮಭವನಕ್ಕೆ ಹೋದರು.

14035018a ತಂ ಪ್ರಣಮ್ಯ ಮಹಾತ್ಮಾನಂ ಸುಖಾಸೀನಂ ಮಹರ್ಷಯಃ।
14035018c ಪಪ್ರಚ್ಚುರ್ವಿನಯೋಪೇತಾ ನಿಃಶ್ರೇಯಸಮಿದಂ ಪರಮ್।।

ಸುಖಾಸೀನನಾಗಿದ್ದ ಆ ಮಹಾತ್ಮನಿಗೆ ವಿನಯೋಪೇತರಾಗಿ ನಮಸ್ಕರಿಸಿ ಆ ಮಹರ್ಷಿಗಳು ಪರಮ ಶ್ರೇಯಸ್ಕರವಾದ ಈ ಪ್ರಶ್ನೆಯನ್ನು ಕೇಳಿದರು:

14035019a ಕಥಂ ಕರ್ಮ ಕ್ರಿಯಾತ್ಸಾಧು ಕಥಂ ಮುಚ್ಯೇತ ಕಿಲ್ಬಿಷಾತ್।
14035019c ಕೇ ನೋ ಮಾರ್ಗಾಃ ಶಿವಾಶ್ಚ ಸ್ಯುಃ ಕಿಂ ಸತ್ಯಂ ಕಿಂ ಚ ದುಷ್ಕೃತಮ್।।

“ಉತ್ತಮ ಕರ್ಮಗಳನ್ನು ಹೇಗೆ ಮಾಡಬೇಕು? ಪಾಪಗಳಿಂದ ಹೇಗೆ ಮುಕ್ತನಾಗಬೇಕು? ಮಂಗಳಕರ ಮಾರ್ಗಗಳು ಯಾವುವು? ಸತ್ಯವೆಂದರೇನು? ಪಾಪವೆಂದರೇನು?

14035020a ಕೇನೋಭೌ ಕರ್ಮಪಂಥಾನೌ ಮಹತ್ತ್ವಂ ಕೇನ ವಿಂದತಿ।
14035020c ಪ್ರಲಯಂ ಚಾಪವರ್ಗಂ ಚ ಭೂತಾನಾಂ ಪ್ರಭವಾಪ್ಯಯೌ।।

ಕರ್ಮಗಳ ಎರಡು ಮಾರ್ಗಗಳು ಯಾವುವು? ಯಾವುದರಿಂದ ಮಹತ್ತ್ವ, ಪ್ರಲಯ, ಅಪವರ್ಗ ಮತ್ತು ಜೀವಿಗಳ ಹುಟ್ಟು-ಸಾವುಗಳು – ಇವುಗಳನ್ನು ತಿಳಿದುಕೊಳ್ಳಬಹುದು?”

14035021a ಇತ್ಯುಕ್ತಃ ಸ ಮುನಿಶ್ರೇಷ್ಠೈರ್ಯದಾಹ ಪ್ರಪಿತಾಮಹಃ।
14035021c ತತ್ತೇಽಹಂ ಸಂಪ್ರವಕ್ಷ್ಯಾಮಿ ಶೃಣು ಶಿಷ್ಯ ಯಥಾಗಮಮ್।।

ಆ ಮುನಿಶ್ರೇಷ್ಠರು ಹೀಗೆ ಹೇಳಲು ಪ್ರಪಿತಾಮಹನು ಉತ್ತರವನ್ನಿತ್ತನು. ಶಿಷ್ಯ! ಅದನ್ನು ನಿನಗೆ ಹೇಳುತ್ತೇನೆ. ಕೇಳು!

14035022 ಬ್ರಹ್ಮೋವಾಚ
14035022a ಸತ್ಯಾದ್ಭೂತಾನಿ ಜಾತಾನಿ ಸ್ಥಾವರಾಣಿ ಚರಾಣಿ ಚ।
14035022c ತಪಸಾ ತಾನಿ ಜೀವಂತಿ ಇತಿ ತದ್ವಿತ್ತ ಸುವ್ರತಾಃ।।

ಬ್ರಹ್ಮನು ಹೇಳಿದನು: “ಸುವ್ರತರೇ! ಸ್ಥಾವರ-ಚರ ಭೂತಗಳು ಸತ್ಯದಿಂದಲೇ ಹುಟ್ಟುತ್ತವೆ. ಅವು ತಪಸ್ಸಿನಿಂದ ಜೀವಿಸುತ್ತವೆ. ಇದನ್ನು ತಿಳಿದುಕೊಳ್ಳಿರಿ!

14035023a ಸ್ವಾಂ ಯೋನಿಂ ಪುನರಾಗಮ್ಯ ವರ್ತಂತೇ ಸ್ವೇನ ಕರ್ಮಣಾ।
14035023c ಸತ್ಯಂ ಹಿ ಗುಣಸಂಯುಕ್ತಂ ನಿಯತಂ ಪಂಚಲಕ್ಷಣಮ್।।

ತಮ್ಮ ತಮ್ಮ ಕರ್ಮಗಳಿಂದ ಪುನಃ ಯೋನಿಗಳಲ್ಲಿ ಹುಟ್ಟುತ್ತಲೇ ಇರುತ್ತವೆ. ಗುಣಸಂಯುಕ್ತವಾದ ಸತ್ಯವು ಐದು ಲಕ್ಷಣಗಳಿಂದ ಕೂಡಿದೆಯೆಂದು ನಿಯತವಾಗಿದೆ.

14035024a ಬ್ರಹ್ಮ ಸತ್ಯಂ ತಪಃ ಸತ್ಯಂ ಸತ್ಯಂ ಚೈವ ಪ್ರಜಾಪತಿಃ।
14035024c ಸತ್ಯಾದ್ಭೂತಾನಿ ಜಾತಾನಿ ಭೂತಂ ಸತ್ಯಮಯಂ ಮಹತ್।।

ಬ್ರಹ್ಮವು ಸತ್ಯ, ತಪಸ್ಸು ಸತ್ಯ. ಪ್ರಜಾಪತಿಯು ಸತ್ಯ. ಇರುವವು ಸತ್ಯದಿಂದಲೇ ಹುಟ್ಟುತ್ತವೆ. ಇರುವುದೆಲ್ಲವೂ ಸತ್ಯಮಯವೇ ಆಗಿದೆ.

14035025a ತಸ್ಮಾತ್ಸತ್ಯಾಶ್ರಯಾ ವಿಪ್ರಾ ನಿತ್ಯಂ ಯೋಗಪರಾಯಣಾಃ।
14035025c ಅತೀತಕ್ರೋಧಸಂತಾಪಾ ನಿಯತಾ ಧರ್ಮಸೇತವಃ।।

ಆದುದರಿಂದ ನಿತ್ಯಯೋಗಪರಾಯಣರಾಗಿ ಕ್ರೋಧ-ಸಂತಾಪಗಳಿಂದ ದೂರವಿರುವ ಸತ್ಯವನ್ನೇ ಆಶ್ರಯಿಸಿರುವ ವಿಪ್ರರು ಧರ್ಮಸೇತುಗಳೆಂದು ನಿಯತರಾಗಿದ್ದಾರೆ.

14035026a ಅನ್ಯೋನ್ಯನಿಯತಾನ್ವೈದ್ಯಾನ್ಧರ್ಮಸೇತುಪ್ರವರ್ತಕಾನ್।
14035026c ತಾನಹಂ ಸಂಪ್ರವಕ್ಷ್ಯಾಮಿ ಶಾಶ್ವತಾನ್ಲೋಕಭಾವನಾನ್।।

ಅನ್ಯೋನ್ಯರಿಗೆ ವೈದ್ಯರೆನಿಸಿಕೊಂಡಿರುವ, ಧರ್ಮಸೇತುವನ್ನು ಕಟ್ಟುವ ಈ ಶಾಶ್ವತ ಲೋಕಭಾವನರ ಕುರಿತು ನಾನು ಹೇಳುತ್ತೇನೆ.

14035027a ಚಾತುರ್ವಿದ್ಯಂ ತಥಾ ವರ್ಣಾಂಶ್ಚತುರಶ್ಚಾಶ್ರಮಾನ್ಪೃಥಕ್।
14035027c ಧರ್ಮಮೇಕಂ ಚತುಷ್ಪಾದಂ ನಿತ್ಯಮಾಹುರ್ಮನೀಷಿಣಃ।।

ಹಾಗೆಯೇ ನಾಲ್ಕು ವರ್ಣಗಳ ಮತ್ತು ನಾಲ್ಕು ಆಶ್ರಮಗಳ ಪ್ರತ್ಯೇಕ ಧರ್ಮಗಳ ವಿದ್ಯೆಯ ಕುರಿತು ಹೇಳುತ್ತೇನೆ. ನಿತ್ಯವಾದ ಒಂದೇ ಧರ್ಮವು ನಾಲ್ಕು ಪಾದಗಳುಳ್ಳದ್ದು ಎಂದು ವಿದ್ವಾಂಸರು ಹೇಳುತ್ತಾರೆ.

14035028a ಪಂಥಾನಂ ವಃ ಪ್ರವಕ್ಷ್ಯಾಮಿ ಶಿವಂ ಕ್ಷೇಮಕರಂ ದ್ವಿಜಾಃ।
14035028c ನಿಯತಂ ಬ್ರಹ್ಮಭಾವಾಯ ಯಾತಂ ಪೂರ್ವಂ ಮನೀಷಿಭಿಃ।।

ಪೂರ್ವದಲ್ಲಿ ವಿದ್ವಾಂಸ ದ್ವಿಜರು ಬ್ರಹ್ಮಭಾವವನ್ನು ಹೊಂದಲು ಹಾಕಿಕೊಂಡ ನಿಯತವೂ ಕ್ಷೇಮಕರವೂ ಆದ ಮಾರ್ಗದ ಕುರಿತು ಹೇಳುತ್ತೇನೆ.

14035029a ಗದತಸ್ತಂ ಮಮಾದ್ಯೇಹ ಪಂಥಾನಂ ದುರ್ವಿದಂ ಪರಮ್।
14035029c ನಿಬೋಧತ ಮಹಾಭಾಗಾ ನಿಖಿಲೇನ ಪರಂ ಪದಮ್।।

ಮಹಾಭಾಗರೇ! ನಾನೀಗ ಹೇಳಲಿರುವ ಮಾರ್ಗವನ್ನು ತಿಳಿದುಕೊಳ್ಳುವುದು ಪರಮ ಕಷ್ಟಕರವಾದುದು. ಪರಮ ಪದದ ಕುರಿತು ಸಂಪೂರ್ಣವಾಗಿ ಕೇಳಿರಿ.

14035030a ಬ್ರಹ್ಮಚಾರಿಕಮೇವಾಹುರಾಶ್ರಮಂ ಪ್ರಥಮಂ ಪದಮ್।
14035030c ಗಾರ್ಹಸ್ಥ್ಯಂ ತು ದ್ವಿತೀಯಂ ಸ್ಯಾದ್ವಾನಪ್ರಸ್ಥಮತಃ ಪರಮ್।
14035030e ತತಃ ಪರಂ ತು ವಿಜ್ಞೇಯಮಧ್ಯಾತ್ಮಂ ಪರಮಂ ಪದಮ್।।

ಬ್ರಹ್ಮಚರ್ಯಾಶ್ರಮವನ್ನು ಮೊದಲನೆಯ ಆಶ್ರಮವೆಂದು ಹೇಳುತ್ತಾರೆ. ಗೃಹಸ್ಥಾಶ್ರಮವು ಎರಡನೆಯದು. ವಾನಪ್ರಸ್ಥವು ನಂತರದ ಆಶ್ರಮವು. ಅದರ ನಂತರದ್ದು ಪರಮ ಪದವನ್ನು ನೀಡುವ ಆಧ್ಯಾತ್ಮದ ಆಶ್ರಮವು.

14035031a ಜ್ಯೋತಿರಾಕಾಶಮಾದಿತ್ಯೋ ವಾಯುರಿಂದ್ರಃ ಪ್ರಜಾಪತಿಃ।
14035031c ನೋಪೈತಿ ಯಾವದಧ್ಯಾತ್ಮಂ ತಾವದೇತಾನ್ನ ಪಶ್ಯತಿ।
14035031e ತಸ್ಯೋಪಾಯಂ ಪ್ರವಕ್ಷ್ಯಾಮಿ ಪುರಸ್ತಾತ್ತಂ ನಿಬೋಧತ।।

ಎಲ್ಲಿಯವರೆಗೆ ಆಧ್ಯಾತ್ಮ ಪದವನ್ನು ತಲುಪುವುದಿಲ್ಲವೋ ಅಲ್ಲಿಯವರೆಗೆ ಜ್ಯೋತಿ, ಆಕಾಶ, ಆದಿತ್ಯ, ವಾಯು, ಇಂದ್ರ ಮತ್ತು ಪ್ರಜಾಪತಿಯರ ನಿಜಸ್ವರೂಪವನ್ನು ಅವನು ಕಾಣುವುದಿಲ್ಲ. ಆದುದರಿಂದ ಮೊದಲು ನಾನು ಆಧ್ಯಾತ್ಮದ ಉಪಾಯವನ್ನು ಹೇಳುತ್ತೇನೆ. ಕೇಳಿರಿ.

14035032a ಫಲಮೂಲಾನಿಲಭುಜಾಂ ಮುನೀನಾಂ ವಸತಾಂ ವನೇ।
14035032c ವಾನಪ್ರಸ್ಥಂ ದ್ವಿಜಾತೀನಾಂ ತ್ರಯಾಣಾಮುಪದಿಶ್ಯತೇ।।

ವನದಲ್ಲಿ ವಾಸವಾಗಿದ್ದುಕೊಂಡು ಫಲ-ಮೂಲಗಳನ್ನು ಮತ್ತು ಗಾಳಿಯನ್ನೇ ಸೇವಿಸಿಕೊಂಡು ಮುನಿಗಳಂತಿರುವ ವಾನಪ್ರಸ್ಥಾಶ್ರಮವು ಮೂರು ದ್ವಿಜಾತಿಯವರಿಗೂ1 ಉಪದೇಶಿಸಲ್ಪಟ್ಟಿದೆ.

14035033a ಸರ್ವೇಷಾಮೇವ ವರ್ಣಾನಾಂ ಗಾರ್ಹಸ್ಥ್ಯಂ ತದ್ವಿಧೀಯತೇ।
14035033c ಶ್ರದ್ಧಾಲಕ್ಷಣಮಿತ್ಯೇವಂ ಧರ್ಮಂ ಧೀರಾಃ ಪ್ರಚಕ್ಷತೇ।।

ಗೃಹಸ್ಥಾಶ್ರಮವು ಎಲ್ಲವರ್ಣದವರಿಗೂ ವಿಹಿತವಾಗಿದೆ. ಧೀರರು ಶ್ರದ್ಧೆಯೇ ಧರ್ಮದ ಲಕ್ಷಣವೆಂದು ಹೇಳುತ್ತಾರೆ.

14035034a ಇತ್ಯೇತೇ ದೇವಯಾನಾ ವಃ ಪಂಥಾನಃ ಪರಿಕೀರ್ತಿತಾಃ।
14035034c ಸದ್ಭಿರಧ್ಯಾಸಿತಾ ಧೀರೈಃ ಕರ್ಮಭಿರ್ಧರ್ಮಸೇತವಃ।।

ದೇವಯಾನಮಾರ್ಗಗಳ ಕುರಿತು ನಾನು ನಿಮಗೆ ಹೇಳಿದೆ. ಧೀರ ಸತ್ಪುರುಷರು ಧರ್ಮಸೇತು ಕರ್ಮಗಳಿಂದ ಈ ಮಾರ್ಗಗಳನ್ನು ಅನುಸರಿಸುತ್ತಾರೆ.

14035035a ಏತೇಷಾಂ ಪೃಥಗಧ್ಯಾಸ್ತೇ ಯೋ ಧರ್ಮಂ ಸಂಶಿತವ್ರತಃ।
14035035c ಕಾಲಾತ್ಪಶ್ಯತಿ ಭೂತಾನಾಂ ಸದೈವ ಪ್ರಭವಾಪ್ಯಯೌ।।

ಸಂಶಿತವ್ರತನಾದ ಯಾರು ಇವುಗಳಲ್ಲಿ ಯಾವುದೇ ಒಂದನ್ನು ಪ್ರತ್ಯೇಕವಾಗಿ ಅನುಷ್ಠಾನ ಮಾಡುತ್ತಾನೋ ಅವನು ಕಾಲಾನುಕ್ರಮವಾಗಿ ಎಲ್ಲ ಪ್ರಾಣಿಗಳ ಹುಟ್ಟು-ಸಾವುಗಳನ್ನು ಸದೈವ ಕಾಣುತ್ತಿರುತ್ತಾನೆ.

14035036a ಅತಸ್ತತ್ತ್ವಾನಿ ವಕ್ಷ್ಯಾಮಿ ಯಾಥಾತಥ್ಯೇನ ಹೇತುನಾ।
14035036c ವಿಷಯಸ್ಥಾನಿ ಸರ್ವಾಣಿ ವರ್ತಮಾನಾನಿ ಭಾಗಶಃ।।

ಈಗ ನಾನು ಯಥಾರ್ಥವಾಗಿ ಹೇತು ತತ್ತ್ವಗಳೆಲ್ಲವುಗಳ ಕುರಿತು ಪ್ರತ್ಯೇಕ ಪ್ರತ್ಯೇಕವಾಗಿ ವಿವರಿಸುತ್ತೇನೆ.

14035037a ಮಹಾನಾತ್ಮಾ ತಥಾವ್ಯಕ್ತಮಹಂಕಾರಸ್ತಥೈವ ಚ।
14035037c ಇಂದ್ರಿಯಾಣಿ ದಶೈಕಂ ಚ ಮಹಾಭೂತಾನಿ ಪಂಚ ಚ।।
14035038a ವಿಶೇಷಾಃ ಪಂಚಭೂತಾನಾಮಿತ್ಯೇಷಾ ವೈದಿಕೀ ಶ್ರುತಿಃ।
14035038c ಚತುರ್ವಿಂಶತಿರೇಷಾ ವಸ್ತತ್ತ್ವಾನಾಂ ಸಂಪ್ರಕೀರ್ತಿತಾ।।

ಮಹಾ ಆತ್ಮ (ಮಹತ್ತತ್ತ್ವ), ಅವ್ಯಕ್ತ ಪ್ರಕೃತಿ, ಅಹಂಕಾರ, ಹತ್ತು ಇಂದ್ರಿಯಗಳು, ಐದು ಮಹಾಭೂತಗಳು ಮತ್ತು ಈ ಮಹಾಭೂತಗಳ ಐದು ವಿಶೇಷಗುಣಗಳು ಇವು ವೇದಪ್ರಮಾಣವಾದುದೆಂದು ಕೇಳಿದ್ದೇವೆ. ಈ ಇಪ್ಪತ್ನಾಲ್ಕು ಅಂಶಗಳು ತತ್ತ್ವಗಳೆಂದು ಹೇಳಲ್ಪಟ್ಟಿವೆ.

14035039a ತತ್ತ್ವಾನಾಮಥ ಯೋ ವೇದ ಸರ್ವೇಷಾಂ ಪ್ರಭವಾಪ್ಯಯೌ।
14035039c ಸ ಧೀರಃ ಸರ್ವಭೂತೇಷು ನ ಮೋಹಮಧಿಗಚ್ಚತಿ।।

ಈ ಎಲ್ಲ ತತ್ತ್ವಗಳ ಉತ್ಪತ್ತಿ-ಲಯಗಳನ್ನು ತಿಳಿದುಕೊಂಡಿರುವವನೇ ಸರ್ವಭೂತಗಳಲ್ಲಿ ಧೀರನೆನಿಸಿಕೊಳ್ಳುತ್ತಾನೆ ಮತ್ತು ಎಂದಿಗೂ ಮೋಹಪರವಶನಾಗುವುದಿಲ್ಲ.

14035040a ತತ್ತ್ವಾನಿ ಯೋ ವೇದಯತೇ ಯಥಾತಥಂ ಗುಣಾಂಶ್ಚ ಸರ್ವಾನಖಿಲಾಶ್ಚ ದೇವತಾಃ।
14035040c ವಿಧೂತಪಾಪ್ಮಾ ಪ್ರವಿಮುಚ್ಯ ಬಂಧನಂ ಸ ಸರ್ವಲೋಕಾನಮಲಾನ್ಸಮಶ್ನುತೇ।।

ಈ ತತ್ತ್ವಗಳನ್ನು, ಅವುಗಳ ಸರ್ವ ಗುಣಗಳನ್ನು ಮತ್ತು ಅಖಿಲ ದೇವತೆಗಳನ್ನೂ ಯಾರು ಯಥಾವತ್ತಾಗಿ ತಿಳಿದುಕೊಂಡಿರುವನೋ ಅವನು ಪಾಪಗಳನ್ನು ತೊಳೆದುಕೊಂಡು ಬಂಧನದಿಂದ ಬಿಡುಗಡೆಹೊಂದಿ ಸರ್ವ ದಿವ್ಯಲೋಕಗಳನ್ನೂ ಅನುಭವಿಸುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಪಂಚತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ಮೂವತ್ತೈದನೇ ಅಧ್ಯಾಯವು.


  1. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಈ ಮೂರು ದ್ವಿಜಾತಿಗಳು. ↩︎