034: ಅನುಗೀತಾಯಾಂ ಬ್ರಾಹ್ಮಣಗೀತಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 34

ಸಾರ

ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (1-12).

14034001 ಬ್ರಾಹ್ಮಣ್ಯುವಾಚ।
14034001a ನೇದಮಲ್ಪಾತ್ಮನಾ ಶಕ್ಯಂ ವೇದಿತುಂ ನಾಕೃತಾತ್ಮನಾ।
14034001c ಬಹು ಚಾಲ್ಪಂ ಚ ಸಂಕ್ಷಿಪ್ತಂ ವಿಪ್ಲುತಂ ಚ ಮತಂ ಮಮ।।

ಬ್ರಾಹ್ಮಣಿಯು ಹೇಳಿದಳು: “ಜಿತೇಂದ್ರಿಯಳಲ್ಲದ ಅಲ್ಪಾತ್ಮಳಾದ ನಾನು ಇದನ್ನು ತಿಳಿಯಲು ಶಕ್ಯಳಾಗಿಲ್ಲ. ನೀನು ಸಂಕ್ಷಿಪ್ತವಾಗಿ ಸ್ವಲ್ಪವನ್ನೇ ಹೇಳಿರುವುದರಿಂದ ಅದು ನನ್ನಲ್ಲಿ ಗೊಂದಲವನ್ನುಂಟುಮಾಡಿದೆಯೆಂದು ನನಗನ್ನಿಸುತ್ತದೆ.

14034002a ಉಪಾಯಂ ತು ಮಮ ಬ್ರೂಹಿ ಯೇನೈಷಾ ಲಭ್ಯತೇ ಮತಿಃ।
14034002c ತನ್ಮನ್ಯೇ ಕಾರಣತಮಂ ಯತ ಏಷಾ ಪ್ರವರ್ತತೇ।।

ನಾನೂ ಕೂಡ ಅದೇ ಮತಿಯನ್ನು ಪಡೆಯಲು ಏನಾದರೂ ಉಪಾಯವಿದ್ದರೆ ಅದನ್ನು ಹೇಳು. ಆ ಉಪಾಯವನ್ನು ನಿನ್ನಿಂದಲೇ ತಿಳಿಯಬಲ್ಲೆ ಎಂಬ ವಿಶ್ವಾಸವು ನನಗಿದೆ.”

14034003 ಬ್ರಾಹ್ಮಣ ಉವಾಚ।
14034003a ಅರಣೀಂ ಬ್ರಾಹ್ಮಣೀಂ ವಿದ್ಧಿ ಗುರುರಸ್ಯೋತ್ತರಾರಣಿಃ।
14034003c ತಪಃಶ್ರುತೇಽಭಿಮಥ್ನೀತೋ ಜ್ಞಾನಾಗ್ನಿರ್ಜಾಯತೇ ತತಃ।।

ಬ್ರಾಹ್ಮಣನು ಹೇಳಿದನು: “ಬುದ್ಧಿಯು ಒಂದು ಅರಣಿಯೆಂದೂ ಗುರುವು ಇನ್ನೊಂದು ಅರಣಿಯೆಂದೂ ತಿಳಿದುಕೋ. ಇವೆರಡನ್ನೂ ತಪಸ್ಸು, ವೇದಶ್ರವಣಗಳ ಮೂಲಕ ಮಥಿಸಿದಾಗ ಜ್ಞಾನವೆಂಬ ಅಗ್ನಿಯು ಹುಟ್ಟುತ್ತದೆ.”

14034004 ಬ್ರಾಹ್ಮಣ್ಯುವಾಚ।
14034004a ಯದಿದಂ ಬ್ರಹ್ಮಣೋ ಲಿಂಗಂ ಕ್ಷೇತ್ರಜ್ಞಮಿತಿ ಸಂಜ್ಞಿತಮ್।
14034004c ಗ್ರಹೀತುಂ ಯೇನ ತಚ್ಚಕ್ಯಂ ಲಕ್ಷಣಂ ತಸ್ಯ ತತ್ಕ್ವ ನು।।

ಬ್ರಾಹ್ಮಣಿಯು ಹೇಳಿದಳು: “ಬ್ರಹ್ಮನ ಲಕ್ಷಣಗಳನ್ನು ಹೊಂದಿರುವ ಮತ್ತು ಕ್ಷೇತ್ರಜ್ಞನೆಂದು ಕರೆಯಲ್ಪಡುವ ಅದನ್ನು ಗುರುತಿಸಲು ಅದರ ಲಕ್ಷಣಗಳೇನು ಎನ್ನುವುದನ್ನು ಹೇಳು.”

14034005 ಬ್ರಾಹ್ಮಣ ಉವಾಚ।
14034005a ಅಲಿಂಗೋ ನಿರ್ಗುಣಶ್ಚೈವ ಕಾರಣಂ ನಾಸ್ಯ ವಿದ್ಯತೇ।
14034005c ಉಪಾಯಮೇವ ವಕ್ಷ್ಯಾಮಿ ಯೇನ ಗೃಹ್ಯೇತ ವಾ ನ ವಾ।।

ಬ್ರಾಹ್ಮಣನು ಹೇಳಿದನು: “ಲಕ್ಷಣಗಳಿಲ್ಲದ ನಿರ್ಗುಣವಾದ ಇದರ ಕಾರಣಗಳೇನು ತಿಳಿದಿಲ್ಲ. ಯಾವ ಉಪಾಯದಿಂದ ಅದನ್ನು ಗ್ರಹಿಸಿಕೊಳ್ಳಬಹುದು ಅಥವಾ ಗ್ರಹಿಸದೇ ಇರಬಹುದು ಎನ್ನುವುದನ್ನು ಹೇಳುತ್ತೇನೆ.

14034006a ಸಮ್ಯಗಪ್ಯುಪದಿಷ್ಟಶ್ಚ ಭ್ರಮರೈರಿವ ಲಕ್ಷ್ಯತೇ।
14034006c ಕರ್ಮಬುದ್ಧಿರಬುದ್ಧಿತ್ವಾಜ್ಞಾನಲಿಂಗೈರಿವಾಶ್ರಿತಮ್।।

ಎಷ್ಟೇ ಉಪದೇಶಗಳನ್ನು ಹೇಳಿದರೂ ದುಂಬಿಯು ವಾಸನೆಯಿಂದ ಪುಷ್ಪರಸವನ್ನು ಗುರುತಿಸುವಂತೆ ಕೇವಲ ಸಂಸ್ಕಾರದಿಂದಲೇ ಬ್ರಹ್ಮನ ಸ್ವರೂಪವನ್ನು ತಿಳಿದುಕೊಳ್ಳಬಹುದು1. ಕರ್ಮಬುದ್ಧಿಯು ಅಬುದ್ಧಿಯು. ಅದರ ಮೂಲಕ ನೋಡಿದರೆ ಬ್ರಹ್ಮಕ್ಕೆ ಲಕ್ಷಣಗಳಿವೆಯೆಂದು ತೋರುತ್ತದೆ.

14034007a ಇದಂ ಕಾರ್ಯಮಿದಂ ನೇತಿ ನ ಮೋಕ್ಷೇಷೂಪದಿಶ್ಯತೇ।
14034007c ಪಶ್ಯತಃ ಶೃಣ್ವತೋ ಬುದ್ಧಿರಾತ್ಮನೋ ಯೇಷು ಜಾಯತೇ।।

ಮೋಕ್ಷಕ್ಕೆ ಇದನ್ನು ಮಾಡಬೇಕು ಇದನ್ನು ಮಾಡಬಾರದು ಎಂದು ಹೇಳುವುದಿಲ್ಲ. ನೋಡುವ ಮತ್ತು ಕೇಳುವ ಬುದ್ಧಿಯು ಆತ್ಮನಿಂದಲೇ ಹುಟ್ಟಿರುತ್ತದೆ.

14034008a ಯಾವಂತ ಇಹ ಶಕ್ಯೇರಂಸ್ತಾವತೋಽಂಶಾನ್ಪ್ರಕಲ್ಪಯೇತ್।
14034008c ವ್ಯಕ್ತಾನವ್ಯಕ್ತರೂಪಾಂಶ್ಚ ಶತಶೋಽಥ ಸಹಸ್ರಶಃ।।

ವ್ಯಕ್ತ ಮತ್ತು ಅವ್ಯಕ್ತ ರೂಪಗಳಲ್ಲಿ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ಸಂಖ್ಯೆಗಳಲ್ಲಿ ನೂರಾರು ಸಾವಿರ ಅಂಶಗಳಲ್ಲಿ ಬ್ರಹ್ಮನನ್ನೇ ಭಾವಿಸಬೇಕು.

14034009a ಸರ್ವಾನ್ನಾನಾತ್ವಯುಕ್ತಾಂಶ್ಚ ಸರ್ವಾನ್ಪ್ರತ್ಯಕ್ಷಹೇತುಕಾನ್।
14034009c ಯತಃ ಪರಂ ನ ವಿದ್ಯೇತ ತತೋಽಭ್ಯಾಸೇ ಭವಿಷ್ಯತಿ।।

ನಾನಾಪ್ರಕಾರಗಳಲ್ಲಿರುವ ಎಲ್ಲದರಲ್ಲಿಯೂ ಮತ್ತು ಪ್ರತ್ಯಕ್ಷಪ್ರಮಾಣದ ಎಲ್ಲವೂ ಬ್ರಹ್ಮಭಾವವೆಂದೂ ತಿಳಿಯಬೇಕು. ಇದು ಅಭ್ಯಾಸದಿಂದ ಸಿದ್ಧಿಯಾಗುತ್ತದೆ.””

14034010 ವಾಸುದೇವ ಉವಾಚ।
14034010a ತತಸ್ತು ತಸ್ಯಾ ಬ್ರಾಹ್ಮಣ್ಯಾ ಮತಿಃ ಕ್ಷೇತ್ರಜ್ಞಸಂಕ್ಷಯೇ।
14034010c ಕ್ಷೇತ್ರಜ್ಞಾದೇವ ಪರತಃ ಕ್ಷೇತ್ರಜ್ಞೋಽನ್ಯಃ ಪ್ರವರ್ತತೇ।।

ವಾಸುದೇವನು ಹೇಳಿದನು: “ನಂತರ ಆ ಬ್ರಾಹ್ಮಣಿಯ ಬುದ್ಧಿಯು ಜೀವರೂಪದಲ್ಲಿರುವ ಕ್ಷೇತ್ರಜ್ಞನಿಗಿಂತ ಪರದಲ್ಲಿರುವ ಪರಮಾತ್ಮನೆಂಬ ಕ್ಷೇತ್ರಜ್ಞನಿಂದಲೇ ಜೀವರೂಪದ ಕ್ಷೇತ್ರಜ್ಞನು ನಿಯಮಿಸಲ್ಪಡುತ್ತಾನೆ ಎಂಬ ನಿಶ್ಚಯಕ್ಕೆ ಬಂದಿತು.”

14034011 ಅರ್ಜುನ ಉವಾಚ।
14034011a ಕ್ವ ನು ಸಾ ಬ್ರಾಹ್ಮಣೀ ಕೃಷ್ಣ ಕ್ವ ಚಾಸೌ ಬ್ರಾಹ್ಮಣರ್ಷಭಃ।
14034011c ಯಾಭ್ಯಾಂ ಸಿದ್ಧಿರಿಯಂ ಪ್ರಾಪ್ತಾ ತಾವುಭೌ ವದ ಮೇಽಚ್ಯುತ।।

ಅರ್ಜುನನು ಹೇಳಿದನು: “ಕೃಷ್ಣ! ಅಚ್ಯುತ! ಈ ಸಿದ್ಧಿಯನ್ನು ಪಡೆದ ಆ ದಂಪತಿಗಳಲ್ಲಿ ಬ್ರಾಹ್ಮಣಿಯು ಯಾರು ಮತ್ತು ಆ ಬ್ರಾಹ್ಮಣರ್ಷಭನು ಯಾರು ಎನ್ನುವುದನ್ನು ಹೇಳು.”

14034012 ವಾಸುದೇವ ಉವಾಚ।
14034012a ಮನೋ ಮೇ ಬ್ರಾಹ್ಮಣಂ ವಿದ್ಧಿ ಬುದ್ಧಿಂ ಮೇ ವಿದ್ಧಿ ಬ್ರಾಹ್ಮಣೀಮ್।
14034012c ಕ್ಷೇತ್ರಜ್ಞ ಇತಿ ಯಶ್ಚೋಕ್ತಃ ಸೋಽಹಮೇವ ಧನಂಜಯ।।

ವಾಸುದೇವನು ಹೇಳಿದನು: “ಧನಂಜಯ! ಮನಸ್ಸೇ ಆ ಬ್ರಾಹ್ಮಣನೆಂದು ತಿಳಿ. ಬುದ್ಧಿಯೇ ಆ ಬ್ರಾಹ್ಮಣಿಯೆಂದು ತಿಳಿ. ಅಲ್ಲಿ ಹೇಳಿರುವ ಕ್ಷೇತ್ರಜ್ಞನು ನಾನೇ ಎಂದು ತಿಳಿ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಚತುಸ್ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಮೂವತ್ನಾಲ್ಕನೇ ಅಧ್ಯಾಯವು.


  1. ಯಾವುದೇ ಶಿಕ್ಷಣ-ಉಪದೇಶಗಳಿಲ್ಲದೇ ದುಂಬಿಯು ಯಾವ ಹೂವಿನಲ್ಲಿ ರಸವಿದೆ ಎನ್ನುವುದನ್ನು ಗುರುತಿಸುತ್ತದೆ. ಹಾಗೆಯೇ ಉತ್ತಮ ಸಂಸ್ಕಾರಗಳನ್ನು ಪಡೆದಿರುವ ಮನುಷ್ಯನು – ಅವನಿಗೆ ಎಷ್ಟೇ ಉಪದೇಶವಿದ್ದರೂ ಅಥವಾ ಇಲ್ಲದಿದ್ದರೂ – ಸ್ವಾಭಾವಿಕವಾಗಿಯೇ ಬ್ರಹ್ಮದ ಸ್ವರೂಪವನ್ನು ಗುರುತಿಸಬಲ್ಲನು. ಬ್ರಹ್ಮದ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಉಪದೇಶಗಳ ಅವಶ್ಯಕತೆಯಿಲ್ಲ. ಉತ್ತಮ ಸಂಸ್ಕಾರದ ಅವಶ್ಯಕತೆಯಿದೆ. ↩︎