033: ಅನುಗೀತಾಯಾಂ ಬ್ರಾಹ್ಮಣಗೀತಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 33

ಸಾರ

ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (1-8).

14033001 ಬ್ರಾಹ್ಮಣ ಉವಾಚ।
14033001a ನಾಹಂ ತಥಾ ಭೀರು ಚರಾಮಿ ಲೋಕೇ ತಥಾ ತ್ವಂ ಮಾಂ ತರ್ಕಯಸೇ ಸ್ವಬುದ್ಧ್ಯಾ।
14033001c ವಿಪ್ರೋಽಸ್ಮಿ ಮುಕ್ತೋಽಸ್ಮಿ ವನೇಚರೋಽಸ್ಮಿ ಗೃಹಸ್ಥಧರ್ಮಾ ಬ್ರಹ್ಮಚಾರೀ ತಥಾಸ್ಮಿ।।

ಬ್ರಾಹ್ಮಣನು ಹೇಳಿದನು: “ಭೀರು! ನಾನು ಹೇಗಿರುವೆನೆಂದು ನೀನು ನಿನ್ನ ಬುದ್ಧಿಯಿಂದ ತರ್ಕಿಸುತ್ತಿರುವೆ ತಾನೇ? ಆದರೆ ನಾನು ಹಾಗೆ ಲೋಕದಲ್ಲಿ ವ್ಯವಹರಿಸುತ್ತಿಲ್ಲ. ವಿಪ್ರನಾಗಿದ್ದೇನೆ. ಮುಕ್ತನಾಗಿದ್ದೇನೆ. ವನಚರನಾಗಿದ್ದೇನೆ. ಗೃಹಸ್ಥಧರ್ಮಿಯಾಗಿದ್ದರೂ ಬ್ರಹ್ಮಚಾರಿಯಾಗಿದ್ದೇನೆ.

14033002a ನಾಹಮಸ್ಮಿ ಯಥಾ ಮಾಂ ತ್ವಂ ಪಶ್ಯಸೇ ಚಕ್ಷುಷಾ ಶುಭೇ।
14033002c ಮಯಾ ವ್ಯಾಪ್ತಮಿದಂ ಸರ್ವಂ ಯತ್ಕಿಂ ಚಿಜ್ಜಗತೀಗತಮ್।।

ಶುಭೇ! ನಿನ್ನ ಕಣ್ಣುಗಳಿಂದ ನೀನು ನನ್ನನ್ನು ಕಾಣುವಂತೆ ನಾನಿಲ್ಲ. ಜಗತ್ತಿನಲ್ಲಿರುವ ಮತ್ತು ಆಗಿ ಹೋಗಿರುವ ಎಲ್ಲವನ್ನೂ ನಾನು ವ್ಯಾಪಿಸಿರುವೆನು.

14033003a ಯೇ ಕೇ ಚಿಜ್ಜಂತವೋ ಲೋಕೇ ಜಂಗಮಾಃ ಸ್ಥಾವರಾಶ್ಚ ಹ।
14033003c ತೇಷಾಂ ಮಾಮಂತಕಂ ವಿದ್ಧಿ ದಾರೂಣಾಮಿವ ಪಾವಕಮ್।।

ಕಟ್ಟಿಗೆಗಳಿಗೆ ಅಗ್ನಿಯು ಹೇಗೋ ಹಾಗೆ ಲೋಕದಲ್ಲಿ ಏನೆಲ್ಲ ಜಂಗಮ-ಸ್ಥಾವರ ಜಂತುಗಳಿವೆಯೋ ಅವೆಲ್ಲವುಗಳ ಅಂತಕನೆಂದು ನನ್ನನ್ನು ತಿಳಿ.

14033004a ರಾಜ್ಯಂ ಪೃಥಿವ್ಯಾಂ ಸರ್ವಸ್ಯಾಮಥ ವಾಪಿ ತ್ರಿವಿಷ್ಟಪೇ।
14033004c ತಥಾ ಬುದ್ಧಿರಿಯಂ ವೇತ್ತಿ ಬುದ್ಧಿರೇವ ಧನಂ ಮಮ।।

ಮೂರು ಲೋಕಗಳಲ್ಲಿಯೂ ಪೃಥ್ವಿಯಲ್ಲಿಯೂ ಇರುವ ಸರ್ವ ರಾಜ್ಯವನ್ನೂ ನನ್ನ ಈ ಬುದ್ಧಿಯು ತಿಳಿದುಕೊಂಡಿದೆ. ಹೀಗೆ ಈ ಬುದ್ಧಿಯೇ ನನ್ನ ಧನವು.

14033005a ಏಕಃ ಪಂಥಾ ಬ್ರಾಹ್ಮಣಾನಾಂ ಯೇನ ಗಚ್ಚಂತಿ ತದ್ವಿದಃ।
14033005c ಗೃಹೇಷು ವನವಾಸೇಷು ಗುರುವಾಸೇಷು ಭಿಕ್ಷುಷು।
14033005e ಲಿಂಗೈರ್ಬಹುಭಿರವ್ಯಗ್ರೈರೇಕಾ ಬುದ್ಧಿರುಪಾಸ್ಯತೇ।।

ಬ್ರಾಹ್ಮಣರಿಗೆ ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸ ಈ ಆಶ್ರಮಗಳಲ್ಲಿ ಯಾವುದೊಂದನ್ನು ಅನುಸರಿಸಿದರೂ ಪರಮ ಪದವನ್ನು ಪಡೆಯುತ್ತಾರೆ ಎಂದು ತಿಳಿದಿರುತ್ತಾರೆ. ಅನೇಕ ಲಕ್ಷಣಗಳನ್ನು ಹೊಂದಿದ್ದರೂ ಈ ಆಶ್ರಮಗಳು ಅವ್ಯಗ್ರ ಬುದ್ಧಿಯೊಂದನ್ನೇ ಉಪಾಸಿಸುತ್ತವೆ.

14033006a ನಾನಾಲಿಂಗಾಶ್ರಮಸ್ಥಾನಾಂ ಯೇಷಾಂ ಬುದ್ಧಿಃ ಶಮಾತ್ಮಿಕಾ।
14033006c ತೇ ಭಾವಮೇಕಮಾಯಾಂತಿ ಸರಿತಃ ಸಾಗರಂ ಯಥಾ।।

ನಾನಾ ಲಕ್ಷಣಗಳನ್ನು ಹೊಂದಿರುವ ಯಾವ ಆಶ್ರಮದಲ್ಲಿದ್ದರೂ ಅವರ ಶಮಾತ್ಮಿಕ ಬುದ್ಧಿಯು, ನದಿಗಳು ಸಾಗರವನ್ನು ಹೇಗೋ ಹಾಗೆ, ಒಂದೇ ಭಾವವನ್ನು ಹೊಂದುತ್ತದೆ.

14033007a ಬುದ್ಧ್ಯಾಯಂ ಗಮ್ಯತೇ ಮಾರ್ಗಃ ಶರೀರೇಣ ನ ಗಮ್ಯತೇ।
14033007c ಆದ್ಯಂತವಂತಿ ಕರ್ಮಾಣಿ ಶರೀರಂ ಕರ್ಮಬಂಧನಮ್।।

ಮುಕ್ತಿಮಾರ್ಗವನ್ನು ಬುದ್ಧಿಯಿಂದಲೇ ಪ್ರಯಾಣಿಸುತ್ತಾರೆ. ಶರೀರದಿಂದ ಪ್ರಯಾಣಿಸಲು ಸಾಧ್ಯವಿಲ್ಲ. ಕರ್ಮಗಳಿಗೆ ಆದಿ-ಅಂತ್ಯಗಳಿವೆ. ಆದುದರಿಂದ ಶರೀರವು ಕರ್ಮಬಂಧನವಾದುದು.

14033008a ತಸ್ಮಾತ್ತೇ ಸುಭಗೇ ನಾಸ್ತಿ ಪರಲೋಕಕೃತಂ ಭಯಮ್।
14033008c ಮದ್ಭಾವಭಾವನಿರತಾ ಮಮೈವಾತ್ಮಾನಮೇಷ್ಯಸಿ।।

ಸುಭಗೇ! ಆದುದರಿಂದ ನಿನಗೆ ಪರಲೋಕದಲ್ಲಿ ಮಾಡಿದ ಕರ್ಮಗಳ ಭಯವಿರುವುದಿಲ್ಲ. ಆತ್ಮಭಾವನಿರತಳಾಗಿರುವ ನೀನು ನನ್ನಂತೆಯೇ ಆತ್ಮಸ್ವರೂಪವನ್ನು ಹೊಂದುವೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ತ್ರಯಸ್ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಮೂವತ್ಮೂರನೇ ಅಧ್ಯಾಯವು.