ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 32
ಸಾರ
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (1-25).
14032001 ಬ್ರಾಹ್ಮಣ ಉವಾಚ।
14032001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
14032001c ಬ್ರಾಹ್ಮಣಸ್ಯ ಚ ಸಂವಾದಂ ಜನಕಸ್ಯ ಚ ಭಾಮಿನಿ।।
ಬ್ರಾಹ್ಮಣನು ಹೇಳಿದನು: “ಭಾಮಿನೀ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಈ ಜನಕ ಮತ್ತು ಬ್ರಾಹ್ಮಣರ ಸಂವಾದವನ್ನು ಉದಾಹರಿಸುತ್ತಾರೆ.
14032002a ಬ್ರಾಹ್ಮಣಂ ಜನಕೋ ರಾಜಾ ಸನ್ನಂ ಕಸ್ಮಿಂಶ್ಚಿದಾಗಮೇ।
14032002c ವಿಷಯೇ ಮೇ ನ ವಸ್ತವ್ಯಮಿತಿ ಶಿಷ್ಟ್ಯರ್ಥಮಬ್ರವೀತ್।।
ಒಮ್ಮೆ ರಾಜಾ ಜನಕನು ಯಾವುದೋ ಅಪರಾಧದಲ್ಲಿ ಸಿಕ್ಕಿಹಾಕಿಕೊಂಡಿದ್ದ ಬ್ರಾಹ್ಮಣನಿಗೆ “ನನ್ನ ರಾಜ್ಯದಲ್ಲಿ ಇರಬೇಡ!” ಎಂದು ಆಜ್ಞೆಮಾಡಿದನು.
14032003a ಇತ್ಯುಕ್ತಃ ಪ್ರತ್ಯುವಾಚಾಥ ಬ್ರಾಹ್ಮಣೋ ರಾಜಸತ್ತಮಮ್।
14032003c ಆಚಕ್ಷ್ವ ವಿಷಯಂ ರಾಜನ್ಯಾವಾಂಸ್ತವ ವಶೇ ಸ್ಥಿತಃ।।
ಇದನ್ನು ಕೇಳಿದ ಬ್ರಾಹ್ಮಣನು ಆ ರಾಜಸತ್ತಮನಿಗೆ ಕೇಳಿದನು: “ರಾಜನ್! ಎಲ್ಲಿಯವರೆಗೆ ನಿನ್ನ ವಶದಲ್ಲಿರುವ ರಾಜ್ಯವಿದೆ ಎನ್ನುವುದನ್ನು ಹೇಳು.
14032004a ಸೋಽನ್ಯಸ್ಯ ವಿಷಯೇ ರಾಜ್ಞೋ ವಸ್ತುಮಿಚ್ಚಾಮ್ಯಹಂ ವಿಭೋ।
14032004c ವಚಸ್ತೇ ಕರ್ತುಮಿಚ್ಚಾಮಿ ಯಥಾಶಾಸ್ತ್ರಂ ಮಹೀಪತೇ।।
ವಿಭೋ! ಅನ್ಯ ರಾಜನ ರಾಜ್ಯದಲ್ಲಿ ವಾಸಿಸಲು ಬಯಸುತ್ತೇನೆ. ಮಹೀಪತೇ! ನೀನು ಹೇಳಿದುದನ್ನು ಯಥಾಶಾಸ್ತ್ರವಾಗಿ ಮಾಡಲು ಬಯಸುತ್ತೇನೆ.”
14032005a ಇತ್ಯುಕ್ತಃ ಸ ತದಾ ರಾಜಾ ಬ್ರಾಹ್ಮಣೇನ ಯಶಸ್ವಿನಾ।
14032005c ಮುಹುರುಷ್ಣಂ ಚ ನಿಃಶ್ವಸ್ಯ ನ ಸ ತಂ ಪ್ರತ್ಯಭಾಷತ।।
ಯಶಸ್ವೀ ಬ್ರಾಹ್ಮಣನು ಹೀಗೆ ಹೇಳಲು ರಾಜನು ಪುನಃ ಪುನಃ ದೀರ್ಘ ಬಿಸಿ ನಿಟ್ಟುಸಿರನ್ನು ಬಿಟ್ಟನು. ಯಾವ ಉತ್ತರವನ್ನೂ ಕೊಡಲಿಲ್ಲ.
14032006a ತಮಾಸೀನಂ ಧ್ಯಾಯಮಾನಂ ರಾಜಾನಮಮಿತೌಜಸಮ್।
14032006c ಕಶ್ಮಲಂ ಸಹಸಾಗಚ್ಚದ್ಭಾನುಮಂತಮಿವ ಗ್ರಹಃ।।
ಯೋಚಿಸುತ್ತಾ ಕುಳಿತಿದ್ದ ಆ ಅಮಿತ ತೇಜಸ್ವಿ ರಾಜನನ್ನು – ಸೂರ್ಯನನ್ನು ರಾಹುವು ಆವರಿಸುವಂತೆ - ಒಮ್ಮಿಂದೊಮ್ಮೆಲೇ ಮೋಹವು ಆವರಿಸಿಕೊಂಡಿತು.
14032007a ಸಮಾಶ್ವಾಸ್ಯ ತತೋ ರಾಜಾ ವ್ಯಪೇತೇ ಕಶ್ಮಲೇ ತದಾ।
14032007c ತತೋ ಮುಹೂರ್ತಾದಿವ ತಂ ಬ್ರಾಹ್ಮಣಂ ವಾಕ್ಯಮಬ್ರವೀತ್।।
ಮೋಹದಿಂದ ನಡುಗುತ್ತಿದ್ದ ರಾಜನು ಸ್ವಲ್ಪ ಹೊತ್ತು ಕಳೆದ ನಂತರ ಸಮಾಧಾನತಳೆದು ಬ್ರಾಹ್ಮಣನಿಗೆ ಇಂತೆಂದನು:
14032008a ಪಿತೃಪೈತಾಮಹೇ ರಾಜ್ಯೇ ವಶ್ಯೇ ಜನಪದೇ ಸತಿ।
14032008c ವಿಷಯಂ ನಾಧಿಗಚ್ಚಾಮಿ ವಿಚಿನ್ವನ್ಪೃಥಿವೀಮಿಮಾಮ್।।
“ಪಿತೃ-ಪಿತಾಮಹರ ಈ ರಾಜ್ಯ ಜನಪದಗಳು ನನ್ನ ವಶದಲ್ಲಿವೆ. ಆದರೂ ಇಡೀ ಭೂಮಿಯನ್ನೇ ಹುಡುಕಿದರೂ ನನ್ನ ರಾಜ್ಯವೆಲ್ಲಿಯವರೆಗಿದೆ ಎನ್ನುವುದು ತಿಳಿಯುತ್ತಿಲ್ಲ.
14032009a ನಾಧ್ಯಗಚ್ಚಂ ಯದಾ ಪೃಥ್ವ್ಯಾಂ ಮಿಥಿಲಾ ಮಾರ್ಗಿತಾ ಮಯಾ।
14032009c ನಾಧ್ಯಗಚ್ಚಂ ಯದಾ ತಸ್ಯಾಂ ಸ್ವಪ್ರಜಾ ಮಾರ್ಗಿತಾ ಮಯಾ।।
ಭೂಮಿಯಲ್ಲೆಲ್ಲಾ ನನ್ನ ರಾಜ್ಯದ ಗಡಿಯನ್ನು ಕಾಣಲಾರದೇ ನಾನು ಮಿಥಿಲಾ ಪ್ರಾಂತದಲ್ಲಿಯೇ ನನ್ನ ರಾಜ್ಯವನ್ನು ಹುಡುಕತೊಡಗಿದೆನು. ಅಲ್ಲಿಯೂ ಕೂಡ ನನ್ನ ರಾಜ್ಯವೆಷ್ಟೆಂದು ತಿಳಿಯದೇ ನನ್ನ ಪ್ರಜೆಗಳು ಯಾರು ಎಂದು ಹುಡುಕತೊಡಗಿದೆನು.
14032010a ನಾಧ್ಯಗಚ್ಚಂ ಯದಾ ತಾಸು ತದಾ ಮೇ ಕಶ್ಮಲೋಽಭವತ್।
14032010c ತತೋ ಮೇ ಕಶ್ಮಲಸ್ಯಾಂತೇ ಮತಿಃ ಪುನರುಪಸ್ಥಿತಾ।।
ಅವರನ್ನೂ ನಾನು ಗುರುತಿಸಲು ಸಾಧ್ಯವಾಗದಿದ್ದಾಗ ನಾನು ಮೋಹಪರವಶನಾದೆನು. ಮೋಹವು ಕಳೆದ ನಂತರ ನನ್ನ ಬುದ್ಧಿಯು ಪುನಃ ಸ್ತಿಮಿತಕ್ಕೆ ಬಂದಿತು.
14032011a ತಯಾ ನ ವಿಷಯಂ ಮನ್ಯೇ ಸರ್ವೋ ವಾ ವಿಷಯೋ ಮಮ।
14032011c ಆತ್ಮಾಪಿ ಚಾಯಂ ನ ಮಮ ಸರ್ವಾ ವಾ ಪೃಥಿವೀ ಮಮ।
14032011e ಉಷ್ಯತಾಂ ಯಾವದುತ್ಸಾಹೋ ಭುಜ್ಯತಾಂ ಯಾವದಿಷ್ಯತೇ।।
ನನ್ನ ರಾಜ್ಯವೆಂಬುದೇ ಇಲ್ಲ ಅಥವಾ ಎಲ್ಲವೂ ನನ್ನ ರಾಜ್ಯವೇ! ಈ ನನ್ನ ಆತ್ಮವೂ ನನ್ನದಲ್ಲ ಅಥವಾ ಇಡೀ ಭೂಮಿಯೇ ನನ್ನದು! ಆದುದರಿಂದ ನೀನು ನಿನಗಿಷ್ಟವಿದ್ದಷ್ಟು ಕಾಲ ಇಲ್ಲಿಯೇ ಇದ್ದು ಸುಖಭೋಗಗಳನ್ನು ಅನುಭವಿಸು!”
14032012 ಬ್ರಾಹ್ಮಣ ಉವಾಚ।
14032012a ಪಿತೃಪೈತಾಮಹೇ ರಾಜ್ಯೇ ವಶ್ಯೇ ಜನಪದೇ ಸತಿ।
14032012c ಬ್ರೂಹಿ ಕಾಂ ಬುದ್ಧಿಮಾಸ್ಥಾಯ ಮಮತ್ವಂ ವರ್ಜಿತಂ ತ್ವಯಾ।।
ಬ್ರಾಹ್ಮಣನು ಹೇಳಿದನು: “ಪಿತೃ-ಪಿತಾಮಹರ ಈ ರಾಜ್ಯ ಜನಪದಗಳು ನಿನ್ನ ವಶದಲ್ಲಿರುವಾಗ ಯಾವ ಬುದ್ಧಿಯಿಂದ ನೀನು ಮಮತ್ವವನ್ನು ವರ್ಜಿಸಿದೆ ಎನ್ನುವುದನ್ನು ಹೇಳು.
14032013a ಕಾಂ ವಾ ಬುದ್ಧಿಂ ವಿನಿಶ್ಚಿತ್ಯ ಸರ್ವೋ ವೈ ವಿಷಯಸ್ತವ।
14032013c ನಾವೈಷಿ ವಿಷಯಂ ಯೇನ ಸರ್ವೋ ವಾ ವಿಷಯಸ್ತವ।।
ಅಥವಾ ಯಾವ ಬುದ್ಧಿಯಿಂದ ನೀನು ಇವೆಲ್ಲವೂ ನಿನ್ನದೇ ರಾಜ್ಯವೆಂದು ನಿಶ್ಚಯಿಸಿದೆ? ಅಥವಾ ನಿನ್ನ ಆಡಳಿತದಲ್ಲಿರುವ ಈ ರಾಜ್ಯವು ನಿನ್ನ ರಾಜ್ಯವೆಲ್ಲವೆಂದು ಹೇಗೆ ನಿಶ್ಚಯಿಸಿದೆ?”
14032014 ಜನಕ ಉವಾಚ।
14032014a ಅಂತವಂತ ಇಹಾರಂಭಾ ವಿದಿತಾಃ ಸರ್ವಕರ್ಮಸು।
14032014c ನಾಧ್ಯಗಚ್ಚಮಹಂ ಯಸ್ಮಾನ್ಮಮೇದಮಿತಿ ಯದ್ಭವೇತ್।।
ಜನಕನು ಹೇಳಿದನು: “ಇಲ್ಲಿ ಆರಂಭಗೊಂಡ ಎಲ್ಲ ಕರ್ಮಗಳೂ ಅಂತ್ಯಗೊಳ್ಳುತ್ತವೆ ಎನ್ನುವುದು ತಿಳಿದಿದೆ. ಆದುದರಿಂದ ನನ್ನದು ಎಂಬ ವಸ್ತುವು ಯಾವುದು ಎನ್ನುವುದನ್ನು ತಿಳಿಯಲು ನನಗೆ ಸಾಧ್ಯವಾಗಲಿಲ್ಲ.
14032015a ಕಸ್ಯೇದಮಿತಿ ಕಸ್ಯ ಸ್ವಮಿತಿ ವೇದವಚಸ್ತಥಾ।
14032015c ನಾಧ್ಯಗಚ್ಚಮಹಂ ಬುದ್ಧ್ಯಾ ಮಮೇದಮಿತಿ ಯದ್ಭವೇತ್।।
“ಇದು ಯಾರ ವಸ್ತುವು?” ಮತ್ತು “ಇದು ಯಾರ ಧನವು?” ಎಂಬ ವೇದವಚನವಿದೆ. ಈ ಕಾರಣದಿಂದ ನನ್ನ ಬುದ್ಧಿಗೆ “ಇದು ನನ್ನದು” ಎಂದು ಹೇಳಿಕೊಳ್ಳುವ ಯಾವ ವಿಷಯವೂ ತಿಳಿಯಲಿಲ್ಲ.
14032016a ಏತಾಂ ಬುದ್ಧಿಂ ವಿನಿಶ್ಚಿತ್ಯ ಮಮತ್ವಂ ವರ್ಜಿತಂ ಮಯಾ।
14032016c ಶೃಣು ಬುದ್ಧಿಂ ತು ಯಾಂ ಜ್ಞಾತ್ವಾ ಸರ್ವತ್ರ ವಿಷಯೋ ಮಮ।।
ಹೀಗೆ ನನ್ನ ಬುದ್ಧಿಯು ನಿಶ್ಚಯಿಸಿ ಮಮತ್ವವನ್ನು ವರ್ಜಿಸಿತು. ಯಾವ ಕಾರಣದಿಂದ ನನ್ನ ಬುದ್ಧಿಯು ಎಲ್ಲವೂ ನನ್ನ ರಾಜ್ಯವೆಂದು ತಿಳಿದುಕೊಂಡಿತು ಎನ್ನುವುದನ್ನು ಕೇಳು.
14032017a ನಾಹಮಾತ್ಮಾರ್ಥಮಿಚ್ಚಾಮಿ ಗಂಧಾನ್ ಘ್ರಾಣಗತಾನಪಿ।
14032017c ತಸ್ಮಾನ್ಮೇ ನಿರ್ಜಿತಾ ಭೂಮಿರ್ವಶೇ ತಿಷ್ಠತಿ ನಿತ್ಯದಾ।।
ವಾಸನೆಯನ್ನು ಮೂಸಿದರೂ ಅದನ್ನು ನಾನು ನನಗೋಸ್ಕರವಾಗಿ ಮೂಸುವುದಿಲ್ಲ. ಈ ಕಾರಣದಿಂದ ನಾನು ಭೂಮಿಯನ್ನು ಜಯಿಸಿದ್ದೇನೆ. ಅದು ನಿತ್ಯವೂ ನನ್ನ ವಶದಲ್ಲಿಯೇ ಇದೆ.
14032018a ನಾಹಮಾತ್ಮಾರ್ಥಮಿಚ್ಚಾಮಿ ರಸಾನಾಸ್ಯೇಽಪಿ ವರ್ತತಃ।
14032018c ಆಪೋ ಮೇ ನಿರ್ಜಿತಾಸ್ತಸ್ಮಾದ್ವಶೇ ತಿಷ್ಠಂತಿ ನಿತ್ಯದಾ।।
ರಸವನ್ನು ಸ್ವಾದಿಸಿದರೂ ಅದನ್ನು ನಾನು ನನಗೋಸ್ಕರವಾಗಿ ಬಯಸುವುದಿಲ್ಲ. ಈ ಕಾರಣದಿಂದ ನಾನು ಅಪವನ್ನು ಜಯಿಸಿದ್ದೇನೆ. ಅದು ನಿತ್ಯವೂ ನನ್ನ ವಶದಲ್ಲಿಯೇ ಇದೆ.
14032019a ನಾಹಮಾತ್ಮಾರ್ಥಮಿಚ್ಚಾಮಿ ರೂಪಂ ಜ್ಯೋತಿಶ್ಚ ಚಕ್ಷುಷಾ।
14032019c ತಸ್ಮಾನ್ಮೇ ನಿರ್ಜಿತಂ ಜ್ಯೋತಿರ್ವಶೇ ತಿಷ್ಠತಿ ನಿತ್ಯದಾ।।
ರೂಪವನ್ನು ಕಣ್ಣುಗಳಿಂದ ಕಂಡರೂ ಅದನ್ನು ನಾನು ನನಗೋಸ್ಕರವಾಗಿ ಬಯಸುವುದಿಲ್ಲ. ಈ ಕಾರಣದಿಂದ ನಾನು ಜ್ಯೋತಿಯನ್ನು ಜಯಿಸಿದ್ದೇನೆ. ಅದು ನಿತ್ಯವೂ ನನ್ನ ವಶದಲ್ಲಿಯೇ ಇದೆ.
14032020a ನಾಹಮಾತ್ಮಾರ್ಥಮಿಚ್ಚಾಮಿ ಸ್ಪರ್ಶಾಂಸ್ತ್ವಚಿ ಗತಾಶ್ಚ ಯೇ।
14032020c ತಸ್ಮಾನ್ಮೇ ನಿರ್ಜಿತೋ ವಾಯುರ್ವಶೇ ತಿಷ್ಠತಿ ನಿತ್ಯದಾ।।
ಚರ್ಮದ ಮೂಲಕ ಸ್ಪರ್ಶವನ್ನು ಅನುಭವಿಸಿದರೂ ಅದನ್ನು ನಾನು ನನಗೋಸ್ಕರವಾಗಿ ಬಯಸುವುದಿಲ್ಲ. ಈ ಕಾರಣದಿಂದ ನಾನು ವಾಯುವನ್ನು ಜಯಿಸಿದ್ದೇನೆ. ಅದು ನಿತ್ಯವೂ ನನ್ನ ವಶದಲ್ಲಿಯೇ ಇದೆ.
14032021a ನಾಹಮಾತ್ಮಾರ್ಥಮಿಚ್ಚಾಮಿ ಶಬ್ದಾನ್ಶ್ರೋತ್ರಗತಾನಪಿ।
14032021c ತಸ್ಮಾನ್ಮೇ ನಿರ್ಜಿತಾಃ ಶಬ್ದಾ ವಶೇ ತಿಷ್ಠಂತಿ ನಿತ್ಯದಾ।।
ಕಿವಿಗಳಿಗೆ ಶಬ್ಧವು ಕೇಳಿಸಿದರೂ ಅದನ್ನು ನಾನು ನನಗೋಸ್ಕರವಾಗಿ ಬಯಸುವುದಿಲ್ಲ. ಈ ಕಾರಣದಿಂದ ನಾನು ಶಬ್ಧವನ್ನು ಜಯಿಸಿದ್ದೇನೆ. ಅದು ನಿತ್ಯವೂ ನನ್ನ ವಶದಲ್ಲಿಯೇ ಇದೆ.
14032022a ನಾಹಮಾತ್ಮಾರ್ಥಮಿಚ್ಚಾಮಿ ಮನೋ ನಿತ್ಯಂ ಮನೋಂತರೇ।
14032022c ಮನೋ ಮೇ ನಿರ್ಜಿತಂ ತಸ್ಮಾದ್ವಶೇ ತಿಷ್ಠತಿ ನಿತ್ಯದಾ।।
ನಾನು ಮನಸ್ಸಿನಲ್ಲಿ ಹುಟ್ಟುವ ವಿಚಾರಗಳನ್ನು ನನಗೋಸ್ಕರವಾಗಿ ಬಯಸುವುದಿಲ್ಲ. ಈ ಕಾರಣದಿಂದ ನಾನು ಮನಸ್ಸನ್ನು ಜಯಿಸಿದ್ದೇನೆ. ಅದು ನಿತ್ಯವೂ ನನ್ನ ವಶದಲ್ಲಿಯೇ ಇದೆ.
14032023a ದೇವೇಭ್ಯಶ್ಚ ಪಿತೃಭ್ಯಶ್ಚ ಭೂತೇಭ್ಯೋಽತಿಥಿಭಿಃ ಸಹ।
14032023c ಇತ್ಯರ್ಥಂ ಸರ್ವ ಏವೇಮೇ ಸಮಾರಂಭಾ ಭವಂತಿ ವೈ।।
ನನ್ನ ಸರ್ವ ಕರ್ಮಗಳೂ ದೇವತೆ, ಪಿತೃ, ಭೂತಗಳು ಮತ್ತು ಅತಿಥಿಗಳ ಸಲುವಾಗಿಯೇ ಮಾಡಲ್ಪಡುತ್ತವೆ.”
14032024a ತತಃ ಪ್ರಹಸ್ಯ ಜನಕಂ ಬ್ರಾಹ್ಮಣಃ ಪುನರಬ್ರವೀತ್।
14032024c ತ್ವಜ್ಜಿಜ್ಞಾಸಾರ್ಥಮದ್ಯೇಹ ವಿದ್ಧಿ ಮಾಂ ಧರ್ಮಮಾಗತಮ್।।
ಅನಂತರ ಬ್ರಾಹ್ಮಣನು ನಕ್ಕು ಜನಕನಿಗೆ ಪುನಃ ಹೇಳಿದನು: “ನಿನ್ನ ಜಿಜ್ಞಾಸೆಯನ್ನು ತಿಳಿದುಕೊಳ್ಳಲು ಬಂದಿರುವ ಧರ್ಮನೇ ನಾನೆಂದು ತಿಳಿ!
14032025a ತ್ವಮಸ್ಯ ಬ್ರಹ್ಮನಾಭಸ್ಯ ಬುದ್ಧ್ಯಾರಸ್ಯಾನಿವರ್ತಿನಃ।
14032025c ಸತ್ತ್ವನೇಮಿನಿರುದ್ಧಸ್ಯ ಚಕ್ರಸ್ಯೈಕಃ ಪ್ರವರ್ತಕಃ।।
ಸತ್ತ್ವವೆಂಬ ಪಟ್ಟಿಯನ್ನು ಹೊಂದಿರುವ ಬ್ರಹ್ಮನಾಭಿಯುಳ್ಳ ಹಿಂದೆ ಚಲಿಸದ ಮತ್ತು ತಡೆಯಲಾಗದ ಈ ಚಕ್ರವನ್ನು ತಿರುಗಿಸುತ್ತಿರುವವನು ನೀನೊಬ್ಬನೇ ಸರಿ!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ದ್ವಾತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಮೂವತ್ತೆರಡನೇ ಅಧ್ಯಾಯವು.