ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 31
ಸಾರ
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು 1-13).
14031001 ಬ್ರಾಹ್ಮಣ ಉವಾಚ।
14031001a ತ್ರಯೋ ವೈ ರಿಪವೋ ಲೋಕೇ ನವ ವೈ ಗುಣತಃ ಸ್ಮೃತಾಃ।
114031001c ಹರ್ಷಃ ಸ್ತಂಭೋಽಭಿಮಾನಶ್ಚ ತ್ರಯಸ್ತೇ ಸಾತ್ತ್ವಿಕಾ ಗುಣಾಃ।।
14031002a ಶೋಕಃ ಕ್ರೋಧೋಽತಿಸಂರಂಭೋ ರಾಜಸಾಸ್ತೇ ಗುಣಾಃ ಸ್ಮೃತಾಃ।
14031002c ಸ್ವಪ್ನಸ್ತಂದ್ರೀ ಚ ಮೋಹಶ್ಚ ತ್ರಯಸ್ತೇ ತಾಮಸಾ ಗುಣಾಃ।।
ಬ್ರಾಹ್ಮಣನು ಹೇಳಿದನು: “ಲೋಕದಲ್ಲಿ ಮೂರು ಗುಣಗಳಿಂದ ಉಂಟಾದ ಒಂಭತ್ತು ಶತ್ರುಗಳಿದ್ದಾರೆ: ಹರ್ಷ, ಪ್ರೀತಿ ಮತ್ತು ಅಭಿಮಾನ ಈ ಮೂರು ಸತ್ತ್ವಗುಣದಿಂದ ಹುಟ್ಟಿದವು. ಶೋಕ, ಕ್ರೋಧ ಮತ್ತು ದ್ವೇಷ ಈ ಮೂರು ರಾಜಸ ಗುಣದಿಂದ ಹುಟ್ಟಿದವು. ಸ್ವಪ್ನ, ಆಲಸ್ಯ ಮತ್ತು ಮೋಹ ಇವು ಮೂರು ತಾಮಸ ಗುಣದಿಂದ ಹುಟ್ಟಿದವು.
14031003a ಏತಾನ್ನಿಕೃತ್ಯ ಧೃತಿಮಾನ್ಬಾಣಸಂಘೈರತಂದ್ರಿತಃ।
14031003c ಜೇತುಂ ಪರಾನುತ್ಸಹತೇ ಪ್ರಶಾಂತಾತ್ಮಾ ಜಿತೇಂದ್ರಿಯಃ।।
ಪ್ರಶಾಂತಾತ್ಮನೂ ಜಿತೇಂದ್ರಿಯನೂ ಆಲಸ್ಯರಹಿತನೂ ಮತ್ತು ಧೈರ್ಯವಂತನೂ ಆದವನು ಬಾಣಸಂಘಗಳಿಂದ ಇವುಗಳನ್ನು ಕತ್ತರಿಸಿದರೆ ಇತರ ಶತ್ರುಗಳನ್ನು ಗೆಲ್ಲಬಲ್ಲನು.
14031004a ಅತ್ರ ಗಾಥಾಃ ಕೀರ್ತಯಂತಿ ಪುರಾಕಲ್ಪವಿದೋ ಜನಾಃ।
14031004c ಅಂಬರೀಷೇಣ ಯಾ ಗೀತಾ ರಾಜ್ಞಾ ರಾಜ್ಯಂ ಪ್ರಶಾಸತಾ।।
ಈ ವಿಷಯದಲ್ಲಿ ಹಿಂದಿನ ಕಲ್ಪವನ್ನು ತಿಳಿದ ಜನರು ರಾಜ್ಯವನ್ನು ಆಳಿದ ರಾಜಾ ಅಂಬರೀಷನ ಈ ಗೀತೆಯನ್ನು ಹಾಡುತ್ತಾರೆ.
14031005a ಸಮುದೀರ್ಣೇಷು ದೋಷೇಷು ವಧ್ಯಮಾನೇಷು ಸಾಧುಷು।
14031005c ಜಗ್ರಾಹ ತರಸಾ ರಾಜ್ಯಮಂಬರೀಷ ಇತಿ ಶ್ರುತಿಃ।।
ದೋಷಗಳು ಹೆಚ್ಚುತ್ತಿರಲು ಮತ್ತು ಸಾಧುಪುರುಷರ ವಧೆಗಳಾಗುತ್ತಿರಲು ಅಂಬರೀಷನು ಬೇಗನೇ ರಾಜ್ಯವನ್ನು ತೆಗೆದುಕೊಂಡನೆಂದು ಕೇಳಿದ್ದೇವೆ.
14031006a ಸ ನಿಗೃಹ್ಯ ಮಹಾದೋಷಾನ್ಸಾಧೂನ್ಸಮಭಿಪೂಜ್ಯ ಚ।
14031006c ಜಗಾಮ ಮಹತೀಂ ಸಿದ್ಧಿಂ ಗಾಥಾಂ ಚೇಮಾಂ ಜಗಾದ ಹ।।
ಅವನು ಮಹಾದೋಷಗಳನ್ನು ಹೋಗಲಾಡಿಸಿ, ಸಾಧುಜನರನ್ನು ಗೌರವಿಸಿ ಮಹಾ ಸಿದ್ಧಿಯನ್ನು ಪಡೆದುಕೊಂಡನು. ಆಗ ಅವನು ಈ ಗೀತೆಯನ್ನು ಹಾಡಿದನು:
14031007a ಭೂಯಿಷ್ಠಂ ಮೇ ಜಿತಾ ದೋಷಾ ನಿಹತಾಃ ಸರ್ವಶತ್ರವಃ।
14031007c ಏಕೋ ದೋಷೋಽವಶಿಷ್ಟಸ್ತು ವಧ್ಯಃ ಸ ನ ಹತೋ ಮಯಾ।।
“ನಾನು ಅನೇಕ ದೋಷಗಳನ್ನು ಜಯಿಸಿದ್ದೇನೆ. ಸರ್ವಶತ್ರುಗಳನ್ನೂ ಸಂಹರಿಸಿದ್ದೇನೆ. ಆದರೆ ಒಂದೇ ಒಂದು ವಧ್ಯವಾದ ದೋಷವು ಉಳಿದುಕೊಂಡುಬಿಟ್ಟಿದೆ. ಅದನ್ನು ನಾನು ಸಂಹರಿಸಲಾಗಲಿಲ್ಲ!
14031008a ಯೇನ ಯುಕ್ತೋ ಜಂತುರಯಂ ವೈತೃಷ್ಣ್ಯಂ ನಾಧಿಗಚ್ಚತಿ।
14031008c ತೃಷ್ಣಾರ್ತ ಇವ ನಿಮ್ನಾನಿ ಧಾವಮಾನೋ ನ ಬುಧ್ಯತೇ।।
ಈ ದೋಷದಿಂದಾಗಿಯೇ ಜಂತುಗಳು ತೃಪ್ತಿಯನ್ನು ಹೊಂದುವುದಿಲ್ಲ. ತೃಷ್ಣಾರ್ತನಾಗಿ ನೀಚ ಕರ್ಮಗಳನ್ನು ಮಾಡುತ್ತಿರುವುದನ್ನೂ ತಿಳಿಯುವುದಿಲ್ಲ.
14031009a ಅಕಾರ್ಯಮಪಿ ಯೇನೇಹ ಪ್ರಯುಕ್ತಃ ಸೇವತೇ ನರಃ।
14031009c ತಂ ಲೋಭಮಸಿಭಿಸ್ತೀಕ್ಷ್ಣೈರ್ನಿಕೃಂತಂತಂ ನಿಕೃಂತತ।।
ಇದರಿಂದಾಗಿ ಮಾಡಬಾರದ ಕಾರ್ಯಗಳನ್ನೂ ನರನು ಮಾಡುತ್ತಾನೆ. ಈ ಲೋಭವನ್ನು ತೀಕ್ಷ್ಣ ಖಡ್ಗದಿಂದ ಕತ್ತರಿಸುವವನು ಬಿಡುಗಡೆಯಾಗುತ್ತಾನೆ.
14031010a ಲೋಭಾದ್ಧಿ ಜಾಯತೇ ತೃಷ್ಣಾ ತತಶ್ಚಿಂತಾ ಪ್ರಸಜ್ಯತೇ।
14031010c ಸ ಲಿಪ್ಸಮಾನೋ ಲಭತೇ ಭೂಯಿಷ್ಠಂ ರಾಜಸಾನ್ಗುಣಾನ್।।
ಲೋಭದಿಂದ ತೃಷ್ಣೆಯು ಹುಟ್ಟುತ್ತದೆ. ತೃಷ್ಣೆಯಿಂದ ಚಿಂತೆಯು ಹುಟ್ಟುತ್ತದೆ. ಅವುಗಳು ತಗಲಿಕೊಂಡವನಲ್ಲಿ ರಾಜಸ ಗುಣಗಳು ಹೆಚ್ಚಾಗುತ್ತವೆ.
14031011a ಸ ತೈರ್ಗುಣೈಃ ಸಂಹತದೇಹಬಂಧನಃ ಪುನಃ ಪುನರ್ಜಾಯತಿ ಕರ್ಮ ಚೇಹತೇ।
14031011c ಜನ್ಮಕ್ಷಯೇ ಭಿನ್ನವಿಕೀರ್ಣದೇಹಃ ಪುನರ್ಮೃತ್ಯುಂ ಗಚ್ಚತಿ ಜನ್ಮನಿ ಸ್ವೇ।।
ಆ ಗುಣಗಳಿಂದಾಗಿಯೇ ಅವನು ದೇಹಬಂಧನಕ್ಕೊಳಗಾಗಿ ಪುನಃ ಪುನಃ ಹುಟ್ಟುತ್ತಾನೆ, ಕರ್ಮಗಳನ್ನು ಮಾಡುತ್ತಾನೆ ಮತ್ತು ಹತನಾಗುತ್ತಾನೆ. ಜನ್ಮವು ಕ್ಷಯವಾಗಲು ದೇಹವು ಭಿನ್ನವಾಗಿ ಹರಡಿಹೋದರೂ ಪುನಃ ಅವನು ಜನ್ಮವನ್ನು ತಾಳುತ್ತಾನೆ ಮತ್ತು ಮೃತ್ಯುವನ್ನು ಹೊಂದುತ್ತಾನೆ.
14031012a ತಸ್ಮಾದೇನಂ ಸಮ್ಯಗವೇಕ್ಷ್ಯ ಲೋಭಂ ನಿಗೃಹ್ಯ ಧೃತ್ಯಾತ್ಮನಿ ರಾಜ್ಯಮಿಚ್ಚೇತ್।
14031012c ಏತದ್ರಾಜ್ಯಂ ನಾನ್ಯದಸ್ತೀತಿ ವಿದ್ಯಾದ್ ಯಸ್ತ್ವತ್ರ ರಾಜಾ ವಿಜಿತೋ ಮಮೈಕಃ।।
ಆದುದರಿಂದ ಈ ಲೋಭವನ್ನು ಚೆನ್ನಾಗಿ ಅವಲೋಕಿಸಿ ಧೃತಿಯಿಂದ ಅದನ್ನು ನಿಗ್ರಹಿಸಿ ಆತ್ಮನ ರಾಜ್ಯವನ್ನು ಬಯಸಬೇಕು. ಇದೇ ರಾಜ್ಯವು. ಬೇರೆ ಯಾವುದೂ ಇಲ್ಲ. ಏಕೆಂದರೆ ಇಲ್ಲಿ ರಾಜನು ನನ್ನದು ಎನ್ನುವ ಒಂದನ್ನೇ ಗೆದ್ದಿರುತ್ತಾನೆ.”
14031013a ಇತಿ ರಾಜ್ಞಾಂಬರೀಷೇಣ ಗಾಥಾ ಗೀತಾ ಯಶಸ್ವಿನಾ।
14031013c ಆಧಿರಾಜ್ಯಂ ಪುರಸ್ಕೃತ್ಯ ಲೋಭಮೇಕಂ ನಿಕೃಂತತಾ।।
ಇದೇ ಯಶಸ್ವಿ ರಾಜಾ ಅಂಬರೀಷನು ಲೋಭವೊಂದನ್ನೇ ಕಡಿದು ಆತ್ಮವೆನ್ನುವ ರಾಜ್ಯವನ್ನು ಗೌರವಿಸಿ ಹಾಡಿದ ಗೀತೆಯು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಏಕತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಮೂವತ್ತೊಂದನೇ ಅಧ್ಯಾಯವು.
-
ಪ್ರಹರ್ಷಃ ಪ್ರೀತಿರಾನಂದಸ್ತ್ರಯಸ್ತೇ ಸಾತ್ವಿಕಾ ಗುಣಾಃ। ತುಷ್ಣಾ ಕ್ರೋಧೋಽಭಿಸಂರಬ್ಧೋ ರಾಜಸಾಸ್ತೇ ಗುಣಾಃ ಸ್ಮೃತಾಃ। ಶ್ರಮಸಂದ್ರಾ ಚ ಮೋಹಶ್ಚ ತ್ರಯಸ್ತೇ ತಾಮಸಾ ಗುಣಾಃ।। ಎಂಬ ಪಾಠಾಂತರವಿದೆ. ಅರ್ಥಾತ್ ಪ್ರಹರ್ಷ, ಪ್ರೀತಿ, ಆನಂದ ಈ ಮೂರು ಸತ್ತ್ವಗುಣದ ಪ್ರಭೇದಗಳು. ತೃಷ್ಣೆ, ಕ್ರೋಧ ಮತ್ತು ದ್ವೇಷಭಾವ ಈ ಮೂರು ರಾಜಸಗುಣದ ಪ್ರಭೇದಗಳು. ಶ್ರಮ, ಆಲಸ್ಯ ಮತ್ತು ಮೋಹ ಈ ಮೂರು ತಾಮಸಗುಣದ ಪ್ರಭೇದಗಳು (ಭರತದರ್ಶನ, ಸಂಪುಟ 3೦). ↩︎