030: ಅನುಗೀತಾಯಾಂ ಬ್ರಾಹ್ಮಣಗೀತಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 30

ಸಾರ

ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (1-31).

14030001 ಪಿತರ ಊಚುಃ।
14030001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
14030001c ಶ್ರುತ್ವಾ ಚ ತತ್ತಥಾ ಕಾರ್ಯಂ ಭವತಾ ದ್ವಿಜಸತ್ತಮ।।

ಪಿತೃಗಳು ಹೇಳಿದರು: “ದ್ವಿಜಸತ್ತಮ! ಇದಕ್ಕೆ ಸಂಬಂಧಿಸಿದಂತೆ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ. ಇದನ್ನು ಕೇಳಿ ಅದರಂತೆಯೇ ನೀನು ಆಚರಿಸಬೇಕು.

14030002a ಅಲರ್ಕೋ ನಾಮ ರಾಜರ್ಷಿರಭವತ್ಸುಮಹಾತಪಾಃ।
14030002c ಧರ್ಮಜ್ಞಃ ಸತ್ಯಸಂಧಶ್ಚ ಮಹಾತ್ಮಾ ಸುಮಹಾವ್ರತಃ।।

ಮಹಾತಪಸ್ವಿಯಾದ ಅಲರ್ಕ ಎಂಬ ಹೆಸರಿನ ರಾಜರ್ಷಿಯಿದ್ದನು. ಅವನು ಧರ್ಮಜ್ಞನೂ, ಸತ್ಯಸಂಧನೂ, ಮಹಾತ್ಮನೂ, ಮಹಾವ್ರತನೂ ಆಗಿದ್ದನು.

14030003a ಸ ಸಾಗರಾಂತಾಂ ಧನುಷಾ ವಿನಿರ್ಜಿತ್ಯ ಮಹೀಮಿಮಾಮ್।
14030003c ಕೃತ್ವಾ ಸುದುಷ್ಕರಂ ಕರ್ಮ ಮನಃ ಸೂಕ್ಷ್ಮೇ ಸಮಾದಧೇ।।

ಅವನು ತನ್ನ ಧನುಸ್ಸಿನ ಬಲದಿಂದ ಸಾಗರಾಂತವಾದ ಈ ಮಹಿಯನ್ನು ಗೆದ್ದು, ಆ ದುಷ್ಕರ ಕರ್ಮವನ್ನೆಸಗಿ, ಮನಸ್ಸನ್ನು ಸೂಕ್ಷ್ಮತತ್ತ್ವದಲ್ಲಿ ಇರಿಸಿಕೊಂಡನು.

14030004a ಸ್ಥಿತಸ್ಯ ವೃಕ್ಷಮೂಲೇಽಥ ತಸ್ಯ ಚಿಂತಾ ಬಭೂವ ಹ।
14030004c ಉತ್ಸೃಜ್ಯ ಸುಮಹದ್ರಾಜ್ಯಂ ಸೂಕ್ಷ್ಮಂ ಪ್ರತಿ ಮಹಾಮತೇ।।

ಮಹಾರಾಜ್ಯವನ್ನು ತೊರೆದು ವೃಕ್ಷದ ಅಡಿಯಲ್ಲಿ ಕುಳಿತಿದ್ದ ಆ ಮಹಾಮತಿಯಲ್ಲಿ ಸೂಕ್ಷ್ಮತತ್ತ್ವದ ಕುರಿತು ಒಂದು ಯೋಚನೆಯು ಹುಟ್ಟಿತು.

14030005 ಅಲರ್ಕ ಉವಾಚ।
14030005a ಮನಸೋ ಮೇ ಬಲಂ ಜಾತಂ ಮನೋ ಜಿತ್ವಾ ಧ್ರುವೋ ಜಯಃ।
14030005c ಅನ್ಯತ್ರ ಬಾಣಾನಸ್ಯಾಮಿ ಶತ್ರುಭಿಃ ಪರಿವಾರಿತಃ।।

ಅಲರ್ಕನು ಹೇಳಿದನು: “ನನ್ನ ಮನಸ್ಸಿಗೆ ಅತ್ಯಂತ ಬಲವು ಬಂದುಬಿಟ್ಟಿದೆ. ಮನಸ್ಸನ್ನು ಗೆದ್ದರೆ ಜಯವು ನಿಶ್ಚಿತವಾದದ್ದು. ಶತ್ರುಗಳಿಂದ ಸುತ್ತುವರೆಯಲ್ಪಟ್ಟಿರುವ ನಾನು ಬೇರೆ ಕಡೆ ಬಾಣಗಳ ಪ್ರಯೋಗವನ್ನು ಮಾಡುವುದಿಲ್ಲ.

14030006a ಯದಿದಂ ಚಾಪಲಾನ್ಮೂರ್ತೇಃ ಸರ್ವಮೇತಚ್ಚಿಕೀರ್ಷತಿ।
14030006c ಮನಃ ಪ್ರತಿ ಸುತೀಕ್ಷ್ಣಾಗ್ರಾನಹಂ ಮೋಕ್ಷ್ಯಾಮಿ ಸಾಯಕಾನ್।।

ಈ ಮನಸ್ಸಿನ ಚಾಪಲ್ಯವೇ ಮನುಷ್ಯರಿಂದ ಎಲ್ಲವನ್ನೂ ಮಾಡಿಸುತ್ತದೆ. ಆದುದರಿಂದ ಮನಸ್ಸನ್ನೇ ಗುರಿಯಿಟ್ಟು ಸುತೀಕ್ಷ್ಣ ಸಾಯಕಗಳನ್ನು ಪ್ರಯೋಗಿಸುತ್ತೇನೆ.”

14030007 ಮನ ಉವಾಚ।
14030007a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ।
14030007c ತವೈವ ಮರ್ಮ ಭೇತ್ಸ್ಯಂತಿ ಭಿನ್ನಮರ್ಮಾ ಮರಿಷ್ಯಸಿ।।

ಮನಸ್ಸು ಹೇಳಿತು: “ಅಲರ್ಕ! ಈ ಬಾಣಗಳು ಎಂದೂ ನನ್ನನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!

14030008a ಅನ್ಯಾನ್ಬಾಣಾನ್ಸಮೀಕ್ಷಸ್ವ ಯೈಸ್ತ್ವಂ ಮಾಂ ಸೂದಯಿಷ್ಯಸಿ।
14030008c ತಚ್ಚ್ರುತ್ವಾ ಸ ವಿಚಿಂತ್ಯಾಥ ತತೋ ವಚನಮಬ್ರವೀತ್।।

ಆದುದರಿಂದ ನನ್ನನ್ನು ಸಂಹರಿಸಬಲ್ಲ ಬೇರೆ ಯಾವುದಾದರೂ ಬಾಣಗಳು ನಿನ್ನಲ್ಲಿದ್ದರೆ ನೋಡು!” ಅದನ್ನು ಕೇಳಿ ಅಲರ್ಕನು ಯೋಚಿಸಿ ಈ ಮಾತನ್ನಾಡಿದನು.

14030009 ಅಲರ್ಕ ಉವಾಚ।
14030009a ಆಘ್ರಾಯ ಸುಬಹೂನ್ಗಂಧಾಂಸ್ತಾನೇವ ಪ್ರತಿಗೃಧ್ಯತಿ।
14030009c ತಸ್ಮಾದ್ಘ್ರಾಣಂ ಪ್ರತಿ ಶರಾನ್ಪ್ರತಿಮೋಕ್ಷ್ಯಾಮ್ಯಹಂ ಶಿತಾನ್।।

ಅಲರ್ಕನು ಹೇಳಿದನು: “ಅನೇಕ ಗಂಧಗಳನ್ನು ಆಘ್ರಾಣಿಸಿದರೂ ಘ್ರಾಣವು ಮತ್ತೆ ಮತ್ತೆ ಅವುಗಳನ್ನೇ ಬಯಸುತ್ತದೆ. ಆದುದರಿಂದ ಘ್ರಾಣಕ್ಕೆ ಗುರಿಯನ್ನಿಟ್ಟು ನಾನು ನಿಶಿತ ಶರಗಳನ್ನು ಪ್ರಯೋಗಿಸುತ್ತೇನೆ!”

14030010 ಘ್ರಾಣ ಉವಾಚ।
14030010a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ।
14030010c ತವೈವ ಮರ್ಮ ಭೇತ್ಸ್ಯಂತಿ ಭಿನ್ನಮರ್ಮಾ ಮರಿಷ್ಯಸಿ।।

ಘ್ರಾಣವು ಹೇಳಿತು: “ಅಲರ್ಕ! ಈ ಬಾಣಗಳು ಎಂದೂ ನನ್ನನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!

14030011a ಅನ್ಯಾನ್ಬಾಣಾನ್ಸಮೀಕ್ಷಸ್ವ ಯೈಸ್ತ್ವಂ ಮಾಂ ಸೂದಯಿಷ್ಯಸಿ।
14030011c ತಚ್ಚ್ರುತ್ವಾ ಸ ವಿಚಿಂತ್ಯಾಥ ತತೋ ವಚನಮಬ್ರವೀತ್।।

ಆದುದರಿಂದ ನನ್ನನ್ನು ಸಂಹರಿಸಬಲ್ಲ ಬೇರೆ ಯಾವುದಾದರೂ ಬಾಣಗಳು ನಿನ್ನಲ್ಲಿದ್ದರೆ ನೋಡು!” ಅದನ್ನು ಕೇಳಿ ಅಲರ್ಕನು ಯೋಚಿಸಿ ಈ ಮಾತನ್ನಾಡಿದನು.

14030012 ಅಲರ್ಕ ಉವಾಚ।
14030012a ಇಯಂ ಸ್ವಾದೂನ್ರಸಾನ್ಭುಕ್ತ್ವಾ ತಾನೇವ ಪ್ರತಿಗೃಧ್ಯತಿ।
14030012c ತಸ್ಮಾಜ್ಜಿಹ್ವಾಂ ಪ್ರತಿ ಶರಾನ್ಪ್ರತಿಮೋಕ್ಷ್ಯಾಮ್ಯಹಂ ಶಿತಾನ್।।

ಅಲರ್ಕನು ಹೇಳಿದನು: “ಅನೇಕ ಸ್ವಾದು ರಸಗಳನ್ನು ಭುಂಜಿಸಿದರೂ ಇದು ಮತ್ತೆ ಮತ್ತೆ ಅವುಗಳನ್ನೇ ಬಯಸುತ್ತದೆ. ಆದುದರಿಂದ ನಾಲಿಗೆಗೆ ಗುರಿಯನ್ನಿಟ್ಟು ನಾನು ನಿಶಿತ ಶರಗಳನ್ನು ಪ್ರಯೋಗಿಸುತ್ತೇನೆ!”

14030013 ಜಿಹ್ವೋವಾಚ।
14030013a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ।
14030013c ತವೈವ ಮರ್ಮ ಭೇತ್ಸ್ಯಂತಿ ಭಿನ್ನಮರ್ಮಾ ಮರಿಷ್ಯಸಿ।।

ನಾಲಿಗೆಯು ಹೇಳಿತು: “ಅಲರ್ಕ! ಈ ಬಾಣಗಳು ಎಂದೂ ನನ್ನನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!

14030014a ಅನ್ಯಾನ್ಬಾಣಾನ್ಸಮೀಕ್ಷಸ್ವ ಯೈಸ್ತ್ವಂ ಮಾಂ ಸೂದಯಿಷ್ಯಸಿ।
14030014c ತಚ್ಚ್ರುತ್ವಾ ಸ ವಿಚಿಂತ್ಯಾಥ ತತೋ ವಚನಮಬ್ರವೀತ್।।

ಆದುದರಿಂದ ನನ್ನನ್ನು ಸಂಹರಿಸಬಲ್ಲ ಬೇರೆ ಯಾವುದಾದರೂ ಬಾಣಗಳು ನಿನ್ನಲ್ಲಿದ್ದರೆ ನೋಡು!” ಅದನ್ನು ಕೇಳಿ ಅಲರ್ಕನು ಯೋಚಿಸಿ ಈ ಮಾತನ್ನಾಡಿದನು.

14030015 ಅಲರ್ಕ ಉವಾಚ।
14030015a ಸ್ಪೃಷ್ಟ್ವಾ ತ್ವಗ್ವಿವಿಧಾನ್ ಸ್ಪರ್ಶಾಂಸ್ತಾನೇವ ಪ್ರತಿಗೃಧ್ಯತಿ।
14030015c ತಸ್ಮಾತ್ತ್ವಚಂ ಪಾಟಯಿಷ್ಯೇ ವಿವಿಧೈಃ ಕಂಕಪತ್ರಿಭಿಃ।।

ಅಲರ್ಕನು ಹೇಳಿದನು: “ವಿವಿಧ ಸ್ಪರ್ಶಗಳನ್ನು ಅನುಭವಿಸಿಯೂ ಈ ಚರ್ಮವು ಮತ್ತೆ ಮತ್ತೆ ಅವುಗಳನ್ನೇ ಬಯಸುತ್ತದೆ. ಆದುದರಿಂದ ಚರ್ಮಕ್ಕೆ ಗುರಿಯನ್ನಿಟ್ಟು ನಾನು ನಿಶಿತ ಶರಗಳನ್ನು ಪ್ರಯೋಗಿಸುತ್ತೇನೆ!”

14030016 ತ್ವಗುವಾಚ।
14030016a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ।
14030016c ತವೈವ ಮರ್ಮ ಭೇತ್ಸ್ಯಂತಿ ಭಿನ್ನಮರ್ಮಾ ಮರಿಷ್ಯಸಿ।।

ಚರ್ಮವು ಹೇಳಿತು: “ಅಲರ್ಕ! ಈ ಬಾಣಗಳು ಎಂದೂ ನನ್ನನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!

14030017a ಅನ್ಯಾನ್ಬಾಣಾನ್ಸಮೀಕ್ಷಸ್ವ ಯೈಸ್ತ್ವಂ ಮಾಂ ಸೂದಯಿಷ್ಯಸಿ।
14030017c ತಚ್ಚ್ರುತ್ವಾ ಸ ವಿಚಿಂತ್ಯಾಥ ತತೋ ವಚನಮಬ್ರವೀತ್।।

ಆದುದರಿಂದ ನನ್ನನ್ನು ಸಂಹರಿಸಬಲ್ಲ ಬೇರೆ ಯಾವುದಾದರೂ ಬಾಣಗಳು ನಿನ್ನಲ್ಲಿದ್ದರೆ ನೋಡು!” ಅದನ್ನು ಕೇಳಿ ಅಲರ್ಕನು ಯೋಚಿಸಿ ಈ ಮಾತನ್ನಾಡಿದನು.

14030018 ಅಲರ್ಕ ಉವಾಚ।
14030018a ಶ್ರುತ್ವಾ ವೈ ವಿವಿಧಾನ್ಶಬ್ದಾಂಸ್ತಾನೇವ ಪ್ರತಿಗೃಧ್ಯತಿ।
14030018c ತಸ್ಮಾಚ್ಚ್ರೋತ್ರಂ ಪ್ರತಿ ಶರಾನ್ಪ್ರತಿಮೋಕ್ಷ್ಯಾಮ್ಯಹಂ ಶಿತಾನ್।।

ಅಲರ್ಕನು ಹೇಳಿದನು: “ವಿವಿಧ ಶಬ್ಧಗಳನ್ನು ಕೇಳಿಯೂ ಈ ಕಿವಿಗಳು ಮತ್ತೆ ಮತ್ತೆ ಅವುಗಳನ್ನೇ ಬಯಸುತ್ತವೆ. ಆದುದರಿಂದ ಶ್ರೋತ್ರಕ್ಕೆ ಗುರಿಯನ್ನಿಟ್ಟು ನಾನು ನಿಶಿತ ಶರಗಳನ್ನು ಪ್ರಯೋಗಿಸುತ್ತೇನೆ!”

14030019 ಶ್ರೋತ್ರ ಉವಾಚ।
14030019a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ।
14030019c ತವೈವ ಮರ್ಮ ಭೇತ್ಸ್ಯಂತಿ ತತೋ ಹಾಸ್ಯಸಿ ಜೀವಿತಮ್।।

ಶ್ರೋತ್ರವು ಹೇಳಿತು: “ಅಲರ್ಕ! ಈ ಬಾಣಗಳು ಎಂದೂ ನನ್ನನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!

14030020a ಅನ್ಯಾನ್ಬಾಣಾನ್ಸಮೀಕ್ಷಸ್ವ ಯೈಸ್ತ್ವಂ ಮಾಂ ಸೂದಯಿಷ್ಯಸಿ।
14030020c ತಚ್ಚ್ರುತ್ವಾ ಸ ವಿಚಿಂತ್ಯಾಥ ತತೋ ವಚನಮಬ್ರವೀತ್।।

ಆದುದರಿಂದ ನನ್ನನ್ನು ಸಂಹರಿಸಬಲ್ಲ ಬೇರೆ ಯಾವುದಾದರೂ ಬಾಣಗಳು ನಿನ್ನಲ್ಲಿದ್ದರೆ ನೋಡು!” ಅದನ್ನು ಕೇಳಿ ಅಲರ್ಕನು ಯೋಚಿಸಿ ಈ ಮಾತನ್ನಾಡಿದನು.

14030021 ಅಲರ್ಕ ಉವಾಚ।
14030021a ದೃಷ್ಟ್ವಾ ವೈ ವಿವಿಧಾನ್ಭಾವಾಂಸ್ತಾನೇವ ಪ್ರತಿಗೃಧ್ಯತಿ।
14030021c ತಸ್ಮಾಚ್ಚಕ್ಷುಃ ಪ್ರತಿ ಶರಾನ್ಪ್ರತಿಮೋಕ್ಷ್ಯಾಮ್ಯಹಂ ಶಿತಾನ್।।

ಅಲರ್ಕನು ಹೇಳಿದನು: “ವಿವಿಧ ಭಾವಗಳನ್ನು ನೋಡಿಯೂ ಈ ಕಣ್ಣುಗಳು ಮತ್ತೆ ಮತ್ತೆ ಅವುಗಳನ್ನೇ ಬಯಸುತ್ತವೆ. ಆದುದರಿಂದ ಕಣ್ಣುಗಳಿಗೆ ಗುರಿಯನ್ನಿಟ್ಟು ನಾನು ನಿಶಿತ ಶರಗಳನ್ನು ಪ್ರಯೋಗಿಸುತ್ತೇನೆ!”

14030022 ಚಕ್ಷುರುವಾಚ।
14030022a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ।
14030022c ತವೈವ ಮರ್ಮ ಭೇತ್ಸ್ಯಂತಿ ಭಿನ್ನಮರ್ಮಾ ಮರಿಷ್ಯಸಿ।।

ಕಣ್ಣುಗಳು ಹೇಳಿದವು: “ಅಲರ್ಕ! ಈ ಬಾಣಗಳು ಎಂದೂ ನಮ್ಮನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!

14030023a ಅನ್ಯಾನ್ಬಾಣಾನ್ಸಮೀಕ್ಷಸ್ವ ಯೈಸ್ತ್ವಂ ಮಾಂ ಸೂದಯಿಷ್ಯಸಿ।
14030023c ತಚ್ಚ್ರುತ್ವಾ ಸ ವಿಚಿಂತ್ಯಾಥ ತತೋ ವಚನಮಬ್ರವೀತ್।।

ಆದುದರಿಂದ ನನ್ನನ್ನು ಸಂಹರಿಸಬಲ್ಲ ಬೇರೆ ಯಾವುದಾದರೂ ಬಾಣಗಳು ನಿನ್ನಲ್ಲಿದ್ದರೆ ನೋಡು!” ಅದನ್ನು ಕೇಳಿ ಅಲರ್ಕನು ಯೋಚಿಸಿ ಈ ಮಾತನ್ನಾಡಿದನು.

14030024 ಅಲರ್ಕ ಉವಾಚ।
14030024a ಇಯಂ ನಿಷ್ಠಾ ಬಹುವಿಧಾ ಪ್ರಜ್ಞಯಾ ತ್ವಧ್ಯವಸ್ಯತಿ।
14030024c ತಸ್ಮಾದ್ಬುದ್ಧಿಂ ಪ್ರತಿ ಶರಾನ್ಪ್ರತಿಮೋಕ್ಷ್ಯಾಮ್ಯಹಂ ಶಿತಾನ್।।

ಅಲರ್ಕನು ಹೇಳಿದನು: “ಈ ಬುದ್ಧಿಯು ಪ್ರಜ್ಞಾಪೂರ್ವಕವಾಗಿ ಬಹುವಿಧದ ನಿಶ್ಚಯಗಳನ್ನು ಮಾಡುತ್ತಲೇ ಇರುತ್ತದೆ. ಆದುದರಿಂದ ಬುದ್ಧಿಗೇ ಗುರಿಯನ್ನಿಟ್ಟು ನಾನು ನಿಶಿತ ಶರಗಳನ್ನು ಪ್ರಯೋಗಿಸುತ್ತೇನೆ!”

14030025 ಬುದ್ಧಿರುವಾಚ।
14030025a ನೇಮೇ ಬಾಣಾಸ್ತರಿಷ್ಯಂತಿ ಮಾಮಲರ್ಕ ಕಥಂ ಚನ।
14030025c ತವೈವ ಮರ್ಮ ಭೇತ್ಸ್ಯಂತಿ ಭಿನ್ನಮರ್ಮಾ ಮರಿಷ್ಯಸಿ।।

ಬುದ್ಧಿಯು ಹೇಳಿತು: “ಅಲರ್ಕ! ಈ ಬಾಣಗಳು ಎಂದೂ ನನ್ನನ್ನು ತಲುಪುವುದಿಲ್ಲ. ನಿನ್ನದೇ ಮರ್ಮಸ್ಥಾನವನ್ನು ಭೇದಿಸುತ್ತವೆ. ಮರ್ಮಸ್ಥಾನಗಳು ಭೇದಿಸಲ್ಪಡಲು ನೀನೇ ಮೃತ್ಯುಹೊಂದುತ್ತೀಯೆ!””

14030026 ಪಿತರ ಊಚುಃ।
14030026a ತತೋಽಲರ್ಕಸ್ತಪೋ ಘೋರಮಾಸ್ಥಾಯಾಥ ಸುದುಷ್ಕರಮ್।
14030026c ನಾಧ್ಯಗಚ್ಚತ್ಪರಂ ಶಕ್ತ್ಯಾ ಬಾಣಮೇತೇಷು ಸಪ್ತಸು।
14030026e ಸುಸಮಾಹಿತಚೇತಾಸ್ತು ತತೋಽಚಿಂತಯತ ಪ್ರಭುಃ।।

ಪಿತೃಗಳು ಹೇಳಿದರು: “ಅನಂತರ ಅಲರ್ಕನು ದುಷ್ಕರವಾದ ಘೋರ ತಪಸ್ಸನ್ನು ಆಚರಿಸಿದನು. ಆದರೂ ಈ ಏಳರನ್ನು ವಿನಾಶಗೊಳಿಸುವ ಪರಮ ಶಕ್ತಿಯನ್ನು ಪಡೆಯಲೇ ಇಲ್ಲ. ಆಗ ಆ ಪ್ರಭುವು ಸುಸಮಾಹಿತನಾಗಿ ಚಿಂತಿಸತೊಡಗಿದನು.

14030027a ಸ ವಿಚಿಂತ್ಯ ಚಿರಂ ಕಾಲಮಲರ್ಕೋ ದ್ವಿಜಸತ್ತಮ।
14030027c ನಾಧ್ಯಗಚ್ಚತ್ಪರಂ ಶ್ರೇಯೋ ಯೋಗಾನ್ಮತಿಮತಾಂ ವರಃ।।

ದ್ವಿಜಸತ್ತಮ! ಮತಿವಂತರಲ್ಲಿ ಶ್ರೇಷ್ಠನಾದ ಅಲರ್ಕನು ಬಹಳಕಾಲ ಯೋಚಿಸಿಯೂ ಆ ಪರಮ ಶ್ರೇಯಸ್ಕರವಾದ ಯೋಗವನ್ನು ಪಡೆಯಲಿಲ್ಲ.

14030028a ಸ ಏಕಾಗ್ರಂ ಮನಃ ಕೃತ್ವಾ ನಿಶ್ಚಲೋ ಯೋಗಮಾಸ್ಥಿತಃ।
14030028c ಇಂದ್ರಿಯಾಣಿ ಜಘಾನಾಶು ಬಾಣೇನೈಕೇನ ವೀರ್ಯವಾನ್।
14030028e ಯೋಗೇನಾತ್ಮಾನಮಾವಿಶ್ಯ ಸಂಸಿದ್ಧಿಂ ಪರಮಾಂ ಯಯೌ।।

ಅನಂತರ ಆ ವೀರ್ಯವಾನನು ಮನಸ್ಸನ್ನು ಏಕಾಗ್ರಗೊಳಿಸಿ ನಿಶ್ಚಲನಾಗಿ ಯೋಗವನ್ನು ಆಶ್ರಯಿಸಿ, ಅದೊಂದೇ ಬಾಣದಿಂದ ಇಂದ್ರಿಯಗಳನ್ನು ವಿನಾಶಗೊಳಿಸಿದನು. ಆತ್ಮನನ್ನು ಯೋಗದಲ್ಲಿ ಲೀನಗೊಳಿಸಿ ಪರಮ ಸಂಸಿದ್ಧಿಯನ್ನು ಪಡೆದನು.

14030029a ವಿಸ್ಮಿತಶ್ಚಾಪಿ ರಾಜರ್ಷಿರಿಮಾಂ ಗಾಥಾಂ ಜಗಾದ ಹ।
14030029c ಅಹೋ ಕಷ್ಟಂ ಯದಸ್ಮಾಭಿಃ ಪೂರ್ವಂ ರಾಜ್ಯಮನುಷ್ಠಿತಮ್।
14030029e ಇತಿ ಪಶ್ಚಾನ್ಮಯಾ ಜ್ಞಾತಂ ಯೋಗಾನ್ನಾಸ್ತಿ ಪರಂ ಸುಖಮ್।।

ಅದರಿಂದ ವಿಸ್ಮಿತನಾದ ರಾಜರ್ಷಿಯು ಈ ಶ್ಲೋಕವನ್ನು ಹೇಳಿದನು: “ಅಯ್ಯೋ ಕಷ್ಟವೇ! ಇದೂವರೆಗೆ ನಾವು ರಾಜ್ಯವನ್ನು ನಡೆಸಿಕೊಂಡು ಬಂದೆವು. ಯೋಗಕ್ಕಿಂತ ಪರಮ ಸುಖವು ಇಲ್ಲವೆಂದು ಬಹಳ ಕಾಲದ ನಂತರ ನನಗೆ ಅರಿವಾಯಿತು!”

14030030a ಇತಿ ತ್ವಮಪಿ ಜಾನೀಹಿ ರಾಮ ಮಾ ಕ್ಷತ್ರಿಯಾನ್ಜಹಿ।
14030030c ತಪೋ ಘೋರಮುಪಾತಿಷ್ಠ ತತಃ ಶ್ರೇಯೋಽಭಿಪತ್ಸ್ಯಸೇ।।

ರಾಮ! ಇದನ್ನು ನೀನೂ ಕೂಡ ಅರಿತುಕೋ! ಕ್ಷತ್ರಿಯರನ್ನು ಕೊಲ್ಲಬೇಡ! ಘೋರ ತಪಸ್ಸನ್ನು ಕೈಗೊಳ್ಳು. ಇದರಿಂದ ನಿನಗೆ ಶ್ರೇಯಸ್ಸುಂಟಾಗುತ್ತದೆ!””

14030031 ಬ್ರಾಹ್ಮಣ ಉವಾಚ।
14030031a ಇತ್ಯುಕ್ತಃ ಸ ತಪೋ ಘೋರಂ ಜಾಮದಗ್ನ್ಯಃ ಪಿತಾಮಹೈಃ।
14030031c ಆಸ್ಥಿತಃ ಸುಮಹಾಭಾಗೋ ಯಯೌ ಸಿದ್ಧಿಂ ಚ ದುರ್ಗಮಾಮ್।।

ಬ್ರಾಹ್ಮಣನು ಹೇಳಿದನು: “ಪಿತಾಮಹರು ಹೀಗೆ ಹೇಳಲು ಮಹಾಭಾಗ ಜಾಮದಗ್ನಿ ರಾಮನು ಘೋರತಪಸ್ಸಿನಲ್ಲಿ ನಿರತನಾಗಿ ದುರ್ಗಮ ಸಿದ್ಧಿಯನ್ನು ಪಡೆದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಮೂವತ್ತನೇ ಅಧ್ಯಾಯವು.