ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 29
ಸಾರ
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (1-22).
14029001 ಬ್ರಾಹ್ಮಣ ಉವಾಚ।
14029001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
14029001c ಕಾರ್ತವೀರ್ಯಸ್ಯ ಸಂವಾದಂ ಸಮುದ್ರಸ್ಯ ಚ ಭಾಮಿನಿ।।
ಬ್ರಾಹ್ಮಣನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ಕಾರ್ತವೀರ್ಯ ಮತ್ತು ಸಮುದ್ರಗಳ ನಡುವಿನ ಈ ಸಂವಾದವನ್ನು ಉದಾಹರಿಸುತ್ತಾರೆ.
14029002a ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹುಸಹಸ್ರವಾನ್।
14029002c ಯೇನ ಸಾಗರಪರ್ಯಂತಾ ಧನುಷಾ ನಿರ್ಜಿತಾ ಮಹೀ।।
ಸಹಸ್ರಬಾಹುಗಳುಳ್ಳ ಕಾರ್ತವೀರ್ಯಾರ್ಜುನ ಎಂಬ ಹೆಸರಿನ ರಾಜನಿದ್ದನು. ಅವನು ತನ್ನ ಧನುಸ್ಸಿನ ಬಲದಿಂದ ಸಾಗರಪರ್ಯಂತ ಮಹಿಯನ್ನು ಗೆದ್ದಿದ್ದನು.
14029003a ಸ ಕದಾ ಚಿತ್ಸಮುದ್ರಾಂತೇ ವಿಚರನ್ಬಲದರ್ಪಿತಃ।
14029003c ಅವಾಕಿರಚ್ಚರಶತೈಃ ಸಮುದ್ರಮಿತಿ ನಃ ಶ್ರುತಮ್।।
ಬಲದರ್ಪಿತನಾಗಿದ್ದ ಅವನು ಒಮ್ಮೆ ಸಮುದ್ರತೀರದಲ್ಲಿ ಸಂಚರಿಸುತ್ತಿದ್ದಾಗ ನೂರಾರು ಬಾಣಗಳಿಂದ ಸಮುದ್ರವನ್ನು ಮುಚ್ಚಿಬಿಟ್ಟನೆಂದು ನಾವು ಕೇಳಿದ್ದೇವೆ.
14029004a ತಂ ಸಮುದ್ರೋ ನಮಸ್ಕೃತ್ಯ ಕೃತಾಂಜಲಿರುವಾಚ ಹ।
14029004c ಮಾ ಮುಂಚ ವೀರ ನಾರಾಚಾನ್ಬ್ರೂಹಿ ಕಿಂ ಕರವಾಣಿ ತೇ।।
ಸಮುದ್ರನು ಕೈಮುಗಿದು ಅವನಿಗೆ ನಮಸ್ಕರಿಸಿ ಹೇಳಿದನು: “ವೀರ! ನನ್ನ ಮೇಲೆ ನಾರಾಚಗಳನ್ನು ಪ್ರಯೋಗಿಸಬೇಡ! ಹೇಳು. ನನ್ನಿಂದ ನಿನಗೇನಾಗಬೇಕು?
14029005a ಮದಾಶ್ರಯಾಣಿ ಭೂತಾನಿ ತ್ವದ್ವಿಸೃಷ್ಟೈರ್ಮಹೇಷುಭಿಃ।
14029005c ವಧ್ಯಂತೇ ರಾಜಶಾರ್ದೂಲ ತೇಭ್ಯೋ ದೇಹ್ಯಭಯಂ ವಿಭೋ।।
ನಿನ್ನ ಬಾಣಗಳಿಂದ ನನ್ನನ್ನೇ ಆಶ್ರಯಿಸಿರುವ ಭೂತಗಳು ವಧಿಸಲ್ಪಡುತ್ತಿವೆ. ವಿಭೋ! ರಾಜಶಾರ್ದೂಲ! ಅವುಗಳಿಗೆ ಅಭಯವನ್ನು ನೀಡು!”
14029006 ಅರ್ಜುನ ಉವಾಚ।
14029006a ಮತ್ಸಮೋ ಯದಿ ಸಂಗ್ರಾಮೇ ಶರಾಸನಧರಃ ಕ್ವ ಚಿತ್।
14029006c ವಿದ್ಯತೇ ತಂ ಮಮಾಚಕ್ಷ್ವ ಯಃ ಸಮಾಸೀತ ಮಾಂ ಮೃಧೇ।।
ಅರ್ಜುನನು ಹೇಳಿದನು: “ಸಂಗ್ರಾಮದಲ್ಲಿ ನನ್ನ ಸಮನಾಗಿರುವ ಧನುರ್ಧಾರಿಯು ಯಾರಾದರೂ ಇರುವನೇ? ಯುದ್ಧದಲ್ಲಿ ನನ್ನ ಎದುರಾಗಬಲ್ಲವನು ಯಾರಾದರೂ ನಿನಗೆ ತಿಳಿದಿದ್ದರೆ ಅದನ್ನು ನನಗೆ ಹೇಳು!”
14029007 ಸಮುದ್ರ ಉವಾಚ।
14029007a ಮಹರ್ಷಿರ್ಜಮದಗ್ನಿಸ್ತೇ ಯದಿ ರಾಜನ್ಪರಿಶ್ರುತಃ।
14029007c ತಸ್ಯ ಪುತ್ರಸ್ತವಾತಿಥ್ಯಂ ಯಥಾವತ್ಕರ್ತುಮರ್ಹತಿ।।
ಸಮುದ್ರನು ಹೇಳಿದನು: “ರಾಜನ್! ಮಹರ್ಷಿ ಜಮದಗ್ನಿಯ ಕುರಿತು ನೀನು ಕೇಳಿದ್ದಿದ್ದರೆ ಅವನ ಪುತ್ರನು ನಿನಗೆ ಯಥಾವತ್ತಾಗಿ ಆತಿಥ್ಯವನ್ನು ನೀಡಲು ಯೋಗ್ಯನಾಗಿದ್ದಾನೆ.”
14029008a ತತಃ ಸ ರಾಜಾ ಪ್ರಯಯೌ ಕ್ರೋಧೇನ ಮಹತಾ ವೃತಃ।
14029008c ಸ ತಮಾಶ್ರಮಮಾಗಮ್ಯ ರಾಮಮೇವಾನ್ವಪದ್ಯತ।।
ಅನಂತರ ಆ ರಾಜನು ಮಹಾ ಕ್ರೋಧವಶನಾಗಿ ಅವನ ಆಶ್ರಮಕ್ಕೆ ಹೋಗಿ ಅಲ್ಲಿ ರಾಮನನ್ನೇ ಸಂಧಿಸಿದನು.
14029009a ಸ ರಾಮಪ್ರತಿಕೂಲಾನಿ ಚಕಾರ ಸಹ ಬಂಧುಭಿಃ।
14029009c ಆಯಾಸಂ ಜನಯಾಮಾಸ ರಾಮಸ್ಯ ಚ ಮಹಾತ್ಮನಃ।।
ಬಂಧುಗಳೊಡನಿದ್ದ ಅವನು ರಾಮನಿಗೆ ಪ್ರತಿಕೂಲವಾಗಿಯೇ ನಡೆದುಕೊಂಡನು. ಮಹಾತ್ಮ ರಾಮನಿಗೆ ಆಯಾಸವುಂಟಾಗುವಂತೆ ಮಾಡಿದನು.
14029010a ತತಸ್ತೇಜಃ ಪ್ರಜಜ್ವಾಲ ರಾಮಸ್ಯಾಮಿತತೇಜಸಃ।
14029010c ಪ್ರದಹದ್ರಿಪುಸೈನ್ಯಾನಿ ತದಾ ಕಮಲಲೋಚನೇ।।
ಆಗ ಅಮಿತತೇಜಸ್ವಿ ರಾಮನ ತೇಜಸ್ಸು ಪ್ರಜ್ವಲಿಸಿತು. ಕಮಲಲೋಚನೇ! ಆಗ ಅವನು ರಿಪುಸೈನ್ಯಗಳನ್ನು ಸುಟ್ಟುಹಾಕಿದನು.
14029011a ತತಃ ಪರಶುಮಾದಾಯ ಸ ತಂ ಬಾಹುಸಹಸ್ರಿಣಮ್।
14029011c ಚಿಚ್ಚೇದ ಸಹಸಾ ರಾಮೋ ಬಾಹುಶಾಖಮಿವ ದ್ರುಮಮ್।।
ಅನಂತರ ರಾಮನು ಪರಶುವನ್ನು ತೆಗೆದುಕೊಂಡು ಒಮ್ಮೆಲೇ ಅವನ ಸಹಸ್ರ ಬಾಹುಗಳನ್ನು ಅನೇಕ ರೆಂಬೆಗಳಿರುವ ವೃಕ್ಷದಂತೆ ತುಂಡರಿಸಿದನು.
14029012a ತಂ ಹತಂ ಪತಿತಂ ದೃಷ್ಟ್ವಾ ಸಮೇತಾಃ ಸರ್ವಬಾಂಧವಾಃ।
14029012c ಅಸೀನಾದಾಯ ಶಕ್ತೀಶ್ಚ ಭಾರ್ಗವಂ ಪರ್ಯವಾರಯನ್।।
ಅವನು ಹತನಾಗಿ ಬಿದ್ದುದನ್ನು ನೋಡಿ ಅವನ ಸರ್ವಬಾಂಧವರೂ ಒಟ್ಟಾಗಿ ಖಡ್ಗ-ಶಕ್ತಿಗಳನ್ನು ಹಿಡಿದು ಭಾರ್ಗವನನ್ನು ಸುತ್ತುವರೆದರು.
14029013a ರಾಮೋಽಪಿ ಧನುರಾದಾಯ ರಥಮಾರುಹ್ಯ ಸತ್ವರಃ।
14029013c ವಿಸೃಜನ್ಶರವರ್ಷಾಣಿ ವ್ಯಧಮತ್ಪಾರ್ಥಿವಂ ಬಲಮ್।।
ವೇಗಶಾಲೀ ರಾಮನೂ ಕೂಡ ಧನುಸ್ಸನ್ನೆತ್ತಿಕೊಂಡು ರಥವನ್ನೇರಿ ಶರವರ್ಷಗಳನ್ನು ಸುರಿಸಿ ಪಾರ್ಥಿವ ಸೇನೆಯನ್ನು ವಧಿಸಿದನು.
14029014a ತತಸ್ತು ಕ್ಷತ್ರಿಯಾಃ ಕೇ ಚಿಜ್ಜಮದಗ್ನಿಂ ನಿಹತ್ಯ ಚ।
14029014c ವಿವಿಶುರ್ಗಿರಿದುರ್ಗಾಣಿ ಮೃಗಾಃ ಸಿಂಹಾರ್ದಿತಾ ಇವ।।
ಆಗ ಕೆಲವು ಕ್ಷತ್ರಿಯರು ಜಮದಗ್ನಿಯನ್ನು ಸಂಹರಿಸಿ ಸಿಂಹಕ್ಕೆ ಭಯಪಟ್ಟ ಜಿಂಕೆಗಳಂತೆ ಗಿರಿ-ದುರ್ಗಗಳಲ್ಲಿ ಅಡಗಿಕೊಂಡರು.
14029015a ತೇಷಾಂ ಸ್ವವಿಹಿತಂ ಕರ್ಮ ತದ್ಭಯಾನ್ನಾನುತಿಷ್ಠತಾಮ್।
14029015c ಪ್ರಜಾ ವೃಷಲತಾಂ ಪ್ರಾಪ್ತಾ ಬ್ರಾಹ್ಮಣಾನಾಮದರ್ಶನಾತ್।।
ರಾಮನ ಭಯದಿಂದಾಗಿ ಅವರು ಕ್ಷತ್ರಿಯರಿಗೆ ವಿಹಿಸಿದ್ದ ಕರ್ಮಗಳ ಅನುಷ್ಠಾನ ಮಾಡಲಿಲ್ಲ. ಬ್ರಾಹ್ಮಣರ ದರ್ಶನವನ್ನೇ ಮಾಡದಿದ್ದ ಅವರು ಶೂದ್ರತ್ವವನ್ನೇ ಹೊಂದಿದರು.
14029016a ತ ಏತೇ ದ್ರಮಿಡಾಃ ಕಾಶಾಃ ಪುಂಡ್ರಾಶ್ಚ ಶಬರೈಃ ಸಹ।
14029016c ವೃಷಲತ್ವಂ ಪರಿಗತಾ ವ್ಯುತ್ಥಾನಾತ್ಕ್ಷತ್ರಧರ್ಮತಃ।।
ಈ ರೀತಿ ದ್ರಮಿಡ, ಕಾಶ, ಪುಂಡ್ರ ಮತ್ತು ಶಬರರೊಂದಿಗೆ ಸಹವಾಸಮಾಡಿ ಕ್ಷತ್ರಧರ್ಮದಿಂದ ಭ್ರಷ್ಟರಾಗಿ ಶೂದ್ರತ್ವವನ್ನು ಪಡೆದರು.
14029017a ತತಸ್ತು ಹತವೀರಾಸು ಕ್ಷತ್ರಿಯಾಸು ಪುನಃ ಪುನಃ।
14029017c ದ್ವಿಜೈರುತ್ಪಾದಿತಂ ಕ್ಷತ್ರಂ ಜಾಮದಗ್ನ್ಯೋ ನ್ಯಕೃಂತತ।।
ಜಾಮದಗ್ನಿ ರಾಮನಿಂದ ಹೀಗೆ ಕ್ಷತ್ರಿಯ ವೀರರು ಪುನಃ ಪುನಃ ಹತರಾಗಲು ದ್ವಿಜರು ಕ್ಷತ್ರಿಯ ಸ್ತ್ರೀಯರಲ್ಲಿ ಪುತ್ರರನ್ನು ಪಡೆದರು.
14029018a ಏಕವಿಂಶತಿಮೇಧಾಂತೇ ರಾಮಂ ವಾಗಶರೀರಿಣೀ।
14029018c ದಿವ್ಯಾ ಪ್ರೋವಾಚ ಮಧುರಾ ಸರ್ವಲೋಕಪರಿಶ್ರುತಾ।।
ಇಪ್ಪತ್ತೊಂದು ಬಾರಿ ರಾಮನು ಕ್ಷತ್ರಿಯರನ್ನು ಸಂಹರಿಸಲು ಅಂತ್ಯದಲ್ಲಿ ಸರ್ವಲೋಕಗಳೂ ಕೇಳುವಂತೆ ದಿವ್ಯ ಮಧುರ ಅಶರೀರವಾಣಿಯು ನುಡಿಯಿತು:
14029019a ರಾಮ ರಾಮ ನಿವರ್ತಸ್ವ ಕಂ ಗುಣಂ ತಾತ ಪಶ್ಯಸಿ।
14029019c ಕ್ಷತ್ರಬಂಧೂನಿಮಾನ್ಪ್ರಾಣೈರ್ವಿಪ್ರಯೋಜ್ಯ ಪುನಃ ಪುನಃ।।
“ರಾಮ! ರಾಮ! ಇದನ್ನು ನಿಲ್ಲಿಸು! ಮಗೂ! ಪುನಃ ಪುನಃ ಈ ಕ್ಷತ್ರಬಂಧುಗಳ ಪ್ರಾಣಗಳನ್ನು ತೆಗೆದುಕೊಳ್ಳುವುದರಲ್ಲಿ ನೀನು ಯಾವ ಪ್ರಯೋಜನವನ್ನು ಕಾಣುತ್ತಿದ್ದೀಯೆ?”
14029020a ತಥೈವ ತಂ ಮಹಾತ್ಮಾನಮೃಚೀಕಪ್ರಮುಖಾಸ್ತದಾ।
14029020c ಪಿತಾಮಹಾ ಮಹಾಭಾಗ ನಿವರ್ತಸ್ವೇತ್ಯಥಾಬ್ರುವನ್।।
ಹಾಗೆಯೇ ಮಹಾತ್ಮ ಋಚೀಕನೇ ಮೊದಲಾದ ಅವನ ಪಿತಾಮಹರು “ಮಹಾಭಾಗ! ಇದರಿಂದ ವಿಮುಖನಾಗು!” ಎಂದು ಹೇಳಿದರು.
14029021a ಪಿತುರ್ವಧಮಮೃಷ್ಯಂಸ್ತು ರಾಮಃ ಪ್ರೋವಾಚ ತಾನೃಷೀನ್।
14029021c ನಾರ್ಹಂತೀಹ ಭವಂತೋ ಮಾಂ ನಿವಾರಯಿತುಮಿತ್ಯುತ।।
ತಂದೆಯ ವಧೆಯಿಂದ ಅತ್ಯಂತ ಕುಪಿತನಾಗಿದ್ದ ರಾಮನು ಆ ಋಷಿಗಳಿಗೆ “ನೀವು ನನ್ನನ್ನು ತಡೆಯುವುದು ಸರಿಯಲ್ಲ!” ಎಂದು ಹೇಳಿದನು.
14029022 ಪಿತರ ಊಚುಃ।
14029022a ನಾರ್ಹಸೇ ಕ್ಷತ್ರಬಂಧೂಂಸ್ತ್ವಂ ನಿಹಂತುಂ ಜಯತಾಂ ವರ।
14029022c ನ ಹಿ ಯುಕ್ತಂ ತ್ವಯಾ ಹಂತುಂ ಬ್ರಾಹ್ಮಣೇನ ಸತಾ ನೃಪಾನ್।।
ಪಿತೃಗಳು ಹೇಳಿದರು: “ವಿಜಯಿಗಳಲ್ಲಿ ಶ್ರೇಷ್ಠನೇ! ಕ್ಷತ್ರಬಂಧುಗಳನ್ನು ಸಂಹರಿಸುತ್ತಲೇ ಇರುವುದು ನಿನಗೆ ಯೋಗ್ಯವಲ್ಲ. ಉತ್ತಮ ಬ್ರಾಹ್ಮಣನಾಗಿದ್ದುಕೊಂಡು ನೀನು ನೃಪರನ್ನು ಸಂಹರಿಸುವುದು ಯುಕ್ತವಲ್ಲ!”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಏಕೋನತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ತೊಂಭತ್ತನೇ ಅಧ್ಯಾಯವು.