ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 28
ಸಾರ
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (1-28).
14028001 ಬ್ರಾಹ್ಮಣ ಉವಾಚ।
14028001a ಗಂಧಾನ್ನ ಜಿಘ್ರಾಮಿ ರಸಾನ್ನ ವೇದ್ಮಿ ರೂಪಂ ನ ಪಶ್ಯಾಮಿ ನ ಚ ಸ್ಪೃಶಾಮಿ।
14028001c ನ ಚಾಪಿ ಶಬ್ದಾನ್ವಿವಿಧಾನ್ಶೃಣೋಮಿ ನ ಚಾಪಿ ಸಂಕಲ್ಪಮುಪೈಮಿ ಕಿಂ ಚಿತ್।।
ಬ್ರಾಹ್ಮಣನು ಹೇಳಿದನು: “ನಾನು ಗಂಧವನ್ನು ಮೂಸುತ್ತಿಲ್ಲ. ರಸವನ್ನು ರುಚಿಸುತ್ತಿಲ್ಲ. ರೂಪವನ್ನು ನೋಡುತ್ತಿಲ್ಲ. ಮುಟ್ಟುತ್ತಿಲ್ಲ. ವಿವಿಧ ಶಬ್ಧಗಳನ್ನೂ ಕೇಳುತ್ತಿಲ್ಲ. ನಾನು ಯಾವುದೇ ಸಂಕಲ್ಪವನ್ನೂ ಯೋಚಿಸುತ್ತಿಲ್ಲ!
14028002a ಅರ್ಥಾನಿಷ್ಟಾನ್ಕಾಮಯತೇ ಸ್ವಭಾವಃ ಸರ್ವಾನ್ದ್ವೇಷ್ಯಾನ್ಪ್ರದ್ವಿಷತೇ ಸ್ವಭಾವಃ।
14028002c ಕಾಮದ್ವೇಷಾವುದ್ಭವತಃ ಸ್ವಭಾವಾತ್ ಪ್ರಾಣಾಪಾನೌ ಜಂತುದೇಹಾನ್ನಿವೇಶ್ಯ।।
ಸ್ವಭಾವವು ಅಭೀಷ್ಟವಾದವುಗಳನ್ನು ಬಯಸುತ್ತದೆ. ಸ್ವಭಾವವೇ ದ್ವೇಷಿಸುವ ಎಲ್ಲವನ್ನೂ ದ್ವೇಷಿಸುತ್ತದೆ. ಪ್ರಾಣ-ಅಪಾನಗಳು ಜಂತುವಿನ ದೇಹವನ್ನು ಪ್ರವೇಶಿಸಿ ಸ್ವಭಾವದಿಂದಲೇ ಕಾಮ-ದ್ವೇಷಗಳನ್ನುಂಟುಮಾಡುತ್ತವೆ.
14028003a ತೇಭ್ಯಶ್ಚಾನ್ಯಾಂಸ್ತೇಷ್ವನಿತ್ಯಾಂಶ್ಚ ಭಾವಾನ್ ಭೂತಾತ್ಮಾನಂ ಲಕ್ಷಯೇಯಂ ಶರೀರೇ।
14028003c ತಸ್ಮಿಂಸ್ತಿಷ್ಠನ್ನಾಸ್ಮಿ ಶಕ್ಯಃ ಕಥಂ ಚಿತ್ ಕಾಮಕ್ರೋಧಾಭ್ಯಾಂ ಜರಯಾ ಮೃತ್ಯುನಾ ಚ।।
ಅವುಗಳನ್ನು ಮತ್ತು ಅನ್ಯ ಅನಿತ್ಯ ಭಾವಗಳನ್ನು ಹಾಗೂ ಭೂತಾತ್ಮನನ್ನು ಈ ಶರೀರದಲ್ಲಿ ಕಾಣುತ್ತೇನೆ. ಆ ಭೂತಾತ್ಮನಲ್ಲಿ ಮನಸ್ಸನ್ನು ಸ್ಥಾಪಿಸಿದ ನನ್ನನ್ನು ಕಾಮ-ಕ್ರೋಧಗಳಾಗಲೀ ಜರಾ-ಮೃತ್ಯುಗಳಾಗಲೀ ಎಂದೂ ಮುಟ್ಟುವುದಿಲ್ಲ.
14028004a ಅಕಾಮಯಾನಸ್ಯ ಚ ಸರ್ವಕಾಮಾನ್ ಅವಿದ್ವಿಷಾಣಸ್ಯ ಚ ಸರ್ವದೋಷಾನ್।
14028004c ನ ಮೇ ಸ್ವಭಾವೇಷು ಭವಂತಿ ಲೇಪಾಸ್ ತೋಯಸ್ಯ ಬಿಂದೋರಿವ ಪುಷ್ಕರೇಷು।।
ಯಾವುದೇ ಕಾಮನಾ ವಸ್ತುವನ್ನು ಕಾಮಿಸದ ಮತ್ತು ಯಾವುದೇ ದ್ವೇಷವಸ್ತುವನ್ನು ದ್ವೇಷಿಸದ ನನ್ನ ಆ ಸ್ವಭಾವಗಳಲ್ಲಿ ಕಮಲದ ಎಲೆಗೆ ನೀರಿನ ಬಿಂದುಗಳು ಅಂಟಿಕೊಳ್ಳದಂತೆ ಯಾವ ದೋಷಗಳೂ ಅಂಟಿಕೊಳ್ಳುವುದಿಲ್ಲ.
14028005a ನಿತ್ಯಸ್ಯ ಚೈತಸ್ಯ ಭವಂತಿ ನಿತ್ಯಾ ನಿರೀಕ್ಷಮಾಣಸ್ಯ ಬಹೂನ್ಸ್ವಭಾವಾನ್।
14028005c ನ ಸಜ್ಜತೇ ಕರ್ಮಸು ಭೋಗಜಾಲಂ ದಿವೀವ ಸೂರ್ಯಸ್ಯ ಮಯೂಖಜಾಲಮ್।।
ಇಂದ್ರಿಯಗಳ ಅನೇಕ ಸ್ವಭಾವಗಳನ್ನು ನಿತ್ಯವೂ ನಿರೀಕ್ಷಿಸುತ್ತಿರುವ ಆ ನಿತ್ಯ ಪರಮಾತ್ಮನಿಗೆ ಇಂದ್ರಿಯ ಸಂಬಂಧ ಭೋಗಗಳೆಲ್ಲವೂ ಅನಿತ್ಯವಾಗಿಯೇ ಕಾಣಿಸುತ್ತವೆ. ಅಂತಹ ಪರಮಾತ್ಮನನ್ನು ಅನುಭವಕ್ಕೆ ತಂದುಕೊಂಡವನಿಗೆ ಕರ್ಮಗಳಲ್ಲಿನ ಭೋಗಸಮೂಹಗಳು ಆಕಾಶದಲ್ಲಿನ ಕಿರಣ ಸಮೂಹಗಳು ಸೂರ್ಯನನ್ನು ಹೇಗೆ ಅಂಟಿಕೊಂಡಿರುವುದಿಲ್ಲವೋ ಹಾಗೆ ಅಂಟಿಕೊಂಡಿರುವುದಿಲ್ಲ.
14028006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
14028006c ಅಧ್ವರ್ಯುಯತಿಸಂವಾದಂ ತಂ ನಿಬೋಧ ಯಶಸ್ವಿನಿ।।
ಯಶಸ್ವಿನೀ! ಈ ವಿಷಯದಲ್ಲಿ ಪುರಾತನ ಇತಿಹಾಸವಾಗಿರುವ ಅಧ್ವರ್ಯು ಮತ್ತು ಯತಿಯರ ಸಂವಾದವನ್ನು ಉದಾಹರಿಸುತ್ತಾರೆ. ಅದನ್ನು ಕೇಳು.
14028007a ಪ್ರೋಕ್ಷ್ಯಮಾಣಂ ಪಶುಂ ದೃಷ್ಟ್ವಾ ಯಜ್ಞಕರ್ಮಣ್ಯಥಾಬ್ರವೀತ್।
14028007c ಯತಿರಧ್ವರ್ಯುಮಾಸೀನೋ ಹಿಂಸೇಯಮಿತಿ ಕುತ್ಸಯನ್।।
ಯಜ್ಞಕರ್ಮದಲ್ಲಿ ಪಶುವಿಗೆ ಪ್ರೋಕ್ಷಣೆಮಾಡುತ್ತಿರುವುದನ್ನು ನೋಡಿ ಅಲ್ಲಿಯೇ ಕುಳಿತಿದ್ದ ಯತಿಯೋರ್ವನು “ಇದು ಹಿಂಸೆ!” ಎಂದು ಅಧ್ವರ್ಯುವನ್ನು ಧಿಕ್ಕರಿಸಿದನು.
14028008a ತಮಧ್ವರ್ಯುಃ ಪ್ರತ್ಯುವಾಚ ನಾಯಂ ಚಾಗೋ ವಿನಶ್ಯತಿ।
14028008c ಶ್ರೇಯಸಾ ಯೋಕ್ಷ್ಯತೇ ಜಂತುರ್ಯದಿ ಶ್ರುತಿರಿಯಂ ತಥಾ।।
ಅದಕ್ಕೆ ಅಧ್ವರ್ಯುವು ಉತ್ತರಿಸಿದನು: “ಈ ಆಡು ನಾಶವಾಗುವುದಿಲ್ಲ. ವೇದವಾಕ್ಯವು ಸತ್ಯವೆಂದಾದರೆ ಈ ಪ್ರಾಣಿಯು ಶ್ರೇಯಸ್ಸನ್ನು ಹೊಂದುತ್ತದೆ.
14028009a ಯೋ ಹ್ಯಸ್ಯ ಪಾರ್ಥಿವೋ ಭಾಗಃ ಪೃಥಿವೀಂ ಸ ಗಮಿಷ್ಯತಿ।
14028009c ಯದಸ್ಯ ವಾರಿಜಂ ಕಿಂ ಚಿದಪಸ್ತತ್ಪ್ರತಿಪದ್ಯತೇ।।
ಇದರ ಪಾರ್ಥಿವ ಭಾಗವು ಪೃಥ್ವಿಯನ್ನು ಸೇರುತ್ತದೆ. ಇದರಲ್ಲಿರುವ ನೀರಿನ ಅಂಶವು ಆಪದಲ್ಲಿ ಸೇರಿಹೋಗುತ್ತದೆ.
14028010a ಸೂರ್ಯಂ ಚಕ್ಷುರ್ದಿಶಃ ಶ್ರೋತ್ರೇ ಪ್ರಾಣೋಽಸ್ಯ ದಿವಮೇವ ಚ।
14028010c ಆಗಮೇ ವರ್ತಮಾನಸ್ಯ ನ ಮೇ ದೋಷೋಽಸ್ತಿ ಕಶ್ಚನ।।
ಇದರ ಕಣ್ಣುಗಳು ಸೂರ್ಯನನ್ನೂ, ಕಿವಿಗಳು ದಿಕ್ಕುಗಳನ್ನೂ, ಪ್ರಾಣವು ದಿವವನ್ನೂ ಸೇರುತ್ತವೆ. ಆಗಮ ಶಾಸ್ತ್ರಗಳ ಪ್ರಕಾರ ನಡೆದುಕೊಳ್ಳುತ್ತಿರುವ ನನಗೆ ಯಾವ ದೋಷವೂ ಅಂಟಿಕೊಳ್ಳುವುದಿಲ್ಲ.”
14028011 ಯತಿರುವಾಚ।
14028011a ಪ್ರಾಣೈರ್ವಿಯೋಗೇ ಚಾಗಸ್ಯ ಯದಿ ಶ್ರೇಯಃ ಪ್ರಪಶ್ಯಸಿ।
14028011c ಚಾಗಾರ್ಥೇ ವರ್ತತೇ ಯಜ್ಞೋ ಭವತಃ ಕಿಂ ಪ್ರಯೋಜನಮ್।।
ಯತಿಯು ಹೇಳಿದನು: “ಈ ಆಡಿನ ಪ್ರಾಣವನ್ನು ತೆಗೆಯುವುದರಿಂದ ಅದಕ್ಕೆ ಶ್ರೇಯಸ್ಸುಂಟಾಗುತ್ತದೆಯೆಂದಾದರೆ ಆಡಿಗಾಗಿ ನಡೆಸುತ್ತಿರುವ ಈ ಯಜ್ಞದಿಂದ ನಿನಗೇನು ಪ್ರಯೋಜನ?
14028012a ಅನು ತ್ವಾ ಮನ್ಯತಾಂ ಮಾತಾ ಪಿತಾ ಭ್ರಾತಾ ಸಖಾಪಿ ಚ।
14028012c ಮಂತ್ರಯಸ್ವೈನಮುನ್ನೀಯ ಪರವಂತಂ ವಿಶೇಷತಃ।।
ವಿಶೇಷವಾಗಿ ಪರಾಧೀನವಾಗಿರುವ ಈ ಆಡಿನ ತಾಯಿ, ತಂದೆ, ಸಹೋದರರು ಮತ್ತು ಸ್ನೇಹಿತರೊಡನೆ ವಿಚಾರಿಸಿ ಅವರ ಅನುಮತಿಯನ್ನು ಪಡೆಯಬೇಕಾಗಿತ್ತು1.
14028013a ಯ ಏವಮನುಮನ್ಯೇರಂಸ್ತಾನ್ಭವಾನ್ಪ್ರಷ್ಟುಮರ್ಹತಿ।
14028013c ತೇಷಾಮನುಮತಂ ಶ್ರುತ್ವಾ ಶಕ್ಯಾ ಕರ್ತುಂ ವಿಚಾರಣಾ।।
ಇದಕ್ಕೆ ಅನುಮತಿಯನ್ನು ಕೊಡಬೇಕಾದವರನ್ನು ನೀನು ಕೇಳಬೇಕಾಗಿತ್ತು. ಅವರ ಅನುಮತಿಯನ್ನು ಕೇಳಿದ ನಂತರವೇ ಇದನ್ನು ಹನನಮಾಡುವ ಕುರಿತು ವಿಚಾರಿಸಲು ಶಕ್ಯವಿದೆ.
14028014a ಪ್ರಾಣಾ ಅಪ್ಯಸ್ಯ ಚಾಗಸ್ಯ ಪ್ರಾಪಿತಾಸ್ತೇ ಸ್ವಯೋನಿಷು।
14028014c ಶರೀರಂ ಕೇವಲಂ ಶಿಷ್ಟಂ ನಿಶ್ಚೇಷ್ಟಮಿತಿ ಮೇ ಮತಿಃ।।
ಮೇಲಾಗಿ ಈ ಆಡಿನ ಪ್ರಾಣ, ಆಪ ಮೊದಲಾದ ಇಂದ್ರಿಯಗಳನ್ನು ಅವುಗಳ ಉಗಮಸ್ಥಾನಗಳಲ್ಲಿ ಮೊದಲೇ ಲೀನಗೊಳಿಸಿಬಿಟ್ಟಿರುವೆಯಾದುದರಿಂದ2, ಕೇವಲ ಇದರ ನಿಶ್ಚೇಷ್ಟ ಶರೀರವು ಉಳಿದುಕೊಂಡಿದೆಯೆಂದು ನನ್ನ ಅಭಿಪ್ರಾಯವಾಗಿದೆ.
14028015a ಇಂಧನಸ್ಯ ತು ತುಲ್ಯೇನ ಶರೀರೇಣ ವಿಚೇತಸಾ।
14028015c ಹಿಂಸಾ ನಿರ್ವೇಷ್ಟುಕಾಮಾನಾಮಿಂಧನಂ ಪಶುಸಂಜ್ಞಿತಮ್।।
ಚೇತನವನ್ನು ಕಳೆದುಕೊಂಡ ಶರೀರವು ಇಂಧನಕ್ಕೆ ಸಮಾನವು. ಹಿಂಸೆಯನ್ನು ಮಾಡಲು ಬಯಸುವವರು ಪಶುರೂಪದ ಇಂಧನವನ್ನು ಬಳಸುತ್ತಾರೆ!
14028016a ಅಹಿಂಸಾ ಸರ್ವಧರ್ಮಾಣಾಮಿತಿ ವೃದ್ಧಾನುಶಾಸನಮ್।
14028016c ಯದಹಿಂಸ್ರಂ ಭವೇತ್ಕರ್ಮ ತತ್ಕಾರ್ಯಮಿತಿ ವಿದ್ಮಹೇ।।
ಎಲ್ಲಧರ್ಮಗಳಲ್ಲಿ ಅಹಿಂಸಾಧರ್ಮವೇ ಶ್ರೇಷ್ಠವೆಂದು ವೃದ್ಧರ ಅನುಶಾಸನವಾಗಿದೆ. ಯಾವ ಕರ್ಮದಲ್ಲಿ ಹಿಂಸೆಯಿಲ್ಲವೋ ಆ ಕಾರ್ಯವೇ ಮಾಡಲು ಯೋಗ್ಯವೆಂದು ತಿಳಿದಿದ್ದೇವೆ.
14028017a ಅಹಿಂಸೇತಿ ಪ್ರತಿಜ್ಞೇಯಂ ಯದಿ ವಕ್ಷ್ಯಾಮ್ಯತಃ ಪರಮ್।
14028017c ಶಕ್ಯಂ ಬಹುವಿಧಂ ವಕ್ತುಂ ಭವತಃ ಕಾರ್ಯದೂಷಣಮ್।।
ಇದಕ್ಕೂ ಹೆಚ್ಚು ಹೇಳುವುದಾದರೆ ಅಹಿಂಸೆಯನ್ನು ಪಾಲಿಸುತ್ತೇನೆ ಎಂದು ಪ್ರತಿಜ್ಞೆಯನ್ನು ಮಾಡಿಸಬೇಕು. ನಿನ್ನ ಈ ಕಾರ್ಯವನ್ನು ಇನ್ನೂ ಬಹುವಿಧದಲ್ಲಿ ದೂಷಿಸಲು ಶಕ್ಯವಿದೆ.
14028018a ಅಹಿಂಸಾ ಸರ್ವಭೂತಾನಾಂ ನಿತ್ಯಮಸ್ಮಾಸು ರೋಚತೇ।
14028018c ಪ್ರತ್ಯಕ್ಷತಃ ಸಾಧಯಾಮೋ ನ ಪರೋಕ್ಷಮುಪಾಸ್ಮಹೇ।।
ಸರ್ವಭೂತಗಳಿಗೂ ಹಿಂಸೆಮಾಡದೇ ಇರುವುದು ನಮಗೆ ನಿತ್ಯವೂ ಪ್ರಿಯವಾಗಿದೆ. ಇದನ್ನು ಪರೋಕ್ಷವಾಗಿ ಉಪಾಸನೆ ಮಾಡದೇ ಪ್ರತ್ಯಕ್ಷವಾಗಿಯೇ ಸಾಧಿಸೋಣ!”
14028019 ಅಧ್ವರ್ಯುರುವಾಚ 14028019a ಭೂಮೇರ್ಗಂಧಗುಣಾನ್ಭುಂಕ್ಷೇ ಪಿಬಸ್ಯಾಪೋಮಯಾನ್ರಸಾನ್।
14028019c ಜ್ಯೋತಿಷಾಂ ಪಶ್ಯಸೇ ರೂಪಂ ಸ್ಪೃಶಸ್ಯನಿಲಜಾನ್ ಗುಣಾನ್।।
ಅಧ್ವರ್ಯುವು ಹೇಳಿದನು: “ನೀನು ಭೂಮಿಯ ಗಂಧವನ್ನು ಆಘ್ರಾಣಿಸುವೆ. ಆಪದಲ್ಲಿರುವ ರಸವನ್ನು ಕುಡಿಯುತ್ತೀಯೆ. ತೇಜೋಗುಣವಾದ ರೂಪವನ್ನು ಕಾಣುತ್ತೀಯೆ. ಮತ್ತು ವಾಯುಗುಣದ ಸ್ಪರ್ಷವನ್ನು ಅನುಭವಿಸುತ್ತೀಯೆ.
14028020a ಶೃಣೋಷ್ಯಾಕಾಶಜಂ ಶಬ್ದಂ ಮನಸಾ ಮನ್ಯಸೇ ಮತಿಮ್।
14028020c ಸರ್ವಾಣ್ಯೇತಾನಿ ಭೂತಾನಿ ಪ್ರಾಣಾ ಇತಿ ಚ ಮನ್ಯಸೇ।।
ಆಕಾಶದಲ್ಲಿ ಹುಟ್ಟುವ ಶಬ್ಧವನ್ನು ಕೇಳುತ್ತೀಯೆ. ಮನಸ್ಸಿನಿಂದ ಬುದ್ಧಿಯನ್ನು ಬಳಸುವೆ. ಆದರೆ ಈ ಎಲ್ಲ ಭೂತಗಳಿಗೂ ಪ್ರಾಣಗಳಿವೆಯೆಂದು ಭಾವಿಸುತ್ತೀಯೆ.
14028021a ಪ್ರಾಣಾದಾನೇ ಚ ನಿತ್ಯೋಽಸಿ ಹಿಂಸಾಯಾಂ ವರ್ತತೇ ಭವಾನ್।
14028021c ನಾಸ್ತಿ ಚೇಷ್ಟಾ ವಿನಾ ಹಿಂಸಾಂ ಕಿಂ ವಾ ತ್ವಂ ಮನ್ಯಸೇ ದ್ವಿಜ।।
ಹೀಗೆ ನಿತ್ಯವೂ ನೀನು ಪ್ರಾಣವನ್ನು ಹೀರುತ್ತಿರುತ್ತೀಯೆ ಮತ್ತು ಹಿಂಸಾಪೂರ್ವಕವಾಗಿ ವರ್ತಿಸುತ್ತಿರುತ್ತೀಯೆ. ದ್ವಿಜ! ಹಿಂಸೆಯಿಲ್ಲದೇ ಯಾವ ಕಾರ್ಯವೂ ನಡೆಯುವುದಿಲ್ಲ ಎಂದು ನನಗನ್ನಿಸುತ್ತದೆ.”
14028022 ಯತಿರುವಾಚ 14028022a ಅಕ್ಷರಂ ಚ ಕ್ಷರಂ ಚೈವ ದ್ವೈಧೀಭಾವೋಽಯಮಾತ್ಮನಃ।
14028022c ಅಕ್ಷರಂ ತತ್ರ ಸದ್ಭಾವಃ ಸ್ವಭಾವಃ ಕ್ಷರ ಉಚ್ಯತೇ।।
ಯತಿಯು ಹೇಳಿದನು: “ಈ ಆತ್ಮನಿಗೆ ಅಕ್ಷರ ಮತ್ತು ಕ್ಷರ ಎಂಬ ಎರಡು ಭಾವಗಳಿವೆ. ಇದರಲ್ಲಿ ಸದ್ಭಾವ (ಇರುವಿಕೆಯ ಭಾವ) ವನ್ನು ಅಕ್ಷರ ಮತ್ತು ಸ್ವಭಾವ (ಜೀವಿಯ ಸ್ವಭಾವ) ವನ್ನು ಕ್ಷರ ಎಂದು ಹೇಳುತ್ತಾರೆ.
14028023a ಪ್ರಾಣೋ ಜಿಹ್ವಾ ಮನಃ ಸತ್ತ್ವಂ ಸ್ವಭಾವೋ ರಜಸಾ ಸಹ।
14028023c ಭಾವೈರೇತೈರ್ವಿಮುಕ್ತಸ್ಯ ನಿರ್ದ್ವಂದ್ವಸ್ಯ ನಿರಾಶಿಷಃ।।
ಪ್ರಾಣ, ಜಿಹ್ವ, ಮನಸ್ಸು, ಸತ್ತ್ವ, ಮತ್ತು ರಜಸ್ಸುಗಳು ಒಟ್ಟಿಗೆ ಸ್ವಭಾವಗಳೆನಿಸಿಕೊಳ್ಳುತ್ತವೆ. ಈ ಭಾವಗಳಿಂದ ವಿಮುಕ್ತನಾದವನು ನಿರ್ದ್ವಂದ್ವನೂ ಆಶೆಗಳಿಲ್ಲದವನ್ನೂ ಆಗಿರುವನು.
14028024a ಸಮಸ್ಯ ಸರ್ವಭೂತೇಷು ನಿರ್ಮಮಸ್ಯ ಜಿತಾತ್ಮನಃ।
14028024c ಸಮಂತಾತ್ಪರಿಮುಕ್ತಸ್ಯ ನ ಭಯಂ ವಿದ್ಯತೇ ಕ್ವ ಚಿತ್।।
ಆ ಜಿತಾತ್ಮನು ಸರ್ವಭೂತಗಳಲ್ಲಿಯೂ ಸಮನಾಗಿ ವರ್ತಿಸುವನು. ಮಮಕಾರವನ್ನಿಟ್ಟುಕೊಂಡಿರುವುದಿಲ್ಲ. ಎಲ್ಲರೀತಿಯಲ್ಲಿಯೂ ಪರಿಮುಕ್ತನಾದ ಅವನಿಗೆ ಯಾವುದೇ ಭಯವಿರುವುದಿಲ್ಲ.”
14028025 ಅಧ್ವರ್ಯುರುವಾಚ 14028025a ಸದ್ಭಿರೇವೇಹ ಸಂವಾಸಃ ಕಾರ್ಯೋ ಮತಿಮತಾಂ ವರ।
14028025c ಭವತೋ ಹಿ ಮತಂ ಶ್ರುತ್ವಾ ಪ್ರತಿಭಾತಿ ಮತಿರ್ಮಮ।।
ಅಧ್ವರ್ಯುವು ಹೇಳಿದನು: “ಮತಿವಂತರಲ್ಲಿ ಶ್ರೇಷ್ಠನೇ! ನಿನ್ನ ಈ ಅಭಿಪ್ರಾಯವನ್ನು ಕೇಳಿ ಉತ್ತಮ ಪುರುಷರ ಸಹವಾಸವನ್ನು ಮಾಡಬೇಕು ಎಂದು ನನ್ನ ಬುದ್ಧಿಗೆ ಹೊಳೆಯುತ್ತಿದೆ.
14028026a ಭಗವನ್ಭಗವದ್ಬುದ್ಧ್ಯಾ ಪ್ರತಿಬುದ್ಧೋ ಬ್ರವೀಮ್ಯಹಮ್।
14028026c ಮತಂ ಮಂತುಂ ಕ್ರತುಂ ಕರ್ತುಂ ನಾಪರಾಧೋಽಸ್ತಿ ಮೇ ದ್ವಿಜ।।
ಭಗವನ್! ದ್ವಿಜ! ನಿನ್ನ ಬುದ್ಧಿಯಿಂದ ನಾನು ಇನ್ನೂ ಹೆಚ್ಚು ತಿಳಿದುಕೊಂಡವನಾಗಿದ್ದೇನೆ ಎಂದು ಹೇಳಬಲ್ಲೆ. ವೇದೋಕ್ತವಾದ ಕ್ರತುವನ್ನು ಮಾಡಿಸುತ್ತಿರುವ ನಾನು ಯಾವ ಅಪರಾಧವನ್ನೂ ಎಸಗುತ್ತಿಲ್ಲ!””
14028027 ಬ್ರಾಹ್ಮಣ ಉವಾಚ।
14028027a ಉಪಪತ್ತ್ಯಾ ಯತಿಸ್ತೂಷ್ಣೀಂ ವರ್ತಮಾನಸ್ತತಃ ಪರಮ್।
14028027c ಅಧ್ವರ್ಯುರಪಿ ನಿರ್ಮೋಹಃ ಪ್ರಚಚಾರ ಮಹಾಮಖೇ।।
ಬ್ರಾಹ್ಮಣನು ಹೇಳಿದನು: “ಇದನ್ನು ಕೇಳಿ ಯತಿಯು ಸುಮ್ಮನಾದನು. ಅಧ್ವರ್ಯುವೂ ಕೂಡ ಆ ಮಹಾಯಜ್ಞವನ್ನು ಮುಂದುವರಿಸಿದನು.
14028028a ಏವಮೇತಾದೃಶಂ ಮೋಕ್ಷಂ ಸುಸೂಕ್ಷ್ಮಂ ಬ್ರಾಹ್ಮಣಾ ವಿದುಃ।
14028028c ವಿದಿತ್ವಾ ಚಾನುತಿಷ್ಠಂತಿ ಕ್ಷೇತ್ರಜ್ಞೇನಾನುದರ್ಶಿನಾ।।
ಹೀಗೆ ಮೋಕ್ಷವು ಅತ್ಯಂತ ಸೂಕ್ಷ್ಮ ಸ್ವರೂಪವುಳ್ಳದ್ದು ಎಂದು ಬ್ರಾಹ್ಮಣರು ತಿಳಿದಿರುತ್ತಾರೆ. ಇದನ್ನು ತಿಳಿದೇ ಅವರು ಕ್ಷೇತ್ರಜ್ಞನು ತೋರಿಸಿಕೊಟ್ಟಂತೆ ನಡೆದುಕೊಳ್ಳುತ್ತಾರೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಅಷ್ಟಾವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ತೆಂಟನೇ ಅಧ್ಯಾಯವು.