ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 27
ಸಾರ
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (1-25).
14027001 ಬ್ರಾಹ್ಮಣ ಉವಾಚ।
14027001a ಸಂಕಲ್ಪದಂಶಮಶಕಂ ಶೋಕಹರ್ಷಹಿಮಾತಪಮ್।
14027001c ಮೋಹಾಂಧಕಾರತಿಮಿರಂ ಲೋಭವ್ಯಾಲಸರೀಸೃಪಮ್।।
14027002a ವಿಷಯೈಕಾತ್ಯಯಾಧ್ವಾನಂ ಕಾಮಕ್ರೋಧವಿರೋಧಕಮ್।
14027002c ತದತೀತ್ಯ ಮಹಾದುರ್ಗಂ ಪ್ರವಿಷ್ಟೋಽಸ್ಮಿ ಮಹದ್ವನಮ್।।
ಬ್ರಾಹ್ಮಣನು ಹೇಳಿದನು: “ಸಂಕಲ್ಪಗಳೇ ಕಾಡುನೊಣ-ಸೊಳ್ಳೆಗಳಂತಿರುವ, ಶೋಕ-ಹರ್ಷಗಳೇ ಛಳಿ-ಬಿಸಿಲುಗಳಂತಿರುವ, ಮೋಹಾಂಧಕಾರವೇ ಕತ್ತಲೆಯಂತಿರುವ, ಲೋಭವೇ ಹರಿಯುವ ಸರ್ಪಗಳಂತಿರುವ, ವಿಷಯಗಳೆಂಬ ಅಡಚಣೆಗಳನ್ನು ಒಬ್ಬನೇ ದಾಟಿಹೋಗಬೇಕಾದ, ಕಾಮ-ಕ್ರೋಧಗಳೆಂಬ ವಿರೋಧವಿರುವ ಮಹಾದುರ್ಗವನ್ನು ದಾಟಿ ನಾನೊಂದು ಮಹಾವನವನ್ನು ಪ್ರವೇಶಿಸಿದ್ದೇನೆ!”
14027003 ಬ್ರಾಹ್ಮಣ್ಯುವಾಚ।
14027003a ಕ್ವ ತದ್ವನಂ ಮಹಾಪ್ರಾಜ್ಞ ಕೇ ವೃಕ್ಷಾಃ ಸರಿತಶ್ಚ ಕಾಃ।
14027003c ಗಿರಯಃ ಪರ್ವತಾಶ್ಚೈವ ಕಿಯತ್ಯಧ್ವನಿ ತದ್ವನಮ್।।
ಬ್ರಾಹ್ಮಣಿಯು ಹೇಳಿದಳು: “ಮಹಾಪ್ರಾಜ್ಞ! ಆ ವನವು ಎಲ್ಲಿದೆ? ಅದರಲ್ಲಿರುವ ವೃಕ್ಷಗಳು ಯಾವುವು? ನದಿ-ಝರಿಗಳು ಯಾವುವು? ಗಿರಿ-ಪರ್ವತಗಳು ಯಾವುವು? ಮತ್ತು ಆ ವನವು ಎಷ್ಟು ದೂರದಲ್ಲಿದೆ?”
14027004 ಬ್ರಾಹ್ಮಣ ಉವಾಚ।
114027004a ನ ತದಸ್ತಿ ಪೃಥಗ್ಭಾವೇ ಕಿಂ ಚಿದನ್ಯತ್ತತಃ ಸಮಮ್।
14027004c ನ ತದಸ್ತ್ಯಪೃಥಗ್ಭಾವೇ ಕಿಂ ಚಿದ್ದೂರತರಂ ತತಃ।।
ಬ್ರಾಹ್ಮಣನು ಹೇಳಿದನು: “ಇದರಿಂದ ಪ್ರತ್ಯೇಕವಾದ ಬೇರೆ ಯಾವುದೂ ಇಲ್ಲ ಎನ್ನುವುದಕ್ಕಿಂತ ಹೆಚ್ಚಿನ ಸಮಭಾವವು ಬೇರೆ ಏನಿದೆ? ಪ್ರತ್ಯೇಕತೆಯ ಭಾವವೇ ಇಲ್ಲದಿರುವಾಗ ಇದಕ್ಕಿಂತಲೂ ಹತ್ತಿರವಾದುದು ಏನಿದೆ?
214027005a ತಸ್ಮಾದ್ಧ್ರಸ್ವತರಂ ನಾಸ್ತಿ ನ ತತೋಽಸ್ತಿ ಬೃಹತ್ತರಮ್।
14027005c ನಾಸ್ತಿ ತಸ್ಮಾದ್ದುಃಖತರಂ ನಾಸ್ತ್ಯನ್ಯತ್ತತ್ಸಮಂ ಸುಖಮ್।।
ಅದಕ್ಕಿಂತ ಚಿಕ್ಕುದಾದುದು ಇಲ್ಲ. ಅದಕ್ಕಿಂತ ದೊಡ್ದದಾದುದೂ ಇಲ್ಲ. ಅದಕ್ಕಿಂತಲೂ ಹೆಚ್ಚಿನ ದುಃಖವಿಲ್ಲ. ಅದಕ್ಕಿಂತಲೂ ಹೆಚ್ಚಿನ ಸುಖವೂ ಇಲ್ಲ.
14027006a ನ ತತ್ಪ್ರವಿಶ್ಯ ಶೋಚಂತಿ ನ ಪ್ರಹೃಷ್ಯಂತಿ ಚ ದ್ವಿಜಾಃ।
14027006c ನ ಚ ಬಿಭ್ಯತಿ ಕೇಷಾಂ ಚಿತ್ತೇಭ್ಯೋ ಬಿಭ್ಯತಿ ಕೇ ಚ ನ।।
ಅದನ್ನು ಪ್ರವೇಶಿಸಿ ದ್ವಿಜರು ಶೋಕಿಸುವುದಿಲ್ಲ ಮತ್ತು ಹರ್ಷಿತರೂ ಆಗುವುದಿಲ್ಲ. ಅಲ್ಲಿ ಯಾರಿಂದಲೂ ಭಯವಿಲ್ಲ. ಅವರಿಂದಲೂ ಅಲ್ಲಿ ಯಾರಿಗೂ ಭಯವಿಲ್ಲ.
14027007a ತಸ್ಮಿನ್ವನೇ ಸಪ್ತ ಮಹಾದ್ರುಮಾಶ್ಚ ಫಲಾನಿ ಸಪ್ತಾತಿಥಯಶ್ಚ ಸಪ್ತ।
14027007c ಸಪ್ತಾಶ್ರಮಾಃ ಸಪ್ತ ಸಮಾಧಯಶ್ಚ ದೀಕ್ಷಾಶ್ಚ ಸಪ್ತೈತದರಣ್ಯರೂಪಮ್।।
ಆ ವನದಲ್ಲಿ ಏಳು ಮಹಾವೃಕ್ಷಗಳೂ3, ಏಳು ಫಲಗಳೂ4, ಏಳು ಅತಿಥಿಗಳೂ5, ಏಳು ಆಶ್ರಮಗಳೂ6, ಏಳು ದೀಕ್ಷೆಗಳೂ7 ಇವೆ. ಇದು ಆ ಅರಣ್ಯದ ರೂಪವು.
14027008a ಪಂಚವರ್ಣಾನಿ ದಿವ್ಯಾನಿ ಪುಷ್ಪಾಣಿ ಚ ಫಲಾನಿ ಚ।
14027008c ಸೃಜಂತಃ ಪಾದಪಾಸ್ತತ್ರ ವ್ಯಾಪ್ಯ ತಿಷ್ಠಂತಿ ತದ್ವನಮ್।।
ಐದು ಬಣ್ಣಗಳ ದಿವ್ಯ ಪುಷ್ಪ-ಫಲಗಳನ್ನು ನೀಡುವ ವೃಕ್ಷಗಳು ಆ ವನವನ್ನು ವ್ಯಾಪಿಸಿ ನಿಂತಿವೆ.
14027009a ಸುವರ್ಣಾನಿ ದ್ವಿವರ್ಣಾನಿ ಪುಷ್ಪಾಣಿ ಚ ಫಲಾನಿ ಚ।
14027009c ಸೃಜಂತಃ ಪಾದಪಾಸ್ತತ್ರ ವ್ಯಾಪ್ಯ ತಿಷ್ಠಂತಿ ತದ್ವನಮ್।।
ಸುಂದರವಾದ ಎರಡು ಬಣ್ಣಗಳ ಪುಷ್ಪ-ಫಲಗಳನ್ನು ನೀಡುವ ವೃಕ್ಷಗಳು ಆ ವನವನ್ನು ವ್ಯಾಪಿಸಿ ನಿಂತಿವೆ.
14027010a ಚತುರ್ವರ್ಣಾನಿ ದಿವ್ಯಾನಿ ಪುಷ್ಪಾಣಿ ಚ ಫಲಾನಿ ಚ।
14027010c ಸೃಜಂತಃ ಪಾದಪಾಸ್ತತ್ರ ವ್ಯಾಪ್ಯ ತಿಷ್ಠಂತಿ ತದ್ವನಮ್।।
ನಾಲ್ಕು ಬಣ್ಣಗಳ ಪುಷ್ಪ-ಫಲಗಳನ್ನು ನೀಡುವ ವೃಕ್ಷಗಳು ಆ ವನವನ್ನು ವ್ಯಾಪಿಸಿ ನಿಂತಿವೆ.
14027011a ಶಂಕರಾಣಿ ತ್ರಿವರ್ಣಾನಿ ಪುಷ್ಪಾಣಿ ಚ ಫಲಾನಿ ಚ।
14027011c ಸೃಜಂತಃ ಪಾದಪಾಸ್ತತ್ರ ವ್ಯಾಪ್ಯ ತಿಷ್ಠಂತಿ ತದ್ವನಮ್।।
ಮಿಶ್ರಿತವಾದ ಮೂರು ಬಣ್ಣಗಳ ಪುಷ್ಪ-ಫಲಗಳನ್ನು ನೀಡುವ ವೃಕ್ಷಗಳು ಆ ವನವನ್ನು ವ್ಯಾಪಿಸಿ ನಿಂತಿವೆ.
14027012a ಸುರಭೀಣ್ಯೇಕವರ್ಣಾನಿ ಪುಷ್ಪಾಣಿ ಚ ಫಲಾನಿ ಚ।
14027012c ಸೃಜಂತಃ ಪಾದಪಾಸ್ತತ್ರ ವ್ಯಾಪ್ಯ ತಿಷ್ಠಂತಿ ತದ್ವನಮ್।।
ಸುಗಂಧಿತ ಒಂದೇ ಬಣ್ಣದ ಪುಷ್ಪ-ಫಲಗಳನ್ನು ನೀಡುವ ವೃಕ್ಷಗಳು ಆ ವನವನ್ನು ವ್ಯಾಪಿಸಿ ನಿಂತಿವೆ.
14027013a ಬಹೂನ್ಯವ್ಯಕ್ತವರ್ಣಾನಿ ಪುಷ್ಪಾಣಿ ಚ ಫಲಾನಿ ಚ।
14027013c ವಿಸೃಜಂತೌ ಮಹಾವೃಕ್ಷೌ ತದ್ವನಂ ವ್ಯಾಪ್ಯ ತಿಷ್ಠತಃ।।
ಅನೇಕ ಅವ್ಯಕ್ತ ಬಣ್ಣಗಳ ಪುಷ್ಪ-ಫಲಗಳನ್ನು ಕೊಡುವ ಮಹಾವೃಕ್ಷಗಳೆರಡೂ ಆ ವನವನ್ನು ವ್ಯಾಪಿಸಿ ನಿಂತಿವೆ.
14027014a ಏಕೋ ಹ್ಯಗ್ನಿಃ ಸುಮನಾ ಬ್ರಾಹ್ಮಣೋಽತ್ರ ಪಂಚೇಂದ್ರಿಯಾಣಿ ಸಮಿಧಶ್ಚಾತ್ರ ಸಂತಿ।
14027014c ತೇಭ್ಯೋ ಮೋಕ್ಷಾಃ ಸಪ್ತ ಭವಂತಿ ದೀಕ್ಷಾ ಗುಣಾಃ ಫಲಾನ್ಯತಿಥಯಃ ಫಲಾಶಾಃ।।
ಅಲ್ಲಿ ಒಂದೇ ಅಗ್ನಿಯಿದೆ. ಮನಸ್ಸೇ ಬ್ರಾಹ್ಮಣನು. ಐದು ಇಂದ್ರಿಯಗಳು ಸಮಿಧೆಗಳು. ಏಳು ದೀಕ್ಷೆಗಳಿಂದ ಏಳು ಮೋಕ್ಷಗಳು ದೊರೆಯುತ್ತವೆ. ಗುಣಗಳೇ ಅತಿಥಿಗಳು ಭುಂಜಿಸುವ ಫಲಗಳು.
14027015a ಆತಿಥ್ಯಂ ಪ್ರತಿಗೃಹ್ಣಂತಿ ತತ್ರ ಸಪ್ತ ಮಹರ್ಷಯಃ।
14027015c ಅರ್ಚಿತೇಷು ಪ್ರಲೀನೇಷು ತೇಷ್ವನ್ಯದ್ರೋಚತೇ ವನಮ್।।
ಅಲ್ಲಿ ಸಪ್ತ ಮಹರ್ಷಿಗಳು ಆತಿಥ್ಯವನ್ನು ಸ್ವೀಕರಿಸುತ್ತಾರೆ. ಅರ್ಚಿತಗೊಂಡ ಅವರು ಲಯಹೊಂದುತ್ತಾರೆ. ಆಗ ಆ ವನವು ಅನ್ಯರೂಪದಿಂದ ಪ್ರಕಾಶಿಸುತ್ತದೆ.
14027016a ಪ್ರತಿಜ್ಞಾವೃಕ್ಷಮಫಲಂ[^8] ಶಾಂತಿಚ್ಚಾಯಾಸಮನ್ವಿತಮ್।
14027016c ಜ್ಞಾನಾಶ್ರಯಂ ತೃಪ್ತಿತೋಯಮಂತಃಕ್ಷೇತ್ರಜ್ಞಭಾಸ್ಕರಮ್।।
ಆ ವನದಲ್ಲಿ ಹಣ್ಣಿಲ್ಲದ ವೃಕ್ಷವೇ ಪ್ರತಿಜ್ಞೆ. ಆ ವೃಕ್ಷದಡಿಯಲ್ಲಿ ಶಾಂತಿಯೆಂಬ ನೆರಳಿದೆ. ಜ್ಞಾನವು ಅದರಡಿಯಲ್ಲಿ ಆಶ್ರಯವನ್ನು ಹೊಂದಿರುತ್ತದೆ. ತೃಪ್ತಿಯೇ ಅದಕ್ಕೆ ಹಾಕುವ ನೀರು. ಆ ವೃಕ್ಷದಲ್ಲಿ ಕ್ಷೇತ್ರಜ್ಞ ಸೂರ್ಯನು ಬೆಳಗುತ್ತಿರುತ್ತಾನೆ.
14027017a ಯೇಽಧಿಗಚ್ಚಂತಿ ತತ್ಸಂತಸ್ತೇಷಾಂ ನಾಸ್ತಿ ಭಯಂ ಪುನಃ।
14027017c ಊರ್ಧ್ವಂ ಚಾವಾಕ್ಚ ತಿರ್ಯಕ್ಚ ತಸ್ಯ ನಾಂತೋಽಧಿಗಮ್ಯತೇ।।
ಆ ವೃಕ್ಷದಡಿಯಲ್ಲಿ ಆಶ್ರಯಹೊಂದಿದ ಸಂತರಿಗೆ ಪುನಃ ಭಯವೇ ಇರುವುದಿಲ್ಲ. ಕೊನೆಯೇ ಇಲ್ಲದ ಆ ವೃಕ್ಷವು ಮೇಲೆ, ಕೆಳಗೆ, ಮತ್ತು ಅಡ್ಡವಾಗಿ ಬೆಳೆದಿರುತ್ತದೆ.
14027018a ಸಪ್ತ ಸ್ತ್ರಿಯಸ್ತತ್ರ ವಸಂತಿ ಸದ್ಯೋ ಅವಾಙ್ಮುಖಾ ಭಾನುಮತ್ಯೋ ಜನಿತ್ರ್ಯಃ।
14027018c ಊರ್ಧ್ವಂ ರಸಾನಾಂ ದದತೇ ಪ್ರಜಾಭ್ಯಃ ಸರ್ವಾನ್ಯಥಾ ಸರ್ವಮನಿತ್ಯತಾಂ ಚ।।
ಅಲ್ಲಿ ಸದಾ ಅಧೋಮುಖರಾಗಿ ಪ್ರಕಾಶಿಸುವ ಏಳು ಜನನೀ ಸ್ತ್ರೀಯರು ವಾಸಿಸಿರುತ್ತಾರೆ. ಅನಿತ್ಯತೆಯು ಎಲ್ಲವನ್ನೂ ಸ್ವೀಕರಿಸುವಂತೆ ಮೇಲಿರುವ ಪ್ರಜೆಗಳಿಂದ ಉತ್ತಮ ರಸವನ್ನು ಅವರು ಸ್ವೀಕರಿಸುತ್ತಾರೆ.
14027019a ತತ್ರೈವ ಪ್ರತಿತಿಷ್ಠಂತಿ ಪುನಸ್ತತ್ರೋದಯಂತಿ ಚ।
14027019c ಸಪ್ತ ಸಪ್ತರ್ಷಯಃ ಸಿದ್ಧಾ ವಸಿಷ್ಠಪ್ರಮುಖಾಃ ಸಹ।।
ಅಲ್ಲಿಯೇ ವಸಿಷ್ಠ ಪ್ರಮುಖರಾದ ಸಪ್ತ ಋಷಿಗಳು ವಾಸಿಸುತ್ತಾರೆ ಮತ್ತು ಪುನಃ ಅಲ್ಲಿಂದಲೇ ಉದಯಿಸುತ್ತಾರೆ.
14027020a ಯಶೋ ವರ್ಚೋ ಭಗಶ್ಚೈವ ವಿಜಯಃ ಸಿದ್ಧಿತೇಜಸೀ।
14027020c ಏವಮೇವಾನುವರ್ತಂತೇ ಸಪ್ತ ಜ್ಯೋತೀಂಷಿ ಭಾಸ್ಕರಮ್।।
ಹೀಗೆಯೇ ಯಶಸ್ಸು, ವರ್ಚಸ್ಸು, ಐಶ್ವರ್ಯ, ಮಹಾತ್ಮೆ, ವಿಜಯ, ಸಿದ್ಧಿ, ಮತ್ತು ತೇಜಸ್ಸು ಈ ಏಳು ಜ್ಯೋತಿಗಳೂ ಭಾಸ್ಕರನನ್ನು ಅನುಸರಿಸಿ ಹೋಗುತ್ತವೆ.
14027021a ಗಿರಯಃ ಪರ್ವತಾಶ್ಚೈವ ಸಂತಿ ತತ್ರ ಸಮಾಸತಃ।
14027021c ನದ್ಯಶ್ಚ ಸರಿತೋ ವಾರಿ ವಹಂತ್ಯೋ ಬ್ರಹ್ಮಸಂಭವಮ್।।
ಗಿರಿಗಳೂ, ಪರ್ವತಗಳು, ಬ್ರಹ್ಮಸಂಭವ ನೀರಿನಿಂದ ಹರಿಯುವ ನದಿ-ಸರಿತ್ತುಗಳೂ ಅಲ್ಲಿ ಇವೆ.
14027022a ನದೀನಾಂ ಸಂಗಮಸ್ತತ್ರ ವೈತಾನಃ ಸಮುಪಹ್ವರೇ।
14027022c ಸ್ವಾತ್ಮತೃಪ್ತಾ ಯತೋ ಯಾಂತಿ ಸಾಕ್ಷಾದ್ದಾಂತಾಃ ಪಿತಾಮಹಮ್।।
ಅಲ್ಲಿ ನಿಗೂಢ ಪ್ರದೇಶಗಳಲ್ಲಿ ಆತ್ಮತೃಪ್ತ ಯತಿಗಳನ್ನು ಸಾಕ್ಷಾತ್ ಪಿತಾಮಹನೆಡೆಗೆ ಕೊಂಡೊಯ್ಯುವ ನದಿಗಳ ಯಾಗ ಸಂಗಮಗಳೂ ಇವೆ.
14027023a ಕೃಶಾಶಾಃ ಸುವ್ರತಾಶಾಶ್ಚ ತಪಸಾ ದಗ್ಧಕಿಲ್ಬಿಷಾಃ।
14027023c ಆತ್ಮನ್ಯಾತ್ಮಾನಮಾವೇಶ್ಯ ಬ್ರಹ್ಮಾಣಂ ಸಮುಪಾಸತೇ।।
ಆಸೆಗಳನ್ನು ಕ್ಷಣಿಸಿದವರೂ, ಸುವ್ರತರೂ, ತಪಸ್ಸಿನಿಂದ ಪಾಪಗಳನ್ನು ಸುಟ್ಟವರೂ ಅಲ್ಲಿ ಅತ್ಮನಿಂದ ಆತ್ಮನನ್ನು ಪ್ರವೇಶಿಸಿ ಬ್ರಹ್ಮನನ್ನು ಉಪಾಸಿಸುತ್ತಾರೆ.
14027024a ಋಚಮಪ್ಯತ್ರ ಶಂಸಂತಿ ವಿದ್ಯಾರಣ್ಯವಿದೋ ಜನಾಃ।
14027024c ತದರಣ್ಯಮಭಿಪ್ರೇತ್ಯ ಯಥಾಧೀರಮಜಾಯತ।।
ವಿದ್ಯೆಯ ಈ ಅರಣ್ಯವನ್ನು ತಿಳಿದ ಜನರು ಅಲ್ಲಿ ಸತ್ಯವನ್ನೇ ನುಡಿಯುತ್ತಾರೆ. ಆ ಅರಣ್ಯವನ್ನು ಸೇರಿ ಧೀರರಾಗಿಯೇ ಹುಟ್ಟುತ್ತಾರೆ.
14027025a ಏತದೇತಾದೃಶಂ ದಿವ್ಯಮರಣ್ಯಂ ಬ್ರಾಹ್ಮಣಾ ವಿದುಃ।
14027025c ವಿದಿತ್ವಾ ಚಾನ್ವತಿಷ್ಠಂತ ಕ್ಷೇತ್ರಜ್ಞೇನಾನುದರ್ಶಿತಮ್।।
ಇಂತಹ ದಿವ್ಯ ಅರಣ್ಯವನ್ನು ಬ್ರಾಹ್ಮಣರು ತಿಳಿದಿರುತ್ತಾರೆ. ಇದನ್ನು ತಿಳಿದು ಅವರು ಕ್ಷೇತ್ರಜ್ಞನಿಂದ ಉಪದೇಶಿಸಲ್ಪಟ್ಟು ಅದರಂತೆಯೇ ನಡೆದುಕೊಳ್ಳುತ್ತಾರೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಸಪ್ತವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ತೇಳನೇ ಅಧ್ಯಾಯವು.
-
ತಸ್ಮಾದ್ಧ್ರಸ್ವತರಂ ನಾಸ್ತಿ ನ ತತೋಽಸ್ತಿ ಮಹತ್ತರಮ್। ನಾಸ್ತಿ ತಸ್ಮಾತ್ಸೂಕ್ಷ್ಮತರಂ ನಾಸ್ತ್ಯನ್ಯತ್ತತ್ಸಮಂ ಸುಖಮ್।। ಅರ್ಥಾತ್ ಅದಕ್ಕಿಂತಲೂ ಚಿಕ್ಕುದಾದ ಅಥವಾ ದೊಡ್ಡದಾದುದು ಇಲ್ಲ. ಅದಕ್ಕಿಂತಲೂ ಸೂಕ್ಷ್ಮವಾದುದು ಯಾವುದೂ ಇಲ್ಲ. ಅಲ್ಲಿ ದೊರಕುವ ಸುಖಕ್ಕೆ ಸಮನಾದ ಸುಖವು ಮತ್ತೆಲ್ಲೂ ದೊರಕುವುದಿಲ್ಲ ಎಂಬ ಪಾಠಾಂತರವಿದೆ. ↩︎
-
ಘ್ರಾಣ, ಜಿಹ್ವೆ, ಚಕ್ಷುಸ್ಸು, ತ್ವಚ, ಶ್ರೋತ್ರ, ಮನಸ್ಸು ಮತ್ತು ಬುದ್ಧಿ ಈ ಏಳು ಮಹಾವೃಕ್ಷಗಳು. ↩︎
-
ಗಂಧ, ರಸ, ರೂಪ, ಶಬ್ಧ, ಸ್ಪರ್ಶ, ಮಂತ್ರ ಮತ್ತು ಬೋಧ ಈ ಏಳು ಫಲಗಳು. ↩︎
-
ಘ್ರಾತಾ, ಭಕ್ಷಯಿತಾ, ದ್ರಷ್ಟಾ, ವಕ್ತಾ, ಶ್ರೋತಾ, ಮಂತಾ ಮತ್ತು ಬೋದ್ಧಾ ಇವು ಏಳು ಅತಿಥಿಗಳು. ↩︎
-
ಸಪ್ತಋಷಿಗಳ ಏಳು ಆಶ್ರಮಗಳು. ↩︎
-
ಅಹಿಂಸೆ, ಸತ್ಯ, ಅಕ್ರೋಧ, ತ್ಯಾಗ, ಶಾಂತಿ, ಅಪೈಶುನ (ಚಾಡಿಹೇಳದಿರುವುದು) ಮತ್ತು ಪ್ರಾಣಿಗಳಲ್ಲಿ ದಯೆ ಇವೇ ಏಳು ದೀಕ್ಷೆಗಳು. ↩︎
-
ಪ್ರಜ್ಞಾವೃಕ್ಷಂ ಮೋಕ್ಷಫಲಂ ಅರ್ಥಾತ್ ಪ್ರಜ್ಞಾರೂಪದ ವೃಕ್ಷ ಮತ್ತು ಮೋಕ್ಷರೂಪದ ಫಲ ಎಂಬ ಪಾಠಾಂತರವಿದೆ. ↩︎