ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 26
ಸಾರ
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (1-18).
14026001 ಬ್ರಾಹ್ಮಣ ಉವಾಚ।
14026001a ಏಕಃ ಶಾಸ್ತಾ ನ ದ್ವಿತೀಯೋಽಸ್ತಿ ಶಾಸ್ತಾ ಯಥಾ ನಿಯುಕ್ತೋಽಸ್ಮಿ ತಥಾ ಚರಾಮಿ।
14026001c ಹೃದ್ಯೇಷ ತಿಷ್ಠನ್ಪುರುಷಃ ಶಾಸ್ತಿ ಶಾಸ್ತಾ ತೇನೈವ ಯುಕ್ತಃ ಪ್ರವಣಾದಿವೋದಕಮ್।।
ಬ್ರಾಹ್ಮಣನು ಹೇಳಿದನು: “ಶಾಸಕನು ಒಬ್ಬನೇ. ಇನ್ನೊಬ್ಬ ಶಾಸಕನಿಲ್ಲ. ಅವನ ನಿಯೋಗದಂತೆಯೇ ನಡೆಯುತ್ತೇನೆ. ಹೃದಯದಲ್ಲಿರುವ ಈ ಶಾಸಕನು ಶಾಸನಮಾಡುತ್ತಾನೆ. ಇಳಿಜಾರಿನಲ್ಲಿ ಹರಿಯುವ ನೀರಿನಂತೆ ನಾನು ಅವನ ಕಡೆಯೇ ನಡೆಯುತ್ತೇನೆ.
14026002a ಏಕೋ ಗುರುರ್ನಾಸ್ತಿ ತತೋ ದ್ವಿತೀಯೋ ಯೋ ಹೃಚ್ಚಯಸ್ತಮಹಮನುಬ್ರವೀಮಿ।
14026002c ತೇನಾನುಶಿಷ್ಟಾ ಗುರುಣಾ ಸದೈವ ಪರಾಭೂತಾ ದಾನವಾಃ ಸರ್ವ ಏವ।।
ಗುರುವು ಒಬ್ಬನೇ. ಇನ್ನೊಬ್ಬನಿಲ್ಲ. ಹೃದಯದಲ್ಲಿ ನೆಲೆಸಿರುವ ಅವನ ಕುರಿತು ಹೇಳುತ್ತಿದ್ದೇನೆ. ಆ ಗುರುವಿನ ಅನುಶಾಸನದಿಂದಲೇ ದಾನವರೆಲ್ಲರೂ ಸದಾ ಪರಾಭವರಾಗುತ್ತಾರೆ.
14026003a ಏಕೋ ಬಂಧುರ್ನಾಸ್ತಿ ತತೋ ದ್ವಿತೀಯೋ ಯೋ ಹೃಚ್ಚಯಸ್ತಮಹಮನುಬ್ರವೀಮಿ।
14026003c ತೇನಾನುಶಿಷ್ಟಾ ಬಾಂಧವಾ ಬಂಧುಮಂತಃ ಸಪ್ತರ್ಷಯಃ ಸಪ್ತ ದಿವಿ ಪ್ರಭಾಂತಿ।।
ಅವನೊಬ್ಬನೇ ಬಂಧುವು. ಇನ್ನೊಬ್ಬ ಬಂಧುವಿಲ್ಲ. ಹೃದಯದಲ್ಲಿ ನೆಲೆಸಿರುವ ಅವನ ಕುರಿತು ಹೇಳುತ್ತಿದ್ದೇನೆ. ಅವನ ಆಜ್ಞೆಯಂತೆಯೇ ಬಾಂಧವರು ಬಂಧುಗಳನ್ನು ಪಡೆಯುತ್ತಾರೆ ಮತ್ತು ಸಪ್ತರ್ಷಿಗಳು ದಿವಿಯಲ್ಲಿ ಪ್ರಕಾಶಿಸುತ್ತಾರೆ.
14026004a ಏಕಃ ಶ್ರೋತಾ ನಾಸ್ತಿ ತತೋ ದ್ವಿತೀಯೋ ಯೋ ಹೃಚ್ಚಯಸ್ತಮಹಮನುಬ್ರವೀಮಿ।
14026004c ತಸ್ಮಿನ್ಗುರೌ ಗುರುವಾಸಂ ನಿರುಷ್ಯ ಶಕ್ರೋ ಗತಃ ಸರ್ವಲೋಕಾಮರತ್ವಮ್।।
ಕೇಳುವವನು ಅವನೊಬ್ಬನೇ. ಇನ್ನೊಬ್ಬನಿಲ್ಲ. ಹೃದಯದಲ್ಲಿ ನೆಲೆಸಿರುವ ಅವನ ಕುರಿತು ಹೇಳುತ್ತಿದ್ದೇನೆ. ಅದೇ ಗುರುವಿನೊಂದಿಗೆ ಗುರುವಾಸವನ್ನು ಮಾಡಿ ಶಕ್ರನು ಸರ್ವಲೋಕದಲ್ಲಿ ಅಮರತ್ವವನ್ನು ಪಡೆದನು.
14026005a ಏಕೋ ದ್ವೇಷ್ಟಾ ನಾಸ್ತಿ ತತೋ ದ್ವಿತೀಯೋ ಯೋ ಹೃಚ್ಚಯಸ್ತಮಹಮನುಬ್ರವೀಮಿ।
14026005c ತೇನಾನುಶಿಷ್ಟಾ ಗುರುಣಾ ಸದೈವ ಲೋಕದ್ವಿಷ್ಟಾಃ ಪನ್ನಗಾಃ ಸರ್ವ ಏವ।।
ದ್ವೇಷಿಯೊಬ್ಬನೇ ಇದ್ದಾನೆ. ಇನ್ನೊಬ್ಬನಿಲ್ಲ. ಹೃದಯದಲ್ಲಿ ನೆಲೆಸಿರುವ ಅವನ ಕುರಿತು ಹೇಳುತ್ತಿದ್ದೇನೆ. ಆ ಗುರುವಿನಿಂದ ಉಪದೇಶಿಸಲ್ಪಟ್ಟು ಪನ್ನಗಗಳು ಎಲ್ಲವೂ ಲೋಕದ ದ್ವೇಷಿಗಳಾದವು.
14026006a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
14026006c ಪ್ರಜಾಪತೌ ಪನ್ನಗಾನಾಂ ದೇವರ್ಷೀಣಾಂ ಚ ಸಂವಿದಮ್।।
ಇದರ ಕುರಿತು ಪ್ರಜಾಪತಿಯು ಪನ್ನಗ ಮತ್ತು ದೇವರ್ಷಿಗಳಿಗೆ ನಿಯಮಿಸಿದ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
14026007a ದೇವರ್ಷಯಶ್ಚ ನಾಗಾಶ್ಚ ಅಸುರಾಶ್ಚ ಪ್ರಜಾಪತಿಮ್।
14026007c ಪರ್ಯಪೃಚ್ಚನ್ನುಪಾಸೀನಾಃ ಶ್ರೇಯೋ ನಃ ಪ್ರೋಚ್ಯತಾಮಿತಿ।।
ದೇವರ್ಷಿಗಳು, ನಾಗಗಳು ಮತ್ತು ಅಸುರರು ಪ್ರಜಾಪತಿಯ ಬಳಿಸಾರಿ ನಮಗೆ ಶ್ರೇಯಸ್ಸುಂಟಾಗುವುದನ್ನು ಹೇಳು ಎಂದು ಕೇಳಿಕೊಂಡರು.
14026008a ತೇಷಾಂ ಪ್ರೋವಾಚ ಭಗವಾನ್ಶ್ರೇಯಃ ಸಮನುಪೃಚ್ಚತಾಮ್।
14026008c ಓಮಿತ್ಯೇಕಾಕ್ಷರಂ ಬ್ರಹ್ಮ ತೇ ಶ್ರುತ್ವಾ ಪ್ರಾದ್ರವನ್ ದಿಶಃ।।
ಶ್ರೇಯಸ್ಸೇನೆಂದು ಕೇಳಿದ ಅವರಿಗೆ ಭಗವಾನ್ ಬ್ರಹ್ಮನು ಓಂ ಎಂದು ಏಕಾಕ್ಷರವನ್ನು ಹೇಳಲು ಅದನ್ನು ಕೇಳಿ ಅವರು ದಿಕ್ಕುದಿಕ್ಕುಗಳಲ್ಲಿ ಓಡಿ ಹೋದರು1.
14026009a ತೇಷಾಂ ಪ್ರಾದ್ರವಮಾಣಾನಾಮುಪದೇಶಾರ್ಥಮಾತ್ಮನಃ।
14026009c ಸರ್ಪಾಣಾಂ ದಶನೇ ಭಾವಃ ಪ್ರವೃತ್ತಃ ಪೂರ್ವಮೇವ ತು।।
ಓಡಿಹೋಗುತ್ತಿದ್ದ ಅವರು ತಮ್ಮ ಸ್ವಭಾವಗುಣವೇ ಶ್ರೇಯಸ್ಕರವೆಂದು ಆ ಉಪದೇಶವನ್ನು ಅರ್ಥೈಸಿಕೊಂಡರು2. ಸರ್ಪಗಳಿಗೆ ಮೊದಲಿನಿಂದಲೇ ಕಚ್ಚುವ ಸ್ವಭಾವವಿತ್ತು.
14026010a ಅಸುರಾಣಾಂ ಪ್ರವೃತ್ತಸ್ತು ದಂಭಭಾವಃ ಸ್ವಭಾವಜಃ।
14026010c ದಾನಂ ದೇವಾ ವ್ಯವಸಿತಾ ದಮಮೇವ ಮಹರ್ಷಯಃ।।
ದಂಭಭಾವವು ಸ್ವಭಾವತಃ ಅಸುರರ ಪ್ರವೃತ್ತಿಯಾಗಿತ್ತು. ದೇವತೆಗಳ ಸ್ವಭಾವವು ದಾನವೂ, ದಮವು ಮಹರ್ಷಿಗಳ ಸ್ವಭಾವವೂ ಆಗಿತ್ತು.
14026011a ಏಕಂ ಶಾಸ್ತಾರಮಾಸಾದ್ಯ ಶಬ್ದೇನೈಕೇನ ಸಂಸ್ಕೃತಾಃ।
14026011c ನಾನಾ ವ್ಯವಸಿತಾಃ ಸರ್ವೇ ಸರ್ಪದೇವರ್ಷಿದಾನವಾಃ।।
ಒಬ್ಬನೇ ಶಾಸಕನ ಬಳಿಸಾರಿ ಒಂದೇ ಶಬ್ಧದಿಂದ ಉಪದೇಶಿಸಲ್ಪಟ್ಟ ಸರ್ಪ-ದೇವರ್ಷಿ-ದಾನವರು ಎಲ್ಲರೂ ನಾನಾ ವರ್ತನೆಗಳಲ್ಲಿ ತೊಡಗಿದರು.
14026012a ಶೃಣೋತ್ಯಯಂ ಪ್ರೋಚ್ಯಮಾನಂ ಗೃಹ್ಣಾತಿ ಚ ಯಥಾತಥಮ್।
14026012c ಪೃಚ್ಚತಸ್ತಾವತೋ ಭೂಯೋ ಗುರುರನ್ಯೋಽನುಮನ್ಯತೇ।।
ಗುರುವು ಹೇಳುವುದನ್ನು ಶಿಷ್ಯನು ಕೇಳುತ್ತಾನೆ. ಆದರೆ ಅದನ್ನು ಅವನು ತನ್ನ ಸ್ವಭಾವಕ್ಕೆ ಅನುಗುಣವಾಗಿ ಅಂಗೀಕರಿಸುತ್ತಾನೆ. ಆದುದರಿಂದ ಪ್ರಶ್ನಿಸುವ ಶಿಷ್ಯನಿಗೆ ತನ್ನ ಅಂತರ್ಯಾಮಿಗಿಂತಲೂ ಮಿಗಿಲಾದ ಗುರುವು ಬೇರೊಬ್ಬನಿಲ್ಲ.
14026013a ತಸ್ಯ ಚಾನುಮತೇ ಕರ್ಮ ತತಃ ಪಶ್ಚಾತ್ಪ್ರವರ್ತತೇ।
14026013c ಗುರುರ್ಬೋದ್ಧಾ ಚ ಶತ್ರುಶ್ಚ ದ್ವೇಷ್ಟಾ ಚ ಹೃದಿ ಸಂಶ್ರಿತಃ।।
ಅವನ ಅನುಮತಿಯಿಂದಲೇ ಕರ್ಮಗಳು ಒಂದಾದಮೇಲೆ ಒಂದರಂತೆ ನಡೆಯುತ್ತಿರುತ್ತವೆ. ಗುರು, ಶಿಷ್ಯ, ಶತ್ರು ಮತ್ತು ದ್ವೇಷಿಯು ಹೃದಯದಲ್ಲಿಯೇ ನೆಲೆಸಿರುತ್ತಾನೆ.
14026014a ಪಾಪೇನ ವಿಚರಽಲ್ಲೋಕೇ ಪಾಪಚಾರೀ ಭವತ್ಯಯಮ್।
14026014c ಶುಭೇನ ವಿಚರಽಲ್ಲೋಕೇ ಶುಭಚಾರೀ ಭವತ್ಯುತ।।
ಲೋಕದಲ್ಲಿ ಪಾಪಕರ್ಮಗಳನ್ನು ಮಾಡಿಕೊಂಡಿರುವವನು ಪಾಪಚಾರಿಯಾಗುತ್ತಾನೆ. ಶುಭಕರ್ಮಗಳನ್ನು ಮಾಡಿಕೊಂಡಿರುವವನು ಲೋಕದಲ್ಲಿ ಶುಭಚಾರಿಯಾಗುತ್ತಾನೆ.
14026015a ಕಾಮಚಾರೀ ತು ಕಾಮೇನ ಯ ಇಂದ್ರಿಯಸುಖೇ ರತಃ।
14026015c ವ್ರತವಾರೀ ಸದೈವೈಷ ಯ ಇಂದ್ರಿಯಜಯೇ ರತಃ।।
ಕಾಮಚಾರಿಯಾದವನು ಕಾಮದಿಂದ ಇಂದ್ರಿಯಸುಖಗಳಲ್ಲಿಯೇ ನಿರತನಾಗಿರುತ್ತಾನೆ. ವ್ರತವಾರಿಯಾದವನು ಸದೈವವೂ ಇಂದ್ರಿಯಗಳನ್ನು ಜಯಿಸುವುದರಲ್ಲಿಯೇ ನಿರತನಾಗಿರುತ್ತಾನೆ.
14026016a ಅಪೇತವ್ರತಕರ್ಮಾ ತು ಕೇವಲಂ ಬ್ರಹ್ಮಣಿ ಶ್ರಿತಃ।
14026016c ಬ್ರಹ್ಮಭೂತಶ್ಚರಽಲ್ಲೋಕೇ ಬ್ರಹ್ಮಚಾರೀ ಭವತ್ಯಯಮ್।।
ಯಾರು ವ್ರತ ಮತ್ತು ಕರ್ಮಗಳನ್ನು ತ್ಯಜಿಸಿ ಕೇವಲ ಬ್ರಹ್ಮನಲ್ಲಿಯೇ ಆಶ್ರಿತನಾಗಿ ಬ್ರಹ್ಮಭೂತನಾಗಿ ಇರುವನೋ ಅವನು ಲೋಕದಲ್ಲಿ ಬ್ರಹ್ಮಚಾರಿ ಎನಿಸಿಕೊಳ್ಳುವನು.
14026017a ಬ್ರಹ್ಮೈವ ಸಮಿಧಸ್ತಸ್ಯ ಬ್ರಹ್ಮಾಗ್ನಿರ್ಬ್ರಹ್ಮಸಂಸ್ತರಃ।
14026017c ಆಪೋ ಬ್ರಹ್ಮ ಗುರುರ್ಬ್ರಹ್ಮ ಸ ಬ್ರಹ್ಮಣಿ ಸಮಾಹಿತಃ।।
ಅವನಿಗೆ ಬ್ರಹ್ಮವೇ ಸಮಿತ್ತು. ಬ್ರಹ್ಮನೇ ಅಗ್ನಿ. ಬ್ರಹ್ಮವೇ ಅಗ್ನಿಯ ಮೂಲ. ಬ್ರಹ್ಮನೇ ಜಲ. ಬ್ರಹ್ಮನೇ ಗುರು. ಮತ್ತು ಅವನೂ ಕೂಡ ಬ್ರಹ್ಮನಲ್ಲಿಯೇ ಲೀನನಾಗಿರುತ್ತಾನೆ.
14026018a ಏತದೇತಾದೃಶಂ ಸೂಕ್ಷ್ಮಂ ಬ್ರಹ್ಮಚರ್ಯಂ ವಿದುರ್ಬುಧಾಃ।
14026018c ವಿದಿತ್ವಾ ಚಾನ್ವಪದ್ಯಂತ ಕ್ಷೇತ್ರಜ್ಞೇನಾನುದರ್ಶಿನಃ।।
ಇದನ್ನೇ ತಿಳಿದವರು ಸೂಕ್ಷ್ಮವಾದ ಬ್ರಹ್ಮಚರ್ಯವೆಂದು ತಿಳಿದಿರುತ್ತಾರೆ. ಇದನ್ನು ತಿಳಿದು ಕ್ಷೇತ್ರಜ್ಞನಿಂದ ತೋರಿಸಿಕೊಟ್ಟ ದಾರಿಯಲ್ಲಿಯೇ ಅವರು ಅನುಸರಿಸಿಹೋಗುತ್ತಾರೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಷಡ್ವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ತಾರನೇ ಅಧ್ಯಾಯವು.