ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 24
ಸಾರ
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (1-20).
14024001 ಬ್ರಾಹ್ಮಣ ಉವಾಚ।
14024001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
14024001c ನಾರದಸ್ಯ ಚ ಸಂವಾದಮೃಷೇರ್ದೇವಮತಸ್ಯ ಚ।।
ಬ್ರಾಹ್ಮಣನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ನಾರದ ಮತ್ತು ಋಷಿ ದೇವಮತರ ಸಂವಾದರೂಪವಾದ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
14024002 ದೇವಮತ ಉವಾಚ।
14024002a ಜಂತೋಃ ಸಂಜಾಯಮಾನಸ್ಯ ಕಿಂ ನು ಪೂರ್ವಂ ಪ್ರವರ್ತತೇ।
14024002c ಪ್ರಾಣೋಽಪಾನಃ ಸಮಾನೋ ವಾ ವ್ಯಾನೋ ವೋದಾನ ಏವ ಚ।।
ದೇವಮತನು ಹೇಳಿದನು: “ಜಂತುವು ಹುಟ್ಟುವಾಗ ಪ್ರಾಣ, ಅಪಾನ, ಸಮಾನ, ವ್ಯಾನ, ಮತ್ತು ಉದಾನಗಳಲ್ಲಿ ಯಾವುದು ಮೊದಲು ಕಾರ್ಯಪ್ರವೃತ್ತವಾಗುತ್ತದೆ?”
14024003 ನಾರದ ಉವಾಚ।
14024003a ಯೇನಾಯಂ ಸೃಜ್ಯತೇ ಜಂತುಸ್ತತೋಽನ್ಯಃ ಪೂರ್ವಮೇತಿ ತಮ್।
14024003c ಪ್ರಾಣದ್ವಂದ್ವಂ ಚ ವಿಜ್ಞೇಯಂ ತಿರ್ಯಗಂ ಚೋರ್ಧ್ವಗಂ ಚ ಯತ್।।
ನಾರದನು ಹೇಳಿದನು: “ಯಾವುದರಿಂದ ಜಂತುವು ಹುಟ್ಟುತ್ತದೆಯೋ ಅದು ಪ್ರಾಣಾದಿ ವಾಯುಗಳಿಗಿಂಥ ಭಿನ್ನವಾಗಿದ್ದು, ಮೊದಲೇ ಅದನ್ನು ಪ್ರವೇಶಿಸಿರುತ್ತದೆ. ಮೇಲೆ-ಕೆಳಗೆ ಮತ್ತು ಅಡ್ಡವಾಗಿ ಚಲಿಸುವ ಪ್ರಾಣದ್ವಂದ್ವಗಳ ಕುರಿತು ತಿಳಿದುಕೊಳ್ಳಬೇಕು.”
14024004 ದೇವಮತ ಉವಾಚ।
14024004a ಕೇನಾಯಂ ಸೃಜ್ಯತೇ ಜಂತುಃ ಕಶ್ಚಾನ್ಯಃ ಪೂರ್ವಮೇತಿ ತಮ್।
14024004c ಪ್ರಾಣದ್ವಂದ್ವಂ ಚ ಮೇ ಬ್ರೂಹಿ ತಿರ್ಯಗೂರ್ಧ್ವಂ ಚ ನಿಶ್ಚಯಾತ್।।
ದೇವಮತನು ಹೇಳಿದನು: “ಯಾವ ಕಾರಣದಿಂದ ಜಂತುವು ಜೀವಹೊಂದುತ್ತದೆ? ಮೊದಲೇ ಅದರಲ್ಲಿರುವ ಅನ್ಯ ವಸ್ತು ಯಾವುದು? ಮೇಲೆ-ಕೆಳಗೆ ಮತ್ತು ಅಡ್ಡವಾಗಿ ಚಲಿಸುವ ಪ್ರಾಣದ್ವಂದ್ವಗಳೇನು? ಇವುಗಳನ್ನು ನಿಶ್ಚಯಿಸಿ ಹೇಳು.”
14024005 ನಾರದ ಉವಾಚ।
14024005a ಸಂಕಲ್ಪಾಜ್ಜಾಯತೇ ಹರ್ಷಃ ಶಬ್ದಾದಪಿ ಚ ಜಾಯತೇ।
14024005c ರಸಾತ್ಸಂಜಾಯತೇ ಚಾಪಿ ರೂಪಾದಪಿ ಚ ಜಾಯತೇ।।
ನಾರದನು ಹೇಳಿದನು: “ಸಂಕಲ್ಪದಿಂದ ಹರ್ಷವುಂಟಾಗುತ್ತದೆ. ಶಬ್ಧವನ್ನು ಕೇಳುವುದರಿಂದಲೂ, ರಸದ ಆಸ್ವಾದನೆಯಿಂದಲೂ, ರೂಪವನ್ನು ನೋಡುವುದರಿಂದಲೂ ಹರ್ಷವುಂಟಾಗುತ್ತದೆ.
14024006a ಸ್ಪರ್ಶಾತ್ಸಂಜಾಯತೇ ಚಾಪಿ ಗಂಧಾದಪಿ ಚ ಜಾಯತೇ।
14024006c ಏತದ್ರೂಪಮುದಾನಸ್ಯ ಹರ್ಷೋ ಮಿಥುನಸಂಭವಃ।।
ಸ್ಪರ್ಶದಿಂದಲೂ ಹರ್ಷವುಂಟಾಗುತ್ತದೆ. ಮೂಸುವುದರಿಂದಲೂ ಹರ್ಷವುಂಟಾಗುತ್ತದೆ. ಮೈಥುನದಿಂದ ಹುಟ್ಟುವ ಹರ್ಷವು ಉದಾನ ಸ್ವರೂಪವು.
14024007a ಕಾಮಾತ್ಸಂಜಾಯತೇ ಶುಕ್ರಂ ಕಾಮಾತ್ಸಂಜಾಯತೇ ರಸಃ।
14024007c ಸಮಾನವ್ಯಾನಜನಿತೇ ಸಾಮಾನ್ಯೇ ಶುಕ್ರಶೋಣಿತೇ।।
ಶುಕ್ರವು ಕಾಮದಿಂದ ಹುಟ್ಟುತ್ತದೆ. ರಸವೂ ಕಾಮದಿಂದಲೇ ಹುಟ್ಟುತ್ತದೆ. ಈ ಶುಕ್ರ-ಶೋಣಿತಗಳು ಸಾಮಾನ್ಯವಾಗಿ ಸಮಾನ-ವ್ಯಾನಗಳಿಂದ ಹುಟ್ಟುತ್ತವೆ.
14024008a ಶುಕ್ರಾಚ್ಚೋಣಿತಸಂಸೃಷ್ಟಾತ್ಪೂರ್ವಂ ಪ್ರಾಣಃ ಪ್ರವರ್ತತೇ।
14024008c ಪ್ರಾಣೇನ ವಿಕೃತೇ ಶುಕ್ರೇ ತತೋಽಪಾನಃ ಪ್ರವರ್ತತೇ।।
ಶುಕ್ರ-ಶೋಣಿತಗಳು ಸೇರಿ, ಮೊದಲು ಪ್ರಾಣವು ಕಾರ್ಯಪ್ರವೃತ್ತವಾಗುತ್ತದೆ. ಪ್ರಾಣದಿಂದ ವಿಕೃತವಾದ ಶುಕ್ರದಲ್ಲಿ ಅಪಾನವು ಕಾರ್ಯಪ್ರವೃತ್ತವಾಗುತ್ತದೆ.
14024009a ಪ್ರಾಣಾಪಾನಾವಿದಂ ದ್ವಂದ್ವಮವಾಕ್ಚೋರ್ಧ್ವಂ ಚ ಗಚ್ಚತಃ।
14024009c ವ್ಯಾನಃ ಸಮಾನಶ್ಚೈವೋಭೌ ತಿರ್ಯಗ್ದ್ವಂದ್ವತ್ವಮುಚ್ಯತೇ।।
ಮೇಲೆ ಮತ್ತು ಕೆಳಕ್ಕೆ ಚಲಿಸುವ ಪ್ರಾಣ-ಅಪಾನಗಳು ಒಂದು ದ್ವಂದ್ವವಾದರೆ, ಎಡ-ಬಲಗಳಲ್ಲಿ ಅಡ್ಡವಾಗಿ ಚಲಿಸುವ ವ್ಯಾನ-ಸಮಾನಗಳಿಗೂ ದ್ವಂದ್ವವೆಂದೇ ಹೇಳುತ್ತಾರೆ.
14024010a ಅಗ್ನಿರ್ವೈ ದೇವತಾಃ ಸರ್ವಾ ಇತಿ ವೇದಸ್ಯ ಶಾಸನಮ್।
14024010c ಸಂಜಾಯತೇ ಬ್ರಾಹ್ಮಣೇಷು ಜ್ಞಾನಂ ಬುದ್ಧಿಸಮನ್ವಿತಮ್।।
ಅಗ್ನಿಯೇ ಸರ್ವ ದೇವತಾಸ್ವರೂಪನು ಎಂದು ವೇದದ ಶಾಸನವಾಗಿದೆ. ಅಗ್ನಿಯಿಂದಲೇ ಬ್ರಾಹ್ಮಣನಲ್ಲಿ ಬುದ್ಧಿಸಮನ್ವಿತ ಜ್ಞಾನವು ಹುಟ್ಟುತ್ತದೆ.
14024011a ತಸ್ಯ ಧೂಮಸ್ತಮೋರೂಪಂ ರಜೋ ಭಸ್ಮ ಸುರೇತಸಃ।
14024011c ಸತ್ತ್ವಂ ಸಂಜಾಯತೇ ತಸ್ಯ ಯತ್ರ ಪ್ರಕ್ಷಿಪ್ಯತೇ ಹವಿಃ।।
ಅಗ್ನಿಯ ಧೂಮವು ತಮೋರೂಪದ್ದೂ ಭಸ್ಮವು ರಜೋರೂಪದ್ದೂ ಆಗಿರುತ್ತದೆ. ಆ ಅಗ್ನಿಯಲ್ಲಿ ಹವಿಸ್ಸನ್ನು ಹಾಕುವುದರಿಂದ ಸತ್ತ್ವವು ಹುಟ್ಟಿಕೊಳ್ಳುತ್ತದೆ.
14024012a ಆಘಾರೌ ಸಮಾನೋ ವ್ಯಾನಶ್ಚ ಇತಿ ಯಜ್ಞವಿದೋ ವಿದುಃ।
14024012c ಪ್ರಾಣಾಪಾನಾವಾಜ್ಯಭಾಗೌ ತಯೋರ್ಮಧ್ಯೇ ಹುತಾಶನಃ।
14024012e ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ।।
ಯಜ್ಞವನ್ನು ತಿಳಿದವರು ಸಮಾನ-ವ್ಯಾನಗಳು ಆಘಾರ1ಗಳು ಮತ್ತು ಪ್ರಾಣ-ಅಪಾನಗಳು ಆಜ್ಯಭಾಗಗಳು ಎಂದು ತಿಳಿದಿದ್ದಾರೆ. ಇವುಗಳ ಮಧ್ಯೆ ಇರುವ ಹುತಾಶನನೇ ಉದಾನದ ಪರಮ ರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.
14024013a ನಿರ್ದ್ವಂದ್ವಮಿತಿ ಯತ್ತ್ವೇತತ್ತನ್ಮೇ ನಿಗದತಃ ಶೃಣು।
14024014a ಅಹೋರಾತ್ರಮಿದಂ ದ್ವಂದ್ವಂ ತಯೋರ್ಮಧ್ಯೇ ಹುತಾಶನಃ।
14024014c ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ।।
ಯಾವುದನ್ನು ನಿರ್ದ್ವಂದ್ವವೆಂದು ಕರೆಯುವರೋ ಅದರ ಕುರಿತು ಹೇಳುತ್ತೇನೆ. ಕೇಳು. ಹಗಲು-ರಾತ್ರಿಗಳು ದ್ವಂದ್ವವು. ಇವುಗಳ ಮಧ್ಯೆ ಇರುವ ಹುತಾಶನನು ನಿರ್ದ್ವಂದ್ವನು. ಇದನ್ನೇ ಉದಾನದ ಪರಮರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.
14024015a ಉಭೇ ಚೈವಾಯನೇ ದ್ವಂದ್ವಂ ತಯೋರ್ಮಧ್ಯೇ ಹುತಾಶನಃ।
14024015c ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ।।
ಉಚ್ಛ್ವಾಸ-ನಿಃಶ್ವಾಸಗಳೆರಡೂ ದ್ವಂದ್ವವು. ಇವುಗಳ ಮಧ್ಯೆ ಇರುವ ಹುತಾಶನನು ನಿರ್ದ್ವಂದ್ವನು. ಇದನ್ನೇ ಉದಾನದ ಪರಮರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.
14024016a ಉಭೇ ಸತ್ಯಾನೃತೇ ದ್ವಂದ್ವಂ ತಯೋರ್ಮಧ್ಯೇ ಹುತಾಶನಃ।
14024016c ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ।।
ಸತ್ಯ ಮತ್ತು ಅಸತ್ಯಗಳು ದ್ವಂದ್ವವು. ಇವುಗಳ ಮಧ್ಯೆ ಇರುವ ಹುತಾಶನನು ನಿರ್ದ್ವಂದ್ವನು. ಇದನ್ನೇ ಉದಾನದ ಪರಮರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.
14024017a ಉಭೇ ಶುಭಾಶುಭೇ ದ್ವಂದ್ವಂ ತಯೋರ್ಮಧ್ಯೇ ಹುತಾಶನಃ।
14024017c ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ।।
ಶುಭ-ಅಶುಭಗಳು ದ್ವಂದ್ವ. ಇವುಗಳ ಮಧ್ಯೆ ಇರುವ ಹುತಾಶನನು ನಿರ್ದ್ವಂದ್ವನು. ಇದನ್ನೇ ಉದಾನದ ಪರಮರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.
14024018a ಸಚ್ಚಾಸಚ್ಚೈವ ತದ್ದ್ವಂದ್ವಂ ತಯೋರ್ಮಧ್ಯೇ ಹುತಾಶನಃ।
14024018c ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ।।
ಇರುವಿಕೆ ಮತ್ತು ಇಲ್ಲದಿರುವಿಕೆಗಳು ದ್ವಂದ್ವ. ಇವುಗಳ ಮಧ್ಯೆ ಇರುವ ಹುತಾಶನನು ನಿರ್ದ್ವಂದ್ವನು. ಇದನ್ನೇ ಉದಾನದ ಪರಮರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.
14024019a ಪ್ರಥಮಂ ಸಮಾನೋ ವ್ಯಾನೋ ವ್ಯಸ್ಯತೇ ಕರ್ಮ ತೇನ ತತ್।
14024019c ತೃತೀಯಂ ತು ಸಮಾನೇನ ಪುನರೇವ ವ್ಯವಸ್ಯತೇ।।
ಮೊದಲು ಸಮಾನ-ವ್ಯಾನಗಳು ಕರ್ಮಗಳನ್ನು ಪ್ರಾರಂಭಿಸುತ್ತವೆ. ಮೂರನೆಯದಾಗಿ ಸಮಾನವು ಪುನಃ ಕಾರ್ಯಗತವಾಗುತ್ತದೆ.
14024020a ಶಾಂತ್ಯರ್ಥಂ ವಾಮದೇವಂ ಚ ಶಾಂತಿರ್ಬ್ರಹ್ಮ ಸನಾತನಮ್।
14024020c ಏತದ್ರೂಪಮುದಾನಸ್ಯ ಪರಮಂ ಬ್ರಾಹ್ಮಣಾ ವಿದುಃ।।
ಶಾಂತಿಗಾಗಿ ವಾಮದೇವನೂ ಶಾಂತಿಯು ಸನಾತನ ಬ್ರಹ್ಮನೂ ಆಗಿವೆ. ಇದನ್ನೇ ಉದಾನದ ಪರಮ ರೂಪವೆಂದು ಬ್ರಾಹ್ಮಣರು ತಿಳಿದುಕೊಂಡಿರುತ್ತಾರೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಚತುರ್ವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ನಾಲ್ಕನೇ ಅಧ್ಯಾಯವು.
-
ಪ್ರಧಾನಾಹುತಿಗಿಂತ ಮೊದಲು ಅಗ್ನಿಯಲ್ಲಿ ವಾಯುವ್ಯದಿಂದ ಅಗ್ನೇಯದವರೆಗೂ ನೈರುತ್ಯದಿಂದ ಈಶಾನ್ಯದವರೆಗೂ ಸರ್ವೇಂಧನಸಂಯುಕ್ತವಾಗುವಂತೆ ಪ್ರಜಾಪತಿಗೆ ಕೊಡುವ ಆಹುತಿಯೇ ಆಘಾರ. ↩︎