023: ಅನುಗೀತಾಯಾಂ ಬ್ರಾಹ್ಮಣಗೀತಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 23

ಸಾರ

ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (1-24).

14023001 ಬ್ರಾಹ್ಮಣ ಉವಾಚ।
14023001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
14023001c ಸುಭಗೇ ಪಂಚಹೋತೄಣಾಂ ವಿಧಾನಮಿಹ ಯಾದೃಶಮ್।।

ಬ್ರಾಹ್ಮಣನು ಹೇಳಿದನು: “ಸುಭಗೇ! ಪಂಚಹೋತೃಗಳ ವಿಧಾನವು ಹೇಗೆನ್ನುವುದಕ್ಕೆ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.

14023002a ಪ್ರಾಣಾಪಾನಾವುದಾನಶ್ಚ ಸಮಾನೋ ವ್ಯಾನ ಏವ ಚ।
14023002c ಪಂಚಹೋತೄನಥೈತಾನ್ವೈ ಪರಂ ಭಾವಂ ವಿದುರ್ಬುಧಾಃ।।

ಪ್ರಾಣ, ಅಪಾನ, ಉದಾನ, ಸಮಾನ ಮತ್ತು ವ್ಯಾನ ಈ ಪಂಚಹೋತೃಗಳೇ ಪರಮ ಭಾವಗಳೆಂದು ವಿದ್ವಾಂಸರು ತಿಳಿದಿರುತ್ತಾರೆ.”

14023003 ಬ್ರಾಹ್ಮಣ್ಯುವಾಚ
14023003a ಸ್ವಭಾವಾತ್ಸಪ್ತ ಹೋತಾರ ಇತಿ ತೇ ಪೂರ್ವಿಕಾ ಮತಿಃ।
14023003c ಯಥಾ ವೈ ಪಂಚ ಹೋತಾರಃ ಪರೋ ಭಾವಸ್ತಥೋಚ್ಯತಾಮ್।।

ಬ್ರಾಹ್ಮಣಿಯು ಹೇಳಿದಳು: “ಸ್ವಭಾವತಃ ಏಳು ಹೋತಾರರು ಇರುವರೆಂದು ನೀನು ನನಗೆ ಮೊದಲು ತಿಳಿಸಿದ್ದೆ. ಈಗ ಹೇಗೆ ಈ ಪಂಚಹೋತಾರರು ಪರಮಭಾವಗಳು ಎನ್ನುವುದನ್ನು ಹೇಳಬೇಕು.”

14023004 ಬ್ರಾಹ್ಮಣ ಉವಾಚ
14023004a ಪ್ರಾಣೇನ ಸಂಭೃತೋ ವಾಯುರಪಾನೋ ಜಾಯತೇ ತತಃ।
14023004c ಅಪಾನೇ ಸಂಭೃತೋ ವಾಯುಸ್ತತೋ ವ್ಯಾನಃ ಪ್ರವರ್ತತೇ।।

ಬ್ರಾಹ್ಮಣನು ಹೇಳಿದನು: “ಪ್ರಾಣದಿಂದ ಪುಷ್ಟಿಗೊಂಡ ವಾಯುವು ಅಪಾನವಾಗುತ್ತದೆ. ಅಪಾನದಿಂದ ಪುಷ್ಟಿಗೊಂಡ ವಾಯುವು ವ್ಯಾನವಾಗುತ್ತದೆ.

14023005a ವ್ಯಾನೇನ ಸಂಭೃತೋ ವಾಯುಸ್ತತೋದಾನಃ ಪ್ರವರ್ತತೇ।
14023005c ಉದಾನೇ ಸಂಭೃತೋ ವಾಯುಃ ಸಮಾನಃ ಸಂಪ್ರವರ್ತತೇ।।

ವ್ಯಾನದಿಂದ ಪುಷ್ಟಿಗೊಂಡ ವಾಯುವು ಉದಾನವಾಗುತ್ತದೆ. ಉದಾನದಿಂದ ಪುಷ್ಟಿಗೊಂಡ ವಾಯುವು ಸಮಾನವಾಗುತ್ತದೆ.

14023006a ತೇಽಪೃಚ್ಚಂತ ಪುರಾ ಗತ್ವಾ ಪೂರ್ವಜಾತಂ ಪ್ರಜಾಪತಿಮ್।
14023006c ಯೋ ನೋ ಜ್ಯೇಷ್ಠಸ್ತಮಾಚಕ್ಷ್ವ ಸ ನಃ ಶ್ರೇಷ್ಠೋ ಭವಿಷ್ಯತಿ।।

ಹಿಂದೆ ಈ ಐವರು ಎಲ್ಲರಿಗಿಂತಲೂ ಮೊದಲು ಹುಟ್ಟಿದ ಪ್ರಜಾಪತಿಯ ಬಳಿ ಹೋಗಿ “ನಮ್ಮಲ್ಲಿ ಜ್ಯೇಷ್ಠನು ಯಾರೆಂದು ಹೇಳು. ಅವನೇ ನಮ್ಮಲ್ಲಿ ಶ್ರೇಷ್ಠನೆಂದೆನಿಸಿಕೊಳ್ಳುತ್ತಾನೆ!” ಎಂದು ಕೇಳಿದವು.

14023007 ಬ್ರಹ್ಮೋವಾಚ।
14023007a ಯಸ್ಮಿನ್ಪ್ರಲೀನೇ ಪ್ರಲಯಂ ವ್ರಜಂತಿ ಸರ್ವೇ ಪ್ರಾಣಾಃ ಪ್ರಾಣಭೃತಾಂ ಶರೀರೇ।
14023007c ಯಸ್ಮಿನ್ಪ್ರಚೀರ್ಣೇ ಚ ಪುನಶ್ಚರಂತಿ ಸ ವೈ ಶ್ರೇಷ್ಠೋ ಗಚ್ಚತ ಯತ್ರ ಕಾಮಃ।।

ಬ್ರಹ್ಮನು ಹೇಳಿದನು: “ಪ್ರಾಣವಿರುವ ಶರೀರದಲ್ಲಿ ಯಾವುದು ಲಯವಾದನಂತರ ಉಳಿದೆಲ್ಲವೂ ಲಯವಾಗುತ್ತವೆಯೋ ಮತ್ತು ಯಾವುದು ಚಲಿಸುವುದರಿಂದ ಆ ಶರೀರವು ಚಲಿಸುತ್ತದೆಯೋ ಅದೇ ಶ್ರೇಷ್ಠವಾದುದು. ನಿಮಗಿಷ್ಟವಾದಲ್ಲಿಗೆ ಹೋಗಬಹುದು!”

14023008 ಪ್ರಾಣ ಉವಾಚ
14023008a ಮಯಿ ಪ್ರಲೀನೇ ಪ್ರಲಯಂ ವ್ರಜಂತಿ ಸರ್ವೇ ಪ್ರಾಣಾಃ ಪ್ರಾಣಭೃತಾಂ ಶರೀರೇ।
14023008c ಮಯಿ ಪ್ರಚೀರ್ಣೇ ಚ ಪುನಶ್ಚರಂತಿ ಶ್ರೇಷ್ಠೋ ಹ್ಯಹಂ ಪಶ್ಯತ ಮಾಂ ಪ್ರಲೀನಮ್।।

ಪ್ರಾಣವು ಹೇಳಿತು: “ನಾನು ಲಯವಾದರೆ ಪ್ರಾಣವಿರುವ ಶರೀರದಲ್ಲಿನ ಎಲ್ಲ ಪ್ರಾಣಗಳೂ ಲಯವಾಗುತ್ತವೆ. ನಾನು ಚಲಿಸಿದರೆ ಪುನಃ ಶರೀರವು ಚಲಿಸುತ್ತದೆ. ಆದುದರಿಂದ ನಿಮ್ಮೆಲ್ಲರಿಗೂ ನಾನೇ ಶ್ರೇಷ್ಠನು. ನೋಡಿ! ನಾನೀಗ ಲಯವಾಗುತ್ತೇನೆ!””

14023009 ಬ್ರಾಹ್ಮಣ ಉವಾಚ।
14023009a ಪ್ರಾಣಃ ಪ್ರಲೀಯತ ತತಃ ಪುನಶ್ಚ ಪ್ರಚಚಾರ ಹ।
14023009c ಸಮಾನಶ್ಚಾಪ್ಯುದಾನಶ್ಚ ವಚೋಽಬ್ರೂತಾಂ ತತಃ ಶುಭೇ।।

ಬ್ರಾಹ್ಮಣನು ಹೇಳಿದನು: “ಶುಭೇ! ಪ್ರಾಣವು ಲಯವಾಗಿ ಪುನಃ ಚಲಿಸತೊಡಗಿತು. ಆಗ ಸಮಾನ-ಉದಾನಗಳು ಹೀಗೆ ಹೇಳಿದವು:

14023010a ನ ತ್ವಂ ಸರ್ವಮಿದಂ ವ್ಯಾಪ್ಯ ತಿಷ್ಠಸೀಹ ಯಥಾ ವಯಮ್।
14023010c ನ ತ್ವಂ ಶ್ರೇಷ್ಠೋಽಸಿ ನಃ ಪ್ರಾಣ ಅಪಾನೋ ಹಿ ವಶೇ ತವ।
14023010e ಪ್ರಚಚಾರ ಪುನಃ ಪ್ರಾಣಸ್ತಮಪಾನೋಽಭ್ಯಭಾಷತ।।

“ನಮ್ಮಂತೆ ನೀನು ಶರೀರದಲ್ಲೆಲ್ಲಾ ವ್ಯಾಪ್ತನಾಗಿಲ್ಲ. ಆದುದರಿಂದ ನೀನು ನಮಗಿಂತಲೂ ಶ್ರೇಷ್ಠನಲ್ಲ. ಆದರೆ ಅಪಾನವು ಮಾತ್ರ ನಿನ್ನ ವಶದಲ್ಲಿದೆ ಎನ್ನುವುದು ನಿಜ.” ಪುನಃ ಪ್ರಾಣವು ಚಲಿಸತೊಡಗಲು ಅಪಾನವು ಹೇಳಿತು:

14023011a ಮಯಿ ಪ್ರಲೀನೇ ಪ್ರಲಯಂ ವ್ರಜಂತಿ ಸರ್ವೇ ಪ್ರಾಣಾಃ ಪ್ರಾಣಭೃತಾಂ ಶರೀರೇ।
14023011c ಮಯಿ ಪ್ರಚೀರ್ಣೇ ಚ ಪುನಶ್ಚರಂತಿ ಶ್ರೇಷ್ಠೋ ಹ್ಯಹಂ ಪಶ್ಯತ ಮಾಂ ಪ್ರಲೀನಮ್।।

“ನಾನು ಲಯವಾದರೆ ಪ್ರಾಣವಿರುವ ಶರೀರದಲ್ಲಿನ ಎಲ್ಲ ಪ್ರಾಣಗಳೂ ಲಯವಾಗುತ್ತವೆ. ನಾನು ಚಲಿಸಿದರೆ ಪುನಃ ಶರೀರವು ಚಲಿಸುತ್ತದೆ. ಆದುದರಿಂದ ನಿಮ್ಮೆಲ್ಲರಿಗೂ ನಾನೇ ಶ್ರೇಷ್ಠನು. ನೋಡಿ! ನಾನೀಗ ಲಯವಾಗುತ್ತೇನೆ!”

14023012a ವ್ಯಾನಶ್ಚ ತಮುದಾನಶ್ಚ ಭಾಷಮಾಣಮಥೋಚತುಃ।
14023012c ಅಪಾನ ನ ತ್ವಂ ಶ್ರೇಷ್ಠೋಽಸಿ ಪ್ರಾಣೋ ಹಿ ವಶಗಸ್ತವ।।

ಆಗ ವ್ಯಾನ-ಉದಾನಗಳು ಹೇಳಿದವು: “ಅಪಾನವೇ! ನೀನು ಶ್ರೇಷ್ಠನಲ್ಲ! ಆದರೆ ಪ್ರಾಣವು ನಿನ್ನ ವಶದಲ್ಲಿರುವುದು ಸತ್ಯ!”

14023013a ಅಪಾನಃ ಪ್ರಚಚಾರಾಥ ವ್ಯಾನಸ್ತಂ ಪುನರಬ್ರವೀತ್।
14023013c ಶ್ರೇಷ್ಠೋಽಹಮಸ್ಮಿ ಸರ್ವೇಷಾಂ ಶ್ರೂಯತಾಂ ಯೇನ ಹೇತುನಾ।।

ಅಪಾನವು ಚಲಿಸತೊಡಗಿತು. ವ್ಯಾನವು ಅವನಿಗೆ ಪುನಃ ಹೇಳಿತು: “ಎಲ್ಲರಿಗಿಂತಲೂ ನಾನೇ ಶ್ರೇಷ್ಠನಾಗಿದ್ದೇನೆ. ಏಕೆಂದು ಕೇಳಿ.

14023014a ಮಯಿ ಪ್ರಲೀನೇ ಪ್ರಲಯಂ ವ್ರಜಂತಿ ಸರ್ವೇ ಪ್ರಾಣಾಃ ಪ್ರಾಣಭೃತಾಂ ಶರೀರೇ।
14023014c ಮಯಿ ಪ್ರಚೀರ್ಣೇ ಚ ಪುನಶ್ಚರಂತಿ ಶ್ರೇಷ್ಠೋ ಹ್ಯಹಂ ಪಶ್ಯತ ಮಾಂ ಪ್ರಲೀನಮ್।।

ನಾನು ಲಯವಾದರೆ ಪ್ರಾಣವಿರುವ ಶರೀರದಲ್ಲಿನ ಎಲ್ಲ ಪ್ರಾಣಗಳೂ ಲಯವಾಗುತ್ತವೆ. ನಾನು ಚಲಿಸಿದರೆ ಪುನಃ ಶರೀರವು ಚಲಿಸುತ್ತದೆ. ಆದುದರಿಂದ ನಿಮ್ಮೆಲ್ಲರಿಗೂ ನಾನೇ ಶ್ರೇಷ್ಠನು. ನೋಡಿ! ನಾನೀಗ ಲಯವಾಗುತ್ತೇನೆ!”

14023015a ಪ್ರಾಲೀಯತ ತತೋ ವ್ಯಾನಃ ಪುನಶ್ಚ ಪ್ರಚಚಾರ ಹ।
14023015c ಪ್ರಾಣಾಪಾನಾವುದಾನಶ್ಚ ಸಮಾನಶ್ಚ ತಮಬ್ರುವನ್।
14023015e ನ ತ್ವಂ ಶ್ರೇಷ್ಠೋಽಸಿ ನೋ ವ್ಯಾನ ಸಮಾನೋ ಹಿ ವಶೇ ತವ।।

ಆಗ ವ್ಯಾನವು ಲಯಹೊಂದಿ ಪುನಃ ಚಲಿಸತೊಡಗಿತು. ಪ್ರಾಣ, ಅಪಾನ, ಉದಾನ ಮತ್ತು ಸಮಾನಗಳು ಅದಕ್ಕೆ ಹೇಳಿದವು: “ವ್ಯಾನ! ನೀನು ಶ್ರೇಷ್ಠನಲ್ಲ! ಆದರೆ ಸಮಾನವು ನಿನ್ನ ವಶದಲ್ಲಿರುವುದು ಸತ್ಯ!”

14023016a ಪ್ರಚಚಾರ ಪುನರ್ವ್ಯಾನಃ ಸಮಾನಃ ಪುನರಬ್ರವೀತ್।
14023016c ಶ್ರೇಷ್ಠೋಽಹಮಸ್ಮಿ ಸರ್ವೇಷಾಂ ಶ್ರೂಯತಾಂ ಯೇನ ಹೇತುನಾ।।

ಪುನಃ ವ್ಯಾನವು ಸಂಚರಿಸತೊಡಗಿತು. ಸಮಾನವು ಪುನಃ ಹೇಳಿತು: “ಎಲ್ಲರಿಗಿಂತಲೂ ನಾನು ಶೇಷ್ಠನು. ಏಕೆಂದು ಕೇಳಿ.

14023017a ಮಯಿ ಪ್ರಲೀನೇ ಪ್ರಲಯಂ ವ್ರಜಂತಿ ಸರ್ವೇ ಪ್ರಾಣಾಃ ಪ್ರಾಣಭೃತಾಂ ಶರೀರೇ।
14023017c ಮಯಿ ಪ್ರಚೀರ್ಣೇ ಚ ಪುನಶ್ಚರಂತಿ ಶ್ರೇಷ್ಠೋ ಹ್ಯಹಂ ಪಶ್ಯತ ಮಾಂ ಪ್ರಲೀನಮ್।।

ನಾನು ಲಯವಾದರೆ ಪ್ರಾಣವಿರುವ ಶರೀರದಲ್ಲಿನ ಎಲ್ಲ ಪ್ರಾಣಗಳೂ ಲಯವಾಗುತ್ತವೆ. ನಾನು ಚಲಿಸಿದರೆ ಪುನಃ ಶರೀರವು ಚಲಿಸುತ್ತದೆ. ಆದುದರಿಂದ ನಿಮ್ಮೆಲ್ಲರಿಗೂ ನಾನೇ ಶ್ರೇಷ್ಠನು. ನೋಡಿ! ನಾನೀಗ ಲಯವಾಗುತ್ತೇನೆ!”

14023018a ತತಃ ಸಮಾನಃ ಪ್ರಾಲಿಲ್ಯೇ ಪುನಶ್ಚ ಪ್ರಚಚಾರ ಹ।
14023018c ಪ್ರಾಣಾಪಾನಾವುದಾನಶ್ಚ ವ್ಯಾನಶ್ಚೈವ ತಮಬ್ರುವನ್।
14023018e ಸಮಾನ ನ ತ್ವಂ ಶ್ರೇಷ್ಠೋಽಸಿ ವ್ಯಾನ ಏವ ವಶೇ ತವ।।

ಆಗ ಸಮಾನವು ಲಯಹೊಂದಿ ಪುನಃ ಚಲಿಸತೊಡಗಿತು. ಪ್ರಾಣ, ಅಪಾನ, ಉದಾನ ಮತ್ತು ವ್ಯಾನಗಳು ಅದಕ್ಕೆ “ಸಮಾನ! ನೀನು ಶ್ರೇಷ್ಠನಲ್ಲ. ಆದರೆ ವ್ಯಾನನು ಮಾತ್ರ ನಿನ್ನ ವಶದಲ್ಲಿರುವುದು ಸತ್ಯ” ಎಂದು ಹೇಳಿದವು.

14023019a ಸಮಾನಃ ಪ್ರಚಚಾರಾಥ ಉದಾನಸ್ತಮುವಾಚ ಹ।
14023019c ಶ್ರೇಷ್ಠೋಽಹಮಸ್ಮಿ ಸರ್ವೇಷಾಂ ಶ್ರೂಯತಾಂ ಯೇನ ಹೇತುನಾ।।

ಆಗ ಸಮಾನವು ಚಲಿಸತೊಡಗಿತು. ಉದಾನವು ಅದಕ್ಕೆ ಹೇಳಿತು: “ಎಲ್ಲರಿಗಿಂತಲೂ ನಾನು ಶ್ರೇಷ್ಠ! ಏಕೆಂದು ಕೇಳಿ!

14023020a ಮಯಿ ಪ್ರಲೀನೇ ಪ್ರಲಯಂ ವ್ರಜಂತಿ ಸರ್ವೇ ಪ್ರಾಣಾಃ ಪ್ರಾಣಭೃತಾಂ ಶರೀರೇ।
14023020c ಮಯಿ ಪ್ರಚೀರ್ಣೇ ಚ ಪುನಶ್ಚರಂತಿ ಶ್ರೇಷ್ಠೋ ಹ್ಯಹಂ ಪಶ್ಯತ ಮಾಂ ಪ್ರಲೀನಮ್।।

ನಾನು ಲಯವಾದರೆ ಪ್ರಾಣವಿರುವ ಶರೀರದಲ್ಲಿನ ಎಲ್ಲ ಪ್ರಾಣಗಳೂ ಲಯವಾಗುತ್ತವೆ. ನಾನು ಚಲಿಸಿದರೆ ಪುನಃ ಶರೀರವು ಚಲಿಸುತ್ತದೆ. ಆದುದರಿಂದ ನಿಮ್ಮೆಲ್ಲರಿಗೂ ನಾನೇ ಶ್ರೇಷ್ಠನು. ನೋಡಿ! ನಾನೀಗ ಲಯವಾಗುತ್ತೇನೆ!”

14023021a ತತಃ ಪ್ರಾಲೀಯತೋದಾನಃ ಪುನಶ್ಚ ಪ್ರಚಚಾರ ಹ।
14023021c ಪ್ರಾಣಾಪಾನೌ ಸಮಾನಶ್ಚ ವ್ಯಾನಶ್ಚೈವ ತಮಬ್ರುವನ್।
14023021e ಉದಾನ ನ ತ್ವಂ ಶ್ರೇಷ್ಠೋಽಸಿ ವ್ಯಾನ ಏವ ವಶೇ ತವ।।

ಆಗ ಉದಾನವು ಲಯಹೊಂದಿ ಪುನಃ ಚಲಿಸತೊಡಗಿತು. ಪ್ರಾಣ, ಅಪಾನ, ಸಮಾನ, ವ್ಯಾನಗಳು ಅದಕ್ಕೆ “ಉದಾನ! ನೀನು ಶ್ರೇಷ್ಠನಲ್ಲ. ಆದರೆ ವ್ಯಾನವು ಮಾತ್ರ ನಿನ್ನ ವಶದಲ್ಲಿದೆ ಎನ್ನುವುದು ಸತ್ಯ!” ಎಂದವು.

14023022a ತತಸ್ತಾನಬ್ರವೀದ್ಬ್ರಹ್ಮಾ ಸಮವೇತಾನ್ಪ್ರಜಾಪತಿಃ।
14023022c ಸರ್ವೇ ಶ್ರೇಷ್ಠಾ ನ ವಾ ಶ್ರೇಷ್ಠಾಃ ಸರ್ವೇ ಚಾನ್ಯೋನ್ಯಧರ್ಮಿಣಃ।
14023022e ಸರ್ವೇ ಸ್ವವಿಷಯೇ ಶ್ರೇಷ್ಠಾಃ ಸರ್ವೇ ಚಾನ್ಯೋನ್ಯರಕ್ಷಿಣಃ।।

ಅನಂತರ ಸೇರಿದ್ದ ವಾಯುಗಳಿಗೆ ಪ್ರಜಾಪತಿ ಬ್ರಹ್ಮನು ಹೇಳಿದನು: “ನಿಮ್ಮಲ್ಲಿ ಯಾರೂ ಶ್ರೇಷ್ಠರಲ್ಲ. ಎಲ್ಲರೂ ಅನ್ಯೋನ್ಯರನ್ನು ಅವಲಂಬಿಸಿಕೊಂಡಿರುವಿರಿ. ನಿಮ್ಮ ನಿಮ್ಮ ಸ್ಥಾನಗಳಲ್ಲಿ ನೀವೆಲ್ಲರೂ ಶ್ರೇಷ್ಠರೇ. ನೀವೆಲ್ಲರೂ ಅನ್ಯೋನ್ಯರ ರಕ್ಷಕರಾಗಿದ್ದೀರಿ.

14023023a ಏಕಃ ಸ್ಥಿರಶ್ಚಾಸ್ಥಿರಶ್ಚ ವಿಶೇಷಾತ್ಪಂಚ ವಾಯವಃ।
14023023c ಏಕ ಏವ ಮಮೈವಾತ್ಮಾ ಬಹುಧಾಪ್ಯುಪಚೀಯತೇ।।

ಒಂದೇ ಆತ್ಮವಾಗಿರುವ ನಾನು ಹೇಗೆ ಅನೇಕವಾಗಿ ವೃದ್ಧಿಹೊಂದುತ್ತೇನೋ ಹಾಗೆ ಒಂದೇ ಆಗಿರುವ ನೀವು ಸ್ಥಿರ-ಅಸ್ಥಿರಗಳ ವಿಶೇಷತೆಯಿಂದ ಐದು ವಾಯುಗಳಾಗಿ ಪರಿಣಮಿಸುತ್ತೀರಿ.

14023024a ಪರಸ್ಪರಸ್ಯ ಸುಹೃದೋ ಭಾವಯಂತಃ ಪರಸ್ಪರಮ್।
14023024c ಸ್ವಸ್ತಿ ವ್ರಜತ ಭದ್ರಂ ವೋ ಧಾರಯಧ್ವಂ ಪರಸ್ಪರಮ್।।

ಪರಸ್ಪರರ ಸುಹೃದಯರಾಗಿ ಪರಸ್ಪರರನ್ನು ನೋಡಿಕೊಂಡಿರಿ. ಪರಸ್ಪರರನ್ನು ಧಾರಣೆಮಾಡಿಕೊಂಡಿರಿ. ನಿಮಗೆ ಮಂಗಳವಾಗಲಿ! ನೀವಿನ್ನು ಹೋಗಬಹುದು!””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ತ್ರಯೋವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.