ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 21
ಸಾರ
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (1-21).
14021001 ಬ್ರಾಹ್ಮಣ ಉವಾಚ।
14021001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
14021001c ನಿಬೋಧ ದಶಹೋತೄಣಾಂ ವಿಧಾನಮಿಹ ಯಾದೃಶಮ್।।
ಬ್ರಾಹ್ಮಣನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವೊಂದನ್ನು ಉದಾಹರಿಸುತ್ತಾರೆ. ಹತ್ತು ಹೋತೃಗಳು ಯಾವ ರೀತಿಯಲ್ಲಿ ಯಜ್ಞಮಾಡಿದರೆಂಬುವುದನ್ನು ಕೇಳು.
14021002a ಸರ್ವಮೇವಾತ್ರ ವಿಜ್ಞೇಯಂ ಚಿತ್ತಂ ಜ್ಞಾನಮವೇಕ್ಷತೇ।
14021002c ರೇತಃ ಶರೀರಭೃತ್ಕಾಯೇ ವಿಜ್ಞಾತಾ ತು ಶರೀರಭೃತ್।।
ತಿಳಿಯಬೇಕಾಗಿರುವ ಎಲ್ಲವೂ ಚಿತ್ತರೂಪವಾಗಿವೆ. ಈ ಚಿತ್ತವು ಜ್ಞಾನವನ್ನು ಅಪೇಕ್ಷಿಸುತ್ತದೆ. ವೀರ್ಯದಿಂದ ಹುಟ್ಟುವ ಈ ಶರೀರದಲ್ಲಿರುವ ಶರೀರಧಾರಿಯು ಈ ಚಿತ್ತವನ್ನು ತಿಳಿದಿರುತ್ತಾನೆ.
14021003a ಶರೀರಭೃದ್ಗಾರ್ಹಪತ್ಯಸ್ತಸ್ಮಾದನ್ಯಃ ಪ್ರಣೀಯತೇ।
14021003c ತತಶ್ಚಾಹವನೀಯಸ್ತು ತಸ್ಮಿನ್ಸಂಕ್ಷಿಪ್ಯತೇ ಹವಿಃ।।
ಶರೀರಧಾರಿ ಜೀವನೇ ಗಾರ್ಹಪತ್ಯಾಗ್ನಿಯು. ಅದರಿಂದ ಇನ್ನೊಂದು ಅಗ್ನಿಯು ಹುಟ್ಟಿಕೊಳ್ಳುತ್ತದೆ. ಅದೇ ಆಹವನೀಯ ಅಗ್ನಿಯಾದ ಮನಸ್ಸು. ಅದರಲ್ಲಿ ಹವಿಸ್ಸನ್ನು ಹಾಕುತ್ತಾರೆ.
14021004a ತತೋ ವಾಚಸ್ಪತಿರ್ಜಜ್ಞೇ ಸಮಾನಃ ಪರ್ಯವೇಕ್ಷತೇ।
14021004c ರೂಪಂ ಭವತಿ ವೈ ವ್ಯಕ್ತಂ ತದನುದ್ರವತೇ ಮನಃ।।
ಆಗ ವಾಚಸ್ಪತಿಯು ಹುಟ್ಟುತ್ತಾನೆ. ಅವನನ್ನು ಸಮಾನ ವಾಯುವು ನೋಡುತ್ತದೆ. ಆಗ ರೂಪವು ಹುಟ್ಟಿಕೊಳ್ಳುತ್ತದೆ. ಅದು ಮನಸ್ಸಿನ ಕಡೆ ಓಡುತ್ತದೆ.”
14021005 ಬ್ರಾಹ್ಮಣ್ಯುವಾಚ।
14021005a ಕಸ್ಮಾದ್ವಾಗಭವತ್ಪೂರ್ವಂ ಕಸ್ಮಾತ್ಪಶ್ಚಾನ್ಮನೋಽಭವತ್।
14021005c ಮನಸಾ ಚಿಂತಿತಂ ವಾಕ್ಯಂ ಯದಾ ಸಮಭಿಪದ್ಯತೇ।।
ಬ್ರಾಹ್ಮಣಿಯು ಹೇಳಿದಳು: “ಮೊದಲು ವಾಕ್ಕು ಹೇಗೆ ಹುಟ್ಟಿಕೊಂಡಿತು? ಹೇಗೆ ತಾನೆ ಅದರ ನಂತರ ಮನಸ್ಸು ಹುಟ್ಟಿಕೊಂಡಿತು? ಮನಸ್ಸು ಯೋಚಿಸಿದ ನಂತರವೇ ಮಾತು ಹೊರಬರುತ್ತದೆಯಲ್ಲವೇ?
14021006a ಕೇನ ವಿಜ್ಞಾನಯೋಗೇನ ಮತಿಶ್ಚಿತ್ತಂ ಸಮಾಸ್ಥಿತಾ।
14021006c ಸಮುನ್ನೀತಾ ನಾಧ್ಯಗಚ್ಚತ್ಕೋ ವೈನಾಂ ಪ್ರತಿಷೇಧತಿ।।
ಯಾವ ವಿಜ್ಞಾನಯೋಗದಿಂದ ಬುದ್ಧಿಯು ಚಿತ್ತವನ್ನು ಆಶ್ರಯಿಸಿದೆ? ಬುದ್ಧಿಯು ಸುಷುಪ್ತವಾಗಿರುವಾಗ ಅದು ವಿಷಯಗಳ ಕಡೆ ಹೋಗದಂತೆ ಯಾರು ತಡೆಯುತ್ತಾರೆ?”
14021007 ಬ್ರಾಹ್ಮಣ ಉವಾಚ।
14021007a ತಾಮಪಾನಃ ಪತಿರ್ಭೂತ್ವಾ ತಸ್ಮಾತ್ಪ್ರೇಷ್ಯತ್ಯಪಾನತಾಮ್।
14021007c ತಾಂ ಮತಿಂ ಮನಸಃ ಪ್ರಾಹುರ್ಮನಸ್ತಸ್ಮಾದವೇಕ್ಷತೇ।।
ಬ್ರಾಹ್ಮಣನು ಹೇಳಿದನು: “ಅಪಾನವು ಬುದ್ಧಿಯ ಪತಿಯಾಗಿ ಅದನ್ನು ಅಪಾನದ ಕಡೆಗೇ ಸೆಳೆದೊಯ್ಯುತ್ತದೆ. ಅಪಾನದ ಕಡೆ ಹೋಗುವ ಬುದ್ಧಿಯನ್ನೇ ಮನಸ್ಸೆಂದು ಹೇಳುತ್ತಾರೆ. ಆದುದರಿಂದಲೇ ಮನಸ್ಸು ವಾಕ್ಕನ್ನು ನೋಡುತ್ತದೆ.
14021008a ಪ್ರಶ್ನಂ ತು ವಾಙ್ಮನಸೋರ್ಮಾಂ ಯಸ್ಮಾತ್ತ್ವಮನುಪೃಚ್ಚಸಿ।
14021008c ತಸ್ಮಾತ್ತೇ ವರ್ತಯಿಷ್ಯಾಮಿ ತಯೋರೇವ ಸಮಾಹ್ವಯಮ್।।
ವಾಕ್ಕು ಮತ್ತು ಮನಸ್ಸುಗಳ ಕುರಿತು ನೀನು ಕೇಳಿದ ಪ್ರಶ್ನೆಗೆ ಅವೆರಡರ ನಡುವೆ ನಡೆದ ಸಂವಾದವನ್ನು ಹೇಳುತ್ತೇನೆ. ಅದರಲ್ಲಿಯೇ ನಿನಗೆ ಉತ್ತರವು ಸಿಕ್ಕುತ್ತದೆ.
14021009a ಉಭೇ ವಾಙ್ಮನಸೀ ಗತ್ವಾ ಭೂತಾತ್ಮಾನಮಪೃಚ್ಚತಾಮ್।
14021009c ಆವಯೋಃ ಶ್ರೇಷ್ಠಮಾಚಕ್ಷ್ವ ಚಿಂಧಿ ನೌ ಸಂಶಯಂ ವಿಭೋ।।
ವಾಕ್ಕು ಮತ್ತು ಮನಸ್ಸು ಎರಡೂ ಜೀವಾತ್ಮನ ಬಳಿ ಹೋಗಿ ಕೇಳಿದವು: “ವಿಭೋ! ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠರೆಂದು ಹೇಳು. ನಮ್ಮ ಈ ಸಂಶಯವನ್ನು ನಿವಾರಿಸು!”
14021010a ಮನ ಇತ್ಯೇವ ಭಗವಾಂಸ್ತದಾ ಪ್ರಾಹ ಸರಸ್ವತೀಮ್।
14021010c ಅಹಂ ವೈ ಕಾಮಧುಕ್ತುಭ್ಯಮಿತಿ ತಂ ಪ್ರಾಹ ವಾಗಥ।।
ಮನಸ್ಸೇ ಶ್ರೇಷ್ಠವೆಂದು ಭಗವಂತನು ಹೇಳಲು, ಸರಸ್ವತಿಯು “ನಾನೇ ನಿನಗೆ ಕಾಮಧೇನುವಂತೆ ಎಲ್ಲವನ್ನೂ ಒದಗಿಸಿಕೊಡುತ್ತಿದ್ದೇನೆ” ಎಂದಳು. ಅದಕ್ಕೆ ಜೀವಾತ್ಮನು ಹೇಳಿದನು:
14021011a ಸ್ಥಾವರಂ ಜಂಗಮಂ ಚೈವ ವಿದ್ಧ್ಯುಭೇ ಮನಸೀ ಮಮ।
14021011c ಸ್ಥಾವರಂ ಮತ್ಸಕಾಶೇ ವೈ ಜಂಗಮಂ ವಿಷಯೇ ತವ।।
“ಸ್ಥಾವರ-ಜಂಗಮಗಳೆರಡೂ ನನ್ನ ಮನಸ್ಸು ಎನ್ನುವುದನ್ನು ತಿಳಿದುಕೋ. ಗ್ರಹಿಸಬಹುದಾದ ಸ್ಥಾವರ ಜಗತ್ತೆಲ್ಲವೂ ನನ್ನ ಬಳಿಯಲ್ಲಿದೆ. ಇಂದ್ರಿಯಾತೀತವಾದ ಸ್ವರ್ಗಾದಿ ಜಂಗಮ ವಿಷಯಗಳೆಲ್ಲವೂ ನಿನ್ನ ಅಧೀನದಲ್ಲಿದೆ.
14021012a ಯಸ್ತು ತೇ ವಿಷಯಂ ಗಚ್ಚೇನ್ಮಂತ್ರೋ ವರ್ಣಃ ಸ್ವರೋಽಪಿ ವಾ।
14021012c ತನ್ಮನೋ ಜಂಗಮಂ ನಾಮ ತಸ್ಮಾದಸಿ ಗರೀಯಸೀ।।
ನಿನ್ನ ವಿಷಯವಾದ ಮಂತ್ರ, ವರ್ಣ, ಅಥವಾ ಸ್ವರಗಳು ಜಂಗಮದ ಕುರಿತಾದರೆ ಮನಸ್ಸೂ ಅದನ್ನೇ ಹಿಂಬಾಲಿಸಿ ಹೋಗುತ್ತದೆ. ಆದುದರಿಂದ ನೀನೇ ಶ್ರೇಷ್ಠಳಾಗಿರುವೆ!
14021013a ಯಸ್ಮಾದಸಿ ಚ ಮಾ ವೋಚಃ ಸ್ವಯಮಭ್ಯೇತ್ಯ ಶೋಭನೇ।
14021013c ತಸ್ಮಾದುಚ್ಚ್ವಾಸಮಾಸಾದ್ಯ ನ ವಕ್ಷ್ಯಸಿ ಸರಸ್ವತಿ।।
ಶೋಭನೇ! ಸರಸ್ವತಿ! ಸ್ವಯಂ ನೀನೇ ಬಂದು ನನಗೆ ಹೀಗೆ ಹೇಳಿದುದರಿಂದ ನೀನು ಉಚ್ಛ್ವಾಸದ ಸಮಯದಲ್ಲಿ ಮಾತನಾಡಲಾರೆ!
14021014a ಪ್ರಾಣಾಪಾನಾಂತರೇ ದೇವೀ ವಾಗ್ವೈ ನಿತ್ಯಂ ಸ್ಮ ತಿಷ್ಠತಿ।
14021014c ಪ್ರೇರ್ಯಮಾಣಾ ಮಹಾಭಾಗೇ ವಿನಾ ಪ್ರಾಣಮಪಾನತೀ।
14021014e ಪ್ರಜಾಪತಿಮುಪಾಧಾವತ್ಪ್ರಸೀದ ಭಗವನ್ನಿತಿ।।
ಮಹಾಭಾಗೇ! ದೇವೀ! ಪ್ರಾಣ-ಅಪಾನಗಳ ಮಧ್ಯೆ ನೀನು ನಿತ್ಯವೂ ನೆಲಸಿರುವೆ. ಪ್ರಾಣದ ಪ್ರೇರಣೆಯಿಲ್ಲದೇ ನೀನು ಅಪಾನದ ಕಡೆಗೆ ಹೋದಾಗ ಪ್ರಜಾಪತಿಯ ಬಳಿಸಾರಿ ಭಗವಂತನೇ ಪ್ರಸನ್ನನಾಗು ಎಂದು ಪ್ರಾರ್ಥಿಸುವೆ!
14021015a ತತಃ ಪ್ರಾಣಃ ಪ್ರಾದುರಭೂದ್ವಾಚಮಾಪ್ಯಾಯಯನ್ಪುನಃ।
14021015c ತಸ್ಮಾದುಚ್ಚ್ವಾಸಮಾಸಾದ್ಯ ನ ವಾಗ್ವದತಿ ಕರ್ಹಿ ಚಿತ್।।
ಆಗ ಪ್ರಾಣವು ವಾಣಿಗೆ ಪುಷ್ಟಿಯನ್ನು ಕೊಡುವ ಸಲುವಾಗಿ ಪುನಃ ಪ್ರಕಟವಾಗುತ್ತದೆ. ಆದುದರಿಂದ ಉಸಿರನ್ನು ಎಳೆದುಕೊಳ್ಳುವಾಗ ಯಾವುದೇ ಮಾತು ಹೊರಡುವುದಿಲ್ಲ.
14021016a ಘೋಷಿಣೀ ಜಾತನಿರ್ಘೋಷಾ ನಿತ್ಯಮೇವ ಪ್ರವರ್ತತೇ।
14021016c ತಯೋರಪಿ ಚ ಘೋಷಿಣ್ಯೋರ್ನಿರ್ಘೋಷೈವ ಗರೀಯಸೀ।।
ವಾಣಿಯು ನಿತ್ಯವೂ ಎರಡು ಪ್ರಕಾರಗಳಲ್ಲಿ ಇರುತ್ತದೆ: ಘೋಷಯುಕ್ತವಾಗಿ ಮತ್ತು ನಿರ್ಘೋಷವಾಗಿ. ಘೋಷಯುಕ್ತ ವಾಣಿಗಿಂತಲೂ ಘೋಷರಹಿತ ವಾಣಿಯೇ ಶ್ರೇಷ್ಠವಾದುದು.
14021017a ಗೌರಿವ ಪ್ರಸ್ರವತ್ಯೇಷಾ ರಸಮುತ್ತಮಶಾಲಿನೀ।
14021017c ಸತತಂ ಸ್ಯಂದತೇ ಹ್ಯೇಷಾ ಶಾಶ್ವತಂ ಬ್ರಹ್ಮವಾದಿನೀ।।
ಈ ಉತ್ತಮ ನಿರ್ಘೋಷ ವಾಣಿಯು ಹಸುವಿನಂತೆ ಹಾಲನ್ನೀಯುತ್ತದೆ ಮತ್ತು ಬ್ರಹ್ಮವಾದಿನಿಯಾದ ಇದು ಸತತವೂ ಶಾಶ್ವತವಾದುದನ್ನೇ ನೀಡುತ್ತದೆ.
14021018a ದಿವ್ಯಾದಿವ್ಯಪ್ರಭಾವೇನ ಭಾರತೀ ಗೌಃ ಶುಚಿಸ್ಮಿತೇ।
14021018c ಏತಯೋರಂತರಂ ಪಶ್ಯ ಸೂಕ್ಷ್ಮಯೋಃ ಸ್ಯಂದಮಾನಯೋಃ।।
ಶುಚಿಸ್ಮಿತೇ! ಹಸುವಿನಂಥಹ ಈ ಮಾತು ದಿವ್ಯಪ್ರಭಾವಗಳಿಂದ ಕೂಡಿದ್ದು ದಿವ್ಯವಾದುದು. ಸೂಕ್ಷ್ಮವಾಗಿ ಹರಿದುಬರುವ ಇವೆರಡರ ನಡುವಿನ ಅಂತರವನ್ನು ನೋಡು!””
14021019a ಅನುತ್ಪನ್ನೇಷು ವಾಕ್ಯೇಷು ಚೋದ್ಯಮಾನಾ ಸಿಸೃಕ್ಷಯಾ।
14021019c ಕಿಂ ನು ಪೂರ್ವಂ ತತೋ ದೇವೀ ವ್ಯಾಜಹಾರ ಸರಸ್ವತೀ।।
ಬ್ರಾಹ್ಮಣಿಯು ಹೇಳಿದಳು: “ಹಿಂದೆ ಮಾತೇ ಹೊರಡದಿದ್ದಾಗ ಮಾತನಾಡ ಬಯಸಿದ ಸರಸ್ವತೀ ದೇವಿಯು ಯಾವ ಮಾತನ್ನಾಡಿದಳು?”
14021020a ಪ್ರಾಣೇನ ಯಾ ಸಂಭವತೇ ಶರೀರೇ ಪ್ರಾಣಾದಪಾನಂ ಪ್ರತಿಪದ್ಯತೇ ಚ।
14021020c ಉದಾನಭೂತಾ ಚ ವಿಸೃಜ್ಯ ದೇಹಂ ವ್ಯಾನೇನ ಸರ್ವಂ ದಿವಮಾವೃಣೋತಿ।।
ಬ್ರಾಹ್ಮಣನು ಹೇಳಿದನು: “ವಾಣಿಯು ಶರೀರದಲ್ಲಿನ ಪ್ರಾಣದಿಂದ ಹುಟ್ಟುತ್ತದೆ. ಪ್ರಾಣದಿಂದ ಅಪಾನವನ್ನು ಸೇರುತ್ತದೆ. ನಂತರ ಉದಾನವಾಗಿ ದೇಹವನ್ನು ತ್ಯಜಿಸಿ ವ್ಯಾನದಿಂದ ದಿವವೆಲ್ಲವನ್ನೂ ಆವರಿಸುತ್ತದೆ.
14021021a ತತಃ ಸಮಾನೇ ಪ್ರತಿತಿಷ್ಠತೀಹ ಇತ್ಯೇವ ಪೂರ್ವಂ ಪ್ರಜಜಲ್ಪ ಚಾಪಿ।
14021021c ತಸ್ಮಾನ್ಮನಃ ಸ್ಥಾವರತ್ವಾದ್ವಿಶಿಷ್ಟಂ ತಥಾ ದೇವೀ ಜಂಗಮತ್ವಾದ್ವಿಶಿಷ್ಟಾ।।
ಅನಂತರ ಸಮಾನದಲ್ಲಿ ಅದು ನೆಲೆಸುತ್ತದೆ. ಹೀಗೆ ಹಿಂದೆ ದೇವಿಯು ಹೇಳಿದಳು. ಆದುದರಿಂದ ಮನಸ್ಸು ಅದರ ಸ್ಥಾವರತ್ವದಿಂದ ವಿಶಿಷ್ಟವಾದುದು. ಹಾಗೆಯೇ ವಾಗ್ದೇವಿಯು ಅವಳ ಜಂಗಮತ್ವದಿಂದ ವಿಶಿಷ್ಟಳು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಏಕವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.