ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 20
ಸಾರ
ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಉದಾಹರಿಸಿದುದು (1-27).
14020001 ವಾಸುದೇವ ಉವಾಚ।
14020001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
14020001c ದಂಪತ್ಯೋಃ ಪಾರ್ಥ ಸಂವಾದಮಭಯಂ ನಾಮ ನಾಮತಃ।।
ವಾಸುದೇವನು ಹೇಳಿದನು: “ಪಾರ್ಥ! ಇದಕ್ಕೆ ಸಂಬಂಧಿಸಿದಂತೆ ದಂಪತಿಗಳ ಸಂವಾದರೂಪವಾದ ಅಭಯ ಎಂಬ ಹೆಸರಿನ ಈ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ.
14020002a ಬ್ರಾಹ್ಮಣೀ ಬ್ರಾಹ್ಮಣಂ ಕಂ ಚಿಜ್ಞಾನವಿಜ್ಞಾನಪಾರಗಮ್।
14020002c ದೃಷ್ಟ್ವಾ ವಿವಿಕ್ತ ಆಸೀನಂ ಭಾರ್ಯಾ ಭರ್ತಾರಮಬ್ರವೀತ್।।
ಓರ್ವ ಜ್ಞಾನ-ವಿಜ್ಞಾನಪಾರಂಗತನಾದ ಬ್ರಾಹ್ಮಣನು ಏಕಾಂತದಲ್ಲಿ ಸುಮ್ಮನೇ ಕುಳಿತಿರುವುದನ್ನು ನೋಡಿ ಅವನ ಬ್ರಾಹ್ಮಣೀ ಭಾರ್ಯೆಯು ತನ್ನ ಪತಿಯಲ್ಲಿ ಪ್ರಶ್ನಿಸಿದಳು:
14020003a ಕಂ ನು ಲೋಕಂ ಗಮಿಷ್ಯಾಮಿ ತ್ವಾಮಹಂ ಪತಿಮಾಶ್ರಿತಾ।
14020003c ನ್ಯಸ್ತಕರ್ಮಾಣಮಾಸೀನಂ ಕೀನಾಶಮವಿಚಕ್ಷಣಮ್।।
“ಏನನ್ನೂ ಮಾಡದೇ ಸೋಮಾರಿಯಾಗಿ ಕುಳಿತುಕೊಳ್ಳುವ, ಕೃಪಣನೂ ಅವಿದ್ವಾಂಸನೂ ಆದ ನಿನ್ನನ್ನು ಪತಿಯನ್ನಾಗಿ ಆಶ್ರಯಿಸಿರುವ ನಾನು ಯಾವ ಲೋಕಕ್ಕೆ ಹೋಗುತ್ತೇನೆ?
14020004a ಭಾರ್ಯಾಃ ಪತಿಕೃತಾಽಲ್ಲೋಕಾನಾಪ್ನುವಂತೀತಿ ನಃ ಶ್ರುತಮ್।
14020004c ತ್ವಾಮಹಂ ಪತಿಮಾಸಾದ್ಯ ಕಾಂ ಗಮಿಷ್ಯಾಮಿ ವೈ ಗತಿಮ್।।
ಪತಿಯು ಗಳಿಸಿದ ಲೋಕಗಳಿಗೆ ಭಾರ್ಯೆಯರು ಹೋಗುತ್ತಾರೆ ಎನ್ನುವುದನ್ನು ನಾವು ಕೇಳಿದ್ದೇವೆ. ನಿನ್ನನ್ನು ಪತಿಯನ್ನಾಗಿ ಪಡೆದ ನಾನು ಯಾವ ಗತಿಯಲ್ಲಿ ಹೋಗುತ್ತೇನೆ?”
14020005a ಏವಮುಕ್ತಃ ಸ ಶಾಂತಾತ್ಮಾ ತಾಮುವಾಚ ಹಸನ್ನಿವ।
14020005c ಸುಭಗೇ ನಾಭ್ಯಸೂಯಾಮಿ ವಾಕ್ಯಸ್ಯಾಸ್ಯ ತವಾನಘೇ।।
ಇದನ್ನು ಕೇಳಿದ ಆ ಶಾಂತಾತ್ಮನು ನಸುನಗುತ್ತಾ ಅವಳಿಗೆ ಹೇಳಿದನು: “ಸುಭಗೇ! ಅನಘೇ! ನಿನ್ನ ಈ ಮಾತನ್ನು ನಾನು ತಪ್ಪೆಂದು ಹೇಳುವುದಿಲ್ಲ.
14020006a ಗ್ರಾಹ್ಯಂ ದೃಶ್ಯಂ ಚ ಶ್ರಾವ್ಯಂ ಚ ಯದಿದಂ ಕರ್ಮ ವಿದ್ಯತೇ।
14020006c ಏತದೇವ ವ್ಯವಸ್ಯಂತಿ ಕರ್ಮ ಕರ್ಮೇತಿ ಕರ್ಮಿಣಃ।।
ಯಾವುದು ಗ್ರಹಿಕೆಗೆ ಸಿಗುತ್ತದೆಯೋ, ಯಾವುದನ್ನು ನೋಡಬಹುದೋ ಅಥವಾ ಕೇಳಬಹುದೋ ಅದನ್ನು ಕರ್ಮವೆಂದು ತಿಳಿಯುತ್ತಾರೆ. ಕರ್ಮಿಗಳು ಇವೇ ಕರ್ಮಗಳೆಂದು ತಿಳಿದು ಮಾಡುತ್ತಿರುತ್ತಾರೆ.
14020007a ಮೋಹಮೇವ ನಿಯಚ್ಚಂತಿ ಕರ್ಮಣಾ ಜ್ಞಾನವರ್ಜಿತಾಃ।
14020007c ನೈಷ್ಕರ್ಮ್ಯಂ ನ ಚ ಲೋಕೇಽಸ್ಮಿನ್ಮೌರ್ತಮಿತ್ಯುಪಲಭ್ಯತೇ।।
ಜ್ಞಾನವನ್ನು ತೊರೆದವರು ಕರ್ಮದ ಮೂಲಕ ಮೋಹವನ್ನೇ ಸಂಗ್ರಹಿಸಿಕೊಳ್ಳುತ್ತಾರೆ. ಈ ಲೋಕದಲ್ಲಿ ಮನುಷ್ಯನಿಗೆ ಮುಹೂರ್ತಕಾಲವಾದರೂ ಕರ್ಮಮಾಡದೇ ಇರಲು ಸಾಧ್ಯವಿಲ್ಲ.
14020008a ಕರ್ಮಣಾ ಮನಸಾ ವಾಚಾ ಶುಭಂ ವಾ ಯದಿ ವಾಶುಭಮ್।
14020008c ಜನ್ಮಾದಿಮೂರ್ತಿಭೇದಾನಾಂ ಕರ್ಮ ಭೂತೇಷು ವರ್ತತೇ।।
ಕರ್ಮ, ಮನಸ್ಸು ಮತ್ತು ಮಾತು ಇವುಗಳ ಮೂಲಕವಾಗಿ ನಡೆಯುವ ಶುಭಾಶುಭ ಕರ್ಮಗಳು ಜನ್ಮದಿಂದ ಹಿಡಿದು ಪುನಃ ಜನ್ಮ ಪಡೆಯುವವರೆಗೆ ಜೀವಿಗಳಲ್ಲಿ ನಡೆಯುತ್ತಲೇ ಇರುತ್ತವೆ.
14020009a ರಕ್ಷೋಭಿರ್ವಧ್ಯಮಾನೇಷು ದೃಶ್ಯದ್ರವ್ಯೇಷು ಕರ್ಮಸು।
14020009c ಆತ್ಮಸ್ಥಮಾತ್ಮನಾ ತೇನ ದೃಷ್ಟಮಾಯತನಂ ಮಯಾ।।
ಯಜ್ಞಕರ್ಮಗಳಲ್ಲಿ ಕಂಡ ದ್ರವ್ಯಗಳನ್ನು ರಾಕ್ಷಸರು ಧ್ವಂಸಮಾಡುತ್ತಿರುವಾಗ ನಾನು ಆತ್ಮಸ್ಥನಾಗಿದ್ದೆ. ಅಲ್ಲಿ ನಾನು ನನ್ನ ನೆಲೆಯನ್ನು ಕಂಡೆನು.
14020010a ಯತ್ರ ತದ್ಬ್ರಹ್ಮ ನಿರ್ದ್ವಂದ್ವಂ ಯತ್ರ ಸೋಮಃ ಸಹಾಗ್ನಿನಾ।
14020010c ವ್ಯವಾಯಂ ಕುರುತೇ ನಿತ್ಯಂ ಧೀರೋ ಭೂತಾನಿ ಧಾರಯನ್।।
ಅಲ್ಲಿ ನಿರ್ದ್ವಂದ್ವನಾದ ಬ್ರಹ್ಮನು ವಿರಾಜಮಾನನಾಗಿದ್ದಾನೆ. ಅಲ್ಲಿ ಸೋಮನು ಅಗ್ನಿಯೊಡನೆ ನಿತ್ಯವೂ ಸೇರಿಕೊಂಡಿರುತ್ತಾನೆ1. ಧೀರನಾದ ಜೀವನು ಪಂಚಭೂತಗಳನ್ನು ಧರಿಸಿ ಅವುಗಳ ಮಧ್ಯದಲ್ಲಿ ನೆಲೆಸಿರುತ್ತಾನೆ.
14020011a ಯತ್ರ ಬ್ರಹ್ಮಾದಯೋ ಯುಕ್ತಾಸ್ತದಕ್ಷರಮುಪಾಸತೇ।
14020011c ವಿದ್ವಾಂಸಃ ಸುವ್ರತಾ ಯತ್ರ ಶಾಂತಾತ್ಮಾನೋ ಜಿತೇಂದ್ರಿಯಾಃ।।
ಅಲ್ಲಿ ಜಿತೇಂದ್ರಿಯರೂ, ಶಾಂತಾತ್ಮರೂ, ಸುವ್ರತರೂ, ವಿಧ್ವಾಂಸರೂ ಆದ ಬ್ರಹ್ಮಾದಿಗಳು ಯೋಗಯುಕ್ತರಾಗಿ ಆ ಅಕ್ಷರನನ್ನು ಉಪಾಸಿಸುತ್ತಿರುತ್ತಾರೆ.
14020012a ಘ್ರಾಣೇನ ನ ತದಾಘ್ರೇಯಂ ನ ತದಾದ್ಯಂ ಚ ಜಿಹ್ವಯಾ।
14020012c ಸ್ಪರ್ಶೇನ ಚ ನ ತತ್ ಸ್ಪೃಶ್ಯಂ ಮನಸಾ ತ್ವೇವ ಗಮ್ಯತೇ।।
ಆ ಅವಿನಾಶೀ ಪರಬ್ರಹ್ಮತತ್ತ್ವವನ್ನು ಮೂಗಿನಿಂದ ಮೂಸಲಾಗುವುದಿಲ್ಲ. ನಾಲಿಗೆಯಿಂದ ರುಚಿಸಲು ಆಗುವುದಿಲ್ಲ. ಚರ್ಮದ ಮೂಲಕ ಮುಟ್ಟಲೂ ಸಾಧ್ಯವಿಲ್ಲ. ಮನಸ್ಸಿನ ಮೂಲಕ ಮಾತ್ರ ಅದರ ಅನುಭವವನ್ನು ಪಡೆದುಕೊಳ್ಳಬಹುದು.
14020013a ಚಕ್ಷುಷಾ ನ ವಿಷಹ್ಯಂ ಚ ಯತ್ಕಿಂ ಚಿಚ್ಚ್ರವಣಾತ್ಪರಮ್।
14020013c ಅಗಂಧಮರಸಸ್ಪರ್ಶಮರೂಪಾಶಬ್ದಮವ್ಯಯಮ್।।
ಅದು ಕಣ್ಣುಗಳಿಂದ ನೋಡಬಹುದಾದಂಥ ವಿಷಯವಲ್ಲ. ಅದು ನಮ್ಮ ಕೇಳುವಿಕೆಗೂ ಅತೀತವಾಗಿದೆ. ಅವ್ಯಯವಾದ ಆ ಪರಬ್ರಹ್ಮತತ್ತ್ವಕ್ಕೆ ವಾಸನೆಯಿಲ್ಲ, ಸ್ಪರ್ಶವಿಲ್ಲ, ರೂಪವಿಲ್ಲ ಮತ್ತು ಶಬ್ಧವಿಲ್ಲ.
14020014a ಯತಃ ಪ್ರವರ್ತತೇ ತಂತ್ರಂ ಯತ್ರ ಚ ಪ್ರತಿತಿಷ್ಠತಿ।
14020014c ಪ್ರಾಣೋಽಪಾನಃ ಸಮಾನಶ್ಚ ವ್ಯಾನಶ್ಚೋದಾನ ಏವ ಚ।।
14020015a ತತ ಏವ ಪ್ರವರ್ತಂತೇ ತಮೇವ ಪ್ರವಿಶಂತಿ ಚ।
ಅಲ್ಲಿಂದಲೇ ಸೃಷ್ಟಿಯು ವಿಸ್ತಾರವಾಗುತ್ತದೆ ಮತ್ತು ಅಲ್ಲಿಯೇ ಅದು ಉಪಸ್ಥಿತವಾಗಿರುತ್ತದೆ. ಪ್ರಾಣ-ಅಪಾನ-ಸಮಾನ-ವ್ಯಾನ-ಉದಾನಗಳು ಅದರಿಂದಲೇ ಹುಟ್ಟುತ್ತವೆ. ಮತ್ತು ಅದರಲ್ಲಿಯೇ ಲೀನವಾಗುತ್ತವೆ.
14020015c ಸಮಾನವ್ಯಾನಯೋರ್ಮಧ್ಯೇ ಪ್ರಾಣಾಪಾನೌ ವಿಚೇರತುಃ।।
14020016a ತಸ್ಮಿನ್ಸುಪ್ತೇ ಪ್ರಲೀಯೇತೇ ಸಮಾನೋ ವ್ಯಾನ ಏವ ಚ।
14020016c ಅಪಾನಪ್ರಾಣಯೋರ್ಮಧ್ಯೇ ಉದಾನೋ ವ್ಯಾಪ್ಯ ತಿಷ್ಠತಿ।
14020016e ತಸ್ಮಾಚ್ಚಯಾನಂ ಪುರುಷಂ ಪ್ರಾಣಾಪಾನೌ ನ ಮುಂಚತಃ।।
ಸಮಾನ ಮತ್ತು ವ್ಯಾನಗಳ ಮಧ್ಯೆ ಪ್ರಾಣ-ಅಪಾನಗಳು ಸಂಚರಿಸುತ್ತಿರುತ್ತವೆ. ನಿದ್ರಿಸಿರುವಾಗ ಸಮಾನ-ವ್ಯಾನಗಳು ಪ್ರಾಣದಲ್ಲಿ ಲಯಹೊಂದುತ್ತವೆ. ಅಪಾನ ಮತ್ತು ಪ್ರಾಣಗಳ ಮಧ್ಯೆ ಉದಾನವು ವ್ಯಾಪಿಸಿರುತ್ತದೆ. ಆದುದರಿಂದಲೇ ಮಲಗಿರುವ ಪುರುಷನನ್ನು ಪ್ರಾಣ-ಅಪಾನಗಳು ಬಿಟ್ಟಿರುವುದಿಲ್ಲ.
14020017a ಪ್ರಾಣಾನಾಯಮ್ಯತೇ ಯೇನ ತಮುದಾನಂ ಪ್ರಚಕ್ಷತೇ।
14020017c ತಸ್ಮಾತ್ತಪೋ ವ್ಯವಸ್ಯಂತಿ ತದ್ಭವಂ ಬ್ರಹ್ಮವಾದಿನಃ।।
ಪ್ರಾಣಗಳ ಆಧಾರವಾಗಿರುವುದರಿಂದ ಅದನ್ನು ಉದಾನ2 ಎನ್ನುತ್ತಾರೆ. ಪ್ರಾಣಾದಿಗಳು ಉದಾನದಲ್ಲಿ ಸೇರಿಕೊಳ್ಳುವುದನ್ನೇ ಬ್ರಹ್ಮವಾದಿಗಳು ತಪಸ್ಸೆಂದು ನಿರ್ಣಯಿಸಿರುತ್ತಾರೆ.
14020018a ತೇಷಾಮನ್ಯೋನ್ಯಭಕ್ಷಾಣಾಂ ಸರ್ವೇಷಾಂ ದೇಹಚಾರಿಣಾಮ್।
14020018c ಅಗ್ನಿರ್ವೈಶ್ವಾನರೋ ಮಧ್ಯೇ ಸಪ್ತಧಾ ವಿಹಿತೋಽಂತರಾ।।
ಹೀಗೆ ಅನ್ಯೋನ್ಯರಲ್ಲಿ ಲೀನವಾಗುವ ಆ ದೇಹದಲ್ಲಿ ಸಂಚರಿಸುತ್ತಿರುವ ವಾಯುಗಳ ಮಧ್ಯೆ ವೈಶ್ವಾನರ ಅಗ್ನಿಯು ಏಳು ರೂಪಗಳಲ್ಲಿ ನೆಲಸಿರುತ್ತಾನೆ.
14020019a ಘ್ರಾಣಂ ಜಿಹ್ವಾ ಚ ಚಕ್ಷುಶ್ಚ ತ್ವಕ್ಚ ಶ್ರೋತ್ರಂ ಚ ಪಂಚಮಮ್।
14020019c ಮನೋ ಬುದ್ಧಿಶ್ಚ ಸಪ್ತೈತಾ ಜಿಹ್ವಾ ವೈಶ್ವಾನರಾರ್ಚಿಷಃ।।
ಮೂಗು, ನಾಲಿಗೆ, ಕಣ್ಣು, ಚರ್ಮ, ಕಿವಿ, ಐದನೆಯದಾಗಿ ಮನಸ್ಸು ಮತ್ತು ಏಳನೆಯದಾಗಿ ಬುದ್ಧಿ ಇವು ವೈಶ್ವಾನರನ ಜ್ವಾಲೆಗಳು.
14020020a ಘ್ರೇಯಂ ಪೇಯಂ ಚ ದೃಶ್ಯಂ ಚ ಸ್ಪೃಶ್ಯಂ ಶ್ರವ್ಯಂ ತಥೈವ ಚ।
14020020c ಮಂತವ್ಯಮಥ ಬೋದ್ಧವ್ಯಂ ತಾಃ ಸಪ್ತ ಸಮಿಧೋ ಮಮ।।
ಗಂಧ, ದೃಶ್ಯ, ಮುಟ್ಟಬಹುದಾದವುಗಳು, ಶಬ್ಧ, ಮನನ ಮಾಡಿಕೊಳ್ಳುವಂಥಹುದು ಮತ್ತು ಬುದ್ಧಿಯಿಂದ ತಿಳಿದುಕೊಳ್ಳುವಂಥಹುದು ಈ ವಿಷಯಗಳೇ ನನ್ನ (ವೈಶ್ವಾನರನ) ಸಮಿತ್ತುಗಳು.
14020021a ಘ್ರಾತಾ ಭಕ್ಷಯಿತಾ ದ್ರಷ್ಟಾ ಸ್ಪ್ರಷ್ಟಾ ಶ್ರೋತಾ ಚ ಪಂಚಮಃ।
14020021c ಮಂತಾ ಬೋದ್ಧಾ ಚ ಸಪ್ತೈತೇ ಭವಂತಿ ಪರಮರ್ತ್ವಿಜಃ।।
ಆಘ್ರಾಣಿಸುವವನು, ತಿನ್ನುವವನು, ನೋಡುವವನು, ಮುಟ್ಟುವವನು, ಮತ್ತು ಐದನೆಯವನಾಗಿ ಕೇಳುವವನು, ಯೋಚಿಸುವವನು ಮತ್ತು ತಿಳಿದುಕೊಳ್ಳುವವನು - ಈ ಏಳುಮಂದಿ ವೈಶ್ವಾನರನಿಗೆ ಪರಮ ಋತ್ವಿಜರು.
14020022a ಘ್ರೇಯೇ ಪೇಯೇ ಚ ದೃಶ್ಯೇ ಚ ಸ್ಪೃಶ್ಯೇ ಶ್ರವ್ಯೇ ತಥೈವ ಚ।
14020022c ಹವೀಂಷ್ಯಗ್ನಿಷು ಹೋತಾರಃ ಸಪ್ತಧಾ ಸಪ್ತ ಸಪ್ತಸು।
14020022e ಸಮ್ಯಕ್ಪ್ರಕ್ಷಿಪ್ಯ ವಿದ್ವಾಂಸೋ ಜನಯಂತಿ ಸ್ವಯೋನಿಷು।।
ಘ್ರೇಯ, ಪೇಯ, ದೃಶ್ಯ, ಸ್ಪೃಶ್ಯ, ಶ್ರವ್ಯ ಮೊದಲಾದ ಏಳು ಸಮ್ತಿತ್ತುಗಳನ್ನು ವೈಶ್ವಾನರನ ಏಳು ಜ್ವಾಲೆಗಳಲ್ಲಿ ಏಳು ವಿದ್ವಾಂಸ ಋತ್ವಿಜರು ಹೋಮಮಾಡಿ ತಮ್ಮ ಯೋನಿಗಳಲ್ಲಿ ಶಬ್ಧಾದಿ ಏಳು ವಿಷಯಗಳನ್ನು ಸೃಷ್ಟಿಸುತ್ತಾರೆ.
14020023a ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್।
14020023c ಮನೋ ಬುದ್ಧಿಶ್ಚ ಸಪ್ತೈತೇ ಯೋನಿರಿತ್ಯೇವ ಶಬ್ದಿತಾಃ।।
ಪೃಥ್ವಿ, ವಾಯು, ಆಕಾಶ, ನೀರು, ಜ್ಯೋತಿ ಈ ಐದು ಮತ್ತು ಮನಸ್ಸು, ಬುದ್ಧಿಗಳೂ ಸೇರಿ ಏಳನ್ನು ಸಪ್ತಯೋನಿಗಳೆಂದು ಹೇಳುತ್ತಾರೆ.
14020024a ಹವಿರ್ಭೂತಾ ಗುಣಾಃ ಸರ್ವೇ ಪ್ರವಿಶಂತ್ಯಗ್ನಿಜಂ ಮುಖಮ್।
14020024c ಅಂತರ್ವಾಸಮುಷಿತ್ವಾ ಚ ಜಾಯಂತೇ ಸ್ವಾಸು ಯೋನಿಷು।
14020024e ತತ್ರೈವ ಚ ನಿರುಧ್ಯಂತೇ ಪ್ರಲಯೇ ಭೂತಭಾವನೇ।।
ಪೃಥ್ವಿಯೇ ಮೊದಲಾದವುಗಳಲ್ಲಿರುವ ಗಂಧಾದಿ ಗುಣಗಳೇ ಹವಿಸ್ಸುಗಳು. ಅವೆಲ್ಲವೂ ವೈಶ್ವಾನರ ಅಗ್ನಿಯಲ್ಲಿ ಹುಟ್ಟಿದ ಬುದ್ಧಿಯನ್ನು ಪ್ರವೇಶಿಸುತ್ತವೆ. ಅವು ಬುದ್ಧಿಯಲ್ಲಿ ವಾಸವಾಗಿದ್ದುಕೊಂಡು ಸಮಯಾನುಸಾರವಾಗಿ ತಮ್ಮ ತಮ್ಮ ಯೋನಿಗಳಲ್ಲಿ ಜನ್ಮತಾಳುತ್ತವೆ. ಪ್ರಲಯಕಾಲದಲ್ಲಿ ಈ ಗುಣಗಳು ಬುದ್ಧಿಯಲ್ಲಿಯೇ ಬಂಧಿಸಲ್ಪಟ್ಟಿರುತ್ತವೆ.
14020025a ತತಃ ಸಂಜಾಯತೇ ಗಂಧಸ್ತತಃ ಸಂಜಾಯತೇ ರಸಃ।
14020025c ತತಃ ಸಂಜಾಯತೇ ರೂಪಂ ತತಃ ಸ್ಪರ್ಶೋಽಭಿಜಾಯತೇ।।
14020026a ತತಃ ಸಂಜಾಯತೇ ಶಬ್ದಃ ಸಂಶಯಸ್ತತ್ರ ಜಾಯತೇ।
14020026c ತತಃ ಸಂಜಾಯತೇ ನಿಷ್ಠಾ ಜನ್ಮೈತತ್ ಸಪ್ತಧಾ ವಿದುಃ।।
ಅನಂತರ ಗಂಧವು ಹುಟ್ಟುತ್ತದೆ. ಬಳಿಕ ರಸವು ಹುಟ್ಟುತ್ತದೆ. ನಂತರ ರೂಪವು ಹುಟ್ಟುತ್ತದೆ, ನಂತರ ಸ್ಪರ್ಶವು ಹುಟ್ಟುತ್ತದೆ. ನಂತರ ಶಬ್ಧವು ಹುಟ್ಟುತ್ತದೆ. ನಂತರ ಸಂಶಯ-ನಿರ್ಣಯಗಳ ಬುದ್ಧಿಯು ಹುಟ್ಟುತ್ತದೆ. ನಂತರ ನಿಷ್ಠೆಯು3 ಹುಟ್ಟುತ್ತದೆ. ಹೀಗೆ ಏಳು ಪ್ರಕಾರದ ಹುಟ್ಟುಗಳಾಗುತ್ತವೆಯೆಂದು ವಿಧ್ವಾಂಸರು ತಿಳಿದಿರುತ್ತಾರೆ.
14020027a ಅನೇನೈವ ಪ್ರಕಾರೇಣ ಪ್ರಗೃಹೀತಂ ಪುರಾತನೈಃ।
14020027c ಪೂರ್ಣಾಹುತಿಭಿರಾಪೂರ್ಣಾಸ್ತೇಽಭಿಪೂರ್ಯಂತಿ ತೇಜಸಾ।।
ಈ ಪ್ರಕಾರವಾಗಿಯೇ ಪುರಾತನ ಋಷಿಗಳು ಘ್ರಾಣವೇ ಮೊದಲಾದವುಗಳ ಸ್ವರೂಪವನ್ನು ಗ್ರಹಣಮಾಡಿದ್ದಾರೆ. ಜ್ಞಾತಾ-ಜ್ಞಾನ-ಜ್ಞೇಯ ಈ ಮೂರರ ಪೂರ್ಣಾಹುತಿಯಿಂದಲೇ ಸಮಸ್ತಲೋಕಗಳೂ ವ್ಯಾಪ್ತವಾಗಿವೆ. ಈ ತತ್ತ್ವದಿಂದಲೇ ಸಮಸ್ತಲೋಕಗಳೂ ಆತ್ಮಜ್ಯೋತಿಯಿಂದ ತುಂಬಿಹೋಗುತ್ತವೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಹ್ಮಗೀತಾಸು ವಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಹ್ಮಗೀತಾ ಎನ್ನುವ ಇಪ್ಪತ್ತನೇ ಅಧ್ಯಾಯವು.
-
ಸೋಮಃಸಹಾಗ್ನಿನಾ ಎಂಬುದಕ್ಕೆ ವ್ಯಾಖ್ಯಾನಕಾರರು ಸೋಮಃ ಎಂದರೆ ಇಡಾನಾಡಿ ಮತ್ತು ಅಗ್ನಿ ಎಂದರೆ ಪಿಂಗಲ ನಾಡಿ ಎಂದು ಹೇಳಿದ್ದಾರೆ. ಇವುಗಳಿಗೆ ವಾರಣಸೀ ಎಂಬ ಸಂಜ್ಞೆಯಿದೆ. ಈ ನಾಡಿಗಳು ವರಣಾಯಾಂ ಎಂದರೆ ಮೂಗಿನ ಮಧ್ಯದಲ್ಲಿ ನೆಲೆಸಿವೆ. ಭ್ರೋವೋಃ ಘ್ರಾಣಸ್ಯ ಚ ಯಃ ಸಂಧಿಃ ತಸ್ಮಿನ್ ಪ್ರತಿಷ್ಠಿತಃ ಎಂದರೆ ಹುಬ್ಬು ಮತ್ತು ಮೂಗಿನ ಸಂಧಿಯಲ್ಲಿ ಇಡಾ-ಪಿಂಗಳ ನಾಡಿಗಳಿವೆ. ↩︎
-
ಉತ್ಕರ್ಷೇಣ ಆನಯತಿ ಚೇಷ್ಟಯತಿ ಪ್ರಾಣಾನಿತಿ ಉದಾನಃ – ವಿಶೇಷವಾಗಿ ಪ್ರಾಣಗಳನ್ನು ಅವುಗಳು ಮಾಡಬೇಕಾದ ಕೆಲಸಗಳಲ್ಲಿ ತೊಡಗಿಸುತ್ತದೆ. ↩︎
-
ಮನಸ್ಸು . ↩︎