ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 18
ಸಾರ
ಕೃಷ್ಣನು ಅರ್ಜುನನಿಗೆ ಕಾಶ್ಯಪ-ಸಿದ್ಧಪುರುಷರ ಸಂವಾದವನ್ನು ಮುಂದುವರೆಸಿ ಹೇಳಿದುದು (1-34).
14018001 ಬ್ರಾಹ್ಮಣ ಉವಾಚ।
14018001a ಶುಭಾನಾಮಶುಭಾನಾಂ ಚ ನೇಹ ನಾಶೋಽಸ್ತಿ ಕರ್ಮಣಾಮ್।
14018001c ಪ್ರಾಪ್ಯ ಪ್ರಾಪ್ಯ ತು ಪಚ್ಯಂತೇ ಕ್ಷೇತ್ರಂ ಕ್ಷೇತ್ರಂ ತಥಾ ತಥಾ।।
ಬ್ರಾಹ್ಮಣನು ಹೇಳಿದನು: “ಇಲ್ಲಿ ಕರ್ಮಗಳ ಶುಭ-ಅಶುಭ ಫಲಗಳು ನಾಶವಾಗುವುದಿಲ್ಲ. ಜೀವವು ಪಡೆಯುವ ಕ್ಷೇತ್ರ-ಕ್ಷೇತ್ರಗಳಲ್ಲಿಯೂ ಅವು ತಲುಪಿ ಜೀವವನ್ನು ಬೇಯಿಸುತ್ತವೆ.
14018002a ಯಥಾ ಪ್ರಸೂಯಮಾನಸ್ತು ಫಲೀ ದದ್ಯಾತ್ಫಲಂ ಬಹು।
14018002c ತಥಾ ಸ್ಯಾದ್ವಿಪುಲಂ ಪುಣ್ಯಂ ಶುದ್ಧೇನ ಮನಸಾ ಕೃತಮ್।।
ಹೇಗೆ ಬೀಜ ಹಾಕಿ ಹುಟ್ಟಿಸಿದ ಫಲನೀಡುವ ವೃಕ್ಷವು ಫಲಿಸುವ ಕಾಲಬಂದೊದಗಿದಾಗ ಅಪಾರ ಫಲಗಳನ್ನು ನೀಡುವುದೋ ಹಾಗೆ ಶುದ್ಧ ಮನಸ್ಸಿನಿಂದ ಮಾಡಿದ ಕರ್ಮಗಳು ವಿಪುಲವಾದ ಪುಣ್ಯ ಫಲಗಳನ್ನು ನೀಡುತ್ತವೆ.
14018003a ಪಾಪಂ ಚಾಪಿ ತಥೈವ ಸ್ಯಾತ್ಪಾಪೇನ ಮನಸಾ ಕೃತಮ್।
14018003c ಪುರೋಧಾಯ ಮನೋ ಹೀಹ ಕರ್ಮಣ್ಯಾತ್ಮಾ ಪ್ರವರ್ತತೇ।।
ಹಾಗೆಯೇ ಪಾಪ ಮನಸ್ಸಿನಿಂದ ಮಾಡಿದ ಕರ್ಮಗಳು ಅಪಾರ ಪಾಪಫಲಗಳನ್ನು ನೀಡುತ್ತವೆ. ಜೀವಾತ್ಮನು ಮನಸ್ಸಿನಿಂದಲೇ ಇಂತಹ ಕರ್ಮಗಳನ್ನು ಮಾಡುತ್ತಿರುತ್ತಾನೆ.
14018004a ಯಥಾ ಕರ್ಮಸಮಾದಿಷ್ಟಂ ಕಾಮಮನ್ಯುಸಮಾವೃತಃ।
14018004c ನರೋ ಗರ್ಭಂ ಪ್ರವಿಶತಿ ತಚ್ಚಾಪಿ ಶೃಣು ಚೋತ್ತರಮ್।।
ಕರ್ಮದ ಬಲೆಯಿಂದ ಬಂಧಿಸಲ್ಪಟ್ಟು ಕಾಮ-ಕ್ರೋಧಗಳಿಂದ ಸಮಾವೃತನಾದ ನರನು ಹೇಗೆ ಗರ್ಭವನ್ನು ಪ್ರವೇಶಿಸುವನು ಎನ್ನುವುದನ್ನು ಕೇಳು.
14018005a ಶುಕ್ರಂ ಶೋಣಿತಸಂಸೃಷ್ಟಂ ಸ್ತ್ರಿಯಾ ಗರ್ಭಾಶಯಂ ಗತಮ್।
14018005c ಕ್ಷೇತ್ರಂ ಕರ್ಮಜಮಾಪ್ನೋತಿ ಶುಭಂ ವಾ ಯದಿ ವಾಶುಭಮ್।।
ವೀರ್ಯ-ರಕ್ತಗಳಿಂದ ಸೃಷ್ಟಿಸಲ್ಪಟ್ಟ ಜೀವಾತ್ಮನು ತನ್ನ ಕರ್ಮಗಳಿಗೆ ತಕ್ಕಂತಹ ಶುಭ ಅಥವಾ ಅಶುಭ ಕ್ಷೇತ್ರವನ್ನು ಪಡೆದು ಸ್ತ್ರೀಯ ಗರ್ಭಾಶಯವನ್ನು ಸೇರುತ್ತಾನೆ.
14018006a ಸೌಕ್ಷ್ಮ್ಯಾದವ್ಯಕ್ತಭಾವಾಚ್ಚ ನ ಸ ಕ್ವ ಚನ ಸಜ್ಜತೇ।
14018006c ಸಂಪ್ರಾಪ್ಯ ಬ್ರಹ್ಮಣಃ ಕಾಯಂ ತಸ್ಮಾತ್ತತ್ತದ್ಬ್ರಹ್ಮ ಶಾಶ್ವತಮ್।
ಜೀವನು ಸೂಕ್ಷ್ಮನೂ ಅವ್ಯಕ್ತನೂ ಆಗಿದ್ದರೂ ಪರಬ್ರಹ್ಮವಸ್ತುವಿನಲ್ಲಿ ಸೇರಿಕೊಂಡ ನಂತರ ಪುನಃ ಶರೀರಗಳಲ್ಲಿ ಸೇರಿಕೊಳ್ಳಲು ಆಸಕ್ತನಾಗಿರುವುದಿಲ್ಲ. ಈ ಕಾರಣದಿಂದಲೇ ಬ್ರಹ್ಮವು ಶಾಶ್ವತವಾದುದು.
14018006e ತದ್ಬೀಜಂ ಸರ್ವಭೂತಾನಾಂ ತೇನ ಜೀವಂತಿ ಜಂತವಃ।।
14018007a ಸ ಜೀವಃ ಸರ್ವಗಾತ್ರಾಣಿ ಗರ್ಭಸ್ಯಾವಿಶ್ಯ ಭಾಗಶಃ।
14018007c ದಧಾತಿ ಚೇತಸಾ ಸದ್ಯಃ ಪ್ರಾಣಸ್ಥಾನೇಷ್ವವಸ್ಥಿತಃ।
14018007e ತತಃ ಸ್ಪಂದಯತೇಽಂಗಾನಿ ಸ ಗರ್ಭಶ್ಚೇತನಾನ್ವಿತಃ।।
ಅದೇ ಸರ್ವಭೂತಗಳಿಗೂ ಬೀಜರೂಪವಾಗಿರುವುದು. ಅದರಿಂದಲೇ ಸರ್ವ ಜಂತುಗಳು ಜೀವಿಸಿರುತ್ತವೆ. ಆ ಜೀವನು ಗರ್ಭದ ಸರ್ವ ಅವಯವಗಳನ್ನೂ ಭಾಗಶಃ ಅವರಿಸಿ, ಪ್ರಾಣಸ್ಥಾನದಲ್ಲಿದ್ದುಕೊಂಡು ಚೇತಸ್ಸನ್ನು ತುಂಬಿಸುತ್ತಾನೆ. ಚೇತನಾಯುಕ್ತವಾದ ಗರ್ಭವು ನಂತರ ಎಲ್ಲ ಅವಯವಗಳನ್ನೂ ಸಂಚಾಲನಗೊಳಿಸುತ್ತದೆ.
14018008a ಯಥಾ ಹಿ ಲೋಹನಿಷ್ಯಂದೋ ನಿಷಿಕ್ತೋ ಬಿಂಬವಿಗ್ರಹಮ್।
14018008c ಉಪೈತಿ ತದ್ವಜ್ಜಾನೀಹಿ ಗರ್ಭೇ ಜೀವಪ್ರವೇಶನಮ್।।
ಕಾಯಿಸಿದ ಲೋಹ ದ್ರವವು ಹೇಗೆ ಎರಕದ ಅಚ್ಚನ್ನು ಪ್ರವೇಶಿಸುವುದೋ ಹಾಗೆ ಜೀವವೂ ಕೂಡ ಗರ್ಭವನ್ನು ಪ್ರವೇಶಿಸಿ, ಅದರ ಆಕಾರವನ್ನೇ ಪಡೆಯುತ್ತದೆ.
14018009a ಲೋಹಪಿಂಡಂ ಯಥಾ ವಹ್ನಿಃ ಪ್ರವಿಶತ್ಯಭಿತಾಪಯನ್।
14018009c ತಥಾ ತ್ವಮಪಿ ಜಾನೀಹಿ ಗರ್ಭೇ ಜೀವೋಪಪಾದನಮ್।।
ಅಗ್ನಿಯು ಹೇಗೆ ಲೋಹಪಿಂಡವನ್ನು ಸೇರಿ ಅದನ್ನು ಬಿಸಿಯಾಗಿಸುವನೋ ಅದೇರೀತಿಯಲ್ಲಿ ಜೀವವೂ ಗರ್ಭವನ್ನು ಸೇರಿ ಅದನ್ನು ಚೇತನಗೊಳಿಸುತ್ತದೆ.
14018010a ಯಥಾ ಚ ದೀಪಃ ಶರಣಂ ದೀಪ್ಯಮಾನಃ ಪ್ರಕಾಶಯೇತ್।
14018010c ಏವಮೇವ ಶರೀರಾಣಿ ಪ್ರಕಾಶಯತಿ ಚೇತನಾ।।
ಹಚ್ಚಿಟ್ಟ ದೀಪವು ಮನೆಯನ್ನು ಹೇಗೆ ಬೆಳಗಿಸುತ್ತದೆಯೋ ಹಾಗೆ ಚೇತನವು ಶರೀರಗಳನ್ನು ಪ್ರಕಾಶಗೊಳಿಸುತ್ತದೆ.
14018011a ಯದ್ಯಚ್ಚ ಕುರುತೇ ಕರ್ಮ ಶುಭಂ ವಾ ಯದಿ ವಾಶುಭಮ್।
14018011c ಪೂರ್ವದೇಹಕೃತಂ ಸರ್ವಮವಶ್ಯಮುಪಭುಜ್ಯತೇ।।
ಹಿಂದಿನ ದೇಹಗಳಲ್ಲಿರುವಾಗ ಮಾಡಿದ ಶುಭ ಅಥವಾ ಅಶುಭ ಕರ್ಮಗಳ ಫಲಗಳೆಲ್ಲವನ್ನೂ ಜೀವವು ಅವಶ್ಯವಾಗಿ ಅನುಭವಿಸಬೇಕಾಗುತ್ತದೆ.
14018012a ತತಸ್ತತ್ಕ್ಷೀಯತೇ ಚೈವ ಪುನಶ್ಚಾನ್ಯತ್ಪ್ರಚೀಯತೇ।
14018012c ಯಾವತ್ತನ್ಮೋಕ್ಷಯೋಗಸ್ಥಂ ಧರ್ಮಂ ನೈವಾವಬುಧ್ಯತೇ।।
ಎಲ್ಲಿಯವರೆಗೆ ಮೋಕ್ಷಯೋಗದ ಧರ್ಮವನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ಕರ್ಮಫಲಗಳು ಕ್ಷೀಣವಾಗುತ್ತಿರುತ್ತವೆ ಮತ್ತು ಪುನಃ ಅನ್ಯ ಕರ್ಮಗಳು ಸೇರಿಕೊಳ್ಳುತ್ತಲೇ ಇರುತ್ತವೆ.
14018013a ತತ್ರ ಧರ್ಮಂ ಪ್ರವಕ್ಷ್ಯಾಮಿ ಸುಖೀ ಭವತಿ ಯೇನ ವೈ।
14018013c ಆವರ್ತಮಾನೋ ಜಾತೀಷು ತಥಾನ್ಯೋನ್ಯಾಸು ಸತ್ತಮ।।
ಸತ್ತಮ! ಹೀಗೆ ಬೇರೆ ಬೇರೆ ಯೋನಿಗಳಲ್ಲಿ ಹುಟ್ಟುವ ಮನುಷ್ಯನು ಹೇಗೆ ಸುಖಿಯಾಗಿರಬಲ್ಲನು ಎಂಬ ಆ ಧರ್ಮದ ಕುರಿತು ಹೇಳುತ್ತೇನೆ.
14018014a ದಾನಂ ವ್ರತಂ ಬ್ರಹ್ಮಚರ್ಯಂ ಯಥೋಕ್ತವ್ರತಧಾರಣಮ್।
14018014c ದಮಃ ಪ್ರಶಾಂತತಾ ಚೈವ ಭೂತಾನಾಂ ಚಾನುಕಂಪನಮ್।।
14018015a ಸಂಯಮಶ್ಚಾನೃಶಂಸ್ಯಂ ಚ ಪರಸ್ವಾದಾನವರ್ಜನಮ್।
14018015c ವ್ಯಲೀಕಾನಾಮಕರಣಂ ಭೂತಾನಾಂ ಯತ್ರ ಸಾ ಭುವಿ।।
14018016a ಮಾತಾಪಿತ್ರೋಶ್ಚ ಶುಶ್ರೂಷಾ ದೇವತಾತಿಥಿಪೂಜನಮ್।
14018016c ಗುರುಪೂಜಾ ಘೃಣಾ ಶೌಚಂ ನಿತ್ಯಮಿಂದ್ರಿಯಸಂಯಮಃ।।
14018017a ಪ್ರವರ್ತನಂ ಶುಭಾನಾಂ ಚ ತತ್ಸತಾಂ ವೃತ್ತಮುಚ್ಯತೇ।
14018017c ತತೋ ಧರ್ಮಃ ಪ್ರಭವತಿ ಯಃ ಪ್ರಜಾಃ ಪಾತಿ ಶಾಶ್ವತೀಃ।।
ದಾನ, ವ್ರತ, ಬ್ರಹ್ಮಚರ್ಯ, ಯಥೋಕ್ತ ವ್ರತಧಾರಣ, ಇಂದ್ರಿಯ ನಿಗ್ರಹ, ಪ್ರಶಾಂತತೆ, ಸಮಸ್ತಪ್ರಾಣಿಗಳಲ್ಲಿ ಅನುಕಂಪ, ಸಂಯಮ, ಅಹಿಂಸೆ, ಇತರರಿಗೆ ಸೇರಿದ್ದುದನ್ನು ಅಪಹರಿಸದೇ ಇರುವುದು, ಭುವಿಯಲ್ಲಿರುವ ಎಲ್ಲ ಪ್ರಾಣಿಗಳಿಗೂ ಅಹಿತವನ್ನು ಬಯಸದೇ ಇರುವುದು, ಮಾತಾ-ಪಿತೃಗಳ ಶುಶ್ರೂಷೆ, ದೇವತೆಗಳ ಮತ್ತು ಅತಿಥಿಗಳ ಪೂಜನ, ಗುರುಪೂಜೆ, ದಯೆ, ಶುಚಿಯಾಗಿರುವುದು, ನಿತ್ಯವೂ ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡಿರುವುದು, ಇತರರನ್ನು ಶುಭಕರ್ಮಗಳಲ್ಲಿ ತೊಡಗಿಸುವುದು – ಇವು ಸತ್ಪುರುಷರ ಆಚಾರಗಳೆಂದು ಹೇಳುತ್ತಾರೆ. ಇವುಗಳ ಅನುಷ್ಠಾನದಿಂದ ಧರ್ಮವು ವೃದ್ಧಿಯಾಗುತ್ತದೆ. ಅದೇ ಪ್ರಜೆಗಳನ್ನು ಶಾಶ್ವತವಾಗಿ ರಕ್ಷಿಸುತ್ತದೆ.
14018018a ಏವಂ ಸತ್ಸು ಸದಾ ಪಶ್ಯೇತ್ತತ್ರ ಹ್ಯೇಷಾ ಧ್ರುವಾ ಸ್ಥಿತಿಃ।
14018018c ಆಚಾರೋ ಧರ್ಮಮಾಚಷ್ಟೇ ಯಸ್ಮಿನ್ಸಂತೋ ವ್ಯವಸ್ಥಿತಾಃ।।
ಧ್ರುವಸ್ಥಿತಿಯಲ್ಲಿರುವ ಸತ್ಪುರುಷರಲ್ಲಿ ಸದಾ ಇವುಗಳನ್ನು ನಾವು ಕಾಣುತ್ತೇವೆ. ಈ ಆಚಾರಗಳು ಧರ್ಮವನ್ನು ತೋರಿಸಿಕೊಡುತ್ತವೆ. ಸಂತರು ಇವುಗಳ ಮೇಲೆಯೇ ವ್ಯವಸ್ಥಿತರಾಗಿರುತ್ತಾರೆ.
14018019a ತೇಷು ತದ್ಧರ್ಮನಿಕ್ಷಿಪ್ತಂ ಯಃ ಸ ಧರ್ಮಃ ಸನಾತನಃ।
14018019c ಯಸ್ತಂ ಸಮಭಿಪದ್ಯೇತ ನ ಸ ದುರ್ಗತಿಮಾಪ್ನುಯಾತ್।।
ಅವರಲ್ಲಿ ಆ ಧರ್ಮವು ನೆಲೆಗೊಂಡಿದೆ. ಅದೇ ಸನಾತನ ಧರ್ಮ. ಅದನ್ನು ಅನುಸರಿಸುವವನು ಎಂದೂ ದುರ್ಗತಿಯನ್ನು ಹೊಂದುವುದಿಲ್ಲ.
14018020a ಅತೋ ನಿಯಮ್ಯತೇ ಲೋಕಃ ಪ್ರಮುಹ್ಯ ಧರ್ಮವರ್ತ್ಮಸು।
14018020c ಯಸ್ತು ಯೋಗೀ ಚ ಮುಕ್ತಶ್ಚ ಸ ಏತೇಭ್ಯೋ ವಿಶಿಷ್ಯತೇ।।
ಧರ್ಮವರ್ತನೆಗಳಿಂದ ಜಾರಿಹೋಗುವ ಲೋಕವನ್ನು ಇದೇ ನಿಯಂತ್ರಿಸುತ್ತದೆ. ಯೋಗಿಯೂ ಮುಕ್ತನೂ ಆದವನು ಇವುಗಳೆರಡರಲ್ಲಿಯೂ ಶ್ರೇಷ್ಠನಾಗಿರುತ್ತಾನೆ.
14018021a ವರ್ತಮಾನಸ್ಯ ಧರ್ಮೇಣ ಪುರುಷಸ್ಯ ಯಥಾ ತಥಾ।
14018021c ಸಂಸಾರತಾರಣಂ ಹ್ಯಸ್ಯ ಕಾಲೇನ ಮಹತಾ ಭವೇತ್।।
ಹೀಗೆ ಧರ್ಮದಲ್ಲಿ ನಡೆದುಕೊಳ್ಳುವ ಪುರುಷನು ಮಹಾಕಾಲದ ನಂತರ ಸಂಸಾರಸಾಗರವನ್ನು ದಾಟುತ್ತಾನೆ.
14018022a ಏವಂ ಪೂರ್ವಕೃತಂ ಕರ್ಮ ಸರ್ವೋ ಜಂತುರ್ನಿಷೇವತೇ।
14018022c ಸರ್ವಂ ತತ್ಕಾರಣಂ ಯೇನ ನಿಕೃತೋಽಯಮಿಹಾಗತಃ।।
ಹೀಗೆ ಪೂರ್ವಕೃತ ಕರ್ಮಗಳೆಲ್ಲವನ್ನೂ ಜೀವವು ಅನುಭವಿಸುತ್ತದೆ. ಕರ್ಮಗಳಿಂದಲೇ ಜೀವವು ಇಲ್ಲಿ ವಿಕಾರವನ್ನು ಹೊಂದಿ ಜನ್ಮತಾಳುತ್ತದೆ.
14018023a ಶರೀರಗ್ರಹಣಂ ಚಾಸ್ಯ ಕೇನ ಪೂರ್ವಂ ಪ್ರಕಲ್ಪಿತಮ್।
14018023c ಇತ್ಯೇವಂ ಸಂಶಯೋ ಲೋಕೇ ತಚ್ಚ ವಕ್ಷ್ಯಾಮ್ಯತಃ ಪರಮ್।।
ಜೀವದ ಶರೀರಗ್ರಹಣವನ್ನು ಮೊದಲು ಕಲ್ಪಿಸಿದವರು ಯಾರು ಎನ್ನುವ ಈ ಸಂಶಯವು ಲೋಕದಲ್ಲಿ ಇದ್ದೇ ಇದೆ. ಅದರ ಕುರಿತು ಈಗ ಹೇಳುತ್ತೇನೆ.
14018024a ಶರೀರಮಾತ್ಮನಃ ಕೃತ್ವಾ ಸರ್ವಭೂತಪಿತಾಮಹಃ।
14018024c ತ್ರೈಲೋಕ್ಯಮಸೃಜದ್ಬ್ರಹ್ಮಾ ಕೃತ್ಸ್ನಂ ಸ್ಥಾವರಜಂಗಮಮ್।।
ಸರ್ವಭೂತಪಿತಾಮಹ ಬ್ರಹ್ಮನು ತನ್ನ ಆತ್ಮವನ್ನೇ ಶರೀರವನ್ನಾಗಿಸಿಕೊಂಡು ಸ್ಥಾವರಜಂಗಮಗಳಿಂದ ಕೂಡಿರುವ ಈ ಸಂಪೂರ್ಣ ತ್ರೈಲೋಕ್ಯಗಳನ್ನು ಸೃಷ್ಟಿಸಿದನು.
14018025a ತತಃ ಪ್ರಧಾನಮಸೃಜಚ್ಚೇತನಾ ಸಾ ಶರೀರಿಣಾಮ್।
14018025c ಯಯಾ ಸರ್ವಮಿದಂ ವ್ಯಾಪ್ತಂ ಯಾಂ ಲೋಕೇ ಪರಮಾಂ ವಿದುಃ।।
ಅನಂತರ ಅವನು ಪ್ರಧಾನವನ್ನು ಸೃಷ್ಟಿಸಿದನು. ಅದೇ ಶರೀರಿಗಳ ಚೇತನವು. ಅದು ಸರ್ವಲೋಕಗಳಲ್ಲಿಯೂ ವ್ಯಾಪ್ತವಾಗಿದೆ. ಅದನ್ನೇ ಪರಾಪ್ರಕೃತಿ ಎಂದು ಹೇಳುತ್ತಾರೆ.
14018026a ಇಹ ತತ್ಕ್ಷರಮಿತ್ಯುಕ್ತಂ ಪರಂ ತ್ವಮೃತಮಕ್ಷರಮ್।
14018026c ತ್ರಯಾಣಾಂ ಮಿಥುನಂ ಸರ್ವಮೇಕೈಕಸ್ಯ ಪೃಥಕ್ ಪೃಥಕ್।।
ಇಲ್ಲಿ ಪ್ರಕೃತಿಗೆ ಕ್ಷರವೆಂದೂ ಪರಾಪ್ರಕೃತಿಗೆ ಅಕ್ಷರವೆಂದೂ ಹೇಳುತ್ತಾರೆ. ಶುದ್ಧ ಬ್ರಹ್ಮತತ್ತ್ವ, ಕ್ಷರ ಮತ್ತು ಅಕ್ಷರ ಈ ಮೂರೂ ತತ್ತ್ವಗಳು ಎಲ್ಲವುಗಳಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಮಿಶ್ರಿತವಾಗಿರುತ್ತವೆ.
14018027a ಅಸೃಜತ್ಸರ್ವಭೂತಾನಿ ಪೂರ್ವಸೃಷ್ಟಃ ಪ್ರಜಾಪತಿಃ।
14018027c ಸ್ಥಾವರಾಣಿ ಚ ಭೂತಾನಿ ಇತ್ಯೇಷಾ ಪೌರ್ವಿಕೀ ಶ್ರುತಿಃ।।
ಪ್ರಜಾಪತಿಯು ಮೊದಲು ಸ್ಥಾವರ-ಜಂಗಮಗಳಾದ ಸರ್ವಭೂತಗಳನ್ನೂ ಸೃಷ್ಟಿಸಿದನು ಎಂದು ಪುರಾತನ ಶ್ರುತಿಯು ಹೇಳುತ್ತದೆ.
14018028a ತಸ್ಯ ಕಾಲಪರೀಮಾಣಮಕರೋತ್ಸ ಪಿತಾಮಹಃ।
14018028c ಭೂತೇಷು ಪರಿವೃತ್ತಿಂ ಚ ಪುನರಾವೃತ್ತಿಮೇವ ಚ।।
ಪಿತಾಮಹನು ಭೂತಗಳಲ್ಲಿರುವ ಜೀವಗಳ ಪುನರಾವೃತ್ತಿಗಳಿಗೆ ಕಾಲಪರಿಮಾಣಗಳನ್ನು ನಿಯಮಿಸಿದನು.
14018029a ಯಥಾತ್ರ ಕಶ್ಚಿನ್ಮೇಧಾವೀ ದೃಷ್ಟಾತ್ಮಾ ಪೂರ್ವಜನ್ಮನಿ।
14018029c ಯತ್ಪ್ರವಕ್ಷ್ಯಾಮಿ ತತ್ಸರ್ವಂ ಯಥಾವದುಪಪದ್ಯತೇ।।
ಪೂರ್ವಜನ್ಮದಲ್ಲಿ ಆತ್ಮಸಾಕ್ಷಾತ್ಕಾರವನ್ನು ಮಾಡಿಕೊಂಡ ಓರ್ವ ಮೇದಾವಿಯು ಇವೆಲ್ಲದರ ಕುರಿತು ಹೇಳಿದುದನ್ನೇ ನಾನು ಹೇಳುತ್ತಿದ್ದೇನೆ.
14018030a ಸುಖದುಃಖೇ ಸದಾ ಸಮ್ಯಗನಿತ್ಯೇ ಯಃ ಪ್ರಪಶ್ಯತಿ।
14018030c ಕಾಯಂ ಚಾಮೇಧ್ಯಸಂಘಾತಂ ವಿನಾಶಂ ಕರ್ಮಸಂಹಿತಮ್।।
14018031a ಯಚ್ಚ ಕಿಂ ಚಿತ್ಸುಖಂ ತಚ್ಚ ಸರ್ವಂ ದುಃಖಮಿತಿ ಸ್ಮರನ್।
14018031c ಸಂಸಾರಸಾಗರಂ ಘೋರಂ ತರಿಷ್ಯತಿ ಸುದುಸ್ತರಮ್।।
ಸುಖ-ದುಃಖಗಳು ಸದಾ ಅನಿತ್ಯವೆಂದು ಯಾರು ಕಾಣುತ್ತಾನೋ, ಈ ಮೇದ್ಯಸಂಘಾತ ಮತ್ತು ಕರ್ಮಸಂಹಿತ ಶರೀರವು ವಿನಾಶಗೊಳ್ಳುವುದೆಂದು ಯಾರು ತಿಳಿದಿರುತ್ತಾನೋ, ಸುಖದಂತಿರುವ ಕಿಂಚಿತ್ತೆಲ್ಲವೂ ದುಃಖವೆಂದೇ ಯಾರು ನೆನಪಿಸಿಕೊಳ್ಳುತ್ತಿರುವನೋ ಅವನು ಈ ದುಸ್ತರ ಘೋರ ಸಂಸಾರ ಸಾಗರವನ್ನು ದಾಟುತ್ತಾನೆ.
14018032a ಜಾತೀಮರಣರೋಗೈಶ್ಚ ಸಮಾವಿಷ್ಟಃ ಪ್ರಧಾನವಿತ್।
14018032c ಚೇತನಾವತ್ಸು ಚೈತನ್ಯಂ ಸಮಂ ಭೂತೇಷು ಪಶ್ಯತಿ।।
ಜನನ-ಮರಣ-ರೋಗಗಳಿಂದ ವ್ಯಾಪ್ತನಾದ ಪ್ರಧಾನತತ್ತ್ವವನ್ನು ತಿಳಿದುಕೊಂಡವನು ಚೇತನಗಳಿರುವ ಎಲ್ಲವುಗಳ ಚೇತನವು ಒಂದೇ ಎಂದು ಕಾಣುತ್ತಾನೆ.
14018033a ನಿರ್ವಿದ್ಯತೇ ತತಃ ಕೃತ್ಸ್ನಂ ಮಾರ್ಗಮಾಣಃ ಪರಂ ಪದಮ್।
14018033c ತಸ್ಯೋಪದೇಶಂ ವಕ್ಷ್ಯಾಮಿ ಯಾಥಾತಥ್ಯೇನ ಸತ್ತಮ।।
ಸತ್ತಮ! ಹೀಗೆ ತಿಳಿದುಕೊಂಡು ಪರಮ ಪದವನ್ನು ನೀಡುವ ಎಲ್ಲ ಮಾರ್ಗಗಳನ್ನೂ ಅನುಸರಿಸುವವನ ಉಪದೇಶವನ್ನು ಅರ್ಥಗಳೊಂದಿಗೆ ಹೇಳುತ್ತೇನೆ.
14018034a ಶಾಶ್ವತಸ್ಯಾವ್ಯಯಸ್ಯಾಥ ಪದಸ್ಯ ಜ್ಞಾನಮುತ್ತಮಮ್।
14018034c ಪ್ರೋಚ್ಯಮಾನಂ ಮಯಾ ವಿಪ್ರ ನಿಬೋಧೇದಮಶೇಷತಃ।।
ವಿಪ್ರ! ಶಾಶ್ವತವೂ ಅವ್ಯಯವೂ ಆದ ಆ ಪದವಿಯ ಉತ್ತಮ ಜ್ಞಾನದ ಕುರಿತು ಹೇಳುವ ನನ್ನನ್ನು ಸಂಪೂರ್ಣವಾಗಿ ಕೇಳು!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಅಷ್ಟಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾ ಎನ್ನುವ ಹದಿನೆಂಟನೇ ಅಧ್ಯಾಯವು.