016: ಅನುಗೀತಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 16

ಸಾರ

ಇಂದ್ರಪ್ರಸ್ಥದಲ್ಲಿ ವಿಹರಿಸುತ್ತಿರುವಾಗ ಅರ್ಜುನನು ಕೃಷ್ಣನಿಗೆ ಯುದ್ಧದ ಮೊದಲು “ನೀನು ಏನೆಲ್ಲವನ್ನು ಹೇಳಿದ್ದೆಯೋ ಅವೆಲ್ಲವನ್ನೂ ನಷ್ಟಚೇತನನಾದ ನಾನು ಮರೆತುಹೋಗಿದ್ದೇನೆ” ಎಂದು ಹೇಳಿ ಅದರ ಅರ್ಥವನ್ನು ಪುನಃ ಹೇಳಬೇಕೆಂದು ಕೃಷ್ಣನಲ್ಲಿ ಕೇಳಿಕೊಳ್ಳುವುದು (1-7). ಬ್ರಹ್ಮಪದಕ್ಕೆ ಪರ್ಯಾಪ್ತವಾದ ಅದನ್ನು ಪುನಃ ಹೇಳಲು ಶಕ್ಯವಿಲ್ಲವೆಂದೂ, ಆದರೆ ಅದೇ ಅರ್ಥವನ್ನು ಕೊಡುವ ಪುರಾತನ ಇತಿಹಾಸವನ್ನು ಹೇಳುತ್ತೇನೆಂದು ಕೃಷ್ಣನು ಅರ್ಜುನನಿಗೆ ಓರ್ವ ಬ್ರಾಹ್ಮಣ ಮತ್ತು ತನ್ನ ನಡುವೆ ನಡೆದ ಸಂಭಾಷಣೆಯನ್ನು ವರ್ಣಿಸುತ್ತಾ ಅದರಲ್ಲಿ ಕಾಶ್ಯಪ-ಸಿದ್ಧಪುರುಷರ ಸಂವಾದವನ್ನು ತಿಳಿಸಿದುದು (8-43).

14016001 ಜನಮೇಜಯ ಉವಾಚ।
14016001a ಸಭಾಯಾಂ ವಸತೋಸ್ತಸ್ಯಾಂ ನಿಹತ್ಯಾರೀನ್ಮಹಾತ್ಮನೋಃ।
14016001c ಕೇಶವಾರ್ಜುನಯೋಃ ಕಾ ನು ಕಥಾ ಸಮಭವದ್ದ್ವಿಜ।।

ಜನಮೇಜಯನು ಹೇಳಿದನು: “ದ್ವಿಜ! ಶತ್ರುಗಳನ್ನು ಸಂಹರಿಸಿ ಮಹಾತ್ಮ ಕೇಶವಾರ್ಜುನರು ಮಯಸಭೆಯಲ್ಲಿ ವಾಸಿಸುತ್ತಿದ್ದಾಗ ಏನೇನು ಮಾತನಾಡಿದರು?”

14016002 ವೈಶಂಪಾಯನ ಉವಾಚ।
14016002a ಕೃಷ್ಣೇನ ಸಹಿತಃ ಪಾರ್ಥಃ ಸ್ವರಾಜ್ಯಂ ಪ್ರಾಪ್ಯ ಕೇವಲಮ್।
14016002c ತಸ್ಯಾಂ ಸಭಾಯಾಂ ರಮ್ಯಾಯಾಂ ವಿಜಹಾರ ಮುದಾ ಯುತಃ।।

ವೈಶಂಪಾಯನನು ಹೇಳಿದನು: “ಸ್ವರಾಜ್ಯವನ್ನು ಪಡೆದು ಪಾರ್ಥನು ಕೃಷ್ಣನೊಂದಿಗೆ ಆ ರಮ್ಯಸಭೆಯಲ್ಲಿ ಮುದಿತನಾಗಿ ವಿಹರಿಸಿದನು.

14016003a ತತಃ ಕಂ ಚಿತ್ಸಭೋದ್ದೇಶಂ ಸ್ವರ್ಗೋದ್ದೇಶಸಮಂ ನೃಪ।
14016003c ಯದೃಚ್ಚಯಾ ತೌ ಮುದಿತೌ ಜಗ್ಮತುಃ ಸ್ವಜನಾವೃತೌ।।

ನೃಪ! ಸ್ವರ್ಗದ ಪ್ರದೇಶದಂತಿದ್ದ ಆ ಸಭಾಪ್ರದೇಶದಲ್ಲಿ ಅವರಿಬ್ಬರೂ ಸ್ವಜನರಿಂದ ಪರಿವೃತರಾಗಿ ಮೋದದಿಂದ ತಿರುಗಾಡಿದರು.

14016004a ತತಃ ಪ್ರತೀತಃ ಕೃಷ್ಣೇನ ಸಹಿತಃ ಪಾಂಡವೋಽರ್ಜುನಃ।
14016004c ನಿರೀಕ್ಷ್ಯ ತಾಂ ಸಭಾಂ ರಮ್ಯಾಮಿದಂ ವಚನಮಬ್ರವೀತ್।।

ಆಗ ಆ ರಮ್ಯ ಸಭೆಯನ್ನು ನೋಡುತ್ತಾ ಕೃಷ್ಣನ ಸಹಿತ ನಡೆಯುತ್ತಿದ್ದ ಪಾಂಡವ ಅರ್ಜುನನು ಈ ಮಾತನ್ನಾಡಿದನು:

14016005a ವಿದಿತಂ ತೇ ಮಹಾಬಾಹೋ ಸಂಗ್ರಾಮೇ ಸಮುಪಸ್ಥಿತೇ।
14016005c ಮಾಹಾತ್ಮ್ಯಂ ದೇವಕೀಮಾತಸ್ತಚ್ಚ ತೇ ರೂಪಮೈಶ್ವರಮ್।।

“ಮಹಾಬಾಹೋ! ದೇವಕೀಪುತ್ರ! ಸಂಗ್ರಾಮವು ಪ್ರಾರಂಭವಾಗುವಾಗ ನಾನು ನಿನ್ನ ಮಹಾತ್ಮೆಯನ್ನೂ ಈಶ್ವರನ ರೂಪವನ್ನೂ ತಿಳಿದುಕೊಂಡೆನು.

14016006a ಯತ್ತು ತದ್ಭವತಾ ಪ್ರೋಕ್ತಂ ತದಾ ಕೇಶವ ಸೌಹೃದಾತ್।
14016006c ತತ್ಸರ್ವಂ ಪುರುಷವ್ಯಾಘ್ರ ನಷ್ಟಂ ಮೇ ನಷ್ಟಚೇತಸಃ।।

ಕೇಶವ! ಪುರುಷವ್ಯಾಘ್ರ! ಅಂದು ಸೌಹಾರ್ದತೆಯಿಂದ ನೀನು ಏನೆಲ್ಲವನ್ನು ಹೇಳಿದ್ದೆಯೋ ಅವೆಲ್ಲವನ್ನೂ ನಷ್ಟಚೇತನನಾದ ನಾನು ಮರೆತುಹೋಗಿದ್ದೇನೆ.

14016007a ಮಮ ಕೌತೂಹಲಂ ತ್ವಸ್ತಿ ತೇಷ್ವರ್ಥೇಷು ಪುನಃ ಪ್ರಭೋ।
14016007c ಭವಾಂಶ್ಚ ದ್ವಾರಕಾಂ ಗಂತಾ ನಚಿರಾದಿವ ಮಾಧವ।।

ಮಾಧವ! ಸ್ವಲ್ಪಸಮಯದಲ್ಲಿಯೇ ನೀನು ದ್ವಾರಕೆಗೆ ಹೋಗುವವನಿದ್ದೀಯೆ! ಪ್ರಭೋ! ಅದಕ್ಕೆ ಮೊದಲು ನಿನ್ನಿಂದ ಅದರ ಅರ್ಥವನ್ನು ಪುನಃ ತಿಳಿದುಕೊಳ್ಳಲು ನನಗೆ ಕುತೂಹಲವಾಗಿದೆ.”

14016008a ಏವಮುಕ್ತಸ್ತತಃ ಕೃಷ್ಣಃ ಫಲ್ಗುನಂ ಪ್ರತ್ಯಭಾಷತ।
14016008c ಪರಿಷ್ವಜ್ಯ ಮಹಾತೇಜಾ ವಚನಂ ವದತಾಂ ವರಃ।।

ಹೀಗೆ ಹೇಳಲು ಮಹಾತೇಜಸ್ವಿ, ಮಾತನಾಡುವವರಲ್ಲಿ ಶ್ರೇಷ್ಠ ಕೃಷ್ಣನು ಫಲ್ಗುನನನ್ನು ಬಿಗಿದಪ್ಪಿ ಈ ಮಾತುಗಳನ್ನಾಡಿದನು:

14016009a ಶ್ರಾವಿತಸ್ತ್ವಂ ಮಯಾ ಗುಹ್ಯಂ ಜ್ಞಾಪಿತಶ್ಚ ಸನಾತನಮ್।
14016009c ಧರ್ಮಂ ಸ್ವರೂಪಿಣಂ ಪಾರ್ಥ ಸರ್ವಲೋಕಾಂಶ್ಚ ಶಾಶ್ವತಾನ್।।

“ಪಾರ್ಥ! ಗುಹ್ಯವೂ ಸನಾತನವೂ ಆದ ಸರ್ವಲೋಕಗಳಲ್ಲಿ ಶಾಶ್ವತ ಧರ್ಮದ ಸ್ವರೂಪ ಜ್ಞಾನವನ್ನು ನಿನಗೆ ನಾನು ಹೇಳಿದ್ದೆನು.

14016010a ಅಬುದ್ಧ್ವಾ ಯನ್ನ ಗೃಹ್ಣೀಥಾಸ್ತನ್ಮೇ ಸುಮಹದಪ್ರಿಯಮ್।
14016010c ನೂನಮಶ್ರದ್ದಧಾನೋಽಸಿ ದುರ್ಮೇಧಾಶ್ಚಾಸಿ ಪಾಂಡವ।।

ಪಾಂಡವ! ಆದರೆ ನೀನು ಬುದ್ಧಿಯಿಲ್ಲದೇ ಅದನ್ನು ಗ್ರಹಿಸಿಕೊಳ್ಳಲಿಲ್ಲ ಎನ್ನುವುದು ನನಗೆ ಬಹಳ ಅಪ್ರಿಯವಾಗಿದೆ. ನೀನು ತುಂಬಾ ಅಶ್ರದ್ಧೆಯುಳ್ಳವನೂ ಮಂದಬುದ್ಧಿಯುಳ್ಳವನೂ ಆಗಿರುವೆ.

14016011a ಸ ಹಿ ಧರ್ಮಃ ಸುಪರ್ಯಾಪ್ತೋ ಬ್ರಹ್ಮಣಃ ಪದವೇದನೇ।
14016011c ನ ಶಕ್ಯಂ ತನ್ಮಯಾ ಭೂಯಸ್ತಥಾ ವಕ್ತುಮಶೇಷತಃ।।

ಏಕೆಂದರೆ ಬ್ರಹ್ಮಪದವನ್ನು ಪಡೆಯುವುದಕ್ಕೆ ಅದು ತುಂಬಾ ಪರ್ಯಾಪ್ತವಾಗಿತ್ತು. ಅದನ್ನು ಪುನಃ ಸಂಪೂರ್ಣವಾಗಿ ಹೇಳಲು ನನ್ನಿಂದ ಶಕ್ಯವಿಲ್ಲ.

14016012a ಪರಂ ಹಿ ಬ್ರಹ್ಮ ಕಥಿತಂ ಯೋಗಯುಕ್ತೇನ ತನ್ಮಯಾ।
14016012c ಇತಿಹಾಸಂ ತು ವಕ್ಷ್ಯಾಮಿ ತಸ್ಮಿನ್ನರ್ಥೇ ಪುರಾತನಮ್।।

ಆಗ ನಾನು ಯೋಗಯುಕ್ತನಾಗಿದ್ದುದರಿಂದ ಆ ಬ್ರಹ್ಮತತ್ತ್ವವನ್ನು ವಿವರಿಸಿ ಹೇಳಿದ್ದೆನು. ಆದರೆ ಅದೇ ಅರ್ಥಕೊಡುವ ಪುರಾತನ ಇತಿಹಾಸವನ್ನು ನಿನಗೆ ಹೇಳುತ್ತೇನೆ.

14016013a ಯಥಾ ತಾಂ ಬುದ್ಧಿಮಾಸ್ಥಾಯ ಗತಿಮಗ್ರ್ಯಾಂ ಗಮಿಷ್ಯಸಿ।
14016013c ಶೃಣು ಧರ್ಮಭೃತಾಂ ಶ್ರೇಷ್ಠ ಗದತಃ ಸರ್ವಮೇವ ಮೇ।।

ಆ ಬುದ್ಧಿಯಲ್ಲಿದ್ದುಕೊಂಡರೆ ನೀನು ಉತ್ತಮ ಲೋಕಗಳಿಗೆ ಹೋಗುತ್ತೀಯೆ. ಧರ್ಮಭೃತರಲ್ಲಿ ಶ್ರೇಷ್ಠ! ಕೇಳು. ಎಲ್ಲವನ್ನೂ ನಿನಗೆ ಹೇಳುತ್ತೇನೆ.

14016014a ಆಗಚ್ಚದ್ಬ್ರಾಹ್ಮಣಃ ಕಶ್ಚಿತ್ ಸ್ವರ್ಗಲೋಕಾದರಿಂದಮ।
14016014c ಬ್ರಹ್ಮಲೋಕಾಚ್ಚ ದುರ್ಧರ್ಷಃ ಸೋಽಸ್ಮಾಭಿಃ ಪೂಜಿತೋಽಭವತ್।।

ಅರಿಂದಮ! ಹಿಂದೊಮ್ಮೆ ಓರ್ವ ಬ್ರಾಹ್ಮಣನು ಸ್ವರ್ಗಲೋಕದಿಂದ ಬಂದನು. ಬ್ರಹ್ಮಲೋಕದವನಾಗಿದ್ದ ಅವನ ತೇಜಸ್ಸನ್ನು ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಅವನನ್ನು ನಾವು ಸ್ವಾಗತಿಸಿ ಸತ್ಕರಿಸಿದೆವು.

14016015a ಅಸ್ಮಾಭಿಃ ಪರಿಪೃಷ್ಟಶ್ಚ ಯದಾಹ ಭರತರ್ಷಭ।
14016015c ದಿವ್ಯೇನ ವಿಧಿನಾ ಪಾರ್ಥ ತಚ್ಚೃಣುಷ್ವಾವಿಚಾರಯನ್।।

ಭರತರ್ಷಭ! ಪಾರ್ಥ! ನಮ್ಮ ಪ್ರಶ್ನೆಗಳಿಗೆ ಅವನು ಉತ್ತರಿಸಿದ ದಿವ್ಯ ವಿಧಿಯನ್ನು ಕೇಳು.

14016016 ಬ್ರಾಹ್ಮಣ ಉವಾಚ 14016016a ಮೋಕ್ಷಧರ್ಮಂ ಸಮಾಶ್ರಿತ್ಯ ಕೃಷ್ಣ ಯನ್ಮಾನುಪೃಚ್ಚಸಿ।
14016016c ಭೂತಾನಾಮನುಕಂಪಾರ್ಥಂ ಯನ್ಮೋಹಚ್ಚೇದನಂ ಪ್ರಭೋ।।

ಬ್ರಾಹ್ಮಣನು ಹೇಳಿದನು: “ಪ್ರಭೋ! ಕೃಷ್ಣ! ಜೀವಿಗಳ ಮೇಲಿನ ಅನುಕಂಪದಿಂದ ಮೋಹವನ್ನು ಛೇದಿಸುವ ಮೋಕ್ಷಧರ್ಮದ ಕುರಿತು ನೀನು ಪ್ರಶ್ನಿಸುತ್ತಿದ್ದೀಯೆ1.

14016017a ತತ್ತೇಽಹಂ ಸಂಪ್ರವಕ್ಷ್ಯಾಮಿ ಯಥಾವನ್ಮಧುಸೂದನ।
14016017c ಶೃಣುಷ್ವಾವಹಿತೋ ಭೂತ್ವಾ ಗದತೋ ಮಮ ಮಾಧವ।।

ಮಾಧವ! ಮಧುಸೂದನ! ಯಥಾವತ್ತಾಗಿ ಅದನ್ನು ನಿನಗೆ ವಿವರಿಸುತ್ತೇನೆ. ನಾನು ಹೇಳುವುದನ್ನು ಅನನ್ಯಚಿತ್ತದಿಂದ ಕೇಳು.

14016018a ಕಶ್ಚಿದ್ವಿಪ್ರಸ್ತಪೋಯುಕ್ತಃ ಕಾಶ್ಯಪೋ ಧರ್ಮವಿತ್ತಮಃ।
14016018c ಆಸಸಾದ ದ್ವಿಜಂ ಕಂ ಚಿದ್ಧರ್ಮಾಣಾಮಾಗತಾಗಮಮ್।।

ಒಮ್ಮೆ ತಪೋಯುಕ್ತನೂ ಧರ್ಮವಿತ್ತಮನೂ ಆದ ಕಾಶ್ಯಪ ದ್ವಿಜನು ಧರ್ಮದ ರಹಸ್ಯಗಳನ್ನು ತಿಳಿದಿದ್ದ ಓರ್ವ ದ್ವಿಜನನ್ನು ಸಂಧಿಸಿದನು.

14016019a ಗತಾಗತೇ ಸುಬಹುಶೋ ಜ್ಞಾನವಿಜ್ಞಾನಪಾರಗಮ್।
14016019c ಲೋಕತತ್ತ್ವಾರ್ಥಕುಶಲಂ ಜ್ಞಾತಾರಂ ಸುಖದುಃಖಯೋಃ।।

ಅವನು ಹಿಂದಾದುದನ್ನೂ ಮತ್ತು ಮುಂದಾಗುವುದನ್ನೂ ತಿಳಿದಿದ್ದನು. ಜ್ಞಾನ ಮತ್ತು ವಿಜ್ಞಾನಗಳೆರಡರಲ್ಲೂ ಪಾರಂಗತನಾಗಿದ್ದನು. ಲೋಕತತ್ತ್ವದ ಅರ್ಥದಲ್ಲಿ ಕುಶಲನಾಗಿದ್ದನು ಮತ್ತು ಸುಖ-ದುಃಖಗಳ ರಹಸ್ಯವನ್ನು ತಿಳಿದಿದ್ದನು.

14016020a ಜಾತೀಮರಣತತ್ತ್ವಜ್ಞಂ ಕೋವಿದಂ ಪುಣ್ಯಪಾಪಯೋಃ।
14016020c ದ್ರಷ್ಟಾರಮುಚ್ಚನೀಚಾನಾಂ ಕರ್ಮಭಿರ್ದೇಹಿನಾಂ ಗತಿಮ್।।

ಹುಟ್ಟು-ಮರಣಗಳ ತತ್ತ್ವಗಳನ್ನು ತಿಳಿದಿದ್ದನು, ಮತ್ತು ಪುಣ್ಯ-ಪಾಪಗಳ ಕುರಿತು ಕೋವಿದನಾಗಿದ್ದನು. ಕರ್ಮಗಳಿಗನುಗುಣವಾಗಿ ಜೀವಿಗಳು ಉಚ್ಚ-ನೀಚ ಯೋನಿಗಳಲ್ಲಿ ಹುಟ್ಟುವುದನ್ನು ಕಂಡಿದ್ದನು.

14016021a ಚರಂತಂ ಮುಕ್ತವತ್ಸಿದ್ಧಂ ಪ್ರಶಾಂತಂ ಸಂಯತೇಂದ್ರಿಯಮ್।
14016021c ದೀಪ್ಯಮಾನಂ ಶ್ರಿಯಾ ಬ್ರಾಹ್ಮ್ಯಾ ಕ್ರಮಮಾಣಂ ಚ ಸರ್ವಶಃ।।

ಮುಕ್ತನಾದವನಂತೆ ಸರ್ವತ್ರ ಸಂಚರಿಸುತ್ತಿದ್ದ ಆ ಸಿದ್ಧನು ಪ್ರಶಾಂತನೂ, ಸಂಯತೇಂದ್ರಿಯನೂ ಆಗಿದ್ದು, ಬ್ರಹ್ಮಶ್ರೀಯಿಂದ ಬೆಳಗುತ್ತಿದ್ದನು.

14016022a ಅಂತರ್ಧಾನಗತಿಜ್ಞಂ ಚ ಶ್ರುತ್ವಾ ತತ್ತ್ವೇನ ಕಾಶ್ಯಪಃ।
14016022c ತಥೈವಾಂತರ್ಹಿತೈಃ ಸಿದ್ಧೈರ್ಯಾಂತಂ ಚಕ್ರಧರೈಃ ಸಹ।।
14016023a ಸಂಭಾಷಮಾಣಮೇಕಾಂತೇ ಸಮಾಸೀನಂ ಚ ತೈಃ ಸಹ।
14016023c ಯದೃಚ್ಚಯಾ ಚ ಗಚ್ಚಂತಮಸಕ್ತಂ ಪವನಂ ಯಥಾ।।

ಗಾಳಿಯಂತೆ ನಿರ್ಲಿಪ್ತನಾಗಿ ಸ್ವಚ್ಛಂದ ತಿರುಗುತ್ತಿದ್ದ ಅವನು ಅಂತರ್ಧಾನ ವಿದ್ಯೆಯನ್ನು ತಿಳಿದಿದ್ದನು. ಅವನು ಚಕ್ರಧಾರಿ ಸಿದ್ಧರೊಡನೆ ಪ್ರಯಾಣಮಾಡುತ್ತಾ ಅವರೊಂದಿಗೆ ಏಕಾಂತದಲ್ಲಿ ಕುಳಿತು ಸಂಭಾಷಣೆ ನಡೆಸುತ್ತಿದ್ದುದನ್ನು ಕಾಶ್ಯಪನು ಕೇಳಿದನು.

14016024a ತಂ ಸಮಾಸಾದ್ಯ ಮೇಧಾವೀ ಸ ತದಾ ದ್ವಿಜಸತ್ತಮಃ।
14016024c ಚರಣೌ ಧರ್ಮಕಾಮೋ ವೈ ತಪಸ್ವೀ ಸುಸಮಾಹಿತಃ।
14016024e ಪ್ರತಿಪೇದೇ ಯಥಾನ್ಯಾಯಂ ಭಕ್ತ್ಯಾ ಪರಮಯಾ ಯುತಃ।।

ಧರ್ಮಾರ್ಥಗಳನ್ನು ತಿಳಿದುಕೊಳ್ಳಲು ಬಯಸಿದ್ದ ಆ ಮೇಧಾವೀ ದ್ವಿಜಸತ್ತಮನು ಆ ತಪಸ್ವಿಯ ಬಳಿಸಾರಿ ಪರಮ ಭಕ್ತಿಯಿಂದ ಯಥಾನ್ಯಾಯವಾಗಿ ಅವನ ಚರಣಗಳಿಗೆ ವಂದಿಸಿದನು.

14016025a ವಿಸ್ಮಿತಶ್ಚಾದ್ಭುತಂ ದೃಷ್ಟ್ವಾ ಕಾಶ್ಯಪಸ್ತಂ ದ್ವಿಜೋತ್ತಮಮ್।
14016025c ಪರಿಚಾರೇಣ ಮಹತಾ ಗುರುಂ ವೈದ್ಯಮತೋಷಯತ್।।

ಅದ್ಭುತನಾಗಿದ್ದ ಆ ದ್ವಿಜೋತ್ತಮನನ್ನು ನೋಡಿ ವಿಸ್ಮಿತನಾದ ಕಾಶ್ಯಪನು ಅವನನ್ನು ಗುರುವೆಂದೇ ತಿಳಿದು ಮಹಾ ಶುಶ್ರೂಷೆಗಳಿಂದ ಸಂತೋಷಗೊಳಿಸಿದನು.

14016026a ಪ್ರೀತಾತ್ಮಾ ಚೋಪಪನ್ನಶ್ಚ ಶ್ರುತಚಾರಿತ್ರಸಂಯುತಃ।
14016026c ಭಾವೇನ ತೋಷಯಚ್ಚೈನಂ ಗುರುವೃತ್ತ್ಯಾ ಪರಂತಪಃ।।

ಶ್ರುತಚಾರಿತ್ರ ಸಂಯುಕ್ತನೂ ಪರಂತಪನೂ ಪ್ರೀತಾತ್ಮನೂ ಆದ ಆ ಕಾಶ್ಯಪನು ಗುರುಭಾವದಿಂದ ದ್ವಿಜನನ್ನು ಸಂತೊಷಗೊಳಿಸಿದನು.

14016027a ತಸ್ಮೈ ತುಷ್ಟಃ ಸ ಶಿಷ್ಯಾಯ ಪ್ರಸನ್ನೋಽಥಾಬ್ರವೀದ್ಗುರುಃ।
14016027c ಸಿದ್ಧಿಂ ಪರಾಮಭಿಪ್ರೇಕ್ಷ್ಯ ಶೃಣು ತನ್ಮೇ ಜನಾರ್ದನ।।

ಜನಾರ್ದನ! ಶಿಷ್ಯನ ಕುರಿತು ಸಂತುಷ್ಟನಾದ ಗುರುವು ಪ್ರಸನ್ನನಾಗಿ ಅವನಿಗೆ ಪರಾಸಿದ್ಧಿಯ ಕುರಿತು ಹೇಳಿದುದನ್ನು ಕೇಳು.

14016028a ವಿವಿಧೈಃ ಕರ್ಮಭಿಸ್ತಾತ ಪುಣ್ಯಯೋಗೈಶ್ಚ ಕೇವಲೈಃ।
14016028c ಗಚ್ಚಂತೀಹ ಗತಿಂ ಮರ್ತ್ಯಾ ದೇವಲೋಕೇಽಪಿ ಚ ಸ್ಥಿತಿಮ್।।

“ಅಯ್ಯಾ! ಮನುಷ್ಯರು ವಿವಿಧ ಕರ್ಮಗಳಿಂದುಂಟಾದ ಪುಣ್ಯಯೋಗಗಳಿಂದ ಮಾತ್ರವೇ ದೇವಲೋಕದಲ್ಲಿ ಉತ್ತಮ ಸ್ಥಾನವನ್ನೂ ಪಡೆದುಕೊಳ್ಳುತ್ತಾರೆ.

14016029a ನ ಕ್ವ ಚಿತ್ಸುಖಮತ್ಯಂತಂ ನ ಕ್ವ ಚಿಚ್ಚಾಶ್ವತೀ ಸ್ಥಿತಿಃ।
14016029c ಸ್ಥಾನಾಚ್ಚ ಮಹತೋ ಭ್ರಂಶೋ ದುಃಖಲಬ್ಧಾತ್ಪುನಃ ಪುನಃ।।

ಆದರೆ ಜೀವನಿಗೆ ಎಲ್ಲಿಯೂ ಅತ್ಯಂತ ಸುಖವಿರುವುದಿಲ್ಲ. ಮತ್ತು ಯಾವ ಲೋಕದಲ್ಲಿಯೂ ಶಾಶ್ವತವಾಗಿ ಇರುವುದಿಲ್ಲ. ಸ್ಥಾನವು ಎಷ್ಟೇ ಮಹತ್ತರವಾದುದಿರಲಿ, ಅವನು ಪುನಃ ಪುನಃ ದುಃಖವನ್ನು ಪಡೆಯುತ್ತಲೇ ಇರುತ್ತಾನೆ.

14016030a ಅಶುಭಾ ಗತಯಃ ಪ್ರಾಪ್ತಾಃ ಕಷ್ಟಾ ಮೇ ಪಾಪಸೇವನಾತ್।
14016030c ಕಾಮಮನ್ಯುಪರೀತೇನ ತೃಷ್ಣಯಾ ಮೋಹಿತೇನ ಚ।।

ಕಾಮ-ಕೋಪಗಳಿಂದ ತುಂಬಿ ತೃಷ್ಣೆಯಿಂದ ಮೋಹಿತನಾಗಿ ಪಾಪಕರ್ಮಗಳನ್ನು ಮಾಡಿದುದರಿಂದ ನನಗೆ ಅಶುಭ ಗತಿಗಳೇ ಪ್ರಾಪ್ತವಾಗಿ ಅನೇಕ ಕಷ್ಟಗಳನ್ನು ಅನುಭವಿಸಿದೆನು.

14016031a ಪುನಃ ಪುನಶ್ಚ ಮರಣಂ ಜನ್ಮ ಚೈವ ಪುನಃ ಪುನಃ।
14016031c ಆಹಾರಾ ವಿವಿಧಾ ಭುಕ್ತಾಃ ಪೀತಾ ನಾನಾವಿಧಾಃ ಸ್ತನಾಃ।।

ಪುನಃ ಪುನಃ ಮರಣಹೊಂದಿ ಪುನಃ ಪುನಃ ಹುಟ್ಟಿ ವಿವಿಧ ಆಹಾರಗಳನ್ನು ಭೋಜಿಸಿದೆನು ಮತ್ತು ನಾನಾ ವಿಧದ ಮೊಲೆಹಾಲನ್ನು ಕುಡಿದೆನು.

14016032a ಮಾತರೋ ವಿವಿಧಾ ದೃಷ್ಟಾಃ ಪಿತರಶ್ಚ ಪೃಥಗ್ವಿಧಾಃ।
14016032c ಸುಖಾನಿ ಚ ವಿಚಿತ್ರಾಣಿ ದುಃಖಾನಿ ಚ ಮಯಾನಘ।।

ಅನಘ! ವಿವಿಧ ತಾಯಂದಿರನ್ನು ಕಂಡೆನು ಮತ್ತು ವಿವಿಧ ತಂದೆಯಂದಿರನ್ನೂ ನೋಡಿದೆನು. ವಿಚಿತ್ರವಾದ ಸುಖಗಳನ್ನೂ ದುಃಖಗಳನ್ನೂ ಅನುಭವಿಸಿದೆನು.

14016033a ಪ್ರಿಯೈರ್ವಿವಾಸೋ ಬಹುಶಃ ಸಂವಾಸಶ್ಚಾಪ್ರಿಯೈಃ ಸಹ।
14016033c ಧನನಾಶಶ್ಚ ಸಂಪ್ರಾಪ್ತೋ ಲಬ್ಧ್ವಾ ದುಃಖೇನ ತದ್ಧನಮ್।।

ಅನೇಕ ಪ್ರಿಯರಿಂದ ದೂರಾದೆನು. ಅನೇಕ ಅಪ್ರಿಯರ ಸಹವಾಸವನ್ನೂ ಮಾಡಿದೆನು. ಬಹಳ ಕಷ್ಟದಿಂದ ಸಂಪಾದಿಸಿದ ಧನನಾಶವನ್ನೂ ಕಂಡೆನು.

14016034a ಅವಮಾನಾಃ ಸುಕಷ್ಟಾಶ್ಚ ಪರತಃ ಸ್ವಜನಾತ್ತಥಾ।
14016034c ಶಾರೀರಾ ಮಾನಸಾಶ್ಚಾಪಿ ವೇದನಾ ಭೃಶದಾರುಣಾಃ।।

ಸ್ವಜನರು ಮತ್ತು ಪರರಿಂದ ಅಪಾರ ಅವಮಾನ-ಕಷ್ಟಗಳನ್ನು ಅನುಭವಿಸಿದೆನು. ಅತಿ ದಾರುಣ ಶಾರೀರಿಕ-ಮಾನಸಿಕ ವೇದನೆಗಳನ್ನೂ ಅನುಭವಿಸಿದೆನು.

14016035a ಪ್ರಾಪ್ತಾ ವಿಮಾನನಾಶ್ಚೋಗ್ರಾ ವಧಬಂಧಾಶ್ಚ ದಾರುಣಾಃ।
14016035c ಪತನಂ ನಿರಯೇ ಚೈವ ಯಾತನಾಶ್ಚ ಯಮಕ್ಷಯೇ।।

ಉಗ್ರ ಅಪಮಾನಗಳನ್ನೂ ದಾರುಣ ಮರಣ ದಂಡನೆ-ಬಂಧನಗಳನ್ನೂ ಅನುಭವಿಸಿದೆನು. ನರಕದಲ್ಲಿಯೂ ಬಿದ್ದಿದ್ದೇನೆ ಮತ್ತು ಯಮಕ್ಷಯದಲ್ಲಿಯೂ ಯಾತನೆಗಳನ್ನು ಅನುಭವಿಸಿದ್ದೇನೆ.

14016036a ಜರಾ ರೋಗಾಶ್ಚ ಸತತಂ ವಾಸನಾನಿ ಚ ಭೂರಿಶಃ।
14016036c ಲೋಕೇಽಸ್ಮಿನ್ನನುಭೂತಾನಿ ದ್ವಂದ್ವಜಾನಿ ಭೃಶಂ ಮಯಾ।।

ಈ ಲೋಕದಲ್ಲಿ ಅನೇಕಜನ್ಮಗಳನ್ನು ತಾಳಿದ ನಾನು ಸತತವಾಗಿ ಮುಪ್ಪು-ರೋಗಗಳಿಂದಲೂ ಅನೇಕ ಚಿಂತೆಗಳಿಂದಲೂ, ಶೀತೋಷ್ಣ, ಸುಖದುಃಖಾದಿ ದ್ವಂದ್ವಗಳಿಂದಲೂ ಬಳಲಿದೆನು.

14016037a ತತಃ ಕದಾ ಚಿನ್ನಿರ್ವೇದಾನ್ನಿಕಾರಾನ್ನಿಕೃತೇನ ಚ।
14016037c ಲೋಕತಂತ್ರಂ ಪರಿತ್ಯಕ್ತಂ ದುಃಖಾರ್ತೇನ ಭೃಶಂ ಮಯಾ।
14016037e ತತಃ ಸಿದ್ಧಿರಿಯಂ ಪ್ರಾಪ್ತಾ ಪ್ರಸಾದಾದಾತ್ಮನೋ ಮಯಾ।।

ಹೀಗಿರುವಾಗ ಒಮ್ಮೆ ನಿರಾಶೆಯಿಂದ ನಿರಾಕಾರನನ್ನು ಆಶ್ರಯಿಸಿದೆನು. ಅತ್ಯಂತ ದುಃಖಿತನಾಗಿ ಲೋಕತಂತ್ರವನ್ನೇ ಪರಿತ್ಯಜಿಸಿದೆನು. ಆತ್ಮನ ಪ್ರಸಾದದಿಂದ ಆಗ ನನಗೆ ಈ ಸಿದ್ಧಿಯು ಪ್ರಾಪ್ತವಾಯಿತು.

14016038a ನಾಹಂ ಪುನರಿಹಾಗಂತಾ ಲೋಕಾನಾಲೋಕಯಾಮ್ಯಹಮ್।
14016038c ಆ ಸಿದ್ಧೇರಾ ಪ್ರಜಾಸರ್ಗಾದಾತ್ಮನೋ ಮೇ ಗತಿಃ ಶುಭಾ।।

ಪುನಃ ನಾನು ಈ ಲೋಕಕ್ಕೆ ಬರುವುದಿಲ್ಲ. ಎಲ್ಲಿಯವರೆಗೆ ಸೃಷ್ಟಿಕಾರ್ಯವು ನಡೆಯುತ್ತಿರುತ್ತಿದೆಯೋ ಅಲ್ಲಿಯವರೆ ನಾನು ಸಿದ್ಧನಾಗಿ ಲೋಕಗಳ ಶುಭ ಗತಿಯನ್ನು ನೋಡುತ್ತಲೇ ಇರುತ್ತೇನೆ.

14016039a ಉಪಲಬ್ಧಾ ದ್ವಿಜಶ್ರೇಷ್ಠ ತಥೇಯಂ ಸಿದ್ಧಿರುತ್ತಮಾ।
14016039c ಇತಃ ಪರಂ ಗಮಿಷ್ಯಾಮಿ ತತಃ ಪರತರಂ ಪುನಃ।
14016039e ಬ್ರಹ್ಮಣಃ ಪದಮವ್ಯಗ್ರಂ ಮಾ ತೇ ಭೂದತ್ರ ಸಂಶಯಃ।।

ದ್ವಿಜಶ್ರೇಷ್ಠ! ಈ ಉತ್ತಮ ಸಿದ್ಧಿಯನ್ನು ಪಡೆದು ನಾನು ಇಲ್ಲಿಂದ ಮೇಲಿನ ಲೋಕಕ್ಕೆ ಹೋಗುತ್ತೇನೆ. ಪುನಃ ಅಲ್ಲಿಂದ ಅದಕ್ಕಿಂದಲೂ ಮೇಲಿನ ಲೋಕಕ್ಕೆ ಹೋಗುತ್ತೇನೆ. ಕೊನೆಯಲ್ಲಿ ಅದಕ್ಕೂ ಮೇಲಿದ್ದ ಬ್ರಹ್ಮಪದಕ್ಕೆ ಹೋಗುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲ.

14016040a ನಾಹಂ ಪುನರಿಹಾಗಂತಾ ಮರ್ತ್ಯಲೋಕಂ ಪರಂತಪ।
14016040c ಪ್ರೀತೋಽಸ್ಮಿ ತೇ ಮಹಾಪ್ರಾಜ್ಞ ಬ್ರೂಹಿ ಕಿಂ ಕರವಾಣಿ ತೇ।।

ಪರಂತಪ! ನಾನು ಪುನಃ ಈ ಮರ್ತ್ಯಲೋಕಕ್ಕೆ ಹಿಂದಿರುಗುವುದಿಲ್ಲ. ಮಹಾಪ್ರಾಜ್ಞ! ನಿನ್ನ ಮೇಲೆ ಪ್ರೀತನಾಗಿದ್ದೇನೆ. ನಾನು ನಿನಗೇನು ಮಾಡಬೇಕು ಎನ್ನುವುದನ್ನು ಹೇಳು.

14016041a ಯದೀಪ್ಸುರುಪಪನ್ನಸ್ತ್ವಂ ತಸ್ಯ ಕಾಲೋಽಯಮಾಗತಃ।
14016041c ಅಭಿಜಾನೇ ಚ ತದಹಂ ಯದರ್ಥಂ ಮಾ ತ್ವಮಾಗತಃ।
14016041e ಅಚಿರಾತ್ತು ಗಮಿಷ್ಯಾಮಿ ಯೇನಾಹಂ ತ್ವಾಮಚೂಚುದಮ್।।

ನೀನು ಏನನ್ನು ಪಡೆಯಲು ಇಲ್ಲಿಗೆ ಬಂದಿರುವೆಯೋ ಅದರ ಕಾಲವು ಈಗ ಬಂದೊದಗಿದೆ. ನೀನು ನನ್ನಲ್ಲಿಗೆ ಯಾಕಾಗಿ ಬಂದಿರುವೆ ಎನ್ನುವುದನ್ನು ನಾನು ಅರಿತಿರುವೆನು. ಇನ್ನು ಸ್ವಲ್ಪ ಸಮಯದಲ್ಲಿಯೇ ನಾನು ಹೋಗುತ್ತಿದ್ದೇನೆ. ಆದುದರಿಂದ ನಿನಗೆ ಇದನ್ನು ಹೇಳುತ್ತಿದ್ದೇನೆ.

14016042a ಭೃಶಂ ಪ್ರೀತೋಽಸ್ಮಿ ಭವತಶ್ಚಾರಿತ್ರೇಣ ವಿಚಕ್ಷಣ।
14016042c ಪರಿಪೃಚ್ಚ ಯಾವದ್ಭವತೇ ಭಾಷೇಯಂ ಯತ್ತವೇಪ್ಸಿತಮ್।।

ವಿದ್ವಾಂಸನೇ! ನಿನ್ನ ಚಾರಿತ್ರ್ಯದಿಂದ ನಾನು ಅತ್ಯಂತ ಸಂತೋಷಗೊಂಡಿದ್ದೇನೆ. ನಿನಗೆ ಇಷ್ಟವಾದ ವಿಷಯದ ಕುರಿತು ಕೇಳು. ನಾನು ಉತ್ತರಿಸುತ್ತೇನೆ.

14016043a ಬಹು ಮನ್ಯೇ ಚ ತೇ ಬುದ್ಧಿಂ ಭೃಶಂ ಸಂಪೂಜಯಾಮಿ ಚ।
14016043c ಯೇನಾಹಂ ಭವತಾ ಬುದ್ಧೋ ಮೇಧಾವೀ ಹ್ಯಸಿ ಕಾಶ್ಯಪ।।

ಕಾಶ್ಯಪ! ನನ್ನನ್ನು ಗುರುತಿಸಿದ ನೀನು ಬುದ್ಧಿವಂತನೂ ಮೇಧಾವಿಯೂ ಆಗಿರುವೆ. ನಿನ್ನ ಬುದ್ಧಿಯನ್ನು ಮನ್ನಿಸುತ್ತೇನೆ ಮತ್ತು ಪೂಜಿಸುತ್ತೇನೆ ಕೂಡ!”””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಷೋಡಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾ ಎನ್ನುವ ಹದಿನಾರನೇ ಅಧ್ಯಾಯವು.


  1. ಸರ್ವವನ್ನೂ ತಿಳಿದಿದ್ದ ಭಗವಂತನು ಮೋಕ್ಷಧರ್ಮದ ಕುರಿತು ಕೇಳುತ್ತಿದ್ದಾನೆಂದರೆ, ಇದಕ್ಕೆ ಕಾರಣ ಇತರ ಜೀವಿಗಳಿಗೆ ಇದು ಪ್ರಯೋಜನವಾಗಲಿ ಎಂಬ ಅನುಕಂಪದಿಂದಲೇ ಹೊರತು ತನಗೆ ಇದು ತಿಳಿಯದೇ ಇದ್ದುದರಿಂದ ತಿಳಿದುಕೊಳ್ಳಬೇಕು ಎನ್ನುವುದಲ್ಲ ಎನ್ನುವುದನ್ನು ಆ ಬ್ರಾಹ್ಮಣನು ಕಂಡಿದ್ದನು. ↩︎