015

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 15

ಸಾರ

ಇಂದ್ರಪ್ರಸ್ಥದಲ್ಲಿ ಕೃಷ್ಣಾರ್ಜುನರ ಸಭಾವಿಹಾರ (1-7). ತಾವಿಬ್ಬರೂ ದ್ವಾರಕೆಗೆ ಹೋಗಲು ಯುಧಿಷ್ಠಿರನಲ್ಲಿ ಅನುಮತಿಯನ್ನು ಕೇಳು ಎಂದು ಕೃಷ್ಣನು ಅರ್ಜುನನಿಗೆ ಹೇಳಿದುದು (8-34).

14015001 ಜನಮೇಜಯ ಉವಾಚ।
14015001a ವಿಜಿತೇ ಪಾಂಡವೇಯೈಸ್ತು ಪ್ರಶಾಂತೇ ಚ ದ್ವಿಜೋತ್ತಮ।
14015001c ರಾಷ್ಟ್ರೇ ಕಿಂ ಚಕ್ರತುರ್ವೀರೌ ವಾಸುದೇವಧನಂಜಯೌ।।

ಜನಮೇಜಯನು ಹೇಳಿದನು: “ದ್ವಿಜೋತ್ತಮ! ಪಾಂಡವರು ಗೆದ್ದು ಪ್ರಶಾಂತರಾಗಿ ರಾಷ್ಟ್ರವನ್ನು ಆಳುತ್ತಿರಲು ವೀರ ವಾಸುದೇವ-ಧನಂಜಯರು ಏನು ಮಾಡಿದರು.”

14015002 ವೈಶಂಪಾಯನ ಉವಾಚ।
14015002a ವಿಜಿತೇ ಪಾಂಡವೇಯೈಸ್ತು ಪ್ರಶಾಂತೇ ಚ ವಿಶಾಂ ಪತೇ।
14015002c ರಾಷ್ಟ್ರೇ ಬಭೂವತುರ್ಹೃಷ್ಟೌ ವಾಸುದೇವಧನಂಜಯೌ।।

ವೈಶಂಪಾಯನನು ಹೇಳಿದನು: “ವಿಶಾಂಪತೇ! ಪಾಂಡವರಿಗೆ ವಿಜಯವಾಗಿ ಅವರು ಪ್ರಶಾಂತರಾಗಲು ವಾಸುದೇವ-ಧನಂಜಯರು ಹರ್ಷಿತರಾದರು.

14015003a ವಿಜಹ್ರಾತೇ ಮುದಾ ಯುಕ್ತೌ ದಿವಿ ದೇವೇಶ್ವರಾವಿವ।
14015003c ತೌ ವನೇಷು ವಿಚಿತ್ರೇಷು ಪರ್ವತಾನಾಂ ಚ ಸಾನುಷು।।

ಮುದಿತರಾಗಿ ಅವನು ತಮ್ಮ ಅನುಯಾಯಿಗಳೊಂದಿಗೆ ದಿವಿಯಲ್ಲಿ ದೇವೇಶ್ವರರಂತೆ ವಿಚಿತ್ರ ವನ-ಪರ್ವತಗಳಲ್ಲಿ ವಿಹರಿಸಿದರು.

14015004a ಶೈಲೇಷು ರಮಣೀಯೇಷು ಪಲ್ವಲೇಷು ನದೀಷು ಚ।
14015004c ಚಂಕ್ರಮ್ಯಮಾಣೌ ಸಂಹೃಷ್ಟಾವಶ್ವಿನಾವಿವ ನಂದನೇ।।

ಅಶ್ವಿನಿಯರು ನಂದನ ವನದಲ್ಲಿ ಹೇಗೋ ಹಾಗೆ ಅವರಿಬ್ಬರೂ ರಮಣೀಯ ಶೈಲಗಳಲ್ಲಿ ಮತ್ತು ನದಿ-ತೀರ್ಥಗಳಲ್ಲಿ ವಿಹರಿಸುತ್ತಾ ಹರ್ಷಿತರಾದರು.

14015005a ಇಂದ್ರಪ್ರಸ್ಥೇ ಮಹಾತ್ಮಾನೌ ರೇಮಾತೇ ಕೃಷ್ಣಪಾಂಡವೌ।
14015005c ಪ್ರವಿಶ್ಯ ತಾಂ ಸಭಾಂ ರಮ್ಯಾಂ ವಿಜಹ್ರಾತೇ ಚ ಭಾರತ।।

ಭಾರತ! ಮಹಾತ್ಮ ಕೃಷ್ಣ-ಪಾಂಡವರು ಇಂದ್ರಪ್ರಸ್ಥದಲ್ಲಿ ರಮಿಸಿದರು. ಆ ರಮ್ಯ ಸಭೆಯನ್ನು ಪ್ರವೇಶಿಸಿ ವಿಹರಿಸಿದರು.

14015006a ತತ್ರ ಯುದ್ಧಕಥಾಶ್ಚಿತ್ರಾಃ ಪರಿಕ್ಲೇಶಾಂಶ್ಚ ಪಾರ್ಥಿವ।
14015006c ಕಥಾಯೋಗೇ ಕಥಾಯೋಗೇ ಕಥಯಾಮಾಸತುಸ್ತದಾ।।

ಪಾರ್ಥಿವ! ಅಲ್ಲಿ ಅವರಿಬ್ಬರೂ ವಿಚಿತ್ರ ಯುದ್ಧಕಥೆಗಳನ್ನೂ, ತಮಗಾದ ಪರಿಕ್ಲೇಶಗಳನ್ನೂ ಹೇಳಿಕೊಳ್ಳುತ್ತಾ, ಮಾತುಕಥೆಗಳಲ್ಲಿಯೇ ಕಾಲವನ್ನು ಕಳೆದರು.

14015007a ಋಷೀಣಾಂ ದೇವತಾನಾಂ ಚ ವಂಶಾಂಸ್ತಾವಾಹತುಸ್ತದಾ।
14015007c ಪ್ರೀಯಮಾಣೌ ಮಹಾತ್ಮಾನೌ ಪುರಾಣಾವೃಷಿಸತ್ತಮೌ।।

ಪುರಾಣ ಋಷಿಸತ್ತಮರಾದ ಅವರಿಬ್ಬರು ಮಹಾತ್ಮರೂ ಪ್ರೀತಿಯಿಂದ ಋಷಿಗಳ ಮತ್ತು ದೇವತೆಗಳ ವಂಶಗಳ ಕಥೆಗಳನ್ನು ಹೇಳಿಕೊಳ್ಳುತ್ತಿದ್ದರು.

14015008a ಮಧುರಾಸ್ತು ಕಥಾಶ್ಚಿತ್ರಾಶ್ಚಿತ್ರಾರ್ಥಪದನಿಶ್ಚಯಾಃ।
14015008c ನಿಶ್ಚಯಜ್ಞಃ ಸ ಪಾರ್ಥಾಯ ಕಥಯಾಮಾಸ ಕೇಶವಃ।।

ನಿಶ್ಚಯಜ್ಞ ಕೇಶವನು ಪಾರ್ಥನಿಗೆ ಮಧುರವಾದ ವಿಚಿತ್ರ ಪದ ನಿಶ್ಚಯಗಳುಳ್ಳ ಕಥೆಗಳನ್ನು ಹೇಳತೊಡಗಿದನು.

14015009a ಪುತ್ರಶೋಕಾಭಿಸಂತಪ್ತಂ ಜ್ಞಾತೀನಾಂ ಚ ಸಹಸ್ರಶಃ।
14015009c ಕಥಾಭಿಃ ಶಮಯಾಮಾಸ ಪಾರ್ಥಂ ಶೌರಿರ್ಜನಾರ್ದನಃ।।

ಪುತ್ರಶೋಕದಿಂದ ಮತ್ತು ಸಹಸ್ರಾರು ಜ್ಞಾತಿಬಾಂಧವರ ಮರಣದಿಂದ ಸಂತಪ್ತನಾಗಿದ್ದ ಪಾರ್ಥನನ್ನು ಶೌರಿ ಜನಾರ್ದನನು ಕಥೆಗಳ ಮೂಲಕ ಸಮಾಧಾನಪಡಿಸಿದನು.

14015010a ಸ ತಮಾಶ್ವಾಸ್ಯ ವಿಧಿವದ್ವಿಧಾನಜ್ಞೋ ಮಹಾತಪಾಃ।
14015010c ಅಪಹೃತ್ಯಾತ್ಮನೋ ಭಾರಂ ವಿಶಶ್ರಾಮೇವ ಸಾತ್ವತಃ।।

ವಿಧಾನಜ್ಞ ಮಹಾತಪಸ್ವಿ ಸಾತ್ವತನು ಅರ್ಜುನನನ್ನು ವಿಧಿವತ್ತಾಗಿ ಸಮಾಧಾನಗೊಳಿಸಿ ತಾನು ಹೊತ್ತಿದ್ದ ಭಾರವನ್ನು ಕೆಳಗಿಳಿಸಿ ವಿಶ್ರಮಿಸಿದಂತೆ ತೋರಿದನು.

14015011a ತತಃ ಕಥಾಂತೇ ಗೋವಿಂದೋ ಗುಡಾಕೇಶಮುವಾಚ ಹ।
14015011c ಸಾಂತ್ವಯನ್ಶ್ಲಕ್ಷ್ಣಯಾ ವಾಚಾ ಹೇತುಯುಕ್ತಮಿದಂ ವಚಃ।।

ಕಥೆಗಳ ಕೊನೆಯಲ್ಲಿ ಗೋವಿಂದನು ಗುಡಾಕೇಶನನ್ನು ಮಧುರಮಾತುಗಳಿಂದ ಸಾಂತ್ವನಗೊಳಿಸುತ್ತಾ ಅರ್ಥಯುಕ್ತವಾದ ಈ ಮಾತುಗಳನ್ನಾಡಿದನು:

14015012a ವಿಜಿತೇಯಂ ಧರಾ ಕೃತ್ಸ್ನಾ ಸವ್ಯಸಾಚಿನ್ಪರಂತಪ।
14015012c ತ್ವದ್ಬಾಹುಬಲಮಾಶ್ರಿತ್ಯ ರಾಜ್ಞಾ ಧರ್ಮಸುತೇನ ಹ।।

“ಸವ್ಯಸಾಚಿ! ಪರಂತಪ! ನಿನ್ನ ಬಾಹುಬಲವನ್ನು ಆಶ್ರಯಿಸಿ ರಾಜಾ ಧರ್ಮಸುತನು ಈ ಇಡೀ ಭೂಮಿಯನ್ನೇ ಗೆದ್ದಿದ್ದಾಯಿತು!

14015013a ಅಸಪತ್ನಾಂ ಮಹೀಂ ಭುಂಕ್ತೇ ಧರ್ಮರಾಜೋ ಯುಧಿಷ್ಠಿರಃ।
14015013c ಭೀಮಸೇನಪ್ರಭಾವೇನ ಯಮಯೋಶ್ಚ ನರೋತ್ತಮ।।

ನರೋತ್ತಮ! ಭೀಮಸೇನ ಮತ್ತು ಯಮಳರ ಪ್ರಭಾವದಿಂದ ಧರ್ಮರಾಜ ಯುಧಿಷ್ಠಿರನು ದಾಯಾದಿಗಳಿಲ್ಲದ ಈ ಮಹಿಯನ್ನು ಭೋಗಿಸುತ್ತಿದ್ದಾನೆ

14015014a ಧರ್ಮೇಣ ರಾಜ್ಞಾ ಧರ್ಮಜ್ಞ ಪ್ರಾಪ್ತಂ ರಾಜ್ಯಮಕಂಟಕಮ್।
14015014c ಧರ್ಮೇಣ ನಿಹತಃ ಸಂಖ್ಯೇ ಸ ಚ ರಾಜಾ ಸುಯೋಧನಃ।।

ಧರ್ಮಜ್ಞ ರಾಜನು ಧರ್ಮದಿಂದಲೇ ಕಂಟಕವಿಲ್ಲದ ರಾಜ್ಯವನ್ನು ಪಡೆದುಕೊಂಡನು. ಧರ್ಮದಿಂದಲೇ ರಾಜಾ ಸುಯೋಧನನು ಯುದ್ಧದಲ್ಲಿ ಮಡಿದನು.

14015015a ಅಧರ್ಮರುಚಯೋ ಲುಬ್ಧಾಃ ಸದಾ ಚಾಪ್ರಿಯವಾದಿನಃ।
14015015c ಧಾರ್ತರಾಷ್ಟ್ರಾ ದುರಾತ್ಮಾನಃ ಸಾನುಬಂಧಾ ನಿಪಾತಿತಾಃ।।

ಅಧರ್ಮದಲ್ಲಿಯೇ ರುಚಿಯನ್ನಿಟ್ಟಿದ್ದ, ಸದಾ ಅಪ್ರಿಯವಾದುದನ್ನೇ ಮಾತನಾಡುತ್ತಿದ್ದ, ಆಸೆಬುರುಕ ದುರಾತ್ಮ ಧಾರ್ತರಾಷ್ಟ್ರರು ಬಾಂಧವರೊಂದಿಗೆ ಕೆಳಗುರುಳಿದ್ದಾರೆ.

14015016a ಪ್ರಶಾಂತಾಮಖಿಲಾಂ ಪಾರ್ಥ ಪೃಥಿವೀಂ ಪೃಥಿವೀಪತಿಃ।
14015016c ಭುಂಕ್ತೇ ಧರ್ಮಸುತೋ ರಾಜಾ ತ್ವಯಾ ಗುಪ್ತಃ ಕುರೂದ್ವಹ।।

ಪಾರ್ಥ! ಕುರೂದ್ವಹ! ನೀನು ರಕ್ಷಿಸುತ್ತಿರುವ ಈ ಪ್ರಶಾಂತ ಅಖಿಲ ಪೃಥ್ವಿಯನ್ನು ಪೃಥ್ವೀಪತಿ ಧರ್ಮಸುತ ರಾಜನು ಭೋಗಿಸುತ್ತಿದ್ದಾನೆ.

14015017a ರಮೇ ಚಾಹಂ ತ್ವಯಾ ಸಾರ್ಧಮರಣ್ಯೇಷ್ವಪಿ ಪಾಂಡವ।
14015017c ಕಿಮು ಯತ್ರ ಜನೋಽಯಂ ವೈ ಪೃಥಾ ಚಾಮಿತ್ರಕರ್ಶನ।।

ಅಮಿತ್ರಕರ್ಶನ! ಪಾಂಡವ! ನಿನ್ನೊಡನೆ ನಾನು ನಿರ್ಜನ ಅರಣ್ಯದಲ್ಲಿಯೂ ರಮಿಸಬಲ್ಲೆನು. ಇನ್ನು ಜನರಿರುವ ಮತ್ತು ಅತ್ತೆ ಪೃಥಾಳಿರುವ ಇಲ್ಲಿ ಇನ್ನೇನು?

14015018a ಯತ್ರ ಧರ್ಮಸುತೋ ರಾಜಾ ಯತ್ರ ಭೀಮೋ ಮಹಾಬಲಃ।
14015018c ಯತ್ರ ಮಾದ್ರವತೀಪುತ್ರೌ ರತಿಸ್ತತ್ರ ಪರಾ ಮಮ।।

ಎಲ್ಲಿ ರಾಜಾ ಧರ್ಮಸುತನಿರುವನೋ, ಎಲ್ಲಿ ಮಹಾಬಲ ಭೀಮನಿರುವನೋ, ಎಲ್ಲಿ ಮಾದ್ರವತೀ ಪುತ್ರರಿರುವರೋ ಅಲ್ಲಿ ನನಗೆ ಪರಮ ಆನಂದವಾಗುತ್ತದೆ.

14015019a ತಥೈವ ಸ್ವರ್ಗಕಲ್ಪೇಷು ಸಭೋದ್ದೇಶೇಷು ಭಾರತ।
14015019c ರಮಣೀಯೇಷು ಪುಣ್ಯೇಷು ಸಹಿತಸ್ಯ ತ್ವಯಾನಘ।।

ಭಾರತ! ಅನಘ! ಸ್ವರ್ಗದಂತಿರುವ ಈ ರಮಣೀಯ ಪುಣ್ಯ ಸಭಾಪ್ರದೇಶದಲ್ಲಿ ನಿನ್ನೊಡನೆ ಇದ್ದೇನೆ.

14015020a ಕಾಲೋ ಮಹಾಂಸ್ತ್ವತೀತೋ ಮೇ ಶೂರಪುತ್ರಮಪಶ್ಯತಃ।
14015020c ಬಲದೇವಂ ಚ ಕೌರವ್ಯ ತಥಾನ್ಯಾನ್ವೃಷ್ಣಿಪುಂಗವಾನ್।।

ಕೌರವ್ಯ! ಶೂರಪುತ್ರ ವಸುದೇವನನ್ನು, ಬಲದೇವನನ್ನು ಮತ್ತು ಹಾಗೆಯೇ ಇತರ ವೃಷ್ಣಿಪುಂಗವರನ್ನು ಕಾಣದೇ ಬಹಳ ಕಾಲವು ಕಳೆದುಹೋಯಿತು.

14015021a ಸೋಽಹಂ ಗಂತುಮಭೀಪ್ಸಾಮಿ ಪುರೀಂ ದ್ವಾರವತೀಂ ಪ್ರತಿ।
14015021c ರೋಚತಾಂ ಗಮನಂ ಮಹ್ಯಂ ತವಾಪಿ ಪುರುಷರ್ಷಭ।।

ಪುರುಷರ್ಷಭ! ಆದುದರಿಂದ ದ್ವಾರವತೀ ಪುರಿಯ ಕಡೆ ಹೋಗಲು ಬಯಸುತ್ತೇನೆ. ನಾನು ಮತ್ತು ನೀನು ಇಬ್ಬರೂ ಅಲ್ಲಿಗೆ ಹೋಗಬೇಕೆಂದು ಅನಿಸುತ್ತಿದೆ.

14015022a ಉಕ್ತೋ ಬಹುವಿಧಂ ರಾಜಾ ತತ್ರ ತತ್ರ ಯುಧಿಷ್ಠಿರಃ।
14015022c ಸ ಹ ಭೀಷ್ಮೇಣ ಯದ್ಯುಕ್ತಮಸ್ಮಾಭಿಃ ಶೋಕಕಾರಿತೇ।।

ಶೋಕಿಸುತ್ತಿದ್ದ ರಾಜಾ ಯುಧಿಷ್ಠಿರನಿಗೆ ಭೀಷ್ಮನೊಂದಿಗೆ ನಾವೂ ಕೂಡ ಅಲ್ಲಲ್ಲಿ ಬಹುವಿಧವಾಗಿ ಹೇಳಿದೆವು.

14015023a ಶಿಷ್ಟೋ ಯುಧಿಷ್ಠಿರೋಽಸ್ಮಾಭಿಃ ಶಾಸ್ತಾ ಸನ್ನಪಿ ಪಾಂಡವಃ।
14015023c ತೇನ ತಚ್ಚ ವಚಃ ಸಮ್ಯಗ್ಗೃಹೀತಂ ಸುಮಹಾತ್ಮನಾ।।

ಪಾಂಡವ ಯುಧಿಷ್ಠಿರನಾದರೋ ನಮ್ಮಿಂದ ಉಪದೇಶಗಳನ್ನು ಪಡೆದು ಆಳುತ್ತಿದ್ದಾನೆ. ಆ ಮಹಾತ್ಮನು ನಮ್ಮ ವಚನಗಳೆಲ್ಲವನ್ನೂ ಸಂಪೂರ್ಣವಾಗಿ ಸ್ವೀಕರಿಸಿದ್ದಾನೆ.

14015024a ಧರ್ಮಪುತ್ರೇ ಹಿ ಧರ್ಮಜ್ಞೇ ಕೃತಜ್ಞೇ ಸತ್ಯವಾದಿನಿ।
14015024c ಸತ್ಯಂ ಧರ್ಮೋ ಮತಿಶ್ಚಾಗ್ರ್ಯಾ ಸ್ಥಿತಿಶ್ಚ ಸತತಂ ಸ್ಥಿರಾ।।

ಧರ್ಮಜ್ಞ ಕೃತಜ್ಞ ಸತ್ಯವಾದಿನಿ ಧರ್ಮಪುತ್ರನಲ್ಲಿ ಸತತವೂ ಸತ್ಯ-ಧರ್ಮಗಳು ಮತ್ತು ಉನ್ನತ ಬುದ್ಧಿಯು ಸ್ಥಿರವಾಗಿ ನೆಲೆಸಿವೆ.

14015025a ತದ್ಗತ್ವಾ ತಂ ಮಹಾತ್ಮಾನಂ ಯದಿ ತೇ ರೋಚತೇಽರ್ಜುನ।
14015025c ಅಸ್ಮದ್ಗಮನಸಂಯುಕ್ತಂ ವಚೋ ಬ್ರೂಹಿ ಜನಾಧಿಪಮ್।।

ಅರ್ಜುನ! ನೀನು ಬಯಸುವೆಯಾದರೆ ಆ ಮಹಾತ್ಮನಲ್ಲಿಗೆ ಹೋಗಿ ನಮ್ಮ ಪ್ರಯಾಣದ ಕುರಿತು ಜನಾಧಿಪನಿಗೆ ಹೇಳು.

14015026a ನ ಹಿ ತಸ್ಯಾಪ್ರಿಯಂ ಕುರ್ಯಾಂ ಪ್ರಾಣತ್ಯಾಗೇಽಪ್ಯುಪಸ್ಥಿತೇ।
14015026c ಕುತೋ ಗಂತುಂ ಮಹಾಬಾಹೋ ಪುರೀಂ ದ್ವಾರವತೀಂ ಪ್ರತಿ।।

ಮಹಾಬಾಹೋ! ಪ್ರಾಣತ್ಯಾಗಕ್ಕೂ ಸಿದ್ಧನಾಗಿದ್ದ ಅವನಿಗೆ ಅಪ್ರಿಯವಾದುದನ್ನು ಮಾಡಿ ನಾವು ದ್ವಾರವತೀ ಪುರಿಗೆ ಹೇಗೆ ಹೋಗಬಲ್ಲೆವು?

14015027a ಸರ್ವಂ ತ್ವಿದಮಹಂ ಪಾರ್ಥ ತ್ವತ್ಪ್ರೀತಿಹಿತಕಾಮ್ಯಯಾ।
14015027c ಬ್ರವೀಮಿ ಸತ್ಯಂ ಕೌರವ್ಯ ನ ಮಿಥ್ಯೈತತ್ಕಥಂ ಚನ।।

ಪಾರ್ಥ! ಇವೆಲ್ಲವನ್ನೂ ನಿನ್ನ ಪ್ರೀತಿ-ಹಿತಗಳನ್ನು ಬಯಸಿ ಹೇಳುತ್ತಿದ್ದೇನೆ. ಕೌರವ್ಯ! ನಿನಗೆ ಸತ್ಯವನ್ನೇ ಹೇಳುತ್ತೇನೆ. ಸುಳ್ಳನೆಂದೂ ಹೇಳುವುದಿಲ್ಲ.

14015028a ಪ್ರಯೋಜನಂ ಚ ನಿರ್ವೃತ್ತಮಿಹ ವಾಸೇ ಮಮಾರ್ಜುನ।
14015028c ಧಾರ್ತರಾಷ್ಟ್ರೋ ಹತೋ ರಾಜಾ ಸಬಲಃ ಸಪದಾನುಗಃ।।

ಅರ್ಜುನ! ನಾನು ಇಲ್ಲಿ ಇದ್ದು ಆಗಬೇಕಾಗಿದ್ದ ಪ್ರಯೋಜನವು ಆಗಿಹೋಯಿತು. ರಾಜಾ ಧಾರ್ತರಾಷ್ಟ್ರನು ಅವನ ಸೇನೆ ಮತ್ತು ಅನುಯಾಯಿಗಳೊಂದಿಗೆ ಹತನಾದನು.

14015029a ಪೃಥಿವೀ ಚ ವಶೇ ತಾತ ಧರ್ಮಪುತ್ರಸ್ಯ ಧೀಮತಃ।
14015029c ಸ್ಥಿತಾ ಸಮುದ್ರವಸನಾ ಸಶೈಲವನಕಾನನಾ।
14015029e ಚಿತಾ ರತ್ನೈರ್ಬಹುವಿಧೈಃ ಕುರುರಾಜಸ್ಯ ಪಾಂಡವ।।

ಅಯ್ಯಾ! ಪೃಥ್ವಿಯೂ ಕೂಡ ಧೀಮಂತ ಧರ್ಮಪುತ್ರನ ವಶವಾಯಿತು. ಪಾಂಡವ! ಸಮುದ್ರವೇ ವಸ್ತ್ರವಾಗುಳ್ಳ ಶೈಲ-ವನ-ಕಾನನ ಯುಕ್ತಳಾದ ಬಹುವಿಧದ ರತ್ನಗಳ ಖನಿಯಾದ ಭೂಮಿಯು ಕುರುರಾಜನದ್ದಾಗಿದೆ.

14015030a ಧರ್ಮೇಣ ರಾಜಾ ಧರ್ಮಜ್ಞಃ ಪಾತು ಸರ್ವಾಂ ವಸುಂಧರಾಮ್।
14015030c ಉಪಾಸ್ಯಮಾನೋ ಬಹುಭಿಃ ಸಿದ್ಧೈಶ್ಚಾಪಿ ಮಹಾತ್ಮಭಿಃ।
14015030e ಸ್ತೂಯಮಾನಶ್ಚ ಸತತಂ ಬಂದಿಭಿರ್ಭರತರ್ಷಭ।।

ಭರತರ್ಷಭ! ಅನೇಕ ಮಹಾತ್ಮ ಸಿದ್ಧರಿಂದ ಉಪಾಸಿಸಲ್ಪಟ್ಟು ಮತ್ತು ಬಂದಿಗಳಿಂದ ಸತತವೂ ಸ್ತುತಿಸಲ್ಪಡುತ್ತಿರುವ ಧರ್ಮಜ್ಞ ರಾಜನು ಇಡೀ ವಸುಂಧರೆಯನ್ನು ಧರ್ಮದಿಂದ ಪಾಲಿಸಲಿ!

14015031a ತನ್ಮಯಾ ಸಹ ಗತ್ವಾದ್ಯ ರಾಜಾನಂ ಕುರುವರ್ಧನಮ್।
14015031c ಆಪೃಚ್ಚ ಕುರುಶಾರ್ದೂಲ ಗಮನಂ ದ್ವಾರಕಾಂ ಪ್ರತಿ।।

ಕುರುಶಾರ್ದೂಲ! ಇಂದು ನೀನು ನನ್ನೊಡನೆ ಕುರುವರ್ಧನ ರಾಜನಲ್ಲಿಗೆ ಹೋಗಿ ದ್ವಾರಕೆಗೆ ಹೋಗುವ ಕುರಿತು ಕೇಳು.

14015032a ಇದಂ ಶರೀರಂ ವಸು ಯಚ್ಚ ಮೇ ಗೃಹೇ ನಿವೇದಿತಂ ಪಾರ್ಥ ಸದಾ ಯುಧಿಷ್ಠಿರೇ।
14015032c ಪ್ರಿಯಶ್ಚ ಮಾನ್ಯಶ್ಚ ಹಿ ಮೇ ಯುಧಿಷ್ಠಿರಃ ಸದಾ ಕುರೂಣಾಮಧಿಪೋ ಮಹಾಮತಿಃ।।

ಈ ಶರೀರ ಮತ್ತು ನನ್ನ ಮನೆಯಲ್ಲಿ ಏನೆಲ್ಲ ಸಂಪತ್ತಿದೆಯೋ ಅದು ಸದಾ ಯುಧಿಷ್ಠಿರನಿಗೇ ಮುಡುಪಾಗಿದೆ. ಕುರುಗಳ ಅಧಿಪ ಮಹಾಮತಿ ಯುಧಿಷ್ಠಿರನು ನನಗೆ ಪ್ರಿಯನಾದವನೂ ಮತ್ತು ಮಾನ್ಯನೂ ಆಗಿದ್ದಾನೆ.

14015033a ಪ್ರಯೋಜನಂ ಚಾಪಿ ನಿವಾಸಕಾರಣೇ ನ ವಿದ್ಯತೇ ಮೇ ತ್ವದೃತೇ ಮಹಾಭುಜ।
14015033c ಸ್ಥಿತಾ ಹಿ ಪೃಥ್ವೀ ತವ ಪಾರ್ಥ ಶಾಸನೇ ಗುರೋಃ ಸುವೃತ್ತಸ್ಯ ಯುಧಿಷ್ಠಿರಸ್ಯ ಹ।।

ಮಹಾಭುಜ! ನಿನ್ನೊಡನೆ ಇರುವ ಸುಖವಲ್ಲದೇ ಇಲ್ಲಿ ನಾನು ಇನ್ನೂ ಉಳಿದುಕೊಂಡರೆ ಯಾವ ಪ್ರಯೋಜನವನ್ನೂ ನಾನು ಕಾಣುತ್ತಿಲ್ಲ. ಪಾರ್ಥ! ಈ ಪೃಥ್ವಿಯೇ ನಿನ್ನ ಗುರುವೂ ಉತ್ತಮ ನಡತೆಯುಳ್ಳವನೂ ಆದ ಯುಧಿಷ್ಠಿರನ ಶಾಸನದಲ್ಲಿದೆ!”

14015034a ಇತೀದಮುಕ್ತಂ ಸ ತದಾ ಮಹಾತ್ಮನಾ ಜನಾರ್ದನೇನಾಮಿತವಿಕ್ರಮೋಽರ್ಜುನಃ।
14015034c ತಥೇತಿ ಕೃಚ್ಚ್ರಾದಿವ ವಾಚಮೀರಯನ್ ಜನಾರ್ದನಂ ಸಂಪ್ರತಿಪೂಜ್ಯ ಪಾರ್ಥಿವ।।

ಆ ಮಹಾತ್ಮ ಜನಾರ್ದನನು ಹೀಗೆ ಹೇಳಲು ಅಮಿತ ವಿಕ್ರಮಿ ಅರ್ಜುನನು ಕಷ್ಟದಿಂದಲೇ “ಹಾಗೆಯೇ ಆಗಲಿ” ಎಂದು ಹೇಳಿ ಜನಾರ್ದನನನ್ನು ಪೂಜಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಪಂಚದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಹದಿನೈದನೇ ಅಧ್ಯಾಯವು.