012: ಕೃಷ್ಣಧರ್ಮಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 12

ಸಾರ

ತನ್ನೊಳಗಿರುವ ಮಾನಸಿಕ ಯುದ್ಧವನ್ನು ಗೆಲ್ಲಬೇಕೆಂದು ಯುಧಿಷ್ಠಿರನಿಗೆ ಕೃಷ್ಣನು ಹೇಳಿದುದು (1-14).

14012001 ವಾಸುದೇವ ಉವಾಚ।
14012001a ದ್ವಿವಿಧೋ ಜಾಯತೇ ವ್ಯಾಧಿಃ ಶಾರೀರೋ ಮಾನಸಸ್ತಥಾ।
14012001c ಪರಸ್ಪರಂ ತಯೋರ್ಜನ್ಮ ನಿರ್ದ್ವಂದ್ವಂ ನೋಪಲಭ್ಯತೇ।।

ವಾಸುದೇವನು ಹೇಳಿದನು: “ಶಾರೀರಿಕ ಮತ್ತು ಮಾನಸಿಕ ಎಂದು ಎರಡು ರೀತಿಯ ವ್ಯಾಧಿಗಳಿವೆ. ಶರೀರ ಮತ್ತು ಮನಸ್ಸು ಇವುಗಳ ಪರಸ್ಪರ ಸಹಯೋಗವಿಲ್ಲದೇ ವ್ಯಾಧಿಯು ಹುಟ್ಟುವುದಿಲ್ಲ.

14012002a ಶರೀರೇ ಜಾಯತೇ ವ್ಯಾಧಿಃ ಶಾರೀರೋ ನಾತ್ರ ಸಂಶಯಃ।
14012002c ಮಾನಸೋ ಜಾಯತೇ ವ್ಯಾಧಿರ್ಮನಸ್ಯೇವೇತಿ ನಿಶ್ಚಯಃ।।

ಶರೀರದಿಂದ ಹುಟ್ಟುವ ವ್ಯಾಧಿಯು ಶಾರೀರಿಕವ್ಯಾಧಿಯೆನ್ನುವುದರಲ್ಲಿ ಸಂಶಯವಿಲ್ಲ. ಮನಸ್ಸಿನಿಂದ ಹುಟ್ಟುವ ವ್ಯಾಧಿಯು ಮಾನಸಿಕ ಎನ್ನುವುದು ನಿಶ್ಚಿತ.

14012003a ಶೀತೋಷ್ಣೇ ಚೈವ ವಾಯುಶ್ಚ ಗುಣಾ ರಾಜನ್ಶರೀರಜಾಃ।
14012003c ತೇಷಾಂ ಗುಣಾನಾಂ ಸಾಮ್ಯಂ ಚೇತ್ತದಾಹುಃ ಸ್ವಸ್ಥಲಕ್ಷಣಮ್।
14012003e ಉಷ್ಣೇನ ಬಾಧ್ಯತೇ ಶೀತಂ ಶೀತೇನೋಷ್ಣಂ ಚ ಬಾಧ್ಯತೇ।।

ರಾಜನ್! ಶೀತ, ಉಷ್ಣ ಮತ್ತು ವಾಯುಗಳು ಶರೀರದ ಗುಣಗಳು. ಆ ಗುಣಗಳ ಸಾಮ್ಯವು ಆರೋಗ್ಯದ ಲಕ್ಷಣಗಳೆಂದು ಹೇಳುತ್ತಾರೆ. ಉಷ್ಣದಿಂದ ಶೀತವನ್ನು ಹೋಗಲಾಡಿಸಬಹುದು ಮತ್ತು ಶೀತದಿಂದ ಉಷ್ಣವನ್ನು ಹೋಗಲಾಡಿಸಬಹುದು.

14012004a ಸತ್ತ್ವಂ ರಜಸ್ತಮಶ್ಚೇತಿ ತ್ರಯಸ್ತ್ವಾತ್ಮಗುಣಾಃ ಸ್ಮೃತಾಃ।
14012004c ತೇಷಾಂ ಗುಣಾನಾಂ ಸಾಮ್ಯಂ ಚೇತ್ತದಾಹುಃ ಸ್ವಸ್ಥಲಕ್ಷಣಮ್।
14012004e ತೇಷಾಮನ್ಯತಮೋತ್ಸೇಕೇ ವಿಧಾನಮುಪದಿಶ್ಯತೇ।।

ಸತ್ವ, ರಜ, ಮತ್ತು ತಮಗಳೆಂಬ ಮೂರು ಆತ್ಮದ ಗುಣಗಳೆಂದು ಹೇಳುತ್ತಾರೆ. ಆ ಗುಣಗಳ ಸಾಮ್ಯತೆಯು ಆರೋಗ್ಯದ ಲಕ್ಷಣವೆಂದು ಹೇಳುತ್ತಾರೆ. ಇವುಗಳಲ್ಲಿ ಯಾವುದೊಂದು ಗುಣವೂ ಅಧಿಕವಾಗಿದ್ದರೆ ಅದನ್ನು ಇನ್ನೊಂದು ಗುಣದೊಂದಿಗೆ ಸೇರಿಸಿಕೊಳ್ಳಬೇಕೆಂಬ ವಿಧಾನವನ್ನು ಉಪದೇಶಿಸಿದ್ದಾರೆ.

14012005a ಹರ್ಷೇಣ ಬಾಧ್ಯತೇ ಶೋಕೋ ಹರ್ಷಃ ಶೋಕೇನ ಬಾಧ್ಯತೇ।
14012005c ಕಶ್ಚಿದ್ದುಃಖೇ ವರ್ತಮಾನಃ ಸುಖಸ್ಯ ಸ್ಮರ್ತುಮಿಚ್ಚತಿ।
14012005e ಕಶ್ಚಿತ್ಸುಖೇ ವರ್ತಮಾನೋ ದುಃಖಸ್ಯ ಸ್ಮರ್ತುಮಿಚ್ಚತಿ।।

ಹರ್ಷದಿಂದ ಶೋಕವು ದೂರವಾಗುತ್ತದೆ ಮತ್ತು ಶೋಕದಿಂದ ಹರ್ಷವು ದೂರವಾಗುತ್ತದೆ. ಒಂದು ವೇಳೆ ವರ್ತಮಾನದಲ್ಲಿ ದುಃಖವು ಆಗುತ್ತಿದ್ದರೆ ಸುಖದ ವೇಳೆಯನ್ನು ಸ್ಮರಿಸಿಕೊಳ್ಳಬೇಕು. ಒಂದು ವೇಳೆ ವರ್ತಮಾನದಲ್ಲಿ ಸುಖವು ಆಗುತ್ತಿದ್ದರೆ ದುಃಖದ ವೇಳೆಯನ್ನು ಸ್ಮರಿಸಿಕೊಳ್ಳಬೇಕು.

14012006a ಸ ತ್ವಂ ನ ದುಃಖೀ ದುಃಖಸ್ಯ ನ ಸುಖೀ ಸುಸುಖಸ್ಯ ವಾ।
14012006c ಸ್ಮರ್ತುಮಿಚ್ಚಸಿ ಕೌಂತೇಯ ದಿಷ್ಟಂ ಹಿ ಬಲವತ್ತರಮ್।।

ಆದರೆ ನೀನು ದುಃಖಿಯಾಗಿದ್ದುಕೊಂಡು ದುಃಖದ ನಿವಾರಣೆಗಾಗಿ ಸುಖವನ್ನು ಸ್ಮರಿಸಿಕೊಳ್ಳುತ್ತಿಲ್ಲ. ಸುಖಿಯಾಗಿದ್ದುಕೊಂಡು ಆ ಸುಖವನ್ನು ಸಮನ್ವಯಗೊಳಿಸುವುದಕ್ಕಾಗಿ ನೀನು ದುಃಖವನ್ನೂ ನೆನಪಿಸಿಕೊಳ್ಳುತ್ತಿಲ್ಲ. ಕೌಂತೇಯ! ದೈವವೇ ಬಲವತ್ತರವೆನ್ನುವುದನ್ನು ಸ್ಮರಿಸಿಕೊಳ್ಳಬೇಕು.

14012007a ಅಥ ವಾ ತೇ ಸ್ವಭಾವೋಽಯಂ ಯೇನ ಪಾರ್ಥಾವಕೃಷ್ಯಸೇ।
14012007c ದೃಷ್ಟ್ವಾ ಸಭಾಗತಾಂ ಕೃಷ್ಣಾಮೇಕವಸ್ತ್ರಾಂ ರಜಸ್ವಲಾಮ್।
14012007e ಮಿಷತಾಂ ಪಾಂಡವೇಯಾನಾಂ ನ ತತ್ಸಂಸ್ಮರ್ತುಮಿಚ್ಚಸಿ।।

ಅಥವಾ ಪಾರ್ಥ! ದುಃಖಿಸುತ್ತಿರುವುದೇ ನಿನ್ನ ಸ್ವಭಾವವೂ ಆಗಿರಬಹುದು. ಪಾಂಡವರು ನೋಡುತ್ತಿದ್ದಂತೆಯೇ ಏಕವಸ್ತ್ರದಲ್ಲಿದ್ದ ರಜಸ್ವಲೆ ಕೃಷ್ಣೆಯನ್ನು ಸಭೆಗೆ ಎಳೆದುತಂದ ದೃಶ್ಯವನ್ನು ಈಗ ನೀನು ಸ್ಮರಿಸಿಕೊಳ್ಳುತ್ತಿಲ್ಲ!

14012008a ಪ್ರವ್ರಾಜನಂ ಚ ನಗರಾದಜಿನೈಶ್ಚ ವಿವಾಸನಮ್।
14012008c ಮಹಾರಣ್ಯನಿವಾಸಶ್ಚ ನ ತಸ್ಯ ಸ್ಮರ್ತುಮಿಚ್ಚಸಿ।।

ಜಿನಗಳನ್ನುಟ್ಟು ನಗರದಿಂದ ಹೊರಬಂದಿದ್ದುದನ್ನು, ಮತ್ತು ಮಹಾರಣ್ಯದಲ್ಲಿ ವಾಸಿಸುದನ್ನು ನೀನು ಈಗ ನೆನಪಿಸಿಕೊಳ್ಳುತ್ತಿಲ್ಲ!

14012009a ಜಟಾಸುರಾತ್ಪರಿಕ್ಲೇಶಶ್ಚಿತ್ರಸೇನೇನ ಚಾಹವಃ।
14012009c ಸೈಂಧವಾಚ್ಚ ಪರಿಕ್ಲೇಶೋ ನ ತಸ್ಯ ಸ್ಮರ್ತುಮಿಚ್ಚಸಿ।।

ಜಟಾಸುರನಿಂದುಂಟಾದ ಕಷ್ಟವನ್ನು, ಚಿತ್ರಸೇನನೊಡನೆ ನಡೆದ ಯುದ್ಧವನ್ನು, ಮತ್ತು ಸೈಂಧವನಿಂದುಂಟಾದ ಕಷ್ಟವನ್ನು ನೀನು ನೆನಪಿಸಿಕೊಳ್ಳಲು ಬಯಸುತ್ತಿಲ್ಲ!

14012010a ಪುನರಜ್ಞಾತಚರ್ಯಾಯಾಂ ಕೀಚಕೇನ ಪದಾ ವಧಃ।
14012010c ಯಾಜ್ಞಸೇನ್ಯಾಸ್ತದಾ ಪಾರ್ಥ ನ ತಸ್ಯ ಸ್ಮರ್ತುಮಿಚ್ಚಸಿ।।

ಪಾರ್ಥ! ಪುನಃ ಅಜ್ಞಾತವಾಸದಲ್ಲಿ ಪರಿಚಾರಿಕೆಗಳನ್ನು ಮಾಡಿದುದು, ಯಾಜ್ಞಸೇನಿಯನ್ನು ಕೀಚಕನು ಕಾಲಿನಿಂದ ಒದೆದುದು ಇದನ್ನು ನೀನು ನೆನಪಿಸಿಕೊಳ್ಳಲು ಬಯಸುತ್ತಿಲ್ಲ.

14012011a ಯಚ್ಚ ತೇ ದ್ರೋಣಭೀಷ್ಮಾಭ್ಯಾಂ ಯುದ್ಧಮಾಸೀದರಿಂದಮ।
14012011c ಮನಸೈಕೇನ ಯೋದ್ಧವ್ಯಂ ತತ್ತೇ ಯುದ್ಧಮುಪಸ್ಥಿತಮ್।
14012011e ತಸ್ಮಾದಭ್ಯುಪಗಂತವ್ಯಂ ಯುದ್ಧಾಯ ಭರತರ್ಷಭ।।

ಅರಿಂದಮ! ನೀನು ದ್ರೋಣ-ಭೀಷ್ಮರೊಂದಿಗೆ ಮಾಡಿದ ಯುದ್ಧವನ್ನು ಮಾತ್ರ ನೆನಪಿಸಿಕೊಳ್ಳುತ್ತಿದ್ದೀಯೆ. ನಿನ್ನ ಮನಸ್ಸಿನಲ್ಲಿರುವ ಈ ಯುದ್ಧವನ್ನೇ ನೀನು ಹೋರಾಡಬೇಕು. ಭರತರ್ಷಭ! ಆ ಯುದ್ಧದಿಂದ ಗೆದ್ದು ನೀನು ಮೇಲೆ ಬರಬೇಕು!

14012012a ಪರಮವ್ಯಕ್ತರೂಪಸ್ಯ ಪರಂ ಮುಕ್ತ್ವಾ ಸ್ವಕರ್ಮಭಿಃ।
14012012c ಯತ್ರ ನೈವ ಶರೈಃ ಕಾರ್ಯಂ ನ ಭೃತ್ಯೈರ್ನ ಚ ಬಂಧುಭಿಃ।
14012012e ಆತ್ಮನೈಕೇನ ಯೋದ್ಧವ್ಯಂ ತತ್ತೇ ಯುದ್ಧಮುಪಸ್ಥಿತಮ್।।

ಸ್ವಕರ್ಮಗಳಿಂದ ಮನಸ್ಸನ್ನು ಗೆದ್ದು ಪರಮ ಅವ್ಯಕ್ತರೂಪನನ್ನು ಪಡೆಯಬೇಕು. ಅಲ್ಲಿ ಶರಗಳದ್ದಾಗಲೀ, ಸೇವಕರದ್ದಾಗಲೀ ಮತ್ತು ಬಂಧುಗಳದ್ದಾಗಲೀ ಯಾವ ಕಾರ್ಯವೂ ಇಲ್ಲ. ಅಲ್ಲಿರುವ ಯುದ್ಧವನ್ನು ಆತ್ಮನೊಬ್ಬನೇ ಹೋರಾಡಬೇಕು.

14012013a ತಸ್ಮಿನ್ನನಿರ್ಜಿತೇ ಯುದ್ಧೇ ಕಾಮವಸ್ಥಾಂ ಗಮಿಷ್ಯಸಿ।
14012013c ಏತಜ್ಞಾತ್ವಾ ತು ಕೌಂತೇಯ ಕೃತಕೃತ್ಯೋ ಭವಿಷ್ಯಸಿ।।

ಕೌಂತೇಯ! ಅಂಥಹ ಯುದ್ಧವನ್ನು ಗೆಲ್ಲದೇ ಇದ್ದರೆ ನೀನು ಎಂತಹ ಅವಸ್ಥೆಯನ್ನು ಹೊಂದುವೆ ಎನ್ನುವುದನ್ನು ತಿಳಿದುಕೊಂಡರೂ ನೀನು ಕೃತಕೃತ್ಯನಾಗುವೆ!

14012014a ಏತಾಂ ಬುದ್ಧಿಂ ವಿನಿಶ್ಚಿತ್ಯ ಭೂತಾನಾಮಾಗತಿಂ ಗತಿಮ್।
14012014c ಪಿತೃಪೈತಾಮಹೇ ವೃತ್ತೇ ಶಾಧಿ ರಾಜ್ಯಂ ಯಥೋಚಿತಮ್।।

ಭೂತಗಳ ಆಗು ಹೋಗುಗಳ ಕುರಿತು ಹೀಗೆ ಬುದ್ಧಿಯಲ್ಲಿ ನಿಶ್ಚಯಿಸಿ ನಿನ್ನ ಪಿತೃ-ಪಿತಾಮಹರ ವೃತ್ತಿಯನ್ನನುಸರಿಸಿ ಯಥೋಚಿತವಾಗಿ ರಾಜ್ಯವನ್ನಾಳು!”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಕೃಷ್ಣಧರ್ಮಸಂವಾದೇ ದ್ವಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಕೃಷ್ಣಧರ್ಮಸಂವಾದ ಎನ್ನುವ ಹನ್ನೆರಡನೇ ಅಧ್ಯಾಯವು.