ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 11
ಸಾರ
“ನಿನ್ನ ಶರೀರದಲ್ಲಿಯೇ ಇರುವ ಶತ್ರುವನ್ನು ನೀನು ಇನ್ನೂ ಜಯಿಸಿಲ್ಲ!” ಎಂದು ವಾಸುದೇವನು ಯುಧಿಷ್ಠಿರನಿಗೆ ಇಂದ್ರ-ವೃತ್ರರ ಯುದ್ಧದ ಧರ್ಮರಹಸ್ಯವನ್ನು ಉದಾಹರಿಸಿದುದು (1-20).
14011001 ವೈಶಂಪಾಯನ ಉವಾಚ।
14011001a ಇತ್ಯುಕ್ತೇ ನೃಪತೌ ತಸ್ಮಿನ್ವ್ಯಾಸೇನಾದ್ಭುತಕರ್ಮಣಾ।
14011001c ವಾಸುದೇವೋ ಮಹಾತೇಜಾಸ್ತತೋ ವಚನಮಾದದೇ।।
ವೈಶಂಪಾಯನನು ಹೇಳಿದನು: “ಅದ್ಭುತ ಕರ್ಮಿ ವ್ಯಾಸನು ನೃಪತಿಗೆ ಹೀಗೆ ಹೇಳಲು ಮಹಾತೇಜಸ್ವಿ ವಾಸುದೇವನು ಅವನಿಗೆ ಈ ಮಾತುಗಳನ್ನಾಡಿದನು.
14011002a ತಂ ನೃಪಂ ದೀನಮನಸಂ ನಿಹತಜ್ಞಾತಿಬಾಂಧವಮ್।
14011002c ಉಪಪ್ಲುತಮಿವಾದಿತ್ಯಂ ಸಧೂಮಮಿವ ಪಾವಕಮ್।।
14011003a ನಿರ್ವಿಣ್ಣಮನಸಂ ಪಾರ್ಥಂ ಜ್ಞಾತ್ವಾ ವೃಷ್ಣಿಕುಲೋದ್ವಹಃ।
14011003c ಆಶ್ವಾಸಯನ್ಧರ್ಮಸುತಂ ಪ್ರವಕ್ತುಮುಪಚಕ್ರಮೇ।।
ಜ್ಞಾತಿಬಾಂಧವರ ಸಂಹಾರದಿಂದ ದೀನಮನಸ್ಕನಾಗಿದ್ದ, ಮುಳುಗುತ್ತಿರುವ ಸೂರ್ಯನಂತಿದ್ದ ಮತ್ತು ಹೊಗೆಯಿರುವ ಅಗ್ನಿಯಂತಿದ್ದ, ನಿರ್ವಿಣ್ಣ ಮನಸ್ಕನಾದ ಪಾರ್ಥ ನೃಪನನ್ನು ಅರ್ಥಮಾಡಿಕೊಂಡ ವೃಷ್ಣಿಕುಲೋದ್ವಹನು ಧರ್ಮಸುತನನ್ನು ಸಮಾಧಾನಪಡಿಸುತ್ತಾ ಹೇಳಲು ಉಪಕ್ರಮಿಸಿದನು.
14011004 ವಾಸುದೇವ ಉವಾಚ
14011004a ಸರ್ವಂ ಜಿಹ್ಮಂ ಮೃತ್ಯುಪದಮಾರ್ಜವಂ ಬ್ರಹ್ಮಣಃ ಪದಮ್।
14011004c ಏತಾವಾನ್ ಜ್ಞಾನವಿಷಯಃ ಕಿಂ ಪ್ರಲಾಪಃ ಕರಿಷ್ಯತಿ।।
ವಾಸುದೇವನು ಹೇಳಿದನು: “ಕುಟಿಲತೆಯು ಮೃತ್ಯುವಿಗೆ ದಾರಿ ಮತ್ತು ಸರಳತೆಯು ಬ್ರಹ್ಮಪದ. ಈ ವಿಷಯವನ್ನು ತಿಳಿದ ನೀನು ಏಕೆ ಪ್ರಲಪಿಸುತ್ತಿರುವೆ?
14011005a ನೈವ ತೇ ನಿಷ್ಠಿತಂ ಕರ್ಮ ನೈವ ತೇ ಶತ್ರವೋ ಜಿತಾಃ।
14011005c ಕಥಂ ಶತ್ರುಂ ಶರೀರಸ್ಥಮಾತ್ಮಾನಂ ನಾವಬುಧ್ಯಸೇ।।
ಇನ್ನೂ ನೀನು ಮಾಡಬೇಕಾದ ಕರ್ಮಗಳೆಲ್ಲವನ್ನೂ ಮಾಡಿಮುಗಿಸಿಲ್ಲ ಮತ್ತು ನಿನ್ನ ಶತ್ರುಗಳೆಲ್ಲರನ್ನೂ ನೀನು ಜಯಿಸಿಲ್ಲ. ನಿನ್ನ ಶರೀರದಲ್ಲಿಯೇ ಇರುವ ಶತ್ರುವನ್ನು ನೀನು ಹೇಗೆ ಅರಿತುಕೊಳ್ಳುತ್ತಿಲ್ಲ?
14011006a ಅತ್ರ ತೇ ವರ್ತಯಿಷ್ಯಾಮಿ ಯಥಾಧರ್ಮಂ ಯಥಾಶ್ರುತಮ್।
14011006c ಇಂದ್ರಸ್ಯ ಸಹ ವೃತ್ರೇಣ ಯಥಾ ಯುದ್ಧಮವರ್ತತ।।
ಇದಕ್ಕೆ ಸಂಬಂಧಿಸಿದಂತೆ ವೃತ್ರನೊಂದಿಗೆ ನಡೆದ ಯುದ್ಧದ ಕುರಿತು ಯಥಾಧರ್ಮವಾಗಿ ಕೇಳಿದಂತೆ ನಿನಗೆ ಹೇಳುತ್ತೇನೆ.
14011007a ವೃತ್ರೇಣ ಪೃಥಿವೀ ವ್ಯಾಪ್ತಾ ಪುರಾ ಕಿಲ ನರಾಧಿಪ।
14011007c ದೃಷ್ಟ್ವಾ ಸ ಪೃಥಿವೀಂ ವ್ಯಾಪ್ತಾಂ ಗಂಧಸ್ಯ ವಿಷಯೇ ಹೃತೇ।
14011007e ಧರಾಹರಣದುರ್ಗಂಧೋ ವಿಷಯಃ ಸಮಪದ್ಯತ।।
ನರಾಧಿಪ! ಹಿಂದೆ ವೃತ್ರನಿಂದ ಇಡೀ ಪೃಥ್ವಿಯೇ ವ್ಯಾಪ್ತವಾಗಿಬಿಟ್ಟಿತ್ತಲ್ಲವೇ? ಅವನು ಪೃಥ್ವಿಯನ್ನು ವ್ಯಾಪಿಸಿ ಭೂಮಿಯಿಂದ ಅದರ ಸುಗಂಧವನ್ನೂ ಅಪಹರಿಸಿಬಿಟ್ಟಿದ್ದನು. ಆಗ ಭೂಮಿಯಲ್ಲೆಲ್ಲ ದುರ್ಗಂಧವೇ ಪಸರಿಸಿತು.
14011008a ಶತಕ್ರತುಶ್ಚುಕೋಪಾಥ ಗಂಧಸ್ಯ ವಿಷಯೇ ಹೃತೇ।
14011008c ವೃತ್ರಸ್ಯ ಸ ತತಃ ಕ್ರುದ್ಧೋ ವಜ್ರಂ ಘೋರಮವಾಸೃಜತ್।।
ಭೂಮಿಯಿಂದ ಗಂಧವನ್ನು ಅಪಹರಿಸಲು ಶತಕ್ರತುವಿಗೆ ಕೋಪವುಂಟಾಯಿತು. ಕ್ರುದ್ಧನಾದ ಅವನು ವೃತ್ರನ ಮೇಲೆ ಘೋರ ವಜ್ರವನ್ನು ಪ್ರಯೋಗಿಸಿದನು.
14011009a ಸ ವಧ್ಯಮಾನೋ ವಜ್ರೇಣ ಪೃಥಿವ್ಯಾಂ ಭೂರಿತೇಜಸಾ।
14011009c ವಿವೇಶ ಸಹಸೈವಾಪೋ ಜಗ್ರಾಹ ವಿಷಯಂ ತತಃ।।
ಅತ್ಯಂತ ತೇಜಸ್ಸಿದ್ದ ವಜ್ರದಿಂದ ಕೊಲ್ಲಲ್ಪಡುತ್ತಿದ್ದ ವೃತ್ರನು ಒಡನೆಯೇ ಭೂಮಿಯನ್ನು ಬಿಟ್ಟು ಜಲಪ್ರದೇಶವನ್ನು ಆವರಿಸಿದನು.
14011010a ವ್ಯಾಪ್ತಾಸ್ವಥಾಪ್ಸು ವೃತ್ರೇಣ ರಸೇ ಚ ವಿಷಯೇ ಹೃತೇ।
14011010c ಶತಕ್ರತುರಭಿಕ್ರುದ್ಧಸ್ತಾಸು ವಜ್ರಮವಾಸೃಜತ್।।
ನೀರಿನಲ್ಲಿ ವ್ಯಾಪ್ತನಾದ ವೃತ್ರನು ಅದರಲ್ಲಿರುವ ರಸವನ್ನು ಅಪಹರಿಸಲು ಶತಕ್ರತುವು ಪುನಃ ಕ್ರುದ್ಧನಾಗಿ ಅವನ ಮೇಲೆ ವಜ್ರವನ್ನು ಪ್ರಯೋಗಿಸಿದನು.
14011011a ಸ ವಧ್ಯಮಾನೋ ವಜ್ರೇಣ ಸಲಿಲೇ ಭೂರಿತೇಜಸಾ।
14011011c ವಿವೇಶ ಸಹಸಾ ಜ್ಯೋತಿರ್ಜಗ್ರಾಹ ವಿಷಯಂ ತತಃ।।
ಅತ್ಯಂತ ತೇಜೋಯುಕ್ತ ವಜ್ರದಿಂದ ವಧಿಸಲ್ಪಡುತ್ತಿದ್ದ ವೃತ್ರನು ಕೂಡಲೆ ಜ್ಯೋತಿಯನ್ನು ಪ್ರವೇಶಿಸಿ ಆ ಪ್ರದೇಶವನ್ನು ಆವರಿಸಿದನು.
14011012a ವ್ಯಾಪ್ತೇ ಜ್ಯೋತಿಷಿ ವೃತ್ರೇಣ ರೂಪೇಽಥ ವಿಷಯೇ ಹೃತೇ।
14011012c ಶತಕ್ರತುರಭಿಕ್ರುದ್ಧಸ್ತತ್ರ ವಜ್ರಮವಾಸೃಜತ್।।
ಜ್ಯೋತಿಯನ್ನು ವ್ಯಾಪಿಸಿ ವೃತ್ರನು ಅದರಲ್ಲಿರುವ ರೂಪವನ್ನು ಅಪಹರಿಸಲು ಶತುಕ್ರತುವು ಕ್ರುದ್ಧನಾಗಿ ಪುನಃ ಅವನ ಮೇಲೆ ವಜ್ರವನ್ನು ಪ್ರಯೋಗಿಸಿದನು.
14011013a ಸ ವಧ್ಯಮಾನೋ ವಜ್ರೇಣ ಸುಭೃಶಂ ಭೂರಿತೇಜಸಾ।
14011013c ವಿವೇಶ ಸಹಸಾ ವಾಯುಂ ಜಗ್ರಾಹ ವಿಷಯಂ ತತಃ।।
ಅತ್ಯಂತ ತೇಜೋಯುಕ್ತ ವಜ್ರದಿಂದ ವಧಿಸಲ್ಪಡುತ್ತಿದ್ದ ವೃತ್ರನು ಕೂಡಲೇ ವಾಯುವನ್ನು ಪ್ರವೇಶಿಸಿ ಅದನ್ನು ವ್ಯಾಪಿಸಿದನು.
14011014a ವ್ಯಾಪ್ತೇ ವಾಯೌ ತು ವೃತ್ರೇಣ ಸ್ಪರ್ಶೇಽಥ ವಿಷಯೇ ಹೃತೇ।
14011014c ಶತಕ್ರತುರಭಿಕ್ರುದ್ಧಸ್ತತ್ರ ವಜ್ರಮವಾಸೃಜತ್।।
ವಾಯುವನ್ನು ವ್ಯಾಪಿಸಿ ವೃತ್ರನು ಅದರಲ್ಲಿರುವ ಸ್ಪರ್ಶಗುಣವನ್ನು ಅಪಹರಿಸಲು ಶತಕ್ರತುವು ಕ್ರುದ್ಧನಾಗಿ ಅವನ ಮೇಲೆ ಪುನಃ ವಜ್ರವನ್ನು ಪ್ರಯೋಗಿಸಿದನು.
14011015a ಸ ವಧ್ಯಮಾನೋ ವಜ್ರೇಣ ತಸ್ಮಿನ್ನಮಿತತೇಜಸಾ।
14011015c ಆಕಾಶಮಭಿದುದ್ರಾವ ಜಗ್ರಾಹ ವಿಷಯಂ ತತಃ।।
ಆ ಅಮಿತ ತೇಜಸ್ವೀ ವಜ್ರದಿಂದ ವಧಿಸಲ್ಪಡುತ್ತಿದ್ದ ವೃತ್ರನು ಕೂಡಲೇ ಆಕಾಶಕ್ಕೆ ಹಾರಿ ಆ ಪ್ರದೇಶವನ್ನು ವ್ಯಾಪಿಸಿದನು.
14011016a ಆಕಾಶೇ ವೃತ್ರಭೂತೇ ಚ ಶಬ್ದೇ ಚ ವಿಷಯೇ ಹೃತೇ।
14011016c ಶತಕ್ರತುರಭಿಕ್ರುದ್ಧಸ್ತತ್ರ ವಜ್ರಮವಾಸೃಜತ್।।
ಅಕಾಶವನ್ನು ವ್ಯಾಪಿಸಿ ವೃತ್ರನು ಅದರಲ್ಲಿರುವ ಶಬ್ಧವನ್ನು ಅಪಹರಿಸಲು ಕ್ರುದ್ಧನಾದ ಶತಕ್ರತುವು ಅವನ ಮೇಲೆ ಪುನಃ ವಜ್ರವನ್ನು ಪ್ರಯೋಗಿಸಿದನು.
14011017a ಸ ವಧ್ಯಮಾನೋ ವಜ್ರೇಣ ತಸ್ಮಿನ್ನಮಿತತೇಜಸಾ।
14011017c ವಿವೇಶ ಸಹಸಾ ಶಕ್ರಂ ಜಗ್ರಾಹ ವಿಷಯಂ ತತಃ।।
ಆ ಅಮಿತ ತೇಜಸ ವಜ್ರದಿಂದ ವಧಿಸಲ್ಪಡುತಿದ್ದ ವೃತ್ರನು ಕೂಡಲೇ ಶಕ್ರನನ್ನು ಪ್ರವೇಶಿಸಿ ಅವನ ವಿಷಯವನ್ನು ವ್ಯಾಪಿಸಿದನು.
14011018a ತಸ್ಯ ವೃತ್ರಗೃಹೀತಸ್ಯ ಮೋಹಃ ಸಮಭವನ್ಮಹಾನ್।
14011018c ರಥಂತರೇಣ ತಂ ತಾತ ವಸಿಷ್ಠಃ ಪ್ರತ್ಯಬೋಧಯತ್।।
ವೃತ್ರಾಸುರನು ಹಿಡಿದ ಅವನಲ್ಲಿ ಮಹಾ ಮೋಹವುಂಟಾಯಿತು. ಮಗೂ! ಆಗ ರಥಂತರ ಮಂತ್ರದಿಂದ ವಸಿಷ್ಠನು ಶಕ್ರನನ್ನು ಪುನಃ ಎಚ್ಚರಗೊಳಿಸಿದನು.
14011019a ತತೋ ವೃತ್ರಂ ಶರೀರಸ್ಥಂ ಜಘಾನ ಭರತರ್ಷಭ।
14011019c ಶತಕ್ರತುರದೃಶ್ಯೇನ ವಜ್ರೇಣೇತೀಹ ನಃ ಶ್ರುತಮ್।।
ಭರತರ್ಷಭ! ಆಗ ಶರೀರಸ್ಥನಾಗಿದ್ದ ವೃತ್ರನನ್ನು ಶತಕ್ರತುವು ಅದೃಶ್ಯ ವಜ್ರದಿಂದಲೇ ಸಂಹರಿಸಿದನೆಂದು ನಾವು ಕೇಳಿದ್ದೇವೆ.
14011020a ಇದಂ ಧರ್ಮರಹಸ್ಯಂ ಚ ಶಕ್ರೇಣೋಕ್ತಂ ಮಹರ್ಷಿಷು।
14011020c ಋಷಿಭಿಶ್ಚ ಮಮ ಪ್ರೋಕ್ತಂ ತನ್ನಿಬೋಧ ನರಾಧಿಪ।।
ನರಾಧಿಪ! ಈ ಧರ್ಮರಹಸ್ಯವನ್ನು ಇಂದ್ರನೇ ಮಹರ್ಷಿಗಳಿಗೆ ಹೇಳಿದನು. ಋಷಿಗಳು ನನಗೆ ಹೇಳಿದುದನ್ನು ನೀನು ಕೇಳು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಕೃಷ್ಣಧರ್ಮಸಂವಾದೇ ಏಕಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಕೃಷ್ಣಧರ್ಮಸಂವಾದ ಎನ್ನುವ ಹನ್ನೊಂದನೇ ಅಧ್ಯಾಯವು.