ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 7
ಸಾರ
ವ್ಯಾಸನು ಸಂವರ್ತ-ಮರುತ್ತರ ಕಥೆಯನ್ನು ಮುಂದುವರೆಸಿದುದು (1-27).
14007001 ಸಂವರ್ತ ಉವಾಚ।
14007001a ಕಥಮಸ್ಮಿ ತ್ವಯಾ ಜ್ಞಾತಃ ಕೇನ ವಾ ಕಥಿತೋಽಸ್ಮಿ ತೇ।
14007001c ಏತದಾಚಕ್ಷ್ವ ಮೇ ತತ್ತ್ವಮಿಚ್ಚಸೇ ಚೇತ್ಪ್ರಿಯಂ ಮಮ।।
ಸಂವರ್ತನು ಹೇಳಿದನು: “ನನ್ನ ಕುರಿತು ನಿನಗೆ ಹೇಗೆ ತಿಳಿಯಿತು? ನನ್ನ ಕುರಿತು ನಿನಗೆ ಯಾರು ಹೇಳಿದರು? ನನಗೆ ಪ್ರಿಯವಾದುದನ್ನು ಮಾಡಲು ಬಯಸಿದರೆ ನೀನು ಅದನ್ನು ನನಗೆ ಹೇಳು.
14007002a ಸತ್ಯಂ ತೇ ಬ್ರುವತಃ ಸರ್ವೇ ಸಂಪತ್ಸ್ಯಂತೇ ಮನೋರಥಾಃ।
14007002c ಮಿಥ್ಯಾ ತು ಬ್ರುವತೋ ಮೂರ್ಧಾ ಸಪ್ತಧಾ ತೇ ಫಲಿಷ್ಯತಿ।।
ಸತ್ಯವನ್ನೇ ಹೇಳಿದರೆ ನಿನ್ನ ಎಲ್ಲ ಮನೋರಥಗಳೂ ಪೂರ್ಣವಾಗುತ್ತವೆ. ಸುಳ್ಳನ್ನು ಹೇಳಿದರೆ ನಿನ್ನ ತಲೆಯು ಏಳು ಚೂರುಗಳಾಗಿ ಒಡೆದುಹೋಗುತ್ತದೆ.”
14007003 ಮರುತ್ತ ಉವಾಚ।
14007003a ನಾರದೇನ ಭವಾನ್ಮಹ್ಯಮಾಖ್ಯಾತೋ ಹ್ಯಟತಾ ಪಥಿ।
14007003c ಗುರುಪುತ್ರೋ ಮಮೇತಿ ತ್ವಂ ತತೋ ಮೇ ಪ್ರೀತಿರುತ್ತಮಾ।।
ಮರುತ್ತನು ಹೇಳಿದನು: “ದಾರಿಯಲ್ಲಿ ಅಲೆದಾಡುತ್ತಿದ್ದಾಗ ನಾರದನು ನೀನು ನನ್ನ ಗುರುವಿನ ಮಗನೆಂದು ನಿನ್ನ ಕುರಿತು ನನಗೆ ಹೇಳಿದನು. ಆಗ ನನಗೆ ನಿನ್ನ ಮೇಲೆ ಅತಿಯಾದ ಪ್ರೀತಿಯುಂಟಾಯಿತು.”
14007004 ಸಂವರ್ತ ಉವಾಚ
14007004a ಸತ್ಯಮೇತದ್ಭವಾನಾಹ ಸ ಮಾಂ ಜಾನಾತಿ ಸತ್ರಿಣಮ್।
14007004c ಕಥಯಸ್ವೈತದೇಕಂ ಮೇ ಕ್ವ ನು ಸಂಪ್ರತಿ ನಾರದಃ।।
ಸಂವರ್ತನು ಹೇಳಿದನು: “ನೀನು ಸತ್ಯವನ್ನೇ ಹೇಳಿರುವೆ. ನಾನು ಯಜ್ಞಗಳನ್ನು ಮಾಡಿಸುವೆನೆಂದು ಅವನಿಗೆ ತಿಳಿದಿದೆ. ನನಗೆ ಈ ಒಂದು ವಿಷಯವನ್ನು ಹೇಳು. ಈಗ ನಾರದನು ಎಲ್ಲಿದ್ದಾನೆ?”
14007005 ಮರುತ್ತ ಉವಾಚ
14007005a ಭವಂತಂ ಕಥಯಿತ್ವಾ ತು ಮಮ ದೇವರ್ಷಿಸತ್ತಮಃ।
14007005c ತತೋ ಮಾಮಭ್ಯನುಜ್ಞಾಯ ಪ್ರವಿಷ್ಟೋ ಹವ್ಯವಾಹನಮ್।।
ಮರುತ್ತನು ಹೇಳಿದನು: “ನನಗೆ ನಿನ್ನ ಕುರಿತು ಹೇಳಿ ಆ ದೇವರ್ಷಿಸತ್ತಮನು ನನಗೆ ಅಪ್ಪಣೆಯನ್ನಿತ್ತು ಅಗ್ನಿಯನ್ನು ಪ್ರವೇಶಿಸಿದನು.””
14007006 ವ್ಯಾಸ ಉವಾಚ।
14007006a ಶ್ರುತ್ವಾ ತು ಪಾರ್ಥಿವಸ್ಯೈತತ್ಸಂವರ್ತಃ ಪರಯಾ ಮುದಾ।
14007006c ಏತಾವದಹಮಪ್ಯೇನಂ ಕುರ್ಯಾಮಿತಿ ತದಾಬ್ರವೀತ್।।
ವ್ಯಾಸನು ಹೇಳಿದನು: “ರಾಜನನ್ನು ಕೇಳಿ ಸಂವರ್ತನು ಪರಮ ಮುದಿತನಾಗಿ ನಾನು ನಿನಗೆ ಯಜ್ಞವನ್ನು ಮಾಡಿಸಬಲ್ಲೆ ಎಂದು ಅವನಿಗೆ ಹೇಳಿದನು.
14007007a ತತೋ ಮರುತ್ತಮುನ್ಮತ್ತೋ ವಾಚಾ ನಿರ್ಭರ್ತ್ಸಯನ್ನಿವ।
14007007c ರೂಕ್ಷಯಾ ಬ್ರಾಹ್ಮಣೋ ರಾಜನ್ಪುನಃ ಪುನರಥಾಬ್ರವೀತ್।।
ರಾಜನ್! ಆಗ ಉನ್ಮತ್ತ ಬ್ರಾಹ್ಮಣನು ಮಾತಿನಿಂದಲೇ ಬೆದರಿಸುತ್ತಿರುವನೋ ಎನ್ನುವಂತೆ ಮರುತ್ತನಿಗೆ ಮತ್ತೊಮ್ಮೆ ಹೇಳಿದನು:
14007008a ವಾತಪ್ರಧಾನೇನ ಮಯಾ ಸ್ವಚಿತ್ತವಶವರ್ತಿನಾ।
14007008c ಏವಂ ವಿಕೃತರೂಪೇಣ ಕಥಂ ಯಾಜಿತುಮಿಚ್ಚಸಿ।।
“ವಾತದ ದೋಷದಿಂದಾಗಿ ನನ್ನ ಮನಸ್ಸು ನನ್ನ ಹಿಡಿತದಲ್ಲಿಲ್ಲದಂತಾಗಿದೆ. ಈ ರೀತಿಯ ವಿಕೃತ ರೂಪಿಯಿಂದ ನೀನು ಹೇಗೆತಾನೇ ಯಜ್ಞವನ್ನು ಮಾಡಲು ಬಯಸುತ್ತೀಯೆ?
14007009a ಭ್ರಾತಾ ಮಮ ಸಮರ್ಥಶ್ಚ ವಾಸವೇನ ಚ ಸತ್ಕೃತಃ।
14007009c ವರ್ತತೇ ಯಾಜನೇ ಚೈವ ತೇನ ಕರ್ಮಾಣಿ ಕಾರಯ।।
ವಾಸವನಿಂದ ಸತ್ಕೃತನಾಗಿರುವ ನನ್ನ ಅಣ್ಣನು ಇದಕ್ಕೆ ಸಮರ್ಥನಾದವನು. ಯಜ್ಞಗಳನ್ನು ಕೂಡ ಮಾಡಿಸುತ್ತಾನೆ. ಅವನಿಂದ ನಿನ್ನ ಕಾರ್ಯಗಳನ್ನು ಮಾಡಿಸು.
14007010a ಗೃಹಂ ಸ್ವಂ ಚೈವ ಯಾಜ್ಯಾಶ್ಚ ಸರ್ವಾ ಗೃಹ್ಯಾಶ್ಚ ದೇವತಾಃ।
14007010c ಪೂರ್ವಜೇನ ಮಮಾಕ್ಷಿಪ್ತಂ ಶರೀರಂ ವರ್ಜಿತಂ ತ್ವಿದಮ್।।
ನನ್ನ ಮನೆ, ಯಜ್ಞಸಾಮಗ್ರಿಗಳು, ಮನೆಯ ದೇವತೆಗಳು ಎಲ್ಲವನ್ನೂ ನನ್ನ ಅಣ್ಣನು ಹಿಂದೆಯೇ ಕಸಿದುಕೊಂಡಿದ್ದಾನೆ. ನನ್ನ ಈ ಶರೀರವನ್ನು ಮಾತ್ರ ನನಗಾಗಿ ಬಿಟ್ಟಿದ್ದಾನೆ.
14007011a ನಾಹಂ ತೇನಾನನುಜ್ಞಾತಸ್ತ್ವಾಮಾವಿಕ್ಷಿತ ಕರ್ಹಿ ಚಿತ್।
14007011c ಯಾಜಯೇಯಂ ಕಥಂ ಚಿದ್ವೈ ಸ ಹಿ ಪೂಜ್ಯತಮೋ ಮಮ।।
ಆವಿಕ್ಷಿತ! ಅವನ ಅನುಜ್ಞೆಯಿಲ್ಲದೇ ನಾನು ಎಂದೂ ನಿನಗೆ ಯಜ್ಞಮಾಡಿಸುವುದಿಲ್ಲ. ನನಗಿಂತಲೂ ಹೆಚ್ಚು ಪೂಜ್ಯನಾದ ಅವನಿರುವಾಗ ನಾನು ಹೇಗೆ ನಿನಗೆ ಇದನ್ನು ಮಾಡಿಕೊಡಲಿ?
14007012a ಸ ತ್ವಂ ಬೃಹಸ್ಪತಿಂ ಗಚ್ಚ ತಮನುಜ್ಞಾಪ್ಯ ಚಾವ್ರಜ।
14007012c ತತೋಽಹಂ ಯಾಜಯಿಷ್ಯೇ ತ್ವಾಂ ಯದಿ ಯಷ್ಟುಮಿಹೇಚ್ಚಸಿ।।
ನಿನಗೆ ಯಜ್ಞಮಾಡಲು ಇಚ್ಛೆಯಿದ್ದರೆ ನೀನು ಬೃಹಸ್ಪತಿಯಲ್ಲಿಗೆ ಹೋಗಿ ಅವನ ಅಪ್ಪಣೆಯನ್ನು ಕೇಳು. ಆಗ ನಾನು ನಿನ್ನ ಯಜ್ಞವನ್ನು ಮಾಡಿಸಿಕೊಡುತ್ತೇನೆ.”
14007013 ಮರುತ್ತ ಉವಾಚ।
14007013a ಬೃಹಸ್ಪತಿಂ ಗತಃ ಪೂರ್ವಮಹಂ ಸಂವರ್ತ ತಚ್ಚೃಣು।
14007013c ನ ಮಾಂ ಕಾಮಯತೇ ಯಾಜ್ಯಮಸೌ ವಾಸವವಾರಿತಃ।।
ಮರುತ್ತನು ಹೇಳಿದನು: “ಸಂವರ್ತ! ನಾನು ಈ ಹಿಂದೆಯೇ ಬೃಹಸ್ಪತಿಯ ಬಳಿ ಹೋಗಿದ್ದೆ. ಅದರ ಕುರಿತು ಕೇಳು. ವಾಸವನಿಂದ ತಡೆಯಲ್ಪಟ್ಟ ಅವನು ನನ್ನ ಯಜ್ಞವನ್ನು ಮಾಡಿಸಿಕೊಡಲು ಬಯಸುತ್ತಿಲ್ಲ.
14007014a ಅಮರಂ ಯಾಜ್ಯಮಾಸಾದ್ಯ ಮಾಮೃಷೇ ಮಾ ಸ್ಮ ಮಾನುಷಮ್।
14007014c ಯಾಜಯೇಥಾ ಮರುತ್ತಂ ತ್ವಂ ಮರ್ತ್ಯಧರ್ಮಾಣಮಾತುರಮ್।।
“ಋಷೇ! ಅಮರನಾದ ನನ್ನನ್ನು ಯಜಮಾನನ್ನಾಗಿಸಿಕೊಂಡು ಮನುಷ್ಯನಿಗೆ ಯಜ್ಞಮಾಡಿಸಬೇಡ. ಮನುಷ್ಯಧರ್ಮವನ್ನು ಪಾಲಿಸುವ ಮರುತ್ತನಿಗೆ ಪುರೋಹಿತನಾಗಬೇಡ.
14007015a ಸ್ಪರ್ಧತೇ ಚ ಮಯಾ ವಿಪ್ರ ಸದಾ ವೈ ಸ ಹಿ ಪಾರ್ಥಿವಃ।
14007015c ಏವಮಸ್ತ್ವಿತಿ ಚಾಪ್ಯುಕ್ತೋ ಭ್ರಾತ್ರಾ ತೇ ಬಲವೃತ್ರಹಾ।।
ವಿಪ್ರ! ಆ ಪಾರ್ಥಿವನು ನನ್ನೊಡನೆಯೂ ಸದಾ ಸ್ಪರ್ಧಿಸುತ್ತಲೇ ಇರುತ್ತಾನೆ.” ಬಲವೃತ್ರಹನು ಹೀಗೆ ಹೇಳಲು ನಿನ್ನ ಅಣ್ಣನು ಅವನಿಗೆ ಹಾಗೆಯೇ ಆಗಲೆಂದು ಹೇಳಿದ್ದನು.
14007016a ಸ ಮಾಮಭಿಗತಂ ಪ್ರೇಮ್ಣಾ ಯಾಜ್ಯವನ್ನ ಬುಭೂಷತಿ।
14007016c ದೇವರಾಜಮುಪಾಶ್ರಿತ್ಯ ತದ್ವಿದ್ಧಿ ಮುನಿಪುಂಗವ।।
ಮುನಿಪುಂಗವ! ನನ್ನ ಯಜ್ಞವನ್ನು ಮಾಡಿಸಿಕೊಡು ಎಂದು ಪ್ರೀತಿಯಿಂದ ಅವನ ಬಳಿ ಹೋದಾಗ ದೇವರಾಜನನ್ನು ಉಪಾಶ್ರಯಿಸಿದ್ದ ಅವನು ನನ್ನನ್ನು ತಿರಸ್ಕರಿಸಿದನು.
14007017a ಸೋಽಹಮಿಚ್ಚಾಮಿ ಭವತಾ ಸರ್ವಸ್ವೇನಾಪಿ ಯಾಜಿತುಮ್।
14007017c ಕಾಮಯೇ ಸಮತಿಕ್ರಾಂತುಂ ವಾಸವಂ ತ್ವತ್ಕೃತೈರ್ಗುಣೈಃ।।
ನನ್ನ ಸರ್ವಸ್ವವನ್ನು ಬಳಸಿಯೂ ನಿನ್ನಿಂದ ಯಜ್ಞವನ್ನು ಮಾಡಿಸಿಕೊಳ್ಳಲು ಬಯಸುತ್ತೇನೆ. ನಿನ್ನ ಕರ್ಮಗುಣಗಳಿಂದ ನಾನು ವಾಸವನನ್ನು ಮೀರಿಸಲು ಬಯಸುತ್ತೇನೆ.
14007018a ನ ಹಿ ಮೇ ವರ್ತತೇ ಬುದ್ಧಿರ್ಗಂತುಂ ಬ್ರಹ್ಮನ್ಬೃಹಸ್ಪತಿಮ್।
14007018c ಪ್ರತ್ಯಾಖ್ಯಾತೋ ಹಿ ತೇನಾಸ್ಮಿ ತಥಾನಪಕೃತೇ ಸತಿ।।
ಬ್ರಹ್ಮನ್! ಬೃಹಸ್ಪತಿಯ ಬಳಿಗೆ ಪುನಃ ಹೋಗಲು ನನಗೆ ಮನಸ್ಸಾಗುತ್ತಿಲ್ಲ. ನಾನು ಯಾವುದೇ ತಪ್ಪನ್ನು ಮಾಡದೇ ಇದ್ದರೂ ಅವನು ನನ್ನನ್ನು ತಿರಸ್ಕರಿಸಿದ್ದಾನೆ.”
14007019 ಸಂವರ್ತ ಉವಾಚ।
14007019a ಚಿಕೀರ್ಷಸಿ ಯಥಾಕಾಮಂ ಸರ್ವಮೇತತ್ತ್ವಯಿ ಧ್ರುವಮ್।
14007019c ಯದಿ ಸರ್ವಾನಭಿಪ್ರಾಯಾನ್ಕರ್ತಾಸಿ ಮಮ ಪಾರ್ಥಿವ।।
ಸಂವರ್ತನು ಹೇಳಿದನು: “ಪಾರ್ಥಿವ! ನನ್ನ ಅಭಿಪ್ರಾಯದಂತೆ ನೀನು ಎಲ್ಲವನ್ನೂ ಮಾಡಿದ್ದೇ ಆದರೆ ನಿನ್ನ ಸರ್ವಕಾಮಗಳನ್ನೂ ಪಡೆಯುತ್ತೀಯೆ ಎನ್ನುವುದು ನಿಶ್ಚಿತ.
14007020a ಯಾಜ್ಯಮಾನಂ ಮಯಾ ಹಿ ತ್ವಾಂ ಬೃಹಸ್ಪತಿಪುರಂದರೌ।
14007020c ದ್ವಿಷೇತಾಂ ಸಮಭಿಕ್ರುದ್ಧಾವೇತದೇಕಂ ಸಮರ್ಥಯ।।
ನಾನು ನಿನಗೆ ಯಜ್ಞಮಾಡಿಸುವಾಗ ದ್ವೇಷದಿಂದ ಬೃಹಸ್ಪತಿ-ಪುರಂದರರು ಕ್ರುದ್ಧರಾದರೂ ನೀನು ನನ್ನನ್ನೇ ಸಮರ್ಥಿಸಬೇಕು.
14007021a ಸ್ಥೈರ್ಯಮತ್ರ ಕಥಂ ತೇ ಸ್ಯಾತ್ಸ ತ್ವಂ ನಿಃಸಂಶಯಂ ಕುರು।
14007021c ಕುಪಿತಸ್ತ್ವಾಂ ನ ಹೀದಾನೀಂ ಭಸ್ಮ ಕುರ್ಯಾಂ ಸಬಾಂಧವಮ್।।
ನಿಃಸಂಶಯವಾಗಿ ನೀನು ಹೇಗಾದರೂ ಸ್ಥೈರ್ಯದಿಂದಿರಬೇಕು. ಹಾಗೆ ಮಾಡದಿದ್ದರೆ ಕ್ರುದ್ಧನಾಗಿ ಬಾಂಧವರೊಂದಿಗೆ ನಿನ್ನನ್ನು ಭಸ್ಮಮಾಡಿಬಿಡುತ್ತೇನೆ.”
14007022 ಮರುತ್ತ ಉವಾಚ।
14007022a ಯಾವತ್ತಪೇತ್ಸಹಸ್ರಾಂಶುಸ್ತಿಷ್ಠೇರಂಶ್ಚಾಪಿ ಪರ್ವತಾಃ।
14007022c ತಾವಲ್ಲೋಕಾನ್ನ ಲಭೇಯಂ ತ್ಯಜೇಯಂ ಸಂಗತಂ ಯದಿ।।
ಮರುತ್ತನು ಹೇಳಿದನು: “ನಾನೇನಾದರೂ ನಿನ್ನ ಸಂಗವನ್ನು ತ್ಯಜಿಸಿದರೆ ಸೂರ್ಯನು ಸುಡುವವರೆಗೂ ಮತ್ತು ಪರ್ವತಗಳು ಸ್ಥಿರವಾಗಿರುವ ವರೆಗೂ ನನಗೆ ಉತ್ತಮ ಲೋಕಗಳು ದೊರಕದಂತಾಗಲಿ.
14007023a ಮಾ ಚಾಪಿ ಶುಭಬುದ್ಧಿತ್ವಂ ಲಭೇಯಮಿಹ ಕರ್ಹಿ ಚಿತ್।
14007023c ಸಮ್ಯಗ್ಜ್ಞಾನೇ ವೈಷಯೇ ವಾ ತ್ಯಜೇಯಂ ಸಂಗತಂ ಯದಿ।।
ನಾನೇನಾದರೂ ನಿನ್ನ ಸಂಗವನ್ನು ತೊರೆದರೆ ನನಗೆ ಎಂದೂ ಶುಭಬುದ್ಧಿಯು ದೊರೆಯದಿರಲಿ. ವಿಷಯಗಳಲ್ಲಿ ಬುದ್ಧಿಲಂಪಟವುಂಟಾಗಲಿ.”
14007024 ಸಂವರ್ತ ಉವಾಚ।
14007024a ಆವಿಕ್ಷಿತ ಶುಭಾ ಬುದ್ಧಿರ್ಧೀಯತಾಂ ತವ ಕರ್ಮಸು।
14007024c ಯಾಜನಂ ಹಿ ಮಮಾಪ್ಯೇವಂ ವರ್ತತೇ ತ್ವಯಿ ಪಾರ್ಥಿವ।।
ಸಂವರ್ತನು ಹೇಳಿದನು: “ಆವಿಕ್ಷಿತ! ನೀನು ಮಾಡುವ ಕರ್ಮಗಳಲ್ಲಿ ನಿನಗೆ ಯಾವಾಗಲೂ ಶುಭ ಬುದ್ಧಿಯೇ ಇರಲಿ. ಪಾರ್ಥಿವ! ನಿನ್ನಿಂದ ಯಜ್ಞವನ್ನು ಮಾಡಿಸಬೇಕೆಂದು ನನಗೂ ಇಚ್ಛೆಯಾಗುತ್ತಿದೆ.
14007025a ಸಂವಿಧಾಸ್ಯೇ ಚ ತೇ ರಾಜನ್ನಕ್ಷಯಂ ದ್ರವ್ಯಮುತ್ತಮಮ್।
14007025c ಯೇನ ದೇವಾನ್ಸಗಂಧರ್ವಾನ್ಶಕ್ರಂ ಚಾಭಿಭವಿಷ್ಯಸಿ।।
ರಾಜನ್! ನಿನಗೆ ಅಕ್ಷಯವಾದ ಉತ್ತಮ ದ್ರವ್ಯವನ್ನು ಒದಗಿಸಿಕೊಡುತ್ತೇನೆ. ಅದರಿಂದ ನೀನು ಗಂಧರ್ವ-ದೇವತೆಗಳೊಂದಿಗೆ ಶಕ್ರನನ್ನೂ ಮೀರಿಸುವಂತಾಗುತ್ತೀಯೆ!
14007026a ನ ತು ಮೇ ವರ್ತತೇ ಬುದ್ಧಿರ್ಧನೇ ಯಾಜ್ಯೇಷು ವಾ ಪುನಃ।
14007026c ವಿಪ್ರಿಯಂ ತು ಚಿಕೀರ್ಷಾಮಿ ಭ್ರಾತುಶ್ಚೇಂದ್ರಸ್ಯ ಚೋಭಯೋಃ।।
ಧನದಲ್ಲಿಯಾಗಲೀ ಅಥವಾ ಯಜ್ಞಗಳನ್ನು ಮಾಡಿಸುವುದರಲ್ಲಿಯಾಗಲೀ ನನಗೆ ಮನಸ್ಸಿಲ್ಲ. ಆದರೆ ನನ್ನ ಅಣ್ಣ ಮತ್ತು ಇಂದ್ರ ಇವರಿಬ್ಬರಿಗೂ ಅಪ್ರಿಯವಾದುದನ್ನು ಮಾಡಲು ಬಯಸುತ್ತೇನೆ.
14007027a ಗಮಯಿಷ್ಯಾಮಿ ಚೇಂದ್ರೇಣ ಸಮತಾಮಪಿ ತೇ ಧ್ರುವಮ್।
14007027c ಪ್ರಿಯಂ ಚ ತೇ ಕರಿಷ್ಯಾಮಿ ಸತ್ಯಮೇತದ್ಬ್ರವೀಮಿ ತೇ।।
ನಿಜವಾಗಿಯೂ ನಿನ್ನನ್ನು ಇಂದ್ರನ ಸಮನಾಗಿ ಮಾಡುತ್ತೇನೆ. ನಿನಗೆ ಪ್ರಿಯವಾದುದನ್ನೇ ಮಾಡುತ್ತೇನೆ. ನಾನು ನಿನಗೆ ಹೇಳುತ್ತಿರುವುದು ಸತ್ಯ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ಸಪ್ತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ಏಳನೇ ಅಧ್ಯಾಯವು.