ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 6
ಸಾರ
ವ್ಯಾಸನು ಸಂವರ್ತ-ಮರುತ್ತರ ಕಥೆಯನ್ನು ಮುಂದುವರೆಸಿದುದು (1-33).
14006001 ವ್ಯಾಸ ಉವಾಚ।
14006001a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
14006001c ಬೃಹಸ್ಪತೇಶ್ಚ ಸಂವಾದಂ ಮರುತ್ತಸ್ಯ ಚ ಭಾರತ।।
ವ್ಯಾಸನು ಹೇಳಿದನು: “ಭಾರತ! ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಬೃಹಸ್ಪತಿ ಮತ್ತು ಮರುತ್ತರ ಸಂವಾದವನ್ನು ಉದಾಹರಿಸುತ್ತಾರೆ.
14006002a ದೇವರಾಜಸ್ಯ ಸಮಯಂ ಕೃತಮಾಂಗಿರಸೇನ ಹ।
14006002c ಶ್ರುತ್ವಾ ಮರುತ್ತೋ ನೃಪತಿರ್ಮನ್ಯುಮಾಹಾರಯತ್ತದಾ।।
ದೇವರಾಜನು ಆಂಗಿರಸ ಬೃಹಸ್ಪತಿಯೊಡನೆ ಮಾಡಿದ ಒಪ್ಪಂದವನ್ನು ಕೇಳಿ ನೃಪತಿ ಮರುತ್ತನು ಅತ್ಯಂತ ಕುಪಿತನಾದನು.
14006003a ಸಂಕಲ್ಪ್ಯ ಮನಸಾ ಯಜ್ಞಂ ಕರಂಧಮಸುತಾತ್ಮಜಃ।
14006003c ಬೃಹಸ್ಪತಿಮುಪಾಗಮ್ಯ ವಾಗ್ಮೀ ವಚನಮಬ್ರವೀತ್।।
ಕರಂಧಮನ ಮೊಮ್ಮಗ ವಾಗ್ಮಿ ಮರುತ್ತನು ಮನಸ್ಸಿನಲ್ಲಿಯೇ ಯಜ್ಞದ ಸಂಕಲ್ಪವನ್ನು ಮಾಡಿ ಬೃಹಸ್ಪತಿಯ ಬಳಿಹೋಗಿ ಈ ಮಾತನ್ನಾಡಿದನು:
14006004a ಭಗವನ್ಯನ್ಮಯಾ ಪೂರ್ವಮಭಿಗಮ್ಯ ತಪೋಧನ।
14006004c ಕೃತೋಽಭಿಸಂಧಿರ್ಯಜ್ಞಾಯ ಭವತೋ ವಚನಾದ್ಗುರೋ।।
“ಭಗವನ್! ತಪೋಧನ! ಗುರೋ! ಹಿಂದೊಮ್ಮೆ ನಾನು ನಿನ್ನ ಬಳಿಬಂದಾಗ ನಿನ್ನ ಮಾತಿನಂತೆಯೇ ಯಜ್ಞದ ಕುರಿತು ಒಪ್ಪಂದಮಾಡಿಕೊಂಡಿದ್ದೆವು.
14006005a ತಮಹಂ ಯಷ್ಟುಮಿಚ್ಚಾಮಿ ಸಂಭಾರಾಃ ಸಂಭೃತಾಶ್ಚ ಮೇ।
14006005c ಯಾಜ್ಯೋಽಸ್ಮಿ ಭವತಃ ಸಾಧೋ ತತ್ಪ್ರಾಪ್ನುಹಿ ವಿಧತ್ಸ್ವ ಚ।।
ಈಗ ನಾನು ಆ ಯಜ್ಞವನ್ನು ಮಾಡಲು ಬಯಸುತ್ತೇನೆ. ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸೇರಿಸಿಕೊಂಡಿದ್ದೇನೆ. ಹಿಂದಿನಿಂದಲೂ ನಾನು ನಿನ್ನಿಂದ ಯಜ್ಞಗಳನ್ನು ಮಾಡಿಸಿಕೊಂಡು ಬಂದಿದ್ದೇನೆ. ಅದುದರಿಂದ ಬಂದು ಅದನ್ನು ವಿಧಿವತ್ತಾಗಿ ನಡೆಸಿಕೊಡು.”
14006006 ಬೃಹಸ್ಪತಿರುವಾಚ।
14006006a ನ ಕಾಮಯೇ ಯಾಜಯಿತುಂ ತ್ವಾಮಹಂ ಪೃಥಿವೀಪತೇ।
14006006c ವೃತೋಽಸ್ಮಿ ದೇವರಾಜೇನ ಪ್ರತಿಜ್ಞಾತಂ ಚ ತಸ್ಯ ಮೇ।।
ಬೃಹಸ್ಪತಿಯು ಹೇಳಿದನು: “ಪೃಥಿವೀಪತೇ! ನಿನಗೆ ಯಜ್ಞವನ್ನು ಮಾಡಿಸಲು ನಾನು ಬಯಸುತ್ತಿಲ್ಲ. ದೇವರಾಜನು ನನ್ನನ್ನು ಪುರೋಹಿತನನ್ನಾಗಿ ಮಾಡಿಕೊಂಡಿದ್ದಾನೆ. ಬೇರೆಯವರ ಪುರೋಹಿತನಾಗುವುದಿಲ್ಲವೆಂದು ನಾನು ಅವನಿಗೆ ಪ್ರತಿಜ್ಞೆಮಾಡಿದ್ದೇನೆ.”
14006007 ಮರುತ್ತ ಉವಾಚ।
14006007a ಪಿತ್ರ್ಯಮಸ್ಮಿ ತವ ಕ್ಷೇತ್ರಂ ಬಹು ಮನ್ಯೇ ಚ ತೇ ಭೃಶಮ್।
14006007c ನ ಚಾಸ್ಮ್ಯಯಾಜ್ಯತಾಂ ಪ್ರಾಪ್ತೋ ಭಜಮಾನಂ ಭಜಸ್ವ ಮಾಮ್।।
ಮರುತ್ತನು ಹೇಳಿದನು: “ಪಿತೃ-ಪಿತಾಮಹರ ಕಾಲದಿಂದಲೂ ನಾವು ನಿನ್ನನ್ನು ತುಂಬಾ ಮನ್ನಿಸಿಕೊಂಡು ಬಂದಿದ್ದೇವೆ. ನಿನ್ನನ್ನೇ ಭಜಿಸುವ ನನಗೆ ಯಜ್ಞವನ್ನು ಮಾಡಿಸಿಕೊಟ್ಟು ನನ್ನನ್ನು ಪಾಲಿಸಬೇಕು.”
14006008 ಬೃಹಸ್ಪತಿರುವಾಚ।
14006008a ಅಮರ್ತ್ಯಂ ಯಾಜಯಿತ್ವಾಹಂ ಯಾಜಯಿಷ್ಯೇ ನ ಮಾನುಷಮ್।
14006008c ಮರುತ್ತ ಗಚ್ಚ ವಾ ಮಾ ವಾ ನಿವೃತ್ತೋಽಸ್ಮ್ಯದ್ಯ ಯಾಜನಾತ್।।
ಬೃಹಸ್ಪತಿಯು ಹೇಳಿದನು: “ಅಮರರಿಗೆ ಯಜ್ಞಮಾಡಿಸಿಕೊಡುವ ನಾನು ಮನುಷ್ಯರಿಗೆ ಯಜ್ಞಮಾಡಿಸಿ ಕೊಡುವುದಿಲ್ಲ. ಮರುತ್ತ! ಹೋಗು ಅಥವಾ ಇಲ್ಲಿಯೇ ಇರು. ಆದರೆ ನಾನು ಮಾತ್ರ ನಿನ್ನ ಯಜ್ಞವನ್ನು ಮಾಡಿಸಿಕೊಡುವುದಿಲ್ಲ.
14006009a ನ ತ್ವಾಂ ಯಾಜಯಿತಾಸ್ಮ್ಯದ್ಯ ವೃಣು ತ್ವಂ ಯಮಿಹೇಚ್ಚಸಿ।
14006009c ಉಪಾಧ್ಯಾಯಂ ಮಹಾಬಾಹೋ ಯಸ್ತೇ ಯಜ್ಞಂ ಕರಿಷ್ಯತಿ।।
ಮಹಾಬಾಹೋ! ನಾನು ಇಂದು ನಿನ್ನ ಯಜ್ಞವನ್ನು ಮಾಡಿಸಿಕೊಡುವುದಿಲ್ಲ. ಆದುದರಿಂದ ನಿನಗೆ ಯಜ್ಞವನ್ನು ಮಾಡಿಸಿಕೊಡುವ ಯಾರನ್ನು ನೀನು ಉಪಾಧ್ಯಾಯನಾಗಿ ಬಯಸುತ್ತೀಯೋ ಅವನನ್ನು ಆರಿಸಿಕೋ!””
14006010 ವ್ಯಾಸ ಉವಾಚ।
14006010a ಏವಮುಕ್ತಸ್ತು ನೃಪತಿರ್ಮರುತ್ತೋ ವ್ರೀಡಿತೋಽಭವತ್।
14006010c ಪ್ರತ್ಯಾಗಚ್ಚಚ್ಚ ಸಂವಿಗ್ನೋ ದದರ್ಶ ಪಥಿ ನಾರದಮ್।।
ವ್ಯಾಸನು ಹೇಳಿದನು: “ಅವನು ಹೀಗೆ ಹೇಳಲು ನೃಪತಿ ಮರುತ್ತನಿಗೆ ನಾಚಿಕೆಯಾಯಿತು. ಸಂವಿಗ್ನನಾಗಿ ಅವನು ಹಿಂದಿರುಗಿ ಬರುತ್ತಿರುವಾಗ ಮಾರ್ಗದಲ್ಲಿ ನಾರದನನ್ನು ಕಂಡನು.
14006011a ದೇವರ್ಷಿಣಾ ಸಮಾಗಮ್ಯ ನಾರದೇನ ಸ ಪಾರ್ಥಿವಃ।
14006011c ವಿಧಿವತ್ಪ್ರಾಂಜಲಿಸ್ತಸ್ಥಾವಥೈನಂ ನಾರದೋಽಬ್ರವೀತ್।।
ದೇವರ್ಷಿ ನಾರದನನ್ನು ಭೇಟಿಯಾಗಿ ಆ ಪಾರ್ಥಿವನು ವಿಧಿವತ್ತಾಗಿ ಕೈಮುಗಿದು ನಿಂತುಕೊಳ್ಳಲು ನಾರದನು ಅವನಿಗೆ ಹೇಳಿದನು:
14006012a ರಾಜರ್ಷೇ ನಾತಿಹೃಷ್ಟೋಽಸಿ ಕಚ್ಚಿತ್ಕ್ಷೇಮಂ ತವಾನಘ।
14006012c ಕ್ವ ಗತೋಽಸಿ ಕುತೋ ವೇದಮಪ್ರೀತಿಸ್ಥಾನಮಾಗತಮ್।।
“ರಾಜರ್ಷೇ! ಅನಘ! ಅತಿಯಾಗಿ ಸಂತೋಷದಿಂದಿರುವಂತೆ ನೀನು ಕಾಣುತ್ತಿಲ್ಲ! ಎಲ್ಲವೂ ಕ್ಷೇಮ ತಾನೇ? ಎಲ್ಲಿಗೆ ಹೋಗಿದ್ದೆ? ಮತ್ತು ನಿನಗೆ ಯಾವುದರಿಂದ ಈ ವೇದನೆಯುಂಟಾಗಿದೆ?
14006013a ಶ್ರೋತವ್ಯಂ ಚೇನ್ಮಯಾ ರಾಜನ್ಬ್ರೂಹಿ ಮೇ ಪಾರ್ಥಿವರ್ಷಭ।
14006013c ವ್ಯಪನೇಷ್ಯಾಮಿ ತೇ ಮನ್ಯುಂ ಸರ್ವಯತ್ನೈರ್ನರಾಧಿಪ।।
ರಾಜನ್! ಪಾರ್ಥಿವರ್ಷಭ! ನರಾಧಿಪ! ನನಗೆ ಅದನ್ನು ಹೇಳು. ಸರ್ವಯತ್ನದಿಂದಲೂ ನಿನಗಾಗಿರುವ ದುಃಖವನ್ನು ಹೋಗಲಾಡಿಸುತ್ತೇನೆ.”
14006014a ಏವಮುಕ್ತೋ ಮರುತ್ತಸ್ತು ನಾರದೇನ ಮಹರ್ಷಿಣಾ।
14006014c ವಿಪ್ರಲಂಭಮುಪಾಧ್ಯಾಯಾತ್ಸರ್ವಮೇವ ನ್ಯವೇದಯತ್।।
ಮಹರ್ಷಿ ನಾರದನು ಹೀಗೆ ಹೇಳಲು ಮರುತ್ತನು ತನ್ನ ಉಪಾಧ್ಯಾಯ ಬೃಹಸ್ಪತಿಯು ಮಾಡಿದ ವಂಚನೆಯಲ್ಲವನ್ನೂ ಅವನಿಗೆ ವರದಿ ಮಾಡಿದನು.
14006015a ಗತೋಽಸ್ಮ್ಯಂಗಿರಸಃ ಪುತ್ರಂ ದೇವಾಚಾರ್ಯಂ ಬೃಹಸ್ಪತಿಮ್।
14006015c ಯಜ್ಞಾರ್ಥಮೃತ್ವಿಜಂ ದ್ರಷ್ಟುಂ ಸ ಚ ಮಾಂ ನಾಭ್ಯನಂದತ।।
“ನಾನು ಅಂಗಿರಸನ ಪುತ್ರ ದೇವಾಚಾರ್ಯ ಬೃಹಸ್ಪತಿಯ ಬಳಿ ಯಜ್ಞದ ಋತ್ವಿಜನಾಗೆಂದು ಕೇಳಲು ಹೋಗಿದ್ದೆ. ಅವನು ನನ್ನ ಪ್ರಾರ್ಥನೆಯನ್ನು ಮನ್ನಿಸಲಿಲ್ಲ.
14006016a ಪ್ರತ್ಯಾಖ್ಯಾತಶ್ಚ ತೇನಾಹಂ ಜೀವಿತುಂ ನಾದ್ಯ ಕಾಮಯೇ।
14006016c ಪರಿತ್ಯಕ್ತಶ್ಚ ಗುರುಣಾ ದೂಷಿತಶ್ಚಾಸ್ಮಿ ನಾರದ।।
ಮರಣಧರ್ಮವನ್ನನುಸರಿಸುವ ನನ್ನ ಪುರೋಹಿತನಾಗಲು ಅವನು ಬಯಸುವುದಿಲ್ಲವೆಂದು ಹೇಳಿದನು. ನಾರದ! ಗುರುವಿನಿಂದ ತಿರಸ್ಕರಿಸಲ್ಪಟ್ಟ ನಾನು ದೂಷಿತನಾಗಿದ್ದೇನೆ.”
14006017a ಏವಮುಕ್ತಸ್ತು ರಾಜ್ಞಾ ಸ ನಾರದಃ ಪ್ರತ್ಯುವಾಚ ಹ।
14006017c ಆವಿಕ್ಷಿತಂ ಮಹಾರಾಜ ವಾಚಾ ಸಂಜೀವಯನ್ನಿವ।।
ರಾಜನು ಹೀಗೆ ಹೇಳಲು ನಾರದನು ಅವಿಕ್ಷಿತನ ಮಗ ಆ ರಾಜನನ್ನು ಪುನರ್ಜೀವಿತಗೊಳಿಸಿದನೋ ಎನ್ನುವಂತೆ ಹೀಗೆ ಉತ್ತರಿಸಿದನು:
14006018a ರಾಜನ್ನಂಗಿರಸಃ ಪುತ್ರಃ ಸಂವರ್ತೋ ನಾಮ ಧಾರ್ಮಿಕಃ।
14006018c ಚಂಕ್ರಮೀತಿ ದಿಶಃ ಸರ್ವಾ ದಿಗ್ವಾಸಾ ಮೋಹಯನ್ಪ್ರಜಾಃ।।
“ಅಂಗಿರಸನ ಮಗ ಸಂವರ್ತ ಎಂಬ ಹೆಸರಿನ ಧಾರ್ಮಿಕನು ದಿಗಂಬರನಾಗಿ ಜನರನ್ನು ಭ್ರಾಂತಿಗೊಳಿಸುತ್ತಾ ಎಲ್ಲ ದಿಕ್ಕುಗಳಲ್ಲಿಯೂ ತಿರುಗುತ್ತಿದ್ದಾನೆ.
14006019a ತಂ ಗಚ್ಚ ಯದಿ ಯಾಜ್ಯಂ ತ್ವಾಂ ನ ವಾಂಚತಿ ಬೃಹಸ್ಪತಿಃ।
14006019c ಪ್ರಸನ್ನಸ್ತ್ವಾಂ ಮಹಾರಾಜ ಸಂವರ್ತೋ ಯಾಜಯಿಷ್ಯತಿ।।
ಬೃಹಸ್ಪತಿಯು ನಿನಗೆ ಯಜ್ಞವನ್ನು ಮಾಡಲು ಬಯಸದೇ ಇದ್ದರೆ ಮಹಾರಾಜ! ನೀನು ಅವನ ಬಳಿಗೆ ಹೋಗು. ಸಂವರ್ತನು ಪ್ರಸನ್ನನಾದರೆ ಅವನೇ ನಿನ್ನ ಯಜ್ಞವನ್ನು ಮಾಡಿಸಿಕೊಡುತ್ತಾನೆ.”
14006020 ಮರುತ್ತ ಉವಾಚ।
14006020a ಸಂಜೀವಿತೋಽಹಂ ಭವತಾ ವಾಕ್ಯೇನಾನೇನ ನಾರದ।
14006020c ಪಶ್ಯೇಯಂ ಕ್ವ ನು ಸಂವರ್ತಂ ಶಂಸ ಮೇ ವದತಾಂ ವರ।।
ಮರುತ್ತನು ಹೇಳಿದನು: “ನಾರದ! ನಿನ್ನ ಮಾತಿನಿಂದ ನನಗೆ ಪುನಃ ಜೀವಬಂದಂತಾಗಿದೆ. ಮಾತನಾಡುವವರಲ್ಲಿ ಶ್ರೇಷ್ಠನೇ! ಈ ಸಂವರ್ತನನ್ನು ಎಲ್ಲಿ ಕಾಣಬಲ್ಲೆ ಎನ್ನುವುದನ್ನು ಹೇಳು.
14006021a ಕಥಂ ಚ ತಸ್ಮೈ ವರ್ತೇಯಂ ಕಥಂ ಮಾಂ ನ ಪರಿತ್ಯಜೇತ್।
14006021c ಪ್ರತ್ಯಾಖ್ಯಾತಶ್ಚ ತೇನಾಪಿ ನಾಹಂ ಜೀವಿತುಮುತ್ಸಹೇ।।
ಅವನೊಡನೆ ನಾನು ಹೇಗೆ ನಡೆದುಕೊಳ್ಳಬೇಕು? ಹೇಗಿದ್ದರೆ ಅವನು ನನ್ನನ್ನು ತಿರಸ್ಕರಿಸುವುದಿಲ್ಲ? ಅವನಿಂದ ನಾನು ತಿರಸ್ಕೃತನಾದರೆ ಮುಂದೆ ಜೀವಿಸಲು ಬಯಸುವುದಿಲ್ಲ.”
14006022 ನಾರದ ಉವಾಚ।
14006022a ಉನ್ಮತ್ತವೇಷಂ ಬಿಭ್ರತ್ಸ ಚಂಕ್ರಮೀತಿ ಯಥಾಸುಖಮ್।
14006022c ವಾರಾಣಸೀಂ ತು ನಗರೀಮಭೀಕ್ಷ್ಣಮುಪಸೇವತೇ।।
ನಾರದನು ಹೇಳಿದನು: “ಅವನು ಹುಚ್ಚನ ವೇಷವನ್ನು ಧರಿಸಿ ವಾರಣಾಸೀ ನಗರದಲ್ಲಿ ಶಿವನನ್ನು ದರ್ಶಿಸಲು ಬೇಕಾದಂತೆ ತಿರುಗಾಡುತ್ತಿದ್ದಾನೆ.
14006023a ತಸ್ಯಾ ದ್ವಾರಂ ಸಮಾಸಾದ್ಯ ನ್ಯಸೇಥಾಃ ಕುಣಪಂ ಕ್ವ ಚಿತ್।
14006023c ತಂ ದೃಷ್ಟ್ವಾ ಯೋ ನಿವರ್ತೇತ ಸ ಸಂವರ್ತೋ ಮಹೀಪತೇ।।
ಮಹೀಪತೇ! ಆ ನಗರದ ದ್ವಾರಕ್ಕೆ ಹೋಗಿ ಅಲ್ಲಿ ಯಾವುದಾದರೂ ಹೆಣವನ್ನು ಇಟ್ಟು, ಹೆಣವನ್ನು ನೋಡಿ ಹಿಂದಿರುಗುವವನೇ ಸಂವರ್ತನೆಂದು ತಿಳಿ.
14006024a ತಂ ಪೃಷ್ಠತೋಽನುಗಚ್ಚೇಥಾ ಯತ್ರ ಗಚ್ಚೇತ್ಸ ವೀರ್ಯವಾನ್।
14006024c ತಮೇಕಾಂತೇ ಸಮಾಸಾದ್ಯ ಪ್ರಾಂಜಲಿಃ ಶರಣಂ ವ್ರಜೇಃ।।
ಮುಂದೆ ಹೋಗುತ್ತಿರುವ ಆ ವೀರ್ಯವಂತನನ್ನೇ ಅನುಸರಿಸಿ ಹೋಗಬೇಕು. ಏಕಾಂತದಲ್ಲಿ ಅವನ ಬಳಿಸಾರಿ ಕೈಮುಗಿದು ಶರಣುಹೋಗಬೇಕು.
14006025a ಪೃಚ್ಚೇತ್ತ್ವಾಂ ತ್ವಾಂ ಯದಿ ಕೇನಾಹಂ ತವಾಖ್ಯಾತ ಇತಿ ಸ್ಮ ಹ।
14006025c ಬ್ರೂಯಾಸ್ತ್ವಂ ನಾರದೇನೇತಿ ಸಂತಪ್ತ ಇವ ಶತ್ರುಹನ್।।
ಶತ್ರುಸಂಹಾರಕ! ನನ್ನ ಕುರಿತು ನಿನಗೆ ಯಾರು ಹೇಳಿದರೆಂದು ಅವನು ನಿನ್ನನ್ನು ಕೇಳಿದರೆ ನಾರದನು ಹೇಳಿದನೆಂದು ಅವನಿಗೆ ಹೇಳು.
14006026a ಸ ಚೇತ್ತ್ವಾಮನುಯುಂಜೀತ ಮಮಾಭಿಗಮನೇಪ್ಸಯಾ।
14006026c ಶಂಸೇಥಾ ವಹ್ನಿಮಾರೂಢಂ ಮಾಮಪಿ ತ್ವಮಶಂಕಯಾ।।
ನನ್ನ ಸಮೀಪಕ್ಕೆ ಬರುವ ಇಚ್ಛೆಯಿಂದ ನಾರದನು ಎಲ್ಲಿದ್ದಾನೆಂದು ಕೇಳಿದರೆ ನಾರದನು ಬೆಂಕಿಯಲ್ಲಿ ಸೇರಿಹೋದನೆಂದು ನಿಃಶಂಕೆಯಿಂದ ಹೇಳು.””
14006027 ವ್ಯಾಸ ಉವಾಚ।
14006027a ಸ ತಥೇತಿ ಪ್ರತಿಶ್ರುತ್ಯ ಪೂಜಯಿತ್ವಾ ಚ ನಾರದಮ್।
14006027c ಅಭ್ಯನುಜ್ಞಾಯ ರಾಜರ್ಷಿರ್ಯಯೌ ವಾರಾಣಸೀಂ ಪುರೀಮ್।।
ವ್ಯಾಸನು ಹೇಳಿದನು: “ಹಾಗೆಯೇ ಆಗಲೆಂದು ಹೇಳಿ ನಾರದನನ್ನು ಪೂಜಿಸಿ ಅವನ ಅನುಜ್ಞೆಯನ್ನು ಪಡೆದು ರಾಜರ್ಷಿಯು ವಾರಣಸೀ ಪುರಿಗೆ ಹೋದನು.
14006028a ತತ್ರ ಗತ್ವಾ ಯಥೋಕ್ತಂ ಸ ಪುರ್ಯಾ ದ್ವಾರೇ ಮಹಾಯಶಾಃ।
14006028c ಕುಣಪಂ ಸ್ಥಾಪಯಾಮಾಸ ನಾರದಸ್ಯ ವಚಃ ಸ್ಮರನ್।।
ಅಲ್ಲಿ ಹೋಗಿ ನಾರದನ ಮಾತನ್ನು ಸ್ಮರಿಸಿಕೊಳ್ಳುತ್ತಾ ಅವನು ಹೇಳಿದಂತೆ ಪುರದ ಮಹಾದ್ವಾರದಲ್ಲಿ ಆ ಮಹಾಯಶಸ್ವಿ ಮರುತ್ತನು ಒಂದು ಹೆಣವನ್ನು ಇಟ್ಟನು.
14006029a ಯೌಗಪದ್ಯೇನ ವಿಪ್ರಶ್ಚ ಸ ಪುರೀದ್ವಾರಮಾವಿಶತ್।
14006029c ತತಃ ಸ ಕುಣಪಂ ದೃಷ್ಟ್ವಾ ಸಹಸಾ ಸ ನ್ಯವರ್ತತ।।
ಅದೇ ಸಮಯಕ್ಕೆ ಸರಿಯಾಗಿ ವಿಪ್ರನೋರ್ವನು ಪುರದ ದ್ವಾರವನ್ನು ಪ್ರವೇಶಿಸಿದನು. ಅವನು ಹೆಣವನ್ನು ನೋಡಿ ಕೂಡಲೇ ಹಿಂದಿರುಗಿದನು.
14006030a ಸ ತಂ ನಿವೃತ್ತಮಾಲಕ್ಷ್ಯ ಪ್ರಾಂಜಲಿಃ ಪೃಷ್ಠತೋಽನ್ವಗಾತ್।
14006030c ಆವಿಕ್ಷಿತೋ ಮಹೀಪಾಲಃ ಸಂವರ್ತಮುಪಶಿಕ್ಷಿತುಮ್।।
ಅವನು ಹಿಂದಿರುಗಿದುದನ್ನು ನೋಡಿ ಮಹೀಪಾಲ ಆವಿಕ್ಷಿತನು ಸಂವರ್ತನನ್ನು ಪುರೋಹಿತನನ್ನಾಗಿಸಲು ಕೈಮುಗಿದುಕೊಂಡು ಅವನ ಹಿಂದೆಯೇ ಅನುಸರಿಸಿ ಹೋದನು.
14006031a ಸ ಏನಂ ವಿಜನೇ ದೃಷ್ಟ್ವಾ ಪಾಂಸುಭಿಃ ಕರ್ದಮೇನ ಚ।
14006031c ಶ್ಲೇಷ್ಮಣಾ ಚಾಪಿ ರಾಜಾನಂ ಷ್ಠೀವನೈಶ್ಚ ಸಮಾಕಿರತ್।।
ಯಾರೂ ಇಲ್ಲದಿರುವಲ್ಲಿ ಅವನನ್ನು ನೋಡಿ ಸಂವರ್ತನು ರಾಜನನ್ನು ಕೆಸರಿನಿಂದ, ಕಫದಿಂದ, ಉಗುಳಿನಿಂದ ಮತ್ತು ಧೂಳಿನಿಂದ ಮುಚ್ಚಿಬಿಟ್ಟನು.
14006032a ಸ ತಥಾ ಬಾಧ್ಯಮಾನೋಽಪಿ ಸಂವರ್ತೇನ ಮಹೀಪತಿಃ।
14006032c ಅನ್ವಗಾದೇವ ತಮೃಷಿಂ ಪ್ರಾಂಜಲಿಃ ಸಂಪ್ರಸಾದಯನ್।।
ಸಂವರ್ತನಿಂದ ಹಾಗೆ ಬಾಧೆಗೊಳಗಾದರೂ ಮಹೀಪತಿಯು ಆ ಋಷಿಯನ್ನು ಕೈಮುಗಿದು ಹಿಂಬಾಲಿಸುತ್ತಾ ಹೋಗಿ ಪ್ರಸನ್ನಗೊಳಿಸಿದನು.
14006033a ತತೋ ನಿವೃತ್ಯ ಸಂವರ್ತಃ ಪರಿಶ್ರಾಂತ ಉಪಾವಿಶತ್।
14006033c ಶೀತಲಚ್ಚಾಯಮಾಸಾದ್ಯ ನ್ಯಗ್ರೋಧಂ ಬಹುಶಾಖಿನಮ್।।
ಆಗ ಆಯಾಸಗೊಂಡಿದ್ದ ಸಂವರ್ತನು ಹಿಂದಿರುಗಿ ಬಂದು ತಂಪಾದ ನೆರಳಿದ್ದ ವಿಶಾಲ ರೆಂಬೆಗಳುಳ್ಳ ಆಲದ ಮರದ ಕೆಳಗೆ ಕುಳಿತುಕೊಂಡನು.
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ಷಷ್ಟೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ಆರನೇ ಅಧ್ಯಾಯವು.