005: ಸಂವರ್ತಮರುತ್ತೀಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 5

ಸಾರ

ವ್ಯಾಸನು ಸಂವರ್ತ-ಮರುತ್ತರ ಕಥೆಯನ್ನು ಮುಂದುವರೆಸಿದುದು (1-26).

14005001 ಯುಧಿಷ್ಠಿರ ಉವಾಚ।
14005001a ಕಥಂವೀರ್ಯಃ ಸಮಭವತ್ಸ ರಾಜಾ ವದತಾಂ ವರಃ।
14005001c ಕಥಂ ಚ ಜಾತರೂಪೇಣ ಸಮಯುಜ್ಯತ ಸ ದ್ವಿಜ।।

ಯುಧಿಷ್ಠಿರನು ಹೇಳಿದನು: “ಮಾತನಾಡುವವರಲ್ಲಿ ಶ್ರೇಷ್ಠನೇ! ದ್ವಿಜ! ಆ ರಾಜನು ಎಷ್ಟು ವೀರ್ಯವಂತನಾಗಿದ್ದನು? ಅವನಿಗೆ ಅಷ್ಟೊಂದು ಚಿನ್ನವು ಹೇಗೆ ದೊರೆಯಿತು?

14005002a ಕ್ವ ಚ ತತ್ಸಾಂಪ್ರತಂ ದ್ರವ್ಯಂ ಭಗವನ್ನವತಿಷ್ಠತೇ।
14005002c ಕಥಂ ಚ ಶಕ್ಯಮಸ್ಮಾಭಿಸ್ತದವಾಪ್ತುಂ ತಪೋಧನ।।

ಭಗವನ್! ಆ ದ್ರವ್ಯವು ಈಗ ಎಲ್ಲಿದೆ? ತಪೋಧನ! ಅದನ್ನು ನಾವು ಹೇಗೆ ಪಡೆದುಕೊಳ್ಳಬಹುದು?”

14005003 ವ್ಯಾಸ ಉವಾಚ।
14005003a ಅಸುರಾಶ್ಚೈವ ದೇವಾಶ್ಚ ದಕ್ಷಸ್ಯಾಸನ್ಪ್ರಜಾಪತೇಃ।
14005003c ಅಪತ್ಯಂ ಬಹುಲಂ ತಾತ ತೇಽಸ್ಪರ್ಧಂತ ಪರಸ್ಪರಮ್।।

ವ್ಯಾಸನು ಹೇಳಿದನು: “ಮಗೂ! ಪ್ರಜಾಪತಿ ದಕ್ಷನಿಗೆ ಅಸುರರು ಮತ್ತು ದೇವತೆಗಳೆಂಬ ಅನೇಕ ಮಕ್ಕಳಿದ್ದರು. ಅವರು ಪರಸ್ಪರ ಸ್ಪರ್ಧಿಸುತ್ತಲೇ ಇದ್ದರು.

14005004a ತಥೈವಾಂಗಿರಸಃ ಪುತ್ರೌ ವ್ರತತುಲ್ಯೌ ಬಭೂವತುಃ।
14005004c ಬೃಹಸ್ಪತಿರ್ಬೃಹತ್ತೇಜಾಃ ಸಂವರ್ತಶ್ಚ ತಪೋಧನಃ।।

ಹಾಗೆಯೇ ಅಂಗಿರಸನಿಗೆ ವ್ರತದಲ್ಲಿ ಸರಿಸಮರಾದ ಪುತ್ರರಿಬ್ಬರಿದ್ದರು: ಮಹಾತೇಜಸ್ವೀ ಬೃಹಸ್ಪತಿ ಮತ್ತು ತಪೋಧನ ಸಂವರ್ತ.

14005005a ತಾವಪಿ ಸ್ಪರ್ಧಿನೌ ರಾಜನ್ಪೃಥಗಾಸ್ತಾಂ ಪರಸ್ಪರಮ್।
14005005c ಬೃಹಸ್ಪತಿಶ್ಚ ಸಂವರ್ತಂ ಬಾಧತೇ ಸ್ಮ ಪುನಃ ಪುನಃ।।

ರಾಜನ್! ಬೇರೆ ಬೇರೆ ಇದ್ದ ಅವರಿಬ್ಬರೂ ಸದಾ ಪರಸ್ಪರರಲ್ಲಿ ಸ್ಪರ್ಧಿಸುತ್ತಲೇ ಇದ್ದರು. ಬೃಹಸ್ಪತಿಯಾದರೋ ಸಂವರ್ತನನ್ನು ಪುನಃ ಪುನಃ ಬಾಧಿಸುತ್ತಿದ್ದನು.

14005006a ಸ ಬಾಧ್ಯಮಾನಃ ಸತತಂ ಭ್ರಾತ್ರಾ ಜ್ಯೇಷ್ಠೇನ ಭಾರತ।
14005006c ಅರ್ಥಾನುತ್ಸೃಜ್ಯ ದಿಗ್ವಾಸಾ ವನವಾಸಮರೋಚಯತ್।।

ಭಾರತ! ಹಿರಿಯ ಅಣ್ಣನಿಂದ ಸತತವೂ ಪೀಡಿಸಲ್ಪಡುತ್ತಿದ್ದ ಸಂವರ್ತನು ಸಂಪತ್ತನ್ನು ತೊರೆದು ದಿಗಂಬರನಾಗಿ ವನವಾಸವನ್ನು ಬಯಸಿದನು.

14005007a ವಾಸವೋಽಪ್ಯಸುರಾನ್ಸರ್ವಾನ್ನಿರ್ಜಿತ್ಯ ಚ ನಿಹತ್ಯ ಚ।
14005007c ಇಂದ್ರತ್ವಂ ಪ್ರಾಪ್ಯ ಲೋಕೇಷು ತತೋ ವವ್ರೇ ಪುರೋಹಿತಮ್।
14005007e ಪುತ್ರಮಂಗಿರಸೋ ಜ್ಯೇಷ್ಠಂ ವಿಪ್ರಶ್ರೇಷ್ಠಂ ಬೃಹಸ್ಪತಿಮ್।।

ವಾಸವನು ಎಲ್ಲ ಅಸುರರನ್ನೂ ಸಂಹರಿಸಿ ಗೆದ್ದು ಲೋಕದ ಇಂದ್ರತ್ವವನ್ನು ಪಡೆದುಕೊಳ್ಳಲು ಅವನು ಅಂಗಿರಸನ ಜ್ಯೇಷ್ಠ ಪುತ್ರ ವಿಪ್ರಶ್ರೇಷ್ಠ ಬೃಹಸ್ಪತಿಯನ್ನು ಪುರೋಹಿತನನ್ನಾಗಿ ಆರಿಸಿಕೊಂಡನು.

14005008a ಯಾಜ್ಯಸ್ತ್ವಂಗಿರಸಃ ಪೂರ್ವಮಾಸೀದ್ರಾಜಾ ಕರಂಧಮಃ।
14005008c ವೀರ್ಯೇಣಾಪ್ರತಿಮೋ ಲೋಕೇ ವೃತ್ತೇನ ಚ ಬಲೇನ ಚ।
14005008e ಶತಕ್ರತುರಿವೌಜಸ್ವೀ ಧರ್ಮಾತ್ಮಾ ಸಂಶಿತವ್ರತಃ।।

ಹಿಂದೆ ವೀರ್ಯ-ನಡತೆ-ಬಲಗಳಲ್ಲಿ ಲೋಕಗಳಲ್ಲಿಯೇ ಅಪ್ರತಿಮನಾಗಿದ್ದ, ಶತ್ರುಕ್ರತುವಿನಂತೆ ಓಜಸ್ವಿಯೂ, ಧರ್ಮಾತ್ಮನೂ, ಸಂಶಿತವ್ರತನೂ ಆಗಿದ್ದ ರಾಜಾ ಕರಂಧಮನು ಆಂಗಿರಸನ ಮೂಲಕ ಯಜ್ಞಗಳನ್ನು ನಡೆಸಿದ್ದನು.

14005009a ವಾಹನಂ ಯಸ್ಯ ಯೋಧಾಶ್ಚ ದ್ರವ್ಯಾಣಿ ವಿವಿಧಾನಿ ಚ।
14005009c ಧ್ಯಾನಾದೇವಾಭವದ್ರಾಜನ್ಮುಖವಾತೇನ ಸರ್ವಶಃ।।

ರಾಜನ್! ಕರಂಧಮನು ಧ್ಯಾನಿಸಿದೊಡನೆಯೇ ಅವನ ಬಾಯಿಯಿಂದ ಹೊರಡುವ ಶ್ವಾಸದಿಂದ ವಾಹನಗಳು, ಯೋಧರು, ಮತ್ತು ವಿವಿಧ ದ್ರವ್ಯಗಳು ಎಲ್ಲಕಡೆಗಳಿಂದ ಹುಟ್ಟುತ್ತಿದ್ದವು.

14005010a ಸ ಗುಣೈಃ ಪಾರ್ಥಿವಾನ್ಸರ್ವಾನ್ವಶೇ ಚಕ್ರೇ ನರಾಧಿಪಃ।
14005010c ಸಂಜೀವ್ಯ ಕಾಲಮಿಷ್ಟಂ ಚ ಸಶರೀರೋ ದಿವಂ ಗತಃ।।

ಆ ನರಾಧಿಪನು ತನ್ನ ಗುಣಗಳಿಂದ ಸರ್ವ ಪಾರ್ಥಿವರನ್ನೂ ವಶದಲ್ಲಿ ತಂದುಕೊಂಡು, ಇಷ್ಟವಿದ್ದಷ್ಟು ಕಾಲ ಜೀವಂತವಿದ್ದು, ಸಶರೀರರನಾಗಿ ದಿವಂಗತನಾದನು.

14005011a ಬಭೂವ ತಸ್ಯ ಪುತ್ರಸ್ತು ಯಯಾತಿರಿವ ಧರ್ಮವಿತ್।
14005011c ಅವಿಕ್ಷಿನ್ನಾಮ ಶತ್ರುಕ್ಷಿತ್ಸ ವಶೇ ಕೃತವಾನ್ಮಹೀಮ್।
14005011e ವಿಕ್ರಮೇಣ ಗುಣೈಶ್ಚೈವ ಪಿತೇವಾಸೀತ್ಸ ಪಾರ್ಥಿವಃ।।

ಅವಿಕ್ಷಿತನೆಂಬ ಹೆಸರಿನ ಅವನ ಮಗನಾದರೋ ಯಯಾತಿಯಂತೆ ಧರ್ಮವಿದುವಾಗಿದ್ದು ಇಡೀ ಭೂಮಿಯನ್ನೇ ತನ್ನ ವಶದಲ್ಲಿಟ್ಟುಕೊಂಡಿದ್ದನು. ಆ ಪಾರ್ಥಿವನು ಗುಣ ಮತ್ತು ವಿಕ್ರಮಗಳಲ್ಲಿ ಅವನ ತಂದೆಯಂತೆಯೇ ಇದ್ದನು.

14005012a ತಸ್ಯ ವಾಸವತುಲ್ಯೋಽಭೂನ್ಮರುತ್ತೋ ನಾಮ ವೀರ್ಯವಾನ್।
14005012c ಪುತ್ರಸ್ತಮನುರಕ್ತಾಭೂತ್ಪೃಥಿವೀ ಸಾಗರಾಂಬರಾ।।

ಅವನಿಗೆ ಮರುತ್ತ ಎಂಬ ಹೆಸರಿನ, ವಾಸವನಿಗೆ ಸಮನಾಗಿದ್ದ, ವೀರ್ಯವಾನ್ ಪುತ್ರನಿದ್ದನು. ಅವನು ಸಾಗರಾಂಬರೆ ಪೃಥ್ವಿಯಲ್ಲಿಯೇ ಅನುರಕ್ತನಾಗಿದ್ದನು.

14005013a ಸ್ಪರ್ಧತೇ ಸತತಂ ಸ ಸ್ಮ ದೇವರಾಜೇನ ಪಾರ್ಥಿವಃ।
14005013c ವಾಸವೋಽಪಿ ಮರುತ್ತೇನ ಸ್ಪರ್ಧತೇ ಪಾಂಡುನಂದನ।।

ಪಾಂಡುನಂದನ! ಆ ಪಾರ್ಥಿವನು ಸತತವೂ ದೇವರಾಜನೊಡನೆ ಸ್ಪರ್ಧಿಸುತ್ತಿದ್ದನು. ವಾಸವನೂ ಕೂಡ ಮರುತ್ತನೊಡನೆ ಸ್ಪರ್ಧಿಸುತ್ತಿದ್ದನು.

14005014a ಶುಚಿಃ ಸ ಗುಣವಾನಾಸೀನ್ಮರುತ್ತಃ ಪೃಥಿವೀಪತಿಃ।
14005014c ಯತಮಾನೋಽಪಿ ಯಂ ಶಕ್ರೋ ನ ವಿಶೇಷಯತಿ ಸ್ಮ ಹ।।

ಪೃಥಿವೀಪತಿ ಶುಚಿ ಮರುತ್ತನು ಅತ್ಯಂತ ಗುಣವಂತನಾಗಿದ್ದನು. ಪ್ರಯತ್ನಪಟ್ಟರೂ ಶಕ್ರನು ಅವನನ್ನು ಮೀರಿಸಲು ಶಕ್ಯನಾಗಿರಲಿಲ್ಲ.

14005015a ಸೋಽಶಕ್ನುವನ್ವಿಶೇಷಾಯ ಸಮಾಹೂಯ ಬೃಹಸ್ಪತಿಮ್।
14005015c ಉವಾಚೇದಂ ವಚೋ ದೇವೈಃ ಸಹಿತೋ ಹರಿವಾಹನಃ।।

ಅವನನ್ನು ಮೀರಿಸಲು ಅಸಾಧ್ಯನಾದಾಗ ಹರಿವಾಹನ ಇಂದ್ರನು ದೇವತೆಗಳೊಂದಿಗೆ ಬೃಹಸ್ಪತಿಯನ್ನು ಕರೆದು ಅವನಿಗೆ ಈ ಮಾತನ್ನಾಡಿದನು:

14005016a ಬೃಹಸ್ಪತೇ ಮರುತ್ತಸ್ಯ ಮಾ ಸ್ಮ ಕಾರ್ಷೀಃ ಕಥಂ ಚನ।
14005016c ದೈವಂ ಕರ್ಮಾಥ ವಾ ಪಿತ್ರ್ಯಂ ಕರ್ತಾಸಿ ಮಮ ಚೇತ್ಪ್ರಿಯಮ್।।

“ಬೃಹಸ್ಪತೇ! ನೀನು ಎಂದೂ ಮರುತ್ತನಿಗೆ ಪುರೋಹಿತನಾಗಬೇಡ! ದೈವಕರ್ಮವಾಗಲೀ ಅಥವಾ ಪಿತೃಕರ್ಮವಾಗಲೀ ನನಗೆ ಇಷ್ಟವಾಗುವಂತೆ ನೀನು ಮಾಡುತ್ತೀಯೆ.

14005017a ಅಹಂ ಹಿ ತ್ರಿಷು ಲೋಕೇಷು ಸುರಾಣಾಂ ಚ ಬೃಹಸ್ಪತೇ।
14005017c ಇಂದ್ರತ್ವಂ ಪ್ರಾಪ್ತವಾನೇಕೋ ಮರುತ್ತಸ್ತು ಮಹೀಪತಿಃ।।

ಬೃಹಸ್ಪತೇ! ನಾನಾದರೋ ಮೂರುಲೋಕಗಳ ಮತ್ತು ಸುರರ ಇಂದ್ರತ್ವವನ್ನು ಪಡೆದಿರುವೆ. ಮರುತ್ತನಾದರೋ ಕೇವಲ ಭೂಮಿಯ ಓರ್ವ ಒಡೆಯ!

14005018a ಕಥಂ ಹ್ಯಮರ್ತ್ಯಂ ಬ್ರಹ್ಮಂಸ್ತ್ವಂ ಯಾಜಯಿತ್ವಾ ಸುರಾಧಿಪಮ್।
14005018c ಯಾಜಯೇರ್ಮೃತ್ಯುಸಂಯುಕ್ತಂ ಮರುತ್ತಮವಿಶಂಕಯಾ।।

ಮೃತ್ಯುವಿಲ್ಲದ ಸುರಾಧಿಪನಿಗೆ ಬ್ರಹ್ಮನಾಗಿ ಯಾಗಮಾಡಿಸುವ ನೀನು ಹೇಗೆ ತಾನೇ ಏನೂ ಶಂಕೆಯಿಲ್ಲದೇ ಮೃತ್ಯುಪರನಾಗಿರುವ ಮರುತ್ತನಿಗೆ ಯಾಗಮಾಡಿಸುವೆ?

14005019a ಮಾಂ ವಾ ವೃಣೀಷ್ವ ಭದ್ರಂ ತೇ ಮರುತ್ತಂ ವಾ ಮಹೀಪತಿಮ್।
14005019c ಪರಿತ್ಯಜ್ಯ ಮರುತ್ತಂ ವಾ ಯಥಾಜೋಷಂ ಭಜಸ್ವ ಮಾಮ್।।

ನಿನಗೆ ಮಂಗಳವಾಗಲಿ! ನೀನು ನನ್ನನ್ನಾಗಲೀ ಅಥವಾ ಮಹೀಪತಿ ಮರುತ್ತನನ್ನಾಗಲೀ ಆರಿಸಿಕೋ! ಮರುತ್ತನನ್ನು ಬಿಟ್ಟುಬಿಡು ಅಥವಾ ನನಗೆ ಪ್ರೀತಿಪಾತ್ರನಾಗದೇ ಇರು.”

14005020a ಏವಮುಕ್ತಃ ಸ ಕೌರವ್ಯ ದೇವರಾಜ್ಞಾ ಬೃಹಸ್ಪತಿಃ।
14005020c ಮುಹೂರ್ತಮಿವ ಸಂಚಿಂತ್ಯ ದೇವರಾಜಾನಮಬ್ರವೀತ್।।

ಕೌರವ್ಯ! ದೇವರಾಜನು ಹೀಗೆ ಹೇಳಲು ಬೃಹಸ್ಪತಿಯು ಒಂದು ಕ್ಷಣ ಆಲೋಚಿಸಿ ದೇವರಾಜನಿಗೆ ಹೇಳಿದನು:

14005021a ತ್ವಂ ಭೂತಾನಾಮಧಿಪತಿಸ್ತ್ವಯಿ ಲೋಕಾಃ ಪ್ರತಿಷ್ಠಿತಾಃ।
14005021c ನಮುಚೇರ್ವಿಶ್ವರೂಪಸ್ಯ ನಿಹಂತಾ ತ್ವಂ ಬಲಸ್ಯ ಚ।।

“ಭೂತಗಳ ಅಧಿಪತಿಯೆಂದು ಲೋಕಗಳು ನಿನ್ನನ್ನು ಪ್ರತಿಷ್ಠಾಪಿಸಿವೆ. ನೀನು ನಮುಚಿ, ವಿಶ್ವರೂಪ ಮತ್ತು ಬಲರನ್ನು ಸಂಹರಿಸಿರುವೆ.

14005022a ತ್ವಮಾಜಹರ್ಥ ದೇವಾನಾಮೇಕೋ ವೀರ ಶ್ರಿಯಂ ಪರಾಮ್।
14005022c ತ್ವಂ ಬಿಭರ್ಷಿ ಭುವಂ ದ್ಯಾಂ ಚ ಸದೈವ ಬಲಸೂದನ।।

ವೀರ! ನೀನೊಬ್ಬನೇ ದೇವತೆಗಳಿಗೆ ಪರಮ ಸಂಪತ್ತನ್ನು ಪಡೆದುಕೊಟ್ಟವನು. ಬಲಸೂದನ! ನೀನು ಭೂಲೋಕ-ಸ್ವರ್ಗಲೋಕಗಳ ಪಾಲನೆ-ಪೋಷಣೆ ಮಾಡುತ್ತೀಯೆ.

14005023a ಪೌರೋಹಿತ್ಯಂ ಕಥಂ ಕೃತ್ವಾ ತವ ದೇವಗಣೇಶ್ವರ।
14005023c ಯಾಜಯೇಯಮಹಂ ಮರ್ತ್ಯಂ ಮರುತ್ತಂ ಪಾಕಶಾಸನ।।

ದೇವಗಣೇಶ್ವರ! ಪಾಕಶಾಸನ! ನಿನ್ನ ಪೌರೋಹಿತ್ಯವನ್ನು ಮಾಡಿಕೊಂಡ ನಾನು ಹೇಗೆ ತಾನೇ ಮನುಷ್ಯ ಮರುತ್ತನ ಯಜ್ಞದ ಪೌರೋಹಿತ್ಯವನ್ನು ಮಾಡಲಿ?

14005024a ಸಮಾಶ್ವಸಿಹಿ ದೇವೇಶ ನಾಹಂ ಮರ್ತ್ಯಾಯ ಕರ್ಹಿ ಚಿತ್।
14005024c ಗ್ರಹೀಷ್ಯಾಮಿ ಸ್ರುವಂ ಯಜ್ಞೇ ಶೃಣು ಚೇದಂ ವಚೋ ಮಮ।।

ದೇವೇಶ! ನನ್ನ ಈ ಮಾತನ್ನು ಕೇಳು! ಮನುಷ್ಯರ ಯಜ್ಞವನ್ನು ಮಾಡಿಸುವ ಕಾರ್ಯವನ್ನು ನಾನು ಎಂದೂ ಹಿಡಿಯುವುದಿಲ್ಲ. ನನ್ನ ಆಶ್ವಾಸನೆಯಿದೆ.

14005025a ಹಿರಣ್ಯರೇತಸೋಽಂಭಃ ಸ್ಯಾತ್ಪರಿವರ್ತೇತ ಮೇದಿನೀ।
14005025c ಭಾಸಂ ಚ ನ ರವಿಃ ಕುರ್ಯಾನ್ಮತ್ಸತ್ಯಂ ವಿಚಲೇದ್ಯದಿ।।

ಹಿರಣ್ಯರೇತಸ ಅಗ್ನಿಯು ತಣ್ಣಗಾಗಬಹುದು. ಮೇದಿನಿಯು ತಲೆಕೆಳಗಾಗಬಹುದು. ಸೂರ್ಯನು ಪ್ರಕಾಶಿಸದೆಯೂ ಇರಬಹುದು. ಆದರೆ ನನ್ನ ಸತ್ಯವಚನವು ಸುಳ್ಳಾಗುವುದಿಲ್ಲ!”

14005026a ಬೃಹಸ್ಪತಿವಚಃ ಶ್ರುತ್ವಾ ಶಕ್ರೋ ವಿಗತಮತ್ಸರಃ।
14005026c ಪ್ರಶಸ್ಯೈನಂ ವಿವೇಶಾಥ ಸ್ವಮೇವ ಭವನಂ ತದಾ।।

ಬೃಹಸ್ಪತಿಯ ಮಾತನ್ನು ಕೇಳಿ ಶಕ್ರನು ಮತ್ಸರವನ್ನು ಕಳೆದುಕೊಂಡನು. ಬೃಹಸ್ಪತಿಯನ್ನು ಪ್ರಶಂಸೆಮಾಡಿ ತನ್ನ ಭವನವನ್ನು ಪ್ರವೇಶಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ಪಂಚಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ಐದನೇ ಅಧ್ಯಾಯವು.