ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 4
ಸಾರ
ವ್ಯಾಸನು ಯುಧಿಷ್ಠಿರನಿಗೆ ರಾಜಾ ಮರುತ್ತನ ಕಥೆಯನ್ನು ಹೇಳಿದುದು (1-27).
14004001 ಯುಧಿಷ್ಠಿರ ಉವಾಚ।
14004001a ಶುಶ್ರೂಷೇ ತಸ್ಯ ಧರ್ಮಜ್ಞ ರಾಜರ್ಷೇಃ ಪರಿಕೀರ್ತನಮ್।
14004001c ದ್ವೈಪಾಯನ ಮರುತ್ತಸ್ಯ ಕಥಾಂ ಪ್ರಬ್ರೂಹಿ ಮೇಽನಘ।।
ಯುಧಿಷ್ಠಿರನು ಹೇಳಿದನು: “ಅನಘ! ದ್ವೈಪಾಯನ! ಧರ್ಮಜ್ಞ! ಆ ರಾಜರ್ಷಿ ಮರುತ್ತನ ಕಥೆ ಮತ್ತು ಅವನ ಕುರಿತಾದ ಕೀರ್ತನೆಯನ್ನು ಹೇಳು!”
14004002 ವ್ಯಾಸ ಉವಾಚ।
14004002a ಆಸೀತ್ಕೃತಯುಗೇ ಪೂರ್ವಂ ಮನುರ್ಧಂಡಧರಃ ಪ್ರಭುಃ।
14004002c ತಸ್ಯ ಪುತ್ರೋ ಮಹೇಷ್ವಾಸಃ ಪ್ರಜಾತಿರಿತಿ ವಿಶ್ರುತಃ।।
ವ್ಯಾಸನು ಹೇಳಿದನು: “ಹಿಂದೆ ಕೃತಯುಗದಲ್ಲಿ ದಂಡಧಾರಿ ಮನುವು ರಾಜನಾಗಿದ್ದನು. ಅವನಿಗೆ ಪ್ರಜಾತಿ ಎನ್ನುವ ವಿಖ್ಯಾತ ಮಹೇಷ್ವಾಸ ಮಗನಿದ್ದನು.
14004003a ಪ್ರಜಾತೇರಭವತ್ಪುತ್ರಃ ಕ್ಷುಪ ಇತ್ಯಭಿವಿಶ್ರುತಃ।
14004003c ಕ್ಷುಪಸ್ಯ ಪುತ್ರಸ್ತ್ವಿಕ್ಷ್ವಾಕುರ್ಮಹೀಪಾಲೋಽಭವತ್ಪ್ರಭುಃ।।
ಪ್ರಜಾತಿಗೆ ಕ್ಷುಪ ಎನ್ನುವ ವಿಖ್ಯಾತ ಮಗನಿದ್ದನು. ಕ್ಷುಪನಿಗೆ ಮಹೀಪಾಲ ಪ್ರಭು ಇಕ್ಷ್ವಾಕು ಎನ್ನುವ ಮಗನಿದ್ದನು.
14004004a ತಸ್ಯ ಪುತ್ರಶತಂ ರಾಜನ್ನಾಸೀತ್ಪರಮಧಾರ್ಮಿಕಮ್।
14004004c ತಾಂಸ್ತು ಸರ್ವಾನ್ಮಹೀಪಾಲಾನಿಕ್ಷ್ವಾಕುರಕರೋತ್ಪ್ರಭುಃ।।
ರಾಜನ್! ಅವನಿಗೆ ಪರಮಧಾರ್ಮಿಕರಾದ ನೂರು ಮಕ್ಕಳಿದ್ದರು. ಪ್ರಭು ಇಕ್ಷ್ವಾಕುವು ಅವರೆಲ್ಲರನ್ನೂ ಮಹೀಪಾಲರನ್ನಾಗಿಸಿದನು.
14004005a ತೇಷಾಂ ಜ್ಯೇಷ್ಠಸ್ತು ವಿಂಶೋಽಭೂತ್ಪ್ರತಿಮಾನಂ ಧನುಷ್ಮತಾಮ್।
14004005c ವಿಂಶಸ್ಯ ಪುತ್ರಃ ಕಲ್ಯಾಣೋ ವಿವಿಂಶೋ ನಾಮ ಭಾರತ।।
ಧನುಷ್ಮಂತರಿಗೆ ಆದರ್ಶಪ್ರಾಯನಾಗಿದ್ದ ವಿಂಶನು ಅವರಲ್ಲಿ ಜ್ಯೇಷ್ಠನಾಗಿದ್ದನು. ಭಾರತ! ವಿಂಶನ ಕಲ್ಯಾಣ ಪುತ್ರನ ಹೆಸರು ವಿವಿಂಶ ಎಂದಾಗಿತ್ತು.
14004006a ವಿವಿಂಶಸ್ಯ ಸುತಾ ರಾಜನ್ಬಭೂವುರ್ದಶ ಪಂಚ ಚ।
14004006c ಸರ್ವೇ ಧನುಷಿ ವಿಕ್ರಾಂತಾ ಬ್ರಹ್ಮಣ್ಯಾಃ ಸತ್ಯವಾದಿನಃ।।
ರಾಜನ್! ವಿವಿಂಶನಿಗೆ ಐವತ್ತು ಮಕ್ಕಳಾದರು. ಅವರೆಲ್ಲರೂ ಧನುರ್ಯುದ್ಧದಲ್ಲಿ ವಿಕ್ರಾಂತರೂ ಬ್ರಹ್ಮಣ್ಯರೂ ಸತ್ಯವಾದಿಗಳೂ ಆಗಿದ್ದರು.
14004007a ದಾನಧರ್ಮರತಾಃ ಸಂತಃ ಸತತಂ ಪ್ರಿಯವಾದಿನಃ।
14004007c ತೇಷಾಂ ಜ್ಯೇಷ್ಠಃ ಖನೀನೇತ್ರಃ ಸ ತಾನ್ಸರ್ವಾನಪೀಡಯತ್।।
ಅವರು ದಾನಧರ್ಮ ನಿರತರೂ, ಸಂತರೂ, ಸತತವೂ ಪ್ರಿಯವಾದುದನ್ನೇ ಮಾತನಾಡುವವರೂ ಆಗಿದ್ದರು. ಅವರಲ್ಲಿ ಹಿರಿಯವನಾದ ಖನೀನೇತ್ರನು ಅವರೆಲ್ಲರನ್ನೂ ಪೀಡಿಸುತ್ತಿದ್ದನು.
14004008a ಖನೀನೇತ್ರಸ್ತು ವಿಕ್ರಾಂತೋ ಜಿತ್ವಾ ರಾಜ್ಯಮಕಂಟಕಮ್।
14004008c ನಾಶಕ್ನೋದ್ರಕ್ಷಿತುಂ ರಾಜ್ಯಂ ನಾನ್ವರಜ್ಯಂತ ತಂ ಪ್ರಜಾಃ।।
ವಿಕ್ರಾಂತನಾದ ಖನೀನೇತ್ರನಾದರೋ ಯಾವುದೇ ಕಂಟಕಗಳಿಲ್ಲದೇ ರಾಜ್ಯವನ್ನು ಗೆದ್ದನು. ಆದರೆ ಅವನ ಪ್ರಜೆಗಳು ಅವನನ್ನು ಇಷ್ಟಪಡದೇ ಇದ್ದುದರಿಂದ ಅವನಿಗೆ ರಾಜ್ಯವನ್ನು ರಕ್ಷಿಸಲು ಆಗಲಿಲ್ಲ.
14004009a ತಮಪಾಸ್ಯ ಚ ತದ್ರಾಷ್ಟ್ರಂ ತಸ್ಯ ಪುತ್ರಂ ಸುವರ್ಚಸಮ್।
14004009c ಅಭ್ಯಷಿಂಚತ ರಾಜೇಂದ್ರ ಮುದಿತಂ ಚಾಭವತ್ತದಾ।।
ರಾಜೇಂದ್ರ! ಪ್ರಜೆಗಳು ಅವನನ್ನು ರಾಷ್ಟ್ರದಿಂದ ಓಡಿಸಿ, ಅವನ ಮಗ ಸುವರ್ಚಸನನ್ನು ರಾಜನನ್ನಾಗಿ ಅಭಿಷೇಕಿಸಿ ಮುದಿತರಾದರು.
14004010a ಸ ಪಿತುರ್ವಿಕ್ರಿಯಾಂ ದೃಷ್ಟ್ವಾ ರಾಜ್ಯಾನ್ನಿರಸನಂ ತಥಾ।
14004010c ನಿಯತೋ ವರ್ತಯಾಮಾಸ ಪ್ರಜಾಹಿತಚಿಕೀರ್ಷಯಾ।।
ತಂದೆಯ ದುಷ್ಕೃತಗಳನ್ನೂ ಮತ್ತು ಅವನನ್ನು ರಾಜ್ಯದಿಂದ ಹೊರಗೋಡಿಸಿದುದನ್ನು ನೋಡಿ ಸುವರ್ಚಸನು ಪ್ರಜೆಗಳ ಹಿತವನ್ನೇ ಬಯಸಿ ನಿಯತನಾಗಿ ವರ್ತಿಸತೊಡಗಿದನು.
14004011a ಬ್ರಹ್ಮಣ್ಯಃ ಸತ್ಯವಾದೀ ಚ ಶುಚಿಃ ಶಮದಮಾನ್ವಿತಃ।
14004011c ಪ್ರಜಾಸ್ತಂ ಚಾನ್ವರಜ್ಯಂತ ಧರ್ಮನಿತ್ಯಂ ಮನಸ್ವಿನಮ್।।
ಬ್ರಹ್ಮಣ್ಯನೂ, ಸತ್ಯವಾದಿಯೂ, ಶುಚಿಯೂ, ಶಮ-ದಮಗಳಿಂದ ಕೂಡಿದವನೂ, ಧರ್ಮನಿತ್ಯನೂ, ಮನಸ್ವಿಯೂ ಆದ ಸುವರ್ಚಸನನ್ನು ಪ್ರಜೆಗಳು ಪ್ರೀತಿಸುತ್ತಿದ್ದರು.
14004012a ತಸ್ಯ ಧರ್ಮಪ್ರವೃತ್ತಸ್ಯ ವ್ಯಶೀರ್ಯತ್ಕೋಶವಾಹನಮ್।
14004012c ತಂ ಕ್ಷೀಣಕೋಶಂ ಸಾಮಂತಾಃ ಸಮಂತಾತ್ಪರ್ಯಪೀಡಯನ್।।
ಧರ್ಮಪ್ರವೃತ್ತನಾಗಿದ್ದ ಅವನ ಕೋಶ-ವಾಹನಗಳು ಕ್ಷೀಣವಾದವು. ಅವನ ಕೋಶವು ಕಡಿಮೆಯಾದುದನ್ನು ನೋಡಿ ಸಾಮಂತರು ಎಲ್ಲಕಡೆಗಳಿಂದ ಪೀಡಿಸತೊಡಗಿದರು.
14004013a ಸ ಪೀಡ್ಯಮಾನೋ ಬಹುಭಿಃ ಕ್ಷೀಣಕೋಶಸ್ತ್ವವಾಹನಃ।
14004013c ಆರ್ತಿಮಾರ್ಚತ್ಪರಾಂ ರಾಜಾ ಸಹ ಭೃತ್ಯೈಃ ಪುರೇಣ ಚ।।
ಕೋಶ-ವಾಹನಗಳನ್ನು ಕಳೆದುಕೊಂಡು ಅನೇಕ ಶತ್ರುಗಳಿಂದ ಪೀಡಿಸಲ್ಪಟ್ಟ ಅವನು ಸೇವಕ-ಪುರಜನರೊಂದಿಗೆ ಅತಿ ಆರ್ತನಾದನು.
14004014a ನ ಚೈನಂ ಪರಿಹರ್ತುಂ ತೇಽಶಕ್ನುವನ್ಪರಿಸಂಕ್ಷಯೇ।
14004014c ಸಮ್ಯಗ್ವೃತ್ತೋ ಹಿ ರಾಜಾ ಸ ಧರ್ಮನಿತ್ಯೋ ಯುಧಿಷ್ಠಿರ।।
ಯುಧಿಷ್ಠಿರ! ಆ ರಾಜನು ಧರ್ಮನಿತ್ಯನೂ ಸದಾಚಾರಿಯೂ ಆದುದರಿಂದ ಶತ್ರುಗಳಿಗೆ ಅವನನ್ನು ಸೋಲಿಸಲು ಸಾಧ್ಯವಾಗಲಿಲ್ಲ.
14004015a ಯದಾ ತು ಪರಮಾಮಾರ್ತಿಂ ಗತೋಽಸೌ ಸಪುರೋ ನೃಪಃ।
14004015c ತತಃ ಪ್ರದಧ್ಮೌ ಸ ಕರಂ ಪ್ರಾದುರಾಸೀತ್ತತೋ ಬಲಮ್।।
ಹೀಗೆ ಪುರಜನರೊಂದಿಗೆ ಪರಮ ಕಷ್ಟಕ್ಕೊಳಗಾಗಿರಲು ನೃಪನು ಕೈಯನ್ನೇ ಶಂಖವನ್ನಾಗಿ ಮಾಡಿಕೊಂಡು ಜೋರಾಗಿ ಊದಿದನು. ಆಗ ದೊಡ್ಡದಾದ ಸೇನೆಯೇ ಪ್ರಕಟವಾಯಿತು.
14004016a ತತಸ್ತಾನಜಯತ್ಸರ್ವಾನ್ಪ್ರಾತಿಸೀಮಾನ್ನರಾಧಿಪಾನ್।
14004016c ಏತಸ್ಮಾತ್ಕಾರಣಾದ್ರಾಜನ್ವಿಶ್ರುತಃ ಸ ಕರಂಧಮಃ।।
ಅನಂತರ ಅವನು ಸೀಮೆಯ ಗಡಿಯಲ್ಲಿದ್ದ ಎಲ್ಲ ನರಾಧಿಪರನ್ನೂ ಸೋಲಿಸಿದನು. ರಾಜನ್! ಈ ಕಾರಣದಿಂದಲೇ ಅವನು ಕರಂಧಮ – ಕೈಯಿಂದ ಶಬ್ಧಮಾಡಿದವನು – ಎಂದು ಪ್ರಖ್ಯಾತನಾದನು.
14004017a ತಸ್ಯ ಕಾರಂಧಮಃ ಪುತ್ರಸ್ತ್ರೇತಾಯುಗಮುಖೇಽಭವತ್।
14004017c ಇಂದ್ರಾದನವರಃ ಶ್ರೀಮಾನ್ ದೇವೈರಪಿ ಸುದುರ್ಜಯಃ।।
ತ್ರೇತಾಯುಗದ ಪ್ರಾರಂಭದಲ್ಲಿ ಅವನಿಗೆ ಕಾರಂಧಮ (ಅವಿಕ್ಷಿತ್) ಎನ್ನುವ ಮಗನು ಹುಟ್ಟಿದನು. ಅಮೋಘ ಕಾಂತಿಯಿಂದ ಕೂಡಿದ್ದ ಅವನು ಇಂದ್ರನಿಗೇನೂ ಕಡಿಮೆಯಾಗಿರಲಿಲ್ಲ. ದೇವತೆಗಳಿಗೂ ಅವನು ಸೋಲಿಸಲಸಾಧ್ಯನಾಗಿದ್ದನು.
14004018a ತಸ್ಯ ಸರ್ವೇ ಮಹೀಪಾಲಾ ವರ್ತಂತೇ ಸ್ಮ ವಶೇ ತದಾ।
14004018c ಸ ಹಿ ಸಮ್ರಾಡಭೂತ್ತೇಷಾಂ ವೃತ್ತೇನ ಚ ಬಲೇನ ಚ।।
ಆಗ ಸರ್ವ ಮಹೀಪಾಲರೂ ಅವನ ವಶದಲ್ಲಿದ್ದರು. ನಡತೆ ಮತ್ತು ಬಲಗಳಲ್ಲಿ ಅವನು ಅವರೆಲ್ಲರಿಗೂ ಸಾಮ್ರಾಟನಂತಿದ್ದನು.
14004019a ಅವಿಕ್ಷಿನ್ನಾಮ ಧರ್ಮಾತ್ಮಾ ಶೌರ್ಯೇಣೇಂದ್ರಸಮೋಽಭವತ್।
14004019c ಯಜ್ಞಶೀಲಃ ಕರ್ಮರತಿರ್ಧೃತಿಮಾನ್ ಸಂಯತೇಂದ್ರಿಯಃ।।
ಅವಿಕ್ಷಿತ್ ಎಂಬ ಹೆಸರಿನ ಆ ಧರ್ಮಾತ್ಮನು ಶೌರ್ಯದಲ್ಲಿ ಇಂದ್ರನಿಗೆ ಸಮನಾಗಿದ್ದನು. ಧೃತಿಮಾನ್ ಮತ್ತು ಇಂದ್ರಿಯಗಳನ್ನು ಸಂಯಮದಲ್ಲಿರಿಸಿಕೊಂಡಿದ್ದ ಅವನು ಯಜ್ಞಶೀಲನೂ ಕರ್ಮರತಿಯೂ ಆಗಿದ್ದನು.
14004020a ತೇಜಸಾದಿತ್ಯಸದೃಶಃ ಕ್ಷಮಯಾ ಪೃಥಿವೀಸಮಃ।
14004020c ಬೃಹಸ್ಪತಿಸಮೋ ಬುದ್ಧ್ಯಾ ಹಿಮವಾನಿವ ಸುಸ್ಥಿರಃ।।
ತೇಜಸ್ಸಿನಲ್ಲಿ ಆದಿತ್ಯನಂತಿದ್ದನು. ಕ್ಷಮೆಯಲ್ಲಿ ಭೂಮಿಗೆ ಸಮನಾಗಿದ್ದನು. ಬುದ್ಧಿಯಲ್ಲಿ ಬೃಹಸ್ಪತಿಯ ಸಮನಾಗಿದ್ದ ಅವನು ಹಿಮವತ್ಪರ್ವತದಂತೆ ಸುಸ್ಥಿರವಾಗಿದ್ದನು.
14004021a ಕರ್ಮಣಾ ಮನಸಾ ವಾಚಾ ದಮೇನ ಪ್ರಶಮೇನ ಚ।
14004021c ಮನಾಂಸ್ಯಾರಾಧಯಾಮಾಸ ಪ್ರಜಾನಾಂ ಸ ಮಹೀಪತಿಃ।।
ಕರ್ಮ, ಮನಸ್ಸು, ಮಾತು, ದಮ, ಪ್ರಶಮನ ಮತ್ತು ಮನಸ್ಸುಗಳಿಂದ ಆ ಮಹೀಪತಿಯು ಪ್ರಜೆಗಳನ್ನು ಆರಾಧಿಸುತ್ತಿದ್ದನು.
14004022a ಯ ಈಜೇ ಹಯಮೇಧಾನಾಂ ಶತೇನ ವಿಧಿವತ್ಪ್ರಭುಃ।
14004022c ಯಾಜಯಾಮಾಸ ಯಂ ವಿದ್ವಾನ್ಸ್ವಯಮೇವಾಂಗಿರಾಃ ಪ್ರಭುಃ।।
ಆ ಪ್ರಭುವು ವಿಧಿವತ್ತಾಗಿ ನೂರು ಅಶ್ವಮೇಧಗಳನ್ನು ನಡೆಸಿದನು. ವಿದ್ವಾನ್ ಸ್ವಯಂ ಪ್ರಭು ಆಂಗಿರಸನು ಅವುಗಳನ್ನು ನಡೆಸಿಕೊಟ್ಟನು.
14004023a ತಸ್ಯ ಪುತ್ರೋಽತಿಚಕ್ರಾಮ ಪಿತರಂ ಗುಣವತ್ತಯಾ।
14004023c ಮರುತ್ತೋ ನಾಮ ಧರ್ಮಜ್ಞಶ್ಚಕ್ರವರ್ತೀ ಮಹಾಯಶಾಃ।।
ಅವನ ಮಗ ಧರ್ಮಜ್ಞ ಚಕ್ರವರ್ತಿ ಮಹಾಯಶಸ್ವೀ ಮರುತ್ತ ಎನ್ನುವವನು ಗುಣಗಳಲ್ಲಿ ತಂದೆಯನ್ನೂ ಮೀರಿದ್ದನು.
14004024a ನಾಗಾಯುತಸಮಪ್ರಾಣಃ ಸಾಕ್ಷಾದ್ವಿಷ್ಣುರಿವಾಪರಃ।
14004024c ಸ ಯಕ್ಷ್ಯಮಾಣೋ ಧರ್ಮಾತ್ಮಾ ಶಾತಕುಂಭಮಯಾನ್ಯುತ।
14004024e ಕಾರಯಾಮಾಸ ಶುಭ್ರಾಣಿ ಭಾಜನಾನಿ ಸಹಸ್ರಶಃ।।
ಹತ್ತುಸಾವಿರ ಆನೆಗಳ ಬಲವಿದ್ದ ಅವನು ಸಾಕ್ಷಾದ್ ವಿಷ್ಣುವಿನಂತೆಯೇ ತೋರುತ್ತಿದ್ದನು. ಆ ಧರ್ಮಾತ್ಮನು ಯಜ್ಞಮಾಡುವಾಗ ಸಾವಿರಾರು ಸುವರ್ಣಮಯ ಶುಭ್ರ ಯಜ್ಞಪಾತ್ರೆಗಳನ್ನು ಮಾಡಿಸಿದನು.
14004025a ಮೇರುಂ ಪರ್ವತಮಾಸಾದ್ಯ ಹಿಮವತ್ಪಾರ್ಶ್ವ ಉತ್ತರೇ।
14004025c ಕಾಂಚನಃ ಸುಮಹಾನ್ಪಾದಸ್ತತ್ರ ಕರ್ಮ ಚಕಾರ ಸಃ।।
ಹಿಮವತ್ಪರ್ವತದ ಉತ್ತರದಲ್ಲಿ ಮೇರು ಪರ್ವತದ ಬಳಿಹೋಗಿ ಅಲ್ಲಿದ್ದ ಮಹಾ ಕಾಂಚನ ಪರ್ವತದಲ್ಲಿ ಯಜ್ಞಗಳನ್ನು ಮಾಡಿದನು.
14004026a ತತಃ ಕುಂಡಾನಿ ಪಾತ್ರೀಶ್ಚ ಪಿಠರಾಣ್ಯಾಸನಾನಿ ಚ।
14004026c ಚಕ್ರುಃ ಸುವರ್ಣಕರ್ತಾರೋ ಯೇಷಾಂ ಸಂಖ್ಯಾ ನ ವಿದ್ಯತೇ।।
ಅಲ್ಲಿ ಬಂಗಾರದ ಕೆಲಸಗಾರರು ಯಜ್ಞದ ಸಲುವಾಗಿ ಸುವರ್ಣಕುಂಡಗಳನ್ನೂ, ಪಾತ್ರೆಗಳನ್ನೂ, ಪೀಠಗಳನ್ನೂ ಮಾಡಿದರು. ಅವುಗಳ ಸಂಖ್ಯೆಯೆಷ್ಟೆಂದು ಗೊತ್ತಿಲ್ಲ.
14004027a ತಸ್ಯೈವ ಚ ಸಮೀಪೇ ಸ ಯಜ್ಞವಾಟೋ ಬಭೂವ ಹ।
14004027c ಈಜೇ ತತ್ರ ಸ ಧರ್ಮಾತ್ಮಾ ವಿಧಿವತ್ಪೃಥಿವೀಪತಿಃ।
14004027e ಮರುತ್ತಃ ಸಹಿತೈಃ ಸರ್ವೈಃ ಪ್ರಜಾಪಾಲೈರ್ನರಾಧಿಪಃ।।
ಅದರ ಬಳಿಯಲ್ಲಿಯೇ ಯಜ್ಞವಾಟಿಕೆಯಿತ್ತು. ಅಲ್ಲಿಯೇ ಧರ್ಮಾತ್ಮಾ ಪೃಥಿವೀಪತಿ ನರಾಧಿಪ ಮರುತ್ತನು ಸರ್ವ ಪ್ರಜಾಪಾಲರೊಂದಿಗೆ ವಿಧಿವತ್ತಾಗಿ ಯಜ್ಞಮಾಡಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ಚತುರ್ಥೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ನಾಲ್ಕನೇ ಅಧ್ಯಾಯವು.