ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 3
ಸಾರ
ಪಾಪಗಳನ್ನು ತೊಳೆದುಕೊಳ್ಳಲು ಅಶ್ವಮೇಧ ಯಜ್ಞವನ್ನು ಮಾಡುವಂತೆ ವ್ಯಾಸನು ಯುಧಿಷ್ಠಿರನಿಗೆ ಸೂಚಿಸಿದುದು (1-10). ಯುದ್ಧದ ಕಾರಣದಿಂದಾಗಿ ತನ್ನ ಕೋಶವು ಬರಿದಾಗಿರುವಾಗ ಅಶ್ವಮೇಧವನ್ನು ಹೇಗೆ ಮಾಡಬಹುದೆಂದು ಯುಧಿಷ್ಠಿರನು ವ್ಯಾಸನಲ್ಲಿ ಕೇಳಿದುದು (11-18). ಆಗ ವ್ಯಾಸನು ರಾಜಾ ಮರುತ್ತನ ಯಜ್ಞದಲ್ಲಿ ಬ್ರಾಹ್ಮಣರು ಬಿಟ್ಟುಹೋಗಿದ್ದ ದಕ್ಷಿಣಾರೂಪದ ಧನ-ಕನಕಗಳು ಹಿಮಾಲಯದಲ್ಲಿರುವುದನ್ನು ತಿಳಿಸಿ, ಮರುತ್ತನ ಯಜ್ಞದ ಕುರಿತಾದ ಯುಧಿಷ್ಠಿರನ ಪ್ರಶ್ನೆಗೆ ಉತ್ತರಿಸಲು ಪ್ರಾರಂಭಿಸಿದುದು (19-22).
14003001 ವ್ಯಾಸ ಉವಾಚ।
14003001a ಯುಧಿಷ್ಠಿರ ತವ ಪ್ರಜ್ಞಾ ನ ಸಮ್ಯಗಿತಿ ಮೇ ಮತಿಃ।
14003001c ನ ಹಿ ಕಶ್ಚಿತ್ಸ್ವಯಂ ಮರ್ತ್ಯಃ ಸ್ವವಶಃ ಕುರುತೇ ಕ್ರಿಯಾಃ।।
ವ್ಯಾಸನು ಹೇಳಿದನು: “ಯುಧಿಷ್ಠಿರ! ನಿನ್ನ ಪ್ರಜ್ಞೆಯು ಸರಿಯಿಲ್ಲವೆಂದು ನನಗನ್ನಿಸುತ್ತದೆ. ಮನುಷ್ಯನು ಯಾವಾಗಲೂ ತನ್ನ ವಶದಲ್ಲಿಯೇ ಇದ್ದುಕೊಂಡು ಕ್ರಿಯೆಗಳನ್ನು ಮಾಡುವುದಿಲ್ಲ.
14003002a ಈಶ್ವರೇಣ ನಿಯುಕ್ತೋಽಯಂ ಸಾಧ್ವಸಾಧು ಚ ಮಾನವಃ।
14003002c ಕರೋತಿ ಪುರುಷಃ ಕರ್ಮ ತತ್ರ ಕಾ ಪರಿದೇವನಾ।।
ಮಾನವನಿಗೆ ಒಳ್ಳೆಯದು-ಕೆಟ್ಟದ್ದು ಎಲ್ಲವೂ ಈಶ್ವರನಿಂದ ನಿಯುಕ್ತವಾಗಿರುತ್ತವೆ. ಮನುಷ್ಯನು ಕೇವಲ ಕರ್ಮವನ್ನು ಮಾಡುತ್ತಿರುತ್ತಾನೆ. ಅದರಲ್ಲಿ ಏಕೆ ಶೋಕಿಸಬೇಕು?
14003003a ಆತ್ಮಾನಂ ಮನ್ಯಸೇ ಚಾಥ ಪಾಪಕರ್ಮಾಣಮಂತತಃ।
14003003c ಶೃಣು ತತ್ರ ಯಥಾ ಪಾಪಮಪಕೃಷ್ಯೇತ ಭಾರತ।।
ಭಾರತ! ಕೊನೆಗೂ ನೀನು ಪಾಪಕರ್ಮವನ್ನೇ ಮಾಡಿದ್ದೀಯೆಂದು ತಿಳಿದುಕೊಂಡರೆ ಆ ಪಾಪವನ್ನು ಹೇಗೆ ತೊಳೆದುಕೊಳ್ಳಬೇಕು ಎನ್ನುವುದನ್ನು ಕೇಳು.
14003004a ತಪೋಭಿಃ ಕ್ರತುಭಿಶ್ಚೈವ ದಾನೇನ ಚ ಯುಧಿಷ್ಠಿರ।
14003004c ತರಂತಿ ನಿತ್ಯಂ ಪುರುಷಾ ಯೇ ಸ್ಮ ಪಾಪಾನಿ ಕುರ್ವತೇ।।
ಯುಧಿಷ್ಠಿರ! ತಪಸ್ಸು, ಕ್ರತು ಮತ್ತು ದಾನಗಳು ಪಾಪಮಾಡಿದ ಪುರುಷನನ್ನು ನಿತ್ಯವೂ ಪಾರುಮಾಡುತ್ತವೆ.
14003005a ಯಜ್ಞೇನ ತಪಸಾ ಚೈವ ದಾನೇನ ಚ ನರಾಧಿಪ।
14003005c ಪೂಯಂತೇ ರಾಜಶಾರ್ದೂಲ ನರಾ ದುಷ್ಕೃತಕರ್ಮಿಣಃ।।
ನರಾಧಿಪ! ರಾಜಶಾರ್ದೂಲ! ಯಜ್ಞ, ತಪಸ್ಸು ಮತ್ತು ದಾನಗಳು ದುಷ್ಕೃತಗಳನ್ನು ಮಾಡಿದ ಮನುಷ್ಯರನ್ನು ಪಾವನಗೊಳಿಸುತ್ತವೆ.
14003006a ಅಸುರಾಶ್ಚ ಸುರಾಶ್ಚೈವ ಪುಣ್ಯಹೇತೋರ್ಮಖಕ್ರಿಯಾಮ್।
14003006c ಪ್ರಯತಂತೇ ಮಹಾತ್ಮಾನಸ್ತಸ್ಮಾದ್ಯಜ್ಞಾಃ ಪರಾಯಣಮ್।।
ಪುಣ್ಯಸಂಪಾದನೆಗಾಗಿ ಅಸುರರೂ ಸುರರೂ ಯಜ್ಞಕಾರ್ಯಗಳನ್ನು ಮಾಡುತ್ತಾರೆ. ಆದುದರಿಂದ ಮಹಾತ್ಮರು ಯಜ್ಞಗಳಲ್ಲಿಯೇ ತೊಡಗಿರುತ್ತಾರೆ.
14003007a ಯಜ್ಞೈರೇವ ಮಹಾತ್ಮಾನೋ ಬಭೂವುರಧಿಕಾಃ ಸುರಾಃ।
14003007c ತತೋ ದೇವಾಃ ಕ್ರಿಯಾವಂತೋ ದಾನವಾನಭ್ಯಧರ್ಷಯನ್।।
ಯಜ್ಞದಿಂದಲೇ ಮಹಾತ್ಮ ದೇವ ಸುರರು ಅಧಿಕ ಬಲಶಾಲಿಗಳೂ ಕ್ರಿಯಾವಂತರೂ ಆಗಿ ದಾನವರನ್ನು ಸದೆಬಡಿದರು.
14003008a ರಾಜಸೂಯಾಶ್ವಮೇಧೌ ಚ ಸರ್ವಮೇಧಂ ಚ ಭಾರತ।
14003008c ನರಮೇಧಂ ಚ ನೃಪತೇ ತ್ವಮಾಹರ ಯುಧಿಷ್ಠಿರ।।
ಭಾರತ! ಯುಧಿಷ್ಠಿರ! ನೃಪತೇ! ನೀನೂ ಕೂಡ ರಾಜಸೂಯ, ಅಶ್ವಮೇಧ, ಸರ್ವಮೇಧ ಮತ್ತು ನರಮೇಧ ಯಜ್ಞಗಳನ್ನು ಮಾಡು.
14003009a ಯಜಸ್ವ ವಾಜಿಮೇಧೇನ ವಿಧಿವದ್ದಕ್ಷಿಣಾವತಾ।
14003009c ಬಹುಕಾಮಾನ್ನವಿತ್ತೇನ ರಾಮೋ ದಾಶರಥಿರ್ಯಥಾ।।
14003010a ಯಥಾ ಚ ಭರತೋ ರಾಜಾ ದೌಃಷಂತಿಃ ಪೃಥಿವೀಪತಿಃ।
14003010c ಶಾಕುಂತಲೋ ಮಹಾವೀರ್ಯಸ್ತವ ಪೂರ್ವಪಿತಾಮಹಃ।।
ದಾಶರಥಿ ರಾಮನಂತೆ ಮತ್ತು ನಿನ್ನ ಪೂರ್ವಪಿತಾಮಹ ದುಃಶಂತ-ಶಕುಂತಲೆಯರ ಮಗ ಪೃಥಿವೀಪತಿ ರಾಜ ಮಹಾವೀರ್ಯ ಭರತನಂತೆ ವಿಧಿವತ್ತಾಗಿ ಮನೋವಾಂಛಿತ ಸಂಪತ್ತು-ದಕ್ಷಿಣೆಗಳೊಂದಿಗೆ ಅಶ್ವಮೇಧವನ್ನು ಯಾಜಿಸು.”
14003011 ಯುಧಿಷ್ಠಿರ ಉವಾಚ
14003011a ಅಸಂಶಯಂ ವಾಜಿಮೇಧಃ ಪಾವಯೇತ್ಪೃಥಿವೀಮಪಿ।
14003011c ಅಭಿಪ್ರಾಯಸ್ತು ಮೇ ಕಶ್ಚಿತ್ತಂ ತ್ವಂ ಶ್ರೋತುಮಿಹಾರ್ಹಸಿ।।
ಯುಧಿಷ್ಠಿರನು ಹೇಳಿದನು: “ಅಶ್ವಮೇಧವು ಇಡೀ ಭೂಮಿಯನ್ನೇ ಪಾವನಗೊಳಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಇದರ ಕುರಿತು ನನ್ನ ಒಂದು ಅಭಿಪ್ರಾಯವಿದೆ. ಅದನ್ನು ನೀನು ಕೇಳಬೇಕು.
14003012a ಇಮಂ ಜ್ಞಾತಿವಧಂ ಕೃತ್ವಾ ಸುಮಹಾಂತಂ ದ್ವಿಜೋತ್ತಮ।
14003012c ದಾನಮಲ್ಪಂ ನ ಶಕ್ಯಾಮಿ ದಾತುಂ ವಿತ್ತಂ ಚ ನಾಸ್ತಿ ಮೇ।।
ದ್ವಿಜೋತ್ತಮ! ಈ ಮಹಾ ಜ್ಞಾತಿವಧೆಯನ್ನು ಮಾಡಿ ನನ್ನಲ್ಲಿ ವಿತ್ತವೇ ಇಲ್ಲವಾಗಿದೆ. ಸ್ವಲ್ಪವೂ ಕೂಡ ದಾನ ಮಾಡಲು ಶಕ್ಯನಿಲ್ಲ.
14003013a ನ ಚ ಬಾಲಾನಿಮಾನ್ದೀನಾನುತ್ಸಹೇ ವಸು ಯಾಚಿತುಮ್।
14003013c ತಥೈವಾರ್ದ್ರವ್ರಣಾನ್ ಕೃಚ್ಚ್ರೇ ವರ್ತಮಾನಾನ್ನೃಪಾತ್ಮಜಾನ್।।
ಯುದ್ಧದ ಹುಣ್ಣುಗಳು ಇನ್ನೂ ಮಾಸದೇ ಕಷ್ಟದಲ್ಲಿರುವ ದೀನ ಬಾಲಕ ರಾಜಕುಮಾರರಿಂದ ಧನವನ್ನು ಯಾಚಿಸಲೂ ನನಗೆ ಮನಸ್ಸಿಲ್ಲ.
14003014a ಸ್ವಯಂ ವಿನಾಶ್ಯ ಪೃಥಿವೀಂ ಯಜ್ಞಾರ್ಥೇ ದ್ವಿಜಸತ್ತಮ।
14003014c ಕರಮಾಹಾರಯಿಷ್ಯಾಮಿ ಕಥಂ ಶೋಕಪರಾಯಣಾನ್।।
ದ್ವಿಜಸತ್ತಮ! ನಾನೇ ಈ ಭೂಮಿಯನ್ನು ವಿನಾಶಗೊಳಿಸಿ, ಶೋಕದಲ್ಲಿ ಮುಳುಗಿರುವವರಿಂದ, ಯಜ್ಞಕ್ಕಾಗಿ ಕರವನ್ನು ಹೇಗೆ ಕಸಿದುಕೊಳ್ಳಲಿ?
14003015a ದುರ್ಯೋಧನಾಪರಾಧೇನ ವಸುಧಾ ವಸುಧಾಧಿಪಾಃ।
14003015c ಪ್ರನಷ್ಟಾ ಯೋಜಯಿತ್ವಾಸ್ಮಾನಕೀರ್ತ್ಯಾ ಮುನಿಸತ್ತಮ।।
ಮುನಿಸತ್ತಮ! ದುರ್ಯೋಧನನ ಅಪರಾಧದಿಂದಾಗಿ ಭೂಮಿ ಮತ್ತು ವಸುಧಾಧಿಪರು ನಾಶಗೊಂಡರು ಮತ್ತು ನಾವೂ ಅಪಕೀರ್ತಿಗೊಳಗಾದೆವು.
14003016a ದುರ್ಯೋಧನೇನ ಪೃಥಿವೀ ಕ್ಷಯಿತಾ ವಿತ್ತಕಾರಣಾತ್।
14003016c ಕೋಶಶ್ಚಾಪಿ ವಿಶೀರ್ಣೋಽಸೌ ಧಾರ್ತರಾಷ್ಟ್ರಸ್ಯ ದುರ್ಮತೇಃ।।
ವಿತ್ತಕಾರಣದಿಂದ ದುರ್ಯೋಧನನು ಭೂಮಿಯನ್ನು ನಾಶಗೊಳಿಸಿದನು. ದುರ್ಮತಿ ಧಾರ್ತರಾಷ್ಟ್ರನಿಂದಾಗಿ ಈ ಕೋಶವೂ ಬರಿದಾಗಿಹೋಗಿದೆ.
14003017a ಪೃಥಿವೀ ದಕ್ಷಿಣಾ ಚಾತ್ರ ವಿಧಿಃ ಪ್ರಥಮಕಲ್ಪಿಕಃ।
14003017c ವಿದ್ವದ್ಭಿಃ ಪರಿದೃಷ್ಟೋಽಯಂ ಶಿಷ್ಟೋ ವಿಧಿವಿಪರ್ಯಯಃ।।
ಅಶ್ವಮೇಧದಲ್ಲಿ ಪೃಥ್ವಿಯನ್ನೇ ಮುಖ್ಯ ದಕ್ಷಿಣೆಯನ್ನಾಗಿ ಕೊಡಬೇಕೆಂದು ವಿದ್ವಾಂಸರು ಕಲ್ಪಿಸಿದ ವಿಧಿಯಾಗಿದೆ. ಅದರಂತೆ ಮಾಡದಿದ್ದರೆ ಶಿಷ್ಟರು ಹಾಕಿಕೊಟ್ಟ ವಿಧಿಗೆ ವ್ಯತ್ಯಾಸವಾದಂತಾಗುತ್ತದೆ.
14003018a ನ ಚ ಪ್ರತಿನಿಧಿಂ ಕರ್ತುಂ ಚಿಕೀರ್ಷಾಮಿ ತಪೋಧನ।
14003018c ಅತ್ರ ಮೇ ಭಗವನ್ಸಮ್ಯಕ್ಸಾಚಿವ್ಯಂ ಕರ್ತುಮರ್ಹಸಿ।।
ತಪೋಧನ! ಭೂಮಿಗೆ ಬದಲಾಗಿ ದಕ್ಷಿಣೆಗಳನ್ನು ಕೊಡಲು ಬಯಸುವುದಿಲ್ಲ. ಭಗವನ್! ಇದರ ಕುರಿತು ನಾನು ಏನು ಮಾಡಿದರೆ ಒಳ್ಳೆಯದು ಎನ್ನುವ ಸಲಹೆಯನ್ನು ನೀಡಬೇಕು.””
14003019 ವೈಶಂಪಾಯನ ಉವಾಚ
14003019a ಏವಮುಕ್ತಸ್ತು ಪಾರ್ಥೇನ ಕೃಷ್ಣದ್ವೈಪಾಯನಸ್ತದಾ।
14003019c ಮುಹೂರ್ತಮನುಸಂಚಿಂತ್ಯ ಧರ್ಮರಾಜಾನಮಬ್ರವೀತ್।।
ವೈಶಂಪಾಯನನು ಹೇಳಿದನು: “ಪಾರ್ಥನು ಹೀಗೆ ಹೇಳಲು ಕೃಷ್ಣದ್ವೈಪಾಯನನು ಒಂದು ಕ್ಷಣ ಯೋಚಿಸಿ ಧರ್ಮರಾಜನಿಗೆ ಹೀಗೆ ಹೇಳಿದನು:
14003020a ವಿದ್ಯತೇ ದ್ರವಿಣಂ ಪಾರ್ಥ ಗಿರೌ ಹಿಮವತಿ ಸ್ಥಿತಮ್।
14003020c ಉತ್ಸೃಷ್ಟಂ ಬ್ರಾಹ್ಮಣೈರ್ಯಜ್ಞೇ ಮರುತ್ತಸ್ಯ ಮಹೀಪತೇಃ।
14003020e ತದಾನಯಸ್ವ ಕೌಂತೇಯ ಪರ್ಯಾಪ್ತಂ ತದ್ಭವಿಷ್ಯತಿ।।
“ಪಾರ್ಥ! ಮಹೀಪತಿ ಮರುತ್ತನ ಯಜ್ಞದಲ್ಲಿ ಬ್ರಾಹ್ಮಣರು ಬಿಟ್ಟುಹೋದ ಸಂಪತ್ತು ಹಿಮವತ್ಪರ್ವತದಲ್ಲಿ ಇದೆಯೆಂದು ತಿಳಿದಿದೆ. ಕೌಂತೇಯ! ಅದನ್ನು ತೆಗೆದುಕೊಂಡು ಬಾ! ಅದು ನಿನಗೆ ಸಾಕಾಗುತ್ತದೆ.”
14003021 ಯುಧಿಷ್ಠಿರ ಉವಾಚ
14003021a ಕಥಂ ಯಜ್ಞೇ ಮರುತ್ತಸ್ಯ ದ್ರವಿಣಂ ತತ್ಸಮಾಚಿತಮ್।
14003021c ಕಸ್ಮಿಂಶ್ಚ ಕಾಲೇ ಸ ನೃಪೋ ಬಭೂವ ವದತಾಂ ವರ।।
ಯುಧಿಷ್ಠಿರನು ಹೇಳಿದನು: “ಮಾತನಾಡುವವರಲ್ಲಿ ಶ್ರೇಷ್ಠನೇ! ಮರುತ್ತನ ಯಜ್ಞದಲ್ಲಿ ಹೇಗೆ ಆ ದ್ರವ್ಯಗಳನ್ನು ಸೇರಿಸಲಾಯಿತು? ಆ ನೃಪನು ಯಾವ ಕಾಲದಲ್ಲಿದ್ದನು?”
14003022 ವ್ಯಾಸ ಉವಾಚ
14003022a ಯದಿ ಶುಶ್ರೂಷಸೇ ಪಾರ್ಥ ಶೃಣು ಕಾರಂಧಮಂ ನೃಪಮ್।
14003022c ಯಸ್ಮಿನ್ಕಾಲೇ ಮಹಾವೀರ್ಯಃ ಸ ರಾಜಾಸೀನ್ಮಹಾಧನಃ।।
ವ್ಯಾಸನು ಹೇಳಿದನು: “ಪಾರ್ಥ! ನಿನಗೆ ಕೇಳಬೇಕೆಂದರೆ ಕರಂಧಮನ ಮಗ ಆ ಮಹಾವೀರ್ಯ ನೃಪ ಮಹಾಧನ ರಾಜನಿದ್ದ ಕಾಲದ ಕುರಿತು ಕೇಳು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಸಂವರ್ತಮರುತ್ತೀಯೇ ತೃತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಸಂವರ್ತಮರುತ್ತೀಯ ಎನ್ನುವ ಮೂರನೇ ಅಧ್ಯಾಯವು.