002: ವ್ಯಾಸವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 2

ಸಾರ

ಶೋಕಗೈಯುತ್ತಿದ್ದ ಯುಧಿಷ್ಠಿರನನ್ನು ಕೃಷ್ಣನು ಸಂತವಿಸಿದುದು (1-8). ಯಾವ ಕರ್ಮಗಳನ್ನು ಮಾಡುವುದರಿಂದ ತಾನು ಮಾಡಿದ ಕ್ರೂರ ಪಾಪಗಳಿಂದ ಬಿಡುಗಡೆಹೊಂದಬಲ್ಲ ಎಂದು ಯುಧಿಷ್ಠಿರನು ಕೃಷ್ಣನನ್ನು ಕೇಳಿದುದು (9-13). ಆಗ ವ್ಯಾಸನು “ಪ್ರಾಯಶ್ಚಿತ್ತಗಳೆಲ್ಲವನ್ನೂ ತಿಳಿದಿರುವ ನೀನು ಹೀಗೆ ಏಕೆ ಪುನಃ ಪುನಃ ಮೋಹಗೊಳ್ಳುತ್ತಿರುವೆ?” ಎಂದು ಪ್ರಶ್ನಿಸಿದುದು (14-20).

14002001 ವೈಶಂಪಾಯನ ಉವಾಚ।
14002001a ಏವಮುಕ್ತಸ್ತು ರಾಜ್ಞಾ ಸ ಧೃತರಾಷ್ಟ್ರೇಣ ಧೀಮತಾ।
14002001c ತೂಷ್ಣೀಂ ಬಭೂವ ಮೇಧಾವೀ ತಮುವಾಚಾಥ ಕೇಶವಃ।।

ವೈಶಂಪಾಯನನು ಹೇಳಿದನು: “ಧೀಮಂತ ರಾಜಾ ಧೃತರಾಷ್ಟ್ರನ ಈ ಮಾತುಗಳನ್ನು ಕೇಳಿ ಸುಮ್ಮನಾಗಿದ್ದ ಮೇಧಾವೀ ಯುಧಿಷ್ಠಿರನಿಗೆ ಕೇಶವನು ಹೇಳಿದನು:

14002002a ಅತೀವ ಮನಸಾ ಶೋಕಃ ಕ್ರಿಯಮಾಣೋ ಜನಾಧಿಪ।
14002002c ಸಂತಾಪಯತಿ ವೈತಸ್ಯ ಪೂರ್ವಪ್ರೇತಾನ್ಪಿತಾಮಹಾನ್।।

“ಜನಾಧಿಪ! ಮನಸಾ ಅತೀವ ಶೋಕವನ್ನು ಮಾಡುವುದರಿಂದ ನೀನು ಈ ಮೊದಲೇ ತೀರಿಹೋಗಿರುವ ಪಿತಾಮಹರನ್ನು ಸಂತಾಪಗೊಳಿಸುತ್ತಿದ್ದೀಯೆ.

14002003a ಯಜಸ್ವ ವಿವಿಧೈರ್ಯಜ್ಞೈರ್ಬಹುಭಿಃ ಸ್ವಾಪ್ತದಕ್ಷಿಣೈಃ।
14002003c ದೇವಾಂಸ್ತರ್ಪಯ ಸೋಮೇನ ಸ್ವಧಯಾ ಚ ಪಿತೄನಪಿ।।

ಅನೇಕ ಆಪ್ತದಕ್ಷಿಣೆಗಳಿಂದೊಡಗೂಡಿದ ವಿವಿಧ ಯಜ್ಞಗಳನ್ನು ಮಾಡಿ ಸೋಮರಸದಿಂದ ದೇವತೆಗಳನ್ನೂ ಸ್ವಧಾರಸದಿಂದ ಪಿತೃಗಳನ್ನೂ ತೃಪ್ತಿಗೊಳಿಸು.

14002004a ತ್ವದ್ವಿಧಸ್ಯ ಮಹಾಬುದ್ಧೇ ನೈತದದ್ಯೋಪಪದ್ಯತೇ।
14002004c ವಿದಿತಂ ವೇದಿತವ್ಯಂ ತೇ ಕರ್ತವ್ಯಮಪಿ ತೇ ಕೃತಮ್।।

ಮಹಾಬುದ್ಧಿಯೇ! ಇವಕ್ಕೆ ಸಿದ್ಧತೆಗಳನ್ನು ಮಾಡುವುದಿದೆ ಎನ್ನುವುದನ್ನು ತಿಳಿದುಕೋ! ಮಾಡಬೇಕಾದುದು ಏನು ಎಂದು ನಿನಗೆ ತಿಳಿದಿದೆ ಮತ್ತು ಮಾಡಬೇಕಾದುದನ್ನು ನೀನು ಮಾಡಿದ್ದೀಯೆ ಕೂಡ!

14002005a ಶ್ರುತಾಶ್ಚ ರಾಜಧರ್ಮಾಸ್ತೇ ಭೀಷ್ಮಾದ್ಭಾಗೀರಥೀಸುತಾತ್।
14002005c ಕೃಷ್ಣದ್ವೈಪಾಯನಾಚ್ಚೈವ ನಾರದಾದ್ವಿದುರಾತ್ತಥಾ।।

ಭಾಗೀರಥೀ ಸುತ ಭೀಷ್ಮ, ಕೃಷ್ಣ ದ್ವೈಪಾಯನ, ನಾರದ ಮತ್ತು ವಿದುರರಿಂದ ರಾಜಧರ್ಮಗಳ ಕುರಿತೂ ನೀನು ಕೇಳಿದ್ದೀಯೆ.

14002006a ನೇಮಾಮರ್ಹಸಿ ಮೂಢಾನಾಂ ವೃತ್ತಿಂ ತ್ವಮನುವರ್ತಿತುಮ್।
14002006c ಪಿತೃಪೈತಾಮಹೀಂ ವೃತ್ತಿಮಾಸ್ಥಾಯ ಧುರಮುದ್ವಹ।।

ನೀನು ಮೂಡರ ಈ ವೃತ್ತಿಯನ್ನು ಅನುಸರಿಸುವುದು ಸರಿಯಲ್ಲ. ಯುದ್ಧದಲ್ಲಿ ಗೆದ್ದವನೇ! ನಿನ್ನ ಪಿತೃ-ಪಿತಾಮಹರ ವೃತ್ತಿಯನ್ನು ಅನುಸರಿಸು!

14002007a ಯುಕ್ತಂ ಹಿ ಯಶಸಾ ಕ್ಷತ್ರಂ ಸ್ವರ್ಗಂ ಪ್ರಾಪ್ತುಮಸಂಶಯಮ್।
14002007c ನ ಹಿ ಕಶ್ಚನ ಶೂರಾಣಾಂ ನಿಹತೋಽತ್ರ ಪರಾಙ್ಮುಖಃ।।

ಕ್ಷತ್ರಿಯನಿಗೆ ಯುದ್ಧದಲ್ಲಿ ಯಶಸ್ಸನ್ನು ಬಯಸುವುದಕ್ಕಿಂತ ಸ್ವರ್ಗವನ್ನು ಪಡೆಯುವ ಬಯಕೆಯೇ ಹೆಚ್ಚಿನದು ಎನ್ನುವುದರಲ್ಲಿ ಸಂಶಯವಿಲ್ಲ. ಈಗ ಸತ್ತ ಶೂರರಲ್ಲಿ ಪರಾಙ್ಮುಖರಾದವರು ಯಾರೂ ಇಲ್ಲ.

14002008a ತ್ಯಜ ಶೋಕಂ ಮಹಾರಾಜ ಭವಿತವ್ಯಂ ಹಿ ತತ್ತಥಾ।
14002008c ನ ಶಕ್ಯಾಸ್ತೇ ಪುನರ್ದ್ರಷ್ಟುಂ ತ್ವಯಾ ಹ್ಯಸ್ಮಿನ್ರಣೇ ಹತಾಃ।।

ಮಹಾರಾಜ! ನೀನು ಶೋಕವನ್ನು ಬಿಡು! ಅದು ಹಾಗೆಯೇ ಆಗಬೇಕಾಗಿತ್ತು. ಈ ರಣದಲ್ಲಿ ಹತರಾದವನ್ನು ಪುನಃ ನೀನು ನೋಡಲು ಶಕ್ಯನಿಲ್ಲ.”

14002009a ಏತಾವದುಕ್ತ್ವಾ ಗೋವಿಂದೋ ಧರ್ಮರಾಜಂ ಯುಧಿಷ್ಠಿರಮ್।
14002009c ವಿರರಾಮ ಮಹಾತೇಜಾಸ್ತಮುವಾಚ ಯುಧಿಷ್ಠಿರಃ।।

ಧರ್ಮರಾಜ ಯುಧಿಷ್ಠಿರನಿಗೆ ಹೀಗೆ ಹೇಳಿ ಗೋವಿಂದನು ಸುಮ್ಮನಾದನು. ಆಗ ಮಹಾತೇಜಸ್ವಿ ಯುಧಿಷ್ಠಿರನು ಅವನಿಗೆ ಉತ್ತರಿಸಿದನು:

14002010a ಗೋವಿಂದ ಮಯಿ ಯಾ ಪ್ರೀತಿಸ್ತವ ಸಾ ವಿದಿತಾ ಮಮ।
14002010c ಸೌಹೃದೇನ ತಥಾ ಪ್ರೇಮ್ಣಾ ಸದಾ ಮಾಮನುಕಂಪಸೇ।।

“ಗೋವಿಂದ! ನನ್ನ ಮೇಲೆ ನಿನಗೆ ಪ್ರೀತಿಯಿದೆ ಎನ್ನುವುದನ್ನು ನಾನು ತಿಳಿದಿದ್ದೇನೆ. ಸ್ನೇಹ ಮತ್ತು ಪ್ರೀತಿಗಳಿಂದ ನೀನು ಸದಾ ನನ್ನ ಮೇಲೆ ಅನುಕಂಪವನ್ನೇ ತೋರಿಸುತ್ತಿರುವೆ.

14002011a ಪ್ರಿಯಂ ತು ಮೇ ಸ್ಯಾತ್ಸುಮಹತ್ಕೃತಂ ಚಕ್ರಗದಾಧರ।
14002011c ಶ್ರೀಮನ್ಪ್ರೀತೇನ ಮನಸಾ ಸರ್ವಂ ಯಾವದನಂದನ।।
14002012a ಯದಿ ಮಾಮನುಜಾನೀಯಾದ್ಭವಾನ್ಗಂತುಂ ತಪೋವನಮ್।

ಚಕ್ರ-ಗದಾಧರ! ಯಾದವನಂದನ! ಶ್ರೀಮನ್! ನೀನೇನಾದರೂ ನನಗೆ ತಪೋವನಕ್ಕೆ ಹೋಗಲು ಅನುಮತಿಯನ್ನಿತ್ತಿದ್ದರೆ ನನಗೆ ಪ್ರೀತಿಯಾದುದೆಲ್ಲವನ್ನೂ ಮಾಡಿದಂತಾಗುತ್ತಿತ್ತು.

14002012c ನ ಹಿ ಶಾಂತಿಂ ಪ್ರಪಶ್ಯಾಮಿ ಘಾತಯಿತ್ವಾ ಪಿತಾಮಹಮ್।
14002012e ಕರ್ಣಂ ಚ ಪುರುಷವ್ಯಾಘ್ರಂ ಸಂಗ್ರಾಮೇಷ್ವಪಲಾಯಿನಮ್।।

ಪಿತಾಮಹನನ್ನು ಮತ್ತು ಸಂಗ್ರಾಮದಲ್ಲಿ ಪಲಾಯನಮಾಡದಿದ್ದ ಪುರುಷವ್ಯಾಘ್ರ ಕರ್ಣನನ್ನು ಕೊಂದು ನನಗೆ ಶಾಂತಿಯೇ ಇಲ್ಲವಾಗಿದೆ.

14002013a ಕರ್ಮಣಾ ಯೇನ ಮುಚ್ಯೇಯಮಸ್ಮಾತ್ಕ್ರೂರಾದರಿಂದಮ।
14002013c ಕರ್ಮಣಸ್ತದ್ವಿಧತ್ಸ್ವೇಹ ಯೇನ ಶುಧ್ಯತಿ ಮೇ ಮನಃ।।

ಅರಿಂದಮ! ಯಾವ ಕರ್ಮಗಳನ್ನು ಮಾಡುವುದರಿಂದ ನಾನು ಈ ಕ್ರೂರ ಪಾಪದಿಂದ ಬಿಡುಗಡೆಹೊಂದುತ್ತೇನೋ ಮತ್ತು ನನ್ನ ಮನಸ್ಸು ಶುದ್ಧಿಯಾಗುತ್ತದೆಯೋ ಆ ಕರ್ಮಗಳ ಕುರಿತು ನನಗೆ ಹೇಳು!”

14002014a ತಮೇವಂವಾದಿನಂ ವ್ಯಾಸಸ್ತತಃ ಪ್ರೋವಾಚ ಧರ್ಮವಿತ್।
14002014c ಸಾಂತ್ವಯನ್ಸುಮಹಾತೇಜಾಃ ಶುಭಂ ವಚನಮರ್ಥವತ್।।

ಕೃಷ್ಣನೊಡನೆ ಹೀಗೆ ಮಾತನಾಡುತ್ತಿದ್ದ ಅವನನ್ನು ಸಮಾಧಾನಗೊಳಿಸುತ್ತಾ ಧರ್ಮವಿದು ಸುಮಹಾತೇಜಸ್ವಿ ವ್ಯಾಸನು ಅರ್ಥವತ್ತಾದ ಈ ಶುಭ ಮಾತುಗಳನ್ನಾಡಿದನು:

14002015a ಅಕೃತಾ ತೇ ಮತಿಸ್ತಾತ ಪುನರ್ಬಾಲ್ಯೇನ ಮುಹ್ಯಸೇ।
14002015c ಕಿಮಾಕಾಶೇ ವಯಂ ಸರ್ವೇ ಪ್ರಲಪಾಮ ಮುಹುರ್ಮುಹುಃ।।

“ಮಗೂ! ನಿನ್ನ ಬುದ್ಧಿಯು ಇನ್ನೂ ಬೆಳೆದಿಲ್ಲ. ಪುನಃ ಬಾಲಕನಂತೆ ಮೋಹಕ್ಕೊಳಗಾಗುತ್ತಿದ್ದೀಯೆ. ಮಧ್ಯದಲ್ಲಿ ನಾವೆಲ್ಲರೂ ಏಕೆ ಹೀಗೆ ಪುನಃ ಪುನಃ ಪ್ರಲಾಪಮಾಡುತ್ತಿದ್ದೇವೆ!

14002016a ವಿದಿತಾಃ ಕ್ಷತ್ರಧರ್ಮಾಸ್ತೇ ಯೇಷಾಂ ಯುದ್ಧೇನ ಜೀವಿಕಾ।
14002016c ಯಥಾ ಪ್ರವೃತ್ತೋ ನೃಪತಿರ್ನಾಧಿಬಂಧೇನ ಯುಜ್ಯತೇ।।

ಯುದ್ಧದಿಂದಲೇ ಜೀವನ ನಡೆಸುವ ಕ್ಷತ್ರಿಯರ ಧರ್ಮವೆಲ್ಲವೂ ನಿನಗೆ ತಿಳಿದೇ ಇದೆ. ಹಾಗೆ ನಡೆದುಕೊಳ್ಳುವ ನೃಪತಿಯು ಈ ರೀತಿಯ ಶೋಕದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಿಲ್ಲ.

14002017a ಮೋಕ್ಷಧರ್ಮಾಶ್ಚ ನಿಖಿಲಾ ಯಾಥಾತಥ್ಯೇನ ತೇ ಶ್ರುತಾಃ।
14002017c ಅಸಕೃಚ್ಚೈವ ಸಂದೇಹಾಶ್ಚಿನ್ನಾಸ್ತೇ ಕಾಮಜಾ ಮಯಾ।।

ಮೋಕ್ಷಧರ್ಮವನ್ನೂ ಸಂಪೂರ್ಣವಾಗಿ ನೀನು ಇದ್ದಹಾಗೆ ಕೇಳಿದ್ದೀಯೆ. ನಿನಗೆ ಸಂದೇಹಗಳಿದ್ದಾಗಲೆಲ್ಲಾ ನೀನು ಬಯಸಿದಂತೆ ಎಲ್ಲವನ್ನೂ ಹೇಳಿದ್ದೇನೆ.

14002018a ಅಶ್ರದ್ದಧಾನೋ ದುರ್ಮೇಧಾ ಲುಪ್ತಸ್ಮೃತಿರಸಿ ಧ್ರುವಮ್।
14002018c ಮೈವಂ ಭವ ನ ತೇ ಯುಕ್ತಮಿದಮಜ್ಞಾನಮೀದೃಶಮ್।।

ಆದರೆ ನಿನ್ನ ದುರ್ಬುದ್ಧಿಯಿಂದಾಗಿ ನನ್ನ ಮಾತುಗಳ ಮೇಲೆ ನಿನಗೆ ಶ್ರದ್ಧೆಯೇ ಇಲ್ಲವಾಗಿದೆ. ಅಥವಾ ನಿಜವಾಗಿ ನಿನ್ನ ಸ್ಮರಣಶಕ್ತಿಯೇ ಕಳೆದುಹೋಗಿದೆ. ನೀನು ಹೀಗೆಂದೂ ಆಡಬೇಡ. ಮತ್ತು ಈ ರೀತಿ ಅಜ್ಞಾನವನ್ನು ತೋರಿಸಿಕೊಳ್ಳುವುದು ನಿನಗೆ ಸರಿಯಲ್ಲ.

14002019a ಪ್ರಾಯಶ್ಚಿತ್ತಾನಿ ಸರ್ವಾಣಿ ವಿದಿತಾನಿ ಚ ತೇಽನಘ।
14002019c ಯುದ್ಧಧರ್ಮಾಶ್ಚ ತೇ ಸರ್ವೇ ದಾನಧರ್ಮಾಶ್ಚ ತೇ ಶ್ರುತಾಃ।।

ಅನಘ! ಪ್ರಾಯಶ್ಚಿತ್ತಗಳೆಲ್ಲವೂ ನಿನಗೆ ತಿಳಿದೇ ಇದೆ. ಯುದ್ಧಧರ್ಮ ಮತ್ತು ದಾನಧರ್ಮಗಳೆಲ್ಲವನ್ನೂ ನೀನು ಕೇಳಿರುವೆ.

14002020a ಸ ಕಥಂ ಸರ್ವಧರ್ಮಜ್ಞಃ ಸರ್ವಾಗಮವಿಶಾರದಃ।
14002020c ಪರಿಮುಹ್ಯಸಿ ಭೂಯಸ್ತ್ವಮಜ್ಞಾನಾದಿವ ಭಾರತ।।

ಭಾರತ! ಸರ್ವಧರ್ಮಜ್ಞನೂ ಸರ್ವ ಆಗಮ ವಿಶಾರದನೂ ಆಗಿರುವವನು ಹೇಗೆ ತಾನೇ ಹೀಗೆ ಪುನಃ ಪುನಃ ಅಜ್ಞಾನಿಯಂತೆ ಮೋಹಗೊಳ್ಳುತ್ತಾನೆ?”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ವ್ಯಾಸವಾಕ್ಯೇ ದ್ವಿತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಎರಡನೇ ಅಧ್ಯಾಯವು.