ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 1
ಸಾರ
ಭೀಷ್ಮನಿಗೆ ಜಲತರ್ಪಣವನ್ನಿತ್ತು ಯುಧಿಷ್ಠಿರನು ಶೋಕಾರ್ತನಾಗಿ ಕುಸಿದು ಬೀಳುವುದು (1-5). ಧೃತರಾಷ್ಟ್ರನು ಯುಧಿಷ್ಠಿರನನ್ನು ಸಂತೈಸುವುದು (6-19).
14001001 ವೈಶಂಪಾಯನ ಉವಾಚ।
14001001a ಕೃತೋದಕಂ ತು ರಾಜಾನಂ ಧೃತರಾಷ್ಟ್ರಂ ಯುಧಿಷ್ಠಿರಃ।
14001001c ಪುರಸ್ಕೃತ್ಯ ಮಹಾಬಾಹುರುತ್ತತಾರಾಕುಲೇಂದ್ರಿಯಃ।।
ವೈಶಂಪಾಯನನು ಹೇಳಿದನು: “ಮಹಾಬಾಹು ಯುಧಿಷ್ಠಿರನು ಭೀಷ್ಮನಿಗೆ ಜಲತರ್ಪಣವನ್ನಿತ್ತು ರಾಜಾ ಧೃತರಾಷ್ಟ್ರನನ್ನು ಮುಂದೆಮಾಡಿಕೊಂಡು ವ್ಯಾಕುಲಚಿತ್ತನಾಗಿ ಗಂಗಾನದಿಯ ತಟವನ್ನೇರಿದನು.
14001002a ಉತ್ತೀರ್ಯ ಚ ಮಹೀಪಾಲೋ ಬಾಷ್ಪವ್ಯಾಕುಲಲೋಚನಃ।
14001002c ಪಪಾತ ತೀರೇ ಗಂಗಾಯಾ ವ್ಯಾಧವಿದ್ಧ ಇವ ದ್ವಿಪಃ।।
ಮೇಲೇರುತ್ತಲೇ ಬಾಷ್ಪವ್ಯಾಕುಲಕಣ್ಣುಗಳ ಆ ಮಹೀಪಾಲನು ಬೇಟೆಗಾರನಿಂದ ಹೊಡೆಯಲ್ಪಟ್ಟ ಆನೆಯಂತೆ ಗಂಗಾನದಿಯ ತೀರದಲ್ಲಿಯೇ ಬಿದ್ದುಬಿಟ್ಟನು.
14001003a ತಂ ಸೀದಮಾನಂ ಜಗ್ರಾಹ ಭೀಮಃ ಕೃಷ್ಣೇನ ಚೋದಿತಃ।
14001003c ಮೈವಮಿತ್ಯಬ್ರವೀಚ್ಚೈನಂ ಕೃಷ್ಣಃ ಪರಬಲಾರ್ದನಃ।।
ಕುಸಿಯುತ್ತಿದ್ದ ಅವನನ್ನು ಕೃಷ್ಣನ ಹೇಳಿಕೆಯಂತೆ ಭೀಮನು ಹಿಡಿದುಕೊಂಡನು. ಪರಬಲಾರ್ದನ ಕೃಷ್ಣನು “ಹೀಗಾಗಬೇಡ!” ಎಂದು ಯುಧಿಷ್ಠಿರನಿಗೆ ಹೇಳಿದನು.
14001004a ತಮಾರ್ತಂ ಪತಿತಂ ಭೂಮೌ ನಿಶ್ವಸಂತಂ ಪುನಃ ಪುನಃ।
14001004c ದದೃಶುಃ ಪಾಂಡವಾ ರಾಜನ್ಧರ್ಮಾತ್ಮಾನಂ ಯುಧಿಷ್ಠಿರಮ್।।
ರಾಜನ್! ಆರ್ತನಾಗಿ ಪುನಃ ಪುನಃ ನಿಟ್ಟುಸಿರು ಬಿಡುತ್ತಾ ನೆಲದ ಮೇಲೆ ಬಿದ್ದ ಧರ್ಮಾತ್ಮ ಯುಧಿಷ್ಠಿರನನ್ನು ಪಾಂಡವರು ನೋಡಿದರು.
14001005a ತಂ ದೃಷ್ಟ್ವಾ ದೀನಮನಸಂ ಗತಸತ್ತ್ವಂ ಜನೇಶ್ವರಮ್।
14001005c ಭೂಯಃ ಶೋಕಸಮಾವಿಷ್ಟಾಃ ಪಾಂಡವಾಃ ಸಮುಪಾವಿಶನ್।।
ಸತ್ವವನ್ನು ಕಳೆದುಕೊಂಡು ದೀನಮನಸ್ಕನಾಗಿದ್ದ ಜನೇಶ್ವರನನ್ನು ನೋಡಿ ಇನ್ನೂ ಶೋಕಸಮಾವಿಷ್ಟರಾಗಿ ಪಾಂಡವರು ಅವನ ಬಳಿಯಲ್ಲಿಯೇ ಕುಳಿತುಕೊಂಡರು.
14001006a ರಾಜಾ ಚ ಧೃತರಾಷ್ಟ್ರಸ್ತಮುಪಾಸೀನೋ ಮಹಾಭುಜಃ।
14001006c ವಾಕ್ಯಮಾಹ ಮಹಾಪ್ರಾಜ್ಞೋ ಮಹಾಶೋಕಪ್ರಪೀಡಿತಮ್।।
ಆಗ ಮಹಾಭುಜ ಮಹಾಪ್ರಾಜ್ಞ ರಾಜಾ ಧೃತರಾಷ್ಟ್ರನು ಮಹಾಶೋಕದಿಂದ ಪೀಡಿತನಾಗಿ ಕುಳಿತಿದ್ದ ಯುಧಿಷ್ಠಿರನಿಗೆ ಹೇಳಿದನು:
14001007a ಉತ್ತಿಷ್ಠ ಕುರುಶಾರ್ದೂಲ ಕುರು ಕಾರ್ಯಮನಂತರಮ್।
14001007c ಕ್ಷತ್ರಧರ್ಮೇಣ ಕೌರವ್ಯ ಜಿತೇಯಮವನಿಸ್ತ್ವಯಾ।।
“ಕುರುಶಾರ್ದೂಲ! ಎದ್ದೇಳು! ನಂತರದ ಕಾರ್ಯಗಳನ್ನು ಮಾಡುವವನಾಗು! ಕೌರವ್ಯ! ಕ್ಷತ್ರಧರ್ಮದಿಂದಲೇ ನೀನು ಈ ಅವನಿಯನ್ನು ಗೆದ್ದಿರುವೆ!
14001008a ತಾಂ ಭುಂಕ್ಷ್ವ ಭ್ರಾತೃಭಿಃ ಸಾರ್ಧಂ ಸುಹೃದ್ಭಿಶ್ಚ ಜನೇಶ್ವರ।
14001008c ನ ಶೋಚಿತವ್ಯಂ ಪಶ್ಯಾಮಿ ತ್ವಯಾ ಧರ್ಮಭೃತಾಂ ವರ।।
ಜನೇಶ್ವರ! ಸಹೋದರರು ಮತ್ತು ಸ್ನೇಹಿತರೊಂದಿಗೆ ಅದನ್ನು ಭೋಗಿಸು! ಧರ್ಮಭೃತರಲ್ಲಿ ಶ್ರೇಷ್ಠನೇ! ನಿನ್ನ ಈ ಶೋಕಕ್ಕೆ ಯಾವ ಕಾರಣವನ್ನೂ ನಾನು ಕಾಣುತ್ತಿಲ್ಲ.
14001009a ಶೋಚಿತವ್ಯಂ ಮಯಾ ಚೈವ ಗಾಂಧಾರ್ಯಾ ಚ ವಿಶಾಂ ಪತೇ।
14001009c ಪುತ್ರೈರ್ವಿಹೀನೋ ರಾಜ್ಯೇನ ಸ್ವಪ್ನಲಬ್ಧಧನೋ ಯಥಾ।।
ವಿಶಾಂಪತೇ! ಕನಸಿನಲ್ಲಿ ಕಂಡ ಧನದಂತೆ ಪುತ್ರರನ್ನೂ ರಾಜ್ಯವನ್ನೂ ಕಳೆದುಕೊಂಡು ನಾನು ಮತ್ತು ಗಾಂಧಾರಿ ಶೋಕಿಸಬೇಕಾಗಿದೆ.
14001010a ಅಶ್ರುತ್ವಾ ಹಿತಕಾಮಸ್ಯ ವಿದುರಸ್ಯ ಮಹಾತ್ಮನಃ।
14001010c ವಾಕ್ಯಾನಿ ಸುಮಹಾರ್ಥಾನಿ ಪರಿತಪ್ಯಾಮಿ ದುರ್ಮತಿಃ।।
ನನ್ನ ಹಿತವನ್ನೇ ಬಯಸಿದ್ದ ಮಹಾತ್ಮ ವಿದುರನ ಮಹಾ ಅರ್ಥಗಳಿದ್ದ ಮಾತುಗಳನ್ನು ಕೇಳದೇ ದುರ್ಮತಿಯಾದ ನಾನು ಪರಿತಪಿಸುತ್ತಿದ್ದೇನೆ.
14001011a ಉಕ್ತವಾನೇಷ ಮಾಂ ಪೂರ್ವಂ ಧರ್ಮಾತ್ಮಾ ದಿವ್ಯದರ್ಶನಃ।
14001011c ದುರ್ಯೋಧನಾಪರಾಧೇನ ಕುಲಂ ತೇ ವಿನಶಿಷ್ಯತಿ।।
ಆ ಧರ್ಮಾತ್ಮಾ ದಿವ್ಯದರ್ಶನನು ನನಗೆ ಹಿಂದೆಯೇ ಈ ರೀತಿ ಹೇಳಿದ್ದನು: “ದುರ್ಯೋಧನನ ಅಪರಾಧದಿಂದ ನಿನ್ನ ಕುಲವು ನಾಶವಾಗುತ್ತದೆ.
14001012a ಸ್ವಸ್ತಿ ಚೇದಿಚ್ಚಸೇ ರಾಜನ್ಕುಲಸ್ಯಾತ್ಮನ ಏವ ಚ।
14001012c ವಧ್ಯತಾಮೇಷ ದುಷ್ಟಾತ್ಮಾ ಮಂದೋ ರಾಜಾ ಸುಯೋಧನಃ।।
ರಾಜನ್! ನಿನ್ನ ಮತ್ತು ನಿನ್ನ ಕುಲದ ಒಳಿತನ್ನು ಬಯಸುವೆಯಾದರೆ ಈ ಮೂಢ ದುಷ್ಟಾತ್ಮ ರಾಜಾ ಸುಯೋಧನನನ್ನು ವಧಿಸು.
14001013a ಕರ್ಣಶ್ಚ ಶಕುನಿಶ್ಚೈವ ಮೈನಂ ಪಶ್ಯತು ಕರ್ಹಿ ಚಿತ್।
14001013c ದ್ಯೂತಸಂಪಾತಮಪ್ಯೇಷಾಮಪ್ರಮತ್ತೋ ನಿವಾರಯ।।
ಕರ್ಣ-ಶಕುನಿಯರು ಅವನನ್ನು ಎಂದೂ ನೋಡದಂತೆಯಾದರೂ ಮಾಡು. ಅಥವಾ ಅವರು ದ್ಯೂತಕ್ಕೆ ಸಿಲುಕಿ ಅಪ್ರಮತ್ತರಾಗುವುದನ್ನಾದರೂ ತಡೆ!
14001014a ಅಭಿಷೇಚಯ ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಮ್।
14001014c ಸ ಪಾಲಯಿಷ್ಯತಿ ವಶೀ ಧರ್ಮೇಣ ಪೃಥಿವೀಮಿಮಾಮ್।।
ಧರ್ಮಾತ್ಮ ಯುಧಿಷ್ಠಿರನನ್ನು ರಾಜನನ್ನಾಗಿ ಅಭಿಷೇಕಿಸು. ಅವನು ಧರ್ಮವನ್ನು ಅನುಸರಿಸಿ ಈ ಪೃಥ್ವಿಯನ್ನು ಪಾಲಿಸುತ್ತಾನೆ!
14001015a ಅಥ ನೇಚ್ಚಸಿ ರಾಜಾನಂ ಕುಂತೀಪುತ್ರಂ ಯುಧಿಷ್ಠಿರಮ್।
14001015c ಮೇಢೀಭೂತಃ ಸ್ವಯಂ ರಾಜ್ಯಂ ಪ್ರತಿಗೃಹ್ಣೀಷ್ವ ಪಾರ್ಥಿವ।।
ಪಾರ್ಥಿವ! ಒಂದುವೇಳೆ ನಿನಗೆ ಕುಂತೀಪುತ್ರ ಯುಧಿಷ್ಠಿರನು ರಾಜನಾಗುವುದು ಇಷ್ಟವಿರದೇ ಇದ್ದರೆ ನೀನೇ ಮೇಟಿಯ ಕಂಬದಂತವನಾಗಿ ರಾಜ್ಯವನ್ನು ಸ್ವೀಕರಿಸು!
14001016a ಸಮಂ ಸರ್ವೇಷು ಭೂತೇಷು ವರ್ತಮಾನಂ ನರಾಧಿಪ।
14001016c ಅನುಜೀವಂತು ಸರ್ವೇ ತ್ವಾಂ ಜ್ಞಾತಯೋ ಜ್ಞಾತಿವರ್ಧನ।।
ನರಾಧಿಪ! ಸರ್ವಭೂತಗಳಲ್ಲಿಯೂ ಸಮನಾಗಿ ವರ್ತಿಸುವ ನಿನ್ನನ್ನು ಅನುಸರಿಸಿ ನಿನ್ನ ಎಲ್ಲ ಜ್ಞಾತಿಬಾಂಧವರೂ ವರ್ಧಿಸಲಿ!”
14001017a ಏವಂ ಬ್ರುವತಿ ಕೌಂತೇಯ ವಿದುರೇ ದೀರ್ಘದರ್ಶಿನಿ।
14001017c ದುರ್ಯೋಧನಮಹಂ ಪಾಪಮನ್ವವರ್ತಂ ವೃಥಾಮತಿಃ।।
ಕೌಂತೇಯ! ದೀರ್ಘದರ್ಶಿನಿಯಾದ ವಿದುರನು ಹೀಗೆ ಹೇಳಿದ್ದರೂ ವೃಥಾಮತಿಯಾದ ನಾನು ಪಾಪಿ ದುರ್ಯೋಧನನನ್ನು ಅನುಸರಿಸಿದೆ.
14001018a ಅಶ್ರುತ್ವಾ ಹ್ಯಸ್ಯ ವೀರಸ್ಯ ವಾಕ್ಯಾನಿ ಮಧುರಾಣ್ಯಹಮ್।
14001018c ಫಲಂ ಪ್ರಾಪ್ಯ ಮಹದ್ದುಃಖಂ ನಿಮಗ್ನಃ ಶೋಕಸಾಗರೇ।।
ಆ ವೀರನ ಮಧುರ ಮಾತುಗಳನ್ನು ಕೇಳದೇ ಈ ಮಹಾದುಃಖವನ್ನು ಪಡೆದು ಶೋಕಸಾಗರದಲ್ಲಿ ಮುಳುಗಿ ಹೋಗಿದ್ದೇನೆ.
14001019a ವೃದ್ಧೌ ಹಿ ತೇ ಸ್ವಃ ಪಿತರೌ ಪಶ್ಯಾವಾಂ ದುಃಖಿತೌ ನೃಪ।
14001019c ನ ಶೋಚಿತವ್ಯಂ ಭವತಾ ಪಶ್ಯಾಮೀಹ ಜನಾಧಿಪ।।
ನೃಪ! ನರಾಧಿಪ! ದುಃಖದಲ್ಲಿರುವ ನಿನ್ನ ಈ ವೃದ್ಧ ತಂದೆ-ತಾಯಿಯರನ್ನು ನೋಡು. ನಮ್ಮನ್ನು ನೋಡಿ ನೀನು ಶೋಕಿಸಬಾರದು!””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಯುಧಿಷ್ಠಿರಸಾಂತ್ವನೇ ಪ್ರಥಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಯುಧಿಷ್ಠಿರಸಾಂತ್ವನ ಎನ್ನುವ ಮೊದಲನೇ ಅಧ್ಯಾಯವು.