154: ದಾನಧರ್ಮಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ಭೀಷ್ಮಸ್ವರ್ಗಾರೋಹಣ ಪರ್ವ

ಅಧ್ಯಾಯ 154

ಸಾರ

ಭೀಷ್ಮನ ಪ್ರಾಣತ್ಯಾಗ (1-7). ಭೀಷ್ಮನ ದಹನ ಸಂಸ್ಕಾರ ಮತ್ತು ಜಲತರ್ಪಣ (8-17). ದುಃಖಿಸುತ್ತಿದ್ದ ಗಂಗೆಯನ್ನು ವಾಸುದೇವ ಕೃಷ್ಣನು ಸಮಾಧಾನಪಡಿಸಿದ್ದುದು (18-31).

13154001 ವೈಶಂಪಾಯನ ಉವಾಚ।
13154001a ಏವಮುಕ್ತ್ವಾ ಕುರೂನ್ ಸರ್ವಾನ್ ಭೀಷ್ಮಃ ಶಾಂತನವಸ್ತದಾ।
13154001c ತೂಷ್ಣೀಂ ಬಭೂವ ಕೌರವ್ಯಃ ಸ ಮುಹೂರ್ತಮರಿಂದಮ।।

ವೈಶಂಪಾಯನನು ಹೇಳಿದನು: “ಅರಿಂದಮ! ಕುರುಗಳಿಗೆಲ್ಲರಿಗೂ ಹೀಗೆ ಹೇಳಿ ಕೌರವ್ಯ ಭೀಷ್ಮ ಶಾಂತನವನು ಮುಹೂರ್ತಕಾಲ ಸುಮ್ಮನಾದನು.

13154002a ಧಾರಯಾಮಾಸ ಚಾತ್ಮಾನಂ ಧಾರಣಾಸು ಯಥಾಕ್ರಮಮ್।
13154002c ತಸ್ಯೋರ್ಧ್ವಮಗಮನ್ ಪ್ರಾಣಾಃ ಸಂನಿರುದ್ಧಾ ಮಹಾತ್ಮನಃ।।

ಆ ಮಹಾತ್ಮನು ಆತ್ಮನನ್ನು ಯಥಾಕ್ರಮವಾಗಿ ಧಾರಣೆ1ಗಳಲ್ಲಿ ಸ್ಥಾಪಿಸತೊಡಗಿದನು. ಆಗ ಅವನ ಸಂನಿರುದ್ಧ ಪ್ರಾಣಗಳು ಊರ್ಧ್ವಮುಖವಾಗಿ ಹೋಗತೊಡಗಿದವು.

13154003a ಇದಮಾಶ್ಚರ್ಯಮಾಸೀಚ್ಚ ಮಧ್ಯೇ ತೇಷಾಂ ಮಹಾತ್ಮನಾಮ್।
13154003c ಯದ್ಯನ್ ಮುಂಚತಿ ಗಾತ್ರಾಣಾಂ ಸ ಶಂತನುಸುತಸ್ತದಾ।
13154003e ತತ್ತದ್ವಿಶಲ್ಯಂ ಭವತಿ ಯೋಗಯುಕ್ತಸ್ಯ ತಸ್ಯ ವೈ।।

ಆ ಮಹಾತ್ಮರ ಮಧ್ಯೆ ಈ ಆಶ್ಚರ್ಯವು ನಡೆಯಿತು. ಶಂತನು ಸುತನು ಶರೀರದ ಯಾವ ಯಾವ ಅಂಗಾಂಗಗಳಲ್ಲಿ ಯೋಗಯುಕ್ತನಾಗುತ್ತಿದ್ದನೋ ಆ ಅಂಗಾಂಗಗಳಿಂದ ಚುಚ್ಚಿದ್ದ ಶರಗಳು ಕೆಳಗೆ ಬೀಳುತ್ತಿದ್ದವು.

13154004a ಕ್ಷಣೇನ ಪ್ರೇಕ್ಷತಾಂ ತೇಷಾಂ ವಿಶಲ್ಯಃ ಸೋಽಭವತ್ತದಾ।।
13154004c ತಂ ದೃಷ್ಟ್ವಾ ವಿಸ್ಮಿತಾಃ ಸರ್ವೇ ವಾಸುದೇವಪುರೋಗಮಾಃ।
13154004e ಸಹ ತೈರ್ಮುನಿಭಿಃ ಸರ್ವೈಸ್ತದಾ ವ್ಯಾಸಾದಿಭಿರ್ನೃಪ।।

ಅವರೆಲ್ಲರೂ ನೋಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಅವನು ವಿಶಲ್ಯ (ಬಾಣಗಳು ಚುಚ್ಚದೇ ಇರುವವನು) ನಾದನು. ನೃಪ! ಅದನ್ನು ನೋಡಿದ, ವಾಸುದೇವನೇ ಮೊದಲಾಗಿ ವ್ಯಾಸಾದಿ ಸರ್ವ ಮುನಿಗಳೂ ಕೂಡಿ ಎಲ್ಲರೂ ವಿಸ್ಮಿತರಾದರು.

13154005a ಸಂನಿರುದ್ಧಸ್ತು ತೇನಾತ್ಮಾ ಸರ್ವೇಷ್ವಾಯತನೇಷು ವೈ।
13154005c ಜಗಾಮ ಭಿತ್ತ್ವಾ ಮೂರ್ಧಾನಂ ದಿವಮಭ್ಯುತ್ಪಪಾತ ಚ।।

ಎಲ್ಲ ದ್ವಾರಗಳಲ್ಲಿಯೂ ತಡೆಯಲ್ಪಟ್ಟ ಅವನ ಆತ್ಮವು ನೆತ್ತಿಯ ಬ್ರಹ್ಮರಂಧ್ರವನ್ನು ಭೇದಿಸಿಕೊಂಡು ದಿವಕ್ಕೆ ಹಾರಿಹೋಯಿತು.

13154006a ಮಹೋಲ್ಕೇವ ಚ ಭೀಷ್ಮಸ್ಯ ಮೂರ್ಧದೇಶಾಜ್ಜನಾಧಿಪ।
13154006c ನಿಃಸೃತ್ಯಾಕಾಶಮಾವಿಶ್ಯ ಕ್ಷಣೇನಾಂತರಧೀಯತ।।

ಜನಾಧಿಪ! ಪ್ರಾಣವು ಭೀಷ್ಮನ ನೆತ್ತಿಯಿಂದ ಮಹಾಉಲ್ಕೆಯಂತೆ ಹೊರಟು ಆಕಾಶವನ್ನು ಸೇರಿ ಕ್ಷಣಾಂತರದಲ್ಲಿ ಅಂತರ್ಧಾನವಾಯಿತು.

13154007a ಏವಂ ಸ ನೃಪಶಾರ್ದೂಲ ನೃಪಃ ಶಾಂತನವಸ್ತದಾ।
13154007c ಸಮಯುಜ್ಯತ ಲೋಕೈಃ ಸ್ವೈರ್ಭರತಾನಾಂ ಕುಲೋದ್ವಹಃ।।

ನೃಪಶಾರ್ದೂಲ! ಹೀಗೆ ನೃಪ ಶಾಂತನವ, ಭರತರ ಕುಲೋದ್ವಹನು ತನ್ನದೇ ಲೋಕಗಳಲ್ಲಿ ಸೇರಿಕೊಂಡನು.

13154008a ತತಸ್ತ್ವಾದಾಯ ದಾರೂಣಿ ಗಂಧಾಂಶ್ಚ ವಿವಿಧಾನ್ ಬಹೂನ್।
13154008c ಚಿತಾಂ ಚಕ್ರುರ್ಮಹಾತ್ಮಾನಃ ಪಾಂಡವಾ ವಿದುರಸ್ತಥಾ।
13154008e ಯುಯುತ್ಸುಶ್ಚಾಪಿ ಕೌರವ್ಯಃ ಪ್ರೇಕ್ಷಕಾಸ್ತ್ವಿತರೇಽಭವನ್।।

ಅನಂತರ ಮಹಾತ್ಮ ಪಾಂಡವರು, ವಿದುರ ಮತ್ತು ಕೌರವ್ಯ ಯುಯುತ್ಸುವು ಕಟ್ಟಿಗೆಗಳನ್ನು ಮತ್ತು ಅನೇಕ ವಿಧದ ಗಂಧಗಳನ್ನು ತಂದು ಚಿತೆಯನ್ನು ಸಿದ್ಧಪಡಿಸಿದರು. ಇತರರು ಪ್ರೇಕ್ಷಕರಾಗಿದ್ದರು.

13154009a ಯುಧಿಷ್ಠಿರಸ್ತು ಗಾಂಗೇಯಂ ವಿದುರಶ್ಚ ಮಹಾಮತಿಃ।।
13154009c ಚಾದಯಾಮಾಸತುರುಭೌ ಕ್ಷೌಮೈರ್ಮಾಲ್ಯೈಶ್ಚ ಕೌರವಮ್।।

ಯುಧಿಷ್ಠಿರ ಮತ್ತು ಮಹಾಮತಿ ವಿದುರರು ರೇಷ್ಮೆಯ ವಸ್ತ್ರಗಳಿಂದಲೂ ಪುಷ್ಪಮಾಲೆಗಳಿಂದಲೂ ಕೌರವ ಗಾಂಗೇಯನನ್ನು ಆಚ್ಚಾದಿಸಿ ಚಿತೆಯ ಮೇಲೇರಿಸಿದರು.

13154010a ಧಾರಯಾಮಾಸ ತಸ್ಯಾಥ ಯುಯುತ್ಸುಶ್ಚತ್ರಮುತ್ತಮಮ್।
13154010c ಚಾಮರವ್ಯಜನೇ ಶುಭ್ರೇ ಭೀಮಸೇನಾರ್ಜುನಾವುಭೌ।
13154010e ಉಷ್ಣೀಷೇ ಪರ್ಯಗೃಹ್ಣೀತಾಂ ಮಾದ್ರೀಪುತ್ರಾವುಭೌ ತದಾ।।

ಯುಯುತ್ಸುವು ಅವನ ಮೇಲೆ ಉತ್ತಮ ಚತ್ರವನ್ನು ಹಿಡಿದನು. ಭೀಮಸೇನ-ಅರ್ಜುನರು ಶುಭ್ರ ಚಾಮರಗಳನ್ನು ಬೀಸಿದರು. ಮಾದ್ರೀಪುತ್ರರೀರ್ವರು ಕಿರೀಟವನ್ನು ಅವನ ತಲೆಯ ಕಡೆ ಇಟ್ಟರು.

13154011a ಸ್ತ್ರಿಯಃ ಕೌರವನಾಥಸ್ಯ ಭೀಷ್ಮಂ ಕುರುಕುಲೋದ್ಭವಮ್।
13154011c ತಾಲವೃಂತಾನ್ಯುಪಾದಾಯ ಪರ್ಯವೀಜನ್ ಸಮಂತತಃ।।

ಸ್ತ್ರೀಯರು ತಾಲಪತ್ರದ ಬೀಸಣಿಗೆಯನ್ನು ಹಿಡಿದು ಕುರುಕುಲೋದ್ಭವ ಕೌರವ ನಾಥ ಭೀಷ್ಮನ ಸುತ್ತಲೂ ಬೀಸತೊಡಗಿದರು.

13154012a ತತೋಽಸ್ಯ ವಿಧಿವಚ್ಚಕ್ರುಃ ಪಿತೃಮೇಧಂ ಮಹಾತ್ಮನಃ।
13154012c ಯಾಜಕಾ ಜುಹುವುಶ್ಚಾಗ್ನಿಂ ಜಗುಃ ಸಾಮಾನಿ ಸಾಮಗಾಃ।।

ಅನಂತರ ಆ ಮಹಾತ್ಮನ ಪಿತೃಮೇಧ ಸಂಸ್ಕಾರವು ವಿಧಿವತ್ತಾಗಿ ನಡೆಯಿತು. ಯಾಜಕರು ಅಗ್ನಿಯಲ್ಲಿ ಆಹುತಿಗಳನ್ನಿತ್ತರು. ಸಾಮಗರು ಸಾಮಗಳನ್ನು ಹಾಡಿದರು.

13154013a ತತಶ್ಚಂದನಕಾಷ್ಠೈಶ್ಚ ತಥಾ ಕಾಲೇಯಕೈರಪಿ।
13154013c ಕಾಲಾಗರುಪ್ರಭೃತಿಭಿರ್ಗಂಧೈಶ್ಚೋಚ್ಚಾವಚೈಸ್ತಥಾ।।
13154014a ಸಮವಚ್ಚಾದ್ಯ ಗಾಂಗೇಯಂ ಪ್ರಜ್ವಾಲ್ಯ ಚ ಹುತಾಶನಮ್।
13154014c ಅಪಸವ್ಯಮಕುರ್ವಂತ ಧೃತರಾಷ್ಟ್ರಮುಖಾ ನೃಪಾಃ।।

ಅನಂತರ ಚಂದನ ಮತ್ತು ಕಪ್ಪುಚಂದನ ಕಾಷ್ಠಗಳು ಹಾಗು ಕಾಲಾಗರುವೇ ಮೊದಲಾದ ಉತ್ತಮ ಸುಗಂಧದ್ರವ್ಯಗಳಿಂದ ಗಾಂಗೇಯನನ್ನು ಮುಚ್ಚಿ ಅಗ್ನಿಯನ್ನು ಪ್ರಜ್ವಲಿಸಿ, ಧೃತರಾಷ್ಟ್ರ ಮುಖ್ಯ ನೃಪರು ಅಪಸವ್ಯವನ್ನು ಮಾಡಿದರು.

13154015a ಸಂಸ್ಕೃತ್ಯ ಚ ಕುರುಶ್ರೇಷ್ಠಂ ಗಾಂಗೇಯಂ ಕುರುಸತ್ತಮಾಃ।
13154015c ಜಗ್ಮುರ್ಭಾಗೀರಥೀತೀರಮೃಷಿಜುಷ್ಟಂ ಕುರೂದ್ವಹಾಃ।।

ಕುರುಶ್ರೇಷ್ಠ ಗಾಂಗೇಯನಿಗೆ ಈ ರೀತಿ ಸಂಸ್ಕಾರವನ್ನೆಸಗಿ ಕುರೂದ್ವಹ ಕುರುಸತ್ತಮರು ಋಷಿಜುಷ್ಟ ಭಾಗೀರಥೀ ತೀರಕ್ಕೆ ಹೋದರು.

13154016a ಅನುಗಮ್ಯಮಾನಾ ವ್ಯಾಸೇನ ನಾರದೇನಾಸಿತೇನ ಚ।
13154016c ಕೃಷ್ಣೇನ ಭರತಸ್ತ್ರೀಭಿರ್ಯೇ ಚ ಪೌರಾಃ ಸಮಾಗತಾಃ।।

ಅಲ್ಲಿ ಸೇರಿದ್ದ ವ್ಯಾಸ, ನಾರದ, ಅಸಿತ, ಕೃಷ್ಣ, ಭರತ ಸ್ತ್ರೀಯರು ಮತ್ತು ಪೌರ ಜನರು ಅವರನ್ನು ಅನುಸರಿಸಿ ಹೋದರು.

13154017a ಉದಕಂ ಚಕ್ರಿರೇ ಚೈವ ಗಾಂಗೇಯಸ್ಯ ಮಹಾತ್ಮನಃ।
13154017c ವಿಧಿವತ್ಕ್ಷತ್ರಿಯಶ್ರೇಷ್ಠಾಃ ಸ ಚ ಸರ್ವೋ ಜನಸ್ತದಾ।।

ಆ ಕ್ಷತ್ರಿಯ ಶ್ರೇಷ್ಠರೂ ಎಲ್ಲ ಜನರೂ ವಿಧಿವತ್ತಾಗಿ ಮಹಾತ್ಮ ಗಾಂಗೇಯನ ಉದಕ ಕ್ರಿಯಯನ್ನು ನಡೆಸಿದರು.

13154018a ತತೋ ಭಾಗೀರಥೀ ದೇವೀ ತನಯಸ್ಯೋದಕೇ ಕೃತೇ।
13154018c ಉತ್ಥಾಯ ಸಲಿಲಾತ್ತಸ್ಮಾದ್ರುದತೀ ಶೋಕಲಾಲಸಾ।।

ತನ್ನ ಮಗನ ಉದಕ ಕ್ರಿಯೆಗಳು ಮುಗಿಯಲು ದೇವೀ ಭಾಗೀರಥಿಯು ಶೋಕಲಾಲಸಳಾಗಿ ರೋದಿಸುತ್ತಾ ನೀರಿನಿಂದ ಮೇಲೆದ್ದಳು. 13154019a ಪರಿದೇವಯತೀ ತತ್ರ ಕೌರವಾನಭ್ಯಭಾಷತ।

13154019c ನಿಬೋಧತ ಯಥಾವೃತ್ತಮುಚ್ಯಮಾನಂ ಮಯಾನಘಾಃ।।

ಪರಿವೇದಿಸುತ್ತಿರುವ ಅವಳು ಕೌರವರಿಗೆ ಹೇಳಿದಳು: “ಅನಘರೇ! ನಾನು ಈಗ ಹೇಳುವುದನ್ನು ಕೇಳಿ!

13154020a ರಾಜವೃತ್ತೇನ ಸಂಪನ್ನಃ ಪ್ರಜ್ಞಯಾಭಿಜನೇನ ಚ।
13154020c ಸತ್ಕರ್ತಾ ಕುರುವೃದ್ಧಾನಾಂ ಪಿತೃಭಕ್ತೋ ದೃಢವ್ರತಃ।।

ಇವನು ರಾಜವೃತ್ತಿಯಿಂದ ಸಂಪನ್ನನಾಗಿದ್ದನು. ಪ್ರಜ್ಞಾವಂತನಾಗಿದ್ದನು. ಉತ್ತಮ ಕುಲದಲ್ಲಿ ಜನಿಸಿದ್ದನು. ದೃಢವ್ರತನಾಗಿ ಕುರುವೃದ್ಧರನ್ನು ಸತ್ಕರಿಸಿದನು. ಪಿತೃಭಕ್ತನಾಗಿದ್ದನು.

13154021a ಜಾಮದಗ್ನ್ಯೇನ ರಾಮೇಣ ಪುರಾ ಯೋ ನ ಪರಾಜಿತಃ।
13154021c ದಿವ್ಯೈರಸ್ತ್ರೈರ್ಮಹಾವೀರ್ಯಃ ಸ ಹತೋಽದ್ಯ ಶಿಖಂಡಿನಾ।।

ಹಿಂದೆ ಜಾಮದಗ್ನಿ ರಾಮನ ದಿವ್ಯಾಸ್ತ್ರಗಳಿಂದಲೂ ಪರಾಜಿತನಾಗಿರದಿದ್ದ ಈ ಮಹಾವೀರ್ಯನು ಇಂದು ಶಿಖಂಡಿಯಿಂದ ಹತನಾದನು.

13154022a ಅಶ್ಮಸಾರಮಯಂ ನೂನಂ ಹೃದಯಂ ಮಮ ಪಾರ್ಥಿವಾಃ।
13154022c ಅಪಶ್ಯಂತ್ಯಾಃ ಪ್ರಿಯಂ ಪುತ್ರಂ ಯತ್ರ ದೀರ್ಯತಿ ಮೇಽದ್ಯ ವೈ।।

ಪಾರ್ಥಿವರೇ! ನಿಶ್ಚಯವಾಗಿಯೂ ನನ್ನ ಹೃದಯವು ಲೋಹದಿಂದ ಮಾಡಲ್ಪಟ್ಟಿದೆ! ನನ್ನ ಪ್ರಿಯಪುತ್ರನನ್ನು ಕಳೆದುಕೊಂಡೂ ನನ್ನ ಹೃದಯವು ಇಂದು ಒಡೆಯದೇ ಹಾಗೆಯೇ ಇದೆ!

13154023a ಸಮೇತಂ ಪಾರ್ಥಿವಂ ಕ್ಷತ್ರಂ ಕಾಶಿಪುರ್ಯಾಂ ಸ್ವಯಂವರೇ।
13154023c ವಿಜಿತ್ಯೈಕರಥೇನಾಜೌ ಕನ್ಯಾಸ್ತಾ ಯೋ ಜಹಾರ ಹ।।

ಕಾಶೀಪುರಿಯ ಸ್ವಯಂವರದಲ್ಲಿ ಸೇರಿದ್ದ ಕ್ಷತ್ರಿಯ ರಾಜರನ್ನು ಏಕರಥನಾಗಿ ಸೋಲಿಸಿ ಆ ಕನ್ಯೆಯರನ್ನು ಇವನು ಅಪಹರಿಸಿದ್ದನು.

13154024a ಯಸ್ಯ ನಾಸ್ತಿ ಬಲೇ ತುಲ್ಯಃ ಪೃಥಿವ್ಯಾಮಪಿ ಕಶ್ಚನ।
13154024c ಹತಂ ಶಿಖಂಡಿನಾ ಶ್ರುತ್ವಾ ಯನ್ನ ದೀರ್ಯತಿ ಮೇ ಮನಃ।।

ಭೂಮಿಯ ಮೇಲೆ ಇವನ ಸಮನಾದ ಬಲಶಾಲಿಯು ಯಾರೂ ಇಲ್ಲದಿರುವಾಗ ಇವನು ಶಿಖಂಡಿಯಿಂದ ಹತನಾದನೆಂದು ಕೇಳಿ ನನ್ನ ಮನಸ್ಸು ಸೀಳಿಹೋಗುತ್ತಿಲ್ಲವಲ್ಲ!

13154025a ಜಾಮದಗ್ನ್ಯಃ ಕುರುಕ್ಷೇತ್ರೇ ಯುಧಿ ಯೇನ ಮಹಾತ್ಮನಾ।
13154025c ಪೀಡಿತೋ ನಾತಿಯತ್ನೇನ ನಿಹತಃ ಸ ಶಿಖಂಡಿನಾ।।

ಕುರುಕ್ಷೇತ್ರದ ಯುದ್ಧದಲ್ಲಿ ಮಹಾತ್ಮ ಜಾಮದಗ್ನಿಯನ್ನು ಅತಿಯತ್ನದಿಂದ ಪೀಡಿಸಿದ ಅವನು ಶಿಖಂಡಿಯಿಂದ ಹತನಾದನು!”

13154026a ಏವಂವಿಧಂ ಬಹು ತದಾ ವಿಲಪಂತೀಂ ಮಹಾನದೀಮ್।
13154026c ಆಶ್ವಾಸಯಾಮಾಸ ತದಾ ಸಾಮ್ನಾ ದಾಮೋದರೋ ವಿಭುಃ।।

ಈ ರೀತಿ ಬಹುವಿಧವಾಗಿ ವಿಲಪಿಸುತ್ತಿದ್ದ ಮಹಾನದಿಯನ್ನು ವಿಭು ದಾಮೋದರನು ಆಶ್ವಾಸನೆಯನ್ನಿತ್ತು ಸಮಾಧಾನಗೊಳಿಸಿದನು.

13154027a ಸಮಾಶ್ವಸಿಹಿ ಭದ್ರೇ ತ್ವಂ ಮಾ ಶುಚಃ ಶುಭದರ್ಶನೇ।
13154027c ಗತಃ ಸ ಪರಮಾಂ ಸಿದ್ಧಿಂ ತವ ಪುತ್ರೋ ನ ಸಂಶಯಃ।।

“ಭದ್ರೇ! ಶುಭದರ್ಶನೇ! ಸಮಾಧಾನಗೊಳ್ಳು! ಶೋಕಿಸಬೇಡ! ನಿನ್ನ ಪುತ್ರನು ಪರಮ ಸಿದ್ಧಿಯನ್ನು ಪಡೆದಿದ್ದಾನೆ ಎನ್ನುವುದರಲ್ಲಿ ಸಂಶಯವಿಲ್ಲ.

13154028a ವಸುರೇಷ ಮಹಾತೇಜಾಃ ಶಾಪದೋಷೇಣ ಶೋಭನೇ।
13154028c ಮನುಷ್ಯತಾಮನುಪ್ರಾಪ್ತೋ ನೈನಂ ಶೋಚಿತುಮರ್ಹಸಿ।।

ಶೋಭನೇ! ಶಾಪದೋಷದಿಂದ ಮನುಷ್ಯತ್ವವನ್ನು ಪಡೆದಿದ್ದ ಇವನು ಮಹಾತೇಜಸ್ವಿ ವಸುವು. ಇವನ ಕುರಿತು ಶೋಕಿಸಬಾರದು!

13154029a ಸ ಏಷ ಕ್ಷತ್ರಧರ್ಮೇಣ ಯುಧ್ಯಮಾನೋ ರಣಾಜಿರೇ।
13154029c ಧನಂಜಯೇನ ನಿಹತೋ ನೈಷ ನುನ್ನಃ ಶಿಖಂಡಿನಾ।।

ರಣಾಜಿರದಲ್ಲಿ ಕ್ಷತ್ರಧರ್ಮದಂತೆ ಯುದ್ಧಮಾಡುತ್ತಿರುವಾಗ ಇವನು ಧನಂಜಯನಿಂದ ಹತನಾದನು. ಶಿಖಂಡಿಯಿಂದಲ್ಲ.

13154030a ಭೀಷ್ಮಂ ಹಿ ಕುರುಶಾರ್ದೂಲಮುದ್ಯತೇಷುಂ ಮಹಾರಣೇ।
13154030c ನ ಶಕ್ತಃ ಸಂಯುಗೇ ಹಂತುಂ ಸಾಕ್ಷಾದಪಿ ಶತಕ್ರತುಃ।।

ಮಹಾರಣದಲ್ಲಿ ಆಯುಧಗಳನ್ನು ಮೇಲೆತ್ತಿದ್ದ ಕುರುಶಾರ್ದೂಲ ಭೀಷ್ಮನನ್ನು ಯುದ್ಧದಲ್ಲಿ ಸಂಹರಿಸಲು ಸಾಕ್ಷಾತ್ ಶತಕ್ರತುವೂ ಶಕ್ಯನಿರಲಿಲ್ಲ.

13154031a ಸ್ವಚ್ಚಂದೇನ ಸುತಸ್ತುಭ್ಯಂ ಗತಃ ಸ್ವರ್ಗಂ ಶುಭಾನನೇ।
13154031c ನ ಶಕ್ತಾಃ ಸ್ಯುರ್ನಿಹಂತುಂ ಹಿ ರಣೇ ತಂ ಸರ್ವದೇವತಾಃ।।

ಶುಭಾನನೇ! ನಿನ್ನ ಮಗನು ಸ್ವಚ್ಚಂದದಿಂದ ಸ್ವರ್ಗಕ್ಕೆ ಹೋಗಿದ್ದಾನೆ. ರಣದಲ್ಲಿ ಅವನನ್ನು ಸಂಹರಿಸಲು ಸರ್ವದೇವತೆಗಳೂ ಶಕ್ಯರಿಲ್ಲ!””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ಭೀಷ್ಮಸ್ವರ್ಗಾರೋಹಣಪರ್ವಣಿ ಭೀಷ್ಮಮುಕ್ತಿರ್ನಾಮ ಚತುಃಪಂಚಾಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ಭೀಷ್ಮಸ್ವರ್ಗಾರೋಹಣಪರ್ವದಲ್ಲಿ ಭೀಷ್ಮಮುಕ್ತಿ ಎನ್ನುವ ನೂರಾಐವತ್ನಾಲ್ಕನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಅನುಶಾಸನಪರ್ವಣಿ ಭೀಷ್ಮಸ್ವರ್ಗಾರೋಹಣಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ಭೀಷ್ಮಸ್ವರ್ಗಾರೋಹಣಪರ್ವವು।
ಇತಿ ಶ್ರೀ ಮಹಾಭಾರತೇ ಅನುಶಾಸನಪರ್ವಃ।।
ಇದು ಶ್ರೀ ಮಹಾಭಾರತದಲ್ಲಿ ಅನುಶಾಸನಪರ್ವವು।।
ಇದೂವರೆಗಿನ ಒಟ್ಟು ಮಹಾಪರ್ವಗಳು – ೧3/18, ಉಪಪರ್ವಗಳು-88/100, ಅಧ್ಯಾಯಗಳು-1835/1995, ಶ್ಲೋಕಗಳು-69407/73784.


ಸ್ವಸ್ತಿಪ್ರಜಾಭ್ಯಃ ಪರಿಪಾಲಯಂತಾಮ್ ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ।
ಗೋಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು।।
ಕಾಲೇ ವರ್ಷತು ಪರ್ಜನ್ಯಃ ಪೃಥಿವೀ ಸಸ್ಯಶಾಲಿನೀ।
ದೇಶೋಽಯಂ ಕ್ಷೋಭರಹಿತೋ ಬ್ರಾಹ್ಮಣಾಃ ಸಂತು ನಿರ್ಭಯಾಃ।।
ಅಪುತ್ರಾಃ ಪುತ್ರಿಣಃ ಸಂತು ಪುತ್ರಿಣಃ ಸಂತು ಪೌತ್ರಿಣಃ।
ಅಧನಾಃ ಸಧನಾಃ ಸಂತು ಜೀವಂತು ಶರದಾಂ ಶತಮ್।।
ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್।
ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ।।
ಯದಕ್ಷರಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್।
ತತ್ಸರ್ವಂ ಕ್ಷಮ್ಯತಾಂ ದೇವ ನಾರಾಯಣ ನಮೋಽಸ್ತು ತೇ।।
।। ಹರಿಃ ಓಂ ಕೃಷ್ಣಾರ್ಪಣಮಸ್ತು ।।



  1. ಅಷ್ಟಾಂಗ ಯೋಗಗಳಲ್ಲಿ ಧಾರಣೆಯು ಒಂದು ಅಂಗ. ಧಾರಣ ಎಂದರೆ ಮನಸ್ಸನ್ನು ಸ್ಥಿರಗೊಳಿಸುವ ಸ್ಥಳಗಳು ಎಂದರ್ಥ. ಯಮಾದಿ ಗುಣಯುಕ್ತಸ್ಯ ಮನಸಃ ಸ್ಥಿತಿರಾತ್ಮನಿ। ಧಾರಣೇತ್ಯುಚತೇ ಸದ್ಧಿಃ ಯೋಗಶಾಸ್ತ್ರ ವಿಶಾರದೈಃ।। ನಾಭಿಚಕ್ರೇ ಹೃದಯಪುಂಡರೀಕೇ ಮೂರ್ಧ್ನಿಜ್ಯೋತಿಷಿ ನಾಸಾಗ್ರೇ ಜಿಹ್ವಾಗ್ರೇ ಇತ್ಯೇವಮಾದಿಷು। ಬಾಹ್ಯೇ ವಾ ವಿಷಯೇ ಚಿತ್ತಸ್ಯ ವೃತ್ತಿಮಾತ್ರೇಣ ಬಂಧಃ।। ಅರ್ಥಾತ್ ನಾಭಿ ಚಕ್ರ, ಹೃದಯ, ನಾಲಿಗೆಯ ತುದಿ, ಶಿರಸ್ಸು ಮೊದಲಾದ ಶರೀರದ ಅವಯವಗಳಲ್ಲಿ ಅಥವಾ ಹೊರಗಿನ ಶುಭ ವಸ್ತುಗಳಲ್ಲಿ ಚಿತ್ತವನ್ನು ಸ್ಥಿರವಾಗಿ ನಿಲ್ಲಿಸುವ ಅಭ್ಯಾಸವೇ ಧಾರಣೆ. (ಭಾರತ ದರ್ಶನ). ↩︎