146: ಮಹೇಶ್ವರಮಾಹಾತ್ಮ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 146

ಸಾರ

ಕೃಷ್ಣನು ರುದ್ರನ ಮಹಾತ್ಮೆಯನ್ನು ಮುಂದುವರಿಸಿದುದು (1-29).

13146001 ವಾಸುದೇವ ಉವಾಚ।
13146001a ಯುಧಿಷ್ಠಿರ ಮಹಾಬಾಹೋ ಮಹಾಭಾಗ್ಯಂ ಮಹಾತ್ಮನಃ।
13146001c ರುದ್ರಾಯ ಬಹುರೂಪಾಯ ಬಹುನಾಮ್ನೇ ನಿಬೋಧ ಮೇ।।

ವಾಸುದೇವನು ಹೇಳಿದನು: “ಯುಧಿಷ್ಠಿರ! ಮಹಾಬಾಹೋ! ಬಹುರೂಪನಾದ, ಬಹುನಾಮಕನಾದ ಮಹಾತ್ಮ ರುದ್ರನ ಮಹಾಭಾಗ್ಯವನ್ನು ನನ್ನಿಂದ ಕೇಳು.

13146002a ವದಂತ್ಯಗ್ನಿಂ ಮಹಾದೇವಂ ತಥಾ ಸ್ಥಾಣುಂ ಮಹೇಶ್ವರಮ್।
13146002c ಏಕಾಕ್ಷಂ ತ್ರ್ಯಂಬಕಂ ಚೈವ ವಿಶ್ವರೂಪಂ ಶಿವಂ ತಥಾ।।

ಮಹಾದೇವ ಮಹೇಶ್ವರನನ್ನು ಅಗ್ನಿಯೆಂದೂ, ಏಕಾಕ್ಷನೆಂದೂ, ತ್ರ್ಯಂಬಕನೆಂದೂ, ಸ್ಥಾಣುವೆಂದೂ, ವಿಶ್ವರೂಪನೆಂದೂ ಮತ್ತು ಶಿವನೆಂದೂ ಕರೆಯುತ್ತಾರೆ.

13146003a ದ್ವೇ ತನೂ ತಸ್ಯ ದೇವಸ್ಯ ವೇದಜ್ಞಾ ಬ್ರಾಹ್ಮಣಾ ವಿದುಃ।
13146003c ಘೋರಾಮನ್ಯಾಂ ಶಿವಾಮನ್ಯಾಂ ತೇ ತನೂ ಬಹುಧಾ ಪುನಃ।।

ವೇದಜ್ಞ ಬ್ರಾಹ್ಮಣರು ಆ ದೇವನಿಗೆ ಎರಡು ತನುಗಳಿವೆಯೆಂದು ತಿಳಿದಿದ್ದಾರೆ. ಒಂದು ಘೋರಾ ಮತ್ತು ಇನ್ನೊಂದು ಶಿವಾ. ಇವುಗಳಲ್ಲಿ ಪುನಃ ಅನೇಕ ಭೇದಗಳಿವೆ.

13146004a ಉಗ್ರಾ ಘೋರಾ ತನೂರ್ಯಾಸ್ಯ ಸೋಽಗ್ನಿರ್ವಿದ್ಯುತ್ಸ ಭಾಸ್ಕರಃ।
13146004c ಶಿವಾ ಸೌಮ್ಯಾ ಚ ಯಾ ತಸ್ಯ ಧರ್ಮಸ್ತ್ವಾಪೋಽಥ ಚಂದ್ರಮಾಃ।।

ಅವನ ಉಗ್ರ ಘೋರ ಶರೀರವು ಅಗ್ನಿ, ವಿದ್ಯುತ್ ಮತ್ತು ಭಾಸ್ಕರನ ರೂಪಗಳಲ್ಲಿವೆ. ಸೌಮ್ಯ ಶಿವಾ ಶರೀರವು ಧರ್ಮ, ಜಲ ಮತ್ತು ಚಂದ್ರರ ರೂಪಗಳಲ್ಲಿದೆ.

13146005a ಆತ್ಮನೋಽರ್ಧಂ ತು ತಸ್ಯಾಗ್ನಿರುಚ್ಯತೇ ಭರತರ್ಷಭ1
13146005c ಬ್ರಹ್ಮಚರ್ಯಂ ಚರತ್ಯೇಷ2 ಶಿವಾ ಯಾಸ್ಯ ತನುಸ್ತಥಾ।।

ಭರತರ್ಷಭ! ಅವನ ಅರ್ಧ ಆತ್ಮವನ್ನು ಅಗ್ನಿಯೆಂದು ಕರೆಯುತ್ತಾರೆ. ಅವನ ಶಿವಾ ಎಂಬ ಇನ್ನೊಂದು ಅರ್ಧವು ಬ್ರಹ್ಮಚರ್ಯವನ್ನು ಪಾಲಿಸುತ್ತದೆ.

13146006a ಯಾಸ್ಯ ಘೋರತಮಾ ಮೂರ್ತಿರ್ಜಗತ್ಸಂಹರತೇ ತಯಾ।
13146006c ಈಶ್ವರತ್ವಾನ್ಮಹತ್ತ್ವಾಚ್ಚ ಮಹೇಶ್ವರ ಇತಿ ಸ್ಮೃತಃ।।

ಅವನ ಘೋರತಮ ಮೂರ್ತಿಯು ಜಗತ್ತನ್ನು ಸಂಹರಿಸುತ್ತದೆ. ಅವನಲ್ಲಿರುವ ಈಶ್ವರತ್ವ ಮತ್ತು ಮಹತ್ವಗಳಿಂದಾಗಿ ಅವನು ಮಹೇಶ್ವರನೆನಿಸಿಕೊಂಡಿದ್ದಾನೆ.

13146007a ಯನ್ನಿರ್ದಹತಿ ಯತ್ತೀಕ್ಷ್ಣೋ ಯದುಗ್ರೋ ಯತ್ಪ್ರತಾಪವಾನ್।
13146007c ಮಾಂಸಶೋಣಿತಮಜ್ಜಾದೋ ಯತ್ತತೋ ರುದ್ರ ಉಚ್ಯತೇ।।

ದಹಿಸುವುದರಿಂದ, ತೀಕ್ಷ್ಣನೂ, ಪ್ರತಾಪವಾನನೂ, ಮಾಂಸ-ರಕ್ತಗಳನ್ನು ಭುಂಜಿಸುವವನೂ ಆದುದರಿಂದ ಅವನನ್ನು ರುದ್ರ ಎಂದು ಕರೆಯುತ್ತಾರೆ.

13146008a ದೇವಾನಾಂ ಸುಮಹಾನ್ಯಚ್ಚ ಯಚ್ಚಾಸ್ಯ ವಿಷಯೋ ಮಹಾನ್।
13146008c ಯಚ್ಚ ವಿಶ್ವಂ ಮಹತ್ಪಾತಿ ಮಹಾದೇವಸ್ತತಃ ಸ್ಮೃತಃ।।

ದೇವತೆಗಳಲ್ಲಿ ದೊಡ್ಡವನಾಗಿರುವುದರಿಂದ, ಮಹತ್ವದ ವಿಷಯವನ್ನು ಹೊಂದಿರುವುದರಿಂದ, ಮತ್ತು ಮಹಾವಿಶ್ವವನ್ನು ಸಂರಕ್ಷಿರುತ್ತಿರುವುದರಿಂದ ಅವನನ್ನು ಮಹಾದೇವನೆಂದು ಕರೆಯುತ್ತಾರೆ.

313146009a ಸಮೇಧಯತಿ ಯನ್ನಿತ್ಯಂ ಸರ್ವಾರ್ಥಾನ್ಸರ್ವಕರ್ಮಭಿಃ।
13146009c ಶಿವಮಿಚ್ಚನ್ಮನುಷ್ಯಾಣಾಂ ತಸ್ಮಾದೇಷ ಶಿವಃ ಸ್ಮೃತಃ।।

ಅವನು ನಿತ್ಯವೂ ಸರ್ವರಿಗೂ ಸರ್ವಕರ್ಮಗಳಿಂದ ಅಭಿವೃದ್ಧಿಯನ್ನು ಮಾಡುತ್ತಿರುವನಾದುದರಿಂದ ಮತ್ತು ಎಲ್ಲ ಮನುಷ್ಯರಿಗೂ ಕಲ್ಯಾಣವನ್ನೇ ಬಯಸುವವನಾದುದರಿಂದ ಅವನನ್ನು ಶಿವನೆಂದು ಕರೆಯುತ್ತಾರೆ.

13146010a ದಹತ್ಯೂರ್ಧ್ವಂ ಸ್ಥಿತೋ ಯಚ್ಚ ಪ್ರಾಣೋತ್ಪತ್ತಿಃ ಸ್ಥಿತಿಶ್ಚ ಯತ್4
13146010c ಸ್ಥಿರಲಿಂಗಶ್ಚ ಯನ್ನಿತ್ಯಂ ತಸ್ಮಾತ್ ಸ್ಥಾಣುರಿತಿ ಸ್ಮೃತಃ।।

ಊರ್ಧ್ವಭಾಗದಲ್ಲಿದ್ದುಕೊಂಡು ಪ್ರಾಣೋತ್ಪತ್ತಿ ಮತ್ತು ಸ್ಥಿತಿಗಳನ್ನು ನಡೆಸುವುದರಿಂದ ಮತ್ತು ನಿತ್ಯವೂ ಸ್ಥಿರಲಿಂಗನಾಗಿರುವುದರಿಂದ ಅವನನ್ನು ಸ್ಥಾಣು ಎಂದೂ ಕರೆಯುತ್ತಾರೆ.

13146011a ಯದಸ್ಯ ಬಹುಧಾ ರೂಪಂ ಭೂತಂ ಭವ್ಯಂ ಭವತ್ತಥಾ।
13146011c ಸ್ಥಾವರಂ ಜಂಗಮಂ ಚೈವ ಬಹುರೂಪಸ್ತತಃ ಸ್ಮೃತಃ।।

ಭೂತ-ಭವಿಷ್ಯ-ವರ್ತಮಾನಗಳಲ್ಲಿ ಅನೇಕ ರೂಪದ ಸ್ಥಾವರ-ಜಂಗಮಗಳಾಗಿ ಪ್ರಕಟವಾಗುವುದರಿಂದ ಅವನು ಬಹುರೂಪನೆಂದಾದನು.

13146012a ಧೂಮ್ರಂ ರೂಪಂ ಚ ಯತ್ತಸ್ಯ ಧೂರ್ಜಟೀತ್ಯತ ಉಚ್ಯತೇ।
13146012c ವಿಶ್ವೇ ದೇವಾಶ್ಚ ಯತ್ತಸ್ಮಿನ್ವಿಶ್ವರೂಪಸ್ತತಃ ಸ್ಮೃತಃ।।

ಅವನ ಜಟೆಯು ಧೂಮ್ರವರ್ಣದ್ದಾಗಿರುವುದರಿಂದ ಅವನನ್ನು ಧೂರ್ಜಟೀ ಎಂದು ಕರೆಯುತ್ತಾರೆ. ಸಮಸ್ತ ದೇವತೆಗಳಲ್ಲಿಯೂ ವಾಸಿಸುತ್ತಿರುವುದರಿಂದ ಅವನನ್ನು ವಿಶ್ವರೂಪನೆಂದೂ ಕರೆಯುತ್ತಾರೆ.

13146013a ಸಹಸ್ರಾಕ್ಷೋಽಯುತಾಕ್ಷೋ ವಾ ಸರ್ವತೋಕ್ಷಿಮಯೋಽಪಿ ವಾ।
13146013c ಚಕ್ಷುಷಃ ಪ್ರಭವಸ್ತೇಜೋ ನಾಸ್ತ್ಯಂತೋಽಥಾಸ್ಯ ಚಕ್ಷುಷಾಮ್।।

ಅವನ ಕಣ್ಣುಗಳಿಂದ ತೇಜಸ್ಸು ಹೊರಹೊಮ್ಮುತ್ತದೆ. ಅವನ ದೃಷ್ಟಿಗೆ ಕೊನೆ ಎಂಬುದೇ ಇಲ್ಲ. ಆದುದರಿಂದ ಅವನನ್ನು ಸಹಸ್ರಾಕ್ಷ, ಆಯುತಾಕ್ಷ ಮತ್ತು ಸರ್ವತೋಕ್ಷಿಮಯ ಎಂದೂ ಕರೆಯುತ್ತಾರೆ.

13146014a ಸರ್ವಥಾ ಯತ್ಪಶೂನ್ ಪಾತಿ ತೈಶ್ಚ ಯದ್ರಮತೇ ಪುನಃ।
13146014c ತೇಷಾಮಧಿಪತಿರ್ಯಚ್ಚ ತಸ್ಮಾತ್ಪಶುಪತಿಃ ಸ್ಮೃತಃ।।

ಸರ್ವರೀತಿಗಳಲ್ಲಿಯೂ ಪಶುಗಳನ್ನು ಪಾಲಿಸುವುದರಿಂದ ಮತ್ತು ಪಶುಗಳೊಂದಿಗೆ ರಮಿಸುವುದರಿಂದ ಆ ಪಶುಗಳಿಗೆ ಅಧಿಪತಿಯಾದವನನ್ನು ಪಶುಪತಿಯೆಂದು ಕರೆಯುತ್ತಾರೆ.

13146015a ನಿತ್ಯೇನ ಬ್ರಹ್ಮಚರ್ಯೇಣ ಲಿಂಗಮಸ್ಯ ಯದಾ ಸ್ಥಿತಮ್।
13146015c ಮಹಯಂತ್ಯಸ್ಯ ಲೋಕಾಶ್ಚ ಮಹೇಶ್ವರ ಇತಿ ಸ್ಮೃತಃ5।।

ನಿತ್ಯವೂ ಬ್ರಹ್ಮಚರ್ಯವನ್ನು ಪರಿಪಾಲಿಸಿಕೊಂಡು ಲಿಂಗದಲ್ಲಿ ಸ್ಥಿತನಾಗಿರುವ ಅವನ ಲೋಕವು ಮಹತ್ತರವಾದುದರಿಂದ ಅವನನ್ನು ಮಹೇಶ್ವರ ಎಂದೂ ಕರೆಯುತ್ತಾರೆ.

13146016a ವಿಗ್ರಹಂ ಪೂಜಯೇದ್ಯೋ ವೈ ಲಿಂಗಂ ವಾಪಿ ಮಹಾತ್ಮನಃ।
13146016c ಲಿಂಗಂ ಪೂಜಯಿತಾ ನಿತ್ಯಂ ಮಹತೀಂ ಶ್ರಿಯಮಶ್ನುತೇ।।

ಆ ಮಹಾತ್ಮನ ವಿಗ್ರಹವನ್ನು ಮತ್ತು ಲಿಂಗವನ್ನು ಪೂಜಿಸುವವರಲ್ಲಿ ನಿತ್ಯವೂ ಲಿಂಗವನ್ನು ಪೂಜಿಸುವವನು ಮಹಾ ಶ್ರೀಯನ್ನು ಪಡೆದುಕೊಳ್ಳುತ್ತಾನೆ.

13146017a ಋಷಯಶ್ಚಾಪಿ ದೇವಾಶ್ಚ ಗಂಧರ್ವಾಪ್ಸರಸಸ್ತಥಾ।
13146017c ಲಿಂಗಮೇವಾರ್ಚಯಂತಿ ಸ್ಮ ಯತ್ತದೂರ್ಧ್ವಂ ಸಮಾಸ್ಥಿತಮ್।।

ಋಷಿಗಳೂ, ದೇವತೆಗಳೂ, ಗಂಧರ್ವ-ಅಪ್ಸರೆಯರೂ ಕೂಡ ಊರ್ಧ್ವಮುಖವಾಗಿರುವ ಲಿಂಗವನ್ನೇ ಅರ್ಚಿಸುತ್ತಾರೆ.

13146018a ಪೂಜ್ಯಮಾನೇ ತತಸ್ತಸ್ಮಿನ್ಮೋದತೇ ಸ ಮಹೇಶ್ವರಃ।
13146018c ಸುಖಂ ದದಾತಿ ಪ್ರೀತಾತ್ಮಾ ಭಕ್ತಾನಾಂ ಭಕ್ತವತ್ಸಲಃ।।

ಅವನನ್ನು ಲಿಂಗದಲ್ಲಿ ಪೂಜಿಸುವುದರಿಂದ ಮಹೇಶ್ವರನು ಸಂತುಷ್ಟನಾಗುತ್ತಾನೆ. ಆ ಭಕ್ತವತ್ಸಲನು ಪ್ರೀತಾತ್ಮನಾಗಿ ಭಕ್ತರಿಗೆ ಸುಖವನ್ನು ನೀಡುತ್ತಾನೆ.

13146019a ಏಷ ಏವ ಶ್ಮಶಾನೇಷು ದೇವೋ ವಸತಿ ನಿತ್ಯಶಃ6
13146019c ಯಜಂತೇ ತಂ ಜನಾಸ್ತತ್ರ ವೀರಸ್ಥಾನನಿಷೇವಿಣಮ್।।

ಆ ದೇವನೇ ನಿತ್ಯವೂ ಶ್ಮಶಾನಗಳಲ್ಲಿ ವಾಸವಾಗಿರುತ್ತಾನೆ. ಅಲ್ಲಿ ಅವನನ್ನು ಪೂಜಿಸುವವರು ವೀರರು ಪಡೆದುಕೊಳ್ಳುವ ಸ್ಥಾನವನ್ನು ಪಡೆಯುತ್ತಾರೆ.

13146020a ವಿಷಮಸ್ಥಃ7 ಶರೀರೇಷು ಸ ಮೃತ್ಯುಃ ಪ್ರಾಣಿನಾಮಿಹ।
13146020c ಸ ಚ ವಾಯುಃ ಶರೀರೇಷು ಪ್ರಾಣೋಽಪಾನಃ ಶರೀರಿಣಾಮ್।।

ಅವನು ಪ್ರಾಣಿಗಳ ಶರೀರಗಳಲ್ಲಿ ವಿಷಮಸ್ಥ ಮೃತ್ಯುವಾಗಿರುತ್ತಾನೆ. ಅವನು ಶರೀರಿಗಳ ಶರೀರಗಳಲ್ಲಿ ಪ್ರಾಣ-ಅಪಾನ ವಾಯುವಾಗಿಯೂ ಇರುತ್ತಾನೆ.

13146021a ತಸ್ಯ ಘೋರಾಣಿ ರೂಪಾಣಿ ದೀಪ್ತಾನಿ ಚ ಬಹೂನಿ ಚ।
13146021c ಲೋಕೇ ಯಾನ್ಯಸ್ಯ ಪೂಜ್ಯಂತೇ ವಿಪ್ರಾಸ್ತಾನಿ ವಿದುರ್ಬುಧಾಃ।।

ಅವನಿಗೆ ಅನೇಕ ಘೋರ ದೀಪ್ತ ರೂಪಗಳನ್ನು ಲೋಕದಲ್ಲಿ ಜನರು ಪೂಜಿಸುತ್ತಾರೆ. ವಿದ್ವಾಂಸ ಬ್ರಾಹ್ಮಣರು ಆ ರೂಪಗಳನ್ನು ತಿಳಿದಿರುತ್ತಾರೆ.

13146022a ನಾಮಧೇಯಾನಿ ವೇದೇಷು8 ಬಹೂನ್ಯಸ್ಯ ಯಥಾರ್ಥತಃ।
13146022c ನಿರುಚ್ಯಂತೇ ಮಹತ್ತ್ವಾಚ್ಚ ವಿಭುತ್ವಾತ್ಕರ್ಮಭಿಸ್ತಥಾ।।

ಅವನ ಮಹತ್ವ, ವಿಭುತ್ವ ಮತ್ತು ಕರ್ಮಗಳನ್ನು ಯಥಾರ್ಥವಾಗಿ ಸೂಚಿಸುವ ಅನೇಕ ನಾಮಧೇಯಗಳು ವೇದಗಳಲ್ಲಿವೆ.

13146023a ವೇದೇ ಚಾಸ್ಯ ವಿದುರ್ವಿಪ್ರಾಃ ಶತರುದ್ರೀಯಮುತ್ತಮಮ್।
13146023c ವ್ಯಾಸಾದನಂತರಂ9 ಯಚ್ಚಾಪ್ಯುಪಸ್ಥಾನಂ ಮಹಾತ್ಮನಃ।।

ವೇದದಲ್ಲಿರುವ ಇವನ ಉತ್ತಮ ಶತರುದ್ರೀಯವನ್ನು ವಿಪ್ರರು ತಿಳಿದಿರುತ್ತಾರೆ. ವ್ಯಾಸನೂ ಈ ಮಹಾತ್ಮನ ಸ್ತುತಿಗೈದಿದ್ದಾನೆ.

13146024a ಪ್ರದಾತಾ ಸರ್ವಲೋಕಾನಾಂ ವಿಶ್ವಂ ಚಾಪ್ಯುಚ್ಯತೇ ಮಹತ್।
13146024c ಜ್ಯೇಷ್ಠಭೂತಂ ವದಂತ್ಯೇನಂ ಬ್ರಾಹ್ಮಣಾ ಋಷಯೋಽಪರೇ।।

ಅವನು ಸರ್ವಲೋಕಗಳಿಗೂ ನೀಡುವವನು. ಈ ಮಹಾ ವಿಶ್ವವು ಅವನೇ ಎಂದು ಹೇಳುತ್ತಾರೆ. ಬ್ರಾಹ್ಮಣರು ಮತ್ತು ಇತರ ಋಷಿಗಳು ಅವನನ್ನು ಜ್ಯೇಷ್ಠಭೂತನೆಂದು ಹೇಳುತ್ತಾರೆ.

13146025a ಪ್ರಥಮೋ ಹ್ಯೇಷ ದೇವಾನಾಂ ಮುಖಾದಗ್ನಿರಜಾಯತ।
13146025c ಗ್ರಹೈರ್ಬಹುವಿಧೈಃ ಪ್ರಾಣಾನ್ಸಂರುದ್ಧಾನುತ್ಸೃಜತ್ಯಪಿ।।

ಇವನು ದೇವತೆಗಳಲ್ಲಿಯೇ ಪ್ರಥಮನು. ಇವನ ಮುಖದಿಂದ ಅಗ್ನಿಯು ಹುಟ್ಟಿದನು. ಗ್ರಹಗಳ ಬಹುವಿಧದ ಬಾಧೆಗೊಳಗಾದ ಪ್ರಾಣಿಗಳನ್ನು ಇವನ್ನು ದುಃಖದಿಂದ ಪಾರುಮಾಡುತ್ತಾನೆ.

13146026a ಸ ಮೋಚಯತಿ10 ಪುಣ್ಯಾತ್ಮಾ ಶರಣ್ಯಃ ಶರಣಾಗತಾನ್।
13146026c ಆಯುರಾರೋಗ್ಯಮೈಶ್ವರ್ಯಂ ವಿತ್ತಂ ಕಾಮಾಂಶ್ಚ ಪುಷ್ಕಲಾನ್।।

ಪುಣ್ಯಾತ್ಮನೂ ಶರಣ್ಯನೂ ಆದ ಅವನು ಶರಣಾಗತರಿಗೆ ಮೋಕ್ಷವನ್ನೀಯುತ್ತಾನೆ. ಅವರಿಗೆ ಆಯುರಾರೋಗ್ಯವನ್ನೂ ಐಶ್ವರ್ಯವನ್ನೂ ಮತ್ತು ಬೇಕಾದಷ್ಟು ಪುಷ್ಕಲ ವಿತ್ತವನ್ನೂ ನೀಡುತ್ತಾನೆ.

13146027a ಸ ದದಾತಿ ಮನುಷ್ಯೇಭ್ಯಃ ಸ ಏವಾಕ್ಷಿಪತೇ ಪುನಃ।
13146027c ಶಕ್ರಾದಿಷು ಚ ದೇವೇಷು ತಸ್ಯ ಚೈಶ್ವರ್ಯಮುಚ್ಯತೇ।।

ಅವನು ಮನುಷ್ಯರಿಗೆ ಕೊಡುತ್ತಾನೆ ಮತ್ತು ಪುನಃ ಹಿಂತೆಗೆದುಕೊಳ್ಳುತ್ತಾನೆ. ಶಕ್ರಾದಿ ದೇವತೆಗಳಲ್ಲಿರುವ ಐಶ್ವರ್ಯವೂ ಅವನದ್ದೇ ಎಂದು ಹೇಳುತ್ತಾರೆ.

13146028a ಸ ಏವಾಭ್ಯಧಿಕೋ11 ನಿತ್ಯಂ ತ್ರೈಲೋಕ್ಯಸ್ಯ ಶುಭಾಶುಭೇ।
13146028c ಐಶ್ವರ್ಯಾಚ್ಚೈವ ಕಾಮಾನಾಮೀಶ್ವರಃ ಪುನರುಚ್ಯತೇ।।

ಅವನು ನಿತ್ಯವೂ ಅಧಿಕನು. ತ್ರೈಲೋಕ್ಯದ ಶುಭಾಶುಭ ಕರ್ಮಗಳಿಗೂ ಐಶ್ವರ್ಯಗಳಿಗೂ ಮತ್ತು ಕಾಮನೆಗಳಿಗೂ ಅವನೇ ಈಶ್ವರನೆಂದು ಪುನಃ ಹೇಳುತ್ತಾರೆ.

13146029a ಮಹೇಶ್ವರಶ್ಚ ಲೋಕಾನಾಂ ಮಹತಾಮೀಶ್ವರಶ್ಚ ಸಃ।
13146029c ಬಹುಭಿರ್ವಿವಿಧೈ ರೂಪೈರ್ವಿಶ್ವಂ ವ್ಯಾಪ್ತಮಿದಂ ಜಗತ್।
13146029e ತಸ್ಯ ದೇವಸ್ಯ ಯದ್ವಕ್ತ್ರಂ ಸಮುದ್ರೇ ವಡವಾಮುಖಮ್।।

ಮಹಾಲೋಕದ ಈಶ್ವರನಾಗಿರುವುದರಿಂದ ಅವನು ಮಹೇಶ್ವರನೂ ಕೂಡ. ಅನೇಕ ವಿವಿಧ ರೂಪಗಳಿಂದ ಅವನು ಈ ಜಗತ್ತನ್ನು ವ್ಯಾಪಿಸಿಕೊಂಡಿದ್ದಾನೆ. ಸಮುದ್ರದಲ್ಲಿರುವ ವಡವಾಮುಖವೂ ಆ ದೇವನದ್ದೇ ಮುಖವು.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಮಹೇಶ್ವರಮಾಹಾತ್ಮ್ಯಂ ನಾಮ ಷಟ್ಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಮಹೇಶ್ವರಮಾಹಾತ್ಮ್ಯ ಎನ್ನುವ ನೂರಾನಲ್ವತ್ತಾರನೇ ಅಧ್ಯಾಯವು.


  1. ಸೋಮೋಽರ್ಧಂ ಪುನರುಚ್ಯತೇ। (ಭಾರತ ದರ್ಶನ). ↩︎

  2. ಚರತ್ಯೇಕಾ (ಭಾರತ ದರ್ಶನ). ↩︎

  3. ಇದಕ್ಕೆ ಮೊದಲು ಭಾರತ ದರ್ಶನದಲ್ಲಿ ಈ ಒಂದು ಶ್ಲೋಕಾರ್ಧವು ಅಧಿಕವಾಗಿದೆ: ಧೂಮ್ರರೂಪಂ ಚ ಯತ್ತಸ್ಯ ಧೂರ್ಜಟೀತ್ಯತ ಉಚ್ಯತೇ। ↩︎

  4. ಪ್ರಾಣಾನ್ನೃಣಾಂ ಸ್ಥಿರಶ್ಚ ಯತ್। (ಭಾರತ ದರ್ಶನ). ↩︎

  5. ಮಹಯತ್ಯಸ್ಯ ಲೋಕಶ್ಚ ಪ್ರಿಯಂ ಹ್ಯೇತನ್ಮಹಾತ್ಮನಃ।। (ಭಾರತ ದರ್ಶನ). ↩︎

  6. ನಿರ್ದಹನ್ (ಭಾರತ ದರ್ಶನ). ↩︎

  7. ವಿಷಯಸ್ಥಃ (ಭಾರತ ದರ್ಶನ). ↩︎

  8. ದೇವೇಷು (ಭಾರತ ದರ್ಶನ). ↩︎

  9. ವ್ಯಾಸೇನೋಕ್ತಂ (ಭಾರತ ದರ್ಶನ). ↩︎

  10. ವಿಮುಂಚತಿ ನ (ಭಾರತ ದರ್ಶನ). ↩︎

  11. ಸ ಏವ ವ್ಯಾಪೃತೋ (ಭಾರತ ದರ್ಶನ). ↩︎