144: ದುರ್ವಾಸೋಭಿಕ್ಷಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 144

ಸಾರ

ಕೃಷ್ಣನು ಯುಧಿಷ್ಠಿರನಿಗೆ ತಾನು ಪ್ರದ್ಯುಮ್ನನಿಗೆ ಹೇಳಿದ ದುರ್ವಾಸನ ಮಹಾತ್ಮೆಯನ್ನು ತಿಳಿಸಿದುದು (1-51).

13144001 ಯುಧಿಷ್ಠಿರ ಉವಾಚ।
13144001a ಬ್ರೂಹಿ ಬ್ರಾಹ್ಮಣಪೂಜಾಯಾಂ ವ್ಯುಷ್ಟಿಂ ತ್ವಂ ಮಧುಸೂದನ।
13144001c ವೇತ್ತಾ ತ್ವಮಸ್ಯ ಚಾರ್ಥಸ್ಯ ವೇದ ತ್ವಾಂ ಹಿ ಪಿತಾಮಹಃ।।

ಯುಧಿಷ್ಠಿರನು ಹೇಳಿದನು: “ಮಧುಸೂದನ! ಬ್ರಾಹ್ಮಣಪೂಜೆಯ ಫಲದ ಕುರಿತು ಹೇಳು. ನೀನು ಇದರ ಅರ್ಥವನ್ನು ಚೆನ್ನಾಗಿ ತಿಳಿದುಕೊಂಡಿರುವೆ. ಇದು ಪಿತಾಮಹನಿಗೂ ಗೊತ್ತು.”

13144002 ವಾಸುದೇವ ಉವಾಚ।
13144002a ಶೃಣುಷ್ವಾವಹಿತೋ ರಾಜನ್ ದ್ವಿಜಾನಾಂ ಭರತರ್ಷಭ।
13144002c ಯಥಾತತ್ತ್ವೇನ ವದತೋ ಗುಣಾನ್ಮೇ ಕುರುಸತ್ತಮ।।

ವಾಸುದೇವನು ಹೇಳಿದನು: “ರಾಜನ್! ಭರತರ್ಷಭ! ಕುರುಸತ್ತಮ! ಏಕಾಗ್ರಚಿತ್ತನಾಗಿ ಬ್ರಾಹ್ಮಣರ ಗುಣಗಳನ್ನು ಕೇಳು. ಯಥಾತತ್ತ್ವವಾಗಿ ಹೇಳುತ್ತೇನೆ.

13144003a ಪ್ರದ್ಯುಮ್ನಃ ಪರಿಪಪ್ರಚ್ಚ ಬ್ರಾಹ್ಮಣೈಃ ಪರಿಕೋಪಿತಃ।
13144003c ಕಿಂ ಫಲಂ ಬ್ರಾಹ್ಮಣೇಷ್ವಸ್ತಿ ಪೂಜಾಯಾಂ ಮಧುಸೂದನ।

ಬ್ರಾಹ್ಮಣರಿಂದ ಪರಿಕೋಪಿತನಾದ ಪ್ರದ್ಯುಮ್ನನು ಕೇಳಿದ್ದನು: “ಮಧುಸೂದನ! ಬ್ರಾಹ್ಮಣರನ್ನು ಪೂಜಿಸುವುದರಿಂದ ಏನು ಫಲ?

13144003e ಈಶ್ವರಸ್ಯ ಸತಸ್ತಸ್ಯ ಇಹ ಚೈವ ಪರತ್ರ ಚ1।।
13144004a ಸದಾ ದ್ವಿಜಾತೀನ್ ಸಂಪೂಜ್ಯ ಕಿಂ ಫಲಂ ತತ್ರ ಮಾನದ।
13144004c ಏತದ್ಬ್ರೂಹಿ ಪಿತಃ ಸರ್ವಂ ಸುಮಹಾನ್ಸಂಶಯೋಽತ್ರ ಮೇ।।

ಮಾನದ! ಇಹದಲ್ಲಿ ಮತ್ತು ಪರದಲ್ಲಿ ಅವರ ಈಶ್ವರತ್ವವು ಹೇಗೆ? ಸದಾ ಬ್ರಾಹ್ಮಣರನ್ನು ಪೂಜಿಸುವುದರಿಂದ ಫಲವೇನು? ತಂದೆಯೇ! ಇದರ ಕುರಿತು ಸರ್ವವನ್ನೂ ಹೇಳು. ಇದರಲ್ಲಿ ನನಗೆ ಮಹಾ ಸಂಶಯವುಂಟಾಗಿದೆ.”

13144005a ಇತ್ಯುಕ್ತವಚನಸ್ತೇನ ಪ್ರದ್ಯುಮ್ನೇನ ತದಾ ತ್ವಹಮ್।
13144005c ಪ್ರತ್ಯಬ್ರುವಂ ಮಹಾರಾಜ ಯತ್ತಚ್ಚೃಣು ಸಮಾಹಿತಃ।।

ಪ್ರದ್ಯುಮ್ನನು ಹೀಗೆ ಹೇಳಲು ನಾನು ಅವನಿಗೆ ಉತ್ತರಿಸಿದೆ. ಮಹಾರಾಜ! ಸಮಾಹಿತನಾಗಿ ಅದನ್ನು ಕೇಳು.

13144006a ವ್ಯುಷ್ಟಿಂ ಬ್ರಾಹ್ಮಣಪೂಜಾಯಾಂ ರೌಕ್ಮಿಣೇಯ ನಿಬೋಧ ಮೇ।
13144006c ಏತೇ ಹಿ ಸೋಮರಾಜಾನ ಈಶ್ವರಾಃ ಸುಖದುಃಖಯೋಃ।।
13144007a ಅಸ್ಮಿಽಲ್ಲೋಕೇ ರೌಕ್ಮಿಣೇಯ ತಥಾಮುಷ್ಮಿಂಶ್ಚ ಪುತ್ರಕ।

“ರೌಕ್ಮಿಣೇಯ! ಬ್ರಾಹ್ಮಣಪೂಜೆಯ ಫಲವನ್ನು ಕೇಳು. ರೌಕ್ಮಿಣೇಯ! ಪುತ್ರಕ! ಸೋಮನನ್ನು ರಾಜನನ್ನಾಗಿ ಪಡೆದಿರುವ ಬ್ರಾಹ್ಮಣರು ಈ ಲೋಕದಲ್ಲಿ ಮತ್ತು ಪರ ಲೋಕದಲ್ಲಿ ಸುಖ-ದುಃಖಗಳ ಈಶ್ವರರು.

13144007c ಬ್ರಾಹ್ಮಣಪ್ರಮುಖಂ ಸೌಖ್ಯಂ2 ನ ಮೇಽತ್ರಾಸ್ತಿ ವಿಚಾರಣಾ।।
13144008a ಬ್ರಾಹ್ಮಣಪ್ರಮುಖಂ ವೀರ್ಯಮಾಯುಃ3 ಕೀರ್ತಿರ್ಯಶೋ ಬಲಮ್।
13144008c ಲೋಕಾ ಲೋಕೇಶ್ವರಾಶ್ಚೈವ ಸರ್ವೇ ಬ್ರಾಹ್ಮಣಪೂರ್ವಕಾಃ।। 4

ಸುಖದಲ್ಲಿ ಬ್ರಾಹ್ಮಣರೇ ಪ್ರಮುಖರು. ಅದರಲ್ಲಿ ವಿಚಾರಿಸುವುದೇನೂ ಇಲ್ಲ. ಬ್ರಾಹ್ಮಣರನ್ನು ಪ್ರಮುಖದಲ್ಲಿಟ್ಟುಕೊಳ್ಳುವವನು ವೀರ್ಯ, ಆಯಸ್ಸು, ಕೀರ್ತಿ, ಯಶಸ್ಸು ಮತ್ತು ಬಲಗಳನ್ನು ಪಡೆದುಕೊಳ್ಳುತ್ತಾನೆ. ಲೋಕದವರೂ ಮತ್ತು ಲೋಕೇಶ್ವರರೂ ಎಲ್ಲರೂ ಬ್ರಾಹ್ಮಣರನ್ನೇ ಮುಂದಿಡುತ್ತಾರೆ.

513144009a ತತ್ಕಥಂ ನಾದ್ರಿಯೇಯಂ ವೈ ಈಶ್ವರೋಽಸ್ಮೀತಿ ಪುತ್ರಕ।
13144009c ಮಾ ತೇ ಮನ್ಯುರ್ಮಹಾಬಾಹೋ ಭವತ್ವತ್ರ ದ್ವಿಜಾನ್ ಪ್ರತಿ।।

ಪುತ್ರಕ! ಮಹಾಬಾಹೋ! ಅವರನ್ನು ನಾನು ಹೇಗೆ ಆದರಿಸದೇ ಇರಲಿ? ನಾನು ಈಶ್ವರ ಎಂಬ ಭಾವನೆಯಿಂದ ನಿನಗೆ ದ್ವಿಜರ ಮೇಲೆ ಕೋಪವುಂಟಾಗದಿರಲಿ.

13144010a ಬ್ರಾಹ್ಮಣೋ ಹಿ ಮಹದ್ ಭೂತಮಸ್ಮಿಽಲ್ಲೋಕೇ ಪರತ್ರ ಚ।
13144010c ಭಸ್ಮ ಕುರ್ಯುರ್ಜಗದಿದಂ ಕ್ರುದ್ಧಾಃ ಪ್ರತ್ಯಕ್ಷದರ್ಶಿನಃ।।

ಇಲ್ಲಿ ಮತ್ತು ಪರಲೋಕದಲ್ಲಿ ಬ್ರಾಹ್ಮಣನೇ ಒಂದು ಮಹಾಭೂತ. ಪ್ರತ್ಯಕ್ಷದರ್ಶಿಗಳಾದ ಅವರು ಕ್ರುದ್ಧರಾದರೆ ಈ ಜಗತ್ತನೇ ಭಸ್ಮಮಾಡಬಲ್ಲರು.

13144011a ಅನ್ಯಾನಪಿ ಸೃಜೇಯುಶ್ಚ ಲೋಕಾಽಲ್ಲೋಕೇಶ್ವರಾಂಸ್ತಥಾ।
13144011c ಕಥಂ ತೇಷು ನ ವರ್ತೇಯ ಸಮ್ಯಗ್ ಜ್ಞಾನಾತ್ಸುತೇಜಸಃ।।

ಅವರು ಬೇರೆಯೇ ಲೋಕಗಳನ್ನು ಮತ್ತು ಲೋಕೇಶ್ವರರನ್ನು ಸೃಷ್ಟಿಸಬಲ್ಲರು. ಅವರ ತೇಜಸ್ಸನ್ನು ತಿಳಿದವರು ಹೇಗೆ ತಾನೇ ಅವರೊಂದಿಗೆ ಸರಿಯಾಗಿ ನಡೆದುಕೊಳ್ಳದೇ ಇರುವರು?

13144012a ಅವಸನ್ಮದ್ಗೃಹೇ ತಾತ ಬ್ರಾಹ್ಮಣೋ ಹರಿಪಿಂಗಲಃ।
13144012c ಚೀರವಾಸಾ ಬಿಲ್ವದಂಡೀ ದೀರ್ಘಶ್ಮಶ್ರುನಖಾದಿಮಾನ್।

ಮಗೂ! ಹಿಂದೊಮ್ಮೆ ನನ್ನ ಮನೆಯಲ್ಲಿ ಕಂದು-ಹಳದೀ ಬಣ್ಣದ ಬ್ರಾಹ್ಮಣನು ವಾಸಿಸುತ್ತಿದ್ದನು. ನಾರುಬಟ್ಟೆಯನ್ನುಟ್ಟು ಬಿಲ್ವದಂಡವನ್ನು ಹಿಡಿದಿದ್ದ ಅವನ ಮೀಸೆ-ಗಡ್ಡಗಳು ನೀಳವಾಗಿದ್ದವು ಮತ್ತು ಅವನು ಅತ್ಯಂತ ಕೃಶನಾಗಿದ್ದನು.

13144012e ದೀರ್ಘೇಭ್ಯಶ್ಚ ಮನುಷ್ಯೇಭ್ಯಃ ಪ್ರಮಾಣಾದಧಿಕೋ ಭುವಿ।।
13144013a ಸ ಸ್ಮ ಸಂಚರತೇ ಲೋಕಾನ್ಯೇ ದಿವ್ಯಾ ಯೇ ಚ ಮಾನುಷಾಃ।
13144013c ಇಮಾ ಗಾಥಾ ಗಾಯಮಾನಶ್ಚತ್ವರೇಷು ಸಭಾಸು ಚ।।
13144014a ದುರ್ವಾಸಸಂ ವಾಸಯೇತ್ಕೋ ಬ್ರಾಹ್ಮಣಂ ಸತ್ಕೃತಂ ಗೃಹೇ।

ಭುವಿಯಲ್ಲಿರುವ ಅತಿ ಎತ್ತರ ಮನುಷ್ಯರಗಿಂತಲೂ ಅಧಿಕ ಎತ್ತರದವನಾಗಿದ್ದನು. ದಿವ್ಯಲೋಕಗಳನ್ನೂ ಮನುಷ್ಯ ಲೋಕಗಳನ್ನೂ ಸಂಚರಿಸುತ್ತಿದ್ದ ಅವನು ನಾಲ್ಕು ಬೀದಿಗಳು ಕೂಡುವಲ್ಲಿ ಮತ್ತು ಸಭೆಗಳಲ್ಲಿ ಈ ಮಾತನ್ನು ಹೇಳುತ್ತಿದ್ದನು: “ಬ್ರಾಹ್ಮಣನಾದ ಈ ದುರ್ವಾಸನನ್ನು ತನ್ನ ಮನೆಯಲ್ಲಿಟ್ಟುಕೊಂಡು ಸತ್ಕರಿಸುವವರು ಯಾರಿದ್ದಾರೆ?

613144014c ಪರಿಭಾಷಾಂ ಚ ಮೇ ಶ್ರುತ್ವಾ ಕೋ ನು ದದ್ಯಾತ್ಪ್ರತಿಶ್ರಯಮ್।
13144014e ಯೋ ಮಾಂ ಕಶ್ಚಿದ್ವಾಸಯೇತ ನ ಸ ಮಾಂ ಕೋಪಯೇದಿಹ।।

ನನ್ನ ಈ ಮಾತನ್ನು ಕೇಳಿಯೂ ಕೂಡ ಯಾರು ನನಗೆ ಆಶ್ರಯವನ್ನು ನೀಡಬಲ್ಲರು? ಯಾರು ನನ್ನನ್ನು ತಮ್ಮ ಮನೆಯಲ್ಲಿ ವಾಸಿಸಲು ಬಯಸುತ್ತಾರೋ ಅವರು ನನಗೆ ಕೋಪಬರುವಂತೆ ನಡೆದುಕೊಳ್ಳಬಾರದು.”

13144015a ತಂ ಸ್ಮ ನಾದ್ರಿಯತೇ ಕಶ್ಚಿತ್ತತೋಽಹಂ ತಮವಾಸಯಮ್।

ಯಾರೂ ಅವನನ್ನು ಸತ್ಕರಿಸದೇ ಇದ್ದಾಗ ನಾನು ಅವನಿಗೆ ನಮ್ಮ ಮನೆಯಲ್ಲಿ ವಾಸಿಸಲು ವ್ಯವಸ್ಥೆ ಮಾಡಿದೆನು.

13144016a ಸ ಸ್ಮ ಭುಂಕ್ತೇ ಸಹಸ್ರಾಣಾಂ ಬಹೂನಾಮನ್ನಮೇಕದಾ।
13144016c ಏಕದಾ ಸ್ಮಾಲ್ಪಕಂ ಭುಂಕ್ತೇ ನ ವೈತಿ ಚ ಪುನರ್ಗೃಹಾನ್।।

ಅವನು ಒಮ್ಮೆ ಅನೇಕ ಸಹಸ್ರಾರು ಜನರ ಊಟವನ್ನು ಒಂದೇ ಸಾರಿ ಉಣ್ಣುತ್ತಿದ್ದನು. ಇನ್ನೊಮ್ಮೆ ಅಲ್ಪವನ್ನೇ ತಿನ್ನುತ್ತಿದ್ದನು. ಒಮ್ಮೆ ಮನೆಯನ್ನು ಬಿಟ್ಟುಹೋದನೆಂದರೆ ಪುನಃ ಅನೇಕ ದಿವಸಗಳ ವರೆಗೆ ಮನೆಗೆ ಹಿಂದಿರುಗುತ್ತಲೇ ಇರಲಿಲ್ಲ.

13144017a ಅಕಸ್ಮಾಚ್ಚ ಪ್ರಹಸತಿ ತಥಾಕಸ್ಮಾತ್ ಪ್ರರೋದಿತಿ।
13144017c ನ ಚಾಸ್ಯ ವಯಸಾ ತುಲ್ಯಃ ಪೃಥಿವ್ಯಾಮಭವತ್ತದಾ।।

ಅಕಸ್ಮಾತ್ತಾಗಿ ನಗುತ್ತಿದ್ದನು. ಅಕಸ್ಮಾತ್ತಾಗಿ ರೋದಿಸುತ್ತಿದನು. ಆಗ ಪೃಥ್ವಿಯಲ್ಲಿ ಅವನ ಸಮವಯಸ್ಕರು ಯಾರೂ ಇರಲಿಲ್ಲ.

13144018a ಸೋಽಸ್ಮದಾವಸಥಂ ಗತ್ವಾ ಶಯ್ಯಾಶ್ಚಾಸ್ತರಣಾನಿ ಚ।
13144018c ಕನ್ಯಾಶ್ಚಾಲಂಕೃತಾ ದಗ್ಧ್ವಾ ತತೋ ವ್ಯಪಗತಃ ಸ್ವಯಮ್।।

ಬಹುದಿನಗಳ ವರೆಗೆ ಹೊರಗೆ ಹೋಗಿದ್ದ ಅವನು ಒಂದು ದಿನ ತನ್ನ ಬಿಡಾರಕ್ಕೆ ಹೋಗಿ ಅಲ್ಲಿದ್ದ ಹಾಸಿಗೆಯನ್ನೂ, ಹಚ್ಚಡವನ್ನೂ, ಆಭರಗಳಿಂದ ಅಲಂಕೃತೆಯರಾಗಿ ಸೇವೆಗೆ ಸಿದ್ಧರಾಗಿದ್ದ ಕನ್ಯೆಯರನ್ನೂ ಸುಟ್ಟು ಭಸ್ಮಮಾಡಿ ಪುನಃ ಹೊರಟುಹೋದನು.

13144019a ಅಥ ಮಾಮಬ್ರವೀದ್ ಭೂಯಃ ಸ ಮುನಿಃ ಸಂಶಿತವ್ರತಃ।
13144019c ಕೃಷ್ಣ ಪಾಯಸಮಿಚ್ಚಾಮಿ ಭೋಕ್ತುಮಿತ್ಯೇವ ಸತ್ವರಃ।।

ಮತ್ತೊಮ್ಮೆ ನನ್ನ ಬಳಿಬಂದು ಆ ಸಂಶಿತವ್ರತ ಮುನಿಯು “ಕೃಷ್ಣ! ಈಗಲೇ ನಾನು ಪಾಯಸವನ್ನು ತಿನ್ನಲು ಬಯಸುತ್ತೇನೆ” ಎಂದನು.

13144020a ಸದೈವ ತು ಮಯಾ ತಸ್ಯ ಚಿತ್ತಜ್ಞೇನ ಗೃಹೇ ಜನಃ।
13144020c ಸರ್ವಾಣ್ಯೇವಾನ್ನಪಾನಾನಿ ಭಕ್ಷ್ಯಾಶ್ಚೋಚ್ಚಾವಚಾಸ್ತಥಾ।
13144020e ಭವಂತು ಸತ್ಕೃತಾನೀತಿ ಪೂರ್ವಮೇವ ಪ್ರಚೋದಿತಃ।।
13144021a ತತೋಽಹಂ ಜ್ವಲಮಾನಂ ವೈ ಪಾಯಸಂ ಪ್ರತ್ಯವೇದಯಮ್।

ಅವನ ಮನಸ್ಸನ್ನು ತಿಳಿದಿದ್ದ ನಾನು ನನ್ನ ಮನೆಯ ಜನರಿಗೆ ಸರ್ವ ಅನ್ನ-ಪಾನೀಯಗಳನ್ನೂ, ಭಕ್ಷ್ಯಗಳನ್ನೂ ಮಾಡಿರಬೇಕೆಂದು ಹೇಳಿದ್ದೆನು. ನಾನು ಹೇಳಿದ್ದಂತೆಯೇ ಅವೆಲ್ಲವೂ ಸಿದ್ಧವಾಗಿಯೇ ಇದ್ದವು. ಆದುದರಿಂದ ನಾನು ಅವನಿಗೆ ಬಿಸಿ ಬಿಸಿ ಪಾಯಸವನ್ನು ಅರ್ಪಿಸಿದೆನು.

13144021c ತದ್ಭುಕ್ತ್ವೈವ ತು ಸ ಕ್ಷಿಪ್ರಂ ತತೋ ವಚನಮಬ್ರವೀತ್।
13144021e ಕ್ಷಿಪ್ರಮಂಗಾನಿ ಲಿಂಪಸ್ವ ಪಾಯಸೇನೇತಿ ಸ ಸ್ಮ ಹ।।

ಬೇಗನೇ ಆ ಪಾಯಸವನ್ನು ಕುಡಿದು ಅವನು ನನಗೆ ಈ ಮಾತನ್ನಾಡಿದನು: “ಬೇಗನೇ ಈ ಪಾಯಸವನ್ನು ಲೇಪಿಸಿಕೋ!”

13144022a ಅವಿಮೃಶ್ಯೈವ ಚ ತತಃ ಕೃತವಾನಸ್ಮಿ ತತ್ತಥಾ।
13144022c ತೇನೋಚ್ಚಿಷ್ಟೇನ ಗಾತ್ರಾಣಿ ಶಿರಶ್ಚೈವಾಭ್ಯಮೃಕ್ಷಯಮ್।।

ಅದನ್ನು ಮಾಡಬೇಕೋ ಬೇಡವೋ ಎಂದು ವಿಮರ್ಶಿಸದೇ ನಾನು ಆ ಎಂಜಲನ್ನು ನನ್ನ ಶರೀರಕ್ಕೂ ತಲೆಗೂ ಲೇಪಿಸಿಕೊಂಡೆನು.

13144023a ಸ ದದರ್ಶ ತದಾಭ್ಯಾಶೇ ಮಾತರಂ ತೇ ಶುಭಾನನಾಮ್।
13144023c ತಾಮಪಿ ಸ್ಮಯಮಾನಃ ಸ ಪಾಯಸೇನಾಭ್ಯಲೇಪಯತ್।।

ಪಕ್ಕದಲ್ಲಿಯೇ ಇದ್ದ ನಿನ್ನ ತಾಯಿ ಶುಭಾನನೆಯನ್ನು ಅವನು ನೋಡಿದನು. ನಸುನಗುತ್ತಾ ಅವನು ಆ ಪಾಯಸವನ್ನು ಅವಳಿಗೂ ಕೂಡ ಲೇಪಿಸುವಂತೆ ಮಾಡಿದನು.

13144024a ಮುನಿಃ ಪಾಯಸದಿಗ್ಧಾಂಗೀಂ ರಥೇ ತೂರ್ಣಮಯೋಜಯತ್।
13144024c ತಮಾರುಹ್ಯ ರಥಂ ಚೈವ ನಿರ್ಯಯೌ ಸ ಗೃಹಾನ್ಮಮ।।

ಆ ಮುನಿಯು ಕೂಡಲೇ ಪಾಯಸದಿಂದ ನೆನೆದು ಹೋಗಿದ್ದ ಅವಳನ್ನು ರಥಕ್ಕೆ ಕಟ್ಟಿದನು. ಆ ರಥವನ್ನೇರಿ ನನ್ನ ಮನೆಯಿಂದ ಅವನು ಹೊರಟನು.

13144025a ಅಗ್ನಿವರ್ಣೋ ಜ್ವಲನ್ಧೀಮಾನ್ಸ ದ್ವಿಜೋ ರಥಧುರ್ಯವತ್।
13144025c ಪ್ರತೋದೇನಾತುದದ್ಬಾಲಾಂ ರುಕ್ಮಿಣೀಂ ಮಮ ಪಶ್ಯತಃ।।

ಅಗ್ನಿವರ್ಣದಿಂದ ಪ್ರಜ್ವಲಿಸುತ್ತಿದ್ದ ಆ ದೀಮಾನ್ ದ್ವಿಜನು ರಥವನ್ನು ನಡೆಸುತ್ತಾ ಬಾಲೆ ರುಕ್ಮಿಣಿಯನ್ನು ಚಾವಟಿಯಿಂದ ಹೊಡೆಯುತ್ತಿದ್ದುದನ್ನು ನಾನು ನೋಡಿದೆನು.

13144026a ನ ಚ ಮೇ ಸ್ತೋಕಮಪ್ಯಾಸೀದ್ದುಃಖಮೀರ್ಷ್ಯಾಕೃತಂ ತದಾ।
13144026c ತತಃ ಸ ರಾಜಮಾರ್ಗೇಣ ಮಹತಾ ನಿರ್ಯಯೌ ಬಹಿಃ।।

ಆಗ ನನಗೆ ಅವನು ಮಾಡಿದ ಕಾರ್ಯದಿಂದ ದುಃಖವಾಗಲೀ ಈರ್ಷೆಯಾಗಲೀ ಉಂಟಾಗಲಿಲ್ಲ. ಅನಂತರ ಅವನು ಮಹಾ ರಾಜಮಾರ್ಗದಿಂದ ಹೊರಕ್ಕೆ ಹೋದನು.

13144027a ತದ್ದೃಷ್ಟ್ವಾ ಮಹದಾಶ್ಚರ್ಯಂ ದಾಶಾರ್ಹಾ ಜಾತಮನ್ಯವಃ।
13144027c ತತ್ರಾಜಲ್ಪನ್ಮಿಥಃ ಕೇ ಚಿತ್ಸಮಾಭಾಷ್ಯ ಪರಸ್ಪರಮ್।।

ಆ ಮಹದಾಶ್ಚರ್ಯವನ್ನು ನೋಡಿ ದಾಶಾರ್ಹರು ಕುಪಿತರಾದರು. ಅವರಲ್ಲಿ ಕೆಲವರು ಪರಸ್ಪರ ಮಾತನಾಡಿಕೊಂಡರು:

13144028a ಬ್ರಾಹ್ಮಣಾ ಏವ ಜಾಯೇರನ್ನಾನ್ಯೋ ವರ್ಣಃ ಕಥಂ ಚನ।
13144028c ಕೋ ಹ್ಯೇನಂ ರಥಮಾಸ್ಥಾಯ ಜೀವೇದನ್ಯಃ ಪುಮಾನಿಹ।।

“ಬ್ರಾಹ್ಮಣರಾಗಿ ಮಾತ್ರ ಹುಟ್ಟಬೇಕು. ಬೇರೆ ಯಾವ ವರ್ಣದವರಾಗಿಯೂ ಹುಟ್ಟಬಾರದು. ಇವನಲ್ಲದೇ ಬೇರೆ ಯಾರು ತಾನೇ ಆ ರಥವನ್ನೇರಿ ಜೀವಿಸಿಯಿದ್ದಾನು?

13144029a ಆಶೀವಿಷವಿಷಂ ತೀಕ್ಷ್ಣಂ ತತಸ್ತೀಕ್ಷ್ಣತರಂ ವಿಷಮ್7
13144029c ಬ್ರಹ್ಮಾಶೀವಿಷದಗ್ಧಸ್ಯ ನಾಸ್ತಿ ಕಶ್ಚಿಚ್ಚಿಕಿತ್ಸಕಃ।।

ಸರ್ಪದ ವಿಷವು ತೀಕ್ಷ್ಣ. ವಿಷಕ್ಕಿಂತಲೂ ತೀಕ್ಷ್ಣನು ಬ್ರಾಹ್ಮಣ. ಬ್ರಾಹ್ಮಣರೂಪೀ ವಿಷಸರ್ಪದಿಂದ ಸುಡಲ್ಪಟ್ಟವನಿಗೆ ಯಾವ ಚಿಕಿತ್ಸೆಯೂ ಇಲ್ಲ.”

13144030a ತಸ್ಮಿನ್ವ್ರಜತಿ ದುರ್ಧರ್ಷೇ ಪ್ರಾಸ್ಖಲದ್ರುಕ್ಮಿಣೀ ಪಥಿ।
13144030c ತಾಂ ನಾಮರ್ಷಯತ ಶ್ರೀಮಾಂಸ್ತತಸ್ತೂರ್ಣಮಚೋದಯತ್।।

ಆ ದುರ್ಧರ್ಷನು ಹೇಗೆ ಪ್ರಯಾಣಿಸುತ್ತಿರುವಾಗ ದಾರಿಯಲ್ಲಿ ರುಕ್ಮಿಣಿಯು ಎಡವಿದಳು. ಅದನ್ನು ಸಹಿಸಿಕೊಳ್ಳಲಾರದೇ ಆ ಶ್ರೀಮಾನನು ತಕ್ಷಣವೇ ಅವಳನ್ನು ಚಾವಟಿಯಿಂದ ಹೊಡೆದನು.

13144031a ತತಃ ಪರಮಸಂಕ್ರುದ್ಧೋ ರಥಾತ್ ಪ್ರಸ್ಕಂದ್ಯ ಸ ದ್ವಿಜಃ।
13144031c ಪದಾತಿರುತ್ಪಥೇನೈವ ಪ್ರಾಧಾವದ್ದಕ್ಷಿಣಾಮುಖಃ।।

ಅನಂತರ ಪರಮಸಂಕ್ರುದ್ಧನಾದ ಆ ದ್ವಿಜನು ರಥದಿಂದ ಹಾರಿ ಪದಾತಿಯಾಗಿಯೇ ದಕ್ಷಿಣಾಮುಖವಾಗಿ ಓಡತೊಡಗಿದನು.

13144032a ತಮುತ್ಪಥೇನ ಧಾವಂತಮನ್ವಧಾವಂ ದ್ವಿಜೋತ್ತಮಮ್।
13144032c ತಥೈವ ಪಾಯಸಾದಿಗ್ಧಃ ಪ್ರಸೀದ ಭಗವನ್ನಿತಿ।।

ಓಡಿ ಹೋಗುತ್ತಿರುವ ಆ ದ್ವಿಜೋತ್ತಮನನ್ನು ಪಾಯಸದಿಂದ ಒದ್ದೆಯಾಗಿದ್ದ ನಾನೂ ಕೂಡ ಓಡುತ್ತಾ ಹಿಂಬಾಲಿಸಿ ಹೋಗಿ “ಭಗವನ್! ಪ್ರಸೀದನಾಗು!” ಎಂದು ಹೇಳಿದೆನು.

13144033a ತತೋ ವಿಲೋಕ್ಯ ತೇಜಸ್ವೀ ಬ್ರಾಹ್ಮಣೋ ಮಾಮುವಾಚ ಹ।
13144033c ಜಿತಃ ಕ್ರೋಧಸ್ತ್ವಯಾ ಕೃಷ್ಣ ಪ್ರಕೃತ್ಯೈವ ಮಹಾಭುಜ।।

ಆಗ ಆ ತೇಜಸ್ವೀ ಬ್ರಾಹ್ಮಣನು ಹಿಂದೆ ನೋಡಿ ನನಗೆ ಹೇಳಿದನು: “ಮಹಾಭುಜ! ಕೃಷ್ಣ! ಸ್ವಾಭಾವಿಕವಾಗಿಯೇ ನೀನು ಕ್ರೋಧವನ್ನು ಗೆದ್ದಿದ್ದೀಯೆ.

13144034a ನ ತೇಽಪರಾಧಮಿಹ ವೈ ದೃಷ್ಟವಾನಸ್ಮಿ ಸುವ್ರತ।
13144034c ಪ್ರೀತೋಽಸ್ಮಿ ತವ ಗೋವಿಂದ ವೃಣು ಕಾಮಾನ್ಯಥೇಪ್ಸಿತಾನ್।
13144034e ಪ್ರಸನ್ನಸ್ಯ ಚ ಮೇ ತಾತ ಪಶ್ಯ ವ್ಯುಷ್ಟಿರ್ಯಥಾವಿಧಾ।।

ಸುವ್ರತ! ನಿನ್ನಲ್ಲಿ ನಾನು ಯಾವ ಅಪರಾಧವನ್ನೂ ಕಾಣಲಿಲ್ಲ. ಗೋವಿಂದ! ನಿನ್ನ ಮೇಲೆ ನಾನು ಪ್ರೀತನಾಗಿದ್ದೇನೆ. ಬಯಸಿದ ವರವನ್ನು ಕೇಳಿಕೋ! ಅಯ್ಯಾ! ನಾನು ಪ್ರಸನ್ನನಾಗಿರುವುದರಿಂದ ನಿನಗೆ ಯಾವ ವಿಧವಾದ ಫಲವು ದೊರೆಯುತ್ತದೆ ಎನ್ನುವುದನ್ನು ನೋಡು.

13144035a ಯಾವದೇವ ಮನುಷ್ಯಾಣಾಮನ್ನೇ ಭಾವೋ ಭವಿಷ್ಯತಿ।
13144035c ಯಥೈವಾನ್ನೇ ತಥಾ ತೇಷಾಂ ತ್ವಯಿ ಭಾವೋ ಭವಿಷ್ಯತಿ।।

ಎಲ್ಲಿಯವರೆಗೆ ಮನುಷ್ಯರಲ್ಲಿ ಅನ್ನದ ಮೇಲೆ ಪ್ರೀತಿಯಿರುತ್ತದೆಯೋ ಅಲ್ಲಿಯವರೆಗೆ ಅನ್ನದಂತೆ ನಿನ್ನ ಮೇಲೆಯೂ ಪ್ರೀತಿಯನ್ನಿಡುತ್ತಾರೆ.

13144036a ಯಾವಚ್ಚ ಪುಣ್ಯಾ ಲೋಕೇಷು ತ್ವಯಿ ಕೀರ್ತಿರ್ಭವಿಷ್ಯತಿ।
13144036c ತ್ರಿಷು ಲೋಕೇಷು ತಾವಚ್ಚ ವೈಶಿಷ್ಟ್ಯಂ ಪ್ರತಿಪತ್ಸ್ಯಸೇ।
13144036e ಸುಪ್ರಿಯಃ ಸರ್ವಲೋಕಸ್ಯ ಭವಿಷ್ಯಸಿ ಜನಾರ್ದನ।।

ಜನಾರ್ದನ! ಎಲ್ಲಿಯವರೆಗೆ ಪುಣ್ಯ ಲೋಕಗಳಲ್ಲಿ ನಿನ್ನ ಕೀರ್ತಿಯು ಇರುತ್ತದೆಯೋ ಅಲ್ಲಿಯವರೆಗೆ ನೀನು ಮೂರು ಲೋಕಗಳಲ್ಲಿ ವೈಶಿಷ್ಟ್ಯತೆಯನ್ನು ಪಡೆದುಕೊಳ್ಳುತ್ತೀಯೆ. ಸರ್ವಲೋಕದ ಸುಪ್ರಿಯನಾಗುತ್ತೀಯೆ.

13144037a ಯತ್ತೇ ಭಿನ್ನಂ ಚ ದಗ್ಧಂ ಚ ಯಚ್ಚ ಕಿಂ ಚಿದ್ವಿನಾಶಿತಮ್।
13144037c ಸರ್ವಂ ತಥೈವ ದ್ರಷ್ಟಾಸಿ ವಿಶಿಷ್ಟಂ ವಾ ಜನಾರ್ದನ।।

ಜನಾರ್ದನ! ಯಾವುದು ಒಡೆದುಹೋಗಿದೆಯೋ, ಸುಟ್ಟುಹೋಗಿದೆಯೋ ಮತ್ತು ವಿನಾಶವಾಗಿದೆಯೋ ಅವೆಲ್ಲವನ್ನೂ ಹಾಗೆಯೇ ಮತ್ತು ಇನ್ನೂ ವಿಶಿಷ್ಟವಾಗಿರುವುದನ್ನು ನೀನು ನೋಡುತ್ತೀಯೆ.

13144038a ಯಾವದೇತತ್ ಪ್ರಲಿಪ್ತಂ ತೇ ಗಾತ್ರೇಷು ಮಧುಸೂದನ।
13144038c ಅತೋ ಮೃತ್ಯುಭಯಂ ನಾಸ್ತಿ ಯಾವದಿಚ್ಚಾ ತವಾಚ್ಯುತ।।

ಮಧುಸೂದನ! ನೀನು ಇದನ್ನು ನಿನ್ನ ಶರೀರದಲ್ಲಿ ಬಳಿದುಕೊಂಡಿರುವರಿಂದ ನಿನಗೆ ಮೃತ್ಯುಭಯವಿರುವುದಿಲ್ಲ. ಅಚ್ಯುತ! ನಿನಗೆ ಇಚ್ಛೆಯಾದಾಗ ಮೃತ್ಯುವನ್ನು ಹೊಂದುತ್ತೀಯೆ.

13144039a ನ ತು ಪಾದತಲೇ ಲಿಪ್ತೇ ಕಸ್ಮಾತ್ತೇ ಪುತ್ರಕಾದ್ಯ ವೈ।
13144039c ನೈತನ್ಮೇ ಪ್ರಿಯಮಿತ್ಯೇವ ಸ ಮಾಂ ಪ್ರೀತೋಽಬ್ರವೀತ್ತದಾ।
13144039e ಇತ್ಯುಕ್ತೋಽಹಂ ಶರೀರಂ ಸ್ವಮಪಶ್ಯಂ ಶ್ರೀಸಮಾಯುತಮ್।।

ಆದರೆ ಪುತ್ರಕ! ಇಂದು ನೀನು ಏಕೆ ಇದನ್ನು ಅಂಗಾಲುಗಳಿಗೆ ಲೇಪಿಸಿಕೊಳ್ಳಲಿಲ್ಲ?8” ಇದನ್ನು ನನಗೆ ಪ್ರೀತನಾದ ಅವನು ಪ್ರೀತಿಯಿಂದಲೇ ಹೇಳಿದನು. ಇದನ್ನು ಹೇಳಿದೊಡನೆಯೇ ನನ್ನ ಶರೀರವು ಅತ್ಯಂತ ಕಾಂತಿಯುಕ್ತವಾದುದನ್ನು ನೋಡಿದೆನು.

13144040a ರುಕ್ಮಿಣೀಂ ಚಾಬ್ರವೀತ್ ಪ್ರೀತಃ ಸರ್ವಸ್ತ್ರೀಣಾಂ ವರಂ ಯಶಃ।
13144040c ಕೀರ್ತಿಂ ಚಾನುತ್ತಮಾಂ ಲೋಕೇ ಸಮವಾಪ್ಸ್ಯಸಿ ಶೋಭನೇ।।

ಪ್ರೀತನಾಗಿ ಸರ್ವಸ್ತ್ರೀಯರಲ್ಲಿ ಶ್ರೇಷ್ಠಳಾದ ರುಕ್ಮಿಣಿಗೆ ಹೇಳಿದನು: “ಶೋಭನೇ! ಯಶಸ್ಸು, ಕೀರ್ತಿ ಮತ್ತು ಉತ್ತಮ ಲೋಕವನ್ನು ಪಡೆಯುತ್ತೀಯೆ.

13144041a ನ ತ್ವಾಂ ಜರಾ ವಾ ರೋಗೋ ವಾ ವೈವರ್ಣ್ಯಂ ಚಾಪಿ ಭಾಮಿನಿ।
13144041c ಸ್ಪ್ರಕ್ಷ್ಯಂತಿ ಪುಣ್ಯಗಂಧಾ ಚ ಕೃಷ್ಣಮಾರಾಧಯಿಷ್ಯಸಿ।।

ಭಾಮಿನೀ! ಮುಪ್ಪಾಗಲೀ, ರೋಗವಾಗಲೀ ಮತ್ತು ವೈವರ್ಣ್ಯವಾಗಲೀ ನಿನ್ನ ಬಳಿ ಬರುವುದಿಲ್ಲ. ಪುಣ್ಯಗಂಧಯುಕ್ತಳಾಗಿ ಕೃಷ್ಣನನ್ನು ಆರಾಧಿಸುತ್ತೀಯೆ.

13144042a ಷೋಡಶಾನಾಂ ಸಹಸ್ರಾಣಾಂ ವಧೂನಾಂ ಕೇಶವಸ್ಯ ಹ।
13144042c ವರಿಷ್ಠಾ ಸಹಲೋಕ್ಯಾ ಚ9 ಕೇಶವಸ್ಯ ಭವಿಷ್ಯಸಿ।।

ಕೇಶವನ ಹದಿನಾರು ಸಾವಿರ ಪತ್ನಿಯರಲ್ಲಿ ನೀನು ಶ್ರೇಷ್ಠಳೂ ಸಹಲೋಕಳೂ ಆಗುವೆ.”

13144043a ತವ ಮಾತರಮಿತ್ಯುಕ್ತ್ವಾ ತತೋ ಮಾಂ ಪುನರಬ್ರವೀತ್।
13144043c ಪ್ರಸ್ಥಿತಃ ಸುಮಹಾತೇಜಾ ದುರ್ವಾಸಾ ವಹ್ನಿವಜ್ಜ್ವಲನ್।।

ನಿನ್ನ ತಾಯಿಗೆ ಹೀಗೆ ಹೇಳಿ ಅಗ್ನಿಯಂತೆ ಪ್ರಜ್ವಲಿಸುತ್ತಿದ್ದ ಮಹಾತೇಜಸ್ವೀ ದುರ್ವಾಸನು ಹೊರಡುವಾಗ ಪುನಃ ನನಗೆ ಹೇಳಿದನು:

13144044a ಏಷೈವ ತೇ ಬುದ್ಧಿರಸ್ತು ಬ್ರಾಹ್ಮಣಾನ್ ಪ್ರತಿ ಕೇಶವ।
13144044c ಇತ್ಯುಕ್ತ್ವಾ ಸ ತದಾ ಪುತ್ರ ತತ್ರೈವಾಂತರಧೀಯತ।।

“ಕೇಶವ! ಬ್ರಾಹ್ಮಣರೊಡನೆ ನಿನಗೆ ಇದೇ ಬುದ್ಧಿಯು ಇರಲಿ!” ಪುತ್ರ! ಹೀಗೆ ಹೇಳಿ ಅವನು ಅಲ್ಲಿಯೇ ಅಂತರ್ಧಾನನಾದನು.

13144045a ತಸ್ಮಿನ್ನಂತರ್ಹಿತೇ ಚಾಹಮುಪಾಂಶುವ್ರತಮಾದಿಶಮ್।
13144045c ಯತ್ಕಿಂ ಚಿದ್ಬ್ರಾಹ್ಮಣೋ ಬ್ರೂಯಾತ್ಸರ್ವಂ ಕುರ್ಯಾಮಿತಿ ಪ್ರಭೋ।।

ಅಂದಿನಿಂದ ನಾನು ರಹಸ್ಯವಾಗಿ “ಯಾವುದೇ ಬ್ರಾಹ್ಮಣನು ಏನೇ ಹೇಳಿದರೂ ಅವೆಲ್ಲವನ್ನೂ ಮಾಡುತ್ತೇನೆ” ಎಂಬ ಈ ವ್ರತವನ್ನು ಕೈಗೊಂಡೆನು.

13144046a ಏತದ್ವ್ರತಮಹಂ ಕೃತ್ವಾ ಮಾತ್ರಾ ತೇ ಸಹ ಪುತ್ರಕ।
13144046c ತತಃ ಪರಮಹೃಷ್ಟಾತ್ಮಾ ಪ್ರಾವಿಶಂ ಗೃಹಮೇವ ಚ।।

ಪುತ್ರಕ! ಹೀಗೆ ವ್ರತವನ್ನು ಕೈಗೊಂಡು ನಿನ್ನ ಮಾತೆಯೊಂದಿಗೆ ಪರಮ ಹೃಷ್ಟಾತ್ಮನಾಗಿ ನನ್ನ ಮನೆಯನ್ನು ಪ್ರವೇಶಿಸಿದೆನು.

13144047a ಪ್ರವಿಷ್ಟಮಾತ್ರಶ್ಚ ಗೃಹೇ ಸರ್ವಂ ಪಶ್ಯಾಮಿ ತನ್ನವಮ್।
13144047c ಯದ್ಭಿನ್ನಂ ಯಚ್ಚ ವೈ ದಗ್ಧಂ ತೇನ ವಿಪ್ರೇಣ ಪುತ್ರಕ।।

ಪುತ್ರಕ! ಮನೆಯನ್ನು ಪ್ರವೇಶಿಸಿದ ಕೂಡಲೇ ಆ ವಿಪ್ರನು ಒಡೆದುಹಾಕಿದ್ದ ಮತ್ತು ಸುಟ್ಟುಹಾಕಿದ್ದ ಎಲ್ಲವೂ ಹೊಸತಾಗಿರುವುದನ್ನು ನಾನು ನೋಡಿದೆನು.

13144048a ತತೋಽಹಂ ವಿಸ್ಮಯಂ ಪ್ರಾಪ್ತಃ ಸರ್ವಂ ದೃಷ್ಟ್ವಾ ನವಂ ದೃಢಮ್।
13144048c ಅಪೂಜಯಂ ಚ ಮನಸಾ ರೌಕ್ಮಿಣೇಯ ದ್ವಿಜಂ ತದಾ।।

ಅವೆಲ್ಲವೂ ದೃಢವಾಗಿರುವುದನ್ನೂ ಹೊಸದಾಗಿರುವುದನ್ನೂ ನೋಡಿ ವಿಸ್ಮಿತನಾದೆನು. ರೌಕ್ಮಿಣೇಯ! ಆಗ ಮನಸ್ಸಿನಲ್ಲಿಯೇ ನಾನು ಆ ದ್ವಿಜನನ್ನು ಪೂಜಿಸಿದೆನು.”

13144049a ಇತ್ಯಹಂ ರೌಕ್ಮಿಣೇಯಸ್ಯ ಪೃಚ್ಚತೋ ಭರತರ್ಷಭ।
13144049c ಮಾಹಾತ್ಮ್ಯಂ ದ್ವಿಜಮುಖ್ಯಸ್ಯ ಸರ್ವಮಾಖ್ಯಾತವಾಂಸ್ತದಾ।।

ಭರತರ್ಷಭ! ರೌಕ್ಮಿಣೇಯನು ಕೇಳಿದುದಕ್ಕೆ ನಾನು ಇದನ್ನು ಹೇಳಿದೆನು. ದ್ವಿಜಮುಖ್ಯನ ಮಾಹಾತ್ಮ್ಯೆಯೆಲ್ಲವನ್ನೂ ಆಗ ಹೇಳಿದೆನು.

13144050a ತಥಾ ತ್ವಮಪಿ ಕೌಂತೇಯ ಬ್ರಾಹ್ಮಣಾನ್ಸತತಂ ಪ್ರಭೋ।
13144050c ಪೂಜಯಸ್ವ ಮಹಾಭಾಗಾನ್ವಾಗ್ಭಿರ್ದಾನೈಶ್ಚ ನಿತ್ಯದಾ।।

ಕೌಂತೇಯ! ಪ್ರಭೋ! ಹಾಗೆಯೇ ನೀನೂ ಕೂಡ ಸತತವೂ ಮಹಾಭಾಗ ಬ್ರಾಹ್ಮಣರನ್ನು ನಿತ್ಯವೂ ಮಾತು-ದಾನಗಳಿಂದ ಪೂಜಿಸು.

13144051a ಏವಂ ವ್ಯುಷ್ಟಿಮಹಂ ಪ್ರಾಪ್ತೋ ಬ್ರಾಹ್ಮಣಾನಾಂ ಪ್ರಸಾದಜಾಮ್।
13144051c ಯಚ್ಚ ಮಾಮಾಹ ಭೀಷ್ಮೋಽಯಂ ತತ್ಸತ್ಯಂ ಭರತರ್ಷಭ।।

ಭರತರ್ಷಭ! ಈ ರೀತಿ ನಾನು ಬ್ರಾಹ್ಮಣರ ಪ್ರಸನ್ನತೆಯಿಂದ ಹುಟ್ಟಿದ ಫಲವನ್ನು ಪಡೆದುಕೊಂಡಿದ್ದೇನೆ. ಭೀಷ್ಮನು ಹೇಳಿರುವುದು ಸತ್ಯ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ದುರ್ವಾಸೋಭಿಕ್ಷಾ ನಾಮ ಚತುಶ್ಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ದುರ್ವಾಸೋಭಿಕ್ಷಾ ಎನ್ನುವ ನೂರಾನಲ್ವತ್ನಾಲ್ಕನೇ ಅಧ್ಯಾಯವು.


  1. ಈಶ್ವರತ್ವಂ ಕುತಸ್ತೇಷಾಮಿಹೈವ ಚ ಪರತ್ರ ಚ। (ಭಾರತ ದರ್ಶನ). ↩︎

  2. ಸೌಮ್ಯಂ (ಭಾರತ ದರ್ಶನ). ↩︎

  3. ಬ್ರಾಹ್ಮಣಪ್ರತಿಪೂಜಾಯಾಮಾಯುಃ (ಭಾರತ ದರ್ಶನ). ↩︎

  4. ಬ್ರಾಹ್ಮಣಪೂಜಕಾಃ (ಭಾರತ ದರ್ಶನ). ↩︎

  5. ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ತ್ರಿವರ್ಗೇ ಚಾಪವರ್ಗೇ ಚ ಯಶಃಸ್ತ್ರೀರೋಗಶಾಂತಿಷು। ದೇವತಾಪಿತೃಪೂಜಾಸು ಸಂತೋಷ್ಯಾಶ್ಚೈವ ನೋ ದ್ವಿಜಾಃ।। ↩︎

  6. ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ರೋಷಣಃ ಸರ್ವಭೂತಾನಾಂ ಸೂಕ್ಷ್ಮೇಽಪ್ಯಪಕೃತೇ ಕೃತೇ। ↩︎

  7. ತತಸ್ತೀಕ್ಷ್ಣತರೋ ದ್ವಿಜಃ। (ಭಾರತ ದರ್ಶನ). ↩︎

  8. ದುರ್ವಾಸನ ಈ ವರದಿಂದ ಮೈತುಂಬಾ ಪಾಯಸವನ್ನು ಬಳಿದುಕೊಂಡಿದ್ದ ಕೃಷ್ಣನ ಶರೀರವು ವಜ್ರಮಯವಾಯಿತೆಂದೂ, ಅಂಗಾಲುಗಳಿಗೆ ಪಾಯಸವನ್ನು ಬಳಿದುಕೊಳ್ಳದೇ ಇದ್ದುದರಿಂದ ಮುಂದೆ ಅವನ ಅಂಗಾಲುಗಳಿಗೆ ತಾಗಿದ ಬಾಣದಿಂದಲೇ ಅವನು ಮೃತ್ಯುವನ್ನು ಹೊಂದಿದನೆಂದೂ ಪ್ರತೀತಿಯಿದೆ. ↩︎

  9. ವರಿಷ್ಠಾ ಚ ಸಲೋಕ್ಯಾ ಚ (ಭಾರತ ದರ್ಶನ). ↩︎