ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 143
ಸಾರ
ಭೀಷ್ಮನು ಶ್ರೀಕೃಷ್ಣನ ಮಹಾತ್ಮೆಯನ್ನು ಹೇಳಿ, ತಾನು ಬಳಲಿರುವನೆಂದೂ ಉಳಿದ ಧರ್ಮಗಳನ್ನು ಕೃಷ್ಣನಿಂದ ಕೇಳಿ ತಿಳಿಯಬೇಕೆಂದೂ ಯುಧಿಷ್ಠಿರನಿಗೆ ಹೇಳಿದುದು (1-44).
13143001 ಯುಧಿಷ್ಠಿರ ಉವಾಚ।
13143001a ಬ್ರಾಹ್ಮಣಾನರ್ಚಸೇ ರಾಜನ್ಸತತಂ ಸಂಶಿತವ್ರತಾನ್।
13143001c ಕಂ ತು ಕರ್ಮೋದಯಂ ದೃಷ್ಟ್ವಾ ತಾನರ್ಚಸಿ ನರಾಧಿಪ।।
ಯುಧಿಷ್ಠಿರನು ಹೇಳಿದನು: “ರಾಜನ್! ನರಾಧಿಪ! ನೀನು ಸತತವೂ ಸಂಶಿತವ್ರತ ಬ್ರಾಹ್ಮಣರನ್ನು ಅರ್ಚಿಸುತ್ತೀಯೆ. ನೀನು ಯಾವ ಕರ್ಮೋದಯವನ್ನು ನೋಡಿ ಅವರನ್ನು ಅರ್ಚಿಸುತ್ತೀಯೆ?
13143002a ಕಾಂ ವಾ ಬ್ರಾಹ್ಮಣಪೂಜಾಯಾಂ ವ್ಯುಷ್ಟಿಂ ದೃಷ್ಟ್ವಾ ಮಹಾವ್ರತ।
13143002c ತಾನರ್ಚಸಿ ಮಹಾಬಾಹೋ ಸರ್ವಮೇತದ್ವದಸ್ವ ಮೇ।।
ಮಹಾವ್ರತ! ಮಹಾಬಾಹೋ! ಯಾವ ಫಲಸಮೃದ್ಧಿಯನ್ನು ನೀರೀಕ್ಷಿಸಿ ಅವರನ್ನು ಸತ್ಕರಿಸುತ್ತೀಯೆ? ಎಲ್ಲವನ್ನೂ ನನಗೆ ಹೇಳು.”
13143003 ಭೀಷ್ಮ ಉವಾಚ।
13143003a ಏಷ ತೇ ಕೇಶವಃ ಸರ್ವಮಾಖ್ಯಾಸ್ಯತಿ ಮಹಾಮತಿಃ।
13143003c ವ್ಯುಷ್ಟಿಂ ಬ್ರಾಹ್ಮಣಪೂಜಾಯಾಂ ದೃಷ್ಟವ್ಯುಷ್ಟಿರ್ಮಹಾವ್ರತಃ।।
ಭೀಷ್ಮನು ಹೇಳಿದನು: “ಬ್ರಾಹ್ಮಣಪೂಜೆಯಿಂದ ಲಭಿಸುವ ಫಲಸಮೃದ್ಧಿಯನ್ನು ಕಂಡಿರುವ ಈ ಮಹಾಮತಿ ಮಹಾವ್ರತ ಕೇಶವನು ಎಲ್ಲವನ್ನೂ ಹೇಳುತ್ತಾನೆ.
13143004a ಬಲಂ ಶ್ರೋತ್ರೇ ವಾಙ್ಮನಶ್ಚಕ್ಷುಷೀ ಚ ಜ್ಞಾನಂ ತಥಾ ನ ವಿಶುದ್ಧಂ ಮಮಾದ್ಯ।
13143004c ದೇಹನ್ಯಾಸೋ ನಾತಿಚಿರಾನ್ಮತೋ ಮೇ ನ ಚಾತಿತೂರ್ಣಂ ಸವಿತಾದ್ಯ ಯಾತಿ।।
ಇಂದು ನನ್ನ ಬಲ, ಕಿವಿಗಳು, ಮಾತು, ಮನಸ್ಸು, ಕಣ್ಣುಗಳು ಮತ್ತು ಜ್ಞಾನ ಇವು ಶುದ್ಧವಾಗಿಲ್ಲ. ಎಲ್ಲವೂ ಮಸುಕಾಗಿವೆ. ದೇಹನ್ಯಾಸಕ್ಕೆ ಹೆಚ್ಚು ಸಮಯವಿಲ್ಲವೆಂದು ಭಾವಿಸುತ್ತೇನೆ. ಸೂರ್ಯನೂ ಮಂದಗತಿಯಲ್ಲಿ ಚಲಿಸುತ್ತಿರುವಂತೆ ಭಾಸವಾಗುತ್ತಿದೆ.
13143005a ಉಕ್ತಾ ಧರ್ಮಾ ಯೇ ಪುರಾಣೇ ಮಹಾಂತೋ ಬ್ರಾಹ್ಮಣಾನಾಂ ಕ್ಷತ್ರಿಯಾಣಾಂ ವಿಶಾಂ ಚ।
13143005c ಪೌರಾಣಂ ಯೇ ದಂಡಮುಪಾಸತೇ ಚ ಶೇಷಂ ಕೃಷ್ಣಾದುಪಶಿಕ್ಷಸ್ವ ಪಾರ್ಥ1।।
ಪುರಾಣಗಳಲ್ಲಿರುವ ಬ್ರಾಹ್ಮಣರ, ಕ್ಷತ್ರಿಯರ, ವೈಶ್ಯರ ಮಹಾ ಧರ್ಮಗಳ ಕುರಿತು ಹಾಗೂ ದಂಡವನ್ನು ಬಳಸುವುದರ ಕುರಿತೂ ಹೇಳಿದ್ದೇನೆ. ಪಾರ್ಥ! ಉಳಿದುದನ್ನು ಕೃಷ್ಣನಿಂದ ತಿಳಿದುಕೋ.
13143006a ಅಹಂ ಹ್ಯೇನಂ ವೇದ್ಮಿ ತತ್ತ್ವೇನ ಕೃಷ್ಣಂ ಯೋಽಯಂ ಹಿ ಯಚ್ಚಾಸ್ಯ ಬಲಂ ಪುರಾಣಮ್।
13143006c ಅಮೇಯಾತ್ಮಾ ಕೇಶವಃ ಕೌರವೇಂದ್ರ ಸೋಽಯಂ ಧರ್ಮಂ ವಕ್ಷ್ಯತಿ ಸಂಶಯೇಷು।।
ಕೌರವೇಂದ್ರ! ಕೃಷ್ಣನನ್ನು ನಾನು ಯಥಾವತ್ತಾಗಿ ತಿಳಿದಿದ್ದೇನೆ. ಪುರಾಣಪುರುಷನಾದ ಇವನ ಬಲವನ್ನೂ ತಿಳಿದಿದ್ದೇನೆ. ಅಮೇಯಾತ್ಮನಾದ ಈ ಕೇಶವನು ಧರ್ಮಸಂಶಯಗಳನ್ನು ನಿವಾರಿಸುತ್ತಾನೆ.
13143007a ಕೃಷ್ಣಃ ಪೃಥ್ವೀಮಸೃಜತ್ಖಂ ದಿವಂ ಚ ವರಾಹೋಽಯಂ ಭೀಮಬಲಃ ಪುರಾಣಃ2।
13143007c ಅಸ್ಯ ಚಾಧೋಽಥಾಂತರಿಕ್ಷಂ ದಿವಂ ಚ ದಿಶಶ್ಚತಸ್ರಃ ಪ್ರದಿಶಶ್ಚತಸ್ರಃ।
13143007e ಸೃಷ್ಟಿಸ್ತಥೈವೇಯಮನುಪ್ರಸೂತಾ ಸ ನಿರ್ಮಮೇ ವಿಶ್ವಮಿದಂ ಪುರಾಣಮ್।।
ಕೃಷ್ಣನು ಈ ಪೃಥ್ವಿ, ಆಕಾಶ ಮತ್ತು ಸ್ವರ್ಗಗಳನ್ನು ಸೃಷ್ಟಿಸಿದನು. ಇವನೇ ಪುರಾಣಪುರುಷ ಭೀಮಬಲ ವರಾಹನು. ಪಾತಾಳಲೋಕ ಅಂತರಿಕ್ಷ, ಸ್ವರ್ಗ, ದಿಕ್ಕುಗಳು ಮತ್ತು ಉಪದಿಕ್ಕುಗಳು ಇವನದ್ದೇ ಆಗಿವೆ. ಇವನಿಂದಲೇ ಸೃಷ್ಟಿಯ ಪರಂಪರೆಯು ನಡೆಯುತ್ತಾ ಬಂದಿದೆ. ಪುರಾತನ ಈ ವಿಶ್ವವನ್ನು ಇವನೇ ನಿರ್ಮಿಸಿದ್ದಾನೆ.
13143008a ಅಸ್ಯ ನಾಭ್ಯಾಂ ಪುಷ್ಕರಂ ಸಂಪ್ರಸೂತಂ ಯತ್ರೋತ್ಪನ್ನಃ ಸ್ವಯಮೇವಾಮಿತೌಜಾಃ।
13143008c ಯೇನಾಚ್ಚಿನ್ನಂ ತತ್ತಮಃ ಪಾರ್ಥ ಘೋರಂ ಯತ್ತತ್ತಿಷ್ಠತ್ಯರ್ಣವಂ ತರ್ಜಯಾನಮ್।।
ಪಾರ್ಥ! ಸೃಷ್ಟಿಯ ಆದಿಯಲ್ಲಿ ಇವನ ನಾಭಿಯಿಂದ ಕಮಲವು ಹುಟ್ಟಿತು. ಅದರಲ್ಲಿ ಮಹಾತೇಜಸ್ವೀ ಬ್ರಹ್ಮನು ತಾನೇ ತಾನಾಗಿ ಪ್ರಕಟಗೊಂಡನು. ಘೋರವಾಗಿದ್ದ ಸಮುದ್ರದಂತೆ ಅಗಾಧವಾಗಿದ್ದ ಆ ಭಯೋತ್ಪಾದಕ ಕತ್ತಲೆಯನ್ನು ಇವನೇ ಹೋಗಲಾಡಿಸಿದನು.
13143009a ಕೃತೇ ಯುಗೇ ಧರ್ಮ ಆಸೀತ್ಸಮಗ್ರಸ್ ತ್ರೇತಾಕಾಲೇ ಜ್ಞಾನಮನುಪ್ರಪನ್ನಃ।
13143009c ಬಲಂ ತ್ವಾಸೀದ್ದ್ವಾಪರೇ ಪಾರ್ಥ ಕೃಷ್ಣಃ ಕಲಾವಧರ್ಮಃ ಕ್ಷಿತಿಮಾಜಗಾಮ।।
ಪಾರ್ಥ! ಕೃತಯುಗದಲ್ಲಿ ಕೃಷ್ಣನು ಸಮಗ್ರ ಧರ್ಮನಾಗಿದ್ದನು. ತ್ರೇತಾಯುಗದಲ್ಲಿ ಪೂರ್ಣಜ್ಞಾನಸ್ವರೂಪನಾಗಿದ್ದನು. ದ್ವಾಪರದಲ್ಲಿ ಬಲರೂಪನಾಗಿದ್ದನು. ಮುಂದೆ ಬರುವ ಕಲಿಯುಗದಲ್ಲಿ ಅಧರ್ಮವೇ ಭೂಮಿಗಿಳಿಯುವುದು.
13143010a ಸ ಪೂರ್ವದೇವೋ ನಿಜಘಾನ ದೈತ್ಯಾನ್3 ಸ ಪೂರ್ವದೇವಶ್ಚ ಬಭೂವ ಸಮ್ರಾಟ್।
13143010c ಸ ಭೂತಾನಾಂ ಭಾವನೋ ಭೂತಭವ್ಯಃ ಸ ವಿಶ್ವಸ್ಯಾಸ್ಯ ಜಗತಶ್ಚಾಪಿ ಗೋಪ್ತಾ।।
ದೈತ್ಯರನ್ನು ಸಂಹರಿಸಿದ ಪೂರ್ವದೇವನು ಅವನು. ಸಮ್ರಾಟನಾದ ಪೂರ್ವದೇವನೇ ಅವನು. ಇರುವವುಗಳ ಭೂತ, ಭವಿಷ್ಯತ್ ಮತ್ತು ವರ್ತಮಾನಗಳು ಅವನೇ. ಅವನು ಈ ವಿಶ್ವದ ಜಗತ್ತಿನ ರಕ್ಷಕನು.
13143011a ಯದಾ ಧರ್ಮೋ ಗ್ಲಾಯತಿ ವೈ ಸುರಾಣಾಂ4 ತದಾ ಕೃಷ್ಣೋ ಜಾಯತೇ ಮಾನುಷೇಷು।
13143011c ಧರ್ಮೇ ಸ್ಥಿತ್ವಾ ಸ ತು ವೈ ಭಾವಿತಾತ್ಮಾ ಪರಾಂಶ್ಚ ಲೋಕಾನಪರಾಂಶ್ಚ ಯಾತಿ।।
ಧರ್ಮಕ್ಕೆ ಮತ್ತು ಸುರರಿಗೆ ಹಾನಿಯುಂಟಾದಾಗ ಕೃಷ್ಣನು ಮನುಷ್ಯರಲ್ಲಿ ಹುಟ್ಟುತ್ತಾನೆ. ಭಾವಿತಾತ್ಮನಾದ ಇವನು ಧರ್ಮಮಾರ್ಗದಲ್ಲಿಯೇ ಇರುತ್ತಾ ಪರಾಪರಲೋಕಗಳನ್ನು ರಕ್ಷಿಸುತ್ತಾನೆ.
13143012a ತ್ಯಾಜ್ಯಾಂಸ್ತ್ಯಕ್ತ್ವಾಥಾಸುರಾಣಾಂ ವಧಾಯ ಕಾರ್ಯಾಕಾರ್ಯೇ ಕಾರಣಂ ಚೈವ ಪಾರ್ಥ।
13143012c ಕೃತಂ ಕರಿಷ್ಯತ್ಕ್ರಿಯತೇ ಚ ದೇವೋ ಮುಹುಃ5 ಸೋಮಂ ವಿದ್ಧಿ ಚ ಶಕ್ರಮೇತಮ್।।
ಪಾರ್ಥ! ಅಸುರರ ವಧೆಗಾಗಿ ತ್ಯಾಜ್ಯವಾದವುಗಳನ್ನು ತ್ಯಜಿಸಿ ಇವನು ಕಾರ್ಯ, ಅಕಾರ್ಯ ಮತ್ತು ಕಾರಣಗಳಾಗಿದ್ದಾನೆ. ಹಿಂದೆ ಮಾಡಿದ, ಈಗ ಮಾಡುತ್ತಿರುವ ಮತ್ತು ಭವಿಷ್ಯದಲ್ಲಿ ಮಾಡುವ ಎಲ್ಲವಕ್ಕೂ ಇವನೇ ದೇವನು. ಇವನೇ ಇಂದ್ರ ಮತ್ತು ಸೋಮನೆಂದು ತಿಳಿ.
13143013a ಸ ವಿಶ್ವಕರ್ಮಾ ಸ ಚ ವಿಶ್ವರೂಪಃ ಸ ವಿಶ್ವಭೃದ್ವಿಶ್ವಸೃಗ್ವಿಶ್ವಜಿಚ್ಚ।
13143013c ಸ ಶೂಲಭೃಚ್ಚೋಣಿತಭೃತ್ಕರಾಲಸ್ ತಂ ಕರ್ಮಭಿರ್ವಿದಿತಂ ವೈ ಸ್ತುವಂತಿ।।
ಕೃಷ್ಣನೇ ವಿಶ್ವಕರ್ಮನು. ಅವನೇ ವಿಶ್ವರೂಪನು. ವಿಶ್ವಭುಜನೂ, ವಿಶ್ವಸೃಜನೂ, ವಿಶ್ವಜಿತುವೂ ಅವನೇ. ಒಂದು ಕೈಯಲ್ಲಿ ಶೂಲವನ್ನೂ ಮತ್ತೊಂದು ಕೈಯಲ್ಲಿ ರಕ್ತವಿರುವ ಕಪಾಲವನ್ನೂ ಹಿಡಿದು ಇವನು ಕಾರಾಳರೂಪಿಯಾಗುತ್ತಾನೆ. ಅದ್ಭುತಕರ್ಮಿಯಾದ ಇವನನ್ನು ಎಲ್ಲರೂ ಸ್ತುತಿಸುತ್ತಾರೆ.
13143014a ತಂ ಗಂಧರ್ವಾ ಅಪ್ಸರಸಶ್ಚ ನಿತ್ಯಮ್ ಉಪತಿಷ್ಠಂತೇ ವಿಬುಧಾನಾಂ ಶತಾನಿ।
13143014c ತಂ ರಾಕ್ಷಸಾಶ್ಚ ಪರಿಸಂವಹಂತೇ ರಾಯಸ್ಪೋಷಃ ಸ ವಿಜಿಗೀಷುರೇಕಃ।।
ನೂರಾರು ಗಂಧರ್ವರೂ, ಅಪ್ಸರೆಯರೂ, ದೇವತೆಗಳೂ ನಿತ್ಯವೂ ಅವನ ಸೇವೆಯಲ್ಲಿ ನಿರತರಾಗಿರುತ್ತಾರೆ. ರಾಕ್ಷಸರೂ ಅವನ ಕುರಿತು ಒಳ್ಳೆಯ ಮಾತುಗಳನ್ನೇ ಆಡುತ್ತಾರೆ. ಅವನೊಬ್ಬನೇ ಐಶ್ವರ್ಯದ ರಕ್ಷಕನೂ ವಿಜಯಾಭಿಲಾಷಿಯೂ ಆಗಿದ್ದಾನೆ.
13143015a ತಮಧ್ವರೇ ಶಂಸಿತಾರಃ ಸ್ತುವಂತಿ ರಥಂತರೇ ಸಾಮಗಾಶ್ಚ ಸ್ತುವಂತಿ।
13143015c ತಂ ಬ್ರಾಹ್ಮಣಾ ಬ್ರಹ್ಮಮಂತ್ರೈಃ ಸ್ತುವಂತಿ ತಸ್ಮೈ ಹವಿರಧ್ವರ್ಯವಃ ಕಲ್ಪಯಂತಿ।।
ಅಧ್ವರಗಳಲ್ಲಿ ಅವನನ್ನು ಋಕ್ಕುಗಳಿಂದ ಸ್ತುತಿಸುತ್ತಾರೆ. ಸಾಮಗರು ರಥಂತರ ಸಾಮದಲ್ಲಿ ಸ್ತುತಿಸುತ್ತಾರೆ. ಬ್ರಾಹ್ಮಣರು ವೇದಮಂತ್ರಗಳಿಂದ ಸ್ತುತಿಸುತ್ತಾರೆ. ಅಧ್ವರ್ಯುಗಳು ಇವನಿಗೆ ಹವಿಸ್ಸನ್ನು ಕಲ್ಪಿಸುತ್ತಾರೆ.
13143016a ಸ ಪೌರಾಣೀಂ ಬ್ರಹ್ಮಗುಹಾಂ ಪ್ರವಿಷ್ಟೋ ಮಹೀಸತ್ರಂ ಭಾರತಾಗ್ರೇ ದದರ್ಶ।
13143016c ಸ ಚೈವ ಗಾಮುದ್ದಧಾರಾಗ್ರ್ಯಕರ್ಮಾ ವಿಕ್ಷೋಭ್ಯ ದೈತ್ಯಾನುರಗಾನ್ದಾನವಾಂಶ್ಚ।।
ಇವನು ಪುರಾತನ ಬ್ರಹ್ಮಗುಹೆಯನ್ನು ಪ್ರವೇಶಿಸಿ ಪ್ರಳಯಕಾಲದಲ್ಲಿ ಭೂಮಿಯು ನೀರಿನಿಂದ ಮುಚ್ಚಿಹೋಗುವುದನ್ನು ಅದು ಆಗುವ ಮೊದಲೇ ಕಂಡುಕೊಂಡನು. ಸೃಷ್ಟಿಕರ್ತನಾದ ಇವನೇ ದೈತ್ಯ-ದಾನವ-ಉರಗರನ್ನು ಕ್ಷೋಭೆಗೊಳಿಸಿ ಭೂಮಿಯನ್ನು ಪಾತಾಳದಿಂದ ಮೇಲೆತ್ತಿದನು.
613143017a ತಸ್ಯ ಭಕ್ಷಾನ್ವಿವಿಧಾನ್ವೇದಯಂತಿ ತಮೇವಾಜೌ ವಾಹನಂ ವೇದಯಂತಿ।
13143017c ತಸ್ಯಾಂತರಿಕ್ಷಂ ಪೃಥಿವೀ ದಿವಂ ಚ ಸರ್ವಂ ವಶೇ ತಿಷ್ಠತಿ ಶಾಶ್ವತಸ್ಯ।।
ಭಕ್ತರು ಇವನಿಗೆ ನಾನವಿಧದ ಭಕ್ಷ್ಯಗಳನ್ನು ನೈವೇದ್ಯ ಮಾಡುತ್ತಾರೆ. ಅವನಿಗೇ ಕುದುರೆಗಳು ಮತ್ತು ವಾಹನಗಳನ್ನು ಸಮರ್ಪಿಸುತ್ತಾರೆ7. ಅಂತರಿಕ್ಷ, ಪೃಥ್ವೀ ಮತ್ತು ಸ್ವರ್ಗ ಎಲ್ಲವೂ ಶಾಶ್ವತವಾಗಿ ಇವನ ವಶದಲ್ಲಿಯೇ ಇವೆ.
13143018a ಸ ಕುಂಭರೇತಾಃ ಸಸೃಜೇ ಪುರಾಣಂ ಯತ್ರೋತ್ಪನ್ನಮೃಷಿಮಾಹುರ್ವಸಿಷ್ಠಮ್।
13143018c ಸ ಮಾತರಿಶ್ವಾ ವಿಭುರಶ್ವವಾಜೀ ಸ ರಶ್ಮಿಮಾನ್ಸವಿತಾ ಚಾದಿದೇವಃ।।
ದೇವತೆಗಳಾದ ಮಿತ್ರಾವರುಣರ ರೇತಸ್ಸನ್ನು ಕುಂಭದಲ್ಲಿರಿಸಿ ಇವನು ಸೃಷ್ಟಿಸಿದ ಮಹಾಪುರುಷನನ್ನೇ ಋಷಿ ವಸಿಷ್ಠ ಎಂದು ಹೇಳುತ್ತಾರೆ. ಸರ್ವತ್ರ ವ್ಯಾಪಿಯಾಗಿರುವ ವಾಯುವೂ ಇವನೇ. ಇವನು ತೀವ್ರಗಾಮಿ ಅಶ್ವ. ರಶ್ಮಿಮಾನ್ ಸವಿತನೂ ಇದೇ ಆದಿದೇವನು.
13143019a ತೇನಾಸುರಾ ವಿಜಿತಾಃ ಸರ್ವ ಏವ ತಸ್ಯ ವಿಕ್ರಾಂತೈರ್ವಿಜಿತಾನೀಹ ತ್ರೀಣಿ।
13143019c ಸ ದೇವಾನಾಂ ಮಾನುಷಾಣಾಂ ಪಿತೄಣಾಂ ತಮೇವಾಹುರ್ಯಜ್ಞವಿದಾಂ ವಿತಾನಮ್।।
ಇವನಿಂದಲೇ ಎಲ್ಲ ಅಸುರರೂ ಪರಾಜಿತರಾದರು. ತನ್ನ ಮೂರು ಪಾದಗಳಿಂದ ಮೂರು ಲೋಕಗಳನ್ನೂ ಅಳೆದು ವಿಶ್ವವನ್ನೇ ಗೆದ್ದನು. ಇವನೇ ದೇವತೆಗಳಿಗೂ, ಮನುಷ್ಯರಿಗೂ ಮತ್ತು ಪಿತೃಗಳಿಗೂ ಆತ್ಮಸ್ವರೂಪನು. ಯಜ್ಞವಿದರಿಗೆ ಛಾವಣಿಯೆಂದು ಇವನನ್ನು ಕರೆಯುತ್ತಾರೆ.
13143020a ಸ ಏವ ಕಾಲಂ ವಿಭಜನ್ನುದೇತಿ ತಸ್ಯೋತ್ತರಂ ದಕ್ಷಿಣಂ ಚಾಯನೇ ದ್ವೇ।
13143020c ತಸ್ಯೈವೋರ್ಧ್ವಂ ತಿರ್ಯಗಧಶ್ಚರಂತಿ ಗಭಸ್ತಯೋ ಮೇದಿನೀಂ ತಾಪಯಂತಃ।।
ಇವನೇ ಕಾಲಗಳನ್ನು ವಿಭಜಿಸುತ್ತಾನೆ. ಸೂರ್ಯನಾಗಿ ಉದಯಿಸುತ್ತಾನೆ. ಇವನಿಗೆ ಉತ್ತರಾಯಣ ಮತ್ತು ದಕ್ಷಿಣಾಯಣಗಳೆಂಬ ಎರಡು ಮಾರ್ಗಗಳಿವೆ. ಇವನ ಜಾಜ್ವಲ್ಯಮಾನ ಕಿರಣಗಳು ಭೂಮಿಯನ್ನು ಪ್ರಕಾಶಗೊಳಿಸುತ್ತಾ ಮೇಲಕ್ಕೂ, ಕೆಳಕ್ಕೂ, ಅಕ್ಕ-ಪಕ್ಕಗಳಿಗೂ ಪಸರಿಸುತ್ತವೆ.
13143021a ತಂ ಬ್ರಾಹ್ಮಣಾ ವೇದವಿದೋ ಜುಷಂತಿ ತಸ್ಯಾದಿತ್ಯೋ ಭಾಮುಪಯುಜ್ಯ ಭಾತಿ।
13143021c ಸ ಮಾಸಿ ಮಾಸ್ಯಧ್ವರಕೃದ್ವಿಧತ್ತೇ ತಮಧ್ವರೇ ವೇದವಿದಃ ಪಠಂತಿ।।
ವೇದವಿದ ಬ್ರಾಹ್ಮಣರು ಇವನ ಸೇವೆಯಲ್ಲಿಯೇ ನಿರತರಾಗಿರುತ್ತಾರೆ. ಆದಿತ್ಯನು ಇವನನ್ನು ಆಶ್ರಯಿಸಿಯೇ ಬೆಳಗುತ್ತಾನೆ. ಯಜ್ಞಕರ್ತೃವಾದ ಕೃಷ್ಣನು ಪ್ರತಿಮಾಸದಲ್ಲಿಯೂ ಯಜ್ಞಗಳನ್ನು ಮಾಡುತ್ತಿರುತ್ತಾನೆ. ಆ ಯಜ್ಞಗಳಲ್ಲಿ ವೇದವಿದುಗಳು ಇವನನ್ನೇ ಸ್ತುತಿಸುತ್ತಾರೆ.
13143022a ಸ ಏಕಯುಕ್ಚಕ್ರಮಿದಂ ತ್ರಿನಾಭಿ ಸಪ್ತಾಶ್ವಯುಕ್ತಂ ವಹತೇ ವೈ ತ್ರಿಧಾಮಾ।
13143022c ಮಹಾತೇಜಾಃ ಸರ್ವಗಃ ಸರ್ವಸಿಂಹಃ ಕೃಷ್ಣೋ ಲೋಕಾನ್ಧಾರಯತೇ ತಥೈಕಃ।
13143022e ಅಶ್ನನ್ನನಶ್ನಂಶ್ಚ ತಥೈವ ಧೀರಃ8 ಕೃಷ್ಣಂ ಸದಾ ಪಾರ್ಥ ಕರ್ತಾರಮೇಹಿ।।
ಮೂರು ನಾಭಿಗಳಿರುವ9, ಮೂರು ಧಾಮಗಳಿರುವ10 ಮತ್ತು ಏಳು ಕುದುರೆಗಳಿರುವ ಈ ಸಂವತ್ಸರ ಚಕ್ರವನ್ನು ಇವನೇ ಧಾರಣೆಮಾಡಿದ್ದಾನೆ11. ಮಹಾತೇಜಸ್ವೀ ಸರ್ವಗ ಸರ್ವಸಿಂಹ ಕೃಷ್ಣನೇ ಏಕಾಕಿಯಾಗಿ ಲೋಕಗಳನ್ನು ಧರಿಸಿದ್ದಾನೆ. ಪಾರ್ಥ! ಅವನೇ ಆಹಾರ ಮತ್ತು ತಿನ್ನುವವನೂ ಅವನೇ. ಅವನೇ ಧೀರ. ಸದಾ ಕೃಷ್ಣನೇ ಕರ್ತಾರನೆಂದು ತಿಳಿ.
13143023a ಸ ಏಕದಾ ಕಕ್ಷಗತೋ ಮಹಾತ್ಮಾ ತೃಪ್ತೋ ವಿಭುಃ ಖಾಂಡವೇ ಧೂಮಕೇತುಃ।
13143023c ಸ ರಾಕ್ಷಸಾನುರಗಾಂಶ್ಚಾವಜಿತ್ಯ ಸರ್ವತ್ರಗಃ ಸರ್ವಮಗ್ನೌ ಜುಹೋತಿ।।
ಈ ಮಹಾತ್ಮ ವಿಭುವು ಒಮ್ಮೆ ಅಗ್ನಿಯ ರೂಪವನ್ನು ಹೊಂದಿ ಖಾಂಡವವನವನ್ನು ಸುಟ್ಟು ತೃಪ್ತನಾದನು. ಸರ್ವತ್ರ ಹೋಗಬಲ್ಲ ಇವನೇ ರಾಕ್ಷಸ, ಉರಗಳನ್ನು ಜಯಿಸಿ ಎಲ್ಲರನ್ನೂ ಅಗ್ನಿಯಲ್ಲಿ ಹೋಮಮಾಡುತ್ತಾನೆ.
13143024a ಸ ಏವಾಶ್ವಃ ಶ್ವೇತಮಶ್ವಂ ಪ್ರಯಚ್ಚತ್12 ಸ ಏವಾಶ್ವಾನಥ ಸರ್ವಾಂಶ್ಚಕಾರ।
13143024c ತ್ರಿವಂಧುರಸ್ತಸ್ಯ ರಥಸ್ತ್ರಿಚಕ್ರಸ್ ತ್ರಿವೃಚ್ಚಿರಾಶ್ಚತುರಸ್ರಶ್ಚ ತಸ್ಯ13।।
ಅವನೇ ಅರ್ಜುನನಿಗೆ ಶ್ವೇತಕುದುರೆಗಳನ್ನು ನೀಡಿದನು. ಅವನೇ ಎಲ್ಲ ಅಶ್ವಗಳನ್ನೂ ನಿರ್ಮಿಸಿದನು. ಸಂಸಾರವೆಂಬ ರಥಕ್ಕೆ ಇವನೇ ಮೂಕಿಕಂಬವಾಗಿದ್ದಾನೆ. ಸತ್ತ್ವ-ರಜಸ್ಸು-ತಮಸ್ಸುಗಳೆಂಬ ಅದರ ಮೂರು ಚಕ್ರಗಳೂ ಇವನೇ. ಈ ರಥದ ಮೂರು ಮಾರ್ಗಗಳೂ (ಮೇಲೆ, ಮಧ್ಯೆ ಮತ್ತು ಕೆಳಗೆ) ಇವನೇ. ಈ ರಥಕ್ಕೆ ಕಟ್ಟಿರುವ ಕಾಲ, ಅದೃಷ್ಟ ಇಚ್ಛೆ ಮತ್ತು ಸಂಕಲ್ಪ ಈ ನಾಲ್ಕೂ ಕುದುರೆಗಳೂ ಇವನೇ.
13143025a ಸ ವಿಹಾಯೋ ವ್ಯದಧಾತ್ಪಂಚನಾಭಿಃ ಸ ನಿರ್ಮಮೇ ಗಾಂ ದಿವಮಂತರಿಕ್ಷಮ್।
13143025c ಏವಂ ರಮ್ಯಾನಸೃಜತ್ಪರ್ವತಾಂಶ್ಚ ಹೃಷೀಕೇಶೋಽಮಿತದೀಪ್ತಾಗ್ನಿತೇಜಾಃ।।
ಪಂಚಭೂತಗಳಿಗೂ ಆಶ್ರಯನಾದ ಇವನೇ ಆಕಾಶವನ್ನು ಸೃಷ್ಟಿಸಿದನು. ಭೂಮ್ಯಾಂತರಿಕ್ಷಗಳನ್ನೂ ಸ್ವರ್ಗವನ್ನೂ ಸೃಷ್ಟಿಸಿದನು. ಅಮಿತದೀಪಾಗ್ನಿತೇಜಸ್ವೀ ಹೃಷೀಕೇಶನೇ ರಮ್ಯ ಪರ್ವತಗಳನ್ನೂ ಸೃಷ್ಟಿಸಿದನು.
13143026a ಸ ಲಂಘಯನ್ವೈ ಸರಿತೋ ಜಿಘಾಂಸನ್ ಸ ತಂ ವಜ್ರಂ ಪ್ರಹರಂತಂ ನಿರಾಸ।
13143026c ಸ ಮಹೇಂದ್ರಃ ಸ್ತೂಯತೇ ವೈ ಮಹಾಧ್ವರೇ ವಿಪ್ರೈರೇಕೋ ಋಕ್ಸಹಸ್ರೈಃ ಪುರಾಣೈಃ।।
ವಜ್ರವನ್ನು ಪ್ರಹರಿಸುತ್ತಿದ್ದ ಇಂದ್ರನನ್ನು ಕೊಲ್ಲಲು ಅನೇಕ ನದಿಗಳನ್ನು ದಾಟಿ ಬಂದಿದ್ದ ವೃತ್ರಾಸುರನನ್ನು ಇವನೇ ಕೊಂದನು. ಆದುದರಿಂದ ಇವನು ಮಹೇಂದ್ರನಾದನು. ಮಹಾಧ್ವರಗಳಲ್ಲಿ ವಿಪ್ರರು ಪುರಾತನ ಸಾವಿರಾರು ಋಕ್ಕುಗಳಿಂದ ಇವನೊಬ್ಬನನ್ನೇ ಸ್ತುತಿಸುತ್ತಾರೆ.
13143027a ದುರ್ವಾಸಾ ವೈ ತೇನ ನಾನ್ಯೇನ ಶಕ್ಯೋ ಗೃಹೇ ರಾಜನ್ವಾಸಯಿತುಂ ಮಹೌಜಾಃ।
13143027c ತಮೇವಾಹುರೃಷಿಮೇಕಂ ಪುರಾಣಂ ಸ ವಿಶ್ವಕೃದ್ವಿದಧಾತ್ಯಾತ್ಮಭಾವಾನ್।।
ಕೃಷ್ಣನನ್ನು ಬಿಟ್ಟು ಬೇರೆ ಯಾರೂ ಮಹೌಜಸನಾದ ದುರ್ವಾಸನನ್ನು ತನ್ನ ಮನೆಯಲ್ಲಿಟ್ಟುಕೊಂಡು ಉಪಚರಿಸಲಾರರು. ಇವನನ್ನು ಅದ್ವಿತೀಯ ಪುರಾಣ ಋಷಿಯೆಂದು ಹೇಳುತ್ತಾರೆ. ಇವನೇ ವಿಶ್ವವನ್ನು ಸೃಷ್ಟಿಸಿದವನು. ತನ್ನ ಸ್ವರೂಪದಿಂದಲೇ ಅನೇಕವಸ್ತುಗಳನ್ನು ಸೃಷ್ಟಿಸುತ್ತಾನೆ.
13143028a ವೇದಾಂಶ್ಚ ಯೋ ವೇದಯತೇಽಧಿದೇವೋ ವಿಧೀಂಶ್ಚ ಯಶ್ಚಾಶ್ರಯತೇ ಪುರಾಣಾನ್।
13143028c ಕಾಮೇ ವೇದೇ ಲೌಕಿಕೇ ಯತ್ಫಲಂ ಚ ವಿಷ್ವಕ್ಸೇನೇ ಸರ್ವಮೇತತ್ ಪ್ರತೀಹಿ।।
ದೇವತೆಗಳಿಗೂ ದೇವನಾಗಿದ್ದರೂ ಕೃಷ್ಣನು ವೇದಗಳ ಅಧ್ಯಯನ ಮಾಡುತ್ತಾನೆ. ಪುರಾಣ ವಿಧಿನಿಯಮಗಳನ್ನು ಆಶ್ರಯಿಸುತ್ತಾನೆ. ಲೌಕಿಕ-ವೈದಿಕ ಕರ್ಮಗಳಿಗಿರುವ ಫಲಗಳೆಲ್ಲವೂ ವಿಷ್ವಕ್ಸೇನನೇ ಎಂದು ತಿಳಿ.
13143029a ಜ್ಯೋತೀಂಷಿ ಶುಕ್ಲಾನಿ ಚ ಸರ್ವಲೋಕೇ ತ್ರಯೋ ಲೋಕಾ ಲೋಕಪಾಲಾಸ್ತ್ರಯಶ್ಚ।
13143029c ತ್ರಯೋಽಗ್ನಯೋ ವ್ಯಾಹೃತಯಶ್ಚ ತಿಸ್ರಃ ಸರ್ವೇ ದೇವಾ ದೇವಕೀಪುತ್ರ ಏವ।।
ಸರ್ವಲೋಕಗಳಲ್ಲಿ ಶುಕ್ಲ ಜ್ಯೋತಿಗಳಾಗಿರುವವನು, ಮೂರು ಲೋಕಗಳು, ಮೂರು ಲೋಕಪಾಲಕರು, ಮೂರು ಅಗ್ನಿಗಳು, ಮೂರು ವ್ಯಾಹೃತಿಗಳು ಮತ್ತು ಸರ್ವ ದೇವತೆಗಳೂ ದೇವಕೀಪುತ್ರನೇ ಆಗಿವೆ.
13143030a ಸಂವತ್ಸರಃ ಸ ಋತುಃ ಸೋಽರ್ಧಮಾಸಃ ಸೋಽಹೋರಾತ್ರಃ ಸ ಕಲಾ ವೈ ಸ ಕಾಷ್ಠಾಃ।
13143030c ಮಾತ್ರಾ ಮುಹೂರ್ತಾಶ್ಚ ಲವಾಃ ಕ್ಷಣಾಶ್ಚ ವಿಷ್ವಕ್ಸೇನೇ ಸರ್ವಮೇತತ್ ಪ್ರತೀಹಿ।।
ಅವನೇ ಸಂವತ್ಸರ. ಅವನೇ ಋತು. ಅವನೇ ಪಕ್ಷ. ಅವನೇ ಹಗಲು-ರಾತ್ರಿಗಳು. ಅವನೇ ಕಲಾ ಮತ್ತು ಅವನೇ ಕಾಷ್ಠಾ. ಮಾತ್ರ, ಮುಹೂರ್ತ, ಲವ, ಕ್ಷಣಗಳು ಎಲ್ಲವೂ ಈ ವಿಷ್ವಕ್ಸೇನ ಎಂದು ತಿಳಿ.
13143031a ಚಂದ್ರಾದಿತ್ಯೌ ಗ್ರಹನಕ್ಷತ್ರತಾರಾಃ ಸರ್ವಾಣಿ ದರ್ಶಾನ್ಯಥ ಪೌರ್ಣಮಾಸ್ಯಃ।
13143031c ನಕ್ಷತ್ರಯೋಗಾ ಋತವಶ್ಚ ಪಾರ್ಥ ವಿಷ್ವಕ್ಸೇನಾತ್ಸರ್ವಮೇತತ್ ಪ್ರಸೂತಮ್।।
ಪಾರ್ಥ! ಚಂದ್ರ, ಸೂರ್ಯ, ಗ್ರಹಗಳು, ನಕ್ಷತ್ರ-ತಾರೆಗಳು, ಎಲ್ಲ ಅಮವಾಸ್ಯೆಗಳು, ಪೂರ್ಣಿಮೆಗಳು, ನಕ್ಷತ್ರಯೋಗಗಳು, ಋತುಗಳು ಎಲ್ಲವೂ ಈ ವಿಷ್ವಕ್ಸೇನನಿಂದಲೇ ಹುಟ್ಟಿವೆ.
13143032a ರುದ್ರಾದಿತ್ಯಾ ವಸವೋಽಥಾಶ್ವಿನೌ ಚ ಸಾಧ್ಯಾ ವಿಶ್ವೇ ಮರುತಾಂ ಷಡ್ಗಣಾಶ್ಚ14।
13143032c ಪ್ರಜಾಪತಿರ್ದೇವಮಾತಾದಿತಿಶ್ಚ ಸರ್ವೇ ಕೃಷ್ಣಾದೃಷಯಶ್ಚೈವ ಸಪ್ತ।।
ರುದ್ರರು, ಆದಿತ್ಯರು, ವಸುಗಳು, ಅಶ್ವಿನಿಯರು, ಸಾಧ್ಯರು, ವಿಶ್ವೇದೇವರು, ಮರುತ್ತರ ಷಡ್ಗಣಗಳು, ಪ್ರಜಾಪತಿ ಕಶ್ಯಪ, ದೇವಮಾತೆ ಅದಿತಿ ಮತ್ತು ಸಪ್ತರ್ಷಿಗಳು ಎಲ್ಲರೂ ಕೃಷ್ಣನಿಂದಲೇ ಹುಟ್ಟಿದವರು.
13143033a ವಾಯುರ್ಭೂತ್ವಾ ವಿಕ್ಷಿಪತೇ ಚ ವಿಶ್ವಮ್ ಅಗ್ನಿರ್ಭೂತ್ವಾ ದಹತೇ ವಿಶ್ವರೂಪಃ।
13143033c ಆಪೋ ಭೂತ್ವಾ ಮಜ್ಜಯತೇ ಚ ಸರ್ವಂ ಬ್ರಹ್ಮಾ ಭೂತ್ವಾ ಸೃಜತೇ ವಿಶ್ವಸಂಘಾನ್।।
ಈ ವಿಶ್ವರೂಪನು ಪ್ರಳಯಕಾಲದಲ್ಲಿ ವಾಯುವಾಗಿ ವಿಶ್ವವನ್ನು ಕ್ಷೋಭೆಗೊಳಿಸುತ್ತಾನೆ. ಅಗ್ನಿಯಾಗಿ ದಹಿಸುತ್ತಾನೆ. ನೀರಾಗಿ ಎಲ್ಲವನ್ನೂ ಮುಳುಗಿಸುತ್ತಾನೆ. ಮತ್ತು ಬ್ರಹ್ಮನಾಗಿ ವಿಶ್ವಸಂಘಗಳನ್ನು ಪುನಃ ಸೃಷ್ಟಿಸುತ್ತಾನೆ.
13143034a ವೇದ್ಯಂ ಚ ಯದ್ವೇದಯತೇ ಚ ವೇದಾನ್ ವಿಧಿಶ್ಚ ಯಶ್ಚಾಶ್ರಯತೇ ವಿಧೇಯಾನ್।
13143034c ಧರ್ಮೇ ಚ ವೇದೇ ಚ ಬಲೇ ಚ ಸರ್ವಂ ಚರಾಚರಂ ಕೇಶವಂ ತ್ವಂ ಪ್ರತೀಹಿ।।
ತಾನೇ ವೇದ್ಯನಾಗಿದ್ದರೂ ವೇದಗಳನ್ನು ತಿಳಿದಿದ್ದಾನೆ. ತಾನೇ ವಿಧಿಯಾಗಿದ್ದರೂ ವಿಧಿಗಳನ್ನು ಅನುಸರಿಸುತ್ತಾನೆ. ಧರ್ಮದಲ್ಲಿಯೂ, ವೇದದಲ್ಲಿಯೂ, ಬಲದಲ್ಲಿಯೂ ಮತ್ತು ಸರ್ವ ಚರಾಚರಗಳಲ್ಲಿಯೂ ಕೇಶವನೇ ಇದ್ದಾನೆಂದು ತಿಳಿ.
13143035a ಜ್ಯೋತಿರ್ಭೂತಃ ಪರಮೋಽಸೌ ಪುರಸ್ತಾತ್ ಪ್ರಕಾಶಯನ್ ಪ್ರಭಯಾ ವಿಶ್ವರೂಪಃ।
13143035c ಅಪಃ ಸೃಷ್ಟ್ವಾ ಹ್ಯಾತ್ಮಭೂರಾತ್ಮಯೋನಿಃ ಪುರಾಕರೋತ್ಸರ್ವಮೇವಾಥ ವಿಶ್ವಮ್।।
ಇವನ ಪ್ರಭೆಯಿಂದಲೇ ಪರಮ ಜ್ಯೋತಿಯಾಗಿ ವಿಶ್ವರೂಪ ಸೂರ್ಯನು ಪೂರ್ವದಲ್ಲಿ ಪ್ರಕಾಶಿಸುತ್ತಾನೆ. ಈ ಆತ್ಮಭೂ ಮತ್ತು ಆತ್ಮಯೋನಿಯು ಮೊದಲು ನೀರನ್ನು ಸೃಷ್ಟಿಸಿ ನಂತರ ಇಡೀ ವಿಶ್ವವನ್ನು ರಚಿಸಿದನು.
13143036a ಋತೂನುತ್ಪಾತಾನ್ವಿವಿಧಾನ್ಯದ್ಭುತಾನಿ ಮೇಘಾನ್ವಿದ್ಯುತ್ಸರ್ವಮೈರಾವತಂ ಚ।
13143036c ಸರ್ವಂ ಕೃಷ್ಣಾತ್ ಸ್ಥಾವರಂ ಜಂಗಮಂ ಚ ವಿಶ್ವಾಖ್ಯಾತಾದ್ವಿಷ್ಣುಮೇನಂ ಪ್ರತೀಹಿ।।
ಋತುಗಳು, ವಿವಿಧ ಅದ್ಭುತ ಉತ್ಪಾತಗಳು, ಮೇಘಗಳು, ವಿದ್ಯುತ್, ಐರಾವತ ಎಲ್ಲವೂ, ಸ್ಥಾವರ-ಜಂಗಮಗಳೆಲ್ಲವೂ ಕೃಷ್ಣನಿಂದಲೇ ಹುಟ್ಟಿವೆ. ಇವನು ವಿಶ್ವರೂಪ ವಿಷ್ಣುವೆಂದು ತಿಳಿ.
13143037a ವಿಶ್ವಾವಾಸಂ ನಿರ್ಗುಣಂ ವಾಸುದೇವಂ ಸಂಕರ್ಷಣಂ ಜೀವಭೂತಂ ವದಂತಿ।
13143037c ತತಃ ಪ್ರದ್ಯುಮ್ನಮನಿರುದ್ಧಂ ಚತುರ್ಥಮ್ ಆಜ್ಞಾಪಯತ್ಯಾತ್ಮಯೋನಿರ್ಮಹಾತ್ಮಾ।।
ನಿರ್ಗುಣನಾದ ಇವನು ವಿಶ್ವಕ್ಕೇ ನಿವಾಸಸ್ಥಾನನು. ಇವನನ್ನು ವಾಸುದೇವ, ಜೀವಭೂತ ಸಂಕರ್ಷಣ, ಪ್ರದ್ಯುಮ್ನ ಮತ್ತು ನಾಲ್ಕನೆಯದಾಗಿ ಅನಿರುದ್ಧ ಎಂದು ಕರೆಯುತ್ತಾರೆ. ಈ ಮಹಾತ್ಮಾ ಆತ್ಮಯೋನಿಯು ವಿಶ್ವಕ್ಕೇ ಆಜ್ಞೆಮಾಡುವವನು.
13143038a ಸ ಪಂಚಧಾ ಪಂಚಜನೋಪಪನ್ನಂ ಸಂಚೋದಯನ್ವಿಶ್ವಮಿದಂ ಸಿಸೃಕ್ಷುಃ।
13143038c ತತಶ್ಚಕಾರಾವನಿಮಾರುತೌ ಚ ಖಂ ಜ್ಯೋತಿರಾಪಶ್ಚ ತಥೈವ ಪಾರ್ಥ।।
ಪಾರ್ಥ! ಕೃಷ್ಣನು ದೇವತೆಗಳು, ಅಸುರರು, ಮನುಷ್ಯರು, ಪಿತೃಗಳು ಮತ್ತು ತಿರ್ಯಗ್ಜಂತು ಈ ಐದು ವಿಧದ ಜೀವಿಗಳಿಂದ ಕೂಡಿದ ವಿಶ್ವವನ್ನು ಸೃಷ್ಟಿಸಲು ಬಯಸಿ ಪೃಥ್ವೀ, ಜಲ, ತೇಜಸ್ಸು, ವಾಯು, ಮತ್ತು ಆಕಾಶ ಈ ಪಂಚಭೂತಗಳನ್ನು ಮೊದಲು ಸೃಷ್ಟಿಸಿದನು.
13143039a ಸ ಸ್ಥಾವರಂ ಜಂಗಮಂ ಚೈವಮೇತಚ್ ಚತುರ್ವಿಧಂ ಲೋಕಮಿಮಂ ಚ ಕೃತ್ವಾ।
13143039c ತತೋ ಭೂಮಿಂ ವ್ಯದಧಾತ್ಪಂಚಬೀಜಾಂ ದ್ಯೌಃ ಪೃಥಿವ್ಯಾಂ ಧಾಸ್ಯತಿ ಭೂರಿ ವಾರಿ।
13143039e ತೇನ ವಿಶ್ವಂ ಕೃತಮೇತದ್ಧಿ ರಾಜನ್ ಸ ಜೀವಯತ್ಯಾತ್ಮನೈವಾತ್ಮಯೋನಿಃ।।
ಅವನು ಚತುರ್ವಿಧದ ಸ್ಥಾವರ-ಜಂಗಮಗಳ ಈ ಲೋಕವನ್ನು ರಚಿಸಲು ಸಂಕಲ್ಪಿಸಿ ಚತುರ್ವಿಧ ಪ್ರಾಣಿಗಳು ಮತ್ತು ಕರ್ಮ ಈ ಐದಕ್ಕೆ ಬೀಜರೂಪವಾದ ಭೂಮಿಯನ್ನು ಸೃಷ್ಟಿಸಿದನು. ಇವನೇ ಆಕಾಶಸ್ವರೂಪನಾಗಿ ಭೂಮಿಯ ಮೇಲೆ ಸಮೃದ್ಧ ಮಳೆಯನ್ನು ಸುರಿಸುತ್ತಾನೆ. ರಾಜನ್! ಇವನಿಂದಲೇ ಈ ವಿಶ್ವವು ನಿರ್ಮಿತವಾಗಿದೆ ಎಂದು ತಿಳಿ. ಈ ಆತ್ಮಯೋನಿಯು ತನ್ನ ಆತ್ಮದಿಂದಲೇ ಎಲ್ಲ ಪ್ರಾಣಿಗಳೂ ಜೀವಿಸಿರುವಂತೆ ಮಾಡುತ್ತಾನೆ.
13143040a ತತೋ ದೇವಾನಸುರಾನ್ಮಾನುಷಾಂಶ್ಚ ಲೋಕಾನೃಷೀಂಶ್ಚಾಥ ಪಿತೄನ್ ಪ್ರಜಾಶ್ಚ।
13143040c ಸಮಾಸೇನ ವಿವಿಧಾನ್ ಪ್ರಾಣಿಲೋಕಾನ್ ಸರ್ವಾನ್ಸದಾ ಭೂತಪತಿಃ ಸಿಸೃಕ್ಷುಃ।।
ದೇವತೆಗಳನ್ನೂ, ಅಸುರರನ್ನೂ, ಮನುಷ್ಯರನ್ನೂ, ಲೋಕಗಳನ್ನೂ, ಋಷಿಗಳನ್ನೂ, ಪಿತೃಗಳನ್ನೂ, ಪ್ರಜೆಗಳನ್ನೂ ಮತ್ತು ಸಂಕ್ಷೇಪವಾಗಿ ಹೇಳುವುದಾದರೆ ವಿವಿಧ ಪ್ರಾಣಿಲೋಕಗಳನ್ನೂ ಈ ಭೂತಪತಿಯು ಸರ್ವಕಾಲದಲ್ಲಿಯೂ ಸೃಷ್ಟಿಮಾಡಲು ಬಯಸುತ್ತಾನೆ.
13143041a ಶುಭಾಶುಭಂ ಸ್ಥಾವರಂ ಜಂಗಮಂ ಚ ವಿಷ್ವಕ್ಸೇನಾತ್ಸರ್ವಮೇತತ್ ಪ್ರತೀಹಿ।
13143041c ಯದ್ವರ್ತತೇ ಯಚ್ಚ ಭವಿಷ್ಯತೀಹ ಸರ್ವಮೇತತ್ಕೇಶವಂ ತ್ವಂ ಪ್ರತೀಹಿ।।
ಶುಭಾಶುಭ ಸ್ಥಾವರ ಜಂಗಮಗಳು ಎಲ್ಲವೂ ವಿಷ್ವಕ್ಸೇನನಿಂದಲೇ ಹುಟ್ಟಿವೆಯೆಂದು ತಿಳಿ. ಭೂತ, ಭವಿಷ್ಯ ಮತ್ತು ವರ್ತಮಾನ ಈ ಮೂರು ಕೇಶವನ ರೂಪಗಳೇ ಆಗಿವೆ ಎಂದು ತಿಳಿ.
13143042a ಮೃತ್ಯುಶ್ಚೈವ ಪ್ರಾಣಿನಾಮಂತಕಾಲೇ ಸಾಕ್ಷಾತ್ಕೃಷ್ಣಃ ಶಾಶ್ವತೋ ಧರ್ಮವಾಹಃ।
13143042c ಭೂತಂ ಚ ಯಚ್ಚೇಹ ನ ವಿದ್ಮ ಕಿಂ ಚಿದ್ ವಿಷ್ವಕ್ಸೇನಾತ್ಸರ್ವಮೇತತ್ಪ್ರತೀಹಿ।।
ಪ್ರಾಣಿಗಳ ಅಂತ್ಯಕಾಲದಲ್ಲಿ ಧರ್ಮರಕ್ಷಕ ಶಾಶ್ವತ ಸಾಕ್ಷಾತ್ ಕೃಷ್ಣನೇ ಮೃತ್ಯುರೂಪನಾಗುತ್ತಾನೆ. ಇಲ್ಲಿ ಹಿಂದೆ ಏನಾಯಿತೆಂದು ನಮಗೆ ತಿಳಿಯದು. ಆದರೆ ಎಲ್ಲವೂ ಈ ವಿಷ್ವಕ್ಸೇನನಿಂದಲೇ ಆಯಿತೆಂದು ತಿಳಿ.
13143043a ಯತ್ಪ್ರಶಸ್ತಂ ಚ ಲೋಕೇಷು ಪುಣ್ಯಂ ಯಚ್ಚ ಶುಭಾಶುಭಮ್।
13143043c ತತ್ಸರ್ವಂ ಕೇಶವೋಽಚಿಂತ್ಯೋ ವಿಪರೀತಮತೋ ಭವೇತ್।।
ಲೋಕಗಳಲ್ಲಿ ಪ್ರಶಸ್ತವಾಗಿರುವ ಪುಣ್ಯವೆನಿಸಿರುವ ಶುಭಾಶುಭಗಳೆಲ್ಲವೂ ಕೇಶವನೇ ಆಗಿದ್ದಾನೆ. ಅವನಿಗಿಂತಲೂ ಬೇರೆಯಾದುದು ಇದೆಯೆಂದು ತಿಳಿಯುವುದೇ ವಿಪರೀತ ಬುದ್ಧಿಯಾಗುತ್ತದೆ.
13143044a ಏತಾದೃಶಃ ಕೇಶವೋಽಯಂ ಸ್ವಯಂಭೂರ್15 ನಾರಾಯಣಃ ಪರಮಶ್ಚಾವ್ಯಯಶ್ಚ।
13143044c ಮಧ್ಯಂ ಚಾಸ್ಯ ಜಗತಸ್ತಸ್ಥುಷಶ್ಚ ಸರ್ವೇಷಾಂ ಭೂತಾನಾಂ ಪ್ರಭವಶ್ಚಾಪ್ಯಯಶ್ಚ।।
ಕೇಶವನು ಇಂತಹ ಅಪಾರಮಹಿಮೆಯುಳ್ಳವನು. ಇವನು ಸ್ವಯಂಭು ಮತ್ತು ಅವ್ಯಯ ಪರಮ ಪುರುಷ ನಾರಾಯಣನು. ಇವನೇ ಜಗತ್ತಿನ ಆದಿ, ಮಧ್ಯ ಮತ್ತು ಅಂತ್ಯ. ಸರ್ವಭೂತಗಳ ಉತ್ಪತ್ತಿ-ಅಂತ್ಯಗಳಿಗೆ ಕಾರಣನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಮಹಾಪುರುಷಮಾಹಾತ್ಮ್ಯೇ ತ್ರಿಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಮಹಾಪುರುಷಮಾಹಾತ್ಮ್ಯೆ ಎನ್ನುವ ನೂರಾನಲ್ವತ್ಮೂರನೇ ಅಧ್ಯಾಯವು.
-
ಉಕ್ತಾ ಧರ್ಮಾ ಯೇ ಪುರಾಣೇ ಮಹಾಂತೋ ರಾಜನ್ವಿಪ್ರಾಣಾಂ ಕ್ಷತ್ರಿಯಾಣಾಂ ವಿಶಾಂ ಚ। ತಥಾ ಶೂದ್ರಾಣಾಂ ಧರ್ಮಮುಪಾಸತೇ ಚ ಶೇಷಂ ಕೃಷ್ಣಾದುಪಶಿಕ್ಷಸ್ವ ಪಾರ್ಥ।। (ಭಾರತ ದರ್ಶನ/ಗೀತಾ ಪ್ರೆಸ್). ↩︎
-
ಇದಕ್ಕೆ ಮೊದಲು ಕೃಷ್ಣಸ್ಯ ದೇಹಾನ್ಮೇದಿನೀ ಸಂಭಭೂವ। ಎಂದೂ ನಂತರ ಸ ಪರ್ವತಾನ್ವ್ಯಸೃಜದ್ವೈ ದಿಶಶ್ಚ। ಎಂದೂ ಇದೆ (ಭಾರತ ದರ್ಶನ). ↩︎
-
ಸ ಏವ ಪೂರ್ವಂ ನಿಜಘಾನ ದೈತ್ಯಾನ್ (ಭಾರತ ದರ್ಶನ). ↩︎
-
ಯದಾ ಧರ್ಮೋ ಗ್ಲಾತಿ ವಂಶೇ ಸುರಾಣಾಮ್ (ಭಾರತ ದರ್ಶನ). ↩︎
-
ರಾಹುಂ (ಭಾರತ ದರ್ಶನ). ↩︎
-
ಇದಕ್ಕೆ ಮೊದಲು ಈ ಒಂದು ಶ್ಲೋಕಾರ್ಧವಿದೆ: ತಂ ಘೋಷಾರ್ಥೇ ಗೀರ್ಭಿರಿಂದ್ರಾಃ ಸ್ತುವಂತಿ ಸ ಚಾಪೀಶೋ ಭಾರತೈಕಃ ಪಶೂನಾಮ್। (ಭಾರತ ದರ್ಶನ). ↩︎
-
ಇವನನ್ನೇ ಜನರು ಯುದ್ಧದಲ್ಲಿ ಜಯಪ್ರಾಪಕನೆಂದು ತಿಳಿಯುತ್ತಾರೆ (ಭಾರತ ದರ್ಶನ). ↩︎
-
ಹಂಸಂ ತಮೋಘ್ನಂ ಚ ತಮೇವ ವೀರ (ಭಾರತ ದರ್ಶನ). ↩︎
-
ಶೀತೋಷ್ಣ, ವೃಷ್ಟಿ ಮತ್ತು ಕಾಲಗರ್ಭಗಳು (ಭಾರತ ದರ್ಶನ). ↩︎
-
ವರ್ಷ, ವಾತೋಷ್ಣಪ್ರಕಾರಗಳು (ಭಾರತ ದರ್ಶನ). ↩︎
-
He is like a single wheel with three naves, borne by seven horses in the three worlds. The single wheel is clearly the year and the seven hourses are yoked to the sun’s chariot. The three naves is probably a pun on Vishnu’s name of Trinabha, meaning someone whose navel supports the three worlds. (Bibek Debroy) ↩︎
-
ಸ ಏವ ಪಾರ್ಥಾಯ ಶ್ವೇತಮಶ್ವಂ ಪ್ರಾಯಚ್ಚ (ಭಾರತ ದರ್ಶನ). ↩︎
-
ಸ ಬಂಧುರಸ್ತಸ್ಯ ರಥಸ್ತ್ರಿಚಕ್ರಸ್ತ್ರಿವೃಚ್ಛಿರಾಶ್ಚತುರಶ್ವಸ್ತ್ರಿನಾಭಿಃ।। (ಭಾರತ ದರ್ಶನ). ↩︎
-
ಸಾಧ್ಯಾಶ್ಚ ವಿಶ್ವೇ ಮರುತಾಂ ಗಣಾಶ್ಚ (ಭಾರತ ದರ್ಶನ). ↩︎
-
ಏತಾದೃಶಃ ಏಶವೋಽತಶ್ಚ ಭೂಯೋ (ಭಾರತ ದರ್ಶನ). ↩︎