142: ಪವನಾರ್ಜುನಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 142

ಸಾರ

ಬ್ರಾಹ್ಮಣರಿಂದ ಕಪ ದಾನವರ ನಾಶ; ಕಾರ್ತವೀರ್ಯನು ಬ್ರಾಹ್ಮಣರಿಗೆ ನಮಸ್ಕರಿಸಿದುದು (1-23).

13142001 ಭೀಷ್ಮ ಉವಾಚ।
13142001a ತೂಷ್ಣೀಮಾಸೀದರ್ಜುನಸ್ತು ಪವನಸ್ತ್ವಬ್ರವೀತ್ಪುನಃ।
13142001c ಶೃಣು ಮೇ ಬ್ರಾಹ್ಮಣೇಷ್ವೇವ ಮುಖ್ಯಂ ಕರ್ಮ ಜನಾಧಿಪ।।

ಭೀಷ್ಮನು ಹೇಳಿದನು: “ಅರ್ಜುನನಾದರೋ ಸುಮ್ಮನಾಗಿರಲು ಪವನನು ಪುನಃ ಹೇಳಿದನು: “ಜನಾಧಿಪ! ಬ್ರಾಹ್ಮಣರ ಮುಖ್ಯ ಕರ್ಮವನ್ನು ಕೇಳು.

13142002a ಮದಸ್ಯಾಸ್ಯಮನುಪ್ರಾಪ್ತಾ ಯದಾ ಸೇಂದ್ರಾ ದಿವೌಕಸಃ।
13142002c ತದೇಯಂ ಚ್ಯವನೇನೇಹ ಹೃತಾ ತೇಷಾಂ ವಸುಂಧರಾ।।

ಇಂದ್ರನೊಂದಿಗೆ ದಿವೌಕಸರು ಮದನ ಬಾಯಿಗೆ ಬಂದಿದ್ದಾಗ ಚ್ಯವನನು ಅವರ ವಸುಂಧರೆಯನ್ನು ಕಸಿದುಕೊಂಡಿದ್ದನು.

13142003a ಉಭೌ ಲೋಕೌ ಹೃತೌ ಮತ್ವಾ ತೇ ದೇವಾ ದುಃಖಿತಾಭವನ್।
13142003c ಶೋಕಾರ್ತಾಶ್ಚ ಮಹಾತ್ಮಾನಂ ಬ್ರಹ್ಮಾಣಂ ಶರಣಂ ಯಯುಃ।।

ಎರಡೂ ಲೋಕಗಳೂ ತಮ್ಮಿಂದ ಅಪಹರಿಸಲ್ಪಟ್ಟವು ಎಂದು ತಿಳಿದು ದೇವತೆಗಳು ದುಃಖಿತರಾದರು. ಶೋಕಾರ್ತರಾದ ಅವರು ಮಹಾತ್ಮ ಬ್ರಹ್ಮನ ಶರಣು ಹೋದರು.

13142004 ದೇವಾ ಊಚುಃ।
13142004a ಮದಾಸ್ಯವ್ಯತಿಷಿಕ್ತಾನಾಮಸ್ಮಾಕಂ ಲೋಕಪೂಜಿತ।
13142004c ಚ್ಯವನೇನ ಹೃತಾ ಭೂಮಿಃ ಕಪೈಶ್ಚಾಪಿ ದಿವಂ ಪ್ರಭೋ।।

ದೇವತೆಗಳು ಹೇಳಿದರು: “ಲೋಕಪೂಜಿತ! ಪ್ರಭೋ! ಮದನ ಬಾಯಿಯಲ್ಲಿ ನಾವು ಸಿಲುಕಿಕೊಂಡಿದ್ದಾಗ ಚ್ಯವನನು ಭೂಮಿಯನ್ನು ಮತ್ತು ಕಪರು ಸ್ವರ್ಗವನ್ನು ಅಪಹರಿಸಿದರು.”

13142005 ಬ್ರಹ್ಮೋವಾಚ।
13142005a ಗಚ್ಚಧ್ವಂ ಶರಣಂ ವಿಪ್ರಾನಾಶು ಸೇಂದ್ರಾ ದಿವೌಕಸಃ।
13142005c ಪ್ರಸಾದ್ಯ ತಾನುಭೌ ಲೋಕಾವವಾಪ್ಸ್ಯಥ ಯಥಾ ಪುರಾ।।

ಬ್ರಹ್ಮನು ಹೇಳಿದನು: “ಇಂದ್ರನೊಡನಿರುವ ದಿವೌಕಸರೇ! ಕೂಡಲೇ ವಿಪ್ರರ ಶರಣು ಹೋಗಿ. ಅವರನ್ನು ಪ್ರಸನ್ನಗೊಳಿಸಿದರೆ ನೀವು ಹಿಂದಿನಂತೆ ಎರಡೂ ಲೋಕಗಳನ್ನು ಪಡೆದುಕೊಳ್ಳಬಲ್ಲಿರಿ!”

13142006a ತೇ ಯಯುಃ ಶರಣಂ ವಿಪ್ರಾಂಸ್ತ ಊಚುಃ ಕಾನ್ಜಯಾಮಹೇ।
13142006c ಇತ್ಯುಕ್ತಾಸ್ತೇ ದ್ವಿಜಾನ್ ಪ್ರಾಹುರ್ಜಯತೇಹ ಕಪಾನಿತಿ।
13142006e ಭೂಗತಾನ್ ಹಿ ವಿಜೇತಾರೋ ವಯಮಿತ್ಯೇವ ಪಾರ್ಥಿವ।।

ಅವರು ಶರಣು ಹೋಗಲು ವಿಪ್ರರು “ಯಾರನ್ನು ಜಯಿಸಬೇಕು?” ಎಂದು ಕೇಳಿದರು. ದ್ವಿಜರು ಹೀಗೆ ಕೇಳಲು “ಕಪರನ್ನು ಜಯಿಸಿ!” ಎಂದು ದೇವತೆಗಳು ಹೇಳಿದರು. ಪಾರ್ಥಿವ! ಆಗ ಬ್ರಾಹ್ಮಣರು “ನಾವು ಭೂಗತರಾದವರನ್ನು ಮಾತ್ರ ಜಯಿಸಬಲ್ಲೆವು!” ಎಂದರು.

13142007a ತತಃ ಕರ್ಮ ಸಮಾರಬ್ಧಂ ಬ್ರಾಹ್ಮಣೈಃ ಕಪನಾಶನಮ್।
13142007c ತಚ್ಚ್ರುತ್ವಾ ಪ್ರೇಷಿತೋ ದೂತೋ ಬ್ರಾಹ್ಮಣೇಭ್ಯೋ ಧನೀ ಕಪೈಃ।।

ಆಗ ಬ್ರಾಹ್ಮಣರು ಕಪನಾಶನ ಕರ್ಮವನ್ನು ಪ್ರಾರಂಭಿಸಿದರು. ಅದನ್ನು ಕೇಳಿ ಕಪರು ಧನೀ ಎಂಬ ದೂತನನ್ನು ಬ್ರಾಹ್ಮಣರ ಬಳಿ ಕಳುಹಿಸಿದರು.

13142008a ಸ ಚ ತಾನ್ ಬ್ರಾಹ್ಮಣಾನಾಹ ಧನೀ ಕಪವಚೋ ಯಥಾ।
13142008c ಭವದ್ಭಿಃ ಸದೃಶಾಃ ಸರ್ವೇ ಕಪಾಃ ಕಿಮಿಹ ವರ್ತತೇ।।

ಧನಿಯು ಕಪರು ಹೇಳಿಕಳುಹಿಸಿದ್ದ ಮಾತನ್ನು ಬ್ರಾಹ್ಮಣರಿಗೆ ಹೇಳಿದನು: “ಸರ್ವ ಕಪರೂ ನಿಮ್ಮ ಸದೃಶರಾಗಿರುವಾಗ ನೀವು ಏಕೆ ಹೀಗೆ ವರ್ತಿಸುತ್ತಿದ್ದೀರಿ?

13142009a ಸರ್ವೇ ವೇದವಿದಃ ಪ್ರಾಜ್ಞಾಃ ಸರ್ವೇ ಚ ಕ್ರತುಯಾಜಿನಃ।
13142009c ಸರ್ವೇ ಸತ್ಯವ್ರತಾಶ್ಚೈವ ಸರ್ವೇ ತುಲ್ಯಾ ಮಹರ್ಷಿಭಿಃ।।

ಅವರೆಲ್ಲರೂ ವೇದವಿದರೂ, ಪ್ರಾಜ್ಞರೂ ಆಗಿದ್ದಾರೆ. ಎಲ್ಲರೂ ಕ್ರತು-ಯಜ್ಞಗಳನ್ನು ಮಾಡಿದ್ದಾರೆ. ಸರ್ವರೂ ಸತ್ಯವ್ರತರು ಮತ್ತು ಸರ್ವರೂ ಮಹರ್ಷಿಗಳಿಗೆ ಸಮಾನರು.

13142010a ಶ್ರೀಶ್ಚೈವ ರಮತೇ ತೇಷು ಧಾರಯಂತಿ ಶ್ರಿಯಂ ಚ ತೇ।
13142010c ವೃಥಾ ದಾರಾನ್ನ ಗಚ್ಚಂತಿ ವೃಥಾಮಾಂಸಂ ನ ಭುಂಜತೇ।।

ಲಕ್ಷ್ಮಿಯು ಅವರಲ್ಲಿ ರಮಿಸುತ್ತಾಳೆ ಮತ್ತು ಅವರು ಶ್ರೀಯನ್ನು ಧರಿಸಿದ್ದಾರೆ. ಋತುಸಮಯಗಳಲ್ಲದೇ ವೃಥಾ ಅವರು ಪತ್ನಿಯರನ್ನು ಕೂಡುವುದಿಲ್ಲ ಮತ್ತು ವೃಥಾ ನಿಷ್ಕಾರಣವಾಗಿ ಮಾಂಸವನ್ನು ತಿನ್ನುವುದಿಲ್ಲ.

13142011a ದೀಪ್ತಮಗ್ನಿಂ ಜುಹ್ವತಿ ಚ ಗುರೂಣಾಂ ವಚನೇ ಸ್ಥಿತಾಃ।
13142011c ಸರ್ವೇ ಚ ನಿಯತಾತ್ಮಾನೋ ಬಾಲಾನಾಂ ಸಂವಿಭಾಗಿನಃ।।

ಪ್ರಜ್ವಲಿಸುವ ಅಗ್ನಿಯಲ್ಲಿ ಅವರು ಹೋಮಮಾಡುತ್ತಾರೆ. ಗುರುಗಳ ವಚನದಂತೆ ನಡೆಯುತ್ತಾರೆ. ಸರ್ವರೂ ನಿಯತಾತ್ಮರಾಗಿದ್ದರೆ ಮತ್ತು ಬಾಲಕರಿಗೆ ಯಥಾಯೋಗ್ಯವಾಗಿ ಐಶ್ವರ್ಯದ ಭಾಗವನ್ನು ನೀಡುತ್ತಾರೆ.

13142012a ಉಪೇತ್ಯ ಶಕಟೈರ್ಯಾಂತಿ1 ನ ಸೇವಂತಿ ರಜಸ್ವಲಾಮ್।
213142012c ಅಭುಕ್ತವತ್ಸು ನಾಶ್ನಂತಿ ದಿವಾ ಚೈವ ನ ಶೇರತೇ।।

ಯಾರ ಬಳಿಗಾದರೂ ಹೋಗಬೇಕಾದರೆ ಬಂಡಿಗಳಲ್ಲಿ ಹೋಗುತ್ತಾರೆ. ರಜಸ್ವಲೆಯರನ್ನು ಸೇವಿಸುವುದಿಲ್ಲ. ಗರ್ಭಿಣಿಯರು ಮತ್ತು ವೃದ್ಧರ ಊಟವಾಗದ ಮೊದಲು ಊಟಮಾಡುವುದಿಲ್ಲ.

13142013a ಏತೈಶ್ಚಾನ್ಯೈಶ್ಚ ಬಹುಭಿರ್ಗುಣೈರ್ಯುಕ್ತಾನ್ಕಥಂ ಕಪಾನ್।
13142013c ವಿಜೇಷ್ಯಥ ನಿವರ್ತಧ್ವಂ ನಿವೃತ್ತಾನಾಂ ಶುಭಂ3 ಹಿ ವಃ।।

ಇದು ಮತ್ತು ಇನ್ನೂ ಅನ್ಯ ಅನೇಕ ಗುಣಗಳಿಂದ ಯುಕ್ತರಾದ ಕಪರನ್ನು ನೀವು ಏಕೆ ಜಯಿಸುವಿರಿ? ಹಿಂದಿರುಗಿ. ಹಿಂದಿರುಗುವುದರಿಂದಲೇ ನಿಮಗೆ ಶುಭವಾಗುತ್ತದೆ.”

13142014 ಬ್ರಾಹ್ಮಣಾ ಊಚುಃ।
13142014a ಕಪಾನ್ವಯಂ ವಿಜೇಷ್ಯಾಮೋ ಯೇ ದೇವಾಸ್ತೇ ವಯಂ ಸ್ಮೃತಾಃ।
13142014c ತಸ್ಮಾದ್ವಧ್ಯಾಃ ಕಪಾಸ್ಮಾಕಂ ಧನಿನ್ಯಾಹಿ ಯಥಾಗತಮ್।।

ಬ್ರಾಹ್ಮಣರು ಹೇಳಿದರು: “ನಾವು ಕಪರನ್ನು ಜಯಿಸುತ್ತೇವೆ. ಯಾರನ್ನು ದೇವತೆಗಳೆಂದು ಕರೆಯುತ್ತಾರೋ ಅವರು ನಾವೇ ಆಗಿದ್ದೇವೆ. ಆದುದರಿಂದ ನಮಗೆ ಕಪರು ವಧ್ಯರು. ಧನಿ! ಹೇಗೆ ಬಂದಿದ್ದೀಯೋ ಹಾಗೆ ಹೊರಟುಹೋಗು!”

13142015a ಧನೀ ಗತ್ವಾ ಕಪಾನಾಹ ನ ವೋ ವಿಪ್ರಾಃ ಪ್ರಿಯಂಕರಾಃ।
13142015c ಗೃಹೀತ್ವಾಸ್ತ್ರಾಣ್ಯಥೋ ವಿಪ್ರಾನ್ಕಪಾಃ ಸರ್ವೇ ಸಮಾದ್ರವನ್।।

ಧನಿಯು ಹೋಗಿ “ಬ್ರಾಹ್ಮಣರು ನಿಮಗೆ ಪ್ರಿಯವಾದುದನ್ನು ಮಾಡುವವರಲ್ಲ” ಎಂದು ಕಪರಿಗೆ ಹೇಳಿದನು. ಕೂಡಲೇ ಕಪರು ಎಲ್ಲರೂ ಅಸ್ತ್ರಗಳನ್ನು ಹಿಡಿದು ಬ್ರಾಹ್ಮಣರನ್ನು ಆಕಮಿಸಿದರು.

13142016a ಸಮುದಗ್ರಧ್ವಜಾನ್ ದೃಷ್ಟ್ವಾ ಕಪಾನ್ಸರ್ವೇ ದ್ವಿಜಾತಯಃ।
13142016c ವ್ಯಸೃಜನ್ ಜ್ವಲಿತಾನಗ್ನೀನ್ಕಪಾನಾಂ ಪ್ರಾಣನಾಶನಾನ್।।

ಧ್ವಜವನ್ನು ಮೇಲೆತ್ತಿ ಹಿಡಿದಿದ್ದ ಕಪರೆಲ್ಲರನ್ನೂ ನೋಡಿ ಬ್ರಾಹ್ಮಣರು ಕಪರ ಪ್ರಾಣನಾಶಕ ಪ್ರಜ್ವಲಿತ ಅಗ್ನಿಯನ್ನು ಅವರ ಮೇಲೆ ವಿಸರ್ಜಿಸಿದರು.

13142017a ಬ್ರಹ್ಮಸೃಷ್ಟಾ ಹವ್ಯಭುಜಃ ಕಪಾನ್ ಭುಕ್ತ್ವಾ ಸನಾತನಾಃ।
13142017c ನಭಸೀವ ಯಥಾಭ್ರಾಣಿ ವ್ಯರಾಜಂತ ನರಾಧಿಪ।।
413142017e ಪ್ರಶಶಂಸುರ್ದ್ವಿಜಾಂಶ್ಚೈವ ಬ್ರಹ್ಮಾಣಂ ಚ ಯಶಸ್ವಿನಮ್।

ನರಾಧಿಪ! ಬ್ರಾಹ್ಮಣರು ಸೃಷ್ಟಿಸಿದ ಆ ಸನಾತನ ಹವ್ಯಭುಜನು ಕಪರನ್ನು ಭುಂಜಿಸಿ ನಭದಲ್ಲಿರುವ ಮೋಡಗಳಂತೆ ರಾರಾಜಿಸಿದನು. ಆಗ ದೇವತೆಗಳು ಯಶಸ್ವೀ ದ್ವಿಜ ಬ್ರಾಹ್ಮಣರನ್ನು ಪ್ರಶಂಸಿಸಿದರು.

13142018a ತೇಷಾಂ ತೇಜಸ್ತಥಾ ವೀರ್ಯಂ ದೇವಾನಾಂ ವವೃಧೇ ತತಃ।
13142018c ಅವಾಪ್ನುವಂಶ್ಚಾಮರತ್ವಂ ತ್ರಿಷು ಲೋಕೇಷು ಪೂಜಿತಮ್।।

ಅನಂತರ ದೇವತೆಗಳ ತೇಜಸ್ಸು ಮತ್ತು ವೀರ್ಯವು ವೃದ್ಧಿಸಿತು. ಮೂರು ಲೋಕಗಳಲ್ಲಿಯೂ ಪೂಜಿತರಾಗಿ ಅಮರತ್ವವನ್ನು ಪಡೆದುಕೊಂಡರು.”

13142019a ಇತ್ಯುಕ್ತವಚನಂ ವಾಯುಮರ್ಜುನಃ ಪ್ರತ್ಯಭಾಷತ।
13142019c ಪ್ರತಿಪೂಜ್ಯ ಮಹಾಬಾಹೋ ಯತ್ತಚ್ಚೃಣು ನರಾಧಿಪ।।

ನರಾಧಿಪ! ಮಹಾಬಾಹೋ! ವಾಯುವು ಹೀಗೆ ಹೇಳಲು ಅರ್ಜುನನು ಅವನನ್ನು ಪ್ರತಿಪೂಜಿಸಿ ಉತ್ತರಿಸಿದನು. ಅದನ್ನು ಕೇಳು.

13142020a ಜೀವಾಮ್ಯಹಂ ಬ್ರಾಹ್ಮಣಾರ್ಥೇ ಸರ್ವಥಾ ಸತತಂ ಪ್ರಭೋ।
13142020c ಬ್ರಹ್ಮಣೇ ಬ್ರಾಹ್ಮಣೇಭ್ಯಶ್ಚ ಪ್ರಣಮಾಮಿ ಚ ನಿತ್ಯಶಃ।।

“ಪ್ರಭೋ! ನಾನು ಸರ್ವಥಾ ಸತತವೂ ಬ್ರಾಹ್ಮಣರಿಗಾಗಿಯೇ ಜೀವಿಸುತ್ತೇನೆ. ಬ್ರಹ್ಮ ಮತ್ತು ಬ್ರಾಹ್ಮಣರಿಗೆ ನಿತ್ಯವೂ ನಮಸ್ಕರಿಸುತ್ತೇನೆ.

13142021a ದತ್ತಾತ್ರೇಯಪ್ರಸಾದಾಚ್ಚ ಮಯಾ ಪ್ರಾಪ್ತಮಿದಂ ಯಶಃ।
13142021c ಲೋಕೇ ಚ ಪರಮಾ ಕೀರ್ತಿರ್ಧರ್ಮಶ್ಚ ಚರಿತೋ ಮಹಾನ್।।

ದತ್ತಾತ್ರೇಯನ ಪ್ರಸಾದದಿಂದಲೇ ನನಗೆ ಈ ಯಶಸ್ಸು ಮತ್ತು ಲೋಕದಲ್ಲಿ ಪರಮ ಕೀರ್ತಿಯು ಪ್ರಾಪ್ತವಾಗಿದೆ. ಮಹಾನ್ ಧರ್ಮದಲ್ಲಿಯೇ ನಡೆಯುತ್ತೇನೆ.

13142022a ಅಹೋ ಬ್ರಾಹ್ಮಣಕರ್ಮಾಣಿ ಯಥಾ ಮಾರುತ ತತ್ತ್ವತಃ।
13142022c ತ್ವಯಾ ಪ್ರೋಕ್ತಾನಿ ಕಾರ್ತ್ಸ್ನ್ಯೇನ ಶ್ರುತಾನಿ ಪ್ರಯತೇನ ಹ।।

ಅಹೋ! ಮಾರುತ! ನೀನು ಹೇಳಿದ ಬ್ರಾಹ್ಮಣಕರ್ಮಗಳೆಲ್ಲವನ್ನು ತತ್ತ್ವಸಹಿತವಾಗಿ ಸಂಪೂರ್ಣವಾಗಿ ಏಕಾಗ್ರಚಿತ್ತನಾಗಿ ಕೇಳಿದ್ದೇನೆ.”

13142023 ವಾಯುರುವಾಚ।
13142023a ಬ್ರಾಹ್ಮಣಾನ್ ಕ್ಷತ್ರಧರ್ಮೇಣ ಪಾಲಯಸ್ವೇಂದ್ರಿಯಾಣಿ ಚ।
13142023c ಭೃಗುಭ್ಯಸ್ತೇ ಭಯಂ ಘೋರಂ ತತ್ತು ಕಾಲಾದ್ಭವಿಷ್ಯತಿ।।

ವಾಯುವು ಹೇಳಿದನು: “ಕ್ಷತ್ರಧರ್ಮದಿಂದ ಬ್ರಾಹ್ಮಣರನ್ನು ಪರಿಪಾಲಿಸು ಮತ್ತು ಇಂದ್ರಿಯಗಳನ್ನು ನಿಗ್ರಹಿಸು. ಮುಂದೆ ನಿನಗೆ ಭೃಗುವಂಶೀಯರಿಂದ ಘೋರ ಭಯವಿದೆ. ಆದರೆ ಅದು ದೀರ್ಘಕಾಲದ ನಂತರ ಉಂಟಾಗುತ್ತದೆ.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪವನಾರ್ಜುನಸಂವಾದೇ ದ್ವಿಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪವನಾರ್ಜುನಸಂವಾದ ಎನ್ನುವ ನೂರಾನಲ್ವತ್ತೆರಡನೇ ಅಧ್ಯಾಯವು.


  1. ಉಪೇತ್ಯ ಶನಕೈರ್ಯಾಂತಿ (ಭಾರತ ದರ್ಶನ/ಗೀತಾ ಪ್ರೆಸ್). ↩︎

  2. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಸ್ವರ್ಗತಿಂ ಚೈವ ಗಚ್ಛಂತಿ ತಥೈವ ಶುಭಕರ್ಮಿಣಃ। (ಭಾರತ ದರ್ಶನ/ಗೀತಾ ಪ್ರೆಸ್). ↩︎

  3. ಸುಖಂ (ಭಾರತ ದರ್ಶನ/ಗೀತಾ ಪ್ರೆಸ್). ↩︎

  4. ಇದಕ್ಕೆ ಮೊದಲು ಈ ಎರಡು ಅಧಿಕ ಶ್ಲೋಕಗಳಿವೆ: ಹತ್ವಾ ವೈ ದಾನವಾನ್ ದೇವಾಃ ಸರ್ವೇ ಸಂಭೂಯ ಸಂಯುಗೇ। ತೇನಾಭ್ಯಜಾನನ್ ಹಿ ತದಾ ಬ್ರಾಹ್ಮಣೈರ್ನಿಹತಾನ್ ಕಪಾನ್।। ಅಥಾಗಮ್ಯ ಮಹಾತೇಜಾ ನಾರದೋಽಕಥಯದ್ವಿಭೋ। ಯಥಾ ಹತಾ ಮಹಾಭಾಗೈಸ್ತೇಜಸಾ ಬ್ರಾಹ್ಮಣೈಃ ಕಪಾಃ। ನಾರದಸ್ಯ ವಚಃ ಶ್ರುತ್ವಾ ಪ್ರೀತಾಃ ಸರ್ವೇ ದಿವೌಕಸಾಃ।। (ಗೀತಾ ಪ್ರೆಸ್). ↩︎