141: ಪವನಾರ್ಜುನಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 141

ಸಾರ

ಅತ್ರಿಯ ಮಹಾತ್ಮ್ಯೆ (1-14). ಚ್ಯವನನ ಮಹಾತ್ಮ್ಯೆ (15-30).

13141001 ಭೀಷ್ಮ ಉವಾಚ।
13141001a ಇತ್ಯುಕ್ತಸ್ತ್ವರ್ಜುನಸ್ತೂಷ್ಣೀಮಭೂದ್ವಾಯುಸ್ತಮಬ್ರವೀತ್।
13141001c ಶೃಣು ಮೇ ಹೈಹಯಶ್ರೇಷ್ಠ ಕರ್ಮಾತ್ರೇಃ ಸುಮಹಾತ್ಮನಃ।।

ಭೀಷ್ಮನು ಹೇಳಿದನು: “ವಾಯುವು ಹೀಗೆ ಹೇಳಲು ಅರ್ಜುನನು ಸುಮ್ಮನಾದನು. ನಂತರ ವಾಯುವು ಮುಂದುವರಿಸಿ ಹೇಳಿದನು: “ಹೈಹಯಶ್ರೇಷ್ಠ! ಸುಮಹಾತ್ಮ ಅತ್ರಿಯ ಕರ್ಮಗಳನ್ನು ಕೇಳು.

13141002a ಘೋರೇ ತಮಸ್ಯಯುಧ್ಯಂತ ಸಹಿತಾ ದೇವದಾನವಾಃ।
13141002c ಅವಿಧ್ಯತ ಶರೈಸ್ತತ್ರ ಸ್ವರ್ಭಾನುಃ ಸೋಮಭಾಸ್ಕರೌ।।

ರಾಹುವು ಸೋಮ-ಭಾಸ್ಕರರನ್ನು ಶರಗಳಿಂದ ಗಾಯಗೊಳಿಸಿದುದರಿಂದ ದೇವ-ದಾನವರು ಘೋರ ಅಂಧಕಾರದಲ್ಲಿಯೇ ಯುದ್ಧಮಾಡಬೇಕಾಯಿತು.

13141003a ಅಥ ತೇ ತಮಸಾ ಗ್ರಸ್ತಾ ನಿಹನ್ಯಂತೇ ಸ್ಮ ದಾನವೈಃ।
13141003c ದೇವಾ ನೃಪತಿಶಾರ್ದೂಲ ಸಹೈವ ಬಲಿಭಿಸ್ತದಾ।।

ನೃಪತಿಶಾರ್ದೂಲ! ಆಗ ತಮಸ್ಸಿನಿಂದ ಗ್ರಸ್ತರಾಗಿದ್ದ ದೇವತೆಗಳನ್ನು ಬಲಿಯೊಂದಿಗಿದ್ದ ದಾನವರು ಸಂಹರಿಸುತ್ತಿದ್ದರು.

13141004a ಅಸುರೈರ್ವಧ್ಯಮಾನಾಸ್ತೇ ಕ್ಷೀಣಪ್ರಾಣಾ ದಿವೌಕಸಃ।
13141004c ಅಪಶ್ಯಂತ ತಪಸ್ಯಂತಮತ್ರಿಂ ವಿಪ್ರಂ ಮಹಾವನೇ।।

ಅಸುರರಿಂದ ವಧಿಸಲ್ಪಟ್ಟು ಕ್ಷೀಣಪ್ರಾಣರಾದ ದಿವೌಕಸರು ಮಹಾವನದಲ್ಲಿ ತಪಸ್ಸನ್ನಾಚರಿಸುತ್ತಿದ್ದ ವಿಪ್ರ ಅತ್ರಿಯನ್ನು ನೋಡಿದರು.

13141005a ಅಥೈನಮಬ್ರುವನ್ದೇವಾಃ ಶಾಂತಕ್ರೋಧಂ ಜಿತೇಂದ್ರಿಯಮ್।
13141005c ಅಸುರೈರಿಷುಭಿರ್ವಿದ್ಧೌ ಚಂದ್ರಾದಿತ್ಯಾವಿಮಾವುಭೌ।।

ಶಾಂತಕ್ರೋಧಿ1 ಜಿತೇಂದ್ರಿಯ ಅತ್ರಿಗೆ ದೇವತೆಗಳು ಹೇಳಿದರು: “ಚಂದ್ರಾದಿತ್ಯರಿಬ್ಬರನ್ನೂ ಅಸುರರು ಬಾಣಗಳಿಂದ ಹೊಡೆದು ಗಾಯಗೊಳಿಸಿದ್ದಾರೆ.

13141006a ವಯಂ ವಧ್ಯಾಮಹೇ ಚಾಪಿ ಶತ್ರುಭಿಸ್ತಮಸಾವೃತೇ।
13141006c ನಾಧಿಗಚ್ಚಾಮ ಶಾಂತಿಂ ಚ ಭಯಾತ್ತ್ರಾಯಸ್ವ ನಃ ಪ್ರಭೋ।।

ಪ್ರಭೋ! ತಮಸ್ಸಿನಿಂದ ಆವೃತರಾಗಿರುವ ನಮ್ಮನ್ನೂ ಕೂಡ ಶತ್ರುಗಳು ವಧಿಸುತ್ತಿದ್ದಾರೆ. ನಮಗೆ ಶಾಂತಿಯೆಂಬುದೇ ಇಲ್ಲದಾಗಿದೆ. ಈ ಭಯದಿಂದ ನಮ್ಮನ್ನು ಕಾಪಾಡು!”

13141007a ಕಥಂ ರಕ್ಷಾಮಿ ಭವತಸ್ತೇಽಬ್ರುವಂಶ್ಚಂದ್ರಮಾ ಭವ।
13141007c ತಿಮಿರಘ್ನಶ್ಚ ಸವಿತಾ ದಸ್ಯುಹಾ ಚೈವ ನೋ ಭವ।।

“ನಿಮ್ಮನ್ನು ನಾನು ಹೇಗೆ ರಕ್ಷಿಸಬೇಕು?” ಎಂದು ಅತ್ರಿಯು ಕೇಳಲು ದೇವತೆಗಳು “ಕತ್ತಲೆಯನ್ನು ಹೋಗಲಾಡಿಸುವ ಚಂದ್ರನಾಗು. ಸೂರ್ಯನಾಗು. ಮತ್ತು ನಮ್ಮ ಶತ್ರುಗಳನ್ನು ಕೊಲ್ಲುವವನಾಗು!” ಎಂದರು.

13141008a ಏವಮುಕ್ತಸ್ತದಾತ್ರಿಸ್ತು ತಮೋನುದಭವಚ್ಚಶೀ।
13141008c ಅಪಶ್ಯತ್ಸೌಮ್ಯಭಾವಂ ಚ ಸೂರ್ಯಸ್ಯ ಪ್ರತಿದರ್ಶನಮ್2।।

ಇದನ್ನು ಕೇಳಿ ಅತ್ರಿಯಾದರೋ ಸೂರ್ಯನ ಸೌಮ್ಯಭಾವವನ್ನು ನೋಡಿ ಅವನನ್ನೇ ಪ್ರತಿಬಿಂಬಿಸುವ ಕತ್ತಲೆಯನ್ನು ಹೋಗಲಾಡಿಸುವ ಶಶಿಯಾದನು.

13141009a ದೃಷ್ಟ್ವಾ ನಾತಿಪ್ರಭಂ ಸೋಮಂ ತಥಾ ಸೂರ್ಯಂ ಚ ಪಾರ್ಥಿವ।
13141009c ಪ್ರಕಾಶಮಕರೋದತ್ರಿಸ್ತಪಸಾ ಸ್ವೇನ ಸಂಯುಗೇ।।

ಪಾರ್ಥಿವ! ಸೋಮ ಮತ್ತು ಸೂರ್ಯರು ಪ್ರಭೆಯಿಂದ ಇಲ್ಲದಿರುವುದನ್ನು ನೋಡಿ ಅತ್ರಿಯು ತನ್ನ ತಪಸ್ಸಿನಿಂದ ಯುದ್ಧದಲ್ಲಿ ಪ್ರಕಾಶವನ್ನಿತ್ತನು.

13141010a ಜಗದ್ವಿತಿಮಿರಂ ಚಾಪಿ ಪ್ರದೀಪ್ತಮಕರೋತ್ತದಾ।
13141010c ವ್ಯಜಯಚ್ಚತ್ರುಸಂಘಾಂಶ್ಚ ದೇವಾನಾಂ ಸ್ವೇನ ತೇಜಸಾ।।

ಜಗತ್ತಿನ ಕತ್ತಲೆಯನ್ನು ಹೋಗಲಾಡಿಸಿ ಎಲ್ಲವನ್ನೂ ಬೆಳಗಿಸಿದನು. ತನ್ನ ತೇಜಸ್ಸಿನಿಂದ ಅವನು ದೇವತೆಗಳ ಶತ್ರುಸಂಘಗಳನ್ನೂ ಸೋಲಿಸಿದನು.

13141011a ಅತ್ರಿಣಾ ದಹ್ಯಮಾನಾಂಸ್ತಾನ್ ದೃಷ್ಟ್ವಾ ದೇವಾ ಮಹಾಸುರಾನ್।
13141011c ಪರಾಕ್ರಮೈಸ್ತೇಽಪಿ ತದಾ ವ್ಯತ್ಯಘ್ನನ್ನತ್ರಿರಕ್ಷಿತಾಃ।।

ಅತ್ರಿಯು ದಹಿಸುತ್ತಿದ್ದ ಆ ಮಹಾಸುರರನ್ನು ನೋಡಿ, ಅತ್ರಿರಕ್ಷಿತರಾದ ದೇವತೆಗಳು ಪರಾಕ್ರಮದಿಂದ ಅವರನ್ನು ಸಂಹರಿಸಿದರು.

13141012a ಉದ್ಭಾಸಿತಶ್ಚ ಸವಿತಾ ದೇವಾಸ್ತ್ರಾತಾ ಹತಾಸುರಾಃ।
13141012c ಅತ್ರಿಣಾ ತ್ವಥ ಸೋಮತ್ವಂ3 ಕೃತಮುತ್ತಮತೇಜಸಾ।।

ಅವನು ಸೂರ್ಯನನ್ನು ಬೆಳಗುವಂತೆ ಮಾಡಿದನು. ದೇವತೆಗಳನ್ನು ರಕ್ಷಿಸಿದನು ಮತ್ತು ಅಸುರರನ್ನು ಸಂಹರಿಸಿದನು. ಅತ್ರಿಯು ತನ್ನ ಉತ್ತಮ ತೇಜಸ್ಸಿನಿಂದ ಸೋಮತ್ವವನ್ನು ಪಡೆದುಕೊಂಡನು.

13141013a ಅದ್ವಿತೀಯೇನ ಮುನಿನಾ ಜಪತಾ ಚರ್ಮವಾಸಸಾ।
13141013c ಫಲಭಕ್ಷೇಣ ರಾಜರ್ಷೇ ಪಶ್ಯ ಕರ್ಮಾತ್ರಿಣಾ ಕೃತಮ್।।

ರಾಜರ್ಷೇ! ಕೃಷ್ಣಾಜಿನವನ್ನು ಉಟ್ಟುಕೊಂಡು ಫಲಗಳನ್ನೇ ತಿನ್ನುತ್ತಾ ಜಪಮಾಡುವ ಆ ಅದ್ವಿತೀಯ ಮುನಿ ಅತ್ರಿಯು ಮಾಡಿದ ಕರ್ಮವನ್ನಾದರೂ ನೋಡು!

13141014a ತಸ್ಯಾಪಿ ವಿಸ್ತರೇಣೋಕ್ತಂ ಕರ್ಮಾತ್ರೇಃ ಸುಮಹಾತ್ಮನಃ।
13141014c ಬ್ರವೀಮ್ಯಹಂ ಬ್ರೂಹಿ ವಾ ತ್ವಮತ್ರಿತಃ ಕ್ಷತ್ರಿಯಂ ವರಮ್।।

ಸುಮಹಾತ್ಮಾ ಅತ್ರಿಯ ಕರ್ಮಗಳನ್ನೂ ವಿಸ್ತಾರವಾಗಿ ಹೇಳಿದ್ದೇನೆ. ಅತ್ರಿಗಿಂತಲೂ ಶ್ರೇಷ್ಠನಾದ ಕ್ಷತ್ರಿಯನಿದ್ದರೆ ಹೇಳು ಅಥವಾ ನಾನು ಮುಂದುವರಿಸಿ ಹೇಳುತ್ತೇನೆ.”

13141015a ಇತ್ಯುಕ್ತಸ್ತ್ವರ್ಜುನಸ್ತೂಷ್ಣೀಮಭೂದ್ವಾಯುಸ್ತಮಬ್ರವೀತ್।
13141015c ಶೃಣು ರಾಜನ್ಮಹತ್ಕರ್ಮ ಚ್ಯವನಸ್ಯ ಮಹಾತ್ಮನಃ।।

ವಾಯುವು ಹೀಗೆ ಹೇಳಲು ಅರ್ಜುನನು ಸುಮ್ಮನಿದ್ದನು. ಅನಂತರ ವಾಯುವು ಪುನಃ ಹೇಳಿದನು: “ರಾಜನ್! ಮಹಾತ್ಮ ಚ್ಯವನನ ಕರ್ಮವನ್ನು ಕೇಳು.

13141016a ಅಶ್ವಿನೋಃ ಪ್ರತಿಸಂಶ್ರುತ್ಯ ಚ್ಯವನಃ ಪಾಕಶಾಸನಮ್।
13141016c ಪ್ರೋವಾಚ ಸಹಿತಂ ದೇವೈಃ ಸೋಮಪಾವಶ್ವಿನೌ ಕುರು।।

ಅಶ್ವಿನಿಯರನ್ನು ಕೇಳಿದ ಚ್ಯವನನು ಪಾಕಶಾಸನನಿಗೆ “ದೇವತೆಗಳೊಂದಿಗೆ ಅಶ್ವಿನಿಯರನ್ನೂ ಸೋಮಪರನ್ನಾಗಿ ಮಾಡು!” ಎಂದನು.

13141017 ಇಂದ್ರ ಉವಾಚ।
13141017a ಅಸ್ಮಾಭಿರ್ವರ್ಜಿತಾವೇತೌ ಭವೇತಾಂ ಸೋಮಪೌ ಕಥಮ್।
13141017c ದೇವೈರ್ನ ಸಂಮಿತಾವೇತೌ ತಸ್ಮಾನ್ಮೈವಂ ವದಸ್ವ ನಃ।।

ಇಂದ್ರನು ಹೇಳಿದನು: “ನಮ್ಮಿಂದ ವರ್ಜಿತರಾದ ಇವರು ಹೇಗೆ ತಾನೆ ಸೋಮಪರಾಗಬಲ್ಲರು? ಇವರು ದೇವತೆಗಳೊಂದಿಗೆ ಸಮಾನರಾಗಿ ಬೆರೆಯಲಾರರು. ಆದುದರಿಂದ ಇದನ್ನು ನನಗೆ ಹೇಳಬೇಡ!

13141018a ಅಶ್ವಿಭ್ಯಾಂ ಸಹ ನೇಚ್ಚಾಮಃ ಪಾತುಂ ಸೋಮಂ ಮಹಾವ್ರತ4
13141018c ಪಿಬಂತ್ವನ್ಯೇ ಯಥಾಕಾಮಂ ನಾಹಂ ಪಾತುಮಿಹೋತ್ಸಹೇ।।

ಮಹಾವ್ರತ! ಅಶ್ವಿನಿಯರೊಂದಿಗೆ ನಾವು ಸೋಮವನ್ನು ಕುಡಿಯಲು ಬಯಸುವುದಿಲ್ಲ. ಅನ್ಯರು ಬಯಸಿದರೆ ಅವರೊಂದಿಗೆ ಬೇಕಾದರೆ ಸೋಮಪಾನವನ್ನು ಮಾಡಲಿ. ಆದರೆ ನಾನು ಮಾತ್ರ ಇವರೊಂದಿಗೆ ಸೋಮಪಾನವನ್ನು ಮಾಡುವುದಿಲ್ಲ.”

13141019 ಚ್ಯವನ ಉವಾಚ।
13141019a ನ ಚೇತ್ಕರಿಷ್ಯಸಿ ವಚೋ ಮಯೋಕ್ತಂ ಬಲಸೂದನ।
13141019c ಮಯಾ ಪ್ರಮಥಿತಃ ಸದ್ಯಃ ಸೋಮಂ ಪಾಸ್ಯಸಿ ವೈ ಮಖೇ।।

ಚ್ಯವನನು ಹೇಳಿದನು: “ಬಲಸೂದನ! ನನ್ನ ವಚನದಂತೆ ಮಾಡದೇ ಇದ್ದರೆ ಯಜ್ಞದಲ್ಲಿ ನನ್ನ ಪೀಡೆಗೊಳಗಾಗಿ ಒಡನೆಯೇ ಇವರೊಂದಿಗೆ ಸೋಮವನ್ನು ಕುಡಿಯುತ್ತೀಯೆ!”

13141020a ತತಃ ಕರ್ಮ ಸಮಾರಬ್ಧಂ ಹಿತಾಯ ಸಹಸಾಶ್ವಿನೋಃ।
13141020c ಚ್ಯವನೇನ ತತೋ ಮಂತ್ರೈರಭಿಭೂತಾಃ ಸುರಾಭವನ್।।

ಅನಂತರ ಅಶ್ವಿನಿಯರ ಹಿತಾರ್ಥವಾಗಿ ಚ್ಯವನನು ಯಜ್ಞಕರ್ಮವನ್ನು ಪ್ರಾರಂಭಿಸಿದನು. ಅವನ ಮಂತ್ರಗಳಿಂದ ಸುರರು ಅವಶರಾಗಿಬಿಟ್ಟರು.

13141021a ತತ್ತು ಕರ್ಮ ಸಮಾರಬ್ಧಂ ದೃಷ್ಟ್ವೇಂದ್ರಃ ಕ್ರೋಧಮೂರ್ಚಿತಃ।
13141021c ಉದ್ಯಮ್ಯ ವಿಪುಲಂ ಶೈಲಂ ಚ್ಯವನಂ ಸಮುಪಾದ್ರವತ್।
13141021e ತಥಾ ವಜ್ರೇಣ ಭಗವಾನಮರ್ಷಾಕುಲಲೋಚನಃ।।

ಇಂತಹ ಯಜ್ಞವನ್ನು ಪ್ರಾರಂಭಿಸಿದುದನ್ನು ನೋಡಿ ಭಗವಾನ್ ಇಂದ್ರನು ಕ್ರೋಧಮೂರ್ಛಿತನಾಗಿ ಸಿಟ್ಟಿನಿಂದ ಭುಗಿಲೆದ್ದ ಕಣ್ಣುಗಳಿಂದ ದೊಡ್ಡ ಪರ್ವತ ಮತ್ತು ವರ್ಜವನ್ನು ಎತ್ತಿ ಹಿಡಿದು ಚ್ಯವನನನ್ನು ಆಕ್ರಮಣಿಸಿದನು.

13141022a ತಮಾಪತಂತಂ ದೃಷ್ಟ್ವೈವ ಚ್ಯವನಸ್ತಪಸಾನ್ವಿತಃ।
13141022c ಅದ್ಭಿಃ ಸಿಕ್ತ್ವಾಸ್ತಂಭಯತ್ತಂ ಸವಜ್ರಂ ಸಹಪರ್ವತಮ್।।

ತನ್ನ ಮೇಲೆ ಆಕ್ರಮಣಿಸುತ್ತಿದ್ದ ಅವನನ್ನು ನೋಡುತ್ತಲೇ ತಪಸಾನ್ವಿತ ಚ್ಯವನನು ನೀರನ್ನು ಸಿಂಪಡಿಸಿ ವಜ್ರ ಮತ್ತು ಪರ್ವತ ಸಮೇತ ಇಂದ್ರನನ್ನು ಸ್ತಂಭಗೊಳಿಸಿದನು.

13141023a ಅಥೇಂದ್ರಸ್ಯ ಮಹಾಘೋರಂ ಸೋಽಸೃಜಚ್ಚತ್ರುಮೇವ ಹ।
13141023c ಮದಂ ಮಂತ್ರಾಹುತಿಮಯಂ ವ್ಯಾದಿತಾಸ್ಯಂ ಮಹಾಮುನಿಃ।।

ಕೂಡಲೇ ಆ ಮಹಾಮುನಿಯು ಮಂತ್ರಾಹುತಿಮಯನಾದ ಮಹಾಘೋರನಾದ ಬಾಯಿಯನ್ನು ಕಳೆದಿದ್ದ ಮದನೆಂಬ ಇಂದ್ರಶತ್ರುವನ್ನೂ ಸೃಷ್ಟಿಸಿದನು.

13141024a ತಸ್ಯ ದಂತಸಹಸ್ರಂ ತು ಬಭೂವ ಶತಯೋಜನಮ್।
13141024c ದ್ವಿಯೋಜನಶತಾಸ್ತಸ್ಯ ದಂಷ್ಟ್ರಾಃ ಪರಮದಾರುಣಾಃ।
13141024e ಹನುಸ್ತಸ್ಯಾಭವದ್ ಭೂಮಾವೇಕಶ್ಚಾಸ್ಯಾಸ್ಪೃಶದ್ದಿವಮ್।।

ಅವನ ಸಹಸ್ರಾರು ದಂತಗಳು ನೂರು ಯೋಜನ ವಿಸ್ತೀರ್ಣವಾಗಿದ್ದವು. ಅವನ ಪರಮ ದಾರುಣ ಕೋರೆದಾಡೆಗಳು ಇನ್ನೂರು ಯೋಜನಗಳಷ್ಟು ಉದ್ದವಾಗಿದ್ದವು. ಅವನ ದವಡೆಗಳು ಭೂಮಿ-ಆಕಾಶಗಳನ್ನು ಸ್ಪರ್ಶಿಸುತ್ತಿದವು.

13141025a ಜಿಹ್ವಾಮೂಲೇ ಸ್ಥಿತಾಸ್ತಸ್ಯ ಸರ್ವೇ ದೇವಾಃ ಸವಾಸವಾಃ।
13141025c ತಿಮೇರಾಸ್ಯಮನುಪ್ರಾಪ್ತಾ ಯಥಾ ಮತ್ಸ್ಯಾ ಮಹಾರ್ಣವೇ।।

ಮಹಾಸಮುದ್ರದಲ್ಲಿ ಮೀನುಗಳು ತಿಮಿಂಗಿಲದ ಬಾಯಿಯನ್ನು ಸೇರುವಂತೆ ಇಂದ್ರನೊಂದಿಗೆ ದೇವತೆಗಳೆಲ್ಲರೂ ಅವನ ನಾಲಿಗೆಯ ತುದಿಯಲ್ಲಿ ನಿಂತಿದ್ದರು.

13141026a ತೇ ಸಂಮಂತ್ರ್ಯ ತತೋ ದೇವಾ ಮದಸ್ಯಾಸ್ಯಗತಾಸ್ತದಾ।
13141026c ಅಬ್ರುವನ್ಸಹಿತಾಃ ಶಕ್ರಂ ಪ್ರಣಮಾಸ್ಮೈ ದ್ವಿಜಾತಯೇ।
13141026e ಅಶ್ವಿಭ್ಯಾಂ ಸಹ ಸೋಮಂ ಚ ಪಿಬಾಮೋ ವಿಗತಜ್ವರಾಃ।।

ಮದನ ಬಾಯಿಯ ಬಳಿ ಬಂದಿದ್ದ ದೇವತೆಗಳು ಸಮಾಲೋಚಿಸಿ ಒಟ್ಟಾಗಿ ಶಕ್ರನಿಗೆ ಹೇಳಿದರು: “ಈ ಬ್ರಾಹ್ಮಣನನ್ನು ಪ್ರಸನ್ನಗೊಳಿಸು! ವಿಗತಜ್ವರರಾಗಿ ಅಶ್ವಿನಿಯರೊಂದಿಗೆ ಸೋಮವನ್ನು ಕುಡಿಯೋಣ!”

13141027a ತತಃ ಸ ಪ್ರಣತಃ ಶಕ್ರಶ್ಚಕಾರ ಚ್ಯವನಸ್ಯ ತತ್।
13141027c ಚ್ಯವನಃ ಕೃತವಾಂಸ್ತೌ ಚಾಪ್ಯಶ್ವಿನೌ ಸೋಮಪೀಥಿನೌ।।

ಅನಂತರ ಶಕ್ರನು ಚ್ಯವನನನ್ನು ನಮಸ್ಕರಿಸಿದನು. ಚ್ಯವನನೂ ಕೂಡ ಆ ಅಶ್ವಿನಿಯರನ್ನು ಸೋಮಪರನ್ನಾಗಿ ಮಾಡಿದನು.

13141028a ತತಃ ಪ್ರತ್ಯಾಹರತ್ಕರ್ಮ ಮದಂ ಚ ವ್ಯಭಜನ್ಮುನಿಃ।
13141028c ಅಕ್ಷೇಷು ಮೃಗಯಾಯಾಂ ಚ ಪಾನೇ ಸ್ತ್ರೀಷು ಚ ವೀರ್ಯವಾನ್।।

ಅನಂತರ ಆ ವೀರ್ಯವಾನ್ ಮುನಿಯು ಮದನನ್ನು ವಿಭಜಿಸಿ ಜೂಜು, ಬೇಟೆ, ಮದ್ಯಪಾನ ಮತ್ತು ಸ್ತ್ರೀಯರಲ್ಲಿ ಹಂಚಿದನು.

13141029a ಏತೈರ್ದೋಷೈರ್ನರೋ ರಾಜನ್ ಕ್ಷಯಂ ಯಾತಿ ನ ಸಂಶಯಃ।
13141029c ತಸ್ಮಾದೇತಾನ್ನರೋ ನಿತ್ಯಂ ದೂರತಃ ಪರಿವರ್ಜಯೇತ್।।

ರಾಜನ್! ನರರು ಇವುಗಳಿಂದ ದೂಷಿತರಾಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ಆದುದರಿಂದ ನಿತ್ಯವೂ ನರರು ಇವುಗಳನ್ನು ದೂರದಿಂದಲೇ ವರ್ಜಿಸಬೇಕು.

13141030a ಏತತ್ತೇ ಚ್ಯವನಸ್ಯಾಪಿ ಕರ್ಮ ರಾಜನ್ ಪ್ರಕೀರ್ತಿತಮ್।
13141030c ಬ್ರವೀಮ್ಯಹಂ ಬ್ರೂಹಿ ವಾ ತ್ವಂ ಚ್ಯವನಾತ್ಕ್ಷತ್ರಿಯಂ ವರಮ್।।

ರಾಜನ್! ಹೀಗೆ ಚ್ಯವನನ ಕರ್ಮವನ್ನೂ ನಾನು ವರ್ಣಿಸಿದ್ದೇನೆ. ಚ್ಯವನನಿಗಿಂತಲೂ ಶ್ರೇಷ್ಠನಾದ ಕ್ಷತ್ರಿಯನ್ಯಾರಾದರೂ ಇದ್ದರೆ ಹೇಳು. ಇಲ್ಲದಿದ್ದರೆ ನಾನು ಮುಂದುವರಿಸಿ ಹೇಳುತ್ತೇನೆ.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪವನಾರ್ಜುನಸಂವಾದೇ ಏಕಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪವನಾರ್ಜುನಸಂವಾದ ಎನ್ನುವ ನೂರಾನಲ್ವತ್ತೊಂದನೇ ಅಧ್ಯಾಯವು.


  1. ಅತ್ರಿಯ ಕ್ರೋಧವೂ ಶಾಂತವಾಗಿತ್ತು. ↩︎

  2. ಅಪಶ್ಯತ್ಸೌಮ್ಯಭಾವಾಚ್ಚ ಸೋಮವತ್ಪ್ರಿಯದರ್ಶನಃ।। (ಗೀತಾ ಪ್ರೆಸ್). ↩︎

  3. ಸಾಮಾರ್ಥ್ಯಂ (ಭಾರತ ದರ್ಶನ) . ↩︎

  4. ಅಶ್ವಿಭ್ಯಾಂ ಸಹ ಸೋಮಂ ವೈ ನ ಪಾಸ್ಯಾಮಿ ದ್ವಿಜೋತ್ತಮ। (ಭಾರತ ದರ್ಶನ/ಗೀತಾ ಪ್ರೆಸ್). ↩︎