ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 140
ಸಾರ
ಅಗಸ್ತ್ಯನ ಮಹಾತ್ಮ್ಯೆ (1-14). ವಸಿಷ್ಠನ ಮಹಾತ್ಮ್ಯೆ (15-26).
13140001 ಭೀಷ್ಮ ಉವಾಚ।
13140001a ಇತ್ಯುಕ್ತಃ ಸ ತದಾ ತೂಷ್ಣೀಮಭೂದ್ವಾಯುಸ್ತತೋಽಬ್ರವೀತ್।
13140001c ಶೃಣು ರಾಜನ್ನಗಸ್ತ್ಯಸ್ಯ ಮಾಹಾತ್ಮ್ಯಂ ಬ್ರಾಹ್ಮಣಸ್ಯ ಹ।।
ಭೀಷ್ಮನು ಹೇಳಿದನು: “ವಾಯುವು ಇದನ್ನು ಹೇಳಲು ರಾಜನು ಸುಮ್ಮನೇ ಇದ್ದನು. ಆಗ ವಾಯುವು ಹೇಳಿದನು: “ರಾಜನ್! ಬ್ರಾಹ್ಮಣ ಅಗಸ್ತ್ಯನ ಮಹಾತ್ಮ್ಯೆಯನ್ನು ಕೇಳು.
13140002a ಅಸುರೈರ್ನಿರ್ಜಿತಾ ದೇವಾ ನಿರುತ್ಸಾಹಾಶ್ಚ ತೇ ಕೃತಾಃ।
13140002c ಯಜ್ಞಾಶ್ಚೈಷಾಂ ಹೃತಾಃ ಸರ್ವೇ ಪಿತೃಭ್ಯಶ್ಚ ಸ್ವಧಾ ತಥಾ।।
ಅಸುರರಿಂದ ಸೋತ ದೇವತೆಗಳು ನಿರುತ್ಸಾಹರಾಗಿದ್ದರು. ಅವರ ಯಜ್ಞಭಾಗಗಳನ್ನೂ ಪಿತೃಗಳ ಸ್ವಧಾ ಎಲ್ಲವನ್ನೂ ಅವರು ಅಪಹರಿಸಿದ್ದರು.
13140003a ಕರ್ಮೇಜ್ಯಾ ಮಾನವಾನಾಂ ಚ ದಾನವೈರ್ಹೈಹಯರ್ಷಭ।
13140003c ಭ್ರಷ್ಟೈಶ್ವರ್ಯಾಸ್ತತೋ ದೇವಾಶ್ಚೇರುಃ ಪೃಥ್ವೀಮಿತಿ ಶ್ರುತಿಃ।।
ಹೈಹಯರ್ಷಭ! ಮಾನವರ ಕರ್ಮಗಳನ್ನೂ ಯಜ್ಞಗಳನ್ನೂ ದಾನವರು ಭ್ರಷ್ಟಗೊಳಿಸಿದರು. ಆಗ ದೇವತೆಗಳು ಭೂಮಿಯ ಮೇಲೆ ಅಲೆದಾಡುತ್ತಿದ್ದರೆಂದು ಕೇಳಿದ್ದೇವೆ.
13140004a ತತಃ ಕದಾ ಚಿತ್ತೇ ರಾಜನ್ದೀಪ್ತಮಾದಿತ್ಯವರ್ಚಸಮ್।
13140004c ದದೃಶುಸ್ತೇಜಸಾ ಯುಕ್ತಮಗಸ್ತ್ಯಂ ವಿಪುಲವ್ರತಮ್।।
ರಾಜನ್! ಆಗ ಒಮ್ಮೆ ಅವರು ಆದಿತ್ಯವರ್ಚಸ್ಸಿನಿಂದ ಬೆಳಗುತ್ತಿದ್ದ ತೇಜೋಯುಕ್ತನಾದ ವಿಪುಲವ್ರತ ಅಗಸ್ತ್ಯನನ್ನು ಕಂಡರು.
13140005a ಅಭಿವಾದ್ಯ ಚ ತಂ ದೇವಾ ದೃಷ್ಟ್ವಾ ಚ ಯಶಸಾ ವೃತಮ್।
13140005c ಇದಮೂಚುರ್ಮಹಾತ್ಮಾನಂ ವಾಕ್ಯಂ ಕಾಲೇ ಜನಾಧಿಪ।।
ಜನಾಧಿಪ! ದೇವತೆಗಳು ಯಶಸ್ಸಿನಿಂದ ಆವೃತನಾಗಿದ್ದ ಆ ಮಹಾತ್ಮನನ್ನು ನೋಡಿ ಅಭಿವಂದಿಸಿ ಕಾಲಕ್ಕೆ ತಕ್ಕುದಾದ ಈ ಮಾತನ್ನಾಡಿದರು.
13140006a ದಾನವೈರ್ಯುಧಿ ಭಗ್ನಾಃ ಸ್ಮ ತಥೈಶ್ವರ್ಯಾಚ್ಚ ಭ್ರಂಶಿತಾಃ।
13140006c ತದಸ್ಮಾನ್ನೋ ಭಯಾತ್ತೀವ್ರಾತ್ತ್ರಾಹಿ ತ್ವಂ ಮುನಿಪುಂಗವ।।
“ಮುನಿಪುಂಗವ! ಯುದ್ಧದಲ್ಲಿ ನಾವು ದಾನವರಿಂದ ಭಗ್ನರಾದೆವು. ಐಶ್ವರ್ಯದಿಂದಲೂ ವಂಚಿತರಾದೆವು. ಅದರಿಂದ ನಮ್ಮಲ್ಲಿ ತೀವ್ರ ಭಯವುಂಟಾಗಿದೆ. ನೀನೇ ನಮ್ಮನ್ನು ರಕ್ಷಿಸಬೇಕು.”
13140007a ಇತ್ಯುಕ್ತಃ ಸ ತದಾ ದೇವೈರಗಸ್ತ್ಯಃ ಕುಪಿತೋಽಭವತ್।
13140007c ಪ್ರಜಜ್ವಾಲ ಚ ತೇಜಸ್ವೀ ಕಾಲಾಗ್ನಿರಿವ ಸಂಕ್ಷಯೇ।।
ದೇವತೆಗಳು ಹೀಗೆ ಹೇಳಲು ಅಗಸ್ಯನು ಕುಪಿತನಾದನು. ಆ ತೇಜಸ್ವಿಯು ಯುಗಾಂತ್ಯದ ಕಾಲಾಗ್ನಿಯಂತೆ ಪ್ರಜ್ವಲಿಸಿದನು.
13140008a ತೇನ ದೀಪ್ತಾಂಶುಜಾಲೇನ ನಿರ್ದಗ್ಧಾ ದಾನವಾಸ್ತದಾ।
13140008c ಅಂತರಿಕ್ಷಾನ್ಮಹಾರಾಜ ನ್ಯಪತಂತ ಸಹಸ್ರಶಃ।।
ಮಹಾರಾಜ! ಅವನಿಂದ ಹೊರಹೊಮ್ಮಿದ ಬೆಂಕಿಯ ಕಿಡಿಗಳ ಜಾಲದಿಂದಲೇ ಸಹಸ್ರಾರು ದಾನವರು ದಗ್ಧರಾಗಿ ಅಂತರಿಕ್ಷದಿಂದ ಕೆಳಕ್ಕುರುಳಿದರು.
13140009a ದಹ್ಯಮಾನಾಸ್ತು ತೇ ದೈತ್ಯಾಸ್ತಸ್ಯಾಗಸ್ತ್ಯಸ್ಯ ತೇಜಸಾ।
13140009c ಉಭೌ ಲೋಕೌ ಪರಿತ್ಯಜ್ಯ ಯಯುಃ ಕಾಷ್ಠಾಂ ಸ್ಮ ದಕ್ಷಿಣಾಮ್।।
ಅಗಸ್ತ್ಯನ ತೇಜಸ್ಸಿನಿಂದ ಸುಟ್ಟುಹೋಗುತ್ತಿದ್ದ ಆ ದೈತ್ಯರು ಎರಡೂ ಲೋಕಗಳನ್ನೂ ಪರಿತ್ಯಜಿಸಿ ದಕ್ಷಿಣ ದಿಕ್ಕಿಗೆ ಓಡಿ ಹೋದರು.
13140010a ಬಲಿಸ್ತು ಯಜತೇ ಯಜ್ಞಮಶ್ವಮೇಧಂ ಮಹೀಂ ಗತಃ।
13140010c ಯೇಽನ್ಯೇ ಸ್ವಸ್ಥಾ ಮಹೀಸ್ಥಾಶ್ಚ ತೇ ನ ದಗ್ಧಾ ಮಹಾಸುರಾಃ।।
ಬಲಿಯಾದರೋ ಆಗ ಭೂಮಿಗೆ ಹೋಗಿ ಅಶ್ವಮೇಧಯಜ್ಞದಲ್ಲಿ ತೊಡಗಿದ್ದನು. ಆಗ ಅವನ ಜೊತೆಯಲ್ಲಿ ಭೂಮಿಯ ಮೇಲಿದ್ದ ಮಹಾಸುರರು ಸ್ವಸ್ಥರಾಗಿದ್ದರು. ಅವರು ಅಗಸ್ತ್ಯನ ತೇಜಸ್ಸಿನಿಂದ ಸುಟ್ಟುಹೋಗಲಿಲ್ಲ.
13140011a ತತೋ ಲೋಕಾಃ ಪುನಃ ಪ್ರಾಪ್ತಾಃ ಸುರೈಃ ಶಾಂತಂ ಚ ತದ್ರಜಃ।
13140011c ಅಥೈನಮಬ್ರುವನ್ದೇವಾ ಭೂಮಿಷ್ಠಾನಸುರಾನ್ ಜಹಿ।।
ಅನಂತರ ಪುನಃ ತಮ್ಮ ಲೋಕಗಳನ್ನು ಪಡೆದು ಸುರರು ಶಾಂತರಾದರು. ಮತ್ತೆ ದೇವತೆಗಳು ಅವನಿಗೆ “ಭೂಮಿಯ ಮೇಲಿದ್ದ ಅಸುರರನ್ನು ಸಂಹರಿಸು!” ಎಂದು ಕೇಳಿಕೊಂಡರು.
13140012a ಇತ್ಯುಕ್ತ ಆಹ ದೇವಾನ್ಸ ನ ಶಕ್ನೋಮಿ ಮಹೀಗತಾನ್।
13140012c ದಗ್ಧುಂ ತಪೋ ಹಿ ಕ್ಷೀಯೇನ್ಮೇ ಧಕ್ಷ್ಯಾಮೀತಿ ಚ ಪಾರ್ಥಿವ।।
ಪಾರ್ಥಿವ! ಆಗ ಅವನು ದೇವತೆಗಳಿಗೆ “ಭೂಮಿಯ ಮೇಲಿರುವವರನ್ನು ದಹಿಸಲು ನಾನು ಶಕ್ಯನಾಗಿಲ್ಲ. ಅವರನ್ನು ಸುಟ್ಟರೆ ನನ್ನ ತಪಸ್ಸು ಕ್ಷೀಣವಾಗುತ್ತದೆ. ಆದುರಿಂದ ಅವರನ್ನು ಸುಡುವುದಿಲ್ಲ” ಎಂದನು.
13140013a ಏವಂ ದಗ್ಧಾ ಭಗವತಾ ದಾನವಾಃ ಸ್ವೇನ ತೇಜಸಾ।
13140013c ಅಗಸ್ತ್ಯೇನ ತದಾ ರಾಜಂಸ್ತಪಸಾ ಭಾವಿತಾತ್ಮನಾ।।
ರಾಜನ್! ಹೀಗೆ ಭಾವಿತಾತ್ಮ ಭಗವಾನ್ ಅಗಸ್ಯನು ತನ್ನದೇ ತೇಜಸ್ಸಿನಿಂದ ದಾನವರನ್ನು ಸುಟ್ಟುಹಾಕಿದನು.
13140014a ಈದೃಶಶ್ಚಾಪ್ಯಗಸ್ತ್ಯೋ ಹಿ ಕಥಿತಸ್ತೇ ಮಯಾನಘ।
13140014c ಬ್ರವೀಮ್ಯಹಂ ಬ್ರೂಹಿ ವಾ ತ್ವಮಗಸ್ತ್ಯಾತ್ಕ್ಷತ್ರಿಯಂ ವರಮ್।।
ಅನಘ! ನಾನು ಹೇಳಿದಂತೆ ಅಗಸ್ತ್ಯನು ಹೀಗಿದ್ದನು. ಅಗಸ್ತ್ಯನಿಗಿಂತಲೂ ಶ್ರೇಷ್ಠನಾದ ಕ್ಷತ್ರಿಯನಿದ್ದರೆ ಹೇಳು. ಅಥವಾ ನಾನು ಮುಂದುವರಿಸಿ ಹೇಳುತ್ತೇನೆ.”
13140015a ಇತ್ಯುಕ್ತಃ ಸ ತದಾ ತೂಷ್ಣೀಮಭೂದ್ವಾಯುಸ್ತತೋಽಬ್ರವೀತ್।
13140015c ಶೃಣು ರಾಜನ್ವಸಿಷ್ಠಸ್ಯ ಮುಖ್ಯಂ ಕರ್ಮ ಯಶಸ್ವಿನಃ।।
ವಾಯುವು ಹೀಗೆ ಹೇಳಲು ರಾಜನು ಸುಮ್ಮನಾದನು. ಆಗ ವಾಯುವು ಹೇಳಿದನು: “ರಾಜನ್! ಯಶಸ್ವೀ ವಸಿಷ್ಠನ ಮುಖ್ಯ ಕರ್ಮದ ಕುರಿತು ಕೇಳು.
13140016a ಆದಿತ್ಯಾಃ ಸತ್ರಮಾಸಂತ ಸರೋ ವೈ ಮಾನಸಂ ಪ್ರತಿ।
13140016c ವಸಿಷ್ಠಂ ಮನಸಾ ಗತ್ವಾ ಶ್ರುತ್ವಾ ತತ್ರಾಸ್ಯ ಗೋಚರಮ್।।
ವಸಿಷ್ಠಮುನಿಯ ಮಹಿಮೆಯನ್ನು ತಿಳಿದು ಮನಸಾರೆ ಅವನ ಶರಣುಹೊಕ್ಕು ಆದಿತ್ಯರು ಮಾನಸಸರೋವರದ ಬಳಿ ಸತ್ರದಲ್ಲಿ ತೊಡಗಿದ್ದರು.
13140017a ಯಜಮಾನಾಂಸ್ತು ತಾನ್ದೃಷ್ಟ್ವಾ ವ್ಯಗ್ರಾನ್ದೀಕ್ಷಾನುಕರ್ಶಿತಾನ್।
13140017c ಹಂತುಮಿಚ್ಚಂತಿ ಶೈಲಾಭಾಃ ಖಲಿನೋ ನಾಮ ದಾನವಾಃ।।
ಯಜ್ಞದ ಯಜಮಾನರಾಗಿ ದೀಕ್ಷೆಯನ್ನು ಪಡೆದ ದೇವತೆಗಳು ವ್ಯಗ್ರರೂ, ದೀನರೂ, ದುರ್ಬಲರೂ ಆಗಿರುವುದನ್ನು ಕಂಡು ಪರ್ವತಗಳಂತಹ ಶರೀರವುಳ್ಳ ಖಲಿ ಎಂಬ ಹೆಸರಿನ ದಾನವರು ಅವರನ್ನು ಸಂಹರಿಸಲು ಬಯಸಿದರು.
13140018a ಅದೂರಾತ್ತು ತತಸ್ತೇಷಾಂ ಬ್ರಹ್ಮದತ್ತವರಂ ಸರಃ।
13140018c ಹತಾ ಹತಾ ವೈ ತೇ ತತ್ರ ಜೀವಂತ್ಯಾಪ್ಲುತ್ಯ ದಾನವಾಃ।।
ಹತ್ತಿರದಲ್ಲಿಯೇ ಬ್ರಹ್ಮನು ವರವನ್ನಿತ್ತಿದ್ದ ಸರೋವರವಿತ್ತು. ಸತ್ತ ದಾನವರನ್ನು ಅಲ್ಲಿ ಹಾಕಿದಾಗ ಅವರು ಜೀವಿತರಾಗಿ ಮೇಲೇಳುತ್ತಿದ್ದರು.
13140019a ತೇ ಪ್ರಗೃಹ್ಯ ಮಹಾಘೋರಾನ್ಪರ್ವತಾನ್ ಪರಿಘಾನ್ ದ್ರುಮಾನ್।
13140019c ವಿಕ್ಷೋಭಯಂತಃ ಸಲಿಲಮುತ್ಥಿತಾಃ ಶತಯೋಜನಮ್।।
ಅವರು ಮಹಾಘೋರ ಪರ್ವತಗಳನ್ನೂ, ಪರಿಘಗಳನ್ನೂ, ವೃಕ್ಷಗಳನ್ನೂ ಹಿಡಿದು ಶತಯೋಜನ ವಿಸ್ತೀರ್ಣದ ಆ ಸರೋವರವನ್ನು ಕ್ಷೋಭೆಗೊಳಿಸುತ್ತಾ ಮೇಲೇಳುತ್ತಿದ್ದರು.
13140020a ಅಭ್ಯದ್ರವಂತ ದೇವಾಂಸ್ತೇ ಸಹಸ್ರಾಣಿ ದಶೈವ ಹ।
13140020c ತತಸ್ತೈರರ್ದಿತಾ ದೇವಾಃ ಶರಣಂ ವಾಸವಂ ಯಯುಃ।।
ಹತ್ತು ಸಾವಿರ ದಾನವರು ಬೆನ್ನಟ್ಟಿ ಬರಲು ಆರ್ದಿತರಾದ ದೇವತೆಗಳು ವಾಸವನ ಶರಣುಹೊಕ್ಕರು.
13140021a ಸ ಚ ತೈರ್ವ್ಯಥಿತಃ ಶಕ್ರೋ ವಸಿಷ್ಠಂ ಶರಣಂ ಯಯೌ।
13140021c ತತೋಽಭಯಂ ದದೌ ತೇಭ್ಯೋ ವಸಿಷ್ಠೋ ಭಗವಾನೃಷಿಃ।।
ವ್ಯಥಿತನಾದ ಶಕ್ರನು ವಸಿಷ್ಠನ ಶರಣುಹೊಕ್ಕನು. ಆಗ ಭಗವಾನ್ ಋಷಿ ವಸಿಷ್ಠನು ಅವರಿಗೆ ಅಭಯವನ್ನಿತ್ತನು.
13140022a ತಥಾ ತಾನ್ದುಃಖಿತಾನ್ ಜಾನನ್ನಾನೃಶಂಸ್ಯಪರೋ ಮುನಿಃ।
13140022c ಅಯತ್ನೇನಾದಹತ್ಸರ್ವಾನ್ಖಲಿನಃ ಸ್ವೇನ ತೇಜಸಾ।।
ಅವರು ಹಾಗೆ ದುಃಖಿತರಾದುದನ್ನು ತಿಳಿದು ಪರಮ ದಯಾಳುವಾದ ಮುನಿಯು ತನ್ನದೇ ತೇಜಸ್ಸಿನಿಂದ ಸ್ವಲ್ಪವೂ ಯತ್ನವಿಲ್ಲದೇ ಆ ಖಲಿಗಳನ್ನು ಸಂಹರಿಸಿದನು.
13140023a ಕೈಲಾಸಂ ಪ್ರಸ್ಥಿತಾಂ ಚಾಪಿ ನದೀಂ ಗಂಗಾಂ ಮಹಾತಪಾಃ।
13140023c ಆನಯತ್ತತ್ಸರೋ ದಿವ್ಯಂ ತಯಾ ಭಿನ್ನಂ ಚ ತತ್ಸರಃ।।
ಆ ಮಹಾತಪಸ್ವಿಯು ಕೈಲಾಸದ ಕಡೆ ಹೋಗುತ್ತಿದ್ದ ಗಂಗಾನದಿಯನ್ನು ಆ ಸರೋವರಕ್ಕೆ ಕರೆತಂದನು. ದಿವ್ಯ ಗಂಗೆಯು ಆ ಸರೋವರದ ದಂಡೆಗಳನ್ನೇ ಒಡೆದು ಹಾಕಿದಳು.
13140024a ಸರೋ ಭಿನ್ನಂ ತಯಾ ನದ್ಯಾ ಸರಯೂಃ ಸಾ ತತೋಽಭವತ್।
13140024c ಹತಾಶ್ಚ ಖಲಿನೋ ಯತ್ರ ಸ ದೇಶಃ ಖಲಿನೋಽಭವತ್।।
ಗಂಗಾನದಿಯಿಂದ ಆ ಸರೋವರವು ಒಡೆದುಹೋಗಿ ನದಿಯಲ್ಲಿ ಸೇರಲು ಗಂಗೆಯು ಸರಯೂ ಎಂದಾದಳು. ಖಲಿಗಳು ನಾಶವಾದ ಆ ಪ್ರದೇಶವು ಖಲಿನದೇಶವೆಂದಾಯಿತು.
13140025a ಏವಂ ಸೇಂದ್ರಾ ವಸಿಷ್ಠೇನ ರಕ್ಷಿತಾಸ್ತ್ರಿದಿವೌಕಸಃ।
13140025c ಬ್ರಹ್ಮದತ್ತವರಾಶ್ಚೈವ ಹತಾ ದೈತ್ಯಾ ಮಹಾತ್ಮನಾ।।
ಹೀಗೆ ಇಂದ್ರನೊಡನೆ ದೇವತೆಗಳನ್ನು ವಸಿಷ್ಠನು ರಕ್ಷಿಸಿದನು. ಬ್ರಹ್ಮನು ವರವನ್ನು ಕೊಟ್ಟಿದ್ದರೂ ಆ ದೈತ್ಯರು ಮಹಾತ್ಮ ವಸಿಷ್ಠನಿಂದ ಹತರಾದರು.
13140026a ಏತತ್ಕರ್ಮ ವಸಿಷ್ಠಸ್ಯ ಕಥಿತಂ ತೇ ಮಯಾನಘ।
13140026c ಬ್ರವೀಮ್ಯಹಂ ಬ್ರೂಹಿ ವಾ ತ್ವಂ ವಸಿಷ್ಠಾತ್ಕ್ಷತ್ರಿಯಂ ವರಮ್।।
ಅನಘ! ಇಗೋ ನಾನು ನಿನಗೆ ವಸಿಷ್ಠನ ಮಹತ್ಕರ್ಮದ ಕುರಿತು ಹೇಳಿದ್ದೇನೆ. ವಸಿಷ್ಠನಿಗಿಂತಲೂ ಶ್ರೇಷ್ಠನಾದ ಕ್ಷತ್ರಿಯನಿದ್ದರೆ ಹೇಳು. ಅಥವಾ ನಾನು ಮುಂದುವರಿಸಿ ಹೇಳುತ್ತೇನೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪವನಾರ್ಜುನಸಂವಾದೇ ಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪವನಾರ್ಜುನಸಂವಾದ ಎನ್ನುವ ನೂರಾನಲ್ವತ್ತನೇ ಅಧ್ಯಾಯವು.