ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 139
ಸಾರ
ಕಶ್ಯಪನು ಮೂವತ್ತು ಸಾವಿರ ದಿವ್ಯ ವರ್ಷಗಳು ಭೂಮಿಯಾಗಿದ್ದುದು; ಭೂಮಿಯು ಅವನ ಮಗಳಾಗಿ ಹುಟ್ಟಿ ಕಾಶ್ಯಪಿ ಎಂದೆನಿಸಿಕೊಂಡಿದುದು (1-8). ತನ್ನ ಪತ್ನಿಯನ್ನು ವರುಣನು ಅಪಹರಿಸಲು ಉತಥ್ಯನು ಜಲವೆಲ್ಲವನ್ನೂ ಕುಡಿದುಬಿಟ್ಟಿದುದು (9-31).
13139001 ವಾಯುರುವಾಚ।
13139001a ಇಮಾಂ ಭೂಮಿಂ ಬ್ರಾಹ್ಮಣೇಭ್ಯೋ ದಿತ್ಸುರ್ವೈ ದಕ್ಷಿಣಾಂ ಪುರಾ।
13139001c ಅಂಗೋ ನಾಮ ನೃಪೋ ರಾಜಂಸ್ತತಶ್ಚಿಂತಾಂ ಮಹೀ ಯಯೌ।।
ವಾಯುವು ಹೇಳಿದನು: “ರಾಜನ್! ಹಿಂದೆ ಅಂಗನೆಂಬ ಹೆಸರಿನ ನೃಪನು ಈ ಭೂಮಿಯನ್ನು ಬ್ರಾಹ್ಮಣರಿಗೆ ದಕ್ಷಿಣೆಯನ್ನಾಗಿ ಕೊಡಲು ಬಯಸಿದನು. ಆಗ ಭೂಮಿಯು ಚಿಂತಾಕ್ರಾಂತಳಾದಳು.
13139002a ಧಾರಣೀಂ ಸರ್ವಭೂತಾನಾಮಯಂ ಪ್ರಾಪ್ಯ ವರೋ ನೃಪಃ।
13139002c ಕಥಮಿಚ್ಚತಿ ಮಾಂ ದಾತುಂ ದ್ವಿಜೇಭ್ಯೋ ಬ್ರಹ್ಮಣಃ ಸುತಾಮ್।।
“ಸರ್ವಭೂತಗಳನ್ನೂ ಧರಿಸಿರುವ ಬ್ರಹ್ಮನ ಸುತೆಯಾದ ನನ್ನನ್ನು ಪಡೆದ ಈ ಶ್ರೇಷ್ಠ ನೃಪನು ಹೇಗೆ ತಾನೇ ನನ್ನನ್ನು ಬ್ರಾಹ್ಮಣರಿಗೆ ಕೊಡಲು ಬಯಸುತ್ತಾನೆ?
13139003a ಸಾಹಂ ತ್ಯಕ್ತ್ವಾ ಗಮಿಷ್ಯಾಮಿ ಭೂಮಿತ್ವಂ ಬ್ರಹ್ಮಣಃ ಪದಮ್।
13139003c ಅಯಂ ಸರಾಷ್ಟ್ರೋ ನೃಪತಿರ್ಮಾ ಭೂದಿತಿ ತತೋಽಗಮತ್।।
ಭೂಮಿತ್ವವನ್ನೂ ಇವನನ್ನೂ ತ್ಯಜಿಸಿ ನಾನು ಬ್ರಹ್ಮಪದಕ್ಕೆ ಹೊರಟುಹೋಗುತ್ತೇನೆ. ಈ ನೃಪತಿಯೂ ಅವನ ರಾಷ್ಟ್ರವೂ ಏಳ್ಗೆಹೊಂದುವುದಿಲ್ಲ” ಎಂದು ಅವಳು ಹೊರಟೇ ಹೋದಳು.
13139004a ತತಸ್ತಾಂ ಕಶ್ಯಪೋ ದೃಷ್ಟ್ವಾ ವ್ರಜಂತೀಂ ಪೃಥಿವೀಂ ತದಾ।
13139004c ಪ್ರವಿವೇಶ ಮಹೀಂ ಸದ್ಯೋ ಮುಕ್ತ್ವಾತ್ಮಾನಂ ಸಮಾಹಿತಃ।।
ಆಗ ಬಿಟ್ಟು ಹೊರಟುಹೋಗುತ್ತಿದ್ದ ಪೃಥ್ವಿಯನ್ನು ನೋಡಿ ಕಶ್ಯಪನು ಕೂಡಲೇ ಯೋಗಯುಕ್ತನಾಗಿ ಶರೀರವನ್ನು ತ್ಯಜಿಸಿ ಭೂಮಿಯನ್ನು ಪ್ರವೇಶಿಸಿದನು.
13139005a ರುದ್ಧಾ ಸಾ ಸರ್ವತೋ ಜಜ್ಞೇ ತೃಣೌಷಧಿಸಮನ್ವಿತಾ।
13139005c ಧರ್ಮೋತ್ತರಾ ನಷ್ಟಭಯಾ ಭೂಮಿರಾಸೀತ್ತತೋ ನೃಪ।।
ನೃಪ! ಆಗ ಭೂಮಿಯು ಮೊದಲಿಗಿಂತಲೂ ಸಮೃದ್ಧಶಾಲಿಯಾಯಿತು. ಪೈರುಪಚ್ಚೆಗಳಿಂದ ತುಂಬಿಕೊಂಡಿತು. ಧರ್ಮವು ವೃದ್ಧಿಯಾಯಿತು. ಭೂಮಿಯು ಭಯರಹಿತವಾಯಿತು.
13139006a ಏವಂ ವರ್ಷಸಹಸ್ರಾಣಿ ದಿವ್ಯಾನಿ ವಿಪುಲವ್ರತಃ।
13139006c ತ್ರಿಂಶತಂ ಕಶ್ಯಪೋ ರಾಜನ್ಭೂಮಿರಾಸೀದತಂದ್ರಿತಃ।।
ರಾಜನ್! ಹೀಗೆ ವಿಪುಲವ್ರತ ಕಶ್ಯಪನು ಆಯಾಸರಹಿತನಾಗಿ ಮೂವತ್ತು ಸಾವಿರ ದಿವ್ಯ ವರ್ಷಗಳು ಭೂಮಿಯಾಗಿಯೇ ಇದ್ದನು.
13139007a ಅಥಾಗಮ್ಯ ಮಹಾರಾಜ ನಮಸ್ಕೃತ್ಯ ಚ ಕಶ್ಯಪಮ್।
13139007c ಪೃಥಿವೀ ಕಾಶ್ಯಪೀ ಜಜ್ಞೇ ಸುತಾ ತಸ್ಯ ಮಹಾತ್ಮನಃ।।
ಮಹಾರಾಜ! ಆಗ ಕಶ್ಯಪನಿಗೆ ನಮಸ್ಕರಿಸಿ ಪೃಥ್ವಿಯು ಆ ಮಹಾತ್ಮನ ಮಗಳಾಗಿ ಹುಟ್ಟಿ ಕಾಶ್ಯಪೀ ಎಂದಾದಳು.
13139008a ಏಷ ರಾಜನ್ನೀದೃಶೋ ವೈ ಬ್ರಾಹ್ಮಣಃ ಕಶ್ಯಪೋಽಭವತ್।
13139008c ಅನ್ಯಂ ಪ್ರಬ್ರೂಹಿ ವಾಪಿ ತ್ವಂ ಕಶ್ಯಪಾತ್ಕ್ಷತ್ರಿಯಂ ವರಮ್।।
ರಾಜನ್! ಬ್ರಾಹ್ಮಣ ಕಶ್ಯಪನು ಈ ರೀತಿಯಿದ್ದನು. ಕಶ್ಯಪನಿಗೂ ಶ್ರೇಷ್ಠನಾದ ಅನ್ಯ ಕ್ಷತ್ರಿಯನು ಯಾರಾದರೂ ಇದ್ದರೆ ನೀನು ಹೇಳು.”
13139009a ತೂಷ್ಣೀಂ ಬಭೂವ ನೃಪತಿಃ ಪವನಸ್ತ್ವಬ್ರವೀತ್ಪುನಃ।
13139009c ಶೃಣು ರಾಜನ್ನುತಥ್ಯಸ್ಯ ಜಾತಸ್ಯಾಂಗಿರಸೇ ಕುಲೇ।।
ನೃಪತಿ ಅರ್ಜುನನು ಸುಮ್ಮನಾಗಿರಲು ಪವನನು ಪುನಃ ಹೇಳಿದನು: “ರಾಜನ್! ಆಂಗೀರಸ ಕುಲದಲ್ಲಿ ಹುಟ್ಟಿದ ಉತಥ್ಯನ ಕುರಿತು ಕೇಳು.
13139010a ಭದ್ರಾ ಸೋಮಸ್ಯ ದುಹಿತಾ ರೂಪೇಣ ಪರಮಾ ಮತಾ।
13139010c ತಸ್ಯಾಸ್ತುಲ್ಯಂ ಪತಿಂ ಸೋಮ ಉತಥ್ಯಂ ಸಮಪಶ್ಯತ।।
ಭದ್ರ ಎಂಬ ಸೋಮನ ಮಗಳು ರೂಪದಲ್ಲಿ ಅತಿಶ್ರೇಷ್ಠಳೆಂದು ಖ್ಯಾತಳಾಗಿದ್ದಳು. ಅವಳಿಗೆ ಸಮನಾದ ಪತಿಯು ಉತಥ್ಯನೆಂದು ಸೋಮನು ತಿಳಿದುಕೊಂಡನು.
13139011a ಸಾ ಚ ತೀವ್ರಂ ತಪಸ್ತೇಪೇ ಮಹಾಭಾಗಾ ಯಶಸ್ವಿನೀ।
13139011c ಉತಥ್ಯಂ ತು ಮಹಾಭಾಗಂ ತತ್ಕೃತೇಽವರಯತ್ತದಾ1।।
ಮಹಾಭಾಗೇ ಯಶಸ್ವಿನೀ ಭದ್ರೆಯಾದರೋ ಮಹಾಭಾಗ ಉತಥ್ಯನೇ ತನಗೆ ವರನಾಗಬೇಕೆಂದು ತೀವ್ರ ತಪಸ್ಸನ್ನು ತಪಿಸಿದಳು.
13139012a ತತ ಆಹೂಯ ಸೋತಥ್ಯಂ ದದಾವತ್ರ ಯಶಸ್ವಿನೀಮ್। 2
13139012c ಭಾರ್ಯಾರ್ಥೇ ಸ ಚ ಜಗ್ರಾಹ ವಿಧಿವದ್ಭೂರಿದಕ್ಷಿಣ।।
ಆಗ ಸೋಮನು ಉತಥ್ಯನನ್ನು ಆಮಂತ್ರಿಸಿ ಯಶಸ್ವಿನೀ ಭದ್ರೆಯನ್ನು ಅವನಿಗೆ ಕೊಟ್ಟನು. ಉತಥ್ಯನು ಅವಳನ್ನು ವಿಧಿವತ್ತಾಗಿ ಭೂರಿದಕ್ಷಿಣೆಗಳೊಂದಿಗೆ ಭಾರ್ಯೆಯನ್ನಾಗಿ ಸ್ವೀಕರಿಸಿದನು.
13139013a ತಾಂ ತ್ವಕಾಮಯತ ಶ್ರೀಮಾನ್ವರುಣಃ ಪೂರ್ವಮೇವ ಹ।
13139013c ಸ ಚಾಗಮ್ಯ ವನಪ್ರಸ್ಥಂ ಯಮುನಾಯಾಂ ಜಹಾರ ತಾಮ್।।
ಆದರೆ ಶ್ರೀಮಾನ್ ವರುಣನು ಅವಳನ್ನು ಮೊದಲೇ ಕಾಮಿಸಿದ್ದನು. ಅವನು ವನದಲ್ಲಿದ್ದ ಮುನಿಯ ಆಶ್ರಮಕ್ಕೆ ಬಂದು ಯಮುನೆಯಲ್ಲಿ ಸ್ನಾನಮಾಡುತ್ತಿದ್ದ ಭದ್ರೆಯನ್ನು ಅಪಹರಿಸಿದನು.
13139014a ಜಲೇಶ್ವರಸ್ತು ಹೃತ್ವಾ ತಾಮನಯತ್ ಸ್ವಪುರಂ ಪ್ರತಿ।
13139014c ಪರಮಾದ್ಭುತಸಂಕಾಶಂ ಷಟ್ಸಹಸ್ರಶತಹ್ರದಮ್3।।
ಜಲೇಶ್ವರನಾದರೋ ಅವಳನ್ನು ಅಪಹರಿಸಿಕೊಂಡು ಆರು ಸಾವಿರ ಮಿಂಚುಗಳ ಪ್ರಭೆಯಿಂದ ಹೊಳೆಯುತ್ತಿದ್ದ ಪರಮಾದ್ಭುತವಾದ ತನ್ನ ಪುರಿಗೆ ಬಂದನು.
13139015a ನ ಹಿ ರಮ್ಯತರಂ ಕಿಂ ಚಿತ್ತಸ್ಮಾದನ್ಯತ್ಪುರೋತ್ತಮಮ್।
13139015c ಪ್ರಾಸಾದೈರಪ್ಸರೋಭಿಶ್ಚ ದಿವ್ಯೈಃ ಕಾಮೈಶ್ಚ ಶೋಭಿತಮ್।
13139015e ತತ್ರ ದೇವಸ್ತಯಾ ಸಾರ್ಧಂ ರೇಮೇ ರಾಜನ್ ಜಲೇಶ್ವರಃ।।
ಪ್ರಾಸಾದಗಳಿಂದಲೂ, ಅಪ್ಸರೆಯರಿಂದಲೂ, ದಿವ್ಯ ಕಾಮಗಳಿಂದಲೂ ಶೋಭಿತವಾದ ಆ ಉತ್ತಮ ಪುರಿಗಿಂತಲೂ ರಮ್ಯತರವಾದ ಬೇರೆ ಯಾವ ಪುರಿಯೂ ಇರಲಿಲ್ಲ. ರಾಜನ್! ಅಲ್ಲಿ ದೇವ ಜಲೇಶ್ವರನು ಅವಳೊಂದಿಗೆ ರಮಿಸಿದನು.
13139016a ಅಥಾಖ್ಯಾತಮುತಥ್ಯಾಯ ತತಃ ಪತ್ನ್ಯವಮರ್ದನಮ್।।
13139017a ತಚ್ಚ್ರುತ್ವಾ ನಾರದಾತ್ಸರ್ವಮುತಥ್ಯೋ ನಾರದಂ ತದಾ।
13139017c ಪ್ರೋವಾಚ ಗಚ್ಚ ಬ್ರೂಹಿ ತ್ವಂ ವರುಣಂ ಪರುಷಂ ವಚಃ।
13139017e ಮದ್ವಾಕ್ಯಾನ್ಮುಂಚ ಮೇ ಭಾರ್ಯಾಂ ಕಸ್ಮಾದ್ವಾ ಹೃತವಾನಸಿ।।
ಆಗ ಪತ್ನಿಯು ಭ್ರಷ್ಟಳಾದ ವಿಷಯವನ್ನು ನಾರದನು ಉತಥ್ಯನಿಗೆ ಹೇಳಿದನು. ಅದನ್ನು ಕೇಳಿದ ಉತಥ್ಯನು ನಾರದನಿಗೆ ಹೇಳಿದನು: “ನೀನು ಹೋಗಿ ವರುಣನಿಗೆ ಈ ಕಠೋರ ಮಾತನ್ನು ಹೇಳು. “ಅವಳನ್ನು ನೀನು ಏಕೆ ಅಪಹರಿಸಿದ್ದೀಯೆ? ನನ್ನ ಈ ಮಾತಿನಂತೆ ನನ್ನ ಪತ್ನಿಯನ್ನು ಬಿಡುಗಡೆಗೊಳಿಸು.
13139018a ಲೋಕಪಾಲೋಽಸಿ ಲೋಕಾನಾಂ ನ ಲೋಕಸ್ಯ ವಿಲೋಪಕಃ।
13139018c ಸೋಮೇನ ದತ್ತಾ ಭಾರ್ಯಾ ಮೇ ತ್ವಯಾ ಚಾಪಹೃತಾದ್ಯ ವೈ।।
ನೀನು ಲೋಕಗಳ ಲೋಕಪಾಲಕನಾಗಿದ್ದೀಯೆ. ಲೋಕದ ವಿಲೋಪಕನಲ್ಲ. ಸೋಮನು ನೀಡಿದ ನನ್ನ ಭಾರ್ಯೆಯನ್ನು ನೀನು ಇಂದು ಅಪಹರಿಸಿದ್ದೀಯೆ!”
13139019a ಇತ್ಯುಕ್ತೋ ವಚನಾತ್ತಸ್ಯ ನಾರದೇನ ಜಲೇಶ್ವರಃ।
13139019c ಮುಂಚ ಭಾರ್ಯಾಮುತಥ್ಯಸ್ಯೇತ್ಯಥ ತಂ ವರುಣೋಽಬ್ರವೀತ್4।
13139019e ಮಮೈಷಾ ಸುಪ್ರಿಯಾ ಭಾರ್ಯಾ ನೈನಾಮುತ್ಸ್ರಷ್ಟುಮುತ್ಸಹೇ।।
ಉತಥ್ಯನ ಮಾತನ್ನು ನಾರದನು ಜಲೇಶ್ವರನಿಗೆ ತಿಳಿಸಿ “ಉತಥ್ಯನ ಭಾರ್ಯೆಯನ್ನು ಬಿಟ್ಟುಬಿಡು!” ಎಂದು ಹೇಳಿದನು. ಆಗ ವರುಣನು ನಾರದನಿಗೆ ಹೇಳಿದನು: “ಭದ್ರೆಯು ನನ್ನ ಸುಪ್ರಿಯ ಭಾರ್ಯೆಯು. ನಾನಿವಳನ್ನು ಬಿಟ್ಟುಬಿಡಲು ಬಯಸುವುದಿಲ್ಲ.”
13139020a ಇತ್ಯುಕ್ತೋ ವರುಣೇನಾಥ ನಾರದಃ ಪ್ರಾಪ್ಯ ತಂ ಮುನಿಮ್।
13139020c ಉತಥ್ಯಮಬ್ರವೀದ್ವಾಕ್ಯಂ ನಾತಿಹೃಷ್ಟಮನಾ ಇವ।।
ವರುಣನು ಹೀಗೆ ಹೇಳಲು ನಾರದನು ಮುನಿಯ ಬಳಿಸಾರಿ ಖಿನ್ನಮನಸ್ಕನಾಗಿ ಉತಥ್ಯನಿಗೆ ಹೇಳಿದನು:
13139021a ಗಲೇ ಗೃಹೀತ್ವಾ ಕ್ಷಿಪ್ತೋಽಸ್ಮಿ ವರುಣೇನ ಮಹಾಮುನೇ।
13139021c ನ ಪ್ರಯಚ್ಚತಿ ತೇ ಭಾರ್ಯಾಂ ಯತ್ತೇ ಕಾರ್ಯಂ ಕುರುಷ್ವ ತತ್।।
“ಮಹಾಮುನೇ! ವರುಣನು ನನ್ನನ್ನು ಕತ್ತುಹಿಡಿದು ಹೊರಗೆ ನೂಕಿಬಿಟ್ಟನು. ಅವನು ನಿನ್ನ ಭಾರ್ಯೆಯನ್ನು ಬಿಟ್ಟುಕೊಡುವುದಿಲ್ಲ. ನೀನು ಏನು ಮಾಡಬೇಕೋ ಅದನ್ನು ಮಾಡು.”
13139022a ನಾರದಸ್ಯ ವಚಃ ಶ್ರುತ್ವಾ ಕ್ರುದ್ಧಃ ಪ್ರಾಜ್ವಲದಂಗಿರಾಃ।
13139022c ಅಪಿಬತ್ತೇಜಸಾ ವಾರಿ ವಿಷ್ಟಭ್ಯ ಸುಮಹಾತಪಾಃ।।
ನಾರದನ ಮಾತನ್ನು ಕೇಳಿ ಕೃದ್ಧನಾಗಿ ಭುಗಿಲೆದ್ದ ಮಹಾತಪಸ್ವಿ ಅಂಗಿರನು ತನ್ನ ತೇಜಸ್ಸಿನಿಂದ ಜಲವನ್ನು ಸ್ತಬ್ದಗೊಳಿಸಿ ಅದನ್ನು ಕುಡಿಯತೊಡಗಿದನು.
13139023a ಪೀಯಮಾನೇ ಚ ಸರ್ವಸ್ಮಿಂಸ್ತೋಯೇ ವೈ ಸಲಿಲೇಶ್ವರಃ।
13139023c ಸುಹೃದ್ಭಿಃ ಕ್ಷಿಪ್ಯಮಾಣೋಽಪಿ ನೈವಾಮುಂಚತ ತಾಂ ತದಾ।।
ಅವನು ಸರ್ವ ಜಲವನ್ನೂ ಕುಡಿಯುತ್ತಿರಲು ಸುಹೃದರು ಒತ್ತಾಯಿಸಿದರೂ ಸಲಿಲೇಶ್ವರ ವರುಣನು ಭದ್ರೆಯನ್ನು ಬಿಟ್ಟುಕೊಡಲಿಲ್ಲ.
13139024a ತತಃ ಕ್ರುದ್ಧೋಽಬ್ರವೀದ್ಭೂಮಿಮುತಥ್ಯೋ ಬ್ರಾಹ್ಮಣೋತ್ತಮಃ।
13139024c ದರ್ಶಯಸ್ವ ಸ್ಥಲಂ ಭದ್ರೇ ಷಟ್ಸಹಸ್ರಶತಹ್ರದಮ್।।
ಆಗ ಕ್ರುದ್ಧನಾದ ಬ್ರಾಹ್ಮಣೋತ್ತಮ ಉತಥ್ಯನು ಭೂಮಿಗೆ “ಭದ್ರೇ! ಆರುಸಾವಿರ ಮಿಂಚುಗಳಂತೆ ಬೆಳಗುತ್ತಿರುವ ಆ ಸ್ಥಳವನ್ನು ತೋರಿಸಿಕೊಡು!” ಎಂದನು.
13139025a ತತಸ್ತದಿರಿಣಂ ಜಾತಂ ಸಮುದ್ರಶ್ಚಾಪಸರ್ಪಿತಃ।
13139025c ತಸ್ಮಾದ್ದೇಶಾನ್ನದೀಂ ಚೈವ ಪ್ರೋವಾಚಾಸೌ ದ್ವಿಜೋತ್ತಮಃ।।
ಸಮುದ್ರವು ಒಣಗಿ ಹೋಗಿ ಆ ಪ್ರದೇಶವೆಲ್ಲವೂ ಊಷರಭುಮಿಯಾಗಿ ಪರಿವರ್ತಿತವಾಯಿತು. ಆ ಪ್ರದೇಶದಿಂದ ಹರಿಯುತ್ತಿದ್ದ ನದಿಗೆ ದ್ವಿಜೋತ್ತಮ ಉತಥ್ಯನು ಹೇಳಿದನು:
13139026a ಅದೃಶ್ಯಾ ಗಚ್ಚ ಭೀರು ತ್ವಂ ಸರಸ್ವತಿ ಮರುಂ ಪ್ರತಿ।
13139026c ಅಪುಣ್ಯ ಏಷ ಭವತು ದೇಶಸ್ತ್ಯಕ್ತಸ್ತ್ವಯಾ ಶುಭೇ।।
“ಸರಸ್ವತಿ! ಭೀರು! ಅದೃಶ್ಯಳಾಗಿ ಮರುಭೂಮಿಯ ಕಡೆ ಹೊರಟು ಹೋಗು. ಶುಭೇ! ನೀನು ತ್ಯಜಿಸಿದ ಈ ಭೂಮಿಯು ಅಪುಣ್ಯವಾಗಲಿ!”
13139027a ತಸ್ಮಿನ್ಸಂಚೂರ್ಣಿತೇ ದೇಶೇ ಭದ್ರಾಮಾದಾಯ ವಾರಿಪಃ।
13139027c ಅದದಾಚ್ಚರಣಂ ಗತ್ವಾ ಭಾರ್ಯಾಮಾಂಗಿರಸಾಯ ವೈ।।
ಹೀಗೆ ತನ್ನ ಪ್ರದೇಶವೆಲ್ಲವೂ ಒಣಗಿ ಹೋದಾಗ ವಾರಿಪ ವರುಣನು ಉತಥ್ಯನ ಭಾರ್ಯೆ ಭದ್ರೆಯನ್ನು ಕರೆತಂದು ಅವನ ಚರಣಗಳಲ್ಲಿರಿಸಿದನು.
13139028a ಪ್ರತಿಗೃಹ್ಯ ತು ತಾಂ ಭಾರ್ಯಾಮುತಥ್ಯಃ ಸುಮನಾಭವತ್।
13139028c ಮುಮೋಚ ಚ ಜಗದ್ದುಃಖಾದ್ವರುಣಂ ಚೈವ ಹೈಹಯ।।
ಹೈಹಯ! ಆ ಪತ್ನಿಯನ್ನು ಸ್ವೀಕರಿಸಿ ಉತಥ್ಯನು ಸುಮನಸ್ಕನಾದನು ಮತ್ತು ಜಗತ್ತನ್ನೂ ವರುಣನನ್ನೂ ದುಃಖದಿಂದ ಮುಕ್ತಗೊಳಿಸಿದನು.
13139029a ತತಃ ಸ ಲಬ್ಧ್ವಾ ತಾಂ ಭಾರ್ಯಾಂ ವರುಣಂ ಪ್ರಾಹ ಧರ್ಮವಿತ್।
13139029c ಉತಥ್ಯಃ ಸುಮಹಾತೇಜಾ ಯತ್ತಚ್ಚೃಣು ನರಾಧಿಪ।।
ನರಾಧಿಪ! ಆ ಪತ್ನಿಯನ್ನು ಪಡೆದು ಧರ್ಮವಿದು ಮಹಾತೇಜಸ್ವೀ ಉತಥ್ಯನು ವರುಣನಿಗೆ ಏನು ಹೇಳಿದನೆಂದು ಕೇಳು.
13139030a ಮಯೈಷಾ ತಪಸಾ ಪ್ರಾಪ್ತಾ ಕ್ರೋಶತಸ್ತೇ ಜಲಾಧಿಪ।
13139030c ಇತ್ಯುಕ್ತ್ವಾ ತಾಮುಪಾದಾಯ ಸ್ವಮೇವ ಭವನಂ ಯಯೌ।।
“ಜಲಾಧಿಪ! ನಾನಿವಳನ್ನು ಬಿಟ್ಟುಕೊಡುವುದಿಲ್ಲ ಎಂದು ನೀನು ಕೂಗಿಕೊಳ್ಳುತ್ತಿದ್ದರೂ ನನ್ನ ಈ ತಪಸ್ಸಿನಿಂದ ಇವಳನ್ನು ಪಡೆದುಕೊಂಡೆನು.” ಹೀಗೆ ಹೇಳಿ ಅವಳನ್ನು ಕರೆದುಕೊಂಡು ಅವನು ತನ್ನ ಆಶ್ರಮಕ್ಕೆ ತೆರಳಿದನು.
13139031a ಏಷ ರಾಜನ್ನೀದೃಶೋ ವೈ ಉತಥ್ಯೋ ಬ್ರಾಹ್ಮಣರ್ಷಭಃ।
13139031c ಬ್ರವೀಮ್ಯಹಂ ಬ್ರೂಹಿ ವಾ ತ್ವಮುತಥ್ಯಾತ್ಕ್ಷತ್ರಿಯಂ ವರಮ್।।
ರಾಜನ್! ಬ್ರಾಹ್ಮಣರ್ಷಭ ಉತಥ್ಯನು ಎಂತಹ ಪ್ರಭಾವಶಾಲಿಯಾಗಿದ್ದನು ಎನ್ನುವುದನ್ನು ನಾನು ನಿನಗೆ ಹೇಳಿದ್ದೇನೆ. ಇವನಿಗಿಂತಲೂ ಶ್ರೇಷ್ಠನಾದ ಕ್ಷತ್ರಿಯನ್ಯಾರಾದರೂ ಇದ್ದರೆ ಹೇಳು.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪವನಾರ್ಜುನಸಂವಾದೇ ಏಕೋನಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪವನಾರ್ಜುನಸಂವಾದ ಎನ್ನುವ ನೂರಾಮೂವತ್ತೊಂಭತ್ತನೇ ಅಧ್ಯಾಯವು.