ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 137
ಸಾರ
ದತ್ತಾತ್ರೇಯನಿಂದ ನಾಲ್ಕು ವರಗಳನ್ನು ಪಡೆದು ಗರ್ವಿಷ್ಟನಾದ ಕಾರ್ತವೀರ್ಯಾರ್ಜುನನು ತನಗಿಂತಲೂ ಬ್ರಾಹ್ಮಣರು ಶ್ರೇಷ್ಠ ಎನ್ನುವುದನ್ನು ಆಕಾಶವಾಣಿ ಮತ್ತು ವಾಯುವಿನಿಂದ ಕೇಳಿದುದು (1-26).
13137001 ಯುಧಿಷ್ಠಿರ ಉವಾಚ।
13137001a ಕಾಂ ತು ಬ್ರಾಹ್ಮಣಪೂಜಾಯಾಂ ವ್ಯುಷ್ಟಿಂ ದೃಷ್ಟ್ವಾ ಜನಾಧಿಪ।
13137001c ಕಂ ವಾ ಕರ್ಮೋದಯಂ ಮತ್ವಾ ತಾನರ್ಚಸಿ ಮಹಾಮತೇ।।
ಯುಧಿಷ್ಠಿರನು ಹೇಳಿದನು: “ಜನಾಧಿಪ! ಮಹಾಮತೇ! ಬ್ರಾಹ್ಮಣಪೂಜೆಯಲ್ಲಿ ಯಾವ ಪ್ರಯೋಜನವನ್ನು ಕಂಡು ನೀನು ಅವರನ್ನು ಪೂಜಿಸುತ್ತೀಯೆ? ಅಥವಾ ಯಾವ ಕರ್ಮದ ಅಭ್ಯುದಯವಾಗುವುದೆಂದು ಭಾವಿಸಿ ನೀನು ಅವರನ್ನು ಅರ್ಚಿಸುತ್ತೀಯೆ?”
13137002 ಭೀಷ್ಮ ಉವಾಚ।
13137002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
13137002c ಪವನಸ್ಯ ಚ ಸಂವಾದಮರ್ಜುನಸ್ಯ ಚ ಭಾರತ।।
ಭೀಷ್ಮನು ಹೇಳಿದನು: “ಭಾರತ! ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾದ ಪವನ ಮತ್ತು ಅರ್ಜುನರ ಸಂವಾದವನ್ನು ಉದಾಹರಿಸುತ್ತಾರೆ.
13137003a ಸಹಸ್ರಭುಜಭೃಚ್ಚ್ರೀಮಾನ್ಕಾರ್ತವೀರ್ಯೋಽಭವತ್ ಪ್ರಭುಃ।
13137003c ಅಸ್ಯ ಲೋಕಸ್ಯ ಸರ್ವಸ್ಯ ಮಾಹಿಷ್ಮತ್ಯಾಂ ಮಹಾಬಲಃ।।
ಮಾಹಿಷ್ಮತಿಯಲ್ಲಿ ಸಹಸ್ರಭುಜಿ ಶ್ರೀಮಾನ್ ಮಹಾಬಲ ಕಾರ್ಯವೀರ್ಯನು ಈ ಸಮಸ್ತ ಲೋಕದ ಪ್ರಭುವಾಗಿದ್ದನು.
13137004a ಸ ತು ರತ್ನಾಕರವತೀಂ ಸದ್ವೀಪಾಂ ಸಾಗರಾಂಬರಾಮ್।
13137004c ಶಶಾಸ ಸರ್ವಾಂ ಪೃಥಿವೀಂ ಹೈಹಯಃ ಸತ್ಯವಿಕ್ರಮಃ।।
ಆ ಸತ್ಯವಿಕ್ರಮ ಹೈಹಯನು ರತ್ನಾಕರವತಿ ಸಾಗರಾಂಬರೆ ಪೃಥ್ವಿಯನ್ನು ಸಂಪೂರ್ಣವಾಗಿ ಆಳುತ್ತಿದ್ದನು.
13137005a ಸ್ವವಿತ್ತಂ ತೇನ ದತ್ತಂ ತು ದತ್ತಾತ್ರೇಯಾಯ ಕಾರಣೇ।
13137005c ಕ್ಷತ್ರಧರ್ಮಂ ಪುರಸ್ಕೃತ್ಯ ವಿನಯಂ ಶ್ರುತಮೇವ ಚ।।
13137006a ಆರಾಧಯಾಮಾಸ ಚ ತಂ ಕೃತವೀರ್ಯಾತ್ಮಜೋ ಮುನಿಮ್।
13137006c ನ್ಯಮಂತ್ರಯತ ಸಂಹೃಷ್ಟಃ ಸ ದ್ವಿಜಶ್ಚ ವರೈಸ್ತ್ರಿಭಿಃ।।
ಕೃತವೀರ್ಯನ ಮಗನು ಕ್ಷತ್ರಧರ್ಮವನ್ನು ಪುರಸ್ಕರಿಸಿ ವಿನಯ ಮತ್ತು ಶಾಸ್ತ್ರವಿಧಿಗಳಿಂದ ಮುನಿ ದತ್ತಾತ್ರೇಯನಿಗೆ ತನ್ನ ವಿತ್ತವೆಲ್ಲವನ್ನೂ ದಾನಮಾಡಿ ಆರಾಧಿಸಿದನು. ಆ ಕಾರಣದಿಂದ ಸಂಹೃಷ್ಟನಾದ ದ್ವಿಜ ದತ್ತಾತ್ರೇಯನು ಅವನಿಗೆ ಮೂರು ವರಗಳನ್ನು ಕೇಳಲು ಆಮಂತ್ರಿಸಿದನು.
13137007a ಸ ವರೈಶ್ಚಂದಿತಸ್ತೇನ ನೃಪೋ ವಚನಮಬ್ರವೀತ್।
13137007c ಸಹಸ್ರಬಾಹುರ್ಭೂಯಾಂ ವೈ ಚಮೂಮಧ್ಯೇ ಗೃಹೇಽನ್ಯಥಾ।।
13137008a ಮಮ ಬಾಹುಸಹಸ್ರಂ ತು ಪಶ್ಯಂತಾಂ ಸೈನಿಕಾ ರಣೇ।
13137008c ವಿಕ್ರಮೇಣ ಮಹೀಂ ಕೃತ್ಸ್ನಾಂ ಜಯೇಯಂ ವಿಪುಲವ್ರತ।
13137008e ತಾಂ ಚ ಧರ್ಮೇಣ ಸಂಪ್ರಾಪ್ಯ ಪಾಲಯೇಯಮತಂದ್ರಿತಃ।।
ಅವನು ವರವನ್ನು ಕೇಳೆಂದು ಹೇಳಲು ನೃಪನು ಈ ಮಾತನ್ನಾಡಿದನು: “ವಿಪುಲವ್ರತ! ಸೇನಾಮಧ್ಯದಲ್ಲಿ ನಾನು ಸಹಸ್ರಬಾಹುವಾಗಬೇಕು. ಮನೆಯಲ್ಲಿರುವಾಗ ದ್ವಿಬಾಹುವಾಗಿಯೇ ಇರಬೇಕು. ನನ್ನ ಸಹಸ್ರಬಾಹುಗಳನ್ನು ರಣದಲ್ಲಿ ಸೈನಿಕರು ನೋಡುವಂತಾಗಲಿ. ವಿಕ್ರಮದಿಂದ ಇಡೀ ಮಹಿಯನ್ನು ಗೆದ್ದು ಅದನ್ನು ನಾನು ಧರ್ಮದಿಂದ ಆಲಸ್ಯರಹಿತನಾಗಿ ಪಾಲಿಸುವಂತಾಗಲಿ.
13137009a ಚತುರ್ಥಂ ತು ವರಂ ಯಾಚೇ ತ್ವಾಮಹಂ ದ್ವಿಜಸತ್ತಮ।
13137009c ತಂ ಮಮಾನುಗ್ರಹಕೃತೇ ದಾತುಮರ್ಹಸ್ಯನಿಂದಿತ।
13137009e ಅನುಶಾಸಂತು ಮಾಂ ಸಂತೋ ಮಿಥ್ಯಾವೃತ್ತಂ ತದಾಶ್ರಯಮ್1।।
ದ್ವಿಜಸತ್ತಮ! ನಾನು ನಿನ್ನಿಂದ ನಾಲ್ಕನೆಯ ಈ ವರವನ್ನೂ ಕೇಳುತ್ತೇನೆ. ಅನಿಂದಿತ! ನನ್ನಮೇಲೆ ಅನುಗ್ರಹ ಮಾಡುವುದಾದರೆ ನನಗೆ ಈ ವರವನ್ನೂ ಕೊಡಬೇಕು. ನಾನೇನಾದರೂ ಮಿಥ್ಯಾಚಾರವನ್ನು ಆಶ್ರಯಿಸಿದರೆ ಸತ್ಪುರುಷರು ನನ್ನನ್ನು ಶಿಕ್ಷಿಸಿ ಸನ್ಮಾರ್ಗಕ್ಕೆ ತರುವಂತಾಗಲಿ.”
13137010a ಇತ್ಯುಕ್ತಃ ಸ ದ್ವಿಜಃ ಪ್ರಾಹ ತಥಾಸ್ತ್ವಿತಿ ನರಾಧಿಪಮ್।
13137010c ಏವಂ ಸಮಭವಂಸ್ತಸ್ಯ ವರಾಸ್ತೇ ದೀಪ್ತತೇಜಸಃ।।
ಇದನ್ನು ಹೇಳಿದ ನರಾಧಿಪನಿಗೆ ಆ ದ್ವಿಜನು ಹಾಗೆಯೇ ಆಗಲಿ ಎಂದು ಹೇಳಿದನು. ಹೀಗೆ ಆ ದೀಪ್ತತೇಜಸ್ವಿಗೆ ಈ ವರಗಳು ದೊರಕಿದವು.
13137011a ತತಃ ಸ ರಥಮಾಸ್ಥಾಯ ಜ್ವಲನಾರ್ಕಸಮದ್ಯುತಿಃ।
13137011c ಅಬ್ರವೀದ್ವೀರ್ಯಸಂಮೋಹಾತ್ಕೋ ನ್ವಸ್ತಿ ಸದೃಶೋ ಮಯಾ।
13137011e ವೀರ್ಯಧೈರ್ಯಯಶಃಶೌಚೈರ್ವಿಕ್ರಮೇಣೌಜಸಾಪಿ ವಾ।।
ಆಗ ಆ ಜ್ವಲನಾರ್ಕಸಮದ್ಯುತಿಯು ರಥವನ್ನೇರಿ “ವೀರ್ಯ, ಧೈರ್ಯ, ಯಶಸ್ಸು, ಶೌಚ, ವಿಕ್ರಮ ಅಥವಾ ಓಜಸ್ಸಿನಲ್ಲಿ ನನ್ನ ಸಮನಾದವರು ಯಾರಿದ್ದಾರೆ?” ಎಂದು ಉದ್ಘೋಷಿಸಿದನು. 13137012a ತದ್ವಾಕ್ಯಾಂತೇ ಚಾಂತರಿಕ್ಷೇ ವಾಗುವಾಚಾಶರೀರಿಣೀ।
13137012c ನ ತ್ವಂ ಮೂಢ ವಿಜಾನೀಷೇ ಬ್ರಾಹ್ಮಣಂ ಕ್ಷತ್ರಿಯಾದ್ವರಮ್।
13137012e ಸಹಿತೋ ಬ್ರಾಹ್ಮಣೇನೇಹ ಕ್ಷತ್ರಿಯೋ ರಕ್ಷತಿ ಪ್ರಜಾಃ।।
ಅವನು ಆ ಮಾತನ್ನು ಮುಗಿಸುವುದರೊಳಗಾಗಿಯೇ ಅಂತರಿಕ್ಷದಲ್ಲಿ ಅಶರೀರವಾಣಿಯು ಹೇಳಿತು: “ಮೂಢ! ಕ್ಷತ್ರಿಯನಿಗಿಂತಲೂ ಬ್ರಾಹ್ಮಣನು ಶ್ರೇಷ್ಠನೆಂಬ ವಿಷಯವು ನಿನಗೆ ತಿಳಿಯದು. ಬ್ರಾಹ್ಮಣನ ಜೊತೆಗೂಡಿಯೇ ಕ್ಷತ್ರಿಯನು ಪ್ರಜೆಗಳನ್ನು ರಕ್ಷಿಸುತ್ತಾನೆ.”
13137013 ಅರ್ಜುನ ಉವಾಚ।
13137013a ಕುರ್ಯಾಂ ಭೂತಾನಿ ತುಷ್ಟೋಽಹಂ ಕ್ರುದ್ಧೋ ನಾಶಂ ತಥಾ ನಯೇ।
13137013c ಕರ್ಮಣಾ ಮನಸಾ ವಾಚಾ ನ ಮತ್ತೋಽಸ್ತಿ ವರೋ ದ್ವಿಜಃ।।
ಅರ್ಜುನನು ಹೇಳಿದನು: “ಪ್ರಸನ್ನನಾದರೆ ನಾನು ಭೂತಗಳನ್ನು ಸೃಷ್ಟಿಸಬಲ್ಲೆನು. ಕೃದ್ಧನಾದರೆ ಅವುಗಳನ್ನು ವಿನಾಶಗೊಳಿಸಬಲ್ಲೆನು. ಕರ್ಮ, ಮನಸಾ ಅಥವಾ ವಾಚಾ ಬ್ರಾಹ್ಮಣನು ನನಗಿಂತಲೂ ಶ್ರೇಷ್ಠನಲ್ಲ!
13137014a ಪೂರ್ವೋ ಬ್ರಹ್ಮೋತ್ತರೋ ವಾದೋ ದ್ವಿತೀಯಃ ಕ್ಷತ್ರಿಯೋತ್ತರಃ।
13137014c ತ್ವಯೋಕ್ತೌ ಯೌ ತು ತೌ ಹೇತೂ ವಿಶೇಷಸ್ತ್ವತ್ರ ದೃಶ್ಯತೇ।।
ಬ್ರಾಹ್ಮಣನು ಶ್ರೇಷ್ಠನು ಎನ್ನುವುದು ಹಿಂದಿನ ವಾದವಾಯಿತು. ಈಗ ಕ್ಷತ್ರಿಯನೇ ಶ್ರೇಷ್ಠನೆಂಬುದು ಸಿದ್ಧಾಂತವಾಗಿದೆ. ಪ್ರಜಾಪಾಲನೆಯಲ್ಲಿ ಇವರಿಬ್ಬರೂ ಸೇರಿರುವರೆಂದು ಹೇಳುತ್ತೀಯೆ. ಆದರೆ ಇದರಲ್ಲಿ ಒಂದು ವಿಶೇಷವು ಕಾಣುತ್ತದೆ.
13137015a ಬ್ರಾಹ್ಮಣಾಃ ಸಂಶ್ರಿತಾಃ ಕ್ಷತ್ರಂ ನ ಕ್ಷತ್ರಂ ಬ್ರಾಹ್ಮಣಾಶ್ರಿತಮ್।
13137015c ಶ್ರಿತಾನ್ ಬ್ರಹ್ಮೋಪಧಾ ವಿಪ್ರಾಃ ಖಾದಂತಿ ಕ್ಷತ್ರಿಯಾನ್ಭುವಿ।।
ಬ್ರಾಹ್ಮಣರು ಕ್ಷತ್ರಿಯನನ್ನು ಆಶ್ರಯಿಸಿರುತ್ತಾರೆಯೇ ಹೊರತು ಕ್ಷತ್ರಿಯನು ಬ್ರಾಹ್ಮಣರನ್ನು ಆಶ್ರಯಿಸಿರುವುದಿಲ್ಲ. ಭುವಿಯಲ್ಲಿ ವೇದಗಳ ಅಧ್ಯಯನ-ಅಧ್ಯಾಪನಗಳನ್ನು ಆಶ್ರಯಿಸಿರುವ ವಿಪ್ರರು ಕ್ಷತ್ರಿಯರ ಅನ್ನವನ್ನೇ ಊಟಮಾಡುತ್ತಾರೆ.
13137016a ಕ್ಷತ್ರಿಯೇಷ್ವಾಶ್ರಿತೋ ಧರ್ಮಃ ಪ್ರಜಾನಾಂ ಪರಿಪಾಲನಮ್।
13137016c ಕ್ಷತ್ರಾದ್ವೃತ್ತಿರ್ಬ್ರಾಹ್ಮಣಾನಾಂ ತೈಃ ಕಥಂ ಬ್ರಾಹ್ಮಣೋ ವರಃ।।
ಪ್ರಜೆಗಳ ಪರಿಪಾಲನಾ ಧರ್ಮವು ಕ್ಷತ್ರಿಯರನ್ನೇ ಆಶ್ರಯಿಸಿದೆ. ಕ್ಷತ್ರಿಯರಿಂದಲೇ ಬ್ರಾಹ್ಮಣರ ವೃತ್ತಿಯು ನಡೆಯುತ್ತಿರುವಾಗ ಬ್ರಾಹ್ಮಣನು ಹೇಗೆ ಶ್ರೇಷ್ಠನಾಗುತ್ತಾನೆ?
13137017a ಸರ್ವಭೂತಪ್ರಧಾನಾಂಸ್ತಾನ್ ಭೈಕ್ಷವೃತ್ತೀನಹಂ ಸದಾ।
13137017c ಆತ್ಮಸಂಭಾವಿತಾನ್ವಿಪ್ರಾನ್ ಸ್ಥಾಪಯಾಮ್ಯಾತ್ಮನೋ ವಶೇ।।
ಇಂದಿನಿಂದ ನಾನು ಸರ್ವಭೂತಪ್ರಧಾನರೆಂದು ಹೇಳಿಕೊಳ್ಳುವ, ಸದಾ ಭೈಕ್ಷವೃತ್ತಿಯಲ್ಲಿಯೇ ಇರುವ, ತಮ್ಮನ್ನೇ ಸಂಭಾವಿತರೆಂದು ತಿಳಿದಿರುವ ವಿಪ್ರರನ್ನು ನನ್ನ ವಶದಲ್ಲಿ ಇರಿಸಿಕೊಳ್ಳುತ್ತೇನೆ.
13137018a ಕಥಿತಂ ಹ್ಯನಯಾ ಸತ್ಯಂ2 ಗಾಯತ್ರ್ಯಾ ಕನ್ಯಯಾ ದಿವಿ।
13137018c ವಿಜೇಷ್ಯಾಮ್ಯವಶಾನ್ಸರ್ವಾನ್ ಬ್ರಾಹ್ಮಣಾಂಶ್ಚರ್ಮವಾಸಸಃ।।
13137019a ನ ಚ ಮಾಂ ಚ್ಯಾವಯೇದ್ರಾಷ್ಟ್ರಾತ್ತ್ರಿಷು ಲೋಕೇಷು ಕಶ್ಚನ।
13137019c ದೇವೋ ವಾ ಮಾನುಷೋ ವಾಪಿ ತಸ್ಮಾಜ್ಜ್ಯೇಷ್ಠೋ ದ್ವಿಜಾದಹಮ್।।
ದಿವಿಯಲ್ಲಿ ಕನ್ಯೆ ಗಾಯತ್ರಿಯು ಹೇಳುವ ಈ ಮಾತು ಸತ್ಯವಲ್ಲ. ಇದೂವರೆಗೆ ಅವಶರಾಗಿರುವ ಮೃಗಚರ್ಮಧಾರೀ ಬ್ರಾಹ್ಮಣರೆಲ್ಲರನ್ನೂ ನಾನು ಜಯಿಸುತ್ತೇನೆ. ಮೂರು ಲೋಕಗಳಲ್ಲಿ ಯಾರೂ – ಅವರು ದೇವತೆಗಳೇ ಆಗಿರಲಿ ಅಥವಾ ಮನುಷ್ಯರಾಗಿರಲಿ – ನನ್ನನ್ನು ರಾಜ್ಯಭ್ರಷ್ಟನನ್ನಾಗಿ ಮಾಡಲಾರರು. ಆದುದರಿಂದ ಬ್ರಾಹ್ಮಣರಿಗಿಂತ ನಾನೇ ಶ್ರೇಷ್ಠನು.
13137020a ಅದ್ಯ ಬ್ರಹ್ಮೋತ್ತರಂ ಲೋಕಂ ಕರಿಷ್ಯೇ ಕ್ಷತ್ರಿಯೋತ್ತರಮ್।
13137020c ನ ಹಿ ಮೇ ಸಂಯುಗೇ ಕಶ್ಚಿತ್ಸೋಢುಮುತ್ಸಹತೇ ಬಲಮ್।।
ಇಂದು ಬ್ರಾಹ್ಮಣನೇ ಶ್ರೇಷ್ಠವೆಂಬ ಲೋಕವನ್ನು ಕ್ಷತ್ರಿಯನೇ ಶ್ರೇಷ್ಠನೆನ್ನುವಂತೆ ಮಾಡುತ್ತೇನೆ. ಯುದ್ಧದಲ್ಲಿ ನನ್ನ ಬಲವನ್ನು ಸಹಿಸಲು ಯಾರಿಗೆ ಉತ್ಸಾಹವಿದೆ?”
13137021a ಅರ್ಜುನಸ್ಯ ವಚಃ ಶ್ರುತ್ವಾ ವಿತ್ರಸ್ತಾಭೂನ್ನಿಶಾಚರೀ।
13137021c ಅಥೈನಮಂತರಿಕ್ಷಸ್ಥಸ್ತತೋ ವಾಯುರಭಾಷತ।।
ಅರ್ಜುನನ ಮಾತನ್ನು ಕೇಳಿ ನಿಶಾಚರೀ ಆಕಾಶವಾಣಿಯು ಭಯಗ್ರಸ್ತಳಾದಳು. ಆಗ ಅಂತರಿಕ್ಷದಲ್ಲಿದ್ದ ವಾಯುವು ಮಾತನಾಡಿದನು:
13137022a ತ್ಯಜೈನಂ ಕಲುಷಂ ಭಾವಂ ಬ್ರಾಹ್ಮಣೇಭ್ಯೋ ನಮಸ್ಕುರು।
13137022c ಏತೇಷಾಂ ಕುರ್ವತಃ ಪಾಪಂ ರಾಷ್ಟ್ರಕ್ಷೋಭೋ ಹಿ ತೇ ಭವೇತ್।।
“ಈ ಕಲುಷ ಭಾವವನ್ನು ತೊರೆದು ಬ್ರಾಹ್ಮಣರಿಗೆ ನಮಸ್ಕರಿಸು. ಅವರ ಕುರಿತು ಪಾಪವನ್ನೆಸಗುವವನ ರಾಷ್ಟ್ರದಲ್ಲಿ ಕ್ಷೋಭೆಯುಂತಾಗುತ್ತದೆ.
13137023a ಅಥ ವಾ ತ್ವಾಂ ಮಹೀಪಾಲ ಶಮಯಿಷ್ಯಂತಿ ವೈ ದ್ವಿಜಾಃ।
13137023c ನಿರಸಿಷ್ಯಂತಿ ವಾ ರಾಷ್ಟ್ರಾದ್ಧತೋತ್ಸಾಹಂ ಮಹಾಬಲಾಃ।।
ಮಹೀಪಾಲ! ಇಲ್ಲದಿದ್ದರೆ ಬ್ರಾಹ್ಮಣರೇ ನಿನ್ನ ಈ ಗರ್ವವನ್ನು ಉಪಶಮನಗೊಳಿಸುತ್ತಾರೆ. ಮಹಾಬಲಶಾಲಿಗಳು ಹತೋತ್ಸಾಹಿಗಳಾಗಿ ನಿನ್ನ ರಾಷ್ಟ್ರವನ್ನೇ ಬಿಟ್ಟು ಹೋಗುತ್ತಾರೆ.”
13137024a ತಂ ರಾಜಾ ಕಸ್ತ್ವಮಿತ್ಯಾಹ ತತಸ್ತಂ ಪ್ರಾಹ ಮಾರುತಃ।
13137024c ವಾಯುರ್ವೈ ದೇವದೂತೋಽಸ್ಮಿ ಹಿತಂ ತ್ವಾಂ ಪ್ರಬ್ರವೀಮ್ಯಹಮ್।।
ನೀನ್ಯಾರೆಂದು ರಾಜನು ಕೇಳಲು ಮಾರುತನು ಹೇಳಿದನು: “ನಾನು ದೇವದೂತ ವಾಯುವು. ನಿನಗೆ ಹಿತವಾದುದನ್ನೇ ಹೇಳುತ್ತಿದ್ದೇನೆ.”
13137025 ಅರ್ಜುನ ಉವಾಚ।
13137025a ಅಹೋ ತ್ವಯಾದ್ಯ ವಿಪ್ರೇಷು ಭಕ್ತಿರಾಗಃ ಪ್ರದರ್ಶಿತಃ।
13137025c ಯಾದೃಶಂ ಪೃಥಿವೀ ಭೂತಂ ತಾದೃಶಂ ಬ್ರೂಹಿ ವೈ ದ್ವಿಜಮ್।।
ಅರ್ಜುನನು ಹೇಳಿದನು: “ಅಹೋ! ಇಂದು ನೀನು ವಿಪ್ರರ ಕುರಿತು ಭಕ್ತಿರಾಗವನ್ನು ಪ್ರದರ್ಶಿಸುತ್ತಿದ್ದೀಯೆ. ಭೂಮಿಯಂತಿರುವ ಬ್ರಾಹ್ಮಣನು ಯಾರಾದರೂ ಇದ್ದರೆ ಅವನು ಯಾರೆಂದು ಹೇಳು.
13137026a ವಾಯೋರ್ವಾ ಸದೃಶಂ ಕಿಂ ಚಿದ್ಬ್ರೂಹಿ ತ್ವಂ ಬ್ರಾಹ್ಮಣೋತ್ತಮಮ್।
13137026c ಅಪಾಂ ವೈ ಸದೃಶಂ ಬ್ರೂಹಿ ಸೂರ್ಯಸ್ಯ ನಭಸೋಽಪಿ ವಾ।।
ಅಥವಾ ಗುಣದಲ್ಲಿ ವಾಯು, ಜಲ, ಅಗ್ನಿ, ಸೂರ್ಯ, ಆಕಾಶ ಇವುಗಳಿಗೆ ಸಮನಾದ ಬ್ರಾಹ್ಮಣೋತ್ತಮನಿದ್ದರೆ ನನಗೆ ಹೇಳು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಪವನಾರ್ಜುನಸಂವಾದೇ ಬ್ರಾಹ್ಮಣಮಾಹಾತ್ಮ್ಯೇ ಸಪ್ತತ್ರಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಪವನಾರ್ಜುನಸಂವಾದೇ ಬ್ರಾಹ್ಮಣಮಹಾತ್ಮ್ಯೆ ಎನ್ನುವ ನೂರಾಮೂವತ್ತೇಳನೇ ಅಧ್ಯಾಯವು.