ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 1361
ಸಾರ
ಭೀಷ್ಮನು ಬ್ರಾಹ್ಮಣರನ್ನು ಪ್ರಶಂಸಿಸಿ ಅವರೇ ನಮಸ್ಕರಿಸಲ್ಪಡಬೇಕಾದವರು ಎಂದುದು (1-23).
13136001 ಯುಧಿಷ್ಠಿರ ಉವಾಚ।
13136001a ಕೇ ಪೂಜ್ಯಾಃ ಕೇ ನಮಸ್ಕಾರ್ಯಾಃ ಕಥಂ ವರ್ತೇತ ಕೇಷು ಚ।
13136001c ಕಿಮಾಚಾರಃ ಕೀದೃಶೇಷು ಪಿತಾಮಹ ನ ರಿಷ್ಯತೇ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಯಾರು ಪೂಜ್ಯರು? ನಮಸ್ಕರಿಸಲ್ಪಡಬೇಕಾದವರು ಯಾರು? ಯಾರಲ್ಲಿ ಹೇಗೆ ನಡೆದುಕೊಳ್ಳಬೇಕು? ಯಾರಲ್ಲಿ ಹೇಗೆ ನಡೆದುಕೊಂಡರೆ ಹಾನಿಯಾಗುವುದಿಲ್ಲ?”
13136002 ಭೀಷ್ಮ ಉವಾಚ।
13136002a ಬ್ರಾಹ್ಮಣಾನಾಂ ಪರಿಭವಃ ಸಾದಯೇದಪಿ ದೇವತಾಃ।
13136002c ಬ್ರಾಹ್ಮಣಾನಾಂ ನಮಸ್ಕರ್ತಾ ಯುಧಿಷ್ಠಿರ ನ ರಿಷ್ಯತೇ।।
ಭೀಷ್ಮನು ಹೇಳಿದನು: “ಯುಧಿಷ್ಠಿರ! ಬ್ರಾಹ್ಮಣರ ಅಪಮಾನವು ದೇವತೆಗಳನ್ನೂ ವಿನಾಶಗೊಳಿಸುತ್ತದೆ. ಬ್ರಾಹ್ಮಣರನ್ನು ನಮಸ್ಕರಿಸುವುದರಿಂದ ಹಾನಿಯುಂಟಾಗುವುದಿಲ್ಲ.
13136003a ತೇ ಪೂಜ್ಯಾಸ್ತೇ ನಮಸ್ಕಾರ್ಯಾ ವರ್ತೇಥಾಸ್ತೇಷು ಪುತ್ರವತ್।
13136003c ತೇ ಹಿ ಲೋಕಾನಿಮಾನ್ ಸರ್ವಾನ್ಧಾರಯಂತಿ ಮನೀಷಿಣಃ।।
ಅವರು ಪೂಜನೀಯರು. ಅವರು ನಮಸ್ಕರಿಸಲು ಯೋಗ್ಯರು. ಅವರೊಂದಿಗೆ ಮಗನಂತೆ ವರ್ತಿಸಬೇಕು. ವಿದ್ವಾಂಸರಾದ ಬ್ರಾಹ್ಮಣರೇ ಈ ಸರ್ವ ಲೋಕಗಳನ್ನೂ ಧಾರಣೆಮಾಡಿರುತ್ತಾರೆ.
13136004a ಬ್ರಾಹ್ಮಣಾಃ ಸರ್ವಲೋಕಾನಾಂ ಮಹಾಂತೋ ಧರ್ಮಸೇತವಃ।
13136004c ಧನತ್ಯಾಗಾಭಿರಾಮಾಶ್ಚ ವಾಕ್ಸಂಯಮರತಾಶ್ಚ ಯೇ।।
ಧನತ್ಯಾಗದಲ್ಲಿ ಅಭಿರುಚಿಯನ್ನಿಟ್ಟಿರುವ, ಮಾತಿನಲ್ಲಿ ಸಂಯಮಶೀಲರಾಗಿರುವ, ಧರ್ಮಗಳ ಸೇತುವೆಯಂತಿರುವ ಬ್ರಾಹ್ಮಣರೇ ಸರ್ವಲೋಕಗಳಲ್ಲಿ ಅತಿ ದೊಡ್ಡವರು.
13136005a ರಮಣೀಯಾಶ್ಚ ಭೂತಾನಾಂ ನಿಧಾನಂ ಚ ಧೃತವ್ರತಾಃ।
13136005c ಪ್ರಣೇತಾರಶ್ಚ ಲೋಕಾನಾಂ ಶಾಸ್ತ್ರಾಣಾಂ ಚ ಯಶಸ್ವಿನಃ।।
ಧೃಡವ್ರತರಾದ ಬ್ರಾಹ್ಮಣರು ಇರುವವುಗಳಿಗೆ ರಮಣೀಯರೂ, ಆನಂದವನ್ನುಂಟುಮಾಡುವವರೂ, ಆಶ್ರಯಭೂತರೂ ಅಗಿರುತ್ತಾರೆ. ಯಶಸ್ವೀ ಬ್ರಾಹ್ಮಣರು ಲೋಕಗಳಲ್ಲಿ ಶಾಸ್ತ್ರಗಳ ಪ್ರಣೀತಾರರು ಕೂಡ.
13136006a ತಪೋ ಯೇಷಾಂ ಧನಂ ನಿತ್ಯಂ ವಾಕ್ಚೈವ ವಿಪುಲಂ ಬಲಮ್।
13136006c ಪ್ರಭವಶ್ಚಾಪಿ ಧರ್ಮಾಣಾಂ ಧರ್ಮಜ್ಞಾಃ ಸೂಕ್ಷ್ಮದರ್ಶಿನಃ।।
ತಪಸ್ಸೇ ಅವರ ಸಂಪತ್ತು. ಮಾತೇ ಅವರಿಗೆ ಯಾವಾಗಲೂ ಇರುವ ವಿಪುಲ ಬಲ. ಧರ್ಮಜ್ಞರೂ ಸೂಕ್ಷ್ಮದರ್ಶಿಗಳೂ ಆದ ಬ್ರಾಹ್ಮಣರೇ ಧರ್ಮಗಳಿಗೆ ಪ್ರಭುಗಳಾಗಿರುತ್ತಾರೆ.
13136007a ಧರ್ಮಕಾಮಾಃ ಸ್ಥಿತಾ ಧರ್ಮೇ ಸುಕೃತೈರ್ಧರ್ಮಸೇತವಃ।
13136007c ಯಾನುಪಾಶ್ರಿತ್ಯ ಜೀವಂತಿ ಪ್ರಜಾಃ ಸರ್ವಾಶ್ಚತುರ್ವಿಧಾಃ।।
ಧರ್ಮವನ್ನೇ ಬಯಸಿ ಸುಕೃತಗಳಿಂದ ಧರ್ಮದಲ್ಲಿಯೇ ನೆಲೆಸಿರುವ ಧರ್ಮಸೇತುವೆಗಳಂತಿರುವ ಬ್ರಾಹ್ಮಣರನ್ನೇ ಆಶ್ರಯಿಸಿ ನಾಲ್ಕು ವಿಧದ ಪ್ರಜೆಗಳೂ ಜೀವಿಸುತ್ತಾರೆ.
13136008a ಪಂಥಾನಃ ಸರ್ವನೇತಾರೋ ಯಜ್ಞವಾಹಾಃ ಸನಾತನಾಃ।
13136008c ಪಿತೃಪೈತಾಮಹೀಂ ಗುರ್ವೀಮುದ್ವಹಂತಿ ಧುರಂ ಸದಾ।।
ಬ್ರಾಹ್ಮಣರು ಎಲ್ಲ ಮಾರ್ಗಗಳ ನೇತಾರರೂ, ಸನಾತನ ಯಜ್ಞನಿರ್ವಾಹಕರೂ, ಪಿತೃಪಿತಾಮಹರಿಂದ ಬಂದಿರುವ ಮರ್ಯಾದೆಯ ಮಹಾಭಾರವನ್ನು ಹೊತ್ತಿರುತ್ತಾರೆ.
13136009a ಧುರಿ ಯೇ ನಾವಸೀದಂತಿ ವಿಷಮೇ ಸದ್ಗವಾ ಇವ।
13136009c ಪಿತೃದೇವಾತಿಥಿಮುಖಾ ಹವ್ಯಕವ್ಯಾಗ್ರಭೋಜಿನಃ।।
ಕಷ್ಟಪರಿಸ್ಥಿತಿಯಲ್ಲಿಯೂ ಎತ್ತುಗಳು ಭಾರವನ್ನು ಹೊರುವಂತೆ ಇವರು ಈ ಭಾರವನ್ನು ಹೊತ್ತು ಕುಸಿಯುವುದಿಲ್ಲ. ಪಿತೃಗಳಿಗೂ, ದೇವತೆಗಳಿಗೂ ಮತ್ತು ಅತಿಥಿಗಳಿಗೂ ಮುಖಗಳಂತಿರುವ ಅವರು ಹವ್ಯ-ಕವ್ಯಗಳಲ್ಲಿ ಮೊದಲ ಭೋಜನಕ್ಕೆ ಅರ್ಹರಾಗಿರುತ್ತಾರೆ.
13136010a ಭೋಜನಾದೇವ ಯೇ ಲೋಕಾಂಸ್ತ್ರಾಯಂತೇ ಮಹತೋ ಭಯಾತ್।
13136010c ದೀಪಾಃ ಸರ್ವಸ್ಯ ಲೋಕಸ್ಯ ಚಕ್ಷುಶ್ಚಕ್ಷುಷ್ಮತಾಮಪಿ।।
ಭೋಜನ ಮಾತ್ರದಿಂದಲೇ ಬ್ರಾಹ್ಮಣರು ಲೋಕಗಳನ್ನು ಮಹಾಭಯದಿಂದ ಪಾರುಮಾಡುತ್ತಾರೆ. ಸರ್ವಲೋಕಗಳಿಗೂ ದೀಪವಿದ್ದಂತೆ. ಕಣ್ಣಿದ್ದವರಿಗೂ ಕಣ್ಣಾದವರು ಇವರು.
13136011a ಸರ್ವಶಿಲ್ಪಾದಿನಿಧಯೋ ನಿಪುಣಾಃ ಸೂಕ್ಷ್ಮದರ್ಶಿನಃ2।
13136011c ಗತಿಜ್ಞಾಃ ಸರ್ವಭೂತಾನಾಮಧ್ಯಾತ್ಮಗತಿಚಿಂತಕಾಃ।।
ಅವರು ಸರ್ವಶಿಲ್ಪಾದಿ ಶಾಸ್ತ್ರಗಳ ನಿಧಿಗಳು. ನಿಪುಣರು ಮತ್ತು ಸೂಕ್ಷ್ಮದರ್ಶಿಗಳು. ಸರ್ವ ಭೂತಗಳ ಗತಿಯಗಳನ್ನು ತಿಳಿದವರು ಮತ್ತು ಆಧ್ಯಾತ್ಮಗತಿಚಿಂತಕರು.
13136012a ಆದಿಮಧ್ಯಾವಸಾನಾನಾಂ ಜ್ಞಾತಾರಶ್ಚಿನ್ನಸಂಶಯಾಃ।
13136012c ಪರಾವರವಿಶೇಷಜ್ಞಾ ಗಂತಾರಃ ಪರಮಾಂ ಗತಿಮ್।।
ಅವರು ಆದಿ-ಮಧ್ಯ-ಅಂತ್ಯಗಳನ್ನು ತಿಳಿದವರು. ಸಂಶಯರಹಿತರು. ಪರತತ್ತ್ವ ಪರಮಾತ್ಮ ಮತ್ತು ಇತರ ತತ್ತ್ವಗಳ ವಿಶೇಷಜ್ಞಾನಿಗಳು. ಪರಮ ಗತಿಯನ್ನು ಹೊಂದುವವರು.
13136013a ವಿಮುಕ್ತಾ ಧುತಪಾಪ್ಮಾನೋ ನಿರ್ದ್ವಂದ್ವಾ ನಿಷ್ಪರಿಗ್ರಹಾಃ।
13136013c ಮಾನಾರ್ಹಾ ಮಾನಿತಾ ನಿತ್ಯಂ ಜ್ಞಾನವಿದ್ಭಿರ್ಮಹಾತ್ಮಭಿಃ।।
ಅವರು ವಿಮುಕ್ತರೂ, ಪಾಪಗಳನ್ನು ತೊಳೆದುಕೊಂಡಿರುವವರೂ, ನಿರ್ದ್ವಂದ್ವರೂ, ನಿಷ್ಪರಿಗ್ರಹರೂ ಆಗಿರುತ್ತಾರೆ. ಮಾನಾರ್ಹರಾದ ಅವರು ಮಹಾತ್ಮ ಜ್ಞಾನಿಗಳಿಂದ ನಿತ್ಯವೂ ಗೌರವಿಸಲ್ಪಡುತ್ತಾರೆ.
13136014a ಚಂದನೇ ಮಲಪಂಕೇ ಚ ಭೋಜನೇಽಭೋಜನೇ ಸಮಾಃ।
13136014c ಸಮಂ ಯೇಷಾಂ ದುಕೂಲಂ ಚ ಶಾಣಕ್ಷೌಮಾಜಿನಾನಿ ಚ।।
ಗಂಧ-ಕೆಸರು, ಭೋಜನ-ಉಪವಾಸ ಇವುಗಳನ್ನು ಸಮಾನವಾಗಿ ಕಾಣುತ್ತಾರೆ. ಇವರಿಗೆ ಹತ್ತಿಯ ಬಟ್ಟೆ, ರೇಷ್ಮೆಯ ಬಟ್ಟೆ ಮತ್ತು ಕೃಷ್ಣಾಜಿನಗಳು ಸಮಾನವಾಗಿರುತ್ತವೆ.
13136015a ತಿಷ್ಠೇಯುರಪ್ಯಭುಂಜಾನಾ ಬಹೂನಿ ದಿವಸಾನ್ಯಪಿ।
13136015c ಶೋಷಯೇಯುಶ್ಚ ಗಾತ್ರಾಣಿ ಸ್ವಾಧ್ಯಾಯೈಃ ಸಂಯತೇಂದ್ರಿಯಾಃ।।
ಬ್ರಾಹ್ಮಣರು ಅನೇಕ ದಿನಗಳವರೆಗೆ ಊಟಮಾಡದೆಯೇ ಇರಬಲ್ಲರು. ಜಿತೇಂದ್ರಿಯರಾದ ಅವರು ಸ್ವಾಧ್ಯಾಯಗಳ ಮೂಲಕ ತಮ್ಮ ಶರೀರವನ್ನು ಶೋಷಿಸಿಕೊಳ್ಳಬಲ್ಲರು.
13136016a ಅದೈವಂ ದೈವತಂ ಕುರ್ಯುರ್ದೈವತಂ ಚಾಪ್ಯದೈವತಮ್।
13136016c ಲೋಕಾನನ್ಯಾನ್ಸೃಜೇಯುಶ್ಚ ಲೋಕಪಾಲಾಂಶ್ಚ ಕೋಪಿತಾಃ।।
ಬ್ರಾಹ್ಮಣರು ದೇವರಲ್ಲದವರನ್ನು ದೇವರನ್ನಾಗಿ ಮಾಡಬಲ್ಲರು. ದೇವರನ್ನು ದೇವತ್ವದಿಂದ ಭ್ರಷ್ಟರನ್ನಾಗಿ ಮಾಡಬಲ್ಲರು. ಕುಪಿತರಾದರೆ ಅನ್ಯ ಲೋಕಗಳನ್ನೂ ಲೋಕಪಾಲರನ್ನೂ ಸೃಷ್ಟಿಸಬಲ್ಲರು.
13136017a ಅಪೇಯಃ ಸಾಗರೋ ಯೇಷಾಮಭಿಶಾಪಾನ್ಮಹಾತ್ಮನಾಮ್।
13136017c ಯೇಷಾಂ ಕೋಪಾಗ್ನಿರದ್ಯಾಪಿ ದಂಡಕೇ ನೋಪಶಾಮ್ಯತಿ।।
ಮಹಾತ್ಮ ಬ್ರಾಹ್ಮಣರ ಶಾಪದಿಂದಾಗಿ ಸಾಗರದ ನೀರು ಕುಡಿಯಲಿಕ್ಕಾಗದಂತಾಯಿತು. ಇವರ ಕೋಪಾಗ್ನಿಯಿಂದಾಗಿ ಈಗಲೂ ದಂಡಕಾರಣ್ಯದಲ್ಲಿ ಶಾಂತಿಯಿಲ್ಲದಾಗಿದೆ.
13136018a ದೇವಾನಾಮಪಿ ಯೇ ದೇವಾಃ ಕಾರಣಂ ಕಾರಣಸ್ಯ ಚ।
13136018c ಪ್ರಮಾಣಸ್ಯ ಪ್ರಮಾಣಂ ಚ ಕಸ್ತಾನಭಿಭವೇದ್ ಬುಧಃ।।
ದೇವತೆಗಳಿಗೂ ದೇವರಾಗಿರುವ, ಕಾರಣಕ್ಕೂ ಕಾರಣರಾಗಿರುವ, ಮತ್ತು ಪ್ರಮಾಣಕ್ಕೂ ಪ್ರಮಾಣರಾಗಿರುವ ಇವರನ್ನು ಯಾವ ಪಂಡಿತನು ತಾನೇ ಅವಮಾನಿಸುತ್ತಾನೆ?
13136019a ಯೇಷಾಂ ವೃದ್ಧಶ್ಚ ಬಾಲಶ್ಚ ಸರ್ವಃ ಸಂಮಾನಮರ್ಹತಿ।
13136019c ತಪೋವಿದ್ಯಾವಿಶೇಷಾತ್ತು ಮಾನಯಂತಿ ಪರಸ್ಪರಮ್।।
ಬ್ರಾಹ್ಮಣರಲ್ಲಿ ವೃದ್ಧನಾಗಿರಲಿ ಬಾಲಕನಾಗಿರಲಿ ಸರ್ವರೂ ಸಂಮಾನಕ್ಕೆ ಅರ್ಹರೇ. ಬ್ರಾಹ್ಮಣರು ಇತರರಲ್ಲಿರುವ ತಪಸ್ಸು-ವಿದ್ಯೆಗಳ ವಿಶೇಷತೆಯನ್ನು ಗಮನಿಸಿ ಪರಸ್ಪರರನ್ನು ಸಮ್ಮಾನಿಸುತ್ತಾರೆ.
13136020a ಅವಿದ್ವಾನ್ಬ್ರಾಹ್ಮಣೋ ದೇವಃ ಪಾತ್ರಂ ವೈ ಪಾವನಂ ಮಹತ್।
13136020c ವಿದ್ವಾನ್ ಭೂಯಸ್ತರೋ ದೇವಃ ಪೂರ್ಣಸಾಗರಸಂನಿಭಃ।।
ಬ್ರಾಹ್ಮಣನು ಅವಿದ್ಯಾವಂತನಾಗಿದ್ದರೂ ದೇವಸಮಾನನೇ ಸರಿ. ಪರಮ ಪವಿತ್ರನೂ ದಾನಕ್ಕೆ ಪಾತ್ರನೂ ಆಗುತ್ತಾನೆ. ಹೀಗಿರುವಾಗ ವಿದ್ಯಾವಂತ ಬ್ರಾಹ್ಮಣನ ವಿಷಯದಲ್ಲಿ ಹೆಚ್ಚಾಗಿ ಹೇಳುವುದೇನಿದೆ? ತುಂಬಿದ ಸಮುದ್ರದಂತೆ ವಿದ್ಯಾವಂತ ಬ್ರಾಹ್ಮಣನು ದೇವತೆಗಳಿಗಿಂತಲೂ ಮಿಗಿಲಾದವನು.
13136021a ಅವಿದ್ವಾಂಶ್ಚೈವ ವಿದ್ವಾಂಶ್ಚ ಬ್ರಾಹ್ಮಣೋ ದೈವತಂ ಮಹತ್।
13136021c ಪ್ರಣೀತಶ್ಚಾಪ್ರಣೀತಶ್ಚ ಯಥಾಗ್ನಿರ್ದೈವತಂ ಮಹತ್।।
ಅಗ್ನಿಯು ಮಂತ್ರದಿಂದ ಸಂಸ್ಕರಿಸಲ್ಪಟ್ಟಿರಲಿ ಅಥವಾ ಅಸಂಸ್ಕೃತವಾಗಿಯೇ ಇರಲಿ ಮಹಾದೇವತೆಯೆಂದು ಪರಿಗಣಿಸಲ್ಪಡುವಂತೆ ಬ್ರಾಹ್ಮಣನು ವಿದ್ವಾಂಸನಾಗಿರಲಿ ಅಥವಾ ಅವಿದ್ಯಾವಂತನಾಗಿರಲಿ, ಅವನು ಪರಮ ದೇವತೆಯೇ ಸರಿ.
13136022a ಶ್ಮಶಾನೇ ಹ್ಯಪಿ ತೇಜಸ್ವೀ ಪಾವಕೋ ನೈವ ದುಷ್ಯತಿ।
13136022c ಹವಿರ್ಯಜ್ಞೇಷು ಚ ವಹನ್ ಭೂಯ ಏವಾಭಿಶೋಭತೇ।।
ತೇಜಸ್ವೀ ಪಾವಕನು ಶ್ಮಶಾನದಲ್ಲಿಯೂ ದೂಷಿತನಲ್ಲ. ಪುನಃ ಯಜ್ಞದಲ್ಲಿ ಹವಿಸ್ಸಿನಿಂದ ಪ್ರಜ್ವಲಿಸಲ್ಪಟ್ಟ ಅಗ್ನಿಯೂ ಕೂಡ ಅಷ್ಟೇ ಶೋಭಿಸುತ್ತಾನೆ.
13136023a ಏವಂ ಯದ್ಯಪ್ಯನಿಷ್ಟೇಷು ವರ್ತತೇ ಸರ್ವಕರ್ಮಸು।
13136023c ಸರ್ವಥಾ ಬ್ರಾಹ್ಮಣೋ ಮಾನ್ಯೋ ದೈವತಂ ವಿದ್ಧಿ ತತ್ಪರಮ್।।
ಹೀಗೆ ಸರ್ವಕರ್ಮಗಳಲ್ಲಿ ಅನಿಷ್ಟನಾಗಿ ವರ್ತಿಸಿದರೂ ಬ್ರಾಹ್ಮಣನು ಮಾನ್ಯನೇ ಸರಿ. ಅವನನ್ನು ಪರಮದೇವತೆಯೆಂದೇ ಭಾವಿಸು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಬ್ರಾಹ್ಮಣಪ್ರಶಂಸಾಯಾಂ ಷಟ್ತ್ರಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಬ್ರಾಹ್ಮಣಪ್ರಶಂಸಾ ಎನ್ನುವ ನೂರಾಮೂವತ್ತಾರನೇ ಅಧ್ಯಾಯವು.
-
ಭಾರತ ದರ್ಶನದಲ್ಲಿ ಈ ಅಧ್ಯಾಯಕ್ಕೆ ಮೊದಲು ೮೧ ಶ್ಲೋಕಗಳ ಇನ್ನೊಂದು ಅಧ್ಯಾಯವಿದೆ. ಜಪಕ್ಕೆ ಯೋಗ್ಯವಾದ ಮಂತ್ರಗಳು, ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥಿಸಬೇಕಾದ ದೇವತೆಗಳು, ಋಷಿಗಳು ಮತ್ತು ರಾಜರ ನಾಮಸಂಕೀರ್ತನದ ಮಹಿಮೆ, ಮತ್ತು ಗಾಯತ್ರೀ ಜಪದ ಫಲದ ಕುರಿತಾದ ಈ ಅಧ್ಯಾಯವನ್ನು ಪರಿಶಿಷ್ಠದಲ್ಲಿ ನೀಡಲಾಗಿದೆ. ↩︎
-
ಸರ್ವಶಿಕ್ಷಾಃ ಶ್ರುತಿಧನಾ ನಿಪುಣಾ ಮೋಕ್ಷದರ್ಶಿನಃ। (ಭಾರತ ದರ್ಶನ). ↩︎