135: ವಿಷ್ಣುಸಹಸ್ರನಾಮಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 135

ಸಾರ

ವಿಷ್ಣುವಿನ ಸಹಸ್ರನಾಮ ಸ್ತೋತ್ರ1 ಮತ್ತು ಫಲಶ್ರುತಿ (1-142).

13135001 ವೈಶಂಪಾಯನ ಉವಾಚ।
13135001a ಶ್ರುತ್ವಾ ಧರ್ಮಾನಶೇಷೇಣ ಪಾವನಾನಿ ಚ ಸರ್ವಶಃ।
13135001c ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯಭಾಷತ।।

2ವೈಶಂಪಾಯನನು ಹೇಳಿದನು: “ಪಾವನ ಧರ್ಮಗಳೆಲ್ಲವನ್ನೂ ಸಂಪೂರ್ಣವಾಗಿ ಕೇಳಿದ ಯುಧಿಷ್ಠಿರನು ಶಾಂತನವನಿಗೆ ಪುನಃ ಈ ಮಾತನ್ನಾಡಿದನು:

13135002a ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಮ್।
13135002c ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್।।

“ಈ ಲೋಕದಲ್ಲಿ ದೇವನೊಬ್ಬನೇ ಯಾರು? ಯಾರೊಬ್ಬನನ್ನೇ ಪರಾಯಣಮಾಡಬಹುದು? ಯಾರನ್ನು ಸ್ತುತಿಸಿ ಮಾನವರು ಶುಭಫಲಗಳನ್ನು ಪಡೆಯಬಹುದು?

13135003a ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ।
13135003c ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್।।

ಯಾವ ಧರ್ಮವು ಸರ್ವಧರ್ಮಗಳಿಗಿಂತಲೂ ಹೆಚ್ಚಿನದೆಂದು ಹೇಳಲ್ಪಟ್ಟಿದೆ? ಯಾರನ್ನು ಜಪಿಸಿ ಜೀವವು ಜನ್ಮ-ಸಂಸಾರಗಳ ಬಂಧನಗಳಿಂದ ಮುಕ್ತವಾಗಬಹುದು?”

13135004 ಭೀಷ್ಮ ಉವಾಚ।
13135004a ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಮ್।
13135004c ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ।।

ಭೀಷ್ಮನು ಹೇಳಿದನು: “ಜಗತ್ಪ್ರಭು ದೇವದೇವ ಅನಂತ ಪುರುಷೋತ್ತಮನ ಸಹಸ್ರ ನಾಮಗಳನ್ನು ಸತತವೂ ಸ್ತುತಿಸುವುದರಿಂದ ಮನುಷ್ಯನು ಏಳ್ಗೆಯನ್ನು ಪಡೆಯುತ್ತಾನೆ.

13135005a ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್।
13135005c ಧ್ಯಾಯನ್ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವ ಚ।।
13135006a ಅನಾದಿನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಮ್।
13135006c ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್।।
13135007a ಬ್ರಹ್ಮಣ್ಯಂ ಸರ್ವಧರ್ಮಜ್ಞಂ ಲೋಕಾನಾಂ ಕೀರ್ತಿವರ್ಧನಮ್।
13135007c ಲೋಕನಾಥಂ ಮಹದ್ಭೂತಂ ಸರ್ವಭೂತಭವೋದ್ಭವಮ್।।

ಅನಾದಿನಿಧನ, ಸರ್ವಲೋಕಮಹೇಶ್ವರ, ಪುರುಷ, ಅವ್ಯಯ, ಲೋಕಾಧ್ಯಕ್ಷ, ಬ್ರಹ್ಮಣ್ಯ, ಸರ್ವಧರ್ಮಜ್ಞ, ಲೋಕಗಳ ಕೀರ್ತಿವರ್ಧನ, ಲೋಕನಾಥ, ಮಹಾಭೂತ, ಸರ್ವಭೂತಗಳ ಭವೋದ್ಭವ ವಿಷ್ಣುವನ್ನು ನಿತ್ಯವೂ ಸ್ತುತಿಸುವುದರಿಂದ, ಅವನನ್ನೇ ಭಕ್ತಿಯಿಂದ ಅರ್ಚಿಸುವುದರಿಂದ, ಮತ್ತು ಅವನನ್ನೇ ಧ್ಯಾನ-ಸ್ತುತಿ-ನಮಸ್ಕಾರ-ಯಜ್ಞಗಳಿಂದ ತೃಪ್ತಿಗೊಳಿಸುವುದರಿಂದ ಮನುಷ್ಯನು ಸರ್ವದುಃಖಗಳನ್ನೂ ದಾಟಬಹುದು.

13135008a ಏಷ ಮೇ ಸರ್ವಧರ್ಮಾಣಾಂ ಧರ್ಮೋಽಧಿಕತಮೋ ಮತಃ।
13135008c ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ।।

ಮನುಷ್ಯನು ಪುಂಡರೀಕಾಕ್ಷನನ್ನು ಭಕ್ತಿ-ಸ್ತುತಿಗಳಿಂದ ಅರ್ಚಿಸುವುದೇ ಸರ್ವಧರ್ಮಗಳಲ್ಲಿ ಅಧಿಕತಮ ಧರ್ಮವೆಂಬ ಮತವಿದೆ.

13135009a ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ।
13135009c ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್।।

ಅವನು ಪರಮ ಮಹಾತೇಜಸ್ವಿಯು. ಅವನು ಪರಮ ಮಹಾತಪಸ್ವಿಯು. ಅವನು ಪರಮ ಮಹಾಬ್ರಹ್ಮನು. ಅವನು ಪರಮ ಪರಾಯಣನು.

13135010a ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಮ್।
13135010c ದೈವತಂ ದೇವತಾನಾಂ ಚ ಭೂತಾನಾಂ ಯೋಽವ್ಯಯಃ ಪಿತಾ।।

ಅವನು ಪವಿತ್ರರಲ್ಲಿ ಪವಿತ್ರನು ಮತ್ತು ಮಂಗಲಗಳಲ್ಲಿ ಮಂಗಲನು. ದೇವತೆಗಳ ದೇವತೆಯಾದ ಅವನು ಇರುವವುಗಳ ಅವ್ಯಯ ಪಿತನು.

13135011a ಯತಃ ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ।
13135011c ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ।।

ಯುಗದ ಆದಿಯಲ್ಲಿ ಇರುವ ಎಲ್ಲವೂ ಇವನಿಂದಲೇ ಹುಟ್ಟುತ್ತವೆ ಮತ್ತು ಯುಗದ ಅಂತ್ಯದಲ್ಲಿ ಪುನಃ ಇವನಲ್ಲಿಯೇ ಲೀನವಾಗುತ್ತವೆ.

13135012a ತಸ್ಯ ಲೋಕಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ।
13135012c ವಿಷ್ಣೋರ್ನಾಮಸಹಸ್ರಂ ಮೇ ಶೃಣು ಪಾಪಭಯಾಪಹಮ್।।

ಭೂಪತೇ! ಪಾಪ-ಭಯಗಳನ್ನು ಹೋಗಲಾಡಿಸುವ ಆ ಲೋಕಪ್ರಧಾನ ಜಗನ್ನಾಥ ವಿಷ್ಣುವಿನ ಸಹಸ್ರನಾಮಗಳನ್ನು ಕೇಳು.

13135013a ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ।
13135013c ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ।।

ಮಹಾತ್ಮ ಋಷಿಗಳು ಯಾವ ನಾಮಗಳಿಂದ ಅವನ ಗುಣಗಳನ್ನು ವಿಸ್ತರಿಸಿ ಸ್ತುತಿಸುತ್ತಾರೋ ಆ ನಾಮಗಳನ್ನು ನಾನು ಹೇಳುತ್ತೇನೆ3.

13135014a ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ।
13135014c ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ।।

4(೧) ವಿಶ್ವಂ5 – ಎಲ್ಲವೂ ಆಗಿರುವವನು; ವಿಶ್ವರೂಪಿ. (೨) ವಿಷ್ಣುಃ6 – ಎಲ್ಲದರಲ್ಲಿಯೂ ಇರುವವನು; ವ್ಯಾಪಕನು. (೩) ವಷಟ್ಕಾರಃ7 – ವಷಟ್ ಎಂಬ ಯಜ್ಞ ಮಂತ್ರರೂಪಿ; ಯಜ್ಞಗಳಲ್ಲಿ ದೇವತೆಗಳನ್ನುದ್ದೇಶಿಸಿ ಹವಿಸ್ಸನ್ನು ಹಾಕುವಾಗ ಉಚ್ಛರಿಸುವ ಮಂತ್ರಾಕ್ಷರ. (೪) ಭೂತಭವ್ಯಭವತ್ಪ್ರಭುಃ8 – ಆಗಿಹೋಗಿರುವ, ಈಗ ಇರುವ ಮತ್ತು ಮುಂದೆ ಬರುವವುಗಳ ಪ್ರಭು; ತ್ರಿಕಾಲ ನಿಯಾಮಕ; ಕಾಲತ್ರಯಾತೀತ. (೫) ಭೂತಕೃತ್9 – ಇಲ್ಲದಿರುವವುಗಳನ್ನು ಇರುವಂತೆ ಮಾಡುವವನು; ಭೂತಗಳನ್ನು ಸೃಷ್ಟಿಸುವವನು. (೬) ಭೂತಭೃತ್10 – ಇರುವವುಗಳನ್ನು ಪಾಲಿಸುವವನು; ಭೂತಗಳನ್ನು ಭರಿಸುವವನು. (೭) ಭಾವಃ11 – ಕಾಣಿಸದಿರುವ ಗುಣವಿಶೇಷಗಳನ್ನು ಪ್ರಕಟಗೊಳಿಸುವವನು; ಸತ್ತಾಸ್ವರೂಪಿಯು. (೮) ಭೂತಾತ್ಮಾ12 – ಇರುವವುಗಳ ಅಂತರ್ಯಾಮಿ. (೯) ಭೂತಭಾವನಃ13 – ಇರುವ ಎಲ್ಲವುಗಳಿಗೆ ಸ್ಪಂದಿಸುವವನು; ಭೂತಗಳನ್ನು ಸಂಕಲ್ಪಮಾತ್ರದಿಂದ ಸೃಷ್ಟಿಸಿ ಪೋಷಿಸುವವನು.

13135015a ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿಃ।
13135015c ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋಽಕ್ಷರ ಏವ ಚ।।

(೧೦) ಪೂತಾತ್ಮಾ – ಪವಿತ್ರ ಆತ್ಮ; ಪವಿತ್ರ ಸ್ವರೂಪೀ. (೧೧) ಪರಮಾತ್ಮಾ- ಎಲ್ಲವಕ್ಕೂ ಹಿರಿಯ ಆತ್ಮ; ಎಲ್ಲವನ್ನೂ ಮೀರಿದ ಆತ್ಮ; ಶ್ರೇಷ್ಠ ಆತ್ಮ. (೧೨) ಮುಕ್ತಾನಾಂ ಪರಮಾ ಗತಿಃ – ಜನ್ಮ-ಮೃತ್ಯುಗಳಿಂದ ಮುಕ್ತವಾದ ಆತ್ಮಗಳ ಅಂತಿಮ ಸ್ಥಾನ; ಮುಕ್ತರಾದವರಿಗೆ ಶ್ರೇಷ್ಠ ಗತಿ. (೧೩) ಅವ್ಯಯಃ – ಕಡಿಮೆಯಾಗದೇ ಇರುವವನು; ಅಳಿವಿಲ್ಲದವನು; ವಿಕಾರವಿಲ್ಲದವನು. (೧೪) ಪುರುಷಃ – ಎಲ್ಲರಿಗೂ ಮೊದಲು ಇದ್ದವನು; ಶರೀರವೆಂಬ ಪುರದಲ್ಲಿ ಶಯನಿಸಿರುವವನು; ಪೂರ್ಣನಾಗಿರುವವನು. (೧೫) ಸಾಕ್ಷೀ – ಎಲ್ಲವಕ್ಕೂ ಸಾಕ್ಷಿಯಾದವನು; ಎಲ್ಲವನ್ನೂ ನೋಡುತ್ತಿರುವವನು. (೧೬) ಕ್ಷೇತ್ರಜ್ಞ – ಇರುವ ಎಲ್ಲವಕ್ಕೂ ಮತ್ತು ಎಲ್ಲದರಲ್ಲಿಯೂ ಏನಾಗುತ್ತಿದೆಯೆಂದು, ಏನಾಗಿತ್ತೆಂದು ಮತ್ತು ಏನಾಗುವುದೆಂದು ತಿಳಿದವನು; ಶರೀರಗಳನ್ನು ಅರಿತಿರುವ ಯೋಗಾತ್ಮ. (೧೭) ಅಕ್ಷರಃ – ಅಳಿವೆಂಬುದೇ ಇಲ್ಲದವನು.

13135016a ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರಃ।
13135016c ನಾರಸಿಂಹವಪುಃ ಶ್ರೀಮಾನ್ಕೇಶವಃ ಪುರುಷೋತ್ತಮಃ।।

(೧೮) ಯೋಗಃ – ಒಂದಾಗುವವನು; ಜೀವಾತ್ಮ-ಪರಮಾತ್ಮರ ಸಂಯೋಗ; ಅಂಥಹ ಸಂಯೋಗದಲ್ಲಿ ಅನುಭವಕ್ಕೆ ಬರುವವನು. (೧೯) ಯೋಗವಿದಾಂ ನೇತಾ – ಒಂದಾಗುವುದನ್ನು ತಿಳಿದುಕೊಂಡಿರುವವರ ನಾಯಕ; ಯೋಗಜ್ಞರನ್ನು ಅವರ ಗುರಿಯೆಡೆಗೆ ಕೊಂಡೊಯ್ಯುವವನು. (೨೦) ಪ್ರಧಾನ ಪುರುಷೇಶ್ವರಃ – ಪ್ರಕೃತಿ ಮತ್ತು ಪುರುಷರಿಗೂ ಈಶ್ವರನು. (೨೧) ನಾರಸಿಂಹವಪುಃ – ಅರ್ಧ ಮನುಷ್ಯ ಮತ್ತು ಅರ್ಧ ಸಿಂಹದ ರೂಪವನ್ನು ಧರಿಸಿದವನು; ನರ ಮತ್ತು ಸಿಂಹ ಎರಡರ ಅವಯವಗಳೂ ಕೂಡಿದ ದೇಹವುಳ್ಳವನು. (೨೨) ಶ್ರೀಮಾನ್ – ಅತೀವ ಸುಂದರನು; ಅತೀವ ಶ್ರೀಮಂತನು; ಶ್ರೀಸಂಪನ್ನನು. (೨೩) ಕೇಶವಃ – ಅತ್ಯಂತ ಸುಂದರ ಕೇಶರಾಶಿಯುಳ್ಳವನು; ತ್ರಿಮೂರ್ತಿಪ್ರಭು. (೨೪) ಪುರುಷೋತ್ತಮಃ – ಪುರುಷರಲ್ಲಿ ಉತ್ತಮನು; ಇರುವಿಕೆ-ಇಲ್ಲದಿರುವಿಕೆಗಳನ್ನು ಮೀರಿದವನು; ಕ್ಷರ ಪುರುಷ ಮತ್ತು ಅಕ್ಷರ ಪುರುಷರಿಗಿಂತಲೂ ಉತ್ತಮನಾದವನು; ಪರಮ ಪುರುಷನು; ಪರಮಾತ್ಮನು.

13135017a ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ।
13135017c ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ।।

(೨೫) ಸರ್ವಃ – ಎಲ್ಲವೂ ಆದವನು; ಎಲ್ಲದರಲ್ಲಿಯೂ ಇರುವುದರಿಂದ ಎಲ್ಲವೂ ಅವನೇ; ಸರ್ವ ಕಾರಣ; ಸರ್ವನಿಯಾಮಕ; ಸರ್ವಜ್ಞ; ಸರ್ವಶಕ್ತ; ಸರ್ವಾತ್ಮಕ; ಸರ್ವವ್ಯಾಪಕ; ಸರ್ವಮಯ; ಸರ್ವರೂಪೀ. (೨೬) ಶರ್ವಃ – ಯಾರ ಸಂಬಂಧವು ಅತ್ಯಂತ ಫಲದಾಯಕವೋ ಅವನು; ಸಮಸ್ತ ಜಗತ್ತನ್ನೂ ಸಂಹರಿಸುವ ಶರ್ವ-ಶಿವನೇ ಇವನು; ಸರ್ವಸಂಹಾರಕನು. (೨೭) ಶಿವಃ – ಮಂಗಳಕಾರಕ ಶಿವನೇ ಇವನು; ಮಂಗಲಸ್ವರೂಪೀ. (೨೮) ಸ್ಥಾಣುಃ – ಚಲಿಸದೇ ಇರುವ ಸ್ಥಾಣು-ಶಿವನೇ ಇವನು; ಸ್ಥಿರನು. (೨೯) ಭೂತಾದಿಃ – ಇರುವ ಎಲ್ಲವಕ್ಕೂ ಮೊದಲು ಇದ್ದವನು; ಭೂತಗಳಿಗೆ ಆದಿ ಕಾರಣನು. (೩೦) ನಿಧಿರವ್ಯಯಃ – ಕಡಿಮೆಯಾಗದ ಸಂಪತ್ತು; ಅಕ್ಷಯ ನಿಧಿ. (೩೧) ಸಂಭವಃ – ಉತ್ಪತ್ತಿ ಕಾರಣನು; ಸ್ವಸಂಕಲ್ಪದಿಂದ ಹುಟ್ಟುವವನು; ಅವತರಿಸುವವನು, ಭೂಮಿಗಿಳಿಯುವವನು. (೩೨) ಭಾವನಃ – ಎಲ್ಲರಲ್ಲಿಯೂ ಇದ್ದುಕೊಂಡು ಎಲ್ಲರ ಸುಖ-ದುಃಖಗಳನ್ನು ಅನುಭವಿಸುವವನು; ಸತ್ಯಕಾಮಸಂಕಲ್ಪಗಳನ್ನು ಭಾವಿಸುವವನು. (೩೩) ಭರ್ತಾ – ಎಲ್ಲವನ್ನೂ ಹೊತ್ತವನು; ಎಲ್ಲವನ್ನೂ ಪೊರೆಯುವವನು; ಎಲ್ಲವುಗಳ ಹೊಣೆಗಾರಿಕೆಯನ್ನು ಹೊತ್ತವನು; ಭರಿಸುವವನು; ಪೋಷಿಸುವವನು; ಒಡೆಯನು. (೩೪) ಪ್ರಭವಃ – ಯಾರಿಂದ ಎಲ್ಲವೂ ಹುಟ್ಟುವವೋ ಅವನು; ಶ್ರೇಷ್ಠ ಜನ್ಮವುಳ್ಳವನು; ಪ್ರಾಣಿಗಳ ಜನ್ಮಕ್ಕೆ ಕಾರಣನು. (೩೫) ಪ್ರಭುಃ – ಎಲ್ಲರ ಪ್ರಭು; ಒಡೆಯ; ಸರ್ವ ಸಮರ್ಥ. (೩೬) ಈಶ್ವರಃ – ಎಲ್ಲವಕ್ಕೂ ಒಡೆಯನು; ಸರ್ವೇಶ್ವರನು; ನಿರವಧಿಕ, ನಿರುಪಾಧಿಕ ಮತ್ತು ಅನ್ವರ್ಥ ಐಶ್ವರ್ಯವುಳ್ಳವನು.

13135018a ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ।
13135018c ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ।।

(೩೭) ಸ್ವಯಂಭೂಃ – ತಾನಾಗಿಯೇ ಹುಟ್ಟಿದವನು; ತಾನಾಗಿಯೇ ಇರುವವನು; ತಾನಾಗಿಯೇ ಪ್ರಕಟವಾದವನು. (೩೮) ಶಂಭುಃ – ಆನಂದರೂಪಿ ಶಿವ-ಶಂಭುವೇ ಇವನು; ಸುಖವನ್ನು ಭಾವಿಸುವವನು. (೩೯) ಆದಿತ್ಯಃ – ಅದಿತಿಯ ಮಗ; ಸೂರ್ಯ, ಆದಿತ್ಯ; ಆದಿತ್ಯಮಂಡಲದಲ್ಲಿರುವ ಪುರುಷ. (೪೦) ಪುಷ್ಕರಾಕ್ಷಃ – ಕಮಲದಂತಹ ಕಣ್ಣುಳ್ಳವನು; ಸರ್ವವನ್ನೂ ವ್ಯಾಪಿಸಿರುವವನು; ಪುಷ್ಕರ-ಹೃದಯದಲ್ಲಿ ಅಕ್ಷ-ಅಚ್ಚನ್ನಾಗಿ ಹೊಂದಿ ಶರೀರಯಂತ್ರವನ್ನು ನಡೆಸುವವನು. (೪೧) ಮಹಾಸ್ವನಃ – ಜೋರಾದ ಧ್ವನಿಯುಳ್ಳವನು; ಮಹತ್ತಾದ ಪ್ರಣವ ಸ್ವರೂಪದ ನಾದವುಳ್ಳವನು. (೪೨) ಅನಾದಿನಿಧನಃ – ಹುಟ್ಟು-ಸಾವುಗಳಿಲ್ಲದವನು; ಆದಿ-ಅಂತ್ಯಗಳಿಲ್ಲದವನು. (೪೩) ಧಾತಾ – ಕೊಡುವವನು; ಎಲ್ಲವನ್ನೂ ಹೊತ್ತವನು; ವಿಶ್ವವನ್ನು ಧರಿಸಿ ಪೋಷಿಸುವವನು. (೪೪) ವಿಧಾತಾ – ಆಗುಹೋಗುಗಳನ್ನು ಮೊದಲೇ ನಿರ್ಧರಿಸಿದವನು; ಕರ್ಮಗಳನ್ನೂ ಮತ್ತು ಅವುಗಳ ಫಲಗಳನ್ನೂ ಉಂಟುಮಾಡುವವನು; ವಿಶೇಷವಾಗಿ ಮತ್ತು ವಿವಿಧವಾಗಿ ಧರಿಸಿ ಪೋಷಿಸುವವನು. (೪೫) ಧಾತುರುತ್ತಮಃ – ಮೂಲಗಳಲ್ಲಿ ಉತ್ತಮನು; ಬ್ರಹ್ಮನಿಗಿಂತಲೂ ಶ್ರೇಷ್ಠನಾದವನು; ಉತ್ತಮ ಧಾತುವು; ಪ್ರಸನ್ನವಾದ ಧಾತುವು; ಸರ್ವಶ್ರೇಷ್ಠವಾದ ಜ್ಞಾನಧಾತುವು.

13135019a ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋಽಮರಪ್ರಭುಃ।
13135019c ವಿಶ್ವಕರ್ಮಾ ಮನುಸ್ತ್ವಷ್ಟಾ ಸ್ಥವಿಷ್ಠಃ ಸ್ಥವಿರೋ ಧ್ರುವಃ।।

(೪೬) ಅಪ್ರಮೇಯಃ – ಅಳತೆಯೇ ಇಲ್ಲದವನು, ಅಳೆಯಲು ಅಸಾಧ್ಯನಾದವನು. (೪೭) ಹೃಷೀಕೇಶಃ – ಇಂದ್ರಿಯಗಳಿಗೆ ಒಡೆಯ; ಹರ್ಷವನ್ನುಂಟುಮಾಡುವ ಕೇಶರಾಶಿವುಳ್ಳವನು. (೪೮) ಪದ್ಮನಾಭಃ – ನಾಭಿಯಲ್ಲಿ ಪದ್ಮವುಳ್ಳವನು; ಸೃಷ್ಟಿಸೂಚಕ ಪದ್ಮವನ್ನು ನಾಭಿಯಲ್ಲಿ ಹೊಂದಿರುವವನು. (೪೯) ಅಮರಪ್ರಭುಃ – ಅಮರರಿಗೆ ಪ್ರಭುವು; ಇಂದ್ರ; ಅಮರನಾದ ಪ್ರಭು. (೫೦) ವಿಶ್ವಕರ್ಮಃ – ವಿಶ್ವದ ಶಿಲ್ಪಿ ವಿಶ್ವಕರ್ಮ; ವಿಶ್ವರೂಪದ ಕರ್ಮವುಳ್ಳವನು; ವಿಶ್ವದ ರಚನೆ-ವಿನಾಶಾದಿ ಕರ್ಮಗಳುಳ್ಳವನು; ಸರ್ವ ಕರ್ಮಿಸ್ವರೂಪನು. (೫೧) ಮನುಃ – ಹದಿನಾಲ್ಕು ಮನ್ವಂತರಗಳಲ್ಲಿ ಪ್ರತಿಯೊಂದರ ಮೊದಲನೆಯ ಮನುಷ್ಯ ಮನುವು; ಜ್ಞಾನಸ್ವರೂಪೀ; ಮಂತ್ರಸ್ವರೂಪೀ; ಮನನ ಮಾಡಬೇಕಾದವನು; ಮನನ ಮಾಡುವವನು; ಮನು ಪ್ರಜಾಪತಿ ರೂಪನು. (೫೨) ತ್ವಷ್ಟಾ – ಉಳಿಯಿಂದ ಕೆತ್ತಿ ವಿಶ್ವದ ವಿನ್ಯಾಸಗಳನ್ನು ರಚಿಸಿದ ವಿಶ್ವಕರ್ಮನ ಇನ್ನೊಂದು ಹೆಸರು ತ್ವಷ್ಟಾ; ವಿಶ್ವವನ್ನು ಸೃಷ್ಟಿರೂಪದಲ್ಲಿ ಕೆತ್ತುವ ಮತ್ತು ಸಂಹಾರದಲ್ಲಿ ಕೊಚ್ಚಿ ಹಾಕುವ ಶಿಲ್ಪಿ. (೫೩) ಸ್ಥವಿಷ್ಠಃ – ಊಹಿಸಲೂ ಅಸಾಧ್ಯವಾದ ಸ್ಥೂಲಕಾಯದವನು; ಅನೇಕ ವಿಶ್ವಗಳನ್ನು ರಚಿಸಿ ಅವುಗಳಲ್ಲಿ ವಾಸಿಸಿರುವವನು; ಸೂಕ್ಷ್ಮತಮದಿಂದ ಸ್ಥೂಲತಮನಾಗಿ ವಿಸ್ತಾರಗೊಳ್ಳುವವನು. (೫೪) ಸ್ಥವಿರೋ ಧ್ರುವಃ – ಯಾವಾಗಲೂ ಇದ್ದವನು ಮತ್ತು ಇರುವವನು; ನಿಶ್ಚಲನಾಗಿರುವವನು, ಸ್ಥಾನವನ್ನು ಬದಲಾಯಿಸದೇ ಇರುವವನು; ವೃದ್ಧನು; ಸರ್ವಲೋಕಪಿತಾಮಹನಿಗಿಂತಲೂ ವೃದ್ಧನು; ಸ್ಥಿರನಾದವನು, ಶಾಶ್ವತನು.

13135020a ಅಗ್ರಾಹ್ಯಃ ಶಾಶ್ವತಃ ಕೃಷ್ಣೋ ಲೋಹಿತಾಕ್ಷಃ ಪ್ರತರ್ದನಃ।
13135020c ಪ್ರಭೂತಸ್ತ್ರಿಕಕುಬ್ಧಾಮ ಪವಿತ್ರಂ ಮಂಗಲಂ ಪರಮ್।।

(೫೫) ಅಗ್ರಾಹ್ಯಃ – ಗ್ರಹಿಸಲು ಸಾಧ್ಯವಿಲ್ಲದವನು; ಹಿಡಿತಕ್ಕೆ ಬರದವನು; ಇಂದ್ರಿಯಗಳಿಂದ ಗ್ರಹಿಸಲು ಆಗದವನು; ಮನಸ್ಸು-ಮಾತುಗಳಿಂದ ಗ್ರಹಿಸಲು ಆಗದವನು. (೫೬) ಶಾಶ್ವತಃ – ಯಾವಾಗಲೂ ಇರುವವನು; ಶಾಶ್ವತನಾದವನು; ಎಂದೆಂದಿಗೂ ಇರುವವನು. (೫೭) ಕೃಷ್ಣಃ – ಕಪ್ಪುಬಣ್ಣದವನು; ಕೃಷ್ಣನು; ಆಕರ್ಶಿಸುವವನು; ಸೆಳೆಯುವವನು; ಸಚ್ಚಿದಾನಂದಸ್ವರೂಪಿಯು; ಎಲ್ಲವನ್ನೂ ಕರ್ಷಣೆ ಮಾಡುವವನು; ನೀಲವರ್ಣದವನು. (೫೮) ಲೋಹಿತಾಕ್ಷಃ – ಕೆಂಪುಕಣ್ಣುಗಳುಳ್ಳವನು; ಕ್ಷತ್ರಿಯಾವತಾರಗಳಲ್ಲಿ ಸಹಜವಾದ ರಕ್ತಾಂತ ಲೋಚನನು. (೫೯) ಪ್ರತರ್ದನಃ – ಹಿಂಸಿಸುವ ದುಷ್ಟಶಕ್ತಿಯನ್ನು ನಿರ್ಮೂಲನಮಾಡುವವನು, ಎಲ್ಲ ದುಃಖಗಳನ್ನೂ ನಿರ್ಮೂಲನಮಾಡುವವನು; ಧರ್ಮವಿರೋಧಿಗಳನ್ನು ಚೆನ್ನಾಗಿ ಹಿಂಸಿಸುವವನು; ಪ್ರಳಯದಲ್ಲಿ ಎಲ್ಲ ಭೂತಗಳನ್ನೂ ಹಿಂಸಿಸುವವನು. (೬೦) ಪ್ರಭೂತಃ – ಇರುವ ಎಲ್ಲವಕ್ಕೂ ಪ್ರಮುಖನಾದವನು; ಪುಷ್ಕಳನಾಗಿರುವವನು; ಪುಷ್ಕಳ ಗುಣೈಶ್ವರ್ಯಾದಿ ಸಂಪನ್ನನು. (೬೧) ತ್ರಿಕಕುಬ್ಧಾಮಃ – ವಿಶ್ವದ ಮುಕ್ಕಾಲು ಭಾಗವಾದ ಆಧ್ಯಾತ್ಮಿಕ ಲೋಕದಲ್ಲಿ ಇರುವವನು; ಮೂರು ಲೋಕಗಳ ಎತ್ತರದಲ್ಲಿ ಇರುವವನು; ಸರ್ವಪ್ರದೇಶಗಳಲ್ಲಿಯೂ ಪ್ರಕಾಶವುಳ್ಳವನು, ನಿವಾಸವುಳ್ಳವನು, ಅಥವಾ ಪ್ರಭಾವವುಳ್ಳವನು. (೬೨) ಪವಿತ್ರಂ – ಎಲ್ಲವನ್ನೂ ಪಾವನಗೊಳಿಸುವವನು; ಶುದ್ಧಗೊಳಿಸುವವನು; ಪ್ರಸಿದ್ಧ ವಜ್ರದಂಡದಿಂದ ರಕ್ಷಿಸುವವನು. (೬೩) ಮಂಗಲಂ ಪರಂ – ಎಲ್ಲರಕ್ಕಿಂತಲೂ ಹೆಚ್ಚು ಮಂಗಲವನ್ನುಂಟುಮಾಡುವವನು; ಪರಮಸುಖವನ್ನುಂಟುಮಾಡುವವನು.

13135021a ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ।
13135021c ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ।।

(೬೪) ಈಶಾನಃ14 – ಪರಮಶಕ್ತಿಗಳ ಒಡೆಯ ಶಿವ; ಎಲ್ಲಕ್ಕೂ ಅಧಿಪತಿಯಾದವನು; ಸರ್ವಸಮರ್ಥನು; ಸರ್ವಪ್ರಾಣಿಗಳನ್ನೂ ನಿಯಂತ್ರಿಸುವವನು; ಎಲ್ಲ ಅವಸ್ಥೆಗಳಲ್ಲಿಯೂ ಸಮಸ್ತ ವಸ್ತುಗಳನ್ನೂ ವ್ಯವಸ್ಥೆಗೊಳಿಸುವ ಸ್ವಭಾವದವನು. (೬೫) ಪ್ರಾಣದಃ – ಪಾಣಗಳನ್ನು ಕೊಡುವವನು ಮತ್ತು ಕಸಿದುಕೊಳ್ಳುವವನು; ಬಲಪ್ರದನು; ಸಂಜೀವಕನು. (೬೬) ಪ್ರಾಣಃ – ಪ್ರಾಣಶಕ್ತಿ. (೬೭) ಜ್ಯೇಷ್ಠಃ – ಎಲ್ಲರಿಗಿಂತ ಹಿರಿಯವನು. (೬೮) ಶ್ರೇಷ್ಠಃ – ಎಲ್ಲರಿಗಿಂತಲೂ ಶ್ರೇಷ್ಠನಾದವನು. (೬೯) ಪ್ರಜಾಪತಿಃ – ಹುಟ್ಟಿದ ಎಲ್ಲವಕ್ಕೂ ಒಡೆಯ. (೭೦) ಹಿರಣ್ಯಗರ್ಭಃ – ಹಿರಣ್ಮಯ ಬಹ್ಮಾಂಡವನ್ನು ಗರ್ಭದಲ್ಲಿ ಧರಿಸಿದವನು. (೭೧) ಭೂಗರ್ಭಃ – ಭೂಮಂಡಲವನ್ನು ಗರ್ಭದಲ್ಲಿ ಧರಿಸಿದವನು. (೭೨) ಮಾಧವಃ – ಮಧುವಿನ ಕುಲದಲ್ಲಿ ಹುಟ್ಟಿದವನು, ಲಕ್ಷ್ಮೀಪತಿ. (೭೩) ಮಧುಸೂದನಃ – ಮಧುವೆಂಬ ರಾಕ್ಷಸನನ್ನು ಸಂಹರಿಸಿದವನು.

13135022a ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮಃ ಕ್ರಮಃ।
13135022c ಅನುತ್ತಮೋ ದುರಾಧರ್ಷಃ ಕೃತಜ್ಞಃ ಕೃತಿರಾತ್ಮವಾನ್।।

(೭೪) ಈಶ್ವರಃ – ಎಲ್ಲವಕ್ಕೂ ಒಡೆಯನು. (೭೫) ವಿಕ್ರಮೀ – ವಿಕ್ರಮವುಳ್ಳವನು. (೭೬) ಧನ್ವೀ – ಧನುಸ್ಸನ್ನು ಹಿಡಿದವನು. (೭೭) ಮೇಧಾವೀ – ಬುದ್ಧಿಶಾಲಿ. (೭೮) ವಿಕ್ರಮಃ – ಯಾರ ಸಹಾಯವೂ ಇಲ್ಲದೇ ಎಲ್ಲಿಗೂ ಸಂಚರಿಸಬಲ್ಲವನು. (೭೯) ಕ್ರಮಃ – ಎಲ್ಲಕಡೆ ಸಂಚರಿಸುವವನು. (೮೦) ಅನುತ್ತಮಃ – ಎಲ್ಲರಿಗಿಂತಲೂ ಉತ್ತಮನಾದವನು. (೮೧) ದುರಾಧರ್ಷಃ – ಯುದ್ಧದಲ್ಲಿ ಎದುರಿಸಲು ಅಸಾಧ್ಯನಾದವನು. (೮೨) ಕೃತಜ್ಞಃ – ಯಾರು ಏನನ್ನು ಕೊಟ್ಟರೂ ಅದನ್ನೇ ಸ್ಮರಣೆಯಲ್ಲಿಟ್ಟುಕೊಂಡು ಪ್ರತಿಯಾಗಿ ಕೊಡುವವನು. (೮೩) ಕೃತಿಃ – ಕರ್ಮಗಳನ್ನು ಮಾಡುವವನು. (೮೪) ಆತ್ಮವಾನ್ – ಎಲ್ಲರ ಆತ್ಮಗಳ ಆತ್ಮ.

13135023a ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ।
13135023c ಅಹಃ ಸಂವತ್ಸರೋ ವ್ಯಾಲಃ ಪ್ರತ್ಯಯಃ ಸರ್ವದರ್ಶನಃ।।

(೮೫) ಸುರೇಶಃ – ಸುರರಿಗೆ ಈಶ. (೮೬) ಶರಣಂ – ಶರಣಾಗತರಾದವರಿಗೆ ಆಶ್ರಯವನ್ನು ನೀಡುವವನು. (೮೭) ಶರ್ಮ – ಆನಂದಮಯಿ. (೮೮) ವಿಶ್ವರೇತಾಃ – ವಿಶ್ವವನ್ನು ಹುಟ್ಟಿಸಿದ ರೇತಸ್ಸು, ವಿಶ್ವವನ್ನು ಹುಟ್ಟಿಸಿದ ವೀರ್ಯ. (೮೯) ಪ್ರಜಾಭವಃ – ಹುಟ್ಟಿದವುಗಳಿಗೆ ಆನಂದವನ್ನು ನೀಡುವವನು. (೯೦) ಅಹಃ – ಹಗಲು; ಬೆಳಕು. (೯೧) ಸಂವತ್ಸರಃ – ವರ್ಷ; ಹುಟ್ಟು-ಸಾವುಗಳ ಸಂಸಾರದಿಂದ ದಾಟಿಸುವವನು. (೯೨) ವ್ಯಾಲಃ – ಪ್ರಳಯದಲ್ಲಿ ಎಲ್ಲವೂ ಯಾರಲ್ಲಿ ಲೀನವಾಗುತ್ತದೆಯೋ ಅವನು. (೯೩) ಪ್ರತ್ಯಯಃ – ಎಲ್ಲರಿಗೂ ನಂಬಿಕಸ್ಥನಾಗಿರುವವನು; ಎಲ್ಲರಲ್ಲಿಯೂ ಇದ್ದುಕೊಂಡು ಎಲ್ಲವನ್ನೂ ತಿಳಿದುಕೊಂಡವನು. (೯೪) ಸರ್ವದರ್ಶನಃ – ಎಲ್ಲವನ್ನೂ ಕಾಣುವವನು.

13135024a ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ।
13135024c ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಃಸೃತಃ।।

(೯೫) ಅಜಃ – ಹುಟ್ಟಿಲ್ಲದವನು. (೯೬) ಸರ್ವೇಶ್ವರಃ – ಎಲ್ಲದರ ಈಶ್ವರ. (೯೭) ಸಿದ್ಧಃ – ಎಲ್ಲ ಸಿದ್ಧಿಗಳನ್ನು ಪಡೆದವನು; ಎಲ್ಲವನ್ನೂ ತಿಳಿದವನು. (೯೮) ಸಿದ್ಧಿಃ – ಸಾಧಿಸಬೇಕಾದವನು. (೯೯) ಸರ್ವಾದಿಃ – ಎಲ್ಲವಕ್ಕೂ ಮೂಲ; ಎಲ್ಲರಿಗಿಂತಲೂ ಮೊದಲಿನವನು. (೧೦೦) ಅಚ್ಯುತಃ – ತಪ್ಪದವನು; ತಪ್ಪುಮಾಡದವನು. (೧೦೧) ವೃಷಾಕಪಿಃ – ಧರ್ಮವನ್ನು ರಕ್ಷಿಸಿದ ವರಾಹ. (೧೦೨) ಅಮೇಯಾತ್ಮಾ – ಸೀಮಾತೀತ. (೧೦೩) ಸರ್ವಯೋಗವಿನಿಃಸೃತಃ – ಯಾವುದಕ್ಕೂ ಅಂಟಿಕೊಂಡಿರದೇ ಇರುವವನು; ಎಲ್ಲ ಸಂಬಂಧಗಳಿಂದ ಮುಕ್ತನಾದವನು.

13135025a ವಸುರ್ವಸುಮನಾಃ ಸತ್ಯಃ ಸಮಾತ್ಮಾ ಸಂಮಿತಃ ಸಮಃ।
13135025c ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ।।

(೧೦೪) ವಸುಃ – ಸರ್ವಭೂತಗಳಲ್ಲಿ ವಾಸಿಸುವವನು; ಸಂಪತ್ತು; ವಸುಗಳಲ್ಲಿ ಒಬ್ಬನು15. (೧೦೫) ವಸುಮನಾಃ – ಮಹಾಮನಸ್ವಿ; ವಸುಗಳಿಗೆ ಕಾಣಿಸಿಕೊಳ್ಳುವವನು. (೧೦೬) ಸತ್ಯಃ – ನಿಜವಾದವನು (೧೦೭) ಸಮಾತ್ಮಾ – ಎಲ್ಲರನ್ನೂ ಸಮನಾಗಿ ಕಾಣುವವನು; ರಾಗ-ದ್ವೇಷಗಳಿಗೆ ವಿಚಲಿತನಾಗದವನು. (೧೦೮) ಸಂಮಿತಃ – ಎಲ್ಲರಿಗೂ ಹಿತನಾದವನು. (೧೦೯) ಸಮಃ – ಸಮನಾದವನು. (೧೧೦) ಅಮೋಘಃ – ಹುಸಿಯಾಗದವನು. (೧೧೧) ಪುಂಡರೀಕಾಕ್ಷಃ – ಕಮಲದಂಥಹ ಕಣ್ಣುಗಳುಳ್ಳವನು. (೧೧೨) ವೃಷಕರ್ಮಾ – ಧರ್ಮಕ್ಕಾಗಿ ಕರ್ಮಗಳನ್ನೆಸಗುವವನು. (೧೧೩) ವೃಷಾಕೃತಿಃ – ಧರ್ಮಕ್ಕಾಗಿ ಅನೇಕ ಆಕಾರಗಳನ್ನು ಪಡೆಯುವವನು.

13135026a ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ।
13135026c ಅಮೃತಃ ಶಾಶ್ವತಃ ಸ್ಥಾಣುರ್ವರಾರೋಹೋ ಮಹಾತಪಾಃ।।

(೧೧೪) ರುದ್ರಃ – ಸಂಹಾರಕಾಲದಲ್ಲಿ ಪ್ರಜೆಗಳನ್ನು ಸಂಹರಿಸಿ ರೋದಿಸುವಂತೆ ಮಾಡುವ ರುದ್ರನು. (೧೧೫) ಬಹುಶಿರಾಃ – ಅನೇಕ ಶಿರಗಳುಳ್ಳವನು. (೧೧೬) ಬಭ್ರುಃ – ಲೋಕಗಳನ್ನು ಹೊತ್ತವನು; ಲೋಕಗಳ ಆಧಾರನು. (೧೧೭) ವಿಶ್ವಯೋನಿಃ - ವಿಶ್ವದ ಕಾರಣನು. (೧೧೮) ಶುಚಿಶ್ರವಾಃ – ಯಾರ ಹೆಸರುಗಳನ್ನು ಕೇಳಿದರೆ ಶುದ್ಧಗೊಳಿಸುತ್ತದೆಯೋ ಅವನು. (೧೧೯) ಅಮೃತಃ – ಯಾರಿಗೆ ಸಾವು ಅಥವಾ ಮರಣವೆಂಬುದೇ ಇಲ್ಲವೋ ಅವನು. (೧೨೦) ಶಾಶ್ವತಸ್ಥಾಣುಃ – ಶಾಶ್ವತವಾಗಿ ಚಲಿಸದೇ ಇರುವವನು. (೧೨೧) ವರಾರೋಹಃ – ಉತ್ತಮ ಆರೋಹಣವಿರುವವನು. (೧೨೨) ಮಹಾತಪಾಃ – ಮಹಾತಪಸ್ವಿ; ಸೃಷ್ಟಿಸಲು ಬೇಕಾಗಿರುವ ಮಹಾಜ್ಞಾನವನ್ನು ಹೊಂದಿರುವವನು.

13135027a ಸರ್ವಗಃ ಸರ್ವವಿದ್ಭಾನುರ್ವಿಷ್ವಕ್ಸೇನೋ ಜನಾರ್ದನಃ।
13135027c ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ಕವಿಃ।।

(೧೨೩) ಸರ್ವಗಃ – ಎಲ್ಲಕಡೆ ಹೋಗುವವನು; ಎಲ್ಲಕಡೆ ಇರುವವನು. (೧೨೪) ಸರ್ವವಿದ್ಭಾನುಃ – ಎಲ್ಲೆಲ್ಲಿಯೂ ಇರುವ ಹೊಳೆಯುವ ಸೂರ್ಯ. (೧೨೫) ವಿಷ್ವಕ್ಸೇನಃ – ಶತ್ರು ಸೇನೆಗಳನ್ನು ಎಲ್ಲ ಕಡೆಗಳಿಂದ ಮುತ್ತಿ ಓಡಿಸುವವನು. (೧೨೬) ಜನಾರ್ದನಃ – ದುಷ್ಟ ಜನರನ್ನು ಪೀಡಿಸುವವನು. (೧೨೭) ವೇದಃ – ವೇದರೂಪೀ. (೧೨೮) ವೇದವಿತ್ – ವೇದಗಳನ್ನು ತಿಳಿದವನು. (೧೨೯) ಅವ್ಯಂಗಃ – ಪರಿಪೂರ್ಣನಾದವನು. (೧೩೦) ವೇದಾಂಗಃ – ವೇದಗಳನ್ನೇ ಅಂಗಗಳನ್ನಾಗುಳ್ಳವನು. (೧೩೧) ವೇದವಿತ್ – ವೇದಗಳನ್ನು ಪಸರಿಸುವವನು. (೧೩೨) ಕವಿಃ – ಎಲ್ಲವನ್ನೂ ತಿಳಿದವನು.

13135028a ಲೋಕಾಧ್ಯಕ್ಷಃ ಸುರಾಧ್ಯಕ್ಷೋ ಧರ್ಮಾಧ್ಯಕ್ಷಃ ಕೃತಾಕೃತಃ।
13135028c ಚತುರಾತ್ಮಾ ಚತುರ್ವ್ಯೂಹಶ್ಚತುರ್ದಂಷ್ಟ್ರಶ್ಚತುರ್ಭುಜಃ।।

(೧೩೩) ಲೋಕಾಧ್ಯಕ್ಷಃ – ಲೋಕಗಳ ಅಧ್ಯಕ್ಷನು. (೧೩೪) ಸುರಾಧ್ಯಕ್ಷಃ – ಸುರರ ಅಧ್ಯಕ್ಷನು. (೧೩೫) ಧರ್ಮಾಧ್ಯಕ್ಷಃ – ಧರ್ಮಗಳ ಅಧ್ಯಕ್ಷನು. (೧೩೬) ಕೃತಾಕೃತಃ – ಕಾರಣ-ಪರಿಣಾಮಸ್ವರೂಪನು. (೧೩೭) ಚತುರಾತ್ಮಾ – ನಾಲ್ಕು ಸ್ವಭಾವಗಳುಳ್ಳವನು16. (೧೩೮) ಚತುರ್ವ್ಯೂಹಃ – ನಾಲ್ಕಾಗಿ ಪ್ರಕಟಗೊಂಡು ಸೃಷ್ಟಿಸುವವನು17. (೧೩೯) ಚತುರ್ದಂಷ್ಟ್ರಃ – ನಾಲ್ಕು ಕೋರೆದಾಡೆ ಹಲ್ಲುಗಳುಳ್ಳವನು18. (೧೪೦) ಚತುರ್ಭುಜಃ – ನಾಲ್ಕು ಬಾಹುಗಳುಳ್ಳವನು.

13135029a ಭ್ರಾಜಿಷ್ಣುರ್ಭೋಜನಂ ಭೋಕ್ತಾ ಸಹಿಷ್ಣುರ್ಜಗದಾದಿಜಃ।
13135029c ಅನಘೋ ವಿಜಯೋ ಜೇತಾ ವಿಶ್ವಯೋನಿಃ ಪುನರ್ವಸುಃ।।

(೧೪೧) ಭ್ರಾಜಿಷ್ಣುಃ – ಪ್ರಕಾಶವುಳ್ಳವನು. (೧೪೨) ಭೋಜನಂ – ಭೋಜನ; ಆಹಾರ; ಭೋಗಿಸುವ ವಸ್ತು; ಅನುಭವಿಸಬಹುದಾದ ಪ್ರಕೃತಿ ಅಥವಾ ಮಾಯೆ. (೧೪೩) ಭೋಕ್ತಾ – ಭೋಗಿಸುವವನು; ಆಹಾರವನ್ನು ಸೇವಿಸುವವನು; ಪ್ರಕೃತಿ ಅಥವಾ ಮಾಯೆಯನ್ನು ಅನುಭವಿಸುವವನು. (೧೪೪) ಸಹಿಷ್ಣುಃ – ತನ್ನ ಹಿಡಿತದಲ್ಲಿ ತೆಗೆದುಕೊಳ್ಳುವವನು; ದೈತ್ಯರನ್ನು ಬಗ್ಗಿಸುವವನು. (೧೪೫) ಜಗದಾದಿಜಃ – ಜಗದ ಆದಿಯಲ್ಲಿ ಹಿರಣ್ಯಗರ್ಭರೂಪದಲ್ಲಿ ಇದ್ದವನು. (೧೪೬) ಅನಘಃ – ಪಾಪವಿಲ್ಲದವನು. (೧೪೭) ವಿಜಯಃ – ಎಲ್ಲವನ್ನೂ ಗೆದ್ದವನು. (೧೪೮) ಜೇತಾ – ಎಲ್ಲವನ್ನೂ ಮೀರಿದವನು. (೧೪೯) ವಿಶ್ವಯೋನಿಃ – ವಿಶ್ವದ ಕಾರಣನು. (೧೫೦) ಪುನರ್ವಸುಃ – ಪುನಃ ಪುನಃ ಶರೀರಗಳಲ್ಲಿ ವಾಸಿಸುವವನು.

13135030a ಉಪೇಂದ್ರೋ ವಾಮನಃ ಪ್ರಾಂಶುರಮೋಘಃ ಶುಚಿರೂರ್ಜಿತಃ।
13135030c ಅತೀಂದ್ರಃ ಸಂಗ್ರಹಃ ಸರ್ಗೋ ಧೃತಾತ್ಮಾ ನಿಯಮೋ ಯಮಃ।।

(೧೫೧) ಉಪೇಂದ್ರಃ – ಇಂದ್ರನ ತಮ್ಮನು. (೧೫೨) ವಾಮನಃ – ವಾಮನರೂಪದಲ್ಲಿ ಬಲಿಯಲ್ಲಿ ಬೇಡಿದವನು. (೧೫೩) ಪ್ರಾಂಶುಃ – ಎತ್ತರವಾಗಿರುವವನು; ಮೂರುಲೋಕಗಳಿಗಿಂತಲೂ ಎತ್ತರವಾಗಿ ಬೆಳೆದವನು19. (೧೫೪) ಅಮೋಘಃ – ಮಾಡಿದ ಕಾರ್ಯಗಳಲ್ಲಿ ಯಶಸ್ವಿಯಾದವನು. (೧೫೫) ಶುಚಿಃ – ಶುದ್ಧನಾದವನು. (೧೫೬) ಊರ್ಜಿತಃ – ಅತ್ಯಂತ ಶಕ್ತಿಶಾಲಿಯು. (೧೫೭) ಅತೀಂದ್ರಃ – ಇಂದ್ರನನ್ನೂ ಮೀರಿದವನು. (೧೫೮) ಸಂಗ್ರಹಃ – ಪ್ರಳಯಕಾಲದಲ್ಲಿ ಎಲ್ಲವನ್ನೂ ತನ್ನೊಳಗೆ ಸೆಳೆದುಕೊಳ್ಳುವವನು. (೧೫೯) ಸರ್ಗಃ – ಸೃಷ್ಟಿ ಅಥವಾ ಸೃಷ್ಟಿಮಾಡುವವನು. (೧೬೦) ಧೃತಾತ್ಮಾ – ಆತ್ಮವನ್ನು ಜನ್ಮ-ಮೃತ್ಯುಗಳೇ ಮೊದಲಾದ ವಿಕಾರಗಳಿಲ್ಲದೇ ಪೊರೆಯುವವನು. (೧೬೧) ನಿಯಮಃ – ಇರುವ ಎಲ್ಲವಕ್ಕೂ ಅಧಿಕಾರಗಳನ್ನಿತ್ತು ನಿರ್ದೇಶಕನಾಗಿ ನಿಯಂತ್ರಿಸುವವನು. (೧೬೨) ಯಮಃ – ಎಲ್ಲರ ಒಳಗಿದ್ದು ಎಲ್ಲರನ್ನೂ ನಿಯಂತ್ರಿಸುವವನು.

13135031a ವೇದ್ಯೋ ವೈದ್ಯಃ ಸದಾಯೋಗೀ ವೀರಹಾ ಮಾಧವೋ ಮಧುಃ।
13135031c ಅತೀಂದ್ರಿಯೋ ಮಹಾಮಾಯೋ ಮಹೋತ್ಸಾಹೋ ಮಹಾಬಲಃ।।

(೧೬೩) ವೇದ್ಯಃ – ತಿಳಿಯಬೇಕಾದವನು. (೧೬೪) ವೈದ್ಯಃ – ಚಿಕಿತ್ಸಕ; ರೋಗನಿವಾರಕನು. (೧೬೫) ಸದಾಯೋಗೀ – ಸದಾ ಯೋಗನಿರತನಾಗಿರುವವನು; ಯಾವಾಗಲೂ ಎಚ್ಚೆತ್ತಿರುವವನು. (೧೬೬) ವೀರಹಾ – ವೀರರನ್ನು ಸಂಹರಿಸಿದವನು. (೧೬೭) ಮಾಧವ – ಜ್ಞಾನಗಳ ಒಡೆಯ20. (೧೬೮) ಮಧುಃ – ಅತ್ಯಂತ ತೃಪ್ತಿಯನ್ನೀಡುವ ಜೇನುತುಪ್ಪ. (೧೬೯) ಅತೀಂದ್ರಿಯಃ – ಇಂದ್ರಿಯಗಳಿಗೆ ಸಿಲುಕದವನು. (೧೭೦) ಮಹಾಮಾಯಃ – ಮಹಾ ಮಾಯೆಯನ್ನುಂಟುಮಾಡುವವನು; ಮಹಾಮಾಯಾವಿಯು. (೧೭೧) ಮಹೋತ್ಸಾಹಃ – ಮಹಾ ಉತ್ಸಾಹವುಳ್ಳವನು. (೧೭೨) ಮಹಾಬಲಃ – ಮಹಾ ಬಲಶಾಲಿಯು.

13135032a ಮಹಾಬುದ್ಧಿರ್ಮಹಾವೀರ್ಯೋ ಮಹಾಶಕ್ತಿರ್ಮಹಾದ್ಯುತಿಃ।
13135032c ಅನಿರ್ದೇಶ್ಯವಪುಃ ಶ್ರೀಮಾನಮೇಯಾತ್ಮಾ ಮಹಾದ್ರಿಧೃಕ್।।

(೧೭೩) ಮಹಾಬುದ್ಧಿಃ – ಮಹಾ ಬುದ್ಧಿಶಾಲಿಯು. (೧೭೪) ಮಹಾವೀರ್ಯಃ – ಮಹಾ ವೀರ್ಯವುಳ್ಳವನು. (೧೭೫) ಮಹಾಶಕ್ತಿಃ – ಮಹಾಶಕ್ತಿಯುಳ್ಳವನು. (೧೭೬) ಮಹಾದ್ಯುತಿಃ – ಮಹಾ ಪ್ರಕಾಶವುಳ್ಳವನು. (೧೭೭) ಅನಿರ್ದೇಶ್ಯವಪುಃ – ನಿರ್ಧರಿಸಲು ಅಸಾಧ್ಯವಾದ ರೂಪವುಳ್ಳವನು. (೧೭೮) ಶ್ರೀಮಾನ್ – ಎಲ್ಲ ಸಂಪತ್ತುಗಳಿಗೆ ಒಡೆಯನಾದವನು. (೧೭೯) ಅಮೇಯಾತ್ಮಾ – ಅಳೆಯಲಸಾಧ್ಯವಾದ ಬುದ್ಧಿಯುಳ್ಳವನು. (೧೮೦) ಮಹಾದ್ರಿಧೃಕ್ – ಮಹಾ ಪರ್ವತವನ್ನು ಹೊತ್ತವನು.

13135033a ಮಹೇಷ್ವಾಸೋ ಮಹೀಭರ್ತಾ ಶ್ರೀನಿವಾಸಃ ಸತಾಂ ಗತಿಃ।
13135033c ಅನಿರುದ್ಧಃ ಸುರಾನಂದೋ ಗೋವಿಂದೋ ಗೋವಿದಾಂ ಪತಿಃ।।

(೧೮೧) ಮಹೇಷ್ವಾಸಃ – ಮಹಾ ಧನುಸ್ಸನ್ನು ಹಿಡಿದವನು. (೧೮೨) ಮಹೀಭರ್ತಃ – ಭೂಮಿಯನ್ನು ಹೊತ್ತವನು; ಪಾಲಿಸುವವನು. (೧೮೩) ಶ್ರೀನಿವಾಸಃ – ಶ್ರೀಯು ಯಾರಲ್ಲಿ ವಾಸಿಸುತ್ತಾಳೋ ಅವನು. (೧೮೪) ಸತಾಂ ಗತಿಃ – ಸಾಧುಗಳ ಗುರಿಯು. (೧೮೫) ಅನಿರುದ್ಧಃ – ತಡೆಯಲು ಅಸಾಧ್ಯನಾದವನು. (೧೮೬) ಸುರಾನಂದಃ – ಸುರರಿಗೆ ಆನಂದವನ್ನು ನೀಡುವವನು. (೧೮೭) ಗೋವಿಂದಃ – ಭೂಮಿಯನ್ನು ರಕ್ಷಿಸಿದವನು21; ಗೋವುಗಳಿಗೆ ಒಡೆಯನಾದವನು ಮತ್ತು ಮಾತುಗಳಿಗೆ ಒಡೆಯನು22. (೧೮೮) ಗೋವಿದಾಂ ಪತಿಃ – ತಿಳಿದುಕೊಂಡಿರುವವರ, ಜ್ಞಾನಿಗಳ ಒಡೆಯ.

13135034a ಮರೀಚಿರ್ದಮನೋ ಹಂಸಃ ಸುಪರ್ಣೋ ಭುಜಗೋತ್ತಮಃ।
13135034c ಹಿರಣ್ಯನಾಭಃ ಸುತಪಾಃ ಪದ್ಮನಾಭಃ ಪ್ರಜಾಪತಿಃ।।

(೧೮೯) ಮರೀಚಿಃ – ಅತ್ಯಂತ ಪ್ರಕಾಶವುಳ್ಳವನು. (೧೯೦) ದಮನಃ – ಬಗ್ಗಿಸುವವನು. (೧೯೧) ಹಂಸಃ – ಭಯವನ್ನು ನಾಶಮಾಡುವವನು. (೧೯೨) ಸುಪರ್ಣಃ – ಸುಂದರ ರೆಕ್ಕೆಗಳುಳ್ಳವನು. (೧೯೧) ಭುಜಗೋತ್ತಮಃ – ಸರ್ಪಗಳಲ್ಲಿ ಉತ್ತಮನು. (೧೯೪) ಹಿರಣ್ಯನಾಭಃ – ಬಂಗಾರದ ಬಣ್ಣದ ನಾಭಿಯುಳ್ಳವನು. (೧೯೫) ಸುತಪಾಃ – ಉತ್ತಮ ತಪಸ್ಸುಳ್ಳವನು. (೧೯೬) ಪದ್ಮನಾಭಃ – ಕಮಲದಂತಹ ನಾಭಿಯುಳ್ಳವನು. (೧೯೭) ಪ್ರಜಾಪತಿಃ – ಇರುವವುಗಳನ್ನು ರಕ್ಷಿಸುವವನು.

13135035a ಅಮೃತ್ಯುಃ ಸರ್ವದೃಕ್ಸಿಂಹಃ ಸಂಧಾತಾ ಸಂಧಿಮಾನ್ಸ್ಥಿರಃ।
13135035c ಅಜೋ ದುರ್ಮರ್ಷಣಃ ಶಾಸ್ತಾ ವಿಶ್ರುತಾತ್ಮಾ ಸುರಾರಿಹಾ।।

(೧೯೮) ಅಮೃತ್ಯುಃ – ಮೃತ್ಯುವಿಲ್ಲದವನು. (೧೯೯) ಸರ್ವದೃಕ್ – ಎಲ್ಲವನ್ನೂ ಕಾಣುವವನು. (೨೦೦) ಸಿಂಹಃ – ಪಾಪಗಳನ್ನು ನಾಶಪಡಿಸುವವನು. (೨೦೧) ಸಂಧಾತಾ – ಕರ್ಮಫಲಗಳ ಮೂಲಕ ಜೀವಿಗಳನ್ನು ನಿಯಂತ್ರಿಸುವವನು. (೨೦೨) ಸಂಧಿಮಾನ್ – ಅನುಭವಿಸುವವನು. (೨೦೩) ಸ್ಥಿರಃ – ಸ್ಥಿರವಾಗಿರುವವನು. (೨೦೪) ಅಜಃ – ಹುಟ್ಟಿಲ್ಲದವನು. (೨೦೫) ದುರ್ಮರ್ಷಣಃ – ಸಹಿಸಲಸಾಧ್ಯನಾದವನು. (೨೦೬) ಶಾಸ್ತಾ – ಗುರು; ಉಪದೇಶಿಸುವವನು. (೨೦೭) ವಿಶ್ರುತಾತ್ಮಾ – ಪ್ರಸಿದ್ಧನಾದವನು. (೨೦೮) ಸುರಾರಿಹಾ – ಸುರರ ಶತ್ರುಗಳನ್ನು ಸಂಹರಿಸುವವನು.

13135036a ಗುರುರ್ಗುರುತಮೋ ಧಾಮ ಸತ್ಯಃ ಸತ್ಯಪರಾಕ್ರಮಃ।
13135036c ನಿಮಿಷೋಽನಿಮಿಷಃ ಸ್ರಗ್ವೀ ವಾಚಸ್ಪತಿರುದಾರಧೀಃ।।

(೨೦೯) ಗುರುಃ – ಗುರುವು. (೨೧೦) ಗುರುತಮಃ – ಹಿರಿಯ ಗುರುವು. (೨೧೧) ಧಾಮಃ – ಬೆಳಗುವವನು. (೨೧೨) ಸತ್ಯಃ – ನಿಜವಾದವನು. (೨೧೩) ಸತ್ಯಪರಾಕ್ರಮಃ – ಸತ್ಯವೇ ಪರಾಕ್ರಮವಾಗುಳ್ಳವನು. (೨೧೪) ನಿಮಿಷಃ – ಕಣ್ಣುಗಳನ್ನು ಮುಚ್ಚಿಕೊಂಡವನು. (೨೧೫) ಅನಿಮಿಷಃ – ಯಾವಾಗಲೂ ಎಚ್ಚರವಾಗಿರುವವನು. (೨೧೬) ಸ್ರಗ್ವೀ – ಹಾರವನ್ನು ಧರಿಸಿದವನು. (೨೧೭) ವಾಚಸ್ಪತಿರುದಾರಧೀಃ – ವಾಣಿಗೆ ಅಥವಾ ವೇದಗಳಿಗೆ ಒಡೆಯನು; ಭಕ್ತರ ವಿಷಯದಲ್ಲಿ ಔದಾರ್ಯ ಬುದ್ಧಿಯುಳ್ಳವನು.

13135037a ಅಗ್ರಣೀರ್ಗ್ರಾಮಣೀಃ ಶ್ರೀಮಾನ್ನ್ಯಾಯೋ ನೇತಾ ಸಮೀರಣಃ।
13135037c ಸಹಸ್ರಮೂರ್ಧಾ ವಿಶ್ವಾತ್ಮಾ ಸಹಸ್ರಾಕ್ಷಃ ಸಹಸ್ರಪಾತ್।।

(೨೧೮) ಅಗ್ರಣೀ – ಎಲ್ಲರಿಗಿಂತ ಮುಂದಿರುವವನು; ಮುಂದಿರುವವರ ನಾಯಕನು. (೨೧೯) ಗ್ರಾಮಣೀ – ಗುಂಪುಗಳ ನಿರ್ದೇಶಕನು. (೨೨೦) ಶ್ರೀಮಾನ್ – ಶ್ರೀಮಂತನು. (೨೨೧) ನ್ಯಾಯಃ – ನ್ಯಾಯನು. (೨೨೨) ನೇತಾ – ನಾಯಕನು. (೨೨೩) ಸಮೀರಣಃ – ಜೀವಿಗಳಲ್ಲಿ ಚಲನವನ್ನುಂಟುಮಾಡುವ ಪ್ರಾಣವು. (೨೨೪) ಸಹಸ್ರಮೂರ್ಧಾ – ಸಹಸ್ರಶಿರಗಳುಳ್ಳವನು. (೨೨೫) ವಿಶ್ವಾತ್ಮ – ವಿಶ್ವದ ಆತ್ಮನು. (೨೨೬) ಸಹಸ್ರಾಕ್ಷಃ – ಸಾವಿರ ಕಣ್ಣುಗಳುಳ್ಳವನು. (೨೨೭) ಸಹಸ್ರಪಾತ್ – ಸಾವಿರ ಪಾದಗಳುಳ್ಳವನು.

13135038a ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಂಪ್ರಮರ್ದನಃ।
13135038c ಅಹಃ ಸಂವರ್ತಕೋ ವಹ್ನಿರನಿಲೋ ಧರಣೀಧರಃ।।

(೨೨೮) ಆವರ್ತನಃ – ಸಂಸಾರಚಕ್ರವನ್ನು ತಿರುಗಿಸುವವನು. (೨೨೯) ನಿವೃತ್ತಾತ್ಮಾ – ಬಂಧನವಿಲ್ಲದ ಆತ್ಮನು. (೨೩೦) ಸಂವೃತಃ – ಅವಿದ್ಯೆಯಿಂದ ಮುಸುಕಲ್ಪಟ್ಟವನು. (೨೩೧) ಸಂಪ್ರಮರ್ದನಃ – ರುದ್ರ ಮತ್ತು ಕಾಲಗಳಾಗಿ ಮರ್ದಿಸುವವನು. (೨೩೨) ಅಹಃ ಸಂವರ್ತಕಃ – ಹಗಲನ್ನು ನಿಯಂತ್ರಿಸುವವನು. (೨೩೩) ವಹ್ನಿಃ – ಅಗ್ನಿಯು. (೨೩೪) ಅನಿಲಃ – ವಾಯುವು. (೨೩೫) ಧರಣೀಧರಃ – ಭೂಮಿಯನ್ನು ಹೊತ್ತವನು.

13135039a ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭುಃ।
13135039c ಸತ್ಕರ್ತಾ ಸತ್ಕೃತಃ ಸಾಧುರ್ಜಹ್ನುರ್ನಾರಾಯಣೋ ನರಃ।।

(೨೩೬) ಸುಪ್ರಸಾದಃ – ಉತ್ತಮ ಪ್ರಸಾದಗಳನ್ನು ನೀಡುವವನು. (೨೩೭) ಪ್ರಸನ್ನಾತ್ಮಾ – ಪ್ರಸನ್ನ ಆತ್ಮವುಳ್ಳವನು. (೨೩೮) ವಿಶ್ವಧೃಗ್ – ವಿಶ್ವದ ಒಡೆಯನು. (೨೩೯) ವಿಶ್ವಭುಗ್ – ವಿಶ್ವವನ್ನು ಭೋಗಿಸುವವನು. (೨೪೦) ವಿಭುಃ – ಅನೇಕ ರೂಪವುಳ್ಳವನು. (೨೪೧) ಸತ್ಕರ್ತಾ – ಒಳ್ಳೆಯವರಿಗೆ ಒಳ್ಳೆಯದನ್ನು ಮಾಡುವವನು. (೨೪೨) ಸತ್ಕೃತಃ – ಸತ್ಕೃತನಾದವನು. (೨೪೩) ಸಾಧುಃ – ಸಾಧುವು. (೨೪೪) ಜಹ್ನುಃ – ಜಹ್ನು ಋಷಿಯು; ಪ್ರಳಯಕಾಲದಲ್ಲಿ ಎಲ್ಲವನ್ನೂ ಒಡೆಯುವವನು. (೨೪೫) ನಾರಾಯಣಃ – ನಾರಾಯಣನು. (೨೪೬) ನರಃ – ನರನು.

13135040a ಅಸಂಖ್ಯೇಯೋಽಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಚುಚಿಃ।
13135040c ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ।।

(೨೪೭) ಅಸಂಖ್ಯೇಯಃ – ಎಣಿಕೆಗೆ ಸಿಲುಕದವನು. (೨೪೮) ಅಪ್ರಮೇಯಾತ್ಮಾ – ಅಳತೆಗೆ ಸಿಗದ ಆತ್ಮವುಳ್ಳವನು. (೨೪೯) ವಿಶಿಷ್ಟಃ – ಎಲ್ಲವಕ್ಕೂ ಅತಿಶಯನಾದವನು; ವಿಶಿಷ್ಟನಾದವನು. (೨೫೦) ಶಿಷ್ಟಕೃತ್ – ಆಜ್ಞೆಗಳನ್ನು ನೀಡುವವನು. (೨೫೧) ಶುಚಿಃ – ಶುದ್ಧನಾದವನು. (೨೫೨) ಸಿದ್ಧಾರ್ಥಃ – ಎಲ್ಲವನ್ನೂ ಸಾಧಿಸಿದವನು. (೨೫೩) ಸಿದ್ಧಸಂಕಲ್ಪಃ – ಎಲ್ಲ ಸಂಕಲ್ಪಗಳನ್ನೂ ಸಾಧಿಸಿದವನು. (೨೫೪) ಸಿದ್ಧಿದಃ – ಸಿದ್ಧಿಯನ್ನು ನೀಡುವವನು. (೨೫೫) ಸಿದ್ಧಿಸಾಧನಃ – ಸಿದ್ಧಿಗೆ ಸಾಧನನು.

13135041a ವೃಷಾಹೀ ವೃಷಭೋ ವಿಷ್ಣುರ್ವೃಷಪರ್ವಾ ವೃಷೋದರಃ।
13135041c ವರ್ಧನೋ ವರ್ಧಮಾನಶ್ಚ ವಿವಿಕ್ತಃ ಶ್ರುತಿಸಾಗರಃ।।

(೨೫೬) ವೃಷಾಹೀ – ಧರ್ಮವನ್ನು ವಿವರಿಸುವವನು. (೨೫೭) ವೃಷಭಃ – ಭಕ್ತರಿಗೆ ಬೇಕಾದುದನ್ನು ಸುರಿಸುವವನು. (೨೫೮) ವಿಷ್ಣುಃ – ಎಲ್ಲದರಲ್ಲಿಯೂ ಇರುವವನು. (೨೫೯) ವೃಷಪರ್ವಾ – ಧರ್ಮವನ್ನೇ ಪಾದಗಳಾಗುಳ್ಳವನು. (೩೬೦) ವೃಷೋದರಃ – ಎಲ್ಲವನ್ನೂ ಉದರದಲ್ಲಿಯೇ ಇಟ್ಟುಕೊಂಡಿರುವವನು. (೨೬೧) ವರ್ಧನಃ – ವೃದ್ಧಿಸುವವನು. (೨೬೨) ವರ್ಧಮಾನಃ – ವೃದ್ಧಿಗೊಳ್ಳುವವನು. (೨೬೩) ವಿವಿಕ್ತಃ – ಒಂಟಿ; ಏಕಾಂಗಿಯು. (೨೬೪) ಶೃತಿಸಾಗರಃ – ಶೃತಿಗಳ ಸಾಗರನು.

13135042a ಸುಭುಜೋ ದುರ್ಧರೋ ವಾಗ್ಮೀ ಮಹೇಂದ್ರೋ ವಸುದೋ ವಸುಃ।
13135042c ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ।।

(೨೬೫) ಸುಭುಜಃ – ಸುಂದರ ಭುಜಗಳುಳ್ಳವನು. (೨೬೬) ದುರ್ಧರಃ – ಆತ್ಮದಲ್ಲಿ ಧರಿಸಲು ಕಷ್ಟನಾದವನು. (೨೬೭) ವಾಗ್ಮೀ – ಮಾತಿನಲ್ಲಿ ಚತುರನು. (೨೬೮) ಮಹೇಂದ್ರಃ – ಮಹಾ ಇಂದ್ರನು. (೨೬೯) ವಸುದಃ – ಸಂಪತ್ತನ್ನು ಕೊಡುವವನು. (೨೭೦) ವಸುಃ – ಸಂಪತ್ತು. (೨೭೧) ನೈಕರೂಪಃ – ಒಂದೇ ರೂಪದಲ್ಲದವನು; ಅನೇಕ ರೂಪಗಳುಳ್ಳವನು. (೨೭೨) ಬೃಹದ್ರೂಪಃ – ಮಹಾ ರೂಪವುಳ್ಳವನು. (೨೭೩) ಶಿಪಿವಿಷ್ಟಃ – ಯಜ್ಞಪಶುವಿನ ಆತ್ಮನು. (೨೭೪) ಪ್ರಕಾಶನಃ – ಎಲ್ಲವನ್ನೂ ಬೆಳಗಿಸುವವನು.

13135043a ಓಜಸ್ತೇಜೋ ದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ।
13135043c ಋದ್ಧಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾಂಶುರ್ಭಾಸ್ಕರದ್ಯುತಿಃ।।

(೨೭೫) ಓಜಸ್ತೇಜೋ ದ್ಯುತಿಧರಃ – ಜೀವಶಕ್ತಿ; ತೇಜಸ್ಸು; ಬೆಳಕನ್ನು ಧರಿಸಿದವನು. (೨೭೬) ಪ್ರಕಾಶಾತ್ಮಾ – ಪ್ರಾಕಾಶಿಸುವ ಆತ್ಮವುಳ್ಳವನು. (೨೭೭) ಪ್ರತಾಪನಃ – ಪತಾಪವುಳ್ಳವನು; ಶಕ್ತಿಯನ್ನು ನೀಡುವವನು. (೨೭೮) ಋದ್ಧಃ – ಐಶ್ವರ್ಯವಂತನು. (೨೭೯) ಸ್ಪಷ್ಟಾಕ್ಷರಃ – ಸ್ಪಷ್ಟವಾದ ಅಕ್ಷರಗಳುಳ್ಳವನು. (೨೮೦) ಮಂತ್ರಃ – ಮಂತ್ರಸ್ವರೂಪನು. (೨೮೧) ಚಂದ್ರಾಂಶುಃ – ಚಂದ್ರನ ಕಿರಣಸ್ವರೂಪನು. (೨೮೨) ಭಾಸ್ಕರದ್ಯುತಿಃ – ಭಾಸ್ಕರನಂತೆ ಕಾಂತಿಯುಕ್ತನಾದವನು.

13135044a ಅಮೃತಾಂಶೂದ್ಭವೋ ಭಾನುಃ ಶಶಬಿಂದುಃ ಸುರೇಶ್ವರಃ।
13135044c ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ।।

(೨೮೩) ಅಮೃತಾಂಶೂದ್ಭವಃ – ಚಂದ್ರನ ಮೂಲನು. (೨೮೪) ಭಾನುಃ – ಸೂರ್ಯನು. (೨೮೫) ಶಶಬಿಂದುಃ – ಚಂದ್ರನು. (೨೮೬) ಸುರೇಶ್ವರಃ – ಸುರರಿಗೆ ಈಶ್ವರನು. (೨೮೭) ಔಷಧಂ – ಔಷಧಿಯು. (೨೮೮) ಜಗತಃ ಸೇತುಃ – ಜಗತ್ತಿನ ಸೇತುವೆಯು. (೨೮೯) ಸತ್ಯಧರ್ಮಪರಾಕ್ರಮಃ – ಸತ್ಯ-ಧರ್ಮಗಳನ್ನೇ ಪರಾಕ್ರಮವಾಗುಳ್ಳವನು.

13135045a ಭೂತಭವ್ಯಭವನ್ನಾಥಃ ಪವನಃ ಪಾವನೋಽನಿಲಃ23
13135045c ಕಾಮಹಾ ಕಾಮಕೃತ್ಕಾಂತಃ ಕಾಮಃ ಕಾಮಪ್ರದಃ ಪ್ರಭುಃ।।

(೨೯೦) ಭೂತಭವ್ಯಭವನ್ನಾಥಃ – ಆಗಿಹೋಗಿದ್ದುದರ, ಆಗುತ್ತಿರುವುದರ ಮತ್ತು ಮುಂದೆ ಆಗುವುದರ ನಾಥನು. (೨೯೧) ಪವನಃ – ಪಾವನಗೊಳಿಸುವವನು. (೨೯೨) ಪಾವನಃ – ಚಲಿಸುವಂತೆ ಮಾಡುವವನು. (೨೯೩) ಅನಿಲಃ – ಪ್ರಾಣದ ಉಸಿರು. (೨೯೪) ಕಾಮಹಾ – ಆಸೆಗಳನ್ನು ನಾಶಗೊಳಿಸುವವನು. (೨೯೫) ಕಾಮಕೃತ್ – ಕಾಮಗಳನ್ನು ಪೂರೈಸುವವನು. (೨೯೬) ಕಾಂತಃ – ಸುಂದರನು. (೨೯೭) ಕಾಮಃ – ಆಸೆಗಳು. (೨೯೮) ಕಾಮಪ್ರದಃ – ಬಯಸಿದುದನ್ನು ನೀಡುವವನು. (೨೯೯) ಪ್ರಭುಃ – ಒಡೆಯ.

13135046a ಯುಗಾದಿಕೃದ್ಯುಗಾವರ್ತೋ ನೈಕಮಾಯೋ ಮಹಾಶನಃ।
13135046c ಅದೃಶ್ಯೋ ವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್।।

(೩೦೦) ಯುಗಾದಿಕೃತ್ – ಯುಗವನ್ನು ಮಾಡುವವನು. (೩೦೧) ಯುಗಾವರ್ತಃ – ಯುಗಗಳ ಪುನರಾವರ್ತನೆಯನ್ನು ಮಾಡುವವನು. (೩೦೨) ನೈಕಮಾಯಃ – ಅನೇಕ ಮಾಯೆಗಳುಳ್ಳವನು. (೩೦೩) ಮಹಾಶನಃ – ಅತಿಹೆಚ್ಚು ತಿನ್ನುವವನು. (೩೦೪) ಅದೃಶ್ಯಃ – ಕಣ್ಣಿಗೆ ಕಾಣಿಸದವನು. (೩೦೫) ವ್ಯಕ್ತರೂಪಃ – ವ್ಯಕ್ತರೂಪಿಯು. (೩೦೬) ಸಹಸ್ರಜಿತ್ – ಸಾವಿರರನ್ನು ಗೆದ್ದವನು. (೩೦೭) ಅನಂತಜಿತ್ – ಅನಂತ ಸಂಖ್ಯೆಗಳಲ್ಲಿ ಜಯಿಸಿದವನು.

13135047a ಇಷ್ಟೋ ವಿಶಿಷ್ಟಃ ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ।
13135047c ಕ್ರೋಧಹಾ ಕ್ರೋಧಕೃತ್ಕರ್ತಾ ವಿಶ್ವಬಾಹುರ್ಮಹೀಧರಃ।।

(೩೦೮) ಇಷ್ಟಃ – ಎಲ್ಲರಿಗೂ ಇಷ್ಟನಾದವನು; ಬೇಕಾದವನು. (೩೦೯) ಅವಿಶಿಷ್ಟಃ – ಎಲ್ಲರಲ್ಲಿಯೂ ಒಂದೇ ಸಮನಾಗಿ ಇರುವವನು. (೩೧೦) ಶಿಷ್ಟೇಷ್ಟಃ – ಶಿಷ್ಟರು ಇಷ್ಟಪಡುವವನು; ಕಲಿತವರು ಇಷ್ಟಪಡುವವನು. (೩೧೧) ಶಿಖಂಡಿಃ – ನವಿಲುಗರಿಯಿಂದ ಅಲಂಕೃತನಾದವನು. (೩೧೨) ನಹುಷಃ – ತನ್ನ ಮಾಯೆಯಿಂದ ಇತರರನ್ನು ಮೋಹಿಸುವವನು. (೩೧೩) ವೃಷಃ – ಧರ್ಮನು24. (೩೧೪) ಕ್ರೋಧಹಾ – ಕ್ರೋಧವನ್ನು ನಾಶಮಾಡುವವನು. (೩೧೫) ಕ್ರೋಧಕೃತ್ಕರ್ತಾ – ಕ್ರೋಧವನ್ನು ಸೃಷ್ಟಿಸಿದವನು; ಕ್ರೋಧವನ್ನುಂಟುಮಾಡುವವನು. (೩೧೬) ವಿಶ್ವಬಾಹುಃ – ಎಲ್ಲಕಡೆಗಳಲ್ಲಿಯೂ ಬಾಹುಗಳನ್ನುಳ್ಳವನು. (೩೧೭) ಮಹೀಧರಃ – ಭೂಮಿಯನ್ನು ಹೊತ್ತವನು.

13135048a ಅಚ್ಯುತಃ ಪ್ರಥಿತಃ ಪ್ರಾಣಃ ಪ್ರಾಣದೋ ವಾಸವಾನುಜಃ।
13135048c ಅಪಾಂ ನಿಧಿರಧಿಷ್ಠಾನಮಪ್ರಮತ್ತಃ ಪ್ರತಿಷ್ಠಿತಃ।।

(೩೧೮) ಅಚ್ಯುತಃ – ಯಾವುದೇ ದೋಷಗಳೂ ಇಲ್ಲದವನು. (೩೧೯) ಪ್ರಥಿತಃ – ಪ್ರಸಿದ್ಧನಾದವನು. (೩೨೦) ಪ್ರಾಣಃ – ಪ್ರಾಣನು. (೩೨೧) ಪ್ರಾಣದಃ – ಪ್ರಾಣವನ್ನು ನೀಡುವವನು. (೩೨೨) ವಾಸವಾನುಜಃ – ಇಂದ್ರನ ತಮ್ಮನು. (೩೨೩) ಅಪಾಂ ನಿಧಿಃ – ಸಮುದ್ರನು. (೩೨೪) ಅಧಿಷ್ಠಾನಂ – ಮುಖ್ಯಸ್ಥನು. (೩೨೫) ಅಪ್ರಮತ್ತಃ – ಯಾವಾಗಲೂ ಎಚ್ಚರದಿಂದಿರುವವನು. (೩೨೬) ಪ್ರತಿಷ್ಠಿತಃ – ಪ್ರತಿಷ್ಠಿತನಾಗಿರುವವನು.

13135049a ಸ್ಕಂದಃ ಸ್ಕಂದಧರೋ ಧುರ್ಯೋ ವರದೋ ವಾಯುವಾಹನಃ।
13135049c ವಾಸುದೇವೋ ಬೃಹದ್ಭಾನುರಾದಿದೇವಃ ಪುರಂದರಃ।।

(೩೨೭) ಸ್ಕಂದಃ – ಅಮೃತದಂತೆ ಸುರಿಯುವವನು; ಹರಿದುಹೋಗುವವನು. (೩೨೮) ಸ್ಕಂದಧರಃ – ಉತ್ತಮ ಮಾರ್ಗವನ್ನು ಕಾಪಾಡುವವನು. (೩೨೯) ಧುರ್ಯಃ – ಸೃಷ್ಟಿಯೇ ಮೊದಲಾದ ಎಲ್ಲ ಕಾರ್ಯಗಳ ನೇತಾರನು. (೩೩೦) ವರದಃ – ವರಗಳನ್ನು ನೀಡುವವನು. (೩೩೧) ವಾಯುವಾಹನಃ – ವಾಯುವನ್ನೇ ವಾಹನವನ್ನಾಗಿಸಿಕೊಂಡವನು; ಪ್ರಾಣವಾಯುವಿನ ನಿರ್ದೇಶಕನು. (೩೩೨) ವಾಸುದೇವಃ – ಎಲ್ಲದರ ಒಳಗೂ ಇದ್ದು ಆಟವಾಡುವವನು. (೩೩೩) ಬೃಹದ್ಭಾನುಃ – ಮಹಾಕಿರಣಗಳುಳ್ಳವನು. (೩೩೪) ಆದಿದೇವಃ – ಮೊದಲ ದೇವತೆಯು. (೩೩೫) ಪುರಂದರಃ – ಪುರಗಳನ್ನು ಗೆದ್ದವನು.

13135050a ಅಶೋಕಸ್ತಾರಣಸ್ತಾರಃ ಶೂರಃ ಶೌರಿರ್ಜನೇಶ್ವರಃ।
13135050c ಅನುಕೂಲಃ ಶತಾವರ್ತಃ ಪದ್ಮೀ ಪದ್ಮನಿಭೇಕ್ಷಣಃ।।

(೩೩೬) ಅಶೋಕಃ – ಶೋಕವಿಲ್ಲದವನು. (೩೩೭) ತಾರಣಃ – ದಾಟಿಸುವವನು. (೩೩೮) ತಾರಃ – ಉಳಿಸುವವನು. (೩೩೯) ಶೂರಃ – ಶೂರನು. (೩೪೦) ಶೌರಿಃ – ಶೂರನ ವಂಶದಲ್ಲಿ ಜನಿಸಿದವನು. (೩೪೧) ಜನೇಶ್ವರಃ – ಜನರ ಈಶ್ವರನು. (೩೪೨) ಅನುಕೂಲಃ – ಅನುಕೂಲನು; ಎಲ್ಲವನ್ನೂ ಒದಗಿಸಿಕೊಡುವವನು. (೩೪೩) ಶತಾವರ್ತಃ – ನೂರಾರು ಬಾರಿ ಹುಟ್ಟಿಬರುವವನು. (೩೪೪) ಪದ್ಮೀ – ಪದ್ಮವನ್ನು ಹಿಡಿದವನು. (೩೪೫) ಪದ್ಮನಿಭೇಕ್ಷಣಃ – ಪದ್ಮದಂತಹ ಕಣ್ಣುಗಳುಳ್ಳವನು.

13135051a ಪದ್ಮನಾಭೋಽರವಿಂದಾಕ್ಷಃ ಪದ್ಮಗರ್ಭಃ ಶರೀರಭೃತ್।
13135051c ಮಹರ್ದ್ಧಿರೃದ್ಧೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ।।

(೩೪೬) ಪದ್ಮನಾಭಃ – ಪದ್ಮವೇ ನಾಭವನ್ನಾಗುಳ್ಳವನು. (೩೪೭) ಅರವಿಂದಾಕ್ಷಃ – ಕಮಲದಂಥಹ ಕಣ್ಣುಗಳುಳ್ಳವನು. (೩೪೮) ಪದ್ಮಗರ್ಭಃ – ಪದ್ಮವನ್ನು ಹುಟ್ಟಿಸಿದವನು. (೩೪೯) ಶರೀರಭೃತ್ – ಶರೀರವನ್ನು ಪೊರೆಯುವವನು. (೩೫೦) ಮಹರ್ದ್ಧಿಃ – ಅತ್ಯಂತ ಕಾಂತಿಯುಕ್ತನು. (೩೫೧) ಋದ್ಧಃ – ವಿಶಾಲವಾಗಿ ಹರಡಿಕೊಂಡಿರುವವನು. (೩೫೨) ವೃದ್ಧಾತ್ಮಾ – ಪುರಾತನ ಆತ್ಮನು. (೩೫೩) ಮಹಾಕ್ಷಃ – ವಿಶಾಲವಾದ ಕಣ್ಣುಗಳುಳ್ಳವನು. (೩೫೪) ಗರುಡಧ್ವಜಃ – ಧ್ವಜದಲ್ಲಿ ಗರುಡನನ್ನು ಹೊಂದಿರುವವನು.

13135052a ಅತುಲಃ ಶರಭೋ ಭೀಮಃ ಸಮಯಜ್ಞೋ ಹವಿರ್ಹರಿಃ।
13135052c ಸರ್ವಲಕ್ಷಣಲಕ್ಷಣ್ಯೋ ಲಕ್ಷ್ಮೀವಾನ್ಸಮಿತಿಂಜಯಃ।।

(೩೫೫) ಅತುಲಃ – ಸರಿಸಾಟಿಯಿಲ್ಲದವನು. (೩೫೬) ಶರಭಃ – ಅಂತರಾತ್ಮನು. (೩೫೭) ಭೀಮಃ – ಭಯಂಕರನಾದವನು. (೩೫೮) ಸಮಯಜ್ಞಃ – ಶಾಸ್ತ್ರಗಳನ್ನು ತಿಳಿದವನು. (೩೫೯) ಹವಿರ್ಹರಿಃ – ಹವಿಸ್ಸುಗಳನ್ನು ಸ್ವೀಕರಿಸುವವನು. (೩೬೦) ಸರ್ವಲಕ್ಷಣಲಕ್ಷಣ್ಯಃ – ಎಲ್ಲ ಲಕ್ಷಣಗಳೂ ಒಂದನ್ನೇ ಸೂಚಿಸುವವನು. (೩೬೧) ಲಕ್ಷ್ಮೀವಾನ್ – ಲಕ್ಷ್ಮೀವಂತನು. (೩೬೨) ಸಮಿತಿಂಜಯಃ – ಯುದ್ಧದಲ್ಲಿ ಜಯವನ್ನೇ ಗಳಿಸುವವನು.

13135053a ವಿಕ್ಷರೋ ರೋಹಿತೋ ಮಾರ್ಗೋ ಹೇತುರ್ದಾಮೋದರಃ ಸಹಃ।
13135053c ಮಹೀಧರೋ ಮಹಾಭಾಗೋ ವೇಗವಾನಮಿತಾಶನಃ।।

(೩೬೩) ವಿಕ್ಷರಃ – ನಾಶವಾಗದೇ ಇರುವವನು. (೩೬೪) ರೋಹಿತಃ – ಕೆಂಪುಬಣ್ಣದವನು. (೩೬೫) ಮಾರ್ಗಃ – ಮಾರ್ಗನು. (೩೬೬) ಹೇತುಃ – ಕಾರಣನು. (೩೬೭) ದಾಮೋದರಃ – ಶಿಸ್ತಿನಿಂದ ತಿಳಿಯಲ್ಪಡುವವನು. (೩೬೮) ಸಹಃ - ಎಲ್ಲವನ್ನೂ ಸಹಿಸಿಕೊಳ್ಳುವವನು. (೩೬೯) ಮಹೀಧರಃ – ಭೂಮಿಯನ್ನು ಹೊತ್ತವನು. (೩೭೦) ಮಹಾಭಾಗಃ – ಮಹಾಭಾಗ್ಯವಂತನು. (೩೭೧) ವೇಗವಾನಃ – ವೇಗವಂತನು. (೩೭೨) ಅಮಿತಾಶನಃ – ಅತಿಯಾದ ಹಸಿವೆಯುಳ್ಳವನು.

13135054a ಉದ್ಭವಃ ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ।
13135054c ಕರಣಂ ಕಾರಣಂ ಕರ್ತಾ ವಿಕರ್ತಾ ಗಹನೋ ಗುಹಃ।।

(೩೭೩) ಉದ್ಭವಃ – ಎಲ್ಲಕ್ಕೂ ಮೂಲಕಾರಣನು. (೩೭೪) ಕ್ಷೋಭಣಃ – ಕ್ಷೋಭೆಗೊಳಿಸುವವನು. (೩೭೫) ದೇವಃ – ದೇವನು. (೩೭೬) ಶ್ರೀಗರ್ಭಃ – ಶ್ರೀಯನ್ನು ತನ್ನಲ್ಲಿಯೇ ಇರಿಸಿಕೊಂಡವನು. (೩೭೭) ಪರಮೇಶ್ವರಃ – ಪರಮೇಶ್ವರನು. (೩೭೮) ಕರಣಂ – ಕರ್ಮಗಳನ್ನು ಮಾಡುವುದಕ್ಕೆ ಸಾಧನನು. (೩೭೯) ಕಾರಣಂ – ಕರ್ಮಗಳನ್ನು ಮಾಡುವುದಕ್ಕೆ ಕಾರಣನು. (೩೮೦) ಕರ್ತಾ – ಕರ್ಮಗಳನ್ನು ಮಾಡುವವನು. (೩೮೧) ವಿಕರ್ತಾ – ವಿಚಿತ್ರ ವಿಶ್ವವನ್ನು ಮಾಡಿದವನು. (೩೮೨) ಗಹನಃ – ಆಳವಾಗುಳ್ಳವನು. (೩೮೩) ಗುಹಃ – ಗುಪ್ತನಾಗಿರುವವನು.

13135055a ವ್ಯವಸಾಯೋ ವ್ಯವಸ್ಥಾನಃ ಸಂಸ್ಥಾನಃ ಸ್ಥಾನದೋ ಧ್ರುವಃ।
13135055c ಪರರ್ದ್ಧಿಃ ಪರಮಃ ಸ್ಪಷ್ಟಸ್ತುಷ್ಟಃ ಪುಷ್ಟಃ ಶುಭೇಕ್ಷಣಃ।।

(೩೮೪) ವ್ಯವಸಾಯಃ – ನಿರ್ಧಾರವುಳ್ಳವನು. (೩೮೫) ವ್ಯವಸ್ಥಾನಃ – ಎಲ್ಲವಕ್ಕೂ ಅಳಪಾಯನು. (೩೮೬) ಸಂಸ್ಥಾನಃ – ಕೊನೆಯದಾದ ತಾಣನು. (೩೮೭) ಸ್ಥಾನದಃ – ಉತ್ತಮ ಸ್ಥಾನವನ್ನು ಕೊಡುವವನು. (೩೮೮) ಧ್ರುವಃ – ನಿಶ್ಚಯ ಸ್ಥಾನದಲ್ಲಿರುವವನು. (೩೮೯) ಪರರ್ದ್ಧಿಃ – ಪರಮ ಅವತಾರನು. (೩೯೦) ಪರಮಸ್ಪಷ್ಟಃ – ಶ್ರೇಷ್ಠ ಸ್ಪಷ್ಟನಾದವನು. (೩೯೧) ತುಷ್ಟಃ – ಸಂತುಷ್ಟನಾದವನು. (೩೯೨) ಪುಷ್ಟಃ – ಪುಷ್ಟನಾದವನು. (೩೯೩) ಶುಭೇಕ್ಷಣಃ – ಶುಭಕಣ್ಣುಗಳುಳ್ಳವನು.

13135056a ರಾಮೋ ವಿರಾಮೋ ವಿರತೋ ಮಾರ್ಗೋ ನೇಯೋ ನಯೋಽನಯಃ।
13135056c ವೀರಃ ಶಕ್ತಿಮತಾಂ ಶ್ರೇಷ್ಠೋ ಧರ್ಮೋ ಧರ್ಮವಿದುತ್ತಮಃ।।

(೩೯೪) ರಾಮಃ – ಆನಂದವನ್ನೀಯುವವನು. (೩೯೫) ವಿರಾಮಃ – ಗುರಿಯು. (೩೯೬) ವಿರತಃ – ಕಾಮರಹಿತನು. (೩೯೭) ಮಾರ್ಗಃ – ಮಾರ್ಗವು. (೩೯೮) ನೇಯಃ – ಕರೆದುಕೊಂಡು ಹೋಗುವವನು. (೩೯೯) ನಯಃ – ನಾಯಕನು. (೪೦೦) ಅನಯಃ – ಯಾರಿಂದಲೂ ಕರೆದುಕೊಂಡುಹೋಗಲ್ಪಡದವನು. (೪೦೧) ವೀರಃ – ವೀರನು. (೪೦೨) ಶಕ್ತಿಮತಾಂ ಶ್ರೇಷ್ಠಃ – ಶಕ್ತಿವಂತರಲ್ಲಿ ಶ್ರೇಷ್ಠನು. (೪೦೩) ಧರ್ಮಃ – ಧರ್ಮನು. (೪೦೪) ಧರ್ಮವಿದುತ್ತಮಃ – ಧರ್ಮವಿದುಗಳಲ್ಲಿ ಉತ್ತಮನು.

13135057a ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪೃಥುಃ।
13135057c ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ।।

(೪೦೫) ವೈಕುಂಠಃ – ಉಳಿಸುವವನು; ಕೆಟ್ಟದಾರಿಗೆ ಹೋಗುವುದರಿಂದ ಉಳಿಸುವವನು. (೪೦೬) ಪುರುಷಃ – ಮೊದಲನೆಯ ವ್ಯಕ್ತಿಯು. (೪೦೫) ಪ್ರಾಣಃ – ಪ್ರಾಣ; ಜೀವನು (೪೦೮) ಪ್ರಾಣದಃ – ಪ್ರಾಣವನ್ನು ನೀಡುವವನು. (೪೦೯) ಪ್ರಣವಃ – ಸ್ತುತಿಯು. (೪೧೦) ಪೃಥುಃ – ಅತಿದೊಡ್ಡ, ವಿಶಾಲನಾದವನು. (೪೧೧) ಹಿರಣ್ಯಗರ್ಭಃ – ಹಿರಣ್ಯವನ್ನು ಗರ್ಭದಲ್ಲಿಟ್ಟುಕೊಂಡವನು. (೪೧೨) ಶತ್ರುಘ್ನಃ – ಶತ್ರುಗಳನ್ನು ಸಂಹರಿಸುವವನು. (೪೧೩) ವ್ಯಾಪ್ತಃ – ಪಸರಿಸಿಕೊಂಡಿರುವವನು. (೪೧೪) ವಾಯುಃ – ವಾಯುವು. (೪೧೫) ಅಧೋಕ್ಷಜಃ – ಕಡಿಮೆಯಾಗದ ಶಕ್ತಿಯುಳ್ಳವನು.

13135058a ಋತುಃ ಸುದರ್ಶನಃ ಕಾಲಃ ಪರಮೇಷ್ಠೀ ಪರಿಗ್ರಹಃ।
13135058c ಉಗ್ರಃ ಸಂವತ್ಸರೋ ದಕ್ಷೋ ವಿಶ್ರಾಮೋ ವಿಶ್ವದಕ್ಷಿಣಃ।।

(೪೧೬) ಋತುಃ – ಋತುವು(೪೧೭) ಸುದರ್ಶನಃ – ಸುಂದರವಾಗಿ ಕಾಣುವವನು; ಸುದರ್ಶನ ಚಕ್ರ. (೪೧೮) ಕಾಲಃ – ಕಾಲ. (೪೧೯) ಪರಮೇಷ್ಠಿಃ – ಅತ್ಯಂತ ಕೀರ್ತಿಯುಳ್ಳವನು. (೪೨೦) ಪರಿಗ್ರಹಃ – ಸ್ವೀಕರಿಸುವವನು. (೪೨೧) ಉಗ್ರಃ – ಉಗ್ರನಾದವನು. (೪೨೨) ಸಂವತ್ಸರಃ – ಸಂವತ್ಸರ; ವರ್ಷ. (೪೨೩) ದಕ್ಷಃ – ದಕ್ಷನಾದವನು; ಪ್ರಜಾಪತಿ ದಕ್ಷ. (೪೨೪) ವಿಶ್ರಾಮಃ – ವಿಶ್ರಮಿಸಿರುವವನು. (೪೨೫) ವಿಶ್ವದಕ್ಷಿಣಃ – ಅತ್ಯಂತ ಕುಶಲಿಯಾದವನು.

13135059a ವಿಸ್ತಾರಃ ಸ್ಥಾವರಃ ಸ್ಥಾಣುಃ ಪ್ರಮಾಣಂ ಬೀಜಮವ್ಯಯಮ್।
13135059c ಅರ್ಥೋಽನರ್ಥೋ ಮಹಾಕೋಶೋ ಮಹಾಭೋಗೋ ಮಹಾಧನಃ।।

(೪೨೬) ವಿಸ್ತಾರಃ – ವಿಸ್ತರಿಸಿದವನು. (೪೨೭) ಸ್ಥಾವರಸ್ಥಾಣುಃ – ಒಂದೇಕಡೆ ನೆಲೆಸಿರುವವನು; ಅಲುಗಾಡದವನು. (೪೨೮) ಪ್ರಮಾಣಂ – ಪ್ರಮಾಣ, ಸಾಕ್ಷಿ. (೪೨೯) ಬೀಜಮವ್ಯಯಂ – ಅವ್ಯಯವಾದ ಬೀಜ. (೪೩೦) ಅರ್ಥಃ – ಎಲ್ಲರಿಗೂ ಬೇಕಾದವನು. (೪೩೧) ಅನರ್ಥಃ – ಬೇಕಾದುದೇನೂ ಇಲ್ಲದವನು. (೪೩೨) ಮಹಾಕೋಶಃ – ಮಹಾಕೋಶಗಳುಳ್ಳವನು; ಆವರಣಗಳುಳ್ಳವನು. (೪೩೩) ಮಹಾಭೋಗಃ – ಮಹಾಭೋಗಿ. (೪೩೪) ಮಹಾಧನಃ – ಮಹಾಧನವುಳ್ಳವನು.

13135060a ಅನಿರ್ವಿಣ್ಣಃ ಸ್ಥವಿಷ್ಠೋ ಭೂರ್ಧರ್ಮಯೂಪೋ ಮಹಾಮಖಃ।
13135060c ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ ಕ್ಷಾಮಃ ಸಮೀಹನಃ।।

(೪೩೫) ಅನಿರ್ವಿಣ್ಣಃ – ಎಲ್ಲ ಕಾಮಗಳನ್ನೂ ಪೂರೈಸಿದುದರಿಂದ ದುಃಖವೇ ಇಲ್ಲದಿರುವವನು. (೪೩೬) ಸ್ಥವಿಷ್ಠಃ – ವಿಶ್ವದಷ್ಟೇ ಮಹತ್ತರನಾದವನು. (೪೩೭) ಅಭೂಃ – ಹುಟ್ಟದೇ ಇದ್ದವನು. (೪೩೮) ಧರ್ಮಯೂಪಃ – ಧರ್ಮವನ್ನು ಕಟ್ಟಿಹಾಕಿದ ಕಂಬ. (೪೩೯) ಮಹಾಮಖಃ – ಮಹಾಯಜ್ಞ. (೪೪೦) ನಕ್ಷತ್ರನೇಮಿಃ – ನಕ್ಷತ್ರಗಳ ನಾಭಿ. (೪೪೧) ನಕ್ಷತ್ರೀ – ನಕ್ಷತ್ರಗಳ ಒಡೆಯ, ಚಂದ್ರ. (೪೪೨) ಕ್ಷಮಃ – ಸಮರ್ಥ. (೪೪೩) ಕ್ಷಾಮಃ – ಕೊನೆಯಲ್ಲಿ ಉಳಿಯುವವನು. (೪೪೪) ಸಮೀಹನಃ – ಒಳ್ಳೆಯದನ್ನೇ ಬಯಸುವವನು.

13135061a ಯಜ್ಞ ಇಜ್ಯೋ ಮಹೇಜ್ಯಶ್ಚ ಕ್ರತುಃ ಸತ್ರಂ ಸತಾಂ ಗತಿಃ।
13135061c ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನಮುತ್ತಮಮ್।।

(೪೪೫) ಯಜ್ಞಃ – ಯಜ್ಞ. (೪೪೬) ಇಜ್ಯಃ – ಯಜ್ಞದ ವಿಷಯ. (೪೪೭) ಮಹೇಜ್ಯಃ – ಯಜ್ಞದ ಮಹಾವಿಷಯ. (೪೪೮) ಕ್ರತುಃ – ಯಜ್ಞ ಸಮಾರಾಧನೆ. (೪೪೯) ಸತ್ರಂ – ದೀರ್ಘಕಾಲದ ಯಜ್ಞ. (೪೫೦) ಸತಾಂ ಗತಿಃ – ಉತ್ತಮರ ಗುರಿ, ಮಾರ್ಗ. (೪೫೧) ಸರ್ವದರ್ಶೀ – ಎಲ್ಲವನ್ನೂ ಕಾಣುವವನು. (೪೫೨) ವಿಮುಕ್ತಾತ್ಮಾ – ಸ್ವತಂತ್ರ ಆತ್ಮ. (೪೫೩) ಸರ್ವಜ್ಞಃ – ಎಲ್ಲವನ್ನೂ ತಿಳಿದವನು. (೪೫೪) ಜ್ಞಾನಮುತ್ತಮಂ – ಉತ್ತಮ ಜ್ಞಾನವು.

13135062a ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್।
13135062c ಮನೋಹರೋ ಜಿತಕ್ರೋಧೋ ವೀರಬಾಹುರ್ವಿದಾರಣಃ।।

(೪೫೫) ಸುವ್ರತಃ – ಉತ್ತಮ ವ್ರತವುಳ್ಳವನು. (೪೫೬) ಸುಮುಖಃ – ಸುಂದರ ಮುಖವುಳ್ಳವನು. (೪೫೭) ಸೂಕ್ಷ್ಮಃ – ಸೂಕ್ಷ್ಮವಾದವನು. (೪೫೮) ಸುಘೋಷಃ – ಶುಭ ಶಬ್ದವುಳ್ಳವನು. (೪೫೯) ಸುಖದಃ – ಸುಖವನ್ನು ಕೊಡುವವನು. (೪೬೦) ಸುಹೃತ್ – ಸ್ನೇಹಿತನು. (೪೬೧) ಮನೋಹರಃ – ಮನಸ್ಸನ್ನು ಸೂರೆಗೈಯುವವನು. (೪೬೨) ಜಿತಕ್ರೋಧಃ – ಕ್ರೋಧವನ್ನು ಗೆದ್ದವನು. (೪೬೩) ವೀರಬಾಹುಃ – ವೀರಬಾಹುವು. (೪೬೪) ವಿದಾರಣಃ – ನಾಶಗೊಳಿಸುವವನು.

13135063a ಸ್ವಾಪನಃ ಸ್ವವಶೋ ವ್ಯಾಪೀ ನೈಕಾತ್ಮಾ ನೈಕಕರ್ಮಕೃತ್।
13135063c ವತ್ಸರೋ ವತ್ಸಲೋ ವತ್ಸೀ ರತ್ನಗರ್ಭೋ ಧನೇಶ್ವರಃ।।

(೪೬೫) ಸ್ವಾಪನಃ – ಮೂರ್ಛೆಗೊಳಿಸುವವನು. (೪೬೬) ಸ್ವವಶಃ – ಸ್ವತಂತ್ರನಾದವನು. (೪೬೭) ವ್ಯಾಪೀ – ಎಲ್ಲೆಲ್ಲಿಯೂ ವ್ಯಾಪಿಸಿಕೊಂಡಿರುವವನು. (೪೬೮) ನೈಕಾತ್ಮಾ – ಅನೇಕ ರೂಪಗಳುಳ್ಳವನು. (೪೬೯) ನೈಕಕರ್ಮಕೃತ್ – ಅನೇಕ ಕರ್ಮಗಳನ್ನು ಮಾಡುವವನು. (೪೭೦) ವತ್ಸರಃ – ಎಲ್ಲರಿಗೂ ನೆಲೆಯಾದವನು. (೪೭೧) ವತ್ಸಲಃ – ವಾತ್ಸಲ್ಯವುಳ್ಳವನು. (೪೭೨) ವತ್ಸೀ – ಜನರನ್ನು ರಕ್ಷಿಸುವವನು. (೪೭೩) ರತ್ನಗರ್ಭಃ – ರತ್ನಗಳನ್ನು ತನ್ನಲ್ಲಿಯೇ ಇಟ್ಟುಕೊಂಡಿರುವವನು. (೪೭೪) ಧನೇಶ್ವರಃ – ಧನಗಳಿಗೆ ಈಶ್ವರ.

13135064a ಧರ್ಮಗುಪ್ಧರ್ಮಕೃದ್ಧರ್ಮೀ ಸದಸತ್ಕ್ಷರಮಕ್ಷರಮ್।
13135064c ಅವಿಜ್ಞಾತಾ ಸಹಸ್ರಾಂಶುರ್ವಿಧಾತಾ ಕೃತಲಕ್ಷಣಃ।।

(೪೭೫) ಧರ್ಮಗುಪ್ – ಧರ್ಮವನ್ನು ರಕ್ಷಿಸುವವನು. (೪೭೬) ಧರ್ಮಕೃತ್ – ಧಾರ್ಮಿಕವಾದುದನ್ನೇ ಮಾಡುವವನು. (೪೭೭) ಧರ್ಮೀ – ಧರ್ಮದಿಂದಿರುವವನು. (೪೭೮) ಸತ್ – ಇರುವವನು. (೪೭೯) ಅಸತ್ – ಇಲ್ಲದಿರುವವನು. (೪೮೦) ಕ್ಷರಃ – ಕ್ಷೀಣಿಸುವವುಗಳಲ್ಲಿಯೂ ಇರುವವನು. (೪೮೧) ಅಕ್ಷರಃ – ಕ್ಷೀಣಿಸದವನು. (೪೮೨) ಅವಿಜ್ಞಾತಃ – ತಿಳಿಯಲಿಕ್ಕಾಗದವನು. (೪೮೩) ಸಹಸ್ರಾಂಶುಃ – ಸಹಸ್ರ ಕಿರಣಗಳುಳ್ಳವನು. (೪೮೪) ವಿಧಾತಾ – ಎಲ್ಲವನ್ನೂ ಸಲಹುವವನು. (೪೮೫) ಕೃತಲಕ್ಷಣಃ – ಸದಾ ಇರುವ ಚೇತನನು.

13135065a ಗಭಸ್ತಿನೇಮಿಃ ಸತ್ತ್ವಸ್ಥಃ ಸಿಂಹೋ ಭೂತಮಹೇಶ್ವರಃ।
13135065c ಆದಿದೇವೋ ಮಹಾದೇವೋ ದೇವೇಶೋ ದೇವಭೃದ್ಗುರುಃ।।

(೪೮೬) ಗಭಸ್ತಿನೇಮಿಃ – ಆಕಾಶದ ಮಧ್ಯದಲ್ಲಿರುವವನು. (೪೮೭) ಸತ್ತ್ವಸ್ಥಃ – ಸತ್ತ್ವದಲ್ಲಿಯೇ ಇರುವವನು. (೪೮೮) ಸಿಂಹಃ – ಸಿಂಹ. (೪೮೯) ಭೂತಮಹೇಶ್ವರಃ – ಇರುವವುಗಳಿಗೆಲ್ಲ ಮಹಾ ಒಡೆಯ. (೪೯೦) ಆದಿದೇವಃ – ಮೊದಲ ದೇವ. (೪೯೧) ಮಹಾದೇವಃ – ಮಹಾದೇವ. (೪೯೨) ದೇವೇಶಃ – ದೇವತೆಗಳ ಒಡೆಯ. (೪೯೩) ದೇವಭೃದ್ಗುರುಃ – ದೇವೇಂದ್ರನ ಒಡೆಯ.

13135066a ಉತ್ತರೋ ಗೋಪತಿರ್ಗೋಪ್ತಾ ಜ್ಞಾನಗಮ್ಯಃ ಪುರಾತನಃ।
13135066c ಶರೀರಭೂತಭೃದ್ಭೋಕ್ತಾ ಕಪೀಂದ್ರೋ ಭೂರಿದಕ್ಷಿಣಃ।।

(೪೯೪) ಉತ್ತರಃ25 – ಎಲ್ಲರಿಗಿಂತಲೂ ಶ್ರೇಷ್ಠನಾದವನು; ಎಲ್ಲವನ್ನೂ ದಾಟಿದವನು ಮತ್ತು ದಾಟಿಸುವವನು; ಜನ್ಮಸಂಸಾರಬಂಧನವನ್ನು ದಾಟಿದವನು; ಬ್ರಹ್ಮಾದಿಗಳನ್ನೂ ಆಪತ್ತಿನಿಂದ ದಾಟಿಸುವವನು. (೪೯೫) ಗೋಪತಿಃ – ಧೇನುಗಳಿಗೆ, ಭೂಮಿಗೆ ಅಥವಾ ವಾಣಿಗೆ ಸ್ವಾಮಿಯು; ಸೂರ್ಯರೂಪಿಯು; ಛಂದಸ್ಸು, ಭಾಷೆ ಮತ್ತು ವೇದಗಳ ವಾಣಿಗಳನ್ನು ನಿರ್ವಹಿಸುವ ಸ್ವಾಮಿಯು26. (೪೯೬) ಗೋಪ್ತಾ – ಸಂರಕ್ಷಕ; ಸಮಸ್ತ ವಿದ್ಯೆಗಳನ್ನೂ ಪಾಲಿಸುವವನು27. (೪೯೭) ಜ್ಞಾನಗಮ್ಯಃ – ಜ್ಞಾನದಿಂದ ತಿಳಿಯಲ್ಪಡುವವನು; ಪರವಿದ್ಯೆಯ ಸಮಾಧಿಯಿಂದ ಹೊಂದಲ್ಪಡುವವನು28. (೪೯೮) ಪುರಾತನಃ – ಅತ್ಯಂತ ಪ್ರಾಚೀನನಾದವನು; ಕಾಲಪರಿಚ್ಛೇದರಹಿತನಾದುದರಿಂದ ಎಲ್ಲರಿಗಿಂತಲೂ ಹಿಂದೆಯೂ ಇದ್ದವನು; ಪ್ರತಿಕಲ್ಪದಲ್ಲಿಯೂ ವಿದ್ಯೆಯನ್ನು ಬೆಳಗಿಸುವವನು29. (೪೯೯) ಶರೀರಭೂತಭೃದ್ – ಶರೀರದ ಉತ್ಪಾದಕ ಪಂಚಭೂತಗಳನ್ನು ಪ್ರಾಣರೂಪದಿಂದ ಪಾಲಿಸುವವನು. (೫೦೦) ಭೋಕ್ತಾ – ಭೋಗಿಸುವವನು. (೫೦೧) ಕಪೀಂದ್ರಃ – ಕಪಿಗಳ ಸ್ವಾಮೀ ಶ್ರೀರಾಮ. (೫೦೨) ಭೂರಿದಕ್ಷಿಣಃ – ಶ್ರೀರಾಮಾದಿ ಅವತಾರಗಳಲ್ಲಿ ಅನೇಕ ದಕ್ಷಿಣೆಗಳನ್ನಿತ್ತು ಯಜ್ಞ-ಯಾಗಾದಿಗಳನ್ನು ಮಾಡಿದವನು.

13135067a ಸೋಮಪೋಽಮೃತಪಃ ಸೋಮಃ ಪುರುಜಿತ್ಪುರುಸತ್ತಮಃ।
13135067c ವಿನಯೋ ಜಯಃ30 ಸತ್ಯಸಂಧೋ ದಾಶಾರ್ಹಃ ಸಾತ್ವತಾಂ ಪತಿಃ।।

(೫೦೩) ಸೋಮಪಃ31 – ಯಜ್ಞಗಳಲ್ಲಿ ದೇವರೂಪದಲ್ಲಿ ಮತ್ತು ಯಜಮಾನನ ರೂಪದಲ್ಲಿ ಸೋಮರಸವನ್ನು ಕುಡಿಯುವವನು32 (೫೦೪) ಅಮೃತಪಃ33 – ಅಮೃತವನ್ನು ಕುಡಿದವನು; ಸಮುದ್ರಮಥನದಲ್ಲಿ ಹುಟ್ಟಿದ ಅಮೃತವನ್ನು ಅಸುರರಿಂದ ರಕ್ಷಿಸಿದವನು (೫೦೫) ಸೋಮಃ – ಔಷಧಿಗಳನ್ನು ಪೋಷಿಸುವ ಸೋಮದೇವಸ್ವರೂಪನು; ಉಮಾಸಹಿತನಾದ ಶಿವಸ್ವರೂಪನು; ಸೋಮಸ್ವರೂಪಿಯು; ಅಮೃತಸ್ವರೂಪಿಯು; ಓಂಕಾರ ಸಹಿತನಾದವನು. (೫೦೬) ಪುರುಜಿತ್34 – ಅನೇಕ ಜನರನ್ನು ಗೆದ್ದವನು. (೫೦೭) ಪುರುಸತ್ತಮಃ35 – ಬಹುರೂಪೀ ಮತ್ತು ಶ್ರೇಷ್ಠನು. (೫೦೮) ವಿನಯಃ36 – ಪರಾಕ್ರಮದಿಂದ ದಮನಮಾಡುವವನು. (೫೦೯) ಜಯಃ37 – ಜಯರೂಪಿಯು, ಎಲ್ಲವನ್ನೂ ಜಯಿಸಿದವನು. (೫೧೦) ಸತ್ಯಸಂಧಃ38 – ಸತ್ಯ ಸಂಕಲ್ಪ ಮತ್ತು ಪ್ರತಿಜ್ಞೆಗಳನ್ನುಳ್ಳವನು. (೫೧೧) ದಾಶಾರ್ಹಃ39 – ದಶಾರ್ಹಕುಲದಲ್ಲಿ ಹುಟ್ಟಿದವನು, ಶ್ರೀ ಕೃಷ್ಣ. (೫೧೨) ಸಾತ್ವತಾಂ ಪತಿಃ40 – ಸಾತ್ವತವಂಶದ ಯಾದವರಿಗೆ ಅಥವಾ ಸಾತ್ವತಪಂಥದವರಗೆ ಸ್ವಾಮಿಯಾದವನು.

13135068a ಜೀವೋ ವಿನಯಿತಾ ಸಾಕ್ಷೀ ಮುಕುಂದೋಽಮಿತವಿಕ್ರಮಃ।
13135068c ಅಂಭೋನಿಧಿರನಂತಾತ್ಮಾ ಮಹೋದಧಿಶಯೋಽಂತಕಃ।।

(೫೧೩) ಜೀವಃ41 – ಚೈತನ್ಯಸ್ವರೂಪೀ, ಪ್ರಾಣದಾಯಕ; ಕ್ಷೇತ್ರಜ್ಞ ರೂಪದಿಂದ ಪ್ರಾಣಗಳನ್ನು ಧರಿಸಿರುವವನು; ಭಕ್ತರನ್ನು ಆತ್ಮನಾಶದಿಂದ ತಪ್ಪಿಸಿ ತನ್ನ ಸೇವೆಯಿಂದ ಉಜ್ಜೀವನಗೊಳಿಸುವವನು. (೫೧೪) ವಿನಯಿತಾಸಾಕ್ಷೀ – ವಿನಯವನ್ನುಂಟುಮಾಡುವವನು; ಎಲ್ಲವನ್ನೂ ಸಾಕ್ಷಾತ್ತಾಗಿ ನೋಡುವವನು; ಸಾಕ್ಷಿಯಾಗದೇ ಇರುವವನು; ವಿನಯತ್ವವನ್ನು ಸಾಕ್ಷಾತ್ತಾಗಿ ನೋಡುವವನು. (೫೧೫) ಮುಕುಂದಃ – ಮುಕ್ತಿಯನ್ನು ಕೊಡುವವನು. (೫೧೬) ಅಮಿತವಿಕ್ರಮಃ – ಅಳೆಯಲಾಗದ ಶೌರ್ಯವುಳ್ಳವನು; ಮೂರು ದೊಡ್ಡ ಪಾದವಿನ್ಯಾಸಗಳುಳ್ಳವನು; ಗರುಡನಿಂದ ಸಂಪೂರ್ಣವಾಗಿ ಅರಿಯಲ್ಪಟ್ಟವನು, ಗರುಡನ ಮೂಲಕ ಸಂಚರಿಸುವವನು. (೫೧೭) ಅಂಭೋನಿಧಿಃ – ಸಾಗರ ಸ್ವರೂಪಿಯು, ಸಾಗರದಂತೆ ಇರುವವನು; ಪಾತಾಲಜಲದಲ್ಲಿ ಅಖಿಲಜಗತ್ತಿಗೆ ಆಧಾರಪೀಠವಾದ ಕೂರ್ಮರೂಪದಿಂದ ತನ್ನನ್ನು ಇರಿಸಿಕೊಂಡವನು. (೫೧೮) ಅನಂತಾತ್ಮಾ – ಪರಿಚ್ಛೇದರಹಿತ ಸ್ವರೂಪವುಳ್ಳವನು; ದೇಶ, ಕಾಲ ಮತ್ತು ವಸ್ತುಗಳ ಪರಿಚ್ಛೇದವಿಲ್ಲದವನು; ಜಗತ್ತಿನ ಆಧಾರಸ್ತಂಭವಾದ ಅನಂತನಾಗನಿಗೆ ಆತ್ಮನಾಗಿರುವವನು; ಅಪರಿಮಿತ ದೇಹವುಳ್ಳವನು; ಬಂಧವಿಲ್ಲದ ಆತ್ಮನು; ಅನಂತ ಸಂಖ್ಯೆಯ ಮುಕ್ತಾತ್ಮರಿಗೆ ಸ್ವಾಮಿಯು; ಆದಿಶೇಷನಲ್ಲಿ ದೇಹವುಳ್ಳವನು. (೫೧೯) ಮಹೋದಧಿಶಯಃ42 – ಪ್ರಳಯಸಮುದ್ರದಲ್ಲಿ ಪವಡಿಸಿರುವವನು; ಪಾಲ್ಗಡಲಲ್ಲಿ ಪವಡಿಸಿರುವವನು; ಸಮಸ್ತಭೂತಗಳನ್ನೂ ಸಂಹರಿಸಿ ಜಗತ್ತೆಲ್ಲವನ್ನೂ ಜಲಮಯವನ್ನಾಗಿಸಿ ಆ ಮಹಾಸಮುದ್ರದಲ್ಲಿ ಶಯನಿಸಿರುವವನು; ಉತ್ಕೃಷ್ಟನಾದ ದಧಿಶಯನನು; ವಾಮನ, ಕೃಷ್ಣಾದಿ ರೂಪಗಳಲ್ಲಿ ಮೊಸರಿನಲ್ಲಿ ಇರಿಸಿರುವ ಕೈಗಳುಳ್ಳವನು. (೫೨೦) ಅಂತಕಃ – ಪ್ರಳಯಕಾಲದಲ್ಲಿ ಸರ್ವಭೂತಗಳನ್ನೂ ಸಂಹರಿಸುವವನು; ಶತ್ರುಸಂಹಾರಕನು; ಎಲ್ಲವನ್ನೂ ನಾಶಪಡಿಸುವವನು; ಜರಾಸಂಧನೇ ಮೊದಲಾದವರಿಂದ ಬಂಧಿತರಾಗಿದ್ದ ರಾಜರಿಗೆ ಸುಖವನ್ನುಂಟುಮಾಡಿದವನು; ರಾಮನ ರೂಪದಲ್ಲಿ ಸಮುದ್ರಜಲವನ್ನು ಬಂಧಿಸಿದವನು.

13135069a ಅಜೋ ಮಹಾರ್ಹಃ ಸ್ವಾಭಾವ್ಯೋ ಜಿತಾಮಿತ್ರಃ ಪ್ರಮೋದನಃ।
13135069c ಆನಂದೋ ನಂದನೋ ನಂದಃ ಸತ್ಯಧರ್ಮಾ ತ್ರಿವಿಕ್ರಮಃ।।

(೫೨೧) ಅಜಃ43 – ಹುಟ್ಟಿಲ್ಲದವನು; ಬ್ರಹ್ಮರೂಪಿಯು; ಕಾಮದೇವನು; ಆಕಾರರೂಪೀ ವಿಷ್ಣವಿನಿಂದ ಹುಟ್ಟಿದವನಾದ್ದರಿಂದ ಅಜನು; ಅಕಾರವಾಚ್ಯನಾಗಿ ಪ್ರಾದುರ್ಭವಿಸಿದವನು. (೫೨೨) ಮಹಾರ್ಹಃ – ಅತ್ಯಂತ ಯೋಗ್ಯನಾದವನು; ಪೂಜೆಗೆ ಯೋಗ್ಯನಾದವನು. (೫೨೩) ಸ್ವಾಭಾವ್ಯಃ – ಸ್ವಾಭಾವಿಕನಾದವನು; ನಿತ್ಯಸಿದ್ಧನು; ಸ್ವಭಾವವಾಗಿಯೇ ಉತ್ಪತ್ತಿಯಿಲ್ಲದವನು; ಸ್ವತಂತ್ರನು ಮತ್ತು ಯಾವ ಫಲವೂ ದೊರೆಯಬೇಕಾಗಿಲ್ಲದವನು. (೫೨೪) ಜಿತಾಮಿತ್ರಃ – ಶತ್ರುಗಳನ್ನು ಜಯಿಸಿದವನು; ರಾಗ-ದ್ವೇಷಗಳೇ ಮೊದಲಾದ ಒಳಶತ್ರುಗಳನ್ನೂ ರಾವಣ-ಕುಂಭಕರ್ಣರೇ ಮೊದಲಾದ ಹೊರಶತ್ರುಗಳನ್ನೂ ಗೆದ್ದವನು. (೫೨೫) ಪ್ರಮೋದನಃ – ಪರಮಾನಂದವನ್ನುಂಟುಮಾಡುವವನು; ಸದಾನಂದನಾಗಿರುವವನು; ತನ್ನ ಆತ್ಮಾಮೃತರಸವನ್ನು ಸವಿಯುತ್ತಿರುವುದರಿಂದ ಸದಾ ಆನಂದಿಯಾಗಿರುವವನು; ಧ್ಯಾನಿಸುವವರಿಗೆ ಧ್ಯಾನಮಾತ್ರದಿಂದಲೇ ಪರಮಾನಂದವನ್ನುಂಟುಮಾಡುವವನು; ತನಗೆ ತಾನೇ ಆನಂದಿಸುವವನು; ಜನರನ್ನು ಆನಂದಗೊಳಿಸುವವನು; ಪ್ರಮೋದನಕ್ಕೆ ಅಥವಾ ಪರಮಾನಂದಕ್ಕೆ ಒಯ್ಯುವವನು; ಶ್ರೇಷ್ಠ ರಮಾದೇವಿಯಿಂದ ಕೂಡಿದವನು. (೫೨೬) ಆನಂದಃ – ಆನಂದಸ್ವರೂಪಿಯು; ಆನಂದವುಳ್ಳವನು. (೫೨೭) ನಂದನಃ – ಆನಂದಗೊಳಿಸುವವನು. (೫೨೮) ನಂದಃ – ಸಮೃದ್ಧನಾದವನು; ವಿಷಯಸುಖರಹಿತನಾದವನು; ಅನಂತವಾದ ಭೋಗ್ಯಗಳಿಂದಲೂ, ಭೋಗೋಪಕರಣಗಳಿಂದಲೂ, ಭೋಗಗಳಿಂದಲೂ, ಮತ್ತು ಭೋಕ್ತೃಗಳಿಂದಲೂ ಪರಮಪದದಲ್ಲಿ ಸಮೃದ್ಧನಾಗಿರುವವನು. (೫೨೯) ಸತ್ಯಧರ್ಮಃ44 – ಸತ್ಯವಾದ ಧರ್ಮ-ನಿಯಮಗಳುಳ್ಳವನು; ಪ್ರಾರಂಭದಿಂದ ಹಿಡಿದು ತನ್ನನ್ನು ಹೊಂದುವವರೆಗೂ ಆರ್ಜವದಿಂದ ಕೂಡಿದ ಅಕುಟಿಲ ವೃತ್ತಿಯುಳ್ಳವನು; ಸತ್ಯವಾದ ಜಗತ್ತನ್ನು ಧರಿಸಿರುವವನು. (೫೩೦) ತ್ರಿವಿಕ್ರಮಃ – ಮೂರು ಲೋಕಗಳನ್ನೂ ಅಳೆದು ಮೂರು ಮಹತ್ತಾದ ಪಾದವಿನ್ಯಾಸಗಳುಳ್ಳವನು; ತನ್ನ ಮಹಿಮೆಯಿಂದ ಮೂರು ವೇದಗಳನ್ನೂ ಆಕ್ರಮಿಸಿದವನು; ಮೂರು ಲೋಕಗಳಲ್ಲಿಯೂ ಗರುಡನ ಮೂಲಕವಾಗಿ ಪಾದವಿನ್ಯಾಸಮಾಡುವವನು; ಮೂರು ವೇದಗಳನ್ನೂ, ಕಾಲಗಳನ್ನೂ, ಗುಣಗಳನ್ನೂ, ಲೋಕಗಳನ್ನೂ, ದೇವ-ಮಾನುಷ-ದಾನವರನ್ನೂ, ಚೇತನಾಚೇತನ ಮತ್ತು ದೇಹಾತ್ಮಮಿಶ್ರರಾದವರನ್ನೂ ಆಕ್ರಮಿಸಿದವನು.

13135070a ಮಹರ್ಷಿಃ ಕಪಿಲಾಚಾರ್ಯಃ ಕೃತಜ್ಞೋ ಮೇದಿನೀಪತಿಃ।
13135070c ತ್ರಿಪದಸ್ತ್ರಿದಶಾಧ್ಯಕ್ಷೋ ಮಹಾಶೃಂಗಃ ಕೃತಾಂತಕೃತ್।।

(೫೩೧) ಮಹರ್ಷಿಃ ಕಪಿಲಾಚಾರ್ಯಃ – ನಾರಾಯಣ ಮಹರ್ಷಿ; ಮಹರ್ಷಿ ಕಪಿಲಾಚಾರ್ಯ; ಸಂಪೂರ್ಣವೇದಗಳನ್ನೂ ಅರಿತ, ಮಹರ್ಷಿ, ಸಾಂಖ್ಯದ ಆಚಾರ್ಯ ಕಪಿಲನು; ಮಂತ್ರ-ವೇದಗಳನ್ನು ಸಾಕ್ಷಾತ್ತಾಗಿ ನೋಡಿದ ಮಹರ್ಷಿಯು. (೫೩೨) ಕೃತಜ್ಞಃ – ಭಕ್ತರು ಮಾಡುವ ಸೇವೆಯನ್ನು ತಿಳಿಯುವವನು; ಎಲ್ಲರ ಕರ್ಮಗಳನ್ನು ತಿಳಿಯುವವನು; ಕಾರ್ಯರೂಪವಾದ ಜಗತ್ತೂ ಮತ್ತು ಆತ್ಮನೂ ಆಗಿರುವವನು; ಸಗರನ ಮೊಮ್ಮಗನಾದ ಅಂಶುಮಂತನು ತೋರಿಸಿದ ಅಲ್ಪ ವಿನಯವೆಂಬ ಸುಕೃತವನ್ನೇ ತನ್ನ ಕರುಣೆಯಿಂದ ತಿಳಿದವನು; ಮಾಡಿದ್ದನ್ನು ತಿಳಿಯುವವನು. (೫೩೩) ಮೇದಿನೀಪತಿಃ45 – ಭೂದೇವಿಗೆ ಪತಿಯಾದವನು; ಕಪಿಲರೂಪವನ್ನು ತಾಳಿ ಭೂಮಿಯನ್ನು ಧರಿಸಿರುವವನು; ಭೂಪತಿಯು. (೫೩೪) ತ್ರಿಪದಃ – ಮೂರು ಹೆಜ್ಜೆಗಳುಳ್ಳವನು; ಕಪಿಲರೂಪವನ್ನು ತಾಳಿ ಚಿತ್-ಅಚಿತ್-ಈಶ್ವರಗಳೆಂಬ ತತ್ತ್ವತ್ರಯಗಳಾದ ಮೂರು ಪದಗಳನ್ನು ವ್ಯಕ್ತಪಡಿಸಿದವನು; ಅಕಾರ-ಉಕಾರ-ಮಕಾರಗಳೆಂಬ ಪ್ರಣವದಲ್ಲಿನ ಮೂರು ವಾಚಕಪದವುಳ್ಳವನು; ಯಜ್ಞವರಾಹರೂಪದಲ್ಲಿ ಮೂರು ಹಿಳಲುಗಳುಳ್ಳವನು; ವೈಕುಂಠ-ಶ್ವೇತದ್ವೀಪ-ಕ್ಷೀರಸಮುದ್ರಗಳೆಂಬ ಮೂರು ಸ್ಥಾನಗಳುಳ್ಳವನು; ಮೂರು ಗಾಯತ್ರೀ ಪಾದಗಳಿಂದ ಪ್ರತಿಪಾದಿಸಲ್ಪಟ್ಟವನು; ಮೂರು ಪಾದಗಳಿಂದ ಕಾಪಾಡುವವನು ಅಥವಾ ಜ್ಞಾನವನ್ನು ಕೊಡುವವನು. (೫೩೫) ತ್ರಿದಶಾಧ್ಯಕ್ಷಃ – ದೇವತೆಗಳಿಗೆ ಅಧ್ಯಕ್ಷಸ್ವಾಮಿಯಾದವನು; ಜಾಗ್ರತ್-ಸ್ವಪ್ನ-ಸುಷುಪ್ತಿಗಳೆಂಬ ಮೂರು ಸ್ಥಿತಿಗಳಿಗೆ ಅಧ್ಯಕ್ಷನಾದವನು; ಗುಣಗಳ ಆವೇಶದಿಂದ ಉಂಟಾದ ಜಾಗ್ರತ್ತೇ ಮೊದಲಾದ ಮೂರು ಅವಸ್ಥೆಗಳಿಗೆ ಸಾಕ್ಷಿಯಾಗಿರುವವನು; ಜನ್ಮ-ಸ್ಥಿತಿ-ವಿನಾಶಗಳೆಂಬ ಮೂರು ಸ್ಥಿತಿಗಳಿಗೆ ಅಧ್ಯಕ್ಷನಾದವನು. (೫೩೬) ಮಹಾಶೃಂಗಃ – ಮತ್ಸ್ಯ-ವರಾಹ-ಪ್ರಣವರೂಪಗಳಲ್ಲಿ ದೊಡ್ಡ ಶೃಂಗವುಳ್ಳವನು; ಮತ್ಸ್ಯರೂಪಿಯಾಗಿ ತನ್ನ ದೊಡ್ಡ ಕೊಂಬಿಗೆ ಹಡಗನ್ನು ಕಟ್ಟಿಸಿ ಪ್ರಳಯಸಮುದ್ರದಲ್ಲಿ ಲೀಲೆಯನ್ನು ತೋರಿದವನು; ವರಾಹರೂಪಿಯು; ತನ್ನ ಕೊಂಬಿನ ತುದಿಯಲ್ಲಿ ಭೂಮಿಯನ್ನು ಧರಿಸಿದವನು; ದೊಡ್ಡ ಪ್ರಾಧಾನ್ಯವುಳ್ಳವನು; ದೊಡ್ಡ ಜ್ಞಾನವುಳ್ಳವನು. (೫೩೭) ಕೃತಾಂತಕೃತ್46 – ಸೃಷ್ಟಿಸಲ್ಪಟ್ಟ ಜಗತ್ತನ್ನು ಧ್ವಂಸಮಾಡುವವನು; ಮೃತ್ಯುವನ್ನು ಕೊಡುವವನು; ಮೃತ್ಯುವಿಗೂ ಮೃತ್ಯುವಾದವನು; ಕಾರ್ಯರೂಪವಾದ ಜಗತ್ತನ್ನು ಸಂಹರಿಸುವವನು; ಮೃತ್ಯುವಿಗೆ ಸಮನಾದ ಹಿರಣ್ಯಾಕ್ಷನನ್ನು ಸಂಹರಿಸಿದವನು; ದುಷ್ಕರ್ಮಗಳನ್ನು ನಾಶಮಾಡುವವನು.

13135071a ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ।
13135071c ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರಗದಾಧರಃ।।

(೫೩೮) ಮಹಾವರಾಹಃ47 – ಮಹಾವರಾಹಸ್ವಾಮಿಯು; ಪಾತಾಳದಿಂದ ಭೂಮಿಯನ್ನು ಕ್ಷಣಮಾತ್ರದಲ್ಲಿ ಉದ್ಧಾರಮಾಡಿದ ಮತ್ತು ಎಣೆಯಿಲ್ಲದ ಮಿಗಿಲಿಲ್ಲದ ವರಾಹಸ್ವಾಮಿಯು. (೫೩೯) ಗೋವಿಂದಃ – ಗೋವುಗಳಿಂದ ಹೊಂದಲ್ಪಡುವವನು; ವೇದವಾಣಿಯನ್ನು ತಿಳಿದವನು; ಹಸುಗಳನ್ನು ಪಡೆದವನು; ಹಿಂದೆ ನಷ್ಟವಾಗಿದ್ದ ಭೂಮಿಯನ್ನು ಪಡೆದವನು; ಸಮುದ್ರವನ್ನು ಪಡೆಯುವವನು; ಧೃತರಾಷ್ಟ್ರನಿಗೆ ಕಣ್ಣುಗಳು ಬರುವಂತೆ ಮಾಡಿದವನು. (೫೪೦) ಸುಷೇಣಃ – ಶ್ರೇಷ್ಠವಾದ ಸೇನೆಗಳನ್ನುಳ್ಳವನು; ವಿಷ್ವಕ್ಸೇನನು; ಗಣಪತಿಯು; ವಸು-ರುದ್ರ ಮೊದಲಾದ ಗಣಗಳ ರೂಪದ ಸೇನೆಯುಳ್ಳವನು; ಅತಿಶಯವಾಗಿ ದಾನಮಾಡುವವನು. (೫೪೧) ಕನಕಾಂಗದೀ – ಸುವರ್ಣಮಯ ತೋಳ್ಬಳೆಗಳುಳ್ಳವನು; ಚಿನ್ನದ ಅಂಗದಗಳನ್ನು ಧರಿಸಿರುವವನು. (೫೪೨) ಗುಹ್ಯಃ – ಬುದ್ಧಿಗುಹೆಯಲ್ಲಿ ನಿಗೂಢನಾಗಿರುವವನು; ರಹಸ್ಯವಿದ್ಯೆಯಿಂದ ತಿಳಿಯಲ್ಪಡುವವನು; ಹೃದಯಾಕಾಶದಲ್ಲಿ ನಿಗೂಢನಾಗಿರುವವನು; ಪಂಚೋಪನಿಷತ್ತಿಗೆ ಮಾತ್ರ ವಿಷಯವಾದ ದಿವ್ಯ ಶರೀರದಿಂದ ನಿಗೂಢನಾಗಿರುವವನು; ಗೋಪ್ಯನಾದವನು; ಗುಹನಿಂದ ಪೂಜಿತನಾದವನು. (೫೪೩) ಗಭೀರಃ – ಗಂಭೀರನಾದವನು; ಆಕಾಶದಲ್ಲಿ ಅಡಗಿರುವವನು; ಜ್ಞಾನ-ಐಶ್ವರ್ಯ-ಬಲ-ವೀರ್ಯಗಳಿಂದ ಗಂಭೀರನಾಗಿರುವವನು; ಗತಿ-ದೀಪ್ತಿಗಳುಳ್ಳವನು ಮತ್ತು ಲಕ್ಷ್ಮಿಯೊಡನೆ ರಮಿಸುವವನು; ಅಜ್ಞಾನಿಗಳಿಗೆ ಭಯವನ್ನುಂಟುಮಾಡುವವನು; ಗೋವರ್ಧನ ಪರ್ವತದಿಂದ ಮಳೆಯ ಭಯವನ್ನು ನಾಶಪಡಿಸಿದವನು. (೫೪೪) ಗಹನಃ – ಪ್ರವೇಶಿಸಲು ಕಷ್ಟಸಾಧ್ಯನಾದವನು; ಮೂರು ಅವಸ್ಥೆಗಳ ಭಾವ-ಅಭಾವಗಳಿಗೆ ಸಾಕ್ಷಿಯಾಗಿರುವವನು; ಅಜ್ಞಾನಿಗಳಿಗೆ ಅವಗಾಹನ ಮಾಡಲು ಕಷ್ಟಸಾಧ್ಯನಾಗಿರುವವನು; ಇಂದ್ರನನ್ನು ನಡೆಸುವವನು. (೫೪೫) ಗುಪ್ತಃ – ಗೂಢನಾಗಿರುವವನು; ವಾಕ್ ಮತ್ತು ಮನಸ್ಸುಗಳಿಗೆ ಅಗೋಚರನಾಗಿರುವವನು; ತನ್ನ ಗೌರವವನ್ನು ಬಲ್ಲ ಪೂರ್ವ ಗುರುಗಳಿಂದ ಸುರಕ್ಷಿತನಾಗಿರುವವನು; ಇತರರಿಗೆ ತಿಳಿಯಲು ಅಸಾಧ್ಯನಾಗಿರುವವನು; ಅಯೋಗ್ಯ ಜನರ ವಿಷಯದಲ್ಲಿ ಆವರಣವುಳ್ಳವನು. (೫೪೬) ಚಕ್ರಗದಾಧರಃ – ತತ್ತ್ವರೂಪದ ಸುದರ್ಶನ ಚಕ್ರ ಮತ್ತು ಕೌಮೋದಕೀ ಗದೆಯನ್ನು ಧರಿಸಿದವನು; ಮನಸ್ತತ್ತ್ವರೂಪದ ಚಕ್ರವನ್ನೂ ಬುದ್ಧಿತತ್ತ್ವರೂಪದ ಗದೆಯನ್ನೂ ಧರಿಸಿರುವವನು.

13135072a ವೇಧಾಃ ಸ್ವಾಂಗೋಽಜಿತಃ ಕೃಷ್ಣೋ ದೃಢಃ ಸಂಕರ್ಷಣೋಽಚ್ಯುತಃ।
13135072c ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಾಃ।।

(೫೪೭) ವೇಧಾಃ48 – ಸೃಷ್ಟಿಕರ್ತ, ವಿಧಾನಗಳನ್ನು ಮಾಡುವವನು; ವಿವಿಧ ಅನಂತ ಮಹಾಕಲ್ಯಾಣವನ್ನು ಭಕ್ತರಿಗೆ ಯಾವಾಗಲೂ ಮಾಡುವವನು; ವಿಶೇಷವಾಗಿ ಧಾರಣೆ-ಪೋಷಣೆಗಳನ್ನು ಮಾಡುವವನು. (೫೪೮) ಸ್ವಾಂಗಃ49 – ಸೃಷ್ಟಿ-ಸ್ಥಿತಿ-ಲಯಾದಿ ವ್ಯಾಪಾರಗಳನ್ನು ಮಾಡುವಾಗ ತನಗೆ ತಾನೇ ಅಂಗವಾಗಿರುವವನು; ಬೇರೆ ಯಾವ ಸಹಕಾರಿಗಳೂ ಇಲ್ಲದವನು. (೫೪೯) ಅಜಿತಃ50 – ಸರ್ವೋತ್ಕೃಷ್ಟನಾದವನು; ಯಾರಿಂದಲೂ ಗೆಲ್ಲಲು ಆಗದವನು; ಪ್ರಾಕೃತರೆಲ್ಲರಿಗೂ ಅಸಾಧ್ಯವಾದ ಅಜಿತಾ ಎಂಬ ಪರಮ ವೈಕುಂಠಪುರಿಯುಳ್ಳವನು; ಯಾರಿಂದಲೂ ಪರಾಜಿತನಾಗದವನು. (೫೫೦) ಕೃಷ್ಣಃ – ನೀಲವರ್ಣದವನು; ಎಲ್ಲರನ್ನೂ ಆಕರ್ಷಿಸುವವನು; ಎಲ್ಲರನ್ನೂ ಉಪಸಂಹಾರ ಮಾಡುವವನು; ಸದಾನಂದ ಸ್ವರೂಪಿಯು; ಕೃಷ್ಣದ್ವೈಪಾಯನವ್ಯಾಸ ರೂಪಿಯು; ಅಪ್ರಾಕೃತವೂ ಅತಿಮನೋಹರವೂ ಆದ ಕೃಷ್ಣವರ್ಣವುಳ್ಳವನು; ನೀಲವರ್ಣವುಳ್ಳವನು. (೫೫೧) ದೃಢಃ – ಚ್ಯುತಿಯಿಲ್ಲದವನು; ಬಲಶಾಲಿಯು; ಉಪಾಸಕರ ಅನುಗ್ರಹಕ್ಕೋಸ್ಕರ ವ್ಯೂಹದಲ್ಲಿಯೂ ಸ್ಥೂಲವಾಗಿ ಕಾಣುವವನು; ಸ್ಥೂಲತ್ವ ಮತ್ತು ಬಲತ್ವಗಳುಳ್ಳವನು; ದಾರ್ಢ್ಯವುಳ್ಳವನು. (೫೫೨) ಸಂಕರ್ಷಣೋಽಚ್ಯುತಃ – ಎಲ್ಲ ಪ್ರಾಣಿಗಳನ್ನೂ ಸಂಹಾರಕಾಲದಲ್ಲಿ ತನ್ನಲ್ಲಿಗೇ ಎಳೆದುಕೊಳ್ಳುವವನು ಮತ್ತು ಸ್ವರೂಪ-ಸ್ಥಾನ-ಸಂಕಲ್ಪಾದಿಗಳಲ್ಲಿ ಚ್ಯುತಿಯಿಲ್ಲದಿರುವವನು; ಚಿತ್ ಮತ್ತು ಅಚಿತ್ತುಗಳನ್ನು ತನ್ನಲ್ಲಿಗೆ ಸಮನಾಗಿ ಎಳೆದುಕೊಳ್ಳುವವನು. (೫೫೩) ವರುಣಃ – ಆವರಿಸಿರುವವನು; ಜಲಕ್ಕೂ, ಅಪಾನಕ್ಕೂ, ರಾತ್ರಿಗೂ ಅಧಿದೇವತೆಯಾದ ವರುಣರೂಪಿಯು; ತನ್ನ ಕಿರಣಗಳನ್ನು ಸಾಯಂಕಾಲ ಉಪಸಂಹಾರಮಾಡಿಕೊಳ್ಳುವ ಸೂರ್ಯರೂಪಿಯು; ಎಲ್ಲವನ್ನೂ ಆವರಿಸುವವನು; ಉತ್ತಮ ಜೀವನನ್ನು ಮೇಲಕ್ಕೆ ಒಯ್ಯುವವನು; ಉತ್ತಮ ಆನಂದವುಳ್ಳವನು; ಭಕ್ತರಿಂದ ವರಿಸಲ್ಪಡುವವನು; ಭಕ್ತರನ್ನು ವರಿಸುವವನು. (೫೫೪) ವಾರುಣಃ – ವರುಣನ ಮಗನು; ಅಗಸ್ತ್ಯರೂಪೀ ಅಥವಾ ವಸಿಷ್ಠರೂಪಿಯು; ತನ್ನನ್ನು ಸ್ವಾಮಿಯನ್ನಾಗಿ ವರಿಸುವ ಉಪಾಸಕನಲ್ಲಿರುವವನು; ಜ್ಞಾನಿಯು ಮತ್ತು ವರುಣರೂಪಿಯು; ವರುಣನಿಗೆ ಸಂಬಂಧಪಟ್ಟವನು; ಭಕ್ತರ ಅನಿಷ್ಟವನ್ನು ನಿವಾರಿಸುವವನು; ಸಮುದ್ರಕ್ಕೆ ಸುಖವನ್ನುಂಟುಮಾಡುವವನು; ಶ್ರೇಷ್ಠನಾದವನು. (೫೫೫) ವೃಕ್ಷಃ – ವೃಕ್ಷಸದೃಶನು; ವೃಕ್ಷದಂತೆ ಅಚಲವಾಗಿರುವವನು; ವೃಕ್ಷದಂತೆ ಆಶ್ರಯನಾಗಿರುವವನು; ಇಷ್ಟಾರ್ಥಗಳನ್ನು ದಯಪಾಲಿಸುವವನು; ಮಹಾವೃಕ್ಷಸ್ವರೂಪನು; ಎಲ್ಲರಿಗೂ ಎಲ್ಲ ವಿಷಯಗಳಲ್ಲಿಯೂ ಉಪಜೀವನಾಗಿರುವವನು; ಎಲ್ಲ ಪಾಪಗಳನ್ನು ಸಹಿಸುವವನು. (೫೫೬) ಪುಷ್ಕರಾಕ್ಷಃ51 – ಕಮಲದಂತಹ ಕಣ್ಣುಗಳುಳ್ಳವನು; ಹೃದಯಕಮಲದಲ್ಲಿ ಪ್ರಕಾಶಿಸುವವನು; ಧ್ಯಾನಿಸಿದಾಗ ಸ್ವರೂಪದಿಂದ ಪ್ರಕಟನಾಗುವವನು; ಅನುಗ್ರಹವನ್ನು ಸುರಿಯುತ್ತಾ ಸತ್ಪುರುಷರನ್ನು ಪೋಷಿಸುವ ಕಣ್ಣುಗಳುಳ್ಳವನು; ಕಮಲನಯನನು. (೫೫೭) ಮಹಾಮನಾಃ – ದೊಡ್ಡ ಮನಸ್ಸುಳ್ಳವನು; ಮಹಾತ್ಮನು; ಎಲ್ಲವನ್ನೂ ವ್ಯಾಪಿಸಿ ರಕ್ಷಿಸುವ ಉದಾರ ಮನಸ್ಸುಳ್ಳವನು; ಸೃಷ್ಟಿ-ಸ್ಥಿತಿ-ಸಂಹಾರ ಕರ್ಮಗಳನ್ನು ಮನಸ್ಸಿನಿಂದಲೇ ಮಾಡುವವನು; ಅಗಾಧವೂ, ಉದಾರವೂ, ವಿಸ್ತಾರವೂ ಆದ ಮನಸ್ಸುಳ್ಳವನು; ಮಹತ್ತಾದ ಚಿತ್ತ ಅಥವಾ ಜ್ಞಾನವುಳ್ಳವನು.

13135073a ಭಗವಾನ್ಭಗಹಾ ನಂದೀ52 ವನಮಾಲೀ ಹಲಾಯುಧಃ।
13135073c ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ।।

(೫೫೮) ಭಗವಾನ್ – ಷಡ್ಗುಣೈಶ್ವರ್ಯಸಂಪನ್ನನು53; ಸಮಗ್ರವಾದ ಐಶ್ವರ್ಯ, ಧರ್ಮ, ಯಶಸ್ಸು, ಸಂಪತ್ತು, ಜ್ಞಾನ ಮತ್ತು ವೈರಾಗ್ಯಗಳುಳ್ಳವನು; ಭೂತಗಳ ಉತ್ಪತ್ತಿ, ಪ್ರಳಯ, ಗತ್ಯಾಗತಿಗಳು, ವಿದ್ಯೆ ಮತ್ತು ಅವಿದ್ಯೆ ಇವುಗಳನ್ನು ಬಲ್ಲವನು; ಸಮಸ್ತ ದೋಷಗಳಿಗೂ ವಿರೋಧಿಯಾದ ಕಲ್ಯಾಣ ಗುಣಗಳಿಂದ ಕೂಡಿ ಪೂಜ್ಯತಮನಾದವನು; ಭಗವತ್ಪದಕ್ಕೆ ತಾನೊಬ್ಬನೇ ಅರ್ಥನಾಗಿರುವವನು. (೫೫೯) ಭಗಹಾ54 – ದೈತ್ಯರ ಐಶ್ವರ್ಯವನ್ನು ನಾಶಮಾಡುವವನು; ಭೌತಿಕ ಐಶ್ವರ್ಯವನ್ನು ನಾಶಮಾಡುವವನು; ಸಂಹಾರಸಮಯದಲ್ಲಿ ಎಲ್ಲರ ಐಶ್ವರ್ಯವನ್ನೂ ನಾಶಮಾಡುವವನು; ಕಲ್ಯಾಣಗುಣಗಳಿಂದ ಯಾವಾಗಲೂ ಎಲ್ಲರನ್ನೂ ಹೊಂದುವವನು; ರಾಹುವನ್ನು ಸಂಹರಿಸುವವನು. (೫೬೦) ನಂದೀ – ಪರಮಾನಂದವುಳ್ಳವನು; ಸರ್ವಸಂಪತ್ತುಗಳಿಂದ ಪೂರ್ಣನಾದವನು; ನಂದಗೋಪನನ್ನು ತಂದೆಯಾಗಿ ಹೊಂದಿದವನು; ಗೋಪಸ್ತ್ರೀಯರ ಸೇವೆಯ ಆನಂದವನ್ನು ಪಡೆದವನು. (೫೬೧) ವನಮಾಲೀ55 – ಭೂತಸೂಕ್ಷ್ಮಗಳ ಮಾಲೆಯಾದ ವೈಜಯಂತೀ ಎಂಬ ವನಮಾಲೆಯನ್ನು ಧರಿಸಿರುವವನು; ಕಾಲಿನ ವರೆಗೂ ಜೋತಾಡುತ್ತಿರುವ ಮಾಲೆಯನ್ನು ಧರಿಸಿದವನು; ಚೆನ್ನಾಗಿ ಭಜಿಸುವ ರಮಾದೇವಿಯನ್ನು ಗೆಳತಿಯನ್ನಾಗಿ ಹೊಂದಿರುವವನು; ನೀರನ್ನು ಅಥವಾ ಅನ್ನವನ್ನು ಧರಿಸುವ ಸ್ವಭಾವವುಳ್ಳವನು. (೫೬೨) ಹಲಾಯುಧಃ56 – ನೇಗಿಲನ್ನು ಆಯುಧವಾಗಿ ಧರಿಸಿರುವ ಬಲರಾಮಸ್ವರೂಪನು; ತ್ರಿಪುರಸಂಹಾರಸಮಯದಲ್ಲಿ ಹರನಿಗೆ ಆಯುಧನಾದವನು. (೫೬೩) ಆದಿತ್ಯಃ – ಸೂರ್ಯಸ್ವರೂಪಿಯು; ಅದಿತಿಗೆ ಪುತ್ರನಾಗಿ ಜನಿಸಿದವನು; ಅದಿತಿಗೆ ಕಶ್ಯಪನಿಂದ ಜನಿಸಿದ ವಾಮನರೂಪಿಯು; ಹಿಂದೆ ಅದಿತಿಯಾಗಿದ್ದ ದೇವಕಿಯ ಪುತ್ರನಾಗಿ ಹುಟ್ಟಿದವನು; ಅನಾದಿಕಾಲದಿಂದಿರುವ ಆನಂದ-ಜ್ಞಾನಗಳುಳ್ಳವನು; ಪ್ರಜಾಭಕ್ಷಣ ಶೀಲರಾದ ದೈತ್ಯರನ್ನು ತ್ಯಜಿಸುವವನು. (೫೬೪) ಜ್ಯೋತಿರಾದಿತ್ಯಃ57 – ಜ್ಯೋತಿರ್ಮಯನಾದ ಆದಿತ್ಯರೂಪಿಯು; ಆದಿತ್ಯಮಂಡಲದಲ್ಲಿರುವ ಜ್ಯೋತಿರ್ಮಯಪುರುಷನು; ಸೂರ್ಯನ ತೇಜಸ್ಸನ್ನು ಅಪಹರಿಸಿದ ನರ-ನಾರಾಯಣ ಸ್ವರೂಪಿಯು; ಜ್ಯೋತಿಗಳಿಗೆ ಆದಿಯಾಗಿರುವ ಸೂರ್ಯನಲ್ಲಿರುವವನು. (೫೬೫) ಸಹಿಷ್ಣುಃ – ಸಹನಶೀಲನು; ದ್ವಂದ್ವಗಳನ್ನು ದಹಿಸುವ ನಾರಾಯಣಮುನಿಸ್ವರೂಪನು; ಭಕ್ತರ ಅಪರಾಧಗಳನ್ನು ಸಹಿಸುವವನು; ಶತ್ರುಗಳ ಆಕ್ರಮಣವನ್ನು ಸಹಿಸುವವನು. (೫೬೬) ಗತಿಸತ್ತಮಃ – ಶ್ರೇಷ್ಠತಮ ಗತಿಯು; ಗತಿಯೂ ಸರ್ವಶ್ರೇಷ್ಠನೂ ಆಗಿರುವವನು; ಪರಮಧರ್ಮವೆಂಬ ಗತಿಯಲ್ಲಿ ಅತ್ಯಂತ ವಿಶ್ವಸ್ತನಾಗಿರುವವನು; ಜ್ಞಾನಿಗಳಿಂದ ಬಯಸಲ್ಪಡುವವನು; ಅತ್ಯಂತಾತಿಶಯವಾಗಿ ಹೊಂದಲ್ಪಡುವವನು.

13135074a ಸುಧನ್ವಾ ಖಂಡಪರಶುರ್ದಾರುಣೋ ದ್ರವಿಣಪ್ರದಃ।
13135074c ದಿವಃಸ್ಪೃಕ್ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ।।

(೫೬೭) ಸುಧನ್ವಾ – ಶ್ರೇಷ್ಠವಾದ ಧನುಸ್ಸುಳ್ಳವನು; ಅಹಂಕಾರ ತತ್ತ್ವರೂಪವಾದ ಶಾರ್ಙ್ಗಧನುಸ್ಸುಳ್ಳವನು; ಇಂದ್ರಿಯಾದಿಮಯ ಶಾರ್ಙ್ಗವೆಂಬ ಶ್ರೇಷ್ಠ ಧನುಸ್ಸುಳ್ಳವನು. (೫೬೮) ಖಂಡಪರಶುಃ58 – ರುದ್ರರೂಪಿಯು; ಪರಶುವಿನಿಂದ ಖಂಡನೆಮಾಡಿದ ನರಮಹರ್ಷಿಸ್ವರೂಪನು; ಶತ್ರುಗಳನ್ನು ಖಂಡಿಸಿದ ಗಂಡುಗೊಡಲಿಯುಳ್ಳ ಪರಶುರಾಮಸ್ವರೂಪಿಯು; ಅಖಂಡಿತಪರಶುವುಳ್ಳ ಪರಶುರಾಮಸ್ವರೂಪಿಯು; ರುದ್ರಸಂಗ್ರಾಮವನ್ನು ಪರಶುವಿನಿಂದ ಖಂಡಿಸಿದ ನರಮಹರ್ಷಿಯು. (೫೬೯) ದಾರುಣಃ – ದುಷ್ಟರಿಗೆ ಭಯಂಕರನಾದವನು; ಶತ್ರುಗಳನ್ನು ಸೀಳಿಹಾಕುವವನು; ಒಳ-ಹೊರ ಶತ್ರುಗಳನ್ನು ಭೇದಿಸುವವನು; ಲೋಕವನ್ನು ಮರದ ಪ್ರತಿಮೆಯಂತೆ ಮಾಡಿಬಿಡುವವನು. (೫೭೦) ದ್ರವಿಣಪ್ರದಃ – ಐಶ್ವರ್ಯವನ್ನು ಅನುಗ್ರಹಿಸುವವನು; ಭಕ್ತರ ಇಷ್ಟಾರ್ಥಗಳನ್ನು ದಯಪಾಲಿಸುವವನು; ಸಮಸ್ತ ಶಾಸ್ತ್ರಗಳ ಮತ್ತು ಅವುಗಳ ಅರ್ಥರೂಪವಾದ ಧನವನ್ನು ಅನುಗ್ರಹಿಸುವ ವ್ಯಾಸಾವತಾರಿಯು; ವಿದ್ಯಾರೂಪವಾದ ಧನವನ್ನು ಕೊಡುವವನು; ದ್ರವಿಸಿದ ಮನಸ್ಸುಳ್ಳ ಭಕ್ತರಿಗೆ ಸ್ವರೂಪಸುಖವನ್ನು ಕೊಡುವವನು. (೫೭೧) ದಿವಃಸ್ವೃಕ್ – ಪ್ರಕಾಶಮಾನ ಸ್ಥಾನವನ್ನು ಮುಟ್ಟಿರುವವನು; ಸ್ವರ್ಗವನ್ನು ಮುಟ್ಟಿದವನು; ಪರಮ ಪದದಲ್ಲಿ ತನ್ನ ತತ್ತ್ವವನ್ನು ಮುಟ್ಟಿರುವವನು; ಶ್ವೇತದ್ವೀಪ, ಅನಂತಾಸನ, ವೈಕುಂಠಗಳನ್ನು ಮುಟ್ಟುವವನು. (೫೭೨) ಸರ್ವದೃಗ್ವ್ಯಾಸಃ – ಸರ್ವಜ್ಞನಾದ ವ್ಯಾಸರೂಪಿಯು; ಸರ್ವಜ್ಞಾನಗಳನ್ನೂ ವಿಸ್ತಾರಪಡಿಸಿದ ವ್ಯಾಸನು; ಸರ್ವಾಕಾರದ ಜ್ಞಾನವನ್ನು ಅಥವಾ ಸರ್ವರಿಗೂ ದೃಷ್ಟಿಯಾಗಿರುವ ಜ್ಞಾನವನ್ನು ವಿಭಾಗಮಾಡಿದವನು; ವೇದಗಳನ್ನು ಋಕ್-ಯಜುಸ್ಸು-ಸಾಮ-ಅಥರ್ವ ಎಂದು ನಾಲ್ಕು ವಿಭಾಗಗಳನ್ನಾಗಿಯೂ, ಋಗ್ವೇದವನ್ನು ಇಪ್ಪತ್ತೊಂದು ಶಾಖೆಗಳನ್ನಾಗಿಯೂ, ಯಜುರ್ವೇದವನ್ನು ನೂರೊಂದು ಶಾಖೆಗಳನ್ನಾಗಿಯೂ, ಸಾಮವೇದವನ್ನು ಸಾವಿರ ಶಾಖೆಗಳನ್ನಾಗಿಯೂ, ಅಥರ್ವವೇದವನ್ನು ಒಂಬತ್ತು ಶಾಖೆಗಳನ್ನಾಗಿಯೂ ವಿಭಾಗಿಸಿದವನು; ಪುರಾಣಗಳನ್ನು ವಿಭಾಗಿಸಿದವನು. (೫೭೩) ವಾಚಸ್ಪತಿರಯೋನಿಜಃ59 – ವಾಣಿಗೆ ಅಧಿಪತಿಯಾದ ಹಯಗ್ರೀವಸ್ವರೂಪಿಯು; ಬೃಹಸ್ಪತಿ ಸ್ವರೂಪಿಯು; ಸರ್ವಕ್ಕೂ ಕಾರಣನಾಗಿ ತಾಯಿಯಿಂದ ಹುಟ್ಟದವನು; ವಾಣಿಗೆ ಅಧಿಪತಿಯಾಗಿ ಭಗವಂತನ ಮುಖದಿಂದ ಸಂಜನಿಸಿದ ಸಾರಸ್ವತ ವ್ಯಾಸಸ್ವರೂಪನು.

13135075a ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್।
13135075c ಸಂನ್ಯಾಸಕೃಚ್ಚಮಃ ಶಾಂತೋ ನಿಷ್ಠಾ ಶಾಂತಿಃ ಪರಾಯಣಮ್।।

(೫೭೪) ತ್ರಿಸಾಮಾ – ಮೂರು ಸಾಮಸ್ತುತಿಗಳುಳ್ಳವನು; ಮೂರು ಸಾಮಗಳಿಂದ ಸ್ತುತಿಸಲ್ಪಡುವವನು; ಸಾಮಗರಿಂದ ದೇವವ್ರತಗಳೆಂಬ ಮೂರು ಸಾಮಗಳಿಂದ ಸ್ತುತಿಸಲ್ಪಡುವವನು; ತನ್ನನ್ನು ಸ್ತುತಿಸುವ ಬೃಹತ್-ರಥಂತರ-ವಾಮದೇವಗಳೆಂಬ ಮೂರು ಪ್ರಧಾನ ಸಾಮಗಳುಳ್ಳವನು; ನಿಧನ-ಉದ್ಗೀಥ ಮತ್ತು ಪ್ರತೀಹಾರಗಳೆಂಬ ಮೂರು ಸಾಮಗಳುಳ್ಳವನು. (೫೭೫) ಸಾಮಗಃ – ಸಾಮವನ್ನು ಗಾನಮಾಡುವವನು; ಸ್ವಾನುಭವದ ಪ್ರೀತಿಯಿಂದ ಆ ಸಾಮಗಳನ್ನು ತಾನೂ ಹಾಡುವವನು; ’ಸಾಮ’ ಎಂಬ ಶಬ್ದದಿಂದ ಹೇಳಲ್ಪಡುವ ಭಾರತೀದೇವೀ ಮತ್ತು ವಾಯುದೇವರಲ್ಲಿ ಇರುವವನು; ಅಗ್ನಿಯಲ್ಲಿ ಅಂತರ್ಗತನಾಗಿರುವವನು; ಸಾಮದಿಂದ ಹೊಂದಲ್ಪಡುವವನು. (೫೭೬) ಸಾಮ – ವೇದಗಳಲ್ಲಿ ಪರಮಾತ್ಮನ ಮಹಾವಿಭೂತಿಯಾದ ಸಾಮವೇದಸ್ವರೂಪನು; ತನ್ನನ್ನು ಗಾನಮಾಡುವವರ ಕಲುಷವನ್ನು ನಾಶಮಾಡುವವನು; ಸರ್ವಭೂತಗಳಲ್ಲಿಯೂ ಸಮನಾಗಿರುವವನು. (೫೭೭) ನಿರ್ವಾಣಂ – ಪರಮಾನಂದಮೋಕ್ಷಸ್ವರೂಪಿಯು; ಆವರಣವಿಲ್ಲದವನು; ಆನಂದದಾಯಕನು; ಪ್ರಾಕೃತಶರೀರವಿಲ್ಲದವನು; ಪ್ರತಿಯಾಗಿ ಹೊಡೆಯಲು ಅಶಕ್ಯವಾದ ಬಾಣಗಳನ್ನು ಪ್ರಯೋಗಿಸುವವನು. (೫೭೮) ಭೇಷಜಂ – ಸಂಸಾರರೋಗಕ್ಕೆ ಒಳ್ಳೆಯ ಔಷಧಿಯಾಗಿರುವವನು. (೫೭೯) ಭಿಷಕ್ – ಭವರೋಗ ವೈದ್ಯನು; ವೈದ್ಯನಾಥೇಶ್ವರನು; ಧನ್ವಂತರಿಯು. (೫೮೦) ಸಂನ್ಯಾಸಕೃತ್ – ಸಂನ್ಯಾಸಾಶ್ರಮವನ್ನು ಮತ್ತು ಸಂನ್ಯಾಸಭಾವವನ್ನು ಉಂಟುಮಾಡುವವನು; ಮೋಕ್ಷಕ್ಕೋಸ್ಕರ ನಾಲ್ಕನೆಯ ಆಶ್ರಮವನ್ನು ಮಾಡಿದವನು; ಸಾತ್ವಿಕವಾದ ಸಂನ್ಯಾಸದಿಂದ ರಜಸ್ಸು-ತಮಸ್ಸುಗಳನ್ನು ಕತ್ತರಿಸಿಹಾಕುವವನು; ಸಂನ್ಯಾಸವೆಂದರೆ ಧರಿಸುವ ಸಾಮರ್ಥ್ಯವುಳ್ಳವನಲ್ಲಿ ಭಾರವನ್ನು ಸಮರ್ಪಿಸುವುದು. (೫೮೧) ಶಮಃ – ಇಂದ್ರಿಯನಿಗ್ರಹವುಳ್ಳವನು; ಸಮಸ್ತಭೂತಗಳನ್ನೂ ಶಮನಗೊಳಿಸುವವನು; ಉದ್ರೇಕವಿಲ್ಲದವನು; ಆನಂದರೂಪನು; ಬ್ರಹ್ಮಾದಿಗಳ ಸುಖವನ್ನು ಅಳೆಯುವವನು ಅಥವಾ ತಿಳಿದವನು. (೫೮೨) ಶಾಂತಃ – ಶಮಭಾವವುಳ್ಳವನು; ವಿಷಯಸುಖಗಳಲ್ಲಿ ಆಸಕ್ತಿಯಿಲ್ಲದವನು; ಉದ್ರೇಕಕ್ಕೆ ಕಾರಣವಿದ್ದರೂ ಅಲೆಯಿಲ್ಲದ ಸಮುದ್ರದಂತೆ ವಿಕಾರವಿಲ್ಲದವನು; ಸುಖವನ್ನು ಪಡೆಯುವುದಕ್ಕೆ ಮೊದಲು ಬಂಧನವನ್ನುಂಟುಮಾಡುವವನು; ದೈತ್ಯರ ಸುಖವನ್ನು ನಾಶಮಾಡುವವನು; ಸುಖಕ್ಕೆ ಅಧಿಪತಿಯಾದವನು. (೫೮೩) ನಿಷ್ಠಾ – ಎಲ್ಲಕ್ಕೂ ನೆಲೆಯಾದವನು; ವ್ರತನಿಷ್ಠಾಸ್ವರೂಪಿಯಾದವನು; ಪ್ರಳಯದಲ್ಲಿ ಸಮಸ್ತಭೂತಗಳೂ ಯಾರಲ್ಲಿ ಚೆನ್ನಾಗಿ ನೆಲೆಗೊಳ್ಳುವವನೋ ಅವನು; ಪ್ರಾರ್ಥಿಸುವವರ ಹೃದಯದಲ್ಲಿ ಶುಭಾಶ್ರಯನಾಗಿ ಚೆನ್ನಾಗಿ ನೆಲೆಗೊಳ್ಳುವವನು; ನಿಯತವಾದ ಸ್ಥಿತಿಯುಳ್ಳವನು. (೫೮೪) ಶಾಂತಿಃ60 – ಸರ್ವದೋಷಗಳ ನಿವೃತ್ತಿಸ್ವರೂಪನು; ಸಮಸ್ತ ಅವಿದ್ಯೆಗಳ ನಿವೃತ್ತಿರೂಪನಾದ ಬ್ರಹ್ಮವು; ಆರ್ಥಿಗಳು ಪರಮ ಸಮಾಧಿಯಲ್ಲಿ ಎಲ್ಲ ಅಧಿಕಾರಗಳನ್ನೂ ಮರೆತು ಯಾರಲ್ಲಿ ಶಮನ ಹೊಂದುವರೋ ಅವನು; ಉನ್ನತ ಸುಖಸ್ವರೂಪನು; ಯಾರ ಬಳಿಯಲ್ಲಿ ಸುಖವಿರುವುದೋ ಅವನು. (೫೮೫) ಪರಾಯಣಂ – ಪರಮಗತಿಯು; ಮುಕ್ತರಿಗೆ ಆಶ್ರಯನಾದವನು; ಶ್ರೇಷ್ಠವಾದ ಆಶ್ರಯವು ಯಾರಿಂದ ದೊರೆಯುವುದೋ ಅವನು.

13135076a ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ।
13135076c ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಷಪ್ರಿಯಃ।।

(೫೮೬) ಶುಭಾಂಗಃ61 – ಶುಭವಾದ ಅವಯವಗಳುಳ್ಳವನು; ಸುಂದರ ಶರೀರವನ್ನು ಧರಿಸಿರುವವನು; ತನ್ನ ಭಕ್ತಿಭಾವನೆಯಿಂದ ಶುಭವಾದ ಯಮ-ನಿಯಮ-ಆಸನ-ಪ್ರಾಣಾಯಾಮ-ಪ್ರತ್ಯಾಹಾರ-ಧ್ಯಾನ-ಧಾರಣ-ಸಮಾಧಿಗಳೆಂಬ ಯೋಗಾಂಗಗಳುಳ್ಳವನು; ಶುಭಕ್ಕೆ ಅಂಗವಾದ ಜ್ಞಾನವು ಯಾರಿಂದ ಉಂಟಾಗುವುದೋ ಅವನು. (೫೮೭) ಶಾಂತಿದಃ – ಪರಮಾನಂದರೂಪವಾದ ನಿತ್ಯಶಾಂತಿಯನ್ನು ಕೊಡುವವನು; ರಾಗ-ದ್ವೇಷಗಳಿಂದ ಬಿಡುಗಡೆಹೊಂದುದರಿಂದ ದೊರೆಯುವ ಶಾಂತಿಯನ್ನು ಕೊಡುವವನು; ಸಿದ್ಧಭಕ್ತರಿಗೆ ಪರಮಾನಂದರೂಪೀ ಸಾಯುಜ್ಯವೆಂಬ ಶಾಂತಿಯನ್ನು ನೀಡುವವನು; ಮೋಕ್ಷಪ್ರದನು. (೫೮೮) ಸ್ರಷ್ಟಾ – ಜಗತ್ತನ್ನು ಸೃಷ್ಟಿಸಿದವನು; ಸೃಷ್ಟಿಯ ಪ್ರಾರಂಭದಲ್ಲಿ ಎಲ್ಲ ಭೂತಗಳನ್ನೂ ರಚಿಸಿದವನು. (೫೮೯) ಕುಮುದಃ – ಭೂಮಿಗೆ ಆನಂದವನ್ನುಂಟುಮಾಡುವವನು; ಭೂಮಿಯಲ್ಲಿ ಆನಂದಿಸುವವನು; ಚಂದ್ರರೂಪಿಯು; ಕುಮುದಪುಷ್ಪದಂತೆ ಸ್ವಚ್ಛನಾಗಿರುವವನು; ಪ್ರಕೃತಿಮಂಡಲದಲ್ಲಿ ಭೋಕ್ತೃಜೀವಿಗಳಿಗೆ ಭೋಜನ ಮಾಡಿಸುತ್ತಾ ಸದಾ ಆನಂದದಲ್ಲಿರುವವನು; ಭೂಭಾರವನ್ನು ಪರಿಹರಿಸಿ ಭೂಮಿಗೆ ಅನಂದವನ್ನೀಯುವವನು. (೫೯೦) ಕುವಲೇಶಯಃ – ಜಲದಲ್ಲಿ ಶಯನಿಸಿರುವವನು; ಭೂಮಿಯನ್ನು ಸುತ್ತಿರುವ ಜಲದಲ್ಲಿ ಶಯನಿಸಿರುವವವನು; ಬದರೀಫಲದ ಮಧ್ಯದಲ್ಲಿ ಶಯನಿಸಿರುವ ತಕ್ಷಕವಿಭೂತಿಸ್ವರೂಪನು; ಆದಿಶೇಷಸರ್ಪದ ಉದರದ ಮೇಲೆ ಶಯನಿಸಿರುವವನು. (೫೯೧) ಗೋಹಿತಃ – ಹಸುಗಳಿಗೂ, ವೇದಗಳಿಗೂ, ಭೂಮಿಗೂ ಹಿತನಾದವನು. (೫೯೨) ಗೋಪತಿಃ – ವಾಣಿಗೆ, ಭೂಮಿಗೆ ಮತ್ತು ಹಸುಗಳಿಗೆ ಪತಿಯಾದವನು; ಸ್ವರ್ಗಭೂಮಿಗೆ ಪತಿಯಾದವನು. (೫೯೩) ಗೋಪ್ತಾ – ಜಗತ್ತನ್ನು ರಕ್ಷಿಸುವವನು; ತನ್ನನ್ನು ಮರೆಮಾಚಿಕೊಂಡಿರುವವನು; ಕರ್ಮಫಲಚಕ್ರವನ್ನು ಪರಿಪಾಲಿಸುವವನು; ಸರ್ವರಕ್ಷಕನು. (೫೯೪) ವೃಷಭಾಕ್ಷಃ – ಧರ್ಮದೃಷ್ಟಿಯುಳ್ಳವನು; ಇಷ್ಟಾರ್ಥಗಳನ್ನು ಸುರಿಸುವ ಕಣ್ಣುಗಳುಳ್ಳವನು; ವೇದಗಳೇ ಕಣ್ಣುಗಳಾಗಿರುವವನು; ಸಜ್ಜನರಲ್ಲಿ ಕೃಪಾದೃಷ್ಟಿಯುಳ್ಳವನು; ವೃಷಭದ ಕಣ್ಣುಗಳಂತೆ ಕಣ್ಣುಗಳುಳ್ಳವನು. (೫೯೫) ವೃಷಪ್ರಿಯಃ62 – ಧರ್ಮಪ್ರಿಯನು; ಪ್ರವೃತ್ತಿ ಮತ್ತು ನಿವೃತ್ತಿಧರ್ಮಗಳು ಯಾರಿಗೆ ಪ್ರಿಯವೋ ಅವನು.

13135077a ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಚಿವಃ।
13135077c ಶ್ರೀವತ್ಸವಕ್ಷಾಃ ಶ್ರೀವಾಸಃ ಶ್ರೀಪತಿಃ ಶ್ರೀಮತಾಂ ವರಃ।।

(೫೯೬) ಅನಿವರ್ತೀ63 – ಮುಕ್ತಾತ್ಮರನ್ನು ಹಿಂದಿರುಗಿಸದವನು; ಯುದ್ಧದಲ್ಲಿ ಹಿಮ್ಮೆಟ್ಟದವನು; ತನ್ನ ಮಾತಿನಿಂದ ಹಿಮ್ಮೆಟ್ಟದವನು; ಧರ್ಮದಿಂದ ಹಿಮ್ಮೆಟ್ಟದವನು. (೫೯೭) ನಿವೃತ್ತಾತ್ಮಾ64 – ವಿಷಯಗಳಿಂದ ನಿವೃತ್ತನಾದವನು; ನಿವೃತ್ತಿಧರ್ಮದಲ್ಲಿ ನಿಷ್ಠೆಯುಳ್ಳವನು; ಸ್ವಾಭಾವಿಕವಾಗಿಯೇ ವಿಷಯಗಳಿಂದ ಹಿಂದುರಿಗಿದ ಮನಸ್ಸುಳ್ಳವನು. (೫೯೮) ಸಂಕ್ಷೇಪ್ತಾ65 – ಉಪಸಂಹಾರ ಮಾಡಿಕೊಳ್ಳುವವನು; ವಿಸ್ತಾರವಾದ ಜಗತ್ತನ್ನು ಸಂಹಾರಸಮಯದಲ್ಲಿ ತನ್ನಲ್ಲಿಯೇ ಸಂಕ್ಷೇಪಿಸಿಕೊಳ್ಳುವವನು; ಪ್ರವೃತ್ತಿಧರ್ಮನಿಷ್ಠರಾದವರನ್ನು ಸ್ವಾಭಾವಿಕವಾದ ಜ್ಞಾನ-ಶಕ್ತಿಗಳಿಂದ ಸಂಕೋಚಪಡಿಸುವವನು. (೫೯೯) ಕ್ಷೇಮಕೃತ್ – ಕ್ಷೇಮವನ್ನುಂಟುಮಾಡುವವನು; ಲಬ್ಧವಾದ ವಸ್ತುಗಳನ್ನು ಸಂರಕ್ಷಿಸುವವನು. (೬೦೦) ಶಿವಃ – ಶುದ್ಧಮಂಗಳಸ್ವರೂಪಿಯು; ಮಂಗಳವನ್ನುಂಟುಮಾಡುವವನು; ತನ್ನ ನಾಮಸ್ಮರಣಮಾತ್ರದಿಂದಲೇ ಪವಿತ್ರಗೊಳಿಸುವವನು; ಭೋಗಗಳನ್ನು ಬಯಸುವರಿಗೂ ಮತ್ತು ಮೋಕ್ಷವನ್ನು ಬಯಸುವವರಿಗೂ ಮಂಗಳವನ್ನುಂಟುಮಾಡುವವನು; ಸುಖಾತ್ಮನು. (೬೦೧) ಶ್ರೀವತ್ಸವಕ್ಷಾಃ – ಎದೆಯಲ್ಲಿ ಪ್ರಕೃತಿತತ್ತ್ವರೂಪವಾದ ಶ್ರೀವತ್ಸವೆಂಬ ಮಚ್ಚೆಯಿಂದ ಅಲಂಕೃತನಾದವನು. (೬೦೨) ಶ್ರೀವಾಸಃ – ಲಕ್ಷ್ಮೀದೇವಿಗೆ ನಿತ್ಯನಿವಾಸಸ್ಥಾನನಾಗಿರುವವನು. (೬೦೩) ಶ್ರೀಪತಿಃ – ಶ್ರೀದೇವಿಗೆ ಸಹಜಪತಿಯಾಗಿರುವವನು; ಅಮೃತಮಥನ ಸಮಯದಲ್ಲಿ ಸಮಸ್ತ ದೇವಾಸುರರನ್ನೂ ಬಿಟ್ಟು ಶ್ರೀ ದೇವಿಯು ಯಾರನ್ನು ಪತಿಯಾಗಿ ವರಿಸಿದಳೋ ಅವನು. (೬೦೪) ಶ್ರೀಮತಾಂ ವರಃ – ಶ್ರೀಸಂಪನ್ನರಾದ ಎಲ್ಲರಿಗಿಂತಲೂ ಶ್ರೇಷ್ಠತಮನಾದವನು.

13135078a ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ।
13135078c ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾಽಲ್ಲೋಕತ್ರಯಾಶ್ರಯಃ।।

(೬೦೫) ಶ್ರೀದಃ – ಭಕ್ತರಿಗೆ ಸಂಪತ್ತುಗಳನ್ನು ಕೊಡುವವನು; ಶ್ರೀದೇವಿಗೆ ತನ್ನ ಪ್ರಣಯರಸವನ್ನು ಕೊಡುವವನು; ಶ್ರೀರೂಪಿಣೀ ರುಕ್ಮಿಣಿಗೆ ಪ್ರದ್ಯುಮ್ನನನ್ನು ನೀಡಿದವನು. (೬೦೬) ಶ್ರೀಶಃ – ಶ್ರೀಗೆ ಈಶ್ವರನು. (೬೦೭) ಶ್ರೀನಿವಾಸಃ – ಸಂಪತ್ತುಗಳಿಗೆ ವಾಸಸ್ಥಾನನು; ಶ್ರೀಮಂತರಲ್ಲಿ ನಿತ್ಯವೂ ವಾಸಿಸುವವನು; ಶ್ರೀದೇವಿಗೆ ಯಾವಾಗಲೂ ಆಶ್ರಯನಾಗಿರುವವನು; ಅಂತರ್ಯಾಮಿಯಾಗಿ ಸಂಪತ್ತಿನಲ್ಲಿ ವಾಸಿಸುವವನು. (೬೦೮) ಶ್ರೀನಿಧಿಃ – ಸಮಸ್ತ ಸಂಪತ್ತುಗಳೂ ಒಂದಾಗಿ ಸೇರಿರುವವನು. (೬೦೯) ಶ್ರೀವಿಭಾವನಃ – ಶ್ರೀದೇವಿಯನ್ನು ಚೆನ್ನಾಗಿ ಭಾವಿಸಿ ಗೌರವಿಸುವವನು; ಸಂಪತ್ತುಗಳನ್ನು ಬಗೆಬಗೆಯಾಗಿ ವಿತರಿಸುವವನು; ಸಮಸ್ತಭೂತಗಳಿಗೂ ಅವರವರ ಕರ್ಮಾನುಸಾರವಾಗಿ ಬಗೆ-ಬಗೆಯ ಸಂಪತ್ತನ್ನು ಕೊಡುವವನು. (೬೧೦) ಶ್ರೀಧರಃ – ಶ್ರೀದೇವಿಯನ್ನು ಧರಿಸಿದವನು. (೬೧೧) ಶ್ರೀಕರಃ66 – ಭಕ್ತರಿಗೆ ಸಂಪತ್ತು-ಕಾಂತಿಗಳನ್ನು ನೀಡುವವನು. (೬೧೨) ಶ್ರೇಯಃ67 – ಅತ್ಯಂತ ಪ್ರಶಸ್ಯನಾದವನು; ಯಾವ ದೋಷವೂ ಇಲ್ಲದ ಪರಿಪೂರ್ಣಸುಖಸ್ವರೂಪಿಯು. (೬೧೩) ಶ್ರೀಮಾನ್ – ಶ್ರೀಗಳಿಂದ ಸಂಪನ್ನನು; ಸಂಪತ್ತನ್ನು ಅಳೆಯುವವನು. (೬೧೪) ಲೋಕತ್ರಯಾಶ್ರಯಃ68 – ಮೂರು ಲೋಕಗಳಿಗೂ ಆಶ್ರಯನಾದವನು.

13135079a ಸ್ವಕ್ಷಃ ಸ್ವಂಗಃ ಶತಾನಂದೋ ನಂದಿರ್ಜ್ಯೋತಿರ್ಗಣೇಶ್ವರಃ।
13135079c ವಿಜಿತಾತ್ಮಾ ವಿಧೇಯಾತ್ಮಾ ಸತ್ಕೀರ್ತಿಶ್ಛಿನ್ನಸಂಶಯಃ।।

(೬೧೫) ಸ್ವಕ್ಷಃ – ಶ್ರೇಷ್ಠ ಇಂದ್ರಿಯಗಳು ಅಥವಾ ಕಣ್ಣುಗಳುಳ್ಳವನು; ಕಮಲಕ್ಕೆ ಸಮಾನ ಸುಂದರ ಕಣ್ಣುಗಳುಳ್ಳವನು. (೬೧೬) ಸ್ವಂಗಃ – ಸುಂದರವಾದ ಅಂಗಗಳುಳ್ಳವನು. (೬೧೭) ಶತಾನಂದಃ69 – ಅನಂತ ಮತ್ತು ಅಪರಿಮಿತ ಆನಂದವುಳ್ಳವನು; ಒಬ್ಬನೇ ಪರಮಾನಂದಸ್ವರೂಪಿಯಾಗಿದ್ದರೂ ಉಪಾಧಿ ಬೇದದಿಂದ ನೂರಾರು ಪ್ರಕಾರಗಳಾಗಿ ಆಗುವವನು. (೬೧೮) ನಂದಿಃ – ಆನಂದವುಳ್ಳವನು; ಆನಂದವನ್ನುಂಟುಮಾಡುವವನು; ಪರಮಾನಂದವಿಗ್ರಹನು. (೬೧೯) ಜ್ಯೋತಿರ್ಗಣೇಶ್ವರಃ – ಜ್ಯೋತಿಗಳ ಸಮೂಹಕ್ಕೆ ಅಧಿಪತಿಯು. (೬೨೦) ವಿಜಿತಾತ್ಮಾ – ಮನಸ್ಸನ್ನು ಗೆದ್ದವನು. (೬೨೧) ವಿಧೇಯಾತ್ಮಾ - ಜಿತೇಂದ್ರಿಯನು. (೬೨೨) ಸತ್ಕೀರ್ತಿಃ – ಸತ್ಯವಾದ ಕೀರ್ತಿಯುಳ್ಳವನು; ಉತ್ತಮ ಕೀರ್ತಿಯುಳ್ಳವನು. (೬೨೩) ಛಿನ್ನಸಂಶಯಃ – ಯಾವ ಸಂಶಯವೂ ಇಲ್ಲದವನು; ಜ್ಞಾನಿಗಳ ಸಂಶಯವನ್ನು ದೂರಮಾಡುವವನು.

13135080a ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಃ ಸ್ಥಿರಃ।
13135080c ಭೂಶಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ।।

(೬೨೪) ಉದೀರ್ಣಃ70 – ಎಲ್ಲರಿಗಿಂತಲೂ ಉತ್ಕೃಷ್ಟನಾದವನು; ಪ್ರಳಯಕಾಲದಲ್ಲಿ ರುದ್ರನನ್ನು ಸೀಳುವವನು. (೬೨೫) ಸರ್ವತಶ್ಚಕ್ಷುಃ – ಇಲ್ಲೆಲ್ಲಿಯೂ ಕಣ್ಣುಗಳುಳ್ಳವನು; ಎಲ್ಲವನ್ನೂ ಎಲ್ಲ ಕಡೆಗಳಲ್ಲಿಯೂ ನೋಡುವವನು. (೬೨೬) ಅನೀಶಃ – ತಾನೇ ಸರ್ವೇಶ್ವರನಾಗಿರುವರಿಂದ ಬೇರೆ ಯಾವ ಪ್ರಭುವೂ ಇಲ್ಲದವನು; ಭಕ್ತರಿಗೆ ಅಧೀನನಾಗಿರುವುದರಿಂದ ಪರಾಧೀನನಾಗಿರುವವನು; ಪ್ರಾಣಿಗಳಿಗೆ ಈಶ್ವರನು. (೬೨೭) ಶಾಶ್ವತಸ್ಥಿರಃ – ನಿತ್ಯನೂ ಸ್ಥಿರನೂ ಆಗಿರುವವನು; ನಿತ್ಯನಾಗಿದ್ದರೂ ಎಂದಿಗೂ ವಿಕಾರಹೊಂದದವನು. (೬೨೮) ಭೂಶಯಃ – ಭಕ್ತರ ದರ್ಶನಕ್ಕಾಗಿ ಅರ್ಚಾಮೂರ್ತಿಯಾಗಿ ಭೂಮಿಯಲ್ಲಿ ಅನಂತಪದ್ಮನಾಭ, ಗೋವಿಂದರಾಜು ಮತ್ತು ಶ್ರೀರಂಗನಾಥ – ಮೊದಲಾದ ರೂಪಗಳನ್ನು ಧರಿಸಿ ಪವಡಿಸಿರುವವನು; ಭೂಮಿಯಲ್ಲಿ ದರ್ಭಶಯನಮಾಡಿದ ರಾಮರೂಪಿಯು; ಲಂಕೆಗೆ ಹೋಗುವುದಕ್ಕೋಸ್ಕರ ದಾರಿಯನ್ನು ಹುಡುಕುವಾಗ ಸಮುದ್ರತೀರದಲ್ಲಿ ಭೂಮಿಯ ಮೇಲೆ ಪವಡಿಸಿದ ಶ್ರೀರಾಮನು; ಭೂಮಿಯಲ್ಲಿ ಶಯನಿಸಿರುವವನು. (೬೨೯) ಭೂಷಣಃ – ಅಲಂಕಾರವಾಗಿರುವವನು; ಅಲಂಕೃತನಾಗಿರುವವನು; ತನ್ನ ಅವತಾರಗಳಿಂದ ಸ್ವರ್ಗ-ಭೂಮಿ-ಪಾತಾಳಗಳನ್ನು ಅಲಂಕರಿಸಿದವನು; ತತ್ತ್ವಮಯ ದಿವ್ಯ ಭೂಷಣಗಳುಳ್ಳವನು. (೬೩೦) ಭೂತಿಃ – ಸತ್ಸ್ವರೂಪನು, ವಿಭೂತಿರೂಪನು; ಐಶ್ವರ್ಯರೂಪನು. (೬೩೧) ವಿಶೋಕಃ – ಶೋಕರಹಿತನು; ಪರಮಾನಂದರೂಪಿಯು. (೬೩೨) ಶೋಕನಾಶನಃ – ಆಧ್ಯಾತ್ಮಕ, ಆಧಿಭೌತಿಕ, ಆದಿದೈವಿಕಗಳೆಂಬ ಮೂರು ಬಗೆಯ ಶೋಕಗಳನ್ನೂ ನಾಶಪಡಿಸುವವನು; ಸ್ಮರಣಮಾತ್ರದಿಂದಲೇ ಭಕ್ತರ ದುಃಖಗಳನ್ನು ನಾಶಪಡಿಸುವವನು.

13135081a ಅರ್ಚಿಷ್ಮಾನರ್ಚಿತಃ ಕುಂಭೋ ವಿಶುದ್ಧಾತ್ಮಾ ವಿಶೋಧನಃ।
13135081c ಅನಿರುದ್ಧೋಽಪ್ರತಿರಥಃ ಪ್ರದ್ಯುಮ್ನೋಽಮಿತವಿಕ್ರಮಃ।।

(೬೩೩) ಅರ್ಚಿಷ್ಮಾನ್ – ಎಲ್ಲ ತೇಜಸ್ಸುಗಳಿಗೂ ತೇಜಸ್ಸನ್ನು ನೀಡುವ ಪ್ರಧಾನ ತೇಜಸ್ವಿಯು; ಯಾರ ಕಿರಣಗಳಿಂದ ಸೂರ್ಯ-ಚಂದ್ರರೂ ತೇಜಸ್ವಿಗಳಾಗುವರೋ ಅವನು; ಭಕ್ತರ ಒಳ-ಹೊರ ಕಣ್ಣುಗಳನ್ನು ಬೆಳಗಿಸುವ ಸಾಮರ್ಥ್ಯವುಳ್ಳ ದಿವ್ಯತೇಜಸ್ಸನ್ನು ಸದಾ ಹೊಂದಿರುವವನು; ಕಿರಣಗಳುಳ್ಳವನು. (೬೩೪) ಅರ್ಚಿತಃ71 – ಪೂಜ್ಯರಿಂದಲೂ ಪೂಜಿತನಾದವನು. (೬೩೫) ಕುಂಭಃ72 – ಪ್ರಾಣಾಪಾನನಿರೋಧರೂಪದ ಕುಂಭಕಯೋಗಸ್ವರೂಪಿಯು73; ಸಂಪೂರ್ಣಕುಂಭದಂತೆ ಎಲ್ಲವನ್ನೂ ತನ್ನಲ್ಲಿ ತುಂಬಿಕೊಂಡು ನಿಶ್ಚಲನಾಗಿರುವವನು; ಭೂಮಿಯನ್ನು ಬೆಳಗುವವನು. (೬೩೬) ವಿಶುದ್ಧಾತ್ಮಾ – ಅತ್ಯಂತ ಪರಿಶುದ್ಧವಾದ ಆತ್ಮಸ್ವರೂಪವುಳ್ಳವನು; ತ್ರಿಗುಣಾತೀತನಾಗಿರುವದರಿಂದ ವಿಶುದ್ಧ ಆತ್ಮವುಳ್ಳವನು; ಸಂಪೂರ್ಣವಾಗಿ ಶರಣಾದವರಿಗೆ ತನ್ನ ಸರ್ವಸ್ವವನ್ನೂ ಕೊಟ್ಟುಬಿಡುವುದರಿಂದ ವಿಶುದ್ಧಾತ್ಮನು. (೬೩೭) ವಿಶೋಧನಃ – ಭಕ್ತರನ್ನು ಚೆನ್ನಾಗಿ ಶುದ್ಧಿಮಾಡುವವನು; ತನ್ನ ಸ್ಮರಣಮಾತ್ರದಿಂದಲೇ ಪಾಪಗಳನ್ನು ನಾಶಮಾಡುವವನು. (೬೩೮) ಅನಿರುದ್ಧಃ – ತಡೆಯಿಲ್ಲದವನು; ನಾರಾಯಣದ ವ್ಯೂಹಗಳಲ್ಲಿ74 ನಾಲ್ಕನೆಯವನು; ಅಹಂಕಾರ ತತ್ತ್ವದ ಅಭಿಮಾನೀ ದೇವತೆಯು; ಯಾರಿಂದಲೂ ತಡೆಯಲು ಅಸಾಧ್ಯನಾದವನು. (೬೩೯) ಅಪ್ರತಿರಥಃ75 – ತಡೆಯುವ ಎದುರಾಳಿಯಿಲ್ಲದವನು; ಪ್ರತಿಪಕ್ಷವಿಲ್ಲದವನು. (೬೪೦) ಪ್ರದ್ಯುಮ್ನಃ – ಕಾಮದೇವಸ್ವರೂಪನು; ಶ್ರೇಷ್ಠವಾದ ರೂಪಧನವುಳ್ಳವನು; ನಾರಾಯಣನ ವ್ಯೂಹಗಳಲ್ಲಿ ಮೂರನೆಯವನು; ಮಹಸ್ತತ್ತ್ವಕ್ಕೆ ಅಭಿಮಾನಿ ಭಗವದ್ರೂಪನು. (೬೪೧) ಅಮಿತವಿಕ್ರಮಃ – ಅಳೆಯಲಾಗದ ಪರಾಕ್ರಮವುಳ್ಳವನು; ದೀರ್ಘವಾದ ಪಾದವಿನ್ಯಾಸವುಳ್ಳವನು; ತ್ರಿವಿಕ್ರಮಸ್ವರೂಪಿಯು.

13135082a ಕಾಲನೇಮಿನಿಹಾ ವೀರಃ ಶೂರಃ ಶೌರಿರ್ಜನೇಶ್ವರಃ76
13135082c ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ।।

(೬೪೨) ಕಾಲನೇಮಿನಿಹಾ77 – ಕಾಲನೇಮಿ ಎಂಬ ಅಸುರನನ್ನು ಸಂಹರಿಸಿದವನು. (೬೪೩) ವೀರಃ – ವೀರನು; ಶೂರನು. (೬೪೪) ಶೂರಃ – ಶೂರನು; ವೀರನು. (೬೪೫) ಶೌರಿರ್ಜನೇಶ್ವರಃ – ಶೂರನೆಂಬ ಯದುವಂಶೀಯ ಕುಲದಲ್ಲಿ ಹುಟ್ಟಿದ ರಾಜನು. (೬೪೬) ತ್ರಿಲೋಕಾತ್ಮಾ78 – ಮೂರು ಲೋಕಗಳಿಗೂ ಆತ್ಮಸ್ವರೂಪನಾಗಿರುವವನು; ಮೂರು ಲೋಕಗಳಿಗೂ ಅಂತರ್ಯಾಮಿಯಾಗಿರುವವನು; ಮೂರುಲೋಕಗಳಿಂದ ಅಭಿನ್ನನಾಗಿರುವವನು. (೬೪೭) ತ್ರಿಲೋಕೇಶಃ – ಮೂರೂ ಲೋಕಗಳ ಸ್ವಾಮಿಯು. (೬೪೮) ಕೇಶವಃ – ಸುಂದರವಾದ ಮತ್ತು ನೀಳವಾದ ಕೇಶರಾಶಿಯುಳ್ಳವನು; ಸೂರ್ಯನೇ ಮೊದಲಾದ ಜ್ಯೋತಿಗಳಲ್ಲಿ ವ್ಯಾಪಿಸಿರುವ ಕೇಶವೆಂಬ ಕಿರಣಗಳುಳ್ಳವನು; ಬ್ರಹ್ಮ-ವಿಷ್ಣು-ಶಿವರೆಂಬ ಶಕ್ತಿಯುಳ್ಳವನು. (೬೪೯) ಕೇಶಿಹಾ – ಕೇಶಿಯೆಂಬ ದಾನವನನ್ನು ಸಂಹರಿಸಿದವನು. (೬೫೦) ಹರಿಃ – ಮನಸ್ಸನ್ನು ಅಪಹರಿಸುವವನು, ಪಾಪಗಳನ್ನು ಹೋಗಲಾಡಿಸುವವನು79.

13135083a ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ।
13135083c ಅನಿರ್ದೇಶ್ಯವಪುರ್ವಿಷ್ಣುರ್ವೀರೋಽನಂತೋ ಧನಂಜಯಃ।।

(೬೫೧) ಕಾಮದೇವಃ – ಮನ್ಮಥಸ್ವರೂಪನು; ಕಾಮಿಸಲ್ಪಡುವ ದೇವನು; ಎಲ್ಲರ ಕಾಮನೆಗಳನ್ನೂ ಈಡೇರಿಸುವವನು; ಕಾಮನಂತೆ ಬೆಳಗುವವನು. (೬೫೨) ಕಾಮಪಾಲಃ – ಭಕ್ತರ ಕಾಮನೆಗಳನ್ನು ಪಾಲಿಸುವವನು. (೬೫೩) ಕಾಮೀ – ಪೂರ್ಣಕಾಮನು. (೬೫೪) ಕಾಂತಃ – ಆಕರ್ಷಕನು; ಕಮನೀಯನು; ಸುಂದರ ದೇಹವುಳ್ಳವನು; ಮನೋಹರನು. (೬೫೫) ಕೃತಾಗಮಃ – ಆಗಮಗಳನ್ನು80 ರಚಿಸಿದವನು. (೬೫೬) ಅನಿರ್ದೇಶ್ಯವಪುಃ – ತ್ರಿಗುಣಾತೀತನೂ ಅತೀಂದ್ರಿಯನೂ ಆಗಿರುವುದರಿಂದ ಇವನ ಶರೀರವು ಇಂಥಹುದು ಎಂದು ನಿರ್ದಿಷ್ಟವಾಗಿ ಹೇಳಲು ಅಸಾಧ್ಯನಾದವನು; ನಿರ್ದೇಶಿಸಲು ಅಸಾಧ್ಯವಾದ ದೇಹವುಳ್ಳವನು. (೬೫೭) ವಿಷ್ಣುಃ – ಸರ್ವವ್ಯಾಪಕನು; ತನ್ನ ಪಾದವಿನ್ಯಾಸದಿಂದ ಎಲ್ಲವನ್ನೂ ಆಕ್ರಮಿಸಿದವನು81; ದ್ಯಾವಾಪೃಥ್ವಿಗಳನ್ನು ತನ್ನ ಕಾಂತಿಯಿಂದ ವ್ಯಾಪಿಸಿರುವವನು. (೫೫೮) ವೀರಃ – ಮಹಾ ವೀರನು; ಸಮರ್ಥನು. (೫೫೯) ಅನಂತಃ – ದೇಶ-ಕಾಲ-ವಸ್ತುಗಳ ಪರಿಮಿತಿಯಿಲ್ಲದವನು; ನಾಶವಿಲ್ಲದವನು. (೬೬೦) ಧನಂಜಯಃ – ಎಲ್ಲ ಧನಗಳನ್ನೂ ಗೆದ್ದ ಪರಮಧನಸ್ವರೂಪನು; ಅರ್ಜುನಸ್ವರೂಪನು; ಅಗ್ನಿಸ್ವರೂಪನು.

13135084a ಬ್ರಹ್ಮಣ್ಯೋ ಬ್ರಹ್ಮಕೃದ್ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ।
13135084c ಬ್ರಹ್ಮವಿದ್ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯಃ।।

(೬೬೧) ಬ್ರಹ್ಮಣ್ಯಃ – ತಪಸ್ಸು, ವೇದ, ಬ್ರಾಹ್ಮಣರು ಮತ್ತು ಜ್ಞಾನಗಳಿಗೆ ಹಿತವನ್ನುಂಟುಮಾಡುವವನು. (೬೬೨) ಬ್ರಹ್ಮಕೃತ್ – ವೇದ, ತಪಸ್ಸು ಮತ್ತು ಬ್ರಾಹ್ಮಣರನ್ನು ನಿರ್ಮಿಸಿದವನು. (೬೬೩) ಬ್ರಹ್ಮಾ – ಸೃಷ್ಟಿಕರ್ತ; ವೇದ, ತಪಸ್ಸು ಮತ್ತು ಬ್ರಾಹ್ಮಣ ಸ್ವರೂಪನು. (೬೬೪) ಬ್ರಹ್ಮ82 - ಪರಬ್ರಹ್ಮನು. (೬೬೫) ಬ್ರಹ್ಮವಿವರ್ಧನಃ – ವೇದ, ತಪಸ್ಸು ಮತ್ತು ಬ್ರಾಹ್ಮಣರನ್ನು ವೃದ್ಧಿಗೊಳಿಸುವವನು. (೬೬೬) ಬ್ರಹ್ಮವಿತ್ – ವೇದ-ತಪಸ್ಸುಗಳನ್ನು ತಿಳಿದವನು. (೬೬೭) ಬ್ರಾಹ್ಮಣಃ – ಬ್ರಹ್ಮಜ್ಞಾನೀ ಬ್ರಾಹ್ಮಣಸ್ವರೂಪನು. (೬೬೮) ಬ್ರಹ್ಮೀ – ವೇದ, ತಪಸ್ಸು ಮತ್ತು ಬ್ರಹ್ಮರನ್ನುಳ್ಳವನು; ಪ್ರಮಾಣ-ಪ್ರಮೇಯ ರೂಪದ ಈ ಎಲ್ಲ ಬ್ರಹ್ಮವನ್ನೂ ಹೊಂದಿರುವವನು. (೬೬೯) ಬ್ರಹ್ಮಜ್ಞಃ – ವೇದ, ತಪಸ್ಸು ಮತ್ತು ಪರತತ್ತ್ವವನ್ನು ತಿಳಿದವನು; ತನಗೆ ಆತ್ಮಭೂತವಾದ ವೇದಗಳನ್ನು ತಿಳಿದಿರುವವನು. (೬೭೦) ಬ್ರಾಹ್ಮಣಪ್ರಿಯಃ83 – ಬ್ರಹ್ಮಜ್ಞಾನೀ ಬ್ರಾಹ್ಮಣರಿಗೆ ಪ್ರಿಯನಾದವನು; ಬ್ರಹ್ಮಜ್ಞಾನೀ ಬ್ರಾಹ್ಮಣರನ್ನು ಪ್ರೀತಿಸುವವನು.

13135085a ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ।
13135085c ಮಹಾಕ್ರತುರ್ಮಹಾಯಜ್ವಾ ಮಹಾಯಜ್ಞೋ ಮಹಾಹವಿಃ।।

(೬೭೧) ಮಹಾಕ್ರಮಃ – ಅತಿದೊಡ್ಡ ಪಾದವಿನ್ಯಾಸಗಳುಳ್ಳವನು; ಅತಿ ದೊಡ್ಡ ಹೆಜ್ಜೆಗಳನ್ನಿಡುವವನು; ಹೆಜ್ಜೆಹೆಜ್ಜೆಗೆ ಭಕ್ತರನ್ನು ಮೇಲಕ್ಕೊಯ್ಯುವವನು; ದೊಡ್ಡ ಪರ್ವಗಳುಳ್ಳವನು. (೬೭೨) ಮಹಾಕರ್ಮಾ – ಸೃಷ್ಟಿಯೇ ಮೊದಲಾದ ಮಹಾಕರ್ಮಗಳನ್ನೆಸಗಿದವನು; ದೊಡ್ಡ ಕರ್ಮಗಳನ್ನು ಅನಾಯಾಸವಾಗಿ ಮಾಡುವವನು. (೬೭೩) ಮಹಾತೇಜಾ84 – ಮಹಾತೇಜಸ್ವಿಯು; ಯಾರ ತೇಜಸ್ಸಿನಿಂದ ಭಾಸ್ಕರಾದಿಗಳೂ ತೇಜಸ್ವಿಗಳಾಗಿದ್ದಾರೋ ಅಂತಹ ಅತಿದೊಡ್ಡ ತೇಜಸ್ಸುಳ್ಳವನು; ತಾಮಸರ ಅನಾದಿ ಅವಿದ್ಯೆಯನ್ನು ಅಪಹರಿಸುವ ಮಹಾತೇಜಸ್ವಿಯು. (೬೭೪) ಮಹೋರಗಃ – ಮಹಾಶೇಷನಾಗ; ವಾಸುಕಿ ಸ್ವರೂಪನು; ಮಹಾಕುಂಡಲಿನೀಪ್ರಾಣಶಕ್ತಿಸ್ವರೂಪನು; ಮನಸ್ಸಿನ ಮೂಲಕ ಪ್ರವೇಶಿಸುವವನು. (೬೭೫) ಮಹಾಕ್ರತುಃ – ಮಹಾಯಜ್ಞಸ್ವರೂಪಿಯು; ಜ್ಞಾನಸ್ವರೂಪಿಯು; ಎಲ್ಲರಿಗೂ ಮಾಡಲು ಸಾಧ್ಯವಾಗಿರುವ ಪೂಜೆಗಳುಳ್ಳವನು. (೬೭೬) ಮಹಾಯಜ್ವಾ85 – ಸೃಷ್ಟಿ-ಸ್ಥಿತಿ-ಲಯರೂಪದ ಮಹಾಯಜ್ಞವನ್ನು ಮಾಡುವವನು; ಶ್ರೀರಾಮಾದ್ಯವತಾರಗಳಲ್ಲಿ ಮಹಾಯಜ್ಞಗಳನ್ನು ಮಾಡಿದವನು; ಮಹಾಯಜ್ಞಗಳನ್ನು ಮಾಡುವವರ ಅಂತರ್ಯಾಮಿಯು. (೬೭೭) ಮಹಾಯಜ್ಞೋ86 – ಪಂಚಮಹಾಯಜ್ಞಸ್ವರೂಪನು; ಪಂಚಮಹಾಯಜ್ಞಗಳಿಂದ ಆರಾಧಿಸಲ್ಪಡುವವನು; ಸೃಷ್ಟಿ-ಸ್ಥಿತಿ-ಲಯರೂಪದ ಮಹಾಯಜ್ಞವನ್ನು ಮಾಡುವವನು; ಅಶ್ವಮೇಧವೇ ಮೊದಲಾದ ಮಹಾಯಜ್ಞಗಳು ಯಾರ ವಿಷಯಗಳಾಗಿವೆಯೋ ಅವನು. (೬೭೮) ಮಹಾಹವಿಃ – ಮಹಾಗ್ನಿಯಾದ ತನ್ನಲ್ಲಿ ಹೋಮಮಾಡಿಕೊಳ್ಳವ ಮಹಾಹವಿಸ್ಸೂ ತಾನೇ ಆಗಿರುವವನು; ಮಹಾಹವಿಸ್ಸಾಗಿ ಜಗತ್ತೆಲ್ಲವೂ ಯಾರಲ್ಲಿ ಹೋಮಮಾಡಲ್ಪಡುತ್ತದೆಯೋ ಅವನು.

13135086a ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿಃ ಸ್ತೋತಾ ರಣಪ್ರಿಯಃ।
13135086c ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ।।

(೬೭೯) ಸ್ತವ್ಯಃ87 – ಎಲ್ಲರ ಸ್ತುತಿಗೂ ಯೋಗ್ಯನಾದವನು; ತಾನು ಯಾರನ್ನೂ ಸ್ತುತಿಸದೇ ಎಲ್ಲರಿಂದಲೂ ಸ್ತುತಿಸಲ್ಪಡುವವನು. (೬೮೦) ಸ್ತವಪ್ರಿಯಃ – ಸ್ತೋತ್ರಪ್ರಿಯನು; ಯಾರೇ ಆಗಲಿ ಯಾವುದೇ ಭಾಷೆಯಲ್ಲೇ ಆಗಲಿ ಹೊಗಳಿಕೆಯ ಅಥವಾ ತೆಗಳಿಕೆಯ ಮಾತನ್ನಾಡಿದರೆ ಅದು ತನ್ನದೇ ಸ್ತುತಿ ಎಂದು ತಿಳಿದುಕೊಂಡು ಅವರನ್ನು ಪ್ರೀತಿಸುವವನು. (೬೮೧) ಸ್ತೋತ್ರಂ – ಸ್ತುತಿರೂಪನು. (೬೮೨) ಸ್ತುತಿಃ – ಸ್ತೋತ್ರಮಾಡುವ ಕ್ರಿಯೆಯೂ ತಾನೇ ಆಗಿರುವವನು (೬೮೩) ಸ್ತೋತಾ88 – ಸ್ತೋತ್ರಮಾಡುವವನೂ ತಾನೇ ಆಗಿರುವವನು; ಸರ್ವಸ್ವರೂಪನಾಗಿರುವುದರಿಂದ ತನ್ನ ಸ್ತೋತ್ರವನ್ನು ತಾನೇ ಮಾಡಿಕೊಳ್ಳುವವನು; ತನ್ನನ್ನು ಸ್ತುತಿಸುವ ಭಕ್ತರನ್ನು ತಾನೇ ಸ್ತುತಿಸುವ ಸ್ವಭಾವವುಳ್ಳವನು. (೬೮೪) ರಣಪ್ರಿಯಃ – ಧರ್ಮರಕ್ಷಣಾರ್ಥವಾದ ಯುದ್ಧದಲ್ಲಿ ಪ್ರೀತಿಯುಳ್ಳವನು; ಯುದ್ಧದಲ್ಲಿ ಪ್ರೀತಿಯುಳ್ಳವನು. (೬೮೫) ಪೂರ್ಣಃ – ಜ್ಞಾನ-ಆನಂದಾದಿ ಗುಣಗಳಿಂದ ಪೂರ್ಣನಾಗಿರುವವನು; ಎಲ್ಲ ಕಾಮನೆಗಳಿಂದಲೂ ಮತ್ತು ಎಲ್ಲ ಶಕ್ತಿಗಳಿಂದಲೂ ಸಂಪನ್ನನಾಗಿರುವವನು; ಗುಣಗಳಿಂದ ಪೂರ್ಣನಾದವನು. (೬೮೬) ಪೂರಯಿತಾ – ತುಂಬುವವನು; ಪೂರ್ಣಗೊಳಿಸುವವನು. (೬೮೭) ಪುಣ್ಯಃ – ಪಾವನಗೊಳಿಸುವವನು; ಸುಖಕ್ಕೆ ಕಾರಣನು. (೬೮೮) ಪುಣ್ಯಕೀರ್ತಿಃ – ಪಾವನ ಕೀರ್ತಿಯುಳ್ಳವನು. (೬೮೯) ಅನಾಮಯಃ – ವ್ಯಾಧಿರಹಿತನು; ಕರ್ಮಜನ್ಮವಾದ ಹೊರಗಿನ ಅಥವಾ ಒಳಗಿನ ವ್ಯಾಧಿಗಳಿಂದ ಎಂದೂ ಪೀಡಿತನಾಗದವನು; ಸಂಸಾರವೆಂಬ ಮಹಾವ್ಯಾಧಿಗೆ ವಿರೋಧಿಯಾಗಿರುವವನು; ರೋಗಶೂನ್ಯನು.

13135087a ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ।
13135087c ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ।।

(೬೯೦) ಮನೋಜವಃ – ಮನಸ್ಸಿನ ವೇಗವುಳ್ಳವನು; ಮನಸ್ಸಿಗೆ ವೇಗವನ್ನುಂಟುಮಾಡುವವನು. (೬೯೧) ತೀರ್ಥಕರಃ – ಶಾಸ್ತ್ರಕರ್ತೃವು; ತೀರ್ಥಸದೃಶ ಪವಿತ್ರ ಹಸ್ತವುಳ್ಳವನು; ತೀರ್ಥವೆಂಬ ಹದಿನಾಲ್ಕು ವಿದ್ಯೆಗಳ ಮತ್ತು ವೇದಬ್ರಾಹ್ಮ ವಿದ್ಯೆಗಳ ಸಿದ್ಧಾಂತಗಳನ್ನು ಮಾಡಿ ಉಪದೇಶಿಸಿದವನು; ಗಂಗೆಯೇ ಮೊದಲಾದ ತೀರ್ಥಗಳ ಉತ್ಪತ್ತಿಗೆ ಕಾರಣನು; ಶ್ರುತಿ-ಸ್ಮೃತಿಗಳೇ ಮೊದಲಾದ ಉತ್ತಮ ಶಾಸ್ತ್ರಗಳ ಪ್ರವರ್ತಕನು; ಶಾಸ್ತ್ರವು ಯಾರ ಕೈಯಲ್ಲಿದೆಯೋ ಅವನು. (೬೯೨) ವಸುರೇತಾ – ವಸುಗಳಿಗೆ ಕಾರಣನು; ಸುವರ್ಣರೇತಸ್ಸುಳ್ಳವನು; ಸಂಪನ್ಮಯ ವೀರ್ಯವುಳ್ಳವನು; ಸುವರ್ಣವು ಯಾರ ರೇತಸ್ಸೋ ಅವನು; ದಿವ್ಯಜ್ಯೋತಿಗೆ ಕಾರಣನು; ಜಲದಲ್ಲಿ ತೇಜಸ್ಸುಳ್ಳವನು. (೬೯೩) ವಸುಪ್ರದಃ – ಸಂಪತ್ತನ್ನು ಕೊಡುವವನು; ಕುಬೇರ ಸ್ವರೂಪಿಯು. (೬೯೪) ವಸುಪ್ರದಃ – ಮೋಕ್ಷರೂಪೀ ಫಲವನ್ನು ಕೊಡುವವನು; ದೈವೀಸಂಪತ್ತನ್ನು ಕೊಡುವವನು; ವಸುದೇವತಾ ಪದವಿಯನ್ನು ಕೊಡುವವನು; ವಸುವಿನ ಅವತಾರನಾದ ಭೀಷ್ಮನನ್ನು ಖಂಡಿಸಿದವನು. (೬೯೫) ವಾಸುದೇವಃ – ವಸುದೇವನ ಮಗನು; ಎಲ್ಲೆಲ್ಲಿಯೂ ವಾಸಿಸುವ ದೇವನು; ಜೀವಿಗಳಿಗೆ ಸ್ವಾಮಿಯು; ವ್ಯೂಹದಲ್ಲಿ ಮೊದಲನೆಯವನು; ಜ್ಞಾನ-ಬಲ-ಐಶ್ವರ್ಯ-ವೀರ್ಯ-ಶಕ್ತಿ-ತೇಜಸ್ಸುಗಳೆಂಬ ಆರು ಗುಣಗಳಿಂದ ಸಂಪನ್ನನಾದವನು. (೬೯೬) ವಸುಃ – ವಸುದೇವತಾಸ್ವರೂಪನು (೬೯೭) ವಸುಮನಾಃ – ವಸುದೇವತೆಗಳಲ್ಲಿ ಮನಸ್ಸುಳ್ಳವನು; ಸಂಪತ್ತಿನಲ್ಲಿ ಮನಸ್ಸುಳ್ಳವನು; ವಾಸಿಸುವ ಮನಸ್ಸುಳ್ಳವನು; ವಸುದೇವತೆಗಳ ಅಥವಾ ವಸು ಉಪರಿಚರನ ಮನಸ್ಸು ಯಾರ ಮೇಲಿದೆಯೋ ಅವನು. (೬೯೮) ಹವಿಃ – ಹವಿಸ್ಸಿನ ರೂಪನು; ಅಗ್ನಿಯಲ್ಲಿ ಹೋಮಮಾಡುವ ಹವಿಸ್ಸು.

13135088a ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ।
13135088c ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ।।

(೬೯೯) ಸದ್ಗತಿಃ – ಸತ್ಪುರುಷರ ಗತಿಯು; ಉತ್ತಮ ಗತಿಯು; ಸತ್ಪುರುಷರು ಹೊಂದುವವನು. (೭೦೦) ಸತ್ಕೃತಿಃ – ಒಳ್ಳೆಯ ಕರ್ಮಗಳನ್ನು ಮಾಡಿದವನು; ಜಗತ್ತಿನ ರಕ್ಷಣೆಯೆಂಬ ಶ್ರೇಷ್ಠ ಕೃತಿಯುಳ್ಳವನು. (೭೦೧) ಸತ್ತಾ – ಸದ್ಭಾವನು; ಸ್ವಜಾತೀಯ, ವಿಜಾತೀಯ ಮತ್ತು ಸ್ವಗತಭೇದರಹಿತ ಅನುಭೂತಿಸ್ವರೂಪನು; ಇರುವವನು; ಆನಂದಾಶ್ರಯನು. (೭೦೨) ಸದ್ಭೂತಿಃ – ಸತ್ಪುರುಷರ ಐಶ್ವರ್ಯನು; ಆಭಾದಿತವಾಗಿ ಬಹುಪ್ರಕಾರವಾಗಿ ಪ್ರಕಾಶಿಸುವ ಚಿದಾತ್ಮಕ ಸತ್ಸ್ವರೂಪನು. (೭೦೩) ಸತ್ಪರಾಯಣಃ – ಸತ್ಪುರುಷರಿಗೆ ಶ್ರೇಷ್ಠತಮ ಸ್ಥಾನವಾಗಿರುವವನು; ಯೋಗ್ಯರಿಗೆ ಮುಖ್ಯ ಆಶ್ರಯನು. (೭೦೪) ಶೂರಸೇನಃ – ಶೂರಸೇನವಂಶದವನು; ಶೂರರ ಸೈನ್ಯವುಳ್ಳವನು. ವಿಷ್ವಕ್ಸೇನರೂಪಿಯು. (೭೦೫) ಯದುಶ್ರೇಷ್ಠಃ89 – ಯಾದವರಲ್ಲಿ ಶ್ರೇಷ್ಠನು; ಯದುವಂಶದವರಲ್ಲಿ ಪ್ರಧಾನನು. (೭೦೬) ಸನ್ನಿವಾಸಃ90 – ಸತ್ಪುರುಷರ ನಿವಾಸಸ್ಥಾನನು; ವಿದ್ವಾಂಸರಿಗೆ ಆಶ್ರಯನು. (೭೦೭) ಸುಯಾಮುನಃ – ಉತ್ತಮ ಯಮುನಾನದಿಯ ಸಂಬಂಧವುಳ್ಳವನು; ಯಮುನಾತೀರವಾಸಿಗಳ ಪರಿವಾರದವನು.

13135089a ಭೂತಾವಾಸೋ ವಾಸುದೇವೋ ಸರ್ವಾಸುನಿಲಯೋಽನಲಃ।
13135089c ದರ್ಪಹಾ ದರ್ಪದೋ ದೃಪ್ತೋ ದುರ್ಧರೋಽಥಾಪರಾಜಿತಃ।।

(೭೦೮) ಭೂತಾವಾಸಃ – ಭೂತಗಳಿಗೆ ನಿವಾಸಸ್ಥಾನನು; ಭೂತಗಳನ್ನು ರಕ್ಷಿಸುವವನು ಮತ್ತು ಎಲ್ಲಕಡೆ ಸಂಚರಿಸುವವನು. (೭೦೯) ವಾಸುದೇವಃ – ಸರ್ವಭೂತಗಳಲ್ಲಿಯೂ ವಾಸಮಾಡುವವನು; ಮಾಯೆಯಿಂದ ಜಗತ್ತನ್ನು ಆಚ್ಛಾದಿಸಿರುವ ದೇವನು. (೭೧೦) ಸರ್ವಾಸುನಿಲಯಃ – ಎಲ್ಲ ಜೀವಿಗಳಿಗೂ ನೆಲೆಮನೆ ಅಥವಾ ಲಯಸ್ಥಾನನಾಗಿರುವವನು; ಸಮಸ್ತಪ್ರಾಣಿಗಳಿಗೂ ಅವಲಂಬನೆಯಾದವನು; ಸಂಪೂರ್ಣ ಪ್ರಾಣಗಳೂ ಜೀವರೂಪನಾದ ಯಾರ ಆಶ್ರಯದಲ್ಲಿ ಲೀನವಾಗುತ್ತವೆಯೋ ಅವನು. (೭೧೧) ಅನಲಃ – ಅಗ್ನಿ ಸ್ವರೂಪನು; ಶಕ್ತಿ-ಸಂಪತ್ತುಗಳ ಪರ್ಯಾಪ್ತಿಯಿಲ್ಲದವನು; ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಲ್ಲಿ ಸಾಕು ಎಂಬ ವಿಚಾರವಿಲ್ಲದವನು. (೭೧೨) ದರ್ಪಹಾ – ದರ್ಪವನ್ನು ಧ್ವಂಸಮಾಡುವವನು. (೭೧೩) ದರ್ಪದಃ - ದರ್ಪವನ್ನುಂಟುಮಾಡುವವನು; ಧರ್ಮಮಾರ್ಗದಲ್ಲಿರುವವರಿಗೆ ಗೌರವವನ್ನು ನೀಡುವವನು. (೭೧೪) ದೃಪ್ತಃ – ನಿತ್ಯಾನಂದದಿಂದ ಬೀಗಿದವನು. (೭೧೫) ದುರ್ಧರಃ – ಧರಿಸಲು ಕಷ್ಟಸಾಧ್ಯನು; ಸರ್ವೋಪಾಧಿರಹಿತನಾಗಿರುವುದರಿಂದ ಧ್ಯಾನವೇ ಮೊದಲಾದವುಗಳ ಮೂಲಕ ಧರಿಸಲು ಅಸಾಧ್ಯನಾದವನು; ಧರಿಸಲು ಅಶಕ್ಯನಾದವನು. (೭೧೬) ಅಪರಾಜಿತಃ – ಸರ್ವವಿಜಯಿಯು; ಯಾರಿಗೂ ಸೋಲದವನು.

13135090a ವಿಶ್ವಮೂರ್ತಿರ್ಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್।
13135090c ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ।।

(೭೧೭) ವಿಶ್ವಮೂರ್ತಿಃ – ವಿಶ್ವರೂಪಿಯು; ವಿಶ್ವವು ಯಾರ ಆಕಾರದಲ್ಲಿರುವುದೋ ಅವನು. (೭೧೮) ಮಹಾಮೂರ್ತಿಃ – ವಿಶ್ವಾಕಾರದ ಅತಿದೊಡ್ಡ ಮೂರ್ತಿಯುಳ್ಳವನು. (೭೧೯) ದೀಪ್ತಮೂರ್ತಿಃ – ಜ್ಞಾನಪ್ರಕಾಶದಿಂದ ಉಜ್ಜ್ವಲ ಮೂರ್ತಿಯುಳ್ಳವನು; ತೇಜೋಮಯ ಮೂರ್ತಿಯು. (೭೨೦) ಅಮೂರ್ತಿಮಾನ್ – ಆಕಾರರಹಿತನು; ಪ್ರಾಕೃತವಾದ ಆಕಾರವಿಲ್ಲದವನು; ಕರ್ಮಜನ್ಯ ದೇಹವಿಲ್ಲದವನು. (೭೨೧) ಅನೇಕಮೂರ್ತಿಃ – ಅನೇಕ ರೂಪಗಳುಳ್ಳವನು; ಸ್ವೇಚ್ಛೆಯಿಂದ ಸ್ವೀಕರಿಸಿದ ನಾನಾರೂಪಗಳುಳ್ಳವನು; ಹದಿನಾರು ಸಾವಿರದ ನೂರಕ್ಕಿಂತಲೂ ಹೆಚ್ಚು ಸ್ತ್ರೀಯರನ್ನು ಪರಿಗ್ರಹಿಸಿ ಅವರಷ್ಟೇ ಸಂಖ್ಯೆಗಳ ದೇಹಗಳನ್ನು ಧರಿಸಿದವನು. (೭೨೨) ಅವ್ಯಕ್ತಃ – ಅಜ್ಞಾನಿಗಳಿಗೆ ವ್ಯಕ್ತವಾಗದವನು; ಅಕ್ಷರರೂಪಿಯು; ವ್ಯಕ್ತನಂತೆ ಕಂಡರೂ ಅವ್ಯಕ್ತನಾಗಿರುವವನು; ಅನೇಕ ಮೂರ್ತಿಗಳಲ್ಲಿ ಕಂಡರೂ ಇವನು ಹೀಗೆಯೇ ಇದ್ದಾನೆ ಎಂದು ವ್ಯಕ್ತನಾಗದವನು. (೭೨೩) ಶತಮೂರ್ತಿಃ – ನೂರಾರು ಮೂರ್ತಿಗಳುಳ್ಳವನು; ವಿಶ್ವರೂಪದಲ್ಲಿ ನೂರಾರು ಸಾವಿರಾರು ರೂಪಗಳಾಗಿ ಕಾಣುವವನು. (೭೨೪) ಶತಾನನಃ – ನೂರಾರು ಬಾಯಿಗಳುಳ್ಳವನು; ನೂರಾರು ಮುಖಗಳುಳ್ಳವನು.

13135091a ಏಕೋ ನೈಕಃ ಸವಃ ಕಃ ಕಿಂ ಯತ್ತತ್ಪದಮನುತ್ತಮಮ್।
13135091c ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ।।

(೭೨೫) ಏಕಃ – ಅದ್ವಿತೀಯನು. (೭೨೬) ನೈಕಃ – ಅನೇಕ ರೂಪಗಳುಳ್ಳವನು; ಮಾಯೆಯಿಂದ ಬಹುರೂಪನಾಗಿರುವವನು. (೭೨೭) ಸವಃ – ಸೋಮಯಜ್ಞಸ್ವರೂಪಿಯು. (೭೨೮) ಕಃ – ಇವನು ಯಾರು? ಎಂಬ ಪ್ರಶ್ನೆಗೆ ವಿಷಯನಾಗಿರುವವನು; ಬ್ರಹ್ಮಸ್ವರೂಪಿಯು; ಸುಖಸ್ವರೂಪಿಯು. (೭೨೯) ಕಿಮ್ – ಇದು ಯಾವುದು ಎಂದು ವಿಚಾರಮಾಡಬೇಕಾದ ಪರಬ್ರಹ್ಮವಸ್ತುವು; ಎಲ್ಲ ವೇದಗಳ ವಿಚಾರಕ್ಕೆ ವಿಷಯನಾಗಿರುವವನು. (೭೩೦) ಯತ್ – ಸ್ವತಃ ಸಿದ್ಧನಾದವನು; ಅತ್ಯಂತ ಪ್ರಸಿದ್ಧನಾದವನು; ಸ್ವತಃಸಿದ್ಧ ಪರಬ್ರಹ್ಮವು. (೭೩೧) ತತ್ – ಇಂದ್ರಿಯಗಳಿಗೆ ಅತಿದೂರನಾಗಿ ಗ್ರಹಿಸಲು ಅಸಾಧ್ಯನಾಗಿರುವುದರಿಂದ ’ಅದು’ ಎಂದು ಹೇಳಲ್ಪಡುವವನು; ವಿಸ್ತಾರವನ್ನುಂಟುಮಾಡುವ ಬ್ರಹ್ಮವು; ಭಕ್ತರಿಗೆ ತನ್ನ ಜ್ಞಾನ-ಭಕ್ತಿಗಳನ್ನು ವಿಸ್ತರಿಸುವವನು. (೭೩೨) ಪದಮನುತ್ತಮಮ್ – ಯಾವುದಕ್ಕಿಂತಲೂ ಉತ್ತಮವಾದುದು ಬೇರೊಂದಿಲ್ಲದ ಪರಮೋತ್ತಮ ಸ್ಥಾನ ಅಥವಾ ಗತಿಯು; ಪರಬ್ರಹ್ಮವು. (೭೩೩) ಲೋಕಬಂಧುಃ – ಸಮಸ್ತ ಲೋಕಗಳಿಗೂ ನೆಂಟನಾಗಿರುವವನು; ಆಧಾರಸ್ವರೂಪನಾದ ಯಾರಲ್ಲಿ ಸಮಸ್ತ ಲೋಕಗಳೂ ಬಂಧಿಸಲ್ಪಟ್ಟಿವೆಯೋ ಅವನು; ಲೋಕಗಳಿಗೆ ತಂದೆಯಾದವನು; ಶ್ರುತಿ-ಸ್ಮೃತಿ ರೂಪವಾಗಿ ಹಿತಾಹಿತಗಳ ಉಪದೇಶದಿಂದ ಬಂಧುಕೃತ್ಯವನ್ನು ಮಾಡಿದವನು. (೭೩೪) ಲೋಕನಾಥಃ – ಸಮಸ್ತ ಲೋಕಗಳಿಗೂ ಒಡೆಯನು; ಲೋಕಗಳಿಂದ ಯಾಚಿಸಲ್ಪಡುವವನು; ಲೋಕಗಳನ್ನು ನಿಯಮಿಸುವವನು; ಲೋಕಗಳ ಮೇಲೆ ಶಾಸನಮಾಡುವವನು. (೭೩೫) ಮಾಧವಃ – ಲಕ್ಷ್ಮೀಪತಿಯು; ಮಧುವಂಶದಲ್ಲಿ ಹುಟ್ಟಿದವನು; ಪರಮಾನಂದಕ್ಕೆ ಸೇರಿದವನು; ಸುಖವನ್ನು ಕೊಡುವವನು. (೭೩೬) ಭಕ್ತವತ್ಸಲಃ – ಭಕ್ತರಲ್ಲಿ ಪರಮ ಪ್ರೇಮವನ್ನು ಹೊಂದಿರುವವನು; ಭಕ್ತರಲ್ಲಿ ಸ್ನೇಹವುಳ್ಳವನು.

13135092a ಸುವರ್ಣವರ್ಣೋ ಹೇಮಾಂಗೋ ವರಾಂಗಶ್ಚಂದನಾಂಗದೀ।
13135092c ವೀರಹಾ ವಿಷಮಃ ಶೂನ್ಯೋ ಘೃತಾಶೀರಚಲಶ್ಚಲಃ।

(೭೩೭) ಸುವರ್ಣವರ್ಣಃ91 – ಚಿನ್ನದ ಬಣ್ಣವುಳ್ಳವನು; ಒರೆಹಚ್ಚಿದ ಚಿನ್ನದಂತೆ ದೋಷರಹಿತವೂ ಉಜ್ಜ್ವಲವೂ ಆದ ದಿವ್ಯವರ್ಣವುಳ್ಳವನು. (೭೩೮) ಹೇಮಾಂಗಃ – ಬಣ್ಣ, ಕಾಂತಿ, ಅಮೂಲ್ಯತೆ, ರಮಣೀಯತೆ ಮೊದಲಾದವುಗಳಿಂದ ಚಿನ್ನಕ್ಕೆ ಸದೃಶ ಅಂಗಗಳುಳ್ಳವನು; ಚಿನ್ನಕ್ಕೆ ಸದೃಶವಾದ ದೇಹವುಳ್ಳವನು; ಸುವರ್ಣವು ಯಾರ ಅಂಗವಾಗಿರುವುದೋ ಅವನು. (೭೩೯) ವರಾಂಗಃ – ಶ್ರೇಷ್ಠ ಅಂಗಗಳುಳ್ಳವನು; ಶೋಭನ ಅಂಗಗಳುಳ್ಳವನು. (೭೪೦) ಚಂದನಾಂಗದೀ – ಚಂದನದ ತೋಳ್ಬಳೆಗಳುಳ್ಳವನು; ಶ್ರೀಗಂಧದಿಂದ ಪೂಜಿಸಲ್ಪಡುವವನು ಮತ್ತು ಕೇಯೂರಗಳಿಂದ ಅಲಂಕೃತನಾದವನು. (೭೪೧) ವೀರಹಾ – ವೀರಶತ್ರುಗಳನ್ನು ಸಂಹರಿಸುವವನು. (೭೪೨) ವಿಷಮಃ – ಎಣೆಯಿಲ್ಲದವನು; ಸರ್ವಲಕ್ಷಣಗಳಿಂದ ಕೂಡಿದವನಾದುದರಿಂದ ತನಗೆ ಸಮನಾದವರು ಯಾರೂ ಇಲ್ಲದಿರುವವನು; ಸರಿಸಾಟಿಯಿಲ್ಲದವನು. (೭೪೩) ಶೂನ್ಯಃ – ಆಕಾಶಸದೃಶನು; ವಿಶೇಷರಹಿತನು; ದೋಷಶೂನ್ಯನು; ಸರ್ವಪದಾರ್ಥಶೂನ್ಯನು; ಸರ್ವವಿಶೇಷರಹಿತನಾದುದರಿಂದ ಶೂನ್ಯಕ್ಕೆ ಸಮನಾದವನು; ಪ್ರಳಯಕಾಲದಲ್ಲಿ ಸರ್ವಪದಾರ್ಥಶೂನ್ಯನಾಗಿರುವವನು. (೭೪೪) ಘೃತಾಶೀಃ – ತುಪ್ಪವನ್ನು ಬಯಸುವವನು; ಪೂರ್ಣಕಾಮನಾದುದರಿಂದ ಕರಗಿಹೋದ ಆಶೆಗಳುಳ್ಳವನು; ಹವಿಸ್ಸಿನ ರೂಪದಲ್ಲಿ ತುಪ್ಪವನ್ನು ಬಯಸುವವನು. (೭೪೫) ಅಚಲಃ – ತನ್ನ ಸ್ವರೂಪ-ಸ್ಥಾನಗಳಿಂದ ಚಲಿಸದವನು; ಮಹಾಪರ್ವತವಿಭೂತಿರೂಪನು; ಪರ್ವತಸದೃಶನು. (೭೪೬) ಚಲಃ – ಅಚಲನಾಗಿದ್ದರೂ ಅವತಾರರೂಪದಲ್ಲಿ ಚಲಿಸುವವನು; ಜಗತ್ತಿನ ಚಲನೆಗೆ ಕಾರಣನಾದವನು; ವಾಯುರೂಪದಿಂದ ಚಲಿಸುವವನು.

13135093a ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್।
13135093c ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ।।

(೭೪೭) ಅಮಾನೀ – ಅಭಿಮಾನವುಳ್ಳದವನು; ಅಳತೆಯಿಲ್ಲದವನು; ಶುದ್ಧಜ್ಞಾನಸ್ವರೂಪನಾದುದರಿಂದ ಅನಾತ್ಮ ವಸ್ತುಗಳಲ್ಲಿ ಆತ್ಮಾಭಿಮಾನವಿಲ್ಲದವನು. (೭೪೮) ಮಾನದಃ – ಭಕ್ತರಿಗೆ ಬಹುಮಾನಗಳನ್ನು ಕೊಡುವವನು; ಸಂಸಾರದಲ್ಲಿ ಅಭಿಮಾನವನ್ನು ಉಂಟುಮಾಡುವವನು; ಮರ್ಯಾದೆಯನ್ನು ರಕ್ಷಿಸುವವನು. (೭೪೯) ಮಾನ್ಯಃ – ಪೂಜ್ಯರಿಗೂ ಪೂಜ್ಯನಾದವನು; ಸರ್ವೇಶ್ವರನಾಗಿರುವುದರಿಂದ ಸರ್ವರಿಗೂ ಮಾನನೀಯನು. (೭೫೦) ಲೋಕಸ್ವಾಮೀ – ಸಮಸ್ತಲೋಕಗಳಿಗೂ ಸ್ವಾಮಿಯು. (೭೫೧) ತ್ರಿಲೋಕಧೃಕ್ – ಮೂರು ಲೋಕಗಳನ್ನೂ ಧರಿಸಿರುವವನು. (೭೫೨) ಸುಮೇಧಾಃ – ಒಳ್ಳೆಯ ಮೇಧಾಶಕ್ತಿಯುಳ್ಳವನು; ಮೇಧಾ ಹಯಗ್ರೀವ ಮತ್ತು ಮೇಧಾದಕ್ಷಿಣಾಮೂರ್ತಿಸ್ವರೂಪನು. (೭೫೩) ಮೇಧಜಃ92 – ಯಜ್ಞದಲ್ಲಿ ಹುಟ್ಟುವವನು; ಮೇಧಾಶಕ್ತಿಯಿಂದ ಆವಿರ್ಭವಿಸುವವನು.; ಯಜ್ಞದಲ್ಲಿ ಪ್ರಕಟವಾಗುವವನು. (೭೫೪) ಧನ್ಯಃ – ಸುಕೃತಿಯು; ಕೃತಾರ್ಥನಾದವನು; ಧನವನ್ನು ಹೊಂದಿಸುವವನು. (೭೫೫) ಸತ್ಯಮೇಧಾ – ಅಮೋಘವಾದ ಮೇಧೆಯುಳ್ಳವನು. (೭೫೬) ಧರಾಧರಃ – ಭೂಮಿಯನ್ನು ಧರಿಸಿರುವವನು.

13135094a ತೇಜೋ ವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂ ವರಃ।
13135094c ಪ್ರಗ್ರಹೋ ನಿಗ್ರಹೋಽವ್ಯಗ್ರೋ ನೈಕಶೃಂಗೋ ಗದಾಗ್ರಜಃ।।

(೭೫೭) ತೇಜೋವೃಷಃ93 – ತೇಜಸ್ಸನ್ನು ಮಳೆಯಂತೆ ಸುರಿಸುವವನು; ಆದಿತ್ಯರೂಪದಿಂದ ಮಳೆಯನ್ನು ಸುರಿಸುವವನು. (೭೫೮) ದ್ಯುತಿಧರಃ94 – ಎಲ್ಲರ ಕಾಂತಿಯನ್ನೂ ಮೀರಿಸುವ ಕಾಂತಿಯುಳ್ಳವನು. (೭೫೯) ಸರ್ವಶಸ್ತ್ರಭೃತಾಂ ವರಃ – ಶಸ್ತ್ರಧಾರಿಗಳಲ್ಲಿ ಶ್ರೇಷ್ಠನಾದ ಶ್ರೀರಾಮರೂಪಿಯು; ಎಲ್ಲ ಶಸ್ತ್ರಧಾರಿಗಳಲ್ಲಿಯೂ ಶ್ರೇಷ್ಠನಾದವನು. (೭೬೦) ಪ್ರಗ್ರಹಃ – ಸಂಸಾರಪಾಶಸ್ವರೂಪನು; ಇಂದ್ರಿಯಗಳೆಂಬ ಕುದುರೆಗಳನ್ನು ಕಟ್ಟಿಹಾಕುವವನು; ರಜ್ಜುಸ್ವರೂಪನು; ನೆಚ್ಚಿದ ಭಕ್ತರನ್ನು ಚೆನ್ನಾಗಿ ಹಿಡಿದುಕೊಳ್ಳುವವನು; ಕಡಿವಾಣವನ್ನು ಧರಿಸಿದವನು; ಭಕ್ತರು ಸಮರ್ಪಿಸುವ ಪತ್ರ-ಪುಷ್ಪಾದಿಗಳನ್ನು ಚೆನ್ನಾಗಿ ಸ್ವೀಕರಿಸುವವನು. (೭೬೧) ನಿಗ್ರಹಃ95 – ಶತ್ರುಗಳನ್ನು ನಿಗ್ರಹಿಸುವವನು; ಎಲ್ಲವನ್ನೂ ತನ್ನ ಅಧೀನದಲ್ಲಿರಿಸಿಕೊಂಡು ನಿಗ್ರಹಿಸುವವನು. (೭೬೨) ವ್ಯಗ್ರಃ96 – ಅತ್ಯಂತ ಆಸಕ್ತನಾದವನು; ಅಂತ್ಯ ಅಥವಾ ನಾಶವಿಲ್ಲದವನು. (೭೬೩) ನೈಕಶೃಂಗಃ – ಅನೇಕ ಶೃಂಗಗಳುಳ್ಳವನು; ಪ್ರಣವಸ್ವರೂಪಿಯು; ಅಗ್ನಿಸ್ವರೂಪಿಯು. (೭೬೪) ಗದಾಗ್ರಜಃ – ಕೃಷ್ಣಾವತಾರದಲ್ಲಿ ಗದನಿಗೆ ಅಣ್ಣನಾದವನು.

13135095a ಚತುರ್ಮೂರ್ತಿಶ್ಚತುರ್ಬಾಹುಶ್ಚತುರ್ವ್ಯೂಹಶ್ಚತುರ್ಗತಿಃ।
13135095c ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್।।

(೭೬೫) ಚತುರ್ಮೂರ್ತಿಃ – ಕೃತಯುಗಾದಿ ಭೇದಗಳಿಗನುಗುಣವಾಗಿ ಕ್ರಮವಾಗಿ ಬಿಳಿಪು, ಕೆಂಪು, ಹಳದಿ ಮತ್ತು ಕಪ್ಪು ಬಣ್ಣಗಳ ಮೂರ್ತಿಗಳುಳ್ಳವನು; ವಿಶ್ವ, ತೈಜಸ, ಪ್ರಾಜ್ಞ ಮತ್ತು ತುರೀಯಗಳೆಂಬ ನಾಲ್ಕು ಮೂರ್ತಿಗಳುಳ್ಳವನು; ಬಲಭದ್ರ, ವಾಸುದೇವ, ಅನಿರುದ್ಧ ಮತ್ತು ಪ್ರದ್ಯುಮ್ನ ಎಂಬ ನಾಲ್ಕು ಮೂರ್ತಿಗಳುಳ್ಳವನು. (೭೬೬) ಚತುರ್ಬಾಹುಃ – ನಾಲ್ಕು ತೋಳುಗಳುಳ್ಳ ವಾಸುದೇವಮೂರ್ತಿಯು. (೭೬೭) ಚತುರ್ವೂಹಃ97 – ವಾಸುದೇವ, ಸಂಕರ್ಷಣ, ಅನಿರುದ್ಧ ಮತ್ತು ಪ್ರದ್ಯುಮ್ನ ಎಂಬ ನಾಲ್ಕು ವ್ಯೂಹಗಳುಳ್ಳವನು; ಶರೀರಪುರುಷ, ಛಂದಃಪುರುಷ, ವೇದಪುರುಷ, ಮತ್ತು ಮಹಾಪುರುಷರೆಂಬ ನಾಲ್ಕು ಪುರುಷವ್ಯೂಹಗಳುಳ್ಳವನು. (೭೬೮) ಚತುರ್ಗತಿಃ – ನಾಲ್ಕುಪುರುಷಾರ್ಥಗಳಿಗೂ ಮಾರ್ಗನಾದವನು; ಆರ್ತ, ಜಿಜ್ಞಾಸು, ಅರ್ಥಾರ್ಥೀ ಮತ್ತು ಜ್ಞಾನೀ ಎಂಬ ನಾಲ್ಕು ಬಗೆಯ ಭಕ್ತರಿಗೂ ಗತಿಯಾದವನು; ನಾಲ್ಕು ವರ್ಣದವರಿಗೂ ನಾಲ್ಕು ಆಶ್ರಮಗಳವರಿಗೂ ಏಕಮಾತ್ರ ಲಕ್ಷ್ಯನಾದವನು. (೭೬೯) ಚತುರಾತ್ಮಾ – ಪರಮಾತ್ಮಾ, ಜೀವ, ಮನಸ್ಸು ಮತ್ತು ಅಹಂಕಾರಗಳೆಂಬ ನಾಲ್ಕು ರೂಪಗಳುಳ್ಳವನು; ಮನಸ್ಸು-ಬುದ್ಧಿ-ಅಹಂಕಾರ-ಚಿತ್ತಗಳೆಂಬ ನಾಲ್ಕು ಅಂತಃಕರಣಗಳಿಂದ ಕೂಡಿದವನು. (೭೭೦) ಚತುರ್ಭಾವಃ98 – ವ್ಯೂಹ, ವಿಭವ, ಅಂತರ್ಯಾಮೀ ಮತ್ತು ಆರ್ಚಾಮೂರ್ತಿಗಳೆಂಬ ನಾಲ್ಕು ಭಾವಗಳಲ್ಲಿರುವವನು; ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಮತ್ತು ಸಾಯುಜ್ಯಗಳೆಂಬ ನಾಲ್ಕು ಮೋಕ್ಷಭಾವಗಳಲ್ಲಿರುವವನು; ಧರ್ಮಾರ್ಥಕಾಮಮೋಕ್ಷಗಳೆಂಬ ಚತುರ್ವಿಧಪುರುಷಾರ್ಥಗಳು ಯಾರಿಂದ ಪ್ರಕಟವಾಗುವವೋ ಅವನು. (೭೭೧) ಚತುರ್ವೇದವಿತ್99 – ನಾಲ್ಕು ವೇದಗಳನ್ನೂ, ವೇದಾರ್ಥಗಳನ್ನೂ, ಪ್ರಾಮಾಣಿಕವಾಗಿ ಮತ್ತು ಸಂಪೂರ್ಣವಾಗಿ ತಿಳಿದಿರುವವನು. (೭೭೨) ಏಕಪಾತ್ – ವಿಶ್ವರೂಪವಾದ ಏಕಪಾದವುಳ್ಳವನು; ಏಕಾಂಶದಿಂದ ಜಗತ್ತನ್ನು ವ್ಯಾಪಿಸಿರುವವನು.

13135096a ಸಮಾವರ್ತೋ ನಿವೃತ್ತಾತ್ಮಾ ದುರ್ಜಯೋ ದುರತಿಕ್ರಮಃ।
13135096c ದುರ್ಲಭೋ ದುರ್ಗಮೋ ದುರ್ಗೋ ದುರಾವಾಸೋ ದುರಾರಿಹಾ।।

(೭೭೩) ಸಮಾವರ್ತಃ100 – ಸೃಷ್ಟಿ-ಸ್ಥಿತಿ-ಲಯಗಳೆಂಬ ಪರಿವರ್ತನೆಗಳನ್ನುಂಟುಮಾಡುವವನು; ಸಂಸಾರಚಕ್ರವನ್ನು ತಿರುಗಿಸುವವನು; ವ್ಯೂಹ-ವಿಭವರೂಪಗಳನ್ನು ಸರ್ವಕಾಲದಲ್ಲಿಯೂ ಸರ್ವಪ್ರದೇಶಗಳಲ್ಲಿಯೂ, ಸರ್ವರೀತಿಗಳಲ್ಲಿಯೂ ಮತ್ತೆ ಮತ್ತೆ ಪ್ರಕಟಗೊಳಿಸುವವನು. (೭೭೪) ಅನಿವೃತ್ತಾತ್ಮಾ – ಎಲ್ಲಕಡೆಗಳಲ್ಲಿಯೂ ಇರುವುದರಿಂದ ಎಲ್ಲಿಂದಲೂ ನಿವೃತ್ತಿಹೊಂದದ ಆತ್ಮವುಳ್ಳವನು; ನಿವೃತ್ತಿಯಿಲ್ಲದ ದೇಹವುಳ್ಳವನು. (೭೭೫) ದುರ್ಜಯಃ – ಜಯಿಸಲು ಅಸಾಧ್ಯನು; ಯಾರಿಂದಲೂ ಜಯಿಸಲಾಗದವನು. (೭೭೬) ದುರತಿಕ್ರಮಃ – ಅತಿಕ್ರಮಿಸಲು ಅಸಾಧ್ಯನಾಗಿರುವವನು; ಸರ್ವೋತ್ತಮನೂ ಸರ್ವವ್ಯಾಪಕನೂ ಆದುದರಿಂದ ಯಾರಿಂದಲೂ ಮೀರಿಹೋಗಲು ಅಸಾಧ್ಯನಾದವನು. (೭೭೭) ದುರ್ಲಭಃ – ಪಡೆಯಲು ಕಷ್ಟಸಾಧ್ಯನು; ಯೋಗಿಗಳಿಗೆ ಮಾತ್ರವೇ ಪಡೆಯಲು ಸಾಧ್ಯನಾದವನು. (೭೭೮) ದುರ್ಗಮಃ – ಅತಿ ಕಷ್ಟದಿಂದ ಹೊಂದಲ್ಪಡುವವನು (೭೭೯) ದುರ್ಗಃ – ಗಹನವಾದ ತತ್ತ್ವವು; ದುಃಖದಿಂದ ಹೊಂದಲ್ಪಡುವವನು; ದುರ್ಗಮ ಮಾರ್ಗವುಳ್ಳವನು. (೭೮೦) ದುರಾವಾಸಃ – ಯೋಗಿಗಳಿಂದ ಸಮಾಧಿಯಲ್ಲಿ ಕಷ್ಟದಿಂದ ಚಿತ್ತದಲ್ಲಿ ನೆಲೆಗೊಳ್ಳುವಂತೆ ಮಾಡಲ್ಪಡುವವನು. (೭೮೧) ದುರಾರಿಹಾ – ದುರ್ಮಾರ್ಗಗಾಮಿಗಳನ್ನು ಸಂಹರಿಸುವವನು.

13135097a ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ।
13135097c ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ।।

(೭೮೨) ಶುಭಾಂಗಃ – ಶುಭ ಅಂಗಗಳಿಂದ ಕೂಡಿದವನಾಗಿ ಧ್ಯಾನಿಸಲ್ಪಡುವವನು; ಶುಭವಾದ ಅಂಗಗಳುಳ್ಳವನು. (೭೮೩) ಲೋಕಸಾರಂಗಃ – ಚಿತ್ರ-ವಿಚಿತ್ರವಾದ ಆಕರ್ಷಕವಾದ ಮತ್ತು ಆಕಾರ-ಗತಿವೇಗದಲ್ಲಿ ಸಾರಂಗದಂಥಹ ಜಗತ್ತುಳ್ಳವನು; ದುಂಬಿಯು ಪುಷ್ಪಗಳ ಸಾರವನ್ನು ಹೀರುವಂತೆ ಲೋಕಗಳ ಸಾರವನ್ನು ಹೀರುವವನು. (೭೮೪) ಸುತಂತುಃ101 – ಸುಂದರವಾದ ಪ್ರಪಂಚವಿಸ್ತಾರವುಳ್ಳವನು; ಸುಂದರವಾದ ಬಲೆಯ ದಾರಗಳುಳ್ಳವನು. (೭೮೫) ತಂತುವರ್ಧನಃ – ವಿಸ್ತಾರದಿಂದ ತಂತುವನ್ನು ವೃದ್ಧಿಪಡಿಸುವವನು; ಸುಂದರ ಪ್ರಪಂಚರೂಪವಾದ ತಂತುವನ್ನು ವೃದ್ಧಿಪಡಿಸುವವನು ಅಥವಾ ಕತ್ತರಿಸುವವನು; ದ್ರೌಪದಿಗೋಸ್ಕರ ದಾರಗಳಿಂದ ಮಾಡಿದ ವಸ್ತ್ರವನ್ನು ವೃದ್ಧಿಪಡಿಸಿದವನು. (೭೮೬) ಇಂದ್ರಕರ್ಮಾ – ಉಪೇಂದ್ರನಾಗಿ ಇಂದ್ರನಿಗೋಸ್ಕರ ದೈತ್ಯಸಂಹಾರವೇ ಮೊದಲಾದ ಕಾರ್ಯಗಳನ್ನು ಎಸಗಿದವನು; ಪರಮೈಶ್ವರ್ಯಕ್ಕೆ ಅನುಗುಣವಾದ ಕರ್ಮಗಳುಳ್ಳವನು; ಇಂದ್ರನ ಕರ್ಮಗಳಿಗೆ ಸಮನಾದ ಕರ್ಮಗಳುಳ್ಳವನು. (೭೮೭) ಮಹಾಕರ್ಮಾ – ಜಗದ್ರೂಪವಾದ ದೊಡ್ಡ ಕರ್ಮವುಳ್ಳವನು. (೭೮೮) ಕೃತಕರ್ಮಾ – ಕೃತಕೃತ್ಯನಾದವನು; ಆಪ್ತಕಾಮನು; ಮಾಡಬೇಕಾದ ಕೆಲಸವ್ಯಾವುದೂ ಇಲ್ಲದವನು; ಪೂರ್ಣಕರ್ಮಗಳುಳ್ಳವನು. (೭೮೯) ಕೃತಾಗಮಃ – ಆಗಮ-ಶಾಸ್ತ್ರಗಳನ್ನು ಮಾಡಿದವನು; ಶಾಸ್ತ್ರಕರ್ತೃವು.

13135098a ಉದ್ಭವಃ ಸುಂದರಃ ಸುಂದೋ ರತ್ನನಾಭಃ ಸುಲೋಚನಃ।
13135098c ಅರ್ಕೋ ವಾಜಸನಃ ಶೃಂಗೀ ಜಯಂತಃ ಸರ್ವವಿಜ್ಜಯೀ।।

(೭೯೦) ಉದ್ಭವಃ102 – ಅವತಾರರೂಪದಲ್ಲಿ ಕಾಣಿಸಿಕೊಳ್ಳುವವನು; ಸೃಷ್ಟಿಗೆ ಕಾರಣನು; ಸಂಸಾರದಿಂದ ಬಿಡುಗಡೆ ಹೊಂದಿದವನು; ಸಂಸಾರವನ್ನು ದಾಟಿದವನು; ತನ್ನ ಇಚ್ಛೆಯಿಂದಲೇ ಜನ್ಮವನ್ನು ಸ್ವೀಕರಿಸುವವನು; ಸರ್ವಕಾರಣನಾದುದರಿಂದ ಜನ್ಮವಿಲ್ಲದವನು. (೭೯೧) ಸುಂದರಃ – ಎಣೆಯಿಲ್ಲದ ಸೌಂದರ್ಯವುಳ್ಳವನು; ವಿಶ್ವವನ್ನು ಮೀರಿಸಿದ ಸೌಭಾಗ್ಯಶಾಲಿಯು; ಸುಂದನನ್ನು ಉಪಸುಂದನ ಮೂಲಕ ನಾಶಪಡಿಸಿದವನು. (೭೯೨) ಸುಂದಃ – ಶುಭವಾದ ಕರುಣೆಯಿಂದ ಆರ್ದ್ರನಾದವನು; ಚೆನ್ನಾಗಿ ನೆನೆಸುವವನು; ಕರುಣಾಕರನು; ಸುಖವನ್ನು ಕೊಡುವವನು. (೭೯೩) ರತ್ನನಾಭಃ103 – ರತ್ನದಂತೆ ಹೊಳೆಯುವ ನಾಭಿಯುಳ್ಳವನು. (೭೯೪) ಸುಲೋಚನಃ – ಸುಂದರ ಕಣ್ಣುಗಳುಳ್ಳವನು; ಶ್ರೇಷ್ಠ ಜ್ಞಾನದೃಷ್ಟಿಯುಳ್ಳವನು; ಜ್ಞಾನವುಳ್ಳವನು. (೭೯೫) ಅರ್ಕಃ – ಸೂರ್ಯರೂಪಿಯು; ಪೂಜ್ಯನು. (೭೯೬) ವಾಜಸನಃ104 – ಅಶ್ವರೂಪನಾದ ಸೂರ್ಯನು; ವಾಜಸನ ಸಂಹಿತೆಯನ್ನು ಯಾಜ್ಞವಲ್ಕ್ಯನಿಗೆ ಉಪದೇಶಿಸಿದವನು; ಅನ್ನವನ್ನು ಅನುಗ್ರಹಿಸುವವನು. (೭೯೭) ಶೃಂಗೀ – ಏಕಶೃಂಗವುಳ್ಳ ವರಾಹಸ್ವಾಮಿಯು; ನಾಲ್ಕು ಶೃಂಗಗಳಿರುವ ಪ್ರಣವವು ಅಥವಾ ಅಗ್ನಿಯು; ಮತ್ಸ್ಯಾವತಾರಿಯು; ಶಿಖರಸ್ಥಾನದಲ್ಲಿರುವವನು. (೭೯೮) ಜಯಂತಃ – ಶತ್ರುಗಳನ್ನು ಜಯಿಸುವವನು; ಇಂದ್ರಪುತ್ರ ಜಯಂತನು. (೭೯೯) ಸರ್ವವಿಜ್ಜಯೀ – ಸರ್ವಜ್ಞನಾಗಿ ಎಲ್ಲ ಒಳ-ಹೊರ ಶತ್ರುಗಳನ್ನು ಜಯಿಸುವವನು.

13135099a ಸುವರ್ಣಬಿಂದುರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ।
13135099c ಮಹಾಹ್ರದೋ ಮಹಾಗರ್ತೋ ಮಹಾಭೂತೋ ಮಹಾನಿಧಿಃ।।

(೮೦೦) ಸುವರ್ಣಬಿಂದುಃ105 – ನಾದಕ್ಕೆ ಮೂಲವಾದ ಸುವರ್ಣಬಿಂದು ಸ್ವರೂಪನು; ಸುವರ್ಣಸದೃಶವಾದ ಅವಯವಗಳುಳ್ಳವನು. (೮೦೧) ಅಕ್ಷೋಭ್ಯಃ106 – ಯಾವುದರಿಂದಲೂ ಯಾರಿಂದಲೂ ಕ್ಷೇಭೆಗೊಳಗಾಗದವನು; ಅವಿಕಾರಿಯು; ರಾಗ-ದ್ವೇಷಗಳಿಂದಲೂ, ಶಬ್ದವೇ ಮೊದಲಾದ ವಿಷಯಗಳಿಂದಲೂ, ದೇವಶತ್ರುಗಳಿಂದಲೂ ಅಲುಗಾಡಿಸಲು ಆಗದವನು. (೮೦೨) ಸರ್ವವಾಗೀಶ್ವರೇಶ್ವರಃ107 – ವಾಣಿಗೆ ಈಶ್ವರರಾದ ಬೃಹಸ್ಪತಿ-ಬ್ರಹ್ಮರೇ ಮೊದಲಾದ ಎಲ್ಲ ದೇವತೆಗಳಿಗೂ ಈಶ್ವರನಾದವನು. (೮೦೩) ಮಹಾಹ್ರದಃ – ಜ್ಞಾನಿಗಳು ಅತ್ಯಂತ ಹಿತವಾಗಿ ಅವಗಾಹನಮಾಡುವ ಮಹಾನಂದಸರೋವರದ ಮಡುವಿನಂತಿರುವವನು. (೮೦೪) ಮಹಾಗರ್ತಃ – ಹೃದಯಗುಹೆಯ ಮಹಾ ಆಳದಲ್ಲಿ ಇರುವವನು; ಆಳವಾದ ಸಂಸಾರವೆಂಬ ಅಥವಾ ಮಾಯೆಯೆಂಬ ಹಳ್ಳವುಳ್ಳವನು. (೮೦೫) ಮಹಾಭೂತಃ – ಪರಮಸ್ವರೂಪಿಯು; ಅಖಂಡಸತ್ತಾಸ್ವರೂಪಿಯು; ಪಂಚಮಹಾಭೂತಸ್ವರೂಪಿಯು. (೮೦೬) ಮಹಾನಿಧಿಃ – ಅಕ್ಷಯವಾದ ಪರಮಾನಂದಶಾಂತಿನಿಧಿಯಾಗಿರುವವನು; ಯೋಗಿಗಳಿಗೆ ಅಮೂಲ್ಯವಾದ ನಿಧಿಯಾಗಿರುವವನು; ಸಮಸ್ತ ಭೂತಗಳೂ ಯಾರಲ್ಲಿ ನೆಲೆಸಿವೆಯೋ ಆ ಅತಿದೊಡ್ಡ ನಿಧಿಯು.

13135100a ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪವನೋಽನಿಲಃ।
13135100c ಅಮೃತಾಂಶೋ108ಽಮೃತವಪುಃ ಸರ್ವಜ್ಞಃ ಸರ್ವತೋಮುಖಃ।।

(೮೦೭) ಕುಮುದಃ – ಭೂಮಿಗೆ ಆನಂದವನ್ನುಂಟುಮಾಡುವವನು; ಭೂಮಿಯಲ್ಲಿ ಆನಂದಿಸುವವನು. (೮೦೮) ಕುಂದರಃ – ಭೂಮಿಯನ್ನು ಸೀಳಿದ ವರಾಹರೂಪಿಯು; ಕಂದಪುಷ್ಪಗಳಿಗೆ ಸಮನಾದ ಶುದ್ಧ ಫಲಗಳನ್ನೀಡುವವನು; ಹಿರಣ್ಯಾಕ್ಷನನ್ನು ಸಂಹರಿಸಲು ಭೂಮಿಯನ್ನು ಸೀಳಿದವನು. (೮೦೯) ಕುಂದಃ – ಮಾಘಮಾಸದ ಮಲ್ಲೆಹೂವಿನಂತೆ ಶುದ್ಧನಾಗಿರುವವನು; ಭೂಮಿಯನ್ನು ಅನುಗ್ರಹಿಸಿದವನು; ಕಂದಪುಷ್ಪದಂತೆ ಸುಂದರ ಅಂಗಗಳುಳ್ಳವನು; ಸ್ವಚ್ಛ ಸ್ಫಟಿಕಮಣಿಯಂತೆ ನಿರ್ಮಲನು; ಭೂಮಿಯನ್ನು ಕಶ್ಯಪನಿಗೆ ದಾನವನ್ನಾಗಿತ್ತವನು; ಕುತ್ಸಿತವಾದುದನ್ನು ಖಂಡಿಸುವವನು. (೮೧೦) ಪರ್ಜನ್ಯಃ – ತಾಪತ್ರಯಗಳನ್ನು ಶಮನಗೊಳಿಸುವವನು; ಎಲ್ಲ ಇಷ್ಟಾರ್ಥಗಳನ್ನೂ ಸುರಿಸುವ ಪರ್ಜನ್ಯದೇವತಾರೂಪಿಯು. (೮೧೧) ಪಾವನಃ – ಪವಿತ್ರಗೊಳಿಸುವವನು; ಭಕ್ತರ ಬಳಿಗೆ ಹೋಗುವವನು. (೮೧೨) ಅನಿಲಃ – ವಾಯುದೇವತಾ ಸ್ವರೂಪನು; ಪ್ರೇರಕರಿಲ್ಲದವನು; ನಿತ್ಯ ಪ್ರಬುದ್ಧನಾದುದರಿಂದ ನಿದ್ರಿಸದವನು; ಭಕ್ತರಿಗೆ ಸುಲಭನಾದವನು. (೮೧೩) ಅಮೃತಾಂಶಃ – ಅಮೃತವನ್ನು ತನ್ನ ಅಂಶವನ್ನಾಗುಳ್ಳವನು. (೮೧೪) ಅಮೃತವಪುಃ – ಅಮೃತಮಯ ಶರೀರವುಳ್ಳವನು; ಮರಣವಿಲ್ಲದ ಶರೀರವುಳ್ಳವನು. (೮೧೫) ಸರ್ವಜ್ಞಃ – ಎಲ್ಲವನ್ನೂ ತಿಳಿದವನು; ಸರ್ವವಿಷಯಜ್ಞಾನವುಳ್ಳವನು. (೮೧೬) ಸರ್ವತೋಮುಖಃ – ಎಲ್ಲಕಡೆಗಳಲ್ಲಿಯೂ ಮುಖಗಳುಳ್ಳವನು.

13135101a ಸುಲಭಃ ಸುವ್ರತಃ ಸಿದ್ಧಃ ಶತ್ರುಜಿಚ್ಚತ್ರುತಾಪನಃ।
13135101c ನ್ಯಗ್ರೋಧೋದುಂಬರೋಽಶ್ವತ್ಥಶ್ಚಾಣೂರಾಂಧ್ರನಿಷೂದನಃ।।

(೮೧೭) ಸುಲಭಃ – ಸುಲಭವಾಗಿ ದೊರೆಯುವವನು; ಕೇವಲ ಭಕ್ತಿಯಿಂದ ಸಮರ್ಪಿಸಿದ ಪತ್ರ-ಪುಷ್ಪ-ಫಲಾದಿಗಳಿಂದಲೂ ಸುಖವಾಗಿ ದೊರೆಯುವವನು; ಅತ್ಯಮೂಲ್ಯನಾಗಿದ್ದರೂ ಅಲ್ಪವಾದ ಉಪಾಯದಿಂದ ಪಡೆಯಲು ಸಾಧ್ಯನಾದವನು. (೮೧೮) ಸುವ್ರತಃ – ರಕ್ಷಣೆಯೆಂಬ ಉತ್ತಮ ವ್ರತವುಳ್ಳವನು; ಉತ್ತಮ ವ್ರತಾಚರಣೆಗಳಿಂದ ದೊರಕುವವನು; ಉತ್ತಮ ವ್ರತಗಳನ್ನು ಆಚರಿಸುವವನು; ಶ್ರೇಷ್ಠ ವ್ರತವು ಯಾರ ವಿಷಯವಾಗಿದೆಯೋ ಅವನು. (೮೧೯) ಸಿದ್ಧಃ – ಸ್ವತಃ ಸಿದ್ಧನಾದವನು; ಸ್ವಾಧೀನವಾದ ಸರ್ವಸಿದ್ಧಿಗಳುಳ್ಳವನು; ಇತರರಿಗೆ ಅಧೀನವಲ್ಲದ ಸಿದ್ಧಿಗಳುಳ್ಳವನು. (೮೨೦) ಶತ್ರುಜಿತ್ – ಒಳ-ಹೊರ ಶತ್ರುಗಳನ್ನು ಜಯಿಸಿದವನು; ದೇವಶತ್ರುಗಳನ್ನು ಜಯಿಸಿದವನು. (೮೨೧) ಶತ್ರುತಾಪನಃ – ಒಳ-ಹೊರ ಶತ್ರುಗಳಿಗೆ ಸಂತಾಪವನ್ನುಂಟುಮಾಡುವವನು; ದೇವಶತ್ರುಗಳಿಗೆ ಸಂತಾಪವನ್ನುಂಟುಮಾಡುವವನು. (೮೨೨) ನ್ಯಗ್ರೋಧಃ – ವಟವೃಕ್ಷಸ್ವರೂಪಿಯು; ಸಂಸಾರವಟವೃಕ್ಷಸ್ವರೂಪಿಯು; ಕೆಳಮುಖವಾಗಿ ಬೆಳೆಯುವ ವಿಶ್ವವೃಕ್ಷರೂಪಿಯು; ಎಲ್ಲ ಭೂತಗಳನ್ನೂ ಕೆಳಕ್ಕೆ ತಳ್ಳಿ ವೃದ್ಧಿಹೊಂದುವವನು. (೮೨೩) ಉದುಂಬರಃ – ಅತ್ತೀಮರವೆಂಬ ಯಜ್ಞವೃಕ್ಷರೂಪಿಯು; ಕಾರಣರೂಪದಿಂದ ಆಕಾಶಕ್ಕೂ ಮೇಲೆ ಎದ್ದಿರುವವನು; ಅನ್ನರೂಪನಾಗಿ ವಿಶ್ವವನ್ನು ಪೋಷಿಸುವವನು. (೮೨೪) ಅಶ್ವತ್ಥಃ – ಅಶ್ವತ್ಥವೃಕ್ಷಸ್ವರೂಪಿಯು; ಊರ್ಧ್ವಮೂಲವೂ ಅಧಃಶಾಖವೂ ಆದ ಸಂಸಾರವೆಂಬ ಅಶ್ವತ್ಥವೃಕ್ಷರೂಪಿಯು; ಯಾವುದು ನಾಳೆಗೂ ಇರುವುದಿಲ್ಲವೋ ಅಂತಹ ಅತ್ಯಂತ ಕ್ಷಣಿಕವಾದ ವ್ಯಕ್ತಜಗತ್ಸ್ವರೂಪಿಯು. (೮೨೫) ಚಾಣೂರಾಂಧ್ರನಿಷೂದನಃ – ಆಂಧ್ರಜಾತಿಯ ಚಾಣೂರನೆಂಬ ವೀರನನ್ನು ಸಂಹರಿಸಿದವನು; ದೇವವಿರೋಧಿಯಾಗಿದ್ದ ಚಾಣೂರನೆಂಬ ಆಂಧ್ರಮಲ್ಲನನ್ನು ಸಂಹರಿಸಿದವನು.

13135102a ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ।
13135102c ಅಮೂರ್ತಿರನಘೋಽಚಿಂತ್ಯೋ ಭಯಕೃದ್ಭಯನಾಶನಃ।।

(೮೨೬) ಸಹಸ್ರಾರ್ಚಿಃ – ಅನಂತ ಕಿರಣಗಳುಳ್ಳವನು; ಸಹಸ್ರ ಕಿರಣಗಳುಳ್ಳವನು. (೮೨೭) ಸಪ್ತಜಿಹ್ವಃ – ಕಾಳೀ, ಕರಾಳೀ ಮೊದಲಾದ ಏಳು ನಾಲಿಗೆಗಳುಳ್ಳ ಅಗ್ನಿದೇವಸ್ವರೂಪನು. (೮೨೮) ಸಪ್ತೈಧಾಃ – ಏಳು ಬಗೆಯ ಸಮಿತ್ತುಗಳುಳ್ಳ ಅಗ್ನಿದೇವಸ್ವರೂಪನು; ಏಳು ದೀಪ್ತಿಗಳುಳ್ಳ ಅಗ್ನಿರೂಪಿಯು; ಅಶ್ವತ್ಥ, ಉದುಂಬರ, ಶಮೀ, ವೈಕಂಕತ, ಆಶನಿಹತ, ಪುಷ್ಕರ, ಪರ್ಣ ಎಂಬ ಏಳು ವನಸ್ಪತಿಗಳ ಸಮಿತ್ತುಗಳುಳ್ಳ ಅಥವಾ ಪಾಕಯಜ್ಞ, ಹವಿರ್ಯಜ್ಞ, ಸೋಮಸಂಶಗಳೆಂಬ ಏಳೇಳು ಯಜ್ಞಗಳುಳ್ಳ109, ಇಷ್ಟಾಪೂರ್ತರೂಪದ ಕರ್ಮಗಳುಳ್ಳ ಅಗ್ನಿಗೆ ಅಂತರ್ಯಾಮಿಯಾಗಿರುವವನು (೮೨೯) ಸಪ್ತವಾಹನಃ – ಸಪ್ತಪ್ರಾಣರೂಪವಾದ ಏಳು ಕುದುರೆಗಳುಳ್ಳ ಸೂರ್ಯದೇವಸ್ವರೂಪಿಯು; ಸಪ್ತವೆಂಬ ಹೆಸರುಳ್ಳ ಪ್ರಾಣವೆಂಬ ಅಶ್ವದಿಂದ ಒಯ್ಯಲ್ಪಡುವವನು. (೮೩೦) ಅಮೂರ್ತಿಃ – ನಿರಾಕಾರನು; ಪ್ರಾಕೃತ ಅವಯವಗಳಿಲ್ಲದವನು; ಮೂರ್ತಿಹೀನನು; ಸ್ಥೂಲಭೌತಿಕ ಮೂರ್ತಿಗಳಿಲ್ಲದವನು. (೮೩೧) ಅನಘಃ – ಪಾಪರಹಿತನು; ದುಃಖ-ಪಾಪಗಳಿಲ್ಲದವನು; ಕರ್ಮವಶರಾದ ಜೀವಿಗಳನ್ನು ಮೀರಿರುವುದರಿಂದ ಪಾಪಕರ್ಮರಹಿತನು. (೮೩೨) ಅಚಿಂತ್ಯಃ - ಅತೀಂದ್ರಿಯನಾದುದರಿಂದ ಮತ್ತು ಸರ್ವವಿಲಕ್ಷಣನಾದುದರಿಂದ ಚಿಂತಿಸಲು ಅಸಾಧ್ಯನು. (೮೩೩) ಭಯಕೃತ್110 – ದುಷ್ಟರಿಗೆ ಭಯವನ್ನುಂಟುಮಾಡುವವನು; ಶತ್ರುಗಳಿಗೆ ಭಯಂಕರನು; ಭಕ್ತರ ಭಯವನ್ನು ಕತ್ತರಿಸುವವನು. (೮೩೪) ಭಯನಾಶನಃ111 – ಸಾಧು ಭಕ್ತರ ಭಯವನ್ನು ನಾಶಮಾಡುವವನು; ವರ್ಣಾಶ್ರಮಾಚಾರಗಳಿಂದ ತನ್ನನ್ನು ಆರಾಧಿಸುವ ಸತ್ಪುರುಷರ ಭಯವನ್ನು ನಾಶಮಾಡುವವನು.

13135103a ಅಣುರ್ಬೃಹತ್ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್।
13135103c ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ।।

(೮೩೫) ಅಣುಃ112 – ಅತ್ಯಂತ ಸೂಕ್ಷ್ಮನಾದವನು; ನಿರತಿಶಯ ಸೂಕ್ಷ್ಮತೆಯುಳ್ಳವನು; ಎಲ್ಲವನ್ನೂ ಹೊಂದಿರುವವನು. (೮೩೬) ಬೃಹತ್113 – ಅತ್ಯಂತ ಮಹತ್ವವುಳ್ಳವನು; ದೊಡ್ಡ ಗುಣಗಳಿಂದ ವೃದ್ಧಿಹೊಂದಿದವನು. (೮೩೭) ಕೃಶಃ – ಲಘುತಮನು; ಸ್ಥೂಲ-ಸೂಕ್ಷ್ಮ ಪ್ರಕೃತಿ ಸಂಬಂಧವಿಲ್ಲದವನು; ವೃದ್ಧಿ-ಕ್ಷಯಗಳಿಗೆ ಒಳಪಟ್ಟ ಹದಿನೈದು ಕಲೆಗಳನ್ನು ಬಿಟ್ಟಿರುವ ಕಲಾಮಾತ್ರಸ್ವರೂಪನು. (೮೩೮) ಸ್ಥೂಲಃ – ಪ್ರಕೃತಿಕಲೆಗಳ ಸಂಬಂಧದಿಂದ ಸ್ಥೂಲನಾದವನು; ಸರ್ವಾತ್ಮಕನಾದುದರಿಂದ ಸ್ಥೂಲನಾದವನು; ಮಹಾಪರಿಮಾಣವುಳ್ಳವನು. (೮೩೯) ಗುಣಭೃತ್ – ಕಲ್ಯಾಣಗುಣ ಸಂಪನ್ನನು; ಲೋಕವ್ಯವಹಾರಕ್ಕೋಸ್ಕರ ತ್ರಿಗುಣರೂಪದ ಕವಚವನ್ನು ಧರಿಸಿರುವವನು; ಸೃಷ್ಟಿ-ಸ್ಥಿತಿ-ಲಯಕರ್ಮಗಳಲ್ಲಿ ಸತ್ತ್ವಗುಣ, ರಜೋಗುಣ, ತಮೋಗುಣಗಳಿಗೆ ಅಧಿಷ್ಠಾತೃವಾದವನು; ತನ್ನ ಸಂಕಲ್ಪದಿಂದ ಎಲ್ಲ ಜಗತ್ತನ್ನೂ ಎಲ್ಲ ಅವಸ್ಥೆಗಳಲ್ಲಿಯೂ ತನಗೆ ಗುಣಭೂತವನ್ನಾಗಿ ಮಾಡಿಕೊಂಡು ಅದನ್ನು ಧರಿಸುವವನು. (೮೪೦) ನಿರ್ಗುಣಃ114 – ಪ್ರಾಕೃತಗುಣರಹಿತನು; ಶುದ್ಧನು; ಜಗತ್ತಿನಲ್ಲಿದ್ದರೂ ಜಗತ್ತಿನ ಗುಣಗಳ ಸ್ಪರ್ಶವಿಲ್ಲದವನು. (೮೪೧) ಮಹಾನ್115 – ಮಹತ್ತಮನು; ಸರ್ವಸ್ವತಂತ್ರನು. (೮೪೨) ಅಧೃತಃ – ಯಾರಿಂದಲೂ ಧರಿಸಲ್ಪಡದವನು ಮತ್ತು ಪೋಷಿಸಲ್ಪಡದವನು; ಯಾರಿಂದಲೂ ನಿಯಮಿಸಲ್ಪಡದವನು. (೮೪೩) ಸ್ವಧೃತಃ – ತನ್ನಿಂದಲೇ ಧರಿಸಲ್ಪಟ್ಟವನು; ತಾನು ತನ್ನಿಂದಲೇ ಧರಿಸಲ್ಪಟ್ಟವನು. (೮೪೪) ಸ್ವಾಸ್ಯಃ – ಶ್ರೇಷ್ಠ ಮುಖವುಳ್ಳವನು; ವೇದ ಮತ್ತು ಬ್ರಾಹ್ಮಣಮುಖವುಳ್ಳವನು. (೮೪೫) ಪ್ರಾಗ್ವಂಶಃ – ಪೂರ್ವಮುಖವಾದ ವಂಶವುಳ್ಳವನು; ಯಜ್ಞಶಾಲೆಯಲ್ಲಿ ಪೂರ್ವದಿಕ್ಕಿನಲ್ಲಿರುವ ಪೂರ್ವಾಗ್ರವಾದ ಪ್ರಾಗ್ವಂಶವೆಂಬ ಗೃಹರೂಪಿಯು; ಪ್ರಾಗ್ವಂಶವೆಂಬ ಸ್ಥಳದಲ್ಲಿ ಸ್ತುತಿಸಲ್ಪಡುವವನು. (೮೪೬) ವಂಶವರ್ಧನಃ – ಪ್ರಪಂಚರೂಪದ ವಂಶವೃದ್ಧಿಗೆ ಕಾರಣನು; ವಂಶವನ್ನು ವೃದ್ಧಿಪಡಿಸುವ ಶಕ್ತಿಯನ್ನು ಕೊಡುವವನು.

13135104a ಭಾರಭೃತ್ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ।
13135104c ಆಶ್ರಮಃ ಶ್ರಮಣಃ ಕ್ಷಾಮಃ ಸುಪರ್ಣೋ ವಾಯುವಾಹನಃ।।

(೮೪೭) ಭಾರಭೃತ್116 – ಜಗತ್ತಿನ ಭಾರವನ್ನು ಹೊತ್ತಿರುವವನು; ಭಕ್ತರ ಯೋಗ-ಕ್ಷೇಮಗಳನ್ನು ವಹಿಸಿಕೊಂಡಿರುವವನು; ಅನಂತನಾಗನೇ ಮೊದಲಾದ ರೂಪಗಳಿಂದ ಭೂಮಿಯ ಭಾರವನ್ನು ಧರಿಸಿರುವವನು. (೮೪೮) ಕಥಿತಃ – ಆಗಮಗಳಲ್ಲಿ ಕೊಂಡಾಡಲ್ಪಟ್ಟವನು. (೮೪೯) ಯೋಗೀ – ಸಮಾಧಿಸಂಪನ್ನನು; ಜೀವಯೋಗವುಳ್ಳವನು; ಉಪಾಯವುಳ್ಳವನು. (೮೫೦) ಯೋಗೀಶಃ – ನರ-ನಾರಾಯಣ-ಕಪಿಲ-ದತ್ತಾತ್ರೇಯಾದಿ ರೂಪಗಳಲ್ಲಿರುವ ಯೋಗೀಂದ್ರನು; ಯೋಗಿರಾಜನು; ಯೋಗದಿಂದ ಎಂದಿಗೂ ವಿಚಲಿತನಾಗದವನು; ಅದ್ಭುತ ಯೋಗೈಶ್ವರ್ಯಸಂಪನ್ನನು; ಯೋಗಿಗಳನ್ನು ಆಳುವವನು; ಸನಕಾದಿ ಯೋಗಿಗಳಿಗೂ ನಾಯಕನು. (೮೫೧) ಸರ್ವಕಾಮದಃ – ಭಕ್ತರ ಎಲ್ಲ ಕಾಮನೆಗಳನ್ನೂ ಈಡೇರಿಸುವವನು. (೮೫೨) ಆಶ್ರಮಃ – ಪ್ರಾಣಗಳಿಗೆ ಆರಾಮನಾಗಿರುವವನು; ಸಂಸಾರದಲ್ಲಿ ಬಳಲಿದ ಜೀವಿಗಳಿಗೆ ವಿಶ್ರಾಂತಿಧಾಮನಾಗಿರುವವನು. (೮೫೩) ಶ್ರಮಣಃ – ಮೋಕ್ಷಧರ್ಮನಿಷ್ಠನಾದ ಸಂನ್ಯಾಸಿಸ್ವರೂಪನು; ಅವಿವೇಕಿಗಳನ್ನು ಸಂತಾಪಗೊಳಿಸುವವನು; ಶ್ರಮವನ್ನು ಹೋಗಲಾಡಿಸುವವನು. (೮೫೪) ಕ್ಷಾಮಃ – ತಪೋವ್ರತನಿಷ್ಠೆಯಿಂದ ಕ್ಷೀಣದೇಹನಾದ ತಪಸ್ವೀ ಸ್ವರೂಪನು; ಕ್ಷಮಾಶೀಲನು; ಪ್ರಳಯಕಾಲದಲ್ಲಿ ಎಲ್ಲವನ್ನೂ ನಾಶಮಾಡುವವನು. (೮೫೫) ಸುಪರ್ಣಃ – ಸುಂದರ ರೆಕ್ಕೆಗಳುಳ್ಳ ವೇದಮಯ ಗರುಡಸ್ವರೂಪಿಯು; ಪ್ರಾಣಾಪಾನಗಳೆಂಬ ಶ್ರೇಷ್ಠ ರೆಕ್ಕೆಗಳುಳ್ಳ ಮಹಾಪ್ರಾಣಸ್ವರೂಪನು; ಸುಂದರ ಛಂದಸ್ಸುಗಳೆಂಬ ಪರ್ಣಗಳುಳ್ಳ ಸಂಸಾರವೃಕ್ಷ ಸ್ವರೂಪಿಯು; ಶೋಭನವಾದ ಆಲದೆಲೆಯಮೇಲೆ ಪವಡಿಸಿರುವವನು. (೮೫೬) ವಾಯುವಾಹನಃ – ಪ್ರಾಣವಾಯುಗಳ ಮೂಲಕ ಸಂಚರಿಸುವವನು; ಪ್ರಾಣವಾಯುವನ್ನು ಒಯ್ಯುವವನು; ವಾಯುಗಳಿಗೆ ನಿಯಾಮಕನಾದವನು.

13135105a ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ।
13135105c ಅಪರಾಜಿತಃ ಸರ್ವಸಹೋ ನಿಯಂತಾ ನಿಯಮೋ ಯಮಃ।।

(೮೫೭) ಧನುರ್ಧರಃ – ಅಹಂಕಾರತತ್ತ್ವರೂಪವಾದ ಶಾಂರ್ಙ್ಗಧನುಸ್ಸನ್ನು ಧರಿಸಿರುವವನು; ಪ್ರಣವವೆಂಬ ಧನುಸ್ಸನ್ನು ಬಳಸಬಲ್ಲ ಮಹಾಯೋಗಿಯು; ದಸ್ಯುಗಳನ್ನು ದಂಡಿಸಲು ವೈಷ್ಣವ ಧನುಸ್ಸನ್ನು ಧರಿಸಿದ ಕೋಡಂಡರಾಮನು; ತ್ರಿಪುರಸಂಹಾರಕ್ಕಾಗಿ ಪಿನಾಕಧನುಸ್ಸನ್ನು ಧರಿಸಿದ ಮಹಾದೇವನು; ಧನುಸ್ಸನ್ನು ಧರಿಸಿದವನು. (೮೫೮) ಧನುರ್ವೇದಃ117 – ಯಜುರ್ವೇದಕ್ಕೆ ಉಪವೇದವಾದ ಧನುರ್ವೇದ ಸ್ವರೂಪಿಯು; ಧನುರ್ವೇದವನ್ನರಿತ ದಾಶರಥಿ ರಾಮನು; ಅಗಸ್ತ್ಯರಿಂದ ಇಂದ್ರಧನುಸ್ಸನ್ನು ಪಡೆದವನು. (೮೫೯) ದಂಡಃ – ಒಳ-ಹೊರ ಜೀವನಗಳನ್ನು ಹತೋಟಿಯಲ್ಲಿಡುವ ಯೋಗದಂಡ ಮತ್ತು ರಾಜದಂಡ ಸ್ವರೂಪಿಯು; ಮನೋನಿಗ್ರಹವನ್ನುಂಟುಮಾಡುವವನು; ಯೋಗಶಾಸ್ತ್ರಗಳು ಹೇಳುವ ವಜ್ರದಂಡ, ಮೇರುದಂಡ ಎನಿಸುವ ಸರ್ವದೇವತಾಮಯ ಬೆನ್ನೆಲುಬಾಗಿರುವವನು; ದಂಡನೀತಿಸ್ವರೂಪನು. (೮೬೦) ದಮಯಿತಾ – ಒಳ-ಹೊರ ಶತ್ರುಗಳನ್ನು ದಮನಮಾಡುವವನು; ದೈತ್ಯರನ್ನು ದಮನಮಾಡುವವನು. (೮೬೧) ದಮಃ – ಇಂದ್ರಿಯನಿಗ್ರಹ ಸ್ವರೂಪಿಯು. (೮೬೨) ಅಪರಾಜಿತಃ – ಸೋಲನ್ನು ಹೊಂದದವನು; ಸದಾ ವಿಜಯಶಾಲಿಯು. (೮೬೩) ಸರ್ವಸಹಃ – ಭಕ್ತರ ಎಲ್ಲ ಅಪರಾಧಗಳನ್ನೂ ಸಹಿಸಿಕೊಳ್ಳುವವನು; ಶತ್ರುಗಳ ಆಕ್ರಮಣವನ್ನು ಸಹಿಸಿಕೊಳ್ಳುವವನು; ಯಾವಾಗಲೂ ಎಲ್ಲರಲ್ಲೂ ತಾಳ್ಮೆಯುಳ್ಳವನು; ಎಲ್ಲವನ್ನೂ ಸಹಿಸುವವನು. (೮೬೪) ನಿಯಂತಾ – ಎಲ್ಲರಿಗೂ ನಿಯಾಮಕನಾದವನು; ಎಲ್ಲರನ್ನೂ ತಮ್ಮ ತಮ್ಮ ಕಾರ್ಯಗಳಲ್ಲಿರುವಂತೆ ವ್ಯವಸ್ಥೆಮಾಡುವವನು; ಎಲ್ಲರನ್ನೂ ತಮ್ಮ ತಮ್ಮ ಕೆಲಸಗಳಲ್ಲಿ ನಿಯೋಜಿಸುವವನು; ನಿಯಾಮಕನು. (೮೬೫) ನಿಯಮಃ – ವ್ಯವಸ್ಥಾರೂಪನು; ಚೆನ್ನಾಗಿ ಶಾಸನಮಾಡುವವನು. (೮೬೬) ಯಮಃ – ಯೋಗಕ್ಕೆ ಅಂಗವಾದ ಯಮರೂಪಿಯು; ಯಮಧರ್ಮರಾಜರೂಪಿಯು; ಸಂಹಾರಕನು.

13135106a ಸತ್ತ್ವವಾನ್ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ।
13135106c ಅಭಿಪ್ರಾಯಃ ಪ್ರಿಯಾರ್ಹೋಽರ್ಹಃ ಪ್ರಿಯಕೃತ್ಪ್ರೀತಿವರ್ಧನಃ।।

(೮೬೭) ಸತ್ತ್ವವಾನ್ – ಶುದ್ಧಸತ್ತ್ವನು; ಬಲಶಾಲಿಯು; ಸರ್ವಸಾರನು; ಸ್ಥಿರಸ್ವರೂಪನು. (೮೬೮) ಸಾತ್ವಿಕಃ – ಸತ್ತ್ವಗುಣಕ್ಕೆ ಅಧಿಷ್ಠಾನನು; ಸತ್ತ್ವಗುಣದಲ್ಲಿ ಪ್ರಧಾನನಾಗಿರುವವನು. (೮೬೯) ಸತ್ಯಃ – ವಿಕಾರ ರಹಿತನು; ಸಾಧುವು; ಸತ್ಯಸ್ವರೂಪನು. (೮೭೦) ಸತ್ಯಧರ್ಮಪರಾಯಣಃ – ಸತ್ಯ-ಧರ್ಮಗಳಲ್ಲಿ ಪರಮ ನಿಷ್ಠೆಯುಳ್ಳವನು; ಸತ್ಯ-ಧರ್ಮಗಳಿಗೆ ಪರಮ ಗತಿಯು. (೮೭೧) ಅಭಿಪ್ರಾಯಃ – ಸರ್ವಶಾಸ್ತ್ರಗಳಿಗೂ ತಾತ್ಪರ್ಯನಾಗಿರುವವನು; ಪರಮಾರ್ಥನು; ಸಾಧುಗಳಿಂದ ಯಾವಾಗಲೂ ಎಲ್ಲ ಸನ್ಮಾರ್ಗಗಳಿಂದಲೂ ಹೊಂದಲ್ಪಡುವವನು; ಪುರುಷಾರ್ಥವನ್ನು ಬಯಸುವವರು ಯಾರಲ್ಲಿ ಅಭಿಲಾಷೆಯನ್ನು ಹೊಂದಿರುತ್ತಾರೋ ಅವನು; ಪ್ರಳಯಸಮಯದಲ್ಲಿ ಪ್ರಪಂಚವು ಯಾರ ಅಭಿಮುಖವಾಗಿ ಯಾರಲ್ಲಿ ಲೀನವಾಗುತ್ತದೆಯೋ ಅವನು. (೮೭೨) ಪ್ರಿಯಾರ್ಹಃ – ಇಷ್ಟವಸ್ತುಗಳ ಸಮರ್ಪಣೆಗೆ ಯೋಗ್ಯನಾದವನು; ಸುಖವಿಶೇಷಕ್ಕೆ ಯೋಗ್ಯನಾದವನು. (೮೭೩) ಅರ್ಹಃ – ಅಂತರಂಗ-ಬಹಿರಂಗ ಪೂಜೆಗೆ ಅರ್ಹನಾದವನು; ಸ್ವಾಗತ, ಆಸನ, ಪ್ರಶಂಸೆ, ಅರ್ಘ್ಯ, ಪಾದ್ಯ, ಸ್ತುತಿ, ನಮಸ್ಕಾರಗಳೇ ಮೊದಲಾದ ಪೂಜಾಸಾಧನಗಳಿಂದ ಪೂಜಿಸಲು ಯೋಗ್ಯನಾದವನು; ಪೂಜ್ಯನು. (೮೭೪) ಪ್ರಿಯಕೃತ್ – ಭಕ್ತರಿಗೆ ಪ್ರಿಯವಾದುದನ್ನುಂಟುಮಾಡುವವನು. (೮೭೫) ಪ್ರೀತಿವರ್ಧನಃ – ಭಕ್ತರ ಪ್ರೀತಿಯನ್ನು ವೃದ್ಧಿಪಡಿಸುವವನು; ಪ್ರೀತಿಯಿಂದ ಭಕ್ತರನ್ನು ವೃದ್ಧಿಪಡಿಸುವವನು.

13135107a ವಿಹಾಯಸಗತಿರ್ಜ್ಯೋತಿಃ ಸುರುಚಿರ್ಹುತಭುಗ್ವಿಭುಃ।
13135107c ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ।।

(೮೭೬) ವಿಹಾಯಸಗತಿಃ – ಜ್ಞಾನಾಕಾಶದಲ್ಲಿ ಸಂಚರಿಸುವವನು; ಆಕಾಶಸಂಚಾರಿಯಾದ ಆದಿತ್ಯ ರೂಪಿಯು; ಗರುಡಗಮನನು. (೮೭೭) ಜ್ಯೋತಿಃ – ಪರಂಜ್ಯೋತಿಯು; ಸ್ವಯಂ ಜ್ಯೋತಿರೂಪನು; ತನಗೆ ತಾನೇ ಬೆಳಗುವವನು; ದೀಪ್ತನಾದವನು. (೮೭೮) ಸುರುಚಿಃ – ಒಳ್ಳೆಯ ಕಾಂತಿಯುಕ್ತನು ಮತ್ತು ಅಭಿರುಚಿಯುಳ್ಳವನು; ಶ್ರೇಷ್ಠವಾದ ದೀಪ್ತಿ ಅಥವಾ ಇಚ್ಛೆಯುಳ್ಳವನು; ಶೋಭನವಾದ ರುಚಿಯುಳ್ಳವನು. (೮೭೯) ಹುತಭುಕ್ – ಅಗ್ನಿರೂಪಿಯು; ದೇವತೆಗಳಿಗೆ ಅರ್ಪಿಸಿದ ಹವಿಸ್ಸನ್ನು ತಾನೇ ಭುಂಜಿಸುವವನು; ಹೋಮಮಾಡಿದುದನ್ನು ಭುಂಜಿಸುವವನು. (೮೮೦) ವಿಭುಃ – ಸರ್ವವ್ಯಾಪಕನು; ಸರ್ವಪ್ರಭುವು. (೮೮೧) ರವಿಃ118 – ಸೂರ್ಯರೂಪಿಯು; ರಸಗಳನ್ನು ಗ್ರಹಿಸುವವನು. (೮೮೨) ವಿರೋಚನಃ119 – ವಿಶೇಷವಾಗಿ ಮತ್ತು ವಿವಿಧವಾಗಿ ಬೆಳಗುವವನು. (೮೮೩) ಸೂರ್ಯಃ – ಜ್ಞಾನಮಾರ್ಗ ಮತ್ತು ಧರ್ಮಮಾರ್ಗಗಳಲ್ಲಿ ಚೆನ್ನಾಗಿ ಪ್ರೇರಿಸುವವನು; ಸೂರಿಗಳಿಗೆ ಯೋಗ್ಯನಾದವನು; ಆದಿತ್ಯರೂಪಿಯು; ಎಲ್ಲವನ್ನೂ ಉಂಟುಮಾಡುವವನು; ಸಂಪತ್ತನ್ನು ಉಂಟುಮಾಡುವವನು; ಚಲಿಸುವವನು; ಲೋಕಗಳನ್ನು ಕರ್ಮಗಳಲ್ಲಿ ಪ್ರೇರಿಸುವವನು. (೮೮೪) ಸವಿತಾ – ಜಗತ್ತನ್ನು ಪ್ರಸವಿಸುವವನು; ಪ್ರೇರಕನು. (೮೮೫) ರವಿಲೋಚನಃ – ಸೂರ್ಯನನ್ನು ಕಣ್ಣಾಗಿ ಹೊಂದಿರುವವನು; ಬುದ್ಧಿಸೂರ್ಯನ ಮೂಲಕ ಪ್ರಕಾಶಿಸುವವನು; ಸೂರ್ಯನಿಗೂ ಬುದ್ಧಿಗೂ ಕಣ್ಣಾಗಿರುವವನು.

13135108a ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕದೋ120ಽಗ್ರಜಃ।
13135108c ಅನಿರ್ವಿಣ್ಣಃ ಸದಾಮರ್ಷೀ ಲೋಕಾಧಿಷ್ಠಾನಮದ್ಭುತಮ್।।

(೮೮೬) ಅನಂತಃ – ದೇಶಕಾಲಗಳ ಪರಿಮಿತಿಯಿಲ್ಲದವನು; ನಾಶವಿಲ್ಲದವನು; ಶೇಷನಾಗಸ್ವರೂಪನು. (೮೮೭) ಹುತಭುಕ್ – ಹೋಮಮಾಡಿದ್ದುದನ್ನು ಭುಂಜಿಸುವವನು. (೮೮೮) ಭೋಕ್ತಾ – ಪರಮಾನಂದವನ್ನು ಅನುಭವಿಸುವವನು. (೮೮೯) ಸುಖದಃ – ಪರಮಾನಂದಸುಖವನ್ನು ನೀಡುವವನು. (೮೯೦) ನೈಕದಃ – ಅಸಂಖ್ಯಾತ ಮಾಲೆಗಳು, ಅಂಜನಗಳು, ವಸ್ತ್ರಗಳು ಮೊದಲಾದ ಬ್ರಹ್ಮಾಲಂಕಾರಗಳನ್ನು ಕೊಡುವ ಮತ್ತು ಮುಕ್ತರಿಗೆ ಪರಮಪದದಲ್ಲಿ ಉಪಚಾರಮಾಡಬಲ್ಲ ಐನೂರು ಮಂದಿ ಅಪ್ಸರಸ್ತ್ರೀಯರುಳ್ಳವನು. (೮೯೧) ಅಗ್ರಜಃ – ಎಲ್ಲಕ್ಕೂ ಮೊದಲು ಆವಿರ್ಭವಿಸಿದವನು; ಸೃಷ್ಟಿಗೆ ಮೊದಲು ವ್ಯಕ್ತನಾದವನು. (೮೯೨) ಅನಿರ್ವಿಣ್ಣಃ – ಖೇದವಿಲ್ಲದವನು; ಆಯಾಸಗೊಳ್ಳದವನು. (೮೯೩) ಸದಾಮರ್ಷೀ – ಸದಾ ಸಹನಶೀಲನು; ಸದಾ ಕ್ಷಮಾಶೀಲನು; ದುಷ್ಟರ ವಿಷಯದಲ್ಲಿ ಸದಾ ಕ್ರೋಧವುಳ್ಳವನು. (೮೯೪) ಲೋಕಾಧಿಷ್ಠಾನಃ – ಎಲ್ಲ ಲೋಕಗಳಿಗೂ ಆಧಾರನು; ತಾನು ನಿರಾಧಾರನಾಗಿದ್ದು ಲೋಕಗಳಿಗೆಲ್ಲಾ ಆಶ್ರಯವಾಗಿರುವ ಬ್ರಹ್ಮವು. (೮೯೫) ಅದ್ಭುತಃ – ಯಾರ ದರ್ಶನ-ಜ್ಞಾನ-ಪ್ರವಚನಾದಿಗಳು, ಸ್ವರೂಪ-ರೂಪ-ಗುಣ-ವೈಭವ-ಐಶ್ವರ್ಯ-ಕೃತಿ ಮೊದಲಾದವುಗಳು ಪರಮಾಶ್ಚರ್ಯಕರವೋ ಅವನು; ಆಶ್ಚರ್ಯರೂಪನು.

13135109a ಸನಾತ್ಸನಾತನತಮಃ ಕಪಿಲಃ ಕಪಿರವ್ಯಯಃ121
13135109c ಸ್ವಸ್ತಿದಃ ಸ್ವಸ್ತಿಕೃತ್ಸ್ವಸ್ತಿ ಸ್ವಸ್ತಿಭುಕ್ಸ್ವಸ್ತಿದಕ್ಷಿಣಃ।।

(೮೯೬) ಸನಾತ್ – ಸರ್ವಕಾಲದಲ್ಲಿಯೂ ಇರುವವನು; ಮುಕ್ತಾತ್ಮರೊಡನೆ ನಿತ್ಯಸುಖವನ್ನು ಅನುಭವಿಸುವವನು; ಲಾಭವನ್ನು ಹೊಂದಿಸುವವನು. (೮೯೭) ಸನಾತನತಮಃ – ಅತ್ಯಂತ ಪುರಾತನನೂ ನಿತ್ಯನೂ ಆಗಿರುವವನು. (೮೯೮) ಕಪಿಲಃ – ಸಿದ್ಧೇಶ್ವರ ಕಪಿಲ ಸ್ವರೂಪನು; ಕಪಿಲವರ್ಣವಿರುವ ಬಡವಾನಲಸ್ವರೂಪಿಯು; ವಿದ್ಯುನ್ಮಂಡಲದಲ್ಲಿರುವ ನೀಲಮೇಘದಂತೆ ಉಜ್ಜ್ವಲ ವರ್ಣವುಳ್ಳವನು. (೮೯೯) ಕಪಿಃ – ಸೂರ್ಯರೂಪಿಯು; ಬಡವಾನಲಸ್ವರೂಪಿಯು; ಶ್ರೇಷ್ಠನು; ಪರಮಸುಖವನ್ನು ಸೇವಿಸುವವನು. (೯೦೦) ಅವ್ಯಯಃ – ರಕ್ಷಣೀಯರ ಬಳಿ ಹೋಗುವವನು. (೯೦೧) ಸ್ವಸ್ತಿದಃ – ಮಂಗಳವನ್ನು ನೀಡುವವನು; ಭಕ್ತರಿಗೆ ಒಳ್ಳೆಯ ಜೀವನವನ್ನು ಕೊಡುವವನು. (೯೦೨) ಸ್ವಸ್ತಿಕೃತ್ – ಮಂಗಳವನ್ನುಂಟುಮಾಡುವವನು. (೯೦೩) ಸ್ವಸ್ತಿ – ಪರಮಾನಂದ ಮಂಗಳಸ್ವರೂಪನು; ಎಲ್ಲ ದೇಶ-ಕಾಲಗಳಲ್ಲಿಯೂ ಚೆನ್ನಾಗಿರುವವನು. (೯೦೪) ಸ್ವಸ್ತಿಭುಕ್ – ಮಂಗಳಾನಂದವನ್ನು ಅನುಭವಿಸುವವನು; ಮಂಗಳವನ್ನು ಸಂರಕ್ಷಿಸುವವನು. (೯೦೫) ಸ್ವಸ್ತಿದಕ್ಷಿಣಃ – ಮಂಗಳವನ್ನುಂಟುಮಾಡುವುದರಲ್ಲಿ ಕುಶಲನು; ಮಂಗಳಮಯ ಔದಾರ್ಯವುಳ್ಳವನು; ಮಂಗಳಮಯ ಯಜ್ಞದಕ್ಷಿಣೆಯುಳ್ಳವನು.

13135110a ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನಃ।
13135110c ಶಬ್ದಾತಿಗಃ ಶಬ್ದಸಹಃ ಶಿಶಿರಃ ಶರ್ವರೀಕರಃ।।

(೯೦೬) ಅರೌದ್ರಃ – ರೌದ್ರ ಗುಣ-ರೂಪಾದಿಗಳಿಲ್ಲದವನು; ಅತ್ಯಂತ ಸೌಮ್ಯನು; ಕ್ರೌರ್ಯವಿಲ್ಲದವನು. (೯೦೭) ಕುಂಡಲೀ – ದಿವ್ಯಕುಂಡಲಗಳನ್ನು ಧರಿಸಿದವನು; ಕುಂಡಲಿನೀ ಸರ್ಪರೂಪನು; ಮಕರಕುಂಡಲಗಳುಳ್ಳವನು. (೯೦೮) ಚಕ್ರೀ – ಮನಸ್ತತ್ತ್ವರೂಪವಾದ ಸುದರ್ಶನ ಚಕ್ರವುಳ್ಳವನು; ಧರ್ಮಚಕ್ರದ ಪ್ರವರ್ತಕನು; ಸಂಸಾರಚಕ್ರವನ್ನು ತಿರುಗಿಸುವವನು; ಮೂಲಾಧಾರವೇ ಮೊದಲಾದ ಚಕ್ರಗಳಿರುವವನು. (೯೦೯) ವಿಕ್ರಮೀ – ಅತಿಶಯ ಪರಾಕ್ರಮವುಳ್ಳವನು; ಅತಿಶಯ ಪಾದವಿನ್ಯಾಸವುಳ್ಳವನು. (೯೧೦) ಊರ್ಜಿತಶಾಸನಃ – ಅತ್ಯಧಿಕ ಬಲ, ಶಕ್ತಿ, ಉತ್ಸಾಹಗಳಿಂದ ಕೂಡಿದ ಶಾಸನವುಳ್ಳವನು; ಶ್ರುತಿ-ಸ್ಮೃತಿ ರೂಪದ ಅತ್ಯಂತ ಉತ್ಕೃಷ್ಠ ಶಾಸನವುಳ್ಳವನು. (೯೧೧) ಶಬ್ದಾತಿಗಃ – ಶಬ್ದಗಳಿಗೆ ದೊರಕದವನು; ಶಬ್ದಬ್ರಹ್ಮವನ್ನು ಮೀರಿದವನು. (೯೧೨) ಶಬ್ದಸಹಃ – ಎಲ್ಲ ಶಬ್ದಗಳಿಗೂ ವಾಚ್ಯನಾಗಿರುವವನು; ಶಬ್ದಗಳಿಂದಲೇ ಸ್ತುತಿಸಲ್ಪಡಬೇಕಾದವನು; ಶತ್ರುಗಳ ನಿಂದಾಶಬ್ದಗಳನ್ನು ತಾಳಿಕೊಳ್ಳುವವನು. (೯೧೩) ಶಿಶಿರಃ – ಚಂದ್ರಶೀತಲನು; ತಾಪತ್ರಯಗಳಿಂದ ಸಂತಪ್ತರಾದವರಿಗೆ ವಿಶ್ರಾಂತಿಸ್ಥಾನನು. (೯೧೪) ಶರ್ವರೀಕರಃ – ಚಂದ್ರರೂಪಿಯು; ಅಜ್ಞಾನಿಗಳಿಗೆ ಸಂಸಾರವೆಂಬ ಕಾಳರಾತ್ರಿಯನ್ನುಂಟುಮಾಡುವವನು.

13135111a ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ ಕ್ಷಮಿಣಾಂ ವರಃ।
13135111c ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ।।

(೯೧೫) ಅಕ್ರೂರಃ – ಕ್ರೌರ್ಯವಿಲ್ಲದವನು; ಅಕ್ರೂರನಿಗೆ ಪ್ರಿಯನಾದವನು. (೯೧೬) ಪೇಶಲೋ – ಅತ್ಯಂತ ಸುಂದರನು; ಸರ್ವಾತ್ಮನಾ ಸುಂದರನು; ಕರ್ಮ-ಮನಸ್ಸು-ವಾಣಿ-ಶರೀರಗಳಲ್ಲಿ ಸುಂದರನಾದವನು. (೯೧೭) ದಕ್ಷಃ – ಸಮರ್ಥನು; ಶೀಘ್ರವಾಗಿ ಕಾರ್ಯಮಾಡುವವನು; ವೃದ್ಧಿಹೊಂದಿದವನು. (೯೧೮) ದಕ್ಷಿಣಃ – ಉದಾರಿಯು; ಸರಳ ಸ್ವಭಾವದವನು; ಸಮರ್ಥನು; ಶೀಘ್ರಕಾರಿಯು; ಕುಶಲನು. (೯೧೯) ಕ್ಷಮಿಣಾಂ ವರಃ – ಕ್ಷಮಾಶೀಲರಲ್ಲಿ ಶ್ರೇಷ್ಠನಾದವನು; ಸಹನೆಯುಳ್ಳವರಲ್ಲಿ ಶ್ರೇಷ್ಠನಾದವನು. (೯೨೦) ವಿದ್ವತ್ತಮಃ – ಎಣೆಯಿಲ್ಲದ ಪರಿಪೂರ್ಣ ಜ್ಞಾನವನ್ನು ಸದಾ ಹೊಂದಿರುವ ಜ್ಞಾನಿಶ್ರೇಷ್ಠನು; ಅತ್ಯಂತ ಜ್ಞಾನಿಯು. (೯೨೧) ವೀತಭಯಃ – ಸರ್ವಭಯರಹಿತನು; ಸರ್ವಭಯಪರಿಹಾರಕನು. (೯೨೨) ಪುಣ್ಯಶ್ರವಣಕೀರ್ತನಃ – ಯಾರ ಶ್ರವಣ ಮತ್ತು ಸಂಕೀರ್ತನೆಗಳಿಂದ ಅತಿಶಯ ಪುಣ್ಯವುಂಟಾಗುವುದೋ ಅವನು; ಪುಣ್ಯಕರ ಶ್ರವಣ-ಕೀರ್ತನೆಗಳುಳ್ಳವನು.

13135112a ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ।
13135112c ವೀರಹಾ ರಕ್ಷಣಃ ಸಂತೋ ಜೀವನಃ ಪರ್ಯವಸ್ಥಿತಃ।।

(೯೨೩) ಉತ್ತಾರಣಃ – ಸಂಸಾರಸಾಗರದಿಂದ ದಾಟಿಸುವವನು; ಸರ್ವಕಷ್ಟಗಳಿಂದಲೂ ಪಾರುಮಾಡುವವನು; ಭವಸಾಗರದಿಂದ ಪಾರುಮಾಡಿಸುವವನು. (೯೨೪) ದುಷ್ಕೃತಿಹಾ – ದುಷ್ಟಕಾರ್ಯಗಳನ್ನು ಅಥವಾ ದುಷ್ಟಕಾರ್ಯಗಳನ್ನು ಮಾಡಿದವರನ್ನು ಸಂಹರಿಸುವವನು; ಪಾಪಿಗಳನ್ನು ಸಂಹರಿಸುವವನು; ಪಾಪಗಳನ್ನು ಕಳೆಯುವವನು. (೯೨೫) ಪುಣ್ಯಃ122 – ಪಾವನಗೊಳಿಸುವವನು; ಪುಣ್ಯವನ್ನು ಉಪದೇಶಿಸುವವನು. (೯೨೬) ದುಃಸ್ವಪ್ನನಾಶನಃ – ಧ್ಯಾನಿಸುವ ಭಕ್ತರ ಕೆಟ್ಟ ಕನಸುಗಳನ್ನು ನಾಶಪಡಿಸುವವನು; ಅಜ್ಞಾನವನ್ನು ಹೋಗಲಾಡಿಸುವವನು. (೯೨೭) ವೀರಹಾ – ವೀರರಾದ ಒಳ-ಹೊರ ಶತ್ರುಗಳನ್ನು ಸಂಹರಿಸುವವನು. (೯೨೮) ರಕ್ಷಣಃ – ಜಗತ್ತನ್ನು ತಕ್ಷಿಸುವ ಸ್ಥಿತಿಕಾರಕನು; ಭಕ್ತ ಸಂರಕ್ಷಕನು; ಸತ್ತ್ವಗುಣವನ್ನಾಶ್ರಯಿಸಿ ಮೂರು ಲೋಕಗಳನ್ನೂ ರಕ್ಷಿಸುವವನು. (೯೨೯) ಸಂತಃ – ಸತ್ಪುರುಷನು; ಎಲ್ಲೆಲ್ಲಿಯೂ ಇರುವವನು. (೯೩೦) ಜೀವನಃ – ಆತ್ಮೋಜ್ಜೀವನವನ್ನು ಉಂಟುಮಾಡುವವನು; ನಿತ್ಯಜೀವನವನ್ನು ಉಂಟುಮಾಡುವವನು; ಬದುಕಿಸುವವನು. (೯೩೧) ಪರ್ಯವಸ್ಥಿತಃ123 – ವಿಶ್ವದ ಎಲ್ಲೆಡೆಯಲ್ಲಿಯೂ ವ್ಯಾಪಿಸಿರುವವನು; ಎಲ್ಲೆಲ್ಲಿಯೂ ನೆಲೆಸಿರುವವನು.

13135113a ಅನಂತರೂಪೋಽನಂತಶ್ರೀರ್ಜಿತಮನ್ಯುರ್ಭಯಾಪಹಃ।
13135113c ಚತುರಸ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ।।

(೯೩೨) ಅನಂತರೂಪಃ – ಅನಂತವಾದ ರೂಪಗಳುಳ್ಳವನು; ನಾಶರಹಿತ ರೂಪಗಳುಳ್ಳವನು; ಅಸಂಖ್ಯಾತ ವಿಗ್ರಹಗಳುಳ್ಳವನು. (೯೩೩) ಅನಂತಶ್ರೀಃ – ಅಸಂಖ್ಯಾತವಾದ ಮತ್ತು ನಾಶರಹಿತವಾದ ಸಂಪತ್ತುಗಳುಳ್ಳವನು. (೯೩೪) ಜಿತಮನ್ಯುಃ – ಕೋಪವನ್ನೂ ದೈನ್ಯವನ್ನೂ ಜಯಿಸಿದವನು; ಕೋಪವನ್ನೂ ದೈನ್ಯವನ್ನೂ ಜಯಿಸಲು ಕಾರಣನು. (೯೩೫) ಭಯಾಪಹಃ – ಎಲ್ಲ ಭಯಗಳನ್ನೂ ಹೋಗಲಾಡಿಸುವವನು; ಮನುಷ್ಯರ ಸಂಸಾರಭಯವನ್ನು ನಾಶಪಡಿಸುವವನು. (೯೩೬) ಚತುರಸ್ರಃ – ನ್ಯಾಯಶಾಲಿಯು; ವೈಷಮ್ಯವಿಲ್ಲದೇ ಸರ್ವಸಮನಾಗಿರುವವನು. (೯೩೭) ಗಭೀರಾತ್ಮಾ – ಹೆಚ್ಚು ಆಳವಾದ ಆತ್ಮಸ್ವರೂಪನು; ದೇವತೆಗಳಿಗೂ ಅಳೆಯಲು ಅಸಾಧ್ಯವಾದ ಸ್ವರೂಪವುಳ್ಳವನು ಅಥವಾ ಮನಸ್ಸುಳ್ಳವನು. (೯೩೮) ವಿದಿಶಃ – ಈಶಾನ್ಯ-ವಾಯವ್ಯಗಳೇ ಮೊದಲಾದ ಉಪದಿಕ್ಕುಗಳ ರೂಪದಲ್ಲಿರುವವನು; ವಿವಿಧ ಫಲಗಳನ್ನು ವಿಶೇಷವಾಗಿ ಕೊಡುವವನು. (೯೩೯) ವ್ಯಾದಿಶಃ – ಸುತ್ತಲೂ ಇರುವ ದಿಕ್ಕುಗಳ ರೂಪನು; ಬಗೆಬಗೆಯ ಆಜ್ಞೆಗಳನ್ನು ಕೊಡುವವನು. (೯೪೦) ದಿಶಃ – ಎಲ್ಲ ದಿಕ್ಕುಗಳೂ ಆಗಿರುವವನು; ಕರ್ಮಫಲಗಳನ್ನು ಅಥವಾ ಇಷ್ಟಾರ್ಥಗಳನ್ನು ಕೊಡುವವನು.

13135114a ಅನಾದಿರ್ಭೂರ್ಭುವೋ ಲಕ್ಷ್ಮೀಃ ಸುವೀರೋ ರುಚಿರಾಂಗದಃ।
13135114c ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ।।

(೯೪೧) ಅನಾದಿಃ – ಆದಿಯಿಲ್ಲದವನು; ಸರ್ವಕಾರಣನು. (೯೪೨) ಭೂರ್ಭುವಃ – ಭೂಮಿಯ ಉತ್ಪತ್ತಿಗೆ ಕಾರಣನು; ಭೂಮಿಗೆ ಆಧಾರನು; ಸತ್ತಾಸ್ವರೂಪನು; ಜಗತ್ತಿನ ಉತ್ಪತ್ತಿಗೆ ಕಾರಣನು; ಭೂಃ-ಭುವಃ ಎಂಬ ವ್ಯಾಹೃತಿಗಳ ಸ್ವರೂಪನು; ಭೂಮಿ ಮತ್ತು ಅಂತರಿಕ್ಷಗಳ ಸ್ವರೂಪನು. (೯೪೩) ಲಕ್ಷ್ಮೀಃ – ಅಷ್ಟಲಕ್ಷ್ಮಿಯೂ ಆತ್ಮಲಕ್ಷ್ಮಿಯೂ ಆಗಿರುವವನು; ನಾರಾಯಣೀಸ್ವರೂಪಿಯು; ಕಾಂತಿಸ್ವರೂಪಿಯು; ಸರ್ವ ಸಂಪತ್ತೂ ಆಗಿರುವವನು. (೯೪೪) ಸುವೀರಃ – ಮಹಾವೀರನು. (೯೪೫) ರುಚಿರಾಂಗದಃ – ಮಂಗಳ ಮನೋಹರ ತೋಳ್ಬಳೆಗಳುಳ್ಳವನು. (೯೪೬) ಜನನಃ – ಪ್ರಾಣಿಗಳ ಜನನಕ್ಕೆ ಕಾರಣನು; ಜನನವನ್ನು ಸ್ವೀಕರಿಸುವವನು; ಹುಟ್ಟಿಸುವವನು; ಜನರನ್ನು ಒಯ್ಯುವವನು. (೯೪೭) ಜನಜನ್ಮಾದಿಃ124 – ಪ್ರಾಣಿಗಳ ಜನ್ಮದ ಮೂಲಕಾರಣನು. (೯೪೮) ಭೀಮಃ – ದುಷ್ಟರಿಗೆ ಭಯಂಕರನಾದವನು. (೯೪೯) ಭೀಮಪರಾಕ್ರಮಃ – ದುಷ್ಟರಿಗೆ ಭಯವನ್ನುಂಟುಮಾಡುವ ಪರಾಕ್ರಮವುಳ್ಳವನು.

13135115a ಆಧಾರನಿಲಯೋ ಧಾತಾ125 ಪುಷ್ಪಹಾಸಃ ಪ್ರಜಾಗರಃ।
13135115c ಊರ್ಧ್ವಗಃ ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ।।

(೯೫೦) ಆಧಾರನಿಲಯಃ – ಎಲ್ಲವಕ್ಕೂ ಆಧಾರವೂ ನೆಲಮನೆಯೂ ಆಗಿರುವವನು; ಆಧಾರವಾದ ಶೇಷನಾಗನೇ ಮೊದಲಾದವರಿಗೂ ನೆಲಮನೆಯಾಗಿರುವವನು. (೯೫೧) ಧಾತಾ – ಎಲ್ಲವನ್ನೂ ಧರಿಸಿ ಪೋಷಿಸುವವನು. (೯೫೨) ಪುಷ್ಪಹಾಸಃ – ಪುಷ್ಪದಂತೆ ಮೃದು-ಮಧುರ-ಮನೋಹರ-ಶುದ್ಧ-ಸುಗಂಧಯುಕ್ತ ಮಂದಹಾಸವುಳ್ಳವನು. (೯೫೩) ಪ್ರಜಾಗರಃ – ಸದಾ ಚೆನ್ನಾಗಿ ಎಚ್ಚರವಾಗಿಯೇ ಇರುವವನು; ರೈತನು ಸಸ್ಯಗಳ ವಿಷಯದಲ್ಲಿ ಹೇಗೋ ಹಾಗೆ ಭಕ್ತರ ವಿಷಯದಲ್ಲಿ ಹಗಲು-ರಾತ್ರಿ ಸದಾ ಚೆನ್ನಾಗಿ ಜಾಗರೂಕನಾಗಿರುವವನು. (೯೫೪) ಊರ್ಧ್ವಗಃ – ಮೇಲಕ್ಕೆ ಹೋಗುವ ವೃತ್ತಿಯುಳ್ಳವನು; ಊರ್ಧ್ವಗಾಮೀ ವೀರ್ಯವುಳ್ಳವನು; ಎಲ್ಲರಿಗಿಂತಲೂ ಮೇಲಿರುವವನು. (೯೫೫) ಸತ್ಪಥಾಚಾರಃ – ಸನ್ಮಾರ್ಗದಲ್ಲಿ ನಡೆಯುವವನು; ಭಕ್ತರನ್ನು ಸ್ವಾಭಾವಿಕವಾದ ಸಾತ್ತ್ವಿಕದಾಸ್ಯಮಾರ್ಗದಲ್ಲಿ ನಡೆಸುವವನು. (೯೫೬) ಪ್ರಾಣದಃ – ಪ್ರಾಣಗಳನ್ನು ಕೊಡುವವನು; ಪ್ರಾಣಸಂಧಾನಮಾಡುವವನು; ಮೃತರಾಗಿದ್ದ ಪರೀಕ್ಷಿತನೇ ಮೊದಲಾದವರನು ಬದುಕಿಸಿದವನು. (೯೫೭) ಪ್ರಣವಃ126 – ಓಂಕಾರವಾಚ್ಯನು; ಪ್ರಾಣಗಳನ್ನು ತನ್ನಲ್ಲಿ ಪ್ರಣಾಮ ಮಾಡಿಸುವವನು; ತನಗೆ ವಾಚಕವಾದ ಪ್ರಣವದಿಂದ ಅಭಿನ್ನನಾದವನು. (೯೫೮) ಪಣಃ – ವ್ಯವಹರಿಸುವವನು; ಸ್ತುತಿಸಲ್ಪಡುವವನು; ಪುಣ್ಯಪಣವಾಗಿರುವವನು.

13135116a ಪ್ರಮಾಣಂ ಪ್ರಾಣನಿಲಯಃ ಪ್ರಾಣಕೃತ್ಪ್ರಾಣಜೀವನಃ127
13135116c ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ।।

(೯೫೯) ಪ್ರಮಾಣಂ – ಯಥಾರ್ಥಜ್ಞಾನದ ಅನುಭವವಾದ ಪ್ರಮೆಗೆ ಸಾಧನನಾಗಿರುವವನು; ಶ್ರೇಷ್ಠವಾದ ಅಳತೆಯಾಗಿರುವವನು. (೯೬೦) ಪ್ರಾಣನಿಲಯಃ - ಪ್ರಾಣಿಗಳಿಗೆ ಮತ್ತು ಇಂದ್ರಿಯಗಳಿಗೆ ಲಯಸ್ಥಾನನೂ ಆರಾಮಗೃಹವೂ ಆಗಿರುವವನು. (೯೬೧) ಪ್ರಾಣಕೃತ್ – ಪ್ರಾಣವನ್ನು ನಿರ್ಮಿಸಿರುವವನು. (೯೬೨) ಪ್ರಾಣಜೀವನಃ – ಪ್ರಾಣಿಗಳಿಗೆ ಚೈತನ್ಯನಾಗಿರುವವನು. (೯೬೩) ತತ್ತ್ವಂ – ಸತ್ ಸ್ವರೂಪನು; ಎಲ್ಲದರ ಸಾರಾಂಶಸ್ವರೂಪನು. (೯೬೪) ತತ್ತ್ವವಿತ್ – ಸ್ವರೂಪವನ್ನು ಯಥಾವತ್ತಾಗಿ ಅರಿತವನು. (೯೬೫) ಏಕಾತ್ಮಾ128 – ಕೇವಲಾತ್ಮನು; ಪರಮಾತ್ಮನು; ಅದ್ವಿತೀಯ ಆತ್ಮನು. (೯೬೬) ಜನ್ಮಮೃತ್ಯುಜರಾತಿಗಃ – ಹುಟ್ಟು-ಸಾವು-ಮುಪ್ಪು ಮೊದಲಾದ ಸರ್ವವಿಕಾರಗಳನ್ನೂ ಮೀರಿದವನು129.

13135117a ಭೂರ್ಭುವಃಸ್ವಸ್ತರುಸ್ತಾರಃ ಸವಿತಾ ಪ್ರಪಿತಾಮಹಃ।
13135117c ಯಜ್ಞೋ ಯಜ್ಞಪತಿರ್ಯಜ್ವಾ ಯಜ್ಞಾಂಗೋ ಯಜ್ಞವಾಹನಃ।।

(೯೬೭) ಭೂರ್ಭುವಃಸ್ವಸ್ತರುಃ130 – ಸರ್ವಾಶ್ರಯವಾದ ವ್ಯಾಹೃತಿತ್ರಯ ಮತ್ತು ಜಗತ್ರಯವೆಂಬ ವೃಕ್ಷರೂಪಿಯು131; ವಿಶ್ವವೃಕ್ಷಸ್ವರೂಪಿಯು; ವೇದಸಾರಗಳಾದ ಭೂರ್ಭುವಸ್ಸುವಃ ಎನ್ನುವ ಮೂರು ವ್ಯಾಹೃತಿರೂಪಗಳ ಮೂರು ಲೋಕಗಳನ್ನೂ ದಾಟಿಸುವವನು. (೯೬೮) ತಾರಃ – ಪ್ರಣವ ಸ್ವರೂಪನು; ಸಂಸಾರಸಾಗರದಿಂದ ದಾಟಿಸುವವನು; ಓಂಕಾರನು (೯೬೯) ಸವಿತಾ – ಜಗತ್ತನ್ನು ಪ್ರಸವಿಸುವವನು; ಬುದ್ಧಿಯನ್ನು ಪ್ರೇರೇಪಿಸುವವನು; ಅನುಮತಿಸುವವನು; ಸಮಸ್ತ ಲೋಕಗಳ ಜನಕನು (೯೭೦) ಪ್ರಪಿತಾಮಹಃ132 – ಪಿತಾಮಹ ಬ್ರಹ್ಮನ ತಂದೆ (೯೭೧) ಯಜ್ಞಃ – ಯಜ್ಞಸ್ವರೂಪಿಯು; ಯಜ್ಞದಿಂದ ಪೂಜಿಸಲ್ಪಡಬೇಕಾದವನು; ಯಜ್ಞಾತ್ಮಕನು; ಜಪಯಜ್ಞ ಸ್ವರೂಪನು; ಯಜ್ಞಭೋಕ್ತ್ರು, ಯಾಜ್ಯ. (೯೭೨) ಯಜ್ಞಪತಿಃ – ಯಜ್ಞಗಳ ಸ್ವಾಮಿ; ಯಜ್ಞಸಂರಕ್ಷಕ; ಯಜ್ಞದ ಫಲವನ್ನು ಕೊಡುವವನು. (೯೭೩) ಯಜ್ವಾ – ಯಜಮಾನಸ್ವರೂಪಿಯು; ಸೃಷ್ಟಿ-ಸ್ಥಿತಿ-ಲಯಗಳೆಂಬ ವಿಶ್ವಯಜ್ಞವನ್ನು ಮಾಡುತ್ತಿರುವವನು; ಶ್ರೀರಾಮಾದಿ ರೂಪಗಳಲ್ಲಿ ಯಜ್ಞವನ್ನು ಮಾಡಿದವನು; ಭಕ್ತರು ಯಜ್ಞಮಾಡಲು ಅಶಕ್ತರಾಗಿದ್ದರೆ ಅವರ ಯಜ್ಞಗಳನ್ನು ತಾನೇ ಮಾಡುವವನು. (೯೭೪) ಯಜ್ಞಾಂಗಃ – ಯಜ್ಞದ ಅಂಗಗಳೂ ತಾನೇ ಆಗಿರುವವನು; ಯಜ್ಞಗಳನ್ನು ತನ್ನ ಅಂಗಗಳನ್ನಾಗಿ ಹೊಂದಿರುವ ಯಜ್ಞವರಾಹ ಮೂರ್ತಿಯು133. (೯೭೫) ಯಜ್ಞವಾಹನಃ – ಯಜ್ಞವನ್ನು ವಾಹನವನ್ನಾಗಿ ಹೊಂದಿರುವವನು; ಯಜ್ಞದ ಮೂಲಕ ಭಕ್ತರ ಬಳಿಬಂದು ಅವರೊಡನೆ ಸ್ವಧಾಮಕ್ಕೆ ತೆರಳುವವನು; ಋತ-ಸತ್ಯಸ್ವರೂಪಿಯು; ಯಜ್ಞಗಳನ್ನು ನಡೆಸಿಕೊಡುವವನು; ಯಜ್ಞವನ್ನು ಮಾಡುವವರನ್ನು ಒಯ್ಯುವವನು.

13135118a ಯಜ್ಞಭೃದ್ಯಜ್ಞಕೃದ್ಯಜ್ಞೀ ಯಜ್ಞಭುಗ್ಯಜ್ಞಸಾಧನಃ।
13135118c ಯಜ್ಞಾಂತಕೃದ್ಯಜ್ಞಗುಹ್ಯಮನ್ನಮನ್ನಾದ ಏವ ಚ।।

(೯೭೬) ಯಜ್ಞಭೃತ್ – ಯಜ್ಞವನ್ನು ಧರಿಸಿ ರಕ್ಷಿಸುವವನು; ಯಜ್ಞವು ವಿಫಲವಾಗಿದ್ದರೂ ತನ್ನ ಸ್ಮರಣೆ ಮತ್ತು ಪೂರ್ಣಾಹುತಿಗಳಿಂದ ಅದನ್ನು ಪೋಷಿಸುವವನು. (೯೭೭) ಯಜ್ಞಕೃತ್ – ಪ್ರಪಂಚದ ಸೃಷ್ಟಿ-ಸ್ಥಿತಿ-ಲಯರೂಪದ ಯಜ್ಞವನ್ನು ಮಾಡುವವನು; ರಾಮಾದಿ ಅವತಾರಗಳಲ್ಲಿ ಯಜ್ಞವನ್ನು ಮಾಡುವವನು; ಜಗತ್ತಿನ ಆರಂಭ ಮತ್ತು ಅಂತ್ಯಗಳಲ್ಲಿ ಯಜ್ಞಗಳನ್ನು ಮಾಡುವವನು ಅಥವಾ ಯಜ್ಞವನ್ನು ಕತ್ತರಿಸುವವನು. (೯೭೮) ಯಜ್ಞೀ – ಯಜ್ಞಗಳನ್ನುಳ್ಳವನು; ಯಜ್ಞಕ್ಕೆ ಶೇಷಿಯಾಗಿರುವವನು; ಯಜ್ಞಗಳು ಯಾರಿಗಾಗಿ ಇವೆಯೋ ಅವನು. (೯೭೯) ಯಜ್ಞಭುಕ್ – ಯಜ್ಞವನ್ನು ಅನುಭವಿಸುವವನು ಅಥವಾ ರಕ್ಷಿಸುವವನು; ಯಜ್ಞಗಳನ್ನು ಭುಜಿಸುವವನು; ಯಜ್ಞವನ್ನು ಭುಂಜಿಸುವವನು ಅಥವಾ ಭೋಜನ ಮಾಡಿಸುವವನು134. (೯೮೦) ಯಜ್ಞಸಾಧನಃ – ಯಜ್ಞದ ಸಲಕರಣೆಗಳಾಗಿರುವವನು; ಯಾರನ್ನು ಹೊಂದಲು ಯಜ್ಞಗಳು ಸಾಧನೆಗಳಾಗಿವೆಯೋ ಅವನು135. (೯೮೧) ಯಜ್ಞಾಂತಕೃತ್ – ಯಜ್ಞದ ಫಲವನ್ನು ಕೊಡುವವನು; ಪೂರ್ಣಗೊಳಿಸುವವನು; ಅವಿಧಿಪೂರ್ವಕ ಯಜ್ಞವನ್ನು ಧ್ವಂಸಮಾಡುವವನು; ಪ್ರಳಯಕಾಲದಲ್ಲಿ ಸೃಷ್ಟಿ-ಸ್ಥಿತಿ-ಯಜ್ಞಗಳನ್ನು ನಾಶಮಾಡುವವನು. (೯೮೨) ಯಜ್ಞಗುಹ್ಯಂ – ಯಜ್ಞಗಳ ರಹಸ್ಯನು; ಜ್ಞಾನಯಜ್ಞರೂಪೀ ಅಥವಾ ನಿಷ್ಕಾಮಯಜ್ಞರೂಪಿಯು; ಯಜ್ಞ ಮತ್ತು ಗುಹ್ಯ ಎಂಬ ಹೆಸರುಗಳುಳ್ಳವನು136. (೯೮೩) ಅನ್ನಂ – ಜ್ಞಾನಿಗಳಿಂದ ಅನುಭವಿಸಲ್ಪಡುವವನು; ಪ್ರಳಯಕಾಲದಲ್ಲಿ ಎಲ್ಲವನ್ನೂ ತಿಂದುಹಾಕುವವನು; ಭೂತಗಳಿಂದ ತಿನ್ನಲ್ಪಡುವವನು ಮತ್ತು ಭೂತಗಳನ್ನು ತಿನ್ನುವವನು; ಭೋಕ್ತೃತ್ವಶಕ್ತಿಗಳನ್ನು ಭಗವಂತನ ಅನುಗ್ರಹದಿಂದ ಪಡೆದ ಭಕ್ತರಿಂದ ಸದಾ ಅನುಭವಿಸಲ್ಪಡುವವನು; ಎಲ್ಲರಿಗೂ ಉಪಜೀವ್ಯನಾಗಿರುವವನು ಮತ್ತು ಎಲ್ಲವನ್ನೂ ತಿಂದುಹಾಕುವವನು. (೯೮೪) ಅನ್ನಾದಃ – ಅನ್ನವನ್ನು ತಿನ್ನುವವನು; ಬ್ರಹ್ಮ-ಕ್ಷತ್ರಗಳೆಂಬ ಅನ್ನವನ್ನು ಮೃತ್ಯುವಿನ ಮೇಲೋಗರದೊಂದಿಗೆ ತಿನ್ನುವವನು; ಎಲ್ಲವನ್ನೂ ತೆಗೆದುಕೊಂಡು ಭೋಜನಮಾಡುವವನು; ಎಲ್ಲ ಜೀವಿಗಳನ್ನೂ ಭೋಗ್ಯವಾಗಿ ಅನುಭವಿಸುವವನು; ದ್ವಿಜಪತ್ನಿಯರು ಭಕ್ತಿಯಿಂದ ಅರ್ಪಿಸಿದ ಅನ್ನವನ್ನು ತಿಂದವನು.

13135119a ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ।
13135119c ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ।।

(೯೮೫) ಆತ್ಮಯೋನಿಃ – ತನಗೆ ತಾನೇ ಕಾರಣನಾದವನು, ಸ್ವಯಂಭುವು, ಕಾರಣಾಂತರವಿಲ್ಲದವನು. (೯೮೬) ಸ್ವಯಂಜಾತಃ – ತನಗೆ ತಾನೇ ಹುಟ್ಟಿರುವವನು; ತನಗೆ ತಾನೇ ನಿಮಿತ್ತಕಾರಣನಾಗಿರುವವನು; ಕರ್ಮಗಳ ವೇಗದಿಂದಲ್ಲದೇ ತನ್ನ ಇಚ್ಛೆಯಿಂದಲೇ ಹುಟ್ಟಿದವನು. (೯೮೭) ವೈಖಾನಃ – ವೈಖಾನಾಶ್ರಮ ಅಥವಾ ವಾನಪ್ರಸ್ಥಾಶ್ರಮ ಮತ್ತು ವೈಖಾನಮುನಿಸ್ವರೂಪನು; ಗಡ್ಡೆ-ಗೆಣಸುಗಳನ್ನು ಅಗೆದು ತಿನ್ನುವ ತಾಪಸಿಯು; ಭೂಮಿಯನ್ನು ಅಗೆದು ಪಾತಾಳವಾಸಿ ಹಿರಣ್ಯಾಕ್ಷನನ್ನು ಸಂಹರಿಸಿದ ವರಾಹರೂಪಿಯು; ಅವತರಿಸಿ ವಿವಿಧ ಭವದುಃಖಗಳನ್ನು ತಾನೇ ಅಗೆದುಹಾಕುವವನು. (೯೮೮) ಸಾಮಗಾಯನಃ – ಸಾಮಗಳನ್ನು ಹಾಡುವವನು; ಸಾಮಗಳಿಗೆ ಗತಿಯಾಗಿರುವವನು. (೯೮೯) ದೇವಕೀನಂದನಃ – ದೇವಕಿಗೆ ಆನಂದವನ್ನುಂಟುಮಾಡಿದ ಪುತ್ರ; ದೇವಕೀಪುತ್ರ; ಗಂಗೆಯನ್ನು ಪುತ್ರಿಯಾಗಿ ಪಡೆದವನು; ಗಂಗೆಗೆ ಆನಂದವನ್ನುಂಟುಮಾಡುವವನು; ಲಕ್ಷ್ಮಿಗೆ ಆನಂದವನ್ನುಂಟುಮಾಡುವವನು. (೯೯೦) ಸ್ರಷ್ಟಾ – ಎಲ್ಲವನ್ನೂ ಸೃಷ್ಟಿಸಿದವನು, ಪರಾವಸ್ಥೆಯಲ್ಲಿದ್ದರೂ ವಿಶ್ವವನ್ನು ಸೃಷ್ಟಿಮಾಡುವವನು. (೯೯೧) ಕ್ಷಿತೀಶಃ – ಭೂಮಿಯ ಒಡೆಯ, ರಾಜ, ದಶರಥ ಪುತ್ರ ಶ್ರೀರಾಮ, ಭೂದೇವಿಯ ಇಷ್ಟದಂತೆ ಅವಳ ಭಾರವನ್ನು ಇಳಿಸಿದವನು, ಭೂಮಿಯಲ್ಲಿ ಅವತರಿಸಿದವನು, ಭೂಪತಿಯು. (೯೯೨) ಪಾಪನಾಶನಃ – ಯಾರ ಸ್ಮರಣ-ಜಪ-ಕೀರ್ತನಾದಿಗಳಿಂದ ಪಾಪಗಳನ್ನು ನಾಶಪಡಿಸಿಕೊಳ್ಳಬಹುದೋ ಅವನು ಪಾಪನಾಶನನು.

13135120a ಶಂಖಭೃನ್ನಂದಕೀ ಚಕ್ರೀ ಶಾರ್ಙ್ಗಧನ್ವಾ ಗದಾಧರಃ।
13135120c ರಥಾಂಗಪಾಣಿರಕ್ಷೋಭ್ಯಃ ಸರ್ವಪ್ರಹರಣಾಯುಧಃ।।

(೯೯೩) ಶಂಖಭೃತ್ – ಪಾಂಚಜನ್ಯ ಶಂಖವನ್ನು ಧರಿಸಿದವನು. (೯೯೪) ನಂದಕೀ – ನಂದಕವೆನ್ನುವ ಖಡ್ಗವನ್ನು ಧರಿಸಿದವನು. (೯೯೫) ಚಕ್ರೀ – ಸುದರ್ಶನ ಚಕ್ರವನ್ನು ಧರಿಸಿದವನು. (೯೯೬) ಶಾಂರ್ಙ್ಗಧನ್ವಾ – ಶಾಂರ್ಙ್ಗಧನುಸ್ಸನ್ನು ಹಿಡಿದವನು137. (೯೯೭) ಗದಾಧರಃ – ಕೌಮೋದಕೀ ಎನ್ನುವ ಗದೆಯನ್ನು ಹಿಡಿದವನು. (೯೯೮) ರಥಾಂಗಪಾಣಿಃ – ಭೀಷ್ಮನ ಪ್ರತಿಜ್ಞೆಯನ್ನು ಪೂರೈಸಲು ರಥದ ಚಕ್ರವನ್ನು ಕೈಯಲ್ಲಿ ಹಿಡಿದ ಕೃಷ್ಣ821. (೯೯೯) ಅಕ್ಷೋಭ್ಯಃ – ಕ್ಷೋಭೆಗೊಳ್ಳದಿರುವವನು. (೧೦೦೦) ಸರ್ವಪ್ರಹರಣಾಯುಧಃ – ಯುದ್ಧಗಳಲ್ಲಿ ಬಳಸುವ ಎಲ್ಲ ಅಸ್ತ್ರ-ಶಸ್ತ್ರಗಳನ್ನೂ ಧರಿಸಿದವನು; ಶಸ್ತ್ರಗಳಲ್ಲಿರುವ ಉಗುರು ಮೊದಲಾದವುಗಳನ್ನೂ ಶಸ್ತ್ರವಾಗಿ ಬಳಸುವವನು.

13135121a ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ।
13135121c ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್।।

ಕೀರ್ತನೀಯನಾದ ಮಹಾತ್ಮ ಕೇಶವನ ಸಹಸ್ರ ದಿವ್ಯನಾಮಗಳನ್ನು ಯಾವುದನ್ನೂ ಬಿಡದೇ ಹೇಳಿಯಾಯಿತು.

13135122a ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್।
13135122c ನಾಶುಭಂ ಪ್ರಾಪ್ನುಯಾತ್ಕಿಂ ಚಿತ್ಸೋಽಮುತ್ರೇಹ ಚ ಮಾನವಃ।।

ಇದನ್ನು ನಿತ್ಯವೂ ಕೇಳುವ ಮತ್ತು ಸ್ತುತಿಸುವ ಮಾನವನು ಇಹದಲ್ಲಿಯಾಗಲೀ ಪರದಲ್ಲಿಯಾಗಲೀ ಯಾವುದೇ ಅಶುಭವನ್ನು ಹೊಂದುವುದಿಲ್ಲ.

13135123a ವೇದಾಂತಗೋ ಬ್ರಾಹ್ಮಣಃ ಸ್ಯಾತ್ಕ್ಷತ್ರಿಯೋ ವಿಜಯೀ ಭವೇತ್।
13135123c ವೈಶ್ಯೋ ಧನಸಮೃದ್ಧಃ ಸ್ಯಾಚ್ಚೂದ್ರಃ ಸುಖಮವಾಪ್ನುಯಾತ್।।

ಇದರ ಶ್ರವಣ-ಕೀರ್ತನೆಯನ್ನು ಮಾಡುವ ಬ್ರಾಹ್ಮಣನು ವೇದಾಂತಪಾರಂಗತನಾಗುತ್ತಾನೆ. ಕ್ಷತ್ರಿಯನು ವಿಜಯಿಯಾಗುತ್ತಾನೆ. ವೈಶ್ಯನು ಧನಸಮೃದ್ಧನಾಗುತ್ತಾನೆ. ಮತ್ತು ಶೂದ್ರನು ಸುಖವನ್ನು ಪಡೆಯುತ್ತಾನೆ.

13135124a ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಮರ್ಥಾರ್ಥೀ ಚಾರ್ಥಮಾಪ್ನುಯಾತ್।
13135124c ಕಾಮಾನವಾಪ್ನುಯಾತ್ಕಾಮೀ ಪ್ರಜಾರ್ಥೀ ಚಾಪ್ನುಯಾತ್ಪ್ರಜಾಃ।।

ಇದರ ಶ್ರವಣ-ಕೀರ್ತನೆಯನ್ನು ಮಾಡುವ ಧರ್ಮಾರ್ಥಿಯು ಧರ್ಮವನ್ನು ಪಡೆದುಕೊಳ್ಳುತ್ತಾನೆ. ಧನಾರ್ಥಿಯು ಧನವನ್ನು ಪಡೆಯುತ್ತಾನೆ. ಆಸೆಗಳನ್ನಿಟ್ಟುಕೊಂಡಿರುವವನು ಆಸೆಗಳನ್ನು ಹೊಂದುತ್ತಾನೆ. ಮತ್ತು ಮಕ್ಕಳನ್ನು ಬಯಸುವವನು ಮಕ್ಕಳನ್ನು ಪಡೆಯುತ್ತಾನೆ.

13135125a ಭಕ್ತಿಮಾನ್ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ।
13135125c ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ಪ್ರಕೀರ್ತಯೇತ್।।
13135126a ಯಶಃ ಪ್ರಾಪ್ನೋತಿ ವಿಪುಲಂ ಜ್ಞಾತಿಪ್ರಾಧಾನ್ಯಮೇವ ಚ।
13135126c ಅಚಲಾಂ ಶ್ರಿಯಮಾಪ್ನೋತಿ ಶ್ರೇಯಶ್ಚಾಪ್ನೋತ್ಯನುತ್ತಮಮ್।।

ಸದಾ ಭಕ್ತಿಮಾನ್ಯನಾಗಿ ಎದ್ದು ಶುದ್ಧನಾಗಿ ಏಕಾಗ್ರಚಿತ್ತನಾಗಿ ವಾಸುದೇವನ ಸಹಸ್ರ ನಾಮಗಳ ಕೀರ್ತನೆಯನ್ನು ಮಾಡುವವನು ವಿಪುಲ ಯಶಸ್ಸನ್ನು ಪಡೆಯುತ್ತಾನೆ. ಜ್ಞಾತಿಬಾಂಧವರಲ್ಲಿ ಪ್ರಧಾನತೆಯನ್ನು ಪಡೆಯುತ್ತಾನೆ. ಅಚಲ ಸಂಪತ್ತನ್ನು ಪಡೆಯುತ್ತಾನೆ ಮತ್ತು ಅತ್ಯುತ್ತಮ ಶ್ರೇಯಸ್ಸನ್ನು ಪಡೆಯುತ್ತಾನೆ.

13135127a ನ ಭಯಂ ಕ್ವ ಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ।
13135127c ಭವತ್ಯರೋಗೋ ದ್ಯುತಿಮಾನ್ಬಲರೂಪಗುಣಾನ್ವಿತಃ।।

ಅವನಿಗೆ ಯಾವ ಭಯವೂ ಇರುವುದಿಲ್ಲ. ಅವನು ವೀರ್ಯ ತೇಜಸ್ಸುಗಳನ್ನು ಪಡೆಯುತ್ತಾನೆ. ಅರೋಗಿಯಾಗುತ್ತಾನೆ. ದ್ಯುತಿಮಾನನೂ ಬಲ-ರೂಪಗುಣಾನ್ವಿತನೂ ಆಗುತ್ತಾನೆ.

13135128a ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್।
13135128c ಭಯಾನ್ಮುಚ್ಯೇತ ಭೀತಶ್ಚ ಮುಚ್ಯೇತಾಪನ್ನ ಆಪದಃ।।

ರೋಗದಿಂದ ಬಳಲುತ್ತಿರುವವನು ರೋಗದಿಂದ ಮುಕ್ತನಾಗುತ್ತಾನೆ. ಬಂಧನದಲ್ಲಿರುವವನು ಬಂಧನದಿಂದ ಮುಕ್ತನಾಗುತ್ತಾನೆ. ಭೀತನಾದವನು ಭಯದಿಂದ ಮುಕ್ತನಾಗುತ್ತಾನೆ. ಮತ್ತು ಆಪತ್ತಿನಲ್ಲಿರುವವನು ಆಪತ್ತಿನಿಂದ ಮುಕ್ತನಾಗುತ್ತಾನೆ.

13135129a ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್।
13135129c ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ।।

ನಿತ್ಯವೂ ಭಕ್ತಿಸಮನ್ವಿತನಾಗಿ ಪುರುಷೋತ್ತಮನನ್ನು ಸಹಸ್ರನಾಮಗಳಿಂದ ಸ್ತುತಿಸುವ ಪುರುಷನು ಶೀಘ್ರದಲ್ಲಿಯೇ ಎಲ್ಲ ಕಷ್ಟಗಳಿಂದಲೂ ಪಾರಾಗುತ್ತಾನೆ.

13135130a ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ।
13135130c ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್।।

ವಾಸುದೇವನನ್ನು ಆಶ್ರಯಿಸಿ ವಾಸುದೇವಪರಾಯಣನಾದ ಮನುಷ್ಯನು ಸರ್ವಪಾಪಗಳನ್ನೂ ಕಳೆದುಕೊಂಡು ವಿಶುದ್ಧಾತ್ಮನಾಗಿ ಸನಾತನ ಬ್ರಹ್ಮವನ್ನು ಪಡೆಯುತ್ತಾನೆ.

13135131a ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವ ಚಿತ್।
13135131c ಜನ್ಮಮೃತ್ಯುಜರಾವ್ಯಾಧಿಭಯಂ ವಾಪ್ಯುಪಜಾಯತೇ।।

ವಾಸುದೇವನ ಭಕ್ತರಿಗೆ ಯಾವುದೇ ಅಶುಭವುಂಟಾಗುವುದಿಲ್ಲ. ಅವರು ಜನ್ಮ-ಮೃತ್ಯು-ಮುಪ್ಪು ಮತ್ತು ವ್ಯಾಧಿಗಳ ಭಯದಿಂದಲೂ ಮುಕ್ತರಾಗುತ್ತಾರೆ.

13135132a ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ।
13135132c ಯುಜ್ಯೇತಾತ್ಮಸುಖಕ್ಷಾಂತಿಶ್ರೀಧೃತಿಸ್ಮೃತಿಕೀರ್ತಿಭಿಃ।।

ಶ್ರದ್ಧಾಭಕ್ತಿಸಮನ್ವಿತನಾಗಿ ಈ ಸ್ತೋತ್ರವನ್ನು ಕಂಠಪಾಟಮಾಡಿಕೊಂಡವನು ಆತ್ಮಸುಖ, ಕ್ಷಮೆ, ಸಂಪತ್ತು, ಧೈರ್ಯ, ಸ್ಮೃತಿ ಮತ್ತು ಕೀರ್ತಿಗಳಿಂದ ಸಂಪನ್ನನಾಗುತ್ತಾನೆ.

13135133a ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿಃ।
13135133c ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ।।

ಪುರುಷೋತ್ತಮನಲ್ಲಿ ಭಕ್ತಿಯಿರುವವರಿಗೆ ಕ್ರೋಧವಾಗಲೀ, ಮಾತ್ಸರ್ಯವಾಗಲೀ, ಲೋಭವಾಗಲೀ, ಅಶುಭ ಬುದ್ಧಿಯಾಗಲೀ ಉಂಟಾಗುವುದಿಲ್ಲ. ಅವರು ಪುಣ್ಯಕೃತರಾಗುತ್ತಾರೆ.

13135134a ದ್ಯೌಃ ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿಃ।
13135134c ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನಃ।।

ಚಂದ್ರ-ಸೂರ್ಯ-ನಕ್ಷತ್ರಗಳಿಂದ ಕೂಡಿದ ಸ್ವರ್ಗ, ಆಕಾಶ, ದಿಕ್ಕುಗಳು, ಭೂಮಿ, ಮತ್ತು ಸಮುದ್ರ ಇವೆಲ್ಲವೂ ಮಹಾತ್ಮ ವಾಸುದೇವನ ವೀರ್ಯದಿಂದಲೇ ಧರಿಸಲ್ಪಟ್ಟಿವೆ.

13135135a ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್।
13135135c ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸಚರಾಚರಮ್।।

ಸುರಾಸುರಗಂಧರ್ವರೂ ಯಕ್ಷೋರಗರಾಕ್ಷಸರೂ ಸಹಿತವಾಗಿರುವ ಸಚರಾಚರ ಈ ಜಗತ್ತು ಕೃಷ್ಣನ ವಶದಲ್ಲಿಯೇ ಇದೆ.

13135136a ಇಂದ್ರಿಯಾಣಿ ಮನೋ ಬುದ್ಧಿಃ ಸತ್ತ್ವಂ ತೇಜೋ ಬಲಂ ಧೃತಿಃ।
13135136c ವಾಸುದೇವಾತ್ಮಕಾನ್ಯಾಹುಃ ಕ್ಷೇತ್ರಂ ಕ್ಷೇತ್ರಜ್ಞ ಏವ ಚ।।

ಇಂದ್ರಿಯಗಳು, ಮನಸ್ಸು, ಬುದ್ಧಿ, ಸತ್ತ್ವ, ತೇಜಸ್ಸು, ಬಲ, ಧೃತಿ, ಕ್ಷೇತ್ರ ಮತ್ತು ಕ್ಷೇತ್ರಜ್ಞ ಇವೆಲ್ಲವೂ ವಾಸುದೇವಾತ್ಮಕವಾದವು ಎಂದು ಹೇಳುತ್ತಾರೆ.

13135137a ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಪ್ಯತೇ।
13135137c ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ।।

ಸರ್ವ ಆಗಮಗಳೂ ಆಚಾರವನ್ನೇ ಪ್ರಥಮವಾಗಿ ಪರಿಕಲ್ಪಿಸಿವೆ. ಆಚಾರದಿಂದ ಧರ್ಮವು ಹುಟ್ಟುತ್ತದೆ. ಧರ್ಮದ ಪ್ರಭುವು ಅಚ್ಯುತ.

13135138a ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ।
13135138c ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್।।

ಋಷಿಗಳು, ಪಿತೃಗಳು, ದೇವತೆಗಳು, ಮಹಾಭೂತಗಳು, ಧಾತುಗಳು, ಚರಾಚರಗಳ ಈ ಜಗತ್ತು ಎಲ್ಲವೂ ನಾರಾಯಣನಿಂದಲೇ ಉದ್ಭವಿಸಿವೆ.

13135139a ಯೋಗೋ ಜ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾನಿ ಕರ್ಮ ಚ।
13135139c ವೇದಾಃ ಶಾಸ್ತ್ರಾಣಿ ವಿಜ್ಞಾನಮೇತತ್ಸರ್ವಂ ಜನಾರ್ದನಾತ್।।

ಯೋಗ, ಜ್ಞಾನ, ಸಾಂಖ್ಯವೇ ಮೊದಲಾದ ವಿದ್ಯೆಗಳು, ಶಿಲ್ಪವೇ ಮೊದಲಾದ ಕರ್ಮಗಳು, ವೇದಗಳು, ಶಾಸ್ತ್ರಗಳು, ವಿಜ್ಞಾನ ಇವೆಲ್ಲವೂ ಜನಾರ್ದನನಿಂದಲೇ ಉಂಟಾಗಿವೆ.

13135140a ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ।
13135140c ತ್ರೀಽಲ್ಲೋಕಾನ್ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವಭುಗವ್ಯಯಃ।।

ವಿಷ್ಣುವೋರ್ವನೇ ಮಹಾಭೂತವು. ಅವನೇ ಪ್ರತ್ಯೇಕವಾಗಿ ಕಾಣುವ ಅನೇಕ ಭೂತಗಳು ಕೂಡ. ಆ ಭೂತಾತ್ಮಾ ವಿಶ್ವಭುಗ್ ಅವ್ಯಯನು ಮೂರೂ ಲೋಕಗಳನ್ನೂ ವ್ಯಾಪಿಸಿ ಭೋಗಿಸುತ್ತಾನೆ.

13135141a ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್।
13135141c ಪಠೇದ್ಯ ಇಚ್ಚೇತ್ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ।।

ಶ್ರೇಯಸ್ಸು ಮತ್ತು ಸುಖಗಳನ್ನು ಬಯಸುವ ಪುರುಷನು ವ್ಯಾಸನು ರಚಿಸಿರುವ ಭಗವಾನ್ ವಿಷ್ಣುವಿನ ಈ ಸ್ತೋತ್ರವನ್ನು ಪಠಿಸಬೇಕು.

13135142a ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭವಾಪ್ಯಯಮ್।
13135142c ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್।।

ವಿಶ್ವೇಶ್ವರ, ಅಜ, ದೇವ, ಜಗತ್ತಿನ ಉತ್ಪತ್ತಿ-ಲಯಕರ್ತ ಪುಷ್ಕರಾಕ್ಷನನ್ನು ಭಜಿಸುವವರು ಪರಾಭವವನ್ನು ಹೊಂದುವುದಿಲ್ಲ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ವಿಷ್ಣುಸಹಸ್ರನಾಮಕಥನೇ ಪಂಚತ್ರಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ವಿಷ್ಣುಸಹಸ್ರನಾಮಕಥನ ಎನ್ನುವ ನೂರಾಮೂವತ್ತೈದನೇ ಅಧ್ಯಾಯವು.


  1. ಮಹಾಭಾರತದ ಇಲ್ಲಿ ಬರುವ ವಿಷ್ಣುಸಹಸ್ರನಾಮಸ್ತೋತ್ರವಲ್ಲದೇ ಇನ್ನೂ ಮೂರು ವಿಷ್ಣುಸಹಸ್ರನಾಮ ಸ್ತೋತ್ರಗಳಿವೆ: (1) ಗರುಡ ಪುರಾಣದ ಪೂರ್ವಖಂಡದಲ್ಲಿ ಪ್ರಥಮಾಂಶಾಖ್ಯದಲ್ಲಿ ಆಚಾರಕಾಂಡದ ಅಧ್ಯಾಯ 15ರಲ್ಲಿ ಹರಿಯು ರುದ್ರನಿಗೆ ಹೇಳಿದುದು; (2) ಪದ್ಮಪುರಾಣದ ಉತ್ತರಖಂಡದ ಅಧ್ಯಾಯ 72ರಲ್ಲಿ ಮಹಾದೇವನು ಪಾರ್ವತಿಗೆ ಹೇಳಿದುದು; ಮತ್ತು (3) ಸ್ಕಂದಪುರಾಣದ ಅವಂತೀಖಂಡದ ಅಧ್ಯಾಯ 63ರಲ್ಲಿ ಮಾರ್ಕಂಡೇಯನು ಬ್ರಹ್ಮನಿಗೆ ಹೇಳಿದುದು. ಈ ಸ್ತೋತ್ರಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ↩︎

  2. ಇದಕ್ಕೆ ಮೊದಲು ದಕ್ಷಿಣಾತ್ಯ ಪಾಠದಲ್ಲಿ ಮಂಗಲಾಚರಣೆಯ ಈ ಶ್ಲೋಕಗಳಿವೆ: ಹರಿಃ ಓಂ। ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ। ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ।। ಯಸ್ಯ ದ್ವಿರದವಕ್ತ್ರಾಧ್ಯಾಃ ಪಾರಿಷಧ್ಯಾಃ ಪರಃಶತಂ। ವಿಘ್ನಂ ನಿಘ್ನಂತಿ ಸತತಂ ವಿಷ್ವಕ್ಸೇನಂ ತಮಾಶ್ರಯೇ।। ವ್ಯಾಸಂ ವಸಿಷ್ಠನಪ್ತಾರಂ ಶಕ್ತೇಃ ಪೌತ್ರಮಕಲ್ಮಷಂ। ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಂ।। ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣುವೇ। ನಮೋ ವೈ ಬ್ರಹ್ಮನಿಧಯೇ ವಾಸಿಷ್ಠಾಯ ನಮೋ ನಮಃ।। ಅವಿಕಾರಾಯ ಶುದ್ಧಾಯ ನಿತ್ಯಾಯ ಪರಮಾತ್ಮನೇ। ಸದೈಕರೂಪರೂಪಾಯ ವಿಷ್ಣವೇ ಸರ್ವಜಿಷ್ಣವೇ।। ಯಸ್ಯ ಸ್ಮರಣಮಾತ್ರೇಣ ಜನ್ಮಸಂಸಾರಬಂಧನಾತ್। ವಿಮುಚ್ಯತೇ ನಮಸ್ತಸ್ಮೈ ವಿಷ್ಣವೇ ಪ್ರಭವಿಷ್ಣವೇ।। ಓಂ ನಮೋ ವಿಷ್ಣವೇ ಪ್ರಭವಿಷ್ಣವೇ।। ↩︎

  3. ದಕ್ಷಿಣಾತ್ಯ ಪುಸ್ತಕಗಳಲ್ಲಿ ಈ ಕೆಳಗಿನ ಅಧಿಕ ಶ್ಲೋಕಗಳಿವೆ: ಋಷಿರ್ನಾಮ್ನಾಃ ಸಹಸ್ರಸ್ಯ ವೇದವ್ಯಾಸೋ ಮಹಾಮುನಿಃ। ಛಂದೋಽನುಷ್ಟುಪ್ ತಥಾ ದೇವೋ ಭಗವಾನ್ ದೇವಕೀ ಸುತಃ।। ಅಮೃತಾಂಶೂದ್ಭವೋ ಬೀಜಂ ಶಕ್ತಿರ್ದೇವಕಿನಂದನಃ। ತ್ರಿಸಾಮಾ ಹೃದಯಂ ತಸ್ಯ ಶಾಂತ್ಯರ್ಥೇ ವಿನಿಯುಜ್ಯತೇ।। ವಿಷ್ಣುಂ ಜಿಷ್ಣುಂ ಮಹಾವಿಷ್ಣುಂ ಪ್ರಭವಿಷ್ಣುಂ ಮಹೇಶ್ವರಂ। ಅನೇಕರೂಪ ದೈತ್ಯಾಂತಂ ನಮಾಮಿ ಪುರುಷೋತ್ತಮಂ।। ಅಸ್ಯ ಶ್ರೀ ವಿಷ್ಣೋರ್ದಿವ್ಯ ಸಹಸ್ರನಾಮಸ್ತ್ರೋತ್ರ ಮಹಾಮಂತ್ರಸ್ಯ। ಶ್ರೀ ವೇದವ್ಯಾಸೋ ಭಗವಾನೃಷಿಃ। ಅನುಷ್ಟುಪ್ ಛಂದಃ। ಶ್ರೀ ಮಹಾವಿಷ್ಣುಃ ಪರಮಾತ್ಮಾ ಶ್ರೀಮನ್ನಾರಾಯಣೋ ದೇವತಾ। ಅಮೃತಾಂಶೂದ್ಭವೋ ಭಾನುರಿತಿ ಬೀಜಂ। ದೇವಕೀನಂದನಃ ಸ್ರಷ್ಟೇತಿ ಶಕ್ತಿಃ। ಉದ್ಭವಃ ಕ್ಷೋಭಣೋ ದೇವ ಇತಿ ಪರಮೋ ಮಂತ್ರಃ। ಶಂಖಭೃನ್ನಂದಕೀ ಚಕ್ರೀತಿ ಕೀಲಕಂ। ಶಾಂರ್ಙ್ಗಧನ್ವಾಗದಾಧರ ಇತ್ಯಸ್ತ್ರಂ। ರಥಾಂಗಪಾಣಿರಕ್ಷೋಭ್ಯ ಇತಿ ನೇತ್ರಂ। ತ್ರಿಸಾಮಾ ಸಾಮಗಃ ಸಾಮೇತಿ ಕವಚಂ। ಆನಂದಂ ಪರಬ್ರಹ್ಮೇತಿ ಯೋನಿಃ। ಋತುಃ ಸುದರ್ಶನಃ ಕಾಲ ಇತಿ ದಿಗ್ಬಂಧಃ। ಶ್ರೀ ವಿಶ್ವರೂಪ ಇತಿ ಧ್ಯಾನಂ। ಶ್ರೀ ಮಹಾವಿಷ್ಣು ಪ್ರೀತ್ಯರ್ಥೇ ಜಪೇ ವಿನಿಯೋಗಃ। ಧ್ಯಾನಂ – ಕ್ಷೀರೋಧನ್ವತ್ರಪ್ರದೇಶೇ ಶುಚಿಮಣಿವಿಲಸತ್ಸೈಕತೇ ಮೌಕ್ತಿಕಾನಾಂ। ಮಾಲಾಕ್ಲುಪ್ತಾಸನಸ್ಥಃ ಸ್ಪಟಿಕಮಣಿನಿಭೈರ್ಮೌಕ್ತಿಕೈರ್ಮಂಡಿತಾಂಗಃ।। ಶುಭ್ರೈದಭ್ರೈರದಭ್ರೈರುಪರಿವಿರಚಿತೈರ್ಮುಕ್ತಪೀಯೂಷವರ್ಷೈಃ। ಆನಂದೀ ನಃ ಪುನೀಯಾದರಿನಲಿನಗದಾಶಂಖಪಾಣಿರ್ಮುಕುಂದಃ।। ಭೂಃಪಾದೌ ಯಸ್ಯ ನಾಭಿರ್ವಿಯದಸುರನಿಲಶ್ಚಂದ್ರಸೂರ್ಯೌಚ ನೇತ್ರೇ। ಕರ್ಣಾವಾಶಾಃ ಶಿರೋ ಧ್ಯೌರ್ಮುಖಮಪಿ ದಹನೋ ಯಸ್ಯ ವಾಸ್ತೇಯಮಬ್ಧಿಃ।। ಅಂತಸ್ಥಂ ಯಸ್ಯ ವಿಶ್ವಂ ಸುರನರಖಗಗೋಭೋಗಿಗಂಧರ್ವದೈತೈಃ। ಚಿತ್ರಂ ರಂರಮ್ಯತೇ ತಂ ತ್ರಿಭುವನವಪುಷಂ ವಿಷ್ಣುಮೀಶಂ ನಮಾಮಿ।। ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ। ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ।। ಲಕ್ಷ್ಮೀಕಾಂತಂ ಕಮಲನಯನಂ ಯೋಗಿಭಿರ್ಧ್ಯಾನಗಮ್ಯಂ। ವಂದೇ ವಿಷ್ಣು ಭವಭಯಹರಂ ಸರ್ವಲೋಕೈಕನಾಥಂ।। ಮೇಘಶ್ಯಾಮಂ ಪೀತಕೌಶೇಯವಾಸಂ ಶ್ರೀವತ್ಸಾಂಕಂ ಕೌಸ್ತುಭೋದ್ಭಾಸಿತಾಂಗಂ। ಪುಣ್ಯೋಪೇತಂ ಪುಂಡರೀಕಾಯತಾಕ್ಷಂ ವಿಷ್ಣುಂ ವಂದೇ ಸರ್ವಲೋಕೈಕನಾಥಂ।। ಸಶಂಖಚಕ್ರಂ ಸಕಿರೀಟಕುಂಡಲಂ ಸಪೀತವಸ್ತ್ರಂ ಸರಸೀರುಹೇಕ್ಷಣಂ। ಸಹಾರವಕ್ಷಃಸ್ಥಲಕೌಸ್ತುಭಶ್ರಿಯಂ ನಮಾಮಿ ವಿಷ್ಣುಂ ಶಿರಸಾ ಚತುರ್ಭುಜಂ।। ಛಾಯಾಯಾಂ ಪಾರಿಜಾತಸ್ಯ ಹೇಮಸಿಂಹಾಸನೋಪರಿ। ಆಸೀನಮಂಬುಧಶ್ಯಾಮಮಾಯತಾಕ್ಷಮಲಂಕೃತಂ।। ಚಂದ್ರಾನನಂ ಚತುರ್ಬಾಹುಂ ಶ್ರೀವತ್ಸಾಂಕಿತವಕ್ಷಸಂ। ರುಕ್ಮಿಣೀಸತ್ಯಭಾಮಾಭ್ಯಾಂ ಸಹಿತಂ ಕೃಷ್ಣಮಾಶ್ರಯೇ।। ↩︎

  4. ಮಹಾಭಾರತದಲ್ಲಿರುವ ಈ ವಿಷ್ಣುಸಹಸ್ರನಾಮ ಸ್ತೋತ್ರಕ್ಕೆ ಅನೇಕ ಭಾಷ್ಯಗಳಿವೆ. ಅವುಗಳಲ್ಲಿ ಮುಖ್ಯವಾದವುಗಳು 15: (1) ಬೃಹತ್ ಭಾಷ್ಯ (2) ವಿಷ್ಣು ವಲ್ಲಭ ಭಾಷ್ಯ (3) ಆನಂದತೀರ್ಥ ಭಾಷ್ಯ (4) ಕೃಷ್ಣಾನಂದ ಭಾಷ್ಯ (5) ಗಂಗಾಧರ ಯೋಗೀಂದ್ರ ಭಾಷ್ಯ (6) ಪರಾಶರ ಭಟ್ಟ ಅಥವಾ ಶ್ರೀರಂಗ ಭಟ್ಟ ಭಾಷ್ಯ (7) ರಮಾನಂದತೀರ್ಥ ಭಾಷ್ಯ (8) ರಂಗನಾಥಾಚಾರ್ಯ ಭಾಷ್ಯ (9) ಮಹಾದೇವವೇದಾಂತಿನ್ ಭಾಷ್ಯ (10) ಶ್ರೀ ರಾಮಾನುಜಾಚಾರ್ಯ ಭಾಷ್ಯ (11) ವಿದ್ಯಾರಣ್ಯತೀರ್ಥ ಭಾಷ್ಯ (12) ಬ್ರಹ್ಮಾನಂದಭಾರತೀ ಭಾಷ್ಯ (13) ಶ್ರೀ ಶಂಕರಾಚಾರ್ಯ ಭಾಷ್ಯ (14) ಸುದರ್ಶನ ಭಟ್ಟ ಭಾಷ್ಯ (15) ಗೋವಿಂದ ಭಟ್ಟ ಭಾಷ್ಯ. ನಾನು ಇಲ್ಲಿ ಭಾಷ್ಯಗಳಿಂದ ಆಯ್ದ ಕೆಲವೇ ನಾಮಾರ್ಥಗಳನ್ನು ಕೊಟ್ಟಿದ್ದೇನೆ. ↩︎

  5. ವಿಶ್ವಂ ಸರ್ವತ್ರ ಪೂರ್ಣತ್ವಾತ್ಸ್ವರೂಪಗುಣವೈಭವೈಃ। ಮತ್ತು ಶರೀರೇಷು ಪ್ರವಿಷ್ಟತ್ವಾದ್ವಿಶ್ವೋ ಜೀವ ಉದೀರ್ಯತೇ। ಜೀವಸ್ಯ ತದಧೀನತ್ವಾದ್ವಿಷ್ಣುರ್ವಿಶ್ವ ಇತಿ ಸ್ಮೃತಃ ಅರ್ಥಾತ್ ಶರೀರದಲ್ಲಿ ಪ್ರವೇಶಿರುವ ಜೀವವನ್ನು ವಿಶ್ವ ಎಂದು ಕರೆಯುತ್ತಾರೆ. ಜೀವವು ಯಾರ ಅಧೀನದಲ್ಲಿದೆಯೋ ಆ ವಿಷ್ಣುವನ್ನು ವಿಶ್ವ ಎಂದೂ ಕರೆಯುತ್ತಾರೆ. ↩︎

  6. ಚರಾಚರೇಷು ಭೂತೇಷು ವೇಶನಾದ್ವಿಷ್ಣುರುಚ್ಯತೇ। ↩︎

  7. ಸ್ವೇಚ್ಛಯಾ ಯೋ ವಶೇ ಸರ್ವಂ ವಷಟ್ಕಾರಃ ಕರೋತಿ ಸಃ। ↩︎

  8. ತ್ರಿಕಾಲವರ್ತಿನಾಂ ಶೇಷೀ ಭೂತಭವ್ಯಭವತ್ಪ್ರಭುಃ। ↩︎

  9. ಭೂತಾನಿ ಯೋಽಸೌ ಸೃಜತಿ ಸ್ವಾತಂತ್ರ್ಯೇಣ ಸ ಭೂತಕೃತ್। ↩︎

  10. ಭೂತಭೃದ್ಭೂತಭರಣಾತ್। . ↩︎

  11. ಶ್ಲಿಷ್ಟತ್ವಾದ್ಭಾವ ಈರಿತಃ। ↩︎

  12. ಶರೀರಭೂತಭೂತಾನಾಂ ಭೂತಾತ್ಮಾಽಽತ್ಮತಯಾ ಸ್ಥಿತಃ। ↩︎

  13. ದಾರಕಾದಿ ಪ್ರದಾನೇನ ಯಶ್ಚ ವರ್ಧಯತಿ ಸ್ವಯಮ್। ಭೂತಾನಿ ನಿತ್ಯಂ ಝಟತಿ ಸ ತು ಸ್ಯಾದ್ಭೂತಭಾವನಃ।। ↩︎

  14. ಈಶಾನಃ ಸರ್ವವಿದ್ಯಾನಾಮೀಶ್ವರಃ ಸರ್ವಭೂತಾನಾಂ ಬ್ರಹ್ಮಾಧಿಪತಿರ್ಬಹ್ಮಣೋಽಧಿಪತಿರ್ಬ್ರಹ್ಮಾ ಶಿವೋ ಮೇ ಅಸ್ತು ಸದಾಶಿವೋಮ್ (ತೈತ್ತರೀಯ ಉಪನಿಷದ್). ತಮೀಶ್ವರಾಣಾಂ ಪರಮಂ ಮಹೇಶ್ವರಮ್ (ಶ್ವೇತಾವಾಸ್ಯ ಉಪನಿಷದ್). ಸರ್ವಸ್ಯ ವಶೀ ಸರ್ವಸ್ಯೇಶಾನಃ (ಬೃಹದಾರಣ್ಯಕ ಉಪನಿಷದ್). ↩︎

  15. ವಸೂನಾಂ ಪಾವಕಶ್ಚಾಸ್ಮಿ (ವಸುಗಳಲ್ಲಿ ಪಾವಕನು ನಾನು) - ಭಗವದ್ಗೀತೆ ↩︎

  16. ಬ್ರಹ್ಮಾದಕ್ಷಾದಯಃ ಕಾಲಸ್ತಥೈವಾಖಿಲಜಂತವಃ। ವಿಭೂತಯೋ ಹರೇರೇತಾ ಜಗತಃ ಸೃಷ್ಟಿಹೇತವಃ।। ವಿಷ್ಣುರ್ಮನ್ವಾದಯಃ ಕಾಲಃ ಸರ್ವಭೂತಾನಿ ಚ ದ್ವಿಜ। ಸ್ಥಿತೇರ್ನಿಮಿತ್ತಭೂತಸ್ಯ ವಿಷ್ಣೋರೇತಾ ವಿಭೂತಯಃ।। ರುದ್ರಃ ಕಾಲೋಂಽತಕಾದ್ಯಾಶ್ಚ ಸಮಸ್ತಶ್ಚೈವ ಜಂತವಃ। ಚತುರ್ಧಾ ಪ್ರಲಯಾಯೈತಾ ಜನಾರ್ದನವಿಭೂತಯಃ ಅರ್ಥಾತ್ ಬ್ರಹ್ಮ, ದಕ್ಷಾದಿಗಳು, ಕಾಲ ಮತ್ತು ಅಖಿಲ ಜಂತುಗಳು ಹರಿಯ ಸೃಷ್ಟಿಕಾಲದ ವಿಭೂತಿಗಳು. ವಿಷ್ಣು, ಮನ್ವಾದಿಗಳು, ಕಾಲ ಮತ್ತು ಸರ್ವಭೂತಗಳು ಹರಿಯ ಸ್ಥಿತಿಕಾಲದ ವಿಭುತಿಗಳು. ರುದ್ರ, ಕಾಲ, ಅಂತಕಾದಿಗಳು ಮತ್ತು ಸಮಸ್ತ ಜಂತುಗಳು ಹರಿಯ ಪ್ರಲಯಕಾಲದ ವಿಭೂತಿಗಳು (ವಿಷ್ಣುಪುರಾಣ, ೧.೨೨.೩೦-೩೨) ↩︎

  17. ವ್ಯೂಹ್ಯಾತ್ಮಾನಂ ಚತುರ್ಧಾ ವೈ ವಾಸುದೇವಾದಿಮೂರ್ತಿಭಿಃ। ಸೃಷ್ಟ್ಯಾದೀನ್ ಪ್ರಕರೋತ್ಯೇಷ ವಿಶೃತಾತ್ಮಾ ಜನಾರ್ದನಃ।। ಅರ್ಥಾತ್ ವಿಶೃತಾತ್ಮಾ ವಿಷ್ಣುವು ವಾಸುದೇವಾದಿ ನಾಲ್ಕು (ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ) ಮೂರ್ತಿರೂಪಗಳಲ್ಲಿ ಸೃಷ್ಟಿಗಳನ್ನು ರಚಿಸಿದನು. ↩︎

  18. ನರಸಿಂಹಾವತಾರದಲ್ಲಿ ವಿಷ್ಣುವಿಗೆ ನಾಲ್ಕು ಕೋರೆದಾಡೆ ಹಲ್ಲುಗಳಿದ್ದವು. ↩︎

  19. ವಾಮನಾವತಾರದಲ್ಲಿ ತ್ರಿವಿಕ್ರಮನಾಗಿ ಬೆಳೆದವನು ↩︎

  20. ಮಾ ವಿದ್ಯಾ ಚ ಹರೇಃ ಪ್ರೋಕ್ತಾ ತಸ್ಯಾ ಈಶೋ ಯತೋ ಭವಾನ್। ತಸ್ಮಾದ್ ಮಾಧವ ನಾಮಾಸಿ ಧವಃ ಸ್ವಾಮೀತಿ ಶಬ್ಧಿತಃ – ಹರಿಯೇ! ನೀನು ಜ್ಞಾನದ ಒಡೆಯ. ಆದುದರಿಂದ ನಿನಗೆ ಮಾಧವ ಎನ್ನುವ ಹೆಸರು ಬಂದಿದೆ. ಮಾ ಎಂದರೆ ವಿದ್ಯೆ ಮತ್ತು ಧವಃ ಎಂದರೆ ಸ್ವಾಮೀ (ಹರಿವಂಶ, ೩.೮೮.೪೯). ↩︎

  21. ನಷ್ಟಾಂ ವೈ ಧರಣೀಂ ಪೂರ್ವಮವಿಂದಂ ವೈ ಗೃಹಾಗತಾಂ। ಗೋವಿಂದ ಇತಿ ತೇನಾಹಂ ದೈವೈರ್ವಾಗ್ಭಿರಭಿಷ್ಠುತಃ।। ಅರ್ಥಾತ್ ಕದ್ದುಕೊಂಡು ಸಮುದ್ರದ ಆಳದಲ್ಲಿ ಅಡಗಿಸಲ್ಪಟ್ಟ ಭೂಮಿಯನ್ನು ನಾನು ಸಂರಕ್ಷಿಸಿದೆ. ಆದುದರಿಂದ ನನ್ನನ್ನು ಗೋವಿಂದನೆಂದು (ಗೋ=ಭೂಮಿ, ವಿಂದ-ರಕ್ಷಕ) ಅಮರರು ಮತ್ತು ವೇದಗಳು ಕರೆಯುತ್ತವೆ (ಮಹಾಭಾರತ, ಶಾಂತಿಪರ್ವ, ಮೋಕ್ಷಧರ್ಮ ಪರ್ವ). ↩︎

  22. ಅಹಂ ಕಿಲೇಂದ್ರೋ ದೇವಾನಾಂ ತ್ವಂ ಗವಾಮಿಂದ್ರತಾಂ ಗತಃ। ಗೋವಿಂದ ಇತಿ ಲೋಕಾಸ್ತ್ವಾಂ ಸ್ತೋಷ್ಯಂತಿ ಭುವಿ ಶಾಶ್ವತಾಂ।। ಅರ್ಥಾತ್ ನಾನು ದೇವತೆಗಳಿಗೆ ಇಂದ್ರ. ನೀನು ಗೋವುಗಳಿಗೆ ಇಂದ್ರ. ಆದುದರಿಂದ ನಿನ್ನನ್ನು ಲೋಕಗಳು ಯಾವಾಗಲೂ ಗೋವಿಂದ ಎಂದು ಸ್ತುತಿಸುತ್ತದೆ. ಮಾತಿಗೂ ಗೋ ಎನ್ನುತ್ತಾರೆ. ನೀನು ಮಾತನ್ನು ಕೊಡುವುದರಿಂದ ಪ್ರಭು! ನಿನ್ನನ್ನು ಋಷಿಗಳು ಗೋವಿಂದನೆಂದು ಕರೆಯುತ್ತಾರೆ (ಹರಿವಂಶ, ೬೨.೪೩ ಮತ್ತು ೩.೮೮.೫೦). ↩︎

  23. ಅನಲಃ ಎಂಬ ಪಾಠಾಂತರವಿದೆ. ↩︎

  24. ವೃಷೋ ಹಿ ಭಗವಾನ್ ಧರ್ಮಃ ಸ್ಮೃತೋ ಲೋಕೇಷು ಭಾರತ। ನೈಘಂಟುಕಪದಾಖ್ಯಾನೈರ್ವಿದ್ಧಿ ಮಾಂ ವೃಷ ಇತ್ಯುತ।। ಅರ್ಥಾತ್ ನಿಘಂಟುಗಳ ಪ್ರಕಾರ ವೃಷ ಎನ್ನುವ ಶಬ್ಧಕ್ಕೆ ಧರ್ಮ ಎನ್ನುವ ಅರ್ಥವಿದೆ. ಆದುದರಿಂದ ನನ್ನನ್ನು ಧರ್ಮವೆಂದೇ ತಿಳಿ (ಮಹಾಭಾರತ, ಶಾಂತಿಪರ್ವ, ೩೩೦.೨೩). ↩︎

  25. ಆಪದುತ್ತರಣಾದ್ಯೋಽಸೌ ಬ್ರಹ್ಮಾದೇರುತ್ತರಃ ಸ್ಮೃತಃ। (ಪರಾಶರ ಭಟ್ಟ). ↩︎

  26. ಛಂದೋಭಾಷಾವೇದವಾಚಾಂ ನಿರ್ವಾಹಾದ್ಗೋಪತಿಃ ಸ್ಮೃತಃ। (ಪರಾಶರ ಭಟ್ಟ). ↩︎

  27. ಪಾಲನಾತ್ಸರ್ವವಿದ್ಯಾನಾಂ ಗೋಪ್ತೇತಿ ಪರಿಕೀರ್ತಿತಃ। (ಪರಾಶರ ಭಟ್ಟ). ↩︎

  28. ಪರಯಾ ವಿದ್ಯಯಾ ವೇದ್ಯೋ ಜ್ಞಾನಗಮ್ಯ ಇತಿ ಸ್ಮೃತಃ। (ಪರಾಶರ ಭಟ್ಟ). ↩︎

  29. ವಿದ್ಯಾಪ್ರದ್ಯೋತನಾದ್ಯೋಽಸೌ ಪ್ರತಿಕಲ್ಪಂ ಪುರಾತನಃ। (ಪರಾಶರ ಭಟ್ಟ). ↩︎

  30. ವಿನಯೋಜ್ಯಃ ಅರ್ಥಾತ್ ನಿಯಜಿಸಲ್ಪಡಲಾಗದವನು ಅಥವಾ ವಿವಿಧ ಜಗತ್ತುಗಳನ್ನು ನಿಯೋಜಿಸುವವನು ಎಂಬ ಪಾಠಾಂತರವಿದೆ. ↩︎

  31. ಹಯಮೇಧೇ ಸೋಮಪಾಯೀ ಸೋಮಪಃ ಪ್ರಕೀರ್ತಿತಃ।। ↩︎

  32. ಯತ್ಕಿಂಚಿದ್ಧೂಯತೇ ವಹ್ನೌ ಹವಿರ್ಮಂತ್ರೈರ್ವಿಧಾನತಃ। ತತ್ಸರ್ವಮಮೃತಂ ಕೃತ್ವಾ ವಿಷ್ಣವೇ ಸಂಪ್ರಯಚ್ಛತಿ।। (ಭಗವದ್ಗೀತಾ) ↩︎

  33. ಪರಿಣಾಮೋಽಸ್ಯ ಹವಿಷಾಂ ಪಯೂಷಮಿತಿ ಚೋಚ್ಯತೇ। ತತ್ಪಾನಾತ್ಸ್ಯಾದಮೃತಪಃ ಪರಮೇ ವ್ಯೋಮ್ನಿ ವಾ ಸ್ಥಿತಃ। ಮುಕ್ತೇಭ್ಯೋ ಯಃ ಸ್ವಾಯಂಭುವಂ ಪಾತೀತ್ಯಮೃತಪಃ ಸ್ಮೃತಃ।। ↩︎

  34. ಲೋಕಾನ್ದೀನಾನ್ಗುರೂನ್ಶತ್ರೂನ್ಸತ್ಯ ದಾನಾನುವರ್ತನೈಃ। ಧನುಷಾ ಜಿತವಾನ್ಯಶ್ಚ ಪುರುಜಿತ್ಸ ಸ್ಮೃತೋ ಬುಧೈಃ।। ಜನರನ್ನೂ, ದೀನರನ್ನೂ, ಗುರುಗಳನ್ನೂ, ಶತ್ರುಗಳನ್ನೂ ಅನುಕ್ರಮವಾಗಿ ಸತ್ಯ, ದಾನ, ಶುಶ್ರೂಷೆ ಮತ್ತು ಧನುಸ್ಸುಗಳಿಂದ ಗೆದ್ದವನು ಪುರುಜಿತ್. ↩︎

  35. ಮಹತ್ಸ್ವಸ್ತಿತಮತ್ವಾದ್ಯೋ ಹ್ಯಾಂಜನೇಯಾದಿಷು ಸ್ವಯಮ್। ಪುರುಸತ್ತಮ ಆಖ್ಯಾತೋ ನವಾರ್ಣಃ ಸ್ವಸ್ತಿದೋ ಮನುಃ।। ↩︎

  36. ದಮಂತೇ ವಿಕ್ರಮೈರ್ಯೇನ ವಿನಯಃ ನ ಉದಾಹೃತಃ।। ↩︎

  37. ಆಶ್ರಿತೈರ್ಜೀಯತೇ ಯಸ್ಮಾದ್ವಿಧೇಯೀಕ್ರಿಯತೇ ಜಯಃ।। ↩︎

  38. ಸತ್ಯಾ ಪ್ರತಿಜ್ಞಾ ಯಸ್ಯೇತಿ ಸತ್ಯಸಂಧಃ ಸ ಉಚ್ಯತೇ।। ↩︎

  39. ಆತ್ಮನೋ ವಾರ್ಪಣಂ ಭಕ್ತೈಸ್ತೇಭ್ಯೋ ವಾಸ್ವಾತ್ಮನೋಽರ್ಪಣಂ। ದಾಶಸ್ತಮರ್ಹತಿ ಚ ಯೋ ದಾಶಾರ್ಹಃ ಸ ತು ಕೀರ್ತಿತಃ।। ಅರ್ಥಾತ್ ಭಕ್ತರ ಅತ್ಮಾರ್ಪಣೆ ಅಥವಾ ಭಕ್ತರಿಗೆ ತನ್ನನ್ನು ಅರ್ಪಿಸಿಕೊಳ್ಳುವಿಕೆ ಎಂಬ ದಾಶಕ್ಕೆ (ದಾನಕ್ಕ) ಅರ್ಹನಾದವನು ದಾಶಾರ್ಹನು. ↩︎

  40. ಯೇ ಸಾತ್ವತಾ ಭಾಗವತಾಃ ತೇಷಾಂ ಯಃ ಪತಿರೀಶ್ವರಃ। ಸಾತ್ವತಾಂ ಪತಿರಿತ್ಯುಕ್ತೋ ನವಾರ್ಣಃ ಸಾಧುರಕ್ಷಕಃ।। - ಈ ನಾಮಮಂತ್ರವು ಸತ್ಪುರುಷರನ್ನು ರಕ್ಷಿಸುತ್ತದೆ (ಪರಾಶರ ಭಟ್ಟ). ↩︎

  41. ಓಂ ಜೀವಾಯ ನಮಃ। ಈ ನಾಮಮಂತ್ರಜಪವು ಜಪಿಯ ಕ್ಲೇಶವನ್ನು ಹೋಗಲಾಡಿಸುತ್ತದೆ (ಪರಾಶರ ಭಟ್ಟ). ↩︎

  42. ಓಂ ಮಹೋದಧಿಶಯಾಯ ನಮಃ। ಈ ನಾಮಮಂತ್ರವು ಜಪಕ್ಕೆ ಶ್ರೇಷ್ಠವಾದುದು (ಪರಾಶರ ಭಟ್ಟ). ↩︎

  43. ಓಂ ಅಜಾಯ ನಮಃ। ಎಂಬ ನಾಮಮಂತ್ರಜಪದಿಂದ ಪೀಡಾಪರಿಹಾರವಾಗುತ್ತದೆ (ಪರಾಶರ ಭಟ್ಟ). ↩︎

  44. ಓಂ ಸತ್ಯಧರ್ಮಣೇ ನಮಃ। ಈ ನಾಮಮಂತ್ರವನ್ನು ಜಪಿಸಿದರೆ ಸತ್ಯ-ಧರ್ಮಗಳು ದೊರೆಯುತ್ತವೆ (ಪರಾಶರ ಭಟ್ಟ). ↩︎

  45. ಓಂ ಮೇದಿನೀಪತಯೇ ನಮಃ। ಈ ನಾಮಮಂತ್ರಜಪದಿಂದ ಭೂಮಿಯು ಸಿಕ್ಕುತ್ತದೆ (ಪರಾಶರ ಭಟ್ಟ). ↩︎

  46. ಓಂ ಕೃತಾಂತಕೃತೇ ನಮಃ। ಈ ನಾಮಮಂತ್ರಜಪವು ಎಲ್ಲ ಅಭೀಷ್ಟಗಳನ್ನೂ ನೀಡುತ್ತದೆ (ಪರಾಶರ ಭಟ್ಟ). ↩︎

  47. ಓಂ ಮಹಾವರಾಹಾಯ ನಮಃ। ಎಂಬ ನಾಮಮಂತ್ರಜಪದಿಂದ ಭೂಲಾಭವಾಗುತ್ತದೆ (ಪರಾಶರ ಭಟ್ಟ). ↩︎

  48. ಓಂ ವೇಧಸೇ ನಮಃ। ಎಂಬ ನಾಮಮಂತ್ರಜಪವು ಮಂಗಳಪ್ರದವು (ಪರಾಶರ ಭಟ್ಟ). ↩︎

  49. ಓಂ ಸ್ವಾಂಗಾಯ ನಮಃ। ಎಂಬ ನಾಮಮಂತ್ರಜಪವು ಪರಿವಾರವನ್ನು ಅನುಗ್ರಹಿಸುತ್ತದೆ (ಪರಾಶರ ಭಟ್ಟ). ↩︎

  50. ಓಂ ಅಜಿತಾಯ ನಮಃ। ಎಂಬ ನಾಮಮಂತ್ರಜಪವು ಮುಕ್ತಿದಾಯಕವು (ಪರಾಶರ ಭಟ್ಟ). ↩︎

  51. ಓಂ ಪುಷ್ಕರಾಕ್ಷಾಯ ನಮಃ। ಎಂಬ ನಾಮಮಂತ್ರಜಪವು ಪ್ರೀತಿಯನ್ನು ಹೆಚ್ಚಿಸುತ್ತದೆ (ಪರಾಶರ ಭಟ್ಟ). ↩︎

  52. ಭಗವಾನ್ಭಗಹಾನಂದೀ ಅರ್ಥಾತ್ ಭಗವಾನ್, ಭಗಹಾ ಮತ್ತು ಆನಂದಿ ಎಂಬ ಮೂರು ನಾಮಗಳು (ಭಾರತ ದರ್ಶನ). ↩︎

  53. ಜ್ಞಾನ-ವೈರಾಗ್ಯ-ಬಲ-ಐಶ್ವರ್ಯ-ಶಕ್ತಿ-ತೇಜಸ್ಸು ಇವು ಷಡ್ಗುಣಗಳು. ಅಣಿಮಾ-ಮಹಿಮಾ-ಗರಿಮಾ-ಲಘಿಮಾ-ಪ್ರಾಪ್ತಿ-ಪ್ರಾಕಾಮ್ಯ-ಈಶಿತ್ವ-ವಶಿತ್ವ ಇವು ಅಷ್ಟೈಶ್ವರ್ಯಗಳು (ಭಾರತ ದರ್ಶನ). ↩︎

  54. ಓಂ ಭಗಘ್ನೇ ನಮಃ। ಎಂಬ ಈ ನಾಮಮಂತ್ರಜಪವು ಸುಖದಾಯಕವು (ಪರಾಶರ ಭಟ್ಟ). ↩︎

  55. ಓಂ ವನಮಾಲಿನೇ ನಮಃ। ಎಂಬ ನಾಮಮಂತ್ರಜಪವು ಭೂಷಣಪ್ರದವು (ಪರಾಶರ ಭಟ್ಟ). ↩︎

  56. ಓಂ ಹಲಾಯುಧಾಯ ನಮಃ। ಈ ನಾಮಮಂತ್ರಜಪವು ವ್ಯವಸಾಯದಲ್ಲಿ ಸಮೃದ್ಧಿಯನ್ನು ಉಂಟುಮಾಡುತ್ತದೆ (ಪರಾಶರ ಭಟ್ಟ). ↩︎

  57. ಓಂ ಜ್ಯೋತಿರಾದಿತ್ಯಾಯ ನಮಃ। ಎಂಬ ನಾಮಮಂತ್ರಜಪವು ಜ್ಞಾನವನ್ನು ಕೊಡುತ್ತದೆ (ಪರಾಶರ ಭಟ್ಟ). ↩︎

  58. ಓಂ ಖಂಡಪರಶವೇ ನಮಃ। ಈ ನಾಮಮಂತ್ರಜಪದಿಂದ ಶೋಕವು ನಾಶವಾಗುತ್ತದೆ (ಪರಾಶರ ಭಟ್ಟ). ↩︎

  59. ಓಂ ಅಯೋನಿಜಾಯ ನಮಃ। ಈ ನಾಮಮಂತ್ರಜಪವು ಕರ್ಮನಾಶಕವು (ಪರಾಶರ ಭಟ್ಟ). ↩︎

  60. ಓಂ ಶಾಂತಯೇ ನಮಃ। ಎಂಬ ನಾಮಮಂತ್ರಜಪವು ಭಕ್ತಿಯನ್ನು ಕೊಡುತ್ತದೆ (ಪರಾಶರ ಭಟ್ಟ). ↩︎

  61. ಓಂ ಶುಭಾಂಗಾಯ ನಮಃ। ಈ ನಾಮಮಂತ್ರಜಪವು ಧ್ಯಾನವನ್ನು ಕೊಡುತ್ತದೆ (ಪರಾಶರ ಭಟ್ಟ). ↩︎

  62. ಓಂ ವೃಷಪ್ರಿಯಾಯ ನಮಃ। ಈ ನಾಮಮಂತ್ರಜಪವು ಫಲಪ್ರದವು (ಪರಾಶರ ಭಟ್ಟ). ↩︎

  63. ಓಂ ಅನಿವರ್ತಿನೇ ನಮಃ। ಈ ನಾಮಮಂತ್ರಜಪವು ಅಭಯದಾಯಕವು (ಪರಾಶರ ಭಟ್ಟ). ↩︎

  64. ಓಂ ನಿವೃತ್ತಾತ್ಮನೇ ನಮಃ। ಈ ನಾಮಮಂತ್ರಜಪವು ದುಷ್ಕರ್ಮದ ಫಲವನ್ನು ಹೋಗಲಾಡಿಸುತ್ತದೆ (ಪರಾಶರ ಭಟ್ಟ). ↩︎

  65. ಓಂ ಸಂಕ್ಷೇಪ್ತ್ರೇ ನಮಃ। ಈ ನಾಮಮಂತ್ರಜಪವು ಬುದ್ಧಿಯನ್ನು ವಿಕಾಸಗೊಳಿಸುತ್ತದೆ (ಪರಾಶರ ಭಟ್ಟ). ↩︎

  66. ಓಂ ಶ್ರೀಕರಾಯ ನಮಃ। ಈ ನಾಮಮಂತ್ರಜಪವು ಸಂಪತ್ಕರವಾದುದು (ಪರಾಶರ ಭಟ್ಟ). ↩︎

  67. ಓಂ ಶ್ರೇಯಃಶ್ರೀಮತೇ ನಮಃ। ಈ ನಾಮಮಂತ್ರಜಪವು ಪುರುಷಾರ್ಥಗಳನ್ನು ನೀಡುತ್ತದೆ (ಪರಾಶರ ಭಟ್ಟ). ↩︎

  68. ಓಂ ಲೋಕತ್ರಯಾಶ್ರಯಾಯ ನಮಃ। ಈ ನಾಮಮಂತ್ರಜಪವು ರಕ್ಷಣೆಯನ್ನು ಕೊಡುವುದು (ಪರಾಶರ ಭಟ್ಟ). ↩︎

  69. ಓಂ ಶತಾನಂದಾಯ ನಮಃ। ಈ ನಾಮಮಂತ್ರಜಪವು ದಂಪತಿಗಳಿಗೆ ಆನಂದವನ್ನು ನೀಡುತ್ತದೆ (ಪರಾಶರ ಭಟ್ಟ). ↩︎

  70. ಓಂ ಉದೀರ್ಣಾಯ ನಮಃ। ಈ ನಾಮಮಂತ್ರಜಪವು ಕಣ್ಣುಗಳನ್ನು ಕೊಡುತ್ತದೆ (ಪರಾಶರ ಭಟ್ಟ). ↩︎

  71. ಓಂ ಅರ್ಚಿತಾಯ ನಮಃ। ಈ ನಾಮಮಂತ್ರಜಪವು ಅಪೇಕ್ಷಿಸಿದುದನ್ನು ಕೊಡುತ್ತದೆ (ಪರಾಶರ ಭಟ್ಟ). ↩︎

  72. ಓಂ ಕುಂಭಾಯ ನಮಃ। ಈ ನಾಮಮಂತ್ರಜಪವು ಭಯವನ್ನು ಹೋಗಲಾಡಿಸುತ್ತದೆ (ಪರಾಶರ ಭಟ್ಟ). ↩︎

  73. ಕುಂಭಕೋ ವಿಷ್ಣುರುಚ್ಯತೇ। (ಭಾರತ ದರ್ಶನ). ↩︎

  74. ನಾರಾಯಣನ ನಾಲ್ಕು ವ್ಯೂಹಗಳು: ವಾಸುದೇವ, ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ. ↩︎

  75. ಓಂ ಅಪ್ರತಿರಥಾಯ ನಮಃ। ಈ ನಾಮಮಂತ್ರಜಪದಿಂದ ಶತ್ರುಗಳ ನಿರಸನವಾಗುತ್ತದೆ (ಪರಾಶರ ಭಟ್ಟ). ↩︎

  76. ಶೌರಿಃ ಶೂರಜನೇಶ್ವರಃ ಎಂಬ ಪಾಠಾಂತರವಿದೆ. ↩︎

  77. ಓಂ ಕಾಲನೇಮಿಘ್ನೇ ನಮಃ। ಈ ನಾಮಮಂತ್ರಜಪದಿಂದ ಅವಿದ್ಯಾಮೂಲದಿಂದ ಬಿಡುಗಡೆಯಾಗುತ್ತದೆ (ಪರಾಶರ ಭಟ್ಟ). ↩︎

  78. ಓಂ ತ್ರಿಲೋಕಾತ್ಮನೇ ನಮಃ। ಈ ನಾಮಮಂತ್ರಜಪದಿಂದ ಐಶ್ವರ್ಯಲಾಭವಾಗುತ್ತದೆ (ಪರಾಶರ ಭಟ್ಟ). ↩︎

  79. ಹರಿರ್ಹರತಿ ಪಾಪಾನಿ। ↩︎

  80. ವೇದ, ಸ್ಮೃತಿ, ವೈಷ್ಣವ ಮತ್ತು ಶೈವಾಗಮಗಳು. ↩︎

  81. ಕ್ರಮಣಾಚ್ಚಾಪ್ಯಹಂ ಪಾರ್ಥ ವಿಷ್ಣುರಿತ್ಯಭಿಸಂಜ್ಞಿತಃ।। (ಶಾಂತಿಪರ್ವ, ಅಧ್ಯಾಯ 328, ಶ್ಲೋಕ 38). ↩︎

  82. ಓಂ ಬ್ರಹ್ಮಣೇ ನಮಃ। ಈ ನಾಮಮಂತ್ರಜಪದಿಂದ ಸಂತಾನಪ್ರಾಪ್ತಿಯಾಗುತ್ತದೆ (ಪರಾಶರ ಭಟ್ಟ). ↩︎

  83. ಓಂ ಬ್ರಾಹ್ಮಣಪ್ರಿಯಾಯ ನಮಃ। ಈ ನಾಮಮಂತ್ರಜಪವು ಪುಣ್ಯದಾಯಕವು (ಪರಾಶರ ಭಟ್ಟ). ↩︎

  84. ಓಂ ಮಹಾತೇಜಸೇ ನಮಃ। ಈ ನಾಮಮಂತ್ರಜಪವು ತೇಜಸ್ಸನ್ನು ಕೊಡುತ್ತದೆ (ಪರಾಶರ ಭಟ್ಟ). ↩︎

  85. ಓಂ ಮಹಾಯಜ್ವನೇ ನಮಃ। ಈ ನಾಮಮಂತ್ರಜಪವು ಸತ್ಕರ್ಮದ ಫಲವನ್ನು ಕೊಡುತ್ತದೆ (ಪರಾಶರ ಭಟ್ಟ). ↩︎

  86. ಓಂ ಮಹಾಯಜ್ಞಾಯ ನಮಃ। ಈ ನಾಮಮಂತ್ರಜಪವು ಅಶ್ವಮೇಧಯಾಗದ ಫಲವನ್ನು ಕೊಡುತ್ತದೆ (ಪರಾಶರ ಭಟ್ಟ). ↩︎

  87. ಓಂ ಸ್ತವ್ಯಾಯ ನಮಃ। ಈ ನಾಮಮಂತ್ರಜಪದಿಂದ ಭವಬಂಧನದ ವಿಮೋಚನೆಯಾಗುತ್ತದೆ (ಪರಾಶರ ಭಟ್ಟ). ↩︎

  88. ಓಂ ಸ್ತೋತ್ರೇ ನಮಃ। ಈ ನಾಮಮಂತ್ರಜಪದಿಂದ ಎಲ್ಲರ ಸ್ತೋತ್ರಕ್ಕೂ ಪಾತ್ರನಾಗುತ್ತಾನೆ (ಪರಾಶರ ಭಟ್ಟ). ↩︎

  89. ಓಂ ಯದುಶ್ರೇಷ್ಠಾಯ ನಮಃ। ಈ ನಾಮಮಂತ್ರಜಪದಿಂದ ಸಂತಾನಪ್ರಾಪ್ತಿಯಾಗುತ್ತದೆ (ಪರಾಶರ ಭಟ್ಟ). ↩︎

  90. ಓಂ ಸನ್ನಿವಾಸಾಯ ನಮಃ। ಈ ನಾಮಮಂತ್ರಜಪವು ಒಳ್ಳೆಯ ಸ್ಥಾನವನ್ನು ಕೊಡುತ್ತದೆ (ಪರಾಶರ ಭಟ್ಟ). ↩︎

  91. ಓಂ ಸುವರ್ಣವರ್ಣಾಯ ನಮಃ। ಈ ನಾಮಮಂತ್ರಜಪದಿಂದ ಭಕ್ತಿ-ಕಾಮನೆಗಳು ದೊರೆಯುತ್ತವೆ (ಪರಾಶರ ಭಟ್ಟ). ↩︎

  92. ಓಂ ಮೇಧಜಾಯ ನಮಃ। ಈ ನಾಮಮಂತ್ರಜಪವು ಪುತ್ರಸಂತಾನದಾಯಕವು (ಪರಾಶರ ಭಟ್ಟ). ↩︎

  93. ಓಂ ತೇಜೋವೃಷಾಯ ನಮಃ। ಈ ನಾಮಮಂತ್ರಜಪವು ಮಿತ್ರರನ್ನು ಹೆಚ್ಚಿಸುತ್ತದೆ (ಪರಾಶರ ಭಟ್ಟ). ↩︎

  94. ಓಂ ದ್ಯುತಿಧರಾಯ ನಮಃ। ಈ ನಾಮಮಂತ್ರಜಪದಿಂದ ಶರೀರ ಕಾಂತಿಯು ವೃದ್ಧಿಯಾಗುತ್ತದೆ (ಪರಾಶರ ಭಟ್ಟ). ↩︎

  95. ಓಂ ನಿಗ್ರಹಾಯ ನಮಃ। ಈ ನಾಮಮಂತ್ರಜಪದಿಂದ ಶತ್ರುನಾಶನವಾಗುತ್ತದೆ (ಪರಾಶರ ಭಟ್ಟ). ↩︎

  96. ಓಂ ವ್ಯಗ್ರಾಯ ನಮಃ। ಈ ನಾಮಮಂತ್ರಜಪದಿಂದ ಶತ್ರುನಾಶನವಾಗುತ್ತದೆ (ಪರಾಶರ ಭಟ್ಟ). ↩︎

  97. ಓಂ ಚತುರ್ವ್ಯೂಹಾಯ ನಮಃ। ಈ ನಾಮಮಂತ್ರಜಪವು ನಾಲ್ಕು ಪುರುಷಾರ್ಥಗಳನ್ನೂ ಕೊಡುತ್ತದೆ (ಪರಾಶರ ಭಟ್ಟ). ↩︎

  98. ಓಂ ಚತುರ್ಭಾವಾಯ ನಮಃ। ಈ ನಾಮಮಂತ್ರಜಪದಿಂದ ಸದ್ಗತಿಯುಂಟಾಗುತ್ತದೆ (ಪರಾಶರ ಭಟ್ಟ). ↩︎

  99. ಓಂ ಚತುರ್ವೇದವಿದೇ ನಮಃ। ಈ ನಾಮಮಂತ್ರಜಪದಿಂದ ವೇದಾಧ್ಯಯನದ ಫಲವು ಪ್ರಾಪ್ತವಾಗುತ್ತದೆ (ಪರಾಶರ ಭಟ್ಟ). ↩︎

  100. ಓಂ ಸಮಾವರ್ತಾಯ ನಮಃ। ಈ ನಾಮಮಂತ್ರಜಪದಿಂದ ಪುನರ್ಜನ್ಮವು ಇಲ್ಲವಾಗುತ್ತದೆ (ಪರಾಶರ ಭಟ್ಟ). ↩︎

  101. ಓಂ ಸುತಂತವೇ ನಮಃ। ಈ ನಾಮಮಂತ್ರಜಪದಿಂದ ದೋಷನಾಶವಾಗುತ್ತದೆ (ಪರಾಶರ ಭಟ್ಟ). ↩︎

  102. ಓಂ ಉದ್ಭವಾಯ ನಮಃ। ಈ ನಾಮಮಂತ್ರಜಪದಿಂದ ಪಾಪನಾಶನವಾಗುತ್ತದೆ (ಪರಾಶರ ಭಟ್ಟ). ↩︎

  103. ಓಂ ರತ್ನನಾಭಾಯ ನಮಃ। ಈ ನಾಮಮಂತ್ರಜಪದಿಂದ ಉತ್ತಮ ಫಲವು ದೊರೆಯುತ್ತದೆ (ಪರಾಶರ ಭಟ್ಟ). ↩︎

  104. ಓಂ ವಾಜಸನಯೇ ನಮಃ। ಈ ನಾಮಮಂತ್ರಜಪವು ಅನ್ನದಾಯಕವು (ಪರಾಶರ ಭಟ್ಟ). ↩︎

  105. ಓಂ ಸುವರ್ಣಬಿಂದವೇ ನಮಃ। ಈ ನಾಮಮಂತ್ರಜಪದಿಂದ ಪಾಪನಾಶವಾಗುತ್ತದೆ (ಪರಾಶರ ಭಟ್ಟ). ↩︎

  106. ಓಂ ಅಕ್ಷೋಭ್ಯಾಯ ನಮಃ। ಈ ನಾಮಮಂತ್ರಜಪದಿಂದ ಶಾಂತಿಯು ದೊರೆಯುತ್ತದೆ (ಪರಾಶರ ಭಟ್ಟ). ↩︎

  107. ಓಂ ಸರ್ವವಾಗೀಶ್ವರೇಶ್ವರಾಯ ನಮಃ। ಈ ನಾಮಮಂತ್ರವನ್ನು ಜಪಿಸುವವನು ವಾಗ್ಮಿಯಾಗುತ್ತಾನೆ (ಪರಾಶರ ಭಟ್ಟ). ↩︎

  108. ಅಮೃತಾಶೀ: ಪರಮಾನಂದಾಮೃತವನ್ನು ಭೋಗಿಸುವವನು (ಭಾರತದರ್ಶನ). ↩︎

  109. ಔಪಾಸನ, ವೈಶ್ವದೇವ, ಸ್ಥಾಲೀಪಾಕ, ಅಷ್ಟಕಾ, ಮಾಸಿಶ್ರಾದ್ಧ, ಈಶಾನಬಲಿ, ಸರ್ಪಬಲಿ – ಇವು ಏಳು ಪಾಕಯಜ್ಞಗಳು. ಅಗ್ನಿಹೋತ್ರ, ದರ್ಶಪೂರ್ಣಮಾಸ, ಪಿಂಡಪಿತೃಯಜ್ಞ, ಪಶುಬಂಧ, ಅಗ್ರಯಣ, ಚಾತುರ್ಮಾಸ್ಯ ಮತ್ತು ಸೌತ್ರಾಮಣಿ – ಇವು ಏಳು ಹವಿರ್ಯಜ್ಞಗಳು. ಅಗ್ನಿಷ್ಟೋಮ, ಅತ್ಯಗ್ನಿಷ್ಟೋಮ, ಉಕ್ತೃ, ಷೋಡಶೀ, ವಾಜಪೇಯ, ಅತಿರಾತ್ರ, ಆಪ್ತೊರ್ಯಾಮ – ಇವು ಏಳು ಸೋಮಯಜ್ಞಗಳು (ಭಾರತ ದರ್ಶನ). ↩︎

  110. ಓಂ ಭಯಕೃತೇ ನಮಃ। ಎಂಬ ನಾಮಮಂತ್ರಜಪವು ಸೌಖ್ಯವನ್ನು ಹೆಚ್ಚಿಸುತ್ತದೆ (ಪರಾಶರ ಭಟ್ಟ). ↩︎

  111. ಓಂ ಭಯನಾಶನಾಯ ನಮಃ। ಎಂಬ ನಾಮಮಂತ್ರಜಪದಿಂದ ಕೆಲಸವು ಕೈಗೂಡುತ್ತದೆ (ಪರಾಶರ ಭಟ್ಟ). ↩︎

  112. ಓಂ ಅಣವೇ ನಮಃ। ಎಂಬ ನಾಮಮಂತ್ರಜಪವು ಸಕಲ ಶಕ್ತಿಗಳನ್ನೂ ಕೊಡುತ್ತದೆ (ಪರಾಶರ ಭಟ್ಟ). ↩︎

  113. ಓಂ ಬೃಹತೇ ನಮಃ। ಎಂಬ ನಾಮಮಂತ್ರಜಪವು ಮಹಾಫಲದಾಯಕವು; ಮಹತ್ತ್ವವನ್ನು ಕೊಡುತ್ತದೆ (ಪರಾಶರ ಭಟ್ಟ) ↩︎

  114. ಓಂ ನಿರ್ಗುಣಾಯ ನಮಃ। ಎಂಬ ನಾಮಮಂತ್ರಜಪವು ಜಾಪಕನನ್ನು ಪವಿತ್ರಗೊಳಿಸುತ್ತದೆ (ಪರಾಶರ ಭಟ್ಟ). ↩︎

  115. ಓಂ ಮಹತೇ ನಮಃ। ಎಂಬ ನಾಮಮಂತ್ರಜಪವು ಮಹತ್ತ್ವವನ್ನುಂಟುಮಾಡುತ್ತದೆ (ಪರಾಶರ ಭಟ್ಟ). ↩︎

  116. ಓಂ ಭಾರಭೃತೇ ನಮಃ। ಎಂಬ ನಾಮಮಂತ್ರಜಪವು ಕಾರ್ಯವನ್ನು ನಿರ್ವಹಿಸವ ಶಕ್ತಿಯನ್ನು ಕೊಡುತ್ತದೆ (ಪರಾಶರ ಭಟ್ಟ). ↩︎

  117. ಓಂ ಧನುರ್ವೇದಾಯ ನಮಃ। ಎಂಬ ನಾಮಮಂತ್ರಜಪವು ಧನುರ್ವೇದದ ಜ್ಞಾನವನ್ನುಂಟುಮಾಡುತ್ತದೆ (ಪರಾಶರ ಭಟ್ಟ). ↩︎

  118. ಓಂ ರವಯೇ ನಮಃ। ಈ ನಾಮಮಂತ್ರಜಪವು ಪ್ರಶಸ್ತಿಯನ್ನುಂಟುಮಾಡುತ್ತದೆ (ಪರಾಶರ ಭಟ್ಟ). ↩︎

  119. ಓಂ ವಿರೋಚನಾಯ ನಮಃ। ಎಂಬ ನಾಮಮಂತ್ರಜಪವು ಪ್ರಕಾಶಫಲವನ್ನು ಕೊಡುತ್ತದೆ (ಪರಾಶರ ಭಟ್ಟ). ↩︎

  120. ನೈಕಜೋ – ಹಲವುಬಾರಿ ಹುಟ್ಟುವವನು (ಭಾರತ ದರ್ಶನ). ↩︎

  121. ಕಪಿಲಪ್ಯಯಃ। (ಭಾರತ ದರ್ಶನ). ↩︎

  122. ಓಂ ಪುಣ್ಯಾಯ ನಮಃ। ಎಂಬ ನಾನಮಂತ್ರಜಪದಿಂದ ಜಾಪಕನು ಪವಿತ್ರನಾಗುತ್ತಾನೆ (ಭಾರತ ದರ್ಶನ). ↩︎

  123. ಓಂ ಪರ್ಯವಸ್ಥಿತಾಯ ನಮಃ। ಎಂಬ ನಾಮಮಂತ್ರಜಪವು ಅಮಿತವಾದ ಫಲವನ್ನು ಕೊಡುತ್ತದೆ (ಪರಾಶರ ಭಟ್ಟ). ↩︎

  124. ಓಂ ಜನಜನ್ಮಾದಯೇ ನಮಃ। ಈ ನಾಮಮಂತ್ರಜಪದಿಂದ ಪುನರ್ಜನ್ಮವು ತಪ್ಪುತ್ತದೆ (ಪರಾಶರ ಭಟ್ಟ). ↩︎

  125. ಆಧಾರನಿಲಯೋಽಧಾತಾ (ಭಾರತ ದರ್ಶನ). ↩︎

  126. ಓಂ ಪ್ರಣವಾಯ ನಮಃ। ಈ ನಾಮಮಂತ್ರಜಪವು ಮೋಕ್ಷದಾಯಕವು (ಪರಾಶರ ಭಟ್ಟ). ↩︎

  127. ಪ್ರಾಣಭೃತ್ಪ್ರಾಣಜೀವನಃ। (ಭಾರತ ದರ್ಶನ). ↩︎

  128. ಓಂ ಏಕಾತ್ಮನೇ ನಮಃ। ಎಂಬ ನಾಮಮಂತ್ರಜಪವು ಸಕಲಪ್ರಾಣ(ಬಲ)ಗಳನ್ನೂ ಕೊಡುತ್ತದೆ (ಪರಾಶರ ಭಟ್ಟ) ↩︎

  129. ನ ಜಾಯತೇ ಮ್ರಿಯತೇ ವಾ ವಿಪಶ್ಚಿತ್ ನಾಯಂ ಕುತಶ್ಚಿನ್ನ ಬಭೂವ ಕಶ್ಚಿತ। (ಕಠ ಉಪನಿಷತ್). ↩︎

  130. ಓಂ ಭೂರ್ಭುವಃಸ್ವಸ್ತರವೇ ನಮಃ ಎಂಬ ಈ ನಾಮಮಂತ್ರ ಜಪವು ಸಕಲ ಇಷ್ಟಾರ್ಥಗಳನ್ನೂ ಕೊಡುತ್ತದೆ (ಪರಾಶರ ಭಟ್ಟ). ↩︎

  131. ಅಕಾರಂ ಚಾಪ್ಯುಕಾರಂ ಚ ಮಕಾರಂ ಚ ಪ್ರಜಾಪತಿಃ। ವೇದತ್ರಯಾನ್ನಿರದುಹದ್ಭೂರ್ಭುವಃಸ್ವರೀತಿ ಚ (ಮನುಸ್ಮೃತಿ). ↩︎

  132. ಪಿತಾಮಹಸ್ಯ ಜನಕಃ ಪ್ರಪಿತಾಮಹ ಉಚ್ಯತೇ। (ಭಾರತ ದರ್ಶನ). ↩︎

  133. ವೇದಪಾದೋ ಯೂಪದಂಷ್ಟ್ರಃ ಕ್ರತುಹಸ್ತಶ್ಚಿತೀ ಮುಖಃ। ಅಗ್ನಿಜಿಹ್ವೋ ದರ್ಭರೋಮಾ ಬ್ರಹ್ಮಶೀರ್ಷೋ ಮಹಾತಪಾಃ।। (ಹರಿವಂಶ). ↩︎

  134. ಭುನಕ್ತಿ ಭುಂಕ್ತೇ ಯಜ್ಞಾನ್ಯಃ ಯಜ್ಞಭುಕ್ಸ ಚ ಕಥ್ಯತೇ। ↩︎

  135. ಜ್ಞಾನದ್ವಾರಾ ಸಿದ್ಧ್ಯುಪಾಯೋ ಯಃ ಸ ಸ್ಯಾದ್ಯಜ್ಞ ಸಾಧನಃ। ↩︎

  136. ವಿಷ್ಣುರುಪಾಂಶುರ್ಯಷ್ಟವ್ಯಃ – ವಿಷ್ಣುವಿನ ಕುರಿತು ರಹಸ್ಯವಾಗಿ ಯಜ್ಞಮಾಡಬೇಕು ಎಂಬ ಶ್ರುತಿವಾಕ್ಯವಿದೆ (ಭಾರತ ದರ್ಶನ). ↩︎

  137. ಇಂದ್ರಿಯಾದಿ ಅಹಂಕಾರಾತ್ಮಕ ಶಾರ್ಙ್ರಧನುಸ್ಸನ್ನು ಹಿಡಿದಿರುವವನು (ಶಂಕರ ಭಾಷ್ಯ), ರಾಜಸಾಹಂಕಾರ ರೂಪೀ ಶಾರ್ಙ್ರಧನುಸ್ಸನ್ನು ಹಿಡಿದಿರುವವನು (ಭಾರತ ದರ್ಶನ). ↩︎