134: ಉಮಾಮಹೇಶ್ವರಸಂವಾದೇ ಸ್ತ್ರೀಧರ್ಮಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 134

ಸಾರ

ಪಾರ್ವತಿಯು ಸ್ತ್ರೀಧರ್ಮಗಳನ್ನು ವರ್ಣಿಸಿದುದು (1-57).

113134001 ಮಹೇಶ್ವರ ಉವಾಚ।
13134001a ಪರಾವರಜ್ಞೇ ಧರ್ಮಜ್ಞೇ ತಪೋವನನಿವಾಸಿನಿ।
13134001c ಸಾಧ್ವಿ ಸುಭ್ರು ಸುಕೇಶಾಂತೇ ಹಿಮವತ್ಪರ್ವತಾತ್ಮಜೇ।।
13134002a ದಕ್ಷೇ ಶಮದಮೋಪೇತೇ ನಿರ್ಮಮೇ ಧರ್ಮಚಾರಿಣಿ।
13134002c ಪೃಚ್ಚಾಮಿ ತ್ವಾಂ ವರಾರೋಹೇ ಪೃಷ್ಟಾ ವದ ಮಮೇಪ್ಸಿತಮ್।।

ಮಹೇಶ್ವರನು ಹೇಳಿದನು: “ಪರಾವರಜ್ಞೇ! ಧರ್ಮಜ್ಞೇ! ತಪೋವನನಿವಾಸಿನಿ! ಸಾಧ್ವಿ! ಸುಭ್ರು! ಸುಂದರ ಕೇಶವುಳ್ಳವಳೇ! ಹಿಮವತ್ಪರ್ವತಾತ್ಮಜೇ! ದಕ್ಷೇ! ಇಂದ್ರಿಯನಿಗ್ರಹ-ಮನೋನಿಗ್ರಹವುಳ್ಳವಳೇ! ನಿರ್ಮಮೇ! ಧರ್ಮಚಾರಿಣಿ! ವರಾರೋಹೇ! ನಾನೂ ನಿನ್ನನ್ನು ಕೇಳುತ್ತೇನೆ. ನನಗೆ ಹೇಳು.

13134003a ಸಾವಿತ್ರೀ ಬ್ರಹ್ಮಣಃ ಸಾಧ್ವೀ ಕೌಶಿಕಸ್ಯ ಶಚೀ ಸತೀ।
13134003c ಮಾರ್ತಂಡಜಸ್ಯ2 ಧೂಮೋರ್ಣಾ ಋದ್ಧಿರ್ವೈಶ್ರವಣಸ್ಯ ಚ।।
13134004a ವರುಣಸ್ಯ ತತೋ ಗೌರೀ ಸೂರ್ಯಸ್ಯ ಚ ಸುವರ್ಚಲಾ।
13134004c ರೋಹಿಣೀ ಶಶಿನಃ ಸಾಧ್ವೀ ಸ್ವಾಹಾ ಚೈವ ವಿಭಾವಸೋಃ।।
13134005a ಅದಿತಿಃ ಕಶ್ಯಪಸ್ಯಾಥ ಸರ್ವಾಸ್ತಾಃ ಪತಿದೇವತಾಃ।

ಬ್ರಹ್ಮನ ಪತ್ನಿ ಸಾವಿತ್ರೀ, ಕೌಶಿಕ ಇಂದ್ರನ ಸತಿ ಶಚೀ, ಮಾರ್ತಂಡಜನ ಪತ್ನಿ ಧೂಮೋರ್ಣಾ, ವೈಶ್ರವಣ ಕುಬೇರನ ಪತ್ನಿ ಋದ್ಧಿ, ವರುಣನ ಪತ್ನಿ ಗೌರೀ, ಸೂರ್ಯನ ಪತ್ನಿ ಸುವರ್ಚಲಾ, ಶಶಿಯ ಪತ್ನಿ ರೋಹಿಣೀ, ವಿಭಾವಸು ಅಗ್ನಿಯ ಪತ್ನಿ ಸ್ವಾಹಾ, ಕಶ್ಯಪನ ಪತ್ನಿ ಅದಿತಿ – ಇವರೆಲ್ಲರೂ ಪತಿಯೇ ದೇವರೆಂದು ತಿಳಿದಿರುವವರು.

13134005c ಪೃಷ್ಟಾಶ್ಚೋಪಾಸಿತಾಶ್ಚೈವ ತಾಸ್ತ್ವಯಾ ದೇವಿ ನಿತ್ಯಶಃ।।
13134006a ತೇನ ತ್ವಾಂ ಪರಿಪೃಚ್ಚಾಮಿ ಧರ್ಮಜ್ಞೇ ಧರ್ಮವಾದಿನಿ।
13134006c ಸ್ತ್ರೀಧರ್ಮಂ ಶ್ರೋತುಮಿಚ್ಚಾಮಿ ತ್ವಯೋದಾಹೃತಮಾದಿತಃ।।

ದೇವಿ! ಇವರನ್ನು ನೀನು ನಿತ್ಯವೂ ಪೂಜಿಸುತ್ತೀಯೆ. ಧರ್ಮದ ವಿಷಯವಾಗಿ ಇವರನ್ನು ನೀನು ಕೇಳಿರುವೆ ಕೂಡ. ಧರ್ಮಜ್ಞೇ! ಧರ್ಮವಾದಿನಿ! ಈ ಕಾರಣದಿಂದ ನಿನ್ನನ್ನು ನಾನು ಪ್ರಶ್ನಿಸುತ್ತಿದ್ದೇನೆ. ಸ್ತ್ರೀಧರ್ಮವನ್ನು ಸಂಪೂರ್ಣವಾಗಿ ಕೇಳಬಯಸುತ್ತೇನೆ.

13134007a ಸಹಧರ್ಮಚರೀ ಮೇ ತ್ವಂ ಸಮಶೀಲಾ ಸಮವ್ರತಾ।
13134007c ಸಮಾನಸಾರವೀರ್ಯಾ ಚ ತಪಸ್ತೀವ್ರಂ ಕೃತಂ ಚ ತೇ।
13134007e ತ್ವಯಾ ಹ್ಯುಕ್ತೋ ವಿಶೇಷೇಣ ಪ್ರಮಾಣತ್ವಮುಪೈಷ್ಯತಿ।।

ನೀನು ನನ್ನ ಸಹಧರ್ಮಚಾರಿಣಿಯಾಗಿರುವೆ. ನೀನು ನನ್ನ ಸಮಶೀಲಳೂ ಸಮವ್ರತಳೂ ಆಗಿರುವೆ. ಸಾರ-ವೀರ್ಯಗಳಲ್ಲಿ ನೀನು ನನ್ನ ಸಮಳಾಗಿರುವೆ ಮತ್ತು ನೀನು ತೀವ್ರ ತಪಸ್ಸನ್ನು ಆಚರಿಸಿದ್ದೀಯೆ ಕೂಡ.

13134008a ಸ್ತ್ರಿಯಶ್ಚೈವ ವಿಶೇಷೇಣ ಸ್ತ್ರೀಜನಸ್ಯ ಗತಿಃ ಸದಾ।
13134008c ಗೌರ್ಗಾಂ3 ಗಚ್ಚತಿ ಸುಶ್ರೋಣಿ ಲೋಕೇಷ್ವೇಷಾ ಸ್ಥಿತಿಃ ಸದಾ।।

ಸ್ತ್ರೀಯರೇ ವಿಶೇಷವಾಗಿ ಸ್ತ್ರೀಜನರಿಗೆ ಸದಾ ಪರಮಗತಿಯಾಗಿದ್ದಾರೆ. ಸುಶ್ರೋಣಿ! ಗೋವುಗಳು ಗೋವುಗಳನ್ನೇ ಅನುಸರಿಸುವ ಇದೇ ಸದಾ ಲೋಕಸ್ಥಿತಿಯಾಗಿದೆ.

13134009a ಮಮ ಚಾರ್ಧಂ ಶರೀರಸ್ಯ ಮಮ ಚಾರ್ಧಾದ್ವಿನಿಃಸೃತಾ4
13134009c ಸುರಕಾರ್ಯಕರೀ ಚ ತ್ವಂ ಲೋಕಸಂತಾನಕಾರಿಣೀ।।

ನನ್ನ ಅರ್ಧ ಶರೀರವನ್ನು ಧರಿಸಿರುವೆ. ನನ್ನ ಶರೀರಾರ್ಧದಿಂದ ಹೊರಹೊಮ್ಮಿರುವೆ. ಸುರರ ಕಾರ್ಯವನ್ನು ಮಾಡುತ್ತಿರುವೆ ಮತ್ತು ನೀನೇ ಲೋಕಸಂತಾನಕಾರಿಣಿಯಾಗಿರುವೆ.

13134010a ತವ ಸರ್ವಃ ಸುವಿದಿತಃ ಸ್ತ್ರೀಧರ್ಮಃ ಶಾಶ್ವತಃ ಶುಭೇ।
13134010c ತಸ್ಮಾದಶೇಷತೋ ಬ್ರೂಹಿ ಸ್ತ್ರೀಧರ್ಮಂ ವಿಸ್ತರೇಣ ಮೇ।।

ಶುಭೇ! ಶಾಶ್ವತ ಸ್ತ್ರೀಧರ್ಮವೆಲ್ಲವೂ ನಿನಗೆ ಚೆನ್ನಾಗಿ ತಿಳಿದಿವೆ. ಆದುದರಿಂದ ಸ್ತ್ರೀಧರ್ಮವನ್ನು ವಿಸ್ತಾರವಾಗಿ ಏನನ್ನೂ ಬಿಡದೇ ನನಗೆ ಹೇಳು.”

13134011 ಉಮೋವಾಚ।
13134011a ಭಗವನ್ಸರ್ವಭೂತೇಶ ಭೂತಭವ್ಯಭವೋದ್ಭವ।
13134011c ತ್ವತ್ಪ್ರಭಾವಾದಿಯಂ ದೇವ ವಾಕ್ಚೈವ ಪ್ರತಿಭಾತಿ ಮೇ।।

ಉಮೆಯು ಹೇಳಿದಳು: “ಭಗವನ್! ಸರ್ವಭೂತೇಶ! ಭೂತಭವ್ಯಭವೋದ್ಭವ! ದೇವ! ನಿನ್ನ ಪ್ರಭಾವದಿಂದಲೇ ನನಗೆ ಮಾತುಗಳು ಹೊಳೆಯುತ್ತವೆ.

13134012a ಇಮಾಸ್ತು ನದ್ಯೋ ದೇವೇಶ ಸರ್ವತೀರ್ಥೋದಕೈರ್ಯುತಾಃ।
13134012c ಉಪಸ್ಪರ್ಶನಹೇತೋಸ್ತ್ವಾ ಸಮೀಪಸ್ಥಾ ಉಪಾಸತೇ।।

ಆದರೆ ದೇವೇಶ! ಈ ನದಿಗಳು ನಿನ್ನ ಸ್ನಾನ-ಆಚಮನಗಳಿಗಾಗಿ ಮತ್ತು ನಿನ್ನ ಪಾದಗಳನ್ನು ಸ್ಪರ್ಶಿಸುವ ಸಲುವಾಗಿ ನಿನ್ನ ಸಮೀಪ ಆಗಮಿಸಿವೆ.

13134013a ಏತಾಭಿಃ ಸಹ ಸಂಮಂತ್ರ್ಯ ಪ್ರವಕ್ಷ್ಯಾಮ್ಯನುಪೂರ್ವಶಃ।
13134013c ಪ್ರಭವನ್ಯೋಽನಹಂವಾದೀ ಸ ವೈ ಪುರುಷ ಉಚ್ಯತೇ।।

ಇವುಗಳೊಂದಿಗೆ ಸಮಾಲೋಚಿಸಿ ನಾನು ನಿನಗೆ ಸ್ತ್ರೀಧರ್ಮವನ್ನು ಪ್ರಾರಂಭದಿಂದ ಹೇಳುತ್ತೇನೆ. ಎಷ್ಟೇ ಸಮರ್ಥನಾಗಿದ್ದರೂ ಅಹಂಕಾರವಿಲ್ಲದವನನ್ನೇ ಪುರುಷ ಎನ್ನುತ್ತಾರೆ.

13134014a ಸ್ತ್ರೀ ಚ ಭೂತೇಶ ಸತತಂ ಸ್ತ್ರಿಯಮೇವಾನುಧಾವತಿ।
13134014c ಮಯಾ ಸಂಮಾನಿತಾಶ್ಚೈವ ಭವಿಷ್ಯಂತಿ ಸರಿದ್ವರಾಃ।।

ಭೂತೇಶ! ಸ್ತ್ರೀಯು ಸತತವೂ ಸ್ತ್ರೀಯನ್ನೇ ಅನುಸರಣೆ ಮಾಡುತ್ತಾಳೆ. ಈ ಸರಿದ್ವರೆಯರೂ ಕೂಡ ನನ್ನಿಂದ ಸಮ್ಮಾನಿತರಾಗಿದ್ದಾರೆ.

13134015a ಏಷಾ ಸರಸ್ವತೀ ಪುಣ್ಯಾ ನದೀನಾಮುತ್ತಮಾ ನದೀ।
13134015c ಪ್ರಥಮಾ ಸರ್ವಸರಿತಾಂ ನದೀ ಸಾಗರಗಾಮಿನೀ।।

ನದಿಗಳಲ್ಲಿಯೇ ಉತ್ತಮ ನದಿಯಾದ ಇದು ಪುಣ್ಯೆ ಸರಸ್ವತೀ ನದಿ. ಸಾಗರಗಾಮಿನೀ ಈ ನದಿಯು ಸರ್ವಸರಿತ್ತುಗಳಲ್ಲಿ ಪ್ರಥಮಳು.

13134016a ವಿಪಾಶಾ ಚ ವಿತಸ್ತಾ ಚ ಚಂದ್ರಭಾಗಾ ಇರಾವತೀ।
13134016c ಶತದ್ರುರ್ದೇವಿಕಾ ಸಿಂಧುಃ ಕೌಶಿಕೀ ಗೋಮತೀ ತಥಾ।।
13134017a ತಥಾ ದೇವನದೀ ಚೇಯಂ ಸರ್ವತೀರ್ಥಾಭಿಸಂವೃತಾ।
13134017c ಗಗನಾದ್ಗಾಂ ಗತಾ ದೇವೀ ಗಂಗಾ ಸರ್ವಸರಿದ್ವರಾ।।

ವಿಪಾಶಾ, ವಿತಸ್ತಾ, ಚಂದ್ರಭಾಗಾ, ಇರಾವತೀ, ಶತದ್ರು, ದೇವಿಕಾ, ಸಿಂಧು, ಕೌಶಿಕೀ, ಮತ್ತು ಗೋಮತೀ ಈ ಪುಣ್ಯ ನದಿಗಳೂ ಇಲ್ಲಿವೆ. ಹಾಗೆಯೇ ಸರ್ವತೀರ್ಥಗಳೂ ಸೇವಿಸುವ, ಎಲ್ಲ ನದಿಗಳಲ್ಲಿಯೇ ಶ್ರೇಷ್ಠಳಾದ, ಆಕಾಶದಿಂದ ಭೂಮಿಗೆ ಇಳಿದು ಬಂದಿರುವ, ದೇವನದಿ ಗಂಗೆಯೂ ಇಲ್ಲಿ ಉಪಸ್ಥಿತಳಾಗಿದ್ದಾಳೆ.”

13134018a ಇತ್ಯುಕ್ತ್ವಾ ದೇವದೇವಸ್ಯ ಪತ್ನೀ ಧರ್ಮಭೃತಾಂ ವರಾ।
13134018c ಸ್ಮಿತಪೂರ್ವಮಿವಾಭಾಷ್ಯ ಸರ್ವಾಸ್ತಾಃ ಸರಿತಸ್ತದಾ।।
13134019a ಅಪೃಚ್ಚದ್ದೇವಮಹಿಷೀ ಸ್ತ್ರೀಧರ್ಮಂ ಧರ್ಮವತ್ಸಲಾ।
13134019c ಸ್ತ್ರೀಧರ್ಮಕುಶಲಾಸ್ತಾ ವೈ ಗಂಗಾದ್ಯಾಃ ಸರಿತಾಂ ವರಾಃ।।

ಹೀಗೆ ಹೇಳಿ ದೇವದೇವನ ಪತ್ನಿ, ಧರ್ಮಭೃತರಲ್ಲಿ ಶ್ರೇಷ್ಠೆ, ದೇವಮಹಿಷಿ, ಧರ್ಮವತ್ಸಲೆಯು ಸ್ತ್ರೀಧರ್ಮದಲ್ಲಿ ಕುಶಲರಾಗಿದ್ದ ಗಂಗೆಯೇ ಮೊದಲಾದ ಶ್ರೇಷ್ಠ ನದಿಗಳನ್ನು ಮಂದಹಾಸಪೂರ್ವಕವಾಗಿ ಸ್ತ್ರೀಧರ್ಮದ ವಿಷಯದಲ್ಲಿ ಪ್ರಶ್ನಿಸಿದಳು:

13134020a ಅಯಂ ಭಗವತಾ ದತ್ತಃ ಪ್ರಶ್ನಃ ಸ್ತ್ರೀಧರ್ಮಸಂಶ್ರಿತಃ।
13134020c ತಂ ತು ಸಂಮಂತ್ರ್ಯ ಯುಷ್ಮಾಭಿರ್ವಕ್ತುಮಿಚ್ಚಾಮಿ ಶಂಕರೇ।।

“ಭಗವಾನನು ಸ್ತ್ರೀಧರ್ಮದ ಕುರಿತಾದ ಈ ಪ್ರಶ್ನೆಯನ್ನು ನೀಡಿರುವನು. ನಿಮ್ಮೊಂದಿಗೆ ಸಮಾಲೋಚಿಸಿ ಶಂಕರನಿಗೆ ಉತ್ತರಿಸ ಬಯಸುತ್ತೇನೆ.

13134021a ನ ಚೈಕಸಾಧ್ಯಂ ಪಶ್ಯಾಮಿ ವಿಜ್ಞಾನಂ ಭುವಿ ಕಸ್ಯ ಚಿತ್।
13134021c ದಿವಿ ವಾ ಸಾಗರಗಮಾಸ್ತೇನ ವೋ ಮಾನಯಾಮ್ಯಹಮ್।।

ಸಾಗರಗಾಮಿ ನದಿಗಳೇ! ಸ್ವರ್ಗದಲ್ಲಿಯಾಗಲೀ ಭೂಮಿಯಲ್ಲಿಯಾಗಲೀ ವಿಜ್ಞಾನವೆಲ್ಲವೂ ಒಬ್ಬನಿಗೇ ತಿಳಿದಿರುವುದು ಅಸಾಧ್ಯ ಎಂದು ನಾನು ಕಂಡಿದ್ದೇನೆ. ಆದುದರಿಂದ ನಿಮ್ಮ ಮತಗಳನ್ನು ನಾನು ಮನ್ನಿಸುತ್ತೇನೆ.””

13134022 ಭೀಷ್ಮ ಉವಾಚ।
13134022a ಏವಂ ಸರ್ವಾಃ ಸರಿಚ್ಚ್ರೇಷ್ಠಾಃ ಪೃಷ್ಟಾಃ ಪುಣ್ಯತಮಾಃ ಶಿವಾಃ।
13134022c ತತೋ ದೇವನದೀ ಗಂಗಾ ನಿಯುಕ್ತಾ ಪ್ರತಿಪೂಜ್ಯ ತಾಮ್।।

ಭೀಷ್ಮನು ಹೇಳಿದನು: “ಹೀಗೆ ಅವಳು ಆ ಎಲ್ಲ ಪುಣ್ಯತಮೆ ಮಂಗಳಕರ ನದಿಶ್ರೇಷ್ಠರನ್ನು ಕೇಳಲು ಪಾರ್ವತಿಗೆ ಉತ್ತರಕೊಡಲು ಅವರು ದೇವನದೀ ಗಂಗೆಯನ್ನು ಗೌರವಿಸಿ ನಿಯೋಜಿಸಿದರು.

13134023a ಬಹ್ವೀಭಿರ್ಬುದ್ಧಿಭಿಃ ಸ್ಫೀತಾ ಸ್ತ್ರೀಧರ್ಮಜ್ಞಾ ಶುಚಿಸ್ಮಿತಾ।
13134023c ಶೈಲರಾಜಸುತಾಂ ದೇವೀಂ ಪುಣ್ಯಾ ಪಾಪಾಪಹಾಂ ಶಿವಾಮ್।।
13134024a ಬುದ್ಧ್ಯಾ ವಿನಯಸಂಪನ್ನಾ ಸರ್ವಜ್ಞಾನವಿಶಾರದಾ।
13134024c ಸಸ್ಮಿತಂ ಬಹುಬುದ್ಧ್ಯಾಢ್ಯಾ ಗಂಗಾ ವಚನಮಬ್ರವೀತ್।।

ಆಗ ನಾನಾವಿಷಯಗಳ ಪರಿಜ್ಞಾನವಿದ್ದ, ಸ್ತ್ರೀಧರ್ಮವನ್ನು ತಿಳಿದ, ಶುಚಿಸ್ಮಿತೆ, ಬುದ್ಧಿ-ವಿನಯ ಸಂಪನ್ನೆ ಸರ್ವಜ್ಞಾನವಿಶಾರದೆ ಬಹುಬುದ್ಧ್ಯಾಢ್ಯೆ ಗಂಗೆಯು ನಸುನಗುತ್ತಾ ಶೈಲರಾಜಸುತೆ ಪುಣ್ಯೆ ಪಾಪನಾಶಿನೀ ಶಿವೆ ದೇವಿಗೆ ಹೇಳಿದಳು:

13134025a ಧನ್ಯಾಃ ಸ್ಮೋಽನುಗೃಹೀತಾಃ ಸ್ಮೋ ದೇವಿ ಧರ್ಮಪರಾಯಣಾ।
13134025c ಯಾ ತ್ವಂ ಸರ್ವಜಗನ್ಮಾನ್ಯಾ ನದೀರ್ಮಾನಯಸೇಽನಘೇ।।

“ಅನಘೇ! ದೇವಿ! ಧರ್ಮಪರಾಯಣೇ! ನಾನು ಧನ್ಯಳಾಗಿದ್ದೇನೆ. ಅನುಗೃಹೀತಳಾಗಿದ್ದೇನೆ. ಸರ್ವಜಗತ್ತಿಗೂ ಮಾನ್ಯಳಾಗಿರುವ ನೀನು ನದಿಯಾದ ನನ್ನನ್ನು ಗೌರವಿಸುತ್ತಿರುವೆಯಲ್ಲವೇ?

13134026a ಪ್ರಭವನ್ ಪೃಚ್ಚತೇ ಯೋ ಹಿ ಸಂಮಾನಯತಿ ವಾ ಪುನಃ।
13134026c ನೂನಂ ಜನಮದುಷ್ಟಾತ್ಮಾ ಪಂಡಿತಾಖ್ಯಾಂ ಸ ಗಚ್ಚತಿ।।

ಸಮರ್ಥನಾಗಿದ್ದರೂ, ಯಾವುದೇ ದುಷ್ಟಭಾವವಿಲ್ಲದೇ ಇನ್ನೊಬ್ಬರನ್ನು ಸಮ್ಮಾನಿಸಿ ಕೇಳುವವರು ಪಂಡಿತರೆಂಬ ಖ್ಯಾತಿಯನ್ನು ಪಡೆಯುತ್ತಾರೆ.

13134027a ಜ್ಞಾನವಿಜ್ಞಾನಸಂಪನ್ನಾನೂಹಾಪೋಹವಿಶಾರದಾನ್।
13134027c ಪ್ರವಕ್ತೄನ್ ಪೃಚ್ಚತೇ ಯೋಽನ್ಯಾನ್ಸ ವೈ ನಾ ಪದಮರ್ಚ್ಚತಿ।।

ಸಂಶಯವಿದ್ದ ವಿಷಯದ ಕುರಿತು ಜ್ಞಾನ-ವಿಜ್ಞಾನಸಂಪನ್ನರನ್ನು ಮತ್ತು ಊಹಾಪೋಹವಿಶಾರದರನ್ನು ಕೇಳುವವನು ಆಪತ್ತಿನಲ್ಲಿ ಬೀಳುವುದಿಲ್ಲ.

13134028a ಅನ್ಯಥಾ ಬಹುಬುದ್ಧ್ಯಾಢ್ಯೋ ವಾಕ್ಯಂ ವದತಿ ಸಂಸದಿ।
13134028c ಅನ್ಯಥೈವ ಹ್ಯಹಂಮಾನೀ ದುರ್ಬಲಂ ವದತೇ ವಚಃ।।

ಬಹುಬುದ್ಧ್ಯಾಢ್ಯನು ಸಂಸದಿಯಲ್ಲಿ ಬೇರೆ ರೀತಿಯಲ್ಲಿ ಮಾತನಾಡುತ್ತಾನೆ. ಮತ್ತು ಅಹಂಕಾರಿ ದುರ್ಬಲನು ಬೇರೆಯೇ ರೀತಿಯಲ್ಲಿ ಮಾತನಾಡುತ್ತಾನೆ.

13134029a ದಿವ್ಯಜ್ಞಾನೇ ದಿವಿ ಶ್ರೇಷ್ಠೇ ದಿವ್ಯಪುಣ್ಯೇ ಸದೋತ್ಥಿತೇ।
13134029c ತ್ವಮೇವಾರ್ಹಸಿ ನೋ ದೇವಿ ಸ್ತ್ರೀಧರ್ಮಮನುಶಾಸಿತುಮ್।।

ದಿವ್ಯಜ್ಞಾನಿ! ದಿವಿಯಲ್ಲಿ ಶ್ರೇಷ್ಠಳೇ! ದಿವ್ಯಪುಣ್ಯೇ! ಸದಾ ಉತ್ಸಾಹಶೀಲೆ! ದೇವಿ! ಸ್ತ್ರೀಧರ್ಮದ ಕುರಿತಾಗಿ ನಮ್ಮೆಲ್ಲರಿಗೆ ಉಪದೇಶಿಸಲು ನೀನೇ ಅರ್ಹಳಾಗಿರುವೆ.””

13134030 ಭೀಷ್ಮ ಉವಾಚ।
13134030a ತತಃ ಸಾರಾಧಿತಾ ದೇವೀ ಗಂಗಯಾ ಬಹುಭಿರ್ಗುಣೈಃ।
13134030c ಪ್ರಾಹ ಸರ್ವಮಶೇಷೇಣ ಸ್ತ್ರೀಧರ್ಮಂ ಸುರಸುಂದರೀ।।

ಭೀಷ್ಮನು ಹೇಳಿದನು: “ಹೀಗೆ ಗಂಗೆಯು ಬಹುಗುಣಗಳಿಂದ ದೇವಿಯನ್ನು ಆರಾಧಿಸಲು ಸುರಸುಂದರೀ ಉಮೆಯು ಸ್ತ್ರೀಧರ್ಮವನ್ನು ಸಮಗ್ರವಾಗಿ ಹೇಳಿದಳು:

13134031a ಸ್ತ್ರೀಧರ್ಮೋ ಮಾಂ ಪ್ರತಿ ಯಥಾ ಪ್ರತಿಭಾತಿ ಯಥಾವಿಧಿ।
13134031c ತಮಹಂ ಕೀರ್ತಯಿಷ್ಯಾಮಿ ತಥೈವ ಪ್ರಥಿತೋ ಭವೇತ್।।

“ನನ್ನ ಬುದ್ಧಿಗೆ ಹೊಳೆಯುವಂತೆ ಯಥಾವಿಧಿಯಾಗಿ ನಾನು ನಿನಗೆ ಸ್ತ್ರೀಧರ್ಮವನ್ನು ಹೇಳುತ್ತೇನೆ. ಹೀಗೆಯೇ ಇದು ಲೋಕಪ್ರಥಿತವಾಗಲಿ.

13134032a ಸ್ತ್ರೀಧರ್ಮಃ ಪೂರ್ವ ಏವಾಯಂ ವಿವಾಹೇ ಬಂಧುಭಿಃ ಕೃತಃ।
13134032c ಸಹಧರ್ಮಚರೀ ಭರ್ತುರ್ಭವತ್ಯಗ್ನಿಸಮೀಪತಃ।।

ಮೊದಲು ವಿವಾಹಸಮಯದಲ್ಲಿಯೇ ಬಂಧುಗಳು ಸ್ತ್ರೀಧರ್ಮವನ್ನು ಉಪದೇಶಿಸುತ್ತಾರೆ. ಅಗ್ನಿಸಮೀಪದಲ್ಲಿಯೇ ಅವಳು ಪತಿಯ ಸಹಧರ್ಮಚಾರಿಣಿಯಾಗುತ್ತಾಳೆ.

13134033a ಸುಸ್ವಭಾವಾ ಸುವಚನಾ ಸುವೃತ್ತಾ ಸುಖದರ್ಶನಾ।
13134033c ಅನನ್ಯಚಿತ್ತಾ ಸುಮುಖೀ ಭರ್ತುಃ ಸಾ ಧರ್ಮಚಾರಿಣೀ।।

ಒಳ್ಳೆಯ ಸ್ವಭಾವವಿರುವ, ಒಳ್ಳೆಯ ಮಾತನಾಡುವ, ಒಳ್ಳೆಯ ನಡತೆಗಳಿರುವ, ನೋಡಿದರೆ ಸುಖವನ್ನೀಡುವ, ಅನ್ಯರ ಕುರಿತು ಮನಸ್ಸನ್ನು ಹರಿಸದ, ಪತಿಯ ಸಮ್ಮುಖದಲ್ಲಿ ನಗುಮುಖದಿಂದಿರುವವಳು ಸ್ತ್ರೀಧರ್ಮಚಾರಿಣಿಯು.

13134034a ಸಾ ಭವೇದ್ಧರ್ಮಪರಮಾ ಸಾ ಭವೇದ್ಧರ್ಮಭಾಗಿನೀ।
13134034c ದೇವವತ್ಸತತಂ ಸಾಧ್ವೀ ಯಾ ಭರ್ತಾರಂ ಪ್ರಪಶ್ಯತಿ।।

ಸತತವೂ ಪತಿಯನ್ನು ದೇವತೆಯಂತೆ ಕಾಣುವವಳೇ ಪರಮ ಧರ್ಮಿಷ್ಠಳು. ಅವಳೇ ಧರ್ಮಫಲಕ್ಕೆ ಭಾಗಿಯಾಗುತ್ತಾಳೆ.

13134035a ಶುಶ್ರೂಷಾಂ ಪರಿಚಾರಂ ಚ ದೇವವದ್ಯಾ ಕರೋತಿ ಚ।
13134035c ನಾನ್ಯಭಾವಾ ಹ್ಯವಿಮನಾಃ ಸುವ್ರತಾ ಸುಖದರ್ಶನಾ।।
13134036a ಪುತ್ರವಕ್ತ್ರಮಿವಾಭೀಕ್ಷ್ಣಂ ಭರ್ತುರ್ವದನಮೀಕ್ಷತೇ।
13134036c ಯಾ ಸಾಧ್ವೀ ನಿಯತಾಚಾರಾ ಸಾ ಭವೇದ್ಧರ್ಮಚಾರಿಣೀ।।

ದೇವನೆಂದು ತಿಳಿದು ಪತಿಯ ಶುಶ್ರೂಷೆ ಪರಿಚಾರಗಳನ್ನು ಮಾಡುವ, ಅನ್ಯರಲ್ಲಿ ಪ್ರೇಮಭಾವವನ್ನಿಟ್ಟಿರದ, ಮಗನ ಮುಖವನ್ನು ನೋಡುವಂತೆ ಪತಿಯ ಮುಖವನ್ನೂ ನೋಡುವ, ವಿಮನಸ್ಕಳಾಗಿರದ, ಸುವ್ರತೆ, ಸುಖದರ್ಶನೆ, ಸಾಧ್ವೀ, ನಿಯಮಗಳನ್ನು ಆಚರಿಸುವವಳು ಧರ್ಮಚಾರಿಣಿಯು.

13134037a ಶ್ರುತ್ವಾ ದಂಪತಿಧರ್ಮಂ ವೈ ಸಹಧರ್ಮಕೃತಂ ಶುಭಮ್।
13134037c ಅನನ್ಯಚಿತ್ತಾ ಸುಮುಖೀ ಭರ್ತುಃ ಸಾ ಧರ್ಮಚಾರಿಣೀ।।

ದಂಪತಿಧರ್ಮವನ್ನು ಕೇಳಿ ಸಹಧರ್ಮಿಗಳಾಗಿಯೇ ಶುಭಕರ್ಮಗಳನ್ನು ಮಾಡುತ್ತಾ ಅನನ್ಯಚಿತ್ತಳಾಗಿ ಪತಿಗೆ ಸುಮುಖಿಯಾಗಿರುವವಳು ಧರ್ಮಚಾರಿಣಿಯು.

13134038a ಪರುಷಾಣ್ಯಪಿ ಚೋಕ್ತಾ ಯಾ ದೃಷ್ಟಾ ವಾ ಕ್ರೂರಚಕ್ಷುಷಾ5
13134038c ಸುಪ್ರಸನ್ನಮುಖೀ ಭರ್ತುರ್ಯಾ ನಾರೀ ಸಾ ಪತಿವ್ರತಾ।।

ಪತಿಯು ಕಠೋರವಾಗಿ ಮಾತನಾಡಿದರೂ ಅಥವಾ ಕ್ರೂರ ದೃಷ್ಟಿಯಿಂದ ನೋಡಿದರೂ ಪತಿಯ ಎದಿರು ಸುಪ್ರಸನ್ನಮುಖಿಯಾಗಿಯೇ ಇರುವ ನಾರಿಯು ಪತಿವ್ರತೆಯು.

13134039a ನ ಚಂದ್ರಸೂರ್ಯೌ ನ ತರುಂ ಪುಂನಾಮ್ನೋ ಯಾ ನಿರೀಕ್ಷತೇ।
13134039c ಭರ್ತೃವರ್ಜಂ ವರಾರೋಹಾ ಸಾ ಭವೇದ್ಧರ್ಮಚಾರಿಣೀ।।

ಪತಿಯನ್ನು ಬಿಟ್ಟು ಸೂರ್ಯನನ್ನಾಗಲೀ, ಚಂದ್ರನನ್ನಾಗಲೀ, ಅಥವಾ ವೃಕ್ಷವನ್ನಾಗಲೀ ಪುರುಷನೆಂಬ ಭಾವನೆಯಿಂದ ನೋಡದಿರುವ ವರಾರೋಹೆಯು ಧರ್ಮಚಾರಿಣಿಯು.

13134040a ದರಿದ್ರಂ ವ್ಯಾಧಿತಂ ದೀನಮಧ್ವನಾ ಪರಿಕರ್ಶಿತಮ್।
13134040c ಪತಿಂ ಪುತ್ರಮಿವೋಪಾಸ್ತೇ ಸಾ ನಾರೀ ಧರ್ಮಭಾಗಿನೀ।।

ಪತಿಯು ದರಿದ್ರನಾಗಿರಲಿ, ವ್ಯಾಧಿತನಾಗಿರಲಿ, ಅಥವಾ ನಡೆದು ದಣಿದಿರಲಿ, ಅವನನ್ನು ಪುತ್ರನಂತೆ ಉಪಚರಿಸುವ ನಾರಿಯು ಧರ್ಮಭಾಗಿನಿಯಾಗುತ್ತಾಳೆ6.

13134041a ಯಾ ನಾರೀ ಪ್ರಯತಾ ದಕ್ಷಾ ಯಾ ನಾರೀ ಪುತ್ರಿಣೀ ಭವೇತ್।
13134041c ಪತಿಪ್ರಿಯಾ ಪತಿಪ್ರಾಣಾ ಸಾ ನಾರೀ ಧರ್ಮಭಾಗಿನೀ।।

ಪರಿಶುದ್ಧ ಅಂತಃಕರಣದ ನಾರಿ, ದಕ್ಷನಾರಿ, ಪುತ್ರರನ್ನು ಪಡೆದ, ಪತಿಗೆ ಪ್ರಿಯಳಾದ ಮತ್ತು ಪತಿಯನ್ನೇ ಪ್ರಾಣವೆಂದು ತಿಳಿದ ನಾರಿಯು ಧರ್ಮಭಾಗಿನಿಯಾಗುತ್ತಾಳೆ.

13134042a ಶುಶ್ರೂಷಾಂ ಪರಿಚರ್ಯಾಂ ಚ ಕರೋತ್ಯವಿಮನಾಃ ಸದಾ।
13134042c ಸುಪ್ರತೀತಾ ವಿನೀತಾ ಚ ಸಾ ನಾರೀ ಧರ್ಮಭಾಗಿನೀ।।

ಪತಿಯ ಮೇಲಿನ ವಿಶ್ವಾಸದೊಂದಿಗೆ ಪ್ರಸನ್ನ ಮನಸ್ಸಿನಿಂದ, ವಿನೀತಳಾಗಿ ಸದಾ ಶುಶ್ರೂಷೆ-ಪರಿಚರ್ಯಗಳನ್ನು ಮಾಡುವ ನಾರಿಯು ಧರ್ಮಭಾಗಿನಿಯಾಗುತ್ತಾಳೆ.

13134043a ನ ಕಾಮೇಷು ನ ಭೋಗೇಷು ನೈಶ್ವರ್ಯೇ ನ ಸುಖೇ ತಥಾ।
13134043c ಸ್ಪೃಹಾ ಯಸ್ಯಾ ಯಥಾ ಪತ್ಯೌ ಸಾ ನಾರೀ ಧರ್ಮಭಾಗಿನೀ।।

ಪತಿಯಲ್ಲಿರುವಷ್ಟು ಪ್ರೀತಿಯು ಕಾಮಗಳಲ್ಲಾಗಲೀ, ಭೋಗಗಳಲ್ಲಾಗಲೀ, ಐಶ್ವರ್ಯದಲ್ಲಾಗಲೀ, ಸುಖದಲ್ಲಾಗಲೀ ಇಲ್ಲದಿರುವ ನಾರಿಯು ಧರ್ಮಭಾಗಿನಿಯಾಗುತ್ತಾಳೆ.

13134044a ಕಲ್ಯೋತ್ಥಾನರತಾ ನಿತ್ಯಂ ಗುರು7ಶುಶ್ರೂಷಣೇ ರತಾ।
13134044c ಸುಸಂಮೃಷ್ಟಕ್ಷಯಾ ಚೈವ ಗೋಶಕೃತ್ಕೃತಲೇಪನಾ।।
13134045a ಅಗ್ನಿಕಾರ್ಯಪರಾ ನಿತ್ಯಂ ಸದಾ ಪುಷ್ಪಬಲಿಪ್ರದಾ।
13134045c ದೇವತಾತಿಥಿಭೃತ್ಯಾನಾಂ ನಿರುಪ್ಯ ಪತಿನಾ ಸಹ।।
13134046a ಶೇಷಾನ್ನಮುಪಭುಂಜಾನಾ ಯಥಾನ್ಯಾಯಂ ಯಥಾವಿಧಿ।
13134046c ತುಷ್ಟಪುಷ್ಟಜನಾ ನಿತ್ಯಂ ನಾರೀ ಧರ್ಮೇಣ ಯುಜ್ಯತೇ।।

ಬೆಳಿಗ್ಗೆ ಬೇಗ ಏಳುವ, ನಿತ್ಯವೂ ಗುರುಶುಶ್ರೂಷಣೆಯಲ್ಲಿ ನಿರತಳಾದ, ಮನೆಯನ್ನು ಗುಡಿಸಿ ಗೋಮಯದಿಂದ ಸಾರಿಸಿ ಚೊಕ್ಕವಾಗಿ ಇಟ್ಟುಕೊಳ್ಳುವ, ನಿತ್ಯವೂ ಅಗ್ನಿಕಾರ್ಯಮಾಡುವ, ಸದಾ ಪುಷ್ಪಬಲಿಯನ್ನು ನೀಡುವ, ದೇವತೆ-ಅತಿಥಿಗಳು-ಭೃತ್ಯರ ಭೋಜನವಾದ ನಂತರ ಶೇಷಾನ್ನವನ್ನು ಪತಿಯೊಂದಿಗೆ ಯಥಾನ್ಯಾಯವಾಗಿ ಯಥಾವಿಧಿಯಾಗಿ ಉಣ್ಣುವ, ಮನೆಯ ಜನರು ನಿತ್ಯವೂ ತುಷ್ಟಪುಷ್ಟರಾಗಿರುವಂತೆ ನೋಡಿಕೊಳ್ಳುವ ನಾರಿಯು ಧರ್ಮದಿಂದಿರುವವಳು.

13134047a ಶ್ವಶ್ರೂಶ್ವಶುರಯೋಃ ಪಾದೌ ತೋಷಯಂತೀ ಗುಣಾನ್ವಿತಾ।
13134047c ಮಾತಾಪಿತೃಪರಾ ನಿತ್ಯಂ ಯಾ ನಾರೀ ಸಾ ತಪೋಧನಾ।।

ಅತ್ತೆ-ಮಾವರ ಪಾದಸೇವೆಯಲ್ಲಿ ನಿರತಳಾಗಿರುವ ಮತ್ತು ನಿತ್ಯವೂ ಮಾತಾ-ಪಿತೃಪರಳಾಗಿರುವ ಗುಣಾನ್ವಿತೆ ನಾರಿಯು ತಪೋಧನಳು.

13134048a ಬ್ರಾಹ್ಮಣಾನ್ದುರ್ಬಲಾನಾಥಾನ್ದೀನಾಂಧಕೃಪಣಾಂಸ್ತಥಾ।
13134048c ಬಿಭರ್ತ್ಯನ್ನೇನ ಯಾ ನಾರೀ ಸಾ ಪತಿವ್ರತಭಾಗಿನೀ।।

ಬ್ರಾಹ್ಮಣರನ್ನೂ, ದುರ್ಬಲರನ್ನೂ, ಅನಾಥರನ್ನೂ, ದೀನರನ್ನೂ, ಅಂಧ-ಕೃಪಣರನ್ನೂ ಅನ್ನವನ್ನಿತ್ತು ಪೋಷಿಸುವ ನಾರಿಯು ಪತಿವ್ರತಪುಣ್ಯದ ಭಾಗಿಯಾಗುತ್ತಾಳೆ.

13134049a ವ್ರತಂ ಚರತಿ ಯಾ ನಿತ್ಯಂ ದುಶ್ಚರಂ ಲಘುಸತ್ತ್ವಯಾ।
13134049c ಪತಿಚಿತ್ತಾ ಪತಿಹಿತಾ ಸಾ ಪತಿವ್ರತಭಾಗಿನೀ।।

ದುಶ್ಚರ ವ್ರತವನ್ನೂ ನಿತ್ಯವೂ ಸರಾಳವಾಗಿ ಮಾಡುವ, ಪತಿಯಲ್ಲಿಯೇ ಚಿತ್ತವನ್ನಿಟ್ಟಿರುವ, ಪತಿಯಹಿತದಲ್ಲಿಯೇ ಇರುವವಳು ಪತಿವ್ರತಪುಣ್ಯದ ಭಾಗಿಯಾಗುತ್ತಾಳೆ.

13134050a ಪುಣ್ಯಮೇತತ್ತಪಶ್ಚೈವ ಸ್ವರ್ಗಶ್ಚೈಷ ಸನಾತನಃ।
13134050c ಯಾ ನಾರೀ ಭರ್ತೃಪರಮಾ ಭವೇದ್ಭರ್ತೃವ್ರತಾ ಶಿವಾ।।

ಪತಿಯನ್ನೇ ಪರಮ ದೈವವೆಂದು ತಿಳಿದು ಪತಿವ್ರತಳಾಗಿರುವ ಕಲ್ಯಾಣೀ ನಾರಿಗೆ ಅದೇ ತಪಸ್ಸಿನ ಪುಣ್ಯವನ್ನು ನೀಡುತ್ತದೆ ಮತ್ತು ಅದೇ ಸನಾತನ ಸ್ವರ್ಗವನ್ನೂ ದೊರಕಿಸುತ್ತದೆ.

13134051a ಪತಿರ್ಹಿ ದೇವೋ ನಾರೀಣಾಂ ಪತಿರ್ಬಂಧುಃ8 ಪತಿರ್ಗತಿಃ।
13134051c ಪತ್ಯಾ ಸಮಾ ಗತಿರ್ನಾಸ್ತಿ ದೈವತಂ ವಾ ಯಥಾ ಪತಿಃ।।

ನಾರಿಯರಿಗೆ ಪತಿಯೇ ದೇವನು. ಪತಿಯೇ ಬಂಧುವು. ಪತಿಯೇ ಗತಿ. ಪತಿಯ ಸಮನಾದ ಗತಿಯಿಲ್ಲ ಮತ್ತು ಪತಿಯಂಥಹ ದೇವತೆಯಿಲ್ಲ.

13134052a ಪತಿಪ್ರಸಾದಃ ಸ್ವರ್ಗೋ ವಾ ತುಲ್ಯೋ ನಾರ್ಯಾ ನ ವಾ ಭವೇತ್।
13134052c ಅಹಂ ಸ್ವರ್ಗಂ ನ ಹೀಚ್ಚೇಯಂ ತ್ವಯ್ಯಪ್ರೀತೇ ಮಹೇಶ್ವರ।।

ಪತಿಯ ಅನುಗ್ರಹ ಮತ್ತು ಸ್ವರ್ಗ ಇವೆರಡು ನಾರಿಗೆ ಸಮನಾಗಿರಬಹುದು ಅಥವಾ ಇಲ್ಲದೇ ಇರಬಹುದು. ಮಹೇಶ್ವರ! ನೀನು ಅಪ್ರೀತನಾದರೆ ನಾನು ಮಾತ್ರ ಸ್ವರ್ಗವನ್ನೂ ಬಯಸುವುದಿಲ್ಲ.

13134053a ಯದ್ಯಕಾರ್ಯಮಧರ್ಮಂ ವಾ ಯದಿ ವಾ ಪ್ರಾಣನಾಶನಮ್।
13134053c ಪತಿರ್ಬ್ರೂಯಾದ್ದರಿದ್ರೋ ವಾ ವ್ಯಾಧಿತೋ ವಾ ಕಥಂ ಚನ।।
13134054a ಆಪನ್ನೋ ರಿಪುಸಂಸ್ಥೋ ವಾ ಬ್ರಹ್ಮಶಾಪಾರ್ದಿತೋಽಪಿ ವಾ।
13134054c ಆಪದ್ಧರ್ಮಾನನುಪ್ರೇಕ್ಷ್ಯ ತತ್ಕಾರ್ಯಮವಿಶಂಕಯಾ।।

ಪತಿಯು ದರಿದ್ರನಾಗಿರಲಿ, ವ್ಯಾಧಿತನಾಗಿರಲಿ, ಆಪತ್ತಿನಲ್ಲಿರಲಿ, ಶತ್ರುಗಳ ಮಧ್ಯೆ ಇರಲಿ, ಬ್ರಹ್ಮಶಾಪದಿಂದ ಪೀಡಿತನಾಗಿರಲಿ – ನಾರಿಯು ಅವನು ಹೇಳುವುದನ್ನು – ಅದು ಅಕಾರ್ಯವಾಗಿರಲಿ, ಅಧರ್ಮವಾಗಿರಲಿ, ಅಥವಾ ಪ್ರಾಣನಾಶಕವಾಗಿರಲಿ – ಆಪದ್ಧರ್ಮವೆಂದು ತಿಳಿದು ಮಾಡಬೇಕು.

13134055a ಏಷ ದೇವ ಮಯಾ ಪ್ರೋಕ್ತಃ ಸ್ತ್ರೀಧರ್ಮೋ ವಚನಾತ್ತವ।
13134055c ಯಾ ತ್ವೇವಂಭಾವಿನೀ ನಾರೀ ಸಾ ಭವೇದ್ಧರ್ಮಭಾಗಿನೀ।।

ದೇವ! ನಿನ್ನ ಮಾತಿನಂತೆ ನಾನು ಸ್ತ್ರೀಧರ್ಮವನ್ನು ಹೇಳಿದ್ದೇನೆ. ಹೀಗಿರುವ ನಾರಿಯು ಧರ್ಮಭಾಗಿನಿಯಾಗುತ್ತಾಳೆ.””

13134056 ಭೀಷ್ಮ ಉವಾಚ।
13134056a ಇತ್ಯುಕ್ತಃ ಸ ತು ದೇವೇಶಃ ಪ್ರತಿಪೂಜ್ಯ ಗಿರೇಃ ಸುತಾಮ್।
13134056c ಲೋಕಾನ್ವಿಸರ್ಜಯಾಮಾಸ ಸರ್ವೈರನುಚರೈಃ ಸಹ।।

ಭೀಷ್ಮನು ಹೇಳಿದನು: “ಅವಳು ಹೀಗೆ ಹೇಳಲು ದೇವೇಶನು ಗಿರಿಸುತೆಯನ್ನು ಪ್ರತಿಪೂಜಿಸಿ ಸರ್ವ ಅನುಚರರೊಂದಿಗೆ ಅಲ್ಲಿದ್ದ ಎಲ್ಲರನ್ನೂ ಬೀಳ್ಕೊಟ್ಟನು.

13134057a ತತೋ ಯಯುರ್ಭೂತಗಣಾಃ ಸರಿತಶ್ಚ ಯಥಾಗತಮ್।
13134057c ಗಂಧರ್ವಾಪ್ಸರಸಶ್ಚೈವ ಪ್ರಣಮ್ಯ ಶಿರಸಾ ಭವಮ್।।

ಅನಂತರ ಭವನನ್ನು ಶಿರಸಾ ನಮಸ್ಕರಿಸಿ ಭೂತಗಣಗಳು, ನದಿಗಳು, ಗಂಧರ್ವ-ಅಪ್ಸರೆಯರು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ಹೊರಟು ಹೋದರು.””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಉಮಾಮಹೇಶ್ವರಸಂವಾದೇ ಸ್ತ್ರೀಧರ್ಮಕಥನೇ ಚತುಸ್ತ್ರಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಉಮಾಮಹೇಶ್ವರಸಂವಾದೇ ಸ್ತ್ರೀಧರ್ಮಕಥನ ಎನ್ನುವ ನೂರಾಮೂವತ್ನಾಲ್ಕನೇ ಅಧ್ಯಾಯವು.


  1. ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ನಾರದ ಉವಾಚ। ಏವಮುಕ್ತ್ವಾ ಮಹಾದೇವಃ ಶ್ರೋತುಕಾಮಃ ಸ್ವಯಂ ಪ್ರಭುಃ। ಅನುಕೂಲಾಂ ಪ್ರಿಯಾಂ ಭಾರ್ಯಾಂ ಪಾರ್ಶ್ವಸ್ಥಾಂ ಸಮಭಾಷತ।। (ಭಾರತ ದರ್ಶನ). ↩︎

  2. ಮಾರ್ಕಂಡೇಯಸ್ಯ (ಭಾರತ ದರ್ಶನ). ↩︎

  3. ಗೌರ್ಯಾಂ (ಭಾರತ ದರ್ಶನ). ↩︎

  4. ತವ ಚಾರ್ಧೇನ ನಿರ್ಮಿತಮ್। (ಭಾರತ ದರ್ಶನ). ↩︎

  5. ದೃಷ್ಟಾ ದುಷ್ಟೇನ ಚಕ್ಷುಷಾ। (ಭಾರತ ದರ್ಶನ). ↩︎

  6. ಸ್ತ್ರೀಧರ್ಮದ ಫಲವನ್ನು ಪಡೆಯುತ್ತಾಳೆ (ಭಾರತ ದರ್ಶನ). ↩︎

  7. ಗೃಹ (ಭಾರತ ದರ್ಶನ). ↩︎

  8. ಪತಿರ್ಬಂಧಃ (ಭಾರತ ದರ್ಶನ). ↩︎